ಜ್ಞಾನ ಕಿರಣ ಅಸ್ಮಾಉಲ್ ಹುಸ್ನ

ಜ್ಞಾನದ ಕಿರಣ ಅಸ್ಮಾಉಲ್ ಹುಸ್ನ ಮತ್ತು ಅದರ ಪ್ರತ್ಯೇಕತೆಗಳು ಅಲ್ಲಾಹುವಿನ 99 ಪರಿಶುದ್ದವಾದ ನಾಮಧೇಯಕ್ಕೆ ಅದ್ಭುತವಾದ ಪ್ರತ್ಯೇಕತೆಗಳಿವೆ. ವಿಶೇಷವಾಗಿ ಮಲಗಿ ನಿದ್ರಿಸುವುದಕ್ಕೆ ಮುಂಚಿತವಾಗಿ ಶುದ್ದನಾಗಿ ಏಕಾಂತದಲ್ಲಿ ಕುಳಿತು ಹೇಳಿದರೆ ಅದ್ಭುತವಾದ ಪ್ರತ್ಯೇಕತೆಗಳು ದೊರೆಯಲಿವೆ ಎಂಬುದು ಪಂಡಿತರುಗಳ ಅಭಿಪ್ರಾಯ. ಪ್ರತಿಯೊಂದು ಇಸ್ಮನ್ನೂ ಒಂದಕ್ಕಿಂತ ಹೆಚ್ಚು ಬಾರಿ ಹೇಳುವುದೂ ಇಸ್ಮ್ ಗಿಂತ ಮೊದಲು "ಯಾ (یاَ)" ಸೇರಿಸಬೇಕು. ಇದರಿಂದಾಗಿ ನಿದ್ರೆಯಲ್ಲಿರುವಾಗಲೂ ಹಲವಾರು ಅದ್ಭುತಗಳನ್ನು ಕಾಣಬಹುದು. ನಮಗೆ ಸಂಭಂಧಿಸಿ ಮುಚ್ಚಿರುವ ಬಾಗಿಲುಗಳು ತೆರೆಯಲ್ಪಡುವುದು ಸಂಪೂರ್ಣ ವುಳೂವಿನೊಂದಿಗೆ ಖಿಬ್ಲಾದ ಮುಂದೆ ಕುಳಿತು ಅಲ್ಲಾಹುವಿನ ಪರಿಶುದ್ದ ನಾಮವನ್ನು ಅತ್ಯಂತ ಗೌರವಪೂರ್ಣವಾಗಿಯೂ ಸಂಪೂರ್ಣವಾಗಿ ಅರ್ಥಮಾಡಿಕೊಂಡು ಭಕ್ತಿಯಲ್ಲೂ ಹೇಳಬೇಕು.. ಮುಂದಿನ ಭಾಗದಲ್ಲಿ ಅಲ್ಲಾಹನ ಪ್ರತಿಯೊಂದು ನಾಮಗಳಿಗಿರುವ ಪ್ರತ್ಯೇಕತೆಯನ್ನು ತಿಳಿಸಲಾಗುವುದು.. ಅಲ್ಲಾಹನ ನಾಮಧೇಯಗಳಿಗಿರುವ ಮಹತ್ವವನ್ನು ಅರಿಯೋಣ.. 1. الله ಒಬ್ಬನು یا الله یا هو ಎಂದು ಎಲ್ಲಾ ದಿವಸವೂ ಸಾವಿರ ಬಾರಿ ನಿಯಮಿತವಾಗಿ ಹೇಳಿದರೆ ಅವನಿಗೆ ಪರಿಪೂರ್ಣವಾದ ದೃಡ ಮನಸ್ಸು ದೊರಕುವುದು. ಇಮಾಂ ಸುಹ್ರವರ್ದಿ ತಙಳ್ ಹೇಳಿದರು ಒಬ್ಬನು ಶುಕ್ರವಾರ ನಮಾಝಿಗಿಂತ ಮೊದಲು ಸಂಪೂರ್ಣ ಶುದ್ದನಾಗಿಯೂ ಸ್ವಚ್ಚವಾಗಿಯೂ ಏಕಾಂತವಾಗಿ 200 ಬಾರಿ ಇದನ್ನು ಹೇಳಿದರೆ ಅವನ ಉದ್ದೇಶಗಳು ಸಫಲವಾಗುವುದು, ರೋಗವಾಗಿದ್ದರೆ ಅದು ಗುಣಮುಖವಾಗುತ್ತದೆ. 2.الرؔحمن الرؔحیم ಒಬ್ಬನು الرؔحمن ಎನ್ನುವ ವಚನವನ್ನು ಮೆಲುಕುಹಾಕುವುದೋ, ನಿಯಮಿತವಾಗಿ ಹೇಳುವುದೋ ಮಾಡಿದರೆ ನಿರ್ಲಕ್ಷ್ಯಕ್ಕೊಳಗಾಗುವ ಯಾವುದೇ ಸಂಧರ್ಭ ಒದಗಿಬರುವುದಿಲ್ಲ. ನಮಾಝಿನ ನಂತರ ಯಾವುದೇ ಚಿಂತೆಯಿಲ್ಲದೆ 100 ಬಾರಿ ಹೇಳುವವನ ಹೃದಯದಿಂದ ಅಶ್ರದ್ಧೆ ಮರೆಯಾಗುವುದು. الرؔحیم ಇದನ್ನು 100 ಬಾರಿ ನಿಯಮಿತವಾಗಿ ಹೇಳಿದರೆ ಮನಸ್ಸಿಗೆ ಶಾಂತಿಯೂ ಸೃಷ್ಟಿಯಲ್ಲಿ ಕರುಣೆಯೂ ತೋರುವುದು. 3. اَلمَلِک ಇದನ್ನು ಎಲ್ಲಾ ದಿವಸವೂ ಮಧ್ಯಾಹ್ನದ ಸಮಯದಲ್ಲಿ 100ಬಾರಿ ಹೇಳಿದರೆ ಮನಸ್ಸು ಶುದ್ದವಾಗುತ್ತದೆ, ಮಾನಸಿಕ ತುಮುಲಗಳು ಕಳೆದುಹೋಗುತ್ತದೆ. ಸುಬಹಿಯ ನಂತರ 121 ಬಾರಿ ನಿಯಮಿತವಾಗಿ ಹೇಳಿದರೆ ಅಲ್ಲಾಹು ಅವನನ್ನು ಶ್ರೀಮಂತನನ್ನಾಗಿ ಮಾಡುತ್ತಾನೆ. ಎಲ್ಲಾ ದಿವಸವೂ ಇದನ್ನು 99 ಬಾರಿ ಹೇಳಿದರೆ ಅವನಿಗೆ ಇಲ್ಮ್ ಮತ್ತು ಮಅ್ ರಿಫತ್ತ್ ದೊರೆಯುವುದು. 4.القدؔوس ಎಲ್ಲಾ ದಿವಸವೂ ಸಾವಿರ ಬಾರಿಯಂತೆ 40 ದಿವಸಗಳ ಕಾಲ ಹೇಳಿದರೆ ಅವನು ಉದ್ದೇಶಿಸಿರುವ ರೀತಿಯಲ್ಲಿ ಭಿನ್ನತೆಗಳು ಐಕ್ಯವಾಗುತ್ತದೆ. ಪ್ರಪಂಚದಲ್ಲಿನ ಆಸಾರುಗಳು ಅವನಿಗೆ ತಿಳಿಯುತ್ತವೆ. 5. السؔلام ಆಫತ್ತುಗಳೂ, ಮುಸ್ವೀಬತ್ತುಗಳೂ ಇದನ್ನು ನಿಯಮಿತಗೊಳಿಸಿದವನಿಗೆ ತಟ್ಟಲಾರದು. 121 ಬಾರಿ ಇದನ್ನು ರೋಗಿಗಾಗಿ ಹೇಳಿ ಊದಿದರೆ ಮೃತ್ಯುವಿನ ಸಮವಾದಾಗ ರೋಗಿಯಾಗಿದ್ದರೆ ಅವನಿಗೆ ಗುಣವಾಗುತ್ತದೆ. 6. المعمن ಇದನ್ನು ನಿಯಮಿತಗೊಳಿಸಿದವನಿಗೆ ರಕ್ಷಣೆಯೂ ಶಕ್ತಿಯೂ ಲಭಿಸುವುದು. ಶರೀರಕ್ಕೋ ಸ್ವತ್ತಿಗೋ ಭಯವಿರುವವರಿಗೆ ಇದನ್ನು‌ 36 ಬಾರಿ ಹೇಳಿದರೆ ರಕ್ಷಣೆ ದೊರೆಯುವುದು. 