ಉಮ್ಮುಲ್ ಖುರ್‌ಆನ್

ಸೂರಾಃ ಫಾತಿಹ

 ಸೂರಃ ಫಾತಿಹಾ ಹಿಜ್ರಾಕ್ಕೆ ಮೊದಲು ಮತ್ತು ಹಿಜ್ರಾಕ್ಕೆ ನಂತರ ಹೀಗೆ ಎರಡು ಬಾರಿ ಅವತೀರ್ಣಗೊಂಡಿದೆ ಎಂಬ ಅಭಿಪ್ರಾಯದಂತೆ, ಅದನ್ನು  "ಮಕ್ಕಿಯ್ಯ್" ಮತ್ತು "ಮದನಿಯ್ಯ್" ಎಂದು ಹೇಳಲಾಗುತ್ತದೆ. ಅದರ ಆಯತುಗಳ ಸಂಖ್ಯೆ ಏಳು, ಶಾಫಿಈ ಮದ್ಸ್ ಹಬ್ ಪ್ರಕಾರ ಬಿಸ್ಮಿ... ಫಾತಿಹಾದ ಒಂದು ಆಯತ್ ಆಗಿದ್ದು, ನಮಾಝಿನಲ್ಲಿ ಫಾತಿಹ ಓದುವಾಗ ಬಿಸ್ಮಿ ಓದುವುದು ಕಡ್ಡಾಯವಾಗಿದೆ. 

ಈ ಸೂರತ್‌ಗೆ ಹಲವು ನಾಮಗಳಿವೆ. ಅಧಿಕ ಹೆಸರುಗಳು ಅದರ ಶ್ರೇಷ್ಟತೆಯ ಹೆಚ್ಚಳವನ್ನು ಸೂಚಿಸುತ್ತದೆ... 

1.الفَاتِحَة (ಆರಂಭಿಸುವ ಅಧ್ಯಾಯ)

 ಖುರ್‌ಆನಿನ ಸೂರತ್‌ಗಳ ಪೈಕಿ ಪ್ರಾರಂಭದ ಸೂರತ್ ಮತ್ತು ನಮಾಝಿನ ಆರಂಭದಲ್ಲಿ ಓದಲ್ಪಡುವ ಸೂರತ್ ಎಂಬ ಅರ್ಥದಲ್ಲಿ ಫಾತಿಹ ಸೂರತ್ (ಆರಂಭಿಸುವ) ಎನ್ನಲಾಗುತ್ತದೆ..

2.اَلسَّبْعُ الْمَثَانِى(ಆವರ್ತಿಸಿ ಓದಲ್ಪಡುವ)

 ನಮಾಝಿನಲ್ಲಿ ಮತ್ತು ಹಲವು ಸಂದರ್ಭಗಳಲ್ಲಿ ಆವರ್ತಿಸಿ ಓದಲ್ಪಡುವ ಸೂರತ್ ಆಗಿರುವುದರಿಂದ ಹೀಗೆ ಹೆಸರಿಸಲಾಗಿದೆ...

3.اَلْقُرْآنُ الْعَظِيمْ(ಮಹತ್ತರವಾದ ಖುರ್‌ಆನ್)

 ಖರ್‌ಆನ್‌ನಲ್ಲಿರುವ ಸರ್ವಜ್ಞಾನಗಳೂ ಈ ಸೂರತ್‌ನಲ್ಲಿ ಅಡಕವಾಗಿರುವುದರಿಂದ ಈ ಹೆಸರು ಹೇಳಲಾಗುತ್ತದೆ...

 4.اَلشِّفَاءُ(ಉಪಶಮನ)

ಎಲ್ಲಾ ರೋಗಗಳಿಗೆ ಉಪಶಮನ ಲಭಿಸುವ ಸೂರತ್ ಎಂಬ ಕಾರಣಕ್ಕಾಗಿ ಇದಕ್ಕೆ ಈ ಹೆಸರು ಬಂದಿದೆ.

5.اَلدُّعَاءْ(ಹಿದಾಯತ್‌ಗಾಗಿ ಪ್ರಾರ್ಥನೆ)
اِهْدِنَا الصِّرَاطَ الْمُسْتَقِيمَ

 ಎಂಬ ಶ್ರೇಷ್ಠ ದುಆನ್ನೊಳಗೊಂಡ ಸೂರತ್ತಾಗಿರುವುದರಿಂದ ಈ ಹೆಸರು ಬಂದಿದೆ...

6.تَعْلِيمُ الْمَسْئَلَة(ಪ್ರಾರ್ಥಿಸುವ ರೀತಿ ಕಲಿಸುವ ಸೂರತ್)

 ಸಕಲ ಪರಿಪಾಲಕನಾದ ಅಲ್ಲಾಹನೊಂದಿಗೆ ಪ್ರಾರ್ಥಿಸುವ ರೀತಿಯನ್ನು ಕಲಿಸುವ ಸೂರತ್ ಇದಾಗಿರುವುದರಿಂದ ಇದಕ್ಕೆ ಈ ಹೆಸರು ಹೇಳಲಾಗುತ್ತದೆ.. ಅಲ್ಲಾಹನನ್ನು ಪ್ರಶಂಸಿಸಿದ ನಂತರ ಬೇಡುವುದಾಗಿದೆ ಕ್ರಮಬದ್ಧ ರೀತಿ. ಇದನ್ನು ಈ ಸೂರತಿನಲ್ಲಿ ಕಲಿಸಲಾಗಿದೆ...

 "ಸೂರಾ ಫಾತಿಯಾದ ಮಹತ್ವ"

ಅಬೂ ಸಈದ್ ಬಿನ್ ಮುಅಲ್ಲಾ ರ.ಅ ಹೇಳುತ್ತಾರೆ.. ನಾನು ಮಸೀದಿಯಲ್ಲಿ ನಮಾಝ್ ಮಾಡುತ್ತಿರುವಾಗ ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನನ್ನನ್ನು ಕರೆದರು. ಆಗ ನನಗೆ ಉತ್ತರ ಕೊಡಲಾಗಲಿಲ್ಲ. ನಂತರ ಹೋಗಿ ಹೇಳಿದೆ.. "ಯಾ ರಸೂಲಲ್ಲಾಹ್!!! ನಾನು ನಮಾಝ್ ಮಾಡುತ್ತಿದ್ದೆ.." ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕೇಳಿದರು...

اِسْتَجِيبُوا لِلِه وَلِرَّسُولِ اِذَا دُعَاكُمْ (الانفال-24)

 "ಅಲ್ಲಾಹು ಮತ್ತು ರಸೂಲ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕರೆದರೆ ನೀವು  ಉತ್ತರ ನೀಡಬೇಕು"(ಅನ್ ಫಾಲ್-24)ಎಂದು ಹೇಳಿದ್ದು ನೀನು ಅರಿತಿಲ್ಲವೇ..??

ನಂತರ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನನ್ನಲ್ಲಿ ಹೇಳಿದರು: "ನೀನು ಮಸೀದಿಯಿಂದ ಹೊರ ಹೋಗುವ ಮೊದಲು ಖುರ್‌ಆನ್ ನಲ್ಲಿರುವ ಸೂರಗಳಲ್ಲಿ ಅತೀ ಮಹತ್ತರವಾದ ಒಂದು ಸೂರತ್ತನ್ನು ನಿನಗೆ ನಾನು ಕಲಿಸಿಕೊಡುತ್ತೇನೆ.." ತದ ನಂತರ ನಾವು ಮಸೀದಿಯಿಂದ ಹೊರ ಹೋಗಲು ಉದ್ದೇಶಿಸಿದಾಗ ನಾನು ನೆನಪಿಸಿದೆ..
"ಯಾ ರಸೂಲುಲ್ಲಾಹ್!! ತಾವು ಹೇಳಿದ್ದೀರಲ್ಲ  ಅತೀ ಮಹತ್ತರವಾದ ಒಂದು ಸೂರತ್ತನ್ನು ಕಲಿಸಿಕೊಡುತ್ತೇನೆ*ಎಂದು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು..

ಅದು 
اَلْحَمْدُ لِلهِ رَبِّ الْعَالَمِينَ 

 ಅದಾಗಿದೆ 
اَلسَّبْعُ الْمَثَانِي

ಅದಾಗಿದೆ
اَلْقُرْآنُ الْعَظِيمْ

 ಅದಾಗಿದೆ(ಬುಖಾರಿ)

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ. ಅಲ್ಲಾಹು ಖುದ್ಸೀ ಹದೀಸಿನಲ್ಲಿ ಈ ರೀತಿ ಹೇಳುತ್ತಾನೆ:
"ನಮಾಝುನ್ನು ನನ್ನ ಮತ್ತು ನನ್ನ ದಾಸನ ಮಧ್ಯೆ ಎರಡು ಭಾಗವಾಗಿ ವಿಂಗಡಿಸಿದ್ದೇನೆ.." ಅದರರ್ಧ ಭಾಗ ನನಗಿರುವುದು ಮತ್ತು ಇನ್ನರ್ಧ ಭಾಗ ನನ್ನ ದಾಸನಿಗಿರುವುದು. ನನ್ನ ದಾಸ

اَلْحَمْدُ لِلهِ رَبِّ الْعَالَمِينْ

ಓದಿದರೆ ನನಗೆ ಅವನು ಸ್ತುತಿ ಅರ್ಪಿಸುವನು. ಹಾಗೆಯೇ

مَالِكِ يَوْمِ الدِّينْ

  ತನಕ ಓದುವಾಗ ನನ್ನನ್ನು ಅವನು ಪ್ರಶಂಶಿಸುವನು. ಇಷ್ಟು ನನಗೆ ಸಲ್ಲುವಂತದ್ದಾಗಿದೆ. ನಂತರದ ಭಾಗ ಅವನಿಗಿರುವುದು ನನ್ನ ದಾಸನಿಗಿದೆ ಅವನು ಕೇಳಿದ್ದು. (ಹದೀಸ್ ಖುದ್ಸೀ)

 ಯಜಮಾನನಾದ ಅಲ್ಲಾಹನೊಂದಿಗೆ ಅವನ ದಾಸರು ಸಂಭಾಷಣೆ ನಡೆಸಲಿಕ್ಕಾಗಿ ಅವತರಿಸಿದ ಒಂದು ಸೂರತ್ತಾಗಿದೆ
 ಫಾತಿಹ ಎಂದು ಮೇಲೆ ವಿವರಿಸಿದ ಹದೀಸಿನಿಂದ ವ್ಯಕ್ತವಾಗುತ್ತದೆ. ದಿನನಿತ್ಯ 17 ಬಾರಿ ಕಡ್ಡಾಯವಾಗಿಯೂ, ಇತರ ಸಂದರ್ಭಗಳಲ್ಲಿ ಐಚ್ಚಿಕವಾಗಿಯೂ ಅಲ್ಲಾಹನೊಂದಿಗೆ ಸಂಭಾಷಣೆ ನಡೆಸಲು ಅವಕಾಶ ಲಭಿಸಿರುವುದು ಅತೀ ದೊಡ್ಡ ಅನುಗ್ರಹವಾಗಿದೆ...

