ಶಅ್‌ರೇ ಮುಬಾರಕ್‌ನ ಕಾವಲುಗಾರ ಇಮಾಮ್ ಬುಖಾರಿ!
ಶಅ್‌ರೇ ಮುಬಾರಕ್‌ನ ಕಾವಲುಗಾರ ಇಮಾಮ್ ಬುಖಾರಿ!
ಪವಿತ್ರ ಕುರ್‌ಆನಿನ ನಂತರ ಮುಸ್ಲಿಂ ಜಗತ್ತು ಬಹಳ ಹೆಮ್ಮೆ ಮತ್ತು ಗೌರವದಿಂದ ಕಾಣುವ ಒಂದು ಗ್ರಂಥವಾಗಿದೆ "ಸಹೀಹುಲ್ ಬುಖಾರಿ. ಅಥವಾ ಅಲ್ ಜಾಮಿಅ್ ಅಲ್ ಸಹೀಹ್."
ಹಿಜ್‌ರಾ ವರ್ಷ ನೂರ ತೊಂಬತ್ತ ನಾಲ್ಕರಲ್ಲಿ ಹುಟ್ಟಿ ಇನ್ನೂರ ಐವತ್ತಾರರಲ್ಲಿ (194-256) ವಿಧಿವಶರಾದ ಈ ಜ್ಞಾನ ತೇಜಸ್ಸಿನ ಬಗ್ಗೆ ತಿಳಿಯದವರು ಮುಸ್ಲಿಮ್ ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ.
ಪ್ರವಾದಿ ಮುಹಮ್ಮದ್ (ಸ) ರ ಸುಮಾರು ಏಳು ಸಾವಿರದ ಐನೂರ ಅರುವತ್ತಮೂರು (7563) ಸಹೀಹಾದ ಪವಿತ್ರ ಹದೀಸುಗಳನ್ನು ಒಂದು ಗ್ರಂಥದಲ್ಲಿ ಕ್ರೋಡೀಕರಿಸಿ ಹೊರತರಲು ಈ ಜ್ಞಾನಬೆಳಕಿಗೆ ಸುಮಾರು ಹದಿನಾರು ವರ್ಷಗಳು ಬೇಕಾಯಿತು. ಕೆಲವೊಮ್ಮೆ ಒಂದು ಹದೀಸಿಗೆ ಬೇಕಾಗಿ ಈ ಮಹಾತ್ಯಾಗಿ ಬೆಳಗಿನಿಂದ ಸಂಜೆಯ ವರೆಗೆ ಸಂಚಾರ ಮಾಡುತ್ತಿದ್ದರು. ಹದೀಸ್ ಕೈವಶವಿರುವ ವ್ಯಕ್ತಿಗೆ ಅಥವಾ ಅವರ ಚಾರಿತ್ರ್ಯಿಕ್ಕೆ ಇತಿಹಾಸದಲ್ಲಿ ಎಲ್ಲಾದರೂ ಏನಾದರೂ ಎಂದಾದರೂ ಒಂದು ಪುಟ್ಟ ಕಪ್ಪುಚುಕ್ಕೆ (Black Point) ಇದೆಯೆಂದು ತಿಳಿದರೆ ಹೋದ ದಾರಿಯಲ್ಲೇ ಯಾವುದೇ ಬೇಸರವಿಲ್ಲದೆ ವಾಪಾಸು ಬರುತ್ತಿದ್ದರು. ಸಹೀಹಾದ ಒಂದು ಹದೀಸ್ ದೊರೆತರೆ ತನ್ನ ಮುದ್ರಣ ಮಾಡಲಿರುವ ಹದೀಸ್ ಕ್ರೋಡೀಕರಣ ಗ್ರಂಥವಾದ "ಸಹೀಹುಲ್ ಬುಖಾರಿ" ಯಲ್ಲಿ ಲಿಖಿತ ರೂಪದಲ್ಲಿ ಸೇರ್ಪಡೆ ಮಾಡುವ ಮುನ್ನ ಉಝು ಮಾಡಿ ಹದೀಸ್ ದೊರೆತ ಸಂತೋಷದಲ್ಲಿ ಅಲ್ಲಾಹನಿಗೆ ಧನ್ಯವಾದ ಎಂಬಂತೆ ಎರಡು ರಕ್‌ಅತ್ ಇಸ್‌ತಿಖಾರತಿ ನ ಸುನ್ನತ್ ನಮಾಝ್ ಮಾಡಿ ಸೇರ್ಪಡೆ ಮಾಡಲಿರುವ ಹದೀಸ್ ಸಹೀಹೆಂದು ಖಾತ್ರಿ ಮಾಡಿ ಕೊಳ್ಳುತ್ತಿದ್ದರು. ಮಾತ್ರವಲ್ಲ ಈ ಹಲವಾರು ವರ್ಷಗಳ ಸಂಚಾರದಲ್ಲಿ ಈ ತ್ಯಾಗಿ ಸುಮಾರು ಆರು ಲಕ್ಷ ಹದೀಸುಗಳನ್ನು ಜಗತ್ತಿನ ನಾನಾ ಭಾಗಗಳಿಂದಾಗಿ ಕೈವಶ ಮಾಡಿದ್ದರೂ ಅದರಿಂದ ಆಯ್ದು ತೆಗೆದ ಸುಮಾರು ಏಳು ಸಾವಿರದ ಐನೂರ ಅರುವತ್ತ ಮೂರು ಹದೀಸುಗಳನ್ನು ಮಾತ್ರ ಬುಖಾರಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ
ಎಂಬುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.
ಮಾತ್ರವಲ್ಲ ಈ ಕ್ರೋಡೀಕರಿಸಿದ ಹದೀಸುಗಳನ್ನು ನಂತರ ಎರಡು ಬಾರಿ ಕರಡು ಪ್ರತಿ ಮಾಡಲಾಗಿದೆ. ಮೊದಲ ಕರಡು ಪ್ರತಿಯನ್ನು ಪವಿತ್ರ ಮಕ್ಕಾದ ಮಸ್ಜಿದುಲ್ ಹರಾಮಿನಲ್ಲೂ ಎರಡನೇ ಮುದ್ರಣ ಪ್ರತಿಯನ್ನು ಭೂಲೋಕದ ಸ್ವರ್ಗ ಎಂದು ಕರೆಯಲ್ಪಡುವ ಪವಿತ್ರ ಮದೀನಾ ಶರೀಫಿನಲ್ಲಿರುವ ಮಸ್ಜಿದುನ್ನಬವಿಯ ಮಿಂಬರಿನ ಮತ್ತು ರೌಲಾ ಶರೀಫಿನ ಮಧ್ಯೆ ಇರುವ ಜಾಗದಲ್ಲಾಗಿತ್ತು. ಈ ಎರಡು ಬಾರಿಯೂ ಅಂದರೆ ಮೊದಲ ಕರಡು ಪ್ರತಿ ಮಾಡಿದ ಮಸ್ಜಿದುಲ್ ಹರಾಮಿನಲ್ಲೂ ಎರಡನೇ ಮುದ್ರಣ ಪ್ರತಿ ಮಾಡಿದ ಮಸ್ಜಿದುನ್ನಬವಿಯಲ್ಲೂ ಒಂದೊಂದು ಅಧ್ಯಾಯದ ಪ್ರಾರಂಭದಲ್ಲಿ, ಮೊದಲ ಬಾರಿ ಹದೀಸ್ ಕ್ರೋಡೀಕರಣ ಮಾಡಿ ಗ್ರಂಥದಲ್ಲಿ ಸೇರ್ಪಡೆ ಮಾಡಿದಾಗ ಮಾಡಿದಂತೆ ಎರಡು ರಕಅತ್ ಇಸ್ತಿಖಾರತಿನ ನಮಾಝ್ ಕೂಡ ಮಾಡುತ್ತಿದ್ದರು. ಒಟ್ಟಿನಲ್ಲಿ ಸಹೀಹುಲ್ ಬುಖಾರಿ ಮುದ್ರಣ ಪ್ರತಿ ಆಗುವುದಕ್ಕಿಂತ ಮುಂಚೆ ಎರಡು ಬಾರಿ ಕರಡು ಪ್ರತಿ ಮಾಡಿ ತಿದ್ದಿ ಪರಿಷ್ಕರಿಸಲಾಗಿತ್ತು.
ಯಾವುದೇ ಒಂದು ವಿಚಾರವನ್ನು ಮಹಾತ್ಮರ ಸನ್ನಿಧಿಯಲ್ಲಿ ಅಥವಾ ಅವರ ಸಾನಿಧ್ಯದಲ್ಲಿ, ಹಾಗೆಯೇ ಪವಿತ್ರವಾದ ಸ್ಥಳದಲ್ಲಿ ನಿರ್ವಹಿಸುವುದು ಅದರಲ್ಲಿ ಬರ್‌ಕತ್ ಲಭಿಸಲು ಕಾರಣವಾಗುತ್ತದೆ ಎಂಬುದಕ್ಕೆ ಇಮಾಮ್ ಬುಖಾರಿಯವರು ತನ್ನ ಗ್ರಂಥದ ಕರಡು ಪ್ರತಿ ಮತ್ತು ಮುದ್ರಣ ಪ್ರತಿ ಮಾಡಲು ಎರಡು ಪವಿತ್ರ ಜಾಗಗಳನ್ನು ಆಯ್ಕೆ ಮಾಡಿದ್ದು ಆಧಾರವಾಗಿದೆ.
ಮೂಲತಃ ಫಾರಿಸೀ (ಇರಾನ್) ಕುಲದಲ್ಲಿ ಹಿಜ್‌ರಾ ನೂರ ತೊಂಬತ್ತನಾಲ್ಕು ಶವ್ವಾಲ್ ತಿಂಗಳ ಹದಿಮೂರರಂದು ಶುಕ್ರವಾರ ದಿನ
ರಶ್ಯಾದ ಬುಖಾರಾ ಎಂಬ ಪಟ್ಟಣದಲ್ಲಿ ಒಂದು ಮಧ್ಯಮ ಕುಟುಂಬದಲ್ಲಿ ಜನಿಸಿದ ಇವರು ಅರಬಿಯಾಗಿರಲಿಲ್ಲ. ಬಾಲ್ಯದಲ್ಲಿ ಇವರಿಗೆ ಎರಡು ವರ್ಷ ಪೂರ್ತಿಯಾಗುವ ಮೊದಲೇ ತಂದೆ ಇಸ್ಮಾಯೀಲರು ಅಲ್ಲಾಹುವಿನ ವಿಧಿಗೆ ಓಗೊಡುವುದರೊಂದಿಗೆ ತಬ್ಬಲಿಯಾದ ಈ ಪುಟ್ಟ ಬಾಲಕನಿಗೆ ನಂತರ ತಾಯಿ ಮಾತ್ರ ಆಸರೆಯಾದರು. ತಂದೆ ಇಸ್‌ಮಾಯೀಲರು ಗತಕಾಲದ ಒಬ್ಬ ಖ್ಯಾತ ವಿದ್ವಾಂಸ ಮತ್ತು ಇಮಾಮ್ ಮಾಲಿಕ್ (ರ) ರ ಶಿಷ್ಯರೂ ಆಗಿದ್ದರು. ಮಾತ್ರವಲ್ಲ ಹೆಸರುವಾಸಿಯಾದ ಒಬ್ಬ ವ್ಯಾಪಾರಿಯೂ ಆಗಿದ್ದರು.
