ದೂರ ದಿಗಂತದಲ್ಲಿ ಬಾಡಿದ ಕನಸುಗಳು

ದೂರ ದಿಗಂತದಲ್ಲಿ ಬಾಡಿದ ಕನಸುಗಳು



ಮೇಲಂಗಡಿಯ ಆಮದಾಕ ಗಲ್ಫ್ ಜೀವನವನ್ನು ಕೊನೆಗೊಳಿಸಿ ವರ್ಷ ಹಲವಾದವು. ಊರಿಗೆ ಬಂದ ನಂತರ ಒಂದೇ ಒಂದು ದಿವಸವೂ ಗಲ್ಫಿನ ಕಥೆಗಳನ್ನು ಹೇಳದೆ ಅವರು ನೆಮ್ಮದಿಯಾಗಿ ನಿದ್ರಿಸಿಯೇ ಇಲ್ಲ ಎನ್ನಬಹುದು. ಗಲ್ಫ್ ಬದುಕಿನ ಬಗ್ಗೆ ಹೇಳಿಕೊಳ್ಳುವುದೆಂದರೆ ಆಮದಾಕರಿಗೆ ಅದೇನೋ ನೆಮ್ಮದಿ. ತನ್ನ ಕಥೆಗಳನ್ನು ಕೇಳಲು ಯಾರೂ ಸಿಗದಿದ್ದರೆ ಹೆಂಡತಿಯನ್ನು ಮುಂದೆ ಕೂರಿಸಿಯಾದರೂ ತೃಪ್ತಿಯಾಗುವಂತೆ ಕೊರೆಯುತ್ತಿದ್ದರು. ಹೇಳಿದ ಕಥೆಗಳನ್ನೇ ಮತ್ತೆ ಮತ್ತೆ ಹೇಳಿ ಹೆಂಡತಿಯನ್ನು ಪೀಡಿಸುತ್ತಿದ್ದರು. ಅವರ ಕಥೆಗಳನ್ನು ಕೇಳಿ ಕೇಳಿ ಸಾಕಾಗಿ ಊರಿನವರು ಆಮದಾಕ ಎಂದರೆ ತಲೆತಪ್ಪಿಸಿಕೊಳ್ಳತೊಡಗಿದರು.
      ಹೀಗಿರುವಾಗ ಒಂದು ದಿನ ನಾನು ಆಮದಾಕನ ಮನೆಯ ಮುಂದೆ ಹೋಗುತ್ತಿದ್ದವನು "ಪಾಪ ಪ್ರಾಯದವರೆಲ್ಲವೇ? ಒಮ್ಮೆ ಮಾತಾಡಿಸಿಕೊಂಡು ಬರೋಣ" ಎಂದು ಅವರ ಮನೆಯೊಳಗೆ ಹೋದೆ. ಆಮದಾಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೆಂಡತಿಗೆ ಚಹಾ ಮಾಡುವಂತೆ ಆರ್ಡರ್ ಮಾಡಿ ಆಮದಾಕ ಮಾತನಾಡಲು ಶುರು ಮಾಡಿದರು. ಪಾಪ ಅವರ ಹೆಂಡತಿಗೆ ಇಂದಾದರೂ ನೆಮ್ಮದಿಯಿಂದ ನಿದ್ರಿಸಬಹುದಲ್ಲಾ ಎಂದು ಅನಿಸಿರಬೇಕು. ಆದ್ದರಿಂದ ಉತ್ಸಾಹದಲ್ಲೇ ಚಹಾ ಮಾಡಲು ಅಡುಗೆಮನೆಗೆ ಹೋದರು. ಆಮದಾಕರ ಕಥೆ ಹೀಗಿತ್ತು....
         1970 ರಲ್ಲಿ ಯಾವುದೋ ಒಂದು ಬೇಸಿಗೆಯಲ್ಲಿ ಆಮದಾಕ ಮುಂಬೈ ಬಸ್ಸು ಹತ್ತಿದ್ದರು . ಊರಿನವರಾದ ಹಸನ್ ಹಾಜಿಯವರು ಹಡಗಿನಲ್ಲಿ ಜನರನ್ನು ಕೆಲಸದ ನಿಮಿತ್ತ ಕಳುಹಿಸುತ್ತಿದ್ದರು. ಅಂದು ದುಬೈ ಎಲ್ಲಾ ಯುವಕರ ಸ್ವಪ್ನನಗರಿಯಾಗಿತ್ತು. ಆಮದಾಕರಿಗೆ ಆ ಸಮಯ ಪ್ರಾಯವಾಗಿತ್ತು . . ಇತ್ತೀಚೆಗೆ ತಾನೇ ಮದುವೆಯಾಗಿದ್ದ ಆಮದಾಕ ದುಬೈಯಲ್ಲಿ ಕೆಲಸ ಎಂದು ಕೇಳಿದ ತಕ್ಷಣ ಎಲ್ಲವನ್ನೂ ಆ ಕ್ಷಣಾರ್ಧದಲ್ಲಿ ಮರೆತ ಹೆಂಡತಿ "ನೀವೂ ಕೂಡ ದುಬೈಗೆ ಹೋಗಿ ಬನ್ನಿ" ಎಂದು ಹೇಳುತ್ತಾ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಕೊಟ್ಟಳು. ಆಮದಾಕ ಹೆಂಡತಿಯ ಕೊಡುಗೆಯನ್ನು ಸ್ವೀಕರಿಸಿ ಮುಂಬೈಯತ್ತ  ಉಗಿಬಂಡಿ ಏರಿಕೊಂಡು ಹೋಗುವ ಮೊದಲು ತಂದೆತಾಯಿಯನ್ನು ಆಲಂಗಿಸಿ ಕಣ್ಣೀರು ಸುರಿಸಿದರು. ಒಡಹುಟ್ಟಿದವರ ಕಣ್ಣುಗಳು  ತುಂಬಿದವು. ವಿರಹವೇದನೆಯಲ್ಲಿ ಹೆಂಡತಿ ತೇವಗೊಂಡ ಕಣ್ಣುಗಳಲ್ಲಿ ಗಂಡನನ್ನು ಬೀಳ್ಕೊಟ್ಟರು.
     ಆಮದಾಕ ಮುಂದುವರೆಸಿದರು....

ಮುಂಬೈಗೆ ತಲುಪಿದಾಗ ನನ್ನಂತೆಯೇ ಹಲವರು ಹಡಗಿಗಾಗಿ ಕಾಯುತ್ತಿದ್ದರು. ತಾತ್ಕಾಲಿಕವಾಗಿ ಹಾಜರರ ಹೋಟೆಲಿನಲ್ಲಿ ಮಲಗಲು ಕೊಂಚ ಸ್ಥಳಾವಕಾಶ ದೊರೆಯಿತು. ಒಣಮೀನು, ತೆಂಗಿನಕಾಯಿಯ ಚಟ್ನಿಯ ಜೊತೆ ಗಂಜಿ ಉಂಡು ಆ ರಾತ್ರಿ ಕಳೆದೆವು. ಆದರೆ , ಬೆಳಿಗ್ಗೆ ಟಾಯ್ಲೆಟ್ ಗೆ ಹೋಗುವುದು ಮಾತ್ರ ಕಷ್ಟವಾಯಿತು. ಒಂದು ಚೊಂಬು ಹಿಡಿದು ತಮ್ಮ ಸರದಿ ಬರುವವರೆಗೂ ಕ್ಯೂ ನಿಲ್ಲಬೇಕಿತ್ತು. ನನಗೇನೂ ಅವಸರವಿರಲಿಲ್ಲ. ಆದರೆ ಅರ್ಜೆಂಟ್ ಆದವರ ಪಾಡಂತೂ ಹೇಳತೀರದು. ಆ ಉದ್ದದ ಕ್ಯೂನಲ್ಲಿ  ಕಾದು ಕಾದು ಕಾಲೆಲ್ಲಾ ನೋಯಲು ತೊಡಗಿ ಅಂತೂ ಕೊನೆಗೊಮ್ಮೆ ಒಳಗೆ ಹೋದೆವಲ್ಲಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ  ಹೊರಗಿನಿಂದ ಬಾಗಿಲು ಬಡಿಯಲು ತೊಡಗುತ್ತಿದ್ದರು. ಮತ್ತೆ ಅಲ್ಲಿ ನಿಲ್ಲಲು ಸಾಧ್ಯವೇ ?