ಫಾತಿಹ ಸೂರತನ್ನು ಹೆಚ್ಚಾಗಿ ಓದುವುದನ್ನು ರೂಢಿಮಾಡಿಕೊಂಡರೆ, ಪ್ರತ್ಯೇಕವಾಗಿ ಇಶಾ ನಮಾಝಿನ ಬಳಿಕ - ದಾರಿದ್ರ್ಯದಿಂದ ಮುಕ್ತವಾಗಿ ಐಶ್ವರ್ಯ ಉಂಟಾಗುವುದು, ಸಾಲ ಪೂರೈಸಲು ಸುಲಭ ಸಾಧ್ಯವಾಗುವುದು, ರೋಗ ಶಮನ ಉಂಟಾಗುವುದು.
(ತುಹ್ಫತುಲ್ ವಾಇಲೀನ್)

 ರೋಮನ್ ಚಕ್ರವರ್ತಿ ಒಂದು ದಿನ ಉಮರ್ ರ.ಅ ರವರಿಗೆ ಒಂದು ಕಾಗದ ಬರೆದರು. ಆದರಲ್ಲಿ ಹೀಗೆ ಬರೆಯಲಾಗಿತ್ತು.

(ثاء- جيم- خاء- زاء- شين- ظاء- فاء)

ಹೀಗೆ ಏಳು ಅಕ್ಷರಗಳಿಲ್ಲದ ಒಂದು ಸೂರವನ್ನು ಓದಿದವರಿಗೆ ಸ್ವರ್ಗವಿದೆ ಎಂದು ನಾನು "ಇನ್‌ಜೀಲ್" ನಲ್ಲಿ ನೋಡಿದ್ದೇನೆ. ಆದರೆ ಆ ಸೂರತ್ ಇನ್‌ಜೀಲ್ ನಲ್ಲಿ ಕಾಣಸಿಗುವುದಿಲ್ಲ. ಆದುದರಿಂದ ನಿಮ್ಮ ಪವಿತ್ರ ಗ್ರಂಥವಾದ ಖುರ್‌ಆನಿನಲ್ಲಿ ಅಂತಹ ಸೂರತ್ ಇದೆಯಾ ಎಂದು ತಿಳಿಸಬೇಕು...

ಉಮರ್ ರ.ಅ ಈ ಕಾಗದವನ್ನು ಓದಿ ಸ್ವಹಾಬಿಗಳಿಗೆ ತಿಳಿಸಿದರು. ಆಗ ಉಬಯ್ಯು ಬಿನ್ ಕಅಬ್ ರ.ಅ ಹೇಳಿದರು; "ಅದುವೇ ಸೂರಾ ಫಾತಿಹಾ!!! ಅದರಲ್ಲಿ ಈ ಏಳು ಅಕ್ಷರಗಳಿಲ್ಲ." ಉಮರ್ ಕೂಡಲೇ ರಾಜರಿಗೆ ಈ ವಿಚಾರವಾಗಿ ಕಾಗದ ಬರೆದರು. ಕಾಗದವನ್ನು ನೋಡಿದ ಅರಸ ಖುರ್‌ಆನ್ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ವಿಶ್ವಾಸವಿರಿಸಿ ಮುಸ್ಲಿಮರಾದರು. (ತುಹ್ಫತುಲ್ ವಾಇಲೀನ್)

أَعُوذُ باِللهِ مِنَ الشَّيْطَانِ الرَّجِيمْ

 (ಅಲ್ಲಾಹನ ರಹ್ಮತಿನಿಂದ ಹೊರದೂಡಲ್ಪಟ್ಟ ಶೈತಾನ್‌ (ಇಬ್ಲೀಸ್) ನ ಕೆಡುಕಿನಿಂದ ನಾನು ಅಲ್ಲಾಹನೊಡನೆ ಕಾವಲು ಬೇಡುತ್ತೇನೆ)

 ಇಬ್ಲೀಸ್ (ಶೈತಾನ್)ಆದಂ ಸಂತತಿಗಳ ಜನ್ಮ ಶತ್ರುವಾಗಿರುವನು. ಅವರು ಒಳಿತಿನೆಡೆಗೆ ಸಾಗುವುದು ಅವನಿಗೆ ತೀರಾ ಇಷ್ಟವಾಗುವುದಿಲ್ಲ. ಆದ್ದರಿಂದ ಅವರು ಸಾಗುವ ಎಲ್ಲಾ ಸರಿ ದಾರಿಗೆ ಅಡ್ಡ ಬಂದು ಅವರನ್ನು ವಕ್ರದಾರಿಯತ್ತ ಕೊಂಡೊಯ್ಯಲು ಶತ ಪ್ರಯತ್ನ ನಡೆಸುವನು. ಆದುದರಿಂದ ಅವನ ಉಪದ್ರ ಮತ್ತು ದುಷ್ಪ್ರೇರಣೆಯಿಂದ ಕಾವಲು ಬೇಡುತ್ತಾ ಇರುವುದು ಓರ್ವ ಸತ್ಯವಿಶ್ವಾಸಿಗೆ ಅವಶ್ಯವಾಗಿದೆ...

ಕಾವಲು ಬೇಡಲು ಆಜ್ಞೆ ಮಾಡಿರುವ ಕೆಲವು ಪ್ರತ್ಯೇಕ ಸಂದರ್ಭಗಳು

 1.ಖುರ್‌ಆನ್ ಓದಲು ಉದ್ದೇಶಿಸುವಾಗ ..
ಅಲ್ಲಾಹನು ಹೇಳುತ್ತಾನೆ..

فَإِذَا قَرَأْتَ الْقُرْآنَ فَاسْتَعٍذْ بٍاللهِ مِنَ الشَّيْطَانِ الرَّجِيمْ (النحل-98)

(ನೀನು ಖುರ್‌ಆನ್ ಓದಲು ಉದ್ದೇಶಿಸಿದಾಗ)

أَعُوذُ بِاللهِ مِنَ الشَّيْطَانِ الرَّجِيمْ

ಎಂದು ಹೇಳುವ ಮೂಲಕ  ಅಲ್ಲಾಹನ ರಹ್ಮತಿನಿಂದ ಹೊರದೂಡಲ್ಪಟ್ಟ ಶೈತಾನನ ಉಪಟಳದಿಂದ ಕಾವಲು ಬೇಡು. (ಸೂರಾ:ಅನ್ನಹ್ಲ್-98)

 2.ನಮಾಝಿಗೆ ನಿಲ್ಲುವಾಗ:

رَبِّ أَعُوذُ بِكَ مِنْ هَمَزَاتِ الشَّيَاطِينِ وَاَعُوذُ بِكَ رَبِّ اَنْ يَحْضُرُونِ.

  (ನನ್ನ ಪ್ರಭು!!! ಶೈತಾನ್‌ಗಳ ವಸ್‌ವಾಸ್ (ದುಶ್ಚಿಂತೆ) ನಿಂದ ನಿನ್ನಲ್ಲಿ ನಾನು ಕಾವಲು ಬೇಡುತ್ತೇನೆ. ಹಾಗೂ ಅವರು ನನ್ನ ಹತ್ತಿರ ಬರುವುದರಿಂದ ನಿನ್ನಲ್ಲಿ ನಾನು ಕಾವಲು ಬೇಡುತ್ತೇನೆ. (ಅಲ್ ಮುಆಮೀನೂನ್- 97)

3.ಮಗು ಜನಿಸಿದಾಗ

وَاِنِّي اُعِيذُهَا بِكَ وَذُرِّيَّتَهَا مِنَ الشَّيْطَانِ الرَّجِيمْ..(ال عمران)

 (ಈ ಮಗುವಿಗೆ ಮತ್ತು ಇದರಲ್ಲಿ ಜನಿಸುವ ಸಂತಾನಗಳಿಗೆ ರಜೀಂ ಆದ ಶೈತಾನನ ಉಪದ್ರದಿಂದ ನಿನ್ನೊಂದಿಗೆ ನಾನು ಕಾವಲು ಬೇಡುತ್ತೇನೆ)

ಇದು ಹನ್ನತ್ ತಾನು ಜನ್ಮವಿತ್ತ ಮಗು ಮರ್ಯಮರಿಗೂ ಮತ್ತು ಮರ್ಯಂನಿಗೆ ಜನಿಸುವ ಸಂತಾನಕ್ಕೂ ಪ್ರಾರ್ಥಿಸಿದ ದುಆ..

ಹುಟ್ಟಿದ ಮಗುವಿನ ಕಿವಿಗೆ ಬಾಂಗ್-ಇಖಾಮತ್ ಕೊಡುವುದು ಮತ್ತು ಈ ದುಆ ವನ್ನು ಓದಿ ಊದುವುದು ಸುನ್ನತ್ತಾಗಿದೆ.

4.ಕೋಪ ಬಂದಾಗ

ಒಂದು ದಿನ ಇಬ್ಬರು ಪರಸ್ಪರ ಬೈಯುತ್ತಿದ್ದರು.. ಅವರಲ್ಲಿ ಒಬ್ಬನ ಮುಖ ತೀವ್ರ ಕೋಪದಿಂದ ಕೆಂಪಾಗಿದ್ದು, ಕುತ್ತಿಗೆಯ ನರಗಳು ದಪ್ಪವಾಗಿತ್ತು. ಆಗ ಅಲ್ಲಿಗಾಗಮಿಸಿದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು..
"ಒಂದು ಶ್ರೇಷ್ಠ ವಾಕ್ಯ ನಾನು ತಿಳಿದಿರುತ್ತೇನೆ.. ಅದನ್ನು ಅವನು ಹೇಳುವುದಾದರೆ ಅವನ ಕೋಪ ತಣಿಯುವುದು.." ಅದು

أَعُوذُ بِاللهِ مِنَ الشَّيْطَانِ الرَّجِيمْ

5.ಶೌಚಾಲಯಕ್ಕೆ ಪ್ರವೇಶಿಸುವಾಗ

بِسْمِ اللهِ اَلَّلهُمَّ اِنِّي اَعُوذُ بِكَ مِنَ الْخُبُثِ وَالْخَبَائِثِ

 (ಅಲ್ಲಾಹನ ನಾಮದಿಂದ، ಅಲ್ಲಾಹುವೇ!! ಗಂಡು ಮತ್ತು ಹೆಣ್ಣು ಪಿಶಾಚಿಗಳ ಕೆಡುಕಿನಿಂದ ನಾನು ಕಾವಲು ಬೇಡುತ್ತೇನೆ.

6.ಇತರ ಸಂದರ್ಭಗಳಲ್ಲಿ

 ಶೈತಾನನ ದುಷ್ಪ್ರೇರಣೆ ಉಂಟಾಗುವ ಇತರ ಸಮಯಗಳಲ್ಲೂ

أَعُوذُ بِاللهِ مِنَ الشَّيْطَانِ الرَّجِيمْ

ಎಂದು ಹೇಳುವ ಮೂಲಕ ಕಾವಲು ಬೇಡಲು ಕಲಿಸಲಾಗಿದೆ..

