ಮುಂಜಾನೆ ಇಬ್ಬನಿ
ಮುಂಜಾನೆ ಇಬ್ಬನಿ
01
ಅಲ್ಲಾಹನ ದೀನ್'ನನ್ನು ಕಲಿಯುವಾಗ ನಿಮ್ಮ ದಿನದ ಹಲವಾರು ಕೆಲಸಗಳು ತಪ್ಪಿ ಹೋಗಬಹುದು.. ಆದರೆ ನೀವು ಸರಿಯಾಗಿ ಚಿಂತಿಸಿ ನೋಡಿದರೆ ನಿಮಗೆ ಅಗತ್ಯವಿಲ್ಲದವುಗಳು ಮಾತ್ರ ತಪ್ಪಿ ಹೋಗಿರಬಹುದು.. ಅಗತ್ಯವಿರುವಂತಹದ್ದು ಖಂಡಿತ ನಿಮಗೆ ಸಿಗುತ್ತಿರಬಹುದು.. ಅಲ್ಲಾಹನ ಗ್ರಂಥವನ್ನು(ಪವಿತ್ರ ಕುರ್‍ಆನ್) ಕಲಿತು ಅರ್ಥಮಾಡಿಕೊಂಡರೆ ಸಿಗುವ ಸುಖವು ಲೋಕದ ಯಾವುದೇ ವಸ್ತುವಿನಿಂದ ಸಿಗಲಾರದು.. ಇದನ್ನು ನೀವು ಸ್ವತಃ ಅನುಭವಿಸುವಿರಿ..
02
ಈ ಲೋಕದಲ್ಲಿ ಮನೆ, ಮಕ್ಕಳು, ಉಡುಗೆ-ತೊಡುಗೆಗಳು, ಸಂಪತ್ತು-ಅನ್ನಪಾನೀಯಗಳು ಇವೆಲ್ಲವನ್ನೂ ಪಡೆದವರು ಕೂಡಾ ಯಾವುದೋ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಎಲ್ಲಿಯೋ ಯಾವುದೋ ವಿಷಯದಲ್ಲಿ ಕೊರಗುತ್ತಿದ್ದಾರೆ. ನಾವು ಈ ಲೋಕಕ್ಕೆ ಬಂದಿದ್ದೇವೆ. ಸೃಷ್ಟಿಕರ್ತನು ಕೊಟ್ಟ ಎಲ್ಲ ಅನುಗ್ರಹಗಳನ್ನು ಉಪಯೋಗಿಸುತ್ತಿದ್ದೇವೆ. ಆದರೆ ಆತನ ಹಕ್ಕು ತೀರಿಸಲಿಲ್ಲ..
03
ಅಲ್ಲಾಹನು ನಮಗೆ ಎಷ್ಟೆಲ್ಲಾ ಉಪಕಾರ ಮಾಡಿದನು. ನಮ್ಮನ್ನು ಮನುಷ್ಯನಾಗಿ ಸೃಷ್ಟಿಸಿದನು. ಮನುಷ್ಯನಿಗೆ ಬೇಕಾಗಿರುವ ಎಲ್ಲ ಅನುಗ್ರಹಗಳನ್ನು ನೀಡಿದನು. ಕಣ್ಣು, ಕೈಕಾಲುಗಳು, ಆಲೋಚಿಸುವ ಮನಸ್ಸು, ಬುದ್ಧಿ, ಆರೋಗ್ಯ, ಯೌವನ, ಗಾಳಿ, ನೀರು, ಬೆಳಕು… ಸರ್ವ ಸವಲತ್ತುಗಳನ್ನು ನೀಡಿದನು. ನಮ್ಮನ್ನು ಮುಸ್ಲಿಮರನ್ನಾಗಿ ಮಾಡಿದನು. ಮುಹಮ್ಮದ್ ಮುಸ್ತಫಾ (ಸ.ಅ)ರ ಉಮ್ಮತ್ ಆಗಿ ಮಾಡಿದನು. ಅವನ ಧರ್ಮದ ಜ್ಞಾನ ನೀಡಲಿಕ್ಕಾಗಿ ಕುರ್‌ಆನನ್ನು ನಮಗಾಗಿ ತೆರೆದಿರಿಸಿದನು. ಈಗ ಎಲ್ಲರಿಗಿಂತ ಮೊದಲು ಅವನ ಹಕ್ಕು ತೀರಿಸ ಬೇಕಾಗಿದೆ..
04
ಜೀವನದ ನಿಜವಾದ ಉದ್ದೇಶ ಕೇವಲ ಅಲ್ಲಾಹನನ್ನು ಖುಷಿ ಪಡಿಸುವುದಾಗಿದೆ. ಆತನನ್ನು ಸಂತೋಷ ಗೊಳಿಸುವುದು ಲೋಕದ ಎಲ್ಲ ಕಾರ್ಯಗಳಿಗಿಂತ ಬಹಳ ಮುಖ್ಯವಾದುದಾಗಿದೆ. ಯಾವಾಗ ನಮ್ಮ ಗುರಿ ಅಲ್ಲಾಹನನ್ನು ಸಂಪ್ರೀತಿ ಗೊಳಿಸುವುದಾಗಿರುವುದೋ ಆಗ ನಮಗೆ ಯಾವುದೇ ವಿಷಯದ ಕುರಿತು ಬೇಸರವಿರಲಾರದು. ಕೇವಲ ಒಂದೇ ಒಂದು ಆಗ್ರಹ, ನನ್ನ ಪ್ರಭು ನನ್ನಿಂದ ಸಂತುಷ್ಠನಾಗಬೇಕು ಎಂದು ಮಾತ್ರ..
05
ನಾವು ಈ ಪ್ರಪಂಚದಲ್ಲಿ ಬದುಕಿ ಉಳಿಯುವುದು ತೀರಾ ಅಲ್ಪ ಅವಧಿ ಮಾತ್ರವಾದರಿಂದ ಬದುಕನ್ನು ಸಂತಸದಲ್ಲಿ ಬೆಳೆಯುವ ಬಗೆ ಹೇಗೆ..?
ಹುಟ್ಟಿದ ಮಗುವಿನಲ್ಲಿ ಏನು ನಗು, ಏನು ಸಂತಸ, ಹಸಿದರೆ ಮಾತ್ರ ಅಳುವುದು ಇಲ್ಲವೇ ಚೀರುವುದು. ಆದರೆ, ಬೆಳೆಯುತ್ತಾ ಹೋದಂತೆ ಈ ಮುಗ್ಧ ನಿಷ್ಕಳಂಕ ಸಂತೋಷನ್ನು ಕಳೆದುಕೊಳ್ಳುವ ಹಲವಾರು ವಿಧಾನಗಳನ್ನು ಕರಗತ ಮಾಡಿಕೊಳ್ಳುತ್ತೇವೆ. ಈ ದಿಸೆಯಲ್ಲಿ ಓರ್ವ ತತ್ವಜ್ಞಾನಿ ಹೇಳಿದ ಮಾತೊಂದು ಗಮನಾರ್ಹ. ನಿಮ್ಮ ಆಲೋಚನಾ ಶಕ್ತಿಯನ್ನು ಹೊಟ್ಟೆಕಿಚ್ಚು ಬದಲಾಯಿಸುತ್ತದೆ. ನೀವು ನಿಮ್ಮಲ್ಲಿರುವ ಗುಣ, ಸಂಪತ್ತುಗಳಿಂದ ಸಂತೋಷ ಪಡುವ ಬದಲಾಗಿ, ನಿಮ್ಮಲ್ಲಿರದ ಹಾಗೂ ಬೇರೆಯವರಲ್ಲಿರುವ ಗುಣ ಸಂಪತ್ತುಗಳನ್ನು ಆಶಿಸಿ ದುಃಖ ಪಡುತ್ತೀರಿ. ಇದೇ ಜೀವನದ ದುಃಖದ ಮೂಲ.
ಅಸೂಯೆ ಎಂಬ ಅಜಾತಶತ್ರು
06
ಮನುಷ್ಯನ ನಿಜವಾದ ಶಾಶ್ವತವಾದ ವಾಸಸ್ಥಾನವು ಪರಲೋಕವಾಗಿದೆ. ಪರಲೋಕ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲಿಕ್ಕಾಗಿ ನಾವು ಇಹಲೋಕಕ್ಕೆ ಬಂದಿರುತ್ತೇವೆ. ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಸಮಯದವರೆಗೆ ಕೆಲಸ ಮಾಡಲು ಮತ್ತು ಪರಲೋಕಕ್ಕೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಲು ಅವಕಾಶವನ್ನು ನೀಡಲಾಗಿದೆ. ಅವನ ಅವಧಿಯು ಮುಗಿದ ಕೂಡಲೇ ಮರಳಿ ಹೋಗಲೇಬೇಕು. ಅವಿತುಕೊಳ್ಳಲು ಅಥವಾ ಹಣಪಾವತಿಸಿ ತಪ್ಪಿಸಿಕೊಳ್ಳಲು ಖಂಡಿತವಾಗಿ ಸಾಧ್ಯವಿಲ್ಲ. ಇಹಲೋಕ ಮತ್ತು ಪರಲೋಕ ಜೀವನವನ್ನು ಜೊತೆಯಾಗಿ ಪರಿಗಣಿಸಿದರೆ ಇಹಲೋಕ ಜೀವನವು ಸಂಪೂರ್ಣ ಪ್ರಯಾಣವಾಗಿದೆ.
07
ಯಾವ ನೆರೆಹೊರೆಯ ಮಕ್ಕಳಿಗೆ ಕೂಡ ಮನಸ್ಸು ನೋವು ಉಂಟಾಗಬಾರದು ಎಂದು ಸಾವಿರಾರು ವರ್ಷಗಳ ಹಿಂದೆ ನೆರೆಹೊರೆಯ ಬಗ್ಗೆ ಧ್ವನಿಯಾಗಿ ನಿಂತ ಮುತ್ತು ನಬಿ ﷺ ಹೇಳಿದರು
“ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ ಬಡವರಿಗೆ ನೋವಾಗಬಾರದು ಎಂದು ಜನತೆಗೆ ತಾಕೀತು ನೀಡಿದ ಜಗತ್ತಿನ ಶ್ರೇಷ್ಠರಾದ ಮುತ್ತು ನಬಿ ﷺ ಎನ್ನುವುದರಲ್ಲಿ ಅಭಿಮಾನವಿದೆ. ಮುತ್ತು ನಬಿ (ಸ.ಅ)ರನ್ನು ಅನುಸರಿಸಿ ಜೀವಿಸಲು ಅಲ್ಲಾಹನು ತೌಪಿಕ್ ನೀಡಿ ಅನುಗ್ರಹಿಸಲಿ..
۞ْآمِيـــــنْ يَا رَبَّ الْعَالَمِين۞
08
ಪ್ರೀತಿ ಎಂಬ ಪದವು ಸುಂದರ. ಅದು ಪತಿ ಪತ್ನಿಯರ ಸಂಭಂದವನ್ನು ಇನ್ನಷ್ಟು ಬಿಗಿಯಾಗಿಸುತ್ತದೆ. ಲೌಕಿಕ ಮಾನ ದಂಡಗಳು ಅದಕ್ಕೆ ಅನ್ವಯವಾಗುವುದಿಲ್ಲ. ಗಣಿತಶಾಸ್ತ್ರದಲ್ಲಿ ಒಂದು ಮತ್ತು ಒಂದು ಕೂಡಿಸಿದರೆ ಎರಡು ಆಗುತ್ತದೆ. ಆದರೆ ಕುರ್‍ಆನಿನ ಕಲ್ಪನೆಯು ದಾಂಪತ್ಯ ಜಗತ್ತಿನಲ್ಲಿ ಹಾಗಲ್ಲ. ದಾಂಪತ್ಯವು ಎರಡು ಜೀವಗಳು ಬೆರೆತು ಒಂದಾಗುವ ಅತ್ಯಂತ ಸೋಜಿಗದ ಪ್ರಕ್ರಿಯೆಯಾಗಿದೆ. ಎರಡು ಮಹಾ ಪ್ರವಾಹಗಳು ಸೇರಿ ನದಿಯಾಗುವಂತೆಯೇ ಇಬ್ಬರು ಜತೆ ಸೇರಿ ಒಂದೇ ಜೀವವಾಗಿ ಮಾರ್ಪಟ್ಟಾಗ ದಾಂಪತ್ಯವು ಕುರ್‍ಆನಿನ ವರ್ಣನೆಗೆ ಪೂರಕವಾಗುತ್ತದೆ..
“ಅವರು ನಿಮಗೆ ಉಡುಪಾಗಿರುವರು ಮತ್ತು ನೀವು ಅವರಿಗೆ ಉಡುಪಾಗಿರುವಿರಿ.”
