ಕುದುರೆ ಪುರಾಣ


ಐಶ್ವರ್ಯದ ಸಂಕೇತವಾದ ಕುದುರೆ

   ಸಾಕುಮೃಗಗಳ ಪೈಕಿ ಬಹಳ ಘನತೆ, ಹೆಮ್ಮೆ ಮತ್ತು ಗೌರವವಿರುವ ಒಂದು ಆಡಂಬರ ಪ್ರಾಣಿಯಾಗಿದೆ ಕುದುರೆ.
   ಪವಿತ್ರ ಕುರ್‌ಆನಿನಲ್ಲಿ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಉಲ್ಲೇಖವಿದೆ. ಅಲ್ಲದೆ ಅಲ್ಲಾಹನು ಇದರ ಹೆಸರೇಳಿ ಆಣೆ ಹಾಕಿದ ಅಧ್ಯಾಯ (ಸೂರಃ) ಕೂಡ ಪವಿತ್ರ ಕುರ್‌ಆನಿನಲ್ಲಿದೆ. ಮಾತ್ರವಲ್ಲ ಈ ಮೃಗದ ಮಹತ್ವವನ್ನು ಎತ್ತಿ ಹೇಳಿ ಡಝನುಗಟ್ಟಳೆ ಸಹೀಹಾದ ಪ್ರವಾದಿ ಹದೀಸುಗಳು ವರದಿಯಾಗಿದೆ. ಒಟ್ಟಿನಲ್ಲಿ ಕುದುರೆಯನ್ನು ಇತರ ಮೃಗಗಳಿಗೆ ಹೋಲಿಸಿದರೆ ಕುದುರೆಗಿರುವ ಸ್ಥಾನಮಾನ, ಘನತೆ ಮತ್ತು ಗೌರವ ಇತರ ಮೃಗಗಳಿಗೆ ಇಲ್ಲ.
   ಮನುಷ್ಯನನ್ನು ಹೊರತುಪಡಿಸಿ ಪ್ರಾಣಿಗಳಲ್ಲಿ ಇಷ್ಟೊಂದು ಚೆಲುವಾದ ಸುಂದರ ಜೀವಿ ಬೇರೊಂದಿಲ್ಲ ಎಂದು ಹಿಜ್‌ರಾ ಏಳನೆಯ ಶತಮಾನದ ಪ್ರಸಿದ್ಧ ಪಂಡಿತ ಇಮಾಮ್ ಖಝ್‌ವೀನಿಯವರು ಅಭಿಪ್ರಾಯ ಪಟ್ಟಿದ್ದಾರೆ.
  ಗಂಡು ಹೆಣ್ಣು ಪರಸ್ಪರ ನಾಲ್ಕು ವರ್ಷ ಪ್ರಾಯವಾಗುವಾಗಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ. ಗರ್ಭಧಾರಣೆಯಾಗಿ ಹನ್ನೊಂದು - ಹನ್ನೆರಡು ತಿಂಗಳಾಗುವಾಗ ಮರಿ ಹಾಕುತ್ತದೆ. ಬರೇ ಒಂದೇ ಒಂದು ಮರಿ ಮಾತ್ರ.
    ಕುದುರೆಯು ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಂದು ಕುದುರೆಗಳು ಸುಮಾರು ತೊಂಬತ್ತು ವರ್ಷಗಳ ತನಕವೂ ಬದುಕುವುದಿದೆ.
   ಕುದುರೆಗೆ ಆಯಾಸ, ದಣಿವು, ನಿತ್ರಾಣ, ಬಳಲಿಕೆ ಎಂಬುದು ಇಲ್ಲವೇ ಇಲ್ಲ. ಯಾವಾಗಲೂ ಬಹಳ ಉತ್ಸಾಹ, ಹುರುಪು ಮತ್ತು ಹುಮ್ಮಸ್ಸಿನಲ್ಲೇ ಇರುತ್ತದೆ. ಎಷ್ಟೋ ಗಂಟೆಗಟ್ಟಲೆ ನೂರಾರು ಕಿಲೋಮೀಟರ್ ಓಡಿದರೂ ಇದಕ್ಕೆ ಯಾವುದೇ ಆಯಾಸವಾಗುವುದಿಲ್ಲ. ಹೃದಯ ಬಡಿತದಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ. ಮಾತ್ರವಲ್ಲ ಈ ಉತ್ಸಾಹಿ ಪ್ರಾಣಿ ಯಾವಾಗಲೂ ನಿಂತುಕೊಂಡೇ ಇರುತ್ತದೆ. ಕುಳಿತು ಕೊಳ್ಳುವುದು ಮತ್ತು ಮಲಗುವುದು ಎಂಬ ಅಭ್ಯಾಸವೇ ಇದಕ್ಕಿಲ್ಲ. ಕೆಲವು ಅಪೂರ್ವ ಸಂದರ್ಭಗಳಲ್ಲಿ ಮಾತ್ರ ಮಲಗುತ್ತದೆ. ಅದೂ ಬಹಳ ವಿರಳ. ಮಲಗಿದರೆ ಶಾರೀರಿಕವಾಗಿ ಏನೋ ತೊಂದರೆಯಿದೆಯೆಂದು ಎಣಿಸಲಾಗುತ್ತದೆ. ಹಾಗೆಯೇ ಇದಕ್ಕೆ ನಿದ್ರೆ ಎಂಬುದು ಬಹಳ ಕಡಿಮೆ. ಒಂದು ದಿನದಲ್ಲಿ ಸುಮಾರು ಒಂದೆರಡು ಗಂಟೆಗಳ ನಿದ್ರೆ ಸಾಕು. ಗಮನಾರ್ಹವೆಂದರೆ, ನಿದ್ರೆ ಮಾಡುವುದು ಕೂಡ ಮಲಗಿಯಲ್ಲ. ಅದೂ ಕೂಡ ನಿಂತುಕೊಂಡೇ ಆಗಿರುತ್ತದೆ. ಕೆಲವೊಮ್ಮೆ ಮಾತ್ರ ಗೋಡೆ, ಮರ ಇತ್ಯಾದಿಗಳಿಗೆ ಒರಗಿಯಾಗಿರುತ್ತದೆ ನಿದ್ದೆ. ಅದೂ ಬಹಳ ಅಪರೂಪ.
   ಈ ಪ್ರಾಣಿಯನ್ನು ಪ್ರಪ್ರಥಮವಾಗಿ ಈ ಜಗತ್ತಿನಲ್ಲಿ ಸವಾರಿಗೆ ಬಳಸಿದ್ದು ಹಝ್ರತ್ ಇಸ್ಮಾಯೀಲ್ (ಅ) ಆಗಿತ್ತೆಂದು ಇತಿಹಾಸ ಗ್ರಂಥಗಳು ಹೇಳುತ್ತದೆ. ಅದಕ್ಕಿಂತ ಮೊದಲು ಇದು ಕಾಡಿನಲ್ಲಿ ವನ್ಯ ಜೀವಿಯಾಗಿತ್ತು. ಮಾತ್ರವಲ್ಲ ಕಾಡಿನಲ್ಲಿ ಸಿಂಹ ಹುಲಿಗಳಂತಹಾ ಕ್ರೂರ ಮೃಗಗಳೂ ಕೂಡ ಈ ಕುದುರೆಯನ್ನು ಕಂಡರೆ ಹೆದರಿ ಓಡಿ ಹೋಗುತ್ತಿತ್ತು.
   ಹಝ್ರತ್ ನೂಹ್ (ಅ) ರವರ ಕಾಲದಲ್ಲಿ ಉಂಟಾದ ನೆರೆಪ್ರವಾಹದಲ್ಲಿ ಸಂಪೂರ್ಣವಾಗಿ ದ್ವಂಸವಾದ ಪವಿತ್ರ ಕ‌ಅಬಾಲಯವನ್ನು ಪುನರ್ನಿರ್ಮಾಣ ಮಾಡಲು ತಂದೆಯಾದ ಖಲೀಲುಲ್ಲಾಹಿ ಹಝ್ರತ್ ಇಬ್ರಾಹಿಮ್ (ಅ) ಮತ್ತು ಪುತ್ರನಾದ ಹಝ್ರತ್ ಇಸ್ಮಾಯೀಲ್ (ಅ) ರವರಿಗೆ ಅಲ್ಲಾಹನಿಂದ ಅಪ್ಪಣೆ ದೊರೆಯಿತು. ನಂತರ ಹಝ್ರತ್ ಇಸ್ಮಾಯೀಲ್ (ಅ) ರವರಲ್ಲಿ ಮಕ್ಕಾ ಪಟ್ಟಣದ ಹತ್ತಿರದ ಒಂದು ಬೆಟ್ಟ ಪ್ರದೇಶ ಸ್ಥಳವಾದ ಅಜ್‌ಯಾದ್ ಎಂಬಲ್ಲಿಗೆ ಹೋಗಿ ಅಲ್ಲಿ ಅಲ್ಲಾಹನು ಸಂದೇಶವಾಗಿ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಪ್ರಾರ್ಥಿಸಲು, (ದುಆ ಮಾಡಲು) ಹಾಗೆಯೇ ಆ ಪ್ರಾರ್ಥನೆಯನ್ನು ಪ್ರಾರ್ಥಿಸಿದರೆ ನಿಮ್ಮನ್ನು ಹುಡುಕಿ ನಾನು ಈ ತನಕ ಅಡಗಿಸಿಟ್ಟ ಒಂದು ನಿಧಿ ನಿಮ್ಮನ್ನು ಹುಡುಕಿ ಬರಲಿದೆಯೆಂದು ಅಲ್ಲಾಹನು ತಿಳಿಸಿದನು.
   ನಂತರ ಆ ಹೇಳಲ್ಪಟ್ಟ ಅಜ್‌ಯಾದ್ ಎಂಬ ಜಾಗ ತಲುಪಿ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಪ್ರಾರ್ಥಿಸಿದಾಗ ಹತ್ತಿರದ ಕಾಡುಗಳಿಂದ ಆ ಶಬ್ದ ಕೇಳಿದ ವನ್ಯಮೃಗವಾಗಿದ್ದ ಎಲ್ಲಾ ಕುದುರೆಗಳು ಅವರತ್ತ ಓಡಿ ಬಂದು ಸಂಪೂರ್ಣವಾಗಿ ವಿಧೇಯವಾಯಿತು. ನಂತರ ಅವರು ತನಗೆ ಒಂದು ವಾಹನವೆಂಬಂತೆ ಅದರ ಬೆನ್ನ ಮೇಲೆ ಕುಳಿತು ಸಂಚಾರ ಮತ್ತು ಸವಾರಿ ಮಾಡಲು ಆರಂಭಿಸಿದರು. ಅವರು ಕುಳಿತ ಬರಕತಿನಿಂದ ಆ ಬಳಿಕ ಈ ಕ್ರೂರ ಮೃಗ ಮನುಷ್ಯನಿಗೆ ಅಧೀನ ಮೃಗವಾಗಿ ಮಾರ್ಪಟ್ಟಿತು.
