ಆರು ಮತ್ತು ಐದು
✦ಅರಿವಿನ ವೃಕ್ಷ✦
السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه
✒️ ಅಬೂರಿಫಾನ ಕೆಳಗಿನ ಕೆರೆ
▪️▪️▪️▪️▪️▪️▪️▪️▪️▪️▪️
➤ವಿಷಯ: ಆರು ಮತ್ತು ಐದು:
ಆರು ಪ್ರಮುಖ ವಿಶ್ವಾಸ ಕಾರ್ಯಗಳು ಮತ್ತು ಐದು ಪ್ರಮುಖ ಆಚಾರಗಳು ಇಸ್ಲಾಮಿನ ತಳಹದಿ. ಆರು ವಿಶ್ವಾಸ ಕಾರ್ಯಗಳಿಗೆ ಈಮಾನ್ ಕಾರ್ಯಗಳು ಎನ್ನಲಾಗುತ್ತದೆ. ಈ ಆರು ವಿಶ್ವಾಸಗಳು ಇದ್ದರೆ ಮಾತ್ರ ಮುಉಮಿನ್. ಇದರಿಂದ ಒಂದನ್ನು ಕೈಬಿಟ್ಟರೆ ಮತಭ್ರಷ್ಟನಾಗುತ್ತಾನೆ..
1). ಅಲ್ಲಾಹನಲ್ಲಿ ವಿಶ್ವಾಸ.
2). ಅಲ್ಲಾಹನ ಮಲಕ್‌ಗಳಲ್ಲಿ ವಿಶ್ವಾಸ.
3). ಅಲ್ಲಾಹನ ವೇದ ಗ್ರಂಥಗಳಲ್ಲಿ ವಿಶ್ವಾಸ.
4). ಅಲ್ಲಾಹನ ಪ್ರವಾದಿಗಳಲ್ಲಿ ವಿಶ್ವಾಸ.
5). ಪರಲೋಕದಲ್ಲಿ ವಿಶ್ವಾಸ.
6).ವಿಧಿಯಲ್ಲಿ ವಿಶ್ವಾಸ.
ಈ ಆರು ಕಾರ್ಯಗಳನ್ನು ವಿಸ್ತ್ರತವಾಗಿ ತಿಳಿದುಕೊಂಡಿರಬೇಕು. ಅಲ್ಲಾಹು ಇದ್ದಾನೆ ಎಂದು ಮಾತ್ರ ನಂಬಿದರೆ ಸಾಲದು, ದೇವನಾಗಿ ಅವನೊಬ್ಬನೇ, ದೈವಿಕ ಶಕ್ತಿ ಇರುವುದು ಅವನೊಬ್ಬನಿಗೇ, ಬೇರೆ ಯಾವ ವ್ಯಕ್ತಿಗೂ ಶಕ್ತಿಗೂ ದೈವಿಕ ಶಕ್ತಿ ಇರುವುದಿಲ್ಲ ಎಂದು ದೃಢ ವಿಶ್ವಾಸ ಹೊಂದಿರಬೇಕು. ಅಷ್ಟೇ ಅಲ್ಲ ಬೇರೆ ಶಕ್ತಿ ಕೂಡಾ ಅಲ್ಲಾಹನದ್ದೇ ಆಗಿದ್ದು ಎಲ್ಲಾ ವಿಧ ಶಕ್ತಿಗಳನ್ನು ಕೊಡುವುದೇ ಅವನು ಎಂದು ವಿಶ್ವಾಸವಿಡಬೇಕು. ಅವನ ಕುರಿತು ವಿಶ್ವಾಸವಿಡಬೇಕಾದ ಇನ್ನೂ ಕೆಲವು ಕಾರ್ಯಗಳು ಹೀಗಿವೆ:
1). ಅವನಿಗೆ ಆದಿಯಿಲ್ಲ. ಅವನು ಇಲ್ಲದ ಕಾಲವೇ ಇದ್ದಿರಲಿಲ್ಲ. ಅವನ ಇರುವಿಕೆಯು ಅನಿವಾರ್ಯ. ಅಲ್ಲಾಹನ ಅಭಾವವನ್ನು ಕಲ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಅವನಿಗೆ ಅಂತ್ಯವೂ ಇಲ್ಲ. ಅವನಿಗೆ ದೇಹವಿಲ್ಲ. ಹಾಗೆಂದು ಬೆಳಕು, ಪರಿಮಳ, ಅನಿಲದಂತೆ ಅಮೂರ್ತ ವಸ್ತುವೂ ಅಲ್ಲ. ಕಲ್ಲು, ಮರಗಳಂತೆ ಮೂರ್ತ ವಸ್ತುವೂ ಅವನಲ್ಲ. ಅವನಿಗೆ ಅಂಗಾಂಗಗಳಿಲ್ಲ. ಅವನ ಇರವಿಗೆ ಜಾಗದ ಅವಶ್ಯಕತೆಯಿಲ್ಲ. ಶೂನ್ಯದ ಅಶ್ಯಕತೆಯೂ ಇಲ್ಲ. ಒಂದು ವಸ್ತು ಒಂದು ಕಡೆ ಇರುವಾಗ ಆ ವಸ್ತುವಿನಷ್ಟೇ ಗಾತ್ರದ ಶೂನ್ಯವನ್ನು ಆ ವಸ್ತು ಬಳಸಿಕೊಂಡಿರುತ್ತದೆ. ಆದರೆ ಅಲ್ಲಾಹನ ಅಸ್ತಿತ್ವವು ಹಾಗೆ ಶೂನ್ಯವನ್ನು ಕೂಡಾ ಬಳಸುವುದಿಲ್ಲ. ಅವನು ಹೇಗೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವನಿಗೆ ಅನ್ನಪಾನ, ನಿದ್ರೆ, ತೂಕಡಿಕೆಗಳಿಲ್ಲ. ಸಂತಾನೋತ್ಪತ್ತಿಯಿಲ್ಲ.
ಎಲ್ಲಾ ಶಕ್ತಿಗಳೂ ಆತನದ್ದೇ. ಅವನಿಗೆ ಬೇರೆ ಯಾರೂ ಶಕ್ತಿ ನೀಡಿದ್ದಲ್ಲ. ಅವನ ಶಕ್ತಿಯನ್ನು ತೆಗೆದುಹಾಕಲು ಸಾಧ್ಯವಿಲ್ಲ. ಅವನು ಸೃಷ್ಟಿಗಳಂತೆ ಯಾವ ವಿಚಾರದಲ್ಲೂ ಇಲ್ಲ. ಹೇಗೆ ನಾವು ಅವನ ರೂಪವನ್ನು ಊಹಿಸುತ್ತೇವೆಯೋ ಹಾಗೆ ಅವನಿಲ್ಲ. ಯಾಕೆಂದರೆ ನಮ್ಮ ಊಹೆಯೂ ಒಂದು ಸೃಷ್ಟಿ. ಹಾಗಾಗಿ ಹಾಗೆ ಅವನು ಇರುವುದಿಲ್ಲ. ಹೋಗುವಿಕೆ, ಬರುವಿಕೆ, ಇಳಿಯುವಿಕೆ, ಹತ್ತುವಿಕೆ, ಒಂದು ಜಾಗಕ್ಕೆ ಸೀಮಿತವಾಗುವಿಕೆ ಮುಂತಾದ್ದು ಅಲ್ಲಾಹನ ಬಗ್ಗೆ ಕಲ್ಪಿಸಿಕೊಳ್ಳುವಂತಿಲ್ಲ. ಅವನು ಆಕಾಶದಲ್ಲಿದ್ದಾನೆಂದೋ ಒಂದು ಕಡೆ ಉಪವಿಷ್ಠನಾಗಿದ್ದಾನೆಂದೋ ಕಲ್ಪಿಸುವಂತಿಲ್ಲ. ಅವನು ಇಡೀ ವಿಶ್ವದ ಅಣುರೇಣು ತೃಣಕಾಷ್ಟಗಳನ್ನೆಲ್ಲ ಏಕ ಕಾಲಕ್ಕೇ ಕಾಣುವವನು, ಯಾವುದೂ ಅವನಿಗೆ ಅಡ್ಡವಿಲ್ಲ. ಇಡೀ ಭೂಮಿಯನ್ನು ಮೇಲಿಂದ ಮೇಲೆ ಮಾತ್ರ ಕಾಣುವುದಲ್ಲ. ಒಳಗಿನ ಪ್ರತಿಯೊಂದು ಮಣ್ಣು, ಮರಳು ಮಾತ್ರವಲ್ಲ ಅವುಗಳ ಪರಮಾಣು ಹಾಗೂ ಪರಮಾಣುಗಳ ಒಳಗೆ ಸುತ್ತುತ್ತಿರುವ ಎಲೆಕ್ಟ್ರಾನ್, ನ್ಯೂಟ್ರಾನ್ ಕೋಟಿ ಗ್ರಹ, ತಾರೆಗಳ, ಆಕಾಶಗಳ ಸರ್ವ ಅಣುಗಳನ್ನು ಕೂಡಾ ಹೀಗೇ ಕಾಣುತ್ತಿರುವ ಅನೂಹ್ಯವಾದ ದೃಷ್ಟಿ ಅವನದ್ದು. ಅದೇ ರೀತಿ ಎಲ್ಲಾ ಧ್ವನಿ, ಸದ್ದು, ಸಪ್ಪಳವನ್ನು ಅವನು ಕೇಳಿಸಿಕೊಳ್ಳುತ್ತಾನೆ. ಈ ಎಲ್ಲಾ ಗುಣಗಳು ಅವನಿಗೆ ನಂತರ ಉಂಟಾದುದಲ್ಲ. ಅವನ ಅಸ್ತಿತ್ವವು ಹೇಗೆ ಅನಾದಿಯೋ ಹಾಗೆಯೇ ಅವನ ಗುಣಗಳೂ ಅನಾದಿ..
2). ಮಲಕ್‌ಗಳೆಂದರೆ ಪ್ರಕಾಶದಿಂದ ಅಲ್ಲಾಹು ಸೃಷ್ಟಿಸಿದ ಪರಿಶುದ್ದ ಜೀವಿಗಳು. ಅವರು ಬೇಕಾದ ರೂಪದಲ್ಲಿ ರೂಪಾಂತರ ಹೊಂದಬಲ್ಲರು. ಅವರು ಕೋಟಿಕೋಟಿ ಸಂಖ್ಯೆಯಲ್ಲಿದ್ದಾರೆ. ಅವರ ಸಂಖ್ಯೆ ಅಲ್ಲಾಹನಿಗಲ್ಲದೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಅವರು ಪಾಪ ಮಾಡದ ಪ್ರಕೃತಿಯಲ್ಲೇ ಸೃಷ್ಟಿಯಾದ ಪರಿಶುದ್ಧರು. ಗಂಡು-ಹೆಣ್ಣು ಲಿಂಗ ಬೇಧವಿಲ್ಲ. ಕಾಮವಿಲ್ಲ, ಹಸಿವು, ನಿದ್ದೆ, ಅನ್ನಪಾನದ ಅವಶ್ಯಕತೆ ಇರುವುದಿಲ್ಲ. ಅವರಿಗೆ ಅವರದೇ ಆದ ರೂಪವಿರುತ್ತದೆ. ನಮ್ಮ ಕಣ್ಣಿಗೆ ಅಗೋಚರರಾಗಿ ಭೂಮಿಯಲ್ಲೂ ಸುತ್ತಾಡುತ್ತಿರುವರು. ಅವರ ವಾಸಸ್ಥಳ ಆಕಾಶ. ಅಲ್ಲಾಹನಿಗೆ ಆರಾಧನೆಯೇ ಅವರ ಮುಖ್ಯ ಕೆಲಸ. ಇಂತಹ ಎಲ್ಲಾ ವಿಶ್ವಾಸಗಳನ್ನು ಮಲಕ್‌ಗಳ ಬಗ್ಗೆ ಹೊಂದಿರುವುದು ಮುಮಿನ್‌ಗಳಿಗೆ ಕಡ್ಡಾಯ.
3). ವೇದ ಗ್ರಂಥಗಳು ಅಲ್ಲಾಹನ ನುಡಿಗಳು. ಅವು ಪರಮ ಸತ್ಯ, ತೌರಾತ್ (ಮೂಸಾ ನಬಿ) ಝಬೂರ್ (ದಾವೂದ್ ನಬಿ) ಇನ್ಚೀಲ್ (ಈಸಾ ನಬಿ) ಕುರ್‌ಆನ್ (ಮುಹಮ್ಮದ್ ನಬಿ) ಎಂಬ ನಾಲ್ಕು ಬೃಹತ್ ವೇದ ಗ್ರಂಥಗಳನ್ನು ಪ್ರಸ್ತುತ ಪ್ರವಾದಿಗಳಿಗೆ ಅವನು ರವಾನಿಸಿರುತ್ತಾನೆ. ಅದೂ ಅಲ್ಲದೆ ಆದಂ ನಬಿ (ಅ) ಯವರಿಗೆ ಹತ್ತು ಕಿರು ಗ್ರಂಥಗಳನ್ನು ರವಾನಿಸಿದ್ದಾನೆ. ಇದ್ರೀಸ್ ನಬಿಯವರಿಗೆ ಮೂವತ್ತು, ಸೀಸ್ ನಬಿಯವರಿಗೆ ಐವತ್ತು ಹಾಗೂ ಇಬ್ರಾಹೀಮ್ ನಬಿಯವರಿಗೆ ಹತ್ತು ಹೀಗೆ ಒಟ್ಟು ನೂರು ಕಿರು ಗ್ರಂಥಗಳನ್ನು ರವಾನಿಸಿರುತ್ತಾನೆ. ಹಾಗೆ ಒಟ್ಟು 104 ಗ್ರಂಥಗಳು ಅಲ್ಲಾಹನ ಪವಿತ್ರ ನುಡಿಗಳಾದ ವೇದ ಗ್ರಂಥಗಳು ಭೂಮಿಗೆ ಇಳಿದು ಬಂದಿದೆಯೆಂದು ವಿಶ್ವಾಸವಿಡಬೇಕು. ಇವುಗಳ ಪೈಕಿ ಇಂದು ಯಥಾವತ್ತಾಗಿ ಉಳಿದಿರುವುದು ಕುರ್‌ಆನ್ ಮಾತ್ರ. ಉಳಿದ ಎಲ್ಲಾ ಗ್ರಂಥಗಳೂ ಮಾನವರ ಹಸ್ತಕ್ಷೇಪಗಳಿಂದ ವಿಕೃತಗೊಂಡಿವೆ. ಆದ್ದರಿಂದ ಕುರ್‍ಆನ್ ಹೊರತು ಉಳಿದ 103 ವೇದ ಗ್ರಂಥಗಳು ಮೂಲದಲ್ಲಿ ಸತ್ಯವಾಗಿದ್ದವು ಎಂದು ಮಾತ್ರ ನಾವು ವಿಶ್ವಾಸವಿಟ್ಟರೆ ಸಾಕು. ಈಗ ಅವುಗಳನ್ನು ಓದುವುದು ನಮಗೆ ನಿಷಿದ್ಧವಾಗಿದೆ. ನಮಗೆ ಓದಲು ಕಡ್ಡಾಯವಿರುವುದು ಕುರ್‌ಆನ್ ಮಾತ್ರ. ಅದು ಏನೇ ವ್ಯತ್ಯಾಸವಿಲ್ಲದೆ ಲೋಕದ ಅಂತ್ಯದ ವರೆಗೂ ಉಳಿದಿರುವುದು.
4). ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳನ್ನು ಅಲ್ಲಾಹು ನಿಯಮಿಸಿರುವನು. ಮೊದಲ ಪ್ರವಾದಿ ಆದಮ್ ನಬಿ. ಕೂನೆಯ ಪ್ರವಾದಿ ಮುಹಮ್ಮದ್ ನಬಿ, ಇವರ ನಡುವೆ ನೂಹ್, ಇಬ್ರಾಹೀಮ್, ಮೂಸಾ, ಈಸಾ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಮುಂತಾದವರು ಅತ್ಯಂತ ಪ್ರಮುಖ ಪ್ರವಾದಿಗಳು. ಎಲ್ಲಾ ಪ್ರವಾದಿಗಳೂ ಪಾಪ ಸುರಕ್ಷಿತರು. ಯಾವುದೇ ಪಾಪ ಮಾಡಲಾಗದ ಪ್ರಕೃತಿಯಲ್ಲೇ ಅಲ್ಲಾಹು ಅವರನ್ನು ಸೃಷ್ಟಿಸಿರುತ್ತಾನೆ. ಪ್ರವಾದಿಗಳು ಪಾಪ ಸುರಕ್ಷಿತರು ಎಂಬ ವಿಶ್ವಾಸ ನಮಗೆ ಕಡ್ಡಾಯ. ಯಾವ ಮಹಿಳೆಯೂ ಪ್ರವಾದಿಯಾಗಿಲ್ಲ. ಎಲ್ಲಾ ಪ್ರವಾದಿಗಳೂ ಪುರುಷರೇ ಆಗಿದ್ದರು. ಅವರ ಪೈಕಿ 313 ಮಂದಿ ಮುರ್ಸಲ್ ಎಂಬ ವಿಶೇಷ ಸ್ಥಾನಕ್ಕೆ ಪಾತ್ರರಾದವರು. ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಂತಿಮ ಪ್ರವಾದಿ ಹಾಗೂ ನಮ್ಮ ಪ್ರವಾದಿಯಾಗಿದ್ದು ಅವರ ಬಳಿಕ ಬೇರೆ ನಬಿ ಬರಲಿಕ್ಕಿಲ್ಲ ಎಂಬ ವಿಶ್ವಾಸ ನಮಗೆ ಕಡ್ಡಾಯ. ಬೇರೆ ಯಾರಾದರೂ ತಾನು ನಬಿ ಎಂದು ಹೇಳಿದರೆ ಹಾಗೆ ಹೇಳಿದವನೂ ಅವನನ್ನು ನಬಿ ಎಂದು ನಂಬಿದವರೂ ಕಾಫಿರ್,
ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮ್ಮ ಪ್ರವಾದಿಯಾದುದರಿಂದ ಅವರ ಬಗ್ಗೆ ವಿಸ್ತ್ರತವಾಗಿ ಪರಿಚಯ ಹೊಂದಿರುವುದು ನಮ್ಮ ಈಮಾನಿನ ಅಂಶವಾಗಿದೆ. ಮಕ್ಕಳಿಗೆ ಅವರ ಪರಿಚಯ ನೀಡುವುದು ಹೆತ್ತವರ ಕರ್ತವ್ಯವಾಗಿದೆ. ಆದ್ದರಿಂದ ಅವರ ಬಗ್ಗೆ ಸ್ವಲ್ಪ ವಿಸ್ತ್ರತ ಪರಿಚಯವನ್ನು ಇಲ್ಲಿ ಕೊಡಲಾಗುತ್ತಿದೆ..
ಪ್ರವಾದಿﷺಮರ ಸಂಕ್ಷಿಪ್ತ ಪರಿಚಯ:
ಹೆಸರು: ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಮ್)
ತಂದೆ:ಅಬ್ದುಲ್ ಮುತ್ತಲಿಬರ ಮಗ ಅಬ್ದುಲ್ಲ
ತಾಯಿ: ವಹಬಿನ ಮಗಳು ಆಮಿನ
ಜನ್ಮಸ್ಥಳ: ಮಕ್ಕಾದಲ್ಲಿದ್ದ ಅಬೂತ್ವಾಲಿಬರ ಮನೆ, ಸ್ವಫಾ ಪರ್ವತದ ಹತ್ತಿರ (ಈ ಜಾಗದಲ್ಲಿ ಈಗ ಮಕ್ಕಾ ಗ್ರಂಥಾಲಯವಿದೆ).
ಜನನ ವೇಳೆ:ಸುಬ್‌ಹಿಗೆ ಹತ್ತಿರವಾದ ಸಮಯ, ಸೋಮವಾರ, ರಬೀಉಲ್ ಅವ್ವಲ್ 12, ಹಿಜಿರಾಕ್ಕೆ 53 ವರ್ಷಗಳ ಹಿಂದೆ (ಕ್ರಿ.ಶ. 570 ಏಪ್ರಿಲ್ 21).
ಮೊಲೆಯುಣಿಸಿದ್ದು:
1).ಸುವೈಬತುಲ್ ಅಸ್‌ಲಮಿಯ (ಅಬೂಲಹಬ್ ಸ್ವತಂತ್ರ ಗೊಳಿಸಿದ ದಾಸಿ)
2).ಹಲೀಮತು ಸ್ಸಅದಿಯ್ಯ.
ದೇಹದ ವಿಶೇಷತೆ:
ಮುಖ: ಬಿಳಿ ಮಿಶ್ರಿತ ಕೆಂಪು ಮುಖ.
ಕಣ್ಣು:ಸುರಮ ಹಾಕಿದಂತಹ ಪ್ರಕೃತಿ.
ಕೂದಲು:ಕಡು ಕಪ್ಪು.
ಉದ್ದ:ಮಧ್ಯಮ (ಅತೀ ಎತ್ತರವೂ, ಅತೀ ಗಿಡವೂ ಅಲ್ಲ).
ಪ್ರವಾದಿತ್ವ ಲಭಿಸಿದ ಸ್ಥಳ: ಹಿರಾ ಗುಹೆ/ಮಕ್ಕಾ.
ಪ್ರವಾದಿತ್ವ ಲಭ್ಯವಾದ ಸಮಯ:ರಮಳಾನ್ 27, ಕ್ರಿ.ಶ. 609.
ಗುರುತಿಸಬಹುದಾದ ಲಕ್ಷಣಗಳು:ಭುಜಗಳ ಮಧ್ಯೆ ಪ್ರವಾದಿತ್ವದ ಮೊಹರು. ಯಾತ್ರೆಯಲ್ಲಿ ಮೋಡಗಳು ನೆರಳನ್ನೀಯುತ್ತದೆ.
ಮರಣ ವೇಳೆ:ಹಿಜ್‌ರಾ 10 ನೇ ವರ್ಷ, ರಬೀವುಲ್ ಅವ್ವಲ್ 12 , ಸೋಮವಾರ.
ಪಿತೃ ಪರಂಪರೆ:
1).ಅಬ್ದುಲ್ಲಾಹ್,
2) ಅಬ್ದುಲ್ ಮುತ್ತಲಿಬ್,
3).ಹಾಶಿಂ,
4). ಅಬ್ದುಮನಾಫ್,
5).ಖುಸ್ವಯ್ಯ್,
6). ಖಿಲಾಬ್,
7). ಮುರ್ರತ್,
8). ಕಅ್‌ಬ್,
9).ಲುಅಝ್ಯ್,
10). ಗ್ವಾಲಿಬ್,
11).ಫಿಹ್‌ರ್,
12).ಮಾಲಿಕ್,
13). ನಳ್‌ರ್,
14). ಕಿನಾನ,
15). ಖುಝೈಮ,
16). ಮುದ್‌ರಿಕ,
17).ಇಲ್ಯಾಸ್,
18). ಮುಳರ್,
19).ನಿಝಾರ್,
20). ಮುಆದ್ದ್ ,
21.) ಅದ್‌ನಾನ್.
ಮಾತೃ ಪರಂಪರೆ:
1).ಆಮಿನ,
2).ವಹಬ್,
3).ಅಬ್ದುಮನಾಫ್,
4). ಝುಹ್‌ರ,
5).ಕಿಲಾಬ್,
6).ಮುರ್ರತ್,
7).ಕಅ್‌ಬ್,
8). ಲುಅಯ್ಯ್,
9).ಗ್ವಾಲಿಬ್,
10).ಫಿಹ್‌ರ್,
11). ಮಾಲಿಕ್,
12). ನಳ್‌ರ್,
13). ಕಿನಾನ,
14).ಖುಝೈಮ,
15).ಮುದ್‌ರಿಕ,
16). ಇಲ್ಯಾಸ್,
1೭). ಮುಳರ್,
18). ನಿಝಾರ್,
19). ಮುಆದ್ದ್,
20).ಅದ್‌ನಾನ್.
ಪಿತೃ ಸಹೋದರರು:
1).ಝುಬೈರ್ (ಅಬೂತ್ವಾಹಿರ್), 2).ಅಬೂತ್ವಾಲಿಬ್,
3).ಅಬ್ದುಮನಾಫ್,
4).ಅಬ್ಬಾಸ್ (ರ),
5). ಳಿರಾರ್,
6).ಹಂಝ (ರ),
7).ಮುಕವ್ವೀರಿ,
8).ಹಜಲ್,
9). ಹಾರಿಸ್,
10).ಅಬೂಲಹಬ್ (ಅಬ್ದುಲ್ ಉಝ್ಝು),
11).ಗಯ್‌ದಖ್,
12). ಖುಝು.
ಮಾತೃ ಸಹೋದರರು:
ಅಸ್‌ವದ್ ಬಿನ್ ಯಗೂಸ್, ಅಬ್ದುಲ್ಲಾಹಿಬ್ನು ಅರ್‌ಖಂ.
ಪ್ರವಾದಿ ( ಸ ) ರ ಪತ್ನಿಯರಂದಿರು(ರ):
1).ಖುವೈಲಿದ್ ಮಗಳು ಖದೀಜಾ.
2).ಝಂಅ ಮಗಳು ಸೌದ.
3). ಅಬೂಬಕರ್ ಮಗಳು ಆಯಿಷಾ.
4). ಉಮರ್ ಮಗಳು ಹಫ್‌ಸ್ವ.
5). ಖುಝೈಮ ಮಗಳು ಝೈನಬ.
6). ಹುದೈಫ ಮಗಳು ಉಮ್ಮು ಸಲಮ.
7). ಜಅ್‌ಶ್ ಮಗಳು ಝೈನಬ್.
8).ಹಾರಿಸ್ ಮಗಳು ಜುವೈರಿಯ.
9). ಹುಯಯ್ಯಿ ಮಗಳು ಸ್ವಫಿಯ್ಯ.
10). ಅಬೂಸುಫ್ಯಾನ್ ಮಗಳು ರಂಲ.
11). ಹಾರಿಸ್‌ರ ಮಗಳು ಮೈಮೂನ.
ದಾಸಿ:
ಶಂಊನ್ ಮಗಳು ಮಾರಿಯತುಲ್ ಖಿಬ್‌ತ್ವಿಯ್ಯ (ರಳಿಯಲ್ಲಾಹು ಅನ್ಹುಮ್)
ಮಕ್ಕಳು;
ಝೈನಬ್, ರುಕಿಯ್ಯ, ಉಮ್ಮುಕುಲ್ಸೂಮ್, ಫಾತಿಮಾ, ಖಾಸಿಮ್, ಅಬ್ದುಲ್ಲಾಹ್, ಇಬ್ರಾಹೀಮ್.
ಗುಪ್ತ ಸಮಾಲೋಚಕರು:
ಅನಸ್‌ಬಿನ್ ಮಾಲಿಕ್, ಹುದೈಫತುಬ್‌ನುಲ್ ಯಮಾನ್, ಫಾತ್ವಿಮಾ.
ಬರಹಗಾರರು:
1). ಅಬೂಬಕರ್ ಸಿದ್ದೀಖ್ (ರ),
2). ಉಮರುಬ್‌ನುಲ್ ಖತ್ತಾಬ್ (ರ),
3). ಉಸ್ಮಾನುಬ್‌ನು ಅಫ್ಘಾನ್ (ರ),
4). ಅಲಿಯ್ಯಿಬ್‌ನು ಅಬೀತ್ವಾಲಿಬ್ (ರ),
5). ಝೈದ್‌ಬ್‌ನು ಸಾಬಿತ್ (ರ),
6). ಖಾಲಿದಿಬ್‌ನು ವಲೀದ್ (ರ),
7). ಸಾಬಿತುಬ್‌ನು ಖೈಸ್ (ರ),
8). ಖಾಲಿದಿಬ್‌ನು ಸಈದ್ (ರ),
9). ಝುಬೈರುನುಲ್ ಅವ್ವಾಂ (ರ),
10). ಮುಹಮ್ಮದ್‌ಬ್‌ನು ಮಸ್‌ಲಮ (ರ),
11). ಮುಗೀರತುಬ್‌ನು ಶುಅ್ ಬ(ರ),
12). ಮುಆವಿಯ (ರ),
13). ಅಬ್ದುಲ್ಲಾಹಿಬ್ನು ಮಸ್‌ಊದ್ (ರ),
14). ಹನ್‌ಳಲಬ್‌ನು ರಬೀಅ (ರ),
15). ಅಬ್ದುಲ್ಲಾಹಿಬ್ನು ಅರ್‌ಖ್ (ರ),
16).ಅಲಾಇಬ್‌ನ್ ಉಖ್‌ಬ (ರ),
17). ಉಬಯ್ಯಿಬ್‌ನು ಕಅ್‌ಬ (ರ),
18). ಆಮಿರ್ (ರ).
ನಬಿﷺಯವರ ಮದ್ಹ್ ಗೀತೆ ಹಾಡಿದ ಕವಿಗಳು:
1). ಹಸ್ಸಾಬ್‌ನು ಸಾಬಿತ್ (ರ),
2).ಕಅ್‌ಬ್‌ಬಿನ್ ಝುಹೈರ್ (ರ),
3). ಅಬ್ದುಲ್ಲಾಹಿಬ್ನು ರವಾಹ (ರ).
ಅಝಾನ್ ಕೊಡುವವರು:
1).ಬಿಲಾಲುಬ್‌ನು ರಬಾಹ್ (ರ),
2).ಅಬ್ದುಲ್ಲಾಹಿಬ್ನು ಉಮ್ಮಿ ಮುಖ್ತೂಂ (ರ),
3).ಸಅ್‌ದುಲ್ ಖುರಲ್ (ರ),
4).ಅಬೂ ಮಹ್‌ದೂರ (ರ).
ಖಜಾನೆಯ ಕಾವಲುಗಾರರು:
1).ಅಬೂಉಬೈದತುಬ್‌ನುಲ್ ಜರ್ರಾಹ್ (ರ),
2). ಬಿಲಾಲುಬ್‌ನು ರಬಾಹ್ (ರ),
3).ಮುಐಕಿಬ್ (ರ).
ಆಯುಧ ಶಾಲೆಯ ಕಾವಲುಗಾರರು:
1). ಮುಗೀರತುಬ್‌ನು ಶುಅ್ ಬ(ರ),
2).ಅಬೂತ್ವಲ್ ಹ (ರ).
ದೂತರು:
ಸಲಮತುಬ್‌ನು ಅಕ್‌ವರ್ (ರ).
ಧ್ವಜವಾಹಕರು:
1). ಆಲಿಯ್ಯಿಬ್‌ನ್ ಅಬೀತ್ವಾಲಿಬ್ (ರ),
2). ಝುಬೈರುಬ್‌ನುಲ್ ಅವ್ವಾಂ (ರ),
3).ಸಅದ್‌ಬ್‌ನು ಉಬಾದ (ರ),
4). ಝೈದ್‌ಬ್‌ನು ಹಾರಿಸ್ (ರ),
5). ಜಅ್‌ಫರುಬ್‌ನು ಅಬೀತ್ವಾಲಿಬ್ (ರ),
6).ಖಾಲಿದಿಬ್‌ನು ವಲೀದ್ (ರ),
7). ಅಬ್ದುಲ್ಲಾಹಿಬ್ನು ರವಾಹ (ರ).
ಮುದ್ರೆಯ ಆಳುಗಳು:
ಮುಐಕಿಬ್‌ನು ಅಬೀ ಫಾತ್ವಿಮಾ.
ವಾಹನಗಳು:
ಕುದುರೆ:
1). ಸರ್ಕಬ್,
2). ಮುರ್‌ತಜಿಸ್ (ಬಿಳಿ ಬಣ್ಣದ್ದು),
3). ಲಿಝಾರ್ (ಈಜಿಪ್ತಿನ ಮುಖೌಖಿಸ್ ರಾಜ ಪ್ರವಾದಿಯವರಿಗೆ ಕಾಣಿಕೆಯಾಗಿ ನೀಡಿದ್ದು)
4). ಸಬ್‌ಹ,
5). ವರ್‌ದ್ (ತುಮೀಮುದ್ದಾರಿ ಕಾಣಿಕೆಯಾಗಿ ನೀಡಿದ ಕುದುರೆ),
6). ಬಹ್‌ರ್ (ಯಮನ್ ವ್ಯಾಪಾರಿಗಳಿಂದ ಕೊಂಡದ್ದು).
ಕತ್ತೆ:
1). ಯಅ್‌ಫೂರ್ (ಮುಖೌಖಿಸ್ ರಾಜ ಕಾಣಿಕೆಯಾಗಿ ನೀಡಿದ್ದು).
ಹೇಸರಗತ್ತೆ:
1). ದುಲ್‌ದುಲ್ (ಮುಖೌಖಿಸ್ ರಾಜ ಕಾಣಿಕೆಯಾಗಿ ನೀಡಿದ್ದು).
2). ಫಿಳ್ಳತ್ [ ಹುನೈನ್ ಯುದ್ದದಲ್ಲಿ ಪ್ರವಾದಿﷺಮರು ಉಪಯೋಗಿಸಿದ ಪ್ರಾಣಿ,
3). ನಜಾಶಿ ರಾಜ ಕಾಣಿಕೆಯಾಗಿ ನೀಡಿದ್ದು
, 4). "ದೂಮತುಲ್ ಜನ್‌ದಲ್'ನ" ಅಧಿಕಾರಿ ಕಾಣಿಕೆಯಾಗಿ ನೀಡಿದ್ದು.
ಒಂಟೆ:
1). ಕಸ್‌ವಾಅ್ [ಪ್ರವಾದಿﷺಮರು ಹಿಜ್ರಾ ಹೋದ ವಾಹನ. 'ಹುದೈಬಿಯಾ'ದಲ್ಲೂ 'ಮಕ್ಕಾ ಫತ್‌ಹ್'ನ ಸಂದರ್ಭದಲ್ಲೂ ನಬಿﷺಯವರು ಈ ಒಂಟೆಯ ಮೇಲಿದ್ದರು),
2). ಅಳ್‌ಬಾ,
3). ಜದ್ಅಅ್ [ಅಲ್ಲಾಹನಿಂದ ಸಂದೇಶ ಬರುವ ವೇಳೆ ನಬಿಯವರನ್ನು ಹೊರಲು ಭಾಗ್ಯ ಸಿಕ್ಕಿದ ಒಂಟೆ),
4). ಮುಕ್ತಸಬ್ (ಬದ್‌ರ್ ಯುದ್ಧದಲ್ಲಿ ಸಮರಾರ್ಜಿತ ಸೊತ್ತಾಗಿ ಸಿಕ್ಕಿದ ಅಬೂಜಹಲನ ಒಂಟೆ),
5). ಅತ್‌ರಾಫ್,
6). ಅತ್‌ಲಾಲ್,
7). ಝಂಝ್,
8). ಬರಕತ್.
ಆಯುಧಗಳು:
1). ಮಅ್‌ಸೂರ್ (ತಂದೆಯಿಂದ ವಾರೀಸಾಗಿ ಸಿಕ್ಕಿದ್ದು) 2), ದ್ಸುಲ್‌ಫುಕಾರ್ (ಬದ್ರ್ ರಣಾಂಗಣದಲ್ಲಿ ಸಮರಾರ್ಜಿತ ಸೂತ್ತಾಗಿ ಸಿಕ್ಕಿದ್ದು),
3). ಅಸ್ಸ್ವಾಂಸ್ವಾಮ (ಅರಬಿಗಳೆಡೆಯಲ್ಲಿ ಪ್ರಸಿದ್ಧಿ ಪಡೆದ ಆಯುಧ),
4), ಅಲ್‌ಅಳ್‌ಬ್ [ಬದ್‌ರ್‌ನಲ್ಲಿ ಉಬಾದ ನೀಡಿದ್ದು], 5), ಅಲ್‌ಮಖ್‌ದು,
6), ಅಲ್‌ರುಸೂಬ್ (ಇವೆರಡೂ ತ್ವಯ್ಯಿಯ್ ಕುಲದ ವಿಗ್ರಹಗಳಿಂದ ಲಭಿಸಿದ್ದು).
ಗುರಾಣಿ;
1), ಅಲ್ ಮುಜೂರ್, [ಹದ್‌ಯಾ ಆಗಿ ಸಿಕ್ಕಿದ್ದು ]
2), ಅಸ್ಸಲೂಖ್, ಅಲ್‌ಫುತಂಬ್.
ಭರ್ಚಿ:
1). ಅಲ್ ಬೈಳಾಲ್, 2), ಅಲ್‌ಅನಸ [ಇಥಿಯೋಫಿಯಾದ ನಜ್ಜಾತಿ ರಾಜ ಝುಬೈರ್ (ರ) ರಿಗೆ ನೀಡಿದ ಊರುಗೋಲಿನಂತಹ ಚಿಕ್ಕ ಈಟಿ.
ಪ್ರಮುಖ ಮುಅ್‌ಜಿತ್‌ಗಳು:
1). ಕುರ್‌ಆನ್.
2). ಚಂದ್ರ ಎರಡು ಹೋಳಾದುದ್ದು.
3). ಸೂರ್ಯನನ್ನು ತಡೆದು ನಿಲ್ಲಿಸಿದ್ದರು.
4). ಕೈಬೆರಳುಗಳೆಡೆಯಲ್ಲಿ ನೀರು ಚಿಮ್ಮಿದ್ದು.
5).ಆಹಾರ ವರ್ಧನೆ.
6). ಮರ ಮಾತನಾಡಿತ್ತು.
7). ಮರಣ ಹೊಂದಿದವರಿಗೆ ಪುನರ್ಜೀವ ಕೊಟ್ಟಿದ್ದರು.
8).ಅಸಂಖ್ಯಾತ ರೋಗಗಳನ್ನು ಗುಣ ಪಡಿಸಿದ್ದರು..
ಪ್ರವಾದಿವರ್ಯರ ಪತ್ನಿಯರು:
•ಪ್ರವಾದಿﷺಮರು ಅಲ್ಲಾಹನ ಪ್ರವಾದಿಯೂ, ಸಂದೇಶವಾಹಕರೂ ಆಗಿದ್ದಾರೆ. ಮಾತಿನಿಂದಲೂ, ಕರ್ಮದಿಂದಲೂ, ಅಲ್ಲಾಹನ ಆಜ್ಞೆಯಂತೆ ಜಗತ್ತಿನಲ್ಲಿ ಅಲ್ಲಾಹನ ಶರೀಅತನ್ನು ಜಾರಿಗೊಳಿಸಲು ನಿಯುಕ್ತರಾದವರಾಗಿದ್ದಾರೆ. ಆದ್ದರಿಂದ ಅವರ ಎಲ್ಲಾ ಚಟುವಟಿಕೆಗಳಂತೆ ವಿವಾಹವೂ ಕೂಡಾ ಶರೀಅತ್ತೇ ಆಗಿದೆ.
ಪ್ರವಾದಿﷺಮರು ವಿವಿಧ ಸನ್ನಿವೇಶ, ಸಂದರ್ಭಗಳಿಗನುಸಾರವಾಗಿ 13 ವಿವಾಹವಾಗಿದ್ದಾರೆ. ಎಲ್ಲವೂ ಅಲ್ಲಾಹನ ಆಜ್ಞೆಯಂತೆ ನಡೆದಿದೆ. ನಬಿಯವರು ಒಮ್ಮೆ ಹೇಳಿದರು:
"ಅಲ್ಲಾಹನಿಂದ ಸಂದೇಶವನ್ನು ಜಿಬ್‌ರೀಲ್ (ಅ) ನನಗೆ ತಿಳಿಯಪಡಿಸದೆ ನಾನು ವಿವಾಹವಾಗುವುದೋ ಅಥವಾ ನನ್ನ ಮಕ್ಕಳನ್ನು ವಿವಾಹ ಮಾಡಿಸುವುದೂ ಉಂಟಾಗಲಿಲ್ಲ..” ಎಂದಿದ್ದಾರೆ ನಬಿﷺಯವರು.
13 ಪತ್ನಿಯಂದಿರಲ್ಲಿ ಇಬ್ಬರೊಂದಿಗೆ ಸಂಪರ್ಕ ಉಂಟಾಗಿರಲಿಲ್ಲ. ಒಂದು ಕಿಂದ್ ಗೋತ್ರದ ನುಅ್‌ಮಾನ್‌ರ ಮಗಳು ಅಸ್ಮಾ, ಮತ್ತೊಂದು ಕಿಲಾಬ್ ಗೋತ್ರದ ಝಯೀದ್‌ರ ಮಗಳು ಅಂರ ಆಗಿದ್ದರು.
ಮೊದಲನೆಯ ಹೆಣ್ಣು ಕುಷ್ಠರೋಗದ ಕಾರಣ ವಿವಾಹ ಬಂಧನದಿಂದ ದೂರವಾದರೆ ಇನ್ನೊಬ್ಬಳನ್ನು ಸ್ವಭಾವ ಸರಿ ಇಲ್ಲದ್ದರಿಂದ ನಬಿﷺಯವರು ತ್ಯಜಿಸಿದ್ದರು.
ಪ್ರವಾದಿﷺಮರ ವಿವಾಹ ಬಂಧನದಲ್ಲಿ ದೃಢವಾಗಿ ನಿಂತ ಪತ್ನಿಯಂದಿರು 11 ಮಂದಿ ಮಾತ್ರವಾಗಿದ್ದರು. ಇವರಲ್ಲಿ ಇಬ್ಬರು ಪತ್ನಿಯಂದಿರು ಪ್ರವಾದಿಯವರ ಜೀವನ ಕಾಲಾವಧಿಯಲ್ಲೇ ಮರಣ ಹೊಂದಿದ್ದರು. ಅವರಲ್ಲಿ ಖುವೈಲಿದ್‌ರ ಮಗಳು ಖದೀಜಾ (ರ) ಮೊದಲಿಗರಾದರೆ, ಖುಝೈಮರ ಮಗಳು ಝೈನಬ್ (ರ) ನಂತರದವರಾಗಿದ್ದಾರೆ. ಬಾಕಿಯುಳಿದ ಒಂಭತ್ತು ಪತ್ನಿಯರು ನಬಿﷺಯವರ ಮರಣಾ ನಂತರವೂ ಜೀವಿಸಿದ್ದರು..
ಖದೀಜ(ರ)
ಹೆಸರು: ಖದೀಜ (ರ).
ತಂದೆ: ಅಸದ್‌ರ ಮಗ ಖುವೈಲಿದ್
ತಾಯಿ:ಝಾಯಿದರ ಮಗಳು ಫಾತ್ವಿಮ.
ಜನನ: ಹಿಜ್‌ರಾ 68 ವರ್ಷ ಮುಂಚೆ.
ವಿವಾಹ: ಹಿಜ್‌ರಾ 28 ವರ್ಷ ಮುಂಚೆ ಮಕ್ಕಾದಲ್ಲಿ.
ವಿವಾಹ ಕಾರಣ: ಎರಡು ಬಾರಿ ಮದುವೆಯಾದ, ಎರಡು ಮಕ್ಕಳ ತಾಯಿಯಾಗಿದ್ದ ವಿಧವೆಯಾಗಿದ್ದರು ಖದೀಜ (ರ), ಉನ್ನತ ಕುಲಕ್ಕೆ ಸೇರಿದ ಮಹಿಳೆಯಾಗಿದ್ದರು. ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವ ಬೀರಿದ ಸ್ತ್ರೀಯಾಗಿದ್ದರು ಖದೀಜ (ರ), ಅವರು ಮದುವೆಯಾಗಲು ಇಷ್ಟ ತೋರಿದರು. ಪ್ರವಾದಿﷺಮರು ಅವರ ಇಚ್ಛೆಗೆ ಒಪ್ಪಿ ವಿವಾಹವಾದರು.
ವಧು ದಕ್ಷಿಣೆ: 20 ಒಂಟೆ.
ದಾಂಪತ್ಯ ಕಾಲ: 25 ವರ್ಷ.
ಪ್ರವಾದಿವರ್ಯರಿಂದ ಉಂಟಾದ ಮಕ್ಕಳು;
ಝೈನಬ್ (ರ), ಖಾಸಿಂ (ರ), ರುಖಿಯ್ಯ (ರ), ಉಮ್ಮು ಖಲ್ಸೂಮ್ (ರ), ಫಾತಿಮಾ (ರ), ಅಬ್ದುಲ್ಲ (ರ).
ಜೀವನ ಕಾಲ: 65 ವರ್ಷ.
ಮರಣ: ನುಬುವ್ವತ್ (ಪ್ರವಾದಿ ಪಟ್ಟ) ಲಭಿಸಿ ಹತ್ತು ವರ್ಷದ ಬಳಿಕ, ಮಕ್ಕಾದಲ್ಲಿ.
ದಫನ ಮಾಡಿದ ಸ್ಥಳ:ಹುಜೂನ್ (ಜನ್ನತುಲ್ ಮುಅಲ್ಲ).
ವಿಶೇಷತೆಗಳು:
1).ಮಹಿಳೆಯರಲ್ಲಿ ಪ್ರಥಮವಾಗಿ ಸತ್ಯ ಪಥ ಅಂಗೀಕರಿಸಿದವರು. ಎಲ್ಲವನ್ನೂ ಪವಿತ್ರ ಧರ್ಮಕ್ಕಾಗಿ ವ್ಯಯಿಸಿದರು.