       ಅದೇನೇ ಆಗಲಿ, ಎರಡು ದಿವಸದ ನಂತರ ನಾವು ಸಂಚರಿಸುವ ಹಡಗು ತಲುಪಲಿದೆ ಎಂಬ ಸುದ್ದಿ ಬಂತು. ಆದರೆ ನಾನೆಂದೂ ಅದನ್ನು ನೋಡಿರಲಿಲ್ಲ.  ಹಡಗು ಯಾಕೆ? ಸಮುದ್ರವನ್ನೇ ನಾನು ನೊಡಿರಲಿಲ್ಲ. ಬಾಲ್ಯದಲ್ಲಿ ಅಪ್ಪ ಉಳ್ಳಾಲಕ್ಕೆ ಕರೆದೊಯ್ದು ದರ್ಗಾ ಝಿಯಾರತ್ ಮಾಡಿ ನಂತರ ಸಮುದ್ರ ತೋರಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೇ ಆ ಕಾಲಘಟ್ಟದಲ್ಲಿ ಅಲ್ಲಿಯವರೆಗೂ ಹೋಗಲು ಹಣದ ಕೊರತೆಯಿದ್ದ ಕಾರಣ ಹೋಗುವ ಅವಕಾಶ ವಿಳಂಬವಾಗುತ್ತಲೇ ಇತ್ತು .
        ಎರಡು ದಿವಸ ಕಳೆಯಿತು . ಸರಕುಗಳನ್ನು ಸಾಗಿಸುವ ಹಡಗಾಗಿತ್ತು ಸಮುದ್ರದ ತೀರಕ್ಕೆ  ಬಂದು ಸೇರಿದ್ದು . ಸರಕುಗಳನ್ನು ಹೇರಿಕೊಂಡ ಮೇಲೆ ಹತ್ತೊಂಬತ್ತು ಮಂದಿಗೆ ಹೇಗೋ ಕಷ್ಟಪಟ್ಟು ಹೋಗಬಹುದಿತ್ತು. ಆದರೆ , ನಮ್ಮ ಜೊತೆಗೆ ಅದರ ಎರಡು ಪಟ್ಟು ಜನರಿದ್ದರು. ಅಂತೂ ಹಡಗಿನ ಮೂಲಕ ಪ್ರಯಾಣ ಆರಂಭವಾಯಿತು .
          ನೀಲ ದಿಗಂತದ ಕೆಳಗೆ ವಿಸ್ತಾರವಾಗಿ ಹರಡಿದ್ದ ಸಮುದ್ರದ ನೀರನ್ನು ಸೀಳಿಕೊಂಡು ಹಡಗು ದುಬೈಯತ್ತ ಹೊರಟಿತು.

ಹಡಗಿನೊಳಗೆ ಅಷ್ಟೊಂದು ಜನರಿದ್ದರೂ ಯಾಕೋ ಒಂಥರ ಏಕಾಂತ ಕಾಡುತ್ತಿತ್ತು. ಮೊದ ಮೊದಲು ಅತ್ಯಂತ ಕುತೂಹಲಕಾರಿಯಾಗಿ ಕಂಡಿದ್ದ ಸಮುದ್ರವೂ ಬೇಸರ ಹುಟ್ಟಿಸತೊಡಗಿ ಊರಿನ ನೆನಪು ಕಾಡತೊಡಗಿತು. ಜೊತೆಗೆ ಅಪ್ಪ, ಅಮ್ಮ ನೆನಪಾದರು. ಹೆಂಡತಿಯೂ, ಅಂಬೆಗಾಲಿಡುತ್ತಿದ್ದ ಮಗಳು ಮನದಲ್ಲಿ ದುಃಖವನ್ನು ಇಮ್ಮಡಿಗೊಡಿಸುತ್ತಿತ್ತು.  ಆದರೆ, ಮುಂದಿದ್ದ ದುಬೈ ಎಂಬ ಸ್ವಪ್ನ ನಗರಿ ಆ ಎಲ್ಲಾ ನೆನಪುಗಳನ್ನು ಮಸುಗಾಗಿಸಿ ಮನಸ್ಸೆಂಬ ವಿಚಾರಗಳ ಮಹಾ ಸಮುದ್ರದಲ್ಲಿ ಹೊಸ ಭರವಸೆಗಳ ತರಂಗಳನ್ನೆಬ್ಬಿಸುತ್ತಿತ್ತು.
     ಹಡಗಿನಲ್ಲಿ ಎಷ್ಟೊಂದು ಇಕ್ಕಟ್ಟಿತ್ತೆಂದರೆ ಅತ್ತಿತ್ತ ಸರಿಯುವುದು ಕೂಡ ಕಷ್ಟಕರವಾಗುತ್ತಿತ್ತು. ಇನ್ನು ನಿದ್ದೆಯ ಮಾತಂತೂ ಕನಸೇ ಸರಿ. ಶತ್ರುವಿಗೂ ಈ ಕಷ್ಟ ಬೇಡ. ಕೆಲವೊಮ್ಮೆ ಊರಿನಲ್ಲೇ ಇದ್ದಿದ್ದರೆ ಚೆನ್ನಾಗಿತ್ತು ಎನಿಸುತ್ತಿತ್ತು. ಆದರೂ, ಕಲ್ಲು ಮನಸ್ಸು ಮಾಡಿ ಮುದುಡಿ ಕೂತುಬಿಟ್ಟೆ. ಈ ಪಾಡು ಅನುಭವಿಸಲು ತೊಡಗಿ ಏಳೋ ಎಂಟೋ ದಿವಸವಾಗಿರಬೇಕು. ಅದರೆಡೆಯಲ್ಲಿ ಪ್ರಯಾಣಿಕರೂ, ಹಡಗಿನಲ್ಲಿದ್ದ ಸಿಬ್ಬಂದಿವರ್ಗದವರಿಗೂ ನೀರು, ಆಹಾರಕ್ಕಾಗಿ  ಹೊಡಿಬಡಿ ಆರಂಭವಾಯಿತು. ಪ್ರಯಾಣಿಕರ ಪ್ರತಿಭಟನೆಯನ್ನು ಹೊಡಿಬಡಿಯ ಮೂಲಕವೇ ಹತ್ತಿಕ್ಕುತ್ತಿದ್ದರು. ಪ್ರಯಾಣಿಕರೆಂದರೆ ಅವರು ಗುಲಾಮರೆಂದು ಭಾವಿಸಿರಬೇಕು. ಪ್ರಯಾಣಿಕರು ತುಟಿಪಿಟಿಕ್ಕೆಂದರೆ ಸಾಕು ಅವರು ಸಿಟ್ಟುಗೊಳ್ಳುತ್ತಿದ್ದರು. ಏನನ್ನಾದರೂ ತಡೆಯಬಹುದು, ಹೊಟ್ಟೆ ಹಸಿವನ್ನು ತಡೆಯುವುದು ಸಾಧ್ಯವೇ? ಮೂರ್ನಾಲ್ಕು ದಿನ ತಿನ್ನಲು ಏನೂ ಸಿಗದೇ ಪ್ರಯಾಣಿಕರೆಲ್ಲಾ ಪ್ರತಿಭಟಿಸಿದರು. ಹಡಗಿನ ಸಿಬ್ಬಂದಿಗಳು ಹೊಡೆಯಲು ಮುಂದಾದರು. ಮಲ್ಲಯುದ್ದವೇ ಪ್ರಾರಂಭವಾಗಿ ಪ್ರಯಾಣಿಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು. ಮರುದಿನವೇ ಹಡಗಿನಲ್ಲಿದ್ದವರು ಆ ಮೃತ ಶರೀರವನ್ನು ಸಮುದ್ರಕ್ಕೆಸೆದರು. ಮತ್ತೋರ್ವನನ್ನು ಜೀವಂತವಾಗಿಯೇ ಸಮುದ್ರಕ್ಕೆಸೆದರು. ಆತನನ್ನು ಮತ್ತೆಂದೂ ಕಾಣಲು ಸಾಧ್ಯವಾಗಲಿಲ್ಲ. ಯಾರೂ ಕೂಡ ಮಾತನಾಡುವಂತಿರಲಿಲ್ಲ. ತೀವ್ರ ಹೊಟ್ಟೆ ಹಸಿವು. ಭಯಾನಕ ದಾಹ, ಸಂಕಟಗಳನ್ನು ಅಲ್ಲಾಹುವಿನೊಂದಿಗೆ ಹೇಳಿಕೊಳ್ಳುವುದಲ್ಲದೆ ಬೇರೆ ವಿಧಿಯಿರಲಿಲ್ಲ.