7. المهیمن ಇದನ್ನು ನಿಯಮಿತಗೊಳಿಸಿದವರಿಗೆ ಆತ್ಮೀಯ ಉನ್ನತಿಯೂ, ಗೌರವವೂ, ಉತ್ತಮ ಮನಸ್ಥೈರ್ಯವೂ ಲಭಿಸುವುದು. ಸ್ನಾನ ಮಾಡಿ ನಮಾಝಿನ ನಂತರ ಏಕಾಂತವಾಗಿ 100 ಬಾರಿ ಹೇಳಬೇಕು. ಸುಹ್ರವರ್ದಿ ತಙಳ್ ರವರು ಹೇಳುತ್ತಾರೆ ಇದನ್ನು ಹೇಳಿದವರಿಗೆ ಹಿಳ್ ಳಿನಲ್ಲಿ ಶಕ್ತಿ ದೊರೆಯುವುದು ಹಾಗೂ ನೆನಪಿನ ಶಕ್ತಿ ಹೆಚ್ಚುವುದು 8. العزیز ಇದನ್ನು 40 ಬಾರಿಯಂತೆ 40 ದಿನಗಳು ಹೇಳಿದ್ದಲ್ಲಿ ಸೃಷ್ಟಿಯಲ್ಲಿ ಯಾರನ್ನೂ ಆಶ್ರಯಿಸದಿರಬೇಕಾದ ರೀತಿಯಲ್ಲಿ ಅಲ್ಲಾಹನು ಆತನಿಗೆ ಸಹಾಯ ಮಾಡುತ್ತಾನೆ, ಅವನಿಗೆ ಉನ್ನತಿ ದೊರೆಯುವುದು. ಪ್ರತಿದಿನವೂ 1000 ಬಾರಿಯಂತೆ ನಿರಂತರ ಏಳು ದಿವಸ ಹೇಳಿದರೆ ಅವನ ಶತ್ರು ನಾಶವಾಗುತ್ತಾನೆಂದು ಇಮಾಂ ಸುಹ್ರವರ್ದಿ ತಙಳ್ ಹೇಳಿದ್ದಾರೆ. 9.لجباّر ಬೆಳಿಗ್ಗೆಯೂ ಸಾಯಂಕಾಲವೂ 21 ಬಾರಿಯಂತೆ ಇದನ್ನು ನಿಯಮಿತಗೊಳಿಸಿದರೆ ಅಕ್ರಮಿಗಳಾದ ಅಧಿಕಾರಿಗಳಿಂದ ಹಾಗೂ ಶತ್ರುಗಳಿಂದ, ರಾತ್ರಿ ಸಮಯದಲ್ಲೂ‌ ಅಲ್ಲದ ಸಮಯದಲ್ಲೂ ರಕ್ಷಣೆ ಲಭಿಸುವುದು. 10. المتکبّر ಇದು ಖೈರ್ ಮತ್ತು ಬರ್ಕತ್ತ್ ಗಳನ್ನು ಪ್ರಕಟಗೊಳಿಸುವ ವಚನವಾಗಿದೆ. ರಾತ್ರಿಯಲ್ಲಿ ಪತ್ನಿಯೊಂದಿಗೆ ಸಂಯೋಗಕ್ಕಿಂತ ಮುಂಚಿತವಾಗಿ ಹತ್ತು ಬಾರಿ ಇದನ್ನು ಹೇಳಿದರೆ ಸ್ವಾಲಿಹಾದ ಮಗುವು ಜನಿಸುತ್ತದೆ. 11.الخالق ರಾತ್ರಿಯ ಅಂತ್ಯಜಾವದಲ್ಲಿ ಒಂದು ಗಂಟೆಯೋ ಅದಕ್ಕಿಂತ ಹೆಚ್ಚೋ ಹೇಳಿದರೆ ಅವನ ಖಲ್ಬ್ ಹಾಗೂ ಮುಖಗಳು ಪ್ರಕಾಶಮಾನವಾಗುವುದು.. 12.البارئ ಇದನ್ನು 100 ಬಾರಿಯಂತೆ ನಿರಂತರ 7 ದಿನಗಳ ಕಾಲ ಹೇಳಿದರೆ ಎಲ್ಲಾ ಆಪತ್ತುಗಳಿಂದ ರಕ್ಷಣೆ ದೊರಕುತ್ತದೆ.. 13.المصور ಹಣ್ಣು ಹಂಪಲುಗಳು ಹೆಚ್ಚಾಗಲು ಇದನ್ನು ಹೇಳಿರಿ.. ಹೆರಿಗೆಯಾಗದವರು ಉಪವಾಸ ತೊರೆದು ಮಗ್ರಿಬಾದ ಬಳಿಕ ಉಪವಾಸ ಮುರಿಯುವುದಕ್ಕೆ ಸಮೀಪವಾಗಿ 7 ದಿವಸ 21 ಬಾರಿಯಂತೆ ಹೇಳಿದರೆ ಬಂಜೆತನವು ನೀಗಿ ಅವಳಿಗೆ ಮಕ್ಕಳಾಗುವುದು.. 14.الغفار ಪಾಪ ಮೋಚನೆ ದೊರಕುವುದು. ಜುಮುಅ ನಮಾಝಿನ ನಂತರ 100 ಬಾರಿ ಹೇಳಿದರೆ ಮಗ್ಫಿರದ ಗುರುತು ಅವನಲ್ಲಿ ಪ್ರಕಟವಾಗುವುದು.. 15.القهار ಮನಸ್ಸಿನಿಂದ ದುನಿಯಾವಿಗೆ ಹುಬ್ಬ್ ಸರಿಯುವುದೂ ಖಲ್ಬಿನಲ್ಲಿ ಅಲ್ಲಾಹುವಿಗಿರುವ ಚಿಂತೆಯೂ ಹೆಚ್ಚುವುದು. ಇದನ್ನು ಹೆಚ್ಚು ಹೆಚ್ಚು ಹೇಳುವವರಿಗೆ ಶತ್ರುವನ್ನು ಸೋಲಿಸುವ ಸಾಮರ್ಥ್ಯವು ದೊರಕುವುದು. ಅಕ್ರಮಿಗಳನ್ನು ಮಟ್ಟಹಾಕಲು ಸೂರ್ಯೋದಯದ ಸಮಯದಲ್ಲೂ ಅರ್ಧ ರಾತ್ರಿಯಲ್ಲೂ ಹೀಗೆ ಹೇಳಿರಿ. يا جبار يا قهار ياذا البطش الشديد. ಎಂದು 100 ಬಾರಿ ನಂತರ ಹೀಗೆ ಪ್ರಾರ್ಥಿಸಿರಿ. خد حقي ممن ظلمي وعدا علي ಅಕ್ರಮಿಯಿಂದ ನನ್ನ ಹಕ್ಕನ್ನು ನೀನು ಪಡೆದು ನೀಡಬೇಕು.. 16.الوهاب ಳುಹಾ ನಮಾಝಿನ ನಂತರ ಸುಜೂದಿನಲ್ಲಿ ಇದನ್ನು ಹೇಳಿದರೆ ಅವನಿಗೆ ಐಶ್ವರ್ಯವೂ ಹೃದಯ ಗಾಂಭೀರ್ಯತೆಯೂ ಅಲ್ಲಾಹನಿಗೆ ಹತ್ತಿರವಾಗಲು ಸ್ವೀಕಾರ್ಯತೆಯೂ ಲಭಿಸುವುದು. ಶಿಬಿಲಿ ಇಮಾಮಿ ರ.ಅ ರವರಿಗೆ ಮಗುವು ಜನಿಸುತ್ತದೆಂದುಕೊಂಡಿರುವ ವಚನ ಯಾವುದೆಂದು ಕೇಳಿದರು. ಆಗ الوهاب ಆಗಿದೆ ಎಂದು ಹೇಳಲಾಯಿತು. ಶಿಬಿಲಿ ರ.ಅ ಹೇಳುತ್ತಾರೆ.. ಆದುದರಿಂದ ಅವರ ಧನ ಹೆಚ್ಚಿತು. 17.الرزاق ಇದು رزق (ಆಹಾರ) ವಿಶಾಲವಾಗಿಸಲು ಇರುವುದಾಗಿದೆ. ಮನೆಯ ಪ್ರತಿಯೊಂದು ಭಾಗದಲ್ಲೂ ಸುಬಹಿ ನಮಾಝಿನ ಮೊದಲು 10 ಬಾರಿ ಹೇಳಿರಿ. ಆರಂಭ ಖಿಬ್ಲಾದ ಬಲಭಾಗದಿಂದಾಗಬೇಕು. ಸಾಧ್ಯವಾದರೆ ಪ್ರತಿಯೊಂದು ಭಾಗದಲ್ಲೂ ಖಿಬ್ಲಾಕ್ಕೆ ತಿರುಗಿ ನಿಂತೇ ಹೇಳಿರಿ... 18.