"ಪ್ರತ್ಯೇಕ ಸಂದರ್ಭಗಳಲ್ಲಿ ಕಾವಲು ಬೇಡುವ ದುಆಗಳು"

 1.ಓರ್ವ ವ್ಯಕ್ತಿ ನಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಸನ್ನಿಧಾನಕ್ಕೆ ಬಂದು ಯಾ ರಸೂಲುಲ್ಲಾಹ್!! ನನಗ ರಾತ್ರಿ ಚೇಳು ಕಚ್ಚಿರುತ್ತದೆ ಎಂದು ಹೇಳಿದರು. ಆಗ ನಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು..

أَعُوذُ بِكَلِمَاتِ اللهِ التَّامَاتِ مِنْ شَرِّ مَا خَلَقْ..

 (ಅಲ್ಲಾಹನ ಸಂಪೂರ್ಣವಾದ ವಚನಗಳ (ಖುರ್‌ಆನಿನ) ಮೂಲಕ ಅವನು ಸೃಷ್ಟಿಸಿದ ಸಕಲ ವಸ್ತುಗಳ ಕೆಡುಕಿನಿಂದ ನಾನು ಕಾವಲು ಬೇಡುತ್ತೇನೆ) ಎಂದು ನೀನು ಸಾಯಂಕಾಲ ಹೇಳಿದ್ದರೆ ನಿನ್ನನ್ನು ಅದು ಉಪದ್ರವಿಸುತ್ತಿರಲಿಲ್ಲ. (ಮುಸ್ಲಿಂ)

 2. ಅಬೂಬಕರ್ ಸಿದ್ದೀಖ್ ರ.ಅ ಹೇಳಿದರು; ಯಾ ರಸೂಲಲ್ಲಾಹ್!! ಬೆಳಿಗ್ಗೆ ಮತ್ತು ಸಾಯಂಕಾಲ ರೂಢಿಮಾಡಿಕೊಳ್ಳಲು ಕೆಲವು ಶ್ರೇಷ್ಠ ವಾಕ್ಯಗಳನ್ನು ಹೇಳಿಕೊಡಿರಿ. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;

اَللَّهُمَّ فَاطِرَ السَّمَوَاتِ وَالْاَرْضِ عَالِمَ الْغَيْبِ وَالشَّهَادَةِ رَبِّ كُلِّ شَيْءٍ وَمَلِيكَهُ اَشْهَدُ اَنَّ لَا اِلَهَ اّلاَّ اَنْتَ اَعُوذُ بِكَ مِنْ شَرَّ نَفْسِي وَشَرِّ الشَّيْطَانِ وَشِرْكِهِ..

(ಆಕಾಶ-ಭೂಮಿಗಳನ್ನು ಸೃಷ್ಟಿಸಿದವನೂ ಅದೃಶ್ಯ ಮತ್ತು ದೃಶ್ಯಗಳನ್ನು ಅರಿಯುವವನೂ, ಸಕಲ ವಸ್ತುಗಳ ಒಡೆಯನೂ ರಾಜನೂ ಆದ ಅಲ್ಲಾಹುವೇ!!! ನೀನಲ್ಲದೆ ಆರಾಧ್ಯನಿಲ್ಲ ಎಂದು ದೃಢ ಸಂಕಲ್ಪ ಮಾಡುತ್ತೇನೆ. ನನ್ನ ಶರೀರದ ಕೆಡುಕಿನಿಂದ ಹಾಗೂ ಶೈತಾನನ ಉಪದ್ರದಿಂದ ಮತ್ತು ಅವನು ಶಿರ್ಕಿಗೆ ಪ್ರೇರೇಪಿಸುವುದರಿಂದ ನಿನ್ನಲ್ಲಿ ನಾನು ಕಾವಲು ಬೇಡುತ್ತೇನೆ..)

 ಇದನ್ನು ನೀವು ಬೆಳಿಗ್ಗೆ ಮತ್ತು ಸಾಯಂಕಾಲ ಹಾಗೂ ನಿದ್ರಿಸುವಾಗ ಹೇಳಿರಿ (ಅಬೂ ದಾವೂದ್, ತುರ್ಮುದ್ದಿ)

3. ಅಬ್ದುಲ್ಲಾಹಿ ಬಿನ್ ಖುಬೈಬ್ ರ.ಅ ಹೇಳುತ್ತಾರೆ; ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನನ್ನಲ್ಲಿ ಹೇಳಿದರು; "ನೀನು ಬೆಳಿಗ್ಗೆ ಮತ್ತು ಸಾಯಂಕಾಲ

قُلْ هُوَ اللهُ أَحَدْ، قُلْ أَعُوذُ بِرَبِّ الْفَلَقْ، قُلْ أَعُوذُ بِرَبِّ النَّاسْ 

ತಲಾ ಮೂರು ಬಾರಿಯಂತೆ ಓದು. ಆಗ ಎಲ್ಲಾ ವಸ್ತುಗಳ ತೊಂದರೆಗಳಿಗೆ ಕಾವಲಾಗಿ ಅವುಗಳು ನಿನಗೆ ಸಾಕಾಗುವುದು.. (ಅಬೂದಾವೂದ್ , ತುರ್ಮುದ್ದಿ)

 4. ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; ಎಲ್ಲಾ ದಿನಗಳ ಬೆಳಿಗ್ಗೆ ಮತ್ತು ಸಾಯಂಕಾಲ

بِسْمِ اللهِ الَّذِي لَا يَضُرُّ مَعَ اسْمِهِ شَيْءٌ فِي الْأَرْضِ وَلاَ فِي السَّمَاءِ وَهُوَ السَّمِيعُ الْعَلِيمْ

(ಭೂಮಿ ಆಕಾಶಗಳಲ್ಲಿರುವ ಯಾವುದೇ ವಸ್ತು ಅವನ ಪವಿತ್ರ ನಾಮವಿರುವಾಗ ತೊಂದರೆ ನೀಡದು. ಅಂತಹ ಅಲ್ಲಾಹನ ನಾಮದಿಂದ.. ಅವನು ಎಲ್ಲ ಕೇಳುವವನು ಮತ್ತು ಅರಿಯುವವನಾಗಿದ್ದಾನೆ) ಎಂದು ಮೂರು ಬಾರಿ ಯಾರಾದರೂ ಹೇಳಿದರೆ ಅವನನ್ನು ಯಾವುದೇ ವಸ್ತು ಉಪದ್ರವಿಸದು. (ಅಬೂದಾವೂದ್, ತುರ್ಮುದ್ದಿ)

بِسْمِ اللهِ الرَّحْمَنِ الرَّحِيمْ

(ರಹ್ಮಾನ್-ರಹೀಂ ಆದ ಅಲ್ಲಾಹ ನಾಮದಿಂದ ನಾನು ಪ್ರಾರಂಭಿಸುತ್ತೇನೆ) ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಪ್ರಪ್ರಥಮವಾಗಿ ಲಭಿಸಿದ ದಿವ್ಯ ಸಂದೇಶ.

أِقْرَأْ بِسْمِ رَبِّكَ

(ನಿನ್ನ ಪರಿಪಾಲಕನಾದ ಅಲ್ಲಾಹನ ನಾಮದಿಂದ ಓದು) ಎಂದಾಗಿತ್ತು. ಪವಿತ್ರ ಖುರ್‌ಆನಿನ ಪ್ರಥಮ ಸೂರತಿನ ಪ್ರಪ್ರಥಮ ಆಯಸ್ ಕೂಡಾ

بِسْمِ اللهِ الرَّحْمَنِ الرَّحِيمْ

  ಎಂದಾಗಿದೆ. ಇದರಿಂದ ತಿಳಿಯುವುದೇನೆಂದರೆ ಸತ್ಯವಿಶ್ವಾಸಿಯ ಪ್ರತಿಯೊಂದು ಶುಭ ಕಾರ್ಯ ಬಿಸ್ಮಿಯಿಂದ ಪ್ರಾರಂಭಿಸಬೇಕೆಂಬುವುದಾಗಿದ.
ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ;

كُلُّ اَمْرٍ ذِي بَالٍ لَا يُبْدَأُ فِيهِ بِسْمِ اللهِ فَهُوَ اَبْتَرُ

ಬಿಸ್ಮಿಯಿಂದ ಪ್ರಾರಂಭಿಸದ ಎಲ್ಲಾ ಶುಭ ಕಾರ್ಯಗಳು ಬರಕತ್ ಇಲ್ಲದ್ದಾಗಿದೆ.  ಬಿಸ್ಮಿಲ್ಲಾಹಿ... ಹೇಳದೆ ಆಹಾರ ಸೇವಿಸಿದರೆ, ಮತ್ತು ಸಂಭೋಗ ನಡೆಸಿದರೆ ಅದರಲ್ಲಿ ಶೈತಾನ್ ಪಾಲ್ಗೊಳ್ಳುವನೆಂದು ಹದೀಸಿನಲ್ಲಿದೆ. ಅಂತಹ ಸಂದರ್ಭದಲ್ಲಿ ಸೇವಿಸಿದ ಆಹಾರದಲ್ಲಿ ಮತ್ತು ಸಂಭೋಗದಲ್ಲಿ ಬರಕತ್ ಅಭಿಸುವುದಿಲ್ಲ. ಮಾತ್ರವಲ್ಲ, ಆ ಸಂಭೋಗದಲ್ಲಿ ಜನಿಸುವ ಮಕ್ಕಳಲ್ಲಿ ತೊಂದರೆ ಕಾಣಬಹುದು...

ಬಿಸ್ಮಿಯ ಮಹತ್ವ

 1.ನೂಹ್ ಅಲೈಹಿಸ್ಸಲಾಂರವರ ಕಾಲದಲ್ಲಿ ಜಲಪ್ರಳಯ ಉಂಟಾಗಿದ್ದು, ಸತ್ಯ ವಿಶ್ವಾಸಿಗಳನ್ನು ರಕ್ಷಿಸಲಿಕ್ಕಾಗಿ ಹಡಗು ನಿರ್ಮಿಸಲು ಅಲ್ಲಾಹನು ಆಜ್ಞೆ ಹೊರಡಿಸಿದನು. ನಿರ್ಮಾಣಗೊಂಡ ಹಡಗು ಸತ್ಯವಿಶ್ವಾಸಿಗಳನ್ನು ಹೊತ್ತು ನೀರಿನ ಮೇಲೆ ಚಲಿಸುತ್ತಿತ್ತು. ಅದರ ಸಂಪೂರ್ಣ ನಿಯಂತ್ರಣ ಬಿಸ್ಮಿಯಿಂದಾಗಿತ್ತು. ಆ ಬಗ್ಗೆ ಖುರ್‌ಆನ್ ಈ ರೀತಿ ಹೇಳುತ್ತದೆ;

بِسْمِ الله مَجْريهاَ وَمُرْسَيهَا (هُودْ-41)

 "ಅದು ಚಲಿಸುವುದು ಮತ್ತು ನಿಲ್ಲುವುದು ಬಿಸ್ಮಿಲ್ಲಾಹಿ ಹೇಳುವ ಮೂಲಕವಾಗಿದೆ."( ಸೂರ:ಹೂದ್-41)

 ನೂಹ್ ನಬಿ ಅಲೈಹಿಸ್ಸಲಾಂ  "ಬಿಸ್ಮಿಲ್ಲಾಹಿ" ಹೇಳಿದ ಕಾರಣದಿಂದಾಗಿ ಹಡಗಿನಲ್ಲಿ ಇವರಿಗೆ ದೊಡ್ಡ ಅಪಾಯದಿಂದ ರಕ್ಷಣೆ ಲಭಿಸಿರುವಾಗ ಜೀವನ ಪೂರ್ತಿ ಬಿಸ್ಮಿ.... ಹೇಳುತ್ತಾ ಇರುವವರಿಗೆ ಆಪತ್ತುಗಳಿಂದ ರಕ್ಷಣೆ ಲಭಿಸದಿರುವುದೇ..?