(ಪವಿತ್ರ ಕುರ್‍ಆನ್)
09
ನಾವೆಲ್ಲರೂ ಜೀವನದ ಜಂಜಾಟದಲ್ಲಿ ಭೂಮಿಗೆ ಯಾಕೆ ಬಂದಿದ್ದೇವೆ ಎನ್ನುವ ವಾಸ್ತವಿಕತೆಯನ್ನು ಮರೆತುಬಿಟ್ಟಿದ್ದೇವೆ,ಮತ್ತು ಇಲ್ಲಿಯ ಸುಖಕ್ಕಾಗಿ ಎಲ್ಲವನ್ನು ಮರೆತು ಅದರಲ್ಲಿ ತಲ್ಲಿನರಾಗಿದ್ದೇವೆ, ಶಾಂತಿ, ನ್ಯಾಯ, ಪ್ರೀತಿ ಉಳಿಸಿಕೊಳ್ಳಬೆಕಾಗಿದ್ದ ನಾವು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದೇವೆ, ಇದಕ್ಕೆಲ್ಲ ಕಾರಣ ನಾವು ತಿಳಿದಿರುವ ಒಂದು ಸತ್ಯವನ್ನು ಮರೆತಿದ್ದೇವೆ, ಈ ಭೂಮಿಗೆ ಬಂದ ಎಲ್ಲ ಮನುಷ್ಯರು ಖಂಡಿತ ಒಂದು ದಿನ ಸಾಯಲೇಬೇಕು, ಎಲ್ಲರೂ ಮರಣದ ರುಚಿಯನ್ನು ಅನುಭವಿಸಲೇಬೇಕು, ಎಲ್ಲ ಮನುಷ್ಯನ ಮಕ್ಕಳು ಮರಣವನ್ನಪ್ಪಲೇಬೆಕು, ಮರಣವು ನಮ್ಮ ಬೆನ್ನ ಹಿಂದೆ ನಿಂತು ಕಾಯುತ್ತಿದೆ ಎನ್ನುವುದನ್ನು ಮರೆಯದಿರೋಣ..
10
ಈ ಲೋಕದಲ್ಲಿ ಕರ್ಮವಿದೆ ವಿಚಾರಣೆಯಿಲ್ಲ ಆದರೆ ಪರಲೋಕದಲ್ಲಿ ವಿಚಾರಣೆ ಇರುವುದು ಕರ್ಮವಿರಲಾರದು ಕರ್ಮಗಳನ್ನು ಮಾಡಲು ಮನುಷ್ಯನಿಗೆ ನೀಡಲಾಗಿರುವ ಅವಧಿಯು ಮರಣದೊಂದಿಗೆ ಕೊನೆಗೊಳ್ಳುವುದು ಆ ಬಳಿಕ ವಿಚಾರಣೆ ಆರಂಭವಾಗುವುದು ಮನುಷ್ಯನು ಪರಲೋಕಕ್ಕಾಗಿ ಮಾಡಬೇಕಾದ ಕರ್ಮಗಳನ್ನೆಲ್ಲಾ ಇಹಲೋಕದ ಜೀವನಾವಧಿಯಲ್ಲೇ ಮಾಡಬೇಕು ಈ ಅವಧಿ ಒಮ್ಮೆ ಮುಗಿದು ಬಿಟ್ಟರೆ ಆ ಬಳಿಕ ಎಷ್ಟು ಗೋಗರೆದರೂ ಇದರ ಒಂದು ನಿಮಿಷ ಕೂಡಾ ಮರಳಿ ಸಿಗಲಾರದು ಆದ್ದರಿಂದ ಈ ಅವಧಿಯ ಒಂದೊಂದು ನಿಮಿಷವನ್ನೂ ಅಮೂಲ್ಯವೆಂದು ಪರಿಗಣಿಸಿ ಸಾಧ್ಯವಿದ್ದಷ್ಟು ಹೆಚ್ಚು ಒಳಿತುಗಳನ್ನು ಸಂಪಾದಿಸುವುದೇ ಜಾಣತನ.
11
ಜಗತ್ತಿನ ಅತ್ಯುತ್ಕೃಷ್ಟವಾದ, ಮಹೋನ್ನತ ಯಶಸ್ಸುಗಳೆಲ್ಲವೂ ಕೂಡ, ಒಂದಲ್ಲ ಒಂದು ರೀತಿಯಿಂದ, ಸತತ ವೈಫಲ್ಯಗಳಿಂದಲೇ ಬಂದಿವೆ. ಈ ಸತ್ಯವನ್ನಂತೂ ನಮ್ಮಲ್ಲಿ ಪ್ರತಿಯೊಬ್ಬರೂ ಸಹ ಒಪ್ಪಿಕೊಳ್ಳುತ್ತಾರೆ. ವೈಫಲ್ಯದ ಕಹಿಯನ್ನುಂಡ ನಮಗೆಲ್ಲರಿಗೂ ಅನ್ವಯವಾಗುವ ಒಂದು ಸಂಗತಿಯೇನೆಂದರೆ, ಇಂದಿನ ಸೋಲನ್ನು ನಾವು ಅವಲೋಕಿಸುವ ನಮ್ಮ ದೃಷ್ಟಿಕೋನವು ಭವಿಷ್ಯದ ಯಶಸ್ಸನ್ನು ನಿರ್ಧರಿಸುವ ಮಹತ್ತರ ಅಂಶವಾಗಿದೆ. ಇಂದಿನ ಸೋಲನ್ನೇ ನಾವು ಜೀವನದ ಅಂತ್ಯವೆ೦ದು ಭಾವಿಸಿಕೊಂಡರೆ, ಅಲ್ಲಿಗೆ ಮುಗಿಯಿತು. ನಮ್ಮಿಂದ ಮುಂದೇನೂ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲಾಗಿ, ಇಂದಿನ ಸೋಲನ್ನೇ ನಾವು ಹೊಸತಾಗಿ ಇನ್ನಷ್ಟು ಚಾತುರ್ಯದಿಂದ ತೊಡಗಿಸಿಕೊಳ್ಳಲು ದೊರೆತಿರುವ ಒಂದು ಅವಕಾಶ ಎಂದು ಭಾವಿಸಿದರೆ, ನಾವು ಹೊಂದಬಹುದಾದ ಯಶಸ್ಸುಗಳ ಸರಮಾಲೆಗೆ ಖಂಡಿತವಾಗಿಯೂ ಕೊನೆಯೆಂಬುದಿರುವುದಿಲ್ಲ. ವೈಫಲ್ಯದಿಂದ ನಾವು ಕಲಿಯಬಹುದಾದ ಅಮೂಲ್ಯವಾದ ಜೀವನ ಪಾಠಗಳ ಕುರಿತು ದೃಷ್ಟಿ ಹಾಯಿಸೋಣ
12
ನಾವೆಲ್ಲರೂ ಜೀವನ ನಡೆಸುತ್ತೇವೆ. ಆದರೆ ಒಬ್ಬೊಬ್ಬರದು ಒಂದೊಂದು ರೀತಿ. ಅವರವರಿಗೆ ಉತ್ತಮ ಅನ್ನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಾವು ಅಂದುಕೊಂಡದ್ದೇ ಉತ್ತಮ ಎನ್ನುವುದು ತಪ್ಪು. ಇದಕ್ಕೆ ನಾವು ವಿಶಾಲವಾದ ಮನೋಭಾವದಿಂದ ಎಲ್ಲವನ್ನು ಅರಿತು, ಓದಿ, ಗಮನಿಸಿ, ಗುರು ಹಿರಿಯರ, ವಿದ್ವಾಂಸರ ಮಾರ್ಗದರ್ಶನ ದಿಂದ ಪ್ರೇರಿತರಾದರೆ ಅದು ಉತ್ತಮ ಬಾಳು ಎನ್ನಿಸಿಕೊಳ್ಳುತ್ತದೆ. ಬೇರೆಯವರು ಸಹ ಅವರಿಗೆ ತಿಳಿದ ಮಟ್ಟಿಗೆ ಉತ್ತಮ ಅನ್ನಿಸಿಕೊಂಡಂಥ ಬಾಳನ್ನು ನಡೆಸಲು ಬಿಡಬೇಕು. ನಾನು ನಡೆಸುತ್ತಿರುವ ಜೀವನವೇ ಉತ್ತಮ ಎಂಬ ಅಹಂಭಾವದಿಂದ ದೂರವಿರಬೇಕು. ನಮ್ಮದು ನಿಜವಾಗಿಯೂ ಉತ್ತಮ ಜೀವನವಾದರೆ ಇತರರೇ ನಮ್ಮನ್ನು ಅನುಕರಿಸುತ್ತಾರೆ ಎಂಬ ಮನೋಭಾವ ಹೊಂದಿರಬೇಕು. ಇತರರಿಂದ ನಾವು ಕಲಿಯುವುದು ಏನಾದರೂ ಇದ್ದರೆ ಅದನ್ನು ಶುದ್ಧ ಮನಸ್ಸಿನಿಂದ ಕಲಿಯಬೇಕು..
13
ಜೀವನದಲ್ಲಿ ಸತತ ವೈಫಲ್ಯದಿಂದ ಕಲಿಯಬಹುದಾದ ಅತ್ಯೋತ ಪ್ರಮುಖವಾದ ಪಾಠಗಳಲ್ಲೊಂದು ಏನೆಂದರೆ, ಮಾಡುವುದರಿಂದ ಏನನ್ನೂ ಪಡೆದಂತಾಗುವುದಿಲ್ಲ. ಹೀಗಾಗಿ, ನೀವು ಸೋತು ವಿಮುಖರಾಗಿ ಸ್ಪರ್ಧೆದಿಂದ ಹೊರಗುಳಿದರೆ, ನಿಮ್ಮ ಅದುವರೆಗಿನ ಪ್ರಯತ್ನಗಳು ವ್ಯರ್ಥವಾಗಿ ಹೋಗುತ್ತವೆ. ಅದೇ ರೀತಿ ಹೊಸ ಹೊಸ ಯೋಜನೆಗಳಿಗೆ ವೈಫಲ್ಯವೇ ಮೂಲಾಧಾರ.. ಹೊಸತಾದ ಯೋಜನೆಗಳನ್ನು ಕಂಡುಕೊಳ್ಳಲು ನಿಮಗೆ ಕಷ್ಟವೆಂದು ನೀವು ಭಾವಿಸುವುದಾದರೆ, ನೀವೇಕೆ ಒಂದೆರಡು ಬಾರಿ ಸೋಲನ್ನನುಭವಿಸಿ ಪ್ರಯತ್ನಿಸಬಾರದು? ಹೀಗೆ ಮಾಡುವುದರಿಂದ ಖಂಡಿತವಾಗಿಯೂ ನೀವು ಹೊಸ ಯೋಜನೆಗಳೊಂದಿಗೆ ಹೊರಹೊಮ್ಮುವ ನಿಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತೀರಿ..
14
ಬದುಕು ಒಂದು ಪಾಠದಂತೆ ಜೀವನದುದ್ದಕ್ಕು ಕಲಿತರು ತೀರದ ದಾಹ ನಮ್ಮನ್ನು ಪ್ರಶ್ನೆಯಾಗಿ ಕಾಡುತ್ತಲೇ ಇರುತ್ತದೆ. ಬದುಕಿನ ಪುಟಗಳು ಒಂದೊಂದೆ ತೆರೆದುಕೊಳ್ಳುವ ಸಂತೋಷದ ಅಲೆಗಳು ದುಃಖ ದುಮ್ಮಾನದ ಕರಿ ನೆರಳುಗಳು ರೋಷ ಆವೇಶದ ಮಜಲುಗಳು ತೇಲುತ್ತಾ ಮುಳುಗುತ್ತ ನಿರಂತರವಾಗಿ ಸಾಗುತ್ತವೆ.
ಅಡೆ ತಡೆಗಳೆಷ್ಟೊ ಆದರೆ ಗುರಿ ತಲುಪುವ ತವಕ ರೆಕ್ಕೆಗಳಿಲ್ಲದಿದ್ದರು ರೆಕ್ಕೆಗಳಾಗಿಸುವ ಪ್ರಯತ್ನ..!ಹಾರಿ ಹೋಗಲು ಪಕ್ಷಿಗಳಲ್ಲವಲ್ಲ ವಿಮಾನಗಳಾಗುತ್ತೇವೆ.
ನಿರಂತರ ಪ್ರಗತಿಯಲಿ ಸಾಗುತ್ತಾ ನಮ್ಮ ಪಯಣ ಎಲ್ಲಿಗೆ..? ನಮ್ಮ ದಿಕ್ಕು ಯಾವಕಡೆ..? ನಾವು ನಮ್ಮ ನಿರೀಕ್ಷಿತ ಗುರಿಯನ್ನು ತಲುಪುತ್ತೇವೆಯೇ..? ಎಂಬ ಹಲವು ಪ್ರಶ್ನೆಗಳು ನಮ್ಮನ್ನು ಮರೀಚಿಕೆಯಾಗಿ ಕಾಡುತ್ತವೆ..
ಜೀವನದ ಪುಟಗಳು ಸವೆಯುತ್ತ ಸವೆಯುತ್ತಾ ಮರೆವು ನಮ್ಮನ್ನು ಆವರಿಸುತ್ತದೆ..