   "ನೀವು ಕುದುರೆ ಸವಾರಿ ಮಾಡಿರಿ. ಯಾಕೆಂದರೆ ಅದು ನಿಮ್ಮ ಪಿತ ಹಝ್ರತ್ ಇಸ್ಮಾಯೀಲ್ (ಅ) ರವರಿಂದ ಪಿತ್ರಾರ್ಜಿತವಾಗಿ ದೊರೆತದ್ದಾಗಿದೆ" ಎಂಬ ಪ್ರವಾದಿ ಮುಹಮ್ಮದ್ (ಸ) ರು ಹೇಳಿದ ಪವಿತ್ರ ಹದೀಸ್ ಈ ಘಟನೆಯ ವಾಸ್ತವಿಕತೆಯನ್ನು ಮತ್ತೂ ದೃಢೀಕರಿಸುತ್ತದೆ. ಅದರ ನಂತರ ಹಝ್ರತ್ ಸುಲೈಮಾನ್ (ಅ) ರವರು ಕೂಡ ಸಂಚಾರ ಮಾಡಲು ಕುದುರೆಯನ್ನು ಬಳಸಿದ್ದರು. ಮಾತ್ರವಲ್ಲ ಅವರ ರಾಜ ದರ್ಬಾರಿನಲ್ಲಿ ತನ್ನ ತಂದೆಯಾದ ಹಝ್ರತ್ ದಾವೂದ್ (ಅ) ರವರಿಂದ ಪಿತ್ರಾರ್ಜಿತವಾಗಿ ದೊರೆತ ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಆಡಂಬರ ಕುದುರೆಗಳಿದ್ದವು. ಚಕ್ರವರ್ತಿಯಾಗಿದ್ದ ಹಝ್ರತ್ ಸುಲೈಮಾನ್ (ಅ) ರಿಗೆ ಕುದುರೆಯಲ್ಲಿ ಎಲ್ಲಿಲ್ಲದ ಪ್ರೀತಿಯಾಗಿತ್ತು. ಕುದುರೆಯ ಬೆನ್ನು , ಹಣೆಯನ್ನು ಸವರುವುದು, ಅದರಲ್ಲಿ ಕುಳಿತು ಯುದ್ಧ ಮಾಡುವುದು, ಅದನ್ನು ಪರಿಪಾಲನೆ ಮಾಡುವುದು ಇತ್ಯಾದಿ ವಿಷಯಗಳಲ್ಲಿ ಅವರಿಗೆ ಬಹಳ ಆಸಕ್ತಿಯಾಗಿತ್ತು.
   ಒಂದು ದಿನ ಸಾಯಂಕಾಲ ತನ್ನ ರಾಜ ದರ್ಬಾರಿನ ಎದುರಿನ ಅಂಗಳದಲ್ಲಿ ಈ ಸಾವಿರಾರು ಕುದುರೆಗಳ ಜಿಗಿಯುವಿಕೆ ಮತ್ತು ಅದರ ಇತರ ಸುಂದರ ಚಲನವಲನಗಳನ್ನು ಕಂಡು ಅಲ್ಲೇ ಮಂಕಾಗಿ ಅವರಿಗೆ ಅಸರು ನಮಾಝ್ ಮಾಡಲು ನೆನಪಿಲ್ಲದೆ ಮರೆತು ಖಲಾ ಆಯಿತು. ಅಲ್ಲಾಹನ ಸ್ಮರಣೆಗೆ ಅಥವಾ ನಮಾಝ್‌ ಖಲಾ ಆಗಲು ಅಡ್ಡಿಯಾದ ಈ ಕುದುರೆಗಳಲ್ಲಿ ಕುಪಿತರಾಗಿ ನಂತರ ಅವುಗಳನ್ನೆಲ್ಲಾ ದ್ಸಬಹ್ ಮಾಡಿ ದಾನಮಾಡಿದರೆಂದು ಪವಿತ್ರ ಕುರ್‌ಆನಿನ "ಅಲ್ ಸ್ವಾದ್" ಅದ್ಯಾಯದಲ್ಲಿ ಈ ವಿಷಯವಾಗಿ ಬಂದ ಮೂವತ್ತ ಒಂದನೇ ಸೂಕ್ತದ ತಫ್‌ಸೀರಿನಲ್ಲಿ ಹಲವಾರು ವ್ಯಾಖ್ಯಾನಗಾರರು ಅಭಿಪ್ರಾಯ ಪಟ್ಟಿದ್ದಾರೆ.
   ಕುದುರೆ ಎರಡು ತರ. ಒಂದು ಬಹಳ ಬೆಲೆಬಾಳುವ ಆಡಂಬರ ಕುದುರೆ. ಅರೇಬಿಯನ್ ಕುದುರೆ (ARABIAN HORSE) ಎಂದು ಕರೆಯಲ್ಪಡುವ ಈ ಜಾತಿಯ ಕುದುರೆಯಲ್ಲಾಗಿರುತ್ತದೆ ರಾಜ, ಅರಸ ಅಂತೆಯೇ ಉನ್ನತ ಮನೆತನದವರು ಸಂಚಾರ ಮಾಡುತ್ತಿರುವುದು. ಪ್ರಾಚೀನ ಕಾಲದಲ್ಲಿ ನಡೆದ ಯುದ್ದದಲ್ಲೂ ಇದೇ ಕುದುರೆಯ ಅಂತೆಯೇ ಇಂದು ಅರಬೀ ರಾಷ್ಟ್ರದ ಅಧಿಕಾರಿಗಳ ರಾಜ ದರ್ಬಾರಿನಲ್ಲಿ ಅಂತೆಯೇ ಇತರ ರಾಷ್ಟ್ರದ ಅಧಿಕಾರಿ ವರ್ಗದಲ್ಲಿ ಕಾಣಲ್ಪಡುವ ಕುದುರೆಯೂ ಇದೇ ಆಗಿದೆ.
   ಮತ್ತೊಂದು ಚಾಕರಿ ಕುದುರೆ. (WORKHORSE) ಈ ಜಾತಿಯ ಕುದುರೆಯಾಗಿರುತ್ತದೆ ಇಂದು ನಮ್ಮ ದೇಶದ ಅಂತೆಯೇ ಇತರ ಕೆಲವು ದೇಶಗಳ ಕೆಲವು ಪುರಾತನ ಪಟ್ಟಣಗಳಲ್ಲಿ ಸರಂಜಾಮು ಸಾಗಿಸಲು ಅಂತೆಯೇ ಯಾತ್ರಿಕರನ್ನು ಕೊಂಡೊಯ್ಯಲು ವಾಹನದಂತೆ ಬಳಸುತ್ತಿರುವುದು. ಈ ಚಾಕರಿ ಕುದುರೆಗೆ ಅರೇಬಿಯನ್ ಕುದುರೆಯಂತೆ ಓಡುವ ತಾಕತ್ತು ಇಲ್ಲ. ಆದರೆ ಸರಂಜಾಮು ಸಾಗಾಟದಲ್ಲಿ ಇದುವೇ ಮೇಲುಗೈ.
   ಒಳ್ಳೆಯ ತರಬೇತಿ ದೊರೆತ ಅರೇಬಿಯನ್ ಕುದುರೆಗಳು ಅದರ ಮಾಲಿಕ ಅದರ ಮೇಲೆ ಸವಾರಿ ಮಾಡುತ್ತಿರುವ ವೇಳೆ ಯಾವತ್ತೂ ಅದು ಮಾಲಿಕನಿಗೆ ತೊಂದರೆ ಆಗುವುದರಿಂದ ಮಲ ಮೂತ್ರ ವಿಸರ್ಜನೆ ಮಾಡದು. ತನ್ನ ಮಾಲಿಕ ತನ್ನ ಬೆನ್ನಿನಿಂದ ಇಳಿಯುವ ತನಕ ಕಾಯುತ್ತದೆ. ಮಾತ್ರವಲ್ಲ ತನ್ನ ಯಜಮಾನನಲ್ಲದ ಬೇರೆ ಯಾವೊಬ್ಬನನ್ನೂ ತನ್ನ ಬೆನ್ನ ಮೇಲೆ ಕೂರಲು ಅನುಮತಿ ಕೂಡ ನೀಡದು. ಅಂತೆಯೇ ತನ್ನ ಯಜಮಾನನಲ್ಲಿ ಯಾವಾಗಲೂ ಬಹಳ ಗೌರವ ಮತ್ತು ಪ್ರೀತಿಯಿಂದ ವರ್ತಿಸುತ್ತದೆ.
   ಕುದುರೆಯು ಯಾವತ್ತೂ ಬೇರೆ ಕುದುರೆಯೊಂದು ತಿಂದು ಬಾಕಿ ಬಿಟ್ಟ ಪಾತ್ರೆಗೆ ಬಾಯಿ ಹಾಕದು. ಇನ್ನೊಂದು ಕುದುರೆ ತಿನ್ನುತ್ತಿರುವ ಪಾತ್ರೆಯತ್ತ ತಿರುಗಿ ನೋಡದು. ಆ ವಿಷಯದಲ್ಲಿ ತನ್ನ ಘನತೆ ಮತ್ತು ವರ್ಚಸ್ಸಿಗೆ ಕೊರತೆ ಬಾರದಂತೆ ಸದಾ ಕಾಪಾಡುತ್ತದೆ.
   ಈ ಮೃಗದ ಕೆಲವು ಅದ್ಭುತ ವಿಸ್ಮಯಗಳನ್ನು ಗತಕಾಲದ ಉಲಮಾಗಳು ಅವರವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಮನುಷ್ಯನಂತೆ ಇದು ನಿದ್ದೆಯಲ್ಲಿ ಕನಸು ಕಾಣುತ್ತದೆ ಎಂದು ಹಿಜ್‌ರಾ ಎರಡನೇ ಶತಮಾನದ ಖ್ಯಾತ ಪಂಡಿತ, ಚಿಂತಕ ಅಂತೆಯೇ ಸರಿಸಾಟಿಯಿಲ್ಲದ ಬರಹಗಾರ ಅಮ್‌ರ್ ಬಿನ್ ಅಲ್ ಬಹ್‌ರ್ ಅಲ್ ಜಾಹಿಳ್ ಹೇಳಿದ್ದಾರೆ. ಹಾಗೆಯೇ ಇದರ ಬೇರೊಂದು ವಿಷೇಶತೆಯೆಂದರೆ, ತೋಳ ನಡೆದ ಅಂದರೆ ತೋಳದ ಪಾದಸ್ಪರ್ಶವಾದ ಸ್ಥಳವನ್ನು ಇದರ ಪಾದ ಸ್ಪರ್ಶವಾದ ಕೂಡಲೇ ಕಾಲಿಗೆ ನಡುಕ ಉಂಟಾಗಿ ಕೂಡಲೇ ನಡೆಯಲಾಗದೆ ಮರಗಟ್ಟಿ ಹೋಗುತ್ತದೆ. ಮಾತ್ರವಲ್ಲ ಇದರ ಶರೀರದಿಂದ ಯಥೇಚ್ಛವಾಗಿ ಹೊಗೆ ಹೊರಬರುತ್ತದೆ. ಸುಬ್‌ಹಾನಲ್ಲಾಹ್.! ಇದೆಂತಹಾ ನಾವರಿಯದ ಅಚ್ಚರಿ ಮತ್ತು ವಿಸ್ಮಯಗಳು...?
  ಇದರ ಬೇರೊಂದು ವಿಷೇಶತೆಯೆಂದರೆ, ಒಂದು ಹಟ್ಟಿಯಲ್ಲಿ ಹಲವಾರು ತಾಯಿ ಕುದುರೆಗಳು ಮತ್ತು ಅವುಗಳ ಮರಿಗಳಿದ್ದು ಅಕಸ್ಮಾತ್ ಒಂದು ತಾಯಿ ಕುದುರೆ ಸತ್ತು ಹೋದರೆ ಅಥವಾ ಕಾಣೆಯಾದರೆ ಈ ಅನಾಥ ಮರಿಗೆ ಅಲ್ಲಿರುವ ಇತರ ಯಾವುದಾದರೊಂದು ತಾಯಿಯು ಮೊಲೆಯುಣಿಸುತ್ತದೆ. ಈವೊಂದು ಸಾಮರಸ್ಯ ಮನೋಭಾವ ಇತರ ಪ್ರಾಣಿಗಳಲ್ಲಿ ಬಹಳ ವಿರಳ.
   "ಒಂಟೆ ಮನೆಗೆ ಗೌರವವೂ ಆಡು ಬರಕತೂ ಕುದುರೆ ಐಶ್ವರ್ಯವೂ ಆಗಿದೆ" ಎಂದು ಪ್ರವಾದಿ ಮುಹಮ್ಮದ್ (ಸ) ಹೇಳಿರುತ್ತಾರೆ.