 2.ಯಮನ್ ರಾಜ್ಯದಲ್ಲಿದ್ದ ಸಬಅ ಕುಟುಂಬದ ಬಲ್ಕೀಸ್ ರಾಣಿ ಸೂರ್ಯ ಪೂಜಕರಾಗಿದ್ದರು. ಈ ವಿಚಾರ ಹುದ್ ಹುದ್ ಪಕ್ಷಿಯ ಮುಖಾಂತರ ಸುಲೈಮಾನ್ ಅಲೈಹಿಸ್ಸಲಾಮರಿಗೆ ಅರಿವಾಯಿತು. ಆಗ ಸುಲೈಮಾನ್ ನಬಿ ಅಲೈಹಿಸ್ಸಲಾಮರು ರಾಣಿಗೆ ಒಂದು ಕಾಗದ ಬರೆದರು. ಅದರಲ್ಲಿ...

اِنَّهُ مِنْ سُلَيْمَانَ وَاِنَّهُ بِسْمِ اللهِ الرَّحْمَنِ الرّّحِيمْ (سُورَةُ النَّمْلْ)

ಎಂದಿತ್ತು...

ಸುಲೈಮಾನ್ ನಬಿ ಅಲೈಹಿಸ್ಸಲಾಮರ ಕಾಗದವನ್ನು ಓದಿದ ರಾಣಿಯ ಮನಸ್ಸು ಬಿಸ್ಮಿಯ ಬರಕತಿನಿಂದ ಕರಗಿ ಅವರು ಪರಿವರ್ತನೆಗೊಂಡರು. ಕೂಡಲೇ ಸಭೆ ಕರೆದು ಸುಲೈಮಾನ್ ನಬಿ ಅಲೈಹಿಸ್ಸಲಾಮರ ಸನ್ನಿಧಾನಕ್ಕೆ ತನ್ನ ಪರಿವಾರದೊಂದಿಗೆ ಮುಸ್ಲಿಮರಾಗೆ ಬರಲು ಅವರು ತೀರ್ಮಾನ ಕೈಗೊಂಡರು. ಇದನ್ನು ಸೂರಾ ಅನ್ನಮ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

3.ಖಾಲಿದ್ ಬಿನ್ ವಲೀದ್ ರ.ಅ ವರಲ್ಲಿ ಇಸ್ಲಾಮಿನ ಬಗ್ಗೆ ಪುರಾವೆ ಕೇಳಿದಾಗ..

بِسْمِ اللهِ الرَّحْمَنِ الرَّحَيمْ
 
ಎಂದು ಹೇಳಿ ವಿಷ ಬೆರೆಸಿದ ಪಾನೀಯ ಕುಡಿದು ತೋರಿಸಿದರು. ಬಿಸ್ಮಿಯ ಬರ್ಕತ್ತಿನಿಂದ ಯಾವುದೇ ಅಪಾಯವಿಲ್ಲದೆ ಪಾರಾದರು. ಪುರಾವೆ ಕೇಳಿದ ವ್ಯಕ್ತಿ ಇದನ್ನು ಕಂಡು ದಿಗ್ರ್ಬಾಂತರಾದರು...(ಇಮಾಂ ರಾಝಿ) 

 4.ಖೈಸರ್ ರಾಜರಿಗೆ ನಿತ್ಯ ತಲೆನೋವು ಉಂಟಾದ ಸಂದರ್ಭ ಅದರ ಶಮನಕ್ಕಾಗಿ ಖಲೀಫ ಉಮರ್  ರ.ಅ ರಿಗೆ ಕಾಗದ ಬರೆದರು. ಉಮರ್ ರ.ಅ ರವರು ರಾಜರಿಗೆ ಒಂದು ಟೊಪ್ಪಿ ಕಳುಹಿಸಿಕೊಟ್ಟರು. ರಾಜ ಅದನ್ನು ಧರಿಸುವಾಗ ತಲೆನೋವು ವಾಸಿಯಾಗುತ್ತಿತ್ತು. ತೆಗೆದಿಟ್ಟಾಗ ಪುನಃ ತಲೆನೋವು ಬರುತ್ತಿತ್ತು. ರಹಸ್ಯ ತಿಳಿಯಲೇ ಬೇಕೆಂಬ ಹಂಬಲದಿಂದ ರಾಜರು ಒಂದು ದಿನ ಆ ಟೊಪ್ಪಿಯನ್ನು ಬಿಚ್ಚಿ ನೋಡಿದರು. ಅದರಲ್ಲಿ..

بِسْمِ اللهِ الرّّحْمَنِ الرَّحَيمْ

 ಬರೆದಿದ್ದ ಒಂದು ಕಾಗದ ಇತ್ತು. ರಾಜರಿಗೆ ರಹಸ್ಯ ಮನವರಿಕೆಯಾಯಿತು. ಟೊಪ್ಪಿಯಲ್ಲಿರುವ

بِسْمِ اللهِ الرَّحْمَنِ الرَّحِيمْ

  ರಾಜರಿಗೆ ಇಷ್ಟೊಂದು ಪರಿಣಾಮ ಬೀರಿದ್ದರೆ, ದಿನನಿತ್ಯ ಬಿಸ್ಮಿಲ್ಲಾಹಿ.... ರೂಢಿ ಮಾಡಿ ಕೊಂಡವರಿಗೆ ಅದರ ಬರ್ಕತ್ ಲಭಿಸದಿರುವುದೇ..?(ಇಮಾಂ ರಾಝಿ)

 5. ಒಂದು ದಿನ ಈಸಾ ಅಲೈಹಿಸ್ಸಲಾಂ ರವರು ಖಬರ್‌ ಸ್ತಾನವಾಗಿ ಯಾತ್ರೆ ಹೋಗುತ್ತಿದ್ದರು. ಆಗ ಅಲ್ಲಿರುವ ಒಂದು ಖಬರಿನೊಳಗೆ ಓರ್ವ ವ್ಯಕ್ತಿ ಶಿಕ್ಷಿಸಲ್ಪಡುತ್ತಿರುವುದು ಅರಿವಾಯಿತು. ಬೇಸರದಿಂದ ಅವರು ಯಾತ್ರೆ ಮುಂದುವರಿಸಿದರು. ವರ್ಷಗಳು ಕಳೆದು ಮತ್ತೊಂದು ದಿನ ಈಸಾ ಅಲೈಹಿಸ್ಸಲಾಂ ಅದೇ ದಾರಿಯಾಗಿ ಬರುವಾಗ ಮೊದಲಿನ ಆ ವ್ಯಕ್ತಿಗೆ ಶಿಕ್ಷೆ ಇರಲಿಲ್ಲ. ಹೀಗೆ ಉಂಟಾಗಲು ಕಾರಣವೇನೆಂದು ತಿಳಿಯಲು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ ಅವರಿಗೆ ದಿವ್ಯ ಸಂದೇಶ ಬಂತು. "ಈಸಾ ರವರೇ!!! ಆ ವ್ಯಕ್ತಿ ಮರಣ ಹೊಂದುವಾಗ ಅವನ ಪತ್ನಿ ಗರ್ಭಿಣಿಯಾಗಿದ್ದಳು. ಮತ್ತೆ ಅವಳು ಪ್ರಸವಿಸಿದ ಮಗು ಬೆಳೆದಾಗ ಆ ಮಗುವನ್ನು ಓರ್ವ ಮುಅಲ್ಲಿಮರ ಬಳಿ ಕಳುಹಿಸಿಕೊಟ್ಟಳು. ಅವರು

بِسْمِ اللهِ الرَّحْمَنِ الرَّحِيمْ 

 ಕಲಿಸಿಕೊಟ್ಟರು. ಭೂಮಿಯ ಮೇಲೆ ಆ ಮಗು ನನ್ನ ಹೆಸರು ಹೇಳುತ್ತಿರುವಾಗ ಭೂಮಿಯ ಅಡಿಯಲ್ಲಿ ಅವನ ತಂದೆಯನ್ನು ಶಿಕ್ಷಿಸುವುದು ನನಗೆ ಇಷ್ಟವಾಗಲಿಲ್ಲ. (ಇಮಾಂ ರಾಝಿ)

ಮಕ್ಕಳು ಓದಿದ ಬಿಸ್ಮಿಯಿಂದ ಹೆತ್ತವರಿಗೆ ಶಿಕ್ಷೆ ದೂರವಾಗುವುದಾದರೆ ಜೀವನ ಪೂರ್ತಿ

بِسْمِ اللهِ الرَّحْمَنِ الرَّحِيمْ

ಹೇಳುತ್ತಿರುವವರು ಶಿಕ್ಷೆಯಿಂದ ಪಾರಾಗದಿರುವರೇ.. ಅಲ್ಲಾಹು ನಮ್ಮನ್ನು ಮತ್ತು ಬಂಧು ಮಿತ್ರರನ್ನು ಅವನ ಶಿಕ್ಷೆಯಿಂದ ಪಾರು ಮಾಡಲಿ.. ಆಮೀನ್

"ಸತ್ಯ ವಿಶ್ವಾಸಿಗಳಿಗೆ ಹೆಚ್ಚು ಪ್ರೀತಿ ಅಲ್ಲಾಹನಲ್ಲಿ.."

ಅಲ್ಲಾಹು ಹೇಳುತ್ತಾನೆ..

