ಎದೆ ಬಿರುವ ಮೌನ ಸದ್ದು

ಕಥನ ಕುತೂಹಲ ಎದೆ ಬಿರಿವ ಸದ್ದು ಮೌನ : ಕನ್ನಡ ಮಿನಿ ಕಥೆ ಬ್ಯಾರಿ ಸಮುದಾಯದೊಳಗಿನ ಮದುವೆ ಮುಂಚಿನ ಸಂಪ್ರದಾಯಗಳ ಪರಿಚಯ ಮಾಡಿಸುವ ಈ ಕಥೆ, ಬಹಳ ಮುಖ್ಯವಾಗಿ ಹೆಣ್ಣಿನ ಸೂಕ್ಷ್ಮತೆಯನ್ನೂ, ಆದ್ಯತೆಯನ್ನೂ ಹೇಳುತ್ತದೆ. ಹೊರಜಗತ್ತಿಗೆ ನಗಣ್ಯ ಅನ್ನಿಸುವ ಸಂಗತಿಯೊಂದು ಹೆಣ್ಣಿನ ಒಳಗನ್ನು ತಾಕುವುದನ್ನು ಮತ್ತು ಮುರಿಯುವುದನ್ನು ಇರ್ಫಾನ್ ಹಕ್ ಯಾವುದೇ ಅತಿರೇಕದ ಹೇಳಿಕೆಗಳಿಲ್ಲದೆ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಉಮ್ಮಾ ಎದ್ದೇಳು! ರಾತ್ರಿ 3 ಗಂಟೆಗೆ ಆಯಿಶಾ, ತನ್ನ ತಾಯಿ ಅಲೀಮಮ್ಮಳ ಬಲ ಕೈ ಅಲ್ಲಾಡಿಸಿ ಎಬ್ಬಿಸುತಿದ್ದಳು.ಪ್ರತಿನಿತ್ಯ ಮಗಳನ್ನು ಅಲೀಮಮ್ಮ ಎಬ್ಬಿಸುತಿದ್ದರೆ ಇಂದು ಆಯಿಶಾ ಸ್ವಲ್ಪ ಬೇಗನೇ ಎದ್ದಿದ್ದಳು.ಅದಕ್ಕೆ ಕಾರಣವೂ ಇತ್ತು‌; ನಾಳೆ ಗಂಡಿನ ಕಡೆಯವರು ಆಕೆಯನ್ನು ನೋಡಲು ಬರುವವರಿದ್ದರು. ಅಮ್ಮ ಎದ್ದೊಡನೇ ಇಬ್ಬರೂ ಉಝೂ ಮುಗಿಸಿ ತಹಜ್ಜುದ್ ನಮಾಝ್ ನಿರ್ವಹಿಸಿದರು..ತದನಂತರದಲ್ಲಿ ಇಬ್ಬರೂ ಕೈಗಳೆತ್ತಿ ಪ್ರಾರ್ಥಿಸತೊಡಗಿದರು..ತುಟಿಪಿಟಿಕೆನ್ನದೆ ಮನಸ್ಸಲ್ಲೇ ಪ್ರಾರ್ಥನೆ... ನಮಾಝ್ ನ ನಂತರ ಇಬ್ಬರೂ ಮುಸಲ್ಲದ ಮೇಲೇ ತಲಕಾನಿ ಇಟ್ಟು ಸುಬಹ್ ಬಾಂಗ್ ವರೆಗೆ ಮಲಗೋದು ವಾಡಿಕೆ.ಆದರೆ ಈ ದಿನ ಆಯಿಶಾಲಿಗೆ ನಿದ್ದೆ ಹತ್ತುತ್ತಿಲ್ಲ. ನಾಳೆ ಬರುವ ಹುಡುಗ ಹೇಗಿರಬಹುದು?,ನನ್ನಂತೆ ಸರಳ ವ್ಯಕ್ತಿ ಆಗಿರಬಹುದೇ? ಅವನಿಗೆ ನಾ ಇಷ್ಟವಾಗಬಹುದೇ? OK ಯಾದರೆ ನನ್ನನ್ನು ಆತ ಪ್ರೀತಿಯಿಂದ ನೋಡಿಕೊಳ್ಳಬಹುದೇ? ಹೀಗೆ ಹಲವಾರು ಪ್ರಶ್ನೆಗಳು ಮನಸ್ಸಿನ ಪುಟದಲಿ ಮಿಂಚಿ ಮಾಯವಾಗುತಿತ್ತು. ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್! ಸುಬಹ್ ಆಝಾನ್ ಕಿವಿಗೆ ಬೀಳುತ್ತಲೇ ಆಯಿಶಾ ವಾಸ್ತವಕ್ಕೆ ಮರಳಿದಳು.ಅಮ್ಮ ಮಗಳಿಬ್ಬರೂ ನಮಾಝ್ ನಿರ್ವಹಿಸಿ,ಕುರ್ಆನ್ ಪಠಿಸತೊಡಗಿದರು..