ಓದದೆ ಉಳಿದ ಪುಟಗಳಲ್ಲಿ ಮಂಜು ಕವಿಯುತ್ತದೆ. ಯೋಚಿಸುವ ಮನಸ್ಸು ಮಂಕಾಗುತ್ತದೆ. ಅಂಧಕಾರ ನಮ್ಮನ್ನು ಹಂತ ಹಂತವಾಗಿ ಆವರಿಸುತ್ತಾ ಬರುತ್ತದೆ. ಕಡೆಯಲ್ಲಿ ಜೀವನವನ್ನು ಪೂರ್ತಿ ಓದಲಾಗದೆ.. ಓದಿರುವುದು ಅರ್ಥವಾಗದೆ.. ನಮ್ಮ ಜೀವನದ ಅಧ್ಯಾಯವನ್ನು ಅರ್ಧಕ್ಕೆ ಮುಚ್ಚಿ ಹೊರಟು ಹೋಗುತ್ತೇವೆ..
15
ಜೀವನ.. ಇದು ನೋಡಲು ಮತ್ತು ಕೇಳಲು ಕೇವಲ ಮೂರೇ ಮೂರು ಅಕ್ಷರಗಳಿದ್ದರೂ ಇದರ ಆಳ ಬಹಳಷ್ಟು. ಇದರಲ್ಲಿ ಮೂಡುವ, ಅದು ನೀಡುವ ಅನುಭವ ಅನನ್ಯ ಹಾಗೂ ಸ್ವೀಕರಿಸಬೇಕಾದುದು ಅನಿವಾರ್ಯ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ, ಅವನು ಜೀವಿಸುವ ಬಗೆಯಿಂದ ರೂಪಿತಗೊಳ್ಳುತ್ತದೆ. ಅವನ ಉನ್ನತಿ ಹಾಗೂ ಅವನತಿಗಳೆರಡೂ ಆತ ಅರ್ಥೈಸಿಕೊಂಡ, ಪಾಲನೆ ಮಾಡಿದ, ಬದುಕನ್ನು ಈ ಜೀವನವೆಂಬ ಸಾಗರದಲ್ಲಿ ಕಟ್ಟಿಕೊಂಡ ಬಗೆಗಳ ಒಂದು ಭಾಗವೇ ಆಗಿದೆ. ಅನೇಕ ಏಳು ಬೀಳು. ಆದಿ- ಅಂತ್ಯ, ಸಂಘರ್ಷ, ಹೋರಾಟ ಇರುವಂತಹ ಈ ಜಗತ್ತಿನಲ್ಲಿ ಅದನ್ನೆಲ್ಲಾ ಸೃಷ್ಟಿಸಿಕೊಳ್ಳುವ ಜೀವನವೆಂಬ ವಾಸ್ತವ ಸಂಗತಿಯೇ ಅತ್ಯಮೂಲ್ಯ ವಿಷಯ. ಆದುದರಿಂದ ನಾವು ಜೀವನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ..
16
ಕೆಟ್ಟ ಕನಸುಗಳ ಜೊತೆ ಜೀವನದ ಪಯಣ ಆರಂಭಿಸಿದ ಜೀವಗಳ ಬದುಕು, ಅವರು ಆ ಕೆಟ್ಟ ಕನಸುಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಅದನ್ನು ಮರೆತು ತಮ್ಮ ಮುಂದಿನ ಜೀವನವನ್ನು ಸಿಹಿಗನಸಾಗಿ ಪರಿವರ್ತಿಸುವತ್ತ ತೊಡಗಿದರೆ, ಇನ್ನು ಕೆಲವರು ತಮಗೆ ದ್ರೋಹ ಬಗೆದ(ಅವರ ಅಭಿಪ್ರಾಯದಲ್ಲಿ) ಬದುಕಿನ ಜೊತೆಗೆ ಪ್ರತೀಕಾರಕ್ಕೆ ಸಜ್ಜಾಗುತ್ತಾರೆ. ಅವರು ಬದುಕು ಮತ್ತು ತಾವು ಬೇರೆ ಬೇರೆ ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಅದು ಅವರದೇ ಬದುಕು, ಅದರ ಜೊತೆ ಜಿದ್ದಿಗೆ ನಿಂತರೆ ಹಾಳಾಗುವುದು ಅವರದೇ ಕನಸುಗಳು ಅಂತ ತಿಳಿಯುವುದೇ ಇಲ್ಲ. ತಿಳಿದರೂ ತಿಳಿಯುವ ಹೊತ್ತಿಗೆ ಅವರದೇ ಬದುಕು ಅವರ ಕೈಯಿಂದಲೇ ಸರಿಪಡಿಸಲಾಗದಷ್ಟು ಹಾಳಾಗಿರುತ್ತದೆ. ಇನ್ನು ಸಿಹಿಗನಸುಗಳ ಮೂಟೆ ಹೊತ್ತು ಬಂದವರೆಲ್ಲ ಒಳ್ಳೆ ದಾರಿಯಲ್ಲಿ ಸಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆಂದಲ್ಲ, ಅಲ್ಲೂ ಕೆಲವರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಸಾಲಿನ ಅನುಯಾಯಿಗಳಂತೆ ಹುಚ್ಚು ಆಸೆಗಳ ಬೆನ್ನೇರಿ ಎಲ್ಲವನ್ನು ಕಳೆದುಕೊಂಡು ತಮ್ಮ ಕಂಗಳಲ್ಲಿನ ಸವಿಗನಸುಗಳು ಕಣ್ಣೀರಾಗಿ ಹರಿದು ಹೋಗುವುದು ಕಾಣುತ್ತಿದ್ದರೂ ಅವನ್ನು ಉಳಿಸಿಕೊಳ್ಳಲಾರದ ಅಸಹಾಯಕ ಸ್ಥಿತಿಗೆ ತಲುಪಿರುತ್ತಾರೆ..
17
ಬೀಜವು ಒಂದು ಮರವಾಗುತ್ತದೆ. ನಂತರ ಮರವು ಒಂದು ಬೀಜವಾಗುತ್ತದೆ. ಆದ್ದರಿಂದ ಒಂದು ಬೀಜದ ಪರಿಪೂರ್ಣತೆ, ಮತ್ತೆ ಬೀಜವಾಗುವುದರಲ್ಲಿದೆ. ಬೀಜವು ಮರವಾಗಿ, ಆ ಮರವು ಹಣ್ಣು ಬಿಡದ ತನಕ ಬೀಜವು ಪೂರ್ಣವಾಗಿಲ್ಲ, ಒಂದು ಬೀಜದಿಂದ ಮತ್ತೊಂದು ಬೀಜದವರೆಗೆ ಇಡೀ ಪಯಣ. ಒಂದರಿಂದ ಆರಂಭವಾಗಿ ಅನೇಕ ಬೀಜಗಳಾಗುತ್ತವೆ. ಅದೇ ರೀತಿಯಾಗಿ ಮಾನವ ಜೀವನವು ತನ್ನ ಅನಂತ ಸ್ವಭಾವವನ್ನು ಕಂಡುಕೊಂಡಾಗ ತನ್ನ ಪರಿಪೂರ್ಣತೆಯನ್ನು ಕಂಡುಕೊಳ್ಳುತ್ತದೆ..
18
ಬದುಕಿನ ಸುಖ-ಸಂತೋಷ ಇರುವುದು ಹಣದ ಬೇಟೆಯಲ್ಲಲ್ಲ, ದ್ವೇಷದ ಉರಿಯಲ್ಲಲ್ಲ, ಸ್ವಾರ್ಥದ ಸುಳಿಯಲ್ಲಲ್ಲ, ಅನೈತಿಕತೆಯ ಅಟ್ಟಹಾಸದಲ್ಲಲ್ಲ. ಬದಲಾಗಿ ಅದಿರುವುದು ತಾಯಿಯ ಮಮತೆಯ ಮಡಿಲಲ್ಲಿ,ತಂದೆಯ ಕನಸುಗಳ ಸಾಕಾರದಲ್ಲಿ, ಅಣ್ಣನ ಇರುವಿಕೆಯ ಧೈರ್ಯದಲ್ಲಿ, ತಮ್ಮನ ಭವಿಷ್ಯದ ಜವಾಬ್ದಾರಿಯಲ್ಲಿ, ಅಕ್ಕನ ಕಾಳಜಿಯ ಅಪ್ಪುಗೆಯಲ್ಲಿ, ತಂಗಿಯ ಹುಸಿ ಮುನಿಸ ಮುಗ್ಡತೆಯಲ್ಲಿ, ಸ್ನೇಹಿತರ ಸಂಗಡದಹುಡುಗಾಟದಲ್ಲಿ, ಜೀವದ ಗೆಳತಿಯೊಂದಿಗಿನ ಪಿಸುಮಾತುಗಳಲ್ಲಿ. ಬದುಕು ಮಾಯೆ, ಮರೂಭೂಮಿಯ ಮರೀಚಿಕೆಯಂತೆ ಇಲ್ಲದಿರುವ ಸಂತೋಷವನ್ನು ಇರುವುದೆಂಬಂತೆ ಬಿಂಬಿಸುತ್ತದೆ. ಆ ಮಾಯೆಗೆ ಮರುಳಾದ ನಾವು ಇರುವ ಸಿಹಿಗನಸುಗಳನ್ನು ಸಾಕಾರಗೊಳಿಸುವುದನ್ನು ಬಿಟ್ಟು, ಸಿಗದ ಮರೀಚಿಕೆಯ ಬೆನ್ನೇರುತ್ತೇವೆ. ಕೊನೆಗೆ ಒಂದು ದಿನ ಓಡಿ ಸುಸ್ತಾಗಿ ಹಿಂದಿರುಗಲು ಮನಸ್ಸುಬಯಸಿದಾಗ ಹಿಂದಿರುಗಲಾರದಷ್ಟು ಮುಂದೆ ಬಂದಿರುತ್ತೇವೆ..
19
ಒಂದು ರೀತಿ ಆಲೋಚಿಸಿದಾಗ ನಮಗೆ ಸಂತೋಷದ ಅರ್ಥ ಇನ್ನೂ ಆಗಿಲ್ಲ. ನಾವು ಸಂತೋಷವನ್ನು ಹುಡುಕುತ್ತೇವೆ. ಅಲ್ಲೇ ನಾವು ಎಡವುವುದು. ನಮ್ಮ ದೈನಂದಿನ ಬದುಕಿನಲ್ಲಿ ನಾವು ಎಷ್ಟೋ ವಿಷಯಗಳಿಗೆನಗುತ್ತೇವೆ. ಆ ನಗು ಕೂಡ ಸಂತೋಷದ, ಸುಖದ ಬದುಕಿನ ಒಂದು ಭಾಗ ಎಂದು ನಮಗನಿಸುವುದೇ ಇಲ್ಲ. ನಾವಿನ್ನೆಲ್ಲೊ ಇನ್ಯಾವುದೋ ರೀತಿ ಸುಖದ ಬದುಕಿನ ಬೇಟೆಯಲ್ಲಿ ಮಗ್ನರಾಗಿರುತ್ತೇವೆ. ಅದೆನನ್ನು ನಾವು ಹುಡುಕುತ್ತಿದ್ದೇವೆ ಎಂದರೆ ನಮಗೇ ಉತ್ತರ ತಿಳಿಯದಂತ ಸ್ಥಿತಿ ನಮ್ಮದು. ಚಿಕ್ಕ-ಪುಟ್ಟ ಸಂತೋಷದ ಕ್ಷಣಗಳಲ್ಲಿ ನಮ್ಮ ಮೊಗದಲ್ಲಿ ಮೂಡುವ ನಗುವನ್ನ ನಾವು ಎಂದು ಮನಸ್ಪೂರ್ತಿಯಾಗಿ ಆಸ್ವಾದಿಸುತ್ತೇವೋ ಅಂದು ನಮ್ಮ ಈ ಸುಖದ ಬದುಕಿನ ಬೇಟೆಯನ್ನು ನಾವೇ ಕೊನೆಗೊಳಿಸಿಕೊಳ್ಳುತ್ತೇವೆ..
20
ಜೀವನವೆಂಬ ನಿತ್ಯ ಚಲನೆಯಲಿ ದೇಹ-ಮನಸುಗಳ ಮಿಳಿತದ ಸಾಗಾಟವಿದ್ದರು ಮೂರ್ತ ರೂಪದ ದೇಹದ ಚಟುವಟಿಕೆಗಳಿಗೆ ಮನಸಿನ ಅಮೂರ್ತ ಶಕ್ತಿಯ ಬೆಂಬಲ ಅಪಾರ. ಬದುಕಿನ ನಿರಂತರ ಯುದ್ದದಲಿ ಎಂಬಿಡದೆ ಸೈನಿಕರಂತೆ ಕಾದಾಡುತ್ತ ಸಾಗುವ ಮಾನವನ ಈ ಎರಡು ಶಕ್ತಿಗಳು ಅವನ ಸೋಲು-ಗೆಲುವು, ಏಳು-ಬಿಳುಗಳಲ್ಲಿ ಮಹತ್ವದ ಪಾತ್ರದಾರಿಗಳು. ದೇಹ-ಮನಸುಗಳು ಎರಡು ನಮ್ಮಯ ಏಳು-ಬಿಳುಗಳಿಗೆ ಕಾರಣವಾದರು ಅವುಗಳಿಂದ ಉಂಟಾಗುವ ಸುಖ-ದುಖಗಳಲ್ಲಿ ಮನಸಿನ ಭಾಗಿತ್ವವೇ ಅಧಿಕ. ನಮ್ಮ ಸೋಲು-ಗೆಳವುಗಳಿಗೆ ಮನ ಸಂವೇದನೆಯಾಗಿ ವರ್ತಿಸುತ್ತದೆ. ಎಲ್ಲ ಫಲಾನುಫಲಗಳನ್ನು ಮನಸು ಅನುಭವಿಸುತ್ತದೆ. ಆ ಸಾಂಘಿಕ ಕಾರ್ಯದಲ್ಲಿ ಅಮೂರ್ತ ಚೇತನವಾದ ಮನಸಿನ ಕಾರ್ಯ ಅಧಿಕ. ಮಾನವ ಜೀವನದ ಏಳಿಗೆಯಲ್ಲಿ ಸದೃಢ ಮನಸು ಕೆಲಸ ಮಾಡುತ್ತದೆ. ಅದರಿಂದಾಗಿಯೇ ನಮ್ಮ ಮನಸನ್ನು ಸದೃಢ ಗೊಳಿಸಿಕೊಂಡು, ಉತ್ತಮ ಜೀವನವನ್ನು ಕಟ್ಟಿಕೊಳ್ಳುವತ್ತ ನಮ್ಮಯ ಜೀವನ ಯಾನ ಸಾಗಲಿ..
21
ನಾವು ದಿನಕಳೆದಂತೆ, ಅಹಂಕಾರಿಗಳು,ಸ್ವಾರ್ಥಿಗಳಾಗುತ್ತಾ ಐಹಿಕ ಜೀವನದ ಲಾಲಸೆಗಾಗಿ ಬದುಕುತ್ತಲೇ ಇದ್ದೇವೆ. ಇನ್ನೊಬ್ಬರ ಯಶಸ್ಸನ್ನು ಸಹಿಸಲಾಗದೆ ನಾವು ಐಹಿಕವಾದ ಜಗತ್ತಿನಲ್ಲಿ ಸ್ವೇಚ್ಚಾಚಾರದ ಬದುಕಿಗೋಸ್ಕರ ಅಹಂಕಾರಿಗಳಾಗುತ್ತಿದ್ದೇವೆ. ನಮ್ಮ ಬೆನ್ನ ಹಿಂದೆ ಮರಣವಿದೆ ಅನ್ನುವ ವಾಸ್ತವ ಸತ್ಯ ಮರೆತವರಂತೆ ನಟಿಸುತ್ತಿದ್ದೇವೆ..!
ಈ ಐಹಿಕವಾದ ಜಗತ್ತು ಮನುಷ್ಯನ ಪಾರತ್ರಿಕ ಲೋಕದ ಕೃಷಿ ಸ್ಥಳವಾಗಿದೆ. ಅಹಂಕರಿಸಿ, ದ್ವೇಷ ಸಾಧಿಸಿ ಮೆರೆದಾಡಲು ಇರುವಂತದಲ್ಲ. ಒಬ್ಬರಿಗೆ ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಇನ್ನೊಬ್ಬರಿಗೆ ಅನ್ಯಾಯ ಮಾಡಿ ಬದುಕಿ ಮುಗಿಸಲು ಇರುವಂತದಲ್ಲ ನಮ್ಮ ಜೀವನ. ಇನ್ಯಾರದೋ ಮರಣದ ವಾರ್ತೆ ಕೇಳಿ ಕಣ್ಣೀರು ಸುರಿಸುವಾಗ, ನಮ್ಮ ಕಫನ್ ಬಟ್ಟೆಯೂ ಇನ್ಯಾವುದೋ ಅಂಗಡಿಯಲ್ಲಿ ರೆಡಿಯಾಗಿರಿಸಿರಬಹುದು ಅನ್ನುವುದನ್ನು ಮರೆಯದಿರೋಣ..
22
ಪರಿಹಾರಗಳತ್ತ ಗಮನಹರಿಸಿ ಸಮಸ್ಯೆಗಳ ಕಡೆಗೆ ಅಲ್ಲ
ನಿಮ್ಮ ಗಮನವನ್ನು ಎಲ್ಲಿಗೆ ಯಾವಾಗ, ಹೇಗೆ ಹರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳ ಪರಿಸ್ಥಿತಿ ನಿಂತಿರುತ್ತದೆ. ನಿಮ್ಮ ಸಮಸ್ಯೆಗಳ ಬಗ್ಗೆ ಗಮನವಿಲ್ಲದಿದ್ದರೆ ಅದು ನಿಮ್ಮಲ್ಲಿ ಒತ್ತಡ ಮತ್ತು ಋಣಾತ್ಮಕ ಅಂಶವನ್ನು ಸೃಷ್ಟಿಸುತ್ತದೆ. ನಿಮ್ಮ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಿದರೆ ಅದು ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಧನಾತ್ಮಕ ಭಾವನೆಗಳನ್ನು ನೀಡುತ್ತದೆ, ಒತ್ತಡ ಕಡಿಮೆಗೊಳಿಸುತ್ತದೆ ಸ್ವಯಂ ಪರಿಣಾಮಕಾರಿತ್ವದ ಅರ್ಥ ಹುಟ್ಟಿಸುತ್ತದೆ..
23
ಜೀವನದಲ್ಲಿ ಬಾಲ್ಯದ ಅರಿವಿಲ್ಲದ ವಯಸ್ಸಿನಲ್ಲಿ ಪೋಷಕರ ಜತೆ ಹೆಣಗುತ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಅಗಾಧವಾದದ್ದು. ವಿಪರ್ಯಾಸವೆಂದರೆ, ಆ ಕಾಣಿಕೆಯ ಪ್ರಯೋಜನವುಂಡು ಬೆಳೆಯುವ ಮಕ್ಕಳಿಗೆ ಅದರ ಮಹತ್ವ ಅರಿವಾಗುವಂತಹ ವಯಸಲ್ಲ.. ಅರಿಯುವ ವಯಸಲ್ಲಿ ಆ ಬೆಳವಣಿಗೆಯ ಹಂತಗಳೆ ಮಸುಕಾಗಿ ಹೊಸ ಚಿತ್ತಾರಗಳು ಮೂಡಿ, ಹಳತೆಲ್ಲ ಮಾಯವಾಗಿಬಿಟ್ಟಿರುತ್ತವೆ. ಜೀವನ ಚಕ್ರದ ಜಂಜಾಟದಲ್ಲಿ ಪ್ರಾಯಶಃ ಮತ್ತೆ ಆ ಮಹತ್ವದ ನೆನಪಾಗುವುದು ಅವರ ಮಕ್ಕಳು ಅದೆ ಕಲಿಕೆಯ ಹಾದಿಯಲ್ಲಿ ಸಾಗುವುದನ್ನು ನೋಡುವಾಗ ಮತ್ತು ಆ ಬುನಾದಿ ಎಷ್ಟು ಕಠಿಣ ತರದ ಹಾದಿ ಎಂದರಿವಾಗುವಾಗ.
24
ಇಲ್ಲಿ ಜೀವನ ಎಂದಾಗ ಮಾನವ ಜೀವನ ಮತ್ತು ವೌಲ್ಯಗಳು ಅಂದಾಗ ಶಾಶ್ವತವಾಗಿ ಉಳಿಯುವ ಮತ್ತು ಸಕಲ ಸೃಷ್ಟಿಯ ಒಳಿತಿಗಾಗಿ ಮಾನವ ರೂಢಿಸಿಕೊಳ್ಳಬೇಕಾಗಿರುವ ಕೆಲವೊಂದು ನಂಬಿಕೆಗಳು ಮತ್ತು ಆಚರಣೆಗಳು ಎಂದು ತಿಳಿಯಬೇಕಾಗುತ್ತದೆ. ಜೀವನ ಶಾಶ್ವತವಲ್ಲ. ಅದು ಬರೀ ನಶ್ವರ ಎಂಬುದು ಎಲ್ಲರಿಗೂ ತಿಳಿದಿದೆ. ಜೀವ ಜಗತ್ತಿನಲ್ಲಿ ಎಲ್ಲವೂ, ಎಲ್ಲರೂ ಹುಟ್ಟಿಬಂದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕಾಗುತ್ತದೆ. ಕೆಲವೇ ನಿಮಿಷಗಳ ಕಾಲ ಮಾತ್ರ ಬದುಕಿರುವ ಸೂಕ್ಷ್ಮಾತಿ ಸೂಕ್ಷ್ಮ ಏಕಕೋಶ ಜೀವಿಗಳು ಬ್ಯಾಕ್ಟೀರಿಯಾಗಳಿಂದ ತೊಡಗಿ ನೂರ್ಕಾಲ ಬಾಳುವ ಮಾನವನೂ ಸೇರಿದಂತೆ ಇತರೇ ಕೆಲವು ಪ್ರಾಣಿಗಳು ಈ ಪಟ್ಟಿಯಲ್ಲಿ ಬರುತ್ತವೆ. ಎರಡು-ಮೂರು ಸಾವಿರ ವರ್ಷಕಾಲ ಬಾಳಿದ, ಈಗಲೂ ಕಂಡುಬರುವ ಅನೇಕ ವೃಕ್ಷಗಳು ಭಾರತವೂ ಸೇರಿದಂತೆ ವಿಶ್ವಾದ್ಯಂತ ಕಾಣಸಿಗುತ್ತವೆ. ಆದರೆ ಒಂದಲ್ಲ ಒಂದು ದಿನ ಅವಕ್ಕೂ ಕೊನೆ ಇದ್ದೇ ಇದೆ. ಹೀಗಿರುತ್ತ ಶಾಶ್ವತವಾದುದು ಯಾವುದು ಎಂಬ ಪ್ರಶ್ನೆ ಬರುತ್ತದೆ. ಈ ಸೃಷ್ಟಿಯೂ ಶಾಶ್ವತವಲ್ಲ. ನಿರ್ಜೀವ ವಸ್ತುಗಳಾದ ಸಾಗರ, ಪರ್ವತ, ಬೆಟ್ಟಗಳು, ಗುಡ್ಡಗಾಡು - ಇವುಗಳಿಗೂ ಶಾಶ್ವತತೆ, ನಿರಂತರತೆ ಇರುವುದಿಲ್ಲ. ಒಂದರ್ಥದಲ್ಲಿ ಅವೂ ಶಾಶ್ವತವಲ್ಲವೆನ್ನಬಹುದು..
25
ಪ್ರತಿದಿನ ತಮ್ಮ ಕೆಲಸ, ಮನೆ, ಫ್ಯಾಮಿಲಿ, ವಾಟ್ಸಾಪ್ ಫೆಸ್ಬುಕ್ ಇನ್ನಿತರ ಜಾಲತಾಣ.. ಈ ಎಲ್ಲಾ ಜಂಜಾಟಗಳ ನಡುವೆ ನಮಗೆ ನಿಜವಾಗಿ ಜೀವನದಲ್ಲಿ ಮಾಡಬೇಕಾಗಿರುವುದು ಏನು ಎಂಬುದು ಪ್ರತಿಯೊಬ್ಬರು ಮರೆತುಬಿಟ್ಟಿದ್ದಾರೆ. ಜೀವನದಲ್ಲಿ ಯಶಸ್ಸು ಗಳಿಸಬೇಕು, ಸ್ಥಾನಮಾನ ಪಡೆಯಬೇಕು, ಹಣ ಮಾಡಬೇಕು ಎಂಬ ಹಲವು ಕನಸುಗಳ ಹಿಂದೆ ಓಡಿ ಓಡಿ ಜೀವನದ ನಿಜವಾದ ಸವಿಯನ್ನು ಅನುಭವಿಸದೆ ಬಿಟ್ಟಿರುತ್ತಾರೆ..
26
ನಿತ್ಯ ಜೀವನದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡುಗೆಯೊಂದಿಗೆ ಸಾಗುತ್ತಿರುತ್ತದೆ. ಯಾವ ಪರಿಚಯ, ಸ್ನೇಹವು ಶಾಶ್ವತವಲ್ಲ. ಮರೆಯುವಂಥದ್ದೂ ಅಲ್ಲ. ಯಾರ ಪ್ರಯಾಣ ಎಂದು ಮುಗಿಯುತ್ತದೆ ಎಂದು ತಿಳಿಯದ ಒಂದು ಸುಂದರ ಪ್ರಯಾಣ ಈ ನಮ್ಮ ಜೀವನ.
ಪ್ರಯಾಣ ಎಂದಾಕ್ಷಣ ಕೇವಲ ಒಂದು ಕ್ರಿಯೆಯಾಗಿ ಉಳಿಯದೆ ನಮ್ಮ ಇರುವಿಕೆ ಇಲ್ಲದಿರುವಿಕೆಯ ವ್ಯತ್ಯಾಸ ತಿಳಿಯದಂತಾದಾಗಬೇಕು. ಅರ್ಥಾತ್ ನಮ್ಮ ಮರಣದ ನಂತರವೂ ಜನರ ಮನಸ್ಸಿನಲ್ಲಿ ಜೀವಿಸುವಂತಿರಬೇಕು. ನಮ್ಮ ಹೆಜ್ಜೆ ಗುರುತನ್ನು ಉಳಿಸುವ ಒಂದೇ ಅರ್ಥಬದ್ದ ಜೀವನ ನಮ್ಮದಾದರೆ ಅದು ಒಂದು ಸಾರ್ಥಕ ಜೀವನ ಪ್ರಯಾಣವಾಗುತ್ತದೆ..
