ಪ್ರತಿಬಿಂಬ

  
ಎಲ್ಲೆಲ್ಲೂ ನಿಶ್ಯಬ್ದ ಮೌನ... ನೀರವತೆ ತುಂಬಿ ತುಳುಕಿತ್ತು. ಅದೋ ಆಗಲೇ ಕೇಳಿ ಬಂತು ಆ ಶಬ್ಧ.

"ಇನ್ನು ಕೇವಲ ಹದಿನೈದು ನಿಮಿಷ ಮಾತ್ರವೇ ಬಾಕಿ ಇದೆ.." ಇದನ್ನು ಕೇಳಿದ್ದೇ ತಡ ವಿದ್ಯಾರ್ಥಿಗಳು ತರಾತುರಿಯಲ್ಲಿ ಬರೆಯಲು ಪ್ರಾರಂಭಿಸಿದರು. ಕೆಲವರು ಇನ್ನೂ ಬರೆಯಲಿಕ್ಕೆ ಇದೆ ಆದರೆ ಸಮಯ ಸಾಲುತ್ತಿಲ್ಲ ಎಂಬ ಆತಂಕದಲ್ಲಿ ಇದ್ದರೆ, ಇನ್ನು ಕೆಲವರು ಅಯ್ಯೋ ಇನ್ನೂ ಹದಿನೈದು ನಿಮಿಷ ಕಾಯಬೇಕಲ್ವ...! ಯಾವಾಗ ಒಮ್ಮೆ ಹೊರಗೆ ಹೋಗಿಲ್ಲ ಎನಿಸುತ್ತಿದೆ ಎಂದು ಯೋಚಿಸುತ್ತಿದ್ದರು.. 

ಬರೆದು ಎಲ್ಲಾ ಮುಗಿಸಿದ ನಂತರ ತನ್ನ ಉತ್ತರ ಪತ್ರಿಕೆಯತ್ತ ನೋಡಿದಳು ಸುರಯ್ಯಾ.... ಬರೆದಿದ್ದು ಎಲ್ಲಾ ಸರಿಯಾಗಿಯೇ ಇದೆಯಲ್ವಾ ಎಂದೊಮ್ಮೆ ಪರಿಶೀಲಿಸಿದಳು.. ಅಷ್ಟರಲ್ಲಿ ಅದಾಗಲೇ ಬೆಲ್ ಹೊಡೆಯಿತು. ಮೇಲ್ವಿಚಾರಕರು " ಹ್ಞಾಂ, ಸಮಯ ಆಯಿತು ಕೊಡಿ ಕೊಡಿ ... ಎಂದು ಎಲ್ಲರ ಪತ್ರಿಕೆ ತೆಗೆದುಕೊಂಡರು.. ವಿದ್ಯಾರ್ಥಿಗಳು ಎಲ್ಲಾ ಒಬ್ಬೊಬ್ಬರಾಗಿ ಅಲ್ಲಿಂದ ತೆರಳಿದರು..

 ಹೊರಬಂದ ಸುರಯ್ಯಾ ಅತ್ತಿತ್ತ ನೋಡತೊಡಗಿದಳು... " ತಮ್ಮ ಕಾಲೇಜು ಪರೀಕ್ಷಾ ಕೇಂದ್ರ ಆಗಿದ್ದುದರಿಂದ ಹಲವು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಎಂದು ಬಂದಿದ್ದರು. ಅವರಲ್ಲಿ ಕೆಲವರು ತನ್ನತ್ತ ನೋಡಿ ಏನೋ ಹೇಳಿ ಮುಸಿ ಮುಸಿ ನಗಾಡುವುದನ್ನು ಆಕೆಯ ಕಂಗಳು ಕಾಣದೇ ಇರಲಿಲ್ಲ. ಮನಸ್ಸಿಗೊಮ್ಮೆ ನೋವಾದರೂ ಅದನ್ನು ತೋರ್ಪಡಿಸದೆ ಮುಂದೆ ಸಾಗಲೆಂದು ಹೆಜ್ಜೆ ಇಡಬೇಕಾದರೆ ಸುರಯ್ಯಾ... ಎಂದು ಕರೆಯುವ ಧ್ವನಿ ಕೇಳಿಸಿತು.