ಆಯಿಶಾಳ ತಂದೆ ಖಾದರಾಕ ಅಷ್ಟೊತ್ತಿಗಾಗಲೇ ಮಸೀದಿ ತಲುಪಿದ್ದರು. ಖಾದರಾಕ ,ಅಲೀಮಮ್ಮ ದಂಪತಿಗೆ ಒಟ್ಟು 2 ಮಕ್ಕಳು. ಮಗ ಸಫ್ವಾನ್ ದೂರದ ದುಬೈನಲ್ಲಿ ಉದ್ಯೋಗದಲ್ಲಿರುವನು. ಕೆಳ ಮಧ್ಯಮ ವರ್ಗದ ಸಂಸಾರಕ್ಕೆ ಖಾದರಾಕರ ಮೀನಿನ ವ್ಯಾಪಾರವೇ ಆಧಾರವಾಗಿತ್ತು.ಎಷ್ಟೇ ಕಷ್ಟವಿದ್ದರೂ ಮಕ್ಕಳ ಶಿಕ್ಷಣದ ಜೊತೆ ರಾಜಿ ಮಾಡಿಕೊಂಡಿರದ ಖಾದರಾಕರು,ತನ್ನ ಮಕ್ಕಳಿಗೆ ದೀನೀ ವಿದ್ಯಾಭ್ಯಾಸ ದ ಜೊತೆಗೆ ಲೌಕಿಕ ಶಿಕ್ಷಣವನ್ನೂ ಕೊಡಿಸಿದ್ದರು.ಪರಿಣಾಮ ಸಫ್ವಾನ್ ಬಿ.ಬಿ.ಎಂ ಪದವಿಯನ್ನೂ ಆಯಿಶಾ ಬಿ.ಕಾಂ ಪದವಿಯನ್ನೂ ಗಳಿಸಿದ್ದರು. ತನ್ನ ಪದವಿ ಮುಗಿದೊಡನೇ ದುಬೈಗೆ ಹಾರಿದ್ದ ಸಫ್ವಾನ್ ತಂದೆಯೊಂದಿಗೆ ಮನೆಯ ಜವಾಬ್ದಾರಿಯನ್ನು ಹಂಚಿಕೊಂಡಿದ್ದನು.ತನ್ನ ತಂದೆಗೆ ನೆರವಾಗಲೆಂದು ತಾಯಿ ಬೀಡಿ ಕಟ್ಟುತಿದ್ದುದನ್ನು ದುಬೈಗೆ ಹೋದೊಡನೇ ಸಫ್ವಾನ್ ಬಿಡಿಸಿದ್ದನು.ಎರಡು ದುಡಿಯುವ ಕೈಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು..ಮನೆ ನವೀಕೃತಗೊಂಡಿತು.ಮಧ್ಯಮ ಕುಟುಂಬದ ಬೇಕುಗಳೆಲ್ಲವೂ ಒಂದೊಂದಾಗಿ ಈಡೇರ ತೊಡಗಿತು.ಹೀಗಿರುವಾಗ ಮನೆಯವರೆಲ್ಲರೂ ಸೇರಿ 22 ರ ಹರೆಯದ ಆಯಿಶಾಳಿಗೆ ಮದುವೆಯ ಆಲೋಚನೆ ಮಾಡಿದ್ದರು. ಮಸೀದಿಗೆ ಹೋಗಿದ್ದ ಖಾದರಾಕ, ಉಸ್ತಾದರನ್ನೂ ಊರ ನಾಲ್ಕು ಗಣ್ಯರನ್ನೂ ಬಹಳ ಗುಪ್ತವಾಗಿ ಮಗಳ ನೋಡಲು ಗಂಡಿನ ಕಡೆಯವರು ಬರುವರೆಂದು ಹೇಳಿ ಮಧ್ಯಾಹ್ನ ಉಟಕ್ಕೆ ಆಮಂತ್ರಿಸಿದರು.ನಮಾಜಿನಲ್ಲಿ ತನ್ನ ಪಕ್ಕದಲ್ಲೇ ಕುಳಿತಿದ್ದ ಇದಿನಬ್ಬರನ್ನು ಆಮಂತ್ರಿಸಲು ಮನಸ್ಸಿದ್ದರೂ ಸುದ್ದಿಯನ್ನು ನಿಮಿಷಾರ್ಧದಲ್ಲಿ ಊರಿಡೀ ಟಾಂ ಟಾಂ ಹೊಡಿಯೋ ವ್ಯಕ್ತಿಯನ್ನು ಈ ಕಾರ್ಯಕ್ರಮಕ್ಕೆ ಕರೆಯದಿರುವುದೇ ವಾಸಿ ಎಂದು ಸುಮ್ಮನಾದರು. ನಂತರ ಮೀನಿನ ದಕ್ಕೆಗೆ ತೆರಳಿ ತಾಜಾ ಅಂಜಲ್, ಮಾಂಜಿ, ಎಟ್ಟಿ ಮೀನನ್ನು ತಂದರು. ಮಟನ್, ಚಿಕನ್ ಹಾಗೂ ಇನ್ನಿತರ ಅಡುಗೆ ಪದಾರ್ಥಗಳಿಗೆ ನಿನ್ನೆಯೇ ಹೇಳಿದ್ದರಿಂದ ಎಲ್ಲವೂ ಒಂದೊಂದಾಗೇ ಮನೆ ತಲುಪುತಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ತನ್ನ ಸಹಾಯಕರೊಂದಿಗೆ ಆಗಮಿಸಿದ್ದ ಪಕ್ವಾನ್ ರಝಾಕ್ ಅದಾಗಲೇ ನೀರುಳ್ಳಿ ಹೆಚ್ಚಲು ಶುರುಮಾಡಿದ್ದ. ಆಯಿಶಾಳ ಚಿಕ್ಕಮ್ಮ ಸುಮಯ್ಯ ಹಾಗೂ ಅತ್ತೆ ನಫೀಸ ಬೇಗನೇ ಆಗಮಿಸಿ ಮನೆ ಕಾರ್ಯದಲ್ಲಿ ತೊಡಗಿದ್ದರು.