27
ಸಿಕ್ಕವರನ್ನು ಕಳೆದುಕೊಂಡು ಸಿಗಲಾರದವರನ್ನು ಹುಡುಕುತ್ತ, ಜೀವನದಿಯನ್ನು ವ್ಯಾಮೋಹಗಳಲ್ಲಿ ಹರಿಯಲು ಬಿಡುತ್ತೇವೆ. ಸಾಕು ಎಂದವನು ಸಾಹುಕಾರ. ತೃಪ್ತಿಯೇ ನಿಜವಾದ ಶ್ರೀಮಂತಿಕೆ. ಸಿರಿವಂತನೆಂಬ ಗರ್ವ ಬೇಡ. ಶವಮಂಚವೆಂಬ ವಾಹನದಲ್ಲಿ ಅಂತಿಮವಾಗಿ ನಾವೆಲ್ಲರೂ ಸಾಗಬೇಕಿದೆ. ದುಬಾರಿ ವಾಹನದಲ್ಲಿ ಪ್ರಯಾಣಿಸಿದವರು ಮತ್ತು ಕಾಲ್ನಡಿಗೆಯಲ್ಲಿ ಸಾಗಿದವರನ್ನು ಅದು ಸ್ವಾಗತಿಸುವುದು ಒಂದೇ ರೀತಿಯಲ್ಲಿ. ಬೊಗಸೆಯಲ್ಲಿ ಹಿಡಿದಿಟ್ಟ ಬದುಕು ಸೋರಿ ಹೋಗುವ ಮೊದಲು ಬೇರೆಯವರು ಚಪ್ಪಾಳೆ ತಟ್ಟುವ ಹಾಗೆ ಕೆಲಸ ಮಾಡುವುದಕ್ಕಿಂತ ನಮ್ಮ ಒಳ ಮನಸ್ಸು ಕೇಕೆ ಹಾಕುವಂತಹ ಸಾಧನೆ ಮಾಡೋಣ. ಉನ್ನತ ಬದುಕು ಬದುಕೋಣ..
28
ಜೀವನ ಎಂದರೇನು ಎಂಬ ಪ್ರಶ್ನೆಗೆ ನಾವು ಬೇರೆ ಬೇರೆ ಸಂಧರ್ಭಗಳಲ್ಲಿ ಬೇರೆ ಬೇರೆ ಉತ್ತರವನ್ನು ಹೊಂದಿರುತ್ತೇವೆ, ಆ ಕ್ಷಣಕ್ಕೆ ಸರಿ ಎನಿಸುವ ಅಂಶವೇ ಜೀವನ ಎಂಬ ನಿರ್ಧಾರಕ್ಕೂ ನಾವು ಒಮ್ಮೊಮ್ಮೆ ಬಂದು ಬಿಡುತ್ತೇವೆ. ನಂತರದ ದಿನಗಳಲ್ಲಿ ಮತ್ತಷ್ಟು ಜೀವನವನ್ನು ಎದುರಿಸಿದಾಗ ಆ ನಿರ್ಧಾರ ಬದಲಾಗುತ್ತದೆ.ಜೀವನಕ್ಕೆ ಹೊಸ ಅರ್ಥವನ್ನು ಕೊಡುತ್ತಾ ಹೋಗುತ್ತೇವೆ. ಹೊಸ ಹೊಸ ಆಲೋಚನೆಗಳು ನಮ್ಮ ತಲೆಯಲ್ಲಿ ಮೂಡುತ್ತವೆ. ಇದರಿಂದ ಜೀವನ ಅಂದರೆ ಏನು ಎಂಬ ಪ್ರಶ್ನೆಗೆ ಹೊಸ ಉತ್ತರವನ್ನು ಹುಡುಕಿಕೊಳ್ಳುತ್ತೇವೆ.
ಅಸಲಿಗೆ ಜೀವನ ಎಂದರೇನು ಎಂಬ ಪ್ರಶ್ನೆಗೆ ಉತ್ತರಗಳು ಕಾಲ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಕೊನೆಗೊಂದು ದಿನ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಆಗ ಜೀವನವೆಂದರೆ ಆ ಕ್ಷಣಕ್ಕೆ ಬದುಕುವುದು ಎಂಬ ಸತ್ಯ ನಮಗೆ ಅರಿವಾಗುತ್ತದೆ. ಜೀವನದಲ್ಲಿ ಸರಳ ಜೀವನ ಅಂತ ಏನಿಲ್ಲಾ ನಾವು ಅದನ್ನು ಸರಳ ಮಾಡಿಕೊಳ್ಳಬೇಕು ಅಷ್ಟೇ.
29
ಬದುಕು ಎಂದರೆ ನದಿಯಂತೆ ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜೊತೆಗೆ ಉಳಿಯುವುದಿಲ್ಲ. ಉಳಿಯುವುದು ಒಂದೇ ನಾವು ಇತರರಿಗೆ ಮಾಡಿದ ಪುಣ್ಯದ ಕಾರ್ಯಗಳು. ಪ್ರಶಾಂತವಾದ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಬದುಕು ಸವಿಯುವ ಅವಕಾಶವಿದೆ. ಅದು ಬಿಟ್ಟು ಕ್ಷಣ ಕ್ಷಣ ಅಗತ್ಯಕ್ಕಿಂತ ಹೆಚ್ಚು ಹಣ, ಸಂಪತ್ತು, ಆಸ್ತಿಯ ಹಿಂದೆ ಬೆನ್ನು ಹತ್ತಿ ಅಮೂಲ್ಯವಾದ ಜೀವನ ವ್ಯರ್ಥ ಮಾಡಿಕೊಳ್ಳುತ್ತೇವೆ. ಇದನ್ನರಿತ ಪಂಡಿತರು. ಮಾನವ ಜೀವನ ದೊಡ್ಡದು. ಇದ ಹಾಳು ಮಾಡಿಕೊಳ್ಳಬೇಡಿರಿ ಎಂದಿದ್ದಾರೆ. ಬೊಗಸೆಯಲ್ಲಿ ಹಿಡಿದ ನೀರು ಬೆರಳಿನ ಸಂದಿಯಿಂದ ಸೋರಿ ಹೋಗುವಂತೆಯೇ ಬದುಕಿನ ಆಯಸ್ಸು ಇಂದ್ರೀಯಗಳ ಅರ್ಥಹೀನ ಸುಖಗಳಲ್ಲಿ ಕಳೆದು ಹೋಗುತ್ತದೆ...
30
ನಲಿವಿನ ಗಳಿಗೆಗಿಂತ ನೋವಿನ ಕ್ಷಣ ಹೆಚ್ಚು ಖುಷಿ ನೀಡುತ್ತದೆ. ಆದರೂ ಬದುಕಿನ ಯಾತ್ರೆಯಲ್ಲಿ ನಾವು ಸದಾ ಹಸನ್ಮುಖಿಗಳಾಗಿರಬೇಕು. ಮಂದಹಾಸದಿಂದ ಕೂಡಿರಬೇಕು. ಅಳು ಮೋರೆಯಿಂದ ನಾವು ಅಧ್ಯಾತ್ಮಿಕ ಜೀವಿಗಳಲಾಗಲಾರೆವು.. ಗಿಡದಲ್ಲಿ ಎಷ್ಟೇ ಮುಳ್ಳುಗಳ್ಳಿದ್ದರೂ ಅದರಲ್ಲಿ ಹೂವು ಅರಳಬೇಕು. ಹಾಗೇಯೇ ಜೀವನದಲ್ಲಿ ಎಷ್ಟೇ ನೋವು ತುಂಬಿದ್ದರೂ ಮುಖದಲ್ಲಿ ನಗು ತುಂಬಿರಬೇಕು. ಅಗ ಜೀವನ ಆಪ್ತವಾಗುತ್ತದೆ. ಕನಸಿನ ಕೋಟೆಯಲ್ಲಿರುವ ಬದುಕು ನನಸಿನ ತೆಕ್ಕೆಗೆ ಬೀಳಲು ಅನುಕೂಲವಾಗುವುದು..
31
ಬಹುತೇಕ ಮಂದಿ ತಮ್ಮ ದೈಹಿಕ ಬೌದ್ಧಿಕ ಅಥವಾ ನೈತಿಕ ಅಸ್ತಿತ್ವದ ತೀರ ಸೀಮಿತ ವಲಯದೊಳಗೆ ಬದುಕುತ್ತಿರುತ್ತಾರೆ. ಆದರೆ ನಮ್ಮಲ್ಲಿ ಶಕ್ತಿ ಅಡಗಿದೆ. ಅದೆಷ್ಟೆಂಬುದನ್ನು ನಾವು ಕನಸು ಕಾಣಲೂ ಸಾಧ್ಯವಿಲ್ಲ. ಜೀವನ ತುಂಬಾ ಸರಳ ಇದೆ ಅದನ್ನು ನಾವೇ ಸಂಕೀರ್ಣವಾಗಿಸಿದ್ದೇವೆ ಎಂಬುದು ಬಲ್ಲವರ ನುಡಿ. ಬದುಕು ಸಂಬಂಧಗಳ ಸುತ್ತ ಹೆಣೆದಿರುವ ಕಥೆ. ಅದರಲ್ಲಿ ಸೋತು ಗೆಲ್ಲಬೇಕು, ಸೋಲುವುದರಲ್ಲೂ ಒಂದು ಸಂಭ್ರಮವಿದೆ ಎನ್ನುವುದು ಬುದ್ಧಿಜೀವಿಗಳ ಅಭಿಪ್ರಾಯ. ಜತೆಗಿರುವ ಜೀವಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸ್ಪರ್ಧೆಯ ದಾವಂತದ ಓಟದಲ್ಲಿ ನಿರತರಾಗಿರುವ ನಮಗೆ ದಿನಗಳು ಉರುಳಿದ್ದೇ ತಿಳಿಯುತ್ತಿಲ್ಲ. ಇಳಿ ಸಂಜೆ ಪಯಣದಲ್ಲಿ ಒಳಗಣ್ಣು ತೆರೆದು ನೋಡಿದರೆ ಪುಸ್ತಕದಲ್ಲಿ ಒಂದೆರಡು ಪುಟಗಳು ಮಾತ್ರ ಮಿಕ್ಕಿರುತ್ತವೆ. ಜೀವನದ ಹೊತ್ತಿಗೆಯಲ್ಲಿ ಕೇವಲ ಒಂದೆರಡು ಪುಟ ಮಿಕ್ಕುವ ಹೊತ್ತಿಗೆ ಕಣ್ತೆರೆಯದೇ, ಮೊದಲೇ ಅರ್ಥ ಮಾಡಿಕೊಳ್ಳಲು ಸೋಲುವುದೇಕೆ? ಎಂದು ಯೋಚಿಸಿದರೆ ಅನೇಕ ಸುಳಿಹುಗಳು ಸಿಗುತ್ತವೆ..
32
ಮನಸ್ಸು ಮುನಿಸಿಕೊಂಡರೆ ಜನ ತುಂಬಿರುವ ಜಾಗದಲ್ಲೂ ಏಕಾಂಗಿ ಬಾವ. ಈ ಜಗದ ಗೋಜಲುಗಳೇ ಬೇಡ. ಸಂತೆ ಜಾತ್ರೆಯಲ್ಲೂ ಜನರೊಂದಿಗೆ ಬೆರೆಯಲಾರೆ ಎನ್ನುವ ಹಟ. ಭಾವದೊರತೆಯ ಸೆಲೆ ಜಿನುಗುತ್ತಿದ್ದಾಗಲೂ ಅಂತರಂಗದ ನುಡಿ ಉದುರಿಸಲು ತುಟಿ ಬಿಗಿ ಹಿಡಿಯುವುದು. ಹೂವಿನಂತೆ ಅರಳಿದ ಮನದ ಶ್ರೀಗಂಧವ ಸೂಸಲು ಬಿಡದೇ ಅಹಮಿಕೆಯ ದಿಬ್ಬವನೇರಿ ಕುಳಿತುಕೊಂಡರೆ ಜೀವನ ನರಕವಾಗುವುದು ಖಚಿತ. ಕಣ್ಣೀರೆನ್ನುವುದು ಯಾವತ್ತೂ ಕಣ್ಣಂಚನ್ನು ದಾಟಿ ಕೆನ್ನೆಗಿಳಿಯದಂತೆ ಮುದ್ದಾಗಿ ನೋಡಿಕೊಂಡ ಅಮ್ಮನ ಋಣವ ತೀರಿಸಲು ಅಸಾಧ್ಯ. ವಯಸ್ಸಾದ ಅಮ್ಮನೊಂದಿಗೆ ಹೃದಯದಿಂದ ಹೊಮ್ಮುವ ಎರಡು ಮಾತು ಆಕೆಯ ಕಣ್ಣಿನಿಂದ ಪನ್ನೀರು ಜಿನುಗಿಸುತ್ತದೆ. ಅಪ್ಪ ಅಮ್ಮ ಅಕ್ಕ ತಂಗಿ ಅಣ್ಣ ತಮ್ಮ ಸ್ನೇಹಿತರು ನೆಂಟರು ಆಪ್ತರು ಒಟ್ಟಿನಲ್ಲಿ ಸುತ್ತಲೂ ಮುತ್ತಿಕೊಂಡಿರುವ ಬಂಧ ಗಟ್ಟಿಕೊಳಿಸಿದರೆ ಜೀವನವಿಡೀ ಬೆಚ್ಚನೆಯ ಭಾವದಲ್ಲಿ ಹರುಷದ ಜೋಕಾಲಿ ಜೀಕಬಹದು..