الفتاح ಕೆಲಸಗಳು ಸುಲಭವಾಗುವುದು. ಹೃದಯ ಪ್ರಕಾಶಮಾನವಾಗುವುದು. ವಿಜಯದ ಕಾರ್ಯಗಳು ಸುಲಭವಾಗುವುದು. ಸುಬಹಿ ನಮಾಝಿನ ನಂತರ ಕೈಯನ್ನು ಎದೆಯಲ್ಲಿರಿಸಿ 71 ಬಾರಿ ಹೇಳಿದರೆ ಖಲ್ಬ್ ಶುದ್ದವಾಗುವುದರೊಂದಿಗೆ ಅವನ ಕೆಲಸಗಳು ಸುಲಭವಾಗುವುದು. ಆಹಾರದ ವಿಷಯದಲ್ಲಿ ಕಷ್ಟವಿಲ್ಲದಂತಾಗುತ್ತದೆ. 19.العليم ತಿಳುವಳಿಕೆ ಹಾಗೂ ತತ್ವಜ್ಞಾನ ಲಭ್ಯವಾಗುತ್ತದೆ. ಇದನ್ನು ನಿಯಮಿತಗೊಳಿಸಿದವರಿಗೆ ಅಲ್ಲಾಹುವನ್ನು ತಿಳಿಯಬೇಕಾದ ರೀತಿಯಲ್ಲಿ ತಿಳಿಯಲು ಸಾಧ್ಯವಾಗುತ್ತದೆ. يا علام الغوب ಗೈಬಿಯಾದ ಕೆಲಸಗಳಿಂದ ಮಾತನಾಡಲೂ, ಗುಟ್ಟಾದ ವಿಷಯಗಳನ್ನು ರಟ್ಟು ಮಾಡಲೂ, ಮರೆವನ್ನು ನೀಗಲೂ, ಬಾಯಿಪಾಠಕ್ಕೂ ಉಪಕಾರವಾಗುವುದು. 20.القابض ಇದನ್ನು ನಿಯಮಿತಗೊಳಿಸಿದರೆ ಹಸಿವಿನ ಕಷ್ಟ ಪರಿಹಾರವಾಗುವುದು.. 21.الباسط ಎಲ್ಲಾ ಕೆಲಸಗಳಲ್ಲೂ ವಿಶೇಷವಾಗಿ ಅಪಾಯಕಾರಿಯಾದ ಕೆಲಸದಲ್ಲಿ ವಿಶಾಲತೆ ದೊರೆಯುವುದು. ಳುಹಾ ನಮಾಝಿನ ನಂತರ 10 ಬಾರಿ ಹೇಳಿರಿ. ಯಾರಾದರೂ ಇದನ್ನು ಕೈಗಳನ್ನು ಎತ್ತಿ 10 ಬಾರಿ ಹೇಳಿ ಆ ಕೈಗಳಿಂದ ಮುಖವನ್ನು ತಡವಿದರೆ ಅವನಿಗೆ ಐಶ್ವರ್ಯದ ಬಾಗಿಲು ತೆರೆಯಲ್ಪಡುವುದು. 22.الخافض ಯಾರಾದರೂ 500 ಬಾರಿ ಹೇಳಿದರೆ ಅವನ ಅಗತ್ಯಗಳು ಪೂರೈಸಲ್ಪಡುವುದು. ಕಾಡುವ ಸಮಸ್ಯೆಯು ಪರಿಹರಿಸಲ್ಪಡುವುದು. 23.الرافع ಅಕ್ರಮಿಗಳಿಂದ ರಕ್ಷಣೆಗೆ 70 ಬಾರಿ ಹೇಳಿರಿ.. 24.المعز ಸೃಷ್ಟಿಗಳೆಡೆಯಲ್ಲಿ ಅಂತಸ್ತು ಹಾಗೂ ಗೌರವ ದೊರೆಯುತ್ತದೆ. ಶುಕ್ರವಾರ ಬೆಳಿಗ್ಗೆ ಅಥವಾ ಸೋಮವಾರ ಬೆಳಿಗ್ಗೆ, ಮಗ್ರಿಬ್ ನಮಾಝಿನ ನಂತರ 40 ಬಾರಿ ಹೇಳಿದರೆ ಸೃಷ್ಟಿಗಳ ಹೃದಯದಲ್ಲಿ ಅವನಿಗೆ ಗೌರವ ದೊರಕುತ್ತದೆ. 25.المذل ಅಸೂಯಾಪರರಿಂದಲೂ ಅಕ್ರಮಿಗಿಳಿಂದಲೂ ರಕ್ಷಣೆ ದೊರೆಯುತ್ತದೆ. 75 ಬಾರಿ ಹೇಳಿ ಸುಜೂದಿನಲ್ಲಿ ದುಆ ಮಾಡಿದರೆ ಕೂಡಲೇ ಫಲ ದೊರೆಯುತ್ತದೆ. (ಅಕ್ರಮಿಗಳಿಂದ) 26.السميع ಪ್ರಾರ್ಥನೆಗೆ ಉತ್ತರ ಲಬಿಸುವುದು. ಶುಕ್ರವಾರ ಳುಹಾ ನಮಾಝಿನ ನಂತರ 500 ಬಾರಿ ಹೇಳಿರಿ. ಆಗ ಆ ವ್ಯಕ್ತಿ ದುಆಗೆ ಉತ್ತರ ಲಭಿಸುವವನಾಗಿ ಮಾರ್ಪಾಡುತ್ತಾನೆ. 27. البصير ಖೈರಾದ ಕೆಲಸಗಳಿಗೆ ಭಾಗ್ಯ ದೊರಕುತ್ತದೆ. ಜುಮುಅ ನಮಾಝಿನ ಮೊದಲು 100 ಬಾರಿ ಹೇಳಿದರೆ ಅಲ್ಲಾಹು ಅವನ ಒಳಮನಸ್ಸನ್ನು ತೆರೆದು ಕೊಡುತ್ತಾನೆ. ಉತ್ತಮ ಕಾರ್ಯಗಳಿಗೆ ತೌಪೀಖ್ ದೊರಕುತ್ತದೆ. 28 الحكم ಅರ್ಧ ರಾತ್ರಿಯಲ್ಲಿ ಶುಚಿಯಿಂದಲೂ ನಂಬಿಕೆಯಿಂದಲೂ ಯಾವುದೇ ಸಮಯದಲ್ಲಾದರೂ ಇದನ್ನು ಹೇಳಿ ವಿಲೀನಗೊಂಡರೆ ಅವನ ಮನಸ್ಸು ರಹಸ್ಯಗಳ ಮೂಲವಾಗುವುದು. 29.العدل ಶುಕ್ರವಾರ 20 ರೊಟ್ಟಿ ತುಂಡಿನ ಮೇಲೆ ಇದನ್ನು ಬರೆದು ತಿಂದರೆ ಎಲ್ಲಾ ಸೃಷ್ಟಿಗಳ ಹೃದಯವೂ ಅವನಿಗೆ ತಲೆಬಾಗುವುದು. 30.اللطيف ಕಷ್ಟಗಳನ್ನೆಲ್ಲಾ ಪರಿಹರಿಸುವ ನಾಮ. ಇದನ್ನು 100 ಅಥವಾ 130 ರಂತೆ ಹೇಳಿದರೆ ಅವನ ತೊಂದರೆಗಳು ಪರಿಹಾರವಾಗಿ ಅವನ ಕೆಲಸಗಳು ಸುಲಭವಾಗುವುದು. 31.الخبير ಎಲ್ಲಾ ವಿಷಯಗಳಲ್ಲೂ ತಿಳುವಳಿಕೆ ಲಭಿಸುವುದು. 7 ದಿವಸ ಇದನ್ನು ಹೇಳಿದರೆ ರಾಜರ ವಿಶೇಷತೆಗಳು, ಆ ವರ್ಷದ ಇತರ ವಿವರಗಳು ಆತ್ಮೀಯ ಶಕ್ತಿಯ ಮೂಲಕ ಅವನಿಗೆ ಲಭಿಸುವುದು. ದ್ರೋಹಿಯ ಬಂಧನಕ್ಕೊಳಗಾದವನು ಇದನ್ನು ಹೆಚ್ಚೆಚ್ಚು ಹೇಳಿದರೆ ಅವನಿಗೆ ದ್ರೋಹಿಗಳಿಂದ ರಕ್ಷಣೆ ದೊರೆಯುವುದು. 32.الحليم ನಾಯಕನ ಸ್ಥಾನವು ಸ್ಥಿರವಾಗುವುದು ಮತ್ತು ಸಂತೋಷ ದೊರಕುವುದು. ಈ ವಚನವನ್ನು ಒಂದು ಕಾಗದದಲ್ಲಿ ಬರೆದು ಅದನ್ನು ಅದ್ದಿದ (ತೊಳೆದ) ನೀರನ್ನು ಅವನ ಆದಾಯದ ಮಾರ್ಗದಲ್ಲೋ ಆಯುಧದ ಮೇಲೆಯೋ ಚಿಮುಕಿಸಿದರೆ ಬರ್ಕತ್ ಲಭಿಸುವುದು. ಹಡಗಿನಲ್ಲಾದರೆ ಅದು ಮುಳುಗುವುದರಿಂದಲೂ ಮೃಗವಾದರೆ ಎಲ್ಲಾ ಶರ್ರ್ ನಿಂದಲೂ ಸಂರಕ್ಷಣೆ ದೊರೆಯುವುದು.. 