ನಸೀಹಾಳ ನಸೀಹತ್
ನಸೀಹಾಳ ನಸೀಹತ್
ಲೇಖಕರ ಮಾತು..
ಬಿಸ್ಮಿ, ಹಂದ್, ಸ್ವಲಾತ್. ಸಲಾಂಗಳ ಬಳಿಕ..
ನಸೀಹಾಳ ನಸೀಹತ್"ಇದು, ಅಲ್ಲಾಹನ ಮಹತ್ತರವಾದ ಅನುಗ್ರಹದಿಂದ ವಿಧ್ಯಾರ್ಥಿ ಕಾಲದಲ್ಲಿ ಬರೆದ ಪುಸ್ತಕ. ದಕ್ಷಿಣ ಭಾರತದ ಶ್ರೇಷ್ಠ ವಿದ್ಯಾ ಸಂಸ್ಥೆಯಾದ ಮುಹಿಮ್ಮಾತ್ ದಅ್‌ವಾ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಮಹಿಳೆಯರ ರಕ್ತಸ್ರಾವ ಹಾಗೂ ಇತರ ವಿಷಯಗಳಲ್ಲಿನ ಕುತೂಹಲಕರ ವಿಷಯ ಕೇಳುತಿದ್ದಂತೆ ನಾನು ನಿಜಕ್ಕೂ ಚಕಿತನಾಗಿದ್ದೆ. ಜೊತೆಗೆ ಮನಸ್ಸಿನಲ್ಲಿ ಮೂಡಿಬಂದ ಪ್ರಶ್ನೆ “ಅರೆ!! ಸಣ್ಣ ಪ್ರಾಯದಲ್ಲಿ ಕೆಲವೊಂದು ತರಗತಿ ಮಾತ್ರ ಕಲಿತ ಹೆಣ್ಣು ಮಕ್ಕಳಿಗೆ ಇವೆಲ್ಲ ಹೇಗೆ ತಿಳಿಯಲು ಸಾಧ್ಯ?"ಈ ಒಂದು ಪ್ರಶ್ನೆ ಈ ಪುಸ್ತಕಕ್ಕೆ ರೂಪ ಕೊಟ್ಟಿತು. ಅವತ್ತು ಇದ್ದ ಪ್ರಾಯ, ಜ್ಞಾನ, ಅನುಭವ ಎಲ್ಲವುಗಳ ಕೊರತೆ ಈ ಕೃತಿಯ ಮೊದಲ ಆವೃತ್ತಿಯಲ್ಲಿ ಎದ್ದು ಕಾಣುತ್ತದೆ. ಹಾಗಿದ್ದರೂ ಪುಸ್ತಕದಲ್ಲಿ ಚರ್ಚೆ ಮಾಡಿದ ವಿಷಯ ಹಾಗೂ ಸರ್ವರಿಗೂ ಸುಲಭವಾಗಿ ಓದಿಸುವಂತಾಗಲು ಕಥಾ ಶೈಲಿಯಲ್ಲಿ ಮಾಡಿದ ವಿವರಣೆ ಹಲವರು ಈ ಪುಸ್ತಕವನ್ನು ಓಕೆ ಮಾಡಲು ಕಾರಣವಾಯಿತು. ಏನಿಲ್ಲದಿದ್ದರೂ ಎರಡು ಸಾವಿರ ಪ್ರತಿಗಳು ಕೆಲವೇ ತಿಂಗಳೊಳಗೆ ಖಾಲಿಯಾಗಿತ್ತು. ನಂತರವೂ ಹಲವರು ಕೇಳಿದ್ದರು. ಇದೀಗ ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ನಿವಾರಿಸುತ್ತ ಪುಸ್ತಕ ಮತ್ತೆ ಹೊರಬಂದಿದೆ. ಈ ಬಾರಿ ಪ್ರಕಾಶನದ ನಿರ್ವಹಣೆ ಕೃಷ್ಣಾಪುರದ ಇಸ್ಮಾಯಿಲ್ ಮುಸ್ಲಿಯಾರ್ (ಲುಕ್‌ಮಾನ್ ಉಸ್ತಾದ್) ವಹಿಸಿಕೊಂಡಿದ್ದಾರೆ. ಧಾರ್ಮಿಕವಾಗಿ ತೀರಾ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಮುಈನುಸ್ಸುನ್ನಾ ಎಂಬ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಲು ಲುಕ್‌ಮಾನ್ ಉಸ್ತಾದ್ ಹಾಗೂ ಅವರ ಕುಟುಂಬ ನನ್ನೊಂದಿಗೆ ಸಕ್ರಿಯವಾಗಿದೆ. ಅಲ್ಲಾಹನು ಇದೆಲ್ಲವೂ ಒಂದು ಪುಣ್ಯಾರ್ಹ ಇಬಾದತ್ ಆಗಿ ಸ್ವೀಕರಿಸಲಿ, ಎಂಬ ಪ್ರಾರ್ಥನೆಯೊಂದಿಗೆ,
ನಸೀಹಾಳ ಕುರಿತು:
ನಸೀಹಾ ಇವಳು ಕನಸಿನ ಹುಡುಗಿ, ಸಮಾಜ ಬೆಳಗಿಸಬಲ್ಲ ಕಾಲ್ಪನಿಕ ಲೋಕದ ಮಾದರಿ ಮಹಿಳೆ. ಇಂತಹ ಮಹಿಳೆಯರು ನಮ್ಮ ಸಮಾಜದೊಳು ಇದ್ದಾರ? ಇಲ್ಲವೋ? ಅನ್ನುವುದು ಇನ್ನೊಂದು ವಿಚಾರ ಆದರೆ ಇರುವುದು ಮಾತ್ರ ಕಾಲದ ಬೇಡಿಕೆ. ಇಲ್ಲಿ ಈ ಸಂಚಿಕೆಗಳು ಕನ್ನಡ ಓದಲು ಬಲ್ಲ ಮಹಿಳೆಯರ ಪಾಲಿಗೆ ಒಂದು ಶಿಕ್ಷಕಿ ಇದ್ದಂತೆ. ಫಿಕ್ಹ್ ಅಥವಾ ಕರ್ಮಶಾಸ್ತ್ರ ಅನ್ನುವುದು ಮಾಡುವುದಕ್ಕಿಂತಲೂ ಹೇಳುವುದು ಕಷ್ಟ. ಅದನ್ನು ಅರ್ಥ ಮಾಡಿಸಿಕೊಡುವುದು ಒಂದು ಸಾಧನೆಯಾದರೆ ಸರಿಯಾಗಿ ಅರ್ಥ ಮಾಡುವುದು ಒಂದು ಸಾಹಸ. ಒಂದೇ ಗುರುವಿನ ಒಂದೇ ಕಾಲದ ವಿವಿಧ ಶಿಷ್ಯರು ಜ್ಞಾನದ ಭಿನ್ನ ಸ್ಥರಗಳಿಗೆ ತಲುಪುವುದು ಹಾಗೇನೆ. ಅದೇನೇ ಇರಲಿ ಇಲ್ಲಿ ಬರಹಕ್ಕೆ ಕಥೆ ರೂಪ ಕೊಟ್ಟದ್ದು ಮಹಿಳೆಯರಿಗೆ ಸುಲಭವಾಗಿ ಅರ್ಥವಾಗಲು, ಹಾಗೆಂದು ಇದು ಕಥಾ ಜಗತ್ತಿನ ತತ್ವಗಳಿಗೆ ಬದ್ಧವಾಗಿದೆಯೆಂಬ ಅಭಿಪ್ರಾಯ ನಮಗಿಲ್ಲ. ಇತರ ಕಥೆ, ಧಾರವಾಹಿಗಳಲ್ಲಿರುವಂತೆ ಸೋತು-ಗೆಲ್ಲುವ ಕಥಾ ನಾಯಕನೂ ಇಲ್ಲ. ಈ ಧಾರಾವಾಹಿಯ ನಾಯಕಿ ನಸೀಹ, ಅವಳ ಒಂದು ಮುಖ ಮಾತ್ರ ಇಲ್ಲ. ಕಥೆಗಿಂತಲೂ ವಿಷಯದ ವಿವರಣೆ ಮುಖ್ಯ ಕರ್ಮಶಾಸ್ತ್ರದ ಅಧಿಕೃತ ಗ್ರಂಥಗಳನ್ನು ಅವಲಂಭಿಸಿ ಇದು ಬರೆಯಲಾಗಿದೆ. ಆದರೆ ಕಥೆ ದಾಟಿಯಲ್ಲಿರುವುದರಿಂದ ಅರಬಿ ಉದ್ಧರಣೆಗಳಾಗಲೀ ನೀಡಿಲ್ಲ. ಕೇವಲ ಕಥೆಯಾಗಿ ಕಾಣದೇ ಸಂದೇಶ ಕೂಡ ಸರಿಯಾಗಿ ಮನದಟ್ಟು ಮಾಡಿರಿ ಅನ್ನುವ ಬೇಡಿಕೆ.
- ಕೆ.ಎಂ.ಮುಸ್ತಫಾ ನಈಮಿ ಹಿಮಮಿ
ಖಾದರಾಕ ಒಮ್ಮೆ ನಿಟ್ಟುಸಿರು ಬಿಟ್ಟರು. ಅಂತಹದ್ದೊಂದು ಕನಸು ಕೂಡಾ ಅವರು ಕಂಡಿರಲಿಲ್ಲ. 'ಛೇ!! ಮೂರು ಹೆಣ್ಣು ಮಕ್ಕಳಿಗೆ ಬದಲಾಗಿ ಒಂದು ಗಂಡು ಮಗು ಹುಟ್ಟಿದರೆ, ಎಷ್ಟು ಚೆನ್ನಾಗುತ್ತಿತ್ತು. ನಾನು ಅವನನ್ನು ಸಾಕಷ್ಟು ಕಲಿಸಿ ಒಬ್ಬ ಆಲಿಮನ್ನಾಗಿ ಬೆಳೆಸುತ್ತಿದ್ದೆ. ಊರಿಗೆ ಒಬ್ಬ ವಿದ್ವಾಂಸನಾಗಿ ಹತ್ತು ಹಲವು ಸಮಸ್ಯೆಗಳೊಂದಿಗೆ ಧಾವಿಸಿ ಬರುತ್ತಿರುವ ಜನಮನಸ್ಸಿಗೆ ಪರಿಹಾರ ಹೇಳುವಂತಹ ಆಲಿಮ್ ಆಗಿ ನಾನು ಅವನನ್ನು ಬೆಳೆಸುತ್ತಿದ್ದೆ. ಛೇ!! ಹಾಗೇನೂ ಆಗಿಲ್ಲವಲ್ಲ! ಹೆಣ್ಣು ಮಕ್ಕಳು ಮೂರಲ್ಲ ಹತ್ತಿದ್ದರೂ ಏನು ಫಲ!!*
ಇದಾಗಿತ್ತು ಈ ಮೊದಲು ಖಾದರಾಕರ ಚಿಂತೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಖಾದರಾಕರ ಹದಿನಾರರ ಹರೆಯದ ಪ್ರೀತಿಯ ಮಗಳು ನಸೀಹಾ ಇದೆಲ್ಲವನ್ನು ಸುಳ್ಳಾಗಿಸಿದ್ದಾಳೆ. ಅಲ್ಲಾಹನು ಒಬ್ಬನನ್ನು ಅನುಗ್ರಹಿಸಲು ಬಯಸಿದರೆ ಗಂಡು ಮಗುವೆ ಹುಟ್ಟಬೇಕೆಂದಿಲ್ಲ. ಹೆಣ್ಣಿನಲ್ಲಿಯೂ ಕೊಟ್ಟಾನು ಎಂಬ ಸತ್ಯ ಇದೀಗ ಅವರಿಗೆ ತುಂಬಾ ಮನವರಿಕೆಯಾಗಿದೆ. ತನ್ನ ಮಗಳು ನಸೀಹಾಳ ಬಳಿ ಬುರ್ಖಾ ಧರಿಸಿ ಇಸ್ಲಾಮಿನ ಬಗ್ಗೆ ಕಲಿಯಲು ಬರುತ್ತಿರುವ ಹೆಣ್ಣು ಮಕ್ಕಳನ್ನು ಕಾಣುವಾಗ ಅವರಿಗೆ ಉಂಟಾಗುವ ಆನಂದ ಅಷ್ಟಿಷ್ಟಲ್ಲ.
ಸತ್ಯಕ್ಕೂ ಅಂತಹದ್ದೊಂದು ಖಂಡಿತವಾಗಿಯೂ ಅವರು ನಿರೀಕ್ಷಿಸಿದವರಲ್ಲ. ನಸೀಹಾ ಊರಿಗೆ ಒಂದು ಮಾಣಿಕ್ಯವಾಗಿದ್ದಳು. ಸಂಜೆ ಆಯಿತೆಂದರೆ ಸಾಕು, ಸುಮಾರು 20 ಕ್ಕೂ ಮಿಕ್ಕಿದ ಹೆಣ್ಣು ಮಕ್ಕಳು ಮನೆಯ ಒಳಗೆ ಬಂದು ತಮಗಾಗಿಯೇ ಸಜ್ಜುಗೊಳಿಸಿದ ಕೋಣೆಯೊಂದರಲ್ಲಿ ಕುಳಿತುಕೊಳ್ಳುತ್ತಿದ್ದರು. ಮನೆ ಕಾರ್ಯವೆಲ್ಲಾ ಅದಷ್ಟು ಬೇಗ ಮುಗಿಸಿ ವುಳೂ ಮಾಡಿ ಕೋಣೆಯನ್ನು ಪ್ರವೇಶಿಸಿ ನಮಾಝ್ ಪ್ರಾರಂಭಿಸಿದ್ದ ನಸೀಹಾಳೆ ಅವರಿಗೆ ಇಮಾಂ ಕೂಡಾ ಆಗಿದ್ದಳು.
ಅಷ್ಟಕ್ಕೂ ನಸೀಹಾ, ಬಾಲ್ಯದಲ್ಲಿಯೇ ತುಂಬು ಬುದ್ದಿವಂತಿಕೆಯ ಹುಡುಗಿ, 5ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ ಬ್ಯಾಂಕ್ ಪಡೆದು ರೇಂಜ್‌ನಲ್ಲಿಯೂ ಪ್ರಥಮವೆನಿಸಿದವಳು. ಅವಳ ಬುದ್ದಿವಂತಿಕೆಯನ್ನು ಮೆಚ್ಚಿದ ಊರಿನ ಜನ ವಿಶೇಷ ಕೂಟವೊಂದನ್ನು ಏರ್ಪಡಿಸಿ ಅವಳಿಗೆ ಸನ್ಮಾನ ಮಾಡಿದ್ದರು. ಆಗ ಅವಳ ತಂದೆ ಖಾದರಾಕ ನಸೀಹಾಳ ಉಸ್ತಾದ್ ಇಸ್ಮಾಯಿಲ್ ಮುಸ್ಲಿಯಾರಲ್ಲಿ ಛೇ!!' ಇದೊಂದು ಗಂಡು ಮಗುವಾಗಿದ್ದರೆ ಚೆನ್ನಾಗಿ ಕಲಿಸಿ ಖಂಡಿತವಾಗಿಯೂ ಹತ್ತು ಜನರ ಸಮಸ್ಯೆಗೆ ಉತ್ತರ ಹೇಳುವ ಒಬ್ಬ ವಿದ್ವಾಂಸನನ್ನಾಗಿ ರೂಪಿಸುತ್ತಿದ್ದೆ ಎಂದು ನಿರೀಕ್ಷೆ ಹುಸಿಯಾದವರಂತೆ ಸೊರಗಿದ ಧ್ವನಿಯಲ್ಲಿ ಹೇಳಿದ್ದನ್ನು ಕೇಳಿಸಿದ ಇಸ್ಮಾಯಿಲ್ ಮುಸ್ಲಿಯಾರ್, ಖಾದರಾಕ ಈಗಿನ ಕಾಲದಲ್ಲಿ ಹಾಗೇನು ಬೇಕೆಂದಿಲ್ಲ. ಹೆಣ್ಣಾದರೇನು, ಕಲಿಯಬಾರದು ಅಂತ ಇದೆಯಾ? ಅವಳಿಗೆ ಇಸ್ಲಾಮಿನ ಚೌಕಟ್ಟಿನೊಳಗೆ ನಿಂತು ಎಷ್ಟು ಬೇಕಾದರೂ ಕಲಿಯಬಹುದು ತಾನೆ?
"ಹೌದು ಹೇಳುವುದೆಲ್ಲಾ ಸರಿ!! ಆದರೆ ಅಂತಹದ್ದೊಂದು ವ್ಯವಸ್ಥೆಯಾದರೂ ಇರಬೇಕಲ್ಲಾ, ನಮ್ಮೂರಲ್ಲಿ ಮದ್ರಸ ಇರುವುದು 5 ರವರೆಗೆ ಮಾತ್ರ ಏಳರಷ್ಟಾದರೂ ಕಲಿಸೋಣ ಅಂತ ಹೇಳಿದರೆ ಎರಡು ಪರ್ಲಾಂಗು ನಡೆಯಬೇಕು. ಅದೂ ಕೂಡಾ ರಾತ್ರಿ ಹೊತ್ತಿನ ಮದ್ರಸ. ಈಗ ಉದ್ದ ಅಗಲಕ್ಕೆ ಬೆಳೆದು ನಿಂತಿರುವ ಮಕ್ಕಳನ್ನು ಹಾಗೇನೇ ಕಳಿಸುವುದಾ?" ಎಂದು ನೊಂದ ಮನಸ್ಸಿನಲ್ಲಿಯೇ ಖಾದರಾಕ ಒಂದಿಷ್ಟು ಖಾರವಾಗಿಯೇ ಹೇಳಿದ್ದರು.
ಖಾದರಾಕ ಅದಕ್ಕೇನು ಚಿಂತೆ, ನಮ್ಮೂರಲ್ಲಿ ವ್ಯವಸ್ಥೆ ಇಲ್ಲದಿದ್ದರೇನು? ಒಂಬತ್ತು ಕಿಲೋ ಮೀಟರ್ ದೂರದಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಮತ ಲೌಕಿಕ ವಿದ್ಯಾಭ್ಯಾಸವನ್ನು ಕಲಿಸುವ ಒಳ್ಳೆಯ ಹಾಸ್ಟೆಲ್ ವ್ಯವಸ್ಥೆ ಇದೆ. ಹಣ ಒಂದಿಷ್ಟು ಕೊಟ್ಟರೂ ಪರವಾಗಿಲ್ಲ. ಇಸ್ಲಾಮೀ ಚೌಕಟ್ಟಿನಲ್ಲಿ ಅತ್ಯಂತ ಶಿಸ್ತು ಬದ್ದ ರೀತಿಯಲ್ಲಿ ಮಕ್ಕಳನ್ನು ಬೆಳೆಸಿ ಕಲಿಸಲಾಗುತ್ತಿದೆ. ಅದೆಷ್ಟೋ ದೂರದ ಊರಿನಿಂದ ಬಂದ ಹೆಣ್ಣು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ನಿಮ್ಮ ಮಗಳನ್ನು ಸೇರಿಸುವುದಾದರೆ ನಮಗೆ ಮಾತನಾಡಬಹುದು.
"ಓಹೋ!! ಅಂತಹ ವ್ಯವಸ್ಥೆ ಕೂಡಾ ಇದೆಯಲ್ಲಾ? ಹಾಗಾದರೆ ನೋಡೋಣ, ನಾಳೆಯೇ ಹೋಗುವ" ಖಾದರಾಕ ತಲೆಯಾಡಿಸುತ್ತಾ ತುಂಬು ನಿರೀಕ್ಷೆಯ ಮುಖದೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.
'ಅವತ್ತು ಚಿಗುರಿದ ಕನಸಿನ ಫಲವೇ ಇಂದು ನಸೀಹಾಳ ಏಳು ವರ್ಷದ ಅಧ್ಯಯನ ಕಳೆದು ಸೆಕೆಂಡ್ ಇಯರ್ ಪಿಯುಸಿಯೊಂದಿಗೆ ಧಾರ್ಮಿಕ ವಿದ್ಯಾಭ್ಯಾಸದಲ್ಲಿ ದಿರಾಸ ಪದವಿಯನ್ನು ಕೂಡ ಪಡೆದು ಒಬ್ಬಳು ಆಲಿಮತ್ ಆಗಿ ಮಾರ್ಪಟ್ಟಿದ್ದಾಳೆ.'
ತಮಗೆ ತಿಳಿದಿದ್ದನ್ನು ಇತರರಿಗೂ ತಿಳಿಸಬೇಕೆಂಬ ಇರಾದೆ ಅವಳದ್ದು. ತಂದೆಯಲ್ಲಿ ನೆರೆಕೆರೆಯ ಹೆಂಗಸರಿಗೆ ಮಾತ್ರ ಒಂದು ಔತಣ ಕೂಟವನ್ನು ಮನೆಯಲ್ಲಿ ಏರ್ಪಡಿಸಿದ್ದಳು. ಅದು ಬರೀ ತಿಂದುಂಡು ಖುಷಿ ಪಟ್ಟು ಹೋಗುವ ಔತಣ ಕೂಟ ಮಾತ್ರವಾಗಿರದೆ ನಸೀಹಾಳ ನಸೀಹತ್‌ನ ಪ್ರಥಮ ವೇದಿಕೆ ಕೂಡ ಆಗಿತ್ತು. ತುಂಬು ಶಿಸ್ತು ಬದ್ಧತೆಯಿಂದ ಕೂಡಿದ ಒಳಗಿನ ಕೋಣೆಯಲ್ಲಾಗಿತ್ತು ವೇದಿಕೆ. ಯಾವ ಗಂಡಿಗೂ ಅದರ ಒಳಗೆ ಬಿಡಿ ಅದರ ಹತ್ತಿರಕ್ಕೂ ಕೂಡಾ ಬರುವಂತಿರಲಿಲ್ಲ!!
ನಸೀಹ ತನ್ನ ಕೋಣೆಯ ಒಳಗಿದ್ದವರಿಗೆ ಮಾತ್ರ ಕೇಳುವಂತೆ ಮೆಲ್ಲ ಧ್ವನಿಯಲ್ಲಿಯೇ ಮಾತು ಪ್ರಾರಂಭಿಸಿದಳು. ಅದು ಕೂಡಾ ಬಿಸ್ಮಿ, ಹಮ್ದ್, ಸ್ವಲಾತ್ ಸಲಾಮಿನ ಬಳಿಕವೇ ಆಗಿತ್ತು. "ನಾವು ಇವತ್ತು ಸೇರಿರುವುದು ಸಾಮಾನ್ಯವಾಗಿ ಒಂದು ಕೂಡುವ ಹಾಗೆ ಅಲ್ಲ. ಬದಲಾಗಿ ಬಹುದೊಡ್ಡ ಗುರಿಯನ್ನು ಇಟ್ಟುಕೊಂಡಾಗಿದ್ದೇವೆ ನಾವು ಇಲ್ಲಿ ಸಂಗಮಿಸಿರುವುದು. ಅದೇನೆಂದರೆ ನಮ್ಮನ್ನು ಅಲ್ಲಾಹು ಸೃಷ್ಟಿಸಿರುವುದು ಅವನನ್ನು ಆರಾಧಿಸಲಿಕ್ಕೆ ಆಗಿದೆ. ಇಹವೆಂಬ ಈ ಲೋಕವು ಒಂದು ಕೃಷಿ ಸ್ಥಳ, ಆದರೆ ಅದರ ಫಲಕೊಯ್ಯುವುದು ಮಾತ್ರ ನಾಳೆ ಪಾರತ್ರಿಕ ಲೋಕದಲ್ಲಿ. ಆದ್ದರಿಂದ ಉತ್ತಮ ಬೀಜ ಬಿತ್ತಿ ಒಳ್ಳೆಯ ಕೃಷಿ ಮಾಡಿದರೆ ಉತ್ತಮ ಫಸಲು ಕೊಯ್ಯಬಹುದು. ಅದೇ ಕೆಟ್ಟದ್ದಾಗಿ ಜೀವಿಸಿದರೆ ಪಾರತ್ರಿಕ ಮಾತ್ರ ತುಂಬ ಕಷ್ಟ! ಹಾಗಾಗಿ ನಾವು ಅವನ ಆರಾಧನೆಗಾಗಿಯೇ ನಮ್ಮ ಸಮಯವೆಲ್ಲವನ್ನೂ ವಿನಿಯೋಗಿಸಬೇಕು."
"ಛೇ!! ಇವರೆಂತಾ ಮಾತು ಹೇಳುವುದು. ಸಮಯವೆಲ್ಲಾ ಆರಾಧನೆಯಲ್ಲಿರಬೇಕೆಂದರೆ ದಿನವಿಡೀ ಮುಸಲ್ಲಾದಲ್ಲಿ ಇರಬೇಕಾದಿತು. ಹಾಗಾದರೆ ಪತಿ ಮಕ್ಕಳನ್ನು ನೋಡಬೇಡವೇ? ಮನೆ ಕಾರ್ಯ ಮಾಡಬೇಡವೇ?”ಇನ್ನೊಂದು ಊರಿನಿಂದ ಮದುವೆಯಾಗಿ ಬಂದಿದ್ದ ಸಫಿಯಾ ಮೂಲೆಯೊಂದರಲ್ಲಿ ಕುಳಿತು ಗೊಣಗುತ್ತಿರುವುದು ನಸೀಹಾಳಿಗೂ ಕೇಳಿಸಿತು.
"ಹೌದು ಸಫಿಯಾ.!! ನೀವು ಹೇಳುವುದು ಕೂಡ ಸರಿ!! ಆದರೆ, ಆರಾಧನೆ ಎಂದರೆ ಬರೀ ನಮಾಝ್ ಮಾಡುವುದು ಎಂದರ್ಥವಲ್ಲ. ತನ್ನ ಸಹೋದರರಲ್ಲಿ ಮುಗಳ್ನಗುವುದು ಕೂಡಾ ಆರಾಧನೆ! ಪತಿಯೊಡನೆ ಸುಖ ದಾಂಪತ್ಯದದಲ್ಲಿ ತೊಡಗುವುದು ಕೂಡ ಆರಾಧನೆಯೇ! ನಿಯ್ಯತ್ ಒಳ್ಳೆಯದಿದ್ದರೆ ಸಾಕು! ಎಲ್ಲವನ್ನು ಆರಾಧನೆಯನ್ನಾಗಿ ಪರಿವರ್ತಿಸಬಹುದು. ಎಲ್ಲವೂ ಒಡೆಯನಾದ ಅಲ್ಲಾಹನ ಸಂತೃಪ್ತಿಗೆ ಆಗಿರಬೇಕು. ಮಕ್ಕಳನ್ನು ಒಳ್ಳೆಯ ರೀತಿ ಬೆಳೆಸುವುದು, ಪತಿಯನ್ನು ಒಳ್ಳೆಯ ರೀತಿ ಆರೈಕೆ ಮಾಡುವುದು, ಉತ್ತಮ ರೀತಿ ಕುಟುಂಬ ನಿರ್ವಹಿಸುವುದೆಲ್ಲವೂ ಪ್ರತಿಫಲಾರ್ಹವಾದ ಕಾರ್ಯವಾಗಿದೆ. ಅದೆಲ್ಲವೂ ಮಾಡುವ ಜೊತೆ ಸುಲಭವಾಗಿ ಹೇಳಬಲ್ಲ ದ್ಸಿಕ್ರ್, ಸ್ವಲಾತನ್ನು ಹೇಳಿದರೆ ಅಲ್ಲಿ ಇನ್ನಷ್ಟು ಪ್ರತಿಫಲ ಸಂಪಾದಿಸಬಹುದು. ಅಂತಹ ವಿಜಯಶಾಲಿಗಳಲ್ಲಿ ಅಲ್ಲಾಹು ನಮ್ಮನ್ನು ಸೇರಿಸಲಿ!! ಆದರೆ ವಿಷಯ ಅದಲ್ಲ. ದಿನವೊಂದರಲ್ಲಿ ಮಾಡಿ ಮುಗಿಸಬೇಕಾದ ಕಡ್ಡಾಯ ಆರಾಧನೆಗಳ ಬಗೆಯಾಗಿದೆ ನಮ್ಮ ಚರ್ಚೆ. ಅದರಲ್ಲಿ ಅತ್ಯಂತ ಪ್ರಧಾನವಾದದ್ದಾಗಿದೆ ನಮಾಝ್. ಅವು ಸಿಂಧುಬಾಗಬೇಕಾದರೆ ಫರ್‌ಳ್ ಶರತ್‌ಗಳನ್ನು ಸರಿಯಾಗಿ ಪಾಲಿಸಿರಬೇಕು. ಇಲ್ಲವಾದರೆ ನಾವು ಎಷ್ಟು ಕಾಲ ನಮಾಝ್ ಮಾಡಿಯೂ ಫಲವಿಲ್ಲ. ಆ ಕುರಿತು ಜ್ಞಾನ ಸಂಪಾಧಿಸುವ ಪ್ರತಿಯೊಬ್ಬ ಮುಸ್ಲಿಮರಿಗೂ ಕಡ್ಡಾಯವಾಗಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದ್ದಾರೆ."
"ತಿಳಿಯದ ಜಾಹಿಲಿಗೆ ಮಾಫ್ ಇದೆಯಲ್ಲಾ."ಯಾರೋ ಒಬ್ಬಳು ಮೂಲೆಯಿಂದ ಗೊಣಗುವುದು ಕೇಳಿಸಿತು.
" ಹೌದು!! ಜಾಹಿಲಿಗೆ ಮಾಫ್ ಇದೆ. ಆದರೆ ಜಾಹಿಲ್ ಯಾರೆಂದು ಗೊತ್ತಾ? ಇತ್ತೀಚಿಗಷ್ಟೇ ಇಸ್ಲಾಮಿಗೆ ಬಂದ ನವ ಮುಸ್ಲಿಂ ಅಥವಾ ವಿದ್ವಾಂಸರಾಗಲೀ ಜ್ಞಾನ ಕಲಿಯುವ ವ್ಯವಸ್ಥೆಯಾಗಲೀ ಇಲ್ಲದ ಅಜ್ಞಾತ ಸ್ಥಳದಲ್ಲಿ ವಾಸಿಸುವವರಾಗಿದ್ದಾರೆ. ಆದರೆ ಈ ಎರಡು ಪೈಕಿಗಳಲ್ಲಿ ನಾವು ಸೇರುವುದಿಲ್ಲ. ಸ್ತ್ರೀಯರಾದ ನಮ್ಮಲ್ಲಿ ನಮಾಜನ್ನು ಕೂಡ ಮನೆಯ ಒಳಗಿನ ಕೋಣೆಯಲ್ಲಿ ನಿರ್ವಹಿಸಲು ಹೇಳಿದ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಅತ್ಯಂತಾಪೇಕ್ಷಿತ ಕಾರ್ಯಗಳಿಗೆ ಇಸ್ಲಾಮಿನ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ ಹೊರಬರಲು ಅವಕಾಶ ನೀಡಿದ ಪೈಕಿ ಜ್ಞಾನ ಸಂಪಾಧನೆಗೆ ಅವಕಾಶ ನೀಡಿದರು. ಹಾಗಾಗಿ ನಮಗೆ ಕೂಡಾ ಹಲವಾರು ವಿಷಯ ಕಲಿಯಲಿಕ್ಕಿದೆ. ಅದಕ್ಕೆ ಇಂತಹ ವೇದಿಕೆ ಅಗತ್ಯ! ನೀವೆಲ್ಲಾ ಬಯಸುವುದಾದರೆ ಇಲ್ಲಿಯೇ ಡೈಲಿ ಒಂದು ಗಂಟೆ ಕ್ಲಾಸ್ ನಡೆಸಬಹುದು."
ನಸೀಹಾ ಹೇಳಿ ಮುಗಿಯುವ ಮುನ್ನವೇ ಈ ಸಹೋದರಿಗಳೆಲ್ಲರೂ ಒಟ್ಟಾಗಿ
"ಒಳ್ಳೆಯದು! ಒಳ್ಳೆಯದು, ಯಾವಾಗಲೂ ಇದೇ ಸಮಯದಲ್ಲಿ ಇಲ್ಲಿಯೇ ನಡೆಯಲಿ. ನಾವೆಲ್ಲಾ ಬರಲು ಸಿದ್ದರಿದ್ದೇವೆ" ಎಂದರು.