   ಕುದುರೆ ತನ್ನ ಒಡೆತನದಲ್ಲಿ ತನ್ನ ಮನೆಯ ಹಟ್ಟಿಯಲ್ಲಿರುವುದು ಆ ಮನೆಗೆ ಅಲಂಕಾರವಾಗಿದೆ ಎಂದು ಪವಿತ್ರ ಇಸ್ಲಾಂ ಹೇಳುತ್ತದೆ. ಪವಿತ್ರ ಖುರ್‌ಆನಿನ *ಅಲ್‌ನಹ್‌ಲ್* ಎಂಬ ಅಧ್ಯಾಯದಲ್ಲಿ "ಕುದುರೆ ನಿಮಗೆ ಸಂಚಾರ ಮಾಡಲು ಮತ್ತು ಅಲಂಕಾರ ವಸ್ತುವಾಗಿ ಅಲ್ಲಾಹನು ಸೃಷ್ಟಿಸಿದ್ದಾನೆ"ಎಂಬ ಸೂಕ್ತ ಇದರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇಸ್ಲಾಮಿನ ಮೂರನೇ ಖಲೀಫಾ ಹಝ್ರತ್ ಉಸ್ಮಾನ್ (ರ) ರವರ ಅಧೀನದಲ್ಲಿದ್ದ ಒಂದು ಕುದುರೆಯನ್ನು ಸಹಾಬಿಗಳಲ್ಲಿ ಶ್ರೀಮಂತ ವ್ಯಕ್ತಿಯಾಗಿದ್ದ ಸಹಾಬೀಶ್ರೇಷ್ಠ ಹಝ್ರತ್ ಅಬ್ದುಲ್‌ ರಹ್ಮಾನ್ ಬಿನ್ ಅವ್‌ಫ್ (ರ) ರವರು ಅಂದಿನ ನಲುವತ್ತು ಸಾವಿರ ರೂಪಾಯಿಗೆ ಖರೀದಿ ಮಾಡಿದ್ದರು.! ಅಂದು ಅರಬಿಗಳಾದ ಆ ಸಹಾಬಿಗಳಿಗೆ ಕುದುರೆಯಲ್ಲಿದ್ದ ಗೌರವ ಮತ್ತು ಪ್ರೀತಿಯ ಛಾಯೆ ನಾವಿಂದು ಇಂದಿನ ಅರಬಿ ವಂಶಜರಲ್ಲಿ ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಕುದುರೆಗೆ ಇಂದೂ ಲಕ್ಷಾಂತರ ರೂಪಾಯಿ ಬೆಲೆಯಿದೆ ಎಂದು ಓದುಗರು ಸಾಂದರ್ಭಿಕವಾಗಿ ತಿಳಿಯಬೇಕಾಗಿದೆ. 
   ಮನುಷ್ಯ ಪಿತಾ ಹಝ್ರತ್ ಅದಮ್ (ಅ) ರವರನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಇತರ ಎಲ್ಲಾ ವಸ್ತುಗಳನ್ನು ಸೃಷ್ಟಿಸಲಾಗಿತ್ತು. ಕುದುರೆಯನ್ನು ಅವರ ಸೃಷ್ಟಿಗೆ ಎರಡು ದಿನ ಮೊದಲು ಸೃಷ್ಟಿಸಿದ್ದೆಂದು ಕೆಲವು ಚರಿತ್ರೆ ಗ್ರಂಥಗಳಲ್ಲಿ ಕಂಡುಬರುತ್ತದೆ. ಆದಮ್ (ಅ) ರನ್ನು ಸೃಷ್ಟಿಸಿದ ನಂತರ ಅವರ ಎದುರಿನಲ್ಲಿ ಪ್ರಪಂಚದಲ್ಲಿ ಅಂತ್ಯ ದಿನದ ವರೆಗೆ ಉತ್ಪಾದನೆಯಾಗುವ ಎಲ್ಲಾ ಜೀವವಿರುವ ಅಂತೆಯೇ ಎಲ್ಲಾ ಜಡ ವಸ್ತುಗಳನ್ನು ಪ್ರದರ್ಶಿಸಿ ಇದರಲ್ಲಿ ನಿಮಗೆ ಬಹಳ ಇಷ್ಟವಾದದ್ದು ಅಂದರೆ ನಿಮಗೆ ಬಹಳ ಮೆಚ್ಚುಗೆ ಆದದ್ದು ಯಾವುದೆಂದು ಕೇಳಿದಾಗ ಕುದುರೆಗೆ ಸನ್ನೆ ಮಾಡಿದ್ದರೆಂದು ಇತಿಹಾಸ ಗ್ರಂಥಗಳಲ್ಲಿ ಉಲಮಾಗಳು ಉಲ್ಲೇಖಿಸಿದ್ದಾರೆ ಎಂದಾದರೆ ಕುದುರೆಗಿರುವ ಸ್ಥಾನಮಾನ ಎಷ್ಟೆಂದು ಊಹಿಸಬಹುದು.
   "ನೀವು ನಿಮ್ಮ ಮಕ್ಕಳಿಗೆ ಈಜುವಿದ್ಯೆ, ಬಿಲ್ಲುವಿದ್ಯೆ, ಅಂತೆಯೇ ಕುದರೆ ಸವಾರಿಯನ್ನು ಅವರ ಪುಟ್ಟ ವಯಸ್ಸಿನಲ್ಲೇ ಕಲಿಸಿ ಅಭ್ಯಾಸ ಮಾಡಿಕೊಡಿ ಎಂದು ಹಝ್ರತ್ ಉಮರ್ (ರ) ಹೇಳಿದ ಮಾತು ಕುದುರೆ ಸವಾರಿಗಿರುವ ಮಹತ್ವವನ್ನು ಎತ್ತಿ ತೋರಿಸುತ್ತದೆ. 

ಸಮುದ್ರಕ್ಕೆ ಧಾವಿಸಿದ ಫರೋವನ ಕುದುರೆಗಳು
 
  ಸಾಧಾರಣ ಆಟವಾಡುವಲ್ಲಿಗೆ ಅಲ್ಲಾಹನ ಮಲಕುಗಳು ಬರಲಾರರು. ಆದರೆ ಕುದುರೆ ಸವಾರಿ ಅಥವಾ ಕುದುರೆ ಓಟ ಒಂದು ಆಟವಾದರೂ ಆ ಅಡುವಲ್ಲಿಗೆ ಮಲಕುಗಳು ಹಾಜರಾಗುವರೆಂದು ಸಹಾಬಿಯಾದ ಹಝ್ರತ್ ಅಬೂ ಅಯ್ಯೂಬ್ ಅಲ್ ಅಂಸಾರಿಯಿಂದ ಉಲ್ಲೇಖಿಸಲ್ಪಟ್ಟ ಹದೀಸಿನಲ್ಲಿ ವರದಿಯಾಗಿದೆ.
   ಈ ಪ್ರಪಂಚದಲ್ಲಿ ಪರಸ್ಪರ ಲೈಂಗಿಕ ಸಂಪರ್ಕ ಒಂದೇ ಜಾತಿಯ ಗಂಡು ಮತ್ತು ಹೆಣ್ಣಿನ ಮಧ್ಯೆ ನಡೆಯುವುದು ಸ್ವಾಭಾವಿಕ ಸಂಗತಿ. ಉದಾಹರಣೆಗೆ ಮನುಷ್ಯ ಗಂಡು ಮನುಷ್ಯ ಹೆಣ್ಣಾಗಿ, ಗಂಡು ಹುಲಿ ಹೆಣ್ಣು ಹುಲಿಯಾಗಿ, ಗಂಡಾನೆ ಹೆಣ್ಣಾನೆಯಾಗಿ ಇತ್ಯಾದಿ ಇತ್ಯಾದಿ... ಆದರೆ ಗಂಡು ಕುದುರೆ ಹೆಣ್ಣು ಕತ್ತೆಯಾಗಿಯೂ, ಗಂಡು ಕತ್ತೆ ಹೆಣ್ಣು ಕುದುರೆಯಾಗಿಯೂ ಲೈಂಗಿಕ ಸಂಪರ್ಕ ಮಾಡುತ್ತದೆ. ಆಗ ಅದಕ್ಕೆ ಹುಟ್ಟುವ ಮರಿಯ ರೂಪವು ಈ ಎರಡು ಮೃಗಗಳಾಗಿ ಹೋಲಿಕೆ ಇರುತ್ತದೆ. ಆ ಮೃಗವನ್ನು ಕನ್ನಡದಲ್ಲಿ ಹೇಸರಗತ್ತೆ ಎಂದೂ ಇಂಗ್ಲಿಷ್‌ನಲ್ಲಿ Mule ಎಂದೂ ಕರೆಯುತ್ತಾರೆ.
   ಇದರ ಬೇರೊಂದು ವಿಶೇಷತೆಯೆಂದರೆ, ಯಾವತ್ತೂ ಇದು ತಿಳಿ ನೀರನ್ನು ಕುಡಿಯದು. ತಿಳಿ ನೀರನ್ನು ಕೆದಡಿ ಕೆಸರು ನೀರು ಮಾಡಿ ಕೊಟ್ಟರೆ ಕುಡಿಯುತ್ತದೆ. ಹಾಗೆಯೇ ಇದರ ಕೊರಳಿಗೆ ತೋಳದ ಹಲ್ಲನ್ನು ತೂಗುಹಾಕಿದರೆ ಬಹಳ ವೇಗವಾಗಿ ಓಡುತ್ತದೆ. 
   ಕುದುರೆಯ ದೃಷ್ಟಿಶಕ್ತಿ ಬಹಳ ಸೂಕ್ಷ್ಮ ಮತ್ತು ಮಿಗಿಲಾಗಿದೆ. ಎದುರಿನ ಭಾಗವಲ್ಲದೆ ಬಲ ಮತ್ತು ಎಡ ಭಾಗಗಳನ್ನು ಚೆನ್ನಾಗಿ ಕಾಣುವ ರೂಪದಲ್ಲಾಗಿರುತ್ತದೆ ಇದರ ಕಣ್ಣಿನ ಸೃಷ್ಟಿಕೃತಿ. ಇತರ ಮೃಗಗಳು ರಾತ್ರಿಯ ವೇಳೆ ಕಾಣುವ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಜಾಸ್ತಿಯಾಗಿ ಕಾಣುವ ಬಹಳ ಸೂಕ್ಷ್ಮವಾದ ನೇತ್ರವನ್ನು ಅಲ್ಲಾಹನು ಇದಕ್ಕೆ ಕೊಟ್ಟಿರುತ್ತಾನೆ.