        ಪ್ರಯಾಣ ಹೊರಟ ಎಂಟನೇ ಅರ್ಧರಾತ್ರಿಯ ಹೊತ್ತು ಇದ್ದಕ್ಕಿದ್ದಂತೆ ಹಡಗಿನವರು ಬಂದು ಪ್ರಯಾಣಿಕರೊಂದಿಗೆ ಸಮುದ್ರಕ್ಕೆ ಹಾರಿ ಈಜುವಂತೆ ಆದೇಶಿಸಿದರು. ಎದುರಿಗೆ ಕೆನ್ನಾಲಿಗೆ ಚಾಚಿದಂತೆ ನೋಡಿದರೆ ಭಯಾನಕವಾಗಿ ಕಾಣುವ ಸಮುದ್ರ, ಹಿಂದುಗಡೆ ಅಷ್ಟೇ ಭಯಾನಕವಾಗಿ ಕಾಣುವ ಗೂಂಡಾ ಸ್ವಭಾವದ ಸಿಬ್ಬಂದಿಗಳು.... ಹಾರದೆ ಇರಲೂ ಆಗದ ವಿಚಿತ್ರ ಪರಿಸ್ಥಿತಿಯುಲ್ಲಿ ಪ್ರಯಾಣಿಕರೆಲ್ಲಾ ಕ್ಷಣ ಹೊತ್ತು ವಿಚಲಿತವಾಗಿ ನಿಂತರು. ಆಯಾದ್ರೆ, ಹಿಂದುಳಗಡೆಯಿಂದ ಹಡಗಿನಲ್ಲಿದ್ದವರು ಸಮುದ್ರಕ್ಕೆ ಹಾರಿದ ಮೇಲೆ ಈಜುವ ದಿಕ್ಕನ್ನು ತೋರಿಸಿ, ತಕ್ಷಣ ಹಾರಿಬಿಡಿ ಎಂಬ ಸೂಚನೆ ನೀಡಿದರು. ಈ ಹಡಗು ಕಾನೂನನ್ನು ವಂಚಿಸಿ ನಮ್ಮನ್ನೆಲ್ಲಾ ಹೊತ್ತು ತಂದಿರುವುದರಿಂದ ದಡದವರೆಗೂ ಬರುವುದು ಸಾಧ್ಯವಿಲ್ಲವೆಂದರು...... ಎಲ್ಲರ ಮನಸ್ಸಿನಲ್ಲಿ ದುಗುಡ ಆರಂಭವಾಯಿತು. ಆ ವಿಶಾಲ ಸಮುದ್ರದಲ್ಲಿ ದುಮುಕಿ ಈಜುವುದೆಂದರೆ? ಅಷ್ಟು ಸುಲಭದ ಕೆಲಸವೇ? ....

"ಎಲ್ಲವೂ ಮೋಸದಾಟಗಳು ..!  ಇದು ಅಲ್ಲಾಹನ ಭೂಮಿಯಲ್ಲವೇ? ನಮ್ಮೆಲ್ಲರ ಸ್ವಪ್ನಲೋಕದ ರಾಜಧಾನಿಯಂತಿರುವ ದುಬೈ ಮಣ್ಣಿನಲ್ಲಿ ನೆಲೆಯೂರುವ ಅವಕಾಶ ನಮಗೂ ಇಲ್ಲವೇ? ಖಂಡಿತಾ ಇದೆ" ಹೀಗೆ ಎಲ್ಲವನ್ನೂ ಅಲ್ಲಾಹನಿಗೆ ಅರ್ಪಿಸಿ ಸಮುದ್ರಕ್ಕೆ ಹಾರಿಬಿಟ್ಟೆವು. ಆ ವಿಶಾಲ ಸಮುದ್ರದಲ್ಲಿ ಈಜಿ ಈಜಿ ಸುಸ್ತಾದ ಮೇಲೆ ಯಾವುದೋ ದಡವೊಂದು ಕಾಣಿಸಿತು. ಬಾಲ್ಯದಲ್ಲಿ ಅಪ್ಪನ ಕಣ್ಣು ತಪ್ಪಿಸಿ  ಕೆರೆಗಿಳಿದು ಈಜು ಕಲಿತದ್ದು ಈಗ ನೆರವಿಗೆ ಬಂತು. ಯಾವ ವಿದ್ಯೆಯೂ  ವ್ಯರ್ಥವಲ್ಲ. ಎಂದಾದರೂ ಅದು ನಮ್ಮ ನೆರವಿಗೆ ಬಂದೇ ಬರುತ್ತದೆ ಎಂದು ಹಿರಿಯರು ಹೇಳುವುದು ಎಷ್ಟು ಸರಿ? ಈಜು ತಿಳಿದಿದ್ದ ನಾನಂತೂ ಬದುಕುಳಿದೆ.  ಆದರೆ , ಈಜುವುದು ಗೊತ್ತಿಲ್ಲದ ನತದೃಷ್ಟರ ಕಥೆಯೇನು? ಎಂದು ಅನಿಸಿದಾಗ ಆ ಹೊತ್ತಿನಲ್ಲೂ ನನ್ನ ಮನಸ್ಸು ಅಲುಗಾಡಿದ್ದು ಸುಳ್ಳಲ್ಲ.
        ಅದೊಂದು ವಿಶಾಲವಾದ ಮರುಭೂಮಿ. ಅಲ್ಲಿ ಕೆಲವರು ಯಾವುದೋ ದಿಕ್ಕನ್ನು ಹಿಡಿದು ನಡೆಯುತ್ತಿದ್ದರು. ನಾನೂ ಕೂಡ ಅವರ ಹಿಂದೆಯೇ ನಡೆದೆ . ಅದಾಗಲೇ ಯಾರದೋ ಔದಾರ್ಯದಿಂದ ಹಸಿವು ನೀಗಿಸಿಕೊಂಡಿದ್ದರಿಂದ ದೇಹ ಸ್ವಲ್ಪಮಟ್ಟಿಗೆ ಸಹಕರಿಸುತ್ತಿತ್ತು. ಆ ಮರುಭೂಮಿಯಲ್ಲಿ ನನ್ನ ಪ್ರಯಾಣ ಮುಂದುವರೆಯಿತು.
        ದುಬೈ ಎಂಬ ಸ್ವಪ್ನನಗರಿಯತ್ತ ಹಾದು ಹೋಗುತ್ತಿದ್ದ ನಮ್ಮ ಪಯಣ ...! ತಲೆಯ ಮೇಲೆ ಕೆಂಡದಂತೆ ಸುಡುತ್ತಿರುವ ಸೂರ್ಯನ ಬಿಸಿಕಿರಣಗಳು ! ಕಾಲಿನಡಿ ಧಗ ಧಗ ಅಗ್ನಿಕುಂಡದಂತೆ ಭಾಸವಾಗುತ್ತಿದ್ದ ಮರಳುಗಾಡು. ಆದರೂ ನಮ್ಮೆಲ್ಲರ ಏಕೈಕ ಆಶಾಕಿರಣವೆಂದರೆ ಒಂಟೆಯ ಮೇಲೆ ಕೂತು ಪ್ರಯಾಣಿಸುತ್ತಿದ್ದ ಅರಬಿಗಳು. ಅದೆಲ್ಲಿಂದಲೋ ಸುಳಿ ಎದ್ದಂತೆ ಬೀಸಿ ಬಂದು ಮುಖಕ್ಕೆ ಅಪ್ಪಳಿಸುತ್ತಿದ್ದ ಮರಳುಗಾಳಿಯಿಂದ ರಕ್ಷಣೆಗಾಗಿ ಅವರು ಮುಖಮುಚ್ಚಿಕೊಂಡಿದ್ದರು. ಆದರೆ , ನಾವೋ ಅರೆನಗ್ನರು . ಮರಳುಗಾಳಿಯಿಂದಲೋ , ಬಿಸಿಲ ಬೇಗೆಯಿಂದಲೋ ರಕ್ಷಣೆ ಪಡೆಯಲು ನಮ್ಮಲ್ಲಿ ಅಂತಹ ಸುರಕ್ಷಾಕವಚವೇನೂ  ಇರಲಿಲ್ಲ. ಸುಮ್ಮನೆ ಹೊಸ ಅನುಭವ ಎಂಬಂತೆ ಎದುರುಗೊಂಡದ್ದನ್ನೆಲ್ಲಾ ಸ್ವೀಕರಿಸುತ್ತಾ  ನಡೆಯುತ್ತಿದ್ದೆವು.