"ಬರುವುದೆಲ್ಲಾ ಸರಿ, ಹಾಗಂತ ನಿಯಮ ತಪ್ಪಿಸಿ ಬರಲಾಗದು! ಬರುವಾಗ ಸಂಪೂರ್ಣ ಮೈ ಮುಚ್ಚುವ ಬುರ್ಖಾ ಧರಿಸಿ, ಇಸ್ಲಾಮಿನ ನಿಯಮಗಳಿಗೆ ಅನುಸಾರವಾಗಿರಬೇಕು ಬರುವುದು. ಮೊಣಕೈ, ಮುಖಮರೆಯುವುದು ನಮಾಝಿನಲ್ಲಿ ಕಡ್ಡಾಯವಿಲ್ಲ. ಹಾಗಂತ ಮನೆಯಿಂದ ಹೊರಬರುವಾಗ ಅದು ಕೂಡಾ ಮರೆಮಾಚುವಂತಹ ಬುರ್ಖಾವಾಗಿರಬೇಕು, ಸರಿತಾನೆ?"
ಆಯಿತು" ಎನ್ನುವಂತೆ ತಲೆಯಾಡಿಸಿದರು.
ನಸೀಹಾ ಮತ್ತೆ ಮಾತು ಪ್ರಾರಂಭಿಸಿದಳು.
ನಸೀಹಾ ಮತ್ತೆ ಮಾತು ಪ್ರಾರಂಭಿಸಿದಳು
"ಇವತ್ತು ಸೋಮವಾರ ತಾನೆ? ಅಲ್ಲದೆ ರಬೀವುಲ್ ಅವ್ವಲ್ ತಿಂಗಳು ಕೂಡಾ ಹೌದು. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಜನನ ನೀಡಿದ ತಿಂಗಳು, ದಿನ ಎರಡೂ ಆಗಿದೆ. ಅವಕ್ಕೆ ಇರುವ ಶ್ರೇಷ್ಟತೆ ಅಪಾರ. ಹಾಗಾಗಿ ತರಗತಿ ನಾವು ಇಂದೇ ಪ್ರಾರಂಭಿಸೋಣ. ಅಲ್ಲಾಹು ನಮ್ಮ ಈ ಸಂಗಮವನ್ನು ಸ್ವೀಕರಿಸಲಿ, ಆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಬರ್ಕತ್‌ನಿಂದ ನಮಗೆ ಒಳ್ಳೆಯ ಜ್ಞಾನ ಅಲ್ಲಾಹು ಕರುಣಿಸಲಿ. ಈ ಕಾರಣದಿಂದ ಅಲ್ಲಾಹು ನಮ್ಮನ್ನು ನಾಳೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಸಾನ್ನಿಧ್ಯದಲ್ಲೂ ಒಗ್ಗೂಡಿಸಲಿ. ಕಲಿತದ್ದನ್ನೂ ಜೀವನದುದ್ದಕ್ಕೂ ಕಾರ್ಯರೂಪಕ್ಕೆ ತರಲು ಅಲ್ಲಾಹು ತೌಫೀಖ್ ನೀಡಲಿ (ಆಮೀನ್.)"
ನೀವೆಲ್ಲರೂ ಪ್ರಾಯ ಪೂರ್ತಿಯಾದವರು ತಾನೆ? ಹಾಗಾದರೆ ಆ ವಿಷಯದ ಬಗ್ಗೆಯೇ ಸ್ವಲ್ಪ ಕಲಿಯೋಣ ಎಂದು ನಸೀಹ ಹೇಳಿ ಮುಗಿಸಿದ್ದೇ ತಡ, ಪ್ರಾರಂಭದಲ್ಲಿಯೇ ನಸೀಮಾಳಿಗೆ ಒಂದು ಸಂಶಯ! ಹಾಗಂತ ನಸೀಮಾ ಸಾಮನ್ಯ ಹುಡುಗಿ ಏನೂ ಅಲ್ಲ. ನಸೀಹಾಳೊಂದಿಗೆ ಶಾಲೆಯಲ್ಲಿ 5 ನೇ ತರಗತಿ ಒಟ್ಟಿಗೆನೇ ಕಲಿತಿದ್ದು, ಇದೀಗ ಸೆಕೆಂಡ್ ಇಯರ್ ಪಿ.ಯು.ಸಿ ಕೂಡ ಫಿನಿಶ್ ಮಾಡಿ ಡಿಸೈನಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಾಳೆ. ಮದ್ರಸ ಮಾತ್ರ ಹೋದದ್ದು ಎರಡನೇ ಕ್ಲಾಸ್ ಮಾತ್ರ. ಮನೆಯವರಿಗೆ ಕೂಡಾ ಮದ್ರಸಾ ಹೋಗಲು ಕಷ್ಟವಾದೀತು ಅಂತ ಹೇಳಿ ಎರಡರಲ್ಲಿ ಮದ್ರಸಕ್ಕೆ ಕೊನೆಯಿತ್ತಿದ್ದರು. ನಸೀಮಾ ಇದೀಗ ತನ್ನ ಸಮ ಪ್ರಾಯದ ನಸೀಹಾಳನ್ನು ಕಂಡ ಮಾತ್ರ ಸಂಪೂರ್ಣ ಬದಲಾಗಿದ್ದಾಳೆ. ಏನಾದರೂ ಸರಿ! ಒಂದಿಷ್ಟು ಧಾರ್ಮಿಕ ವಿದ್ಯಾಭ್ಯಾಸ ಕೂಡ ಬೇಕು ಎಂದು ಹೇಳಿದಾಗ ಮೊದಲು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೂಡ ಅವಳೇ!
ಪ್ರಾಯಪೂರ್ತಿಯಾಗುವುದು ಯಾವಾಗ ಎಂದಾಗಿತ್ತು? ನಸೀಮಾಳ ಮೊದಲ ಪ್ರಶ್ನೆ.
ನಸೀಹಾ: ಸರಿ ! ನಸೀಮಾ, ನೀನು ಕೇಳಿದ ಪ್ರಶ್ನೆ ಬಹಳಷ್ಟು ಅರ್ಥ ಪೂರ್ಣ ಸಂಶಯ. ಯಾವಾಗಲೂ ನಾಚಿಕೆಗೇಡು ತೋರಿಸದೆ ಧೈರ್ಯವಾಗಿಯೇ ಕೇಳಬೇಕು. ಎಷ್ಟೆಂದರೂ ಇಲ್ಲಿರುವುದು ನಾವು ಮಾತ್ರ ಹೊರಗಿನವರು ಯಾರು ಕೂಡ ಇಲ್ಲವಲ್ಲ! ಮದೀನಾದಲ್ಲಿನ ಸ್ತ್ರೀಯರನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ರವರು ಮಾದರಿಯೋಗ್ಯ ಸ್ತ್ರೀಗಳೆಂದು ಹೊಗಳಿದ್ದಾರೆ. ಕಾರಣವೇನೆಂದು ಗೊತ್ತೇ? ಅವರು ಕೇಳಿ ಕಲಿಯುವುದರಲ್ಲಿ ಯಾವುದೇ ನಾಚಿಕೆ ತೋರುವವರಾಗಿರಲಿಲ್ಲ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ರವರಿಗೂ ಕೆಲವೊಮ್ಮೆ ನಾಚಿಕೆಯಾದದ್ದುಂಟು. ಹೈಳ್ ರಕ್ತದ ಕುರಿತು ಸ್ತ್ರೀಯೊಬ್ಬರ ಪ್ರಶ್ನೆ ಒಂದಕ್ಕೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಉತ್ತರಿಸಿದಾಗ ಅದರಲ್ಲಿ ಸಂತೃಪ್ತಗೊಳ್ಳದ ಸ್ತ್ರೀ ಪುನಃ ಪ್ರಶ್ನಿಸಿದಾಗ ಆಯಿಶಾ (ರ) ಅವರು ವಸ್ತ್ರ ಹಿಡಿದು ಎಳೆದು ಉಳಿದದ್ದನ್ನು ನಾನು ವಿವರಿಸುತ್ತೇನೆ ಎಂದು ಕರೆದುಕೊಂಡು ಹೋದರು. ಅಷ್ಟರಮಟ್ಟಕ್ಕೆ ಕೇಳಿ ಕಲಿಯುವುದರಲ್ಲಿ ಅವರು ಆಸಕ್ತಿ ಹೊಂದಿದ್ದರು. ಇದೀಗ ನಾವು ನಸೀಮಾಳ ಪ್ರಶ್ನೆಯತ್ತ ನೋಡೋಣ.
ಪ್ರಾಯ ಪೂರ್ತಿಯಾಗುವುದು ಮೂರು ವಿಧದಲ್ಲಾಗಿದೆ; ಒಂದನೆಯದ್ದು ವಯಸ್ಸಿನಿಂದ, ಅದರಲ್ಲಿ ಸ್ತ್ರೀ ಪುರುಷ ಸಮಾನ, ಹದಿನೈದು ವಯಸ್ಸು ಪೂರ್ತಿಯಾಗುವುದರೊಂದಿಗೆ ಇದು ಸಂಭವಿಸುತ್ತದೆ. ಎರಡನೇಯದ್ದು ಇಂದ್ರಿಯ ಸ್ಖಲನವಾಗುವುದು. ಇದು ಕೂಡಾ ಸ್ತ್ರೀ ಪುರುಷರಲ್ಲಿ ಎರಡು ವರ್ಗದಲ್ಲೂ ಉಂಟಾಗುವುದು. ಇನ್ನೊಂದು ಋತುಸ್ರಾವ (ಮುಟ್ಟು) ಉಂಟಾಗುವುದರಿಂದ.
ಅದ್ಯಾವುದೋ ಮೂಲೆಯಿಂದ ಗುಸುಗುಸು ಶಬ್ದ ಕೇಳತೊಡಗಿತು. ಅವರ ಪೈಕಿ ಹೆಚ್ಚು ವಯಸ್ಸಾದ ಆಸಿಯಮ್ಮಾ ಆಗಿತ್ತು ಅದು ಯ, ನಸೀಹಾ, ಅವರತ್ತ ಮುಖ ಹಾಕಿ ಉಮ್ಮಾ ಸಂಶಯ ಇದೆಯಾ? ಕೇಳಿ, ಹೇಳಿಕೊಡುತ್ತೇನೆ ಅಂದಳು.
ಹೌದು! ಮೋಳೆ, ಈ ಋತುಸ್ರಾವ ಅಂದರೆ ವಿಧ್ಯಾಭ್ಯಾಸ ಬರದ ನಮಗೆ ಹೇಗೆ ತಿಳಿಯುವುದು?
ನಸೀಹಾ: ನಿರಾಶರಾಗಬೇಡಿ ಉಮ್ಮಾ, ನಾನು ವಿವರಿಸುತ್ತೇನೆ. ರೋಗ ಅಥವಾ ಹೆರಿಗೆಯ ಕಾರಣಕೂಡದೆ ಒಂಭತ್ತು ವಯಸ್ಸು ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿರುವ ಸ್ತ್ರೀಯ ಗರ್ಭಾಶಯದ ಅತ್ಯಂತ ಒಳಗೆ ಇರುವ ಎಲುಬಿನಿಂದ ಹೊರಬರುವ ರಕ್ತವಾಗಿದೆ ಇದು. ಇದನ್ನು ಅರಬಿಯಲ್ಲಿ 'ಹೈಲ್' ಅಥವಾ ಕನ್ನಡದಲ್ಲಿ ಮುಟ್ಟು ಅನ್ನುತ್ತಾರೆ.
ನಮಗೆಲ್ಲಾ ಇದು ಅನುಭವವಾದದ್ದೇ, ಹಾಗಾದರೆ ಇದು ಎಷ್ಟು ವಯಸ್ಸಿನಲ್ಲಿ ಪ್ರಾರಂಭವಾಗಬಹುದೆಂದು ಹೇಳಬಹುದಾ? ನಸೀಹಾಳ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ! ಎಲ್ಲರೂ ಅದೇನೋ ನಾಚಿಕೆಯಿಂದ ತಲೆತಗ್ಗಿಸಿ ನಕ್ಕರೆ ವಿನಃ ಮರು ಮಾತು ಆಡಿಲ್ಲ. ಆಯಿತು ನಾನೇ ಹೇಳುತ್ತೇನೆ. ನಸೀಹಾ ಮತ್ತೆ ಪ್ರಾರಂಭಿಸಿದಳು.
ಚಂದ್ರಮಾನ ಪ್ರಕಾರ ಲೆಕ್ಕಾಚಾರ (ಅರಬಿ ತಿಂಗಳನುಸಾರ) ಹೆಣ್ಣಿಗೆ ಸುಮಾರು ಒಂಬತ್ತು ವಯಸ್ಸು ಆಗುವುದರೊಂದಿಗೆ ಋತುಸ್ರಾವ ಉಂಟಾಗುವ ಸಾಧ್ಯತೆ ಇದೆ. ಒಂಬತ್ತು ವಯಸ್ಸಿಗೆ ಇನ್ನೇನೂ ಹದಿನಾರು ದಿನಕ್ಕಿಂತ ಕಡಿಮೆ ಇರುವಾಗ ಕಂಡರೆ ಅದನ್ನು ಈ ರಕ್ತಕ್ಕೆ ಸೇರಿಸಬಹುದು. ಆದರೆ ಹದಿನಾರು ದಿನಕ್ಕಿಂತ ಹೆಚ್ಚು ಇರುವಾಗ ಕಂಡು ಬಂದರೆ ಅದನ್ನು ಹೈಳ್ ಎನ್ನಲಾಗದು. ಅದು ರೋಗ ರಕ್ತವಾಗಿ ಪರಿಗಣಿಸಬೇಕಾದಲ್ಲಿ ವೈದ್ಯರನ್ನು ತೋರಿಸಿ ಚಿಕಿತ್ಸೆ ಪಡೆಯಬಹುದು.
ಅಷ್ಟರಲ್ಲಿ ಹಬೀಬಾಳಿಗೆ ಮತ್ತೆ ಸಂಶಯ; ಒಂದು ಸ್ತ್ರೀಗೆ ಹದಿನಾರಕ್ಕಿಂತ ಹೆಚ್ಚು ಪ್ರಾಯವಿರುವಾಗ ಕಾಣಿಸಿ ಕಮ್ಮಿ ದಿನ ಇರುವಾಗ ಅದು ನಿಂತರೆ ಅದನ್ನು ಹೈಳ್ ಎಂದು ಹೇಳಬಹುದೇ?
ಶಹಬಾಶ್! ಹಬೀಬ ನಿನ್ನ ಬುದ್ದಿವಂತಿಕೆ ಮೆಚ್ಚಲೇಬೇಕು. ಬಹಳ ಒಳ್ಳೆಯ ಪ್ರಶ್ನೆ ಶ್ರದ್ಧೆಯಿಂದ ಕೇಳಿದರೆ ಇನ್ನಷ್ಟು ಕಲಿಯಲು ಮನಸ್ಸು ದಾರಿ ಮಾಡಿಕೊಡುತ್ತದೆ. ಒಂಬತ್ತು ವಯಸ್ಸು ಪೂರ್ತಿಯಾಗಲು ಹದಿನಾರಕ್ಕಿಂತ ಹೆಚ್ಚಿನ ದಿನ ಬಾಕಿ ಇರುವಾಗ ರಕ್ತ ಕಾಣಲು ಪ್ರಾರಂಭಿಸಿ ಹದಿನಾರಕ್ಕಿಂತ ಕಡಿಮೆ ದಿನ ಬಾಕಿ ಇರುವಾಗ ನಿಂತರೆ ಅದರ ಪ್ರಥಮ ಭಾಗ ಹೈಳ್ ಅಲ್ಲವೆಂದೂ ಆದರೆ ಕೊನೆಯ ಭಾಗ ಹೈಳ್ ನ ನಿಭಂದನೆಗೆ ಸೇರಿದಲ್ಲಿ ಋತುಸ್ರಾವವಾಗಿ ಪರಿಗಣಿಸಲ್ಪಡುವುದು...
ಉದಾಹರಣೆಗೆ: 9 ವಯಸ್ಸು ಪೂರ್ತಿಯಾಗಲು 20 ದಿನ ಇರುವಾಗ ರಕ್ತ ಕಂಡು ಇನ್ನೇನು ಅದು ಪೂರ್ತಿಯಾಗಲು ಏಳೆಂಟು ದಿನ ಇರುವಾಗ ರಕ್ತ ನಿಂತರೆ ಮೊದಲು ನಾಲ್ಕು ದಿನ ಕಂಡ ರಕ್ತ ಹೈಳ್ ಅಲ್ಲ. ಇನ್ನೇನೋ ಒಂಬತ್ತು ಪೂರ್ತಿಯಾಗಲು ಹದಿನಾರು ದಿನ ಬಾಕಿ ಇರುವುದರಿಂದ ಆ ಬಳಿಕ ಕಂಡ ರಕ್ತ ಹೈಳ್ ನ ಪೈಕಿ ಸೇರಿಸಲಾಗುವುದು. ಆದರೆ ಸಮಯ ಕಳೆದ ನಂತರ ರಕ್ತಹೋದ ಸಮಯ ಒಟ್ಟು 24 ಗಂಟೆಗಿಂತ ಕಡಿಮೆಯಾಗದಿದ್ದಲ್ಲಿ ಅದು ಹೈಳ್ ಆಗಿ ಸೇರಿಸಲಾಗುವುದು.
ಅಷ್ಟರಲ್ಲಿ ಝೀನತ್‌ಗೆ ಹೊಸತೊಂದು ಸಂಶಯ! ತಾವು ಚಂದ್ರ ವರ್ಷಲೆಕ್ಕಾಚಾರ ಎಂದು ಹೇಳಿದ್ದೀರಲ್ಲಾ? ನಾವು ಸಾದಾರಣವಾಗಿ ಲೆಕ್ಕಾಚಾರ ಮಾಡುವ ವರ್ಷ ಲೆಕ್ಕಕ್ಕೂ ಅವಕ್ಕೂ ನಡುವೆ ಇರುವ ವ್ಯತ್ಯಾಸವೇನು?
ನಸೀಹಾ: ಹೌದು! ವ್ಯತ್ಯಾಸ ಇದೆ. ಸೂರ್ಯಚಲನಗಳನ್ನು ಅವಲಂಭಿಸಿ ಇರುವ ವರ್ಷವಾಗಿದೆ ಸೂರ್ಯವರ್ಷ. ಅದಾಗಿದೆ ನಾವು ಕ್ಯಾಲೆಂಡರ್ ನೋಡಿ ಮಾಡುವ ವರ್ಷ ಲೆಕ್ಕಾಚಾರ. ಅದರಲ್ಲಿರುವುದು 364 ದಿನಗಳು ಮತ್ತು ಆರು ಗಂಟೆ! ಆದರೆ ಚಂದ್ರಮಾನ ಲೆಕ್ಕಾಚಾರ ಪ್ರಕಾರ 354 ದಿನ ಮತ್ತು ಸುಮಾರು 8 1/2 ಗಂಟೆಯಾಗಿದೆ.
ಆಗ ನಸೀಮಾ ಒಂದು ಪ್ರಶ್ನೆ ಮುಂದಿಟ್ಟಳು; ಅದೇನೆಂದರೆ, ನನ್ನ ತಂಗಿ 1990 ಮಾರ್ಚ್ 31 ನೇ ದಿನಾಂಕ ಬೆಳಿಗ್ಗೆ 10 ಗಂಟೆಗೆಯಾಗಿದೆ ಜನಿಸಿದ್ದು ಹಾಗಾದರೆ ಅವಳಿಗೆ ಋತುಸ್ರಾವ ಉಂಟಾಗುವ ಸಾಧ್ಯತೆ ಇರುವ ಪ್ರಾಯ ಯಾವುದೆಂದು ವಿವರಿಸುವಿರಾ?
ಸರಿ! ನಸೀಮಾ ಬಹಳ ಜಾಣೆ! ಅಷ್ಟು ಬೇಗ ಲೆಕ್ಕ ಕೂಡ ಹೇಳಿಯಾಯಿತು. ಆಗಲಿ ಅಲ್ಲಾಹು ನಮಗೆ ಒಳ್ಳೆಯ ಬುದ್ದಿ ಕರುಣಿಸಲಿ. ನೀನು ಕೇಳಿದ ಪ್ರಶ್ನೆಗೆ ಹಾಗೆಯೇ ಉತ್ತರ ಕೊಡುತ್ತೇನೆ. ನೋಡು, ನಸೀಹಾ ಎಂದಿನ ದಾಟಿಯಲ್ಲಿ ಉತ್ತರ ಪ್ರಾರಂಭಿಸಿದಳು. ಕ್ರ.ಶವನ್ನು ಹೇಳುವ ನಮಗೆ ಹಿಜ್ರಾ ಅಂತ ಹೇಳಿದರೆ ಅಷ್ಟು ಬೇಗ ಅರ್ಥವಾಗಬೇಕೆಂದಿಲ್ಲ. ಹಾಗಾದರೆ ಅದಕ್ಕಿಂತಲೂ ಸುಲಭವಾಗಿ ನಮಗೆ ಅರ್ಥಮಾಡಬಹುದಾದ ರೀತಿ ಅಂದರೆ, ನಾನು ಹೇಳಿದ ಪ್ರಕಾರ ಚಂದ್ರಮಾನ ಲೆಕ್ಕಾಚಾರದಲ್ಲಿ ಸೂರ್ಯಮಾನಕ್ಕಿಂತ ಒಂದು ವರ್ಷದಲ್ಲಿ 10 ದಿನ ಹಾಗೂ ಸುಮಾರು 24 ಗಂಟೆಯಷ್ಟು ಕಡಿಮೆಯಾಗಿದೆ. ಹಾಗಾದರೆ 9 ವರ್ಷದಲ್ಲಿ ಒಂಬತ್ತು ವರ್ಷ ತುಂಬುವುದಕ್ಕಿಂತ 98 ದಿನಗಳು ಮತ್ತು 1 ಗಂಟೆ ಮುಂಚೆ ಚಂದ್ರಮಾನದ ಪ್ರಕಾರ 9 ವರ್ಷ ತುಂಬುತ್ತದೆ.
ಹಾಗಾದರೆ ನಸೀಮಾಳ ತಂಗಿ ಜನಿಸಿದ್ದು 1990 ಮಾರ್ಚ್ 31 ರಂದು ಗಂಟೆಯಾದರೆ 1999 ಮಾರ್ಚ್ 31-10ಗಂಟೆಗೆ ಅವಳಿಗೆ ಸೂರ್ಯವರ್ಷದ ಪ್ರಕಾರ ಒಂಬತ್ತು ವರ್ಷ ತುಂಬುತ್ತದೆ. ಹಾಗಾದರೆ 1998 ಡಿಸೆಂಬರ್ 24 ನೇ ದಿನ ಬೆಳಿಗ್ಗೆ 8:30, ಗಂಟೆಗೆ ಚಂದ್ರಮಾನ ಲೆಕ್ಕಾಚಾರದ ಪ್ರಕಾರ 9 ವರ್ಷ ತುಂಬುತ್ತದೆ. ಆದ್ದರಿಂದ ಡಿಸೆಂಬರ್ 9 ನೇಯ ದಿನಾಂಕ ಬೆಳಿಗ್ಗೆ 8:30 ರಿಂದ ಅವಳಿಗೆ ಋತುಸ್ರಾವ ಪ್ರಾರಂಭಕ್ಕೆ ಸಾಧ್ಯತೆ ಇದೆ. ಏಕೆಂದರೆ 9 ವರ್ಷಕ್ಕಿಂತ 16 ದಿನ ಮುಂಚೆ ಅದಕ್ಕೆ ಸಾಧ್ಯತೆ ಇದೆ ತಾನೆ?
16 ದಿನ ಅನ್ನಲು ಇರುವ ಮೂಲಕಾರಣವೇನು? ಸೆಕೀನಾಳ ಮರು ಪ್ರಶ್ನೆ!
ಋತುಸ್ರಾವ ಉಂಟಾಗುವುದಕ್ಕಿರುವ ಕನಿಷ್ಟ ಪ್ರಾಯ ವಯಸ್ಸು ಅಂತ ತಿಳಿದಿವೆಯಲ್ಲಾ? ಹಾಗಾದರೆ 9 ವರ್ಷ ಆಗುವುದಕ್ಕೆ ಮುಂಚೆ ಕನಿಷ್ಠ ಒಂದು ಹೈಳ್ ಗೂ ಅದರ ಶುದ್ಧಿಗೆ ಅನುಕೂಲವಾಗುವ ಸಮಯ ಇಲ್ಲವಾದಾಗ ಹೊರಬರುವ ರಕ್ತಕ್ಕೂ ಹೈಳ್ ಎಂದು ತಿಳಿಯಬೇಕಾದರೆ ಕನಿಷ್ಠ ಅದು 24 ಗಂಟೆಯಾದರೂ ಹೋಗಬೇಕು. ಒಂದು ಹೈಳ್ ಕಳೆದ ಬಳಿಕ ಇನ್ನೊಂದು ಹೈಳ್ ನ ಮಧ್ಯೆ ಕನಿಷ್ಠ 15 ದಿನವಾದರೂ ಶುದ್ದಿ ಇರಬೇಕು. ಹೀಗೆ ಅತ್ಯಂತ ಕನಿಷ್ಠವಾದ ಹೈಳ್ ಮತ್ತು ಶುದ್ಧಿ ಸೇರಿ ಆಗಿದೆ 16 ದಿನ. ಆದ್ದರಿಂದ 9 ವಯಸ್ಸು ಪೂರ್ತಿಯಾಗಲು 16 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಇರುವಾಗ ಬರುವ ರಕ್ತವನ್ನು ಹೈಳ್ ಎಂದು ಕರೆಯಲಾಗುವುದು. 16 ದಿನಕ್ಕಿಂತ ಕಡಿಮೆ ಬಾಕಿ ಇರುವಾಗ ಬರುವ ರಕ್ತವನ್ನಾಗಿದೆ ಹೈಳ್ ಅನ್ನುವುದು.
ಹಾಗಾದರೆ ಒಂಬತ್ತು, ಹತ್ತು ವಯಸ್ಸಿನಲ್ಲಿ ನಮ್ಮೂರಿನ ಹೆಣ್ಮಕ್ಕಳು ಋತುಮತಿಯಾಗುವುದಿಲ್ಲವಲ್ಲಾ? ಎಂದು ಝೀನತ್‌ಗೆ ಅದೇನೋ ಸಂಶಯ?
ನಸೀಹಾ: ಸರಿ! ವಿವಿಧ ದೇಶಗಳ ಹವಾಗುಣಕ್ಕೆ ಹೊಂದಿಕೊಂಡು ಹೆಣ್ಣು ಮಕ್ಕಳ ಆರೋಗ್ಯ ಸ್ಥಿತಿಯೂ ಕೂಡಾ ಬದಲಾವಣೆಯಾಗುತ್ತದೆ. ಉಷ್ಣ ಹೆಚ್ಚಿರುವ ಪ್ರದೇಶದಲ್ಲಿ ಹೆಣ್ಣು ಬೇಗನೆ ಋತುಮತಿಯಾಗುತ್ತಾಳೆ. ಇಮಾಂ ಶಾಫಿಈ (ರ.ಅ) ಹೇಳುತ್ತಾರೆ. ತಿಹಾಮದ ಹೆಣ್ಣು ಮಕ್ಕಳು ಅತೀ ಚಿಕ್ಕ ವಯಸ್ಸಿನಲ್ಲಿ ಋತುಮತಿಗಾಗುವ ಹೆಣ್ಣುಮಕ್ಕಳೆಂದು ನಾನು ಕೇಳಿದ್ದೇನೆ. ಅವರು ಸುಮಾರು 9 ವಯಸ್ಸಿನಲ್ಲಿಯೇ ಋತುಮತಿಯಾಗುತ್ತಾರೆ.
ನಸೀಮಾ: ಆಗಬಹುದು ಆದರೆ ನನ್ನ ಒಂದು ಸಂಶಯಕ್ಕೆ ಮಾತ್ರ ದಯವಿಟ್ಟು ಉತ್ತರ ಹೇಳಿಬಿಡಿ.
ನಸೀಹಾ: ಆಯಿತು ನಸೀಮಾಳ ದೀನಿ ಕಲಿಯಲಿಕ್ಕೆ ಇರುವ ಕುತೂಹಲವನ್ನು ಮೆಚ್ಚಲೇ ಬೇಕು. ಆಯಿತು, ಕೇಳು ನೋಡೋಣ.
ಸ್ತ್ರೀ ಪ್ರಾಯ ಪೂರ್ತಿಯ ಬಗ್ಗೆ ತಾವು ವಿವರಿಸಿದ್ದೀರಿ ಇನ್ನು ಪುರುಷರನ್ನಾಗಿ ಮಾಡುವ ಇಂದ್ರಿಯ ಸ್ಖಲನ ಉಂಟಾಗುವುದಕ್ಕೆ ಇದೇ ವರ್ಷವನ್ನು ಪರಿಗಣಿಸುವುದೇ?
ನಸೀಹ: ಗಂಡಿಗೆ ಮಾತ್ರವಲ್ಲ ಹೆಣ್ಣಿಗೂ ಕೂಡ ಇಂದ್ರಿಯ ಸ್ಟಲನ ಉಂಟಾಗಬಹುದು.
ಅದು ಉಂಟಾಗುವುದು ಈ 9 ವಯಸ್ಸಿನಿಂದಲೇ ಸಾಧ್ಯತೆ ಇದೆ.
ಆಯಿತು.. ನಾಳೆ ನಮಗೆ ನೋಡೋಣ..
ಮೂರು ಸ್ವಲಾತ್ ನೊಂದಿಗೆ ಆ ವೇದಿಕೆಯಿಂದ ವಿರಮಿಸಲಾಯಿತು..
ಎರಡನೇ ದಿನ
ಇವತ್ತು ನಿನ್ನೆಗಿಂತ ಹೆಚ್ಚು ಜನ ಕಾಣುತ್ತಿದ್ದಾರಲ್ಲ. ಆಗಲಿ ಒಳ್ಳೆಯದು. ಕಲಿಯಲು ಆಸಕ್ತಿಯಿರುವ ಎಲ್ಲಾ ಹೆಂಗಸರನ್ನು ಕರೆ ತನ್ನಿ. ಅಲ್ಲಾಹು ನಮಗೆ ನಮಗೆ ಒಳ್ಳೆಯದು ಕಲಿಯಲಿಕ್ಕೆ ಭಾಗ್ಯ ನೀಡಲಿ. ನಸೀಹಾ ಮಾತು ಪ್ರಾರಂಭಿಸುತ್ತಿದ್ದಂತೆಯೇ ಹಬೀಬಾ ಸಂಶಯ ಕೇಳಲು ಎದ್ದು ನಿಂತಳು.
ಋತುಸ್ರಾವ ಪ್ರಾರಂಭವಾಗುವ ಪ್ರಾಯವನ್ನು ತಾವು ನಿನ್ನೆಯ ಕ್ಲಾಸಿನಲ್ಲಿ ವಿವರಿಸಿದ್ದೀರಿ, ಹಾಗಾದರೆ ಅದು ಪೂರ್ಣವಾಗಿ ನಿಂತುಕೊಳ್ಳುವ ಪ್ರಾಯ ಯಾವುದು?
ನಸೀಹಾ:ಹೈಳ್ ನಿಲ್ಲುವುದಕ್ಕೆಂದು ನಿಶ್ಚಿತ ಸಮಯವಿಲ್ಲ. ಆದರೂ ಸಾಧಾರಣವಾಗಿ 62 ವಯಸ್ಸಿನ ಬಳಿಕ ಹೈಳ್ ಉಂಟಾಗುವುದಿಲ್ಲ.
ಝೀನತ್: ಋತುಸ್ರಾವ ಉಂಟಾದರೆ ಎಷ್ಟು ದಿನಗಳವರೆಗೆ ರಕ್ತ ಬರಬೇಕು? ಅದಕ್ಕೆ ವಿಶೇಷ ನಿಯಮಗಳೇನಾದರೂ ಇದೆಯಾ?