33.العظيم ಇದನ್ನು ಹೆಚ್ಚು ಬಾರಿ ಹೇಳುವವರಿಗೆ ಎಲ್ಲಾ ರೀತಿಯ ವೇದನೆಗಳಿಂದ ಶಮನವೂ ಗೌರವವೂ ದೊರೆಯುತ್ತದೆ. 34. الغفور ವೇದನೆಗಳನ್ನು ತಡೆಯುತ್ತದೆ. ಜ್ವರವಿರುವವರಿಗೆ 3 ಬಾರಿ ಬರೆದು ಕೊಟ್ಟಲ್ಲಿ ಗುಣವಾಗುತ್ತದೆ. ಮೃತ್ಯುವಿವ ನೋವನುಭವಿಸುತ್ತಿರುವ ವ್ಯಕ್ತಿಗೆ ಸಯ್ಯಿದುಲ್ ಇಸ್ತಿಗ್ ಫಾರ್ ಬರೆದು ಕುಡಿಸಿದರೆ ಕಲಿಮ ಹೇಳಲು ನಾಲಗೆಯ ತಡೆಯು ನಿವಾರಣೆಯಾಗಿ ರೂಹ್ ಹೊರಬರಲು ಸುಲಭವಾಗುತ್ತದೆ. 35.الشكور ಶರೀರಕ್ಕೆ ಸುಖವೂ ಇನ್ನಿತರ ಸೌಖ್ಯವೂ ಲಭಿಸುವುದು. ವಿಶಾಲತೆಯೂ ಲಭಿಸುವುದು. ಶರೀರ ಕ್ಷೀಣವಾಗುವುದು. ಮನಃಪ್ರಯಾಸ, ಶರೀರದ ಭಾಗ ಹೆಚ್ಚಾಗಿ ಕಷ್ಟ ಪಡುವವರು ಇದನ್ನು ಬರೆದು ಕುಡಿಯುವುದೂ ಶರೀರಕ್ಕೆ ತಡವುದೂ ಮಾಡಿದರೆ ಅಲ್ಲಾಹುವಿನ ಅನುಮತಿಯಿಂದ ಸುಖ ಪ್ರಾಪ್ತಿಯಾಗುವುದು. ಕಣ್ಣಿನ ದೃಷ್ಟಿ ಕಡಿಮೆಯಾದವರು ಇದನ್ನು ಹೇಳಿ ಕಣ್ಣನ್ನು ತಡವಿಕೊಂಡರೆ ದೃಷ್ಟಿ ದೋಷವು ಪರಿಹಾರವಾಗುವುದು. 36.العلي ಕೆಲಸಗಳು ಪುರೋಗತಿಯತ್ತ ಸಾಗುವುದು. ಸ್ಥಳದಲ್ಲಿ ಇಲ್ಲದವರು, ಊರು ಬಿಟ್ಟವರು ಹಿಂತಿರುಗಿ ಬರುವರು. ಫಕೀರ್ ಬರೆದು ಕಟ್ಟಿದರೆ ಐಶ್ವರ್ಯವು ಹೆಚ್ಚಾಗುವುದು. 37.الكبير ಜ್ಞಾನ ಹಾಗೂ ಅಗಾಧ ಜ್ಞಾನದ ಬಾಗಿಲುಗಳು ತೆರೆಯಲ್ಪಡುವುದು. ಇದನ್ನು ಆಹಾರದ ಮೇಲೆ ದಂಪತಿಗಳು ಸೇವಿಸಿದರೆ ಅವರಲ್ಲಿ ಆನೋನ್ಯತೆ ಹೆಚ್ಚುವುದು. ಸುಹ್ರವರ್ದಿ ಇಮಾಮ್ ರ.ಅ ಹೇಳುತ್ತಾರೆ. يا كبير انت الذي لا تهتدي العقول لوصف عظمته ಎಂದು ಒಬ್ಬ ಸಾಲಗಾರನು ಸಾಧ್ಯವಿರುವಷ್ಟು ಬಾರಿ ಹೇಳಿದರೆ ಅವನ ಸಾಲವು ತೀರಿಸಲ್ಪಡುವುದು. ಅಪಾಯವು ದೂರವಾಗುವುದು. ಪದವಿಯನ್ನು ಕಳೆದು ಕೊಂಡವರು 7 ದಿವಸದ ಉಪವಾಸ ಹಿಡಿದು 1000 ಬಾರಿಯಂತೆ ಹೇಳಿದರೆ ಕಳೆದು ಕೊಂಡ ಸ್ಥಾನವು ಮರಳಿ ದೊರಕುವುದು. ಅದು ರಾಜನ ಸ್ಥಾನವಾಗಿದ್ದರೂ ಕೂಡಾ.. 38.الحفيظ ಇದನ್ನು ಹೇಳುವುದೋ ಜೊತೆಯಲ್ಲಿಟ್ಟುಕೊಳ್ಳುವುದೋ ಮಾಡಿದವನಿಗೆ ಬರಕತ್ ಲಭಿಸುವುದು. ಇದನ್ನು ಬರೆದು ಕಟ್ಟಿದವನಿಗೆ ವನ್ಯ ಜೀವಿಗಳೆಡೆಯಲ್ಲಾದರೂ ಅವುಗಳ ಉಪದ್ರವ ಉಂಟಾಗಲಾರದು. 39.المقيت ಆಹಾರ ದೊರಕುವುದೆಂಬ ಪ್ರತ್ಯೇಕತೆ. ಉಪವಾಸ ಹಿಡಿದವನು ಸ್ವಲ್ಪ ಮಣ್ಣನ್ನು ತೆಗೆದು ಕೊಂಡು ಅದರಲ್ಲಿ ಈ ವಚನವನ್ನು ಬರೆಯುವುದೋ, ಓದಿ ಊದುವುದೋ ಮಾಡಿ ಮಣ್ಣನ್ನು ನೀರಿನಿಂದ ನೆನೆಸಿ ಅದನ್ನು ಮೂಸಿದರೆ ಅವನಿಗೆ ಶಕ್ತಿ ಬರುವುದು. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದು ಕೊಂಡು ಇದನ್ನು 7 ಬಾರಿ ಹೇಳಿದ ನಂತರ ಪಾತ್ರೆಯಲ್ಲೂ ಇದನ್ನು ಬರೆದು ಪ್ರಯಾಣದ ಜೊತೆಗಿದ್ದರೆ ಪ್ರಯಾಣದ ಏಕಾಂತತೆಯಿಂದ ನಿರ್ಭಯನಾಗುವನು. ಅದಕ್ಕೆ ಬೆಳಗ್ಗೆಯೂ ಸಾಯಂಕಾಲವೂ ಯಾಸೀನ್ ಸೂರತ್ ಸೇರಿಸಿ ಓದಿದರೆ ಇದು ಕೂಡಲೇ ಸಾಧ್ಯವಾಗುವುದು.. 40.الحبيب ಕುಟುಂಬಕ್ಕೆ ರಕ್ಷಣೆ ದೊರೆಯುವುದು. ಕುಟುಂಬದೊಳಗಿನ ಮೋಸ ವಂಚನೆಗಳ ಬಗ್ಗೆ ಭಯ ಪಡುವವರು ಎಲ್ಲಾ ದಿನವೂ ಸೂರ್ಯ ಉದಯಿಸುವುದಕ್ಕೆ ಮೊದಲೂ ಮಗ್ರಿಬ್ ನ ನಂತರ 77 ಬಾರಿ ಒಂದು ವಾರಗಳ ಕಾಲ ನಿರಂತರವಾಗಿ ಹೇಳಿರಿ. ಗುರುವಾರವೇ ಇದನ್ನು ಆರಂಭಿಸಬೇಕು. 41.الجليل ಇದನ್ನು ಹೇಳುವವರಿಗೂ, ಕಸ್ತೂರಿ ಮತ್ತು ಕುಂಕುಮ ಸೇರಿಸಿ ಬರೆದು ಜಗಿಯುವವರಿಗೂ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುವುದು. 42.