2).ಪುರುಷರಲ್ಲಿ ಹಲವು ಮಂದಿ ಸಂಪೂರ್ಣ ಎಂಬ ಸ್ಥಾನವನ್ನು ಗಿಟ್ಟಿಸಿದ್ದಾರೆ. ಆದರೆ ಮಹಿಳೆಯರಲ್ಲಿ ಆ ಸ್ಥಾನ ಲಭಿಸಿದ್ದು 4 ಮಂದಿಗೆ ಮಾತ್ರವಾಗಿದೆ;
a), ಇಮ್ರಾನ್‌ರ ಮಗಳು ಮರ್ಯಮ್ (ರ),
b),ಫಿರ್‌ಔನ್‌ನ ಪತ್ನಿ ಆಸಿಯ (ರ),
c) ಖುವೈಲೀದ್‌ರ ಮಗಳು ಖದೀಜಾ (ರ), d),ಮುಹಮ್ಮದ್(ಸ) ರ ಮಗಳು ಫಾತಿಮಾ (ರ) ರಾಗಿದ್ದಾರೆ.
3). ಇತರ ಪತ್ನಿಯರಿಗಿಂತ ಅತ್ಯುನ್ನತ ಪದವಿ ಮತ್ತು ಶ್ರೇಷ್ಠತೆಯನ್ನು ನಬಿﷺಯವರು ಖದೀಜಾ (ರ) ರಿಗೆ ನೀಡಿದ್ದರು. ಖದೀಜಾ (ರ) ಮರಣದವರೆಗೂ ನಬಿﷺಯವರು ಬೇರೆ ಯಾರನ್ನೂ ಮದುವೆಯಾಗಿರಲಿಲ್ಲ.
4). ಪ್ರವಾದಿಯವರ ಮಕ್ಕಳಲ್ಲಿ ಇಬ್ರಾಹೀಮರನ್ನು ಬಿಟ್ಟು ಬಾಕಿಯುಳಿದವರಿಗೆ ಜನ್ಮ ನೀಡಲು ಭಾಗ್ಯ ಪಡೆದ ಮಹಿಳೆ.
5).ಖುರೈಷಿ ಸ್ತ್ರೀಯರಲ್ಲಿ ಶ್ರೀಮಂತೆಯೂ, ಪ್ರಭಾವಿಯೂ, ಸುಪ್ರಸಿದ್ಧಿಯೂ ಆದ ಮಹಿಳೆ.
🌼ಸೌದ (ರ)🌼
ಹೆಸರು: ಸೌದ.
ತಂದೆ: ಖೈಸ್‌ರ ಮಗ ಝುಂಅಃ.
ತಾಯಿ: ಶುಮೂಸ್
ಜನನ: ಹಿಜ್ರಾಕ್ಕೆ 68 ವರ್ಷ ಮುಂಚೆ ಮಕ್ಕಾದಲ್ಲಿ.
ವಿವಾಹ:ಹಿಜ್ರಾಕ್ಕೆ 3 ವರ್ಷ ಮುಂಚೆ ಮಕ್ಕಾದಲ್ಲಿ.
ವಿವಾಹ ಕಾರಣ: ಪ್ರವಾದಿಯವರು ಮಕ್ಕಾದಲ್ಲಿರುವಾಗ ದೊಡ್ಡಪ್ಪ ಅಬೂತಾಲಿಬ್ ಮತ್ತು ಪತ್ನಿ ಖದೀಜಾ ಇವರ ಮರಣ ಪ್ರವಾದಿವರ್ಯರನ್ನು ದುಃಖಕ್ಕೀಡು ಮಾಡಿತು. ತನ್ನ ಮಕ್ಕಳನ್ನು ಪೋಷಿಸಲು, ಗೃಹ ಕಾರ್ಯಗಳನ್ನು ನೋಡಿಕೊಳ್ಳಲು ವಿವಾಹವಾಗುವಂತೆ ಅನುಯಾಯಿಗಳು ಅಪೇಕ್ಷಿಸಿದರು. ಈ ಎಲ್ಲಾ ಕಾರಣಗಳಿಂದ ಸೌದಾ ಬೀವಿಯನ್ನು ವಿವಾಹವಾದರು.
ದಾಂಪತ್ಯ ಕಾಲ: 14 ವರ್ಷ. ಪ್ರವಾದಿವರ್ಯರಿಂದ ಮಕ್ಕಳುಟಾಂಗಲಿಲ್ಲ.
ಮೊದಲ ಪತಿ:ಸಅ್'ರಾನುಬಿನ್ ಅಂರ್, (5 ಮಕ್ಕಳು ಸೌದಾ(ರ)ರಿಗೆ ಇವರಿಂದ ಉಂಟಾಗಿತ್ತು).
ಮರಣ:ಉಮರ್(ರ) ಖಿಲಾಫತ್‌ನ ಕೊನೆಯ ಕಾಲ ಶವ್ವಾಲ್ ತಿಂಗಳಲ್ಲಿ ಮದೀನಾದಲ್ಲಿ.
ದಫನ ಮಾಡಿದ ಸ್ಥಳ: ಜನ್ನತುಲ್ ಬಖೀಅ್.
ವಿಶೇಷತೆಗಳು:
1.ಖದೀಜಾರ ನಂತರ ಪ್ರವಾದಿವರ್ಯರು ಮೊದಲು ಮದುವೆಯಾದ ಮಹಿಳೆ.
2. ಪ್ರವಾದಿಯವರನ್ನು ಸಂತೃಪ್ತಿಗೊಳಿಸಲು ತನಗಿದ್ದ ದಿನವನ್ನು ಆಯಿಶಾರಿಗೆ ನೀಡಿದರು.
3.ದಾನಶೀಲೆಯಾಗಿದ್ದರು.
4. ಪ್ರವಾದಿﷺಯವರಿಂದ 5 ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ಅದರಲ್ಲಿ ಒಂದು ಹದೀಸ್ ಇಮಾಮ್ ಬುಖಾರಿ ತನ್ನ ಸ್ವಹೀಹ್'ನಲ್ಲಿ ಉದ್ಧರಿಸಿದ್ದಾರೆ.
🌼ಆಇಶಾ (ರ):🌼
ಹೆಸರು:ಆಇಶಾ.
ಅಂಕಿತ ನಾಮ: ಉಮ್ಮು ಅಬ್‌ದಿಲ್ಲಾಹ್.
ತಂದೆ:ಅಬೂಬಕರ್ ಸಿದ್ದೀಖ್.
ತಾಯಿ: ಝೈನಬ (ಉಮ್ಮುರುಮಾನ್).
ಜನನ: ಹಿಜ್ರಾಕ್ಕೆ 9 ವರ್ಷ ಮುಂಚೆ.
ವಿವಾಹ: ಹಿಜ್ರಾ 1 ನೇ ವರ್ಷ ಮದೀನಾದಲ್ಲಿ.
ವಧುದಕ್ಷಿಣೆ: 400 ದಿರ್‌ಹಂ,
ದಾಂಪತ್ಯ ಜೀವನ: 11 ವರ್ಷ.
ಮಕ್ಕಳು: ಇಲ್ಲ.
ಜೀವನ:67 ವರ್ಷ.
ಮರಣ: ಹಿಜ್ರಾ 58 ಮದೀನಾದಲ್ಲಿ.
ದಫನ ಮಾಡಿದ ಸ್ಥಳ: ಜನ್ನತುಲ್ ಬಕೀಅ್.
ವಿಶೇಷತೆಗಳು:
1. ತಂದೆ ತಾಯಂದಿರು ಮುಹಾಜರುಗಳಾದ ಪ್ರವಾದಿವರ್ಯರ ಏಕ ಪತ್ನಿ,
2. ಆಯಿಶಾ ಬೀವಿಯವರ ಮಡಿಲಲ್ಲಿ ತಲೆ ಇಟ್ಟಾಗಿತ್ತು ನಬಿಯವರ ಮರಣ.
3. ಪ್ರವಾದಿﷺಮರು ಅತ್ಯಂತ ಹೆಚ್ಚು ಪ್ರೀತಿಸಿದ ಪತ್ನಿಯಾಗಿದ್ದರು. ಒಮ್ಮೆ ಅಮ್ರ್‌ಬ್‌ನ್ (ರ) ರ ಕೇಳಿದರು:
"ತಮಗೆ ಅತೀ ಇಷ್ಟವಾದ ಸ್ತ್ರೀ ಯಾರು..?"
ನಬಿﷺಯವರು ಹೇಳಿದರು:
"ಆಇಶಾ"
"ನಿಮಗೆ ಅತ್ಯಂತ ಇಷ್ಟವಾದ ಪುರುಷ ಯಾರು..?"
"ಅವಳ ತಂದೆ ಅಬೂಬಕರ್ ಸಿದ್ದೀಖ್ (ರ)" ಎಂದರು. (ತಿರ್ಮುದ್ದಿ)
5. ನಬಿﷺಯವರು ಹೇಳಿದರು: "ರೊಟ್ಟಿ ಮತ್ತು ಮಾಂಸ ಇತರ ಎಲ್ಲಾ ಆಹಾರಗಳಿಗಿಂತ ಉತ್ತಮವಾದಂತೆ ಆಇಶಾ ಎಲ್ಲಾ ಸ್ತ್ರೀಗಳಿಗಿಂತ ಉತ್ತಮಳಾಗಿದ್ದಾಳೆ.."
5. ಅಇಶಾ ನಿರಪರಾಧಿತ್ವವನ್ನು ಅಂಗೀಕರಿಸುತ್ತಾ ಕುರ್‌ಆನ್ ಅವತೀರ್ಣವಾಯಿತು.
6. ನಬಿﷺಯವರು ವಿವಾಹವಾಗಿದ್ದವರಲ್ಲಿ ಕನ್ಯೆ ಸ್ತ್ರೀ ಆಗಿದ್ದವರು ಆಯಿಶಾ ಮಾತ್ರ,
7.ಸಹೋದರಿಯ ಮಗನಾದ ಅಬ್ದುಲ್ಲಾಹಿಬ್ನು ಝುಬೈರ್‌ರಿಗೆ ಸೇರಿಸಿಕೊಂಡು ನಬಿﷺಯವರು ಆಇಶಾರಿಗೆ ಉಮ್ಮು ಅಬ್‌ದಿಲ್ಲಾಹ್ಎಂಬ ಹೆಸರನ್ನಿಟ್ಟಿದ್ದರು.
8.ಜಿಬ್‌ರೀಲ್(ಅ) ಸಲಾಮ್ ಹೇಳಿದ ಮಹಿಳೆ.
9.ಆಇಶಾ ಹೊದಿಕೆಯೊಳಗೆ ಇರವಾಗ ಪ್ರವಾದಿಯವರಿಗೆ ಅಲ್ಲಾಹನ ದಿವ್ಯ ಸಂದೇಶ ಬಂದಿತ್ತು.
10. ಸ್ವಹಾಬಿಗಳಲ್ಲಿ ಹೆಚ್ಚು ಹದೀಸ್‌ಗಳನ್ನು ವರದಿ ಮಾಡಿದವರಲ್ಲಿ ಆಯಿಶಾ (ರ) ಒಬ್ಬರು. 2210 ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
11.ಆಳವಾದ ಅರಿವುಳ್ಳ ವಿದ್ವಾಂಸೆಯಾಗಿದ್ದರು.
12. ತಾಯಿಯ ಗರ್ಭದಲ್ಲಿರುವಾಗಲೇ ಆಇಶಾರವರ ರೂಪವನ್ನು ಜಿಬ್‌ರೀಲ್(ಅ) ಪ್ರವಾದಿﷺಮರಿಗೆ ತೋರಿಸಿದ್ದರು..
ಪ್ರವಾದಿﷺಮರ ಪತ್ನಿಯರ ಸಂಕ್ಷಿಪ್ತ ಪರಿಚಯ:
🌼ಹಫ್ಸಾ(ರ):🌼
ಹೆಸರು:ಹಫ್ಸಾ.
ತಂದೆ: ಎರಡನೇ ಖಲೀಫ ಉಮರ್.
ತಾಯಿ:ಮಳ್‌ಊನರ ಮಗಳು ಝೈನಬ.
ಜನನ:ಹಿಜ್‌ರಾದ 18 ವರ್ಷ ಮೊದಲು ಮಕ್ಕಾದಲ್ಲಿ.
ವಿವಾಹ: ಹಿಜ್ರಾ 3, ಮದೀನಾದಲ್ಲಿ.
ದಾಂಪತ್ಯ ಜೀವನ: 8 ವರ್ಷ.
ವಿವಾಹ ಕಾರಣ:ಎರಡನೇ ಖಲೀಫ ಉಮರ್‌ರೊಂದಿಗಿನ ನಂಟನ್ನು ಪ್ರವಾದಿﷺರ್ಯರು ಇನ್ನಷ್ಟು ಬಲ ಪಡಿಸಲು, ಅದೇ ರೀತಿ ತನ್ನ ಆನುಯಾಯಿಯೂ , ಬದ್ರ್, ರಣಾಂಗಣದಲ್ಲಿ ಗಾಯಕ್ಕೊಳಗಾಗಿ ಮರಣ ಹೊಂದಿದವರೂ ಆದ ಖುನೈಸ್ ಎಂಬವರ ವಿಧವೆಯಾದ ಪತ್ನಿ ಹಫ್ಸಾರನ್ನು ಸಾಂತ್ವನಗೊಳಿಸುವ ಉದ್ದೇಶದಿಂದ ವಿವಾಹವಾದರು.
ವಧುದಕ್ಷಿಣೆ: 400 ದಿರ್‌ಹಂ.
ಮಕ್ಕಳು:ಇಲ್ಲ.
ಮೊದಲ ಪತಿ:ಖುನೈಸ್'ಬ್'ನು ಹುದಾಫ.
ಜೀವನ:63 ವರ್ಷ,
ಮರಣ:ಹಿಜ್ರಾ 45, ಮದೀನಾದಲ್ಲಿ.
ದಫನ ಸ್ಥಳ:ಜನ್ನತುಲ್ ಬಕೀಅ್,
ವಿಶೇಷತೆಗಳು:
1. ಸಾಹಿತ್ಯದಲ್ಲಿ ನಿಪುಣತೆಯನ್ನು ಹೊಂದಿದ ಮಹಿಳೆಯಾಗಿದ್ದರು. ಆದ್ದರಿಂದಲೇ ಅವರ ಪ್ರಮುಖ ಹವ್ಯಾಸಗಳು ಬರೆಯುವುದು ಮತ್ತು ಓದುವುದಾಗಿತ್ತು.
2. ಅಬೂಬಕರ್ ಖಿಲಾಫತ್ ಕಾಲದ ಮುಸ್ಹಫ್ ಜಾಗ್ರತೆಯಾಗಿಟ್ಟದ್ದು ಹಫ್ಸಾರ ಮನೆಯಲ್ಲಾಗಿತ್ತು,
3.ನಬಿﷺಯವರಿಂದ 60 ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
4.ಮದೀನಾಕ್ಕೆ ಹಿಜ್ರಾ ಹೋದವರಾಗಿದ್ದಾರೆ,
5. ಅತ್ಯಂತ ಸಮಾಧಾನದ ಮಹಿಳೆಯಾಗಿದ್ದರು,
6.ಹೃಸ್ವ ಕಾಲಾವಧಿಯಲ್ಲಿ ಕುರ್‍ಆನ್ ಕಂಠಪಾಠ ಮಾಡಿದರು.