ಹೌದು! ಅಲ್ಲಿ ಹಲವಾರು ವಿಷಯಗಳು ಕಲಿಯಲಿಕ್ಕಿವೆ. ಇವತ್ತಿನ ತರಗತಿಯಲ್ಲಿ ಅದೇ ವಿಷಯವನ್ನಾಗಿದೆ ನಾನು ಉದ್ದೇಶಿಸಿದ್ದು ಕೂಡ! ನೀನು ಪ್ರಶ್ನೆ ಕೇಳಿದ್ದು ಅದಕ್ಕೆ ಒಂದು ಮುನ್ನುಡಿಯಾಯಿತು. ರಕ್ತ ಸ್ರಾವ 24 ಗಂಟೆ ಶ್ರಮಿಸಿದರೆ ಮಾತ್ರ ಅದು ಆರ್ಥವ ಅಥವಾ ಹೈಳ್ ಆಗುತ್ತದೆ. ಅಲ್ಲದೆ ಒಂದು ದಿನಕ್ಕಿಂತ ಹೆಚ್ಚು ದಿನ ರಕ್ತ ಸ್ರವಿಸಬಹುದು. ಹಾಗೇ ಒಂದಕ್ಕಿಂತ ಹೆಚ್ಚು ದಿನ ಮುಟ್ಟು ಉಂಟಾಗುವಾಗ ಮಧ್ಯದಲ್ಲಿ ರಕ್ತ ಇಲ್ಲದೆ ಇರಬಹುದು. ಆದರೆ ರಕ್ತ ಸ್ರವಿಸಿದ ಸಮಯವನ್ನೆಲ್ಲಾ ಒಟ್ಟಾಗಿ ಲೆಕ್ಕ ಹಾಕಿದರೆ 24 ಗಂಟೆಗಿಂತ ಕಡಿಮೆಯಾಗಬಾರದು.
ನಸೀಮಾ: ಇನ್ನೊಮ್ಮೆ ಅದನ್ನು ವಿವರಿಸುವಿರಾ?
ನಸೀಹಾ:ಖಂಡಿತಾ! ನೋಡಿ ನಸೀಮಾ... ಒಂದು ಸ್ತ್ರೀಗೆ ಇವತ್ತು ಬೆಳಿಗ್ಗೆ ಹತ್ತು ಗಂಟೆಗೆ ರಕ್ತ ಕಾಣಲಿಕ್ಕೆ ಪ್ರಾರಂಭವಾಗಿ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ರಕ್ತ ಪೂರ್ಣವಾಗಿ ನಿಂತಿತು ಎಂದು ಸಂಕಲ್ಪಿಸಿದರೆ ಅದರ ಮಧ್ಯೆ ನಿರಂತರವಾಗಿ ರಕ್ತ ಸ್ರವಿಸಬೇಕು. ಆಗ ಮಾತ್ರ ಅದು ರಕ್ತ ಸ್ರಾವದ ರಕ್ತವಾಗಿ ಪರಿಗಣಿಸಲ್ಪಡುವುದು. ಹಾಗಂತ 24 ಗಂಟೆಯೂ ತೀರ್ವ ರಕ್ತ ಸ್ರಾವ ಉಂಟಾಗಬೇಕೆಂದಿಲ್ಲ. ಹತ್ತಿ ಅಥವಾ ಬಟ್ಟೆ ತುಂಡೋ, ಯೋನಿಯ ಒಳಗೆ ಹಾಕಿದರೆ ಅದರಲ್ಲಿ ಸುತ್ತಿ ಹಾಕುವಷ್ಟು ರಕ್ತವಿದ್ದರೆ ಸಾಕು, ಮೂತ್ರ ಮಾಡಿದ ಬಳಿಕ ಶುದ್ಧ ಮಾಡುವ ಯೋನಿಯ ಭಾಗದಲ್ಲಿ ರಕ್ತ ಸ್ರವಿಸಬೇಕೆಂಬ ನಿಬಂಧನೆಯಿಲ್ಲ.
ಅಷ್ಟರಲ್ಲಿ ದೂರದಲ್ಲಿ ಉನೈಸಾ ಅದ್ಯಾವುದೋ ಒಂದು ಸಂಶಯದಲ್ಲಿ ಎದ್ದು ನಿಂತಳು.
ಉನೈಸ: ಅದ್ಯಾವುದೋ ಒಂದು ಸಂಶಯವಿದ್ದಂತೆ ನಿಂತಿದ್ದೀಯಲ್ಲ? ಏನು ಹೇಳು ನೋಡೋಣ.
ಉನೈಸ:ಅಂತಹದ್ದೇನೂ ಇಲ್ಲ. ತಾವು ತೊಳೆಯಲು ಕಡ್ಡಾಯವಾದ ಸ್ಥಳ ಅಂತ ಹೇಳಿದ್ದೀರಿ. ಅದು ಯಾವುದು ಅಂತ ವಿವರಿಸಬಲ್ಲಿರಾ?
ನಸೀಹಾ: ಅದ್ಯಾವುದೆಂದರೆ ಒಂದು ಸ್ತ್ರೀ ಅವಳ ಕಾಲಿನ ಪಾದದ ಮೇಲೆ ಕುಳಿತುಕೊಂಡಾಗ ಯೋನಿಯ ಯಾವುದೆಲ್ಲ ಭಾಗಗಳು ಕಾಣಲ್ಪಡುತ್ತದೆಯೋ ಅವುಗಳನ್ನು ಶುದ್ದಿ ಮಾಡುವಾಗ ತೊಳೆಯುವುದು ಖಡ್ಡಾಯವಾಗುತ್ತದೆ. ಕನ್ಯಾಪೊರೆ ನೀಗದ ಹೆಣ್ಣಿಗಿಂತ ಹೆಚ್ಚಾಗಿ ಅದು ನೀಗಿದ ಸ್ತ್ರೀಗಳಲ್ಲಿ ಹೆಚ್ಚಿನ ಬಾಗಗಳು ತೆರೆದಿರುವುದು. ಅಷ್ಟು ಭಾಗ ನಜಸ್ ಹಾಗೂ ಇನ್ನಿತರ ಮಾಲಿನ್ಯಗಳಿಂದ ಶುದ್ಧವಾದಾಗ ಮಾತ್ರ ಶುದ್ದೀಕರಣ ಪೂರ್ಣವಾಗುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಈ ಬಗ್ಗೆ ಹೆಚ್ಚಿನ ಜಾಗೃತೆ ಅಗತ್ಯ. ಆ ಭಾಗದಲ್ಲಿ ರಕ್ತ ತೀವ್ರವಾಗಿ ಶ್ರಮಿಸಿದ್ದರೂ ಅದರ ಒಳಗೆ ಹತ್ತಿ ಇಟ್ಟಾಗ ರಕ್ತ ಹೊರಳುವಂತಿದ್ದರೆ ರಕ್ತಸ್ರಾವ ಇರುವುದಾಗಿ ಲೆಕ್ಕ ಹಾಕಬಹುದು.
ನಸೀಮಾ: ಹೈಳ್ ಹೆಚ್ಚೆಂದರೆ ಎಷ್ಟು ದಿನ ಉಂಟಾಗುತ್ತದೆ?
ನಸೀಹಾ:ಸಾಮಾನ್ಯವಾಗಿ ಆರೇಳು ದಿವಸ ಉಂಟಾಗುತ್ತದೆ. ಇನ್ನು ಹೆಚ್ಚೆಂದರೆ 15 ದಿವಸದವರೆಗೆ ಉಂಟಾಗುತ್ತದೆ.
ಅಷ್ಟರಲ್ಲಿ ಅದ್ಯಾವುದೋ ಒಂದು ಹೊಸ ಮುಖ ಎದ್ದು ನಿಂತದ್ದು ಕಂಡಿತು. ಯಾರೆಂದು ನೋಡಿದಾಗ ಅಷ್ಟರವರೆಗೂ ಪ್ರಶ್ನೆ ಕೇಳದ ರಸೀನಾ ಆಗಿತ್ತು ಅದು. ಅವಳ ಸಂಶಯ ಏನಾಗಿರಬಹುದೆಂದು ಎಲ್ಲರೂ ಶ್ರದ್ಧೆ ಇಟ್ಟು ಕೇಳಿದರು.
ರಸೀನಾ:ಒಂದಕ್ಕಿಂತ ಹೆಚ್ಚು ದಿನ ರಕ್ತ ಹೋಗಿ ಮಧ್ಯದಲ್ಲಿ ರಕ್ತ ತೀರಾ ಹೋಗದಿದ್ದರೆ ಆ ರಕ್ತ ಹೋಗದ ಸಮಯ ಹೈಳ್ ನ ಸಮಯವೆಂದು ಪರಿಗಣಿಸಬಹುದೇ?
ನಸೀಹಾ: ಇದು ರಸೀನಾಳ ಮೊದಲ ಪ್ರಶ್ನೆಯಾಗಿದ್ದರೂ ನಿನ್ನೆ ನಡೆದ ತರಗತಿಯ ಅತ್ಯಂತ ಮುಖ್ಯ ಭಾಗದಿಂದಾಗಿದೆ ಈ ಪ್ರಶ್ನೆ. ನಮ್ಮಲ್ಲಿ ಪ್ರಶ್ನೆ ಕೇಳದವರೂ ವಿಷಯ ಗಮನವಿಟ್ಟು ಆಲಿಸುತ್ತಾರಲ್ಲ ಎಂಬುವುದು ಸಮಾಧಾನ. ನಸೀಹಾ ಒಂದಿಷ್ಟು ಗಂಭೀರವಾಗಿಯೇ ತೆಗೆದುಕೊಂಡಳು. ಸರಿ!
ಒಂದಿಷ್ಟು ವಿಶಾಲವಾಗಿ ಅರ್ಥಮಾಡಬೇಕಾದ ವಿಷಯ. ಒಂದು ದಿನಕ್ಕಿಂತ ಹೆಚ್ಚಾಗಿ ರಕ್ತ ಹೋಗುವಾಗ ಮಧ್ಯೆ ಕೆಲವೊಂದು ದಿನ ರಕ್ತ ಹೋಗದೆ ಇರಬಹುದು. ಆಗಲೂ ಕೂಡ ಆ ದಿನಗಳನ್ನು ಹೈಳ್ ದಿನಗಳಾಗಿ ಸೇರಿಸಲ್ಪಡುವುದು. ಆದರೆ ಕೆಲವೊಂದು ವಿಷಯವನ್ನು ಇಲ್ಲಿ ಗಮನಿಸಲಿಕ್ಕಿದೆ..
ರಕ್ತ ಹೋಗುವ ಸಮಯ ಮತ್ತು ತೀರಾ ಹೋಗದ ಸಮಯಗಳೆರಡನ್ನು ಸೇರಿಸಿ 15 ದಿನಕ್ಕಿಂತ ಹೆಚ್ಚಾಗಬಾರದು. ಒಂದು ಹೆಣ್ಣಿಗೆ ಮೊದಲು ಒಂದು ದಿನ ರಕ್ತ ಕಂಡಿತು. ಸ್ವಲ್ಪ ಸಮಯದ ಬಳಿಕ ಅದು ನಿಂತಿತು. ಪುನಃ 14 ನೇ ದಿನ ರಕ್ತ ಕಂಡಿತು. ಮೊದಲ ದಿನ ಮತ್ತು 14 ನೇ ದಿನದ ರಕ್ತ ಕೊನೆಯಾಗುವವರೆಗೆ ಅವಳು ಹೈಳ್ ಗಾರ್ತಿ. ಅಂದರೆ ರಕ್ತ ಹೋದ ಮತ್ತು ತೀರಾ ಹೋಗದ ಸಮಯದ ಮಧ್ಯೆ 15 ದಿನಕ್ಕಿಂತ ಅಧಿಕವಾಗಿಲ್ಲ.
ಅಷ್ಟರಲ್ಲಿ ಝೀನತ್ ಎದ್ದು ನಿಂತು ಅದೇಕೆ ಹದಿನೈದು ದಿನ ಎಂಬ ಕಂಡಿಷನ್? ಎಂದು ಪ್ರಶ್ನಿಸಿದಳು.
ಅದೇಕೆಂದರೆ, ಹದಿನೈದು ದಿನಕ್ಕಿಂತ ಹೆಚ್ಚಾದರೆ ಅದು ರೋಗ ರಕ್ತ (ಇಸ್ತಿಹಾಲತ್) ಆಗುತ್ತದೆ. ಇನ್ನೊಂದು ವಿಷಯವೆಂದರೆ ಎಡೆ ಬಿಟ್ಟು ಕಾಣುವ ರಕ್ತ 24 ಗಂಟೆಗಿಂತ ಕಡಿಮೆಯಾಗಬಹುದು.
ಉದಾಹರಣೆಗೆ: ಒಬ್ಬಳಿಗೆ ಜನವರಿ ತಿಂಗಳು ಒಂದನೇ ದಿನದಿಂದ 15 ನೇ ದಿನದ ತನಕ ಎಡೆಬಿಟ್ಟು ರಕ್ತ ಕಂಡಿತು. ಅಂದರೆ ಮೊದಲ ದಿನ 5 ಗಂಟೆ, 2 ನೇದಿನ 8 ಗಂಟೆ, 4 ನೇ ದಿನ ಆರು ಗಂಟೆ, ಏಳನೇ ದಿನ 3 ಗಂಟೆ, ಎಂಟನೇ ದಿನ ಎರಡು ಗಂಟೆ. ಹದಿಮೂರು ಹದಿನಾಲ್ಕು, ಹದಿನೈದು ದಿನಗಳಲ್ಲಿ ಪ್ರತಿ ದಿನ ಒಂದೊಂದು ಗಂಟೆ ಕಂಡಿತೆಂದರೆ ಒಟ್ಟಾಗಿ 24 ಗಂಟೆಗಿಂತ ಹೆಚ್ಚು ಸಮಯ ರಕ್ತ ಕಂಡಿದ್ದರಿಂದ ಒಂದನೇ ದಿನಾಂಕದಿಂದ 15 ನೇ ದಿನಾಂಕದವರೆಗೆ ಹೈಳ್ ಗಾರ್ತಿಯಾಗುತ್ತಾಳೆ.
ಅಷ್ಟರಲ್ಲಿ ಸಫಿಯಾಳು ಎದ್ದು ನಿಂತು ನನಗೆ ಸಾಧಾರಣವಾಗಿ ಆರು ದಿನಗಳ ಕಾಲ ಹೈಳ್ ಇರುತ್ತದೆ. ಆ ಮಧ್ಯೆ ರಕ್ತ ನಿಲ್ಲುವ ರೂಢಿ ಇರುವುದರಿಂದ ರಕ್ತ ಸ್ರವಿಸುವ ಒಟ್ಟು ಅವಧಿಯನ್ನು ಲೆಕ್ಕ ಹಾಕಬೇಕೆ?
ನಸೀಹಾ: ಹೌದು, ನೀನು ರಕ್ತಸ್ರಾವ ಉಂಟಾಗುವ ಒಟ್ಟು ಸಮಯ ಲೆಕ್ಕ ಹಾಕಿ ನೋಡಬೇಕು. ಆಗ ಅದು 24 ಗಂಟೆಗಿಂತ ಕಡಿಮೆಯಾದರೆ ಹೈಳ್ ಎಂದು ಪರಿಗಣಿಸಲಾಗದು. ಅದೇ ಸಂದರ್ಭದಲ್ಲಿ ಮೊದಲು ಐದು ದಿನ ರಕ್ತ ಕಂಡು ಮತ್ತೆ ಹತ್ತು ದಿನ ರಕ್ತ ಕಾಣದೆ ಆ ಬಳಿಕ ಐದು ದಿನ ರಕ್ತ ಕಂಡರೆ ಎರಡನೆಯದ್ದಾಗಿ ಕಂಡ ರಕ್ತವನ್ನು ಹೈಳ್ ನ ಪೈಕಿ ಸೇರಿಸಲಾಗುವುದು. ಏಕೆಂದರೆ ಅವುಗಳ ಒಟ್ಟಾಗಿ ಹದಿನೈದು ದಿನಕ್ಕಿಂತಲೂ ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಅದನ್ನು ಬೇರೆಯೇ ಹೈಳ್ ಅಂತ ಪರಿಗಣಿಸಲಿಕ್ಕೂ ಆಗದು. ಏಕೆಂದರೆ ಎರಡು ಹೈಳ್ ಗಳ ಮಧ್ಯೆ ಇರಬೇಕಾದ ಕನಿಷ್ಠ ಶುದ್ದಿ ಎಂದರೆ ಹದಿನೈದು ದಿನವಾದರೂ ಇರಬೇಕು. ಒಂದು ಹೈಳ್ ಕಳೆದು ಹದಿನೈದು ದಿನಕ್ಕಿಂತ ಮುಂಚೆ ಮತ್ತೆ ರಕ್ತ ಕಂಡರೆ ಅದನ್ನು ಹೈಳ್ ಅಂತ ಹೇಳಿ ನಮಾಝ್ ಬಿಡಲಾಗದು. ಇದು ರೋಗ ರಕ್ತ ಅಂತ ಹೇಳಿ ನಸೀಹಾ ನೆಗಾಡ ತೊಡಗಿದಳು.
ಅಷ್ಟರ ಹೊತ್ತಿಗೆ ಆಯಿಶಾ ಎದ್ದು ನಿಂತು, ಗರ್ಭಿಣಿಗೆ ರಕ್ತ ಸ್ರಾವ ಉಂಟಾಗುವುದುಂಟೆ? ಎಂದು ಪ್ರಶ್ನಿಸಿದಳು.
ನಸೀಹಾ: ಹೌದು, ಉಂಟಾಗಬಹುದು. ಆ ಸಂದರ್ಭದಲ್ಲಿ ಮೇಲೆ ಹೇಳಿದಂತೆ 24 ಗಂಟೆಗಿಂತ ಕಡಿಮೆಯಾಗದೆ 15 ದಿನಕ್ಕಿಂತ ಹೆಚ್ಚಾಗದೆ ರಕ್ತ ಕಂಡರೆ ಅದು ಕೂಡಾ ಹೈಳ್ ರಕ್ತವಾಗಿದೆ. ಇದೀಗಾಗಲೇ ಹೊತ್ತು ಮೀರಿದೆ. ಇವತ್ತಿಗೆ ಇಲ್ಲಿ ನಿಲ್ಲಿಸೋಣ. ಇನ್ನು ತಡವಾದರೆ ನಮ್ಮ ಮನೆಯವರು ರಾತ್ರಿ ಹೊತ್ತು ಹಸಿದಿರಬೇಕಾದಿತು. ಅವರನ್ನು ಒಳ್ಳೆಯ ರೀತಿ ಉಪಚರಿಸುವುದು ನಮ್ಮ ಕರ್ತವ್ಯ ತಾನೆ? ಅದರಲ್ಲಿಯೂ ಮದುವೆಯಾದವರು ಹೆಚ್ಚಿನ ಗಮನಕೊಡಬೇಕು. ಹಗಲಿಡೀ ಬೆವರಿಳಿಸಿ ಕಷ್ಟಪಟ್ಟು ಪತಿಯಂದಿರು ಸಮಾಧಾನ ಪಡೆಯಲೆಂದು ರಾತ್ರಿ ಹೊತ್ತು ಮನೆಗೆ ಬಂದರೆ ಕ್ಷುಲ್ಲಕ ವಿಷಯಗಳನ್ನು ತೆಗೆದು ರಾದ್ಧಾಂತ ಮಾಡಿ ಅವರನ್ನು ಚಿಂತೆಗೀಡು ಮಾಡಿಸುವುದು ಸರಿಯಲ್ಲ. ನಿಮಗೆ ಗೊತ್ತಿರಬಹುದು ಉಮ್ಮು ಸಾಲಾಮಾ (ರ) ನ್ನು ಚರಿತ್ರೆ.
ತಾನು ಹೆತ್ತ ತನ್ನ ಕರುಳ ಕುಡಿ ಮರಣವಪ್ಪಿದಾಗಲೂ ಅಲ್ಲಾಹನ ವಿಧಿ ಎಂದು ಸಹಿಸಿ ದೃತಿಗೆಡದ ಆ ಮಹಾ ಮಹಿಳೆ ಪತಿ ತಲ್ಹತ್ ಬಂದಾಗ ತನ್ನ ದುಃಖವನ್ನು ಅವರಿಗೆ ತಿಳಿಸದೆ ಒಳ್ಳೆಯ ರೀತಿಯಲ್ಲಿ ಉಪಚರಿಸಿದ ಬಳಿಕ ತುಂಬು ಸಮಾಧಾನದಿಂದ ಕೇಳುತ್ತಾರೆ. ನನ್ನ ಪ್ರಾಣ ನಿಧಿಯೇ, ನಿಮ್ಮಲ್ಲೊಂದು ವಿಷಯ ಕೇಳಲೇ? ನಾವು ನೆರೆಯ ಮನೆಯಿಂದ ಏನನ್ನಾದರೂ ಎರವಲು ಪಡೆದುಕೊಂಡರೆ ಅದನ್ನು ಆಪೇಕ್ಷಿಸಿದ ಕೂಡಲೇ ಹಿಂತಿರುಗಿಸಬೇಕಲ್ಲವೇ?
ಹೌದು, ಕೂಡಲೇ ಖಡ್ಡಾಯವಾಗಿ ಹಿಂತಿರುಗಿಸಬೇಕು. ದೀನೀ ಕಾಳಜಿಯುಳ್ಳ ತಲ್ಹತ್ ಒಂದಿಷ್ಟು ಜೋರಾಗಿಯೇ ಹೇಳಿದರು. ಹಾಗಾದರೆ ಅಲ್ಲಾಹನು ನಮಗೆ ಕರುಣಿಸಿದ ಮಗುವನ್ನು ಅವನು ಇದೀಗ ಮರಳಿ ಕೇಳಿದ್ದಾನೆ. ಅಂದರೆ ನಮ್ಮ ಕರುಳ ಕುಡಿ ಅಲ್ಲಾಹನ ವಿಧಿಗೆ ಪಾತ್ರರಾಗಿ ಇಹಲೋಕ ತ್ಯಜಿಸಿದ್ದಾನೆ. ಇದನ್ನು ಕೇಳಿದ ತಲ್ಹತ್ ಮನನೊಂದರೂ ಕೂಡ ಪತ್ನಿಯ ತಾಳ್ಮೆಯ ಬಗ್ಗೆ ಚಿಂತಿಸಿ ಸುಮ್ಮನಾದರು. ಬೆಳ್ಳಂಬೆಳಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಾನಿಧ್ಯಕ್ಕೆ ತೆರಳಿದ ತಲ್ಹತ್ ನಡೆದ ಘಟನೆಯನ್ನು ಪ್ರವಾದಿﷺ ಯವರಿಗೆ ವಿವರಿಸಿದರು. ಪುತ್ರ ವಿಯೋಗದ ದುಃಖದ ಮಧ್ಯೆಯೂ ದೃತಿಗೆಡದೆ ತುಂಬು ಸಹನೆಯನ್ನು ಮೆಚ್ಚಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಅವರಿಗೆ ಬೇಕಾಗಿ ಪ್ರಾರ್ಥಿಸುತ್ತಾರೆ. ತತ್ಪಲವಾಗಿ ಅಲ್ಲಾಹು ಮರುವರ್ಷವೇ ಅವರಿಗೆ ಒಂದು ಮಗುವನ್ನು ಕರುಣಿಸುತ್ತಾನೆ. ನೆರೆಯವಳೊಂದಿಗೆ ಉಂಟಾದ ಸಣ್ಣ ಪುಟ್ಟ ವಿಷಯಗಳಿಗೆ ಹತ್ತು ಪಟ್ಟು ಸೇರಿಸಿ ಪತಿಯೊಡನೆ ಹೇಳಿ ರಾದ್ಧಾಂತಕ್ಕೆ ಕಾರಣವಾಗುವ ಮಹಿಳೆಯರಿಗೆ ಉಮ್ಮು ಸಲಾಮರ ಚರಿತ್ರೆ ಹೇಳಿಕೊಡಬೇಕು ತಾನೆ?
ಸಫಾನ:ಹೌದು, ಅಕ್ಕಾ ಕರ್ಮ ಶಾಸ್ತ್ರ ಕಲಿಯುವದರೊಂದಿಗೆ ಇಂತಹ ನೀತಿ ಪಾಠಗಳನ್ನು ಕಲಿಸಿಕೊಟ್ಟರೆ. ಹೆಚ್ಚು ಉಪಕಾರವಾದಿತು.
ನಸೀಹಾ: ಹೌದು ಸಫಾನ, ನನಗೆ ಕೂಡಾ ಅದೇ ಅಭಿಪ್ರಾಯವಿದೆ. ಎಲ್ಲ ಅಲ್ಲಾಹು ತೌಫೀಕ್ ನೀಡಲಿ, ಇನ್ನಷ್ಟು ವಿಷಯ ನಾಳೆ ತಿಳಿಯೋಣ...
ಆಯಿತು.. ನಾಳೆ ನಮಗೆ ನೋಡೋಣ..
ಮೂರು ಸ್ವಲಾತ್ ನೊಂದಿಗೆ ಆ ವೇದಿಕೆಯಿಂದ ವಿರಮಿಸಲಾಯಿತು..
ಮೂರನೇ ದಿನ
ನಸೀಹಾ ಕೋಣೆಗೆ ಬರುತ್ತಿದ್ದಂತೆ ಬಿರುಸಿನ ಚರ್ಚೆ ನಡೆಯುತ್ತಿತ್ತು. ಮುಖ್ಯವಾಗಿ ನಸೀಮಾ ಉನೈಸಾಳ ನಡುವೆಯಗಿತ್ತು ತರ್ಕ.
ಎಡರನೇ ಹೈಳ್ ನ ನಡುವೆ ಕನಿಷ್ಠ ಶುದ್ಧಿಯೆಂದರೆ ಹದಿನೈದು ದಿನವಾದರೂ ಇರಬೇಕು ತಾನೆ? ಹಾಗಾದರೆ ಹೆರಿಗೆ ರಕ್ತ ಮತ್ತು ಹೈಳ್ ನ ಮಧ್ಯೆ ಈ ನಿಯಮ ಭಾದಕವೋ ಎಂಬುವುದಾಗಿತ್ತು ಅವರ ಸಂಶಯ.
ನಸೀಹಾ: ಸರಿ, ನಾನು ಹೇಳುತ್ತೇನೆ. ಮೊದಲು ಇಲ್ಲಿ ಮಾತು ಕೇಳುವಾಗ ಯಾರದ್ದೋ ಗೀಬತ್ ಆಗಿರಬಹುದೇನೋ ಎಂದು ಶಂಕಿಸಿದ್ದೆ. ಏಕೆಂದರೆ ಸ್ತ್ರೀಗಳು ಎಲ್ಲಿ ಸೇರುತ್ತಾರೋ ಅಲ್ಲಿ ಅನ್ಯರ ಹಸಿಮಾಂಸ ತಿನ್ನುವ ಕಾಯಕ ಪ್ರಾರಂಭವಾಗುವುದು ಸರ್ವೇ ಸಾಮಾನ್ಯ ಹಸಿ ಮಾಂಸ ತಿನ್ನುವುದೆಂದು ಪ್ರವಾದಿ ಸಲ್ಲಲ್ಲಾಹು ಅಲೂಹಿವಸಲ್ಲಂ ರವರು ಹೇಳಿದ್ದಾರೆ. ಯಾವ ತಪ್ಪಿಗೂ ಪಶ್ಚಾತಾಪ ಪಟ್ಟರೆ ಕ್ಷಮೆ ಸಿಗಬಹುದು, ಆದರೆ ಗೀಬತ್ ಹಾಗಲ್ಲ! ಗೀಬತ್ ಹೇಳಲ್ಪಟ್ಟವನು ಮಾಫ್ ನೀಡದಿದ್ದರೆ ಇದಕ್ಕೆ ಕ್ಷಮೆ ಇಲ್ಲ. ನಾಳೆ ಪರಲೋಕದಲ್ಲಿ ಗೀಬತ್ ಹೇಳಿದವನ ಪ್ರತಿಫಲವನ್ನು ಹೇಳಲ್ಪಟ್ಟವನ ಖಾತೆಗೆ ಸೇರಿಸುವಾಗ ಬೆರಳು ಕಚ್ಚುವ ಸನ್ನಿವೇಶ ನಿರ್ಮಾಣವಾಗುತ್ತದೆ. ನಮ್ಮನ್ನು ಅಲ್ಲಾಹು ಕಾಪಾಡಲಿ.
ನಾವು ಯಾರ ಬಗ್ಗೆ ಏನೆಂದರೂ ಕೂಡ ಇಲ್ಲದ್ದನ್ನು ಹೇಳುವುದಿಲ್ಲ ತಾನೆ? ಯಾರೋ ಮೂಲೆಯಲ್ಲಿ ಗೋನಗುವುದು ನಸೀಹಾಳಿಗೆ ಕೇಳಿಸಿತು.
ನಸೀಹಾ: ಇದ್ದದ್ದಾದರೂ ಕೂಡ ಅವನಿಗೆ ಇಷ್ಟವಿಲ್ಲದ್ದಾಗಿದ್ದರೆ ಅದು ಗೀಬತ್. ಇಲ್ಲದ್ದನ್ನು ಹೇಳುವುದು ಸುಳ್ಳು ಕೂಡಾ ಹೌದು! ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಜಾಗೃತೆ ಅಗತ್ಯ! ಅದೇನೇ ಇರಲಿ, ನಾವು ಚರ್ಚೆಗೆ ಹೊಗೋಣ. ತರ್ಕವಿಷಯ ಬಾಕಿ ಇದೆ. ಅಂದ ಹಾಗೆ ಇಬ್ಬರ ಚರ್ಚಿಯಲ್ಲೂ ಹುರುಳು ಇದೆ. ನಿಫಾಸ್‌ನ ದಿನಗಳಲ್ಲಿ ಅತ್ಯಂತ ಹೆಚ್ಚು ಅಂದರೆ 60 ದಿನಗಳಾಗಿವೆ. ಆ 60 ದಿನದಲ್ಲಿ ಶುದ್ಧಿಯಾದ ಬಳಿಕ ಹೈಳ್ ಗೆ 15 ದಿನದ ಅಗತ್ಯವಿಲ್ಲ. 60 ದಿನಗಳ ಕಾಲ ಹೆರಿಗೆ ರಕ್ತಹೋದ ಹೆಣ್ಣಿಗೆ ಅದು ನಿಂತು ಶುದ್ಧಿಯಾದ ಅಲ್ಪ ಸಮಯದ ಬಳಿಕ ಮತ್ತೆ ರಕ್ತ ಕಂಡರೆ ಅದು ಹೈಳಾಗುತ್ತದೆ. ಆಂದರೆ ಇಲ್ಲಿ ಹೈಲ್ ನಿಫಾಸ್ ರಕ್ತದ ನಡುವೆ ಈ ಶುದ್ಧಿಯ ನಿಯಮ ಅನ್ವಯಿಸುವುದೇ ಇಲ್ಲ. ಆದರೆ 60 ದಿನಕ್ಕಿಂತ ಮುಂಚೆ ರಕ್ತ ನಿಂತಿತು. ಆ ಬಳಿಕ ಹದಿನೈದು ದಿನಕ್ಕೆ ಮುನ್ನಾ ಮತ್ತೆ ರಕ್ತ ಕಂಡರೆ ಅದು ಹೈಲ್ ಅಲ್ಲ, ನಿಫಾಸ್ ಆಗುತ್ತದೆ. ದಿನಗಳಿಗಿಂತ ಮುಂಚೆ ರಕ್ತ ನಿಂತು ಮತ್ತೆ 15 ದಿನಗಳ ಬಳಿಕ ರಕ್ತ ಕಂಡರೆ ಅದು ಆರ್ಥವವಾಗಿರುತ್ತದೆ. ಇಲ್ಲಿ ಆ ಶುದ್ಧಿ ಅನ್ವಯಿಸುತ್ತಿದೆ ಎಂದು ಸಿಕ್ಕಿತು.
ಹಾಗಾದರೆ ನಾವು ಇದೀಗ ಹೆರಿಗೆ ರಕ್ತದ ಬಗ್ಗೆ ಸಾಕಷ್ಟು ನೋಡಿಲ್ಲವಲ್ಲ? ವೇದಿಕೆಯಲ್ಲಿದ್ದ ಝೀನತ್ ಅಭಿಪ್ರಾಯಪಟ್ಟಳು.
ಹೌದು! ಝೀನತ್, ನಿಫಾಸ್ ಅಥವಾ ಹೆರಿಗೆ ರಕ್ತದ ಬಗ್ಗೆ ಇನ್ನಷ್ಟು ನೋಡಬೇಕು. ಎಲ್ಲರೂ ಎದ್ದು ಕುಳಿತುಕೊಳ್ಳಿ ಎಂದಳು ನಸೀಹಾ.