وَالَّذِينَ آمَنُوا اَشَدُّ حُباَّ لله

ಸತ್ಯವಿಶ್ವಾಸಿಗಳೆಂದರೆ ಅಲ್ಲಾಹನಲ್ಲಿ ಹೆಚ್ಚು ಪ್ರೀತಿ ಇರುವವರಾಗಿದ್ದಾರೆ.. (ಸೂರ-ಅಲ್ ಬಖರ-165)

ಯಾವುದೇ ಒಂದು ವಸ್ತುವನ್ನು ಪ್ರೀತಿಸುವವರು ಆ ವಸ್ತುವಿನ ಬಗ್ಗೆ ಹೆಚ್ಚಾಗಿ ನೆನಪಿಸುತ್ತಿರುತ್ತಾರೆ.. ಆದುದರಿಂದ ಅಲ್ಲಾಹನನ್ನು ಪ್ರೀತಿಸುತ್ತಿರುವವರು ಅಲ್ಲಾಹನ ಬಗ್ಗೆ ಹೆಚ್ಚಾಗಿ ಹೇಳುತ್ತಾ ಇರುವರು.. ಈ ವಿಷಯದಲ್ಲಿ ಒಂದನೇ ಸ್ಥಾನ ಅಂಬಿಯಾಗಳಿಗೆ, ಎರಡನೇ ಸ್ಥಾನ ಔಲಿಯಾಗಳಿಗೆ, ಅವರ ಪ್ರತೀ ಚಲನವಲನಗಳು ಅಲ್ಲಾಹನ ದ್ಸಿಕ್ರ್ ನಿಂದಾಗಿರುತ್ತದೆ.. ಅಂಬಿಯಾ ಔಲಿಯಾಗಳನ್ನು ಅನುಸರಿಸುವ ಸತ್ಯ ವಿಶ್ವಾಸಿಗಳ ಪ್ರತಿ ಚಲನವಲನಗಳು ಕೂಡ ದ್ಸಿಕ್ರ್ ನಿಂದಾಗಿರುವುದು ಅಗತ್ಯ..

ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಸ್ವಹಾಬಿಯೋರ್ವರು ನಿತ್ಯ ರೂಢಿ ಮಾಡಿಕೊಳ್ಳುವ ಕಾರ್ಯದ ಬಗ್ಗೆ ಉಪದೇಶ ಕೇಳಿದಾಗ, ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಈ ರೀತಿ ಹೇಳಿದರು...

لاَ يَزَالُ لِسَانُكَ رَطْبًا مِنْ ذِكْرِ اللهِ

(ಯಾವಾಗಲೂ ನಿನ್ನ ನಾಲಗೆ ಅಲ್ಲಾಹನ ದ್ಸಿಕ್ರ್ ನಿಂದ ಒದ್ದೆಯಾಗಿರಲಿ)

ಎಲ್ಲವೂ ಲಭಿಸುವ ಈ ಯುಗದಲ್ಲಿ ಮನಶ್ಯಾಂತಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.. ಆದರೆ ಅದಕ್ಕಿರುವ ಪರಿಹಾರ ಅಲ್ಲಾಹನ ದ್ಸಿಕ್ರ್ ಮಾತ್ರವಾಗಿದೆ..
ಅಲ್ಲಾಹು ಹೇಳುತ್ತಾನೆ;

اَلَا بِذِكْرِ اللهِ تَطْمَئِنُّ الْقُلُوبُ..(الرَّعْدْ - 28)

 (ಅರಿಯಿರಿ !! ಅಲ್ಲಾಹನ ದ್ಸಿಕ್ರ್ ನಿಂದ ಮಾತ್ರ ಮನಸ್ಸುಗಳಿಗೆ ಸಮಾಧಾನ ಲಭಿಸುವುದು)

اَلْحَمْدُ لِلهِ رَبِّ الْعَالَمِينَ..

 (ಸರ್ವಲೋಕ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ)

 حَمْدْ ಎಂದರೆ ಸ್ತುತಿಸುವುದು ಎಂದರ್ಥ. ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ. حَمْدْ ಅರ್ಹ ವ್ಯಕ್ತಿಯಲ್ಲದವರನ್ನು ಬರೀ ಮುಖ ಸ್ತುತಿ ಮಾಡುವುದು حَمْدْ ಆಗುವುದಿಲ್ಲ. ಅಲ್ಲಾಹು ಎಲ್ಲಾ ಅರ್ಥದಲ್ಲೂ ಸ್ತುತಿಗೆ ಅರ್ಹ ನಾಗಿದ್ದರಿಂದ ಅವನನ್ನ    حَمْدْ ಸ್ತುತಿಸುವುದು ಯಾಥಾರ್ಥ ಆಗಿರುತ್ತದೆ.

حَمْدْ ನಾಲ್ಕು ವಿಧ.
1.ಅಲ್ಲಾಹನನ್ನೇ ಅಲ್ಲಾಹು ಸ್ತುತಿಸುವುದು.
2. ಅಲ್ಲಾಹು ಅವನ ಸಜ್ಜನರಾದ ದಾಸರನ್ನು ಸ್ತುತಿಸುವುದು.
3. ದಾಸರು ಒಡೆಯನಾದ ಅಲ್ಲಾಹನನ್ನು ಸ್ತುತಿಸುವುದು.  4. ದಾಸರು ಪರಸ್ಪರರನ್ನು ಸ್ತುತಿಸುವುದು.

ಈ ನಾಲ್ಕು ವಿಧ ಸ್ತುತಿ ಅಲ್ಲಾಹನಿಗೇ ಸಲ್ಲುತ್ತದೆ...

"ಅಲ್ಲಾಹು ಅವನನ್ನೇ ಸ್ತುತಿಸುವುದು"

 ಅಲ್ಲಾಹು ಅವನ ಪ್ರಪಂಚದಲ್ಲಿರುವ ಸರ್ವ ಸೃಷ್ಟಿಗಳಿಗೆ ಮಾಡಿರುವ ಅನುಗ್ರಹವನ್ನು ನೆನಪಿಸುತ್ತಾ ಅಲ್ಲಾಹು ಅವನನ್ನೇ حمد ಮಾಡಿರುವುದು ಖುರ್‌ಆನಿನಲ್ಲಿ ಧಾರಾಳವಾಗಿ ಕಾಣಬಹುದು.

 1.ಸೂರಃ ಫಾತಿಹಾದಲ್ಲಿ رب العالمين (ಸರ್ವಲೋಕ ಪರಿಪಾಲಕ) ಎಂದಿದೆ.. ಈ ಪ್ರಪಂಚವನ್ನು ಒಬ್ಬನೇ ಒಬ್ಬ ಅಲ್ಲಾಹನು ಮಾತ್ರ ನಿಯಂತ್ರಿಸುತ್ತಾ ಬರುವುದು ಇಡೀ ವಿಶ್ವಕ್ಕೆ ಮಾಡಿರುವ ಅನುಗ್ರಹವಾಗಿದೆ. ಒಂದಕ್ಕಿಂತ ಹೆಚ್ಚಿನವರು ಅದನ್ನು ನಿಯಂತ್ರಿಸುತ್ತಿದ್ದರೆ ಎಲ್ಲವೂ ನಿಯಂತ್ರಣ ತಪ್ಪಿ, ಧೂಳೀಪಟವಾಗುತ್ತಿದ್ದವು.
ಅಲ್ಲಾಹು ಹೇಳುತ್ತಾನೆ..

لَوْ كَانَ فِيهِمَا آلِهَةً اِلاَّ اللهُ لفسدنا

ಆಕಾಶ ಭೂಮಿ ನಿಯಂತ್ರಿಸಲು ಅಲ್ಲಾಹು ಅಲ್ಲದೇ ಬೇರೆ ದೈವಗಳು ಇರುತ್ತಿದ್ದರೆ ಎರಡೂ ನಾಶವಾಗುತ್ತಿತ್ತು..( ಸೂರ ಅಂಬಿಯಾಅ್-22)

وَلَا يَؤُودُهُ حِفْظُهُمَا

ಆಕಾಶ ಭೂಮಿಯ ಸಂರಕ್ಷಣೆ ಅವನಿಗೆ ಭಾರವಾಗುವುದಿಲ್ಲ. (ಆಯತುಲ್ ಕುರ್ಸಿ)
ಅಲ್ಲಾಹು رب العالمين ಆಗಿರುವಂತೆ ಅವನು
اَلرَّحْمَنُ الرَّحِيمْ
(ಕರುಣಾಮಯಿ, ದಯಾಳು) ಕೂಡ ಆಗಿರುವನು. ಎಂಬ ಈ ಶುಭ ವಾರ್ತೆ ಸೃಷ್ಟಿಗಳಿಗೆ ದೊಡ್ಡ ಅನುಗ್ರಹವಾಗಿದೆ.

ಜಿನ್ನ್ ಮತ್ತು ಮನುಷ್ಯರು ಮನಬಂದಂತೆ ಪ್ರವರ್ತಿಸಿ ನರಕಾಗ್ನಿಗೆ ತಳ್ಳಲ್ಪಡುವುದನ್ನು ಅಲ್ಲಾಹು ಇಷ್ಟ ಪಡುವುದಿಲ್ಲ. ಆದುದರಿಂದ ಇಲ್ಲಿ ನಡೆದುದೆಲ್ಲವೂ ವಿಚಾರಿಸಲ್ಪಡಲಿದೆ ಎಂಬುದನ್ನು ಎಚ್ಚರಿಸುತ್ತಾ
َمَالِكِ يَوْمِ الدِّينْ
(ಪ್ರತಿಫಲ ದಿನದ ಒಡೆಯನು) ಎಂದು ಅಲ್ಲಾಹು ಹೇಳಿರುತ್ತಾನೆ..

ಸತ್ಯ ವಿಶ್ವಾಸಿ ಐದು ಹೊತ್ತು ನಮಾಝಿನಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಇದನ್ನು ನೆನಪಿಸುವಾಗ ಅವನ ಜೀವನ ರೀತಿಯನ್ನು ಕ್ರಮಬದ್ದವಾಗಿಸಲು ಇದು ಸಹಾಯಕವಾಗುತ್ತದೆ. ಎಂದಿರುವಾಗ ಇದು ಕೂಡಾ ಒಂದು ದೊಡ್ಡ ಅನುಗ್ರಹವಲ್ಲವೇ..? ಮೇಲೆ ವಿವರಿಸಿದ ಅನುಗ್ರಹಗಳಿಗಾಗಿ

اَلْحَمْدُ للهِ رَبَّ الْعَالَمِينْ

  ಎಂದು ಹೇಳಿ ಅಲ್ಲಾಹು ಅವನನ್ನೇ ಸ್ತುತಿಸಿದ್ದಾನೆ.

 2.ಸೃಷ್ಟಿಗಳ ಮಾರ್ಗದರ್ಶನಕ್ಕಾಗಿ ಪ್ರವಾದಿಗಳ ಮೂಲಕ ಗ್ರಂಥಗಳನ್ನು ಅವತೀರ್ಣ ಗೊಳಿಸಿದ್ದು ಅಲ್ಲಾಹು ನೀಡಿದ ಮತ್ತೊಂದು ಅತೀ ದೊಡ್ಡ ಅನುಗ್ರಹವಾಗಿದೆ. ಮಾರ್ಗದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುತ್ತಿದ್ದರೆ ಮಾನವ ಮೃಗಗಳಿಗಿಂತಲೂ ನೀಚವಾಗುವುದರಲ್ಲಿ ಸಂದೇಹವಿಲ್ಲ. ಮಾನವರು ಸತ್ಯಮಾರ್ಗ ಅವಲಂಬಿಸದೆ ನಡೆಯುವದರ ಪರಿಣಾಮ ಏನಾಗುತ್ತಿದೆ ಎಂಬುದು ಇಂದು ಯಾರಿಗೂ ಹೇಳಿ ಕೊಡಬೇಕಾಗಿಲ್ಲ. ಈ ಅತೀ ದೊಡ್ಡ ಅನುಗ್ರಹವನ್ನು ನೆನಪಿಸುತ್ತಾ ಸೂರ ಅಲ್ ಕಹ್ಫ್‌ ನ ಪ್ರಾರಂಭದಲ್ಲಿ ಅಲ್ಲಾಹು ಅವನನ್ನು ಸ್ತುತಿಸಿ ಈ ರೀತಿ ಹೇಳುತ್ತಾನೆ;

اَلْحَمْدُ اللهِ الَّذِي أَنْزَلَ عَلَى عَبْدِهِ الْكِتَاب.. (اَلْكَهْفْ)

  ಅವನ ಶ್ರೇಷ್ಠ ದಾಸರಿಗೆ (ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಪವಿತ್ರ ಗ್ರಂಥ (ಖುರ್‌ಆನ್) ಅವತರಣೆಗೂಳಿಸಿದ ಅಲ್ಲಾಹನಿಗೆ ಸರ್ವಸ್ತುತಿ.

