ದೊಡ್ಡವರ ವಿಷಯ
ದೊಡ್ಡವರ ವಿಷಯ!
ಈ ಊರಿಗೆ ಹೊಸದಾಗಿ ಜಿಲ್ಲಾ ಮಟ್ಟದ ಗೆಝೆಟೆಡ್ ಅಧಿಕಾರಿ ವರ್ಗವಾಗಿ ಬಂದರು. ಅವರ ಗತ್ತು, ಗಾಂಭೀರ್ಯ ಹೆಸರುವಾಸಿಯಾಗಿದ್ದವು. ಈ ಹೊಸ ಆಫ಼ೀಸಿನ ಜವಾನನಿಗೆ ಇಪ್ಪತ್ತೇಳೋ ಇಪ್ಪತೆಂಟೋ ವರ್ಷದ ಅನುಭವ. ಇಲಾಖೆಯ ರಾಜಕೀಯ, ಕಾರ್ಯವೈಖರಿ, ದಕ್ಷತೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿತವ. ನುರಿತವ! ಅಗಾಗ ಅಧಿಕಾರಿಗಳಿಗೆ ಕೆಲ ಸೂಕ್ಷ್ಮಗಳನ್ನು ತಿಳಿಸಲು ಯತ್ನಿಸುತ್ತಿದ್ದ. ಅವರಿಗೆ ರೇಗುತ್ತಿತ್ತು. "ನಿನ್ನ ಕೆಲಸ ನೀನು ನೋಡು" ಎಂದು ಗದರುತ್ತಿದ್ದರು. "ದೊಡ್ಡವರ ವಿಷಯ ನಿಂಗ್ಯಾಕೆ?" ಎಂದು ಅಬ್ಬರಿಸುತ್ತಿದ್ದರು. ಅನುಭವಿ ಜವಾನ ದೊಡ್ಡವರ ವಿಷಯದಲ್ಲಿ ತಲೆ ಹಾಕದಿರುವುದನ್ನು ಬಹಳ ಬೇಗ ಕಲಿತುಕೊಂಡ.
ಅಧಿಕಾರಿಗಳ ಮಗಳ ಮದುವೆ ಆ ಊರಿನ ಪ್ರಸಿದ್ಧ ಪತ್ರಿಕೆಯ ಸಂಪಾದಕರೊಂದಿಗೆ ನಿಶ್ಚಯವಾಯಿತು. ಸಂತಸ ಸಂಭ್ರಮಗಳಿಂದ ಸಿದ್ಧತೆಗಳು ಜರುಗತೊಡಗಿದವು. ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂತು. ಹುಡುಗ ಮೊದಲೇ ಪ್ರ್‍ಏಮಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಒಂದು ಮಗುವೂ ಇತ್ತು. ತಮಗೆ ಇಷ್ಟ ಇಲ್ಲದ ಸೊಸೆಗೆ ಬಲವಂತವಾಗಿ ಮಗನಿಂದ ಡೈವರ್ಸ್ ಕೊಡಿಸಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಹೊರಟಿದ್ದರು. ಹುಡುಗನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಮದುವೆ ಮುರಿಯಿತು.
ಖಿನ್ನರಾಗಿ ಅಫ಼ೀಸಿನ ಖುರ್ಚಿಯ ಮೇಲೆ ಕುಳಿತ ಅಧಿಕಾರಿ ಗೊಣಗಿದರು. "ಆ ಹುಡುಗನಿಗೆ ಮೊದಲೇ ಮದುವೆ ಆಗಿತ್ತಂತೆ! ಮೋಸ ಮಾಡಿಬಿಟ್ಟರು. ನಿಂಗೆ ಅವರ ಬಗ್ಗೆ ಗೊತ್ತಾ?" ಅಂತ ಜವಾನನನ್ನು ಕೇಳಿದರು.
"ಹೌದು ಸರ್! ಆ ಹುಡುಗಿ ನಮ್ಮೂರಿನವಳು. ಪಾಪಿಗಳು ದೂರ ಮಾಡಿಬಿಟ್ಟರು. ಅದೇ ಕೊರಗನ್ನು ಹಚ್ಚಿಕೊಂಡು ಅವನು ದಿನಾ ಕುಡೀತಾನೆ."
"ಹೌದಾ? ಎಲ್ಲಾ ವಿಷಯ ಗೊತ್ತಿದ್ದೂ ಮೊದಲೇ ಯಾಕೆ ಹೇಳಲಿಲ್ಲ?"
"ದೊಡ್ಡವರ ವಿಷಯ ನನಗ್ಯಾಕೆ ಅಂತ ಸುಮ್ಮನಿದ್ದೆ ಸರ್!" ಅಂದ ಜವಾನ ವಿನಯದಿಂದ!
NOOR-UL-FALAH ISLAMIC STORE
Comments
Post a Comment