ನಿಫಾಸ್ ಅಂದರೆ ಏನೂ ಅಂತ ಹೇಳಬಲ್ಲಿರಾ? ನಸೀಹಾ ಪ್ರಶ್ನೆ ಹಾಕಿದಳು. ಹೆರಿಗೆಯ ಬಳಿಕ ಕಂಡು ಬರುವ ರಕ್ತ ಅಂತ ಎಲ್ಲರೂ ಒಟ್ಟಾಗಿ ಹೇಳಿದರು.
ಹೌದು! ಅಂದರೆ ಗರ್ಭಾಶಯ ನೀಗಿದ ಬಳಿಕ ಹೊರಡುವ ರಕ್ತ. ಗರ್ಭಾಶಯ ನೀಗಿದ ಬಳಿಕ ಅನ್ನಲು ಕಾರಣವೇನು? ಸಫೀಯಾ ಮರು ಪ್ರಶ್ನೆ ಹಾಕಿದಳು.
“ಅದು ನಿಮಗೆ ಅವಳಿ ಮಕ್ಕಳನ್ನು ಹೆತ್ತ ಆಯಿಶಾ ದಾದರಲ್ಲಿ ಕೇಳಿದರೆ ಸುಲಭವಾಗಿ ತಿಳಿಯಬಹುದು. ಒಂದು ಮಗುವನ್ನು ಹೆತ್ತು ಇನ್ನೊಂದು ಮಗುವನ್ನು ಹೆರುವ ಮುನ್ನ ಹೋಗುವ ರಕ್ತವನ್ನು ನಿಫಾಸ್ ಅನ್ನಲಾಗದು. ಏಕೆಂದರೆ ಅಲ್ಲಿ ಗರ್ಭಾಶಯ ಸಂಪೂರ್ಣ ನೀಗಿಲ್ಲ. ಆ ರಕ್ತ ಹೈಳ್ ನ ನಿಬಂಧನೆಯಂತೆ 24 ಗಂಟೆಗಿಂತ ಕಡಿಮೆಯಾಗದಿದ್ದಲ್ಲಿ ಅದು ಹೈಳ್ ಅಂತ ಗಣಿಸಬೇಕು.
ಮೈಮೂನಾ ಎದ್ದು ನಿಂತು ಹಾಗಾದರೆ ಒಂದು ಸಂಶಯ; ಈ ಪ್ರಕಾರ ಹೆರಿಗೆ ನೋವು ಪ್ರಾರಂಭಿಸಿದಾಗ ರಕ್ತ ಕಾಣಲು ತೊಡಗಿದರೆ ಅದನ್ನು ಕೂಡ ನಿಫಾಸ್‌ಗೆ ಸೇರಿಸಲಾಗುವುದಿಲ್ಲವಲ್ಲಾ?
ನಸೀಹಾ: ಸರಿ! ಅದನ್ನು ನಿಫಾಸ್ ಅನ್ನಲಾಗದು. ಹೆರಿಗೆ ನೋವು ಕಂಡಾಗ ರಕ್ತ ಕಾಣಲು ಪ್ರಾರಂಭಿಸಿ ಗರ್ಭಾಶಯ ನೀಗುವವರೆಗೆ ಕಾಣುವ ರಕ್ತ ನಿಫಾಸ್ ಅನ್ನಲಾಗದು. ಅದು ಮೊದಲಿನ ಹೈಳ್ ನೊಂದಿಗೆ ಸೇರಿ ಬಂದರೆ ಅದು ಹೈಳ್ ಅಥವಾ ಇಲ್ಲದಿದ್ದರೆ ರೋಗ ರಕ್ತ.
ಮೊದಲ ಆರ್ಥವದೊಂದಿಗೆ ಸೇರಿಸುವುದು ಹೇಗೆ? ಹೆರಿಗೆಗೆ ಮುನ್ನ ಹೈಳ್ ಇರುತ್ತಾ? ಎಂಬುವುದಾಗಿತ್ತು ಫಾಸಿಲಾಳ ಸಂಶಯ.
ಹೌದು! ಫಾಸಿಲಾ, ಅಪೂರ್ವವಾದರೂ ಹಾಗೆ ಉಂಟಾಗಬಾರದು ಅಂತ ಇಲ್ಲ. ಗರ್ಭಿಣಿಯಿಂದಾದರೂ ಹೈಳ್ ನ ನಿಯಮಕ್ಕನುಗುಣವಾಗಿ ರಕ್ತಹೋದರೆ ಅದು ಹೈಳ್ ಅನ್ನಬೇಕು. ಗರ್ಭ ಪೂರ್ಣವಾಗುವುದಕ್ಕೆ ಮುಂಚೆ ಅಥವಾ ಮಗುವಿಗೆ ಮನುಷ್ಯ ರೂಪ ಪ್ರಾಪ್ತಿಯಾಗುವ ಮುನ್ನ ಹೆರಿಗೆಯಾಗಿ ರಕ್ತ ಹೋದರೆ ಅದರ ಹೆಸರೇನು? ಫಾಸಿಲಾ ಮರುಪ್ರಶ್ನೆ ಹಾಕಿದಳು.
ನಸೀಹಾ: ಹೌದು, ಒಂದು ಪೂರ್ಣ ರೂಪದ ಮಗುವನ್ನೇ ಹೆರಿಗೆಯಾಗಬೇಕೆಂದು ಇಲ್ಲ. ರಕ್ತಗಟ್ಟೆ, ಮಾಂಸ ಪಿಂಡ ಏನಾದರೂ ಸರಿ! ಹೆರಿಗೆಯಾಗಿ ರಕ್ತ ಹೋದರೆ ಅದು ನಿಫಾಸ್ ಆಗುತ್ತದೆ.
ಹೆರಿಗೆಯಾಗಿ ರಕ್ತ ಸ್ರವಿಸಿತು. ಆದರೆ 24 ಗಂಟೆ ಕಾಲ ಏನೋ ಅದು ಮುಂದುವರಿಯದ ಬರೀ ನಾಲೈದು ಗಂಟೆಯಲ್ಲಿ ನಿಂತಿತು. ಹಾಗಾದರೆ ಆ ರಕ್ತ ನಿಫಾಸಾ? ನಸೀಮಾಳೆ ಹೊಸ ಸಂಶಯ.
ನಸೀಹಾ:ಹೌದು ನಸೀಮಾ, ಏಕೆಂದರೆ ಹೆರಿಗೆ ರಕ್ತದ ಅತ್ಯಂತ ಕನಿಷ್ಟ ಅವಧಿ ಒಂದು ಸೆಕೆಂಡ್ ಮಾತ್ರ ಸಾಧಾರಣವಾಗಿ 40 ದಿನ ಇನ್ನೂ ಹೆಚ್ಚೆಂದರೆ 60 ದಿನ. ನಾಲೈದು ದಿನದಲ್ಲಾಗಲೀ ಅಥವಾ ಒಂದೈದು ನಿಮಿಷದಲ್ಲಿ ಆಗಲಿ ರಕ್ತ ನಿಂತರೆ ಆಗಲೇ ಸ್ನಾನ ಮಾಡಿ ಶುದ್ಧಿಯಾಗಿ ನಮಾಝ್ ಮಾಡುವುದು ಕಡ್ಡಾಯ. ಅದಕ್ಕೆ 40 ದಿನ ಆಗಬೇಕೆಂಬ ನಿಯಮವೇನೂ ಇಲ್ಲ.
ನಲ್ವತ್ತರ ಸ್ನಾನ ಮಾಡುವುದು ಹೇಗೆ? ವಯಸ್ಸಾಗಿದ್ದ ಸ್ತ್ರೀಯೊಬ್ಬರು ಕೇಳಿದ್ದರು. ನಸೀಹಾಳ ಮನಸ್ಸಿನಲ್ಲಿ ನಗೆ ಬಂದರೂ ಅದನ್ನು ತೋರಿಸದೆ, ಉಮ್ಮಾ-ನಲ್ವತ್ತರ, ಇಪ್ಪತ್ತರ ಸ್ನಾನಂತ ವಿಶೇಷ ಸ್ಥಾನವಿಲ್ಲ. ಯಾವಾಗ ರಕ್ತ ನಿಲ್ಲುತ್ತದೆಯೋ ಆಗ ಸ್ನಾನ ಕಡ್ಡಾಯವಾಗುತ್ತದೆ. 20 ಕ್ಕೆ ನಿಂತರೆ 20 ರಂದೇ ಸ್ನಾನ ಮಾಡಿ ನಮಾಝ್ ಮಾಡಲು ಪ್ರಾರಂಭಿಸಬೇಕು. ನಲ್ವತ್ತು ದಿನ ಕಳೆದ ಬಳಿಕವೂ ರಕ್ತ ನಿಲ್ಲದಿದ್ದರೆ ಅದು ಯಾವಾಗ ನಿಲ್ಲುತ್ತದೋ ಆಗ ಸ್ನಾನ ಮಾಡಬೇಕೇ ಹೊರತು, ನಲ್ವತ್ತರ ಸ್ನಾನ ಎಂದು ವಿಶೇಷ ಸ್ನಾನಮಾಡಬೇಕಾದ ಅಗತ್ಯವಿಲ್ಲ! ಇನ್ನು ಹೆರಿಗೆಯಾದ ತಕ್ಷಣ ರಕ್ತ ಕಾಣಲಿಲ್ಲ. ಆ ಬಳಿಕ ಒಂದೆರಡು ದಿನಗಳು ಕಳೆದಾಗ ರಕ್ತ ಕಂಡರೆ ಅದು ನಿಫಾಸ್ ಆಗಿರುತ್ತದೆ ಎಂದು ಮೈಮೂನಾಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಸೀಹಾ ಹಳಿದಳು;
ಹೆರಿಗೆಯಾಗಿ ರಕ್ತ ಕಾಣುವವರೆಗಿನ ಬಿಡುವಿನ ದಿವಸ ಶುದ್ಧಿಯುಳ್ಳದಾಗಿದ್ದು, ಆ ಸಮಯದಲ್ಲಿ ಶುದ್ದಿ ಇರುವ ಮಹಿಳೆಗೆ ಕಡ್ಡಾಯವಾಗುವುದೆಲ್ಲವೂ ಇವಳ ಮೇಲೆ ಕಡ್ಡಾಯವಾಗಿರುತ್ತದೆ. ಆದರೆ 60 ದಿನದ ಲೆಕ್ಕಾಚಾರ ಹೆರಿಗೆಯ ದಿನದಿಂದ ಪ್ರಾರಂಭವಾಗಿರುತ್ತದೆ. ಇನ್ನು ಹೆರಿಗೆಯಾಗಿ ರಕ್ತ ಕಾಣುವುದು ಹದಿನೈದು ದಿನಗಳ ಬಳಿಕ ಆದರೆ ಅದು ನಿಫಾಸ್ ಅಲ್ಲ . ಬದಲಾಗಿ ಹೈಳ್ ಆಗಿರುತ್ತದೆ. ಅವಳಿಗೆ ನಿಫಾಸ್ ರಕ್ತ ತೀರಾ ಇಲ್ಲಂತ ಲೆಕ್ಕ ಹಾಕಬಹುದು ಎಂದು ಚುಟುಕಾಗಿ ವಿವರಿಸಿದ ನಸೀಹಾ ಇವತ್ತಿಗೆ ನಮ್ಮ ತರಗತಿ ನಿಲ್ಲಿಸೋಣ ನಾಳೆ ಇನ್ಶಾ ಅಲ್ಲಾಹ್ ಬಾಕಿ ಮುಂದುವರಿಸೋಣ ಆಂತ ಹೇಳಿದಳು.
ನಾಲ್ಕನೇ ದಿನ
ಒಂದಿಷ್ಟು ದೂರದ ಮನೆಯ ಆಸಿಯಾ ಅವತ್ತು ಎಲ್ಲರಿಗಿಂತಲೂ ಬೇಗ ಬಂದಿದ್ದಳು. ಮದ್ರಾಸಕ್ಕೆ ತೀರಾ ಹೋಗದ ಅವಳಿಗೆ ನಸೀಹಾಳ ತರಗತಿ ಅತ್ಯಂತ ಉಪಯುಕ್ತವೆನಿಸಿತ್ತು. ಏನೋ, ಆಸಿಯಾ! ಇವತ್ತು ಬೇಗನೇ ಬಂದಿದ್ದೀಯಾಲ್ಲಾ, ವಿಶೇಷವೇನಾದರೂ ಇದೆಯಾ ಎಂದು ನಸೀಹಾ ನಗು ಮುಖದಿಂದಲೇ ಕೇಳಿದಳು.
'ಇಲ್ಲಕ್ಕಾ, ಇವತ್ತು ಬೀಡಿ ಕೊಡಲಿಕ್ಕೆ ಇಲ್ಲದಿರುವುದರಿಂದ ಬೇಗ ಬಂದೆ ಅಷ್ಟೆ. ಮತ್ತೊಂದು ಸಂಶಯ ಕೂಡ ಇದೆ. ಹೈಳ್ ಇರುವ ಸಮಯ ಪತಿಯ ಒಟ್ಟಿಗೆ ಕುಳಿತು ಊಟಮಾಡಬಾರದು, ಮುಸ್ಹಫ್ ಓದಬಾರದು ಹೆಚ್ಚೇಕೆ ನಮಾಝ್ ಕೂಡಾ ಮಾಡಬಾರದು ಅಂತ ಹೇಳುತ್ತಾರಲ್ಲ. ಇದು ಸರಿಯೇ?
ನಸೀಹಾ: ಹೌದು! ಇಲ್ಲಿ ಕೆಲವೊಂದು ವಿಷಯ ತಿಳಿಯಬೇಕಾಗಿದೆ. ಈ ಕುರಿತು ಇವತ್ತು ಹೇಳಬೇಕೆಂದು ಭಾವಿಸಿದ್ದೆ. ನಿನ್ನ ಪ್ರಶ್ನೆ ಅದಕ್ಕೊಂದು ಪೂರಕವಾಯಿತು. ಎಲ್ಲರೂ ಬಂದರಲ್ಲ ಹಾಗಾದರೆ ನಾವು ಪ್ರಾರಂಭಿಸೋಣ. ಆಸಿಯಾಳ ಪ್ರಶ್ನೆಯೊಂದಿಗೆ ತರಗತಿ ಕೂಡ ಪ್ರಾರಂಭವಾಯಿತು.
ಆಸಿಯಾಳು ಸೂಚಿಸಿದಂತೆ ಕೆಲವೊಂದು ಕಾರ್ಯ ಹೈಳ್ ಇರುವ ಮಹಿಳೆಯರಿಗೆ ನಿಷಿದ್ಧವಾಗಿರುತ್ತದೆ. ಅದೇನೆಂದರೆ ದೊಡ್ಡ ಅಶುದ್ಧಿ, ಚಿಕ್ಕ ಅಶುದ್ಧಿಯ ಸಮಯ ನಿಷಿದ್ಧವಾದುದೆಲ್ಲವೂ ನಿಷಿದ್ಧ. ಅದರೊಂದಿಗೆ ಅವಳ ಹೊಕ್ಕುಳು ಮತ್ತು ಮೊಣಕಾಲು ನಡುವೆ ಇರುವ ಸ್ಥಳದಲ್ಲಿ ಪತಿಗೆ ಸುಖಾಸ್ವದಿಸುವುದು ಕೂಡಾ ನಿಷಿದ್ಧವಾಗಿದೆ. ಅಲ್ಲದೆ ಉಪವಾಸ ಹಿಡಿಯುವುದು ನಿಷಿದ್ಧ.
ದೊಡ್ಡ ಅಶುದ್ಧಿ ಎಂದರೇನು? ಆಗ ನಿಷಿದ್ಧವಾದ ಕಾರ್ಯಗಳು ಯಾವುವು? ರಝಿಯಾ ಕೇಳಿದಳು.
ನಸೀಹಾ; ಇಂದ್ರಿಯ ಸ್ಖಲನ ಉಂಟಾಗುವುದರಿಂದಲೂ, ಪುರುಷನ ಶಿಶ್ನದ ಆಗ್ರಭಾಗ ಸ್ತ್ರೀಯ ಯೋನಿಯ ಒಳಗೆ ಪ್ರವೇಶಿಸಿವುದರಿಂದಲೂ ಜನಾಬತ್ (ದೊಡ್ಡ ಅಶುದ್ದಿ) ಉಂಟಾಗುತ್ತದೆ. ಈ ಸಂದರ್ಭ ನಮಾಝ್, ತಿಲಾವತ್‌ನ ಸುಜೂದ್, (ಖುರಾನ್ ಪಾರಾಯಣದ ಮಧ್ಯೆ ಮಾಡುವ ಸುಜೂದ್) ಅನುಗ್ರಹಕ್ಕೆ ಪ್ರತಿಫಲವಾಗಿ ಮಾಡುವ ಸುಜೂದ್, ತವಾಫ್, ಮುಸ್ಹಫ್ ಓದುವುದು ಮತ್ತು ಸ್ಪರ್ಶಿಸುವುದು, ಮಸೀದಿಯಲ್ಲಿ ತಂಗುವುದು, ಉಪವಾಸ ಅನುಷ್ಠಾನ ಮಾಡುವುದು, ಮೊಣಕಾಲು ಹೊಕ್ಕಳುಗಳ ಮಧ್ಯೆ ಸುಖಾಸ್ವಾದಿಸುವುದು, ಹೈಳ್ ಗಾರ್ತಿಗೆ ಹರಾಮ್ ಆಗಿದೆ. ಈ ಎಲ್ಲಾ ಕಾರ್ಯಗಳು ಹೆರಿಗೆ ರಕ್ತಗಾರ್ತಿಗೂ (ನಿಫಾಸ್) ಹರಾಮ್ ಆಗಿದೆ.
ರಕ್ತ ಸ್ರಾವದ ಅವಧಿ ಅಲ್ಲದ ಸಮಯ ಸ್ತ್ರೀಗೆ ನಮಾಝ್ ಮತ್ತು ಇಹ್ತಿಕಾಫ್ ಕೂರಲು ಮಸೀದಿಗೆ ಹೋಗಬಹುದೇ? ಒಂದಿಷ್ಟು ಕಲಿತಿದ್ದ ರಸೀನಾಳ ಪ್ರಶ್ನೆ.
ನಸೀಹಾ; ಹೌದು! ಈ ವಿಷಯ ಕೇಳಬೇಕಾದುದ್ದೆ, ಪ್ರಶ್ನೆ ಕೇಳಿದ್ದು ಒಳ್ಳೆಯದಾಯಿತು. ಸ್ತ್ರೀ ನಮಾಝ್ ಮಾಡಬೇಕಾದುದು ಮನೆಯೊಳಗಿನ ಕೋಣೆಯಲ್ಲಾಗಿದೆ. ಅದಾಗಿದೆ ಅವರಿಗೆ ಶ್ರೇಷ್ಠತೆ ಕೂಡ. ಇವತ್ತು ಹೆಣ್ಣು ಜುಮುಅ ಜಮಾಅತಿಗೆ ಬರುವುದರಿಂದ ಅನಾಚಾರಗಳು ನಡೆಯಲು ಹೆಚ್ಚಿನ ಸಾಧ್ಯತೆಯಿರುವುದರಿಂದ ಕರ್ಮಶಾಸ್ತ್ರ ಪಂಡಿತರು ಅದು ಹರಾಂ ಎಂದಿದ್ದಾರೆ.
ಅಷ್ಟರಲ್ಲಿ ಮೈಮೂನ ಎದ್ದು ನಿಂತು ಕೊಂಡು ಒಬ್ಬಳು ನಮಾಝ್ ಮಾಡುತ್ತಿರುವಾಗ ಹೈಳ್ ಉಂಟಾದರೆ ಏನು ಮಾಡಬೇಕು? ಎಂಬ ಹೊಸ ಸಂಶಯ ಮುಂದಿಟ್ಟಳು.
ನಸೀಹಾ; ಕೂಡಲೇ ನಮಾಝನ್ನು ಉಪೇಕ್ಷಿಸಬೇಕು. ಅದು ಪೂರ್ತಿಯಾಗಲಿಕ್ಕೆ ಕಾಯಬಾರದು. ಹೈಳ್ ಗಾರ್ತಿಗೆ ಫರ್‌ಳ್, ಸುನ್ನತ್ತಾದ ಎಲ್ಲಾ ವಿಧ ನಮಾಝ್ ಕೂಡ ಹರಾಮ್. ಶುದ್ಧಿಯಾದ ಬಳಿಕ ಅದನ್ನು ಖಳಾ ಮಾಡಲಿಕ್ಕೂ ಇಲ್ಲ.
ಅಷ್ಟರಲ್ಲಿ ಮೂಲೆಯಲ್ಲಿ ಎದ್ದುನಿಂತ ಮೈಮೂನ ನನ್ನ ಗೆಳತಿಯೊಬ್ಬಳಿಗೆ ನಿನ್ನೆ ಮಧ್ಯಾಹ್ನ ಎರಡು ಗಂಟೆಗೆ ರಕ್ತ ಸ್ರಾವ ಉಂಟಾಯಿತು ಅವಳು ಅದಕ್ಕಿಂತ ಮುಂಚೆ ಲುಹರ್ ನಮಾಝ್ ಮಾಡಲಿಲ್ಲ. ಹಾಗಾಗಿ ಶುದ್ಧಿಯಾದ ಬಳಿಕ ಅದನ್ನು ಖಳಾ ಮಾಡಬೇಕೆಂದು ಅವಳಲ್ಲಿ ನಾ ಹೇಳಿದ್ದೆ. ಆದರೆ ಅದಕ್ಕೆ ಅವಳು ಒಪ್ಪಲಿಲ್ಲ. ಇದರ ವಿಧಿ ಹೇಳುವಿರಾ?
ನಸೀಹಾ; ಹೌದು, ಮೈಮೂನಾ ಹೇಳಿದ್ದು ಸರಿ! ನಮಾಝ್ ಒಂದರ ಸಮಯ ದಾಟಿ ಕನಿಷ್ಠ ಫರ್ಳ್ ಮಾತ್ರ ನಿರ್ವಹಿಸಿ ನಮಾಝ್ ಮಾಡುವಷ್ಟು ಸಮಯ ಸಿಕ್ಕಿದರೆ ಆ ನಮಾಝ್ ಖಳಾ ನಿರ್ವಹಿಸುವುದು ಅಗತ್ಯ. ಮೇಲೆ ಹೇಳಿದಷ್ಟು ಸಮಯ ಸಿಗದಿದ್ದಲ್ಲಿ ಅದನ್ನು ಖಳಾ ಮಾಡಬೇಕೆಂದಿಲ್ಲ. ಅಂದರೆ ಲುಹರ್ ಬಾಂಗ್ 12.30 ಕ್ಕೆ ಅಂತ ಇಟ್ಟುಕೊಳ್ಳೋಣ. ಹಾಗಾದರೆ 12.33 ಕ್ಕಿಂತ ಮುಂಚೆ ರಕ್ತ ಸ್ರಾವ ಉಂಟಾದರೆ ಖಳಾ ಮಾಡಬೇಕೆಂದಿಲ್ಲ. ಬಳಿಕ ಉಂಟಾದರೆ ಮಾಡಬೇಕು, ಅರ್ಥವಾಯಿತು ತಾನೆ? ಎಲ್ಲರು ತಲೆಯಾಡಿಸಿದರು.
ಫಾಸಿಲಾ ಎದ್ದು ನಿಂತು, ರಕ್ತ ಸ್ರಾವದ ಮುಂಚೆ ಶುದ್ಧಿ ಮತ್ತು ನಮಾಝ್ ಎರಡಕ್ಕೂ ಸಮಯ ಸಿಕ್ಕರೆ ಮಾತ್ರ ಆ ನಮಾಝ್ ಕಡ್ಡಾಯ ಎಂದು ಎಲ್ಲೋ ಓದಿದ ನೆನಪಾಗುತ್ತಿದೆ. ಅದರ ಅರ್ಥವೇನು?
ನಸೀಹಾ; ಹೌದು ಫಾಸಿಲಾ! ನೀವು ಓದಿದ್ದು ಸರಿ! ಆದರೆ ಅದು ಈ ವಿಷಯಕ್ಕೆ ಸಂಬಂಧಿಸಿದ್ದಲ್ಲ. ತಯಮ್ಮುಮ್ ಮಾಡುವವನಿಗೆ ನಿತ್ಯ ಆಶುದ್ಧಿಯುಳ್ಳವನ ಶುದ್ಧಿಯಾಗದೆ ಸಮಯವಾದ ಬಳಿಕ ಮಾಡಬೇಕಾದದ್ದು. ಅದು ಸಮಯಕ್ಕಿಂತ ಮುಂಚೆ ಕೂಡದು. ಆದ್ದರಿಂದ ಅವರಿಗೆ ಸಮಯವಾದ ಬಳಿಕ ಅಷ್ಟು ಸಮಯ ದೊರೆತರೆ ಮಾತ್ರ ಖಳಾ ಮಾಡಲು ಕಡ್ಡಾಯವಿರುವುದು. ಇತರರಿಗೆ ಕನಿಷ್ಠ ಫರ್ಳ್ ಮಾಡಲು ಬೇಕಾದಷ್ಟು ಸಮಯ ಸಿಕ್ಕರೆ ಸಾಕು. ಅಷ್ಟರಲ್ಲಿ ಎದ್ದು ನಿಂತ ರಸೀನಾ ಆಗ ತಾವು ಹೇಳಿದ ಹಾಗೆ ನಮಾಝ್ ಮಾಡುತ್ತಿರುವಾಗ ಋತುಮತಿಯಾದರೂ ಇದು ಭಾದಕವೇ? ಎಂದು ಪ್ರಶ್ನಿಸಿದರು.
ಹೌದು! ರಸೀನಾ, ರಕ್ತ ಸ್ರಾವ ಆದ ಕೂಡಲೇ ನಮಾಝ್ ಉಪೇಕ್ಷಿಸಬೇಕು. ಆದರೆ ಹೊತ್ತಾದ ಬಳಿಕ ರಕ್ತ ಸ್ರಾವವಾಗುವುದಕ್ಕಿಂತ ಮುಂಚೆ ಕನಿಷ್ಠ ಫರ್‌ಲ್ ಮಾಡುವ ಸಮಯ ಸಿಕ್ಕಿದರೆ ಪುನಃ ನಮಾಝ್ ಮಾಡಬೇಕು. ಇನ್ನು ಒಂದು ನಮಾಝಿನ ಕೊನೆಯಲ್ಲಿ ಒಂದು ತಕ್ಬೀರತುಲ್ ಇಹ್ರಾಂ ಹೇಳಲಿಕ್ಕಿರುವ ಸಮಯ ಮಾತ್ರ ಬಾಕಿ ಇರುವಾಗ ಒಬ್ಬಳ ರಕ್ತ ಸ್ರಾವ ನಿಂತರೆ ಅವಳಿಗೆ ಆ ನಮಾಝ್ ಕಡ್ಡಾಯವಾಗುವುದರೊಂದಿಗೆ ಅದರೊಟ್ಟಿಗೆ ಜಂಅ್ ಮಾಡಬಹುದಾದ ನಮಾಝ್ ಕೂಡ ಕಡ್ಡಾಯ. ಅಂದರೆ ಒಂದು ಸ್ತ್ರೀಗೆ ಅಸರ್‌ನ ಕೊನೆಯ ಗಳಿಗೆಯಲ್ಲಿ ಮುಟ್ಟು ನಿಂತರೆ ಅದಕ್ಕಿಂತ ಮುಂಚಿನ ಳುಹ್ರ್ ನಮಾಝ್ ಕೂಡಾ ಅವಳಿಗೆ ಕಡ್ಡಾಯವಾಗಿದೆ. ಅದು ಒಂದು ತಕ್ಬೀರತುಲ್ ಇಹ್ರಾಂ ಹೇಳಲಿಕ್ಕಿರುವ ಸಮಯ ಸಿಕ್ಕಿದರೂ ಸಾಕು. ಅವಳು ಸ್ನಾನ ಮಾಡಿ ಶುದ್ಧಿ ಮಾಡಿದ ಬಳಿಕ ಲುಹ್ರ್, ಅಸರ್ ಎರಡನ್ನು ಕೂಡ ಖಳಾ ನಿರ್ವಹಿಸಬೇಕು. ಅದೇ ರೀತಿ ಇಶಾಅ್ ನ ಕೊನೆಗಳಿಗೆಯ ಅವಧಿಯಲ್ಲಾದರೆ, ಇಶಾ ಮತ್ತು ಮಗ್ರಿಬ್ ಎರಡನ್ನು ಕೂಡಾ ನಿರ್ವಹಿಸಬೇಕು. ಆದರೆ ಒಟ್ಟು (ಜಂಅ್) ಮಾಡಲಾಗದ ನಮಾಝ್ ನ ಕೊನೆಯಲ್ಲಾದರೆ ಅಲ್ಲಿ ಎರಡು ಪೂರೈಸಬೇಕಾದ ಅಗತ್ಯವಿಲ್ಲ. ಒಂದು ಮಾತ್ರ ಸಾಕು. ಉದಾಹರಣೆಗೆ ಮಗ್ರಿಬ್‌ನ ಅವಧಿ ಮುಗಿಯುವ ಮುಂಚೆ ನಿಂತರೆ ಅಸರನ್ನೂ ಕೂಡಾ ನಿರ್ವಹಿಸಬೇಕೆಂದಿಲ್ಲ. ಮಗ್ರಿಬ್ ಮಾತ್ರ ಸಾಕು. ಮುಟ್ಟು ನಿಂತು ಸ್ನಾನ ಮಾಡಿ ಶುದ್ಧಿಯಾಗಲು ಹೊತ್ತು ಮೀರುವ ಮುನ್ನ ಸಾಧ್ಯವಾಗುವುದಾದರೆ ಸುಮ್ಮನೆ ಹಿಂದುಕ್ಕಿ ಖಳಾ ಮಾಡಲು ಅವಕಾಶಕೊಡಬಾರದು. ಬದಲಾಗಿ ಬೇಗನೆ ಶುಚಿ ಮಾಡಿ ನಮಾಝ್ ಮಾಡಬೇಕು. ಇದೇ ರೀತಿ ಗಮನಿಸಬೇಕಾದ ವಿಷಯವೆಂದರೆ ನಮಾಝ್ ನ ಕಡ್ಡಾಯಕ್ಕೆ ಅಡ್ಡಿಯಾದ ಹುಚ್ಚು ಹಿಡಿಯುವುದು, ಮೂರ್ಛೆ ತಪ್ಪುವುದು ಮುಂತಾದ ಸಂದರ್ಭಗಳಲ್ಲಿಯೂ ಈ ನಿಯಮ ಭಾದಕವಾಗುತ್ತದೆ.
ಋತುಸ್ರಾವದ ಅವಧಿಯಲ್ಲಿನ ನಮಾಝ್ ಖಳಾಮಾಡಲಿಕ್ಕೆ ಇಲ್ಲವೆಂದು ತಾವು ಹೇಳಿದ್ದೀರಿ, ಹಾಗಾದರೆ ಉಪವಾಸ ಕೂಡ ಹಾಗೇನಾ ಎಂದು ರಸೀನಾಳ ಪ್ರಶ್ನೆ.
ಅಲ್ಲ! ಉಪವಾಸವನ್ನು ಮಾತ್ರ ಖಳಾ ನಿರ್ವಹಿಸುವುದು ಕಡ್ಡಾಯ.
ಝೀನತ್;ರಮಳಾನಿನ ರಾತ್ರಿಯಲ್ಲಿ ಮುಟ್ಟು ನಿಂತರೆ ಮರುದಿನದ ಉಪವಾಸಕ್ಕಾಗಿ ಬೆಳಗಾಗುವ ಮುನ್ನ ಸ್ನಾನ ಕಡ್ಡಾಯವೇ?
ನಸೀಹಾ; ಹಾಗೇನೂ ಇಲ್ಲ. ರಕ್ತ ನಿಂತರೆ ಸ್ನಾನ ಮಾಡದೆ ಉಪವಾಸ ಕೈಗೊಳ್ಳಬಹುದು. ಆದರೆ ರಾತ್ರಿಯೇ ಶುಚಿಯಾಗುವುದು ಒಳ್ಳೆಯದು. ಏಕೆಂದರೆ ಬೆಳಿಗ್ಗೆ ಉಪವಾಸದ ಹೊತ್ತು ಸ್ನಾನ ಮಾಡುವಾಗ ಹೆಚ್ಚಿನ ಜಾಗ್ರತೆಯ ಅನಿವಾರ್ಯವಿದೆ.