       ಬಹಳ ದೂರ ನಡೆದು ಹೋಗುತ್ತಿರುವಾಗ ಒಂಟೆಗಳ ಸಮೂಹ ಮತ್ತು ಕೆಲವು ಜನರ ಗುಂಪೊಂದು ನಮ್ಮ ಕಣ್ಣಿಗೆ ಬಿತ್ತು .

ಆದರೆ, ಅವರೊಂದಿಗೆ ಮಾತನಾಡುವುದು ಹೇಗೆ? ಯಾರನ್ನು ಕಂಡರೂ ಅಸ್ಸಲಾಮ್ ಅಲೈಕುಂ ಎಂದು ಹೇಳುತ್ತಿದ್ದೆವು. ಆದರೆ ಅವರು ಮರುತ್ತರವನ್ನಷ್ಟೇ ನೀಡಿ ನಿರ್ಗಮಿಸುತ್ತಿದ್ದರು. ಏನೇ ? ಎತ್ತ? ಎಂದು ವಿಚಾರಿಸುತ್ತಿರಲಿಲ್ಲ. ಒಂದು ಗುಂಪಿನ ಬಳಿ ಹೋಗಿ ಕೈ ಸನ್ನೆಯಿಂದ ಕುಡಿಯಲು ನೀರು ಕೇಳಿದಾಗ ಅಲ್ಲಿದ್ದ ಕೆಲವು ಉದಾರಿ ಅರಬಿಗಳು ತಮ್ಮ ಕೈ ಚೀಲದಿಂದ ನೀರು ತೆಗೆದು ಕೊಟ್ಟರು. ನೀರಡಿಕೆ ನೀಗುವವರೆಗೂ ನೀರು ಕುಡಿದು ಮುಂದುವರೆದೆವು. ನನ್ನ ಜೊತೆಗೆ ಕೋಡಿಕಲ್ ಮುಹಮ್ಮದ್ ಇದ್ದ. ಅವನಷ್ಟೇ ಅಲ್ಲ, ಇನ್ನೂ ಕೆಲವರು ಇದ್ದರು.ಆದರೆ, ಈ ಮುಹಮ್ಮದನ್ನು ಬಿಟ್ಟು ಅವರ್ಯಾರೂ ನೆನಪಿಗೆ ಬರುತ್ತಿಲ್ಲ.ಮುಹಮ್ಮದ್ ಮಂಗಳೂರಿನ ಆಸುಪಾಸಿನವನೇ ಆಗಿದ್ದರಿಂದ ಅವನ ನೆನಪಿದೆ ಅಷ್ಟೇ.  ಆದರೆ, ನಮ್ಮ ಗುಂಪಿನಲ್ಲೊಬ್ಬ ಉರ್ದು ಮಾತಿನವನಿದ್ದ. ವಿಪರೀತ ಮಾತನಾಡುತ್ತಿದ್ದ . ಅದೇನು ಮಾತನಾಡುತ್ತಿದ್ದನೋ ಅವನಿಗೇ ಗೊತ್ತು.
       ಹಲವಾರು ದಿನಗಳ ನಂತರ ನಾವು ದುಬೈ ಬಂದರು ಮುಟ್ಟಿದೆವು. ನಾವಿದುವರೆಗೂ ಕನಸಿನಲ್ಲಿ ಮಾತ್ರ ಕಾಣುತ್ತಿದ್ದ ಸ್ವಪ್ನನಗರಿ ದುಬೈ ಈಗ ನಮ್ಮ ಕಣ್ಣೆದುರಿಗೆ ಕಾಣುತ್ತಿದೆ. ಲಕ್ಷಾಂತರ ಯುವಕರ ಕನಸಿನಲಿ ಬಂದು ಕಾಡುವ ದುಬೈ ಆ ಮಣ್ಣನ್ನೊಮ್ಮೆ ಕಣ್ತುಂಬಾ ನೋಡಿದೆ. ಜೀವನದಲ್ಲಿ ಒಮ್ಮೆಯಾದರೂ ದುಬೈ ಎಂಬ ಪ್ರಪಂಚವನ್ನು ಕಾಣಬೇಕೆಂದು ಆಶಿಸುವ ಅದೆಷ್ಟು ಮನಸ್ಸುಗಳಿವೆಯೋ? ಯಾರಿಗ್ಗೊತ್ತು.
        ನಾವಿದ್ದದ್ದು ಬಂದರಿನಲ್ಲಿ. ಅಲ್ಲಿ ಹಲವು ಹಡಗುಗಳು ಲಂಗರು ಹಾಕಿ ಸಾಲಾಗಿ ನಿಂತಿದ್ದವು. ಜನರೆಲ್ಲಾ ಅತ್ತಿಂದಿತ್ತ ಓಡಾಡುತ್ತಾ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆ ಬಂದರಿನಲ್ಲಿ ಎಷ್ಟೊಂದು ಕೆಲಸಗಾರರಿದ್ದರು. ಎಲ್ಲರೂ ನಮ್ಮಂತೆ ಏನೇನೋ ಕನಸುಗಳನ್ನು ಹೊತ್ತು ಮಡದಿ, ಮಕ್ಕಳನ್ನು ಬಿಟ್ಟು ಬಂದು ಬಿಸಿಲ ಶಾಖ ಕುಡಿಯುತ್ತಿರುವವರು. ಇವರ ನಡುವೆ ನನಗೂ ಒಂದು ಕೆಲಸ ಸಿಕ್ಕಿದ್ದರೆ? ನಾನವರತ್ತ ಅರೆಗಣ್ಣಿನಿಂದ ನೋಡಿದೆ. ನನ್ನ ಆಶ್ಚರ್ಯಕ್ಕೆ ಅಲ್ಲಿ ಕೆಲವರು ಬ್ಯಾರಿ ಭಾಷೆ ಮಾತನಾಡುವುದನ್ನು ಕೇಳಿ ಸಂತೋಷವಾಯಿತು. ಅವ್ರ ನಡುವೆ ಒಬ್ಬ ಸುಲೈಮಾನ್ ಬ್ಯಾರಿ ಎಂಬವರು ಇದ್ದರು. ಅವರು ನನ್ನನ್ನು ತಮ್ಮ ಕೋಣೆಗೆ ಕರೆದೊಯ್ದು ಹೊಟ್ಟೆ ತುಂಬಾ ಊಟ ಹಾಕಿದರು. ಅಂದು ಕುಡಿದ ಗಂಜಿಯೂಟದ ಸವಿಯನ್ನು ಇಂದಿಗೂ ಮರೆಯಲು ಸಾಧ್ಯವಾಗುತ್ತಿಲ್ಲ. ಮರುದಿನ ಸುಲೈಮಾನ್ ಬ್ಯಾರಿ ನನ್ನನ್ನು ಬಂದರಿಗೆ ಕರೆದೊಯ್ದರು. ಅಲ್ಲಿ ಕರಾಚಿಯವರಾದ ಕುಂಞಲಿ ಕಾಕ ಚಹಾದ ಅಂಗಡಿಯೊಂದನ್ನು ನಡೆಸುತ್ತಿದ್ದರು. ನನ್ನ ಪಕ್ಕದ ಮನೆಯಲ್ಲಿ ಅವರ ವಾಸಸ್ಥಾನ. ಪಾಕಿಸ್ಥಾನಿ ಪೌರನಾದ್ದರಿಂದ ನಾನವನನ್ನು ಹಾಗೆ ಕರೆಯುತ್ತಿದ್ದೆವು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕುಂಞಲಿ ಕಾಕ ತಮ್ಮ ಊರಾದ ಕರಾಚಿಗೆ ಆಗಿಂದಾಗೆ ಹೋಗಿ ಬರುತ್ತಿದ್ದರು. ಆದರೆ, ಅವರ ಹೆಂಡತಿ ಮಕ್ಕಳೆಲ್ಲಾ ನಮ್ಮ ಊರಿನಲ್ಲೇ ಇದ್ದರು. ಅವರು ನನಗೆ ಆತ್ಮೀಯರಾಗಿದ್ದರು. ಆದರೆ ಅವರು ದುಬೈಗೆ ಬಂದಿರುವುದು ಮಾತ್ರ ನನಗೆ ತಿಳಿದಿರಲಿಲ್ಲ.