    ಗ್ರಾಮವಾಸಿಯಾದ ಅಅ್‌ರಾಬಿಯೊಬ್ಬರು ಪ್ರವಾದಿ ಸನ್ನಿಧಿಗೆ ಬಂದು ಹೇಳಿದರು. "ಪ್ರವಾದಿಯವರೇ.., ನನಗೆ ಕುದುರೆಯೆಂದರೆ ಎಲ್ಲಿಲ್ಲದ ಪ್ರೀತಿ. ಕುದುರೆ ಜೊತೆಗಿಲ್ಲದ ಒಂದು ನಿಮಿಷವನ್ನು ನೆನೆಸಲು ಕೂಡ ನನಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಸ್ವರ್ಗ ಪ್ರವೇಶಿಸಿದರೆ ಅಲ್ಲಿ ಕುದುರೆ ಇರಬಹುದಾ...?" ಆಗ ಪ್ರವಾದಿಯವರು "ಅಲ್ಲಿ ನಿನಗೆ ಪದ್ಮರಾಗ ಮಾಣಿಕ್ಯದಂತೆ ಪಳಪಳಿಸುವ ಕುದುರೆಯಿದೆ. ಇಹಲೋಕದ ಕುದುರೆಗಿಂತ ವ್ಯತ್ಯಾಸವೆಂಬಂತೆ ಅದಕ್ಕೆ ಎರಡು ರೆಕ್ಕೆಯೂ ಇದೆ. ನಿನಗೆ ಅದರಲ್ಲಿ ಕುಳಿತು ಎಲ್ಲಿಗೆ ಬೇಕಾದರೂ ಹಾರಿ ಹೋಗಬಹುದು." ಎಂದು ಉತ್ತರಿಸಿದರು. ಈ ಹದೀಸನ್ನು ಇಮಾಮ್ ತಿಬ್‌ರೀಝಿ (ರ) ತನ್ನ ಮಿಶಾಕಾತುಲ್ ಮಸಾಬೀಹ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
   ಹಝ್ರತ್ ಮೂಸಾ (ಅ) ರವರನ್ನು ಕೊಲ್ಲಲು ಫಿರ್‌ಅವ್‌ನನು ಮತ್ತು ಅವನ ಸೈನಿಕರು ಹಿಂಬಾಲಿಸಿ ಬಂದದ್ದು ಬಹಳ ಆಡಂಬರವಾದ ಗಂಡು ಕಪ್ಪು ಕುದುರೆಯ ಮೇಲೆ ಸವಾರಿ ಮಾಡಿಯಾಗಿತ್ತು. ಫಿ‌ರ್‌ಅವ್‌ನನ ಸೈನ್ಯ ಬರುವುದನ್ನು ತಿಳಿದ ಹಝ್ರತ್ ಮೂಸಾ (ಅ) ಮತ್ತು ಅವರ ಅನುಚರರು ಒಂದು ಕಡಲ ಕಿನಾರೆ ತಲುಪಿದರು. ಅಲ್ಲಿ ಅಲ್ಲಾಹನ ಆಜ್ಞೆಯಂತೆ ತನ್ನ ಕೈಯಲ್ಲಿರುವ ಬೆತ್ತದಿಂದ ಸಮುದ್ರಕ್ಕೆ ಬಡಿದಾಗ ಅದು ಇಬ್ಬಾಗವಾಗಿ, ಮಧ್ಯದಲ್ಲಿ ಒಂದು ನಡೆದು ಹೋಗುವ ದಾರಿ ಉಂಟಾಯಿತು. ನಂತರ ಮೂಸಾ (ಅ) ಮತ್ತು ಅವರ ಸಹಪಾಟಿಗಳು ಆ ದಾರಿಯಾಗಿ ಪ್ರವೇಶಿಸಿದಾಗ ಇತ್ತ ಅವರನ್ನು ಹುಡುಕಿ ಬಂದ ಫರೋವ ಮತ್ತು ಅವನ ಸುಸಜ್ಜಿತ ಸಶಸ್ತ್ರ ಪಡೆ ಕಡಲ ಕಿನಾರೆ ತಲುಪಿತು. ಕಡಲ ಮಧ್ಯೆ ಹೊಸತಾಗಿ ನಿರ್ಮಾಣಗೊಂಡ ದಾರಿಯಲ್ಲಿ ಮೂಸಾ (ಅ) ಮತ್ತು ಅನುಚರರು ಹೋಗುತ್ತಿರುವಾಗ ಭಯದಿಂದ ಆ ದಾರಿ ಪ್ರವೇಶಿಸಲು ಫರೋವನು ಹಿಂಜರಿದನು. ಆಗ ಹಝ್ರತ್ ಜಿಬ್‌ರೀಲ್ (ಅ) ರವರ ನಾಯಕತ್ವದಲ್ಲಿ ಕೆಲವು ಮಲಕುಗಳು ಮನುಷ್ಯ ವೇಶದಲ್ಲಿ ಹೆಣ್ಣು ಕುದುರೆಯ ಮೇಲೆ ಕುಳಿತು ಬಂದು ಫರೋವನ ಸೈನ್ಯದ ಮುಂದಿನ ಗುಂಪಿನಲ್ಲಿ ಹೋಗಲು ಶುರುಮಾಡಿದರು. ಇತ್ತ ಫರೋವನ ಸೈನ್ಯದ ಎಲ್ಲಾ ಗಂಡು ಕುದುರೆಗಳು ಎದುರಲ್ಲಿ ಹೋಗುವ ಹೆಣ್ಣು ಕುದುರೆಗಳನ್ನು ಕಂಡಾಗ ಅವನ ಹಸಿರು ನಿಶಾನೆಗೆ ಕಾಯದೆ ಸಮುದ್ರ ದಾರಿ ಪ್ರವೇಶಿಸಿತು. ನಂತರದ ಚರಿತ್ರೆ ನಮ್ಮ ವಿಷಯವಲ್ಲದ ಕಾರಣ ಓದುಗರ ಗಮನವನ್ನು ಆ ಕಡೆ ಸೆಳೆಯ ಬಯಸುವುದಿಲ್ಲ.
   ಜಠರದ ಎಡಭಾಗದಲ್ಲಿರುವ ರಕ್ತ ಸಂಬಂಧವಾದ ಅಂಗಾಂಗ ಪ್ಲೀಹ (Spleen) ಎಂಬ ಅಂಗಾಂಗ ಈ ಕುದುರೆಗೆ ಇಲ್ಲ. ಅರಬಿ ಭಾಷೆಯಲ್ಲಿ طحال ಎಂದು ಕರೆಯಲ್ಪಡುವ ಈ ಅವಯವ ಇಲ್ಲದ ಮೃಗ ಇದು ಮಾತ್ರ. ಅದು ಇದರ ವೇಗದ ಮಿತಿಗೆ ಸಹಾಯಕವಾಗಿ ಅಲ್ಲಾಹನು ಮಾಡಿದ ಅಪೂರ್ವ ಸಂಗತಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

   ಪ್ರವಾದಿ ಮುಹಮ್ಮದ್ (ಸ) ರಿಗೆ ಕುದುರೆಯಲ್ಲಿ ಎಲ್ಲಿಲ್ಲದ ಪ್ರೀತಿಯಾಗಿತ್ತು. ಪ್ರಸಿದ್ಧ ಸಹಾಬಿಯಾದ ಜರೀರ್ ಬಿನ್ ಅಬ್ದುಲ್ಲಾಹ್ (ರ) ಹೇಳುತ್ತಾರೆ. "ನಾನೊಮ್ಮೆ ಪ್ರವಾದಿಯವರು ಅವರ ಕುದುರೆಯ ಹಣೆಯನ್ನು ತನ್ನ ಕೈ ಬೆರಳಿನಿಂದ ಸವರುವುದನ್ನು ಕಂಡೆನು. ನಂತರ ಇದನ್ನು ನೋಡುತ್ತಿರುವ ನನ್ನಲ್ಲಿ ಹೇಳಿದರು. "ಕುದುರೆಯ ಹಣೆಯಲ್ಲಿ ಅಂತ್ಯ ದಿನದ ತನಕ ಲಾಭದಾಯಕ ವರಮಾನ ಮತ್ತು ಪ್ರತಿಫಲವಿದೆ" ಈ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.
   ಕುದುರೆಯನ್ನು ಬಳಸಿ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ ವೈರಿಗಳು ಪರಾಜಿತರಾದರೆ ಅವರು ಯುದ್ಧ ಭೂಮಿಯಲ್ಲಿ ಬಿಟ್ಟು ಹೋಗುವ ವಸ್ತುಗಳಾಗಿರುತ್ತದೆ ಘನೀಮಃ ಸಂಪತ್ತು. ಅದಾಗಿರುತ್ತದೆ ಇಲ್ಲಿ ಲಾಭದಾಯಕ ವರಮಾನ ಎಂದು ಹೇಳಿದ್ದು. ಅಂತೆಯೇ ಯುಧ್ದ ಮಾಡಿದ ಕಾರಣದಿಂದ ಅಲ್ಲಾಹನ ಭಾಗದಿಂದ ದೊರಕುವ ಪ್ರತಿಫಲವಾಗಿದೆ ಇಲ್ಲಿ ಪ್ರತಿಫಲವಿದೆಯೆಂದು ಹದೀಸಿನಲ್ಲಿ ಹೇಳಿದ ಉದ್ದೇಶವೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.ಅಂತೆಯೇ ಯುಧ್ದಕ್ಕೆ ಅಲ್ಲದೆ ಸವಾರಿಗೆ ಬಳಸುವ ಕುದುರೆಗೂ ಈ ಮನ್ನಣೆ ಇದೆಯೆಂದು ಅಭಿಪ್ರಾಯವಿದೆ.
  ಪ್ರವಾದಿಯವರು ತನ್ನ ಜೀವಮಾನದಲ್ಲಿ ಹಲವಾರು ಕುದುರೆಗಳನ್ನು ಹೊಂದಿದ್ದರು. ಅದು ಎಷ್ಟಿತ್ತೆಂಬುದರ ಬಗ್ಗೆ ಹಲವಾರು ಅಭಿಪ್ರಾಯವಿದೆ. ಆರು, ಏಳು, ಒಂಬತ್ತು, ಹತ್ತು, ಹದಿನೈದು ಹೀಗೆ ಹಲವಾರು ಸಂಖ್ಯೆಯಲ್ಲಿ ವರದಿಯಾಗಿದೆ. ಮಾತ್ರವಲ್ಲ ಅವರ ಒಂದೊಂದು ಕುದುರೆಗೂ ಬೇರೆ ಬೇರೆ ನಾಮಕರಣವಿತ್ತು. ಅದರಲ್ಲಿ ಕೆಲವು ಅವರೇ ಖರೀದಿಸಿದ್ದಾದರೆ ಇನ್ನು ಕೆಲವು ಬೇರೆ ಬೇರೆ ಸಂದರ್ಭಗಳಲ್ಲಿ ಅವರಿಗೆ ಉಡುಗೊರೆಯಾಗಿ ದೊರೆತದ್ದಾಗಿತ್ತು. 
   ಒಬ್ಬ ಗ್ರಾಮವಾಸಿಯಿಂದ ಪ್ರವಾದಿಯವರು ಒಂದು ಕಪ್ಪು ಬಣ್ಣದ ಕುದುರೆಯನ್ನು ಸುಮಾರು ನಾಲ್ಕು ನೂರು ದಿರ್‌ಹಮ್ ಬೆಲೆಗೆ ಖರೀದಿಸಿದ್ದರು. ಓಟದಲ್ಲಿ ಬಹಳ ಚುರುಕಾದ ಈ ಕುದರೆಯ ಹೆಸರು ಅ‌ಅ್‌ರಾಬಿಯತ್ತ "ಳಿರ್‌ಸ್" ಎಂದಾಗಿತ್ತು. ನಂತರ ಪ್ರವಾದಿಯವರು ಅದರ ಹೆಸರನ್ನು "ಸಕ್‌ಬ್" ಎಂದು ಬದಲಾವಣೆ ಮಾಡಿದರು. ಪ್ರವಾದಿಯವರ ಬದುಕಿನ ಪ್ರಥಮ ಯುದ್ಧವು ಈ ಕುದುರೆಯ ಮೇಲೆ ಕುಳಿತಾಗಿತ್ತು.
   ಸಹಾಬೀಶ್ರೇಷ್ಠ ಹಝ್ರತ್ ತಮೀಮುದ್ದಾರಿ (ರ) ಎಂಬ ಸಹಾಬಿಯಿಂದ ಪ್ರವಾದಿಯವರಿಗೆ ಉಡುಗೊರೆಯಾಗಿ "ವರ್‌ದ್" ಎಂಬ ಹೆಸರಿನ ಒಂದು ಕುದುರೆಯು ಲಭಿಸಿತ್ತು. ಅದನ್ನು ಅವರು ಕೆಲವು ಕಾಲ ಉಪಯೋಗ ಮಾಡಿ ನಂತರ ಹಝ್ರತ್ ಉಮರ್ (ರ) ರಿಗೆ ಉಡುಗೊರೆಯಾಗಿ (ಹದಿಯ) ಕೊಟ್ಟಿದ್ದರು. ಉಮರ್ (ರ) ಅದನ್ನು ಯುದ್ದದ ಮತ್ತು ಇತರ ಅಗತ್ಯಕ್ಕೆ ಬೇಕಾಗಿ ಬೇರೊಬ್ಬರಿಗೆ ಹದಿಯಯಾಗಿ ಕೊಟ್ಟರು.