3. ಆಕಾಶ,ಭೂಮಿ ಮತ್ತು ಅದರಲ್ಲಿರುವ ಸಕಲ ವಸ್ತುಗಳನ್ನು ಸೃಷ್ಟಿಸಿರುವುದು ಇಲ್ಲಿರುವ ಸೃಷ್ಟಿಗಳ ಅಗತ್ಯಕ್ಕಾಗಿ ಎಂದಿರುವಾಗ ಇದು ಕೂಡ ದೊಡ್ಡ ಅನುಗ್ರಹವಾಗಿದೆ. ಅಲ್ಲಾಹು ಅದನ್ನು ನೆನಪಿಸುತ್ತಾ ಹೇಳುತ್ತಾನೆ;

اَلْحَمْدُ اللهِ الَّذِي خَلَقَ السَّمَاوَاتِ وَالْأَرْضَ.(اَلْانْعَامْ)

 ಆಕಾಶ ಭೂಮಿಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸರ್ವಸ್ತುತಿ (ಅಲ್ ಅನ್‌ಆಮ್-1)

4. ಭೂಮಿಯಲ್ಲಿ ಅನ್ಯಾಯವೆಸಗಿ ನಾಶ-ನಷ್ಟ ಉಂಟುಮಾಡಬೇಡಿ ಎಂಬುದು ಅಲ್ಲಾಹನ ಆದೇಶ. ಅಕ್ರಮ ಅನ್ಯಾಯವನ್ನು ಯಾವತ್ತೂ ಅಲ್ಲಾಹು ಸಹಿಸುವುದಿಲ್ಲ.  ಆಕ್ರಮಿಗಳಿಗೆ ಇಲ್ಲಿ ತಾಂಡವಾಡಲು ಕೆಲವೊಮ್ಮೆ ಸಮಯವನ್ನು ಬಿಟ್ಟುಕೊಡುತ್ತಾನೆ. ಕೊನೆಗೆ ಅವರನ್ನು ಸದೆಬಡಿಯದೆ ಬಿಡುವುದಿಲ್ಲ. ಅದೆಷ್ಟೋ ಅಹಂಕಾರಿಗಳು,ಅಕ್ರಮಿ ಗಳು ಆಗಿ ಹೋಗಿದ್ದಾರೆ. ಅವರನ್ನು ದೀರ್ಘಕಾಲ ಕುಣಿಯಲು ಬಿಡದೆ ನಾಶಗೊಳಿಸಿರುವುದು, ಲೋಕಕ್ಕೆ ಅಲ್ಲಾಹು ನೀಡಿದ ಅನುಗ್ರಹವಾಗಿದೆ. ಅಂತಹ ಸಂದರ್ಭಗಳನ್ನು ನೆನಪಿಸುತ್ತಾ ಅಲ್ಲಾಹು ಹೇಳುತ್ತಾನೆ:

فَقُطِعَ دَابِرُ الْقَوْمِ الَّذِينَ ظَلَمُوا وَالْحَمْدُ للهِ رَبِّ الْعاَلَمِينَ.(اَلاْنْعَامْ-45)
 
  ಅಕ್ರಮಿಗಳ ಬುಡವನ್ನೇ ಕಿತ್ತಗೆಯಲಾಯಿತು. ಆದುದರಿಂದ ಸರ್ವಲೋಕ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ(ಸೂರ: ಅನ್‌ಆಮ್-45)

"ದಾಸರು ಪರಸ್ಪರರನ್ನು ಸ್ತುತಿಸುವುದು"

 ಮಾನವ ಸಂಘಜೀವಿಯಾದುದರಿಂದ ಪರಸ್ಪರ ಸಹಾಯ ಸಹಕಾರ ನೀಡುವುದು ಅಗತ್ಯ, ಮತ್ತು ಸಹಾಯ ಮಾಡಿದವರಿಗೆ ಬೇಕಾಗಿ
جَزَاكَ اللهُ خَيْرْ

(ಅಲ್ಲಾಹು ನಿನಗೆ ಒಳಿತನ್ನು ಪ್ರತಿಫಲ ನೀಡಲಿ) ಎಂದು ಪ್ರಾರ್ಥಿಸುವುದು, ಅವರನ್ನು  ಪ್ರಶಂಸಿಸುವುದು ಸುನ್ನತಾಗಿದೆ. ಈ ಪ್ರಶಂಸೆ ಅಲ್ಲಾಹನಿಗೆ ಸಲ್ಲುವ ಕೃತಜ್ಞತೆಯ ಭಾಗವಾಗಿದೆ. ಕಾರಣ ಅಲ್ಲಾಹನ ಸಹಾಯವಿಲ್ಲದೆ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ...

"ಸತ್ಯವಿಶ್ವಾಸಿಗಳು ಪರಲೋಕದಲ್ಲಿ ಸ್ತುತಿಸುವ ಪ್ರತ್ಯೇಕ ಸಂದರ್ಭಗಳು"

1. ಧರ್ಮ ನಿಷ್ಟರನ್ನು (ಮುತ್ತಖೀನ್) ಕೂಟವಾಗಿ ಅವರವರಿಗೆ ಸಿದ್ಧ ಪಡಿಸಿದ ವಾಹನದಲ್ಲಿ ಸ್ವರ್ಗಕ್ಕೆ ಕರೆತರಲಾಗುವುದು. ಅವರು ಹತ್ತಿರ ಬರುವಾಗ ಅವರಿಗಾಗಿ ಸ್ವರ್ಗದ ಕದ ತೆರದಿಡಲ್ಪಟ್ಟಿರುತ್ತದೆ. ಸ್ವರ್ಗದ ಕಾವಲುಗಾರರಾದ ಮಲಕುಗಳು

َسَلَامٌ عَلَيْكُمْ

 (ನಿಮ್ಮ ಮೇಲೆ ಅಲ್ಲಾಹನ ಸಲಾಂ ಇರಲಿ) ಎಂದು ಹೇಳಿದ ನಂತರ ಈ ರೀತಿ ಹೇಳುತ್ತಾರೆ; ನೀವು ಒಳ್ಳೆಯವರಾಗಿದ್ದೀರಿ, (ಭಾಗ್ಯಶಾಲಿಯಾಗಿದ್ದೀರಿ)

ಶಾಶ್ವತವಾಗಿ ಇದರಲ್ಲಿ ನೀವು ಪ್ರವೇಶಿಸಿರಿ.
 ಆಗ ಮುತ್ತಖೀನ್‌ಗಳು ಸ್ವರ್ಗ ಪ್ರವೇಶಿಸುವರು ಮತ್ತು ಈ ಕೆಳಗಿನಂತೆ ಸ್ತುತಿ ಅರ್ಪಿಸುವರು..

اَلْحَمْدُ للهِ الَّذِي صَدَقَنَا وَعْدَهُ وَاَوْرَثْناَ الْأَرْضَ نَتَبَوَّاُ مِنَ الْجَنَّةِ حَيْثُ نَشاَءُ فَنِعْمَ اَجْرُ الْعَالَمِينَ..


(ಸ್ವರ್ಗ ವಾಗ್ದಾನ ಮಾಡಿರುವುದನ್ನು ಸತ್ಯಗೊಳಿಸಿರುವ ಮತ್ತು ನಾವು ಉದ್ದೇಶಿಸುವ ರೀತಿಯಲ್ಲಿ ವಾಸಮಾಡಲು ನಮಗೆ ಈ ಸ್ವರ್ಗ ಭೂಮಿಯನ್ನು ನೀಡಿ ಅನುಗ್ರಹಿಸಿದ ಅಲ್ಲಾಹನಿಗೆ ಸರ್ವಸ್ತುತಿ, ದುಡಿದವರಿಗೆ ನೀಡಿದ ಪ್ರತಿಫಲ ಒಳ್ಳೆಯದಾಗಿದೆ.. (ಅಝಮರ್-74)

 2.ಸತ್ಯವಿಶ್ವಾಸಿಗಳು ಸ್ವರ್ಗದಲ್ಲಿ ಅವರವರ ಸ್ಥಾನ ಭದ್ರವಾದ ಸಂದರ್ಭದಲ್ಲಿ ಈ ರೀತಿ ಅಲ್ಲಾಹನನ್ನು ಸ್ತುತಿಸುವರು.

اَلْحَمْدُ الَلهِ الَّذِي هَدَينَا لِهَذَا وَمَا كُنَّا لِنَهْتَدِيَ لَوْلَا أَنَّ هَدَيناَ الله..(الاعراف-43)

  (ಸ್ವರ್ಗ ಪ್ರತಿಫಲ ಕಾರಣವಾದ ಸತ್ಕರ್ಮ ನಿರ್ವಹಿಸಲು ನಮಗೆ ಹಿದಾಯತ್ ನೀಡಿ  ಅನುಗ್ರಹಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅವನು ನಮಗಿದಕ್ಕೆ ದಾರಿ ತೋರಿಸದಿದ್ದಲ್ಲಿ, ನಾವು ಮಾರ್ಗದರ್ಶನ ಹೊಂದುತ್ತಿರಲಿಲ್ಲ. (ಅಲ್‌ಅರಾಫ್- 43)

 "ಅಲ್ಲಾಹು ಅವನ ದಾಸರನ್ನು ಸ್ತುತಿಸುವುದು"

 ಅಂಬಿಯಾ- ಔಲಿಯಾಗಳ ಮತ್ತು ಸಜ್ಜನರನ್ನು ಪ್ರಶಂಸಿಸಿದ ಧಾರಾಳ ಭಾಗಗಳನ್ನು ಖುರ್‌ಆನ್ ಮತ್ತು ಹದೀಸುಗಳಲ್ಲಿ ಕಾಣಬಹುದು. ಸೃಷ್ಟಿಗಳಲ್ಲಿ ಶ್ರೇಷ್ಠರಾದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಸರ್ವ ಪ್ರವಾದಿಗಳಿಗಿಂತಲೂ ಹೆಚ್ಚಾಗಿ ಪ್ರಶಂಶಿಸಿರುವುದು ಖುರ್‌ಆನಿನ ಹಲವು ಸೂರಗಳಲ್ಲಿವೆ. 