ಇದೀಗ ನಸೀಮ ಮಾತ್ರ ಎದ್ದು ನಿಂತುಕೊಂಡು 'ಅಲ್ಲಾ, ನೀವು ಹೈಳ್ ಗಾರ್ತಿಗೆ ನಿಷಿದ್ಧವಾದ ಕಾರ್ಯದ ಪೈಕಿ ತಿಲಾವತ್‌ನ ಸುಜೂದ್‌ನ ಬಗ್ಗೆ ಹೇಳಿದ್ದೀರಿ. ಹಾಗಂತ ಹೇಳಿದರೆ ಏನು?
ನಸೀಹಾ;ಇಂತಹದ್ದೊಂದು ಸಂಶಯ ಬರಬಹುದು ಎಂದು ಆಗಲೇ ನಿರೀಕ್ಷಿಸಿದ್ದೆ. ಕುರ್‌ಆನ್‌ನ ಕೆಲವು ಸ್ಥಳಗಳಲ್ಲಿ ಸಜದದ ಆಯತ್‌ಗಳಿವೆ. ಅದು ಓದುವ ಸಂದರ್ಭ ಒಂದು ಸುಜೂದ್ ಮಾಡಲು ಸುನ್ನತ್ತಿದೆ. ಇಂತಹ ಸುಜೂದ್‌ಗೆ ತಿಲಾವತ್‌ನ ಸುಜೂದ್ ಎನ್ನುತ್ತಾರೆ. ಕುರ್‌ಆನಿನಲ್ಲಿರುವ ಸಜದದ ಆಯತ್‌ಗಳು 14. ಕುರ್‌ಆನಿನಲ್ಲಿ ನೋಡಿದರೆ ಇಂತಹ ಆಯತ್‌ಗಳಿರುವ ಪುಟದ ಬದಿಯಲ್ಲಿ ಸಜದ ಅಂತ ಬರೆದು, ವಿಶೇಷ ಗುರುತು ಹಾಕಿರುವುದು ಕಾಣಬಹುದು. ಇಷ್ಟೆಲ್ಲಾ ಹೇಳಬೇಕಾದ ಕಾರಣವೇನೆಂದರೆ ನಮ್ಮ ಸಹೋದರಿಯರಿಗೆ ಕುರ್‌ಆನ್ ಓದುವುದರಲ್ಲಿ ಆಸಕ್ತಿ ತುಂಬಾ ಕಡಿಮೆಯಾಗಿದೆ. ವಾರಂಪ್ರತಿ ಬರುವ ಮ್ಯಾಗ್‌ಝಿನ್‌ಗಳನ್ನು ತಪ್ಪದೆ ಓದಿ ಮುಗಿಸುವ ನಮ್ಮವರು, ವರ್ಷದಲ್ಲಿ ಒಂದು ಖತವನ್ನು ಕೂಡ ಓದದವರು. ಕುರ್‌ಆನ್ ಹೆಚ್ಚು ಓದಿದರೆ ಪರಲೋಕದಲ್ಲಿ ಅದು ನಮ್ಮ ನೆರವಿಗೆ ಬರುತ್ತದೆ. ನಮ್ಮನ್ನು ಅಲ್ಲಾಹು ಹೆಚ್ಚು ಹೆಚ್ಚು ಕುರ್ ಆನ್ ಓದುವವರ ಸಾಲಿಗೆ ಸೇರಿಸಲಿ, ಹಾಗೇ ನಾನು ಹೇಳಿದ ಇನ್ನೊಂದು ಸುಜೂದಾಗಿದೆ ಶುಕ್ರ್ ನ ಸುಜೂದ್.
ನಮಗೆ ಅನಿರೀಕ್ಷಿತವಾಗಿ ಒಂದು ಅನುಗ್ರಹ ಸಿಗುವಾಗ ನಾವು ಯಾವುದಾದರೊಂದು ಅಪಾಯದಿಂದ ಪಾರಾಗುವಾಗ ಅಥವಾ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿರುವವನನ್ನು, ಮಹಾ ಪಾಪಿಯನ್ನೋ ಕಾಣುವಾಗ ನಮಗೆ ಅಲ್ಲಾಹು ಮಾಡಿದ ಮಹಾ ಅನುಗ್ರಹವನ್ನು ನೆನೆದು ಮಾಡುವ ಸುಜೂದಾಗಿದೆ ಇದು. ಆಷ್ಟರಲ್ಲಿ ಪುನಃ ನಸೀಮಾ, ಆಗ ತಾನೆ ಮಸೀದಿಯಲ್ಲಿ ಇಅ್ ತಿಕಾಫ್ ಕೂರುವುದು ಅಂತ ಹೇಳಿದ್ದೀರಿ. ಹಾಗಂತ ಹೇಳಿದರೆ ಏನೆಂದು ಸವಿವರವಾಗಿ ವಿವರಿಸಿದರೆ ಒಳ್ಳೆಯದಿತ್ತು.
ನಸೀಹಾ; ನಿಯ್ಯತ್‌ನೊಂದಿಗೆ ಅಲ್ಲಾಹನ ಸಂತೃಪ್ತಿಗಾಗಿ ಅವನ ಭವನವಾದ ಮಸೀದಿಯಲ್ಲಿ ತಂಗುವುದಕ್ಕೆ ಇಹ್ತಿಕಾಫ್ ಎನ್ನುತ್ತೇವೆ. ಅದು ಮಸೀದಿಯಲ್ಲಿ ಮಾತ್ರ ಸಿಗುವ ಅವಕಾಶ, ಅರ್ಥವಾಯಿತಾ ನಸೀಮಾ?
ಆಗ ಪುನಃ ಎದ್ದು ನಿಂತ ನಸೀಮಾ ನನ್ನ ಮನೆಯಲ್ಲಿ ನಮಾಝ್ ಗಾಗಿ ಬೇರೆಯೇ ಕೋಣೆಯಿದೆ ಅದರಲ್ಲಿ ಆಗಬಾರದೆ?
ಇಲ್ಲ! ಮಸೀದಿಗಾಗಿ ವಕ್ಫ್ ಮಾಡಲ್ಪಟ್ಟ ಸ್ಥಳದಲ್ಲಿ ಮಾತ್ರ ಇದು ಸಾಧ್ಯ. ಸಾಧಾರಣವಾಗಿ ನಾವು ನಮಾಝ್ ಮಾಡುವ ಕೋಣೆಯನ್ನು ಹೀಗೆ ಸಂಕಲ್ಪಿಸುವುದಿಲ್ಲ, ಇನ್ನೊಂದು ವೇಳೆ ಕೋಣೆಯನ್ನು ಹಾಗೇನಾದರೂ ವಕ್ಫ್ ಮಾಡಿದರೆ ಮಸೀದಿಯ ಎಲ್ಲಾ ನಿಯಮಗಳು ಆ ಕೋಣೆಗೂ ಅನ್ವಯಿಸುವುದು. ಉತ್ತರ ಅರ್ಥವಾದಂತೆ ಎಲ್ಲರೂ ತಲೆಯಾಡಿಸಿದರು.
ಆಗ ಮೂಲೆಯಿಂದ ಫಾಸಿಲಾ ಎದ್ದು ನಿಂತು ಆಗ ತಾನೆ ತಾವು ಕುರ್‌ಆನ್ ಓದುವುದು ಋತುಮತಿಗೆ ನಿಷೇಧ ಅಂತ ಹೇಳಿದ್ದೀರಿ. ಹಾಗಾದರೆ ಆಹಾರ ಸೇವಿಸುವ ಮುನ್ನ ಹಾಗೂ ಇತರ ಸಮಯಗಳಲ್ಲಿ ಅವಳಿಗೆ ಬಿಸ್ಮಿ ಹೇಳಬಹುದೆ?
ನಸೀಹಾ; ಋತುಮತಿಗೆ ಕುರ್‌ಆನ್ ಓದುವುದು ನಿಷೇಧ ಆದರೆ ಕುರ್‌ಆನಿನಲ್ಲಿರುವ ದ್ಸಿಕ್ರ್ ಗಳನ್ನು ದ್ಸಿಕ್ರ್ ಎಂಬ ಭಾವನೆಯಿಂದ ಹೇಳುವುದರಲ್ಲಿ ತಪ್ಪಿಲ್ಲ. ಕುರ್‌ಆನಿನಲ್ಲಿರುವ ದ್ಸಿಕ್ರ್ ಅಂತ ಹೇಳಿದರೆ ಪ್ರಶ್ನೆಯಲ್ಲಿ ಹೇಳಿದ ಹಾಗೆ ಆಹಾರ ಸೇವನೆ ಇನ್ನಿತರ ಒಳ್ಳೆಯ ಕಾರ್ಯಗಳ ಪ್ರಾರಂಭದಲ್ಲಿ ಬಿಸ್ಮಿ ಹೇಳುವುದು, ಆಹಾರ ಸೇವಿಸಿದ ಬಳಿಕ ಅಲ್ ಹಂದುಲಿಲ್ಲಾಹ್! ಹೇಳುವುದು, ವಾಹನ ಹತ್ತುವಾಗ 'ಸುಬ್ಹಾನಲ್ಲಝೀ ಸಕ್ಕರಲನಾ ಹಾಝಾ ವಮಾ ಕುನ್ನಾ ಲಹು ಮುಕ್ರಿನೀನ್' ಅಂತ ಹೇಳುವುದು, ಮುಂತಾದವು ಕುರ್‌ಆನಿನಲ್ಲಿರುವ ದ್ಸಿಕ್ರ್ ಗಳಾಗಿವೆ. ಹಾಗಾಂತ ಮುಸ್ಹಫನ್ನು ಮುಟ್ಟಬಾರದು. ಅದು ಕೈಗೆ ಬಟ್ಟೆ ಸುತ್ತಿ ಆದರೂ ಕೂಡ ನಿಷಿದ್ಧವೇ. ಮುಸ್ಹಫ್ ಆಂತ ಹೇಳಿದರೆ ಅದರ ಹೊರ ಕವಚವನ್ನು ಮುಟ್ಟಬಾರದೇ? ವೇದಿಕೆಯಿಂದ ಯಾರೋ ಪ್ರಶ್ನಿಸಿದರು!
ಹೌದು! ಮುಸ್ಹಫ್‌ನ ಬರಹ ಇರುವ ಸ್ಥಳ, ಇಲ್ಲದ ಸ್ಥಳ, ಅದರ ಹೊರ ಕವಚ ಕಲಿಯುವುದಕ್ಕಾಗಿ ಬರೆಯಲ್ಪಟ್ಟ ಕುರ್‌ಆನಿನ ಹಲಗೆ ಎಲ್ಲವನ್ನೂ ಮುಟ್ಟುವುದು ನಿಷಿದ್ಧವೇ ಆಗಿದೆ. ಆದರೆ ಬರ್ಕತ್ ಗಾಗಿ ಕುರ್‌ಆನ್ ಬರೆದುದನ್ನು ಹೊಂದಿರುವ ಉರ್ಕ್ ಮುಂತಾದವನ್ನು ಮುಟ್ಟುವುದು ವಿರೋಧವಿಲ್ಲ. ಅದೇ ರೀತಿ ಮುಸ್ಹಫನ್ನು ಮಾತ್ರ ಸಂರಕ್ಷಿಸಿ ಇಡುವ ಪೆಟ್ಟಿಗೆ, ಅದನ್ನು ಕಟ್ಟುವ ಬಳ್ಳಿ ಮುಂತಾದುವು ಮುಸ್ಹಫ್ ಇರುವಾಗ ಮುಟ್ಟುವುದು ಹರಾಂ ಆಗಿದೆ. ಆದರೆ ಮುಸ್ಹಪ್ ಇಲ್ಲದ ಸಮಯದಲ್ಲಿ ನಿಷಿದ್ಧವಲ್ಲ. ಋತುಮತಿಗೆ ಮುಸ್ಹಫ್ ನಜಸ್‌ಗೆ ಬೀಳುವುದಾಗಿಯೋ, ಅಮ್ಮುಸ್ಲಿಮನ ಕೈಯಲ್ಲಿರುವುದಾಗಿಯೋ ಕಂಡರೆ ಕೂಡಲೇ ಅದನ್ನು ತೆಗೆಯುವುದು ಕಡ್ಡಾಯವಾಗುತ್ತದೆ. ನಜಸ್‌ಗೆ ಬೀಳಬೇಕೆಂತಲೇ ಇಲ್ಲ. ಬೀಳಲು ಸಾಧ್ಯತೆ ಇದ್ದರೂ ಸಹಾ ಅದನ್ನು ಸೂಕ್ತ ಸ್ಥಳದಲ್ಲಿ ತೆಗೆದಿಡಬೇಕು. ಹೈಳ್ ಗಾರ್ತಿಗೆ ಹರಾಂ ಆದ ಈ ಕಾರ್ಯಗಳ ಪೈಕಿ ಪತ್ನಿಯೊಂದಿಗೆ ಮೊಣಕಾಲು ಹೊಕ್ಕಲುಗಳ ಮಧ್ಯೆ ಸುಖಾಸ್ವದಿಸುವುದಕ್ಕೆ ಹೊರತಾಗಿ ಉಳಿದ ಕಾರ್ಯ ಅಶುದ್ದಿ ಇದ್ದವನಿಗೂ ನಿಷಿದ್ಧವಾಗಿದೆ. ಮುಸ್ಹಫ್ ಸ್ಪರ್ಶಿಸುವ ವಿಷಯ ಚಿಕ್ಕ ಅಶುದ್ಧಿಯಿದ್ದವನಿಗೂ ಬಾಧಕವಾಗುತ್ತದೆ. ಚಿಕ್ಕ ಅಶುದ್ಧಿ ಇದ್ದವನಿಗೆ ಮುಸ್ಹಫ್ ಓದುವುದು ನಿಷೇದವಲ್ಲ, ಅಲ್ಲಾಹು ನಮಗೆ ಕರ್ಮ ಶಾಸ್ತ್ರಗಳನ್ನು ಸರಿಯಾಗಿ ಕಲಿತು ಅವನಿಗೆ ಆರಾಧನೆ ನಿರ್ವಹಿಸಲು ತೌಫೀಕ್ ನೀಡಲಿ. ಅಮೀನ್..
ಎಂದಿನ ಸಮಯ ಕಳೆಯಿತು. ನಮಗೆ ಇವತ್ತಿಗೆ ಸಾಕು . ಇನ್‌ಶಾ ಅಲ್ಲಾಹ್ ನಾಳೆ ಭೇಟಿಯಾಗೋಣ
ಆಯಿಶಾ;ಉಪಯೋಗಿಸಲ್ಪಟ್ಟ ನೀರು ಅಂತ ನೀವು ಹೇಳಿದ್ದೀರಲ್ಲಾ! ಅದರ ಉದ್ದೇಶ ಅರ್ಥವಾಗಿಲ್ಲ.
ಶಹಬಾಶ್ ಆಯಿಶಾ ಹಾಗೆಯೇ ಕೇಳಬೇಕು. ಮದ್ರಸಾದಲ್ಲಿ ಹಾಗೂ ದರ್ಸ್‌ನಲ್ಲಿ ಮುಸ್ತಅ್ ಮಲ್, ಮುತ್‌ಲಕ್, ಅಂತ ಹೇಳಿ ಅಭ್ಯಾಸವಾದ್ದರಿಂದ ಅಷ್ಟೇ ಹೇಳಿ ಮುಗಿಸಿದೆಯಷ್ಟೆ. ವುಳೂ ಮತ್ತು ಸ್ನಾನಕ್ಕೆ ಬಳಸುವ ನೀರು ಯಾವುದಾದರೂ ಫರ್ಳ್ ಗೆ ಬಳಸಲ್ಪಟ್ಟಿದ್ದು ಆಗಿರಬಾರದು.
ಉದಾಹರಣೆಗೆ: ಸ್ನಾನದ ಆದಿಯಲ್ಲಿ ಶರೀರ ಪೂರ್ತಿ ನೀರು ಸುರಿಯುವುದು ಕಡ್ಡಾಯವಾಗಿರುತ್ತದೆ. ಅದಕ್ಕೆ ಬಳಸಲ್ಪಟ್ಟ ನೀರು ಎರಡು ಕುಲ್ಲತ್‌ಗಿಂತ ಕಡಿಮೆ ಇರುವ ನೀರಿನಲ್ಲಿ ಸೇರಬಾರದು. ಒಂದು ಹನಿ ನೀರು ಬಿದ್ದರೂ ಸಂಪೂರ್ಣ ನೀರು ಮುಸ್ತಅ್ ಮಲ್ (ಉಪಯೋಗಿಸಲ್ಪಟ್ಟ ನೀರು) ಆಗುತ್ತದೆ. ಅದು ಕಡ್ಡಾಯ ಸ್ನಾನಕ್ಕೆ ಆಗದು. ಪಾತ್ರೆಯ ನೀರಿನಲ್ಲಿ ಸ್ನಾನ ಮಾಡುವಾಗೆಲ್ಲಾ ಹೆಚ್ಚು ನಿಗಾ ಅಗತ್ಯ.
ಎರಡು ಕುಲ್ಲತ್ ಎಂದರೆ ಎಷ್ಟು? ಫಾಸಿಲಾ ಮರು ಪ್ರಶ್ನೆ ಹಾಕಿದಳು.
ಎರಡು ಕುಲ್ಲತ್ ಎಂದರೆ ಸುಮಾರು 191 ಲೀಟರ್, ಇದಕ್ಕಿಂತ ಕಡಿಮೆಯಾದ ನೀರನ್ನು ಅಲ್ಪ ಪ್ರಮಾಣದ ನೀರೆಂದು, ಹೆಚ್ಚಾದ ನೀರನ್ನು ಹೆಚ್ಚಿನ ಪ್ರಮಾಣದ ನೀರೆಂದೂ ಪರಿಗಣಿಸಲಾಗುವುದು.
ನಜಸ್ ಬಿದ್ದ ನೀರಿನಲ್ಲಿ ಸ್ನಾನ ಮಾಡಿದರೆ ಸಾಲದು, ಏಕೆಂದರೆ ನೀರು ತ್ವಹೂರ್ (ಶುದ್ಧಿಯಾಗಿರುವ) ನೀರಾಗಿರಬೇಕೆಂಬುದು ಕಡ್ಡಾಯ. ಅದರೆ ಮೇಲೆ ಹೇಳಿದ ಎರಡು ಕುಲ್ಲತ್‌ಗಿಂತ ಕಡಿಮೆ ನೀರಾದರೆ ನಜಸ್ ಬಿದ್ದ ಕೂಡಲೇ ಅಶುದ್ಧಿಯಾಗುವುದು. ಎರಡು ಕುಲ್ಲತ್‌ಗಿಂತ ಹೆಚ್ಚಿರುವ ನೀರಿನಲ್ಲಿ ಅದರ ಬಣ್ಣ, ವಾಸನೆ, ರುಚಿಗಳಲ್ಲಿ ಏನಾದರೂ ಬದಲಾವಣೆ ಕಂಡು ಬಂದರೆ ಮಾತ್ರ ನೀರು ಆಶುದ್ಧಿಯಾಗುವುದು.
ಉಳಿದ ಶರ್ತುಗಳು ಯಾವುವು? ಫಾಸಿಲಾಳ ಪ್ರಶ್ನೆ.
ನಸೀಹಾ; ಏನು ಫಾಸಿಲಾ ಅವಸರ! ಎಲ್ಲವೂ ಹೇಳಿ ಮುಗಿಸುತ್ತೇನೆ.
ಸ್ನಾನದ ಎರಡನೇ ಶರ್ತು ಶರೀರ ಪೂರ್ತಿ ನೀರು ಸುರಿಯಬೇಕು. ಬರೀ ಉದ್ದ ಕೈಯಿಂದ ಶರೀರದ ಭಾಗಗಳು ಸವರಿದರೆ ಸಾಲದು. ಮೂರನೇಯ ಶರ್ತು ಎಂದರೆ ಸ್ನಾನ ಮಾಡುವಾಗ ನೀರಿನ ಬಣ್ಣ ಬದಲಾವಣೆಯನ್ನು ಉಂಟುಮಾಡಬಲ್ಲ ಕುಂಕುಮದಂತಹ ಪದಾರ್ಥಗಳು ಅಂಗಾಂಗಗಳಲ್ಲಿ ಇದ್ದರೆ ಅದನ್ನು ಮೊದಲೇ ನೀಗಿಸಬೇಕು. ನಾಲ್ಕನೇಯದ್ದು, ನೀರನ್ನು ತಡೆಯುವ ಪದಾರ್ಥ ಶರೀರಾಂಗಗಳಲ್ಲಿ ಇಲ್ಲದಿರುವುದು. ಐದನೇಯ ನಿಂಬಂಧನೆಯೆಂದರೆ ಅನಿಯಂತ್ರಿತವಾಗಿ ನಿರಂತರ ಮೂತ್ರ ಹರಿಯುವವರು. ಅಥವಾ ರೋಗ ಕಾರಣ (ಇಸ್ತಿಹಾಳತ್) ರಕ್ತಸ್ರಾವವಿರುವವರನ್ನು ನಿತ್ಯ ಅಶುದ್ಧಿಯೆಂದು ಪರಿಗಣಿಸಲಾಗುವುದು. ಇವರಿಗೆ ನಮಾಝ್ ನ ಸಮಯವಾದ ನಂತರವೇ ವುಳೂ ಮಾಡಬೇಕು.
ಉಗುರಿನ ಸಂಧಿಯಲ್ಲಿರುವ ಕೊಳಚೆಗಳು ನೀರು ತಲುಪುವುದಕ್ಕೆ ಇರುವ ತಡಯೇ? ಆಯಿಶಾಳ ಪ್ರಶ್ನೆ.
ಹೌದು ಉಗುರಿನ ಸಂಧಿಯಲ್ಲಿರುವ ಕೆಸರು, ಪೈಂಟು ಮುಂತಾದವು ನೀರನ್ನು ತಡೆಯುವುದರಿಂದ ಅದನ್ನು ಶುಚಿ ಮಾಡಿಯೇ ವುಳೂ ನಿರ್ವಹಿಸಬೇಕು. ಮದರಂಗಿಯ ಬಣ್ಣ, ತೆಳುವಾದ ಶಾಯಿಯ ಬಣ್ಣಗಳಂತದ್ದಾದರೆ ತೊಂದರೆ ಇಲ್ಲ. ಒರೆಸಿದರೆ ಅದರ ಅಂಶವನ್ನು ಬೇರ್ಪಡಿಸಲು ಸಾಧ್ಯವಾಗುವ ಕಲೆಗಳು ಶರೀರದಲ್ಲಿ ಇದ್ದರೆ ಅದು ನೀಗಿಸಿದ ಬಳಿಕ ವುಳೂ ಮಾಡಬೇಕು. ಪಾತ್ರೆ ತೊಳೆಯುವುದರಲ್ಲಿಯೂ, ಅಡುಗೆ ಮಾಡುವುದರಲ್ಲಿಯೂ ತೊಡಗಿಸಿಕೊಳ್ಳುವ ನಾವು ಈ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಏಕೆಂದರೆ ನಮ್ಮ ಬೆರಳು ಸಂಧಿಗಳಲ್ಲಿ ಅಂತಹ ಪದಾರ್ಥಗಳು ಅಂಟಿಕೊಂಡಿರುವುದು ಹೆಚ್ಚು.
ಫಾಸಿಲಾ ಆಯಿತು! ಹಲವಾರು ವಿಷಯ ಹೇಳಿಯಾಯಿತು! ಹಾಗಾದರೆ ಸ್ನಾನ ಹೇಗೆ ಅಂತ ತಿಳಿಯಲಿಲ್ಲವಲ್ಲಾ?
ನಸೀಹಾ; ಸರಿ! ಇನ್ನು ಸುನ್ನತ್‌ಗಳನ್ನು ಅಳವಡಿಸಿಕೊಂಡು ಪರಿಪೂರ್ಣ ಸ್ನಾನದ ರೂಪ ವಿವರಿಸುತ್ತೇನೆ. ಸ್ನಾನ ಮಾಡುವವನಿಗೆ ಈ ಕೆಳಕಂಡ ಕಾರ್ಯ ಸುನತ್ತಾಗಿರುತ್ತದೆ.
1. ಪ್ರಾರಂಭದಲ್ಲಿ ಬಿಸ್ಮಿ ಹೇಳುವುದು, ಶರೀರದಲ್ಲಿರುವ ಮಾಲಿನ್ಯಗಳನ್ನು (ವೀರ್ಯ, ಸಿಂಬಳ) ಅಥವಾ ನಜಸ್‌ಗಳನ್ನು ನೀಗಿಸುವುದು.
2. ವೀರ್ಯ ಸ್ಖಲನವಾಗಿದ್ದಲ್ಲಿ ಮೂತ್ರ ವಿಸರ್ಜನೆ ಮಾಡುವುದು.
3. ಬಾಯಿಯಲ್ಲಿ ನೀರು ಮುಕ್ಕಳಿಸುವುದು. ಮೂಗಿನಲ್ಲಿ ನೀರು ಸೇದಿ ಸೀಟುವುದು.
4. ವುಳೂ ನಿರ್ವಹಿಸುವುದು.
5. ಶರೀರದಲ್ಲಿ ನೀರು ತಲುಪದ ಸೂಕ್ಷ್ಮ ಸ್ಥಳಗಳನ್ನು ತೊಳೆಯುವುದು.
6. ಅಂಟಿದ ಇಲ್ಲವೇ ಗೀರಿದ ಸ್ಥಳಗಳಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ತೊಳೆಯುವುದು.
7. ನಿಯ್ಯತ್‌ನೊಂದಿಗೆ ತಲೆಗೆ ನೀರು ಸುರಿಯುವುದು.
8. ಶರೀರದ ಬಲಭಾಗಕ್ಕೆ ಮೊದಲು ನಂತರ ಎಡಭಾಗಕ್ಕೆ ನೀರು ಸುರಿಯುವುದು.
9. ಶರೀರದ ಬಲ ಭಾಗಳನ್ನು ತಿಕ್ಕಿ ತೊಳೆಯುವುದು.
10. ಮೂರು ಭಾರಿ ನಿರ್ವಹಿಸುವುದು.
11.ಖಿಬ್‌ಲಾಬಿಮುಖವಾಗಿ ಸ್ನಾನ ಮಾಡುವುದು .
12. ಸ್ನಾನದ ಕರ್ಮಗಳೆಡೆಯಲ್ಲಿ ವಿಳಂಬ ಮಾಡದಿರುವುದು.
13. ಅನಗತ್ಯ ಮಾತನಾಡದಿರುವುದು.
14. ವುಳೂವಿನ ಪ್ರಾರಂಭದಲ್ಲೂ ಅಂತ್ಯದಲ್ಲೂ ಹೇಳಲು ಸುನ್ನತ್ತಿರುವ ದ್ಸಿಕ್ರ್ ಗಳನ್ನು ಹೇಳುವುದು.
15. ಹೈಳ್ ಸ್ನಾನ ಮಾಡುವವಳಾದಲ್ಲಿ ಸ್ನಾನದ ನಂತರ ಸ್ವಲ್ಪ ಹತ್ತಿಯಲ್ಲಿ ಕಸ್ತೂರಿ ಅಥವಾ ಇನ್ನಾವುದೊ ಸುಗಂಧ ಯೋನಿಯಲ್ಲಿಡುವುದು.
ಅಷ್ಟರಲ್ಲಿ ಎದ್ದು ನಿಂತ ಆಸಿಯಾ! ಅಲ್ಲ ನೀವು ವೂಳೂ ಇರುವುದು ಸುನ್ನತ್ ಅಂತ ಹೇಳಿದ್ದೀರಿ. ಹಾಗಾದರೆ ಸ್ನಾನದ ಮಧ್ಯೆ ಅದು ಭಂಗವಾದರೆ ಪುನಃ ನಿರ್ವಹಿಸಬೇಕೆ?
ಸ್ನಾನದ ಕೊನೆಯವರೆಗೂ ವುಳೂ ಇರುವುದು ಸುನ್ನತ್ ಇರುವುದರಿಂದ ವುಳೂ ಹೋದರೆ ಪುನಃ ನಿರ್ವಹಿಸುವುದು ಸುನ್ನತ್.
ಫಾಸಿಲಾ:ಇದಲ್ಲದೆ ಇನ್ಯಾವುದಾದರೂ ಸುನ್ನತ್ ಇದೆಯಾ?
ಹೌದು! ಇದೆ ಕಟ್ಟಿ ನಿಂತ ಸ್ವಲ್ಪ ನೀರಿನಲ್ಲಿ ಸ್ನಾನ ಮಾಡದಿರುವುದು, ಜನಾಬತ್ ಇರುವವರು ಹಾಗೂ ಹೈಳ್, ಹೆರಿಗೆ ರಕ್ತ ನಿಂತವರು ಆಹಾರ ಪಾನೀಯ ಸೇವನೆಗಾಗಿ ಅಥವಾ ನಿದ್ದೆಗಾಗಿ ಗುಪ್ತಾಂಗ ತೊಳೆಯುವುದು, ವುಳೂ ಮಾಡುವುದು ಸುನ್ನತ್ತಾಗಿದೆ.
ಇನ್ನೊಂದು ಸಂಶಯ! ದೊಡ್ಡ ಅಶುದ್ಧಿಯಾಗಿರುವಾಗ ಉಗುರು ಕೂದಲು ಕತ್ತರಿಸಬಹುದೇ? ಉದುರುವ ಕೂದಲನ್ನು ನಿಯ್ಯತ್ ನೊಂದಿಗೆ ತೊಳೆಯಬೇಕೆ? ಫಾಸಿಲಾ ಪ್ರಶ್ನಿಸಿದಳು.
ದೊಡ್ಡ ಅಶುದ್ಧಿಯಿರುವವರು ಶುದ್ಧಿಗಿಂತ ಮುಂಚೆ ಶರೀರದ ಭಾಗಗಳಲ್ಲಿ ಯಾವುದನ್ನೂ ನೀಗಿಸದಿರುವುದು ಸುನ್ನತ್ ಆಗಿದೆ. ಏಕೆಂದರೆ ಶುದ್ಧಿ ಇಲ್ಲದೆ, ಬೇರ್ಪಟ್ಟ ಭಾಗಗಳು ಹಾಗೆಯೇ ಪರಲೋಕಕ್ಕೆ ಮರಳುತ್ತದೆ ಎಂದು ಗಝಾಲಿ ಇಮಾಂ ಹೇಳುತ್ತಾರೆ. ಇದರಿಂದ ಅರ್ಥವಾಗುವುದೆಂದರೆ ದೊಡ್ಡ ಅಶುದ್ಧಿಯ ಸಂದರ್ಭ ಕೂದಲು ಉಗುರುಗಳನ್ನು ನೀಗಿಸದಿರುವುದು ಸುನ್ನತ್ತಾಗಿದ್ದು, ನೀಗಿಸುವುದು ನಿಷಿದ್ಧವಲ್ಲ.
ಇನ್ನು ಶರೀರದಿಂದ ನೀಗಿಸಲ್ಪಟ್ಟ ಕೂದಲು ಔರತ್ನಿಂದಾದರೆ (ಗೌಪ್ಯಭಾಗ) ಅದನ್ನು ಹೂಳುವುದು ಕಡ್ಡಾಯವಾಗಿದ್ದು, ಇಲ್ಲವಾದರೆ ಸುನ್ನತ್ ಆಗಿದೆ. ಹಾಗಿರುವಾಗ ಸ್ತ್ರೀ ಶರೀರ ಪೂರ್ತಿ ಔರತ್ ಆಗಿದ್ದು ಇಡೀ ಶರೀರದಿಂದ ಬೇರ್ಪಟ್ಟ ಕೂದಲು, ಉಗುರುಗಳನ್ನು ಹೂಳುವುದು ಕಡ್ಡಾಯವಾಗಿದೆ. ಈ ಕುರಿತು ನಿಗಾ ವಹಿಸುವುದು ಅಗತ್ಯ. ಸ್ನಾನವೆಲ್ಲಾ ಮುಗಿದ ಬಳಿಕ ಖಿಬ್ಲಾಭಿಮುಖವಾಗಿ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ವುಳೂ ನಿರ್ವಹಿಸಿದ ಬಳಿಕ ಹೇಳುವ ಪ್ರಾರ್ಥನೆ ಮಾಡುವುದು ಸುನ್ನಾತ್ತಾಗಿದೆ.
