ಉತ್ತಮ ಕುಟುಂಬಕ್ಕೆ ಹದಿನಾಲ್ಕು ಸೂತ್ರಗಳು

ಉತ್ತಮ ಕುಟುಂಬಕ್ಕೆ ಹದಿನಾಲ್ಕು ಸೂತ್ರಗಳು ಮುನ್ನುಡಿ: ಕುಟುಂಬವೆಂದ ಮೇಲೆ ಅಲ್ಲಿ ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಕುಟುಂಬ ಸದಸ್ಯರ ಜಾಣತನ. ಕುಟುಂಬದೊಳಗೆ ಉದ್ಭವಿಸುವ ಸಮಸ್ಯೆಯನ್ನು ಯಾರು ಹೇಗೆ ಎದುರಿಸುತ್ತಾರೆ , ಯಾವ ರೀತಿಯ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದರ ಮೂಲಕ ಸುಖೀ ಕುಟುಂಬವೊಂದನ್ನು ಅಳೆಯಬಹುದು. ನಿಮ್ಮದು ಸುಖೀ ಕುಟುಂಬವಾಗಬೇಕಾದರೆ ಇಲ್ಲಿ ಹದಿನಾಲ್ಕು ಸೂತ್ರಗಳಿವೆ. 1.ಸಮಸ್ಯೆಗಳನ್ನು ಪಕ್ಷತೆಯಿಂದ ಎದುರಿಸುವುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳು ಸ್ವಾಭಾವಿಕ . ಸಮಸ್ಯೆಗಳಿಗೆ ಬಡವ , ಶ್ರೀಮಂತ ಎಂಬುವ ಬೇಧಭಾವವೂ ಇಲ್ಲ. ಎಲ್ಲರ ಮನೆಯ ದೋಸೆಯೂ ತೂತೆ ಎಂಬ ನಾಣ್ಣುಡಿ ಕೇಳಿಲ್ಲವೇ? ಸಮಸ್ಯೆಗಳೆಂಬ ತೂತು ದೋಸೆಗಳು ಎಲ್ಲರ ಮನೆಯಲ್ಲೂ ಕಾಣಸಿಗುತ್ತದೆ. ಆದರೆ , ಅದನ್ನು ನಿರ್ವಹಿಸುವ ರೀತಿಯಲ್ಲಿ ಮಾತ್ರ ವ್ಯತ್ಯಾಸಗಳಿರುತ್ತವೆ. ಕೆಲವರು ಸಮಸ್ಯೆಗಳನ್ನು ಪಕ್ವತೆಯಿಂದ ನಿರ್ವಹಿಸಿ ತಮ್ಮ ಕುಟುಂಬವನ್ನು ಹೋಳಾಗದಂತೆ ರಕ್ಷಿಸಿಕೊಳ್ಳುತ್ತಾರೆ. ಇನ್ನು ಕೆಲವರು ಅತಿಯಾಗಿ ವರ್ತಿಸಿ, ಮೂರ್ಖರಂತೆ ತಮ್ಮ ಬುದ್ದಿಗೆ ಕೋಲು ಕೊಟ್ಟು ಕುಟುಂಬ ಜೀವನವನ್ನೇ ಕಳೆದುಕೊಳ್ಳುತ್ತಾರೆ. ಸಾಯುವವರೆಗೂ ನೆಮ್ಮದಿಯಿಲ್ಲದೆ ಕಳೆಯುವ ಆ ಯಾತನೆ ಮನುಷ್ಯನಾದವನಿಗೆ ಬೇಕೇ? ಖಂಡಿತ ಬೇಡ. ಹಾಗಾದರೆ , ನಾವು ನಮ್ಮ ಕುಟುಂಬದೊಳಗಿನ ಸಮಸ್ಯೆಗಳನ್ನು ಪಕ್ವತೆಯಿಂದ , ಜಾಣತನದಿಂದ ಎದುರಿಸಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಔಷಧವಿಲ್ಲದ ರೋಗವಿಲ್ಲ, ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬುದನ್ನು ಮರೆಯಬಾರದು. ಸಾಕಷ್ಟು ಯೋಚನೆ ಮಾಡಿ, ಬುದ್ದಿಪೂರ್ವಕ ತೆಗೆದುಕೊಳ್ಳುವ ಪಕ್ವ ಹಾಗೂ ಉತ್ತಮ ನಿರ್ಧಾರಗಳು ಕುಟುಂಬದೊಳಗಿನ ಸಂತೃಪ್ತಿಯನ್ನು ಕಾಪಾಡುತ್ತದೆ. 