ಹಜರುಲ್ ಅಸ್ ವದ್
"ಹಜರುಲ್ ಅಸ್‌ವದ್" ಇದರ ಕುರಿತು ನಿಮಗೆಷ್ಟು ತಿಳಿದಿದೆ..?
ಒಂದು ಇಣುಕು ನೋಟ.
ಅಲ್ಲಾಹುವಿನ ಪವಿತ್ರ ಭವನವಾದ ಕಅಬಾಲಯದ ಒಂದು ಪಾರ್ಶ್ವದಲ್ಲಿರುವ "ಹಜರುಲ್ ಅಸ್‌ವದ್" ಎಂಬ ಕಲ್ಲು ಅದರ ಪ್ರಾರಂಭದಲ್ಲಿ ಅದು ಒಂದು ಸದಾಚಾರಿಯಾದ (ಸ್ವಾಲಿಹ್) ಅಲ್ಲಾಹುವಿನ ಮಲಕ್ ಆಗಿತ್ತು.
ಮನುಷ್ಯ ಪಿತಾ ಹಝ್ರತ್ ಆದಮ್ (ಅ) ರನ್ನು ಅಲ್ಲಾಹನು ಸೃಷ್ಟಿಸಿ ಸ್ವರ್ಗದಲ್ಲಿ ವಾಸಿಸಲು ಮತ್ತು ಅಲ್ಲಿರುವ ಎಲ್ಲಾ ಸುಖ ಸೌಲತ್ತುಗಳನ್ನು ಉಪಯೋಗಿಸಲು ಅನುಮತಿ ಕೊಟ್ಟಿದ್ದನು. ಅದಾಗ್ಯೂ ಅಲ್ಲಿರುವ ಒಂದು ಮರಕ್ಕೆ ಸನ್ನೆ ಮಾಡಿ ಅತ್ತ ಹೋಗ ಬಾರದಾಗಿಯೂ ಅದರಿಂದ ಯಾವುದೇ ಹಣ್ಣನ್ನು ಕಿತ್ತಬಾರದಾಗಿಯೂ ತಾಕೀತು ಮಾಡಿದ್ದನು. ಅಲ್ಲದೆ ಅವರಿಬ್ಬರನ್ನೂ ಆ ಕಡೆ ಹೋಗದಂತೆ ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಈ ಹೇಳಿದ ಮಲಕಿಗೆ ಕೊಟ್ಟಿದ್ದನು.
ಅಲ್ಲಾಹುವಿನ ತಕ್‌ದೀರ್ ಪ್ರಕಾರ ಹಝ್ರತ್ ಆದಮ್ (ಅ) ರು ಆ ಮರದಿಂದ ಹಣ್ಣನ್ನು ಕಿತ್ತು ತಿಂದು ಒಂದು ಮಹಾ ದುರಂತವು ನಡೆಯುವ ಸಾಧ್ಯತೆಯಿದೆಯೆಂದು ತಿಳಿದಾಗ ಆ ಮಲಕ್ ಅಲ್ಲಿಂದ ಅಪ್ರತ್ಯಕ್ಷರಾದರು. ಆಗ ಅಲ್ಲಾಹನು ಆ ಮಲಕನ್ನು ದೃಷ್ಟಿಯಿಟ್ಟು ಬಹಳ ಗಂಬೀರದ ಗದರಿಕೆಯ ಒಂದು ನೋಟ ನೋಡಿದನು. ಆ ಕಾರಣದಿಂದ ಕೂಡಲೇ ಆ ಮಲಕ್ ಒಂದು ಮಾಣಿಕ್ಯ ಅಥವಾ ವೈಡೂರ್ಯದ ಕಲ್ಲಾಗಿ ಮಾರ್ಪಟ್ಟರು.
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಒಂದು ಹದೀಸಿನಲ್ಲಿ "ಅಂತ್ಯ ದಿನದಂದು ಹಜರುಲ್ ಅಸ್‌ವದ್ ಕೈ, ಕಾಲು, ನಾಲಗೆ, ಕಣ್ಣು, ಕಿವಿ ಇರುವ ಒಂದು ವಸ್ತುವಾಗಿ ಬರುವುದು" ಎಂದು ವರದಿಯಾದದ್ದು ಇದು ಮೊದಲು ಜೀವವಿರುವ ಒಂದು ವಸ್ತುವಾಗಿತ್ತು ಎಂಬುದಕ್ಕೆ ಒತ್ತು ಕೊಡುತ್ತದೆ.