   ಅಂತೆಯೇ ಕಾಲಕ್ರಮೇಣ ಒಂದು ದಿನ ಬಜಾರಿನ ಜಾನುವಾರು ಮಾರಾಟ ಸಂತೆಯಲ್ಲಿ ಹಝ್ರತ್ ಉಮರ್ (ರ) ರವರು ಈ ಕುದುರೆಯನ್ನು ಬಹಳ ಅಗ್ಗವಾದ ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟದ್ದನ್ನು ಕಂಡಾಗ ಅದನ್ನು ಖರೀದಿಸಲು ಸಿದ್ದರಾದರು. ಇದನ್ನು ತಿಳಿದ ಪ್ರವಾದಿ ಮುಹಮ್ಮದ್ (ಸ) ರು ಹಝ್ರತ್ ಉಮರ್ (ರ) ರಲ್ಲಿ ಹೇಳಿದರು. "ನೀವು ಅದನ್ನು ಖರೀದಿ ಮಾಡಬೇಡಿ"
   ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಉಡುಗೊರೆಯಾಗಿ ಕೊಟ್ಟದ್ದನ್ನು ಹಿಂತಿರುಗಿ ಪಡೆಯುವುದನ್ನು ಇಸ್ಲಾಮ್ ಬಹಳ ಕೆಳಮಟ್ಟದ ಕೆಲಸವಾಗಿ ಕಂಡದ್ದರಿಂದ ಇಲ್ಲಿಯೂ ಅದೇ ಉಡುಗೊರೆಯಾಗಿ ಕೊಡಲ್ಪಟ್ಟ ಕುದುರೆಯು ನಂತರ ಮಾರಾಟ ಮಾಡಲ್ಪಡುವಾಗ ಅದನ್ನು ಖರೀದಿಸಬೇಡ ಎಂದು ಉಮರ್ (ರ) ರಿಗೆ ಪ್ರವಾದಿಯವರು ತಾಕೀತು ಮಾಡಿದ್ದಾಗಿರಬಹುದು ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.

ಪ್ರವಾದಿಯವರನ್ನು ಕುದುರೆ ವ್ಯಾಪಾರ ಮಾಡಿ ವಂಚಿಸಿದ ಅ‌ಅ್‌ರಾಬಿ!

  ಒಮ್ಮೆ ಪ್ರವಾದಿಯವರು ಸವಾದ್ ಬಿನ್ ಅಲ್ ಹಾರಿಸ್ ಅಲ್ ಮುಹಾರಿಬೀ ಎಂಬ ಗ್ರಾಮವಾಸಿ ಅ‌ಅ್‌ರಾಬಿಯಿಂದ ಒಂದು ಕುದುರೆ ಖರೀದಿಸಿದರು. ಪೇಟೆಯಲ್ಲಿ ಪರಸ್ಪರ ಕಂಡಾಗ ನಡೆದ ವ್ಯಾಪಾರವಾದ್ದರಿಂದ ಪ್ರವಾದಿಯವರ ಕೈಯಲ್ಲಿ ಅವರಿಗೆ ನಗದಾಗಿ ಕೊಡಲು ಆಗ ಹಣವಿರಲಿಲ್ಲ. ಅಂತೆಯೇ ಖರೀದಿಸಿದ ಕುದುರೆಗೆ ಹಣ ಕೊಡಲು ಪ್ರವಾದಿಯವರು ತನ್ನ ಮನೆಯತ್ತ ನಡೆದರು. ಆದರೆ ಅ‌ಅ್‌ರಾಬಿಯ ನಡೆತ ಸ್ವಲ್ಪ ನಿಧಾನವಾಗಿದ್ದರಿಂದ ಅವರು ಪ್ರವಾದಿಯವರಿಗಿಂತ ಸ್ವಲ್ಪ ಹಿಂದಿನಿಂದ ನಡೆಯುತ್ತಿದ್ದರು.
   ಇತ್ತ ಬಜಾರಿನಲ್ಲಿ ಸಂಜೆಯ ವೇಳೆ ಸುತ್ತಾಡುವ ಕೆಲವು ಯುವಕರು ಅ‌ಅ್‌ರಾಬಿಯನ್ನು ಕಂಡಾಗ "ನಿನ್ನ ಕುದುರೆಯನ್ನು ಮಾರುತ್ತಿಯಾ..? ನಾವು ಒಳ್ಳೆಯ ಹಣ ಕೊಡುತ್ತೇವೆ" ಎಂದು ಹೇಳಿ ಚೌಕಾಶಿ ಮಾಡಿದರು. ನಿಜವಾಗಿ ಈ ಯುವಕರಿಗೆ ಪ್ರವಾದಿಯವರು ಈ ಕುದುರೆಯನ್ನು ಖರೀದಿಸಿದ ವಿಷಯ ಗೊತ್ತಿರಲಿಲ್ಲ. ಬಡಪಾಯಿ ಅ‌ಅ್‌ರಾಬಿ ಈ ಯುವಕರ ಮಾತಿಗೆ ಬಲಿಯಾಗಿ ಮುಂದಿನಿಂದ ಹೋಗುತ್ತಿದ್ದ ಪ್ರವಾದಿಯವರನ್ನು ಕರೆದು ಹೇಳಿದ; "ನಾನು ನಿಮಗೆ ಇದನ್ನು ಮಾರಾಟ ಮಾಡಲಿಲ್ಲ." ಆಗ ಪ್ರವಾದಿಯವರು ಕೇಳಿದರು. "ಸರಿಯಾ... ನೀನು ಮಾರಾಟ ಮಾಡಲಿಲ್ಲವಾ..?" ಆತ ಹೇಳಿದ "ಇಲ್ಲ.. ಅಲ್ಲಾಹಣಾಣೆ ಖಂಡಿತವಾಗಿ ಮಾಡಲಿಲ್ಲ. ವ್ಯಾಪಾರ ಮುಗಿದಿದೆ ಎಂದು ನೀವು ಹೇಳುವುದಾದರೆ ಸಾಕ್ಷಿಯನ್ನು ಹಾಜರು ಪಡಿಸಬೇಕು"  
   ಸಹಾಬೀಶ್ರೇಷ್ಠ ಹಝ್ರತ್ ಖುಝಯ್‌ಮಾ (ರ) ಹಾಜರಾತಿಯಲ್ಲಿ ನಡೆದ ಈ ವ್ಯಾಪಾರಕ್ಕೆ ಅವರು ಸಾಕ್ಷಿ ನಿಂತರು. ಆದರೆ ಅ‌ಅ್‌ರಾಬಿಗೆ ಸಾಕ್ಷಿಯ ಅಗತ್ಯವಿರಲಿಲ್ಲ. ಒಟ್ಟಿನಲ್ಲಿ ಜಾಸ್ತಿ ಹಣ ಸಿಗುತ್ತದೆ ಎಂದು ಕಂಡಾಗ ನಡೆದ ವ್ಯಾಪಾರವನ್ನು ಮುರಿಯುವುದಾಗಿತ್ತು ಅವನ ಉದ್ದೇಶ. ನಂತರ ಪ್ರವಾದಿಯವರು ಚರ್ಚೆಗೆ ನಿಲ್ಲದೆ ಆ ಕುದುರೆಯನ್ನು ಅವರಿಗೇ ಹಿಂತಿರುಗಿಸಿ ಕೊಟ್ಟು ಹೇಳಿದರು. "ನನಗೆ ವಂಚನೆ ಮಾಡಿದ ನಿನಗೆ ಈ ಕುದುರೆಯಲ್ಲಿ ಅಲ್ಲಾಹನು ಬರಕತ್ ಕೊಡಲಾರ"
   ಪ್ರವಾದಿಯವರ ಕೋಪಕ್ಕೆ ಬಲಿಯಾದ ಈ ವ್ಯಕ್ತಿಯ ಈ ಕುದುರೆಗೆ ಮರುದಿನವೇ ಎದ್ದು ನಿಲ್ಲಲಾಗದ ರೋಗ ಬಂದು ಸತ್ತು ಹೋಯಿತು. ಇತ್ತ ಗಮನಾರ್ಹ ಸಂಗತಿಯೆಂದರೆ, ಪ್ರವಾದಿಯವರಿಗೆ ಸಾಕ್ಷಿನಿಂತ ಸಹಾಬೀಶ್ರೇಷ್ಠ ಹಝ್ರತ್ ಖುಝೈಮಾ (ರ) ರವರು ಮನೆ ತಲುಪಿ ರಾತ್ರಿ ಮಲಗಿದಾಗ ನಿದ್ದೆಯಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಹಣೆಯ ಮೇಲೆ ತನ್ನ ಹಣೆಯಿಟ್ಟು ಸಾಷ್ಟಾಂಗ ಮಾಡುವ ಬಹಳ ರೋಮಾಂಚಕಾರಿ ಕನಸನ್ನು ಕಂಡರು. 
   ಹಝ್ರತ್ ಖುಝೈಮಾ (ರ) ರು ಮರುದಿನ ಬೆಳಿಗ್ಗೆಯೇ ಪ್ರವಾದಿ ಸನ್ನಿಧಿ ತಲುಪಿ ರಾತ್ರಿ ಬಿದ್ದ ಕನಸಿನ ಬಗ್ಗೆ ವಿವರಿಸಿದರು. ಕೂಡಲೇ ಪ್ರವಾದಿಯವರು ಕನಸಲ್ಲಿ ಕಂಡ ಘಟನೆ ನಿಜವಾದ ರೂಪದಲ್ಲಿ ನಡೆಯಲಿ ಎಂದು ಹೇಳಿ ತಾನು ಒಂದು ಭಾಗಕ್ಕೆ ಸರಿದು ಮಲಗಿ ತನ್ನ ಪವಿತ್ರ ಹಣೆಯನ್ನು ಪ್ರದರ್ಶಿಸಿ ಅದರ ಮೇಲೆ ಖುಝೈಮಾ (ರ) ರಿಗೆ ಹಣೆ ಇಟ್ಟು ಸಾಷ್ಟಾಂಗ ಮಾಡಲು ಅವಕಾಶ ಮಾಡಿಕೊಟ್ಟರು.
   ಈ ರೋಮಾಂಚಕಾರಿ ಘಟನೆಯನ್ನು ಇಮಾಮ್ ಸುಹೈಲಿ (ರ) ರವರು ತನ್ನ "ಮುಸ್ನದುಲ್ ಹರ್‌ಸ್" ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಮಾಡಿದ ಸಾಷ್ಟಾಂಗ ನಮಾಜಿನಲ್ಲಿ ಅಲ್ಲಾಹನಿಗೆ ಮಾಡುವ ಏಳು ಅವಯವ ನೆಲದಲ್ಲಿಟ್ಟು ಮಾಡುವ ಸಾಷ್ಟಾಂಗವಲ್ಲ. ಈ ಹಣೆಯ ಮೇಲೆ ಹಣೆಯಿಟ್ಟು ಮಾಡಿದ ಸಾಷ್ಟಾಂಗ ಪ್ರವಾದಿವರ್ಯರ ಆಶಿರ್ವಾದ ಮತ್ತು ಬರಕತ್ ಸಿಗಲು ಮಾಡಿದ ಸಾಷ್ಟಾಂಗವೆಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತಿದ್ದೇನೆ.
   ಹಲವಾರು ಪವಾಡ ಮತ್ತು ಕರಾಮತುಗಳಿಗೆ ಸಾಕ್ಷಿಯಾಗಿದ್ದ, ಆತ್ಮೀಯ ಲೋಕದ ತೇಜಸ್ಸು ಶೈಖ್ ಮುಹಮ್ಮದ್ ಬಿನ್ ಹಸ್ಸಾನ್ ಅಲ್ ಬಸರೀ(ರ) ರವರು ಒಮ್ಮೆ ಒಂದು ಮರುಭೂಮಿಯಲ್ಲಿ ತನ್ನ ಕುದುರೆಯ ಮೇಲೆ ಕುಳಿತು ಸಂಚಾರ ಮಾಡುತ್ತಿರುವಾಗ ಅಕಸ್ಮಾತ್ ಎನೋ ಕಾರಣದಿಂದ ಅವರ ಕುದುರೆ ಸಾವನ್ನಪ್ಪಿತು. ಕೂಡಲೇ ಅವರು ಆಕಾಶದತ್ತ ಕೈಯೆತ್ತಿ ಹೇಳಿದರು. "ಅಲ್ಲಾಹ್.. ನನ್ನನ್ನು ದಾರಿಮಧ್ಯೆ ಮಾಡಬೇಡ. ನನ್ನ ಕುದುರೆಯನ್ನು ನನಗೆ ಈಗಲೇ ಹಯಾತ್ ಮಾಡಿ ಕೊಡು." 