ಯಾರೆಂದು ಹಿಂದೆ ತಿರುಗಿ ನೋಡಲು ಅಲ್ಲಿ ಬಯೋಲಜಿ ಲೆಕ್ಚರರ್ ನಿಂತಿದ್ದರು.

" ಏನಮ್ಮಾ ಸುರಯ್ಯಾ ಹೇಗೆ ಮಾಡಿದ್ದಿ ಪರೀಕ್ಷೆ ಎಲ್ಲಾ... ನೀನು ಚೆನ್ನಾಗಿ ಬರೆದಿರುವೆ ಎಂಬ ನಂಬಿಕೆ ಇದೆ.. ಆದರೂ ಒಂದು ಮಾತು ಕೇಳಬೇಕು ಅಲ್ವಾ... ಹಾಗೆ ಕೇಳಿದೆ."

   " ಹ್ಞಾಂ ಸರ್... ಬರೆದಿದ್ದೇನೆ.. ನನ್ನ ಕೈಲಿ ಆದ ಪ್ರಯತ್ನ ನಾನು ಮಾಡಿದ್ದೇನೆ. ಮತ್ತೇನಿದ್ದರೂ ಫಲಿತಾಂಶ ಬಂದ ಮೇಲಲ್ಲವೇ ತಿಳಿಯೋದಲ್ವಾ ಸರ್..."

" ಹ್ಞಾಂ ಹೌದಮ್ಮಾ.. ನೀನು ಒಳ್ಳೆಯ ಅಂಕ ಪಡೆದು ಹೆತ್ತವರಿಗೆ ಹಾಗೂ ಕಲಿತಂತಹ ಕಾಲೇಜಿಗೆ ಕೀರ್ತಿ ತರಬೇಕು.. ಎಷ್ಟೆ ಕಷ್ಟ ಆದರೂ ಸರಿ ವಿಧ್ಯಾಭ್ಯಾಸ ಮುಂದುವರೆಸು.. ದೇವರು ನಿನಗೆ ಒಳ್ಳೆಯ ಬುದ್ಧಿಶಕ್ತಿ ನೀಡಿದ್ದಾನೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು"ಎಂದು ಹೇಳಿ ಆಕೆಯನ್ನು ಹಾರೈಸಿ ಮುಂದೆ ನಡೆದರು.

ಭಾವುಕಗೊಂಡಿತು ಆಕೆಯ ಮನಸ್ಸು... ಇಲ್ಲಾದರೂ ನಾನು ಸೋಲಲಿಲ್ಲ ಅಲ್ಲವೇ ಎಂದು ಮನ ಖುಷಿಗೊಂಡಿತು... ಅಷ್ಟರಲ್ಲಿ ದೂರದಲ್ಲಿ ರೈಹಾನ ತನ್ನತ್ತ ಕೈಬೀಸಿ ಕರೆಯುತ್ತಿರುವುದು ಕಂಡಿತು. ಆಕೆಯನ್ನೇ ಹುಡುಕುತ್ತಿದ್ದ ಸುರಯ್ಯಾ ಆಕೆಯ ಬಳಿ ಹೆಜ್ಜೆ ಹಾಕಿದಳು.

 " ಏನೇ ನಿಮ್ಮ ಲೆಕ್ಚರರ್ ನಿಮ್ಮನ್ನು ಮಾತನಾಡಿಸುತ್ತಿದ್ದರು... ಏನು ವಿಷಯ?"

" ಏನಿಲ್ಲಾ ಕಣೇ ಪರೀಕ್ಷೆ ಹೇಗಿತ್ತು ಎಂದು ವಿಚಾರಿಸಿದರು ಅಷ್ಟೇ.."

" ನೋಡು ನಿನ್ನ ಬಳಿ ಲೆಕ್ಚರರ್ ಕೇಳುತ್ತಾರೆ... ನಿನ್ನ ಮೇಲೆ ಅಷ್ಟೊಂದು ಪ್ರೀತಿ ನಂಬಿಕೆ ಅವರಿಗೆ ಅಲ್ವಾ...? "

 ಆಕೆಯ ಮಾತು ಕೇಳಿ ಮುಗುಳ್ನಗೆ ಬೀರಿದಳು ಸುರಯ್ಯಾ..