7.ಅರಬಿ ಸಾಹಿತ್ಯದಲ್ಲಿ ನಿಪುಣೆಯಾಗಿದ್ದ ಬೀವಿಯರಿಂದ ಅರಬ್ಬಿ ಸಾಹಿತ್ಯಗಾರರು ಹಲವು ಉದ್ಧರಣೆಗಳನ್ನು ಉಚ್ಚರಿಸಿದ್ದಾರೆ.
ಝೈನಬ್ (ರ)
ಹೆಸರು: ಝೈನಬ್.
ಗೌರವ ನಾಮ: ಉಮ್ಮುಲ್ ಮಸಾಕೀನ್ (ನಿರ್ಗತಿಕರ ತಾಯಿ),
ತಂದೆ: ಹಾರಿಸ್‌ರ ಮಗ ಖುಝೈಮ.
ತಾಯಿ: ಔಫ್‌ರ ಮಗಳು ಹಿಂದ್.
ಜನನ: ಹಿಜ್ರಾಕ್ಕೆ 26 ವರ್ಷ ಮುಂಚೆ ಮಕ್ಕಾದಲ್ಲಿ.
ವಿವಾಹ: ಮದೀನಾದಲ್ಲಿ ಹಿಜ್ರಾಕ್ಕೆ 3 ಕ್ಕೆ ಶವ್ವಾಲ್‌ನ ನಂತರ.
ವಿವಾಹ ಕಾರಣ: ಪ್ರವಾದಿವರ್ಯರ ಮೊಲೆಹಾಲು ಸಂಬಂಧದ ಸಹೋದರ ಅಬ್ದುಲ್ಲಾಹ್ ಉಹ್ದ್ ರಣಾಂಗಣದಲ್ಲಿ ಹುತಾತ್ಮರಾದರು. ಝೈನಬ್ ಇವರ ಪತ್ನಿಯಾಗಿದ್ದರು. ಉದಾರ ವ್ಯಕ್ತಿತ್ವದ ಗುಣ ಹೊಂದಿದ್ದ ಝೈನಬ್‌ರನ್ನು ಮದುವೆಯಾಗಲು ಹಲವು ಮಂದಿ ಮುಂದೆ ಬಂದಿದ್ದರು. ಆದರೆ ಬೀವಿಯವರು ಅದನ್ನೆಲ್ಲವನ್ನೂ ತಿರಸ್ಕರಿಸಿ ಕೊನೆಗೆ ಪ್ರವಾದಿﷺಮರನ್ನು ವಿವಾಹವಾದರು.
ವಧು ದಕ್ಷಿಣೆ: 400 ದಿರ್‌ಹಂ.
ದಾಂಪತ್ಯ ಜೀವನ: 8 ತಿಂಗಳು.
ಮಕ್ಕಳು: ಇಲ್ಲ.
ಮೊದಲ ಪತಿ: ಅಬ್ದುಲ್ಲಾಹಿಬ್ನು ಜಹ್‌ಷ್.
ಮರಣ: ಮದೀನಾದಲ್ಲಿ, ಹಿಜ್‌ರಾ 4 ರಬೀವುಲ್ ಅವ್ವಲ್.
ದಫನ ಸ್ಥಳ: ಜನ್ನತುಲ್ ಬಖೀಅ್.
ವಿಶೇಷತೆಗಳು:
1. ದಾನ ನೀಡುವುದರಲ್ಲಿ ಎತ್ತಿದ ಕೈ. ಈ ಕಾರಣದಿಂದಲೇ ಅವರಿಗೆ ಉಮ್ಮುಲ್ ಮಸಾಕೀನ್ (ನಿರ್ಗತಿಕರ ತಾಯಿ) ಎಂಬ ಉನ್ನತ ಹೆಸರು ಲಭಿಸಿದ್ದು.
2. ನಬಿﷺಯವರು ಜೀವಿತಾವಧಿಯಲ್ಲೇ ಮರಣ ಹೊಂದಿದ ಇಬ್ಬರು ಪತ್ನಿಯರಲ್ಲಿ ಒಬ್ಬರು.
3. ಖುರೈಷಿಗಳಲ್ಲದವರಿಂದ ನಬಿﷺಯವರು ಪ್ರಥಮವಾಗಿ ವಿವಾಹವಾದ ಮಹಿಳೆ.
4.ನಬಿﷺಯವರೊಂದಿಗೆ ಅತ್ಯಲ್ಪ ಕಾಲ ಜೀವಿಸಿದ ಪತ್ನಿ.
5. ನಬಿﷺಯವರು ಜನಾಝ ನಮಾಝ್ ಮಾಡಿದ ಏಕೈಕ ಪತ್ನಿ. [ಖದೀಜಾ(ರ) ಮರಣ ಹೊಂದುವಾಗ ಮಯ್ಯಿತ್ ನಮಾಝ್ ಜಾರಿಗೆ ಬಂದಿರಲಿಲ್ಲ.]
[
🌼ಹಿಂದ್ (ಉಮ್ಮುಸಲಮ):🌼
ಹೆಸರು: ಹಿಂದ್.
ತಂದೆ: ಅಬೂ ಉಮಯ್ಯ.
ತಾಯಿ: ಅಮೀರ್‌ರ ಮಗಳು ಆತಿಕ.
ಜನನ: ಹಿಜ್ರಾಕ್ಕೆ 30 ವರ್ಷ ಮುಂಚೆ ಮಕ್ಕಾದಲ್ಲಿ.
ವಿವಾಹ: ಹಿಜ್ರಾ 4, ಮದೀನಾದಲ್ಲಿ.
ವಿವಾಹ ಕಾರಣ: ಉಹ್ದ್ ರಣಾಂಗಣದಲ್ಲಾದ ಗಂಭೀರ ಗಾಯಗಳಿಂದ ಅಬೂಸಲಮು (ರ) ತೀರಿದರು. ನಾಲ್ಕು ಕಂದಮ್ಮಗಳೊಂದಿಗೆ ಉಮ್ಮು ಸಲಮ ತನ್ನ ಕುಟುಂಬಕ್ಕೆ ಹಿಂದಿರುಗುವುದನ್ನು ಕಂಡ ದುಃಖ ತಾಳಲಾರದೆ ಅವರಿಗೆ ಆಶ್ರಯ ನೀಡುವ ಸಲುವಾಗಿ ಮದುವೆಯಾದರು.
ದಾಂಪತ್ಯ ಜೀವನ: 7 ವರ್ಷ.
ಮಕ್ಕಳು: ಇಲ್ಲ.
ಮೊದಲ ಪತಿ: ಅಬೂಸಲಮ (ಅಬ್ದುಲ್ಲ).
ಜೀವನ: 84 ವರ್ಷ.
ಮರಣ: ಹಿಜ್ರಾ 61 ಶವ್ವಾಲ್ ಮದೀನಾದಲ್ಲಿ, (ಉಮ್ಮ ಹಾತುಲ್ ಮಲಿಕ್‌ಮಿನೀನ್‌ಗಳಲ್ಲಿ ಕೊನೆಗೆ ಮರಣ ಹೊಂದಿದ ಬೀವಿ),
ದಫನ ಸ್ಥಳ:ಜನ್ನತುಲ್ ಬಕೀಅ್.
ವಿಶೇಷತೆಗಳು:
1. ಮೊಟ್ಟಮೊದಲು ಇಥಿಯೋಫಿಯಾಕ್ಕೆ ಹಿಜ್ರಾ ಹೋದ ಮಹಿಳೆ.
2. ವಿದ್ಯಾವಂತೆಯೂ, ಅತೀವ ತೀಕ್ಷ್ಮಮತಿಯೂ ಆಗಿದ್ದರು.
3. ಪ್ರಥಮವಾಗಿ ಮದೀನಾಕ್ಕೆ ಹಿಜ್ರಾ ಹೋದ ಮಹಿಳೆಯೂ ಹೌದು.
4. ಸೌಂದರ್ಯವತಿಯಾಗಿದ್ದರು. ಆಯಿಶಾ (ರ) ಹೇಳುತ್ತಾರೆ:
“ನಬಿﷺ ಉಮ್ಮು ಸಲಮರನ್ನು ಮದುವೆಯಾದರೆಂದು ತಿಳಿದು ಗಾಬರಿಯಾದೆ. ನಾನು ಹಫ್ಸಾ(ರ) ರೊಂದಿಗೆ ಹೇಳಿದೆ. ಆಗ ಹಫ್ಸಾ(ರ)ರು ಹೇಳಿದರು: "ಜನರು ಹೇಳುವಷ್ಟು ಸೌಂದರ್ಯ ಉಮ್ಮು ಸಲಮರಿಗಿಲ್ಲ." ಆಗ ನನಗೆ ಸ್ವಲ್ಪ ಸಮಾಧಾನ ದೊರಕಿತು. ಆದರೆ ಆ ಸಮಾಧಾನ ಉಮ್ಮು ಸಲಮರನ್ನು ಕಾಣುವ ವರೆಗೆ ಮಾತ್ರವೇ ಇತ್ತು. ನಾನು ಎಣಿಸಿದಕ್ಕಿಂತಲೂ ದುಪ್ಪಟ್ಟಾಗಿತ್ತು ಉಮ್ಮು ಸಲಮ(ರ)ರ ಸೌಂದರ್ಯ, ನಾನು ಈ ವಿಷಯ ಹಫ್ಸಾ(ರ)ರೊಂದಿಗೆ ಹೇಳಿದಾಗ ಅವರು ಕೂಡಾ ಒಪ್ಪಿಕೊಂಡರು.."
5. ಪ್ರವಾದಿﷺಮರ ಪತ್ನಿಯರಲ್ಲಿ ಅಧಿಕ ಹದೀಸ್ ವರದಿ ಮಾಡಿದವರಲ್ಲಿ ಆಯಿಶಾ(ರ)ರ ನಂತರದ ಸ್ಥಾನ ಉಮ್ಮು ಸಲಮರಿಗಾಗಿದೆ. 378 ಹದೀಸ್‌ಗಳನ್ನು ವರದಿ ಮಾಡಿದ್ದಾರೆ..
ಝೈನಬ್ (ರ):
ಹೆಸರು: ಝೈನಬ್.
ತಂದೆ: ರಿಆಬ್‌ರ ಮಗ ಜಹ್ ಷ್.
ತಾಯಿ: ಅಬ್ದುಲ್ ಮುತ್ತಲಿಬರ ಮಗಳು ಉಮೈಮ.
ಜನನ: ಹಿಜ್ರಾಕ್ಕೆ 30 ವರ್ಷ ಮುಂಚೆ, ಮಕ್ಕಾದಲ್ಲಿ.
ವಿವಾಹ: ಹಿಜ್ರಾ 5, ಮದೀನಾದಲ್ಲಿ.
ವಧು ದಕ್ಷಿಣೆ: 400 ದಿರ್‌ಹಂ.
ದಾಂಪತ್ಯ ಜೀವನ: 6 ವರ್ಷ,
ಮಕ್ಕಳು: ಇಲ್ಲ.
ಮೊದಲ ಪತಿ: ಝೈದ್‌ಬ್‌ನ್ ಹಾರಿಸ್ (ರ).
ಜೀವನ: 50 ವರ್ಷ.
ಮರಣ: ಹಿಜ್ರಾ 20, ಮದೀನಾದಲ್ಲಿ.
ದಫನ ಸ್ಥಳ: ಜನ್ನತುಲ್ ಬಕೀಅ್.
ವಿಶೇಷತೆಗಳು:
1. ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದವರಲ್ಲಿ ಝೈನಬರೂ ಒಬ್ಬರು.
2. ಪ್ರವಾದಿವರ್ಯರೊಂದಿಗೆ ತನ್ನ ವಿವಾಹ ಪ್ರಸ್ತಾಪಯನ್ನು ಕೇಳಿ ಸಂತೋಷಗೊಂಡ ಬೀವಿಯವರು ಅಲ್ಲಾಹನಿಗೆ ಸಾಷ್ಟಾಂಗವೆರಗಿದರು. ಎರಡು ತಿಂಗಳ ಉಪವಾಸವನ್ನು ಹರಕೆ ಮಾಡಿದರು.
3. ತುಂಬಾ ನಮಾಝ್ ಮಾಡುವವರೂ, ಉಪವಾಸ ಆಚರಿಸುವವರೂ ಆಗಿದ್ದರು.
4. ನಬಿﷺಯವರ ಮರಣಾನಂತರ ಪತ್ನಿಯಂದಿರಲ್ಲಿ ಮೊದಲು ಮರಣ ಹೊಂದಿದ್ದು ಝೈನಬ ಆಗಿದ್ದರು. ನಬಿﷺಯವರು ವಫಾತಿನ ಮುಂಚೆಯೇ ಈ ವಿಷಯವನ್ನು ತಿಳಿಸಿದ್ದರು.
5.ಉದಾರ ದಾನಿಯೂ, ನಿರ್ಗತಿಕರ ಆಶಾ ಕೇಂದ್ರವೂ ಆಗಿದ್ದರು.
6. ಧಾರ್ಮಿಕ ವಿಚಾರಗಳಲ್ಲಿ ಅತ್ಯಧಿಕ ಸೂಕ್ಷ್ಮತೆಯನ್ನು ಪಾಲಿಸುತ್ತಿದ್ದರು.
🌼ಜುವೈರಿಯ್ಯ (ರ):🌼
ಹೆಸರು: ಜುವೈರಿಯ್ಯ.
ತಂದೆ: ಅಬೀಳಿರಾರ್‌ರ ಮಗ ಹಾರಿಸ್,
ಜನನ: ಹಿಜ್ರಾಕ್ಕೆ 16 ವರ್ಷ ಮೊದಲು.
ವಿವಾಹ: ಹಿಜ್ರಾ 5 ಬುನೂಮುಸ್ತಲಖ್ ಯುದ್ಧದ ನಂತರ.
ವಧು ದಕ್ಷಿಣೆ: 400 ದಿರ್‌ಹಂ,
ದಾಂಪತ್ಯ ಜೀವನ: 6 ವರ್ಷ.
ಮಕ್ಕಳು: ಇಲ್ಲ.
ಮೊದಲ ಪತಿ: ಸ್ವಫ್‌ವಾನ್‌ರ ಮಗ ಮುಸಾಫೀಅ್.
ಜೀವನ: 65 ವರ್ಷ.
ಮರಣ: ಹಿಜ್ರಾ 50, ಮದೀನಾದಲ್ಲಿ.
ದಫನ ಸ್ಥಳ: ಜನ್ನತುಲ್ ಬಕೀಅ್.
ವಿಶೇಷತೆಗಳು:
*1).* ಆಯಿಶಾ ಬೀವಿ ಹೇಳುತ್ತಾರೆ:
"ತನ್ನ ಸಮೂಹಕ್ಕೆ ಇಂತಹ ಅನುಗ್ರಹವನ್ನು ತೋರಿದ ಮತ್ತೊಂದು ಹೆಣ್ಣು ನನಗೆ ಗೊತ್ತಿಲ್ಲ. ಜುವೈರಿಯಾ ಕಾರಣದಿಂದಾಗಿ ಸುಮಾರು 700 ರಷ್ಟು ಗುಲಾಮರಿಗೆ ಮುಕ್ತಿ ಲಭಿಸಿದೆ.."