  ಸುಬ್‌ಹಾನಲ್ಲಾಹ್ ಅವರ ಬಾಯಿಯಿಂದ ಆ ಮಾತು ಬಂದ ಕೂಡಲೇ ಕುದುರೆ ಎದ್ದು ನಿಂತಿತು. ನಂತರ ಅವರು ಅದೇ ಕುದುರೆ ಮೇಲೆ ಕುಳಿತು ತನ್ನ ಮನೆಯತ್ತ ಸಂಚಾರ ಮಾಡಿದರು. ಮನೆ ತಲುಪಿ ಕುದುರೆಯ ಬೆನ್ನಿನಿಂದ ಕೂರುವ ಹಲ್ಲಣವನ್ನು ತೆಗೆದ ಕೂಡಲೇ ಕುದುರೆಯು ಅಲ್ಲಾಹುವಿನ ವಿಧಿಗೆ ಓಗೊಟ್ಟಿತು.
   ಈ ಮಹಾನುಭಾವರು ರಮಲಾನ್ ತಿಂಗಳ ಚಂದ್ರದರ್ಶನವಾದರೆ ತನ್ನ ಮನೆಯಲ್ಲಿ ಮಸೀದಿಯಾಗಿ ವಖಫ್ ಮಾಡಿದ ಒಂದು ಕೋಣೆಯೋಳಗೆ ಪ್ರವೇಶಿಸಿ ಆರಾಧನೆಯಲ್ಲಿ ಮುಳುಗಿದರೆ ನಂತರ ಹೊರ ಬರುವುದು ಈದುಲ್ ಫಿತರಿನಂದಾಗಿತ್ತು. ಈ ಮೂವತ್ತು ದಿನಗಳಲ್ಲಿ ಎಲ್ಲಾ ದಿನವೂ ಅವರ ಪತ್ನಿಯು ಕೋಣೆಯ ಕಿಟಿಕಿಯಿಂದ ಅವರಿಗೆ ಆಹಾರವಾಗಿ ಒಂದೊಂದು ರೊಟ್ಟಿಯನ್ನು ಕೊಡುತ್ತಿದ್ದರು. ಸುಬ್‌ಹಾನಲ್ಲಾಹ್.! ಈದುಲ್ ಫಿತರಿನಂದು ಕೋಣೆ ತೆರೆಯುವಾಗ ಮುವತ್ತು ದಿನ ಕೊಟ್ಟ ಎಲ್ಲಾ ರೊಟ್ಟಿಗಳೂ ಸ್ವಲ್ಪವೂ ಹಾಳಾಗದೆ ಒಂದು ಕಡೆ ಹಾಗೆಯೇ ಇರುತ್ತಿತ್ತು.!
   ಬಲಗಾಲಿನಲ್ಲಲಿ ಮತ್ತು ಎಡಗೈಯಲ್ಲಿ ಬಿಳಿ ಚುಕ್ಕೆ ಅಥವಾ ಬಲಗೈಯಲ್ಲಿ ಮತ್ತು ಮತ್ತು ಎಡಗಾಲಲ್ಲಿ ಬಿಳಿ ಚುಕ್ಕೆ ಇರುವ ಕುದುರೆಯು ಅಪಶಕುನವೆಂದು ಅದರಲ್ಲಿ ಬರಕತ್ ಕಡಿಮೆಯೆಂದು ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ. ಅರಬಿ ಭಾಷೆಯಲ್ಲಿ "ಶಕ್ಕಾಲ್" ಎಂದು ಕರೆಯಲ್ಪಡುವ ಈ ಕುದುರೆಯನ್ನು ಪ್ರವಾದಿಯವರು ಇಷ್ಟಪಡುತ್ತಿರಲಿಲ್ಲ. 
   ಕಪ್ಪು ಬಣ್ಣದ ಕುದರೆಗೆ ಬಹಳ ಬರಕತ್ ಮತ್ತು ಐಶ್ವರ್ಯವಿದೆ. ನೀವು ಯುದ್ಧ ಮಾಡಲು ಕುದುರೆ ಖರೀದುಸುವಾಗ ಕಪ್ಪು ಬಣ್ಣದ ಕುದುರೆಯನ್ನು ಆಯ್ಕೆ ಮಾಡಿರಿ. ಯುದ್ಧದಲ್ಲಿ ‌ನಿಮ್ಮ ವಿಜಯಕ್ಕೂ ಯಶಸ್ವಿಗೂ ಅದು ನಾಂದಿಯಾಗುವುದು." ಎಂಬ ಪ್ರವಾದಿ ಮುಹಮ್ಮದ್ (ಸ) ರ ಹದೀಸನ್ನು ಸಹಾಬಿಯಾದ "ಉಖ್‌ಬತ್ ಬಿನ್ ಆಮಿರ್" (ರ) ರನ್ನು ಉಲ್ಲೇಖಿಸಿ "ಮುಸ್‌ತದ್‌ರಕ್" ಎಂಬ ಗ್ರಂಥದಲ್ಲಿ ವರದಿ ಮಾಡಲಾಗಿದೆ.
   ಹಝ್ರತ್ ಜಿಬ್‌ರೀಲ್ (ಅ) ಒಮ್ಮೆ ಪ್ರವಾದಿಯವರ ಬಳಿ ಚಾಕರಿ ಕುದುರೆ ಹತ್ತಿ ಬಂದ ಘಟನೆ ಬೀವಿ ಆಯಿಶಾ (ರ) ವಿವರಿಸುತ್ತಾರೆ. "ನಾನೊಮ್ಮೆ ಪ್ರವಾದಿಯವರೊಂದಿಗೆ ಮನೆಯಲ್ಲಿರುವಾಗ ಒಬ್ಬರು ಮುಂಡಾಸು ಕಟ್ಟಿದ ವ್ಯಕ್ತಿ ಚಾಕರಿ ಕುದುರೆಯ ಮೇಲೆ ಹತ್ತಿ ಬಂದು ಮನೆ ಪ್ರವೇಶಿಸಿ ಪ್ರವಾದಿಯವರಲ್ಲಿ ಸ್ವಲ್ಪ ಮಾತುಕತೆ ನಡೆಸಿ ಹೋದರು. ಅವರು ಹೋದ ನಂತರ ನಾನು ಪ್ರವಾದಿಯವರಲ್ಲಿ ಕೇಳಿದೆ. ಈಗ ಆ ಬಂದ ವ್ಯಕ್ತಿ ಯಾರು...? ಆಗ ಪ್ರವಾದಿಯವರು ನನ್ನಲ್ಲಿ ಕೇಳಿದರು. "ನೀನು ಅವರನ್ನು ನೋಡಿದಿಯಾ..?" ನಾನು ಹೇಳಿದೆ. "ಹೌದು" ಆಗ ಪ್ರವಾದಿ ಮುಹಮ್ಮದ್ (ಸ) "ಅದು ಜಿಬ್‌ರೀಲ್ (ಅ) ನನ್ನತ್ತ ಸಂದೇಶವಾಗಿ ಬಂದದ್ದು" ಎಂದು ಉತ್ತರಿಸಿದರು.
   ಪ್ರವಾದಿವರ್ಯರು ಅಂತೆಯೇ ಇಸ್ಲಾಮಿನ ಖಲೀಫರುಗಳು ಚಾಕರಿ ಕುದುರೆಯನ್ನು ಬಳಸಿದ ಬಗ್ಗೆ ಚರಿತ್ರೆ ಇಲ್ಲ. ಒಮ್ಮೆ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ (ರ) ರವರು ಒಮ್ಮೆ ಶಾಮ್ ಪ್ರದೇಶದ ಕಡೆ ಹೋಗಲು ತನ್ನ ಕುದುರೆ ಹತ್ತಿದಾಗ ಅದರ ಕಾಲಿಗೆ ಏನೋ ಗಾಯವಾದದ್ದು ಕಂಡು ಬಂತು. ಕೂಡಲೇ ಅಲ್ಲಿರುವ ಸಹಾಬಿಗಳಲ್ಲಿ ಯಾರೋ ಎಲ್ಲಿಂದಲೋ ಒಂದು ತಾತ್ಕಾಲಿಕ ಚಾಕರಿ ಕುದುರೆಯನ್ನು ಸಿದ್ದತೆ ಮಾಡಿದರು. ಜೀವನದಲ್ಲಿ ಒಮ್ಮೆಯೂ ಚಾಕರಿ ಕುದುರೆಯ ಮೇಲೆ ಸವಾರಿ ಮಾಡಿರದ ಖಲೀಫರಿಗೆ ಇದರ ಜೀವ ಸಂಕಟದ ಚಲನೆ ಕಂಡು ಕುಪಿತರಾಗಿ "ಈ ದಡ್ಡ ಕುದುರೆಗೆ ಓಡಲು ಯಾರು ಕಲಿಸಿ ಕೊಟ್ಟದ್ದು..? ನಿಮಗಿದು ಎಲ್ಲಿಂದ ಲಭಿಸಿತು..?" ಎಂದು ಹೇಳಿ ಅದರಿಂದ ಕೆಳಗಿಳಿದರು. ಆಮೇಲೆ ತನ್ನ ಒಂಟೆಯ ಮೇಲೆ ಕುಳಿತು ಸವಾರಿ ಮಾಡಿ ಹೋದರು. ನಂತರ ಖಲೀಫರು ತನ್ನ ಜೀವಮಾನದಲ್ಲಿ ಒಮ್ಮೆಯೂ ಚಾಕರಿ ಕುದರೆ ಮೇಲೆ ಹತ್ತಲಿಲ್ಲ.
   ಕುದುರೆಯಿರುವ ಮನೆ ಮಾಲಿಕನಿಗೆ ಅಂತೆಯೇ ಕುದುರೆಯಿರುವ ಮನೆಗೆ ಯಾವಾಗಲೂ ಶೈತಾನ್ ಮತ್ತು ಪಿಶಾಚಿಯ ತೊಂದರೆ ಇರಲಾರದು ಎಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿರುತ್ತಾರೆ. ಇಮಾಮ್ ಝಮಕ್‌ಶರಿಯವರು ತನ್ನ ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ತಫ್‌ಸೀರ್ ಝಮಕ್‌ಶರಿಯಲ್ಲಿ ಅಲ್ ಅಂಫಾಲ್ ಅಧ್ಯಾಯದ ಕುದುರೆಯಾಗಿ ಬಂದ ವಿವರಣೆಯಲ್ಲಿ ವರದಿ ಮಾಡಿದ್ದಾರೆ.

ಮನೆ, ಹೆಣ್ಣು , ವಾಹನ ಮತ್ತು ಶಕುನ

ಪ್ರಖ್ಯಾತ ಸ್ವಹಾಬಿ ಜುಅಯಿಲ್ ಅಲ್ ಅಶ್‌ಜಯೀ (ರ) ರವರಿಗೆ ಉಂಟಾದ 
ಒಂದು ಅನುಭವವನ್ನು ವಿವರಿಸುತ್ತಾರೆ. "ನಾನೊಮ್ಮೆ ಇಸ್ಲಾಮಿಗೆ ಬೇಕಾಗಿ ನಡೆದ ಒಂದು ಯುದ್ಧದಲ್ಲಿ ನನ್ನ ಕುದುರೆಯ ಮೇಲೆ ಕುಳಿತಿದ್ದೆ. ನನ್ನ ಕುದುರೆಯಾದರೆ ಚೆನ್ನಾಗಿ ಓಡಲಾಗದೆ ಸ್ವಲ್ಪ ದುರ್ಬಲವಾಗಿತ್ತು. ಅಂತೆಯೇ ಯುದ್ಧ ಭೂಮಿಯಲ್ಲಿ ಒಂದು ಕಡೆ ಪ್ರವಾದಿವರ್ಯರು (ಸ) ನನ್ನ ಈ ಜೀವ ಸಂಕಟದ ಓಟ ಕಂಡಾಗ ನನ್ನಲ್ಲಿ ಕೇಳಿದರು. "ಏನಿದು ವೇಗವಿಲ್ಲದೆ ಎತ್ತಿನ ಗಾಡಿಯಂತೆ ಹೋಗುವುದು.. ? ವೇಗ ಜಾಸ್ತಿ ಮಾಡು" ನಾನು ಹೇಳಿದೆ. "ಪ್ರವಾದಿಯವರೇ.., ಇದಕ್ಕೆ ತಾಕತ್ತು ಇಲ್ಲದ ಕಾರಣ ವೇಗ ಸ್ವಲ್ಪ ಕಡಿಮೆ."ಕೂಡಲೇ ಪ್ರವಾದಿಯವರು ತನ್ನ ಕುದುರೆಯನ್ನು ನಿಯಂತ್ರಿಸುವ ಚಾವಟಿಯನ್ನು ತೆಗೆದು ನನ್ನ ಕುದುರೆಗೆ ಒಂದು ಪೆಟ್ಟು ಕೊಟ್ಟರು. ನಂತರ ಹೇಳಿದರು. "ಅಲ್ಲಾಹನು ನಿಮಗೆ ಇದರಲ್ಲಿ ಬರಕತ್ ನೀಡಲಿ" 
   ಸುಬ್‌ಹಾನಲ್ಲಾಹ್! 