 ಕುಂಞಲಿ ಕಾಕನ ಮುಂದೆ ನಿಂತು ಸಲಾಂ ಹೇಳಿ ಪರಿಚಯದ ಮುಗುಳ್ನಗೆಯನ್ನು ಬೀರಿದೆ. ತಕ್ಷಣ ನನ್ನನ್ನು ಗುರುತಿಸಿಕೊಂಡ ಕುಂಞಲಿ ಕಾಕ ಆಶ್ಚರ್ಯ, ಸಂತೋಷ ಎರಡನ್ನೂ ಒಟ್ಟಿಗೆ ಪ್ರಕಟಿಸಿ ಹೇಳಿದರು : "ಇಲ್ಲಿ ಕೆಲಸ ಹುಡುಕುವುದೇ ದೊಡ್ಡ ಕಷ್ಟ. ಊರಿನಿಂದ ಜನರ ದಂಡೇ ದುಬೈಗೆ ಬರುತ್ತಿದ್ದಾರೆ. ಆದರೂ ಶ್ರಮಿಸುತ್ತೇನೆ."
    ನಾನವರಲ್ಲಿ ಕೆಲಸದ ವಿಷಯವನ್ನೇ ಮಾತನಾಡಿರಲಿಲ್ಲ. ಮುಂದೆ ಮಾತನಾಡುತ್ತೇನೆಯೋ ಗೊತ್ತಿಲ್ಲ. ಊರಿನಿಂದ ಬರುತ್ತಿದ್ದ ಪ್ರತಿಯೊಬ್ಬರೂ ಅವರ ಬಳಿ ಕೆಲಸ ಹುಡುಕಿ ಕೊಡುವಂತೆ ಹೇಳಿ ಹೇಳಿ ಅವರಿಗೆ ಈ ಮಾತು ಅಭ್ಯಾಸವಾಗಿರಬೇಕು. ಸುತ್ತಿ ಬಳಸಿ ಮಾತು ಯಾಕೆ? ಎಂದು ಬಹುಶಃ ಅವರು ನೇರವಾಗಿ ನನ್ನೊಂದಿಗೆ ಈ ಮಾತು ಹೇಳಿರಬೇಕು.
      ಮನೆಯ ವಿವರಗಳನ್ನೆಲ್ಲಾ ಕುಂಞಲಿ ಕಾಕ ಕೇಳಿ ತಿಳಿದುಕೊಂಡರು. ಊರಿನ ವಿಷ್ಯವೆಂದರೆ ಎಲ್ಲರಿಗೂ ಒಂದು ವಿಶೇಷ ಕಾಳಜಿ ತಾನೇ? ಅದಕ್ಕೆ ಪ್ರತ್ಯುಪಕಾರ ಎನ್ನುವಂತೆ ಅವರು ನನಗೆ ಬಂದರಿನಲ್ಲಿಯೇ ಒಂದು ಕೆಲಸವನ್ನೂ ಹುಡುಕಿ ಕೊಟ್ಟರು. ಪ್ರತಿನಿತ್ಯ ಬಂದರಿಗೆ ಬರುತ್ತಿದ್ದ ಹಡಗಿನಿಂದ ಸರಕುಗಳನ್ನು ಇಳಿಸುವ ಕೆಲಸವದು. ಆರೋಗ್ಯ ಕೊಂಚ ಗಟ್ಟಿಮುಟ್ಟಾಗಿದ್ದರಿಂದ ಕೆಲಸ ಕಷ್ಟವೆಂದು ಅನಿಸಲಿಲ್ಲ. ಮೊದಲ ದಿನ ಸ್ವಲ್ಪ ಆಯಾಸವೆನಿಸಿದರೂ, ಸಂಜೆಯ ಹೊತ್ತು ಸಂಬಳ ಸಿಕ್ಕಾಗ ಮನಸ್ಸು ಪ್ರಫುಲ್ಲಗೊಂಡು ದೇಹದ ಆಯಾಸವೂ ನೀಗಿತು. ಅಂದು ಮೊತ್ತ ಮೊದಲ ಬಾರಿ ದುಬೈಯಲ್ಲಿ ನಾನು ಪಡೆದ ಸಂಬಳವಾಗಿತ್ತದು. ಎಷ್ಟು ದಿರ್ ಹಮ್ ಎಂದು ಇವತ್ತು ನೆನಪಿಲ್ಲ. ಅದೆಷ್ಟಾದರೂ ಅವತ್ತು ನಾನು ಪಡೆದ ಮಾನಸಿಕ ಸಂತೋಷ ನನ್ನ ಜೀವನದಲ್ಲಿ ಅತ್ಯಂತ ಅಮೂಲ್ಯವಾದದ್ದು.
        ನಾನು ಅಂತಹ ಅದೃಷ್ಟ ಜೀವಿಯೇನೂ ಆಗಿರಲಿಲ್ಲ. ಮೂವತ್ತು ವರ್ಷಗಳ ಕಾಲ ಒಂದೇ ಕೆಲಸ ಮಾಡುತ್ತಿದ್ದರೂ, ನನ್ನ ಆರ್ಥಿಕ ಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯೇನೂ ಕಂಡುಬರಲಿಲ್ಲ. ಊರಿನ ಹಲವು ಯುವಕರನ್ನು ಗಲ್ಫ್ ಗೆ ಕರೆತಂದು ಜೀವನೋಪಾಯಕ್ಕೊಂದು ದಾರಿ ಒದಗಿಸಿದೆ. ಅವರಲ್ಲಿ ಕೆಲವರು ಚೆನ್ನಾಗಿ ದುಡಿದು ಅದೃಷ್ಟರಾದವರು ಹಲವರು ಶ್ರೀಮಂತರಾದರು. ನನ್ನಿಂದಲೇ ಆರ್ಥಿಕ ನೆರವು ಪಡೆದು ಗಲ್ಫ್ ಸೇರಿದ ಸಲೀಂ ಇಂದು ಊರಿನಲ್ಲೇ ದೊಡ್ಡ ಕುಳ. ಮಗಳ ಮದುವೆ ಮಾಡಿಸುವ ಸಲುವಾಗಿ ನಾನು ಭೂಮಿ ಮಾರಲು ಮುಂದಾದಾಗ ಅದನ್ನು ಖರೀದಿಸಿದ್ದು ಸಲೀಂ ..! ಗಲ್ಫ್ ಜೀವನದಿಂದ ಒಂದು ಮಗಳನ್ನೇನೋ ಗಂಡನ ಜೊತೆ ಕಳುಹಿಸಿದೆ. ಆದರೆ, ಇನ್ನೊಬ್ಬಳು ಮದುವೆ ಆಗದೆ ಮನೆಯಲ್ಲಿದ್ದ ಕಾರಣ ನಾನು ಇನ್ನಷ್ಟು ನಾನು ಸಂಪಾದಿಸುವುದು ಅನಿವಾರ್ಯವಾಯಿತು. ಈ ನಡುವೆ ಮನೆ ರಿಪೇರಿ ಮಾಡಲೇಬೇಕಾದ ಅನಿವಾರ್ಯಯುಂಟಾಯಿತು. ಅಕ್ಕಪಕ್ಕದ ಗಲ್ಫ್ ಉದ್ಯೋಗಸ್ಥರೆಲ್ಲಾ ದೊಡ್ಡ ದೊಡ್ಡ ಮನೆಗಳನ್ನು ಕಟ್ಟುವಾಗ ನಾನು ಕೂಡ ಸ್ವಲ್ಪ ಹಣವನ್ನು ಸಲೀಮನ ಕೈಯಿಂದ ಸಾಲ ಪಡೆದು ಮನೆಯೊಂದನ್ನು ಹೇಗೂ ಕಟ್ಟಿದೆ. ಆದರೆ ಸಾಲವನ್ನು ಮಾತ್ರ ಇಂದಿಗೂ ತೀರಿಸಲು ಸಾಧ್ಯವಾಗಲಿಲ್ಲ.