ಇದೆಲ್ಲವೂ ಆದ ಬಳಿಕ ಖಿಬ್‌ಲಾಭಿಮುಖವಾಗಿ ಇನ್ನಾ ಅಂಝಲ್ನಾ ಸೂರತ್ ಮೂರು ಬಾರಿ ಓದುವುದು ಸುನ್ನತ್ ಇದೆ. ಇದೀಗ ತುಂಬಾ ತಡವಾಯಿತು. ಇಂದಿಗೆ ಸಾಕು ಇನ್ನು ನಾಳೆ ನೋಡೋಣ. ನಸೀಹಾ ಹೇಳಿದಳು. ಎಲ್ಲರೂ ತಲೆಯಾಡಿಸಿದರು. ಮೂರು ಸ್ವಲಾತ್ ನೊಂದಿಗೆ ಅವರು ವಿರಮಿಸಿದರು. ಆದರೆ ಅವರ ಹೆಜ್ಜೆಯುದ್ದಕ್ಕೂ ನಸೀಹಾಳದ್ದೆ ಚಿಂತೆ. ಇಷ್ಟೆಲ್ಲಾ ವಿಷಯ ಅವಳು ಹೇಗೆ ಕಲಿತಳು..
ಐದನೇ ದಿನ
“ನಮಗೆ ಇವತ್ತು ಸ್ನಾನದ ಬಗ್ಗೆ ಕಲಿಯಬೇಕು. ರಮ್ಲಾಳು ತನ್ನ ಆಸೆಯನ್ನು ವೇದಿಕೆಯಲ್ಲಿಟ್ಟಳು. ನಸೀಹಾ ಅದಕ್ಕೆ ಸಮ್ಮತಿಸಿದಳು. ಆಯಿತು ನಮಗೆ ಸ್ನಾನದ ಬಗ್ಗೆ ಕಲಿಯೋಣ.
ನಸೀಹಾ: ಸ್ನಾನದ ಫರ್ಳ್ ಎಷ್ಟೆಂದು ಹೇಳಬಹುದಾ ಸಫಿಯಾ?
ಸಫಿಯಾ; ಸರಿ! ನನಗೆ ಗೊತ್ತು ಸ್ನಾನದ ಫರ್ಳ್ ಆರು, ಸಫಿಯಾ ಒಂದಿಷ್ಟು ಜೋರಾಗಿಯೇ ಉತ್ತರ ಹೇಳಿದ್ದಳು. ಸಫಿಯಾ ಅದು ಸ್ನಾನದ್ದು ಅಲ್ಲ. ವುಳೂವಿನದ್ದಾಗಿದೆ. ಸ್ನಾನಕ್ಕಿರುವವುದು ಎರಡು ಫರ್ಳ್ ಮಾತ್ರ, ಒಂದು ನಿಯ್ಯತ್, ಇನ್ನೊಂದು ಶರೀರದ ಎಲ್ಲಾ ಭಾಗಗಳಿಗೆ ನೀರು ತಲುಪುವುದು, ಎಂದು ನಸೀಹಾ ಸಾವಾದಾನದಿಂದ ವಿವರಿಸಿದಳು.
ರಮ್ಲ: ಹಾಗಾದರೆ ನಿಯ್ಯತ್ ಮಾಡುವ ರೂಪ!
ನಸೀಹಾ; ಅದಕ್ಕೆ ಹಲವಾರು ರೂಪಗಳಿವೆ. ಹೈಲ್‌ಗಾರ್ತಿಯಾದರೆ 'ಹೈಳ್ ಎನ್ನುವ ಅಶುದ್ಧ ನೀಗಿಸಲು' ಎಂದೂ, "ನಿಫಾಸ್ ಆದರೆ ನಿಫಾಸ್ ಎನ್ನುವ ಅಶುದ್ಧ ನೀಗಿಸುವುದು" ಎಂದು ಸಂಕಲ್ಪಿಸುವುದು. ಜನಾಬತ್ ಗಾರ್ತಿಯಾದರೆ ''ಜನಾಬತೆಂಬ ಅಶುದ್ಧಿ ನೀಗಿಸುವೆ" ಎಂದೋ ಅಥವಾ ಬೇರಾವುದೋ ಸಂಕಲ್ಪಿಸಬಹುದು. ಅದೇ ರೀತಿ 'ಸ್ನಾನ ಎನ್ನುವ ಫರ್‌ಲ್ ನಿರ್ವಸುವೆನೆಂದು' ಅಥವಾ
'ನಮಾಝ್ ನಂತಹ ಸ್ನಾನ ಕಡ್ಡಾಯವಾದ ಕಾರ್ಯದ ನಿರ್ವಹಣೆಗೆ ಸ್ನಾನ ಮಾಡುತ್ತೇನೆಂದು' ಸಂಕಲ್ಪಿಸಿದರೆ ಸಾಕಾಗುವುದು. ಅಲ್ಲದೆ 'ನಾನು ಅಶುದ್ಧಿ ನೀಗಿಸುತ್ತೇನೆ' ಎಂದು ಸಂಕಲ್ಪಿಸಿದರೆ ಅಥವಾ 'ದೊಡ್ಡ ಅಶುದ್ಧಿ ನೀಗಿಸುತ್ತೇನೆ' ಎಂದು ಸಂಕಲ್ಪಿಸಿದರೂ ಸಾಕಾಗುವುದು.
ಹಸೀನಾ; ಒಬ್ಬಳು ಜನಾಬತ್ ಗಾರ್ತಿಯಾದ ಬಳಿಕ ಸ್ನಾನ ಮಾಡುವುದಕ್ಕೆ ಮುಂಚೆ ಹೈಳ್ ಆದರೆ ಅದರ ಕೊನೆಯಲ್ಲಿ ಎರಡನ್ನು ಕೂಡ ಸಂಕಲ್ಪಿಸಬೇಕೆ?
ಬೇಡ, ಯಾವುದಾದರೂ ಒಂದನ್ನು ಸಂಕಲ್ಪಿಸಿದರೆ ಸಾಕು. ಎಲ್ಲಕ್ಕೂ ಒಂದು ನಿಯ್ಯತ್ ಸಾಕಾಗುತ್ತದೆ.
ಸಫಿಯಾ: ದೊಡ್ಡ ಅಶುದ್ಧಿ ಇರುವವ ಒಬ್ಬ ವ್ಯಕ್ತಿ ಅಶುದ್ಧಿ ಎಂದು ಸಂಕಲ್ಪಿಸಿದರೆ ಸಾಕಾ?
ದೊಡ್ಡ ಅಶುದ್ಧಿ ಇರುವ ಒಬ್ಬ ವ್ಯಕ್ತಿ ಮನಪೂರ್ವಕ ಚಿಕ್ಕ ಅಶುದ್ಧಿ ನೀಗಿಸುವುದು ಎಂದು ಸಂಕಲ್ಪಿಸಿದರೆ ಸಾಕಾಗದು. ಅದರಿಂದ ಅಶುದ್ಧಿ ನೀಗದು.
ನಿಯ್ಯತ್ ಮಾಡಬೇಕಾದದ್ದು ಯಾವಾಗ? ಸಫಿಯಾ ಮರು ಪ್ರಶ್ನೆ ಹಾಕಿದಳು.
ಶರೀರದ ಮೊದಲ ಭಾಗ ತೊಳೆಯುವಾಗ ನಿಯ್ಯತ್ ಮಾಡಬೇಕಾದದ್ದು, ನಿಯ್ಯತ್ ಮಾಡುವುದಕ್ಕಿಂತ ಮುಂಚೆ ಶುಚಿ ಮಾಡಿದ್ದು ಸಿಂಧುವಲ್ಲ, ಅದನ್ನು ಪುನಃ ತೊಳೆಯಬೇಕು.
ಆಯಿಶಾ;ಶರೀರದ ಯಾವ ಭಾಗಗಳಿಗೆ ನೀರು ತಲುಪಬೇಕು ವಿವರಿಸುವಿರಾ?
ಶರೀರ ಪೂರ್ತಿ ನೀರು ತಲುಪಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. 'ಜನಾಬತ್ ಶುದ್ಧಿಯಿಂದ ಯಾವುದಾದರೂ ಒಂದು ಕೂದಲಷ್ಟು ಭಾಗ ನೀರು ತಲುಪದೆ ಬಾಕಿ ಉಳಿದರೆ ಆ ಭಾಗವು ಸ್ವರ್ಗ ಪ್ರವೇಶಿಸದು' ಇದನ್ನು ಕೇಳಿದ ಅಲೀ (ರ) ರವರು ಸೂಕ್ಷ್ಮತೆಗಾಗಿ ತನ್ನ ಕೂದಲನ್ನು ಸಂಪೂರ್ಣ ಕತ್ತರಿಸುತ್ತಿದ್ದರೆಂದು ಅವರೇ ಹೇಳುತ್ತಾರೆ. ಹಾಗಾಗಿ ಕೂದಲನ್ನು ಸುತ್ತು ಹಾಕಿ ಸ್ನಾನ ಮಾಡಿದರೆ ಸರಿ ಆಗದು. ಸಂಪೂರ್ಣ ಬಿಡಿಸಿದ ಬಳಿಕವಾಗಿರಬೇಕು ಸ್ನಾನ! ಆದರೆ ತಂತಾನೆಯಾಗಿ ಜಡೆಕಟ್ಟಿದ ಕೂದಲನ್ನು ಬಿಡಿಸಲಿಕ್ಕೆ ಆಗದಿದ್ದರೆ ಸಮಸ್ಯೆಯಿಲ್ಲ. ಆದರೆ ಅವರ ಕಾರಣದಿಂದ ಉಂಟಾದಲ್ಲಿ ಅದನ್ನು ಕೂಡಾ ಬಿಡಿಸುವುದು ಅವಳಿಗೆ ಕಡ್ಡಾಯವಗಿದೆ. ಸಾಮಾನ್ಯವಾಗಿ ನೀರು ತಾಗದೆ ಬಾಕಿಯಾಗುವ ಉಗುರಿನ ಕೆಳಭಾಗ, ಕಿವಿಯೊಳಗಿನಿಂದ ಕಾಣಲ್ಪಡುವ ಭಾಗಗಳು, ಸಂಧಿ ಭಾಗಗಳು ಹೆಚ್ಚು ನಿಗಾವಹಿಸಿ ತೊಳೆಯಬೇಕು. ಅಲ್ಲದೆ ಒಂದು ಹೆಣ್ಣು ತನ್ನ ಕಾಲ ಪಾದದ ಮೇಲೆ ಕುಳಿತರೆ ಯೋನಿಯೊಳಗಿನಿಂದ ಕಾಣಲ್ಪಡುವ ಭಾಗಗಳನ್ನು ತೊಳೆಯುವುದು ಕಡ್ಡಾಯ. ಶರೀರದಲ್ಲಿರುವ ಆಳಕ್ಕೆ ಹೋಗದ ಗಾಯಗಳನ್ನು ತೊಳೆಯಬೇಕಾಗಿದೆ. ಕಣ್ಣಿನ ಬದಿ ಮೂಗಿನ ತೂತಿನಿಂದ ಕಾಣಲ್ಪಡುವ ಸ್ಥಳಗಳನ್ನು ತೊಳೆಯಬೇಕಾಗಿದೆ.
ಅಷ್ಟರಲ್ಲಿ ಒಂದು ಮೂಲೆಯಿಂದ ಎದ್ದು ನಿಂತ ಮೈಮೂನ ಸ್ನಾನವೆಲ್ಲಾ ಮುಗಿದ ಬಳಿಕ ಶರೀರದಲ್ಲಿ ನೀರು ಸೇರುವುದನ್ನು ತಡೆಯುವ ಮೇಣದ ಅಥವಾ ಎಣ್ಣೆ ಪಸೆ ಇನ್ನಿತರ ಯಾವುದಾದರೂ ಪದಾರ್ಥ ಕಂಡು ಬಂದರೆ ಸ್ನಾನ ಪುನಃ ಮಾಡುವುದು ಕಡ್ಡಾಯವೇ?
ಸ್ನಾನ ಆವರ್ತಿಸಬೇಕೆಂದಿಲ್ಲ. ಆ ತಡೆಯನ್ನು ನೀಗಿಸಿ ಆ ಭಾಗವನ್ನು ತೊಳೆಯುವುದು ಕಡ್ಡಾಯ. ಅರ್ಥಾವಾಯಿತು ತಾನೆ?
ಇನ್ನು ನಮಗೆ ಸ್ನಾನದ ಶರ್ತ್‌ಗಳ ಬಗ್ಗೆ ನೋಡೋಣ, ಸ್ನಾನದ ಶರ್ತ್‌ಗಳು ವಿಶೇಷವೇನೂ ಇಲ್ಲ. ವುಳೂವಿನ ಶರ್ತು ಯಾವುದೋ ಅದುವೇ ಸ್ನಾನದ ಶರ್ತು.
ಅಷ್ಟರಲ್ಲಿ ಎದ್ದು ನಿಂತ ನಸೀಮಾ ವುಳೂವಿನ ಶರ್ತು ಗೊತ್ತಿದ್ದರೆ ತಾನೆ ಸ್ನಾನದ ಶರ್ತು ತಿಳಿಯುವುದು.
ನಸೀಹಾ; ಹೌದು ಅದು ಸರಿ! ಹಾಗಾದರೆ ಅದು ಮೊದಲು ತಿಳಿಯಬೇಕು. ತಿಳಿಯಲು ಏನು ಮಾಡಬೇಕು. ಕಲಿಯಬೇಕು! ವ್ಯಂಗ್ಯ ಶೈಲಿಯಲ್ಲಿ ಹೇಳಿದಳು. ವುಳೂವಿಗೆ ಹಾಗೂ ಸ್ನಾನಕ್ಕೆ ಐದು ಶರ್ತುಗಳಿವೆ. ವುಳೂ ಸಿಂಧುವಾಗಬೇಕಾದರೆ ಅದು ಪಾಲಿಸಲೇಬೇಕು. ಆ ಪೈಕಿ ಮೊದಲನೇಯದು ಉಪಯೋಗಿಸಲ್ಪಡದ ಮುತ್‌ಲಕಾದ ನೀರು ಆಗಿರಬೇಕು ಎಂಬುದು. ಮುತ್‌ಲಕಾದ ನೀರು ಅಂತ ಹೇಳಿದರೆ ನಾವು ಬರೀ ನೀರು ಎಂದು ಮಾತ್ರ ಸಾಧಾರಣವಾಗಿ ಯಾವುದನ್ನು ಕರೆಯುತ್ತೇವೆಯೋ ಅದು ಆಗಿರುತ್ತದೆ. ಅದೇ ಸಂದರ್ಭ ಬೊಂಡ, ಲಿಂಬೆ ನೀರು ಮುಂತಾದವನ್ನು ಬರೀ ನೀರು ಎಂದು ಮಾತ್ರ ಕರೆಯುವುದಿಲ್ಲ. ಹಾಗಾಗಿ ಅದು ಮುತ್‌ಲಕಾದ ನೀರು ಅಲ್ಲ. ಅದ್ದರಿಂದ ಅದು ವುಳೂವಿಗೆ ಸಾಕಾಗದು.
ಹಾಗಾದರೆ ನದಿ ನೀರಲ್ಲಿ ಸ್ನಾನ ಮಾಡಬಹುದೇ?
ಹೌದು, ನದಿ, ಬಾವಿ, ಕೆರೆಯ ನೀರಲ್ಲಿ ಸ್ನಾನ ಮಾಡಬಹುದು.
ಆರನೇ ದಿನ
ತರಗತಿಗೆ ಬಂದ ಫಾಸಿಲಾಳ ಮುಖದಲ್ಲಿ ಎಂದಿನ ಸಂತೋಷವಿಲ್ಲ. ಮುಖ ತುಂಬಾ ಬಾಡಿದೆ. ಚುರುಚುರುಕಿನ ಫಾಸಿಲಾ ಸುಮ್ಮನಾಗುವುದೆಂದರೆ ಇಡೀ ವೇದಿಕೆಗೆ ದೊಡ್ಡ ವಿಷಯ! ಅದ್ಯಾವುದೋ ಬೇಸರ ಅವಳನ್ನು ಕಾಡಿದೆ ಅಂತ ಕಂಡ ಯಾರಿಗೂ ಅರ್ಥವಾಗುವಂತಿದೆ!
“ಫಾಸಿಲಾ ಏನು ಸಮಸ್ಯೆ ತೆರೆದು ಹೇಳು, ಪರಿಹಾರ ಇದೆಯಾ ನೋಡೋಣ” ನಸೀಹಾ ಅತ್ಯಂತ ಸೌಮ್ಯವಾಗಿಯೇ ಕೇಳಿದಳು.
“ಏನೂ ಇಲ್ಲ, ನನ್ನ ತಂಗಿ ಫಾತಿಮಾಳನ್ನು ನಿನ್ನೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ”
“ಏನು ಅಸೌಖ್ಯ ಅವಳಿಗೆ?”
"ಬ್ಲೀಡಿಂಗ್ ಅಂತೆ"
“ಹೌದಾ! ಅಲ್ಲಾಹು ಬೇಗ ಗುಣಪಡಿಸಲಿ! ಫಾಸಿಲಾ ಚಿಂತೆ ಮಾಡಬೇಡ, ರೋಗಗಳು ಬರುವುದು ಮನುಷ್ಯರಿಗೆ ತಾನೆ? ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದು ಕಷ್ಟಗಳೊಂದಿಗೆಯೇ ಆಗಿದೆ. ಅದನ್ನು ಸಹಿಸಿದರೆ ಮಾತ್ರ ದ್ವಿಲೋಕ ವಿಜಯ ಸಾಧ್ಯ. ಅಲ್ಲಾಹು ನಮ್ಮನ್ನು ದ್ವಿಲೋಕ ವಿಜಯಿಗಳಲ್ಲಿ ಸೇರಿಸಲಿ ಆಮೀನ್.
ಏನೇ ಇರಲಿ! ಇಂದಿನ ನಮ್ಮ ಚರ್ಚಾ ವಿಷಯ ಕೂಡಾ ಬ್ಲೀಡಿಂಗ್ ಆಗಿರಲಿ. ಅದರ ಬಗ್ಗೆ ಹೆಂಗಸರು ಕಲಿತಿರಬೇಕಾದುದು ಅಗತ್ಯ! ಆ ಬಗೆಗಿನ ಕರ್ಮ ವೀಕ್ಷಣೆಯನ್ನು ತಿಳಿಯದೆ ಹೈಳ್ ನಂತೆ ಅದನ್ನು ಕೂಡಾ ಲೆಕ್ಕ ಹಾಕಿ ಕಡ್ಡಾಯ ಕರ್ಮಗಳನ್ನು ಉಪೇಕ್ಷಿಸಿ ಪಾಪಗಳ ಗಂಟು ಕಟ್ಟುವ ಹೆಂಗಸರು ಅದೆಷ್ಟೋ ಇದ್ದಾರೆ. ಹೈಳ್ ಮತ್ತು ನಿಫಾಸ್ (ಹೆರಿಗೆ ರಕ್ತ) ಇವೆರಡರ ಸಮಯಕ್ಕೆ ಹೊರತಾಗಿ ಇತರ ಸಮಯದಲ್ಲಿ ರೋಗ ಕಾರಣವಾಗಿ ಉಂಟಾಗುವ ರಕ್ತ ಸ್ರಾವವಾಗಿದೆ ಬ್ಲೀಡಿಂಗ್. ಅದರ ಅರಬಿ ಹೆಸರೇ ಇಸ್ತಿಹಾಳತ್, ಮುಖ್ಯವಾಗಿ ಇಲ್ಲಿ ಚಿಂತಿಸಬೇಕಾದ ವಿಷಯವೆಂದರೆ ಹೈಳ್ ನಿಫಾಸ್‌ಗಳಿಂದ ನಿಷಿದ್ಧವಾಗುವ ನಮಾಝ್ ಉಪವಾಸಗಳು ಇಲ್ಲಿ ನಿಷಿದ್ಧವಾಗುವುದಿಲ್ಲ. ಬದಲಾಗಿ ಅದೆಲ್ಲವೂ ಕಡ್ಡಾಯವೇ ಆಗಿರುತ್ತದೆ. ಅಲ್ಲದೆ ಈ ರಕ್ತ ಹೋಗುವ ಅವಧಿಯಲ್ಲಿ ಸಂಭೋಗ ನಡೆಸುವುದು ತಪ್ಪಲ್ಲ.
ಅಷ್ಟರಲ್ಲಿ ರಸೀನಾ ಎದ್ದು ನಿಂತು ಇದನ್ನು ಪರಸ್ಪರ ವಿಭಜಿಸಿ ತಿಳಿಯುವುದಾದರೂ ಹೇಗೆ? ಎಂದು ಪ್ರಶ್ನಿಸಿದಳು.
ನಸೀಹಾ; ಅದಕ್ಕೇನು? ಇದೀಗಾಗಲೇ ನಿಫಾಸ್‌ನ ನಿಬಂಧನೆಗಳು, ಅದರ ಕಾಲ ಪರಿಮಿತಿ ಎಲ್ಲವೂ ನಾವು ಕಲಿತಿದ್ದೇವೆ, ಅದಕ್ಕೆ ಹೊರತಾದುದೆಲ್ಲವೂ ಇಸ್ತಿಹಾಳತ್ ಅನ್ನಬಹುದು. ಉದಾಹರಣೆಗೆ: ಹೈಳ್ ನ ಪ್ರಾಯ ಅಂದರೆ 9 ವರ್ಷಕ್ಕೆ 16 ದಿವಸ ಇರುವ ಅವಧಿಗಿಂತ ಮುಂಚೆ ರಕ್ತ ಹೋದರೆ ಅದು ರೋಗ ರಕ್ತವಾಗಿರುತ್ತದೆ. ಅದೇ 24 ಗಂಟೆಗಿಂತ ಕಡಿಮೆ ಅಥವಾ ಅದರ ಗರಿಷ್ಠವಾದ 15 ದಿನಕ್ಕಿಂತ ಹೆಚ್ಚು ರಕ್ತ ಹೋದರೆ ಅದು ಕೂಡಾ ಇಸ್ತಿಹಾಳತ್ ಆಗಿರುತ್ತದೆ. ಅದೇ ರೀತಿ ಹೆರಿಗೆ ರಕ್ತ 60 ದಿನಕ್ಕಿಂತ ಹೆಚ್ಚು ಹೊರಟರೂ ಅದು ಕೂಡಾ ಈ ರೋಗದ ರಕ್ತದ ಸಾಲಿಗೆ ಸೇರುತ್ತದೆ.
ರಮ್ಲಾ: ಈ ಅವಧಿಯಲ್ಲಿ ನಮಾಝ್ ಕಡ್ಡಾಯ ಎಂದು ಹೇಳಿದ್ದೀರಿ! ರಕ್ತ ಹೋಗುವಾಗ ನಮಾಝ್ ಮಾಡುವುದು ಹೇಗೆ?
ಹೌದು! ಅದು ತುಂಬಾ ನಿಗಾವಹಿಸಬೇಕಾದ ವಿಷಯ! ಇಂತಹ ರೋಗ ರಕ್ತವಿರುವ ಓರ್ವ ಮಹಿಳೆಗೆ ನಮಾಝ್ ನ ಸಮಯವಾದ ಬಳಿಕ ವುಳು ಮಾಡಬೇಕು. ಹಾಗಾಗಿ ಮೊದಲೇ ವುಳೂ ಮಾಡಿ ಇತರಂತೆ ಸಮಯವಾಗಲಿಕ್ಕೆ ಕಾಯುವುದು ಸರಿಯಲ್ಲ. ಸಮಯವಾದ ಬಳಿಕ ರಕ್ತ ಹೋಗುವ ಸ್ಥಳವನ್ನು ತೊಳೆದು ಶುಚಿ ಮಾಡಿ ಕೂಡಲೆ ಅಲ್ಲಿ ಹತ್ತಿಯಂತಹ ಮೃದು ವಸ್ತುವನ್ನು ತುಂಬಿಸಬೇಕು. ಆ ಬಳಿಕವೂ ರಕ್ತ ಹೋಗುವುದಾದರೆ ಉದ್ದ ಅಗಲವಿರುವ ಒಂದು ಬಟ್ಟೆ ತುಂಡನ್ನು ಕಟ್ಟಬೇಕು.
ಫಾಸಿಲಾ; ಕೆಯರ್ ಫ್ರೀಯಂತಹದ್ದು ಕಟ್ಟಿದರೆ ಸಾಕಾಗಬಹುದೇ?
ಹೌದು! ಸಾಕಾಗಬಹುದು!
ರಮ್ಲ;ಕಟ್ಟಿದ ಬಳಿಕವೂ ರಕ್ತ ಹೋಗುವುದಾದರೆ?
ಕಟ್ಟಿದ ಬಳಿಕವೂ ರಕ್ತ ಹೋದರೆ ಸಮಸ್ಯೆಯಾಗದು! ಆದರೆ ಕಟ್ಟುವುದರಲ್ಲಿ ತುಂಬಾ ನಿಗಾವಹಿಸಬೇಕು. ಕಟ್ಟುವುದು ಸರಿಯಾಗದ ಕಾರಣ ರಕ್ತ ಹೋಗುವಂತಾಗಬಹುದು! ಹಾಗೇನಾದರೂ ಆದರೆ ಬೇರೆ ಹತ್ತಿ ಇಟ್ಟು ಪುನಃ ಕಟ್ಟಬೇಕು.
ನಸೀಮಾ; ಹತ್ತಿಯನ್ನು ಯೋನಿಯ ಮೇಲೆ ಇಡುವುದಾ?
ಅಲ್ಲ! ಹತ್ತಿ ಇಡುವುದರ ಉದ್ದೇಶ ರಕ್ತವನ್ನು ತಡೆ ಮಾಡುವುದಾಗಿದೆ. ಹಾಗಾಗಿ ಶುದ್ಧಿ ಮಾಡಲು ಕಡ್ಡಾಯವಾಗದ ಸ್ಥಳಕ್ಕಿಂತ ಆಚೆ ಆಗಿರಬೇಕು ಅದನ್ನು ತುಂಬಿಸಬೇಕಾದದ್ದು. ಇನ್ನು ಜಾಗ್ರತೆ ವಹಿಸಬೇಕಾದ ವಿಷಯವೆಂದರೆ ತೊಳೆಯಲು ಕಡ್ಡಾಯವಾದ ಸ್ಥಳದಲ್ಲಿ ಹತ್ತಿ ಇಟ್ಟರೆ, ನಮಾಝ್ ಕೂಡಾ ಅಸಿಂಧುವಾಗುವುದು. ಏಕೆಂದರೆ ಅದು ಶರೀರದ ಬಾಹ್ಯ ಸ್ಥಳವಾಗಿದ್ದು, ಬಾಹ್ಯ ಸ್ಥಳದಲ್ಲಿ ನಜಸಿಟ್ಟು ನಮಾಝ್ ಮಾಡುವುದಾದರೆ ಆ ನಮಾಝ್ ಸಿಂಧುವಾಗದು. ಅಲ್ಲದೆ ಒಳಗಿಟ್ಟ ಹತ್ತಿ ಹೊರಗಿನ ಭಾಗಕ್ಕೆ ಬರದಂತೆ ನಿಗಾವಹಿಸಬೇಕು.
ನಸೀಹಾ: ಹಾಗಾದರೆ ಉಪವಾಸವಿರವವಳು ಹತ್ತಿ ಇಟ್ಟರೆ ಉಪವಾಸ ಸಿಂಧುವಾಗಬಹುದೇ?
ಹೌದು; ಉಪವಾಸವಿರುವವಳು ಹತ್ತಿ ಇಡಬಾರದು, ಏಕೆಂದರೆ ಹತ್ತಿ ಇಡಬೇಕಾದದ್ದು ಯೋನಿಯ ಒಳ ಭಾಗಕ್ಕೆ ಆಗಿದೆ. ನೋಂಬುಗಾರ್ತಿ ಏನಾದರೂ ವಸ್ತು ಒಳಗೆ ಹಾಕಿದರೆ ಉಪವಾಸ ಅಸಿಂದುವಾಗುವುದು. ಇನ್ನು ಬಾಹ್ಯ ಸ್ಥಳದಲ್ಲಿ ಇಟ್ಟರೆ ನಮಾಝ್ ಅಡ್ಡಿಯಾಗುವುದು. ಹಾಗಾಗಿ ಅವಳು ಹತ್ತಿ ಇಡದೆ ಬರೀ ಬಟ್ಟೆಯಿಂದ ಕಟ್ಟಬೇಕು..
ರುಖಿಯಾ; ಹಾಗಾದರೆ ನೊಂಬುಗಾರ್ತಿಯಲ್ಲದವರಿಗೆ ಹತ್ತಿ ಇಡುವುದು ಕಡ್ಡಾಯವೇ?
ಸಹನಾ; ಏನು ರುಖಿಯಾ! ಹತ್ತಿ ಇಡುವುದೆಂದರೆ ಅಷ್ಟೇನು ಭಯವಾ? ಹಾಗೇನೂ ಇಡುವುದು ಕಡ್ಡಾಯವೇನು ಅಲ್ಲ. ಬರೀ ಬಟ್ಟೆ ಕಟ್ಟುವುದರಿಂದ ರಕ್ತ ನಿಲ್ಲಬಹುದಾದರೆ ಅಷ್ಟೆ, ಸಾಕು! ಇಲ್ಲವಾದಲ್ಲಿ ಹತ್ತಿ ಇಡುವುದು ಅಗತ್ಯವಾಗುತ್ತದೆ.
ಇನ್ನೊಂದು ಗಮನಿಸಬೇಕಾದ ವಿಷಯವೇನೆಂದರೆ ಯೋನಿಯೊಳಗೆ ಹತ್ತಿ ಇಟ್ಟು ಕಟ್ಟುವುದು ಮತ್ತು ವುಳೂ ಮಾಡುವುದರ ನಡುವೆ ವಿಳಂಬವಾಗದೆ ಇರುವುದು. ಆದರೆ ವುಳೂ ಮಾಡಿ ಜಮಾಅತ್ ಅಥವಾ ಔರತ್ ಮುಚ್ಚುವಂತಹ ನಮಾಝ್ ಗೆ ಸಂಬಂಧ ಪಟ್ಟ ಕಾರ್ಯಕ್ಕಾಗಿ ನಮಾಝ್ ತಡವಾದರೆ ಅಡ್ಡಿಯಿಲ್ಲ. ಅದೇರೀತಿ ರವಾತಿಬ್ ನಮಾಝ್ಗಾಗಿಯೂ ಫರ್ಳ್ ನಮಾಝ್ ತಡವಾದರೆ ಸಮಸ್ಯೆಯಿಲ್ಲ! ಸಂಬಂಧವಿಲ್ಲದ ಅಗತ್ಯಕ್ಕಾಗಿ ಹಾಗೇನಾದರು ನಮಾಝ್ ತಡ ಮಾಡಿದರೆ ಶುದ್ಧಿ ಬಾತಿಲಾಗುವುದಲ್ಲದೆ ನಮಾಝ್ ಗೆ ಮೊದಲಿನಂತೆ ಪುನಃ ಶುದ್ಧಿ ಮಾಡಿ ವುಳೂ ಆವರ್ತಿಸುವುದು ಕಡ್ಡಾಯವಾಗಿದೆ.
ರಮ್ಲ;ಇನ್ನು ರೋಗ ರಕ್ತವಿರುವ ಹೆಣ್ಣಿಗೆ ನಮಾಝ್ ನ ಸಮಯದಲ್ಲಿನ ಕೆಲವೊಂದು ತಾಸುಗಳಲ್ಲಿ ರಕ್ತ ನಿಲ್ಲುವ ರೂಢಿ ಇದ್ದರೆ ರಕ್ತ ನಿಲ್ಲುವರೆಗೆ ನಮಾಝ್ ಮಾಡಲು ಕಾಯಬೇಕು? ಹಾಗೇನಾದರೂ ರೂಢಿ ಇದ್ದರೆ ಅಥವಾ ನಿಪುಣ ವೈದ್ಯರು ಹೇಳಿದರೆ ಅದಕ್ಕಾಗಿ ಕಾಯುವುದು ಕಡ್ಡಾಯ. ಹಾಗೇನೆ ಆ ಸಮಯದಲ್ಲಿ ರಕ್ತ ನಿಂತರೆ ವುಳೂವಿನ ಹಾಗೂ ನಮಾಝಿನ ಫರ್ಳನ್ನು ಮಾತ್ರ ನಿರ್ವಹಿಸಿ ಆದಷ್ಟು ಬೇಗ ನಮಾಝ್ ಪೂರ್ತಿ ಮುಗಿಸುವುದು. ಆ ಸಮಯ ಜಮಾಅತ್ ಮೊದಲಾದುವುಗಳಿಗಾಗಿ ಇನ್ನಷ್ಟು ತಡಮಾಡಬಾರದು.