ಕುರ್‌ಆನ್, ಹದೀಸ್, ಇಸ್ಲಾಮಿಕ ಇತಿಹಾಸ ಇತ್ಯಾದಿ ವಿಷಯಗಳನ್ನು ಕಲಿಯುವುದರಲ್ಲಿ ತೀಕ್ಷ್ಣ ಬುದ್ದಿಯಿದ್ದ ಈ ಬಾಲಕ ತನ್ನ ಹತ್ತನೇ ವಯಸ್ಸಿನಲ್ಲಿ ಕುರ್‌ಆನ್ ಸಂಪೂರ್ಣ ಕಂಠಪಾಠ ಮಾಡಿದ್ದರು. ಮಾತ್ರವಲ್ಲ, ತನ್ನ ಹದಿನಾರನೇ ವಯಸ್ಸಿನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಎಪ್ಪತ್ತು ಸಾವಿರ ಹದೀಸುಗಳನ್ನು ಅದರ "ಸನದು" (ಪರಂಪರೆ) ಸಮೇತ ಕಂಠಪಾಠ ಕೂಡ ಮಾಡಿದ್ದರು.!
ಗಮನಾರ್ಹ ಸಂಗತಿಯೆಂದರೆ, ಇಮಾಮ್ ಬುಖಾರಿಗೆ ತನ್ನ ಬಾಲ್ಯದಲ್ಲೇ ಪುಟ್ಟ ಮಗುವಾಗಿರುವಾಗಲೇ ತನ್ನ ಎರಡು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ನಷ್ಟವಾಗಿತ್ತು. ತಬ್ಬಲಿಯೂ ಕುರುಡನೂ ಆದ ಈ ಪುಟ್ಟ ಬಾಲಕನಿಗೆ ಎಲ್ಲದಕ್ಕೂ ತನ್ನ ತಾಯಿಯ ಸಹಾಯ ಬೇಕಾಗಿತ್ತು. ಬಹಳ ಚುರುಕು ಮತ್ತು ಜಾಣನಾದ ಈ ಕಂದನ ತಾಯಿಗೆ ತನ್ನ ಮಗನ ಭವಿಷ್ಯ ನಿರ್ಣಯಿಸುವ ವಿದ್ಯಾಭ್ಯಾಸ ಮತ್ತು ಇತರ ವಿಷಯಗಳಲ್ಲಿ ಮಗನನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಇದೊಂದು ದೊಡ್ಡ ಸವಾಲೇ ಆಗಿತ್ತು.
ಆದರೆ ಅಲ್ಲಾಹುವಿನ ವಿಧಿಯಲ್ಲಿ ದೃಡ ವಿಶ್ವಾಸವಿದ್ದ ಈ ಉಕ್ಕಿನ ಮಹಿಳೆಗೆ ತನಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಮತ್ತು ಸತ್ವ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಎದೆಗಾರಿಕೆಯಿತ್ತು. ತನ್ನ ಮಗನ ದೃಷ್ಟಿ ಮರಳಿ ಸಿಗಬೇಕಾಗಿ ಈ ತಾಯಿ ದಿನಾಲೂ ಎಲ್ಲಾ ನಮಾಝಿನ ನಂತರ ಅಂತೆಯೇ ಮಧ್ಯರಾತ್ರಿ ಸಮಯದಲ್ಲೂ ಅಳುತ್ತಾ ಸದಾ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದರು. ಒಂದಲ್ಲ ಒಂದು ದಿನ ನನ್ನ ಕಂದನ ದೃಷ್ಟಿ ಮರಳಿ ಸಿಗಬಹುದೆಂಬ ಬಲವಾದ ವಿಶ್ವಾಸ ಮತ್ತು ನಂಬಿಕೆ ಈ ತಾಯಿಗಿತ್ತು.
ಒಂದು ದಿನ ದೈನಂದಿನಂತೆ ದುಆ ಮಾಡಿ ಆ ತಾಯಿ ತನ್ನ ಮುದ್ದು ಕಂದನನ್ನು ತಬ್ಬಿಕೊಂಡು ಮಲಗಿದರು. ಮಧ್ಯರಾತ್ರಿಯಾದಾಗ ತಾಯಿಗೆ ಒಂದು ಅದ್ಭುತವಾದ ಕನಸುಬಿತ್ತು. ಹಝ್ರತ್ ಖಲೀಲುಲ್ಲಾಹಿ ಇಬ್‌ರಾಹೀಮ್ (ಅ) ರು ಬಂದು ಈ ತಾಯಿಯಲ್ಲಿ ಹೇಳಿದರು. "ಇನ್ನು ಬೇಸರಪಡಬೇಡಿ. ನೀವು ನಿರಂತರ ಅಳುತ್ತಾ ಮಾಡಿದ ಪ್ರಾರ್ಥನೆಗೆ ಅಲ್ಲಾಹನು ಉತ್ತರ ಕೊಟ್ಟಿದ್ದಾನೆ. ನಿಮ್ಮ ಕಂದನ ದೃಷ್ಟಿಶಕ್ತಿ ಮರಳಿ ಸಿಕ್ಕಿರುತ್ತದೆ"
ನಿದ್ರೆಯಿಂದ ಎಚ್ಚರಗೊಂಡ ಇಮಾಮ್ ಬುಖಾರಿಯವರ ತಾಯಿ ಕೂಡಲೇ ತನ್ನ ಹತ್ತಿರ ಮಲಗಿದ್ದ ಮಗುವನ್ನು ಒಂದು ಇಣುಕಿ ನೋಡಿದರು. ಬಾಲಕ ಗಾಢವಾದ ನಿದ್ದೆಯಲ್ಲಿದ್ದ ಕಾರಣ ತಾಯಿಗೆ ಏನೂ ವ್ಯತ್ಯಾಸ ಕಾಣಲಿಲ್ಲ. ಸುಬ್‌ಹಾನಲ್ಲಾಹ್! ಬೆಳಿಗ್ಗೆ ಫಜ‌್‌ರ್ ನಮಾಝಿಗೆ ಯಾವಾಗಲೂ ಉಝು ಮಾಡಲು ತಾಯಿಯ ಆಸರೆ ಪಡೆಯುತ್ತಿದ್ದ ಆ ಬಾಲಕ ಆ ದಿನ ಒಂಟಿಯಾಗಿಯೇ ಹೋಗಿ ಉಝು ಮಾಡಿ ಬರುವ ರೋಮಾಂಚಕ ದೃಶ್ಯವನ್ನು ಕಂಡಾಗ ತಾಯಿಗೆ ತಾನು ರಾತ್ರಿ ಕಂಡ ಕನಸು ಸತ್ಯ ಕನಸೆಂದು ತಿಳಿಯಿತು.
ಇಮಾಮ್ ಬುಖಾರಿಯವರ ಪೂರ್ಣ ನಾಮ ಅಬೂ ಅಬ್ದಿಲ್ಲಾಹ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಇಬ್ರಾಹೀಮ್ ಅಲ್ ಬುಖಾರಿ ಎಂದಾಗಿದೆ. ಬೇರೊಂದು ಗಮನಾರ್ಹ ವಿಷಯವೇನೆಂದರೆ, ಇಮಾಮ್ ಬುಖಾರಿಯವರು ಪ್ರವಾದಿ ಮುಹಮ್ಮದ್ (ಸ) ರ ಕುಟುಂಬವಾದ "ಅಹ್‌ಲ್ ಬಯ್‌ತ್" ನಲ್ಲಿ ಹುಟ್ಟಿದವರಲ್ಲ. ನಾವು ಇಂದು ಕಾಣುವ ಪ್ರವಾದಿ ಕುಟುಂಬದವರ ಹೆಸರಿನ ಕೊನೆಗೆ ಕೊಡುವ "ಅಲ್‌ಬುಖಾರಿ" ಎಂಬ ಈ ಬುಖಾರಿಗೂ ಇಮಾಮ್ ಬುಖಾರಿಗೂ ಯಾವುದೇ ಸಂಬಂಧವಿಲ್ಲವೆಂದೂ, ಅದು ಪ್ರವಾದಿ ಮುಹಮ್ಮದ್ (ಸ) ರ ಹದಿಮೂರನೇ ಪುತ್ರನಾದ ಸಯ್ಯಿದ್ ಮಹ್‌ಮೂದ್ ಅಲ್ ಬುಖಾರಿಯ ಹದಿನೈದನೇ ಪುತ್ರನಾದ ಹಿಜ್‌ರಾ 928 ರಲ್ಲಿ ಕೇರಳಕ್ಕೆ ಬಂದ ಅಹ್‌ಮದ್ ಜಲಾಲುದ್ದೀನ್ ಅಲ್ ಬುಖಾರಿಗೆ ಸೇರಿಸಿ ಕರೆಯುವ ಪ್ರವಾದಿ ಕುಟುಂಬವಾಗಿದೆ ಎಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತಿದ್ದೇನೆ.
ಇಮಾಮ್ ಬುಖಾರಿಯವರು ತನ್ನ ಹದಿನಾರನೆಯ ವಯಸ್ಸಿನ ತನಕ ತನ್ನ ತಾಯಿನಾಡಾದ ಬುಖಾರ ಮತ್ತು ಪರಿಸರ ಪ್ರದೇಶಗಳಲ್ಲಿ ವಿದ್ಯಾರ್ಜನೆಗೆ ಬೇಕಾಗಿ ಸುತ್ತಾಡಿದರು. ನಂತರ ತನ್ನ ತಾಯಿ ಮತ್ತು ಸಹೋದರ ಅಹ್‌ಮದ್‌ರೊಂದಿಗೆ ಪವಿತ್ರ ಹಜ್ ಕರ್ಮ ನಿರ್ವಹಿಸಲು ರಶ್ಯಾದಿಂದ ಪವಿತ್ರ ಮಕ್ಕಾಕ್ಕೆ ತೆರಳಿದರು. ಹಜ್ಜ್ ಮುಗಿದು ತಾಯಿ ಮತ್ತು ಸಹೋದರ ಅಹ್‌ಮದ್ ಊರಿಗೆ ಮರಳಿದರೂ ಈ ಜ್ಞಾನಭಂಡಾರ ಮಾತ್ರ ತನ್ನ ಮುಂದಿನ ಉನ್ನತ ವಿದ್ಯಾಭ್ಯಾಸ ಮತ್ತು ಪ್ರವಾದಿ ಮುಹಮ್ಮದ್ (ಸ) ರ ಪವಿತ್ರ ಹದೀಸ್ ಸಂಗ್ರಹ ಮಾಡಲು ಅಲ್ಲೇ ತಂಗಿದರು. ಇತ್ತ ಸಹೋದರ ಅಹ್‌ಮದರು ಹಜ್ಜ್ ಕರ್ಮ ಮುಗಿದು ಊರಿಗೆ ಮರಳಿದ ನಂತರ ಎರಡು ವರ್ಷವಾಗುವಾಗ ವಫಾತಾದರು.
ನಂತರ ಇವರು ಮಕ್ಕಾ, ಮದೀನಾ, ಮತ್ತು ಹಿಜಾಝಿನ ಇತರ ಸ್ಥಳಗಳಲ್ಲಿ ನೂರಾರು ಉಲಮಾಗಳನ್ನು ಸಮೀಪಿಸಿ, ಲಕ್ಷೋಪಲಕ್ಷ ಹದೀಸುಗಳನ್ನು ಸಂಗ್ರಹ ಮಾಡಿದರು. ಮಾತ್ರವಲ್ಲ ಸಮಕಾಲೀನ ಹಿಜಾಝಿನ ಉನ್ನತ ವಿದ್ವಾಂಸರಿಂದ ವಿದ್ಯೆ ಸಂಪಾದನೆಯನ್ನೂ ಮಾಡಿದರು. ರಾತ್ರಿ ಎಲ್ಲರೂ ಗೊರಕೆಯೊಡೆದು ನಿದ್ದೆ ಮಾಡುವ ಸಮಯದಲ್ಲಿ ಪವಿತ್ರ ರೌಲಾ ಶರೀಫಿನ ಹೊರ ಚಾವಡಿಯಲ್ಲಿ ಕುಳಿತು ಚಂದ್ರನ ಬೆಳಕಿನ ಸಹಾಯದಿಂದ ತನ್ನ ಬದುಕಿನ ಪ್ರಪ್ರಥಮ ಕೃತಿಯಾದ "ಕಿತಾಬ್ ಅಲ್ ತಾರೀಖ್ ಅಲ್ ಕಬೀರ್" ಎಂಬ ಹತ್ತು ಸಂಪುಟವಿರುವ ಇಸ್ಲಾಮಿಕ ಇತಿಹಾಸ ಸಂಬಂಧವಾದ ಈ ವಿಶ್ವ ವಿಖ್ಯಾತವಾದ ಕೃತಿಯನ್ನು ರಚಿಸಿದರು.!