 ಊರಿನಿಂದ ಕಾಗದ ಬರುವಾಗ ಆಗುತ್ತಿದ್ದ ಸಂತೋಷವನ್ನು ಆಮದಾಕ ನೆನೆಯುತ್ತಾರೆ.. ತಂದೆಯಿಂದ, ಹೆಂಡತಿಯಿಂದ, ಮಗಳಿಂದ ಹೇಗೆ ಬರುತ್ತಿದ್ದ ಮೂರು ಕಾಗದಗಳನ್ನು ಮತ್ತೆ ಮತ್ತೆ ಓದಿ ಸಂತೋಷಪಡುತ್ತಿದ್ದೆ. ನಂತರ ಅದನ್ನು ತಲೆದಿಂಬಿನ ಅಡಿಯಲ್ಲಿ ಇತ್ತು ಬಿಡುತ್ತಿದ್ದೆ. ಊರಿಗೆ ಬಂದಾಗ ಅವೆಲ್ಲಾ ಕಾಗದಗಳನ್ನು ಜೋಪಾನವಾಗಿ ತೆಗೆದುಕೊಂಡು ಬಂದೆ. ಇಂದಿಗೂ ಆಮದಾಕರ ಕೈಯ್ಯಲ್ಲಿ ಆ ಕಾಗದಗಳಿವೆ. ವೀಸಾ, ಬೋರ್ಡಿಂಗ್ ಪಾಸುಗಳು ಇತ್ಯಾದಿ ದುಬೈಗೆ ಸಂಬಂಧಿಸಿದ ಎಲ್ಲವನ್ನೂ ಅವರೊಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿಟ್ಟಿದ್ದಾರೆ. ಮನಸ್ಸಿಗಾಗುವ ಒಂದು ಖುಷಿಗಾಗಿ ಕಳೆದ ರಸನಿಮಿಷಗಳು ನೀಡುವ ಮುದಕ್ಕಾಗಿ, ಹಳೆಯ ನೆನಪುಗಳು ಮನಸ್ಸಿಗೆ ನೀಡುವ ಆಹ್ಲಾದಕ್ಕಾಗಿ ಅವೆಲ್ಲವನ್ನೂ ಸುರಕ್ಷಿತವಾಗಿಟ್ಟಿದ್ದೇನೆ ಎನ್ನುತ್ತಾರೆ. ಹೆಂಡತಿಯ ದೂರುಗಳು, ತಂದೆಯ ಬೇಡಿಕೆಗಳು, ಮಗಳ ಅನಿವಾರ್ಯತೆಗಳು ಎಲ್ಲವೂ ಆ ಪತ್ರಗಳಲ್ಲಿವೆ. ಈಗ ಮತ್ತೆ ಓದಿದರೆ ತುಟಿಯಂಚಿನಲ್ಲಿ ಒಂದು ನಗು, ವಿಷಾದ ಸುಳಿಯುತ್ತದೆ. ಹೆಂಡತಿಯ ದೂರುಗಳನ್ನು  ಓದಿ ನಕ್ಕರೆ, ಅವಳ ಅಪ್ಪಅಮ್ಮನ ಮುಖ್ಯವಾಗಿ ನನ್ನ ಮಕ್ಕಳ ಬೇಡಿಕೆಗಳನ್ನು ಪೂರೈಸಲಾಗಲಿಲ್ಲವೆಂಬ ವಿಷಾದ ಈಗಲೂ ನನ್ನಲ್ಲಿ ಕಾಡುತ್ತಿದೆ.
           ದುಬೈ ಮಸ್ಜಿದ್ ಫಾರೂಖಿನಲ್ಲಿ ಮಗ್ರಿಬ್ ನಮಾಝಿಗೆ ಕೆಲವು ಬ್ಯಾರಿಗಳು ಆಗಮಿಸುತ್ತಿದ್ದರು. ಹೆಚ್ಚಿನವರು ಮಂಗಳೂರಿನ ಆಸುಪಾಸಿನವರು. ಅವರೊಂದಿಗೆ ಒಂದಿಷ್ಟು ಹರಟೆ, ಮಾತುಕತೆ, ಊರಿನ ವಿಶೇಷತೆಗಳು ಹೀಗೆ ಅಂತಕಂತೆಗಳ ಗೋಪುರಗಳನ್ನು ಕಟ್ಟಿ ನಡೆಯುತ್ತಿದ್ದ ನಮ್ಮ  ಮಾತುಕತೆಯಲ್ಲಿ ಆ ದಿನದ ಕೆಲಸದ ಒತ್ತಡದಿಂದ ಹೊರಬರುವ ಚಾಣಾಕ್ಷ್ಯತನವೂ ಇತ್ತು. ಮಸೀದಿಯಲ್ಲಿ ಪ್ರತೀ ದಿವಸವೂ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಊರಿನಿಂದ ಬರುವ ವಿದ್ವಾಂಸರು ಮತಪ್ರಸಂಗ ಮಾಡುತ್ತಿದ್ದರು. ಊರಿನ ಎಲ್ಲರೂ ಕೂತು ಕೇಳುತ್ತಿದ್ದರು. ಊರಿನಿಂದ ವಿಸಿಟಿಂಗ್ ಗೆ ಬರುವ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳು. ಜೊತೆಗೆ ಊರಿನಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಮಸ್ಜಿದ್ ಹಾಗೂ ಮದ್ರಸಗಳು ಎಲ್ಲರೂ ಮನತೃಪ್ತಿಯಾಗುವಂತೆ ನೆರವು ನೀಡುತ್ತಿದ್ದರು. ನಾನೆಂದೂ ಗಲ್ಫ್ ಜೀವನವನ್ನು ಕೊನೆಗೊಳಿಸುವ ಕುರಿತು ಯೋಚಿಸಿರಲಿಲ್ಲ. ವಯಸ್ಸು ಅರವತ್ತಾದಾಗ ಎಲ್ಲರೂ ಹೇಳತೊಡಗಿದರು. "ಕಾಕ, ಇನ್ನಾದರೂ ಊರಲ್ಲಿ ನೆಮ್ಮದಿಯಾಗಿರಬಾರದೇ?"  ಅವರಿಗೂ ನಾನು  ಕಷ್ಟಪಡುವ ಕೆಲಸದಿಂದ ಕನಿಕರವಾಗುತ್ತಿತ್ತು.
            ಊರಿಗೆ ಹೋಗುವುದಾದರೂ ಹೇಗೆ? ಅವಶ್ಯಕತೆಗಳೊಂದೂ ಪೂರೈಸಿಲ್ಲ. ಕಿರಿಯ ಮಗಳ ಮದುವೆ ಇನ್ನೇನು ಆಗಬೇಕಿದೆ. ಆದರೆ, ಅದಕ್ಕಾಗಿಯೂ ಇನ್ನೂ ಕೂಡ ಎರಡು ವರ್ಷವಾದರೂ ಕಾಯಬೇಕು. ಅದೊಂದು ಮುಗಿಯಲಿ ಎಂದು ಕಾಯುತ್ತಿದ್ದೆ. ಆದರೆ ಅಷ್ಟರಲ್ಲಿ ಪ್ರೆಷರ್, ಶುಗರ್ ಗಳಆಕ್ರಮಣ ಶುರುವಾಯಿತು. ಕೆಲಸ ಮಾಡುತ್ತಿರುವಾಗ ಒಮ್ಮೆ ತಲೆ ತಿರುಗಿ ಬಿದ್ದೆ. ಮತ್ತೆ ಸ್ನೇಹಿತರ ಉಪದೇಶ ಕೇಳದೆ ವಿಧಿಯಿರಲಿಲ್ಲ. ನನ್ನ ಭಾಗ್ಯಕ್ಕೆ ಮೊದಲ ಅಳಿಯನಿಗೆ ಶಾರ್ಝಾದಲ್ಲಿ ಕೆಲಸ ಸಿಕ್ಕಿತು. ಅವನ ಖರ್ಚಿನಿಂದ ಈಗ ನಮ್ಮ ಸಂಸಾರ ಸಾಗುತ್ತಿದೆ. ಕಿರಿಯ ಮಗಳ ಮದುವೆ ನಡೆಸಿಕೊಡುವುದಾಗಿ ಆತ ಹೇಳಿದ್ದರಿಂದ ನಾನು ಕೊಂಚ ನಿರಾಳನಾದೆ. ಆತನಿರುವುದರಿಂದ ಜನರ ಮುಂದೆ ಕೈಚಾಚುವ ಗತಿಕೇಡಿನಿಂದ ನಾನು ಬಚಾವಾದೆ.