ಇಷ್ಟೆಲ್ಲಾ ಕಷ್ಟಪಟ್ಟು ವುಳೂ ಮಾಡಿದ ರೋಗ ಸ್ತ್ರೀಗೆ ಎಷ್ಟು ನಮಾಝ್ ಮಾಡಬಹುದು? ಆಯಿಶಾ ವ್ಯಂಗ್ಯ ಧ್ವನಿಯಲ್ಲಿ ಕೇಳಿದಳು.
ಆಯಿಶಾ! ಎಷ್ಟು ಬೇಕಾದರೂ ನಮಾಝ್ ಮಾಡಬಹುದು. ಆದರೆ ಫರ್ಳಲ್ಲ! ಸುನ್ನತ್ ನಮಾಝ್, ಒಂದು ವುಳುವಿಗೆ ಫರ್ಳ್ ನಮಾಝ್ ಒಂದು ಮಾತ್ರ ನಸೀಹಾಳ ಉತ್ತರ ಕೂಡ ಅದೇ ದಾಟಿಯಲ್ಲಿಯೇ ಇತ್ತು. ಅದೇ ಸಂದರ್ಭ ಅದೇ ವುಳೂವಿನಲ್ಲಿ ಫರ್ಳ್ ಕಿಫಾ ಆದ ಮಯ್ಯಿತ್ ನಮಾಝ್ ಕೂಡಾ ಎಷ್ಟು ಬೇಕಾದರೂ ಮಾಡಬಹುದು.
ಹಾಗಾದರೆ ಹರಕೆಯ ನಮಾಝ್ ಎಷ್ಟು ಬೇಕಾದರೂ ನಿರ್ವಹಿಸಬಹುದೇ?
ನಸೀಹಾ; ಓ! ನಸೀಮಾ ` ಒಳ್ಳೆಯ ವರ ಸಿಗಲಿಕ್ಕೆ ನಮಾಝ್ ಹರಕೆ ಮಾಡಿದ್ದಾಳೆ ಅಂತ ಕಾಣುತ್ತದೆ. ಅಷ್ಟರಲ್ಲಿ ಎಲ್ಲರೂ ಗೊಳ್ಳನೆ ನಕ್ಕರು.
ಅದೇನೇ ಇರಲಿ ಇಸ್ತಿಹಾಳತ್, ಇರುವ ರೋಗಿಗೆ ಒಂದು ವುಳೂವಿಗೆ ಒಂದೇ ಹರಕೆಯ ನಮಾಝ್ ಗೆ ಅವಕಾಶ.
ರಸೀನಾ;'ಒಂದು ಇಸ್ತಿಹಾಳತ್‌ಗಾರ್ತಿಗೆ ವುಳು ಮಾಡಿದ ಬಳಿಕ ರಕ್ತ ನಿಂತರೆ ವುಳೂ ವುನಃ ಮಾಡಬೇಕೆ? ಆ ರಕ್ತ ನಿಂತ ಸಮಯದ ಬಳಿಕ ಕಡ್ಡಾಯ ಕಾರ್ಯಗಳೊಂದಿಗೆ ವುಳು ಮತ್ತು ನಮಾಝ್ ಮಾಡಿ ಮುಗಿಸುವಷ್ಟು ಸಮಯ ಸಿಕ್ಕರೆ ಪುನಃ ವುಳೂ ಮಾಡಿ ನಮಾಝ್ ಮಾಡುವುದು ಕಡ್ಡಾಯ. ಅಲ್ಲಿ ಮೊದಲ ಶುದ್ಧಿ ಅಸಿಂಧುವಾಗುತ್ತದೆ.
ಹಾಗಾದರೆ ಮೊದಲ ಶುದ್ಧಿಯಿಂದ ನಮಾಝ್ ಮಾಡಿದ್ದರೆ ಅದನ್ನು ಆವರ್ತಿಸಬೇಕೆ?
ಅಲ್ಲಿ ಹೆಚ್ಚಿನ ವಿಷಯ ಗಮನಿಸಬೇಕಾಗಿದೆ. ಅವಳಿಗೆ ಮೊದಲು ಹೇಳಿದ ಹಾಗೆ ನಮಾಝ್ ನ ಸಮಯದಲ್ಲಿ ಕೆಲವು ತಾಸು ರಕ್ತ ನಿಲ್ಲುವ ರೂಢಿ ಇದ್ದರೆ ಅಥವಾ ವೈದ್ಯರು ಹಾಗೆ ಹೇಳಿದ್ದು ಅವಳು ಅದ್ಯಾವುದಕ್ಕೂ ಕಾಯದೆ ನಮಾಝ್ ಮಾಡಿದ್ದು ಬಳಿಕ ರಕ್ತ ನಿಂತರೆ ಅವಳು ಪುನಃ ನಮಾಝ್ ಮಾಡಬೇಕು. ಇನ್ನು ರಕ್ತ ನಿಲ್ಲುವ ರೂಢಿಯೂ ಇಲ್ಲಿ ಅಥವಾ ವೈದ್ಯರ ಹೇಳಿಕೆಯೂ ಇಲ್ಲದಿದ್ದ ಸಂದರ್ಭ ಅವಳು ನಮಾಝ್ ಪ್ರಾರಂಭಿಸಿ ಮುಗಿಸುವುದಕ್ಕೆ ಮುನ್ನ ರಕ್ತ ನಿಂತರೆ ಅಲ್ಲಿ ಕೂಡಾ ಶುದ್ಧಿ ಮತ್ತು ವುಳೂವನ್ನು ಆವರ್ತಿಸಿ ಪುನಃ ನಮಾಝ್ ಮಾಡಬೇಕು. ರಕ್ತ ನಿಲ್ಲುವುದು ನಮಾಝ್ ಪ್ರಾರಂಭಿಸಿ ಮುಗಿದ ಬಳಿಕವಾದರೆ ಇಲ್ಲಿ ನಮಾಝಿನ ಪುನಾರಾವರ್ತನೆ ಕಡ್ಡಾಯವಿಲ್ಲ.
ರಝಿಯಾ; ಇಸ್ತಿಹಾಳತ್ ಇರುವವಳ ವೂಳೂವಿನ ನಿಯ್ಯತ್ ಸಾಮಾನ್ಯ ವುಳೂವಿನ ನಿಯ್ಯತ್ ನಂತೆಯಾ?
ಅಲ್ಲ! ಅವಳು ಹಾಗೂ ನಿತ್ಯ ಅಶುದ್ಧಿ ಉಳ್ಳವರಿಗೆ ಅಶುದ್ಧಿಯಿಂದ ಶುದ್ಧಿಯಾಗುವುದು ಎಂಬಂತಹ ನಿಯ್ಯತ್ ಸಾಕಾಗದು, ಏಕೆಂದರೆ ಅವರು ನಿತ್ಯ ಅಶುದ್ದಿಗಾರರಾಗಿರುವುದರಿಂದ ಈ ವುಳೂವಿನಿಂದ ಶುದ್ಧಿಯಾಗಲಾರರು. ಬದಲಾಗಿ ಅವರು ಫರ್ಳ್ ನಮಾಝನ್ನು ನಾನು ನಿರ್ವಹಿಸುತ್ತೇನೆಂದು ಅಥವಾ ಫರ್ಳ್ ನಮಾಝಿಗಾಗಿ ನಾನು ವುಳೂ ಮಾಡುತ್ತೇನೆಂದು ಸಂಕಲ್ಪಿಸುವುದು ಕಡ್ಡಾಯ! ಈ ರೀತಿ ವುಳೂ ಮಾಡಿದರೆ ವುಳೂ ಸುನ್ನತ್ ಆದ ಕಾರ್ಯಕೂಡ ಅವಳಿಗೆ ಇದರಿಂದ ನಿರ್ವಹಿಸಬಹುದು.
ರಾಬಿಯಾ; ನಮಾಝನ್ನು ನಿರ್ವಹಿಸಲು ಎಂದು ಮಾತ್ರ ಸಂಕಲ್ಪಸಿ ವುಳೂ ಮಾಡಿದರೆ ಏನಾಗಬಹುದು?
ಫರ್ಳ್ ನಮಾಝ್ ಎಂದು ಸಂಕಲ್ಪಿಸಿದರೆ ಬರೀ ನಮಾಝ್ ನಿರ್ವಹಿಸಲು ಅಂತ ಮಾತ್ರ ಸಂಕಲ್ಪಿಸಿ ವುಳೂ ಮಾಡಿದ್ದರೆ, ಸುನ್ನತ್ ನಮಾಝ್ ಮಾತ್ರ ಮಾಡಬಹುದು. ಆದರೆ ಫರ್ಳ್ ನಮಾಝ್, ಹರಕೆಯ ನಮಾಝ್ ಆಗಲೀ ಮಾಡುವಂತಿಲ್ಲ. ಆದರೆ ಮುಸ್ಹಫನ್ನು ಮುಟ್ಟುವಂತಹ ಕಾರ್ಯಗಳು ಆನುವದನೀಯವಾಗುತ್ತದೆ. ಇನ್ನು ರಕ್ತ ನಿಲ್ಲುವ ಇಸ್ತಿಹಾಳತ್‌ಗಾರ್ತಿಗೆ ಮೇಲೆ ಹೇಳಿದ ಹಾಗೆ ರಕ್ತ ನಿಂತ ತಾಸುಗಳಲ್ಲಿ ಅವಳು ವುಳೂ ಮಾಡುವುದಾದರೆ ಅಶುದ್ಧ ನೀಗಿಸಲು ಅಂತ ಸಂಕಲ್ಲಿಸಬಹುದು.
ರಝಿಯಾ;ಇವೆಲ್ಲಾ ಬ್ಲೀಡಿಂಗ್ ಇದ್ದವಳಿಗೆ ಮಾತ್ರವಾ? ಅಥವಾ ಇನ್ಯಾವುದೋ ರೋಗ ಈ ರೀತಿ ನಿಯಮಕ್ಕೆ ಅನ್ವಯವಾಗುತ್ತದೆಯಾ?
ನಸೀಹಾ; ಹೌದು! ಬ್ಲೀಡಿಂಗ್ ಮಾತ್ರವಲ್ಲ! ನಿತ್ಯ ಮೂತ್ರ ಹೋಗುತ್ತಿರುವವರು ಕೂಡಾ ಇದೇ ಸಾಲಿಗೆ ಸೇರುತ್ತಾರೆ.
ನಮಗೆ ಇವತ್ತಿಗೆ ಸಾಕು! ನಾಳೆ ಹೆಚ್ಚಿನ ವಿಷಯ ತಿಳಿಯೋಣ. ಅಲ್ಲಾಹು ನಮಗೆ ಇನ್ನಷ್ಟು ತಿಳಿಯಲು ಮತ್ತು ತಿಳಿಸಲು ತೌಫೀಕ್ ನೀಡಲಿ. ನಸೀಹಾಳ ದುಆಕ್ಕೆ ಎಲ್ಲರೂ 'ಆಮೀನ್' ಎಂದರು. ಮೂರು ಸ್ವಲಾತಿನೊಂದಿಗೆ ಅವತ್ತಿನ ಕ್ಲಾಸ್ ವಿರಾಮಗೊಂಡಿತು.
ಏಳನೇ ದಿನ
ಫಾಸಿಲಾ ಇವತ್ತು ಎಲ್ಲರಿಗಿಂತಲೂ ನಗು ಮುಖದಲ್ಲಿ ಇದ್ದಾಳೆ. ಏಕೆಂದರೆ ನಿನ್ನೆಯೇ ತಂಗಿ ಫಾತಿಮಾ ಸುಖವಾಗಿ ಆಸ್ಪತ್ರೆಯಿಂದ ಬಂದಿದ್ದಾಳೆ. ನಸೀಹಾ ಅಕ್ಕಳ ದುಆ ಅಲ್ಲಾಹು ಸ್ವೀಕರಿಸಿದ್ದಾನೆ. ಫಾಸಿಲಾ ತುಂಬು ನಗು ಮುಖದಿಂದಲೇ ಹೇಳಿದಳು. ಹೌದು ನಸೀಹಾಳ ಪ್ರಾರ್ಥನೆಗೆ ಉತ್ತರ ಸಿಗದೆ ಇರಲಿಕ್ಕಿಲ್ಲ! ಏಕೆಂದರೆ ಏನೂ ಅರಿಯದ ನಮಗೆ ದೀನೀ ಜ್ಞಾನವನ್ನು ಕಲಿಸುವ ಅವಳ ದುಆವನ್ನು ಅಲ್ಲಾಹು ಸ್ವೀಕರಿಸದೆ ಇರಲಾರನು! ಆಯಿಶಾ ಹಜ್ಜುಮ್ಮ ತುಂಬ ಬಾವುಕತೆಯಿಂದ ನುಡಿದರು.
ಅಷ್ಟರಲ್ಲಿ ನಸೀಹಾ ಕೂಡಾ ಕೋಣೆಯೊಳಗೆ ಬಂದಳು. ಫಾಸಿಲಾಳ ನಗು ಮುಖ ಕಂಡು ಹಾ! ತಂಗಿಗೆ ಗುಣವಾದಂತೆ ಕಾಣುತ್ತದಲ್ಲಾ?
ಹೌದು! ಅಕ್ಕಾ ನಿಮ್ಮ ದುಆಕ್ಕೆ ಅಲ್ಲಾಹು ಉತ್ತರ ನೀಡಿದ್ದಾನೆ. ನನ್ನ ದುವಾ ಮಾತ್ರವಲ್ಲ, ನಿಮ್ಮ ಆಮೀನ್ ಕೂಡಾ ಕಾರಣ. ಏಕೆಂದರೆ ನೀವು ಕೂಡಾ ಇಲ್ಲಿ ಕಲಿಯಲು ತೊಡಗಿದ್ದು, ಅಲ್ಲಾಹು ಅದನ್ನು ಸ್ವೀಕರಿಸಿದರೆ ಸ್ವರ್ಗದ ದಾರಿ ಪ್ರವೇಶಿಸಿದವರಾಗಿರುತ್ತೀರಿ. ಅಲ್ಲಾಹು ನಮ್ಮನ್ನು ದುಆಕ್ಕೆ ಉತ್ತರವಿರುವವರ ಭಾಗ್ಯವಂತರ ಪಾಲಿಗೆ ಸೇರಿಸಲಿ-ಆಮೀನ್.
ನಮಗೆ ಈ ಕುರಿತು ಇನ್ನಷ್ಟು ವಿಷಯವನ್ನು ಕಲಿಯಬೇಕು. ಅಷ್ಟರಲ್ಲಿ ಎದ್ದು ನಿಂತ ಹಬೀಬ ಪ್ರಥಮ ಬಾರಿಗೆ ರಕ್ತ ಸ್ರಾವ ಪ್ರಾರಂಭವಾದ ಹೆಣ್ಣು ಹೈಳ್ ಮತ್ತು ಇಸ್ತಿಹಾಳತ್ ಯಾವ ರೀತಿ ತಿಳಿಯಬಹುದು?
ಮುಟ್ಟಾಗುವ ಪ್ರಾಯಕ್ಕೆ ತಲುಪಿದ ಹೆಣ್ಣಿಗೆ ರಕ್ತ ಸ್ರಾವ ಪ್ರಾರಂಭವಾದರೆ ಅವಳು ಹೈಳ್ ಎಂದು ಲೆಕ್ಕ ಹಾಕಿ ನಮಾಝ್ ಹಾಗೂ ಇನ್ನಿತರ ವಿಷಯ ಕೈ ಬಿಡಬೇಕು. ಆ ರಕ್ತ 24 ಗಂಟೆಗೆ ಮೊದಲು ನಿಂತು 15 ದಿನಕ್ಕಿಂತ ಮೊದಲು ಮರಳಿ ಬರದಿದ್ಧರೆ ಅದನ್ನು ರೋಗ ರಕ್ತವೆಂದು ಲೆಕ್ಕ ಹಾಕಿ, ಆ ಹೊತ್ತಿನಲ್ಲಿ ಬಿಟ್ಟು ಹೋದ ನಮಾಝನ್ನು ಖಳಾ ನಿರ್ವಹಿಸಬೇಕು.
ನಸೀಮಾ: ಅವಳ ರಕ್ತಸ್ರಾವ 15 ದಿನ ಕಳೆದು ನಿಲ್ಲದಿದ್ದರೆ?
ಮುಟ್ಟಿನ ಪ್ರಾಯಕ್ಕೆ ತಲುಪಿದ ಹೆಣ್ಣಿನಲ್ಲಿ ಮೊದಲು ಕಂಡು ಬರುವ ರಕ್ತ ಸ್ರಾವ 15 ದಿನಕ್ಕಿಂತಲೂ ಹೆಚ್ಚಾದರೆ ಅವಳಿಗೆ ಇಸ್ತಿಹಾಳತ್ ಎಂದು ಅರ್ಥ. ಇದೆಲ್ಲವೂ ಒಟ್ಟಿಗೆಯಾದ್ದರಿಂದ ಹೈಳ್ ಮತ್ತು ಇಸ್ತಿಹಾಳತನ್ನು ವಿವೇಚಿಸಲಾಗದಿದ್ದರೆ 24 ಗಂಟೆ ಹೈಳ್ ಎಂದು ಬಾಕಿ ತಿಂಗಳ 29 ದಿನವೂ ಇಸ್ತಿಹಾಳತ್ ಎಂದು ಲೆಕ್ಕ ಹಾಕಬಹುದು.
ಸಫಿಯಾ:ಹೈಳ್ ಎಂದು ಲೆಕ್ಕಹಾಕಿ 15 ದಿನದವರೆಗೆ ನಮಾಝ್ ಉಪೇಕ್ಷಿಸಿದ್ದರೆ ಅದನ್ನು ಖಲಾ ಮಾಡಬೇಕೆ?
ಹೌದು ಮುಟ್ಟಿನ ಅವಧಿಯಲ್ಲಿ ಅತ್ಯಂತ ಕಡಿಮೆ ದಿನಕ್ಕೆ ಹೊರತಾಗಿ ಬಾಕಿ ಇದ್ದುದು ಹೈಳ್ ಎಂಬುದು ದೃಢವಲ್ಲದಿರುವುದರಿಂದ ಉಳಿದ ದಿನಗಳ ನಮಾಝನ್ನು ಖಳಾ ಮಾಡಬೇಕಾಗಿದೆ.
ಝೀನತ್: ಮೊದಲ ರಕ್ತ ಹೋಗುವ ಹೆಣ್ಣಿನಲ್ಲಿ ಇಸ್ತಿಹಾಳತ್ ಹಾಗೂ ಹೈಳ್ ವಿವೇಚಿಸಲು ದಾರಿ ಇದೆಯಾ?
ಹೌದು!! ಅದು ಒಂದು ಪ್ರಬಲ ಹಾಗೂ ಇನ್ನೊಂದು ದುರ್ಬಲವಾಗಿ ಹರಿಯುವುದಾದರೆ ಪ್ರಬಲವಾದದ್ದು ಹೈಳ್ ಎಂದೂ ದುರ್ಬಲವಾದದ್ದು ಇಸ್ತಿಹಾಳತ್ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಮೂರು ನಿಬಂಧನೆಯಿದೆ. ಪ್ರಬಲವಾದ ರಕ್ತ ಹರಿಯುವುದು 24 ಗಂಟೆಗಳಿಗಿಂತ ಕಡಿಮೆಯಾಗಬಾರದು.
ಎರಡನೇಯ ನಿಬಂಧನೆ: 15 ದಿನಕ್ಕಿಂತ ಅಧಿಕವಾಗದಿರುವುದು.
ಮೂರನೇಯದ್ದು: ದುರ್ಬಲ ರಕ್ತ ಎರಡು ಹೈಳ್ ನ ಮಧ್ಯ ಇರುವ ಕನಿಷ್ಟ ಶುದ್ದಿಯ ಸಮಯವಾದ 15 ದಿನಕ್ಕಿಂತ ಕಡಿಮೆಯಾಗದಿರಬೇಕು. ಇದರಲ್ಲಿ ಯಾವುದಾದರೂ ಒಂದು ನಿಯಮ ಇಲ್ಲವಾದರೆ ಮೊದಲ ದಿನ ಹೈಳ್ ಎಂದೂ ಬಾಕಿ ತಿಂಗಳ 29 ದಿನ ಇಸ್ತಿಹಾಳತ್ ಎಂದೂ ಲೆಕ್ಕ ಹಾಕಬಹುದಾಗಿದೆ..
ರಸೀನಾ:ರಕ್ತ ಪ್ರಭಲ ಅಥವಾ ದುರ್ಬಲ ಎಂದು ತಿಳಿಯಲು ಏನದರೂ ದಾರಿ ಇದೆಯಾ?
ಹೌದು! ಅದು ತಿಳಿಯಲೇಬೇಕಾದ ಕಾರ್ಯವಾಗಿದೆ. ರಕ್ತದ ಬಣ್ಣದ ಆಧಾರದ ಮೇಲೆ ಇದು ತಿಳಿಯಬಹುದು ಕೆಲವೊಮ್ಮೆ ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ರಕ್ತ ಹೋಗಬಹುದು. ಆಗ ಕಪ್ಪು ಪ್ರಬಲವೆಂದು ಕೆಂಪು ದುರ್ಬಲವೆಂದು ಅರ್ಥ. ಇನ್ನು ಹೆಚ್ಚು ಕೆಂಪು ಮತ್ತು ಕಡಿಮೆ ಕಪ್ಪಿನ ರಕ್ತವಾದರೆ ಹೆಚ್ಚು ಕೆಂಪು ಪ್ರಬಲವೆಂದು ಕಡಿಮೆ ಕಪ್ಪು ದುರ್ಬಲವೆಂದು ಲೆಕ್ಕ ಹಾಕಲಾಗುತ್ತದೆ. ಇನ್ನು ಕಡಿಮೆ ಕೆಂಪು ಮತ್ತು ಹಳದಿ ರಕ್ತ ಕಂಡರೆ ಕಡಿಮೆ ಕೆಂಪು ಪ್ರಬಲ ಮತ್ತು ಹಳದಿ ದುರ್ಬಲವೆಂದು ಅರ್ಥ. ಇನ್ನು ದುರ್ವಾಸನೆ ಇರುವ ಮತ್ತು ಇಲ್ಲದ ಎರಡು ರೂಪದಲ್ಲಿ ರಕ್ತ ಹೋದರೆ, ದುರ್ವಾಸನೆ ಇರುವುದು ಪ್ರಬಲವೆಂದು ಇಲ್ಲದ್ದು ದುರ್ಬಲವೆಂದು ಅರ್ಥ.
ನಸೀಮಾ: ಇನ್ನು ಹೆಣ್ಣೂಬ್ಬಳಿಗೆ ಒಂದು ದಿನ ಮಾತ್ರ ಕಪ್ಪು ರಕ್ತ ಕಂಡು, ಆ ಬಳಿಕ ದೀರ್ಘಕಾಲ ನಿರಂತರ ಕೆಂಪು ರಕ್ತ ಕಂಡರೆ ಅಲ್ಲಿ ಹೈಳ್ ಮತ್ತು ಇಸ್ತಿಹಾಳತ್ ಯಾವುದು?
ಅವಳು ಕಪ್ಪು ರಕ್ತ ಕಂಡ ಮೊದಲ ದಿನ ಹೈಳ್ ಎಂದು ಕೆಂಪು ರಕ್ತ ಕಂಡ ಕಾಲಪೂರ್ತಿ ಇಸ್ತಿಹಾಳತ್ ಎಂದು ಲೆಕ್ಕ ಹಾಕಬೇಕು. ಏಕೆಂದರೆ ಶುದ್ಧಿಯ ಕಾಲಕ್ಕೆ ಒಂದು ಪರಿಮಿತಿ ಇಲ್ಲ ತಾನೆ?
ನಸೀಮಾ:ಒಂದು ಸ್ತ್ರೀಗೆ 10 ದಿನ ಕಪ್ಪು ರಕ್ತ ಮತ್ತು 10 ದಿನ ಕೆಂಪು ರಕ್ತ ಹೊರಟ ನಂತರ ಪೂರ್ಣವಾಗಿ ನಿಂತರೆ ಹೈಳ್ ಮತ್ತು ಇಸ್ತಿಹಾಳತ್ ಯಾವುದಾಗಿದೆ?
ಕಪ್ಪು ರಕ್ತ ಕಂಡ ಹತ್ತು ದಿನ ಹೈಳ್ ಎಂದು ಬಾಕಿ ದಿನ ಇಸ್ತಿಹಾಳತ್ ಎಂದು ಲೆಕ್ಕ ಹಾಕಬೇಕು.
ನಸೀಮಾ: ಇಲ್ಲಿ ದುರ್ಬಲ ರಕ್ತ ಹದಿನೈದು ದಿನಕ್ಕಿಂತ ಕಡಿಮೆ ಹರಿದಿದೆಯಲ್ಲ?
ದುರ್ಬಲ ಹದಿನೈದು ದಿನಕ್ಕಿಂತ ಕಡಿಮೆಯಾಗಬಾರದು ಎಂಬ ನಿಬಂಧನೆ ಇರುವುದು ರಕ್ತ ನಿರಂತರ ಹರಿಯುವ ಸಮಯದಲ್ಲಾಗಿದೆ. ಅಂದರೆ ಇಲ್ಲಿ ಕೆಂಪು ರಕ್ತ ಹತ್ತು ದಿನ ಹೋದ ಬಳಿಕ ರೋಗ ಶಮನವಾಗಿ ರಕ್ತ ಸ್ರಾವ ನಿಲ್ಲುವುದರಿಂದ ಈ ಸಮಸ್ಯೆ ಬಾಧಿಸುವುದಿಲ್ಲ. ಏಕೆಂದರೆ ಕೆಂಪು ರಕ್ತ ಹೋದ ಸಮಯ ಮತ್ತು ಉಳಿದ ದಿನ ಸೇರಿ ಶುದ್ಧಿಯ ಕನಿಷ್ಠ ಸಮಯ ತಲುಪುತ್ತದೆ.
ನಸೀಮಾ: ಇಷ್ಟರವರೆಗೆ ವಿವರಿಸಿದ್ದು ಮೊದಲ ಬಾರಿಗೆ ಋತುಮತಿಯಾಗುವ ಹೆಣ್ಣಿನ ಬಗ್ಗೆಯಾಗಿದೆ. ಹಾಗಾದರೆ ಸಾಧಾರಣ ಋತುಮತಿಯಾಗುವ ಹೆಣ್ಣಿಗೆ ಒಮ್ಮೆ ರಕ್ತ ಸ್ರಾವ ಉಂಟಾಗಿ ಹದಿನೈದು ದಿನ ಕಳೆದ ಬಳಿಕವೂ ನಿಲ್ಲದಿದ್ದರೆ ಏನು ಮಾಡುಬೇಕು?
ಮೊದಲು ಹೈಳ್ ಹಾಗೂ ಶುದ್ಧಿ ಉಂಟಾದ ಮಹಿಳೆಗೆ ಒಮ್ಮೆ ರಕ್ತ ಸ್ರಾವ ಉಂಟಾಗಿ ಹದಿನೈದು ದಿನ ಕಳೆದೂ ರಕ್ತ ನಿಲ್ಲಲೂ ಇಲ್ಲ, ಬಣ್ಣ ಕೂಡ ವ್ಯತ್ಯಾಸ ಹೊಂದಿಲ್ಲವಾದರೆ ಅವಳ ಮೊದಲಿನ ರೂಡಿ ಪ್ರಕಾರ ಇಬಾದತ್ ಮಾಡಬೇಕು.
ಉದಾಹರಣೆಗೆ: ಮೊದಲ ತಿಂಗಳಲ್ಲಿ 1 ರಿಂದ 7 ರವರೆಗೆ ಹೈಳ್ ಮತ್ತು ಬಾಕಿ ಶುದ್ದಿ ಆದರೆ ಅದನ್ನು ಅನುಸರಿಸಿ ಈಗಲೂ ಕೂಡ 1 ರಿಂದ 7 ರ ವರೆಗೆ ಹೈಳ್ ಮಾಡಿ ಉಳಿದ ದಿನಗಳನ್ನು ಇಸ್ಕಿಹಾಳತ್ ಎಂದು ಲೆಕ್ಕ ಹಾಕಬೇಕಾಗಿದೆ.
ಹಸೀನಾ:ಮೊದಲಿನ ತಿಂಗಳುಗಳಲ್ಲಿ ಹೈಳ್ ಶುದ್ಧಿಯಾದದ್ದು ಭಿನ್ನ ರೂಪಗಳಲ್ಲಿಯಾದರೆ ಯಾವ ತಿಂಗಳನ್ನು ಲೆಕ್ಕಕ್ಕೆ ತೆಗೆಯಬೇಕು?
ನಸೀಹಾ: ಹಾಗಾದರೆ ಇಸ್ತಿಹಾಳತ್ತಿನ ತಿಂಗಳ ಮುಂಚಿನ ತಿಂಗಳನ್ನು ತೆಗೆದು ಅದನ್ನು ಅನುಸರಿಸಬೇಕು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಮೊದಲು ಇಸ್ತಿಹಾಳತ್ ಪ್ರಾರಂಭವಾಗುವಾಗ 15 ದಿನದವರೆಗೂ ಕಾಯಬೇಕು ಆ ಸಮಯ ಹೈಲ್‌ನಿಂದ ನಿಷೇಧವಾದ ಎಲ್ಲಾ ಕಾರ್ಯವನ್ನು ವರ್ಜಿಸಬೇಕು. ಹದಿನೈದು ದಿನದಲ್ಲಿಯೂ ನಿಲ್ಲದಿದ್ದರೆ ಅದನ್ನು ಇಸ್ತಿಹಾಳತ್ ಎಂದು ಲೆಕ್ಕಹಾಕಿ ರೂಡಿ ಪ್ರಕಾರ 5 ದಿನದ ಬಳಿಕ ಇರುವ ನಮಾಝ್ ಹಾಗೂ ಇತರ ಕಡ್ಡಾಯ ಕರ್ಮಗಳನ್ನು ಖಳಾ ಮಾಡಬೇಕು. ಅದರ ಬಳಿಕ ತಿಂಗಳುಗಳಲ್ಲಿ 5 ದಿನದವರೆಗೆ ಹೈಳ್ ಎಂದು ಬಾಕಿ ದಿನ ಇಸ್ತಿಹಾಳತ್ ಎಂದು ಲೆಕ್ಕ ಹಾಕಬೇಕು.
ಹಸೀನಾ:ಮೊದಲು ರಕ್ತಸ್ರಾವ ಮತ್ತು ಶುದ್ಧಿ ಉಂಟಾಗಿರುವ ಹೆಣ್ಣಿಗೆ ಇಸ್ತಿಹಾಳತ್ ಆದಾಗ ಅದನ್ನು ವಿವೇಚಿಸಲು ಸಾಧ್ಯವಾದರೆ ಅಲ್ಲಿ ಯಾವುದನ್ನು ಲೆಕ್ಕ ಹಾಕಬೇಕು?
ಮೊದಲು ಹೇಳಿದ ಹಾಗೆ ರಕ್ತದ ಪ್ರಬಲತೆ ಮತ್ತು ದುರ್ಬಲತೆಯನ್ನು ವಿವೇಚಿಸಲು ಸಾಧ್ಯವಾದರೆ ಪ್ರಭಲ ರಕ್ತವನ್ನು ಹೈಲ್ ಆಗಿಯೂ ದುರ್ಬಲ ರಕ್ತವನ್ನು ಇಸ್ತಿಹಾಳತ್ ಆಗಿಯೂ ವಿವೇಚಿಸಬೇಕು. ಅಲ್ಲಿ ಮೊದಲ ರೂಢಿಯನ್ನು ನೋಡಬೇಕೆಂದಿಲ್ಲ.
ಉದಾಹರಣೆಗೆ: ಸಾಧಾರಣವಾಗಿ ಹೆಣ್ಣೂಬ್ಬಳಿಗೆ ತಿಂಗಳ ಮೊದಲ 5 ದಿನ ಹೈಲ್ ಉಂಟಾಗುವುದು ರೂಢಿ ಆದರೆ ಒಮ್ಮೆ ಮೊದಲು 5 ದಿನ ಕೆಂಪು ರಕ್ತ ಮತ್ತು 5 ದಿನ ಕಪ್ಪು ರಕ್ತ ನಂತರ ತೆಳು ಕೆಂಪು ರಕ್ತ ಕಂಡರೆ ಕಪ್ಪು ರಕ್ತ ಕಂಡ ಎರಡನೇಯ 5 ದಿನಗಳನ್ನು ಹೈಳ್ ಎಂದು ಲೆಕ್ಕ ಹಾಕಬೇಕಾಗಿದೆ.