ಬಳಿಕ ಇವರು ಫಲಸ್ತೀನ್, ಸಿರಿಯಾ, ಈಜಿಪ್ಟ್, ಇರಾನ್, ಇರಾಕ್ ಮತ್ತು ಖುರಾಸಾನ್ ಮುಂತಾದ ಹಲವಾರು ರಾಷ್ಟ್ರಗಳಲ್ಲಿ ಹಲವಾರು ಬಾರಿ ಸಂಚಾರ ಮಾಡಿ ಹಲವಾರು ಮಹಾ ವಿದ್ವಾಂಸರಿಂದ ವಿದ್ಯೆ ಸಂಪಾದನೆ ಮಾಡಿದರಲ್ಲದೆ ಸುಮಾರು ಆರು ಲಕ್ಷಕ್ಕಿಂತಲೂ ಹೆಚ್ಚು ಹದೀಸುಗಳನ್ನು ತನ್ನ ಹೃದಯ ಎಂಬ ಕಡತದಲ್ಲಿ ಎಂದಿಗೂ ಅಳಿದು ಹೋಗದಂತೆ ವ್ಯವಸ್ತಿತ ರೂಪದಲ್ಲಿ ಶೇಖರಿಸಿಟ್ಟರು.
ಇಮಾಮ್ ಬುಖಾರಿಯವರು ತನ್ನ ಅರುವತ್ತೆರಡು ವರ್ಷದಲ್ಲಿ ಸುಮಾರು ಒಂದು ಸಾವಿರದ ಎಂಬತ್ತು ಮಹಾ ವಿದ್ವಾಂಸರಿಂದ ವಿದ್ಯೆ ಸಂಪಾದನೆ ಮತ್ತು ಹದೀಸ್ ಕ್ರೋಡೀಕರಣ ಮಾಡಿರುತ್ತಾರೆ. ಇಮಾಮ್ ಅಹ್‌ಮದ್ ಬಿನ್ ಹಂಬಲ್ (ರ), ಮುಹಮ್ಮದ್ ಬಿನ್ ಅಬ್ದುಲ್ಲಾ ಅಲ್ ಅಂಸಾರೀ (ರ), ಅಬೂ ಹಾತಿಮ್ ಅಲ್ ರಾಝೀ (ರ), ಇಸ್‌ಹಾಖ್ ಬಿನ್ ರಾಹವಯ್‌ಹ್ (ರ) ಮುಂತಾದವರು ಅವರಲ್ಲಿ ಪ್ರಮುಖರು.
ಇಮಾಮರ ಶಿಷ್ಯ ವೃಂದವನ್ನು ಕೂಡ ಯಾರಿಂದಲೂ ಎಣಿಸಲು ಅಸಾಧ್ಯವಾಗಿದೆ. ಅವರು ನಡೆಸುವ ಒಂದೊಂದು ತರಗತಿಗಳಲ್ಲೇ ಸಾವಿರಾರು ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ಮಾತ್ರವಲ್ಲ ಕೆಲವೊಮ್ಮೆ ಅವರ ತರಗತಿಗಳಲ್ಲಿ ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಜಮಾಯಿಸುತ್ತಿದ್ದರು.
ಮುಸ್ಲಿಂ ಬಿನ್ ಹಜ್ಜಾಜ್ (ರ), ಅಬೂ ಈಸಾ ಅಲ್ ತುರ್‌ಮಝೀ (ರ), ಅಬೂ ಅಬ್ದುಲ್ ರಹ್‌ಮಾನ್ ಅಲ್ ನಸಾಯೀ (ರ), ಅಬೂಬಕರ್ ಬಿನ್ ಅಲ್ ಖುಝಯ್‌ಮಾಃ (ರ), ಇಮಾಮ್ ಬಗವೀ (ರ) ಮುಂತಾದವರು ಅವರಲ್ಲಿ ಪ್ರಮುಖರು.
ಸಹೀಹ್ ಬುಖಾರಿಯಲ್ಲದೆ ಇಮಾಮರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಅಲ್ ಅದಬುಲ್ ಮುಫ್‌ರದ್, ಅಲ್ ತಾರೀಖುಲ್ ಕಬೀರ್, ಅಲ್ ತಾರೀಖುಲ್ ಅವ್‌ಸತ್, ಅಲ್ ತಾರೀಖುಲ್ ಸಘೀರ್, ಅಲ್ ಹಿಬಃ, ಅಸಾಮೀ ಅಲ್ ಸಹಾಬಾಃ, ಅಲ್ ಮಬ್‌ಸೂತ್, ಅಲ್ ವಹ್‌ದಾನ್, ಅಲ್ ಇಅ್‌ತಿಸಾಮ್ ಮುಂತಾದವುಗಳು ಅದರಲ್ಲಿ ಪ್ರಮುಖವಾದದ್ದು.
"ಅಲ್ ಇಅ್‌ತಿಸಾಮ್" ಎಂಬ ಗ್ರಂಥವನ್ನು ಒಂದು ದಿನ ರಾತ್ರಿ ಇಶಾ ನಮಾಝ್ ಮುಗಿದು ಬರೆಯಲು ಶುರುಮಾಡಿ ಫಜ್‌ರ್ ಆಗುವುದರೊಳಗೆ ಬರೆದು ಮಗಿಸಿದರು.
ಅಲ್ ವಹ್‌ದಾನ್ ಎಂಬ ಬುಖಾರಿಯವರ ಒಂದು ಗ್ರಂಥ ನಿಜವಾಗಿಯೂ ಅವರ ಇತರ ಗ್ರಂಥಗಳಿಗಿಂತ ವಿಭಿನ್ನವಾದ ಒಂದಾಗಿದೆ. "ವಹ್‌ದಾನ್" ಎಂದರೆ ಏಕ ಎಂದರ್ಥ. ಯಾವುದಾದರೊಬ್ಬರು ಸಹಾಬಿ ತನ್ನ ಜೀವಮಾನದಲ್ಲಿ ಬರೀ ಒಂದೇ ಒಂದು ಹದೀಸ್ ಮಾತ್ರ ವರದಿ ಮಾಡಿದ್ದರೆ, ಅಂತಹಾ ಹದೀಸುಗಳನ್ನು ಮಾತ್ರ ಕ್ರೋಡೀಕರಿಸಿದ ಒಂದು ಅದ್ಭುತ ಕೃತಿಯಾಗಿದೆ ಇದು.
"ಸಹೀಹ್ ಅಲ್ ಬುಖಾರಿ" ಗೆ ಇಮಾಮ್ ಬುಖಾರಿಯ ವಫಾತಿನ ನಂತರ ಹಲವಾರು ಉಲಮಾಗಳು ವ್ಯಾಖ್ಯಾನವನ್ನು ಬರೆದಿದ್ದಾರೆ. ಹಿಜ್‌ರಾ ವರ್ಷ 319 ರಲ್ಲಿ ಹುಟ್ಟಿ 388 ರಲ್ಲಿ ವಫಾತಾದ ಇಮಾಮ್ ಅಬೂ ಸುಲೈಮಾನ್ ಅಲ್ ಖತ್ತಾಬಿಯವರ ಅಅ್‌ಲಾಮುಸ್ಸುನನ್ ಎಂಬ ವ್ಯಾಖ್ಯಾನ ಗ್ರಂಥವಾಗಿದೆ ಸಹೀಹ್ ಬುಖಾರಿಯ ಜಗತ್ತಿನ ಪ್ರಪ್ರಥಮ ವ್ಯಾಖ್ಯಾನ ಗ್ರಂಥ.
ಇಮಾಮ್ ಮುಹಮ್ಮದ್ ಬಿನ್ ಯೂಸುಫ್ ಅಲ್ ಕಿರ್‌ಮಾನಿಯ (717-786) ಏಳು ಸಂಪುಟವಿರುವ ಅಲ್ ಕವಾಕಿಬ್ ಅಲ್ ದರಾರೀ, ಇಮಾಮ್ ಇಬ್‌ನ್ ಹಜರ್ ಅಲ್ ಅಸ್‌ಖಲಾನಿಯ (773-852) ಹದಿನೇಳು ಸಂಪುಟವಿರುವ ಫತುಹುಲ್ ಬಾರೀ, ಇಮಾಮ್ ಬದುರುದ್ದೀನ್ ಅಲ್ ಅಯ್‌ನಿಯ (762-855) ಇಪ್ಪತ್ತೈದು ಸಂಪುಟಗಳಿರುವ ಉಮ್‌ದತುಲ್ ಖಾರೀ, ಇಮಾಮ್ ಶಿಹಾಬುದ್ದೀನ್ ಅಲ್ ಖಸ್‌ತಲ್ಲಾನಿಯ (851-923) ಹದಿನೈದು ಸಂಪುಟಗಳಿರುವ ಇರ್ಶಾದುಸ್ಸಾರೀ, ಇಮಾಮ್ ಝಕರಿಯ್ಯ ಅಲ್ ಅನ್ಸಾರಿಯ (823-926) ಹತ್ತು ಸಂಪಟಗಳಿರುವ ತುಹ್‌ಫತುಲ್ ಬಾರೀ ಮುಂತಾದವುಗಳು ಅದರಲ್ಲಿ ಪ್ರಮುಖವಾದದ್ದಾಗಿದೆ.
ರಾತ್ರಿ ಮಲಗಿ ಬೆಳಿಗ್ಗೆ ಫಜ್‌ರ್ ನಮಾಝ್‌ಗೆ ಎದ್ದೇಳುವುದರ ಮಧ್ಯೆ ಕೆಲವೊಮ್ಮೆ ಹತ್ತಿಪ್ಪತ್ತು ಬಾರಿ ನಿದ್ದೆಯಿಂದ ಎದ್ದು ದೀಪ ಬೆಳಗಿಸಿ ಆಯಾ ಸಂದರ್ಭಗಳಲ್ಲಿ ಬರೆಯುವ ಕಿತಾಬುಗಳನ್ನು ಪರಿಶೀಲನೆ ಮಾಡಿ ತಿದ್ದುಪಡಿ ಮಾಡುತ್ತಿದ್ದರು. ಅವರ ಆಪ್ತ ಸಹಾಯಕರಾಗಿದ್ದ ಮುಹಮ್ಮದ್ ಬಿನ್ ಹಾತಿಮರು ಒಮ್ಮೆ ಈ ಬಗ್ಗೆ ಇಮಾಮರಲ್ಲಿ ಕೇಳಿದರು. "ಅಲ್ಲಾ... ಉಸ್ತಾದರೇ, ನೀವು ಯಾಕೆ ಇಷ್ಟು ಕಷ್ಟಪಟ್ಟು ಎದ್ದೇಳುತ್ತೀರಿ..? ನನ್ನನ್ನು ಕರೆದರೆ ನಾನು ಎದ್ದು ಬೇಕಾದ ಸಹಾಯ ಮಾಡುತ್ತೇನೆ ಅಲ್ವಾ...?." ಆಗ ಇಮಾಮರು ಹೇಳಿದರು. "ನೀವೆಲ್ಲಾ ಯುವಕರು. ನಿಮ್ಮ ಈ ಪ್ರಾಯದಲ್ಲಿ ನಿಮ್ಮ ನಿದ್ದೆಗೆ ನಾನು ಯಾವತ್ತೂ ತೊಂದರೆ ಮಾಡ ಬಯಸುವುದಿಲ್ಲ."
ಇಮಾಮ್ ಬುಖಾರಿ (ರ) ರ ಆಪ್ತ ಸಹಾಯಕನಾಗಿದ್ದ ಈ ಮುಹಮ್ಮದ್ ಬಿನ್ ಅಬೀ ಹಾತಿಮ್ (ರ) ಯಾವಾಗಲೂ ಅವರ ಜೊತೆಗಿದ್ದರು. ಅವರು ಇಮಾಮ್ ಬುಖಾರಿಯಾಗಿ ತನ್ನ ದೀರ್ಘ ಕಾಲದ ಒಡನಾಟ ಮತ್ತು ಜೊತೆಗೂಡುವಿಕೆಯ ಅನುಭವದಲ್ಲಿ ಹೇಳುತ್ತಾರೆ. "ಈ ದೀರ್ಘ ಒಡನಾಟದ ಬದುಕಿನಲ್ಲಿ ಒಮ್ಮೆಯೂ ಅವರು ಯಾರನ್ನೂ ಗೀಬತ್ (Backbiting) ಹೇಳಿದ್ದನ್ನು ನಾನು ಕೇಳಲಿಲ್ಲ. ಮಾತ್ರವಲ್ಲ, ಇಮಾಮ್ ಬುಖಾರಿಯವರೇ ನನ್ನಲ್ಲಿ ಒಮ್ಮೆ ಹೇಳಿದ್ದರು. "ನನ್ನ ಬಾಲ್ಯದಲ್ಲಿ ನನಗೆ ಗೀಬತ್ (ಪರದೂಷಣೆ) ಹರಾಮ್ ಎಂದು ತಿಳಿದ ನಂತರ ನಾನು ನನ್ನ ಜೀವಮಾನದಲ್ಲಿ ಯಾರನ್ನೂ ಒಮ್ಮೆಯೂ ಗೀಬತ್ ಹೇಳಲಿಲ್ಲ. ನಾಳೆ ಅಲ್ಲಾಹುವಿನ ಸನ್ನಿಧಿಗೆ ಹೋಗುವಾಗ ಆ ಪಾಪಮಾಡಿ ಹೃದಯಕ್ಕೆ ಕಪ್ಪು ಚುಕ್ಕೆ ಮಾಡುವುದು ನನಗೆ ಇಷ್ಟವಿಲ್ಲ."
ಪ್ರವಾದಿ ಮುಹಮ್ಮದ್ (ಸ) ರ ಕೆಲವು ಪವಿತ್ರ ಕೇಶಗಳು (ಶಹ್‌ರೇ ಮುಬಾರಕ್) ತನ್ನ ಕೈವಶವಿದ್ದ ಅವರು ಅದನ್ನು ಯಾವಾಗಲೂ ಬಹಳ ಭಕ್ತಿ ಮತ್ತು ಗೌರವದಿಂದ ತನ್ನ ನಿಲುವಂಗಿಯ ಒಳಭಾಗದಲ್ಲಿ ಪ್ರತ್ಯೇಕ ಜೇಬು ಮಾಡಿ ಅದರಲ್ಲಿ ಜೋಪಾನವಾಗಿ ಇಟ್ಟುಕೊಂಡು ನಡೆಯುತ್ತಿದ್ದರು. ಮಾತ್ರವಲ್ಲ ಅದು ಅವರ ಪೂರ್ಣ ಯಶಸ್ವಿಗೆ ಕಾರಣವೂ ಆಗಿತ್ತು. ಶಹ್‌ರೇ ಮುಬಾರಕನ್ನು ಅವಹೇಳನ ಮಾಡಿ ತನ್ನ ನಾಳಿನ ಬದುಕನ್ನು ನಾಶ ಮಾಡುವವರು ಇನ್ನಾದರೂ ಅಲೋಚನೆ ಮಾಡಬೇಕಾಗಿದೆ ಎಂದು ಸಾಂದರ್ಭಿಕವಾಗಿ ನೆನಪಿಸುತ್ತೇನೆ.
ಇಮಾಮ್ ಬುಖಾರಿಯವರ ವೈವಾಹಿಕ ಜೀವನ ಮತ್ತು ಅವರ ಕೌಟುಂಬಿಕ ಬದುಕಿನ ಬಗ್ಗೆ ಅಂಗೀಕೃತ ಗ್ರಂಥಗಳಲ್ಲಿ ಎಲ್ಲೂ ಸ್ಪಷ್ಟ ಮತ್ತು ನಿಖರವಾದ ಮಾಹಿತಿಯಿಲ್ಲ. ಅದಾಗ್ಯೂ ಅವರು ವಿವಾಹವಾಗಿದ್ದರೆಂದೂ, ಅವರಿಗೆ ಅಹ್‌ಮದ್ ಎಂಬ ಒಬ್ಬರು ಮಗ ಇದ್ದರೆಂದೂ ಒಂದೆರಡು ಕಡೆ ಸೂಚನೆಗಳು ಮಾತ್ರವಿದೆಯೇ ಹೊರತು ಸ್ಪಷ್ಟವಾದ ನಿಖರ ಮಾಹಿತಿಯಿಲ್ಲ. ಹಿಜ್‌ರಾ ವರ್ಷ ಸಾವಿರದ ಎಂಬತ್ತೇಳರಲ್ಲಿ ಹುಟ್ಟಿ ಸಾವಿರದ ನೂರ ಅವರತ್ತ ಎರಡರಲ್ಲಿ ವಫಾತಾದ ಖ್ಯಾತ ಪಂಡಿತ ಇಮಾಮ್ ಇಸ್ಮಾಯೀಲ್ ಅಲ್ ಅಜ್‌ಲೂನೀ (ರ) ರವರು ಇಮಾಮ್ ಬುಖಾರಿಯವರು ಖಂಡಿತವಾಗಿಯೂ ವಿವಾಹವಾಗಿರಲಿಲ್ಲ ಎಂಬ ವಾದವನ್ನು ನಿಖರವಾಗಿ ತನ್ನ ಪ್ರಸಿದ್ಧ ಗ್ರಂಥವಾದ ಅಲ್ ಫವಾಯಿದ್ ಅಲ್ ದರಾರೀ ಫೀ ತರ್‌ಜಮತಿಲ್ ಇಮಾಮ್ ಅಲ್ ಬುಖಾರಿ ಎಂಬ ಗ್ರಂಥದಲ್ಲಿ ಮಂಡಿಸಿದ್ದಾರೆ.
ಇಮಾಮರ ದೇಹ ಪ್ರಕೃತಿಯ ಬಗ್ಗೆ ಹೇಳುವುದಾದರೆ, ಅವರು ಬಹಳ ತೆಳ್ಳಗಿನ ಶರೀರವಿದ್ದವರೂ, ಬಣ್ಣದಲ್ಲಿ ಬಿಳಿ ಮತ್ತು ಕಪ್ಪಿನ ಮಧ್ಯೆಯಿರುವ ಕಂದು ಬಣ್ಣದವರೂ ಆಗಿದ್ದರು. ಬಹಳ ಉದ್ದದವರೋ ಅಥವಾ ಗಿಡ್ಡದವರೋ ಆಗಿರಲಿಲ್ಲ. ಮಧ್ಯಮವಾಗಿದ್ದರು.
ತನ್ನ ಜೀವಮಾನವಿಡೀ ಪ್ರವಾದಿಯವರ ಹದೀಸ್ ಶರೀಫ್ ಕ್ರೋಡೀಕರಣಕ್ಕೆ ಬೇಕಾಗಿ ಮುಡಿಪಾಗಿಟ್ಟ ಈ ಜ್ಞಾನ ಶಿಖರ ತನ್ನ ಸಂಚಾರದಲ್ಲಿ ಕೆಲವೊಮ್ಮೆ ಆಹಾರ ಖರೀದಿಸಲು ಅಗತ್ಯವಾದ ಹಣವಿಲ್ಲದೆ ತಾತ್ಕಾಲಿಕ ಹಸಿವು ನೀಗಿಸಲು ಹಸಿ ಹುಲ್ಲನ್ನು ಕೂಡ ತಿಂದಿದ್ದರೆಂದು ಅವರ ಆಪ್ತ ಸಹಾಯಕ (ಖಾದಿಮ್) ವರದಿ ಮಾಡಿದ್ದಾರೆ.
ಬಹಳ ಸರಳ ಸ್ವಭಾವದ ಈ ಜ್ಞಾನ ಕೇಸರಿ ತನ್ನ ಕೈಯಲ್ಲಿ ಹಣವಿದ್ದರೆ ಅದನ್ನು ಸಂಪೂರ್ಣ ದಾನಮಾಡಿ ಮುಗಿಸುತ್ತಿದ್ದರು. ಮಾತ್ರವಲ್ಲ ಬಹಳ ಸತ್ಕಾರ ಪ್ರಿಯರು ಕೂಡ ಆಗಿದ್ದರು. ಬರೇ ಕೆಲವೇ ಕೆಲವು ರೊಟ್ಟಿಗಳನ್ನು ಖರೀದಿಸಿ ಸತ್ಕಾರ ಮಾಡುತ್ತಿದ್ದ ಇಮಾಮ್ ಬುಖಾರಿಯ ಬೋಜನ ಮಜ್‌ಲಿಸಿನಲ್ಲಿ ಅದನ್ನು ನೂರಕ್ಕಿಂತ ಮಿಕ್ಕ ಜನರು ತಿಂದರೂ ಕೊನೆಗೆ ಒಂದು ರೊಟ್ಟಿ ಬಾಕಿಯಾಗುತಿತ್ತು. ಸುಬ್‌ಹಾನಲ್ಲಾಹ್! ಇದೆಂತಹಾ ಪವಾಡ.? ತಿನ್ನುವುದರಲ್ಲಿ ಯಾವುದೇ ಅತ್ಯಾಶೆಯಿಲ್ಲದ ಈ ಮಹಾನುಭಾವರು ಸಾಧಾರಣ ಒಂದು ದಿನದಲ್ಲಿ ಒಂದು ಒಣರೊಟ್ಟಿ ಮಾತ್ರ ತಿನ್ನುತ್ತಿದ್ದರು. ಕೆಲವೊಮ್ಮೆ ಬರೀ ಮೂರು ಬಾದಾಮಿ ಬೀಜ ಮಾತ್ರವಾಗಿತ್ತು ದಿನದ ಆಹಾರ. ತಿನ್ನುವ ರೊಟ್ಟಿಯೊಂದಿಗೆ ಯಾವುದೇ ಮಾಂಸ, ಅಥವಾ ತರಕಾರಿ ಪಲ್ಯ, ಸಾಂಬಾರು, ಹುರಿದ ವಸ್ತು, ಸಲಾಡು ಯಾವುದೂ ಇರುತ್ತಿರಲಿಲ್ಲ.