 ಆಮದಾಕರ ಕಥೆ ಎಲ್ಲಾ ಗಲ್ಫ್ ಉದ್ಯೋಗಸ್ಥರ ಕಥೆಯೋ ಹೌದು. ದುಬೈಯಲ್ಲಿದ್ದಾಗ ಸುಖವಾದ ಜೀವನ. ಊರಿನ ನಾಲ್ಕು ಜನರ ಮುಂದೆ ಅದೇನೋ ವಿಚಿತ್ರ ಗೌರವ. ಗಲ್ಫ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ, ಊರಿಗೆ ಬಂದಾಗ ಆತನಿಗೆ ರಾಜಮರ್ಯಾದೆ. ತಮ್ಮ ಘನತೆ ಗೌರವಕ್ಕನುಗುಣವಾಗಿ ಇವರೂ ಕುಟುಂಬಸ್ಥರನ್ನೂ, ಊರಿನವರನ್ನೂ ಚೆನ್ನಾಗಿ ನೋಡಿಕೊಂಡರು. ಕೇಳಿದವರಿಗೆಲ್ಲಾ ಇದ್ದಷ್ಟನ್ನು ಕೊಟ್ಟುಬಿಟ್ಟರು. ಆಯಾದ್ರೆ, ವರ್ಷಗಳ ನಂತರ ಅವರು ಶಾಶ್ವತವಾಗಿ ಹಿಂತಿರುಗಿ ಬಂದಾಗ ತಿರುಗಿ ನೋಡುವವರೂ ಇರಲಿಲ್ಲ.
       ಈ ಗಲ್ಫ್ ಉದ್ಯೋಗಸ್ಥರ ಒಂದು ದುರವಸ್ಥೆ ಎಂದರೆ ಕೈಯ್ಯಲ್ಲಿ ಹಣ ಓಡುತ್ತಿದ್ದಾಗ ಬೇಕಾಬಿಟ್ಟಿ ಖರ್ಚುಮಾಡಿ ದೊಡ್ಡ ಮನೆ ಕಟ್ಟುವುದು. ಜೀವನೋಪಾಯಕ್ಕೆ ಯಾವ ದಾರಿಯನ್ನೂ ಮಾಡಿರುವುದಿಲ್ಲ. ಅನಾವಶ್ಯಕವಾಗಿ ಲಕ್ಷಗಟ್ಟಲೆ ಮೌಲ್ಯದ ಮನೆಮಾಡಿ ಕಟ್ಟುವುದಕ್ಕಿಂತ ನಿವೃತ್ತ ಬದುಕಿನಲ್ಲಿ ಆದಾಯ ಒದಗಿಸಬಲ್ಲ ಏನನ್ನಾದರೂ ಮಾಡಿಡುವುದು ಕ್ಷೇಮಕರವಲ್ಲವೇ? ಆದರೆ, ಹೆಚ್ಚಿನ ಗಲ್ಫ್ ಉದ್ಯೋಗಸ್ಥರಿಗೆ ಈ ತರದ ಮುನ್ನೆಚ್ಚರಿಕೆಗಳಿರುವುದಿಲ್ಲ. ಎಂದೆಂದೂ ತಮಗೆ ದುಬೈ ಆಸರೆ ಒದಗಿಸುತ್ತದೆ ಎಂದೇ ಹಲವರ ಭಾವನೆ. ಹಲವರು ತಮ್ಮಿಂದ ಬೇಕಾದದ್ದನ್ನೆಲ್ಲಾ ಪಡೆದುಕೊಂಡು ಹೋದರು. ಆದರೆ, ತಮಗೆ ಬೇಕಾದಾಗ ಯಾರೊಬ್ಬರ ಸಹಾಯವೂ ದೊರೆಯುವುದಿಲ್ಲ. ಕೋಣೆಗೆ ಅವರ ಜೊತೆಗೆ ಉಳಿಯುವುದು ಪ್ರೆಷರ್ ಮತ್ತು ಶುಗರ್ ಎಂಬ ಇಬ್ಬರು ಗೆಳೆಯರು ಮಾತ್ರ. ಮುಂದಿರುವ ಆಯುಸ್ಸು ಹೆಚ್ಚೇನಿಲ್ಲ. ಜೀವನದ ಕೊನೆಯ ಹಂತದಲ್ಲಿ ಹಲವರು ಗಲ್ಫ್ ನಿಂದ ಊರಿಗೆ ಆಗಮಿಸುವುದು ತನ್ನ ಮರಣವಾದರೂ ಊರಿನಲ್ಲಾಗಲಿ ಎಂಬ ಭಾವನೆಯೊಂದಿಗೆ ಮಾತ್ರ...
        ಗಲ್ಫ್ ನಲ್ಲಿರುವವರಿಗೆ ತಮ್ಮ ಕೈಯ್ಯಲ್ಲಿ ಕೊಂಚ ಹಣ ಓಡಾಡಲು ತೊಡಗುವಾಗ ಸಮಾಜಸೇವೆ ಮಾಡಬೇಕೆಂಬ ಆಸೆಯುಂಟಾಗುತ್ತದೆ. ಅದು ಸಹಜವೂ ಕೂಡ. ಆದರೆ, ಈ ಆಸೆಯನ್ನು ದುರುಪಯೋಗಿಸುವ ಕೆಲವು ರಾಜಕಾರಣಿಗಳು ಗಲ್ಫ್ ನಿಂದ ರಾಶಿ ರಾಶಿ ಹಣ ತಂದು ಇಲ್ಲಿ ಪಾರ್ಟಿ ಕಟ್ಟುತ್ತಾರೆ. ಆದರೆ ಗಲ್ಫ್ ಉದ್ಯೋಗಸ್ಥರ ಸಂಕಷ್ಟಗಳಿಗೆ ಇವರ ಹೃದಯವೆಂದೂ ಮಿಡಿಯುವುದಿಲ್ಲ.

ಈ ಸಂದರ್ಭದಲ್ಲಿ ಧಾರ್ಮಿಕ ಸಂಘಟನೆಗಳು ಮಾತ್ರ ಗಲ್ಫ್ ಉದ್ಯೋಗಸ್ಥಆರ್ನ್ನು ಅಥವಾ ಮರಳುಗಾಡಿನಲ್ಲಿ ಕಷ್ಟಪಡುತ್ತಿರುವವರನ್ನು ಕಾಪಾಡುತ್ತವೆ. ಆದರೆ ಗಲ್ಫ್ ನಲ್ಲಿರುವ ಉದ್ಯೋಗಸ್ತಹರ್ನ್ನು ರಕ್ಷಿಸಲು ಸಂಘಟನಾ ಚಟುವಟಿಕೆಗಳು ಮಾತ್ರ ಸಾಕಾಗುವುದಿಲ್ಲ. ರಾಜಕಾರಣಿಗಳೂ, ಹಾಗೂ ಸರ್ಕಾರ ಈ ಬಗ್ಗೆ ಗಂಭೀರ ತೀರ್ಮಾಅನ್ ಕೈಗೊಳ್ಳುವವರೆಗೆ ಹೋರಾಟ ನಡೆಸಬೇಕು. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಗಲ್ಫ್ ಉದ್ಯೋಗಸ್ಥರ ಪಟ್ಟಿಯನ್ನು ತಯಾರಿಸಿ ಅವರ ಸಂಕಷ್ಟಗಳನ್ನು ಸರ್ಕಾರದ ಮುಂದಿಡಬೇಕು. ಸಣ್ಣಪುಟ್ಟ ಕಾನೂನಿನ ತೊಡಕುಗಳಿಂದ ಮರಳಿ ಗಲ್ಫ್ ಗೆ ತೆರಳಲಾರದೆ ಕಷ್ಟಪಡುವವರಿಗೆ ಕಾನೂನಿನ ನೆರವು ನೀಡಬೇಕು. ನಾವಂದುಕೊಂಡಂತೆ ಹೆಚ್ಚಿನ ಗಲ್ಫ್ ಉದ್ಯೋಗಸ್ಥರು ಸುಖ ಜೀವನ ಸಾಗಿಸುತ್ತಿಲ್ಲ. ಜೀವನಕ್ಕಾಗಿ ಪಡಬಾರದ್ ಯಾತನೆ ಪಡುತ್ತಿರುವರು. ಸೂಪರ್ ಮಾರ್ಕೆಟ್ ಗಳಲ್ಲೂ, ಕಾವಲುಗಾರರಾಗಿಯೂ, ಕೂಲಿಕೆಲಸ ಮಾಡಿಕೊಂಡು, ಆಫೀಸ್ ಬಾಯ್ ಕೆಲಸ ಮಾಡುವ ಹಲವಾರು ಬದುಕಿನ ವಿವಿಧ ಘಟ್ಟಗಳಲ್ಲಿ ಒಂದಲ್ಲ ಒಂದು ಸಂಘರ್ಷ ಮಾಡಿಕೊಂಡೆ ಸೋಲೊಪ್ಪಿಕೊಂಡ ನತದೃಷ್ಟರಿದ್ದಾರೆ. ಕಲಿತ ಕೆಲವೇ ಕೆಲವರು ಮಾತ್ರ ಹೇಗೋ ಬಚಾವಾಗಿದ್ದಾರೆ ಎಂದು ಊಹಿಸಬಹುದಷ್ಟೆ.