2.ದುಡುಕು ಬುದ್ದಿ ತೊರೆಯುವುದು ಯಾವುದೇ ವಿಷಯದಲ್ಲಾಗಲೀ ದುಡುಕುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಕುಟುಂಬ ಜೀವನದಲ್ಲಂತೂ ದುಡುಕು ಬುದ್ಧಿ ಇರಲೇ ಬಾರದು. ಪತ್ನಿಯೊಂದಿಗೆ , ಮಕ್ಕಳೊಂದಿಗೆ ಅನಾವಶ್ಯಕವಾಗಿ ದುಡುಕಿ ಜಗಳವಾಡುವವರು ಕುಟುಂಬದೊಳಗಿನ ಮಾನಸಿಕ ನೆಮ್ಮದಿಯ ಧ್ವಂಸಕ್ಕೆ ಕಾರಣರಾಗುತ್ತಾರೆ. ಮುಂಗೋಪ, ದುಡುಕು ಸ್ವಭಾವ ಕೆಲವರಿಗೆ ಪ್ರಕೃತಿ ದತ್ತವಾಗಿರಬಹುದು . ಅಥವಾ ರಕ್ತದೊತ್ತಡ, ಬಿಪಿ ಯ ಪರಿಣಾಮವಾಗಿರಬಹುದು. ಇಂತಹವರು ಒಮ್ಮೆಲೆ ಈ ಸ್ವಭಾವವನ್ನು ತೊರೆಯುವುದು ಸಾಧ್ಯವಿಲ್ಲವಾದರೂ , ಪರಿಸ್ಥಿತಿಯನ್ನು ಅರಿತು, ಸೂಕ್ತ ಚಿಕಿತ್ಸೆ ಹಾಗೂ ಸ್ವಪರಿಶ್ರಮದ ಮೂಲಕ ಹಂತಹಂತವಾಗಿ ತ್ಯಜಿಸುವುದು ಕುಟುಂಬದ ಆರೋಗ್ಯದ ದೃಷ್ಟಿಯಿಂದ ಒಳಿತು. ಅದಕ್ಕಾಗಿ ಪ್ರತಿಯೊಬ್ಬರೂ ಈ ಮಟ್ಟಿನಲ್ಲಿ ಪ್ರಯತ್ನಿಸಿ. ಸಹನೆ ಅತ್ಯಗತ್ಯ ..... 3.ಸ್ವಾರ್ಥವನ್ನು ತ್ಯಜಿಸುವುದು. ಅತಿಯಾದ ಸ್ವಾರ್ಥಿಗಳಾಗುವುದು ಮನೋರೋಗದ ಲಕ್ಷಣವಾಗಿದೆ. ಸ್ವಾರ್ಥಿಗಳಿಗೆ ಆಪ್ತರ ಅಭಾವ ಹೆಚ್ಚಿರುತ್ತದೆ. ಆತ್ಮೀಯರು, ಸಹವಾಸಿಗಳು ಸ್ನೇಹಿತರು, ಸಂಬಂಧಿಗಳು ಅವರಿಂದ ದೂರವಾಗುತ್ತಾರೆ. ಗಂಡ ಹೆಂಡತಿ ಸ್ವಾರ್ಥಿಗಳಾಗಿದ್ದಲ್ಲಿ ಅವರ ನಡುವಿನ ಸಂಬಂಧ ಹಳಸತೊಡಗುತ್ತದೆ. ಪರಸ್ಪರರ ನಡುವಿನ ಅರ್ಥೈಸುವ ಸಾಮರ್ಥ್ಯ ನಶಿಸಿಹೋಗುತ್ತದೆ. ಒಬ್ಬರ ಮಾತು ಮತ್ತೊಬ್ಬರಿಗೆ ಹೇರಿಕೆ, ಹೇವರಿಕೆ ಅನಿಸಲು ಶುರುವಾಗುತ್ತದೆ.