2). ಪ್ರವಾದಿವರ್ಯರಿಂದ ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
* 🌼ಸ್ವಫಿಯ್ಯ (ರ):🌼
ಹೆಸರು: ಸ್ವಫಿಯ್ಯ (ರ).
ತಂದೆ: ಅಖ್‌ತಾಬ್‌ರ ಮಗ ಹುಯಯ್ಯ [ಮೂಸಾ ನಬಿಯವರ ಸಹೋದರ ಹಾರೂನ್ ನಬಿಯವರ ಕುಟುಂಬ ಪರಂಪರೆಗೆ ಸೇರಿದವರು]
ತಾಯಿ: ಶಂವಾಲ್‌ರ ಮಗಳು ಬರ್ರ.
ಜನನ: ಹಿಜ್ರಾಕ್ಕೆ 10 ವರ್ಷ ಮೊದಲು ಖೈಬರ್‌ನಲ್ಲಿ.
ವಿವಾಹ: ಹಿಜ್ರಾ 7 ನೇ ವರ್ಷ ಖೈಬರ್‌ನಿಂದ ತಿರುಗಿ ಬರುವಾಗ.
ವಿವಾಹ ಕಾರಣ: ಜೂದ ಧರ್ಮದ ಪ್ರಮುಖನಾದ ಹುಯಯ್ಯುಬ್‌ನು ಖತ್ತಾಬ್‌ರ ಮಗಳು, ಖೈಬರ್ ಯುದ್ದದಲ್ಲಿ ಹತನಾಗಲ್ಪಟ್ಟ ಕಿನಾನ ಎಂಬ ಜೂದ ನೇತಾರನ ಪತ್ನಿಯೂ ಆಗಿದ್ದರು. ಖೈಬರ್ ಯುದ್ಧದಲ್ಲಿ ಬಂಧಿಸಲ್ಪಟ್ಟು ತಂದೆ ಮತ್ತು ಪತಿ ವಧಿಸಲ್ಪಟ್ಟ ಬೇಸರದಲ್ಲಿದ್ದ ಬೀವಿಯವರನ್ನು ಬಂಧಮುಕ್ತಗೊಳಿಸಲು 7 ಒಂಟೆಯನ್ನು ಮೋಚನಾ ವಸ್ತುವಾಗಿ ಪ್ರವಾದಿﷺಮರು ನೀಡಿ, ಬಿಡುಗಡೆ ಗೊಳಿಸಿದರು. ನಂತರ ಅವರನ್ನು ವಿವಾಹವಾದರು.
ವಧು ದಕ್ಷಿಣೆ: ದಾಸ್ಯತ್ವದಲ್ಲಿ ವಿಮೋಚನೆ.
ದಾಂಪತ್ಯ: 4 ವರ್ಷ.
ಮಕ್ಕಳು: ಇಲ್ಲ.
ಮುಂಚಿನ ಪತಿಯಂದಿರು:
1, ಸಲಾಮ್ ಬ್‌ನ್ ಮಿಕ್‌ಶ್,2, ಕಿನಾನಬ್‌ನ್ ರಬೀಅ್,
(ಇಬ್ಬರೂ ಯಹೂದಿ ಕವಿಗಳಾಗಿದ್ದರು).
ಮರಣ: ಹಿಜ್ರಾ 50, ಮದೀನಾದಲ್ಲಿ.
ದಫನ ಸ್ಥಳ: ಜನ್ನತುಲ್ ಬಕೀಅ್.
ವಿಶೇಷತೆಗಳು:
1). ಅತಿ ಬುದ್ದಿವಂತೆಯಾಗಿದ್ದರು.
2). ಮೂರನೇ ಖಲೀಫ ಉಸ್ಮಾನುಬ್‌ನು ಅಫ್ಘಾನ್‌ರನ್ನು ಶತ್ರುಗಳು ಸುತ್ತುವರಿದಾಗ ಮನೆಯೊಳಗೆ ಅವಿತುಕೊಂಡಿದ್ದಾಗ ಆಹಾರ ವಸ್ತುಗಳನ್ನು, ನೀರನ್ನು ತಲುಪಿಸುತ್ತಿದ್ದವರು ಸ್ವಫಿಯ್ಯ ಆಗಿದ್ದರು.
3). ಪ್ರವಾದಿವರ್ಯ ಪತ್ನಿಯರಾದ ಆಇಶಾ ಮತ್ತು ಹಫ್ಸಾ ಸವತಿ ಮಾತ್ಸರ್ಯದಿಂದ ಒಮ್ಮೆ ಇವರನ್ನು ಛೇಡಿಸಿದಾಗ ದುಃಖದಿಂದ ಅತ್ತಿದ್ದರು. ನಬಿﷺಯವರು ಬಂದು ವಿಷಯ ತಿಳಿದಾಗ:
"ನನ್ನ ಪೂರ್ವಪಿತ ಹಾರೂನ್ ನಬಿ, ದೊಡ್ಡಪ್ಪ ಮೂಸಾ ನಬಿ, ನನ್ನ ಪತಿ ಮುಹಮ್ಮದ್ ನಬಿ, ಈ ವಿಶೇಷತೆ ನಿಮಗಿದೆಯಾ ಎಂದು ಅವರಲ್ಲಿ ನೀನು ಕೇಳಬೇಕಿತ್ತು.." ಎಂದಿದ್ದರು.
🌼ರಂಲ (ಉಮ್ಮ ಹಬೀಬ):🌼
ಹೆಸರು: ರಂಲ [ಉಮ್ಮು ಹಬೀಬ]
ತಂದೆ: ಅಬೂಸುಫ್‌ಯಾನ್.
ತಾಯಿ: ಅಬುಲ್ ಆಸ್ವರ ಮಗಳು ಸ್ಟಫಿಯ್ಯ.
ಜನನ: ಹಿಜ್ರಾಕ್ಕೆ 30 ವರ್ಷ ಮೊದಲು.
ವಿವಾಹ: ಹಿಜ್ರಾ 7 ನೇ ವರ್ಷ ಮುಹರಮ್ ತಿಂಗಳು.
ವಿವಾಹ ಕಾರಣ: ಇಸ್ಲಾಮಿನ ಪ್ರಾರಂಭ ಕಾಲದಲ್ಲೇ ರಂಲ ಹಾಗೂ ಪತಿ ಇಸ್ಲಾಮ್ ಸ್ವೀಕರಿಸಿದರು. ನಂತರ ಇಬ್ಬರೂ ಅಬ್‌ಸೀನಿಯಾಗೆ ಹಿಜ್ರಾ ಹೋದರು. ಆಬ್‌ಸೀನಿಯಾಗೆ ತಲುಪಿದಾಗ ಪತಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ ನಂತರ ಅಲ್ಲೇ ಮರಣ ಹೊಂದಿದರು. ರಂಲ ಇಸ್ಲಾಮ್ ಧರ್ಮದಲ್ಲಿ ಭದ್ರವಾಗಿ ನಿಂತರು. ಹಬೀಬ ಎಂಬ ತನ್ನ ಮಗಳನ್ನು ಸಾಕಲು ಬೀವಿಯವರು ತಂಬಾ ಕಷ್ಟ ಪಟ್ಟರು. ಉಮ್ಮು ಹಬೀಬರವರ ಸಂಕಷ್ಟಗಳನ್ನು ಅರಿತ ನಬಿﷺಯವರು ಅಬ್‌ಸೀನಿಯಾದ ದೊರೆಯಾದ ನಜಾಶಿ ರಾಜನ ಬಳಿ ದೂತನನ್ನು ಕಳುಹಿಸಿ ಉಮ್ಮು ಹಬೀಬಾರನ್ನು ತನಗೆ ವಿವಾಹ ಮಾಡಿ ಕೊಡಬೇಕು ಎಂದು ಕೇಳಿಕೊಂಡರು. ಹಾಗೆ ನಜಾಶಿ ರಾಜನು ಅಲ್ಲಿರುವ ಮುಸ್ಲಿಮರನ್ನು ಒಗ್ಗೂಡಿಸಿ ಉಮ್ಮು ಹಬೀಬರನ್ನು ಮದುವೆ ಮಾಡಿಸಿದರು.
ವಧು ದಕ್ಷಿಣೆ: 400 ದಿರ್‌ಹಂ.
ವಾಪತ್ಯ: 4 ವರ್ಷ.
ಮಕ್ಕಳು: ಇಲ್ಲ.
ಮೊದಲ ಪತಿ: ಜಹ್‌ಶ್‌ರ ಮಗ ಉಬೈದುಲ್ಲ (ಅಬ್‌ಸೀನಿಯಾದಲ್ಲಿ ಕ್ರೈಸ್ತನಾಗಿ ಮರಣ ಹೊಂದಿದರು).
ಮರಣ: ಹಿಜ್ರಾ 44, ಮದೀನಾದಲ್ಲಿ.
ದಫನ ಸ್ಥಳ: ಜನ್ನತುಲ್ ಬಖೀಅ್.
ವಿಶೇಷತೆಗಳು:
1. ಪ್ರವಾದಿﷺಯವರು ಮಗಳನ್ನು ವಿವಾಹವಾದ ಸುದ್ದಿ ಕೇಳಿ ತಂದೆ ಅಬೂಸುಫ್‌ಯಾನ್ "ಮಹಮ್ಮದ್ ಗೌರವಾರ್ಹ ಪತಿಯಾಗಿದ್ದಾರೆ” ಎಂದಿದ್ದರು.
2. ಉಮ್ಮು ಹಬೀಬ (ರ) ಅತ್ಯಂತ ಸೂಕ್ಷ್ಮತೆಯನ್ನು ಪಾಲಿಸುವ ಮಹಿಳೆಯಾಗಿದ್ದರು. "ಯಾರಾದರೂ ಒಂದು ದಿನ 12 ರಕಅತ್ ನಮಾಝ್ ಮಾಡಿದರೆ ಆ ಕಾರಣದಿಂದಾಗಿ ಅವನಿಗೆ ಸ್ವರ್ಗದಲ್ಲೊಂದು ಭವನ ನಿರ್ಮಿಸಲಾಗುವುದು.." ಎಂಬ ಪ್ರವಾದಿವರ್ಯರ ನುಡಿಯನ್ನು ಕೇಳಿದಂದಿನಿಂದ ಬೀವಿಯವರು ಒಂದೇ ಒಂದು ದಿನ 12 ರಕಅತ್ ನಮಾಝನ್ನು ಕೈಬಿಟ್ಟಿರಲಿಲ್ಲ..
3. ಬುದ್ದಿವಂತೆಯಾಗಿದ್ದರು.
4. ಆದರ್ಶ ಧೀರೆಯಾಗಿದ್ದರು. ಮದೀನಾಕ್ಕೆ ಬಂದ ಅಬೂಸುಫ್‌ಯಾನ್ ಮಗಳನ್ನು ನೋಡಲು ಆಸೆಪಟ್ಟರು. ಮಗಳ ಮನೆಗೆ ಕಾಲಿಟ್ಟು ಪ್ರವಾದಿವರ್ಯರ ಆಸನದಲ್ಲಿ ಕೂರಲು ಮುಂದಾದಾಗ ಬೀವಿಯವರು "ನೀವು ಅವಿಶ್ವಾಸಿಯು, ಅಶುದ್ಧರೂ ಆಗಿರುವಿರಿ. ಆದ್ದರಿಂದ ನೀವು ಇದರ ಮೇಲೆ ಕೂರಲು ಅರ್ಹರಲ್ಲ.."ಎಂದು ತಂದೆಗೆ ಧೈರ್ಯದಿಂದ ಹೇಳಿದ್ದರು..
🌼ಮೈಮೂನ(ರ):🌼
ಹೆಸರು: ಮೈಮೂನ.
ತಂದೆ: ಹಾರಿಸ್.
ತಾಯಿ: ಔಫ್‌ರ ಮಗಳು ಹಿಂದ್.
ಜನನ: ಹಿಜ್ರಾ 7 ನೇ ವರ್ಷ ಮಕ್ಕಾದಲ್ಲಿ.
ವಿವಾಹ ಕಾರಣ: ಪ್ರವಾದಿﷺರವರ ದೊಡ್ಡಪ್ಪ ಅಬ್ಬಾಸ್(ರ)ರ ಸಹೋದರಿ ಪುತ್ರಿಯಾಗಿದ್ದರು. ವಿಧವೆಯಾಗಿ ಜೀವಿಸುತ್ತಿದ್ದರು. ಪ್ರವಾದಿﷺಮರಿಗಿಂತ ಮೊದಲು ಇಬ್ಬರು ಅವರನ್ನು ಮದುವೆಯಾಗಿದ್ದರು. 51 ವಯಸ್ಸಾಗಿದ್ದ ಇವರನ್ನು ದೊಡ್ಡಪ್ಪರನ್ನು ಸಂತೋಷ ಪಡಿಸಲು ನಬಿﷺಯವರು ವಿವಾಹವಾಗಿದ್ದರು.
ವಧುದಕ್ಷಿಣೆ: 500 ದಿರ್‌ಹಂ.
ದಾಂಪತ್ಯ ಜೀವನ: 5 ವರ್ಷ.
ಮರಣ: ಹಿಜ್ರಾ 51 ವರ್ಷದಲ್ಲಿ.
ಮಕ್ಕಳು: ಇಲ್ಲ.
ಮೊದಲ ಪತಿಯಂದಿರು: ಅಮ್ರರ ಮಗ ಮಸ್‌ಊದ್, ಅಬ್ದುಲ್ ಉಝ್ಝುರ ಮಗ ಅಬರೂಹುಂ.
ಜೀವನ: 69 ವರ್ಷ.
ದಫನ ಸ್ಥಳ: 'ಸಹೀಫ್'ನಲ್ಲಿ.
ವಿಶೇಷತೆಗಳು:
1. ಪ್ರವಾದಿವರ್ಯರು ವಿವಾಹವಾದ ಕೊನೆಯ ಮಹಿಳೆ.
2. ಅತ್ಯಂತ ಭಕ್ತಿಯೂ, ಕುಟುಂಬ ಸಂಬಂಧವನ್ನು ಬೆಳೆಸುವವರೂ ಆಗಿದ್ದರೆಂದು ಆಯಿಶಾ(ರ) ಹೇಳಿದ್ದಾರೆ.
3. ಹಾಸ್ಯಪ್ರಿಯೆ ಆಗಿದ್ದರು.
4. ಅನುಗ್ರಹೀತ ಪತ್ನಿಯಾಗಿದ್ದರು. ಅನುಗ್ರಹೀತ ವರ್ಷದಲ್ಲಿ (ಮಕ್ಕಾ ವಿಜಯದ ವರ್ಷ) ವಿವಾಹ ನಡೆದ ಕಾರಣ ಬರ್ರ ಎಂಬ ಹೆಸರು ಬದಲಿಸಿ ಮೈಮೂನ (ಅನುಗ್ರಹೀತೆ) ಎಂದು ನಬಿﷺಯವರು ಹೆಸರಿಟ್ಟಿದ್ದರು.