      ಗಲ್ಫ್ ಗೆ ಹೋಗಿ ಹಣ ಮಾಡಿರುವ ಕೆಲವರಿಂದಾಗಿ ಈಗ ಇಡೀ ಗಲ್ಫ್ ಉದ್ಯೋಗಸ್ಥರ ಬದುಕೇ ಪೂರ್ವಾಗ್ರಹ ಪೀಡಿತವಾಗಿದೆ. ಹಣವಿರುವವರು ಕಟ್ಟಿಸುವ ಅರಮನೆಯಂತಹ ಮನೆಗಳೂ, ಅವರು ಬಳಸುವ ವಿವಿಧ ಮಾದರಿಯ ಕಾರುಗಳು, ಅವರ ದುಬಾರಿ ಜೀವನಶೈಲಿ, ಗಲ್ಫ್ ಉದ್ಯೋಗಸ್ಥರ ಬಗ್ಗೆ ಊರಿನವರಲ್ಲೊಂದು ಅಸೂಯೆ, ಹುಟ್ಟಿಸಿರುವುದು ಸುಳ್ಳಲ್ಲ. ಕೆಲವು ಶ್ರೀಮಂತರ ಈ ಮಾದರಿಯ ಜೀವನ ಶಾಲಿಯಿಂದಾಗಿ ಬಡ ಗಲ್ಫ್ ಉದ್ಯೋಗಸ್ಥರೂ ಅವರನ್ನೇ ಅನುಕರಿಸಲು ಹೊಯಾರ್ಡುವಾರು. ಊರಿನಲ್ಲಿದ್ದಾಗ ನಡೆದುಕೊಂಡೇ ಹೋಗುತ್ತಿದ್ದವರು, ಗುಳ್ಗ್ ನಿಂದ ಬಂದೊಡನೆ ನಡೆದುಕೊಂಡು ಹೋಗುವುದು ಅವಮಾನ ಎಂದು ತಿಲಿಯುತ್ತಾರೆ. ಅಥವಾ ಹಾಗೆ ನಡೆಯುವವರ್ನ್ನು ಜನರೂ ಒಂದು ರೀತಿಯ ಅನುಕಂಪದಿಂದ ನೋಡಿ ಅವರನ್ನು ಊರಿನಿಂದಲೇ ಓಡಿಸಿ ಬಿಡುತ್ತಾರೆ.ಇನ್ನು ಅವರು ಮಾಡುವ ದುಂದುವೆಚ್ಚಗಳಿಗೆ ಲೆಕ್ಕವಿದೆಯೇ?
        ಗಲ್ಫ್ ನಿಂದ ಒಬ್ಬ ವ್ಯಕ್ತಿಗೆ ಮನೆಯಲ್ಲಿ ಇಂತಹ ಊಟವೇ ಬೇಕೆನ್ನುವ ನಿಯಮವಿರುತ್ತದೆ. ಅದು ಎಂತಹ ಭೋಜನ ಮಾದರಿಗಳು. ಅವುಗಳಲ್ಲಿ ಎಷ್ಟೊಂದು ಪೋಲಾಗಿ ಹೋಗುತ್ತವೆ. ಅದರಿಂದ ಆರ್ಥಿಕ ಅಡಚಣೆಯಲ್ಲದೆ ಆ ಪಾಪದ ಗುಳ್ದ್ ಉದ್ಯೋಗಸ್ಥರು ಪಾಡುವ ಪಾಡು ಹೇಳತೀರದು. ಇವೆಲ್ಲ ಕೊನೆಯಾಗಬೇಕಾದರೆ, ಮೊದಲು ಗಲ್ಫ್ ಉದ್ಯೋಗಸ್ಥರ ಬಗ್ಗೆ ಜನರು ಹೊಂದಿರುವ ಪೋರ್ರ್ವಗ್ರಹವನ್ನು ತಿದ್ದಿಕೊಳ್ಳಬೇಕು. ಶ್ರೀಮಂತ ಗಲ್ಫ್ ಉದ್ಯೋಗಸ್ಥರು ಆರಂಭಿಸಿರುವ ದುಂದುವೆಚ್ಚವನ್ನು ಅವರೇ ಕೊನೆಗೊಳಿಸಬೇಕು..
        ಇದೆಲ್ಲವೂ ನನ್ನೊಬ್ಬನ ಕಥೆಯಲ್ಲ. ಗಲ್ಫ್ ಜೀವನದಲ್ಲಿ ಮುಳುಗಿಹೋದ ಪ್ರತಿಯೊಬ್ಬ ಪ್ರವಾಸಿಗನ ಕಥೆ. ಬಾಲ್ಯಜೀವನದಲ್ಲಿ ಬಂದು ಯೌವ್ವನವನ್ನು ಇಲ್ಲೇ ಕಳೆದು ಕೋಣೆಗೆ ಮುಪ್ಪಿನ ಕಾಲದಲ್ಲಿ ಊರಿಗೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನ ದುಃಖದ ಕಥೆ. ಪ್ರತೀ ವರ್ಷವೂ ನನ್ನ ಕೊನೆಯ ವರ್ಷವಿದು, ಇನ್ನು ಮುಂದೆ ಊರಿಗೆ ಹೋಗಿ ಸುಖಜೀವನ ಮಾಡೋಣವೆಂದರೆ ಊರಿನಲ್ಲಿ ಒಂದಲ್ಲ ಒಂದು ಸಮಸ್ಯೆ ತೋರಿಸಿ ಮನೆಯಲ್ಲಿದ್ದವರೂ ಕೂಡ ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳುವಾಗ ಈ ಬಡ ಪ್ರವಾಸಿಗನ ಜೀವನದ ಬಗ್ಗೆ ಯೋಚಿಸುವವರು ಯಾರು? ಇದಕ್ಕೊಂದು ಕೊನೆಯಿಲ್ಲವೇ? ತಮ್ಮ ಕುಟುಂಬವನ್ನೇ ತೊರೆದು ಅವರ ಸುಖಜೀವನಕ್ಕಾಗಿ ಮೇಣಬತ್ತಿಯಂತೆ ಕರಗಿಹೋಗುವ ಒಂದೊಂದು ಪ್ರವಾಸಿಗನ ದುರಂತ ಕಥೆಯಿದು. ದೊರದಲ್ಲೇ ಇದ್ದುಕೊಂಡು ತನ್ನ ಯೌವ್ವನದ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟು , ತಮ್ಮ ಕನಸೆಲ್ಲ ಬಾಡಿಹೋಗುವ ಪ್ರವಾಸಿಗನ ಜೀವನ ಎಷ್ಟು ಕಷ್ಟಕರವೆಂದು ಒಬ್ಬ ಪ್ರವಾಸಿಗನಲ್ಲದೆ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ...
        ಅದಕ್ಕೋಸ್ಕರ ಪ್ರತಿಯೊಬ್ಬರೂ ಊರಿನಲ್ಲಿ ತಮ್ಮ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳುವಾಗ ಪ್ರವಾಸಿಗನ ದಿನಚರಿಯ ಬಗ್ಗೆ, ಹಾಗೂ ಅವರ  ಜೀವನದ ಬಗ್ಗೆಯೂ ಸ್ವಲ್ಪ ಗಮನವಿರಲಿ. ಅವರನ್ನೂ ಕೂಡ ಸಂತೋಷದಲ್ಲಿ ಜೀವನ ಮುನ್ನಡೆಸಲು ನಾವು ಕೂಡ ಪ್ರಯತ್ನಿಸಬೇಡವೇ?......

(ಮುಗಿಯಿತು)



ಮೂಲ : ಮುಹಮ್ಮದ್

ಸಂಗ್ರಹ : ಜೆ . ಮುಹಮ್ಮದ್ ಫಾರೂಕ್ ಪಾಣೆಮಂಗಳೂರು



NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್