 ಆ ಪೆಟ್ಟು ಬಿದ್ದದ್ದೇ ತಡ ನನ್ನ ಕುದುರೆಗೆ ಎಲ್ಲಿಲ್ಲದ ಉತ್ಸಾಹ ಮತ್ತು ಹುರುಪು ಬಂತು. ಯುದ್ಧ ಭೂಮಿಯಲ್ಲಿ ಕೊನೆಯ ಸಾಲಿನಲ್ಲಿದ್ದ ನನ್ನ ಕುದುರೆ, ಇತರ ಎಲ್ಲಾ ಕುದುರೆಗಳಿಗಿಂತ ಮುಂದಿನ ಸಾಲಿನಲ್ಲಾಯಿತು. ಮಾತ್ರವಲ್ಲ ಈ ಹೆಣ್ಣು ಕುದುರೆಯು ನಂತರ ಹಲವಾರು ಸಲ ಮರಿ ಹಾಕಿ ಆ ಮರಿಗಳನ್ನು ಮಾರಿ ನನಗೆ ಸುಮಾರು ಹನ್ನೆರಡು ಸಾವಿರ ದೀನಾರ್ ಸಂಪಾದನೆಯಾಗಿದೆ. ಎಲ್ಲವೂ ಪ್ರವಾದಿಯವರು ಹೇಳಿದ ಮಾತಿನ ಬರಕತ್ ಆಗಿದೆ."
   ಗಂಡು ಕುದರೆಯ ಕೆನೆತ (ಕೂಗು) ಹೆಣ್ಣಿನ ಕೆನೆತಕ್ಕಿಂತ ಬಹಳ ಎತ್ತರದ ದನಿ ಹಾಗು ಉಚ್ಚಸ್ವರದಲ್ಲಾಗಿರುತ್ತದೆ. ಆ ಕಾರಣದಿಂದ ಸಹಾಬಿಗಳು ರಾತ್ರಿ ಸಂಚಾರದಲ್ಲಿ ಹೆಣ್ಣು ಕುದುರೆಯನ್ನೂ ಹಗಲಿನ ಸಂಚಾರದಲ್ಲಿ ಗಂಡು ಕುದುರೆಯನ್ನೂ ಬಳಸುತ್ತಿದ್ದರು. ಅಂತೆಯೇ ಧೀರ ಶೂರರಾಗಿದ್ದ ಖಾಲಿದ್ ಬಿನ್ ವಲೀದ್ (ರ) ರವರು ತಾನು ನಡೆಸಿದ ಎಲ್ಲಾ ಯುದ್ದಗಳಲ್ಲಿ ಹೆಣ್ಣು ಕುದುರೆಯನ್ನೇ ಬಳಸಿದ್ದರು.
   ಪ್ರವಾದಿ ಮುಹಮ್ಮದ್ (ಸ) ರ ಕಾಲದಲ್ಲಿ ಒಬ್ಬರಿಗೆ ಒಂದು ಗಂಡು ಮಗು ಹುಟ್ಟಿತು. ತಂದೆಯು ಹುಟ್ಟಿದ ಮಗುವನ್ನು ಬರಕತಿಗೆ ಬೇಕಾಗಿ ದುಆ ಮಾಡಿಸಲು ಪ್ರವಾದಿ ಸನ್ನಿಧಿಗೆ ತಂದರು. ಪ್ರವಾದಿ ಮುಹಮ್ಮದ್ (ಸ) ರು ನವಜಾತ ಮಗುವಿನ ಹಣೆಯಲ್ಲಿ ಕೈಯಿಟ್ಟು ದುಆ ಮಾಡಿದರು. ಸುಬ್‌ಹಾನಲ್ಲಾಹ್..! ಮಗು ಬೆಳೆದು ಬಂದಾಗ ಪ್ರವಾದಿಯವರ ಕೈ ಸ್ಪರ್ಶವಾದ ಆ ಜಾಗದಲ್ಲಿ ಕುದುರೆಯ ಹಣೆಯಲ್ಲಿ ಕೂದಲು ಚಿಗುರುವಂತೆ ಬಹಳ ಸೊಗಸಾಗಿ ಕೂದಲು ಚಿಗುರಿತು. ಇದು ನೋಡುವವರಿಗೆ ಒಂದು ಅಪೂರ್ವ ದೃಶ್ಯವೇ ಆಗಿತ್ತು. ಮಾತ್ರವಲ್ಲ ಈ ಹುಡುಗನಿಗೆ ಜನರೆಡೆಯಲ್ಲಿ ಬಹಳ ಗೌರವ ಮತ್ತು ಮಾನ್ಯತೆ ಇತ್ತು.
   ಅಲ್ಲಾಹುವಿನ ವಿಧಿಯಂತೆ ನಂತರ ಆ ಹುಡುಗ ಯುವಕನಾದಾಗ ಆ ವೇಳೆಯಲ್ಲಿ ಬುಗಿಲೆದ್ದ "ಖವಾರಿಜ್" ಎಂಬ ನೂತನವಾದದ ಪಂಗಡವಾಗಿ ಸಹವಾಸ ಬೆಳೆಸಿ ಅವರಾಗಿ ಬೆರೆತುಹೋದನು. ಸುಬ್‌ಹಾನಲ್ಲಾಹ್.. ಬೆರೆತದ್ದೇ ತಡ ಪವಾಡವಾಗಿ ಚಿಗುರಿದ್ದ ಆ ಕುದುರೆ ಹಣೆಯಲ್ಲಿರುವಂತಹಾ ವಿಸ್ಮಯಕಾರಿ ಕೂದಲು ತಾನಾಗಿಯೇ ಉದುರಿ ಹೋಯಿತು. ಇತ್ತ ಯುವಕನ ತಂದೆ ಇದು ಕಂಡು ವಿಷಯದ ಬಗ್ಗೆ ವಿಚಾರಣೆ ನಡೆಸಿದಾಗ ಯುವಕನು ನೂತನವಾದದತ್ತ ವಾಲಿದ ಸಂಗತಿ ತಂದೆಗೆ ತಿಳಿಯಿತು. ಕುಪಿತನಾದ ತಂದೆಯು ಕೂಡಲೇ ತನ್ನ ಮಗನನ್ನು "ಇನ್ನು ಮುಂದಕ್ಕೆ ಈ ಪಂಗಡಗಳಾಗಿ ಸಹವಾಸ ಬೆಳೆಸಬಾರದೆಂದು" ಹೇಳಿ ತನ್ನ ಮನೆಯ ಒಂದು ಕೊಣೆಯಲ್ಲಿ ಹಾಕಿ ಕೋಣೆಗೆ ಬೀಗ ಹಾಕಿ ಗೃಹ ಬಂಧನದಲ್ಲಿ ಇರಿಸಿದರು.
   ನಂತರ ಸಮಾಜದ ಕೆಲವು ಉನ್ನತ ವ್ಯಕ್ತಿಗಳು ಯುವಕನ ಮನೆಗೆ ಬಂದು, ಪ್ರವಾದಿಯವರ ಕೈಯ ಬರಕತಿನ ಬಗ್ಗೆಯೂ, ಕೂದಲು ಚಿಗುರಿದ ಪವಾಡದ ಬಗ್ಗೆಯೂ, ನಂತರ ಅದು ಉದುರಿ ಹೋದ ಕಾರಣದ ಕುರಿತೂ, ಅಂತೆಯೇ ನೂತನವಾದದ ಆಪತ್ತಿನ ಬಗ್ಗೆಯೂ ನಿರ್ಭಾಗ್ಯವಂತ ಈ ಯುವಕನಿಗೆ ತರಬೇತಿ ಕೊಟ್ಟು ಮನವರಿಕೆ ಮಾಡಿದರು. 
   ಗಣ್ಯ ವ್ಯಕ್ತಿಗಳ ಉಪದೇಶದಿಂದ ಫಲಹಿಡಿದ ಯುವಕನಿಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ ತೌಬಾ ಮಾಡಿದರು. ತೌಬಾ ಮಾಡಿದ್ದೇ ತಡ ಉದುರಿ ಹೋದ ಕೂದಲು ಪುನಃ ಅದೇ ಜಾಗದಲ್ಲಿ ಕುದುರೆ ಹಣೆ ಕೂದಲಿನಂತೆ ಚಿಗುರಿತು. ಮಾತ್ರವಲ್ಲ ನಂತರ ಅವರ ವಫಾತಿನ ತನಕವೂ ಆ ಕುದಲು ಹಾಗೆಯೇ ಇತ್ತು.
   ಮನೆ, ಮನೆಯೊಡತಿ, ಮತ್ತು ಕುದುರೆ ಈ ಮೂರರಲ್ಲಿ ವ್ಯಕ್ತಿಯೊಬ್ಬನಿಗೆ ಭಾಗ್ಯ (Good luck) ಮತ್ತು ದುರ್ಭಾಗ್ಯ (Bad luck) ಇರುವುದೆಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಈ ಹದೀಸಿಗೆ ಹಲವಾರು ವ್ಯಾಖ್ಯಾನಗಳನ್ನು ಉಲಮಾಗಳು ಕೊಟ್ಟಿರುವುದಾದರೂ ಮೇಲ್ನೋಟಕ್ಕೆ ಅವನು ವಾಸಿಸುವ ಮನೆ ಅಂತೆಯೇ ಅವನ ಪತ್ನಿಯ ಗುಣನಡತೆ, ಅಂತೆಯೇ ಅವಳ ಚಲನ ವಲನಗಳಲ್ಲಿ ಪತಿಯು ಸಂತುಷ್ಟನಾಗಿದ್ದರೆ ಆ ಮನೆಯಲ್ಲಿ ಯಾವಾಗಲೂ ನೆಮ್ಮದಿ ಮತ್ತು ಸಂತೋಷವಿರುತ್ತದೆ. ಅವಳ ನಡವಳಿಕೆಯಲ್ಲಿ ಅವನು ಸಂಪೂರ್ಣ ತೃಪ್ತಿ ಇರುವುದಾದರೆ ಆ ಮನೆಯಲ್ಲಿ ಯಾವಾಗಲೂ ನೆಮ್ಮದಿ ಮತ್ತು ಸಂತೋಷವಿರುತ್ತದೆ. ಅದಾಗ್ಯೂ ಪತ್ನಿಯ ನಾಲಗೆಗೆ ಯಾವುದೇ ಇತಿಮಿತಿಯಿಲ್ಲದೆ ಗುಣನಡತೆ ಸರಿಯಿಲ್ಲದೆ ಕೆಟ್ಟವಳಾಗಿದ್ದರೆ ಯಾವ ಸಂಪತ್ತಿದ್ದರೂ ಆ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಬರಕತ್ ಇರುವುದಿಲ್ಲ.