ಇಷ್ಟೆಲ್ಲಾ ಆದ ಮೇಲೆ ದಾಂಪತ್ಯ ಉಳಿಯುವುದು ಸಾಧ್ಯವೇ? ಉಳಿದರೂ ನೆಮ್ಮದಿಯಿಂದಿರುವುದು ಶಕ್ಯವೇ? ದಾಂಪತ್ಯ ಜೀವನದಲ್ಲಿ ತನ್ನ ಸುಖ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತನ್ನ ಪತಿ ಅಥವಾ ಪತ್ನಿಯ ಸುಖ ಎಂದುದನ್ನು ಇಬ್ಬರೂ ತಿಳಿಯಬೇಕು. ತನ್ನ ಪತ್ನಿ ಸದಾ ಸಮಯವೂ ಕಷ್ಟದ ಜೀವನ ನಡೆಸಿದರೂ ಪರವಾಗಿಲ್ಲ. ತಾನು ಮಾತ್ರ ಸುಖವಾಗಿರಬೇಕೆಂಬ ಸ್ವಾರ್ಥ ಹಲವು ಸಂದರ್ಭಗಳಲ್ಲಿ ಸಂಸಾರವೊಂದರ ನೆಮ್ಮದಿ ಕೆಡಿಸಿದೆ. ಸಂಸಾರ,ಕುಟುಂಬ ಜೀವನ ಎಂಬುದು ಸುಖ ದುಃಖಗಳನ್ನು ಹಂಚಿಕೊಂಡು , ಪರಸ್ಪರರ ಸುಖ , ನೆಮ್ಮದಿಯ ಬಗ್ಗೆ ಕಾಳಜಿ ವಹಿಸುವುದಾಗಿದೆ. ಪತ್ನಿಯ ಸುಖಕ್ಕಾಗಿ ಅಥವಾ ಪತಿಯ ಸುಖಕ್ಕಾಗಿ ನನ್ನ ಸುಖವನ್ನು ಬೇಕಾದರೂ ತ್ಯಜಿಸಿ ಬಿಡುತ್ತೇನೆ ಎಂದು ಯೋಚಿಸುವ ಮನಸ್ಸುಗಳಿರುವಲ್ಲಿ ಕುಟುಂಬ ಜೀವನಕ್ಕೆ ಯಾವ ಕೇಡೂ ಬಾಧಿಸದು. 4.ಪರಸ್ಪರ ಸಹಕಾರ ಮನೋಭಾವನೆ ಕುಟುಂಬ ಜೀವನದ ಅಡಿಪಾಯವೇ ಪರಸ್ಪರರ ನಡುವಿನ ಸಹಕಾರ ಮನೋಭಾವ ಎನ್ನಬಹುದು. ಪತ್ನಿಯನ್ನು ಸೇವಕಿಯಂತೆ ಕಾಣಬಾರದು. ಸಾಧ್ಯವಾದಷ್ಟು ಮನೆಕೆಲಸದಲ್ಲಿ ಆಕೆಗೆ ನೆರವಾಗುವುದು ಪತಿಯ ಕರ್ತವ್ಯವಾಗಿದೆ. ಆಕೆಯ ಕೆಲಸಗಳನ್ನು ಸರಳಗೊಳಿಸುವ , ಸುಲಭಗೊಳಿಸುವ ಪರಿಹಾರೋಪಾಯಗಳ ಕುರಿತು ಚರ್ಚಿಸುವುದು ಮತ್ತು ಅದನ್ನು ಸಾಧ್ಯವಾಗಿಸುವಲ್ಲಿ ಆಕೆಯೊಂದಿಗೆ ಸಹಕರಿಸುವುದು. ಮನೆಗೆಲಸದ ಉಸಾಬರಿ ನನಗೇಕೆ? ಅದು ಅವಳ ಕೆಲಸವಲ್ಲವೇ? ಬೇಕಾದರೆ ಮಾಡಲಿ , ಬಿಡಲಿ ನನಗೇಕೆ ? ಎಂಬ ಮನೋಭಾವನೆಯಲ್ಲಿ ಉತ್ತಮ ಕುಟುಂಬವೊಂದು ಜನ್ಮತಾಳುವುದು ಸಾದ್ಯವೇ ಇಲ್ಲ. 5.ಅಗೌರವದ ವರ್ತನೆಗಳನ್ನು ಕ್ಷಮಿಸುವುದು. ಕುಟುಂಬವೆಂದರೆ ಅಲ್ಲಿ ಹಲವು ತರಹದ ವ್ಯಕ್ತಿಗಳಿರುತ್ತಾರೆ. ಹಲವು ರೀತಿಯ ಗುಣ ಸ್ವಭಾವಗಳಿರುವ ವ್ಯಕ್ತಿಗಳು ಅಲ್ಲಿರುತ್ತಾರೆ. ಗಂಡ, ಹೆಂಡತಿ, ಮಕ್ಕಳು , ಅಮ್ಮ , ಅಪ್ಪ, ಅತ್ತೆ, ಮಾವ ಇತ್ಯಾದಿಯಾಗಿ ಕುಟುಂಬದೊಳಗಿರುವ ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿಯಲ್ಲಿರುತ್ತದೆ. ಈ ರೀತಿ ಸ್ವಭಾವಗಳ ನಡುವಿನ ವ್ಯತ್ಯಾಸದಿಂದಾಗಿ ಕುಟುಂಬದೊಳಗೆ *ಮನನೋವಂತಾಗುವ* ಸಂದರ್ಭಗಳು ಉಂಟಾಗಬಹುದು. ನಡತೆ, ಮಾತು ಇತ್ಯಾದಿಗಳಿಂದ ಮನಸ್ಸಿಗೆ ನೋವಾದಲ್ಲಿ ಅವುಗಳನ್ನು ದೊಡ್ಡದು ಮಾಡದೆ ಕ್ಷಮಿಸಿ ಅಲ್ಲಿಗೆ ಬಿಟ್ಟುಬಿಡುವ ಗುಣವು ಕುಟುಂಬದೊಳಗಿನ ಆರೋಗ್ಯಕ್ಕೆ ಅತಿಮುಖ್ಯವಾಗಿ ಬೇಕು . ಅನೇಕ ಸಲ ನಮ್ಮನ್ನು ನೋಯಿಸಿದವನ/ ಳ ನಿರ್ದಿಷ್ಟ ಸ್ವಭಾವ ಹುಟ್ಟುಗುಣವಾಗಿರುತ್ತವೆ. ಅದು ವಂಶಪಾರಂಪರ್ಯವಾಗಿಯೋ ಅಥವಾ ಪ್ರಕೃತಿದತ್ತವಾಗಿಯೋ ಆತನನ್ನು ಸೇರಿಕೊಂಡಿದ್ದಾಗಿರಬಹುದು. ಅದನ್ನು ತಿದ್ದಿಕೊಳ್ಳುವುದು ಕಷ್ಟ. ಅಂತಹ ಸಂದರ್ಭದಲ್ಲಿ ಆತ ತನ್ನ ಸ್ವಭಾವದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಸಹಿಸಿಕೊಳ್ಳುವುದು ಒಳಿತು . ಸಾಧ್ಯವಾದರೆ ಆತನಿಗೆ ಸೂಕ್ತ ಸಂದರ್ಭದಲ್ಲಿ ಶಾಂತ ರೀತಿಯಲ್ಲಿ ಅದನ್ನು ಮನದಟ್ಟು ಮಾಡಿಕೊಡಬೇಕು. ಆದ್ದರಿಂದ ಕುಟುಂಬಕ್ಕೆ ಯಾವುದೇ ರೀತಿಯ ಅಹಿತವಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು 6.ದೂರುದಾರರ ಕುರಿತು ಜಾಗ್ರತೆ ವಹಿಸುವುದು. ರೂಮಿನ ಬಾಗಿಲು ಮುಚ್ಚುತ್ತಿದ್ದಂತೆ ಪತಿಯ ಕಿವಿಯಲ್ಲಿ ಪತ್ನಿ ಊದುವ ಮಂತ್ರಗಳು ಕೆಲವೊಮ್ಮೆ ಅತ್ತೆಗೆ ಸಂಬಂಧಿಸಿದ ದೂರುಗಳಾಗಿರಬಹುದು. ಹಾಗೆಯೇ , ಪತ್ನಿ ತವರುಮನೆಗೆ ಹೋದಾಗ ಅಮ್ಮ ಮಗನ ಕಿವಿಯಲ್ಲಿ ಊದುವ ಮಂತ್ರವೂ ಸೊಸೆಯ ಬಗೆಗಿನ ದೂರುಗಳಾಗಿರಬಹುದು . ಇಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಯಿಸುವುದು ಒಳ್ಳೆಯದು. ದುಡುಕಿನ ನಿರ್ಧಾರ ಒಳ್ಳೆಯದಲ್ಲ. ಪತ್ನಿಯ ಮಾತುಗಳನ್ನು ಕೇಳಿ ಅಮ್ಮನೊಂದಿಗೆ ಜಗಳಕ್ಕೆ ನಿಲ್ಲುವುದಾಗಲೀ, ಅಮ್ಮನ ಬಗ್ಗೆ ದೂರು ಹೇಳುವ ಪತ್ನಿಯೊಂದಿಗೆ ಜಗಳಕ್ಕೆ ನಿಲ್ಲುವುದಾಗಲೀ ಸರಿಯಲ್ಲ. ಹೀಗೆ ಜಗಳ ಮಾಡುವುದರಿಂದ ಇಬ್ಬರಿಗೂ ನಿಮ್ಮ ಬಗ್ಗೆ ತಪ್ಪು ಸಂದೇಶ ರವಾನೆಯಾಗಬಹುದು. ಆದ್ದರಿಂದ ನಿಜಕ್ಕೂ ಇಬ್ಬರ ನಡುವೆ ಏನು ನಡೆದಿದೆ? ಜಗಳಕ್ಕೆ ಕಾರಣ ಏನು ? ಇಬ್ಬರ ಮನಸ್ತಾಪದ ಮೂಲ ಯಾವುದು? ಎಂಬುದನ್ನು ಸಾವಧಾನದಿಂದ ಪತ್ತೆ ಹಚ್ಚಿ, ತಾಳ್ಮೆಯಿಂದ , ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಸೊಸೆಯಾದವಳು ತವರು ಮನೆಗೆ ಹೋದಾಗ ಪತಿಯ ಮನೆಯ ಹುಳುಕು, ದೂರುಗಳನ್ನು ಹೇಳುವುದನ್ನು ಸಾಧ್ಯವಾದಷ್ಟು ದೂರವಿಡಬೇಕು. ಅಂತಹ ಸ್ವಭಾವವನ್ನು ದಂಪತಿಗಳಿಬ್ಬರೂ ಸಂಪೂರ್ಣ ತ್ಯಜಿಸಿದರೆ ಕುಟುಂಬಕ್ಕೇ ಒಳ್ಳೆಯದು. 7.ಪ್ರೀತಿಸಬೇಕು- ಪ್ರೀತಿಸುವುದನ್ನು ಕಲಿಯಬೇಕು. ಪತ್ನಿಗೆ ಪತಿಯೊಂದಿಗೆ, ಅತ್ತೆಗೆ ಸೊಸೆಯೊಂದಿಗೆ ಪ್ರೀತಿಯಿದ್ದೇ ಇರುತ್ತದೆ. ಆದರೆ , ಹಲವರಿಗೆ ಇದನ್ನು ವ್ಯಕ್ತಪಡಿಸುವುದು ತಿಳಿದಿರುವುದಿಲ್ಲ ಅಷ್ಟೆ . ಕುಟುಂಬದೊಳಗೆ ಜಗಳ, ಕಲಹ, ಮನಸ್ತಾಪಗಳು ಉಂಟಾಗುವುದು ಪ್ರೀತಿಯಿಲ್ಲದೇ ಇರುವುದರಿಂದಲ್ಲ. ಬದಲಾಗಿ ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗ ಹಾಗೂ ಪ್ರೀತಿಯನ್ನು ಗುರುತಿಸುವುದು ಗೊತ್ತಿಲ್ಲದೇ ಇರುವುದರಿಂದ. ಗಂಡನಿಗೆ ಪತ್ನಿಯ ಮೇಲೆ ಪ್ರೀತಿಯಿದ್ದರೂ ಆತನ ಒರಟು ಅಥವಾ ಸಂಕೋಚ ಸ್ವಭಾವದ ಕಾರಣದಿಂದ ಅವನಿಗಾದನ್ನು ಪತ್ನಿಗೆ ಮನದಟ್ಟಾಗುವಂತೆ ತಿಳಿಸುವುದು ಸಾಧ್ಯವಾಗದಿರಬಹುದು. ಆತನ ಮನಸ್ಸಿನೊಳಗಿನ ಪ್ರೀತಿಯನ್ನು ಪತ್ನಿ ಅರಿಯಬೇಕು. ಹಾಗೆಯೇ , ತನ್ನ ಪ್ರೀತಿಯನ್ನು ಪತಿಯಾದವನು ವ್ಯಕ್ತಪಡಿಸುವುದನ್ನು ಕಲಿಯಬೇಕು. ಪತ್ನಿಗೆ ಪ್ರಿಯವಾದ ವಸ್ತುಗಳನ್ನು ತಂದುಕೊಡುವುದು, ಅವಳ ಕೆಲಸಕಾರ್ಯಗಳಲ್ಲಿ ನೆರವಾಗುವುದು , ಇತರರಿಂದ ಅವಳ ಮನಸ್ಸಿಗೆ ನೋವಾದಾಗ ಅವಳೊಂದಿಗೆ ತಾನಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುಬುದು ಇತ್ಯಾದಿಗಳ ಮೂಲಕ ತನ್ನೊಳಗಿನ ಪ್ರೀತಿಯನ್ನು ಪತಿಯಾದವನು ವ್ಯಕ್ತಪಡಿಸಬೇಕು. ಪ್ರೀತಿಯನ್ನು ಗುರುತಿಸುವುದನ್ನು ಕಲಿತಾಗ ಮತ್ತು ಅದನ್ನು ವ್ಯಕ್ತಪಡಿಸುವ ಮಾರ್ಗೋಪಾಯಗಳನ್ನು ಅರಿತಾಗ ಕುಟುಂಬವೊಂದು ಸುಖಕರವಾಗಿ ಕಳೆಯುತ್ತದೆ. 