الكريم ಮಲಗುವ ಸಮಯದಲ್ಲಿ ನಿತ್ಯವೂ ಇದನ್ನು ಸಾಧ್ಯವಿರುವಷ್ಟು ಹೇಳುವುದನ್ನು ಅಭ್ಯಾಸ ಮಾಡಿಕೊಂಡರೆ ಜನರ ಖಲ್ಬ್ ನಲ್ಲಿ ಇವರಿಗೆ ಘನತೆ ಗೌರವವನ್ನು ಅಲ್ಲಾಹು ನೀಡುವನು. الكريم ذا الطول الوهاب ಎಂದು ನಿಯಮಿತವಾಗಿ ಹೇಳುವವರಿಗೆ ಜೀವನದಲ್ಲೂ ವಿಷಯದಲ್ಲೂ ಬರಕತ್ ಲಭಿಸುವುದು. 43.الرقيب ಕುಟುಂಬಕ್ಕೂ ಸಂಪತ್ತಿಗೂ ರಕ್ಷಣೆ ದೊರೆಯುವುದು. ಯಾವುದಾದರೂ ವಸ್ತು ಕಳೆದು ಹೋದರೆ ಇದನ್ನು ಸಾಧ್ಯವಿರುವಷ್ಟು ಹೆಚ್ಚು ಹೇಳಿದರೆ ಅವರಿಗದು ಸಿಗುವುದು. ಅಮ್ಮನ ಗರ್ಭಾಶಯದಲ್ಲಿರುವ ಮಗುವಿನ ಮೇಲೆ ಏನಾದರೂ ಭಯವಿದ್ದಲ್ಲಿ ಇದನ್ನು 7 ಬಾರಿ ಹೇಳಿರಿ. ಪ್ರಯಾಣಕ್ಕೆ ಹೊರಟವರು ಕುಟುಂಬದ ಬಗ್ಗೆ ಹೆದರಿಕೆಯಿದ್ದರೂ ಇದನ್ನು 7 ಬಾರಿ ಹೇಳಬೇಕು. 44.المجيب ಕೂಡಲೇ ಉತ್ತರ ಲಭಿಸುತ್ತದೆ ಎಂಬುವುದಾಗಿದೆ ಇದರ ಪ್ರತ್ಯೇಕತೆ. ದುಆದ ಜೊತೆಯಲ್ಲಿ ಇದನ್ನು ಹೇಳಿರಿ. 45.الواسع ಇದನ್ನು ಹೇಳುವವರ ಕೆಲಸದಲ್ಲಿ ವಿಶಾಲತೆಯೂ ಸ್ಥಾನವೂ ಲಭಿಸುವುದು. ಮನಸ್ಸಿನಿಂದ ದುರಾಸೆಯೂ ಮೋಸವೂ ಇಲ್ಲದಾಗುವುದು. ಇದನ್ನು ನಿಯಮಿತವಾಗಿಸುವವರಿಗೆ ಇದ್ದುದರಲ್ಲೇ ತೃಪ್ತಿ ಪಡುವ ಮನಸ್ಸು ದೊರೆಯುವುದು. 46.الحكيم ಇದನ್ನು ಧಾರಾಳವಾಗಿ ಹೇಳುತ್ತಿರುವವರನ್ನು ಅಪಘಾತದಿಂದ ರಕ್ಷಿಸುವುದು. ಮತ್ತು ತತ್ವಜ್ಞಾನದ ಬಾಗಿಲುಗಳು ತೆರೆಯಲ್ಪಡುವುದು. 47.الودود ಸ್ನೇಹ ವೃದ್ಧಿಸುವುದು. ನಿಯಮಿತವಾಗಿ ಹೇಳುವವರನ್ನು ಎಲ್ಲರೂ ಪ್ರೀತಿಸುತ್ತಾರೆ. ಇದನ್ನು ಆಹಾರದ ಮೇಲೆ 1000 ಬಾರಿ ಹೇಳಿ ಊದಿ ದಂಪತಿಗಳು ಸೇವಿಸಿದರೆ ಅವಳು ಅವನನ್ನು ಅತಿಯಾಗಿ ಪ್ರೀತಿಸುವಳು. ಹಾಗೂ ಅನುಸರಿಸುವಳು.. 48.المجيد ಔತನ್ಯವೂ ಗೌರವವೂ ಆತ್ಮ ಶುದ್ದಿಯೂ ಇದರಿಂದ ದೊರೆಯುತ್ತದೆ. ಬಿಳಿಪಾಂಡು ರೋಗಿಗಳು ಅಯ್ಯಾಮುಲ್ ಬೀಳಿನ ದಿವಸಗಳಲ್ಲಿ ಉಪವಾಸ ತೆರೆಯುವ ಸಮಯದಲ್ಲಿ ಇದನ್ನು ಧಾರಾಳವಾಗಿ ಹೇಳಿದರೆ ಅವನ ರೋಗವು ಗುಣವಾಗುವುದೆಂದು ಹೇಳಲಾಗಿದೆ. 49.الباعث ಮಲಗುವ ಸಮಯದಲ್ಲಿ ಎದೆಯ ಮೇಲೆ ಕೈಯಿರಿಸಿ 100 ಬಾರಿ ಇದನ್ನು ಹೇಳಿದರೆ ಅವನ ಹೃದಯ ಪ್ರಕಾಶಮಾನವಾಗುವುದು. ಅವನಿಗೆ ಇಲ್ಮು ಹಾಗೂ ತತ್ವಜ್ಞಾನವು ಲಭಿಸುವುದು. 50.الشهيد ಅಸತ್ಯದಿಂದ ಸತ್ಯದೆಡೆಗೆ ಮರಳಲು ಸಾಧ್ಯವಾಗುವುದು. ಅನುಸರಣೆಯಿಲ್ಲದಿರುವ ಮಗುವಿಗೋ ಪತ್ನಿಗೋ ಇದನ್ನು ಹೇಳಿ ಊದಿದರೆ ಅವರು ಅನುಸರಿಸುವರು. 51.الحق ಚೌಕವಾಗಿ ತುಂಡರಿಸಿದ ಒಂದು ಕಾಗದದ ತುಂಡಿನ ನಾಲ್ಕು ಕೋನದಲ್ಲೂ ಈ ವಚನವನ್ನು ಬರೆದು ಸಿಹ್ರ್ ಬಾದಿಸಿದವನ ಕೈಯಲ್ಲಿ ನೀಡಿ ಅದನ್ನು ಮೇಲ್ಭಾಗಕ್ಕೆ ಎತ್ತಿ ಹಿಡಿದರೆ ಅವನನ್ನು ಬಾದಿಸುವ ಸಮಸ್ಯೆಗೆ ಅಲ್ಲಾಹು ಪರಿಹಾರ ನೀಡುವನು. لا اله الا الله الملك الحق المبين ಎಂದು ದಿನಾಲೂ 100 ಬಾರಿ ಹೇಳುವವರಿಗೆ ಐಶ್ವರ್ಯ ದೊರಕುವುದು. ಹಾಗೂ ಕೆಲಸಗಳು ಸುಲಭವಾಗುವುದು. ದಿನಾಲೂ 1000 ಬಾರಿ ಹೇಳುವವರಿಗೆ ಪ್ರಕೃತಿಯೂ ಸ್ವಭಾವವೂ ಉತ್ತಮವಾಗುವುದು. 52.الوكيل ಮುಸೀಬತ್ತುಗಳು ಪರಿಹಾರವಾಗುವುದು. ಇದನ್ನು ಅಧೀನಪಡಿಸಿ ಕೊಳ್ಳುವವರಿಗೆ ಖೈರ್ ನ ಹಾಗೂ ರಿಝ್ಕ್ ನ ಬಾಗಿಲು ತೆರೆಯಲ್ಪಡುವುದು ಮತ್ತು ನಾಶದಿಂದ ವಿಮೋಚನೆ ದೊರಕುವುದು. 53.القوي ಮನೋಧೈರ್ಯ ಕುಸಿದವರು, ಶಾರೀರಿಕ ದೌರ್ಬಲ್ಯವಿರುವವರು ಇದನ್ನು ನಿಯಮಿತವಾಗಿ ಹೇಳುತ್ತಿದ್ದಲ್ಲಿ ಮನೋಧೈರ್ಯ ಹಾಗೂ ಶಕ್ತಿ ಲಭಿಸುವುದು. ಅಕ್ರಮಿಗಳನ್ನು ಮಟ್ಟ ಹಾಕಲು ಇದನ್ನು 1000 ಬಾರಿ ಹೇಳಿದರೆ ಸಾಕು.. 54.