5. ಪ್ರವಾದಿವರ್ಯರನ್ನು ಅನುಸರಿಸುವುದರಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದರು.
6. ಪ್ರವಾದಿವರ್ಯರಿಂದ 46 ಹದೀಸ್‌ಗಳನ್ನು ವರದಿ ಮಾಡಿದ್ದಾರೆ.
🌼ಮಾರಿಯ(ರ):🌼
ತಂದೆ: ಶಂಊನ್.
ವಿವಾಹ: ಹಿಜ್ರಾ 7 ನೇ ವರ್ಷ, ಮದೀನಾದಲ್ಲಿ. ಮಿಸ್ರ್‌ನ ರಾಜನಾದ ಮುಖೌಖಿಸ್ ಕಾಣಿಕೆಯಾಗಿ ನೀಡಿದ ದಾಸಿಯಾಗಿದ್ದರು. ಹಾತಿಬ್‌ನು ಅಬೀ ಬಲ್‌ಅತ್ತ್ ಮುಖಾಂತರ ಇಸ್ಲಾಮ್ ಧರ್ಮ ಸ್ವೀಕರಿಸಿದರು.
ದಾಂಪತ್ಯ: 4 ವರ್ಷ.
ಮರಣ: ಹಿಜ್ರಾ 16, ಮದೀನಾದಲ್ಲಿ.
ಪ್ರವಾದಿﷺರವರ ಮಕ್ಕಳು:
ಮೊದಲ ಆರು ಮಕ್ಕಳಿಗೆ ಜನ್ಮ ನೀಡಿದ್ದು ಖದೀಜಾ ಬೀವಿ(ರ)ಯಾಗಿದ್ದರು.
ಅಬ್ದುಲ್ಲಾ (ರ), ಇಬ್ರಾಹೀಮ್ (ರ)ರನ್ನು ಹೊರತು ಪಡಿಸಿ ಬಾಕಿಯುಳಿದವರೆಲ್ಲ ಪ್ರವಾದಿತ್ವ ಲಭ್ಯವಾಗುವುದಕ್ಕಿಂತ ಮುಂಚೆ ಮಕ್ಕಾದಲ್ಲಿ ಜನಿಸಿದವರಾಗಿದ್ದರು. ಅಬ್ದುಲ್ಲ ಪ್ರವಾದಿತ್ವದ ನಂತರ ಮಕ್ಕಾದಲ್ಲೂ, ಇಬ್ರಾಹೀಮ್ ಹಿಜ್ರಾದ ನಂತರ ಮದೀನಾದಲ್ಲೂ ಜನಿಸಿದರು. ಪ್ರವಾದಿವರ್ಯರ ಗಂಡು ಮಕ್ಕಳೆಲ್ಲರೂ ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದರು. ಫಾತ್ವಿಮಾರ ಹೊರತಾಗಿ ಉಳಿದವರೆಲ್ಲರೂ ನಬಿﷺಯವರ ಮರಣ ಮುಂಚೆಯೇ ಇಹಲೋಕಕ್ಕೆ ವಿದಾಯ ಹೇಳಿದರು. ಫಾತ್ವಿಮಾ ಪ್ರವಾದಿವರ್ಯರ ಮರಣದ 6 ತಿಂಗಳ ಬಳಿಕ ವಫಾತಾದರು. ವಂಶ ಸಾಮಾನ್ಯವಾಗಿ ಪೀಳಿಗೆಯೊಂದು ಮುಂದುವರಿಯುವುದು ಗಂಡು ಮಕ್ಕಳಲ್ಲಾಗಿದೆ. ಪ್ರವಾದಿವರ್ಯರ ಗಂಡು ಮಕ್ಕಳೆಲ್ಲ ಎಳವೆಯಲ್ಲೇ ಮರಣ ಹೊಂದಿದ್ದ ಕಾರಣ ಅವರ ನೆಲೆ ನಿಂತಿರುವುದು ಫಾತ್ವಿಮಾ(ರ) ಮುಖಾಂತರವಾಗಿದೆ.
ಪ್ರವಾದಿﷺಯವರ ಮಕ್ಕಳು:
🌼ಝೈನಬ (ರ):🌼
ಹೆಸರು: ಝೈನಬ (ರ).
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ: ಹಿಜ್ರಾಕ್ಕೆ 23 ವರ್ಷ ಮುಂಚೆ, ಮಕ್ಕಾದಲ್ಲಿ.
ವಿವಾಹ: ಮಕ್ಕಾದಲ್ಲಿ.
ಪತಿ: ರಬೀಅ್'ರ ಮಗ ಅಬುಲ್ ಆಸ್ವ್(ರ).
ಮಕ್ಕಳು:
1. ಅಲಿ (ಚಿಕ್ಕ ಪ್ರಾಯದಲ್ಲೇ ಮರಣ ಹೊಂದಿದರು),
2. ಉಮಾಮ (ಫಾತ್ವಿಮ ಬೀವಿಯವರ ಮರಣ ನಂತರ ಅಲಿಯ್ಯ್ ಉಮಾಮರನ್ನು ಮದುವೆಯಾದರು. ಅಲಿಯ್ಯರ ನಂತರ ನೌಫಲ್‌ರ ಮಗ ಮುಗೀರ ವಿವಾಹವಾದರು).
ಜೀವನ: 31 ವರ್ಷ.
ಮರಣ: ಹಿಜ್ರಾ 8 ನೇ ವರ್ಷ, ಮದೀನಾದಲ್ಲಿ.
ವಿಶೇಷತೆಗಳು:
1).ಮದೀನಾಕ್ಕೆ ಹಿಜ್ರಾ ಹೋದಾಗ ಶತ್ರುಗಳಿಂದ ದೌರ್ಜನ್ಯಕ್ಕೊಳಗಾದರು.
ಪ್ರವಾದಿﷺಮರು: "ಝೈನಬ್ ನನ್ನ ಕಾರಣದಿಂದ ಕಷ್ಟ ಅನುಭವಿಸಿದವಳಾಗಿದ್ದಾಳೆ"ಎಂದಿದ್ದರು..
🌼ಖಾಸಿಮ್ (ರ):🌼
ಹೆಸರು: ಖಾಸಿಮ್ (ರ).
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ: ಮಕ್ಕಾದಲ್ಲಿ.
ಜೀವನ: ತಿಂಗಳುಗಳ ಕಾಲ.
ಮರಣ: ಮಕ್ಕಾ.
ವಿಶೇಷತೆಗಳು:
1. ಪ್ರವಾದಿﷺರವರಿಗೆ ಪ್ರಥಮವಾಗಿ ಜನಿಸಿದ ಪುತ್ರ.
2. ನಬಿﷺಯವರ ಮಕ್ಕಳಲ್ಲಿ ಮೊದಲು ಮರಣ ಹೊಂದಿದವರು.
ರುಖಿಯ್ಯ (ರ):🌼
ಹೆಸರು: ರುಖಿಯ್ಯ (ರ).
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ: ಹಿಜ್ರಾಕ್ಕೆ 22 ವರ್ಷ ಮುಂಚೆ, ಮಕ್ಕಾದಲ್ಲಿ.
ವಿವಾಹ:ಮಕ್ಕಾದಲ್ಲಿ. (ಎರಡು ಬಾರಿ).
ಪತಿಯಂದಿರು: ಅಬೂಲಹಬ್‌ನ ಮಗ ಉತ್ಪತ್. (ಅಲಹಬ್‌ನನ್ನು ಶಪಿಸುತ್ತಾ ಕುರ್‌ಆನ್ ಸೂಕ್ತ ಆವತೀರ್ಣಗೊಂಡ ಕಾರಣ, ಸಂಪರ್ಕದಲ್ಲೇರ್ಪಡುವ ಮುಂಚಿತವಾಗಿ ವಿವಾಹ ಬಂಧನವನ್ನು ವಿಚ್ಛೇದಿಸಲಾಯಿತು. ನಂತರ ಮಕ್ಕಾ ವಿಜಯದ ದಿನ ಉತ್ಪತ್ ಮುಸ್ಲಿಮರಾದರು.)
2. ಉಸ್ಮಾನುಬ್‌ನು ಅಫ್ಘಾನ್ (ರ).
ಮಕ್ಕಳು: ಅಬ್ದುಲ್ಲ (ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದರು).
ಜೀವಿತಾವಧಿ: 24 ವರ್ಷ.
ಮರಣ: ಹಿಜ್ರಾ 2 ಮದೀನಾದಲ್ಲಿ.
ವಿಶೇಷತೆಗಳು:
1. ಸೌಂದರ್ಯವತಿಯಾಗಿದ್ದರು.
2. ಅಬ್‌ಸೀನಿಯಾಗೆ ಬೀವಿಯವರು ಹಿಜ್ರಾ ಹೋದ ವೇಳೆ ನಬಿಯವರು ಹೇಳಿದರು:
"ಲೂತ್ ನಬಿಯವರ ನಂತರ ಮೊದಲು ಕುಟುಂಬ ಸಮೇತ ಹಿಜ್ರಾ ಹೋದದ್ದು ಉಸ್ಮಾನ್‌ರಾಗಿದ್ದಾರೆ.."
🌼ಉಮ್ಮು ಖುಲ್ಸೂಮ್(ರ):🌼
ಹೆಸರು: ಉಮ್ಮು ಖಲ್ಸೂಮ್.
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ: ಹಿಜ್ರಾಕ್ಕೆ 19 ವರ್ಷ ಮುಂಚೆ, ಮಕ್ಕಾದಲ್ಲಿ.
ಮೊದಲ ವಿವಾಹ: ಮಕ್ಕಾದಲ್ಲಿ,
ಎರಡನೇ ವಿವಾಹ: ಹಿಜ್ರಾ 3 ನೇ ವರ್ಷ, ಮದೀನಾದಲ್ಲಿ.
ಪತಿಯಂದಿರು:
*1,* ಅಬೂಲಹಬ್‌ನ ಮಗ ಉತೈಬ (ಅವಿಶ್ವಾಸಿಯಾಗಿ ಸತ್ತಿದ್ದಾನೆ).
2, ಉಸ್ಮಾನುಬ್'ನು ಅಫ್ಘಾನ್ (ರುಖಿಯ್ಯ ಬೀವಿಯ ಮರಣದ ನಂತರ).
ಮಕ್ಕಳು: ಇಲ್ಲ.
ಜೀವಿತಾವಧಿ: 28 ವರ್ಷ,
ಮರಣ: ಹಿಜ್ರಾ 9, ಮದೀನಾದಲ್ಲಿ,
ವಿಶೇಷತೆಗಳು:
ನಬಿﷺಯವರು ಹೇಳಿದರು:
"ನನ್ನ ಚಾರಿತ್ರ್ಯವಂತೆಯಳಾದ ಮಗಳನ್ನು ಅಲ್ಲಾಹನು ಉಸ್ಮಾನ್‌ರಿಗೆ ಮದುವೆ ಮಾಡಿ ಕೊಡಲು ಆಜ್ಞಾಪಿಸಿದ್ದಾನೆ.."
🌼ಫಾತ್ವಿಮಾ(ರ):🌼
ಹೆಸರು: ಫಾತ್ವಿಮಾ.
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ: ಹಿಜ್ರಾಕ್ಕೆ 18 ವರ್ಷ ಮುಂಚೆ, ಮಕ್ಕಾದಲ್ಲಿ.
ವಿವಾಹ: ಹಿಜ್ರಾ 2 ನೇ ವರ್ಷ, ಮದೀನಾದಲ್ಲಿ.
ಪತಿ; ಅಲಿಯ್ಯಬ್‌ನು ಅಬೀತ್ವಾಲಿಬ್.
ಮಕ್ಕಳು: ಹಸನ್, ಹುಸೈನ್, ಮುಹ್‌ಸಿನ್. ಉಮ್ಮು ಕುಲ್ಸೂಮ್, ಝೈನಬ್.
ಜೀವಿತಾವಧಿ: 25 ವರ್ಷ,
ಮರಣ:ಹಿಜ್ರಾ 11 ನೇ ವರ್ಷ ರಮಳಾನ್ 3 (ರಮಳಾನ್ ಹತ್ತು ಎಂದು ಕೆಲವು ಹದೀಸ್‌ಗಳಲ್ಲಿ ವರದಿಯಾಗಿದೆ) ಮದೀನಾದಲ್ಲಿ,
ದಫನ ಸ್ಥಳ: ಜನ್ನತುಲ್ ಬಕೀಅ್.
ವಿಶೇಷತೆಗಳು:
1. ಪ್ರವಾದಿವರ್ಯರ ಪೀಳಿಗೆ (ಅಹ್ಲುಬೈತ್) ಫಾತ್ವಿಮಾರ ಮುಂಖಾಂತರ ಬೆಳೆಯುತ್ತದೆ. ನಬಿﷺಯವರ ವಫಾತಿನ ನಂತರ ಮೊದಲು ಮರಣ ಹೊಂದಿದ್ದು ಫಾತಿಮಾ ಬೀವಿ ಆಗಿದ್ದಾರೆ.
2. ಸ್ವರ್ಗ ಸ್ತ್ರೀಗಳ ನಾಯಕಿ.
3. ನಬಿﷺಯವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಮಗಳು, "ಫಾತ್ವಿಮಾ ನನ್ನ ಒಂದು ಭಾಗವಾಗಿದ್ದಾಳೆ ಎಂದು ಪ್ರವಾದಿವರ್ಯರು ಸ್ಪಷ್ಟ ಪಡಿಸಿದ್ದಾರೆ.."
4. ಒಮ್ಮೆಯೂ ಋತುಸ್ರಾವ ಉಂಟಾಗಿರಲಿಲ್ಲ. ಹೆರಿಗೆಯ ನಂತರವೂ ರಕ್ತ ಬಂದಿರಲಿಲ್ಲ,
5. ಫಾತ್ವಿಮಾ ಬೀವಿ ಮರಣ ಹೊಂದುವ ವರೆಗೂ ಅಲಿಯ್ಯ್ ಬೇರೆ ಸ್ತ್ರೀಯರನ್ನು ಮದುವೆಯಾಗಿರಲಿಲ್ಲ..
🌼ಅಬ್ದುಲ್ಲಾಹ್ (ರ):🌼
ಹೆಸರು: ಅಬ್ದುಲ್ಲ (ರ).
ತಂದೆ: ಮುಹಮ್ಮದ್ ನಬಿﷺ.
ತಾಯಿ: ಖದೀಜಾ(ರ).
ಜನನ:ಮಕ್ಕಾದಲ್ಲಿ (ಪ್ರವಾದಿವರ್ಯರಿಗೆ ಪ್ರವಾದಿ ಲಭ್ಯವಾಗುವುದಕ್ಕಿಂತ ಮುಂಚೆ).
ಜೀವಿತಾವಧಿ: ಕೆಲವೇ ತಿಂಗಳುಗಳು.
ಮರಣ: ಮಕ್ಕಾದಲ್ಲಿ.
🌼ಇಬ್ರಾಹೀಮ್ (ರ):🌼
ಹೆಸರು: ಇಬ್ರಾಹೀಮ್(ರ).
ತಂದೆ: ಮುಹಮ್ಮದ್ ನಬಿﷺ.
ತಾಯಿ: ಮಾರಿಯತುಲ್ ಖಿಬ್‌ತ್ವಿಯ್ಯ.