وَاِنَّكَ لَعَلَى خُلُقٍ عَظِيم 

 (ಖಂಡಿತವಾಗಿಯೂ ತಾವು ಮಹೋನ್ನತ ಗುಣ ನಡತೆಯ ಮೇಲೆಯಾಗಿರುವಿರಿ.) ಸೂರಾ- (ಅಲ್ ಖಲಂ-4)

وَرَفَعْناَكَ لَكَ ذِكْرَكَ

 (ತಮ್ಮ ಹೆಸರನ್ನು ನಾವು ಮೇಲೆತ್ತರಕ್ಕೆ ಏರಿಸಿದ್ದೇವೆ) (ಸೂರಃ ಅಲಂ ನಶ್ರಹ್)

 ಇವುಗಳು ಕೇವಲ ಉದಾಹರಣೆಗಳು ಮಾತ್ರ. ಮರ್ಯಂ ಬೀವಿ ರ.ಅ , ಆಸಿಯಾ ಬೀವಿ ರ.ಅ ,ಖೌಲತ್ ಬೀವಿ ರ.ಅ ಮುಂತಾದ ನಾರಿಮಣಿಗಳ ಬಗ್ಗೆ ಪ್ರಶಂಸಿಸಿದ ಉಲ್ಲೇಖಗಳು, ಕೂಡಾ ಖುರ್ ಆನಿನಲ್ಲಿದೆ. ಒಬ್ಬಂಟಿಯಾಗಿ ಅಲ್ಲಾಹನಿಗೆ ದ್ಸಿಕ್ರ್ ಹೇಳುವವರನ್ನು ಅಲ್ಲಾಹು ಸ್ವಂತವಾಗಿಯೂ, ಕೂಟವಾಗಿ ದ್ಸಿಕ್ರ್ ಹೇಳುವವರನ್ನು, ಅವರಿಗಿಂತ ಉತ್ತಮವಾದ ಮಲಕುಗಳ ಕೂಟದಲ್ಲೂ ಪ್ರಶಂಸಿಸುವನು ಎಂದು ಹದೀಸಿನಲ್ಲಿದೆ.

 ಸಜ್ಜನರು ಉನ್ನತಿಗೇರಲು ಕಾರಣ ಅಲ್ಲಾಹನ ತೌಫೀಕಾಗಿದೆ. ಇವರಿಗೆ ಅಲ್ಲಾಹನಿಂದ ಲಭಿಸುವ ಪ್ರಶಂಸೆಗಳು ಅದು ಅಲ್ಲಾಹನಿಗೇ ಸಲ್ಲುತ್ತದೆ...

"ದಾಸರು ಅಲ್ಲಾಹನನ್ನು ಸ್ತುತಿಸುವುದು"

ಅಲ್ಲಾಹನ ಅನುಗ್ರಹವನ್ನು ಎಣಿಸಲು ಅಸಾಧ್ಯ. ಅಲ್ಲಾಹನು ಹೇಳುತ್ತಾನೆ:

وَاِنْ تَعُدُّو نِعْمَةَ اللهِ لاَ تُحْصُوهاَ

 (ಅಲ್ಲಾಹನ ಅನುಗ್ರಹಗಳನ್ನು ಎಣಿಸುವುದಾದರೆ ಅದನ್ನು ನೀವು ಎಣಿಸಿ ಮುಗಿಸಲಾರಿರಿ.. ಸೂರ ಇಬ್ರಾಹಿಂ - 34)

ಅನ್ನ,ಪಾನೀಯ, ಗಾಳಿ, ಉಸಿರಾಟ, ರಕ್ತ ಪರಿಚಲನೆ ಮುಂತಾದವುಗಳು ಸದಾ ಲಭಿಸುತ್ತಿರುವ ಅನುಗ್ರಹಗಳಾಗಿವೆ.. ಅಲ್ಲದೆ ಕಣ್ಣು, ಕಿವಿ, ಮೆದುಳು.. ಹೀಗೆ ಮಾನವನ ದೇಹದಲ್ಲಿಯೇ ಸಾಕಷ್ಟು ಅನುಗ್ರಹಗಳನ್ನು ಸ್ಥಾಪಿಸಿದ್ದಾನೆ.. ಆದ್ದರಿಂದ ಓರ್ವ ಸತ್ಯ ವಿಶ್ವಾಸಿಯ ಪ್ರತೀ ಚಲನವಲನಗಳು ಅಲ್ಲಾಹನಿಗೆ ಹಮ್ದ್ ಮತ್ತು ದ್ಸಿಕ್ರ್ ಗಳಿಂದಾಗಿರುವುದು ಅಗತ್ಯ. ಅದೇ ರೀತಿ ಅಲ್ಲಾಹನ ಆಜ್ಞೆಯನ್ನು ಅನುಸರಿಸುವುದು ಮತ್ತು ವಿರೋಧಿಸಿದ್ದನ್ನು ತ್ಯಜಿಸುವುದು ಕಡ್ಡಾಯ.. (ಅಲ್ಲಾಹು ಅನುಗ್ರಹಿಸಲಿ.. ಆಮೀನ್)

"ಸ್ತುತಿ ಅರ್ಪಿಸಬೇಕಾದ ಕೆಲವು ಪ್ರತ್ಯೇಕ ಸಂದರ್ಭಗಳು"

 ಮಲಗಿದಾಗ..
 
اَلْحَمْدُ اللهِ اَطْعَمَنَا وَسَقَينَا وَكَفاَن وَاوَاناَ

 (ನಮಗೆ ಅನ್ನ ಪಾನೀಯಗಳನ್ನು ನೀಡಿದ, ವಿಪತ್ತುಗಳಿಂದ ರಕ್ಷಿಸಿದ, ಮಲಗುವ ವ್ಯವಸ್ಥೆ ಮಾಡಿದ ಅಲ್ಲಾಹನಿಗೆ ಸರ್ವಸ್ತುತಿ)

 ನಿದ್ದೆಯಿಂದ ಎದ್ದಾಗ..

اَلْحَمْدُ اللهِ الَّذِي أَحْيَانَا بَعْدَ مَا أَماَتَنَا وَاِلَيْهِ النُّشُورْ..

 (ನಿದ್ದೆ ಎಂಬ ಮರಣದ ನಂತರ ನಮಗೆ ಜೀವ ನೀಡಿದ ಅಲ್ಲಾಹನಿಗೆ ಸರ್ವಸ್ತುತಿ. ಮತ್ತು ಪುನರುತ್ಥಾನಗೊಂಡು ಎಲ್ಲರೂ ಅವನ ಸನ್ನಿಧಾನಕ್ಕೆ ಸೇರುವರು.

" ಆಹಾರ ಸೇವಿಸಿದಾಗ"

اَلْحَمْدُ للهِ الَّذِي اَطْعَمَنِي هَذَا وَرَزَقَنِيهِ مِنْ غَيْرِ حِوْلٍ مِنِّى وَلاَ قُوّّةٍ..

(ನನ್ನ ತಂತ್ರ ಮತ್ತು ಸಾಮರ್ಥ್ಯ ಇಲ್ಲದೆಯೇ ನನಗೆ ಆಹಾರ ನೀಡಿ ಅನುಗ್ರಹಿಸಿದ ಅಲ್ಲಾಹನಿಗೆ ಸರ್ವಸ್ತುತಿ)

" ವಿಸರ್ಜನೆಯ ನಂತರ"

اَلْحَمْدُ اللهِ الَّذِي اَذْهَبَ عَنِّى الَاْذِى وَعَافَانِى

  (ತೊಂದರೆ ಕೊಡುವ ಮಾಲಿನ್ಯವನ್ನು ನೀಗಿಸಿದ ಮತ್ತು ನನಗೆ ಸುಖ ನೀಡಿದ ಅಲ್ಲಾಹನಿಗೆ ಸರ್ವಸ್ತುತಿ)

 "ಸೀನಿದರೆ"

 ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ: 

اِذَا عَطَشَ اَحَدُكُمْ فَلْيَقُلْ الْحَمْدُ لِلهِ 

  (ನಿಮ್ಮಲ್ಲಿ ಯಾರಾದರೂ ಸೀನಿದರೆ ಅವನು ಅಲ್ ಹಮ್ದುಲಿಲ್ಲಾಹ್ ಎಂದು ಹೇಳಲಿ)

3. ಸ್ವರ್ಗ ನಿವಾಸಿಗಳ ದುಃಖ ಹೋಗಿ ಸರ್ವಸುಖಗಳು ಪಡೆಯುತ್ತಿರುವಾಗ ಅವರು ಈ ರೀತಿ ಅಲ್ಲಾಹನನ್ನು ಸ್ತುತಿಸುವರು;

اَلْحَمْدُ اللهِ الَّذِي اَذْهَبَ عَنَّا الْحَذَنَ اِنَّ رَبَّنَا لَغَفُورٌ شَكُورٌ..(فاطر-34)

(ನಮ್ಮ ಎಲ್ಲಾ ದುಃಖಗಳನ್ನು ಹೋಗಲಾಡಿಸಿದ ಅಲ್ಲಾಹನಿಗೆ ಸರ್ವಸ್ತುತಿ..ಖಂಡಿತವಾಗಿಯೂ ನಮ್ಮ ಪರಿಪಾಲಕ ಅದೆಷ್ಟೋ ಪಾಪಗಳನ್ನು ಮನ್ನಿಸುವನು. ಮತ್ತು ನಮ್ಮ ಸತ್ಕರ್ಮ (ಅದೆಷ್ಟು ಚಿಕ್ಕದಾಗಿದ್ದರೂ) ವನ್ನು ಸ್ವೀಕರಿಸುವವನಾಗಿರುವನು.. (ಸೂರ ಫಾತಿರ್-34)

اَللَّذِي اَحَلْنَا دَارَ الْمُقَامَةِ مِنْ فَضْلِهِ لَا يَمَسُّنَا، فِيهَا نَصَبٌ وَلاَ يَمَسُّنَا فِيهاَ لُغُوبٌ (فَاطِرْ-35)

ಅವನ ಅನುಗ್ರಹದಿಂದ ನಾವಿಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿರುವ ಅಲ್ಲಾಹು, ನಮಗೆ ಇಲ್ಲಿ ಯಾವುದೇ ತೊಂದರೆಗಳು ಭಾದಿಸುವುದಿಲ್ಲ. ನಮಗೆ ಇಲ್ಲಿ ಯಾವುದೇ ಬಳಲಿಕೆಯೂ ಇಲ್ಲ.. (ಫಾತಿರ್-35)

4.ಸ್ವರ್ಗ ನಿವಾಸಿಗಳ ಪ್ರಾರ್ಥನೆ ಕೊನೆಗೊಳ್ಳುವುದು ಅಲ್ಲಾಹನನ್ನು ಸ್ತುತಿಸುವ ಮೂಲಕವಾಗಿದೆ.

دَعْوَيهُمْ فِيهَا سُبُحَانَكَ اَلَّلهُمَّ وَتَحِيَّتَهُمْ فِيهَا سَلاَمٌ وَآخِرُ دَعْوَيهُمْ اَنِ الْحَمْدُللهِ رَبَّ الْعاَلَمِينَ..