33
ಜನನ ಮರಣಗಳ ನಡುವೆ ಸಾಗುವ ಈ ಜೀವನದಲ್ಲಿ ಅದೆಷ್ಟೋ ನೋವು ನಲಿವುಗಳು. ಮುಳ್ಳುಗಳ ದಾರಿಯಿದೆ ಸಾಗಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಂಡರೆ ನಮ್ಮಿಂದ ಯಾವುದೇ ರೀತಿಯಲ್ಲಿ ಪ್ರಯತ್ನ ಅನ್ನೋ ಪ್ರಕ್ರಿಯೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದಾಗಿ ಹೂವಿನ ಹಾದಿ ನಮ್ಮದಾಗುವ ತನಕ ಪ್ರಯತ್ನ ಪಟ್ಟು, ಶ್ರಮವಹಿಸಿ ಅದೇ ದಾರಿಯಲ್ಲಿ ನಡೆಯಬೇಕು. ಕೊನೆಗೊಂದು ದಿನ ನಾವಂದುಕೊಂಡಂತೆ ಪುಷ್ಪಪಥ ನಮ್ಮದಾದಾಗ ಸಿಗುವ ಖುಷಿ ಲೆಕ್ಕಾಚಾರಕ್ಕೆ ನಿಲುಕದ್ದು. ಜೊತೆಜೊತೆಗೆ ಸಾಧನೆಗೆ ಪ್ರತಿಫಲದ ಸನ್ಮಾನ..
34
ಜನರ ಸ್ವಭಾವವನ್ನು ತಿಳಿದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಮ್ಮ ಜೊತೆಗಿರುವ ವಿಷಯಕ್ಕಿಂತ, ಇನ್ನೊಂದು ಚಲನೆಯಲ್ಲಿರುವ ವಿಷಯಗಳಿಗೆ ಆಸ್ಪದ ನೀಡುವುದು ಮಾನವನ ಕೆಲವೊಂದು ಪ್ರಮುಖ ಗುಣಗಳಲ್ಲಿ ಒಂದು. ಅಂಥಹ ಕಾರ್ಯಗಳು ವೈಯಕ್ತಿಕ ಬದುಕಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಳ್ಳಬೇಕು. ಜೀವನದಲ್ಲಿ ನಮ್ಮ ದಾರಿ ನಮಗೆ, ಹೆತ್ತವರನ್ನು ಹೊರತುಪಡಿಸಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಅಭ್ಯುದಯವನ್ನು ಬಯಸುವ ಜೀವಗಳೆಂದರೆ ಅವು ಮಾತ್ರ..
35
ಒಂದು ಮಾತಿದೆ “ಒಂದು ತಮಾಷೆಗೆ ಒಮ್ಮೆ ನಕ್ಕು ಸುಮ್ಮನಾಗುತ್ತೇವೆ ಆದರೆ ಒಂದು ಬಾರಿ ಮನಸ್ಸಿಗೆ ಆದಂಥಹ ಘಾಸಿಯನ್ನು ನೆನೆದುಕೊಂಡು ಜೀವನದುದ್ದಕ್ಕೂ ಕೊರಗುತ್ತೇವೆ..” ಎಂಥಾ ವಿಪರ್ಯಾಸ. ಮುಖ್ಯವಾಗಿ ಹೇಳುವುದಾದರೆ ನಮ್ಮ ಜೀವ ಹಾಗೂ ಜೀವನ ಎರಡೂ ನಮ್ಮ ಕೈಯಲ್ಲಿದೆ. ಅವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಜೀವನದುದ್ದಕ್ಕೂ ಬರುವ ಏರುಪೇರುಗಳನ್ನು ಸಮಾನವಾಗಿ ಸ್ವೀಕರಿಸಿ, ಸಮದೂಗಿಸಿಕೊಂಡು ನಡೆಯಬೇಕು. ಅಲ್ಲಿ ಕೇವಲ ನಮ್ಮ ಕರ್ತವ್ಯ ಮಾತ್ರ ಕಾಣುವುದಿಲ್ಲ. ಬದಲಾಗಿ ನಮ್ಮ ಸಾಮರ್ಥ್ಯ ಬಲಗೊಳ್ಳುತ್ತದೆ..
36
ಬದುಕುವ ಕಲೆ ಗೊತ್ತಿರುವ ಮಾನವ ಜೀವಿಗೆ ಮಾತ್ರ. ಕಾರಣ ಮಾನವ ಜೀವಿ ಎಲ್ಲ ಪ್ರಾಣಿಗಳಂತೆ ಜೀವಿಸುವುದನ್ನು ಬಿಟ್ಟು ಬದುಕು ಕಂಡುಕೊಳ್ಳಬೇಕು. ಪ್ರಾಣಿಗಳು ಜೀವಿಸುತ್ತವೆ. ಆದರೆ ಅವು ಬದುಕುವುದಿಲ್ಲ. ಜೀವಿಸುವುದು ಎಂದರೆ ನಾಳೆ ಚಿಂತೆ ಇಲ್ಲದೇ ಇವತ್ತಿನಷ್ಟಕ್ಕೆ ಸಾಕು ಎಂದು ಕಾಲ ಕಳೆಯುವುದು ಜೀವಿಸುವುದಾಗಿದೆ.
ಪ್ರಾಣಿ, ಪಕ್ಷಿಗಳು ನಾಳೆಯ ಚಿಂತೆ ಮಾಡುವುದಿಲ್ಲ. ಇವತ್ತಿಗೆ ಸಿಕ್ಕರೆ ಸಾಕು ಎನ್ನುತ್ತವೆ. ಆದರೆ ಮನುಷ್ಯ ಮಾತ್ರ ಭವಿಷ್ಯದ ಬಗ್ಗೆ ಚಿಂತಿಸುತ್ತಾನೆ. ಭವಿಷ್ಯದ ಬಗ್ಗೆ ಚಿಂತಿಸುವ ಕಲೆಯೇ ಬದುಕಾಗಿದೆ. ನಾವೆಲ್ಲರೂ ಸುಖವಾಗಿ ಬದುಕಬೇಕಾದರೆ ಪುಣ್ಯ ಮಾಡಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಜೀವನ ಸುಖಮಯವಾಗಿರುತ್ತದೆ..
37
ಜೀವನದ ಸಾಫಲ್ಯವು ನಾವು ಬದುಕುವುದರಲ್ಲಿಯೇ ಇದೆ.. ಜೀವನದ ದಾರಿಯಲ್ಲಿ ಬಹಳಷ್ಟು ದೂರ ನಡೆದ ಮೇಲೆಯೇ ಬದುಕಿನ ಅರ್ಥ ತಿಳಿಯುತ್ತದೆ.. ಆದರೆ ಆಗಲೇ ತುಂಬಾ ತಡವಾಗಿರುತ್ತದೆ.. ಮನುಷ್ಯನು ತನ್ನ ಬದುಕಿನ ಸದುಪಯೋಗ ಪಡೆಯಬೇಕಾದರೆ ಅವನು ತನ್ನ ಜೀವನದ ಪ್ರತಿಯೊಂದು ನಿಮಿಷವನ್ನೂ ಗಂಟೆಯನ್ನೂ ದಿನವನ್ನೂ ಸದುಪಯೋಗಪಡಿಸಿಕೊಳ್ಳಬೇಕು.. ಈ ನಿಮಿಷ ಗಂಟೆ ಹಾಗೂ ದಿನಗಳು ಮನುಷ್ಯನ ಬದುಕಿನಲ್ಲಿ ಹೆಣೆದುಕೊಂಡಿದೆ.. ಮನುಷ್ಯನು ಆಸೆಯ ಮೇಲೆ ಬದುಕದೇ.. ತನ್ನ ಬದುಕಿನ ಮೇಲೆ ಆಸೆಯನ್ನು ಕಟ್ಟಿಕೊಂಡು ಬಾಳಬೇಕು.. ಬರೀ ಆಸೆಯ ಮೇಲೆ ಬದುಕುವುದು ಜೀವನವೇ ಅಲ್ಲ.. ಜೀವನಕ್ಕೆ ಅರ್ಥ ಇದೆಯೆಂದು ತಿಳಿದು ಒಂದು ಗುರಿಯನ್ನು ಗೊತ್ತುಮಾಡಿಕೊಳ್ಳಬೇಕು.. ಗುರಿಯನ್ನು ಕಣ್ಣೆದುರು ಇರಿಸಿಕೊಂಡವನಿಗೆ ಜೀವನದ ಅರ್ಥವನ್ನು ಹುಡುಕಿಕೊಳ್ಳುವುದು ಸುಲಭವೆನಿಸುತ್ತದೆ.. ಜೀವನವನ್ನು ನಿನ್ನೆ ಬದುಕುವುದಲ್ಲ ಈಗ ಬದುಕಬೇಕು.. ಒಳ್ಳೆಯ ಜೀವನವನ್ನು ಇಂದು ಬದುಕಿದವನ ನಾಳೆಯೂ ಕೂಡ ಒಳ್ಳೆಯಯದಾಗಿರುತ್ತದೆ..!
38
ಕೆಳಗೆ ಎಲೆಗಳು ಉದುರುವಾಗ ಮೇಲಿನ ಎಲೆಗಳು ನೋಡಿ ನಗಬಾರದು..
ಏಕೆಂದರೆ ಉದುರುವ ಮುಂದಿನ ಸರದಿ ಮೇಲೆ ನಗುತ್ತಿರುವ ಎಲೆಯದಾಗಿರುತ್ತದೆ..
ಮುಂದೊಂದು ದಿನ ಇದೆ ಪರಿಸ್ಥಿತಿ ಮನುಷ್ಯನಿಗೂ ಬರಬಹುದು.. ಬಿದ್ದವರನ್ನು ನೋಡಿ ನಗಬೇಡಿ.. ಮುಂದೊಂದು ದಿನ ಅದಕ್ಕಿಂತ ದೊಡ್ಡ ಕಷ್ಟವನ್ನು ಅನುಭವಿಸಬಹುದು..
39
ಭಾವನೆಗಳು ಮನುಷ್ಯನನ್ನು ಬಂಧಿಸುತ್ತವೆಯೋ ಅಥವಾ ಮನುಷ್ಯನೇ ಭಾವನೆಗಳಲ್ಲಿ ಬಂಧಿಯಾಗುತ್ತಾನೋ ಎನ್ನುವುದು ತಿಳಿಯದು. ಅದರೆ ಮನುಷ್ಯನ ಆಚಾರ, ವಿಚಾರ, ಕಾರ್ಯ, ಕೃತಿಗಳು ಭಾವನೆಗಳೊಂದಿಗೆ ಬೆಸೆದುಕೊಂಡಿರುತ್ತವೆ. ಭಾವನೆಗಳಿಲ್ಲದ ವ್ಯಕ್ತಿಯೇ ಇಲ್ಲ ಎಂದರೆ ತಪ್ಪಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಭಾವಲೋಕವಿರುತ್ತದೆ. ಅಲ್ಲಿ ಅವರ ಕಲ್ಪನೆಗಳು, ಕನಸುಗಳು, ಆಸೆಗಳು, ವಿಚಾರಗಳು ಜೀವ ತಳೆಯುತ್ತವೆ. ಒಂದು ವೇಳೆ ಬುದ್ಧಿಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ. ಭಾವನೆ ಹಾಗೂ ಬುದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಪರಸ್ಪರ ಹೊಂದಿಕೊಂಡು ಕೆಲಸ ಮಾಡಿದರೆ ಕಾರ್ಯ ಸುಗಮ; ಮನಸ್ಸಿಗೆ ಹಿತ. ಅದೇ ಅವೆರಡು ವಿರುದ್ಧ ದಿಕ್ಕಾದರೆ ಕೆಲಸಕ್ಕೆ ಅಡ್ಡಿ; ಮನಸ್ಸಿಗೆ ಗೊಂದಲ. ಆಗ ಸುಖ-ಸಂತೋಷಗಳು ನಮ್ಮಿಂದ ದೂರ ಸರಿಯುತ್ತವೆ..
40
ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳದಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು..