8.ತಪ್ಪು ಕಲ್ಪನೆ ಕೂಡದು. ಕುಟುಂಬ ಜೀವನದಲ್ಲಿ ಅನುಮಾನಗಳು,ತಪ್ಪು ಕಲ್ಪನೆಗಳು ನುಸುಳಿದ್ದಲ್ಲಿ ಅದು ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ.ಕುಟುಂಬದ ಸದಸ್ಯರ ನೆಮ್ಮದಿಗೆ ಧಕ್ಕೆ ತರಲು ಅವರೊಳಗಿನ ಅಣು ತೂಕದ ಅನುಮಾನಗಳು ಸಾಕು.ಅನೇಕ ಸಂದರ್ಭಗಳಲ್ಲಿ ಈ ಅನುಮಾನಗಳು , ತಪ್ಪು ಕಲ್ಪನೆಗಳು ಕೇವಲ ಊಹಾಪೋಹಗಳನ್ನು ಆಧರಿಸುತ್ತವೆ. ಇದನ್ನು ಅರಿತಲ್ಲಿ ಕುಟುಂಬದೊಳಗೆ ಅನುಮಾನ ಪಿಶಾಚಿಗಳಿಗೆ ಸ್ಥಾನವಿರುವುದಿಲ್ಲ. 9.ವಿಶ್ವಾಸ ಇಲ್ಲದೆ ಏನೂ ಇಲ್ಲ ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಶಾಶ್ವತವಾಗಿ ನೆಲೆಗೊಳ್ಳಬೇಕಾದರೆ ವಿಶ್ವಾಸ ಬಹಳ ಮುಖ್ಯ . ವಿಶ್ವಾಸವಿಲ್ಲದಿದ್ದಲ್ಲಿ ಕುಟುಂಬವೊಂದು ನೆಮ್ಮದಿಯಿಂದ ದಿನದೂಡುವುದು ಸಾಧ್ಯವಿಲ್ಲ. ವಿಶ್ವಾಸ ವಂಚನೆಯಂತೂ ಕುಟುಂಬದ ಅಡಿಪಾಯವನ್ನೇ ಅಲುಗಾಡುವಷ್ಟು ಪ್ರಬಲವಾದುದು. ಆದ್ದರಿಂದ ಕುಟುಂಬ ಸದಸ್ಯರು ಪರಸ್ಪರರಲ್ಲಿ ವಿಶ್ವಾಸವಿರಿಸಿ ನಡೆದುಕೊಳ್ಳುವುದನ್ನು ಕಲಿಯಬೇಕು. ವಿಶ್ವಾಸ ವಂಚನೆಗೆ ಎಡೆಮಾಡಿಕೊಡಬಾರದು. 10.ಶಿಸ್ತು, ಸಮಯ ಪಾಲನೆ ಇತ್ಯಾದಿ. ಶಿಸ್ತು , ಸಮಯ ಪಾಲನೆಯಿಂದ ಸ್ವತಃ ವ್ಯಕ್ತಿಗೆ ಪ್ರಯೋಜನವಾಗುವುದಲ್ಲದೆ , ಆತನ ಕುಟುಂಬಕ್ಕೂ ಲಾಭಕರವಾಗಿ ಪರಿಣಮಿಸುತ್ತದೆ. ಕುಟುಂಬದ ಸದಸ್ಯರಲ್ಲಿ ಶಿಸ್ತು ಪಾಲನೆ ಮಾಡಿಸುವುದು ಮನೆಯ ಯಜಮಾನನ ಮುಖ್ಯ ಕರ್ತವ್ಯವಾಗಿದೆ. ತಾನು ಶಿಸ್ತು ಪಾಲಿಸುವುದರ ಜೊತೆಗೆ ತಮ್ಮ ಅವಲಂಬಿತರನ್ನೂ ಕೂಡ ಶಿಸ್ತುಬದ್ದತೆಯಿಂದ ಇರಲು ಬೇಕಾದ ಎಲ್ಲಾ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು ಕೂಡ ಅವನ ಮುಖ್ಯ ಧ್ಯೇಯವಾಗಿರಬೇಕು 11.