ಅಲ್ಲಿ ಅವರ ಪ್ರಾರ್ಥನೆ, ಓ ಅಲ್ಲಾಹ್!! ನೀನು ಪರಿಶುದ್ಧನು ಎಂದು ನಾವು ಸಂಕೀರ್ತನೆ ಮಾಡುವೆವು ಎಂದಾಗಿರುತ್ತದೆ. ಅವರಿಗೆ ಅಲ್ಲಿರುವ ಅಬಿವಾದನ ಸಲಾಮ್ ಆಗಿರುತ್ತದೆ. ಅವರ ಪ್ರಾರ್ಥನೆಯ ಕೊನೆಯ ನುಡಿಯು
اَلْحَمْدُ للهِ رَبِّ الْعاَلَمِينَ

ಎಂದಾಗಿರುವುದು..  (ಸೂರ ಯೂನುಸ್ 10)

"ಅಲ್ಲಾಹು ಎಂಬ ಘನತೆಯ ನಾಮ"

اله ಗೆ ال ಸೇರಿದಾಗ الله ಎಂದಾಗುತ್ತದೆ
الله
ಎಂದರೆ..
اَلْمَعْبُود بِحَقٌ

ನಿಜವಾದ ಆರಾಧಿಸಲ್ಪಡುವವನು..

اَلْمُسْتَحِقُّ لِلْعِباَدَةِ

ಆರಾಧಿಸಲ್ಪಡಲು ಅರ್ಹನು ಎಂದಾಗಿದೆ..

ವಿರೋಧಕ್ಕಾದರೂ ಈ ಹೆಸರನ್ನು ಮತ್ಯಾರಿಗೂ ಇಡಲಾಗಿಲ್ಲ.. ಒಂದು ಸೆಕೆಂಡ್ ಕೂಡ ಬಿಡದೆ ಸೃಷ್ಟಿಗಳಿಗೆ ಅನುಗ್ರಹ ಲಭಿಸುತ್ತಿರುವುದು ಅವನಿಂದ ಮಾತ್ರ. ಆದುದರಿಂದ ಆರಾಧನೆಗೆ ಅರ್ಹನು ಅವನು ಮಾತ್ರ.

ಅಲ್ಲಾಹನಿಗೆ ವಾಜಿಬಾದ (ಇರಲೇಬೇಕಾದ) 20 ಸಿಫತುಗಳು, ಮುಸ್ತಈಲ್ ಆದ (ಇರಲೇಬಾರದ) 20 ಸಿಫತುಗಳು, ಜಾಯಿಝ್ (ಇರಲೂಬಹುದು- ಇಲ್ಲದಿರಲೂಬಹುದು) ಆದ 1 ಸಿಫತ್, ಹೀಗೆ 41 ಸಿಫತುಗಳು ಅವನಿಗಿದೆ. "ಲಾ ಇಲಾಹ ಇಲ್ಲಲ್ಲಾಹ್" ಎಂಬ ವಾಕ್ಯದಲ್ಲಿ ಈ 41 ಸಿಫತುಗಳು ಅಡಕವಾಗಿವೆ.

ತೊಂದರೆ ಬರುವಾಗ ಮಕ್ಕಳು ತಾಯಿಯನ್ನೇ ಅವಲಂಬಿಸುವಂತೆ ಸಂಕಷ್ಟದಲ್ಲಿರುವಾಗ ಎಲ್ಲರ ಆಶ್ರಯದಾತ ಅವನೇ ಎಂಬ ಅರ್ಥದಲ್ಲೂ ಅಲ್ಲಾಹ್  ಎಂದು ಹೇಳಲಾಗುತ್ತದೆ.

 ಅಲ್ಲಾಹನಿಗೆ ಧಾರಾಳ ಅತ್ತುತ್ತಮ ನಾಮಗಳಿವೆ. ಅವುಗಳಿಗೆ..

اَلْأَسْمَاءُ الْحُسْنَى

 ಎಂದು ಹೇಳಲಾಗುತ್ತದೆ.
ಅಲ್ಲಾಹು ಹೇಳುತ್ತಾನೆ..

وَاللهِ اَلْأَسْمَاءُ الْحُسْنَى فَادْعُوهُ بِهَا (اَلْاَعْرَافْ-180)

 ಅಲ್ಲಾಹನಿಗೆ ಅತ್ಯುತ್ತಮ ನಾಮಗಳಿವೆ. ಆ ನಾಮಗಳಿಂದಲೇ ಅವನನ್ನು ನೀವು ಕರಿಯಿರಿ (ಅಅ್ ರಾಫ್-180)

ದಿನನಿತ್ಯ..
َالأَسْمَاءُ الْحُسْنَى

ಓದುವ ಮತ್ತು ಅವುಗಳ ಆಶಯಗಳನ್ನು ಜೀವನದಲ್ಲಿ ಅಳವಡಿಸುವವರಿಗೆ ಸ್ವರ್ಗ ಪ್ರಾಪ್ತಿ ಲಭಿಸುವುದು ಖಂಡಿತ. ನಬಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ:

اِنَّ للهِ تِسْعَةٌ وَتِسْعِينَ اِسْمًا، مَنْ اَحْصَاهَا دَخَلَ الْجَنَّةَ..
 
 (ಅಲ್ಲಾಹನಿಗೆ ತೊಂಭತ್ತೊಂಬತ್ತು ಅತ್ಯುತ್ತಮ ನಾಮಗಳಿವೆ. ಅವುಗಳನ್ನು ಯಾರು ಓದುವ ಅಭ್ಯಾಸ ಮಾಡುವರೋ ಮತ್ತು ಅವುಗಳ ಆಶಯವನ್ನು ತಮ್ಮ ಜೀವನದಲ್ಲಿ ಅಳವಡಿಸುತ್ತಾರೋ ಖಂಡಿತ ಅವರು ಸರ್ಗ ಪ್ರವೇಶಿಸುವರು) (ಹದೀಸ್)

"ಅಸ್ಮಾಉಲ್ ಹುಸ್ನಾ"

 بِسْمِ اللهِ الرَّحْمَنِ الرَّحِيمْ

 اَللَّهُمَّ إِنِّي أَسْاَلُكَ وَاَتَوَسَّلُ اِلَيْكَ وَاَتَوَجَّهُ اِلَيْكَ وَاَتَضَرَّعُ إِلَيْكَ بِاَسْمَائِكَ الْحُسْنَى يَا اللهُ، يَارَحْمَانُ، يَارَّحِيمُ، يَامَلِكُ، ياقُدُّوسُ، ياسَلَامُ، يَامُؤْمِنُ يَامُهَيْمِنُ يَا عَزِيزُ، يَا جَبَّارُ، يَا مُتَكَبِّرُ ،يَا خَالِقُ، يَابَارِئُ، يَامُصَوِّرُ يَاغَفَّارُ، يَاقَهَّارُ، يَاوَهَّابُ، يَارَزَّاقُ، يَافَتَّاحُ، يَا عَلِيمُ، يَاقَابِضُ، يَا بَاسِطُ يَا خَافِضُ، يَارَافِعُ، يَامُعِزُّ، يَامُذِلُّ، يَاسَمِيعُ، يابَصِيرُ، يَاحَكَمُ، يَاعَدْلُ، يَالَطِيفُ، يَاكَبِيرُ، يَاحَلِيمُ، يَاعَظِيمُ، يَاغَفُورُ ،يَاشَكُورُ، يَاعَلِيُّ، يَاكَبِيرُ، يَاحَفِيظُ يَا مُقِيتُ يَاحَسِيبُ يَاجَلِيلُ، يَا كَرِيمُ، يَارَقِيبُ، يَامُجِيبُ يَاوَاسِعُ ،يَاحَكِيمُ، يَاوَدُودُ، يَامَجِيدُ، يَابَاعِثُ، يَاشَهِيدُ، يَاحَقُّ، يَاوَكِيلُ، يَاقَوِيُّ ،يَامَتِينُ، يَاوَلِيُّ، يَا حَمِيدُ، يَامُحْصِي، يَامُبْدِئُ، يَا مُعِيدُ، يَامُحْيِي ،يَامُمِيتُ، يَاحَيُّ، يَاقَيُّومُ، يَاوَاحِدُ ،يَامَاجِدُ، يَاوَاحِدُ، يَااَحَدُ، يَاصَمَدُ، يَاقَادِرُ، يا مُقتَدِرُ، يَا مُقَدِّمُ، يَامُؤَخِّرُ، يَا اَوَّلُ، يَا آخِرُ، يَا ظَاهِرُ، يَابَاطِنُ ،يَاوَالِي، يَامُتَعَالِي، يَابَرُّ، يَاتَوَّابُ، يَامُنْتَقِمُ، يَاعَفُوُّ، يَارَؤُوفُ، يَامَالِكَ الْمُلْكِ، يَاذَالْجَلاَلِ وَالْإِكْرَامِ، يَامُقُسِطُ، يَاجَامِعُ، يَاغَنِيُّ، يَامُغْنِي، يَامَانِعُ، يَاضَاارُّ، يَانَافِعُ، يَانُورُ، يَاهَادِي, يَابَدِيعُ، يَابَاقِي، يَاوَارِثُ، يَارَشِيدُ, يَاصَبُورُ, َاَلَّذِي لَمْ يَلِدْ وَلَمْ يُولَدْ وَلَمْ يَكُنْ لَهُ كُفُوًا أَحَدٌ

ಎಲ್ಲಾ ನ್ಯೂನತೆ ಕೊರತೆಗಳಿಂದ ಅಲ್ಲಾಹು ಪರಿಶುದ್ಧನಾಗಿರುವನು. ಅವನ ವಿಶೇಷಣೆ (ಸಿಫತ್) ಗಳಿಗಾಗಲೀ ಯಾವುದೇ ಕೊರತೆ ಇಲ್ಲ ಎಂದು ಸಂಕೀರ್ತನೆ ಮಾಡುವುದು ಮತ್ತು ವಿಶ್ವಾಸವಿರಿಸುವುದು ಖಡ್ಡಾಯ. ಅಲ್ಲಾಹು ಹೇಳುತ್ತಾನೆ.. 

 فَسَبِّحْ بِحَمْدِ رَبِّكَ "

ನಿನ್ನ ಪರಿಪಾಲಕನನ್ನು ಸ್ತುತಿಸುವುದರೊಂದಿಗೆ ಅವನನ್ನು ಪರಿಶುದ್ಧಗೊಳಿಸುವ ಕೀರ್ತನೆಯನ್ನು ನೀನು ಹೇಳು..

ಅಲ್ಲಾಹನನ್ನು ಪರಿಶುದ್ಧಗೊಳಿಸುವ ಕೀರ್ತನೆಗಳು ಧಾರಾಳವಿದೆ. ಅವುಗಳ ಪೈಕಿ

  سُبْحَانَ اللهِ وَبِحَمْدِهِ"

ಹೇಳಲು ಸುಲಭ ಮತ್ತು ಶ್ರೇಷ್ಠವಾಗಿದೆ...

✍🏻ಸಂ:ರಿಝ್ನಾ ಮೋಳ್

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್