ಜನನ: ಹಿಜ್ರಾ 8 ನೇ ವರ್ಷ, ಮದೀನಾದಲ್ಲಿ.
ಮೊಲೆಯುಣಿಸಿದ್ದು: ಉಮ್ಮುಸೈಫ್.
ಜೀವಿತಾವಧಿ: 3 ವರ್ಷ.
ಮರಣ: ಹಿಜ್ರಾ 10 ನೇ ವರ್ಷ, ಮದೀನಾದಲ್ಲಿ.
ದಫನ ಸ್ಥಳ: ಜನ್ನತುಲ್ ಬಖೀಅ್ (ಉಸ್ಮಾನುಬ್‌ನ್ ಮಳ್ಊನ್‌ರ ಸಮೀಪ).
(5). ಯವುಮುಲ್ ಕಿಯಾಮಾ:
5). ಮುಸ್ಲಿಮನಾಗಬೇಕಾದರೆ ಕಡ್ಡಾಯವಾಗಿ ವಿಶ್ವಾಸವಿಡಬೇಕಾದ ಅಲ್ಲಾಹನಲ್ಲಿ ವಿಶ್ವಾಸ, ಮಲಕ್‌ಗಳಲ್ಲಿ ವಿಶ್ವಾಸ, ವೇದ ಗ್ರಂಥಗಳಲ್ಲಿ ವಿಶ್ವಾಸ ಪ್ರವಾದಿಗಳಲ್ಲಿ ವಿಶ್ವಾಸ ಎಂಬ ನಾಲ್ಕು ಕಾರ್ಯಗಳನ್ನು ನಾವು ತಿಳಿದುಕೊಂಡೆವು. ಇನ್ನು ಐದನೆಯ ಕಡ್ಡಾಯ ವಿಶ್ವಾಸವೇನೆಂದರೆ ಪರಲೋಕದಲ್ಲಿ ವಿಶ್ವಾಸ. "ಯವುಮುಲ್ ಕಿಯಾಮಾ" ಎಂದು ಇದನ್ನು ಸಾಂಕೇತಿಕವಾಗಿ ಹೇಳಲಾಗುತ್ತದೆ. ಮಹಾ ಪ್ರಳಯವಾಗಿ ಇಡೀ ವಿಶ್ವವು ಧೂಳೀಪಟವಾಗಿ ಅಂತ್ಯಗೊಳ್ಳುವುದಕ್ಕೂ ಯವುಮುಲ್ ಕಿಯಾಮತ್ ಎನ್ನಲಾಗುತ್ತದೆ. ಪರಲೋಕದಲ್ಲಿ ಹಾಜರಾಗುವುದಕ್ಕೂ ಹಾಗೆ ಹೇಳಲಾಗುತ್ತದೆ. ಪರಲೋಕದಲ್ಲಿ ವಿಶ್ವಾಸ ಎಂಬದರಲ್ಲಿ ಇದೆಲ್ಲವೂ ಒಳ ಪಡುವುದಲ್ಲದೆ ಇನ್ನೂ ಕೆಲವು ವಿಚಾರಗಳು ಒಳ ಪಡುತ್ತವೆ. ಪ್ರಳಯಕ್ಕೆ ಮೊದಲೇ ಮನುಷ್ಯನ ಮರಣವು ಅದಕ್ಕೆ ಒಳಪಟ್ಟಿದ್ದು. "ಒಬ್ಬನು ಮೃತನಾದರೆ ಅದುವೇ ಅವನ ಕಿಯಾಮಾ.." ಎಂದು ಹದೀಸ್‌ನಲ್ಲಿದೆ. ಆದ್ದರಿಂದ ಪ್ರತಿಯೊಬ್ಬರ ಮರಣ, ಕಬ್‌ರ್‌ನಲ್ಲಿ ವಿಚಾರಣೆ, ಅಲ್ಲಿ ರಕ್ಷಾ-ಶಿಕ್ಷೆಗಳಲ್ಲಿ ವಿಶ್ವಾಸ ಕೂಡಾ ಇದರಲ್ಲಿ ಒಳಪಡುತ್ತವೆ. ಕಡ್ಡಾಯವಾಗಿಯೂ ಈ ವಿಶ್ವಾಸ ಇರಬೇಕಾಗುತ್ತದೆ.
ಇಸ್ರಾಫೀಲ್ ಎಂಬ ಮಲಕ್ ಅಲ್ಲಾಹನ ಆದೇಶದ ಮೇಲೆ ಸೂರ್ ಎಂಬ ಪ್ರಳಯಾಂತಿಕ ಕಹಳೆಯನ್ನು ಒಂದು ಬಾರಿ ಊದಿದಾಗ ಜಗತ್ತು ಸರ್ವ ನಾಶವಾಗಲಿದೆ. ಆ ಸಂದರ್ಭದಲ್ಲಿ ಒಬ್ಬರೂ ಉಳಿಯದೆ ಎಲ್ಲಾ ಜನರು ಮೃತರಾಗುತ್ತಾರೆ. ಹಾಗೂ ಅದಕ್ಕೆ ಮುನ್ನ ಮೃತರಾಗಿ ಕಬ್‌ರ್‌ನಲ್ಲಿರುವ ಎಲ್ಲಾ ಮನುಷ್ಯರು ಮರಳಿ ಎಬ್ಬಿಸಲ್ಪಡುವ ಹಂತಕ್ಕೆ ತಲುಪುತ್ತಾರೆ. ಆದರೆ ನಲ್ವತ್ತು ವರ್ಷಗಳ ಅವಧಿವರೆಗೆ ಹಾಗೇ ಉಳಿದಿರುತ್ತದೆ. ಅಲ್ಲಾಹನ ಹೊರತು ಬೇರೆ ಯಾವುದೇ ಜೀವಿಗಳಿಲ್ಲ. ಬರೀ ಶೂನ್ಯಾವಸ್ಥೆ. ಮಲಕ್‌ಗಳೆಲ್ಲರೂ ಕೂಡಾ ಮೃತರಾಗಿರುತ್ತಾರೆ. ಆ ಮೇಲೆ ಇಸ್ರಾಫೀಲರಿಗೆ ಅಲ್ಲಾಹನು ಮರು ಜೀವ ಕೊಡುತ್ತಾನೆ. ಎರಡನೆಯ ಬಾರಿಗೆ ಕಹಳೆ ಊದಲು ಆದೇಶ ಕೊಡುತ್ತಾನೆ. ಇಸ್ರಾಫೀಲರು ಊದಿದ ತಕ್ಷಣ ಸಕಲ ಮಾನವ, ಜಿನ್ನ್, ಮಲಕ್, ಪ್ರಾಣಿಗಳು ದೇಹ ಸಮೇತ ಜೀವತಾಳಿ ಎದ್ದು ಬರುತ್ತಾರೆ. ಆ ಮೇಲೆ ಮಹ್‌ಶರ್. ಅಲ್ಲಿ ಐವತ್ತು ಸಾವಿರ ವರ್ಷಗಳ ಕಾಲ ನಿಲ್ಲಬೇಕು. ಆದರೆ ಸತ್ಯವಿಶ್ವಾಸಿಗಳ ಪಾಲಿಗೆ ಅದು ಕೆಲವೇ ನಿಮಿಷಗಳ ಅವಧಿಯಾಗಿ ಅನುಭವಕ್ಕೆ ಬರುವುದು. ಆಮೇಲೆ ನಬಿﷺಯವರ ಶಿಫಾರಸು ಮೇರೆಗೆ ವಿಚಾರಣೆ ಆರಂಭವಾಗುತ್ತದೆ. ಕಾಫಿರರನ್ನು ನರಕಕ್ಕೆ ಕಳುಹಿಸಲಾಗುವುದು. ಸತ್ಯವಿಶ್ವಾಸಿಗಳಾಗಿದ್ದು ಪಾಪ ಮಾಡಿದವರಾಗಿದ್ದರೆ ಒಂದೂ ಅಲ್ಲಾಹನು ಕ್ಷಮಿಸುತ್ತಾನೆ. ಇಲ್ಲವೇ ನರಕಕ್ಕೆ ಕಳುಹಿಸಿ ಶಿಕ್ಷೆಯ ಅವಧಿ ಮುಗಿದ ಬಳಿಕ ಸ್ವರ್ಗಕ್ಕೆ ಹಾಕುತ್ತಾನೆ. ಅಲ್ಲಾಹನ ಕ್ಷಮಾದಾನದ ಔದಾರ್ಯ ದೊರೆತ ಸತ್ಯವಿಶ್ವಾಸಿಗಳು ನರಕಕ್ಕೆ ಹೋಗದೆಯೇ ಸ್ವರ್ಗಕ್ಕೆ ಹೋಗುತ್ತಾರೆ. ಮಹ್‌ಶರ್‌ನಲ್ಲಿ ಪಾಪ-ಪುಣ್ಯಗಳನ್ನು ತಕ್ಕಡಿಯಲ್ಲಿ ತೂಕ ಮಾಡಲಾಗುವುದು. ಪುಣ್ಯ ಜಾಸ್ತಿ ಇದ್ದರೆ ಸ್ವರ್ಗಕ್ಕೆ. ಪಾಪ ಜಾಸ್ತಿಯಿದ್ದರೆ ನರಕಕ್ಕೆ. ನರಕದ ಮೇಲೆ ಸ್ವಿರಾತ್ ಎಂಬ ಅತ್ಯಂತ ಸಪೂರದ ಸೇತುವೆ ಇದೆ. ಅದನ್ನು ದಾಟದೆ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಾಹನ ಕೃಪೆಗೆ ಪಾತ್ರವಾದವರು ಮಿಂಚಿನ ವೇಗದಲ್ಲಿ ದಾಟುತ್ತಾರೆ. ಪಾಪಿಗಳು ದಾಟಲಾಗದೆ ನರಕಕ್ಕೆ ಬೀಳುತ್ತಾರೆ. ಈಮಾನ್ ಸ್ವಲ್ಪವಾದರೂ ಇದ್ದರೆ ಶಿಕ್ಷೆ ಮುಗಿದು ಸ್ವರ್ಗಕ್ಕೆ ಹೋಗುವ ಅವಕಾಶ ಇರುತ್ತದೆ. ಈಮಾನ್ ತೀರಾ ಇಲ್ಲದಿದ್ದರೆ ಶಾಶ್ವತವಾಗಿ ನರಕವೇ ಗತಿ.
ಇದೆಲ್ಲವೂ ಯವುಮುಲ್ ಕಿಯಾಮಾ ಅಥವಾ ಪರಲೋಕದಲ್ಲಿ ವಿಶ್ವಾಸ ಎಂಬುದರಲ್ಲಿ ಒಳ ಪಡುತ್ತವೆ. ಇವುಗಳ ಪೈಕಿ ಯಾವುದನ್ನೂ ನಿಷೇಧಿಸದೆ ಎಲ್ಲವನ್ನೂ ವಿಶ್ವಾಸವಿಟ್ಟರೆ ಮಾತ್ರ ಮುಉಮಿನ್ ಆಗಲು ಸಾಧ್ಯ.
(6). ವಿಧಿಯಲ್ಲಿ ವಿಶ್ವಾಸ:
6). ವಿಧಿಯಲ್ಲಿ ವಿಶ್ವಾಸ. ಇದನ್ನು ಕದ್ರ್ (ನಿರ್ಣಯ) ಎನ್ನಲಾಗುತ್ತದೆ.
ಒಳ್ಳೆಯದಿರಲಿ, ಕೆಟ್ಟದಿರಲಿ ಎಲ್ಲವೂ ಅಲ್ಲಾಹನ ಪೂರ್ವ ನಿರ್ಣಯ ಎಂಬ ವಿಶ್ವಾಸ ಇರಬೇಕು. ಅಲ್ಲಾಹನ ಮುನ್ನಿಶ್ಚಯವಿಲ್ಲದೆ ಜಗತ್ತಲ್ಲಿ ಏನೂ ನಡೆಯದು. ಆದರೆ ಒಳಿತು-ಕೆಡುಕು ತಿಳಿಯುವ ವಿವೇಚನಾ ಬುದ್ದಿ ಮತ್ತು ಸತ್ಯದ ಕಡೆಗೆ ಮಾರ್ಗದರ್ಶನ ಇರುವುದರಿಂದ ಒಳಿತನ್ನು ಆರಿಸಿಕೊಂಡವನು ಪುಣ್ಯಾರ್ಹನಾಗುತ್ತಾನೆ. ಕೆಡುಕನ್ನು ಆರಿಸಿಕೊಂಡವನು ಶಿಕ್ಷಾರ್ಹನಾಗುತ್ತಾನೆ. ವಿಧಿ ಅಲ್ಲಾಹನದ್ದೇ ಆಗಿದ್ದರೂ ಆಯ್ಕೆಯ ಸ್ವಾತಂತ್ರ್ಯ ಮನುಷ್ಯನದ್ದಾಗಿದೆ. ವಿಧಿಯ ಬಗ್ಗೆ ಹೆಚ್ಚಿನ ಚರ್ಚೆ ಮಾಡದೆ ಅಲ್ಲಾಹು ರಸೂಲ್ ಅದರಲ್ಲಿ ವಿಶ್ವಾಸವಿಡಲು ಹೇಳಿರುವುದರಿಂದ ವಿಶ್ವಾಸವಿಡುವುದು ನಮ್ಮ ಕರ್ತವ್ಯವಾಗಿದೆ.
ವಿಧಿ ಎಂಬುದು ಅಲ್ಲಾಹನ ಅನೇಕ ರಹಸ್ಯ (ಸಿರ್ರ್) ಗಳಲ್ಲಿ ಒಂದು ಸಿರ್ರ್ (ರಹಸ್ಯ) ಎಂಬ ವಿಶ್ವಾಸ ಹೆಚ್ಚು ಸುರಕ್ಷಿತ. ಈ ಆರು ಕಾರ್ಯಗಳಲ್ಲಿ ವಿಶ್ವಾಸ ಇದ್ದರೆ ಮಾತ್ರ ಸಾಲದು. ಅದನ್ನು ಉಳಿಸಿಕೊಂಡು ಬರಬೇಕು. ಇಸ್ಲಾಮಿನ ವಿಶ್ವಾಸ ಕಾರ್ಯಗಳು ಹಾಗೂ ಕಡ್ಡಾಯ ಕಾರ್ಯಗಳ ಬಗ್ಗೆ ನಿಷೇಧಾತ್ಮಕ ನಿಲುವು ಅಥವಾ ತಿರಸ್ಕಾರದ, ತಮಾಷೆಯ ನಿಲುವು ತಾಳಬಾರದು. ಅಂತಹದ್ದು ನಡೆ, ನುಡಿ, ಇಶಾರೆಯ ಮೂಲಕವೂ ಬರಬಾರದು. ಹಾಗೆ ಬಂದರೆ ಆತ ಮುರ್ತದ್ದ್ ಆಗುತ್ತಾನೆ. ಮುಸ್ಲಿಮನಾದವನು ಕಾಫಿರ್ ಆಗುವುದಕ್ಕೆ ಮುರ್ತದ್ದ್ ಎಂದು ಹೆಸರು. ಇದು ಕುಫ್ರಿಯತ್‌ಗಳ ಪೈಕಿ ಅತ್ಯಂತ ನೀಚವಾದುದು..
Comments
Post a Comment