41
ಬದುಕು ಎನ್ನುವುದಕ್ಕೆ ಇಂಥದೇ ಅರ್ಥ ಎನ್ನುವ ಯಾವ ನಿರ್ಧಿಷ್ಟ ಉತ್ತರ ಇಲ್ಲ. ಬದುಕಿನಲ್ಲಿ ಎಲ್ಲವು ಅನಿವಾರ್ಯಗಳೇ! ಯಾವುದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಎದೆಗಾರಿಕೆ ತೋರಿದಲ್ಲಿ ಬದುಕು ಸಹ್ಯವೆನಿಸುತ್ತದೆ.ನಾವು ಹೇಗೆ ಭಾವಿಸುತ್ತೇವೋ ಹಾಗೆ ನಮಗೆ ಬದುಕು ಕಾಣುತ್ತದೆ. ಕಣ್ಣಿಗೆ ಬಣ್ಣದ ಕನ್ನಡಕ ಹಾಕಿಕೊಂಡಂತೆ. ಯಾವ ಬಣ್ಣದ್ದು ಎಂಬುವುದರ ಮೇಲೆ ಬದುಕಿನ ಬಣ್ಣ ನಿರ್ಧಾರವಾಗುತ್ತದೆ. ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಬದುಕು ತೋರುತ್ತದೆ. ಬದುಕಿನ ಅರ್ಥ ಹುಡುಕುವ ಬದಲಿಗೆ, ಬದುಕಿನಲ್ಲಿ ಹೇಗಿರಬೇಕೆನ್ನುವ ಬಗ್ಗೆ ಚಿಂತಿಸಿ ಬಾಳುವೆ ಮಾಡಿದರೆ ಹೆಚ್ಚು ಉಪಯುಕ್ತ. ಕನ್ನಡಿಯನ್ನು ಒರಸಿ ಶುಚಿಮಾಡಿದಂತೆ, ಮನ- ಮನೆಯ ಒಳಗೂ ಹೊರಗು ನಿತ್ಯ ಗುಡಿಸಿ ಕಸ ತೆಗೆದರೆ, ಬಾಳುವೆ ಮಾಡುವ ಬದುಕು ಹೊಸತಾಗಿ ಕಾಣಲು ಸಹಕಾರಿ. ಆಗ ಬದುಕು ಅಮೂಲ್ಯ ಎನಿಸಬಹುದು, ಸಾರ್ಥಕ ಎನಿಸಬಹುದು, ಶಾಂತೆನಿಸಬಹುದು..
42
ಈ ಜಗತ್ತಿನಲ್ಲಿ ಅಡಗಿದ ಪ್ರಕೃತಿ ವಿಸ್ಮಯಗಳನ್ನು ಅದ್ಯಯನ ಮಾಡಿ ಅವುಗಳ ನೈಜ ಸೃಷ್ಟಿಕರ್ತನ ಬಗ್ಗೆ ತಿಳಿದು ಕೊಂಡು ಆ ಅದ್ಭುತ ಶಕ್ತಿಯಾದ ಒಡೆಯನ ಮುಂದೆ ಶರಣಾಗುವವನೇ ಸತ್ಯ ವಿಶ್ವಾಸಿಯಾಗಿದ್ದಾನೆ..
ಏಕದೈವಾರಾದನೆಯ ತತ್ವ ಈ ಮೂಲದಿಂದ ಹುಟ್ಟು ಪಡೆದಿದ್ದು ಇದು ಅತ್ಯಂತ ಗಟ್ಟಿ ಬುನಾದಿ ಹೊಂದಿದ ಒಂದು ಆಶಯ ಸಿದ್ದಾಂತವಾಗಿದೆ. ಇದರ ಬೇರು ಆಳವಾಗಿ ಇಳಿದಿದ್ದು ಕೊಂಬೆ ರೆಂಬೆಗಲು ಆಕಾಶದೆತ್ತರಕ್ಕೆ ಬೆಳೆದು ನಿಂತಿದೆ. ಯಾರು ಏನೇ ತಂತ್ರಗಳನ್ನು ಹಣೆದರೂ ಇದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲದ ಮಾತು..
43
ಈ ಬದುಕನ್ನು ಒಂದು ರೀತಿಯ ರಹಸ್ಯ, ವಿಚಿತ್ರ, ಸುಂದರ, ಅಸಹನೀಯ, ನಿರೀಕ್ಷೆ, ಇತ್ಯಾದಿಯಾಗಿ ಹಲವಾರು ವಿಚಾರವಂತರು ತಮ್ಮ ವಿಚಾರಗಳನ್ನು ಧಾಖಲಿಸಿದ್ದಾರೆ. ಪ್ರತಿಯೊಬ್ಬರೂ ಬದುಕನ್ನ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥಮಾಡಿಕೊಂಡು ಬದುಕುತ್ತಿದ್ದಾರೆ. ಸುಖ, ದುಃಖ, ನೋವು, ನಲಿವು, ಪ್ರೀತಿ, ದ್ವೇಷ, ರೋಗ,ಬಡತನ, ಸಿರಿತನ, ಇತ್ಯಾದಿ ಮಜಲುಗಳ ಮಧ್ಯೆ ಬದುಕು ಸವೆಯುತ್ತಿದೆ. ಬದುಕು ಕೆಲವರಿಗೆ ಅರ್ಥಪೂರ್ಣವೆನಿಸಿದರೆ ಕೆಲವರಿಗೆ ಅರ್ಥಹೀನ. ಕೆಲವರಿಗೆ ಸುಂದರ ಮತ್ತೆ ಕೆಲವರಿಗೆ ನಿರಾಶೆ. "ಏಕೆ ಹೀಗೆ? ಹಾಗಾದರೆ ಬದುಕು ಎಂದರೆ ನಿಜವಾದ ಅರ್ಥದಲ್ಲಿ ಏನು?" ಎಂಬ ಪ್ರಶ್ನೆ ಯುವಕನೊಬ್ಬನ ಮನಸ್ಸಿನಲ್ಲಿ ಹುಟ್ಟಿತು. ಸಾಕಷ್ಟು ಯೋಚಿಸಿದ,ಸರಿಯಾದ ಉತ್ತರ ಸಿಗಲಿಲ್ಲ..
44
ಜ್ಞಾನ ಎಂಬುದು ಸಿಗುವುದಲ್ಲ,,!
ಅದು ಸಾಧನೆಯ ಕೊನೆಗೆ ಬರುವ ಅಮೃತದಂತೆ,,!
ಸಾಧನೆ ಸುಮ್ಮನೆ ಆಗುವುದಲ್ಲ,,!
ಅದು ಏಳು ಬೀಳುಗಳ ಕಲ್ಲು ಮುಳ್ಳುಗಳ ರಹದಾರಿ,,!
ಆ ದಾರಿಯಲ್ಲಿ ನಡೆಯಲು ಕಾಲುಗಳು ಗಟ್ಟಿ ಇದ್ದರೆ ಸಾಲದು,,!
ಸಾಗುವ ಮನಸ್ಸಿರಬೇಕು,,!
ಮನಸ್ಸು ಸುಮ್ಮನೆ ಮಾಡುವುದಿಲ್ಲ,,!
ಅದಕ್ಕೆ ಒಳಗಿನ ಕಿಚ್ಚು ಉರಿಯಬೇಕು,,!
ಕಿಚ್ಚು ಸುಮ್ಮನೆ ಉರಿಯುವುದಿಲ್ಲ,,!
ನಮ್ಮನ್ನು ಕೀಳುಮಟ್ಟದಲ್ಲಿ ಅಳೆಯುವ ವ್ಯಕ್ತಿಗಳು ನಮ್ಮ ಮುಂದೆ ಯಾವಾಗಲೂ ಬರುತ್ತಿರಬೇಕು.!
45
ನಿಮಗೆ ಯಾವಾಗಲೂ ಮುಖ್ಯವಾದ ಜನರನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವರು ಯಾವಾಗಲೂ ಅಲ್ಲಿಯೇ ಇರುತ್ತಾರೆ ಎಂದು ನೀವು ಭಾವಿಸುತ್ತೀರಿ. ಒಂದು ಬೆಳಿಗ್ಗೆ ನೀವು ಎದ್ದೇಳಬಹುದು ಮತ್ತು ನಕ್ಷತ್ರಗಳನ್ನು ಎಣಿಸುವ ಸಂದರ್ಭದಲ್ಲಿ ಚಂದ್ರನನ್ನು ಕಳೆದುಕೊಂಡಿರುವಿರಿ ಎಂದು ತಿಳಿದುಕೊಳ್ಳಬಹುದು. ನಿಜವಾದ ಪ್ರೀತಿಯು ಬೇರ್ಪಡಿಸಲಾಗದ ವಿಷಯವಲ್ಲ; ಅದು ಇಬ್ಬರು ಪರಸ್ಪರ ಬೇರ್ಪಟ್ಟಾಗಲೂ ಸಹ ಒಬ್ಬರಿಗೊಬ್ಬರು ನಿಜಾವಾಗಿರುತ್ತದೆ..
ನಿಜವಾದ ಸ್ನೇಹ ಮತ್ತು ನಿಜವಾದ ಪ್ರೀತಿ ದೂರ ಮತ್ತು ಸಮಯದ ಪರೀಕ್ಷೆಗಳನ್ನು ಉಳಿಸಿಕೊಳ್ಳುತ್ತದೆ. ಯಾರಾದರೂ ತಮ್ಮ ಸಮಯವನ್ನು ನಿಮಗೆ ಕೊಟ್ಟಾಗ ಅವರು ತಮ್ಮ ಜೀವನದ ಒಂದು ಭಾಗವನ್ನು ಕೊಡುತ್ತಿದ್ದಾರೆ, ಅವರು ಎಂದಿಗೂ ಹಿಂದೆ ಪಡೆಯುದಿಲ್ಲ. ನೀವು ಸ್ವೀಕರಿಸಬಹುದಾದ ಅತ್ಯಂತ ಅಮೂಲ್ಯ ಉಡುಗೊರೆಗಳಲ್ಲಿ ಇದು ಒಂದಾಗಿದೆ. ಅದನ್ನು ವ್ಯರ್ಥ ಮಾಡಬೇಡಿ. ಒಳ್ಳೆಯ ಸಂಬಂಧಗಳು ನೀವು ಹಂಚಿಕೊಳ್ಳುವ ಉತ್ತಮ ಸಮಯಗಳಲ್ಲ ಅವರು ನೀವು ಒಟ್ಟಿಗೇ ಹೋಗುತ್ತಿರುವ ಅಡೆತಡೆಗಳ ಬಗ್ಗೆಯ ಅಂಶವಾಗಿರುತ್ತದೆ..
46
ಜೀವನ ಎಂಬುದು ಮೂರಕ್ಷರದ ಪದ. ಆ ಪದಗಳೇ ನಮ್ಮನ್ನು ಪೂರಕಗೊಳ್ಳುವಂತೆ ಮಾಡುವುದು. ಬದುಕಿನುದ್ದಕ್ಕೂ ಅಸಾಧ್ಯವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ. ಆದರೆ ಅದು ತೀರಾ ಅತಿರೇಕಕ್ಕೆ ಹೋಗಿ ಜೀವನವನ್ನು ಹಾಳು ಮಾಡುವಂತಿರಬಾರದು..
ಕೆಲವೊಮ್ಮೆ ತೀರಾ ಕಲ್ಪನೆಗೆ ಒಳಪಟ್ಟು, ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ, ಅದೇ ಪ್ರಪಂಚ ಜೀವನದುದ್ದಕ್ಕೂ ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬುದನ್ನು ನಮಗೆ ತಿಳಿಸುತ್ತದೆ. ಆದರೆ ಇವೆಲ್ಲ ನಮ್ಮ ಬುದ್ಧಿಗೆ ಗೋಚರವಾಗುವುದು ಪ್ರಪಂಚದ ಒಳಿತು ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ..
47
ಜೀವನವು ಮೂಲಭೂತವಾಗಿ ಅಂತ್ಯವಿಲ್ಲದ ಸಮಸ್ಯೆಗಳ ಸರಣಿಯಾಗಿದೆ. ಒಂದು ಸಮಸ್ಯೆಗೆ ಪರಿಹಾರವು ಮುಂದಿನ ಒಂದು ರಚನೆಯಾಗಿದೆ. ಸಮಸ್ಯೆಗಳಿಲ್ಲದೆ ಜೀವನವನ್ನು ನಿರೀಕ್ಷಿಸಬೇಡಿ. ಅಂತಹ ವಿಷಯಗಳಿಲ್ಲ. ಬದಲಾಗಿ, ಒಳ್ಳೆಯ ಸಮಸ್ಯೆಗಳಿಂದ ತುಂಬಿರುವ ಜೀವನವನ್ನು ನಿರೀಕ್ಷಿಸಬಹುದು..
48
ಯಾರನ್ನಾದರೂ ಮರೆಯಬೇಕೆಂದರೆ ಖಂಡಿತ ಅವರನ್ನ ದ್ವೇಷಿಸಬಾರದು. ದ್ವೇಷ,ಅಸೂಯೆ,ಅಸಹನೆ, ಎಲ್ಲಕ್ಕಿಂತ ನಿರ್ಲಿಪ್ತವಾಗಬೇಕಷ್ಟೇ. ದಾರಿಹೋಕರನ್ನು ಯಾರೂ ನೆನಪಿಡುವುದಿಲ್ಲ. ಹಾಗೆ ದ್ವೇಷಿಸುವುದು ಇಲ್ಲ. ಎದುರು ಬದುರಾದರೆ ಸಹಜ ನಗೆ ನಕ್ಕು ನಡೆಯುವುದಷ್ಟೇ..