ಸಮಾಲೋಚನೆ ನಡೆಸುವುದು. ಕುಟುಂಬಗಳಲ್ಲಿ ಏನಾದರೂ ಸಮಸ್ಯೆ ಎದುರಾದಲ್ಲಿ ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ದೊಡ್ಡ ಕುಟುಂಬಗಳಲ್ಲಿ ಏನೇ ಸಮಸ್ಯೆ ಎದುರಾದರೂ ಅದನ್ನು ಹಿರಿಯರ ಗಮನಕ್ಕೆ ತಂದು , ಸಮಾಲೋಚಿಸಿ ಮುಂದಡಿಯಿಡುವುದು ಸಾಮಾನ್ಯ . ಇದರಿಂದ ಸಮಸ್ಯೆ ಏನಿದ್ದರೂ ಸೂಕ್ತ ರೀತಿಯಲ್ಲಿ ಎದುರಿಸುವುದು ಸಾಧ್ಯವಾಗುತ್ತದೆ. ಅಲ್ಲದೆ, ಕುಟುಂಬದ ಸದಸ್ಯರು ಆಗಾಗ್ಗೆ ಸಮಾಲೋಚನೆ ನಡೆಸುವುದರಿಂದ ಪರಸ್ಪರರ ನಡುವೆ ಇರುವ ತಪ್ಪು ತಿಳುವಳಿಕೆಗಳು, ಅನುಮಾನಗಳು ಸಹ ಪರಿಹಾರವಾಗುತ್ತದೆ. ಸುಖೀ ಕುಟುಂಬವೊಂದರ ಲಕ್ಷಣಗಳಲ್ಲಿ ಪರಸ್ಪರ ಸಮಾಲೋಚನೆ ನಡೆಸುವುದು ಕೂಡ ಒಂದು ಉತ್ತಮ ಬೆಳವಣಿಗೆಯಾಗಿದೆ. 12.ನ್ಯೂನತೆಗಳನ್ನು ಮರೆ ಮರೆಮಾಚುವುದು. ಮನುಷ್ಯ ಎಂದ ಮೇಲೆ ಆತನಲ್ಲಿ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಕೊರತೆ, ನ್ಯೂನತೆ ಇಲ್ಲದ ಮನುಷ್ಯ ಈ ಭೂಲೋಕದಲ್ಲೇ ಇಲ್ಲ. ಹಾಗೆಯೇ , ತನ್ನ ನ್ಯೂನತೆಗಳನ್ನು ಇನ್ನೊಬ್ಬ ವ್ಯಕ್ತಿ ಬಹಿರಂಗ ಪಡಿಸುವುದನ್ನು ಯಾವ ವ್ಯಕ್ತಿಯೂ ಸಹಿಸಲಾರ. ಕುಟುಂಬದ ಇತರ ಸದಸ್ಯರ ನ್ಯೂನತೆಗಳನ್ನು ಹೊರಗಡೆ ಬಹಿರಂಗ ಪಡಿಸುವುದರಿಂದ ಕುಟುಂಬದೊಳಗಿನ ನೆಮ್ಮದಿ ಕೂಡ ಹಾಳಾಗುತ್ತದೆ. ಗಂಡ ಹೆಂಡತಿಯ ನ್ಯೂನತೆಗಳನ್ನು ಬಹಿರಂಗಪಡಿಸುವುದು ಅದೇ ರೀತಿ ಹೆಂಡತಿ ಗಂಡನ ನ್ಯೂನತೆಗಳನ್ನು ಬಹಿರಂಗಪಡಿಸುವುದು, ಅಪ್ಪ - ಮಗ ನ್ಯೂನತೆಗಳನ್ನು ಬಹಿರಂಗಪಡಿಸುವುದು ಪರಸ್ಪರರಲ್ಲಿ ದ್ವೇಷ ಹುಟ್ಟಲು ಕಾರಣವಾಗುತ್ತದೆ. ಆದ್ದರಿಂದ ನ್ಯೂನತೆಗಳನ್ನು ಮರೆಮಾಚುವುದು ಸುಖೀ ಕುಟುಂಬವನ್ನು ಆಶಿಸುವವರು ಮಾಡಲೇಬೇಕಾದ ಪ್ರಮುಖ ಕಾರ್ಯವಾಗಿದೆ. 13.