ಉಳಿದ ನೆಂಟರು ಒಂದೊಂದಾಗಿ ಬರತೊಡಗಿದ್ದರು. ಅವರಲ್ಲೊಂದಿಬ್ಬರು ಆಯಿಶಾಳನ್ನು ಕಾರ್ಯಕ್ರಮಕ್ಕೆ ತಯಾರು ಮಾಡುತಿದ್ದರು. ನೋಡು ನೋಡುತಿದ್ದಂತೆ ಅಲ್ಲೊಂದು ಹಬ್ಬದ ಮೊಹಾಲ್ ಸೃಷ್ಟಿಯಾಗಿತ್ತು. ಬಂದ ಅತಿಥಿಗಳಿಗೆ ಪಕ್ವಾನ್ ರಝಾಕ್ ನ ಮಂಗಳೂರು ಬಿರಿಯಾನಿಯ ಪರಿಮಳ ಮೂಗಿಗೆ ಬಡಿಯತೊಡಗಿತ್ತು. ಅಡುಗೆಗೆ ನೀಡಿದ್ದ ಪಟ್ಟಿಯಲ್ಲಿ ತಿಳಿಸಿದ ಎಲ್ಲಾ ಭಕ್ಷ್ಯ ಗಳೂ ಸಿದ್ದವಾಗಿತ್ತು.. ಇತ್ತಕಡೆ ತಯಾರಾಗಿದ್ದ ಆಯಿಶಾ ಹೊಸ ತಿಳಿ ನೇರಳೆ ಬಣ್ಣದ ಸೀರೆಯಲ್ಲಿ ಬೊಂಬೆಯಂತೆ ಕಂಗೊಳಿಸುತಿದ್ದಳು.‌ ಅಣ್ಣ ಸಫ್ವಾನ್ ಅದಾಗಲೇ ಕರೆ ಮಾಡಿ ತಂಗಿಗೆ ಶುಭಾಶಯ ತಿಳಿಸಿ ಧೈರ್ಯ ತುಂಬಿದ್ದ. ಎಲ್ಲರೂ ಗಂಡಿನ ಕಡೆಯವರನ್ನು ಎದುರು ನೋಡುತಿದ್ದರು.. ಬನ್ನಾರ್ ಬನ್ನಾರ್! (ಬಂದ್ರು ಬಂದ್ರು!!) ದೂರದಿಂದ ೪ ಕಾರ್ ಗಳು ಜೊತೆಯಾಗಿ ಬರುತ್ತಿರುವುದನ್ನು ಗಂಡಿನ ಕಡೆಯವರೆಂದು ಗ್ರಹಿಸಿದ ಆಯಿಶಾಳ ಅತ್ತೆಯ ಕಿರಿಮಗ ರಿಝ್ವಾನ್ ಜೋರಾಗಿ ಕಿರುಚಿದಾಗ ಮನೆಯವರೆಲ್ಲರೂ ಸಿದ್ಧರಾದರು. ಝೊಂಯ್ ಝೊಂಯ್ ಎಂದು ಕಾರುಗಳು ಮನೆಯ ಅಂಗಳಕ್ಕೆ ತಲುಪಿತು. ಕಾರಿನಲ್ಲಿದ್ದವರು ಒಬ್ಬೊಬ್ಬರಾಗಿ ಇಳಿಯತೊಡಗಿದರು. ಅವರೊಲ್ಲೊಬ್ಬ ಸ್ಪುರದ್ರೂಪಿ ಯುವಕ ಶ್ವೇತ ಬಣ್ಣದ ಅಂಗಿ ಹಾಗೂ ನೀಲಿ ಜೀನ್ಸ್ ಧರಿಸಿ ಮೇಲೊಂದು ಬೂದಿ ಬಣ್ಣದ ಸೆಮಿಕೋಟ್ ಧರಿಸಿದ್ದ.ನೋಡಲು ಹಿಂದಿ ಸಿನಿಮಾದ ಹೀರೊನಂತೆ ಕಾಣುತಿದ್ದ. ಆತನೇ ಆಯಿಶಾಳ ನೋಡ ಬಂದ ಗಂಡು ಎಂದು ತಿಳಿಯಲು ಮನೆಯಲ್ಲಿದ್ದವರಿಗೆ ಹೆಚ್ಚು ಸಮಯ ಹಿಡಿಸಲಿಲ್ಲ. ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪರಿಮಳಯುಕ್ತ ತಂಪು ಪಾನೀಯ ನೀಡಲಾಯಿತು. ಹುಡುಗನ ತಂದೆ ಸೆಲೀಮ್ ಹಾಜಾರರು ಗಂಡಿನ ತಂದೆಯೆಂಬ ಸಹಜ ಗಾಂಭೀರ್ಯದಿಂದ ಒಳಬಂದು ಖಾದರಾಕನ ಕೈ ಕುಲುಕಿ “ಅಸ್ಸಲಾಮು ಅಲೈಕುಂ” ಎಂದರು..ಖಾದರಾಕರು “ವಾಲೈಕುಮುಸ್ಸಲಾಂ” ಎಂದು ಉತ್ತರಿಸಿದವರೇ ಕುಳಿತುಕೊಳ್ಳಿ ಎಂದು ಸನ್ನೆ ಮಾಡಿದರು. ಹುಡುಗ ತನ್ನನ್ನು ತಾನು ಮನ್ಸೂರ್ ಎಂದು ಪರಿಚಯಿಸಿಕೊಂಡನು. ಹೆಂಗಸರೆಲ್ಲರೂ ಮನೆಯ ಒಳಭಾಗದ ಹಾಲ್ ಗೆ ಆಗಮಿಸುತಿದ್ದಂತೇ ಆಯಿಶಾಳಿಗೆ ತುಸು ಎದೆ ಬಡಿತ ಜೋರಾಯಿತು. ಒಬ್ಬಬ್ಬೊರಾಗಿ ಮಾತನಾಡ ತೊಡಗಿದಾಗ ಅವರ ಸವಿ ನುಡಿ ಕೇಳಿ ಈಕೆ ಕೊಂಚ ಸಮಾಧಾನಪಟ್ಟಳು. ಹುಡುಗನ ಸಹೋದರಿ ತನ್ನ ಇನ್ನೊಂದು ಸಹೋದರಿಯೊಂದಿಗೆ “ನಙ ಮುಂಜಾಂಡ್ ನೋಕ್ಯದ್ರಾಂಟಿ ಇನ್ನುಂ ಚಂದ ಕಾಂಡಾಲ್” ( ನಾವು ಮೊನ್ನೆ ನೋಡಿದಕ್ಕಿಂತ ಇನ್ನೂ ಜಾಸ್ತಿನೇ ಚೆಂದ ಕಾಣಿಸ್ತಿದ್ದಾಳೆ) ಅಂದಳು. ಸಹೋದರಿಯೂ ಅದಕ್ಕೆ ದನಿಗೂಡಿಸಿದಳು. ಹುಡುಗನ ಇಬ್ಬರು ಸಹೋದರಿಯರಾದ ಝೀನತ್ ಹಾಗೂ ನಿಶಾ ಅದಾಗಲೇ ಮೊದಲ ಹಂತದ ಹುಡುಗಿ ನೋಡುವ ಕಾರ್ಯಕ್ರಮವನ್ನು ಒಂದು ವಾರದ ಮೊದಲೇ ಮುಗಿಸಿದ್ದರು. ಹುಟ್ಟು ಸುಂದರಿಯಾದ ಆಯಿಶಾಳನ್ನು ಬೇಡವೆನ್ನುವ ಯಾವುದೇ ಕಾರಣಗಳು ಅವರಿಗೆ ದೊರಕಿರಲಿಲ್ಲ. ಮನ್ಸೂರ್ ನಿಗೂ ಹೆಣ್ಣಿನ ಫೋಟೊ ನೋಡಿ ಇಷ್ಟವಾಗಿತ್ತು. ಹಾಗಾಗಿ ಗಂಡಿನ ಕಡೆಯವರಿಗೆ ಇಂದಿನ ಕಾರ್ಯಕ್ರಮ ಔಪಚಾರಿಕತೆ ಮಾತ್ರವಾಗಿತ್ತು. ಹುಡುಗಿ ಹುಡುಗ ಕಡೆಯವರು ತಮ್ಮೊಳಗೆ ಚರ್ಚೆ ಆರಂಭಿಸಿದರು. ಹೇಳಿ ಮಾಡಿಸಿದ ಜೋಡಿಯಿದ್ದಂಗಿದೆ ಎಂದು ನುಡಿದವರೇ ಹೆಚ್ಚು. ತನ್ನ ಮಗಳ ಬಗ್ಗೆ ಹೊಗಳಿಕೆಯ ನುಡಿ ಕೇಳಿ ಅಲೀಮಮ್ಮಳ ಕಾಲು ನೆಲಕ್ಕಿಂತ ಅರ್ಧ ಅಡಿ ಮೇಲೆ ನಿಲ್ಲತೊಡಗಿತ್ತು. ಸೆಲೀಮ್ ಹಾಜಾರರ ಸಹೋದರ ಶೇಖ್ ಗೆ ಹುಡುಗಿ ಮನೆ ಹಿಡಿಸಿಲ್ಲವಾದ್ದರಿಂದ ತನ್ನ ಅಣ್ಣನನ್ನು ಪಕ್ಕಕ್ಕೆ ಕರೆದು “ನಿಕ್ಕ್ ಅಗ ಪಿಡ್ಚಿತ್ತಾ?” (ನಿನಗೆ ಮನೆ ಹಿಡಿಸಿತೇ) ಎಂದು ಕೇಳಿದ. ಅದಕ್ಕೆ ಹಾಜಾರರು “ನಮಗೆ ಅಗ ಮುಖ್ಯಮಾ ಪೆಣ್ಣ್ ಮುಖ್ಯಮಾ ?” (ನಮಗೆ ಮನೆ ಮುಖ್ಯವಾ ಹೆಣ್ಣು ಮುಖ್ಯವಾ) ಎಂದಾಗ ಶೇಖ್ ಸುಮ್ಮನಾದರು. ಝೀನತ್ ಹಾಗೂ ನಿಶಾ ತನ್ನ ಅತ್ತಿಗೆಯ ಜೊತೆ ಕೂಡಿ ತಾವು ತಂದಿದ್ದ ಕೆಂಪು ಬಣ್ಣದ ನವೀನ ಮಾದರಿಯ ಗವನ್ ಬಟ್ಟೆ ತೊಡಿಸಿ ಮಲ್ಲಿಗೆ ಮುಡಿಸಿ ಶೃಂಗರಿಸಿದಾಗ ಆಯಿಶಾ ಅಪ್ಪಟ ವಧುವಿನಂತೆ ಕಂಗೊಳಿಸತೊಡಗಿದಳು. ಲುಹರ್ ನಮಾಝ್ ನ ಸಮಯವಾದ್ದರಿಂದ ಗಂಡಸರೆಲ್ಲರೂ ಮಸೀದಿಗೆ ತೆರಳಿದರು. ಖಾದರಾಕ ಹಾಗೂ ಇತರರು ಸಿದ್ಧವಾಗಿದ್ದ ಅಡುಗೆಯನ್ನು ಟೇಬಲ್ ಮೇಲೆ ವಿಂಗಡಿಸಿ ಇಡ ತೊಡಗಿದರು. ಯಾರೋ ಒಬ್ಬರು ಗಂಡಸರು ನಮಾಝ್ ಮುಗಿಸಿ ಬರುವುದರೊಳಗೆ ಹೆಂಗಸರು ಊಟ ಮಾಡಲಿ ಎಂದಾಗ ಖಾದರಾಕ ಗಂಡಸರು ಮೊದಲು ಊಟ ಮಾಡಲಿ, ನಂತರದಲ್ಲಿ ಹೆಂಗಸರು ಮಾಡಿದರಾಯ್ತು, ಅದಲ್ಲವೇ ಅವರ ತರ್ತೀಬ್ (ಕ್ರಮ) ಎಂದು ಆತನನ್ನು ಸುಮ್ಮನಾಗಿಸಿದರು. ನಮಾಝ್ ಮುಗಿಸಿ ಮರಳಿದ ಗಂಡಸರಿಗೆಲ್ಲರಿಗೂ ಬಗೆಬಗೆಯ ಭಕ್ಷ್ಯ,ಖಾದ್ಯಗಳನ್ನು ಬಡಿಸಲಾಯಿತು. ಊಟ ಮುಗಿಸಿದವರು ಹಣ್ಣು ಹಂಪಲುಗಳ ಜೊತೆ ಕಡಕ್ಕ್ ಕನ್ನವನ್ನು ಸವಿಯತೊಡಗಿದರು. ಇದರ ಮಧ್ಯೆ ಮನ್ಸೂರ್ ನನ್ನು ಹುಡುಗಿ ತೋರಿಸಲೆಂದು ಖಾದರಾಕ ಒಳ ಕರೆದೊಯ್ದರು. ತುಸು ಹಿಂಜರಿಕೆಯಿಂದಲೇ ಹುಡುಗಿ ಕೊಠಡಿಗೆ ತೆರಳಿದ ಮನ್ಸೂರ್ ನನ್ನು ಕಂಡು ಆಯಿಶಾ ತಲೆಯೆತ್ತಲೂ ಸಂಕೋಚ ಪಡುತಿದ್ದಾಗ ಸುಮಯ್ಯ ಬಂದು ಆಯಿಶಾಳ ಮುಖವ ಎತ್ತಿ ತೋರಿಸಿದಳು. ಆ ಕೂಡಲೇ ನೆರೆದಿದ್ದ ಹೆಂಗಸರು ಓಹೋ... ಎಂದು ಕಿರುಚಿದಾಗ ಮನ್ಸೂರ್ ತನ್ನ ಸಹೋದರಿ ನಿಶಾಳೊಂದಿಗೆ ಏನೋ ಹೇಳಿ ಹೊರಬಂದ. ಈಗ ಹೆಂಗಸರ ಊಟದ ಸರದಿ. ಎಲ್ಲರೂ ಊಟಕ್ಕೆ ಕುಳಿತರು. ಮನ್ಸೂರ್ ನ ತಾಯಿ ಆಮೀನ ಊಟ ಆರಂಭಿಸುವುದನ್ನು ಕಾಯುತಿದ್ದರು. ಆಮೀನ ಊಟ ಮಾಡುವಂತೆ ಕಣ್ಸನ್ನೆ ಮಾಡಿದಾಗ ವನಿತೆಯರ ಬ್ಯಾಟಿಂಗ್ ಆರಂಭವಾಗಿತ್ತು. ಬಂದವರೆಲ್ಲರೂ ಹೊಟ್ಟೆ ತುಂಬಾ ಉಂಡಾಗ ಅಲೀಮಮ್ಮಗೆ ಅದೇನೋ ಸಾಧಿಸಿದ ಅನುಭವ. ಊಟ ಮುಗಿಸಿದ ಆಮೀನ ತನ್ನ ಗಂಡನನ್ನು ಕರೆದು ಅದೇನೋ ಹೇಳಿದಾಗ, ಸೆಲೀಮ್ ಹಾಜಾರ್ ಆಯ್ತು ಎಂದು ತಲೆ ಆಡಿಸಿದರು. ಆಮೀನ ತಾವು ತಂದಿದ್ದ ನೆಕ್ಲೆಸ್ ಆಭರಣವನ್ನು ಆಯಿಶಾಳಿಗೆ ತೊಡಿಸಿದಾಗ ಮನೆಯವರೆಲ್ಲರೂ ಆಯಿಶಾಳ ಮೇಲೆ ಮುಗಿಬಿದ್ದು ಶುಭಾಶಯ ಹೇಳತೊಡಗಿದರು. ಅಲೀಮಮ್ಮ ಖಾದರಾಕನನ್ನು ಕರೆದು ಸಂತೋಷ ವಾರ್ತೆ ತಿಳಿಸಿದರು. ಬಹಳ ಖುಷಿಯಾದ ಖಾದರಾಕ ನೇರ ಹೋಗಿ ಉಝೂ ಮಾಡಿ ಲುಹರ್ ನಮಾಝ್ ನಿರ್ವಹಿಸಿ ಅಲ್ಲಾಹನಿಗೆ ಶುಕ್ರ್ ಸಲ್ಲಿಸಿದರು.. ಹಿರಿಯರೆಲ್ಲರೂ ಮಾತುಕತೆ ನಡೆಸಿ ವಿವಾಹಕ್ಕೆ ದಿನ ನಿಗದಿಪಡಿಸಿದರು. ಇನ್ನು ಇಪ್ಪತ್ತು ದಿನಗಳಲ್ಲೇ ಮದುವೆ. ಉಸ್ತಾದರು ದುವಾ ನೆರವೇರಿಸಿ ಹೊರಟರು. ಬಂದವರೆಲ್ಲರೂ ಮನೆಯವರಿಗೆ ಶುಭಾಶಯ ಹೇಳಿ ಹೊರಡ ತೊಡಗಿದರು. ನಿಶಾ ಏನೋ ನೆನಪಾದಂತೆ ಮನ್ಸೂರ್ ನ ಕರೆದು ಏನೋ ಅಂದಳು. ಮನ್ಸೂರ್ ಕೂಡಲೇ ತನ್ನ ಕಾರಲ್ಲಿದ್ದ ಕಟ್ಟನ್ನು ತಂದು ನೇರ ಆಯಿಶಾಳ ಬಳಿ ಹೋಗಿ ಆಕೆಯ ಕೈಗಿತ್ತ. ಮನ್ಸೂರ್ ಹಾಗೂ ಸೆಲೀಂ ಹಾಜಾರ್ ಮನೆಯವರಿಗೆ ಸಲಾಂ ಹೇಳಿ ಹೊರಟರು.ಮನೆಯವರಿಗೆ ಕಟ್ಟನ್ನು ಬಿಚ್ಚಿ ನೋಡೋ ಕುತೂಹಲ. ಕಟ್ಟಿನಲ್ಲಿದ್ದಿದ್ದು iPhone. ಹುಡುಗನ ಪ್ರತ್ಯೇಕ ಉಡುಗೊರೆ. ಹೆಂಗಸರು ನೆಕ್ಲೆಸ್ ನ ತೂಕ ಅಳೆಯ ತೊಡಗಿದರು. ಕೆಲವರು ಹತ್ತು ಪವನ್ ಅಂದ್ರೆ, ಇನ್ನು ಕೆಲವರು ಹದಿನೈದು ಎಂದರು. ಹುಡುಗರು ಐಫೋನ್ ಸುತ್ತುವರಿದಿದ್ದರು. ನೆರೆಮನೆಯವರು ಒಬ್ಬೊಬ್ಬರಾಗೆ ಬಂದು ಶುಭಾಶಯ ಹೇಳಿ ತೆರಳಿದರು. ಮಗ್ರಿಬ್ ಬಾಂಗ್ ಆಗುವಷ್ಟರಲ್ಲಿ ಬಂದವರೆಲ್ಲಾ ತೆರಳಿದರು. ಆಯಿಶಾಳ ವಿಧವೆ ಅತ್ತೆ ಜಮೀಲಾ ಮಾತ್ರ ಅಲೀಮಮ್ಮ ನಾಳೆ ಹೋಗು ಎಂದು ಒತ್ತಾಯ ಮಾಡಿದಾಗ ಮನೆಯವರ ಜೊತೆ ಉಳಿದಿದ್ದರು. ಆಯಿಷಾ ತನ್ನ ಕನಸುಗಳೆಲ್ಲಾ ಫಲಿಸುತ್ತಿದೆಯೆಂಬ ಸಂತಸದಲ್ಲಿ ತೇಲಾಡುತ್ತಿದ್ದಳು. *** ಸಮಯ ರಾತ್ರಿ ೧೧ ಗಂಟೆ.ಟ್ರಿನ್..ಟ್ರಿನ್.. ಐಪೋನ್ ರಿಂಗನಿಸಿತು. ಆಯಿಶಾ ನಡುಗುತ್ತಲೇ ರಿಸೀವ್ ಮಾಡಿದಳು. ಆ ಕಡೆಯಿಂದ ಹಲೋ ಎಂದರು... ಮನ್ಸೂರ್ ನ ಧ್ವನಿ... ಆಯಿಶಾ ಗೆ ಭಯ ನಾಚಿಕೆ ಎಲ್ಲಾ ಒಟ್ಟಾಗಿ ಬಂದು ಶಬ್ದ ಹೊರಡುತಿಲ್ಲ..