ಎಲ್ಲಿ ಸೌಂದರ್ಯ

ಎಲ್ಲಿದೆ ಸೌಂದರ್ಯ? ಛೆ! ಎಂಥ ಕುರೂಪಿ ಹುಡುಗಿ ಇವಳು! ಹಲ್ಲುಬ್ಬು. ಅಲ್ಲಿನ ಮೇಲೆಲ್ಲ ಹಳದಿ ಕಲೆಗಳು. ಎಣ್ಣೆಗೆಂಪು ಬಣ್ಣ. ಮೋಟುಜಡೆ. ಹಲ್ಲಿನ ನಡುವೆ ಬಸ್ಸು ಹೋಗುವಷ್ಟು ಅಗಲ ಕಿಂಡಿಗಳು. ಯಾವ ಮೂಡಿನಲ್ಲಿದ್ದನೋ ಪರಮಾತ್ಮ ಇವಳನ್ನು ನಿರ್ಮಿಸುವಾಗ! ಮದುವೆ ಮನೆ. ಅಸ್ತಮಾ ಪೀಡಿತ ನಾಯಿಯಂತೆ ಸದ್ದು ಹೊರಡಿಸುತ್ತಾ ಒಬ್ಬ ಜೋರಾಗಿ ತೇಕತೊಡಗಿದ. ಬಾಯಿಯಿಂದ ನೊರೆ ಉಕ್ಕತೊಡಗಿತು. ಅವನ ತಲೆ ಜೋರಾಗಿ ಮಧ್ಯಕ್ಕೂ ಬಲಕ್ಕೂ ತೊಯ್ದಾಡತೊಡಗಿತು. ನಮ್ಮ ಕುರೂಪಿ ಹುಡುಗಿ ಓಡಿ ಬಂದಳು. ಅವನು ಆಕೆಯ ಗಂಡ! ಯಾರೋ ಕೀಗೊಂಚಲು ಕೊಟ್ಟರು. ಕೀಗೊಂಚಲನ್ನು ಅವನ ಕೈಯಲ್ಲಿಟ್ಟು ಇನೊಂದು ಕೈಯಾಲ್ಲಿ ತೋಳನ್ನು ಬಿಗಿಯಾಗಿ ಹಿಡಿದು ಸಂತೈಸತೊಡಗಿದಳು. ಚಪ್ಪಲಿ ಬಿಚ್ಚಿ ತೆಗೆದು ಅಂಗಾಲನ್ನು ತಿಕ್ಕತೊಡಗಿದಳು. ಅವನು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಪ್ರಜ್ಞೆ ಮರುಕಳಿಸಿದಂತೆ ಹುಚ್ಚು ಹಿಡಿದವನಂತೆ ಆಡತೊಡಗಿದ. ಚಪ್ಪಲಿ ತೆಗೆದಿದ್ದಕ್ಕೆ ಅವಳ ಮೇಲೆ ರೇಗಿದ. ಅವನು ದೂಕಿದ ಜೋರಿಗೆ ಆಕೆ ಎರಡು ಮಾರಾಚೆ ಹೋಗಿ ಬಿದ್ದಳು. ನಿಧಾನವಾಗಿ ಹಸನ್ಮುಖಿಯಾಗಿ ಎದ್ದು ಬಂದಳು. ಚಪ್ಪಲಿ ತೊಡಿಸಲು ಮುಂದಾದಳು. ಅವಳ ಕಪಾಳಕ್ಕೆ ಹೊಡೆದು ಝಾಡಿಸಿ ಸೊಂಟಕ್ಕೆ ಒದ್ದ. ಈ ಬಾರಿ ನಾಕು ಮಾರು ದೂರಕ್ಕೆ ಬಿದ್ದಳು. ಅವಳ ದೇಹ ಬಡಿದ ರಭಸಕ್ಕೆ ಕುರ್ಚಿಗಳು ಚೆದುರಿ ಹೋದವು. ಅವಳ ಮುಖದ ಮುಗುಳ್ನಗು ಮಾಯವಾಗಲಿಲ್ಲ. ಚಿಮ್ಮಿದ ಕಣ್ಣೀರನ್ನು ಅಲ್ಲೇ ಅದುಮಿ ತೊರುಬೆರಳಿಂದ ಒರೆಸಿಕೊಂಡು ಗಂಡನ ತೋಳು ಹಿಡಿದಳು. ನಗುಮುಖದಿಂದ ಸುತ್ತಲಿದ್ದವರಿಗೆ ಕ್ಷಮೆ ಕೇಳಿ ಕೋಣೆಯೆಡೆಗೆ ಗಂಡನನ್ನು ಕರೆದೊಯ್ದಳು. ಇದ್ದಕ್ಕಿದ್ದಂತೆ ಆ ಹುಡುಗಿಯ ಮುಖದ ಮೇಲೆ ಸೌಂದರ್ಯ ನಳನಳಿಸತೊಡಗಿತು! NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್