ಒಮ್ಮೆ ಇಮಾಮ್ ಬುಖಾರಿಯವರಿಗೆ ತೀವ್ರವಾದ ಶಾರೀರಿಕ ಅಸ್ವಸ್ಥತೆ ಉಂಟಾಯಿತು. ಕೆಲವು ನುರಿತ ವೈದ್ಯರುಗಳು ಇಮಾಮರನ್ನು ಪರೀಕ್ಷಿಸಿದಾಗ, "ಇಮಾಮರು ತಿನ್ನುವ ಆಹಾರ ಕ್ರಮವನ್ನು ಸ್ವಲ್ಪ ಬದಲಾಯಿಸಬೇಕು. ಬರೇ ಒಣರೊಟ್ಟಿ ಮಾತ್ರ ತಿನ್ನಬಾರದು. ಅದರೊಂದಿಗೆ ಏನಾದರೂ ಒಂದು ಪಲ್ಯ ಇರಬೇಕು." ಎಂಬ ಸಲಹೆ ನೀಡಿದರು. ಇಮಾಮ್ ಬುಖಾರಿ ಹೇಳಿದರು. "ನಾನು ಸುಮಾರು ನಲುವತ್ತು ವರ್ಷಗಳಿಂದ ಹೀಗೆಯೇ ಪದಾರ್ಥವಿಲ್ಲದೆ ಬರೇ ಒಣರೊಟ್ಟಿ ಮಾತ್ರ ತಿನ್ನುವ ಅಭ್ಯಾಸ ಮಾಡುತ್ತಾ ಬಂದಿದ್ದೇನೆ. ಇನ್ನು ಈ ಅಭ್ಯಾಸವನ್ನು ಬದಲಾಯಿಸಿ ಈ ಶರೀರಕ್ಕೆ ಸುಖ ಕೊಡ ಬಯಸುವುದಿಲ್ಲ." ಕೊನೆಗೆ ಊರಿನ ಕೆಲವು ಹಿರಿಯ ವಿದ್ವಾಂಸರು ಬಂದು ಇಮಾಮ್ ಬುಖಾರಿಯಲ್ಲಿ ವೈದ್ಯರ ಸಲಹೆಯನ್ನು ಸ್ವೀಕರಿಸಬೇಕೆಂದು ಹೇಳಿದಾಗ ಅವರ ಮಾತಿಗೆ ಬೆಲೆಕೊಟ್ಟು ಕೊನೆಗೆ ರೊಟ್ಟಿಗೆ ಸಕ್ಕರೆ ಮಿಶ್ರಣ ಮಾಡಿ ತಿನ್ನಲು ಆರಂಭಿಸಿದರು. ಆದರೂ ವಫಾತಿನ ತನಕ ಪದಾರ್ಥ ಸೇವಿಸಿದ ಬಗ್ಗೆ ವರದಿಯಿಲ್ಲ.!
ಉಮರ್ ಬಿನ್ ಹಫ್‌ಸ್ ಅಲ್ ಅಶ್‌ಖರ್ (ರ) ಎಂಬ ಸಮಕಾಲೀನ ವಿದ್ವಾಂಸರು ಹೇಳುತ್ತಾರೆ. "ನಾವು ಇರಾಕಿನ ಬಸರದಲ್ಲಿರುವಾಗ ಅಲ್ಲಿನ ಮಸೀದಿಯ ಮಜ್ಲಿಸಿನಲ್ಲಿ ಒಮ್ಮೆ ಕೆಲವು ದಿನಗಳ ಕಾಲ ಇಮಾಮ್ ಬುಖಾರಿಯನ್ನು ಕಾಣುವುದೇ ಇಲ್ಲ. ಯಾವಾಗಲೂ ಹಾಜರಾಗುತ್ತಿದ್ದ ಒಬ್ಬ ಮಹಾವ್ಯಕ್ತಿ ಗೈರು ಹಾಜರಾಗುವಾಗ ನಮಗೆ ಬಹಳ ಅದ್ಭುತವಾಯಿತು. ಅಂತೆಯೇ ನಾವು ಅವರನ್ನು ಹುಡುಕಿ ಅವರು ವಾಸಿಸುವ ಮನೆಗೆ ಹೋದಾಗ ಮನೆಯ ಒಳ ಕೋಣೆಯಲ್ಲಿ ಮನೆಯಿಂದ ಹೊರಬರುವಾಗ ಧರಿಸಲು ಯೋಗ್ಯವಾದ ಉಡುಪಿಲ್ಲದೆ, ಹರಿದ ಹಳೆ ವಸ್ತ್ರ ಧರಿಸಿದ್ದರು. ಮತ್ತೆ ನಾವೆಲ್ಲರೂ ಹಣ ಸಂಗ್ರಹ ಮಾಡಿ ಅವರಿಗೆ ಒಂದು ಹೊಸ ಉಡುಪನ್ನು ಖರೀದಿಸಿ ಕೊಟ್ಟೆವು."
ಇಮಾಮ್ ಬುಖಾರಿಯ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಇಮಾಮ್ ಮುಸ್ಲಿಮ್ (ರ) ಒಮ್ಮೆ ಬುಖಾರಿಯವರನ್ನು ಆಲಿಂಗಿಸಿ ಅವರ ನೆತ್ತಿಗೆ ಚುಂಬಿಸಿದರು. ನಂತರ ಗುರುವಾದ ಇಮಾಮ್ ಬುಖಾರಿಯಲ್ಲಿ ಹೇಳಿದರು. "ನೀವು ನನಗೆ ನಿಮ್ಮ ಪಾದದಡಿ ಚುಂಬಿಸಲು ಅನುಮತಿ ಕೊಡುವುದಾದರೆ ನಾನು ಅದಕ್ಕೂ ಸಿದ್ದನಾಗಿದ್ದೇನೆ."
ಅಲ್ಲಾಹನಲ್ಲಿ ಏನನ್ನು ಬೇಡಿದರೂ, ಕೇಳಿದರೂ ನಿಮಿಷದಲ್ಲಿ ಉತ್ತರ ದೊರೆಯುತ್ತಿದ್ದ ಇಮಾಮ್ ಬುಖಾರಿಯವರು ಕೊನೆಗೆ ಅಲ್ಲಾಹನಲ್ಲಿ ಐಹಿಕ ಬೇಡಿಕೆಗಳನ್ನು ಮುಂದಿಡುವುದನ್ನೇ ನಿಲ್ಲಿಸಿದ್ದರು. ಆ ಬಗ್ಗೆ ಅವರಲ್ಲಿ ಕೇಳಿದಾಗ "ಕೇಳಿದಕ್ಕೆಲ್ಲಾ ಉತ್ತರ ಸಿಗುತ್ತದೆ ಎಂದು ಸಿಕ್ಕಾಬಟ್ಟೆ ಎಲ್ಲವನ್ನು ಕೇಳಿದರೆ ಅದು ಕೊನೆಗೆ ನಾಳೆ ಪರಲೋಕದಲ್ಲಿ ನನ್ನ ಸತ್ಕರ್ಮಕ್ಕೆ ಧಕ್ಕೆ ಮತ್ತು ಕೊರತೆ ಆಗಬಹುದು" ಎಂದು ಹೇಳಿದರು.
ಹಿಜ್‌ರಾ ವರ್ಷ ಇನ್ನೂರ ಐವತ್ತರಲ್ಲಿ ಅಂದರೆ ಇಮಾಮ್ ಬುಖಾರಿಗೆ ಐವತ್ತಾರು ವರ್ಷ ಪ್ರಾಯವಾದಾಗ ಅವರು ಇರಾನಿನ ಗಡಿ ಪ್ರದೇಶವಾದ ನೈಸಾಬೂರಿಗೆ ತನ್ನ ವಾಸವನ್ನು ಬದಲಾಯಿಸಿದರು. ಉನ್ನತ ವಿದ್ವಾಂಸರಿಂದ ತುಂಬಿ ತುಳುಕುತ್ತಿದ್ದ ನೈಸಾಬೂರಿನಲ್ಲಿ ಪ್ರಾರಂಭದಲ್ಲಿ ಯಾವುದೇ ತೊಂದರೆಯಿರಲಿಲ್ಲ. ಆದರೆ ಕಾಲಕ್ರಮೇಣ ಅಲ್ಲಿನ ಸ್ಥಳೀಯ ಪಂಡಿತರಲ್ಲಿ ಪ್ರಮುಖರಾಗಿದ್ದ ಮುಹಮ್ಮದ್ ಬಿನ್ ಯಹ್‌ಯಾ ಅಲ್ ಝುಹಲೀ ಎಂಬವರ ತರಗತಿಗಳಿಗೆ ಇಮಾಮ್ ಬುಖಾರಿಯ ತರಗತಿಯ ಪ್ರಭಾವದಿಂದಾಗಿ ಜನರು ಬರುವುದು ಕಡಿಮೆಯಾಯಿತು. ಇದರಿಂದ ಅಸೂಯೆಗೊಂಡ ಝುಹಲಿಯವರು ಇಮಾಮ್ ಬುಖಾರಿಯ ಮೇಲೆ ಅಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರಿಗೆ ಎದುರಾಗಿ ಒಂದು ತಂಡವನ್ನೇ ಹುಟ್ಟು ಹಾಕಿದರು. ಝುಹಲಿಗೆ ತನ್ನ ಊರಾದ ನೈಸಾಬೂರಿನಲ್ಲಿ ತುಂಬಾ ಸ್ವಾಧೀನವಿದ್ದ ಕಾರಣ ಇಮಾಮ್ ಬುಖಾರಿಯವರು ಅಲ್ಲೇ ತನ್ನ ವಾಸವನ್ನು ಖಾಯಮ್ ಮಾಡುವುದಾದರೆ ಕ್ರಮೇಣ ಅದು ಎರಡು ಉಲಮಾ ಪಂಗಡಗಳಾಗಿ ವಿಭಜನೆಯಾಗಿ ಕೊನೆಗೆ ಘೋರ ದುರಂತಕ್ಕೆ ಕಾರಣವಾಗಬಹುದೆಂದು ಮನಗಂಡು ಊರಿನ ಕೆಲವು ಹಿರಿಯರ ಸಲಹೆಯಂತೆ ಅಲ್ಲಿಂದ ತನ್ನ ತಾಯಿನಾಡಾದ ಬುಖಾರಕ್ಕೆ ಹೋದರು.
ತನ್ನ ಅರವತ್ತ ಎರಡು ವರ್ಷಗಳ ಬದುಕಿನ ಕೊನೆಯ ದಿನಗಳನ್ನು ತಾಯಿನಾಡಾದ ಬುಖಾರದಲ್ಲಿ ಕಳೆಯಬೇಕೆಂಬ ಇರಾದೆಯಿಂದ ಬುಖಾರಕ್ಕೆ ಹೋದ ಇಮಾಮರನ್ನು ಊರಿನ ಜನರು ಬಹಳ ಗೌರವದಿಂದ ಬರಮಾಡಿಕೊಂಡರು. ಅವರ ಆಗಮನವನ್ನು ಕಾದು ಇಡೀ ಊರನ್ನೇ ಅಲಂಕರಿಸಿ ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿದರು. ಆದರೆ ಕೆಲವು ದಿನಗಳು ಕಳೆದಾಗ "ಅಬ್ಬಾಸಿಯ್ಯಾ" ಆಡಳಿತದ ಬುಖಾರಾದ ಅಂದಿನ ಆಡಳಿತಧಿಕಾರಿ ಖಾಲಿದ್ ಬಿನ್ ಅಹ್‌ಮದ್ ಎಂಬವನು ಇಮಾಮ್ ಬುಖಾರಿಯಲ್ಲಿ ಅವರು ರಚಿಸಿದ ಸಹೀಹ್ ಬುಖಾರಿ ಸಮೇತ ತನ್ನ ಎಲ್ಲಾ ಕಿತಾಬುಗಳೊಂದಿಗೆ ತನ್ನ ರಾಜ ದರ್ಬಾರಿಗೆ ಬಂದು ತನ್ನ ಮಕ್ಕಳಿಗೆ ವಿದ್ಯೆ ಕಲಿಸಿ ಕೊಡಬೇಕೆಂದು ಹೇಳಿ ಇಮಾಮರ ಮನೆಗೆ ಒಬ್ಬ ದೂತನನ್ನು ಕಳುಹಿಸಿದನು.