ತಾರತಮ್ಯ ಕೂಡದು. ತಂದೆತಾಯಿಗಳು ಮಕ್ಕಳ ನಡುವೆ ತಾರತಮ್ಯ ಮಾಡಕೂಡದು.ಅದು ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು. ಏನನ್ನಾದರೂ ಹಂಚುವಾಗ ಎಲ್ಲರಿಗೂ ಸಮನಾಗಿ ಹಂಚಬೇಕು. ಅತ್ತೆ ಸೊಸೆಯಂದಿರ ನಡುವೆ , ಅತ್ತಿಗೆ ನಾದಿನಿಯರ ಮುಂದೆ , ನಾದಿನಿ ಅತ್ತಿಗೆಯ ನಡುವೆ, ಅಣ್ಣ ತಮ್ಮಂದಿರ ನಡುವೆ ತಾರತಮ್ಯವಿರಲೇ ಬಾರದು. ಅದು ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. 14.ಒಗ್ಗಟ್ಟಲ್ಲಿ ಬಲವಿದೆ. ಕುಟುಂಬದ ಯಾರಾದರೂ ಸದಸ್ಯ ಸಮಸ್ಯೆಯಲ್ಲಿ ಸಿಕ್ಕಿಬಿದ್ದರೆ ಅವರನ್ನು ಇಡೀ ಕುಟುಂಬವೇ ಬೆಂಬಲಿಸಬೇಕು. ಪ್ರತಿಯೊಂದು ವಿಷಯದಲ್ಲೂ ಕುಟುಂಬದೊಳಗೆ ಒಗ್ಗಟ್ಟಿರಬೇಕು. ನಮಾಝ್, ಸ್ವಲಾತ್ ಇತ್ಯಾದಿಗಳನ್ನು ಎಲ್ಲರೂ ಒಟ್ಟಾಗಿ ಸಾಮೂಹಿಕವಾಗಿ ನಿರ್ವಹಿಸಬೇಕು. ಹಾಗೆಯೇ , ಊಟ ಮಾಡುವಾಗಲೂ ಒಬ್ಬೊಬ್ಬರೇ ಮಾಡುವ ಬದಲು ಎಲ್ಲರೂ ಜೊತೆಯಲ್ಲೇ ಮಾಡಲು ಪ್ರಯತ್ನಿಸಬೇಕು. ಪರಸ್ಪರರ ಮನಸ್ಸು ಬೆಸೆಯಲು, ಪರಸ್ಪರರಲ್ಲಿ ಪ್ರೀತಿ, ಸ್ನೇಹ ಬೆಳೆಯಲು ಇದು ಕಾರಣವಾಗುತ್ತದೆ. ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಸ್ನೇಹದಿಂದಿದ್ದಲ್ಲಿ ಅದಕ್ಕಿಂತ ಹೆಚ್ಚಿನದ್ದು ಇನ್ನೇನುಬೇಕು, ಅಲ್ಲವೆ? ಅಲ್ಲಾಹು ನಮ್ಮನ್ನು ಮತ್ತು ನಮ್ಮ ಕುಟುಂಬದವರನ್ನು ಎಲ್ಲವೂ ಆಪತ್ತುಗಳಿಂದ ರಕ್ಷೆ ಮತ್ತು ಆರೋಗ್ಯವನ್ನು ಕರುಣಿಸಿ, ಇಹಲೋಕದಲ್ಲಿ ನಾವೆಲ್ಲರೂ ಇರುವ ಹಾಗೆ ನಾಳೆ ಸ್ವರ್ಗಲೋಕದಲ್ಲಿಯೂ ನಮ್ಮನ್ನೆಲ್ಲಾ ಒಂದುಗೂಡಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್. (ಮುಗಿಯಿತು) ಕೃಪೆ : ಗಲ್ಫ್ ಇಶಾರ ಪತ್ರಿಕೆ ಸಂಗ್ರಹ:ಜೆ . ಮುಹಮ್ಮದ್ ಫಾರೂಕ್ ಪಾಣೆಮಂಗಳೂರು NOOR-UL-FALAH ISLAMIC STORE

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್