ಕೂಡಲೇ ಕಾಲ್ ಕಟ್ ಮಾಡಿದಳು. ಮತ್ತೆ ರಿಂಗನಿಸಿತು.. “ಎಂದೋ ಬಂಗಾರ್ ಪಲಕರಿಲ್ಲೇ?” (ಏನು ಚಿನ್ನ ಮಾತಾಡಲ್ವಾ?)ಅಂದ ಮನ್ಸೂರ್. ಮನ್ಸೂರ್ ನ ಪ್ರೀತಿಯ ಧ್ವನಿಗೆ ಉತ್ತರಿಸಬೇಕೆಂದರೂ ಆಕೆಗೆ ಉತ್ತರಿಸಲಾಗುತಿಲ್ಲ. ಆಯಿಶಾ ಓದಿದ್ದರೂ ಆಧುನಿಕತೆಗೆ ಒಗ್ಗಿಕೊಂಡಿರಲಿಲ್ಲ. ಸ್ವಂತ ಮೊಬೈಲ್ ನ್ನು ಖಾದರಾಕ ಕೊಡಿಸಿರಲಿಲ್ಲ. ಇವಳಿಗದು ಬೇಕಾಗೂ ಇರಲಿಲ್ಲ. ತಾನಾಯ್ತು ತನ್ನ ಪಾಡಾಯ್ತು ಅಂತ ಓದಿನ ಕಡೆಗಷ್ಟೇ ಗಮನ.ಗೆಳತಿಯರಿಗೆ ಕರೆ ಮಾಡಲು ತಂದೆಯ ಫೋನನ್ನೇ ಬಳಸುತಿದ್ದಳು.ಹುಡುಗರೊಂದಿಗೆ ಜಾಸ್ತಿ ಮಾತಾಡಿಯೂ ಗೊತ್ತಿರಲಿಲ್ಲ. ಐದಾರು ಬಾರಿ ಕರೆ ಪುನರಾವರ್ತನೆಯಾದಾಗ ಆಯಿಶಾ ಬೆಳಿಗ್ಗೆ ಮಾತಾಡುವೆಯೆಂದು ಸಂದೇಶ ಕಳಿಸಿದಳು‌. ಮನ್ಸೂರ್ ಗೆ ನಿರಾಸೆ. ಆದರೂ ಸರಿ ಓಕೆ ಯೆಂದು ಸಂದೇಶ ಕಳಿಸಿದ. ಆಯಿಷಾ ನಿದ್ರೆಗೆ ಜಾರಿದಳು. ಬೆಳಿಗ್ಗೆ ಬೇಗ ಎದ್ದವಳೇ ಸ್ವಲ್ಪ ಫೋನಲ್ಲಿ ಮಾತಾಡಲು ಅಭ್ಯಾಸದಲ್ಲಿ ತೊಡಗಿದಳು. ಅಷ್ಟರಲ್ಲೇ ಫೋನ್ ರಿಂಗನಿಸಿತು. ಆ ಕಡೆಯಿಂದ ಮನ್ಸೂರ್ ಹಲೋ ಎಂದ.. ಆಯಿಷಾ ಅ..ಅ...ಅಲೋ..ಉಹೂಂ ..ಇಲ್ಲ ಶಬ್ದ ಹೊರಡುತಿಲ್ಲ. ಎಲ್ಲಾ ಶಕ್ತಿ ಉಪಯೋಗಿಸಿ ಇನ್ನೇನೋ ಹಲೋ ಎನ್ನಬೇಕು ಅನ್ನುವಷ್ಟರಲ್ಲಿ.. ಆಗಲೇ ಆ ಕಡೆಯಿಂದ "ನಿಕ್ಕೆಂದೋ ಕಾದ್ ಕೇಕ್ ಲ್ಲೇ ಅಲ್ಲಾ ಬಾಯಿ ಬಂಡ್ಲೇ" (ನಿನಗೇನು ಕಿವಿ ಕೇಳಲ್ವಾ ಇಲ್ಲಾ ಬಾಯಿ ಬರಲ್ವಾ) ಮನ್ಸೂರ್ ಸ್ವಲ್ಪ ಖಾರವಾಗೇ ನುಡಿದ. ಆಯಿಶಾಳ ಬಾಯಿಯಿಂದ ಹೊರಬಂದಿದ್ದ ಹಲೋ ಮತ್ತೆ ಒಳ ಸೇರಿತ್ತು. ಆತನ ಆ ಧ್ವನಿ ಆಕೆಗೆ ಸಿಡಿಲಿನಂತೆ ಅಪ್ಪಳಿಸಿತ್ತು. ಫೋನ್ ಕಟ್ ಮಾಡಿದವಳೇ ಅಳತೊಡಗಿದಳು. ಮನ್ಸೂರ್ ಮತ್ತೆ ಪ್ರಯತ್ನಿಸಲು ಫೋನ್ ಸ್ವಿಚ್ ಆಫ್ ಆಗಿತ್ತು. ಆಯಿಶಾ ಅಮ್ಮನ ಬಳಿ ತೆರಳಿದವಳೇ ನನಗೀ ಮದುವೆ ಇಷ್ಟವಿಲ್ಲವೆಂದು ಬಿಟ್ಟಳು. ಅಮ್ಮನಿಗೆ ಆಘಾತ‌. ವಿಷಯ ತಿಳಿದು ಖಾದರಾಕ ಓಡಿ ಬಂದರು. ಕಾರಣ ಕೇಳಿ ಆಕೆಯನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿ ಸೋತರು. ಮನ್ಸೂರ್ ನ ಆ ಕಠಿನ ಮಾತು ಆಯಿಷಾಳ ಮುಗ್ಧ ಮನಸ್ಸನ್ನು ಘಾಸಿ ಮಾಡಿಬಿಟ್ಟಿತ್ತು. ಆಕೆ ಯಾರ ಮಾತು ಕೇಳಲೂ ಸಿದ್ಧಳಿರಲಿಲ್ಲ. ವಿಷಯ ಗಂಡಿನ ಕಡೆಯವರಿಗೆ ತಿಳಿಯಿತು. ಖಾದರಾಕನಿಗೆ ಫೋನ್ ಗಳ ಮೇಲೆ ಫೋನ್ ಬರತೊಡಗಿತು. ಎಲ್ಲರೂ ಮನ್ಸೂರ್ ನ ಗುಣಗಾನ ಮಾಡುವವರೇ. ಇದೊಂದು ಸಣ್ಣ ವಿಚಾರ, ಹೇಗಾದರೂ ಅವಳನ್ನು ಒಪ್ಪಿಸಿ, ಇಂತಹ ಹುಡುಗ ಬಿಟ್ರೆ ಸಿಗಲಾರ ಎನ್ನುತ್ತಿದ್ದರು. ಖಾದರಾಕ ಎಲ್ಲಾ ಪ್ರಯತ್ನ ಮಾಡಿ ಸೋತು ಬಿಟ್ಟಿದ್ದರು. ಮಗಳನ್ನು ಇನ್ನೂ ಒತ್ತಾಯ ಮಾಡುವ ಗೋಜಿಗೆ ಹೋಗಲಿಲ್ಲ. ಸಂಜೆ ವೇಳೆಗೆ ಮನ್ಸೂರ್ ನ ಚಿಕ್ಕಪ್ಪ ಶೇಖ್ ಒಂದಿಬ್ಬರು ಊರ ಪಂಚಾಯ್ತಿದಾರರನ್ನು ಕರೆದುಕೊಂಡು ಖಾದರಾಕನ ಮನೆಗೆ‌ ಬಂದ. ಮಾತಿನಲ್ಲಿ ನಿನ್ನೆಯ ಸೌಜನ್ಯವಿರಲಿಲ್ಲ. ಆಯಿಷಾಳಿಗೆ ನೀಡಿದ ಎಲ್ಲಾ ಉಡುಗೊರೆಯನ್ನು ಹಿಂದಕ್ಕೆ ಪಡೆಯಲಾಯಿತು. ಅದರ ಮೇಲೆ ೫೦ ಸಾವಿರ ಪರಿಹಾರ ಕೊಡಬೇಕೆಂದು ತೀರ್ಮಾನವಾಯಿತು. ತನ್ನ ಕಾರ್ಯ ಸಾಧಿಸಿ ಶೇಖ್ ತನ್ನ ಬಳಗದೊಂದಿಗೆ ಹಿಂದುರುಗಿದರು. ರೂಮಿನ ಮೂಲೆಯಲ್ಲಿ ಅಳುತ್ತಾ ಕುಳಿತಿದ್ದ ಆಯಿಷಾಳ ತಲೆ ನೇವರಿಸುತ್ತಾ ಯಾಕಮ್ಮಾ ಇಷ್ಟು ಕಠಿನವಾದೆ ಎಂದು ಜಮೀಲಾ ಕೇಳಿದಳು. “ಅವ್ಂಡೊ ಮೇಲುಳ್ಳೊ ಮನಸ್ಸ್ ಮುರ್ಞಿರ್ ಮಾಮಿ”(ಆತನ ಮೇಲಿನ ಮನಸ್ಸು ಮುರಿದಿದೆ ಅತ್ತೆ) ಅಂದಳು ಆಯಿಶಾ. ಮದುವೆ ಮುಂಚೆ ಮನಸ್ಸು ಮುರಿದ ನೀನೇ ಪುಣ್ಯವಂತೆ ಎಂದ ಜಮೀಲಾಳ ಮಾರ್ಮಿಕ ನುಡಿ ಆಯಿಶಾಳಿಗೆ ತುಸು ಸಮಾಧಾನ ತಂದಿತ್ತು. ಈ ಎಲ್ಲಾ ಗೊಂದಲಗಳ ನಡುವೆ ಅಲ್ಲೊಂದು ತಲಾಕ್ ನಡೆದಿತ್ತು. ಮದುವೆಯಾಗದೇ ತಲಾಕ್. ಮೂರು ಬಾರಿ ಹೇಳಬೇಕಿರಲಿಲ್ಲ. ಗಂಡಿನ ಜೊತೆ ಕೇಳಬೇಕಿರಲಿಲ್ಲ‌. ತಲಾಕ್ ನೀಡಿದ ಆಯಿಶಾ ಗಂಡಿಗೆ ಪರಿಹಾರವನ್ನೂ ನೀಡಿದ್ದಳು! ಮುಸಲ್ಲ - ನಮಾಝ್ ಗೆ ಹಾಸುವ ಚಾಪೆ; ತಲಕಾನಿ - ತಲೆದಿಂಬು; ಕಡಕ್ಕ್ ಕನ್ನ - ಲೆಮನ್ ಟೀ NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್