ಅರಮನೆಯಿಂದ ರಾಜಕುಮಾರ ಕಳುಹಿಸಿದ ದೂತನಲ್ಲಿ "ನಾನು ವಿದ್ಯೆಯನ್ನು ರಾಜಸನ್ನಿಧಿಗೆ ಅಥವಾ ಅರಮನೆ ಬಾಗಿಲಿಗೆ ಕೊಂಡೊಯ್ದು ಅದನ್ನು ಅಪಮಾನ ಮಾಡ ಬಯಸುವುದಿಲ್ಲ. ವಿದ್ಯೆ ಎಲ್ಲರಿಗೂ ಒಂದೇ ತರವಾಗಿದೆ. ಆ ವಿಷಯದಲ್ಲಿ ಶ್ರೀಮಂತನೆಂದೋ, ಬಡವನೆಂದೋ ಯಾವುದೇ ವ್ಯತ್ಯಾಸವಿಲ್ಲ. ಅವರಿಗೆ ವಿದ್ಯೆ ಕಲಿಯಬೇಕೆಂದಿದ್ದರೆ ನಾನಿರುವ ಮಸೀದಿಗೆ ಅಥವಾ ನನ್ನ ಮನೆಗೆ ಬರಲಿ. ಕಲಿತ ವಿದ್ಯೆ ಜೋಪಾನವಾಗಿ ಇಡಲಿಕ್ಕೆ ಇರುವುದಲ್ಲ. ಯಾವಾಗ ಬೇಕಾದರೂ ಬರಲಿ. ನಾನು ಕಲಿಸಿ ಕೊಡಲು ಸಿದ್ದ. ಆದರೆ ಯಾವತ್ತೂ ನಾನು ವಿದ್ಯೆಯನ್ನು ಹಣ ನೋಡಿಯೋ ಮುಖ ನೋಡಿಯೋ ವ್ಯಯ ಮಾಡುವವನಲ್ಲ. ನಾನು ಈ ಹೇಳಿದ ಮಾತಿನಲ್ಲಿ ಅಧಿಕಾರಿಗೆ ಏನಾದರು ಅತೃಪ್ತಿ ಇದ್ದರೆ ಅಧಿಕಾರಿ ಎಂಬ ನೆಲೆಯಲ್ಲಿ ಯಾವ ಕ್ರಮ ತೆಗೆಯುವುದಾದರೂ ಚಿಂತಿಲ್ಲ." ಎಂಬ ಉತ್ತರ ಬರೆದು ಕಳುಹಿಸಿದರು.
ಇಮಾಮ್ ಬುಖಾರಿಯವರ ಈ ದಿಟ್ಟ ನಿಲುವಿನಿಂದಾಗಿ ಕುಪಿತನಾದ ಅಧಿಕಾರಿ ಅವರನ್ನು ಬುಖಾರದಿಂದ ಗಡಿಪಾರು ಮಾಡುವ ಯೋಚನೆ ಮಾಡಿದನು. ಮಾತ್ರವಲ್ಲ ಹುವೈರಿಸ್ ಬಿನ್ ಅಬೀ ಅಲ್ ವರ್‌ಖಾಅ್ ಎಂಬ ಬುಖಾರಾದ ಸಮಕಾಲೀನ ಪಂಡಿತನನ್ನು ತನ್ನೊಂದಿಗೆ ತನಗೆ ತಕ್ಕಂತೆ ಫತ್‌ವಾ ಕೊಟ್ಟು ಇಮಾಮ್ ಬುಖಾರಿಗೆ ವಿರುದ್ಧವಾಗುವುದರಲ್ಲಿ ಸಹಕರಿಸಲು ತನ್ನೊಂದಿಗೆ ಸೇರಿಸಿಕೊಂಡನು. ತಾಳಕ್ಕೆ ತಕ್ಕ ಮೇಳ ಎಂಬಂತೆ ಈ ಹುವೈರಿಸ್ ಎಂಬವರು ಅಧಿಕಾರಿಗೆ ಊರುಗೋಲು ಕೊಟ್ಟು ಸಂಪೂರ್ಣ ಬೆಂಬಲವಾಗಿ ನಿಂತರು. "ಇವರು ಮೊದಲು ನೈಸಾಬೂರಲ್ಲಿಯೂ ಹೀಗೆಯೇ ದಂಗೆಯೆದ್ದು, ಫಿತ್‌ನ ಫಸಾದ್ ಮಾಡಿ ಊರಿನ ಐಕ್ಯತೆ ಮುರಿದವರು. ಅಲ್ಲಿಂದ ಮುಹಮ್ಮದ್ ಝುಹ್‌ಲಿಯವರು ಇವರನ್ನು ಗಡಿಪಾರು ಮಾಡಿದ್ದರು. ಇಲ್ಲಿ ಹೀಗೆಯೇ ಮುಂದುವರಿದರೆ ಇಲ್ಲಿಯೂ ಗಲಾಟೆ ಶುರುವಾಗಿ ಮುಂದಕ್ಕೆ ಊರಿನ ಐಕ್ಯತೆಯೇ ಮುರಿದು ಹೋಗಬಹುದು" ಎಂದು ಹೇಳಿ ಉರಿಯುತ್ತಿರುವ ಬೆಂಕಿಗೆ ಹುವೈರಿಸರು ಎಣ್ಣೆ ಸುರಿದರು.
ಹುಟ್ಟಿದ ಊರನ್ನು ಬಿಟ್ಟು ಹೋಗುವುದರಲ್ಲಿ ಇಮಾಮರಿಗೆ ತುಂಬಾ ಬೇಸರವಿತ್ತು. ಆದರೇನು ಮಾಡುವುದು..? ಊರು ಬಿಟ್ಟು ಹೋಗದೆ ಗತ್ಯಂತರವಿಲ್ಲ ಎಂದು ತಿಳಿದಾಗ ಹೋಗಬೇಕಾಗಿ ಬಂತು. ತಾಯಿನಾಡು ಬಿಟ್ಟು ಹೋಗುವ ಸಂದರ್ಭದಲ್ಲಿ ತಡೆಯಲಾರದ ದುಃಖ ಬಂದಾಗ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು. "ಅಲ್ಲಾಹನೇ, ನನ್ನನ್ನು ನನ್ನ ಊರಿನಿಂದ ಗಡಿಪಾರು ಮಾಡಿದ ಅಧಿಕಾರಿ ಖಾಲಿದ್ ಬಿನ್ ಅಹ್‌ಮದ್ ಮತ್ತು ಈ ವಿಷಯದಲ್ಲಿ ಆತನನ್ನು ಸಹಕರಿಸಿದ ಪಂಡಿತವೇಶಧಾರಿ ಹುವೈರಿಸ್‌ನಿಗೂ ನೀನು ಸತ್ಯವನ್ನು ಮನವರಿಕೆ ಮಾಡಿಕೊಡು. ಮಾತ್ರವಲ್ಲ ಅವರಿಗೆ ಅದಕ್ಕೆ ತಕ್ಕ ಶಿಕ್ಷೆಯನ್ನು ಕೂಡ ಕೊಡು."
ಸುಬ್‌ಹಾನಲ್ಲಾಹ್! ಬರೇ ಒಂದು ತಿಂಗಳ ಒಳಗೆ ಈ ಖಾಲಿದ್ ಬಿನ್ ಅಹ್‌ಮದ್ ಎಂಬ ಅಧಿಕಾರಿ ತನ್ನ ಮಂತ್ರಿ ಸಭೆಯಲ್ಲಿ ಮತ್ತು ಊರಲ್ಲಿ ಬಂಡುಕೋರರ ದೊಂಬಿಯಿಂದಾಗಿ ಇವನ ಮಂತ್ರಿ ಸಭೆಯೇ ಬುಡಮೇಲಾಗಿ ಕೊನೆಗೆ ಈತನನ್ನೇ ಸಭೆಯಿಂದ ವಜಾ ಮಾಡಲಾಯಿತು. ಮಾತ್ರವಲ್ಲ ಕುದುರೆಯ ಮೇಲೆ ಸವಾರಿ ಮಾಡಿ ಹೋಗುತ್ತಿದ್ದ ಈತನನ್ನು ಹೀನಾಯವಾಗಿ ಜನರೆಡೆಯಲ್ಲಿ ಕತ್ತೆಯ ಮೇಲೆ ಕುಳ್ಳಿರಿಸಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಇವನು ಮುಂದಕ್ಕೆ ನಮ್ಮ ಅಧಿಕಾರಿಯಲ್ಲ ಎಂಬ ಬಹಿರಂಗ ಘೋಷಣೆ ಮಾಡಿ ಅಲ್ಲಿಂದ ಗಡಿಪಾರು ಮಾಡಲಾಯಿತು. ನಂತರ ಈತನನ್ನು ಇರಾಕಿನಲ್ಲಿ ಕಾರಾಗೃಹಕ್ಕೆ ಹಾಕಲಾಯಿತು. ಮಾತ್ರವಲ್ಲ ತನ್ನ ಕೊನೆಯ ಉಸಿರು ಕೂಡ ಅದೇ ಕಾರಾಗ್ರಹದಲ್ಲಾಗಿತ್ತು.! ಮತ್ತೆ ಹುವೈರಿಸ್ ಎಂಬವರು ತನ್ನ ಕೌಟುಂಬಿಕ ಸಮಸ್ಯೆಯಿಂದಾಗಿ ಗತಿಗೆಟ್ಟು ಕೊನೆಗೆ ಬೀದಿಬಿಕಾರಿ ಮತ್ತು ಬರ್ಬಾದ್ ಆದರು.
ಹಾಗೆಯೇ ಇಮಾಮ್ ಬುಖಾರಿಯವರು ನಂತರ ಅಲ್ಲಿಂದ ತನ್ನ ಕುಟುಂಬದವರು ಇರುವ ಬುಖಾರಾದ ಹತ್ತಿರದ ಪಟ್ಟಣವಾದ ಸಮರ್‌ಖಂದಿಗೆ ಸಮೀಪದ ಖರ್‌ತಂಕ್ ಎಂಬ ಊರಿಗೆ ಹೋದರು. ಅಲ್ಲಿ ಕುಟುಂಬದವರಾದ ಅಬೂ ಮಂಸೂರ್ ಗಾಲಿಬ್ ಬಿನ್ ಜಿಬ್‌ರೀಲ್ ಎಂಬವರ ಮನೆಯಲ್ಲಿ ವಾಸ ಮಾಡಲು ಆರಂಭಿಸಿದರು. ಒಂದು ದಿನ ರಾತ್ರಿ ತಹಜ್ಜುದ್ ನಮಾಝ್ ಮಾಡಿ ದುಆ ಮಾಡಿದರು. "ಅಲ್ಲಾಹ್... ಈ ಜಗತ್ತಿನಲ್ಲಿ ನಾನು ಹಲವಾರು ಕಷ್ಟ ತೊಂದರೆಗಳನ್ನು ಅನುಭವಿಸಿದೆ. ಪರವಾಗಿಲ್ಲ ಅದು ನಿನ್ನ ವಿಧಿ. ಈ ಪ್ರಪಂಚದಲ್ಲಿ ಎಲ್ಲವೂ ನಿನ್ನ ತೀರ್ಮಾನ ಮತ್ತು ವಿಧಿಯಂತೆ ನಡೆಯುತ್ತದೆ. ಈ ಭೂಮಿಗೆ ನಾನು ಭಾರವಾಗುತ್ತೇನೆ ಎಂದಾದರೆ ಒಂದು ನಿಮಿಷವೂ ತಡ ಮಾಡದೆ ನೀನು ನಿನ್ನ ಸನ್ನಿಧಿಗೆ ಬರಮಾಡಿ ಕೊಳ್ಳಬೇಕು. "
ನಂತರ ಕೆಲವು ದಿನಗಳಾಗುವಾಗ ಇಮಾಮ್ ಬುಖಾರಿಗೆ ಶಾರೀರಿಕ ಅಸ್ವಸ್ಥತೆ ಶುರುವಾಗಿ ಎಲ್ಲೂ ಹೋಗದೆ ಮನೆಯಲ್ಲಿಯೇ ತಂಗುವಂತಾಯಿತು. ಕೆಲವು ದಿನಗಳ ಅಸ್ವಸ್ಥತೆಯ ಬಳಿಕ ಹಿಜ್‌ರಾ ಇನ್ನೂರ ಐವತ್ತಾರು ಶವ್ವಾಲ್ ಒಂದು ಈದುಲ್ ಫಿತ್‌ರಿನ ರಾತ್ರಿ ಇಶಾ ನಮಾಝಿನ ನಂತರ ಈ ಅರುವತ್ತ ಎರಡರ ಹರೆಯದ ಹದೀಸ್ ಸೂರ್ಯ ಅಸ್ತಂಗತವಾಯಿತು.