ನಂತರ ಹಝ್ರತ್ ಆದಮರು ನಿಷೇಧಿತ ಮರದಿಂದ ಹಣ್ಣು ಕಿತ್ತು ತಿಂದ ಕಾರಣದಿಂದ ಭೂಲೋಕಕ್ಕೆ ಬರಬೇಕಾಯಿತು. ಹಾಗೆ ಬರುವಾಗ ಅವರು ಸ್ವರ್ಗದಿಂದ ಐದು ವಸ್ತುಗಳನ್ನು ತಂದಿದ್ದರು. ಅದು ಯಾವುದೆಂದರೆ, ಮೂಸಾ (ಅ) ರವರ ಬೆತ್ತ , ಸುಲೈಮಾನ್ (ಅ) ರವರ ಉಂಗುರ, ಅವರ ಶರೀರವನ್ನು (ಅವುರತ್) ಮುಚ್ಚಲು ಬಟ್ಟೆ ಎಂಬಂತೆ ಅತ್ತಿ ಮರದ ಎಲೆ, ಸುಗಂಧವಸ್ತು ಊದ್ ಮತ್ತು ಹಜರುಲ್ ಅಸ್‌ವದ್.
ಹಜರುಲ್ ಅಸ್‌ವದ್ (ಕಪ್ಪು ಕಲ್ಲು) ಪ್ರಾರಂಭದಲ್ಲಿ ಅದು ಹಾಲಿನಂತೆ ಬಿಳಿಯಾಗಿತ್ತು. ನಂತರ ಜನರ ಅನ್ಯಾಯ ಮತ್ತು ದೋಷದ ಕಾರಣ ಅದರ ಬಣ್ಣವು ಕಪ್ಪಾಯಿತೆಂದು ಕೆಲವು ಪ್ರಮಾಣಗಳು ಹೇಳುವುದಾದರೆ, ಹಝ್ರತ್ ಆದಮರು ಭೂಲೊಕಕ್ಕೆ ಬರುವಾಗ ಅದನ್ನು ತನ್ನ ಕಂಕುಳಲ್ಲಿ ಇಟ್ಟು ತಂದಿದ್ದರು. ಸ್ವರ್ಗದಿಂದ ಬಂದ ಬೇಸರದಿಂದ ಕಣ್ಣೀರು ಬರುವಾಗಲೆಲ್ಲಾ ಆ ಕಲ್ಲಿನಿಂದ ಅದನ್ನು ಉಜ್ಜುತ್ತಿದ್ದರು. ಆ ಕಾರಣದಿಂದ ಕಲ್ಲು ಕ್ರಮೇಣ ಕಣ್ಣೀರು ಅಂಟಿ ಹೋದ ಕಾರಣ ಕಪ್ಪಾಯಿತೆಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಕಲಬೆರಕೆಯಿಲ್ಲದ ಪೂರ್ಣ ವೈಡೂರ್ಯ ಅಥವಾ ಮಾಣಿಕ್ಯ ಕಲ್ಲಾದ ಇದರ ಬೇರೊಂದು ವಿಷೇಶತೆಯೆಂದರೆ, ಇದು ಸ್ವರ್ಗದಲ್ಲಿರುವಾಗ ಸೂರ್ಯನಂತೆ ಪ್ರಕಾಶಿಸುತ್ತಿತ್ತು. ನಂತರ ಭೂಮಿಗೆ ಇಳಿಸುವಾಗ ಹಾಗೆಯೇ ಪ್ರಕಾಶವಿರುವುದಾದರೆ ಯಾರಿಗೂ ಅದನ್ನು ನೋಡಲು ಸಾಧ್ಯವಾಗದ ಕಾರಣ ಅಲ್ಲಾಹನು ಅದರ ಪ್ರಕಾಶವನ್ನು ನಂದಿಸಿದನು ಆ ಪ್ರಕಾಶವಿರುವ ರೂಪದಲ್ಲಿ ಇಂದು ಅದು ಇರುತ್ತಿದ್ದರೆ ಭೂಮಿಯು ಪಶ್ಚಿಮದಿಂದ ಪೂರ್ವದ ತನಕ ಪ್ರಕಾಶಿಸುತ್ತಿತ್ತು.
ಈ ಕಲ್ಲನ್ನು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು, ಹಲವಾರು ಪ್ರವಾದಿಗಳು, ಲಕ್ಷೋಪಲಕ್ಷ ಸ್ವಹಾಬಿಗಳು ಚುಂಬಿಸಿದ್ದಾರೆ. ಆದ್ದರಿಂದ ಬದುಕಿನಲ್ಲಿ ಯಾರಿಗಾದರು ಒಬ್ಬನಿಗೆ ಆ ಕಲ್ಲನ್ನು ಒಮ್ಮೆ ಚುಂಬಿಸುವ ಭಾಗ್ಯ ದೊರೆತರೆ ಆತನಿಗೆ ನಾಳೆ ಪರಲೋಕದಲ್ಲಿ ಅದು ಶಿಫಾರಸು ಮಾಡುತ್ತದೆ.
ಹಜರುಲ್ ಅಸ್‌ವದ್ ಆದಮ್ (ಅ) ಬರುವಾಗ ತರಲಿಲ್ಲವೆಂದೂ ಹಝ್ರತ್ ಇಬ್ರಾಹಿಮ್ (ಅ) ಕಅಬಾಲಯದ ಪುನರ್ನಿರ್ಮಾಣ ಮಾಡುವ ವೇಳೆ ಜಿಬ್‌ರೀಲ್ (ಅ) ಸ್ವರ್ಗದಿಂದ ನೇರವಾಗಿ ತಂದು ಕೊಟ್ಟದ್ದು ಎಂದು ಒಂದು ಅಭಿಪ್ರಾಯವಾದರೆ, ಸ್ವರ್ಗದಿಂದ ಅವರು ಬರುವಾಗ ಅದನ್ನು ತಂದಿದ್ದರೆಂದೂ ಅದು ಇಬ್‌ರಾಹೀಮ್ ಕಅಬಾಲಯ ಪುನರ್ನಿರ್ಮಾಣ ಮಾಡುವ ತನಕ ನಮ್ಮ ಭವ್ಯ ಭಾರತ ದೇಶದಲ್ಲಿ ಅದು ಅಲ್ಲಾಹುವಿನ ಸಂರಕ್ಷಣೆಯಲ್ಲಿ ಸುರಕ್ಷಿತವಾಗಿ ಇತ್ತು. ನಂತರ ಪುನರ್ನಿರ್ಮಾಣ ವೇಳೆ ಭಾರತ ಅಥವಾ ಇಂದಿನ ಶ್ರೀಲಂಕಾದಿಂದ ಹಝ್ರತ್ ಜಿಬ್‌ರೀಲ್ (ಅ) ತಂದು ಕೊಟ್ಟರೆಂದು ಮತ್ತೊಂದು ಅಭಿಪ್ರಾಯವಾಗಿದೆ.
ಹಝ್ರತ್ ಆದಮ್ (ಅ) ತನ್ನ ಬದುಕಿನಲ್ಲಿ ಸುಮಾರು ಮುನ್ನೂರು ಹಜ್ಜ್ ಮತ್ತು ಏಳುನೂರು ಉಮ್ರ ಕಾಲ್ನಡಿಗೆಯಲ್ಲಿ ಮಾಡಿದ್ದರು. ಅದರಲ್ಲಿ ಹೆಚ್ಚಿನವು ನಮ್ಮ ಹೆಮ್ಮೆಯ ಭಾರತದಿಂದಾಗಿತ್ತು
ಒಟ್ಟಿನಲ್ಲಿ ಈ ಕಲ್ಲು ಸ್ವರ್ಗದಿಂದ ತಂದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಾಹನು ನಮಗೆಲ್ಲರಿಗೂ ಅದನ್ನು ಚುಂಬಿಸುವ ಭಾಗ್ಯ ಕೊಡಲಿ ಆಮೀನ್...
ಸಂಗ್ರಹ: ಇಮಾಮ್ ಬುಜೈರಿಮಿಯ ಹಾಷಿಯತು ಅಲ್ ಬುಜೈರಿಮಿ, ಇಮಾಮ್ ದಿಮ್ಯಾತಿಯ ಹಾಷಿಯತು ಇಆನತು ಅಲ್ ತ್ವಾಲಿಬೀನ್, ಮತ್ತು ಬಹ್‌ಜತುಲ್ ಅಬ್‌ರಾರ್ ಎಂಬ ಗ್ರಂಥಗಳು.
ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ
NOOR-UL-FALAH ISLAMIC STORE
Comments
Post a Comment