ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು!

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು!

   ಖಲೀಫಾ ಉಮರ್ (ರ) ರ ಆಡಳಿತ ಕಾಲದಲ್ಲಿ ಒಬ್ಬ ಬಡಪಾಯಿಯು ಖಲೀಫರ ಸನ್ನಿಧಿಗೆ ಬಂದು ಹೇಳಿದನು. "ಖಲೀಫರೇ.., ನನ್ನ ಮಗನ ಸ್ವಭಾವ ಮತ್ತು ಗುಣ ನಡತೆ ಸರಿ ಇಲ್ಲ. ತಂದೆ ತಾಯಿಗಳಿಗೆ ಗೌರವ ಕೊಡುವುದಿಲ್ಲ. ನಾವು ಹೇಳಿದಂತೆ ಕೇಳುವುದಿಲ್ಲ. ಹೇಳಿದ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ. ಯಾವ ಕೆಲಸಕ್ಕೆ ಹೋಗುವುದಿಲ್ಲ." 
   ಕೂಡಲೇ ಖಲೀಫರು ಅವನ ಮಗನನ್ನು ತನ್ನ ಸನ್ನಿಧಿಗೆ ಹಾಜರುಪಡಿಸಿ ತಂದೆ ತಾಯಿಗಳ ಗೌರವ ಮತ್ತು ಅವರಿಗೆ ಇಸ್ಲಾಮಿನಲ್ಲಿರುವ ಬೆಲೆಯ ಬಗ್ಗೆ ಸವಿಸ್ತಾರವಾಗಿ ಅವನಿಗೆ ವಿವರಿಸಿ ಕೊಟ್ಟರು. ಖಲೀಫರ ಉಪದೇಶವನ್ನು ಚೆನ್ನಾಗಿ ಆಲಿಸಿದ ಆ ಬಾಲಕನು ಕೊನೆಗೆ ಖಲೀಫರಲ್ಲಿ ಕೇಳಿದನು. "ಖಲೀಫರೇ.., ಹಾಗಾದರೆ ತಂದೆಯಾದ ಒಬ್ಬರಿಗೆ ಮಕ್ಕಳಿಗೆ ಬೇಕಾಗಿ ಮಾಡಬೇಕಾದ ಕರ್ತವ್ಯ ಏನೂ ಇಲ್ಲವೇ.." ಖಲೀಫರು ಹೇಳಿದರು. "ಖಂಡಿತವಾಗಿ ಇದೆ" ಆಗ ಆ ಹುಡುಗ ಹೇಳಿದನು. "ಹಾಗಾದರೆ ಅದೇನೆಂದು ನನಗೆ ಒಂದು ಸವಿಸ್ತಾರವಾಗಿ ವಿವರಿಸಿ ಕೊಡುವಿರೇ ಖಲೀಫರೇ..?"
   ಹಝ್ರತ್ ಉಮರ್ (ರ) ರವರು ಹೇಳಿದರು. "ಮೊದಲಾಗಿ ಹುಟ್ಟಿದ ಕೂಡಲೇ ಒಂದು ಒಳ್ಳೆಯ ಹೆಸರು ಇಡಬೇಕು. ನಂತರ ವಿವೇಕ ಪ್ರಾಯ ತಲುಪುವಾಗ ಇಸ್ಲಾಮಿನ ಬಗ್ಗೆ ಕಲಿಸಿ ಕೊಡಬೇಕು. ಮದ್ರಸಕ್ಕೆ ದಾಖಲು ಮಾಡಬೇಕು ಇತ್ಯಾದಿ..ಇತ್ಯಾದಿ.. " ಆಗ ಆ ಹುಡುಗ ಹೇಳಿದ "ಇವರು ನನ್ನನ್ನು ಹುಟ್ಟಿಸಿದ್ದೇ ವಿನಾ ಪ್ರಾರಂಭದ ಕರ್ತವ್ಯವಾದ ಒಂದು ಒಳ್ಳೆಯ ಹೆಸರು ಕೂಡ ನನಗೆ ಇಡಲಿಲ್ಲ. ನನ್ನ ಹೆಸರು ಜುಅ್‌ಲ್. (ಜೀರುಂಡೆ, ಕುರುಡಕ್ಕೆ) ನನಗೆ ಇಟ್ಟ ಈ ಹೆಸರನ್ನು ಯಾರಾದರೂ ಹೆಸರು ಕೇಳಿದರೆ ಹೇಳಲಿಕ್ಕೆ ನಾಚಿಕೆಯಾಗುತ್ತದೆ. ಸಹಪಾಠಿಗಳು ಹೆಸರು ಕರೆದು ನನ್ನನ್ನು ತಮಾಷೆ ಮಾಡುತ್ತಾರೆ. ಅಂತೆಯೇ ನಾನು ನನ್ನ ಜನ್ಮದಲ್ಲಿ ಮದ್ರಸದ ಮೆಟ್ಟಲು ಹತ್ತಲಿಲ್ಲ. ತಂದೆಯಾದ ಇವರು ಕುರ್‌ಆನಿನ ಒಂದು ಅಕ್ಷರ ಕೂಡ ನನಗೆ ಈ ತನಕ ಕಲಿಸಿ ಕೊಡಲಿಲ್ಲ."
   ಸಾಧು ಹುಡುಗನಿಂದ ಇದನ್ನು ಕೇಳಿದಾಕ್ಷಣ ಖಲೀಫರು ಆತನ ತಂದೆಯತ್ತ ತಿರುಗಿ ನಿಂತು "ನೀನಾ ಮಗನ ಗುಣ ನಡತೆ ಸರಿ ಇಲ್ಲ ಎಂದು ಹೇಳಿ ದೂರು ತೆಗೆದುಕೊಂಡು ನನ್ನ ಹತ್ತಿರ ಬಂದದ್ದು..? ಅನುಸರಣೆ ಇಲ್ಲದ್ದು ಅವನಿಗಲ್ಲ ನಿನಗೆ. ಅವನ ಕುರಿತು ಆಕ್ಷೇಪಣೆ ಮಾಡುವ ಅಧಿಕಾರ ನಿನಗೇನಿದೆ..? ನಿನಗೆ ನಾಚಿಕೆ ಆಗುವುದಿಲ್ಲವೇ..? ಇಸ್ಲಾಮಿನ ಬಗ್ಗೆ ಒಂದಕ್ಷರ ಕೂಡ ಕಲಿಯದ ಆತ ನಿನಗೆ ಹೇಗೆ ಗೌರವ ಕೊಡಲು ಕಲಿಯುವುದು..? ಹೋಗು ಇಲ್ಲಿಂದ. ಮೊದಲಾಗಿ ಮಗನಿಗೆ ಏನಾದರು ಕಲಿಸಿ ಕೊಡು" ಎಂದು ಹೇಳಿ ಆತನನ್ನು ಅಲ್ಲಿಂದ ಓಡಿಸಿದರು.

ಸಂಗ್ರಹ ; ಇಮಾಮ್ ಬಿನ್ ಅಲ್ ಖಯ್ಯಿಮ್ ಅಲ್ ಜವ್‌ಝಿಯವರ ಬಿರ್ ಅಲ್ ವಾಲಿದಯಿನ್ ಎಂಬ ಗ್ರಂಥ.

ಲೇಖಕರು :ಯೂಸುಫ್ ನಬ್ ಹಾನಿ ಕುಕ್ಕಾಜೆ

NOOR-UL-FALAH ISLAMIC STORE 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್