ಮರಣಾ ನಂತರದ ಕರ್ಮಗಳೆಲ್ಲವೂ ಮುಗಿದ ಬಳಿಕ ಮರುದಿನ ಈದುಲ್ ಫಿತ್‌ರಿನಂದು ಲುಹ್‌ರ್ ನಮಾಝ್ ಬಳಿಕ ಸಮರ್‌ಖಂದಿನ ಖರ್‌ತಂಕ್ ಎಂಬ ಜಾಗದಲ್ಲಿ ಇವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು. ಇಮಾಮರ ಅಗಲಿಕೆಯ ನಂತರ ಕೆಲವೇ ದಿನಗಳಲ್ಲಿ ಈ ಗಾಲಿಬ್ ಬಿನ್ ಜಿಬ್‌ರೀಲ್ ಕೂಡ ವಫಾತಾದರು. ಅವರನ್ನು ಅವರ ವಸಿಯ್ಯತಿನಂತೆ ಇಮಾಮ್ ಬುಖಾರಿಯ ಮಖ್‌ಬರದ ಸಮೀಪವೇ ದಫನ ಮಾಡಲಾಯಿತು.
ಇಮಾಮ್ ಬುಖಾರಿಯವರ ಕುಟುಂಬದವರಾದ ಈ ಗಾಲಿಬ್ ಬಿನ್ ಜಿಬ್‌ರೀಲ್ ಹೇಳುತ್ತಾರೆ. "ಇಮಾಮ್ ಬುಖಾರಿಯು ವಫಾತಾದಾಗ ಅವರ ಪವಿತ್ರ ಶರೀರದಿಂದ ಹೇರಳವಾಗಿ ಬೆವರು ಸುರಿಯುತ್ತಿತ್ತು. ನಾವು ಕಫನ್ ಮಾಡಿ ದಫನ ಮಾಡಲು ಆ ಪುಣ್ಯ ಶರೀರವನ್ನು ಕಬರಿನ ಒಳಗೆ ಇಳಿಸಿದಾಗ ಕಸ್ತೂರಿಯಂತಹಾ ಸುಗಂಧ ಕಬರಿನ ಮಣ್ಣಿನಿಂದ ಹೊರಬರಲು ಶುರುವಾಯಿತು. ಈ ಸುಗಂಧಭರಿತ ವಾಸನೆ ಯಾವುದೇ ಕೊರತೆಯಿಲ್ಲದೆ ಹಲವಾರು ದಿನಗಳ ಕಾಲ ನಿರಂತರ ಬರುತ್ತಲೇ ಇತ್ತು. ಅಂತೆಯೇ ಖಬರಿನಿಂದ ಆಕಾಶದ ಭಾಗಕ್ಕೆ ಒಂದು ಉದ್ದವಾದ ಬೆಳಕಿನ ಪ್ರಕಾಶ ಗೋಪುರ ಕೂಡ ಎದ್ದು ಕಾಣುತ್ತಿತ್ತು. ಈ ಎಲ್ಲಾ ಪವಾಡಗಳನ್ನು ಕಂಡಾಗ ಜನರ ಪ್ರವಾಹವೇ ಅಲ್ಲಿಗೆ ಹರಿಯತೊಡಗಿತು. ಸಂದರ್ಶಕರ ಪ್ರವಾಹದಲ್ಲಿ ಇಡೀ ಸಮರ್‌ಖಂದ್ ಮತ್ತು ಖರ್‌ತಂಕ್ ಪರಿಸರದಲ್ಲಿ ಕಾಲಿಡಲು ಜಾಗ ಇಲ್ಲದಂತಾಯಿತು. ಜನಸಾಗರವು ಕಬರಿನ ಮೇಲಿನ ಸುಗಂಧಭರಿತ ಮಣ್ಣನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡುಹೋಗಲು ಶುರುಮಾಡಿದರು. ಕೊನೆಗೆ ನಿಯಂತ್ರಣವೇ ತಪ್ಪಿ ಅದರ ಗೌರವಕ್ಕೆ ದಕ್ಕೆ ಬರಬಹುದು ಎಂದು ಭಾಸವಾದಾಗ ನಾವು ಆ ಪವಿತ್ರ ಮಖ್‌ಬರಕ್ಕೆ ಭದ್ರವಾದ ಕಂಪೌಂಡು ಮತ್ತು ಮಹಾದ್ವಾರ (ಗೇಟು) ಮಾಡಿ ಜನ ಪ್ರವಾಹಕ್ಕೆ ನಿಯಂತ್ರಣ ಮಾಡಿದೆವು."
ಇಮಾಮ್ ಬುಖಾರಿಯವರ ಸಮಕಾಲೀನ ಪಂಡಿತರೂ ಸಮರ್‌ಖಂದ್ ಸಮೀಪ ನಿವಾಸಿಯೂ ಅದ ಇಮಾಮ್ ಅಬ್ದುಲ್ ವಾಹಿದ್ ಬಿನ್ ಆದಮ್ ಅಲ್ ತ್ವವಾವೀಸೀ (ರ) ಹೇಳುತ್ತಾರೆ. "ಒಂದು ದಿನ ನನಗೊಂದು ಅದ್ಭುತ ಕನಸುಬಿತ್ತು. ಪ್ರವಾದಿ ಮುಹಮ್ಮದ್ (ಸ) ಮತ್ತು ಕೆಲವು ಗಣ್ಯ ಸಹಾಬಿಗಳು ಒಂದು ಕಡೆ ಬಹಳ ಕಾತರದಿಂದ ಯಾರನ್ನೋ ಕಾಯುತ್ತಿದ್ದಾರೆ. ನಾನು ಅವರ ಬಳಿ ಹೋಗಿ ಸಲಾಮ್ ಹೇಳಿದೆ. ನನ್ನ ಸಲಾಮಿಗೆ ಬಹಳ ಸಂತೋಷದಿಂದ ವ ಅಲೈಕುಮುಸ್ಸಲಾಮ್ ಎಂದು ಉತ್ತರ ಕೊಟ್ಟರು. ನಾನು ಕೇಳಿದೆ. ಪ್ರವಾದಿಯವರೇ.., ನೀವು ಯಾರನ್ನು ಇಲ್ಲಿ ಇಷ್ಟು ಕಾತರದಿಂದ ಕಾಯುತ್ತಿರುವುದು? ಇಲ್ಲಿ ಯಾಕೆ ನಿಂತಿರುವಿರಿ..?" ಕೂಡಲೇ ಪ್ರವಾದಿವರ್ಯರು ಹೇಳಿದರು. "ನಾವು ಮುಹಮ್ಮದ್ ಬಿನ್ ಇಸ್ಮಾಯೀಲ್ ಅಲ್ ಬುಖಾರಿಯನ್ನು ಕಾಯುತ್ತಿದ್ದೇವೆ!."
ಎರಡು ದಿನಗಳು ಕಳೆದು ಅವರ ಸಮೀಪ ವಾಸಿಯಾದ ನನಗೆ ಅವರ ವಫಾತಿನ ದುಃಖವಾರ್ತೆ ತಿಳಿಯಿತು. ಸುಬ್‌ಹಾನಲ್ಲಾಹ್! ಕೆಲವು ದಿನಗಳ ಮುಂಚೆ ನನಗೆ ಬಿದ್ದ ಕನಸಿನ ಸಮಯ ಮತ್ತು ಇಮಾಮ್ ಬುಖಾರಿ ಅಗಲಿಕೆಯ ಸಮಯ ನಾನು ನೋಡುವಾಗ ಒಂದೇ ಆಗಿತ್ತು.!!"
ಶೈಖ್ ತವಾವೀಸ್ ಮುಂದುವರಿಸುತ್ತಾ ಹೇಳುತ್ತಾರೆ. "ಬುಖಾರಿಯವರು ಬದುಕಿದ್ದಾಗ ಅವರನ್ನು ಟೀಕೆ, ಅಪಮಾನ, ಹಾಸ್ಯ ಮಾಡಿದವರು ಅವರು ವಫಾತಾದಾಗ ಅವರ ಮಹಿಮೆಯರಿತು ಅವರ ಮಖ್‌ಬರದ (ದರ್ಗಾ) ಸಮೀಪ ಬಂದು ಅವರಲ್ಲಿ ಕ್ಷಮಾಪನೆ ಮಾಡಿದರು. ನಿರಂತರ ಕಬರಿನ ಸಮೀಪ ಕುಳಿತು ಅಳುತ್ತಾ ತಾವು ಮಾಡಿದ ತಪ್ಪಿಗಾಗಿ ತೌಬಾ ಮಾಡಿದರು."
ನಜ್‌ಮ್ ಬಿನ್ ಫುಲಯ್‌ಲ್ (ರ) ಹೇಳುತ್ತಾರೆ. "ನಾನೊಮ್ಮೆ ಪ್ರವಾದಿ ಮುಹಮ್ಮದ್ (ಸ) ರನ್ನು ಪವಿತ್ರ ರೌಲಾ ಶರೀಫಿನಿಂದ ಎದ್ದು ಹೊರಬಂದು ಒಂದು ದಾರಿಯಾಗಿ ನಡೆದು ಹೋಗುವ ಕನಸು ಕಂಡೆನು. ಅವರ ಬೆನ್ನಲ್ಲೇ ಇಮಾಮ್ ಬುಖಾರಿಯೂ ಇದ್ದಾರೆ. ಪ್ರವಾದಿಯವರು ಒಂದೊಂದು ಹೆಜ್ಜೆ ಇಡುವಾಗಲೂ ಅವರ ಬೆನ್ನಲ್ಲೇ ಇಮಾಮ್ ಬುಖಾರಿಯವರೂ ತನ್ನ ಪಾದವನ್ನು ಅವರಿಟ್ಟ ಅದೇ ಜಾಗದಲ್ಲಿ ಇಟ್ಟು ನಡೆಯುತ್ತಿದ್ದರು."