   ಸಹಾಬೀಶ್ರೇಷ್ಠ ಹಝ್ರತ್ ಅಬ್ದುಲ್‌ ರಹ್‌ಮಾನ್ ಬಿನ್ ಅವ್‌ಫ್ (ರ) ರವರ ಸಹೋದರ ಹಝ್ರತ್ ಅಲ್ ಅಸ್‌ವದ್ ಬಿನ್ ಅಲ್ ಅವ್‌ಫ್ (ರ) ರವರು ಒಂದು ಮನೆಯಿಂದ ವಾಸ ಬದಲಾವಣೆ ಮಾಡಿ ಬೇರೊಂದು ಮನೆಗೆ ಹೋದಾಗ ಹೊಸ ಮನೆಯಲ್ಲಿ ಅವರಿಗೆ ನೆಮ್ಮದಿ ಇರಲಿಲ್ಲ. ಕುಟುಂಬದ ಸದಸ್ಯರ ಸಂಖ್ಯೆ ಕಡಿಮೆಯಾಯಿತು. ವ್ಯಾಪಾರ ವಹಿವಾಟು ಕುಸಿಯಿತು. ಎಲ್ಲವೂ ಬುಡಮೇಲಾಯಿತು. ಹೊಸ ಮನೆಯಲ್ಲಿ ಒಂದಲ್ಲ ಒಂದು ದುರದೃಷ್ಟ ಇದ್ದೇ ಇತ್ತು. ಕೊನೆಗೆ ಈ ಬಗ್ಗೆ ಪ್ರವಾದಿಯವಲ್ಲಿ ಹೇಳಿದಾಗ "ಹಾಗಾದರೆ ನೀನು ಮನೆ ಬದಲು ಮಾಡು. ಅದರಲ್ಲಿ ದುರದೃಷ್ಟವಿದೆ." ಎಂದು ಹೇಳಿದರು. ಈ ಹದೀಸನ್ನು ಇಮಾಮ್ ಮಾಲಿಕ್ (ರ) ರವರು ತನ್ನ ಪ್ರಸಿದ್ಧ ಗ್ರಂಥವಾದ "ಅಲ್ ಮುವತ್ತಾ" ದಲ್ಲಿ ಉಲ್ಲೇಖಿಸಿದ್ದಾರೆ.
   ಗುಣ ಮತ್ತು ಅಪಶಕುನ ಎಲ್ಲವೂ ಬರುವುದು ವ್ಯಕ್ತಿಯೊಬ್ಬನ ನಿಯ್ಯತಿಗೆ ಅನುಸಾರವಾಗಿ ಆಗಿರುತ್ತದೆಯೆಂದು ಈ ಹದೀಸಿನ ವ್ಯಾಖ್ಯಾನದಲ್ಲಿ ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
  ಅಂತೆಯೇ ಕುದುರೆಗೆ ಖಾಯಿಲೆ ಬರುವುದು, ಅದರ ಬೆಲೆ ಕುಸಿಯುವುದು, ಮಾಲಿಕನಿಗೆ ಅನುಸರಿಸದಿರುವುದು ಇತ್ಯಾದಿ ಕಾರಣಗಳು ಬರುವಾಗ, ಕುದುರೆಯು ಬಹಳ ಬೆಲೆಬಾಳುವ ಮೃಗವಾದ್ದರಿಂದ ಅದನ್ನು ಖರೀದಿಸಿದವನು ಸಂಕಷ್ಟಕ್ಕೆ ಸಿಲುಕಿ ಅವನ ಆರ್ಥಿಕ ವ್ಯವಸ್ಥೆ ತಾರುಮಾರಾಗುತ್ತದೆ. ಆದ್ದರಿಂದ ಈ ಎಲ್ಲಾ ಕಾರಣಗಳಿಂದ ಕದುರೆಯಲ್ಲಿ ಬರಕತ್ ಮತ್ತು ಕೆಡುಕು ಇದೆಯೆಂದು ಪ್ರವಾದಿಯವರ ಹದೀಸಿಗೆ ಉಲಮಾಗಳು ವ್ಯಾಖ್ಯಾನ ಕೊಟ್ಟಿದ್ದಾರೆ. 
   ಒಬ್ಬ ವ್ಯಕ್ತಿಗೆ, ಕುದುರೆ, ಮನೆ ಅಂತೆಯೇ ಪತ್ನಿಯಲ್ಲಿ ದುರದೃಷ್ಟ ಬಂದರೆ "ಮನೆ ಮತ್ತು ಕುದುರೆಯನ್ನು ಮಾರಾಟ ಮಾಡಲಿ. ಪತ್ನಿಯನ್ನು ವಿಚ್ಚೇದನ ಮಾಡಲಿ. ಈ ಮೂರು ವಸ್ತುಗಳು ಒಬ್ಬನಿಂದ ಬೇರೊಬ್ಬನಿಗೆ ಹಸ್ತಾಂತರವಾಗುವಾಗ ಇವನಿರುವ ದುರದೃಷ್ಟ ಎರಡನೆಯವನಿಗೆ ಇರಲಾರದು ಎಂದು ಇಮಾಮ್ ಅಬೂ ಸುಲೈಮಾನ್ ಅಲ್ ಖತ್ತಾಬೀ (ರ) ಹೇಳಿದ್ದಾರೆ.
   ಆದುನಿಕ ಯುಗದಲ್ಲಿ ಕುದುರೆಯಂತೆಯೇ ಉಪಯೋಗಿಸುವ ವಾಹನಗಳಿಗೂ ಈ ವಿಷಯ ಅನ್ವಯವಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ..?
   ಕುದುರೆಯ ಬಗ್ಗೆ ಇಮಾಮ್ ಬಿನ್ ಜವ್‌ಝಿಯಂತಹಾ ಉಲಮಾಗಳು ಅವರವರ ಗ್ರಂಥಗಳಲ್ಲಿ ಕೆಲವು ಹಾಸ್ಯ ಕತೆಗಳನ್ನೂ ಉಲ್ಲೇಖಿಸಿದ್ದಾರೆ. 
   ಗ್ರಾಮವಾಸಿ ಅ‌ಅ್‌ರಾಬಿಯೊಬ್ಬನ ಕುದುರೆ ಖಾಯಿಲೆ ಪೀಡಿತವಾಯಿತು. ಚೆನ್ನಾಗಿ ಓಡುತ್ತಿದ್ದ ಕುದುರೆ ಹಾಸಿಗೆ ಹಿಡಿಯಿತು. ಹಲವಾರು ವೈದ್ಯರುಗಳು ಚಿಕಿತ್ಸೆ ನಡೆಸಿಯೂ ಯಾವುದೇ ಫಲ ಕಾಣಲಿಲ್ಲ. ಕೊನೆಗೆ ಒಬ್ಬರ ನಿರ್ದೇಶದಂತೆ ದೂರದ ಊರಿನಿಂದ ಒಬ್ಬರು ನುರಿತ ವೈದ್ಯರನ್ನು ತರಿಸಲಾಯಿತು. ಕುದುರೆಯನ್ನು ಪರೀಕ್ಷೆ ಮಾಡಿದ ವೈದ್ಯರು ಮನೆ ಮಾಲಿಕನಲ್ಲಿ ಹೇಳಿದರು. "ಯಜಮಾನರೇ.., ಈ ಕುದುರೆಗೆ ಇನ್ನು ಚಿಕಿತ್ಸೆ ಮಾಡಿ ಹಣ ದುರುಪಯೋಗ ಮಾಡಬೇಡಿ. ಇದಕ್ಕೆ ಮಾಡುವ ಎಲ್ಲಾ ಖರ್ಚು ವೆಚ್ಚಗಳು ನಿಮಗೆ ನಷ್ಟವೇ ಅಲ್ಲದೆ ಬೇರೇನೂ ಅಲ್ಲ. ಆದ್ದರಿಂದ ಒಂದು ಮೂರು ದಿನ ಕೂಡ ಕಾದು ನೋಡಿ. ಅದರೆಡೆಯಲ್ಲಿ ಎದ್ದು ನಿಲ್ಲದಿದ್ದರೆ ಇದನ್ನು ಕೊಲ್ಲುವುದೇ ನಿಮಗೆ ಲೇಸು" 
   ವೈದ್ಯನ ಈ ಸಲಹೆ ಮನೆ ಮಾಲಿಕನಿಗೆ ಸರಿಯೆಂದೆನಿಸಿತು. ಅವನ ಸಲಹಯೆಯಂತೆ ಕುದುರೆಯನ್ನು ಕೊಲ್ಲುವ ತೀರುಮಾನಕ್ಕೆ ಬಂದ.
   ಇತ್ತ ಮನೆಯಲ್ಲಿ ಹಟ್ಟಿಯಲ್ಲಿದ್ದ ಆಡೊಂದು ಯಜಮಾನ ಮತ್ತು ವೈದ್ಯನ ಮಾತುಕತೆಯನ್ನು ಕದ್ದು ಕೇಳುತ್ತಿತ್ತು. ಇವರ ಮಾತುಕತೆ ಮುಗಿದ ಕೂಡಲೇ ಆಡು ಮೆಲ್ಲನೆ ಕುದುರೆಯ ಹತ್ತಿರ ಹೋಗಿ ಹೇಳಿತು. "ಕುದುರೆರಾಯರೇ.., ನಿಮ್ಮ ಸಂಗತಿ ಬಹಳ ಅಪಾಯಕಾರಿ. ನೀವು ಮೂರು ದಿನದೊಳಗೆ ಎದ್ದು ನಿಲ್ಲದಿದ್ದಲ್ಲಿ ಮನೆಯವರು ನಿಮ್ಮನ್ನು ಕೊಲ್ಲುವ ಯೋಜನೆಯಲ್ಲಿದ್ದಾರೆ. ಆದ್ದರಿಂದ ನೀವು ಹೇಗಾದರು ಮಾಡಿ ಒಂದು ಮೇಕಪಿಗಾದರು ಎದ್ದು ನಿಲ್ಲಬೇಕು " 
   ಬಡಪಾಯಿ ಕುದುರೆ ಬಹಳ ಚಿಂತೆಗೊಳಗಾಯಿತು. ಏನು ಮಾಡುವಂತಿಲ್ಲ. ಆದರೂ ಪ್ರಯತ್ನ ಮಾಡಿ ನೋಡುವಾಂತ ಭಾವಿಸಿ ತನ್ನ ಎಲ್ಲಾ ಶಕ್ತಿಗಳನ್ನು ಉಪಯೋಗಿಸಿ ಎದ್ದು ನಿಲ್ಲಲು ಶ್ರಮಪಟ್ಟಿತು. ಕೊನೆಗೆ ಮೂರನೇ ದಿನ ಎದ್ದೇಳುವಲ್ಲಿ ಯಶಸ್ವಿಯಾಯಿತು.
   ಇತ್ತ ಮನೆ ಮಾಲಿಕ ಮೂರನೇ ದಿನ ಕುದುರೆಯನ್ನು ಕೊಲ್ಲಲು ಒಂದು ಖಡ್ಗ ತೆಗೆದುಕೊಂಡು ಹಟ್ಟಿಯತ್ತ ಬಂದಾಗ ಕುದುರೆಯು ಎದ್ದು ನಿಂತಿತ್ತು. ಮಾಲಿಕನಿಗೆ ಸಂತೋಷವೇ ಸಂತೋಷ. ಕೈಯಲ್ಲಿದ್ದ ಚೂರಿಯನ್ನು‌ ಎಸೆದು ಕುದುರೆ ಎದ್ದುನಿಂತ ಸಂತೋಷದಲ್ಲಿ ಊರವರಿಗೆ ಒಂದು ಬೃಹತ್‌ ಸತ್ಕಾರ ಮಾಡಲು ತೀರ್ಮಾನಿಸಿದ. ಇಲ್ಲಿ ಉಲ್ಲೇಖನೀಯ ಸಂಗತಿಯೆಂದರೆ, ಸತ್ಕಾರಕ್ಕೆ ಬಿರಿಯಾನಿ ಮಾಡಲು ದ್ಸಬಹ್ (ಚೂರಿ ಹಾಕುವುದು) ಮಾಡಲು ಆ ಅಡನ್ನೇ ಮನೆ ಮಾಲಿಕ ಆಯ್ಕೆ ಮಾಡಿದ್ದಾಗಿತ್ತು.
   ಒಟ್ಟಿನಲ್ಲಿ ಇಲ್ಲಿ ಈ ಕತೆಯಿಂದ ಕಲಿಯುವ ಪಾಠವೆಂದರೆ, ಯಾವತ್ತೂ ಅಲ್ಲಿಂದಿಲ್ಲಿಂದ ಕೇಳಿದ್ದನ್ನು ಬೇರೊಬ್ಬರಲ್ಲಿ ಹೇಳುವಾಗ ಹೇಳುವುದರಲ್ಲಿ ತನಗೇನಾದರು ಅನಾಹುತ ಬರಬಹುದಾ ಎಂದು ಗಮನಿಸಬೇಕಾಗಿದೆ.

ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ 

NOOR-UL-FALAH ISLAMIC STORE 
   

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್