المتين ಹೇಳುವವರಿಗೆ ಶಕ್ತಿ ದೊರಕುವುದು. ಇದರೊಂದಿಗೆ يا قوي ನ್ನು ಕೂಡ ಹೇಳಿರಿ. ಕೆಟ್ಟ ಹಾದಿಯಲ್ಲಿ ನಡೆಯುವ ಯುವಕ ಯುವತಿಯರಿಗೆ ಇದನ್ನು 10 ಬಾರಿ ಹೇಳಿ ಮಂತ್ರಿಸಿದರೆ ಅವರಿಗೆ ಒಳ್ಳೆಯ ಬುದ್ಧಿ ಬರುವುದು. 55.الولي ಇದನ್ನು ಅಭ್ಯಾಸ ಮಾಡಿದವರಿಗೆ "ವಿಲಾಯತ್" ದೊರಕುವುದು. ಅವನ ವಿಚಾರಣೆ ಸುಲಲಿತವಾಗುವುದು. ಶುಕ್ರವಾರ ಬೆಳಿಗ್ಗೆ 1000 ಬಾರಿ ಹೇಳಿದರೆ ಕೆಲಸಗಳನ್ನು ಸುಲಭವಾಗಿ ಸಾಧಿಸಬಹುದು. 56.الحميد ಮಾತಿನಲ್ಲೂ ಪ್ರವೃತ್ತಿಯಲ್ಲೂ ಸ್ವಭಾವದಲ್ಲೂ ಪ್ರಶಂಸನೀಯ ಉಂಟಾಗುವುದು. ಇಮಾಮ್ ಸುಹ್ರವರ್ದಿ ರ.ಅ ಹೇಳುತ್ತಾರೆ. يا حميد الفعال ذا المن على جميع خلقه بلطفه ಎಂದು ನಿಯಮಿತವಾಗಿ ಹೇಳಿದವನಿಗೆ ಆರ್ಥಿಕ ಪುರೋಗತಿಯು ಉಂಟಾಗುವುದು. 57.المحصي ಮನಸ್ಸುಗಳನ್ನು ವಶಪಡಿಸಿಕೊಳ್ಳಬಹುದು. 20 ರೊಟ್ಟಿ ತುಂಡುಗಳಲ್ಲಿ ಪ್ರತಿಯೊಂದು ತುಂಡಿನಲ್ಲೂ 200 ಬಾರಿ ಇದನ್ನು ಹೇಳಿದ ನಂತರ ತಿಂದರೆ ಸೃಷ್ಟಿಗಳು ಅವನ ವಶವಾಗುವುದು. (ಇನ್ ಷಾ ಅಲ್ಲಾಹ್) 58.المبدئ ಇದನ್ನು ಗರ್ಭಿಣಿಯ ಹೊಟ್ಟೆಯ ಮೇಲೆ ರಾತ್ರಿಯ ಸಮಯದಲ್ಲಿ 29 ಬಾರಿ ಹೇಳಿದರೆ ಗರ್ಭ ಸ್ಥಿರವಾಗುವುದು. ತೊಳೆದು ಹೋಗುವುದಿಲ್ಲ.. 59.المعيد ಬಾಯಿಪಾಠ ಮಾಡಿದ ವಿಷಯಗಳು ಮರೆತು ಹೋಗುವುದಕ್ಕೆ ಬೇಕಾಗಿ ಇದರೊಂದಿಗೆ *مبدأ* ನ್ನೂ ಸೇರಿಸಿ ಹೇಳಿರಿ.. 60.المحيي ಹೊಂದಾಣಿಕೆಯೂ ಬುದ್ಧಿವಂತಿಕೆಯೂ ಉಂಟಾಗುವುದು.. 61.المميت ಇದನ್ನು ಹೆಚ್ಚಾಗಿ ಹೇಳಿದರೆ ಅನುಸರಣೆಗೆ ಮಣಿಯದ ಶರೀರವನ್ನು ಮಣಿಸಲು ಸಾಧ್ಯವಾಗುವುದು. 62.الحي ಎಲ್ಲಾ ವಸ್ತುವಿನ ನೆಲೆಗೊಳ್ಳುವಿಕೆ (ಹಯಾತ್) ಸ್ಥಿರವಾಗುವುದು. ಇಮಾಮ್ ಸುಹ್ರವರ್ಧಿ ರ.ಅ ಹೇಳುತ್ತಾರೆ.يا الحي ಎಂದು ಒಬ್ಬಾತ ಮೂರು ಬಾರಿ ಹೇಳಿದರೆ ಅವನಿಗೆ ಯಾವತ್ತೂ ರೋಗ ಭಾದಿಸುವುದಿಲ್ಲ.. 63 القيوم ಎಂದು 13 ಬಾರಿ ಏಕಾಂತವಾಗಿ ದಿನಾಲು ಹೇಳಿದರೆ ಮರೆತು ಹೋಗುವುದು ಕಡಿಮೆಯಾಗಿ ಹಿಫ್ಳ್ ಗೆ ಶಕ್ತಿ ದೊರೆತು ಹೃದಯ ಪ್ರಕಾಶಮಾನವಾಗಿರತ್ತದೆ. ಎಂದು ಸುಹ್ರವರ್ಧಿ ತಂಙಳ್ ಹೇಳಿದ್ದಾರೆ. "ರಿಸಾಲತ್ತುಲ್ ಖುಶೈರಿ" ಎಂಬ ಗ್ರಂಥದಲ್ಲಿ ಅಬೂ ಅಲಿಯ್ಯುಲ್ ಕಾದಮಿ ರ.ಅ ರ ಕುರಿತು ಉದ್ಧರಿಸಲಾಗಿದೆ. ಅವರು ಸಹ ನಬಿ ﷺ ತಂಙಳರನ್ನು ಕನಸಿನಲ್ಲಿ ಕಂಡಾಗ ಕೇಳಿದರು. ಅಲ್ಲಾಹುವಿನ ರಸೂಲೇﷺ ನನ್ನ ಹೃದಯ ಮರಣಿಸದಿರಲು ನಾನೇನು ಮಾಡಬೇಕು? ನಬಿ ﷺ ತಂಙಳ್ ಹೇಳಿದರು. ನಿಮ್ಮ ಹೃದಯವು ಮರಣಿಸದೇ ಯಾವತ್ತೂ ಬದುಕಿರಲು ದಿನಾಲು 40 ಬಾರಿ يا حي يا قيوم لا إله الا انت ಎಂದು ಹೇಳಿರಿ.. 64.الواجد ಒಂದು ಹಿಡಿ ಆಹಾರದ ಮೇಲೆ ಇದನ್ನು ಹೇಳಿ ಸೇವಿಸಿದರೆ ಮನಸ್ಸಿಗೆ ಶಕ್ತಿ ದೊರೆಯುವುದು.. 65.الماجد ಇದನ್ನು ಸಾಧ್ಯವಿರುವಷ್ಟು ಹೆಚ್ಚು ಹೇಳಿದರೆ ಹೃದಯವು ಪ್ರಕಾಶಮಾನವಾಗುವುದು. 66. الواحد ಸಾವಿರ ಬಾರಿ ಇದನ್ನು ಹೇಳಿದರೆ ಮನಸ್ಸಿನಿಂದ ವ್ಯಥೆ ಕಡಿಮೆಯಾಗುವುದು. ಒಬ್ಬರು ತನ್ನ ದುಆದಲ್ಲಿ ಹೀಗೆ ಹೇಳಿದರು.. اللهم انى اسئلك بأنك انت الله الواحد الأحد الصمد الذي لم يلد ولم يولد ولم يكن له كفوا أحد ಆಗ ನಬಿ ﷺ ತಂಙಳ್ ಅವರಲ್ಲಿ ಹೇಳಿದರು. "ಬೇಡಿದರೆ ಉತ್ತರ ದೊರೆಯುವ ಇಸ್ಮುಲ್ ಅಅ್ ಳಂನಿಂದ ನೀನು ಪ್ರಾರ್ಥಿಸಿರುವೆ" يا واحد الباقي أول كل شيء وآخره ಎಂದು ಹೇಳುವವನ ಮನಸ್ಸಿನಿಂದ ಚಿಂತೆಯು ತೊಲಗುವುದೂ ಆಡಳಿತಾಧಿಕಾರಿಗೆ ಭಯಪಡುವವನು ಳುಹರ್ ನಮಾಝಿನ ನಂತರ 500 ಬಾರಿ ಹೇಳಿದರೆ ಹೆದರಿಕೆಯು ನೀಗುವುದೂ ಚಿಂತೆಯು ದೂರವಾಗುವುದು. 