ಹಿಜ್‌ರಾ ವರ್ಷ 301 ರಲ್ಲಿ ಹುಟ್ಟಿ 371 ರಲ್ಲಿ ವಫಾತಾದ ಖ್ಯಾತ ಕರ್ಮಶಾಸ್ತ್ರ ಪಂಡಿತ ಇಮಾಮ್ ಅಬೂ ಝಯ್‌ದ್ ಮುಹಮ್ಮದ್ ಮರ್‌ವಝೀ (ರ) ಹೇಳುತ್ತಾರೆ. "ನಾನೊಮ್ಮೆ ಕಅಬಾಲಯದ ಸಮೀಪ ಮಖಾಮ್ ಇಬ್‌ರಾಹೀಮ್ ಬಳಿ ನಿದ್ರಿಸುತ್ತಿರುವಾಗ ನನಗೊಂದು ರೋಮಾಂಚಕ ಕನಸು ಬಿತ್ತು. ಪ್ರವಾದಿ ಮುಹಮ್ಮದ್ (ಸ) ರು ಬಂದು ನನ್ನಲ್ಲಿ ಕೇಳುತ್ತಾರೆ. "ಅಲ್ಲಾ ಮರ್‌ಝಯಿಯವರೇ..., ನೀವು ಶಾಫೀ ಇಮಾಮರ ಕಿತಾಬುಗಳನ್ನು ಮಾತ್ರ ನಿಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಕೊಡುತ್ತೀರಿ...? ಆದರೆ ನನ್ನ ಕಿತಾಬಿನ ಬಗ್ಗೆ ನಿಮಗೆ ಯಾವುದೇ ಚಿಂತೆ ಇಲ್ಲವೇ..?" ಕೂಡಲೇ ಇಮಾಮ್ ಮರ್‌ಝಯಿಯವರು ಕೇಳಿದರು. "ನಿಮ್ಮ ಕಿತಾಬು ಯಾವುದು ಪ್ರವಾದಿವರ್ಯರೇ.?" ಆಗ ಪ್ರವಾದಿ ಮುಹಮ್ಮದ್ (ಸ) ರು ಹೇಳಿದರು. "ನನ್ನ ಕಿತಾಬ್ ಗೊತ್ತಿಲ್ಲವೇ...? ಅದುವೇ ಸಹೀಹುಲ್ ಬುಖಾರಿ! "
ಅಬುಲ್ ಫತ್‌ಹ್ ನಸ್‌ರ್ ಬಿನ್ ಅಲ್ ಹಸನ್ ಅಲ್ ಸಮರ್‌ಖಂದಿಯ್ಯಿ ಎಂಬ ವಿದ್ವಾಂಸರು ಹೇಳುತ್ತಾರೆ. "ಇಮಾಮ್ ಬುಖಾರಿಯ ವಫಾತಿನ ನಂತರ ಇನ್ನೂರು ವರ್ಷ ಕಳೆದು ಒಮ್ಮೆ ಸಮರ್‌ಖಂದಿನಲ್ಲಿ ಮಳೆಯಿಲ್ಲದೆ ಜನರೆಲ್ಲಾ ತುಂಬಾ ಸಂಕಷ್ಟಕ್ಕೀಡಾದರು. ಕೃಷಿಭೂಮಿ ಒಣಗಿ ಬರಡಾಯಿತು. ಕುಡಿಯಲು ನೀರಿಲ್ಲದೆ ತೊಂದರೆಗೀಡಾದರು. ಕಂಗಾಲಾದ ಗ್ರಾಮಸ್ಥರು ಹಲವಾರು ಬಾರಿ ಮಳೆಗೆ ಬೇಕಾಗಿ ಊರಿನ ಖಾಝಿಯ ನೇತ್ರತ್ವದಲ್ಲಿ ನಮಾಝ್ ಮಾಡಿದರು. ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಆದರೆ ಅಲ್ಲಾಹನ ತಖ್‌ದೀರ್ ಪ್ರಕಾರ ಮಳೆ ಬರಲೇ ಇಲ್ಲ."
ಹೀಗೆಯೇ ಜನರೆಲ್ಲರೂ ಸಂಕಷ್ಟದಲ್ಲಿರುವಾಗ ಊರಿನ ಪ್ರಾಮಾಣಿಕ ವ್ಯಕ್ತಿಯೊಬ್ಬರು ಸಮರ್‌ಖಂದಿನ ಖಾಝಿಯನ್ನು ಸಮೀಪಿಸಿ ಹೇಳಿದರು. "ಖಾಝಿಯವರೇ, ನೀವು ಒಪ್ಪುವುದಾದರೆ ನಾನೊಂದು ಅಭಿಪ್ರಾಯ ಹೇಳುತ್ತೇನೆ." ಖಾಝಿ ಹೇಳಿದರು. "ಪರವಾಗಿಲ್ಲ. ಒಳ್ಳೆಯ ಅಭಿಪ್ರಾಯವಾದರೆ ಒಪ್ಪುವುದರಲ್ಲಿ ಏನು ತೊಂದರೆ..? ನೀವು ಅಭಿಪ್ರಾಯ ಹೇಳಿ." ಬಂದ ವ್ಯಕ್ತಿ ಹೇಳಿದರು. "ನೀವು ಮತ್ತು ನಾವೆಲ್ಲರೂ ಒಟ್ಟಾಗಿ ಇಮಾಮ್ ಬುಖಾರಿಯ ದರ್ಗಾದ ಬಳಿ ಹೋಗಿ ಅವರನ್ನು ಮಧ್ಯವರ್ತಿಯಾಗಿಸಿ ದುಆ ಮಾಡಿ ಅಲ್ಲಾಹನಲ್ಲಿ ಮಳೆಯನ್ನು ಕೇಳುವುದು. ಆಗ ಅಲ್ಲಾಹನು ನಮಗೆ ಉತ್ತರ ಕೊಡುವನು"
ಈ ವ್ಯಕ್ತಿಯ ಅಭಿಪ್ರಾಯ ಊರಿನ ಖಾಝಿಯವರಿಗೆ ಬಹಳ ಇಷ್ಟವಾಯಿತು. ಅವರ ಅಭಿಪ್ರಾಯದಂತೆ ಎಲ್ಲರೂ ಒಟ್ಟಾಗಿ ಸಮರ್‌ಖಂದಿನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಖರ್‌ತಂಕಿಗೆ ಇಮಾಮ್ ಬುಖಾರಿಯ ದರ್ಗಾ ಬಳಿ ಹೋದರು. ಅಲ್ಲಿ ಹೋಗಿ ಬುಖಾರಿಯವರ ಸನ್ನಿಧಿಯಲ್ಲಿ ಎಲ್ಲರೂ ಅಳುತ್ತಾ ಅವರನ್ನು ಮದ್ಯವರ್ತಿಯಾಗಿ ಮಾಡಿ ಮಳೆಗೆ ಬೇಕಾಗಿ ದುಆ ಮಾಡಿದರು. ಸುಬ್‌ಹಾನಲ್ಲಾಹ್! ಪ್ರಾರ್ಥನೆ ಮುಗಿದದ್ದೇ ತಡ, ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಎಡೆಬಿಡದೆ ನಿರಂತರ ಬಂದ ಜಡಿ ಮಳೆಯಿಂದಾಗಿ ಪ್ರಾರ್ಥನೆ ಮಾಡಲು ಹೋದ ಜನರಿಗೆ ಖರ್‌ತಂಕಿನಿಂದ ಸಮರ್‌ಖಂದಿಗೆ ಬರಲಾಗದೆ ಒಂದು ವಾರದ ತನಕ ಅಲ್ಲೇ ತಂಗ ಬೇಕಾಯಿತು.
ಇಮಾಮ್ ಬುಖಾರಿಯವರು ಯಾವ ಮಝ್‌ಹಬ್ ಸ್ವೀಕರಿಸಿದ್ದರು ಎಂಬುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲದಿದ್ದರೂ ಅವರು ಶಾಫಿಈ ಮಝ್‌ಹಬ್‌ಗಾರರಾಗಿದ್ದರು ಎಂದು ಇಮಾಮ್ ತಾಜುದ್ದೀನ್ ಸುಬುಕೀ (ರ) ಅಂತೆಯೇ ಇಮಾಮ್ ಬಿನ್ ಹಜರ್ ಅಸ್‌ಖಲಾನಿ (ರ) ರಂತಹಾ ಕೆಲವು ಶಾಫಿಯೀ ಉಲಮಾಗಳು ಅಭಿಪ್ರಾಯ ಪಡುವಾಗ ಅಲ್ಲಾ, ಅವರು ಹಂಬಲೀ ಮಝ್‌ಹಬಿನವರು ಆಗಿದ್ದರೆಂದು ಬಿನ್ ಅಬೀ ಯಅ್‌ಲಾ (ರ) ರಂತಹಾ ಹಂಬಲೀ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಅದಾಗ್ಯೂ ಅವರು ಶಾಫಿಯೂ ಅಲ್ಲ ಹಂಬಲಿಯೂ ಅಲ್ಲ ಅವರಿಗೆ ಅವರದ್ದೇ ಆದ ಸ್ವಂತ ಮಝ್‌ಹಬ್ ಇತ್ತೆಂದು ಮತ್ತೆ ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಿನಲ್ಲಿ ಈ ಜ್ಞಾನಸೂರ್ಯ ನಮ್ಮನ್ನಗಲಿ ಸುಮಾರು ಒಂದು ಸಾವಿರದ ಇನ್ನೂರು ವರ್ಷಗಳಾದರೂ ಆ ತೇಜಸ್ಸಿನ ನೆನಪು ಮುಸ್ಲಿಮ್ ಉಮ್ಮತಿನ ಹೃದಯದಲ್ಲಿ ಅಚ್ಚಳಿಯದೆ ನಿಂತಿದೆ. ಅವರ ದರ್ಗಾವು ಸೋವಿಯತ್ ಯೂನಿಯನ್‌ನಿಂದ ವಿಭಜಿತವಾದ ಮುಸ್ಲಿಂ ರಾಷ್ಟ್ರ ಉಝ್‌ಬೇಕಿಸ್ತಾನಿನ ಪ್ರಮುಖ ಪಟ್ಟಣವಾದ ಸಮರ್‌ಖಂದಿಗೆ ಸಮೀಪದ ಖರ್‌ತಂಕ್ ಎಂಬಲ್ಲಿದೆ. ಅವರ ಮಖ್‌ಬರದ ಬಳಿ ಅವರನ್ನು ತವಸ್ಸುಲ್ (ಮಧ್ಯವರ್ತಿ) ಮಾಡಿ ಮಾಡುವ ಪ್ರಾರ್ಥನೆಗೆ ಉತ್ತರ ದೊರೆಯುತ್ತದೆ ಎಂದು ಹಿಜ್‌ರಾ ವರ್ಷ 1265 ರಲ್ಲಿ ಹುಟ್ಟಿ 1350 ರಲ್ಲಿ ವಫಾತಾದ ಯೂಸುಫ್ ಬಿನ್ ಇಸ್ಮಾಯೀಲ್ ಅಲ್ ನಬ್‌ಹಾನಿ (ರ) ರಂತಹಾ ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲಾಹನು ನಮ್ಮೆಲ್ಲರನ್ನು ಆ ಮಹಾನುಭಾವರೊಂದಿಗೆ ಅವನ ಸ್ವರ್ಗಲೋಕದಲ್ಲಿ ಒಗ್ಗೂಡಿಸಲಿ. ಆಮೀನ್....
ಸಂಗ್ರಹ : ಬಿನ್‌ಹಜರ್ ಅಸ್‌ಖಲಾನಿಯ ಫತುಹುಲ್ ಬಾರೀ, ಇಮಾಮ್ ಖಸ್‌ತಲ್ಲಾನಿಯ ಇರ್ಶಾದುಸ್ಸಾರೀ, ಇಮಾಮ್ ಖತೀಬುಲ್ ಬಗ್‌ದಾದಿಯ ತಾರೀಖುಲ್ ಬಗ್‌ದಾದ್, ಇಮಾಮ್ ಅಜ್‌ಲೂನಿಯ ಅಲ್ ಫವಾಯಿದ್ ಅಲ್ ದರಾರೀ, ಇಮಾಮ್ ಖಲ್ಲೀಖಾನ್‌ರ ವಪಯ್ಯಾತುಲ್ ಅಅ್‌ಯಾನಿ, ಇಮಾಮ್ ಝಹಬಿಯ ಸಿಯರು ಅಅ್‌ಲಾಮ್ ಅನ್ನುಬಲಾಅ್ ಮತ್ತು ತಾರೀಖುಲ್ ಇಸ್ಲಾಮ್ ಎಂಬ ಗ್ರಂಥಗಳು.
ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ
NOOR-UL-FALAH ISLAMIC STORE
Comments
Post a Comment