49
ಇರುವುದೆಲ್ಲವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ, ಕಳಕೊಂಡ ಎಲ್ಲವನ್ನೂ ಪಡೆಯಲೂ ಸಾಧ್ಯವಿಲ್ಲ, ಪಡೆದುಕೊಂಡ ಎಲ್ಲವನ್ನೂ ಕೊಡಲೂ ಸಾಧ್ಯವಿಲ್ಲ, ಅಂದುಕೊಂಡದ್ದೆಲ್ಲವನ್ನು ಮಾಡಲೂ ಸಾಧ್ಯವಿಲ್ಲ, ಸಾಧಿಸಿದ್ದೆಲ್ಲವನ್ನು ತೋರಿಸಲೂ ಸಾಧ್ಯವಿಲ್ಲ, ಈ ಎಲ್ಲಾ ಸಾಧ್ಯವಿಲ್ಲಗಳ ನಡುವೆ ಸಾಧ್ಯವಿರುವುದು ಕೆಲವು, ಅದೇ ಪ್ರೀತಿ ವಿಶ್ವಾಸ ಸ್ನೇಹ ನಂಬಿಕೆ ಸಂಬಂಧ, ಇದನ್ನು ಉಳಿಸಿಕೊಂಡು ಹೋಗುವುದೇ ಜೀವನ..
50
ಕಷ್ಟ ಹಾಗೂ ಸುಖಗಳು ನಿನಗೊಂದು ಪರೀಕ್ಷೆಯಾಗಿದೆ..
ಅಲ್ಲಾಹನು ನಿನಗೆ ವಿಧಿಸಿದವುಗಳೆಲ್ಲವೂ ಒಳಿತು ಅಥವಾ ಕೆಡುಕು..
ಯಾವುದೇ ಆದರೂ ನಿನಗೆ ಒಳಿತಾಗಿದೆ..
ನಿನ್ನೊಂದಿಗೆ ಸಂಭವಿಸಿರುವುದು ತಪ್ಪಿಹೋಗಲು (ಸಂಭವಿಸದಿರಲು) ಸಾಧ್ಯವಿರಲಿಲ್ಲ, ಮತ್ತು ನಿನ್ನಿಂದ ತಪ್ಪಿ ಹೋದದ್ದು ನಿನಗೆ ಪಡೆಯಲೂ ಸಾಧ್ಯವಿರಲಿಲ್ಲ..
ಸಬ್ರ್ (ಸಹನೆ) ನಿರ್ಬಂಧವಾಗಿದೆ..
ಅಲ್ಲಾಹನ ವಿಧಿಯೊಂದಿಗೆ ತಾಳ್ಮೆಯನ್ನು ವಹಿಸಿದವರಿಗೆ ಮಾತ್ರ ಪ್ರತಿಫಲ ಲಭಿಸುವುದು..
ಗಾಬರಿಗೊಳ್ಳುವಿಕೆ ಮತ್ತು ಅಸಹನೆಯು ಅಲ್ಲಾಹನ ವಿಧಿಯನ್ನು ತಡೆಯಲಾರದು.
ಶಕ್ವಾ (ಆಕ್ಷೇಪಣೆ) ಸಬ್ರ್ (ತಾಳ್ಮೆ)ಗೆ ವಿರುದ್ದವಾಗಿದೆ.
ನಿನ್ನನ್ನು ವಿಪತ್ತಿನಿಂದ ರಕ್ಷಿಸಬಲ್ಲವನು ಮತ್ತು ನಿನ್ನ ಕಷ್ಟಗಳನ್ನು ದೂರೀಕರಿಸಬಲ್ಲವನು ಅಲ್ಲಾಹನು ಮಾತ್ರ..
51
ತೆಂಗಿನ ಮರ ಕಲ್ಪವೃಕ್ಷವಾದರೂ ಗಂಧದ ಮರಕ್ಕೆ ಇರುವ ಬೆಲೆ ಇಲ್ಲ..
ಹಣ ಅಧಿಕಾರ ಇರೋರಿಗೆ ಸಿಗುವ ಗೌರವ ಒಳ್ಳೆ ವ್ಯಕ್ತಿತ್ವ ಇರೋರಿಗೆ ಸಿಗಲ್ಲ..
ಸಮಯ, ಅಧಿಕಾರ, ಹಣ ಮತ್ತು ಶರೀರ. ನಮಗೆ ಜೀವನದ ಎಲ್ಲಾ ಸಮಯಗಳಲ್ಲೂ ಸಹಕರಿಸುವುದಿಲ್ಲ..
ಆದರೆ ಒಳ್ಳೆಯ ನಡತೆ, ಒಳ್ಳೆಯ ತಿಳುವಳಿಕೆ, ಒಳ್ಳೆಯ ಮನಸ್ಸುಗಳು. ನಮಗೆ ಯಾವಾಗಲೂ ಸಹಕರಿಸುತ್ತವೆ..
52
ಬದುಕಿನಲ್ಲಿ ನಡೆಯುವ ಘಟನೆ, ಯಾರದ್ದೋ ಆಗಮನ ನಮ್ಮ ಬದುಕಿನ ಶೈಲಿಯನ್ನೆ ಬದಲಿಸಿಬಿಡುತ್ತದೆ. ಅದು ಸಾಧನೆಯ ಶಿಖರವನ್ನೇರುವ ಪ್ರೇರಣೆಯಾಗಬಹುದು ಅಥವಾ ಬದುಕಿನ ಅಂತ್ಯಕ್ಕೆ ನಾಂದಿಯೂ ಆಗಬಹುದು..
53
ಯಾವ ವ್ಯಕ್ತಿಗಳು ಸ್ಪಷ್ಟವಾಗಿ, ಸ್ವಚ್ಛವಾಗಿ, ನೇರವಾಗಿ ಮಾತನಾಡುತ್ತಾರೊ ಅವರ ಮಾತುಗಳು ತೀವ್ರವಾಗಿ, ಹರಿತವಾಗಿ ಅಥವಾ ಕಠೋರವಾಗಿಯೂ ಇರಬಹುದು. ಆದರೆ ಅವರ ಮಾತಿನಲ್ಲಿ ಅಥವಾ ಮನಸ್ಸಿನಲ್ಲಿ ಯಾವುದೇ ಮೋಸವಿರುವುದಿಲ್ಲ..
54
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ.. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಸೃಷ್ಟಿಕರ್ತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಸೃಷ್ಟಿಕರ್ತನನ್ನು ಹೇಗೆ ತಾನೇ ನಂಬಲು ಸಾಧ್ಯ..?
55
ಕೈಯಲ್ಲಿರೋ ರೇಖೆಗಳನ್ನೋ ಅಥವಾ ಹಣೆಯಲ್ಲಿ ಕಾಣದ ಹಣೆಬರಹವನ್ನೋ ನಂಬಿ ಕುರುಡು ಜೀವನ ನಡೆಸೋದಕ್ಕಿಂತ,
ನಮ್ಮ ತಲೆಯಲ್ಲಿರೊ ಜ್ಞಾನವನ್ನು ಮತ್ತು ಮನಸ್ಸಲ್ಲಿರೋ ಆತ್ಮವಿಶ್ವಾಸ ನಂಬಿ ಅರ್ಥಪೂರ್ಣ ಜೀವನ ನಡೆಸಿದರೆ ಯಾವುದು ಅಸಾಧ್ಯವಲ್ಲ..
56
ಯಾವ ವ್ಯಕ್ತಿಗಳು ಸ್ಪಷ್ಟವಾಗಿ, ಸ್ವಚ್ಛವಾಗಿ, ನೇರವಾಗಿ ಮಾತನಾಡುತ್ತಾರೊ ಅವರ ಮಾತುಗಳು ತೀವ್ರವಾಗಿ, ಹರಿತವಾಗಿ ಅಥವಾ ಕಠೋರವಾಗಿಯೂ ಇರಬಹುದು..!
ಆದರೆ ಅವರ ಮಾತಿನಲ್ಲಿ ಅಥವಾ ಮನಸ್ಸಿನಲ್ಲಿ ಯಾವುದೇ ಮೋಸವಿರುವುದಿಲ್ಲ..!
57
ಮಗನ ಮದುವೆಗೆ ಮುಂಚೆ ತಂದೆ-ತಾಯಿ ದೈಹಿಕವಾಗಿ ಸಮರ್ಥರಿದ್ದು ಮಕ್ಕಳಿಗೆ ಭಾರ ಅನಿಸುವುದಿಲ್ಲ.
ಯಾವಾಗ ವಯಸ್ಸಾಗಿ ಭಾರವಾಗುತ್ತಾರೋ ಆಗ ಸಮಸ್ಯೆ ಪ್ರಾರಂಭ. ಮಕ್ಕಳಿಗೆ ಗೊತ್ತಿರಬೇಕು ನಾವೂ ಒಂದುದಿನ ಹೀಗೆಯೇ ವಯಸ್ಸಿಗೆ ಜಾರುತ್ತೇವೆಂದು.
ಮನೆಗೆ ಬಂದ ಹೆಂಡತಿಗೇನು ಗೊತ್ತು ಬಾಲ್ಯದಲ್ಲಿ ಅವರು ಮಕ್ಕಳ ಹೊತ್ತು ಹೆತ್ತು ಕಷ್ಟಪಟ್ಟು ಬೆಳೆಸಿದ್ದು ಎಂದು.
ಈ ವಿಚಾರದಲ್ಲಿ ಮೊದಲು ನಾವು ಗಂಡಸರಾಗಬೇಕು..
58
ಬದುಕು ಕರೆದುಕೊಂಡು ಹೋದ ಕಡೆ ನೀವು ಹೋಗದೆ, ನೀವು ಹೋದೆಡೆ ಬದುಕನ್ನು ಕರೆದುಕೊಂಡು ಹೋಗುವುದು ಜಾಣತನ.ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ..
59
ನಮಗೆ ನಮ್ಮವರ ಸ್ವಭಾವ
ನಡವಳಿಕೆಯ ಬಗ್ಗೆ ಅರಿವಿದ್ದರೂ
ಅವರ ಎಲ್ಲಾ ತಪ್ಪು ಕೆಲಸಗಳಿಗೆ
ಅವರಿಂದಾಗುವ ಪ್ರಮಾದಗಳಿಗೆ
ಅವರ ಜೊತೆಗಿರುವವರೇ ಕಾರಣ
ಎಂದು ದೂಷಿಸಿ ದೂರುತ್ತೇವೆ..
60
ಕೆಲವರು ಹಣದಿಂದಲೇ ಎಲ್ಲವನ್ನು ಕೊಂಡುಕೊಳ್ಳಬಹುದೆಂಬ ಅಹಂಕಾರದ ವಿಭಾಗದವರಿರುತ್ತಾರೆ.. ತನಗೆ ಯಾವುದರ ಅಗತ್ಯವಿಲ್ಲ ಕುಟುಂಬದವರ ಸಹವಾಸ ಬೇಕಿಲ್ಲ.. ನಾನು ಕುಟುಂಬದಲ್ಲಿ ಯಾರೊಂದಿಗೂ ಬೆರೆಯುವುದಿಲ್ಲ.. ನನ್ನ ಬಳಿ ಹಣವಿದೆ ನಾನು ಏನು ಬೇಕಾದರೂ ಕೊಂಡು ಕೊಳ್ಳ ಬಲ್ಲೆ ಎನ್ನುವ ದರ್ಪ.. ಇವನ ಈ ಅಹಂಕಾರದಿಂದ ತನ್ನವರನ್ನೆ ದೂರಗೊಳಿಸುತ್ತಾ ಬರುತ್ತಾನೆ.. ಕೊನೆಗೆ ಇವನಿಗೆ ಇವರೆಲ್ಲರ ಅಗತ್ಯ ನೆನಪಾಗುವುದು ಅವನು ರೋಗ ಪೀಡಿತನಾಗಿ ಹಾಸಿಗೆ ಹಿಡಿದಾಗ. ಆದರೆ ಇವನ ವರ್ತನೆಯಿಂದ ಬೇಸತ್ತ ಯಾರೊಬ್ಬರೂ ಇವನ ಸ್ಥಿತಿಯನ್ನು ನೋಡಿ ಬೇಸರಿಸುವುದಿಲ್ಲ.. ಒಬ್ಬ ಮನುಷ್ಯನಲ್ಲಿ ಒಂದು ಪುಟ್ಟ ಅಣುಮಣಿ ತೂಕದಷ್ಟು ಅಹಂಕಾರವಿದ್ದರೂ ಅವನು ಸ್ವರ್ಗ ಪ್ರವೇಶಿಸಲಾರ ಎಂದು ಹದೀಸ್ ಸಾರುತ್ತದೆ..
61
ನಮ್ಮ ಮನಸ್ಸಿನ ನೆಮ್ಮದಿಯನ್ನು ನಾವೇ ತಂದುಕೊಳ್ಳಬೇಕೇ ಹೊರತು ಹಣ ಕೊಟ್ಟು ಕೊಂಡುಕೊಳ್ಳಕ್ಕಾಗಲ್ಲ ಅನ್ನೋದು ನಿಜವಾದರೂ ಕೂಡಾ ದುಡ್ಡಿಂದ ಒಂಥರಾ ನೆಮ್ಮದಿ ಸಿಗೋದೂ ನಿಜ..!
NOOR-UL-FALAH ISLAMIC STORE
Comments
Post a Comment