67.الاحد ಇದನ್ನು ಶುದ್ದನಾಗಿ ಏಕಾಂತದಲ್ಲಿ 1000 ಬಾರಿ ಹೇಳಿದರೆ ಅದೃಶ್ಯ ಲೋಕದ ಹಲವಾರು ಅದ್ಭುತಗಳು ತಿಳಿಯುವುದು.. 68.الصمد ಉತ್ತಮವೂ ಒಳಿತು ಇದರಿಂದುಂಟಾಗುವುದು. ಬೆಳಿಗ್ಗೆಯಾಗುವುದಕ್ಕಿಂತ ಮೊದಲು 125 ಬಾರಿ ಹೇಳಿದರೆ ಸತ್ಯ ಸಂಧತೆಯ ಗುರುತು ತಿಳಿಯುವುದು. ಇದನ್ನು ಹೇಳುತ್ತಿರುವಷ್ಟು ಕಾಲವೂ ಹಸಿವಿನ ಕಷ್ಟ ತಿಳಿಯಲಾರದು... 69. القادر ಶಾರೀರಿಕವಾಗಿಯೂ ಮಾನಸಿಕವಾಗಿಯೂ ಇಬಾದತ್ ನಲ್ಲೂ ಅಥವಾ ಇನ್ಯಾವುದರಿಂದಲೋ ದೌರ್ಬಲ್ಯ ಅನುಭವಿಸುತ್ತಿರುವವರು ಎರಡು ರಕಅತ್ ನಮಾಝ್ ಮಾಡಿ 100 ಬಾರಿ ಇದನ್ನು ಹೇಳಿರಿ. ಆಗ ಶಕ್ತಿ ದೊರೆಯುವುದು. ವುಳೂವಿನ ನಂತರ ಇದನ್ನು ಹೇಳಿದರೆ ಶತ್ರುವನ್ನು ಮಣಿಸಿ ಜಯಗಳಿಸಲೂ ಸಾಧ್ಯವಾಗುವುದು... 70.المقتدر ಯಜಮಾನನಿಂದ ನೇರವಾದ ನಿಯಂತ್ರಣ ಲಭಿಸುವುದು. ನಿದ್ದೆಯಿಂದ ಎದ್ದ ಕೂಡಲೇ ಹೇಳಿದರೆ ಇನ್ನೊಬ್ಬರನ್ನು ಆಶ್ರಯಿಸದೇ ಇರುವಂತೆ ಅಲ್ಲಾಹು ಅವನನ್ನು ಉದ್ದೇಶಿಸುವ ಕಾರ್ಯಗಳಿಗೆ ತಲುಪಿಸಿ ಕೊಡುವನು... 71.المقدم ಯುದ್ಧ ರಂಗದಲ್ಲಿ ಸಂರಕ್ಷಣೆಯೂ, ವಿಜಯವೂ ದೊರಕುವುದು. ಯುದ್ಧ ಭೂಮಿಗೆ ಪ್ರವೇಶಿಸುವ ಮೊದಲು ಹೇಳಿರಿ.. 72.المؤخر ಎಲ್ಲಾ ನೀಚ ಕೆಲಸಗಳಿಂದಲೂ ಮೋಚನೆ ದೊರೆಯುವುದು. ಇದನ್ನು ಹೆಚ್ಚು ಬಾರಿ ಹೇಳುವವರಿಗೆ, ಕೇಳುವವರಿಗೆ ತೌಬ ಮತ್ತು ತಖ್ವಾದ ಬಾಗಿಲುಗಳು ತೆರೆಯಲ್ಪಡುವುದು.. 73.الاول ಕೆಲಸದಲ್ಲಿ ಸಾಮರಸ್ಯ ಮತ್ತು ಏಕತೆಯು ಲಭಿಸುವುದು. ಪ್ರಯಾಣ ಮಾಡುತ್ತಿರುವವರು ಎಲ್ಲಾ ಶುಕ್ರವಾರವೂ ಇದನ್ನು ಹೇಳಲು ಅಭ್ಯಾಸ ಮಾಡಿರಿ... 74.الاخر ಆತ್ಮೀಯವಾದ ಬೆಳಕು ದೊರೆಯುವುದು. ದಿನಾಲು 100 ಬಾರಿ ನಿಯಮಿತವಾಗಿ ಹೇಳಿದರೆ ಮನಸ್ಸಿನಲ್ಲಿ ಅಲ್ಲಾಹುವಲ್ಲದೆ ಬೇರೆ ಯಾವುದೇ ಚಿಂತೆಗಳಿರುವುದಿಲ್ಲ... 75.الظاهر ಳುಹಾ ಸಮಯದಲ್ಲಿ ಇದನ್ನು ಹೇಳುವವರಿಗೆ ವಿಲಾಯತಿನ ಬೆಳಕು ಹೃದಯದಲ್ಲಿ ಪ್ರಕಾಶಿಸುವುದು... 76.الباطن ಶೈಖುನಾ ಅಬುಲ್ ಅಬ್ಬಾಸಿಲ್ ಹಳ್ರಮಿ (ರ.ಅ)ಹೀಗೆ ಬರೆದಿದ್ದಾರೆ.. هو الأول والآخر والظاهر والباطن وهو بكل شيئ عليم ಇದನ್ನು ಎರಡು ರಕಅತ್ ನಮಾಝ್ ಮಾಡಿ 145 ಬಾರಿ ಹೇಳಿದರೆ ಎಲ್ಲಾ ಅಗತ್ಯಗಳನ್ನೂ ಪಡೆಯಲು ಸಾಧ್ಯವಾಗುವುದು... 77.الوالي ಸಿಡಿಲಿನಂತಹ ಆಪತ್ತುಗಳನ್ನು ತಡೆಯಲು ಸಾಧ್ಯವಾಗುವುದು.. 78.المتعالي ಇದನ್ನು ಹೇಳುವವರಿಗೆ ಉನ್ನತಿಯೂ ಉತ್ತಮ ಅವಕಾಶವೂ ದೊರಕುವುದು. ಮುಟ್ಟುಳ್ಳವರು ಹೈಳ್ ಸಮಯದಲ್ಲಿ ಇದನ್ನು ಹೇಳಿದರೆ ಅವರಿಗೆ ಒಳ್ಳೆಯ ಸ್ಥಿತಿ ಲಭಿಸುವುದು. ಇಮಾಮ್ ಸುಹ್ರವರ್ದಿ (ರ.ಅ) ಹೇಳುತ್ತಾರೆ :ದಿನಾಲು 100 ಬಾರಿಯಂತೆ ಏಳು ದಿನಗಳ ಕಾಲ يا قريب المتعالي فوق كل شيء ارتفاعه ಎಂದು ಹೇಳಿದರೆ ಶತ್ರುವನ್ನು ನಾಶಗೊಳಿಸಲು ಸಾಧ್ಯ... 79.البر ಉತ್ತಮವಾದುದನ್ನು ಪಡೆಯಲು ಸಾಧ್ಯವಾಗುವುದು. ಮಗುವಿಗೆ ಇದನ್ನು ಹೇಳಿ ಮಂತ್ರಿಸಿದರೆ ಅವನು ಗುಣವಂತನಾಗುವನು... 80.التواب ಳುಹಾ ನಮಾಝಿನ ಮೊದಲು 360 ಬಾರಿ ಇದನ್ನು ಹೇಳಿದರೆ ಅವನ ತೌಬ ಸ್ವೀಕರಿಸಲ್ಪಡುವುದು. ಅಕ್ರಮಣಕಾರಿಗಳ ಮೇಲೆ ಇದನ್ನು ಹೇಳಿದರೆ ಅವರ ಶರ್ರ್ ನಿಂದ ರಕ್ಷಿಸಲ್ಪಡುವುದು... 81. المنتقم ಶತ್ರುವಿನೊಡನೆ ಹೋರಾಡಲು ಸಾಧ್ಯವಾಗದವರು ಇದನ್ನು ಹೇಳಿದರೆ ಅಲ್ಲಾಹುವಿನಿಂದ ಪ್ರತಿಕಾರ ಶಿಕ್ಷೆಯು ಅವನಿಗೆ ಸಿಗುವುದು.. 82.