ರೈಹಾನ:ಇಸ್ತಿಹಾಳತ್ ಗಾರ್ತಿಯಾಗಿರುವ ಒಬ್ಬಳು ಸ್ತ್ರೀಗೆ ಈ ಮುಂಚೆ ಹೈಲ್ ಮತ್ತು ಶುದ್ಧಿಯಾಗಿದ್ದರೂ ಕೂಡ ಆದರೆ ಲೆಕ್ಕದ ಬಗ್ಗೆ ನೆನಪಿಲ್ಲ. ಅಲ್ಲದೆ ರಕ್ತವನ್ನು ವಿವೇಚಿಸಿ ತಿಳಿಯಲು ಕೂಡಾ ಸಾಧ್ಯವಾಗುತ್ತಿಲ್ಲ. ಅಂತಹಾ ಸಂದರ್ಭ ಅವಳು ಏನು ಮಾಡಬೇಕು?
ನಸೀಹಾ:ರೈಹಾನಾಳ ಸಂಶಯ ಬಹಳಷ್ಟು ಆಳವಾಗಿ ಅರಿಯಬೇಕಾದ ವಿಷಯ. ಅದೊಂದು ಜಠಿಲ ಸಮಸ್ಯೆ ಕೂಡಾ ಹೌದು. ಏಕೆಂದರೆ ಮೇಲೆ ವಿವರಿಸಲ್ಪಟ್ಟ ಹುಡುಗಿ ಎಲ್ಲಾ ಸಮಯಗಳಲ್ಲಿಯೂ ಕೂಡಾ ಶುದ್ದಿ ಮತ್ತು ಹೈಳ್ ಗೆ ಸಾಧ್ಯತೆ ಉಳ್ಳವಳಾಗಿದ್ದಾಳೆ. ಆದ್ದರಿಂದ ಅವಳು ಸೂಕ್ಷ್ಮತೆ ಪಾಲಿಸುವುದು ಅಗತ್ಯ ಅದು ಹೇಗೆಂದರೆ ಕೆಲವು ಕಾರ್ಯಗಳಲ್ಲಿ ಅವಳು ಹೈಳ್ ಗಾರ್ತಿಯಂತೆಯೂ ಇನ್ನಷ್ಟು ಕಾರ್ಯಗಳಲ್ಲಿ ಇಸ್ತಿಹಾಳತ್‌ಗಾರ್ತಿಯಾಗಿಯೂ ಇರಬೇಕು. ಅಂದರೆ ಸಂಭೋಗ ನಡೆಸುವುದು ಮೊಣಕಾಲಿನವರೆಗಿನ ಸ್ಥಳ ಪತಿಗೆ ಸುಖ ತೆಗೆಯಲು ಬಿಡುವುದು ನಮಾಝ್ ಅಲ್ಲದ ಸಂದರ್ಭದಲ್ಲಿ ಖುರ್‌ಆನ್ ಪಾರಾಯಣ ಮಾಡುವುದು ಎಂಬೀ ಕಾರ್ಯಗಳಲ್ಲಿ ಅವಳಿಗೆ ಹೈಳ್ ಗಾರ್ತಿ ವಿಧಿಯಾಗಿದೆ. ಅಥವಾ ಅವಳಿಗೆ ಇದು ನಿಷಿದ್ಧವಾಗಿದೆ. ಅದೇ ಸಂದರ್ಭ ಸುನ್ನತ್ ಫರ್‌ಲ್ ಆದ ನಮಾಝ್ ವೃತಾನುಷ್ಠಾನ ನಮಾಝ್ನಲ್ಲಿ ಖುರ್‌ಆನ್ ಓದುವುದು ಮುಂತಾದ ಕಾರ್ಯಗಳಲ್ಲಿ ಶುದ್ಧಿ ಇರುವವರ ವಿಧಿಯಾಗಿದೆ. ಅಥವಾ ಅದು ಅವಳಿಗೆ ಅನುವದನೀಯ...
ಮೈಮೂನ: ಎಲ್ಲಾ ಸಂದರ್ಭ ಹೈಳ್ ಇರಲು ಸಾಧ್ಯತೆ ಇದ್ದರೆ ಅದು ನಿಲ್ಲಲು ಕೂಡ ಸಾಧ್ಯತೆ ಇದೆಯಲ್ಲ. ಹಾಗಾದರೆ ಯಾವಾಗ ಸ್ನಾನ ಮಾಡಬೇಕು?
ನಸೀಹಾ: ಅದು ದೊಡ್ಡ ವಿಷಯವಾಗಿದೆ. ಪ್ರತಿ ಸಮಯ ಕೂಡಾ ಶುದ್ಧಿಯಾಗಲು ಸಾಧ್ಯತೆ ಇರುವುದರಿಂದ ಪ್ರತಿ ಫರ್ಲ್ ನಮಾಝ್ಗಾಗಿಯೂ ಅದರ ಸಮಯವಾದ ಬಳಿಕ ಸ್ನಾನ ಮಾಡಬೇಕು ಆ ಬಳಿಕ ಮೊದಲು ಹೇಳಿದ ಹಾಗೆ ಬಟ್ಟೆ ಕಟ್ಟಿ ನಮಾಝ್ ಮಾಡಬೇಕು. ಇನ್ನು ಸಾಧಾರಣವಾಗಿ ನಿಶ್ಚಿತ ಸಮಯದಲ್ಲಿ ರಕ್ತ ನಿಲ್ಲುವ ರೂಡಿಯಿದ್ದರೆ ಆ ಸಮಯದಲ್ಲಿ ಮಾತ್ರ ಸ್ನಾನ ಮಾಡಿದರೆ ಸಾಕು.
ಉದಾಹರಣೆಗೆ: ಇಸ್ತಿಹಾಳತ್‌ಗಾರ್ತಿಯಾಗುವ ಮುಂಚೆ ಅವಳಿಗೆ ಹೈಳ್ ನಿಲ್ಲುವುದು ನಿದ್ದೆಯಲ್ಲಾದರೆ ಎಲ್ಲಾದಿನ ಬೆಳಿಗ್ಗೆ ಸುಬ್ಹಿಗೆ ಬೇಕಾಗಿ ಸ್ನಾನ ಮಾಡಿದರೆ ಸಾಕು. ಉಳಿದ ಎಲ್ಲಾ ನಮಾಝ್ ಗಳಿಗೆ ಪುನಃ ಬಟ್ಟೆ ಕಟ್ಟಿ ವುಲೂ ಮಾಡಿ ನಮಾಝ್ ಮಾಡಿದರೆ ಸಾಕು.
ನಸೀಮಾ: ಇವಳು ರಮಳಾನಿನಲ್ಲಿ ವೃತ ಕೈಗೊಳ್ಳುವುದು ಹೇಗೆ?
ಅಲ್ಲಿ ಕೂಡಾ ಹೆಚ್ಚು ಗಮನಿಸಬೇಕಾಗಿದೆ. ಏಕೆಂದರೆ ಅವಳು ರಮಳಾನ್ ಒಂದು ತಿಂಗಳು ಮತ್ತು ಅದರ ಬಳಿಕ ಒಂದು ತಿಂಗಳು ವೃತ ಕೈಗೊಳ್ಳಬೇಕು. ಆಗ ಅವಳಿಗೆ 28 ಉಪವಾಸ ಪೂರ್ತಿಯಾಗುತ್ತದೆ. ಅಷ್ಟರಲ್ಲಿ ಎಲ್ಲರ ಮುಖದಲ್ಲಿ ಅದೇನೋ ಅಚ್ಚರಿ.
“ಛೇ” ಇದೇನಿದು? 60 ದಿನ ಉಪವಾಸ ಹಿಡಿದು ಆಗುವುದು 28 ಮಾತ್ರವಾ ರೈಹಾನ ಕೇಳಿಯೇ ಬಿಟ್ಟಳು.
ನಸೀಹಾ:ಹೌದು! ರೈಹಾನ, ಏಕೆಂದರೆ ಗರಿಷ್ಠ ಅಂದರೆ 15 ದಿನ ಇವಳಿಗೆ ಹೈಳ್ ಆಗಲು ಸಾಧ್ಯತೆ ಇದೆ ತಾನೆ?
ರೈಹಾನ:ಹೌದು!
ನಸೀಹಾ:ಹಾಗಾದರೆ ಆ ಪ್ರಕಾರ ಒಂದನೇ ದಿನದ ಬೆಳಿಗ್ಗೆ ಪ್ರಾರಂಭಗೊಂಡು 16ನೇ ದಿನದ ಬೆಳಿಗ್ಗೆ ಪೂರ್ತಿಯಾಗಲು ಸಾಧ್ಯತೆ ಇದೆಯಲ್ಲಾ ಹಾಗಾದರೆ ಅವಳಿಗೆ ಎಷ್ಟು ಉಪವಾಸ ಅಸಿಂದುವಾಗಬಹುದು.
ರೈಹಾನ: ಹದಿನಾರು ಉಪವಾಸ.
ನಸೀಹಾ: ಸರಿ, ಹಾಗಾದರೆ ಉಳಿದ 14 ದಿನದ ಉಪವಾಸ ಸಿಂಧುವಾಯಿತು ಎಂದರ್ಥ. ಇನ್ನೊಂದು ತಿಂಗಳಲ್ಲಿ ಕೂಡ 30 ರಲ್ಲಿ ಹದಿನಾಲ್ಕು ಸಿಂಧುವಾಗುತ್ತದೆ. ಒಟ್ಟು 28 ಉಪವಾಸ ಸಿಕ್ಕಿತು. ಇನ್ನಿರುವ ಎರಡಕ್ಕಾಗಿ ಆ ಬಳಿಕದ 18 ದಿನಗಳಲ್ಲಿ ಮೊದಲು 3 ದಿನ ಮತ್ತು ಕೊನೆಯ ಮೂರು ದಿನ ಹಿಡಿಯಬೇಕು.
“ಅಬ್ಬ” ಮತ್ತೆ ಎರಡಕ್ಕೆ ಇನ್ನು ಆರಾ? ನಸೀಮಾ ಉದ್ಧರಿಸಿದಳು.
ನಸೀಹಾ:ಹೌದು! ನಸೀಮಾ ಹಾಗೆಂದು ಉದ್ಧರಿಸಬೇಕೆಂದಿಲ್ಲ. ಹಿಡಿದ ಉಪವಾಸಕ್ಕೆ ಪ್ರತಿಫಲ ಇಲ್ಲದೆ ಇರದು.
ಪ್ರತಿ ಒಂದು ಅಣು ಕಾಳಿನಷ್ಟು ಮಾಡಿದ ಒಳಿತಿಗೆ ಪ್ರತಿಫಲ ನೀಡುತ್ತೇನೆ ಎಂದ ಅಲ್ಲಾಹನು ಎಷ್ಟು ಕರುಣಾಮಯಿ ಎಂದು ಗೊತ್ತೆ? ಲೈಲತುಲ್ ಕದ್ರ್‌ನ ದಿನ ಒಂದಕ್ಕೆ ಸಾವಿರ ದುಪ್ಪಟ್ಟು ಪ್ರತಿಫಲ ನೀಡುವವನು ಅವನಲ್ಲವೇ? ಅವನ ಕಾರುಣ್ಯದ ಬಗ್ಗೆ ಎಷ್ಟು ವಿವರಿಸಿದರು ಮುಗಿಯದು. ಹೊತ್ತು ಕಳೆಯುತ್ತಾ ಬಂತು. ನಾವು ವಿಷಯಕ್ಕೆ ಬರೋಣ. ಏಕೆಂದರೆ ಹೈಳ್ ತಿಂಗಳ ಮೊದಲ ದಿನದ ಬೆಳಗ್ಗೆ ಪ್ರಾರಂಭವಾಗಿ 16 ನೇ ದಿನದ ಹಗಲಿನಲ್ಲಿ ನಿಂತಿತು ಎಂದು ಸಂಕಲ್ಪಿಸಿದರೆ ಮೊದಲ ಮತ್ತು 16 ನೇ ದಿನದ ಉಪವಾಸ ಅಸಿಂಧುವಾಗಿ ಕೊನೆಯ ಎರಡು ಸಿಂಧುವಾಗುತ್ತದೆ.
ಇನ್ನು ಎರಡನೆಯ ದಿನದ ಹಗಲಿನಲ್ಲಿ ಹೈಳ್ ಪ್ರಾರಂಭವಾಯಿತೆಂದು ಸಂಕಲ್ಪಿಸಿದರೆ ಮೊದಲ ಒಂದು ಮತ್ತು ಕೊನೆಯದೊಂದು ಹೀಗೆರಡು ಉಪವಾಸ ಸಿಂಧುವಾಗಿತ್ತದೆ. ಇನ್ನು ಮೂರನೆಯ ದಿನದ ಬೆಳಗ್ಗೆ ಪ್ರಾರಂಭವಾಯಿತೆಂದು ಭಾವಿಸಿದರೆ ಮೊದಲು ಎರಡು ದಿನದ್ದು ಸಿಂಧುವಾಗುತ್ತದೆ. ಈ ರೀತಿ ಅವಳು 66 ಉಪವಾಸ ಹಿಡಿದಾಗ ಮೂವತ್ತು ಉಪವಾಸ ಪೂರ್ತಿಯಾಗುತ್ತದೆ. ಏನಿದ್ದರೂ ಅಲ್ಲಾಹು ಇಂತಹ ರೋಗಗಳಿಂದ ನಮ್ಮನ್ನು ಕಾಪಾಡಲಿ.
ಹೌದು ಮೋಳೆ ನಮಗೆ ತಿಳಿಯದ ವಿಷಯ ಇನ್ನೆಷ್ಟು ಇದೆಯೋ ಏನೋ? ಇದೇನು ಅರಿಯದೆ ನಾವು ಮಾಡಿದ ಆರಾಧನೆಯ ಗತಿಯಾದರೂ ಏನು? ಉಕ್ಕಿ ಬಂದ ಕಣ್ಣೀರು ತಡೆಯಲಾಗದೆ ಆಯಿಷಾ ಹಜ್ಜುಮ್ಮ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿದರು.
'ಉಮ್ಮಾ! ಬೇಸರ ಪಡಬೇಡಿ. ಅಲ್ಲಾಹನು ಅವನ ಸೃಷ್ಟಿಗಳ ಮೇಲೆ ಕರುಣೆಯುಳ್ಳವನು. ನಾವು ಕಲಿಯಲು ಈಗಲಾದರೂ ಮನಸ್ಸು ಮಾಡಿದ ಕಾರಣಕ್ಕಾದರೂ ನಮ್ಮ ಆರಾಧನೆಗಳ ನ್ಯೂನತೆಯನ್ನು ಲೆಕ್ಕಿಸದೆ ಅಲ್ಲಾಹನು ಸ್ವೀಕರಿಸಲಿ. ನಸೀಹಾ ಹಜ್ಜುಮಾರನ್ನು ಸಮಾಧಾನಿಸಿದಳು. ಎಲ್ಲರೂ ಭಾವೋದ್ವೇಗದಿಂದ ಆಮೀನ್ ಹೇಳಿದರು.
ಅಂದ ಹಾಗೆ ನಿಮ್ಮಲ್ಲಿ ಒಂದು ವಿಷಯ ಹೇಳಲು ನಾನು ಮರೆತೆ. ನಿಮ್ಮಲ್ಲಿ ಹಲವರಿಗೆ ಗೊತ್ತಿರಲೂಬಹುದು. ಅಲ್ಲಾಹನು ಕರುಣಿಸಿದರೆ ಬರುವ ಹತ್ತು ದಿನದ ಒಳಗೆ ನನ್ನ ಮದುವೆ ಕಾರ್ಯವೂ ನೆರವೇರುವುದು. ಅದಾದ ಬಳಿಕ ಈ ರೀತಿಯ ತರಗತಿ ಇನ್ನು ಮುಂದುವರಿಸಬಹುದು ಅಂತ ಹೇಳಲಾಗದು. ಆದರೂ ವರನ ಮನೆ ಊರಿನ ಹತ್ತಿರವಾದ್ದರಿಂದ ಸೌಕರ್ಯಗಳನ್ನು ನೋಡಿ ಅಲ್ಲಿ ನಮಗೆ ತರಗತಿ ಮುಂದುವರಿಸಲೂಬಹುದು. ಎಲ್ಲದಕ್ಕೂ ಅಲ್ಲಾಹು ಕರುಣಿಸಲಿ.
ಉತ್ತಮ ವೈವಾಹಿಕ ಜೀವನ ನಡೆಸಲು ನಮಗೆಲ್ಲರಿಗೂ ಅಲ್ಲಾಹು ಭಾಗ್ಯ ನೀಡಲಿ. ಇನ್ನೇನೂ ಮದುವೆಯ ದಿನ ಹತ್ತಿರವಾದ್ದರಿಂದ ಒಂದಿಷ್ಟು ಮನೆ ರಿಪೇರಿ ಕಾರ್ಯ ಕೂಡ ನಡೆಯಲಿಕ್ಕಿದೆ. ಆದ್ದರಿಂದ ಇಲ್ಲಿ ತರಗತಿ ನಡೆಸಲು ಕಷ್ಟ ಸಾಧ್ಯ. ಇನ್ನಷ್ಟು ದೀನಿ ವಿಷಯವನ್ನು ಕಲಿತು ಅಲ್ಲಾಹನನ್ನು ಆರಾಧಿಸಲು ಅವನು ತೌಫೀಕ್ ನೀಡಲಿ. ಅವಳು ಹೇಳಿ ಮುಗಿಸುತ್ತಿದ್ದಂತೆ ಯಾರೋ ಕರೆದಂತೆ ಭಾಸವಾಯಿತು. ಕಿಟಕಿ ತೆರೆದು ನೋಡಿದಾಗ ತಂದೆ ಖಾದರಾಕ. ಅವರು ಆ ರೀತಿ ಕರೆಯುವವರಲ್ಲ. ಅವರಿಗೆ ಎಷ್ಟೇ ಹಸಿದಿರಲಿ, ಇನ್ನಿತರ ಏನೇ ಅಗತ್ಯಗಳಿರಲಿ ಮಗಳನ್ನು ಕರೆದು ತೊಂದರೆ ಕೊಡುವವರಲ್ಲ. ಮಗಳು ತೆಗೆಯುವ ತರಗತಿಯನ್ನು ಸಂತೋಷದಿಂದ ಹೊರಗಿನಿಂದ ವೀಕ್ಷಿಸುವುದುಂಟು. ನಸೀಹಾ ಮನೆ ಕಾರ್ಯ ಏನಿದ್ದರೂ ತರಗತಿಗೆ ಮುಂಚೆ ಮುಗಿಸಿ ಬಿಡುತ್ತಾಳೆ. 'ತಾನು ಬೋಧನೆಗಿಳಿದು ತಂದೆ - ತಾಯಿ ಅಥವಾ ಮನೆಯ ಇತರರಿಗೆ ಕೆಲಸದ ಒತ್ತಡ ಹೊರಿಸುವ ಜಾಯಾಮಾನ ಅವಳದ್ದಲ್ಲ.'
ನಸೀಹಾಳಿಗೆ ಒಂದಿಷ್ಟು ಕುತೂಹಲವಾಯಿತು. ತಂದೆ ನನ್ನನ್ನು ತರಗತಿ ಮಧ್ಯೆ ಕರೆದದ್ದು ಯಾಕಾಗಿರಬಹುದು? ಅವಳು ತಟ್ಟನೆ ಬಾಗಿಲು ತೆಗೆದು ತಂದೆಯ ಬಳಿ ನಡೆದಳು.
“ಬಾಪಾ ಏನು ಬೇಕಿತ್ತು”?
“ಏನಿಲ್ಲ ಮಗಳೆ” ?
ಖಾದರಾಕನ ಕಣ್ಣಂಚಿನಲ್ಲಿ ನೀರು ತುಂಬಿ ನಿಂತಿತ್ತು ಕಂಠ ಗದ್ಗತವಾಗಿತ್ತು.
“ಏನಾಯಿತು ಬಾಪಾ"
ಇಲ್ಲಾ ಮಗಳೇ, “ಹುಟ್ಟಿದ ಮೊದಲ ಮಗು ಹೆಣ್ಣಾದಳಲ್ಲಾ ಅಂತ ನಾನು ಪಟ್ಟಿದ್ದ ಆ ಆತಂಕದ ಬಗ್ಗೆ ನನಗೆ ಪಶ್ಚಾತಾಪವಾಗುತ್ತಿದೆ. ನನ್ನ ಆತಂಕ ಹಣದ ವಿಚಾರದಲ್ಲಿಯಾಗಿರಲಿಲ್ಲ. ಮಗನಾಗಿದ್ದರೆ ಹತ್ತು ಜನರಿಗೆ ದೀನ್ ಹೇಳಿಕೊಡುವ ಒಬ್ಬ ಆಲಿಂ ಮಾಡಬಹುದೆನ್ನುವ ಆಸೆ ಮಾತ್ರ ನನಗಿದ್ದದ್ದು. ಅಲ್ಲಾಹು ಅದೆಲ್ಲವನ್ನೂ ನಿನ್ನ ಮೂಲಕ ಸಾಧಿಸಿಕೊಟ್ಟಿದ್ದಾನೆ.
ನಿನ್ನ ಬಳಿ ಕಲಿಯಲು ಬರುವ ನಮ್ಮೂರಿನ ಮಹಿಳೆಯರ ದಂಡು ಕಾಣುವಾಗ ಅತ್ಯಂತ ಸಂತೋಷವಾಗುತ್ತಿದೆ.
"ಖಾದರಾಕಳ ಮಗಳಿಂದಾಗಿ ಮರ್ಯಾದೆಯಲ್ಲಿ ಶುದ್ಧಿ ಮಾಡುವುದನ್ನು ಕಲಿಯಲು ಸಾಧ್ಯವಾಯಿತು.” ಅಂತ ಹೇಳುವುದನ್ನು ಕೇಳಿದ್ದೇನೆ. ಎಲ್ಲವೂ ಅಲ್ಲಾಹನ ಕೃಪೆ, ಬೇಸರ ಒಂದು ಮಾತ್ರ, ಹಾಗಂತ ಅದರಲ್ಲಿ ದುಃಖ ಪಡಬೇಕಾದ ವಿಷಯವಲ್ಲ. ನಿನಗೆ ಗೊತ್ತು ನಿನ್ನ ಮದುವೆಗೆ ಇನ್ನಿರೋದು ಒಂದು ವಾರ ಮಾತ್ರ ಮುಂದಿನ ವಾರ ನಿನಗೆ ತರಗತಿ ನಡೆಸಲಾಗದು. ಹಾಗಾಗಿ ನೀನು ತಾತ್ಕಾಲಿಕವಾಗಿ ಸಧ್ಯಕ್ಕೆ ತರಗತಿ ನಿಲ್ಲಿಸು. ಮುಂದೆ ಅಲ್ಲಾಹನ ತೀರ್ಮಾನವಿದ್ದರೆ, ನಿನಗೆ ಪತಿಯಾಗಿ ಬರುವವನ ಸಮ್ಮತಿ ಇದ್ದರೆ ತಿಂಗಳಿಗೊಮ್ಮೆಯಾದರೂ ಒಂದು ತರಗತಿ ಇಡೋಣ. ಇದು ಹೇಳುತ್ತಿದ್ದಂತೆ ಖಾದರಾಕನ ಮುಖವಿಡೀ ಕಣ್ಣೀರು ತುಂಬಿತ್ತು.
'ಹೌದು ಬಾಪಾ' ನಾನು ಕೂಡಾ ಇವತ್ತಿಗೆ ತಾತ್ಕಾಲಿಕವಾಗಿ ಕೊನೆಗೊಳಿಸಬೇಕು. ಹಾಗಾಗಿ ಇವತ್ತು ಅರ್ಧ ತಾಸು ಹೆಚ್ಚು ತೆಗೆದು, ಕೊನೆಗೆ ಮಹಾತ್ಮರ ಹಾಗೂ ನಮ್ಮಿಂದ ಅಗಲಿದವರ ಹೆಸರಲ್ಲಿ ಯಾಸೀನ್ ಓದಿ ದುಆ ಮಾಡಿ ತರಗತಿ ಸಮಾಪ್ತಿ ಮಾಡಬೇಕು.
ಆಯಿತು ಮೋಳೆ, ನಮಗೂ ದುಆ ಮಾಡು, ಮತ್ತೆ ಹೆಣ್ಣು ಮಕ್ಕಳ ಮರ್ಯಾದೆಯ ಕುರಿತು ಒಂದಿಷ್ಟು ಹೇಳಬೇಕು. ಪೇಟೆಗೆ ಹೋಗಲು ನಾಚಿಗೆ ಆಗುತ್ತಿದೆ. ಮೊನ್ನೆ ಖತೀಬ್ ಉಸ್ತಾದ್ ಕೂಡಾ ಹೇಳಿದ್ದರು. ಮುಸ್ಲಿಂ ಮಹಿಳೆಯರು ಇವತ್ತು ಮಾಲ್- ಹಾಲ್ ಮಾರ್ಕೆಟ್ ಅಂತ ಹೇಳಿ ಅರೆನಗ್ನ ವಸ್ತ್ರ ಹಾಕಿ ಸುತ್ತುವುದೇ ಕೆಲಸ. ಈ ಊರಲ್ಲಿ ಅದಿರಲಿಲ್ಲ ಈಗೀಗ ಆರಂಭವಾದದ್ದು. ಮೊನ್ನೆ ಒಬ್ಬರು ಹೇಳಿದ್ರು ನಗರದಲ್ಲಿ ರಾತ್ರಿ 11 ಗಂಟೆಗೆ ಬಿಡುವ ಕೊನೆಯ ಬಸ್ಸಿನಲ್ಲಿ ಬರುವಾಗಲೂ ಈ ಊರಿನ ಒಂದಿಷ್ಟು ಹೆಂಗಸರನ್ನು ಕಾಣಿಸುತ್ತಿದೆ. ಅದು ಕೂಡಾ ಒಬ್ಬಂಟಿಗರಾಗಿ, ಈ ರೀತಿ ಮುಂದಕ್ಕೆ ಹೋದರೆ ಏನಾದೀತು ಮೋಳೆ? ಅಲ್ಲಾಹನ ಶಿಕ್ಷೆ ಇಳಿದೀತೆ? ಅಂತ ಭೀತಿಯಾಗುತ್ತಿದೆ. ನೋಡು ಸಂಘದ ಹೆಸರು ಹಾಕಿ ಮನೆ- ಮನೆಗೆ ಬಂದು ಹೆಂಗಸಿಗೆ ಬಡ್ಡಿ ಕೊಟ್ಟು ಹೋಗುತ್ತಾರೆ. ನಮ್ಮ ಹೆಂಗಸರು ಅದನ್ನು ಪಡೆಯಲು ಒಂದಿಷ್ಟೂ ಹಿಂದೆ ಮುಂದೆ ನೋಡುವುದಿಲ್ಲ. ನಾನೊಬ್ಬ ಗಂಡಸಾಗಿದ್ದರೂ ಕೂಡಾ ಬಡ್ಡಿ ಅಂದರೆ ಏನೋ ಹೆದರಿಕೆ. ಅದಕ್ಕೆ ನಿನ್ನ ತಾತ ಕಾರಣ. ಅವರು ನಾವು ಯುವಕರಾಗಿದ್ದಾಗ ವ್ಯಾಪಾರದಲ್ಲಿ ಎಷ್ಟೇ ಕಷ್ಟ ನಷ್ಟ ಬಂದರೂ ಬಡ್ಡಿ ತೆಗೆಯಲು ಬಿಡುತ್ತಿರಲಿಲ್ಲ. ಅವರ ವಸಿಯ್ಯತ್ ಕೂಡಾ ಹಾಗೇನೆ ಇತ್ತು. ಅದು ಏಳು ಮಹಾ ಪಾಪಗಳಲ್ಲಿ ಒಂದು ಅಂತ ನನ್ನನ್ನು ಯಾವಾಗಲೂ ಎಚ್ಚರಿಸುತ್ತಿದ್ದರು. ಆ ಕುರಿತು ನಿನಗೆ ಹೆಚ್ಚು ಗೊತ್ತು. ಆಯತ್-ಹದೀಸ್ ಓದಿ ಸವಿವರವಾಗಿ ಹೇಳಿ ಕೊಡು ಮಗಳೇ!
ಆಯಿತು ಬಾಪಾ! ಆ ಕುರಿತು ಇವತ್ತು ಹೇಳುತ್ತೇನೆ. ಜನರು ಕಾಯುತ್ತಿದ್ದಾರೆ. ನನಗೆ ಹೋಗಲು ಅನುಮತಿ ಕೊಡಿ ಬಾಪಾ!”
ಆಯಿತು ಮಗಳೇ, ಕ್ಲಾಸ್ ಮುಂದುವರಿಸು ಎಂದು ನಸೀಹಾಳ ಬೆನ್ನು ತಟ್ಟಿ ಕಳುಹಿಸಿದರು. ಆದಾಗಲೇ ಸಮಯ ಮೀರಿತ್ತು. ತಂದೆ ಸೂಚನೆ ಮಾಡಿದ ವಿಷಯಗಳ ಕುರಿತು ಬೇಗನೆ ವಿವರಿಸಿದ ನಸೀಹಾ ಕ್ಲಾಸ್‌ಗೆ ತೆರೆಯೆಳೆಯುತ್ತಾ ತನ್ನ ಮದುವೆಯ ಪ್ರಸ್ತಾಪವನ್ನು ಹಾಕಿದಳು. ಸಾಧ್ಯವಾಗುವುದಾದರೆ ಮುಂದಿನ ತಿಂಗಳಲ್ಲಿ ಪತಿಯ ಸಮ್ಮತಿಯಂತೆ ತರಗತಿಯನ್ನು ಮುಂದುವರಿಸಲು ಪ್ರಯತ್ನಿಸೋಣ ಎಂದು ಆಶ್ವಾಸನೆ ಕೊಟ್ಟಳು. ಎಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದ ನಿಮಿಷವಾಗಿತ್ತದು. ಅವರ ನಿರಾಶೆಗಳು ಮುಖದಲ್ಲಿ ಸ್ಪಷ್ಟವಾಗಿತ್ತು. ಕಣ್ಣಂಚಿನಲ್ಲಿ ನೀರು ತುಂಬಿತ್ತು. ಎಲ್ಲರನ್ನು ಸಮಾಧಾನಿಸಿದ ನಸೀಹಾ ಪ್ರವಾದಿ (ಸ.ಅ) ರವರ ಮೇಲೆ ಫಾತಿಹಾ ಓದಿ ದುಆ ಮಾಡತೊಡಗಿದಳು.
“ಅಲ್ಲಾಹನೇ, ನಾವು ಇದುವರೆಗೂ ಹೇಳಿದ, ಕೇಳಿದ ಎಲ್ಲಾ ನಸೀಹತ್‌ಗಳು ನಮ್ಮಿಂದ ಸತ್ಕರ್ಮವಾಗಿ ಸ್ವೀಕರಿಸು. ನಮ್ಮ ಆರಾಧನೆಗಳಲ್ಲಿ ಬಂದ ಲೋಪ ದೋಷಗಳನ್ನು ಮನ್ನಿಸಿ ಕಬೂಲ್ ಮಾಡು. ನಮಗೂ, ನಮ್ಮ ಗುರುವರ್ಯರಿಗೂ, ಮಾತಾಪಿತರಿಗೂ ಜನ್ನತ್ ನೀಡಿ ಅನುಗ್ರಹಿಸು. ನೆರೆದವರೆಲ್ಲ ತುಂಬು ಭಾವುಕತೆಯಿಂದ 'ಆಮೀನ್' ಹೇಳಿದರು.
ಅದೆಲ್ಲವೂ ಮುಗಿದ ಬಳಿಕ ಪರಸ್ಪರ ಮುಸಾಫಅತ್ ಮಾಡಿ, ದುಆ ವಸೀಯತ್ ಮಾಡುತ್ತಾ ಅಲ್ಲಿಂದ ವಿರಮಿಸಿದರು...
ಮೂಲ.ಲೇಖಕರು:
ಕೆ.ಎಂ.ಮುಸ್ತಫಾ ನಈಮಿ ಹಿಮಮಿ
ಸಂಗ್ರಹ:
ಉಮ್ಮು ಮರ್ಯಮ್
Copyright©
NOOR-UL-FALAH ISLAMIC Org(R)
Comments
Post a Comment