العفو ಇದನ್ನು ಹೆಚ್ಚು ಬಾರಿ ಹೇಳುವವನಿಗೆ ಕ್ಷಮೆಯ (ರಿಳಾ) ಬಾಗಿಲು ತೆರೆಯಲ್ಪಡುವುದು.. 83.الرؤوف ಸಿಟ್ಟು ಬರುವಾಗ ಹತ್ತು ಬಾರಿ ಇದನ್ನು ಹೇಳಿರಿ. ಹತ್ತು ಬಾರಿ ನಬಿ ﷺ ರವರ ಮೇಲೂ ಸ್ವಲಾತನ್ನು ಹೇಳಿರಿ. ಸಿಟ್ಟು ಶಮನಗೊಳ್ಳುವುದು. ಕೋಪಿಷ್ಟನ ಸಾನಿಧ್ಯದಲ್ಲಿ ಇದನ್ನು ಹೇಳಿದರೂ ಇದೇ ರೀತಿ ಆಗುವುದು... 84.مالك الملك ಗೌರವವು ದೊರಕುವುದು. ಇದನ್ನು ನಿಯಮಿತವಾಗಿ ಹೇಳುವವರಿಗೆ ಅಲ್ಲಾಹು ಸಂಪತ್ತನ್ನು ಐಶ್ವರ್ಯವನ್ನೂ ಧಾರಾಳವಾಗಿ ನೀಡುವನು.. 85.ذو الجلال والإكرام ಎಂದು ನಿಯಮಿತವಾಗಿ ಹೇಳಿದರೆ ಗೌರವವೂ ಅಭಿನಂದನೆಯೂ ಇದರಿಂದಾಗಿ ದೊರಕುವುದು. ನೀವು ಉರು ಹೊಡೆಯುತ್ತಿರಬೇಕೆಂದೂ ಹದೀಸಿನಲ್ಲಿ ಹೇಳಲಾಗಿದೆ. ಇದು ಇಸ್ಮುಲ್ ಅಅ್ ಳಮ್ ಆಗಿದೆಯೆಂಬ ಅಭಿಪ್ರಾಯವೂ ಇದೆ.. 86.المقسط ಇದನ್ನು ನಿಯಮಿತಗೊಳಿಸಿದವರಿಗೆ ಇಬಾದತ್ ಮಾಡುವಾಗ ಉಂಟಾಗುವ ವಸ್ ವಸ್ ಇಲ್ಲದಾಗುವುದು... 87.الجامع ಇದನ್ನು ನಿಯಮಿತಗೊಳಿಸುವವರ ಉದ್ದೇಶವು ಪೂರ್ತಿಯಾಗುವುದು. ಸ್ನೇಹಿತರೂ ಒಟ್ಟಾಗಿ ಸೇರುವರು... 88.الغني ಎಲ್ಲಾ ಕಾರ್ಯಗಳಲ್ಲೂ ಆರೋಗ್ಯ ಲಭಿಸುವುದು. ರೋಗಿಗಳಿಗೋ ಇತರ ಕಷ್ಟಕರ ಸಂದರ್ಭದಲ್ಲೋ ಇದನ್ನು ಹೇಳಿದರೆ ಅವುಗಳು ಪರಿಹರಿಸಲ್ಪಡುವುದು... 89.المغني ಐಶ್ವರ್ಯ ದೊರೆಯುವುದು. ದಿವಸವೂ ಸಾವಿರ ಬಾರಿ ಹೇಳಿದರೆ ಅಲ್ಲಾಹು ಅವನನ್ನು ಐಶ್ವರ್ಯವಂತನಾಗಿ ಮಾಡುತ್ತಾನೆ... 90.المانع ಕಷ್ಟಗಳನ್ನೂ ಪ್ರಯಾಸಗಳನ್ನೂ ತಡೆಯಲು ಇದು ಸಹಕಾರಿಯಾಗಿದೆ.. 91.الضار ಎಲ್ಲಾ ಶುಕ್ರವಾರಗಳಲ್ಲೂ ಇದನ್ನು 100 ಬಾರಿ ಹೇಳಿದವರಿಗೆ ಸೃಷ್ಟಿಗಳ ಜೊತೆಯಲ್ಲಿ ಬೆರೆಯಲು ಸಾಧ್ಯವಾಗುತ್ತದೆ... 92.النافع ಪತ್ನಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿರುವ ಸಮಯದಲ್ಲಿ ಈ ವಚನವನ್ನು ಮನಸ್ಸಿನಲ್ಲಿ ನೆನೆಸಿಕೊಂಡರೆ ಪತ್ನಿ ಅವನನ್ನು ಇಷ್ಟಪಡುತ್ತಾಳೆ... 93.النور ಇದನ್ನು ಹೇಳುವವನ ಮನಸ್ಸಿಗೂ ಅವಯವಗಳಿಗೂ ಪ್ರಕಾಶ ಲಭಿಸುವುದು... 94.الهادي ಇದನ್ನು ಹೇಳುವವನಿಗೂ ಜೊತೆಯಲ್ಲಿಟ್ಟು ಕೊಳ್ಳುವವನಿಗೂ ಮನಸ್ಸಿನಲ್ಲಿ ಸರಿಯಾದ ಮಾರ್ಗ ದೊರಕುವುದು.. 95.البديع ಅವಶ್ಯಕತೆಗಳನ್ನು ಸಾಧಿಸಿಕೊಳ್ಳಲು ಕಷ್ಟಗಳು ಪರಿಹಾರವಾಗಲೂ ಇದನ್ನು ಬರೆದು ಹತ್ತು ಸಾವಿರ ಬಾರಿ ಹೇಳಿರಿ.. ಇಮಾಮ್ ಸುಹ್ರವರ್ದಿ (ರ.ಅ) ಹೇಳುತ್ತಾರೆ.. يا عجيب الشأن فلا تنطق بكل الائه وثنائه ಎಂದು ನಿಯಮಿತವಾಗಿ ಹೇಳಿದರೆ ಅವನ ಅಪಾಯವು ದೂರವಾಗುವುದು.. ಜನರೆಡೆಯಲ್ಲಿ ಸ್ಥಾನ ಮಾನಗಳು ದೊರೆಯುವುದೂ ಸಂತೋಷಮಯವೂ ಆಗುವುದು.. 96.الباقي ಇದನ್ನು 1000 ಬಾರಿ ಹೇಳುವವನು ಕಷ್ಟಗಳಿಂದಲೂ ಪ್ರಯಾಸಗಳಿಂದಲೂ ಮಾನಸಿಕ ತುಮುಲಗಳಿಂದಲೂ ಪಾರಾಗುವನು.. 97.الوارث ಯಾವುದೇ ವಿಷಯದಲ್ಲಾದರೂ ಪರಿಭ್ರಮೆಯಿರುವವರು ಇಶಾ-ಮಗ್ರಿಬಿನ ನಡುವೆ 1000 ಬಾರಿ ಇದನ್ನು ಹೇಳಿದರೆ ಆ ಪರಭ್ರಮೆಯು ನಿವಾರಣೆಯಾಗುವುದು.. 98.الرشيد ಇಶಾ ನಮಾಝಿನ ನಂತರ 100 ಬಾರಿ ಹೇಳಿದರೆ ಅವನ ಅಮಲುಗಳು ಸ್ವೀಕರಿಸಲ್ಪಡುವುದು.. 99.الصبور ಇದು ಆಪತ್ತುಗಳನ್ನು ತಡೆಯಲು ಇರುವುದಾಗಿದೆ. ಸೂರ್ಯನು ಉದಿಸುವುದಕ್ಕೆ ಮೊದಲು 100 ಬಾರಿ ಹೇಳಿದರೆ ಅವನಿಗೆ ಮುಸ್ವೀಬತ್ತುಗಳಾವುದೂ ತಟ್ಟುವುದಿಲ್ಲ... وبالله التوفيق وهو حسبنا ونعم الوكيل ಶಮೀಮಾ ಕನ್ನಂಗಾರ್.. NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್