ಸರಿ ಬಾ ಅದನ್ನೆಲ್ಲಾ ಮತ್ತೆ ಮಾತನಾಡೋಣ ... ನಡಿ ಮನೆಗೆ ಹೋಗೋಣ ತಡವಾಗುತ್ತೆ ಎಂದ ಆಕೆಯ ಮಾತು ಕೇಳಿ ಆಕೆಯ ಕೈ ಹಿಡಿದು ನಿಲ್ಲಿಸಿದಳು ರೈಹಾನ.

" ಸುರಯ್ಯಾ ಇನ್ನು ನಾವು ಯಾವಾಗ ಸಿಗುತ್ತೇವೊ ಇಲ್ಲವೋ ಎಂದು ತಿಳಿದಿಲ್ಲ. ನಿನ್ನೊಂದಿಗೆ ಕಳೆದ ಕ್ಷಣಗಳು ಇನ್ನು ನನಗೆ ಬರೀ ನೆನಪು ಅಲ್ವಾ..."

ಗೆಳತಿಯ ಮಾತು ಕೇಳಿ ಕಣ್ಣಾಲಿಗಳು ತುಂಬಿ ಬಂದವು ಸುರಯ್ಯಾಳಿಗೆ... 

"ರೈಹಾನ ನಿಜವಾಗಿಯೂ ನಾನು ನಿನಗೆ ಅದೆಷ್ಟು ಥ್ಯಾಂಕ್ಸ್ ಹೇಳಿದರೂ ಕಮ್ಮೀನೆ... ನನ್ನ ನೋಡಿ ಎಲ್ಲಾ ನನ್ನಿಂದ ದೂರ ಹೋಗುತ್ತಿದ್ದರೆ ನೀನು ಮಾತ್ರ ನನ್ನ ಬದುಕಿನಲ್ಲಿ ಒಳ್ಳೆಯ ಗೆಳತಿಯಾಗಿ ಬಂದೆ. ಯಾರು ಅದೇನೆ ಅಂದರೂ ನಿನಗೆ ಮಾತ್ರ ನಾನೇ ನಿನ್ನ ಪ್ರಪಂಚವಾದೆ. ಪ್ರತಿ ದಿನವೂ ಏನಾದರೂ ಬೇಸರವಾದಾಗ ನಾನು ನಿನ್ನಲ್ಲಿ ಹಂಚುತ್ತಿದ್ದೆ. ನೀನು ಮನಸ್ಸಿಗೆ ಸಮಾಧಾನ ಮಾಡಿ ನನ್ನ ನೋವ ಮರೆಸುತ್ತಿದ್ದೆ. ಇನ್ನು ನಿನ್ನಂತ ಗೆಳತಿ ನನಗೆ ಸಿಗಲಿಕ್ಕಿಲ್ಲ ಎಂದು ತನ್ನ ಗೆಳತಿಯನ್ನು ಆಲಿಂಗಿಸಿದಳು.

ಅರೇ ಏನೂಂತ ಮಾತನಾಡುತ್ತಾ ಇದ್ದೀಯಾ ಸುರಯ್ಯಾ... ನನಗಾದರೂ ನಿನ್ನ ಹೊರತು ಮತ್ತಾರಿದ್ದಾರೆ ಹೇಳು.. ನಿಜವಾಗಿಯೂ ನಿನ್ನಂತಹ ಬುದ್ಧಿವಂತ ಹುಡುಗಿ ನನ್ನ ಗೆಳತಿಯಾಗಿ ಸಿಕ್ಕಿರುವುದು ನನ್ನ ಭಾಗ್ಯ. 
   ಇಬ್ಬರ ಮನಸ್ಸೂ ದುಃಖದಿಂದ ಕೂಡಿತ್ತು. ಒಬ್ಬರನ್ನೊಬ್ಬರು ಅಗಲಿ ಇರಲಾರದ ಗೆಳತಿಯರು ಬೇರೆ ಬೇರೆಯಾಗುವ ಹಂತದಲ್ಲಿ ಇದ್ದಾಗ ದುಃಖಗೊಳ್ಳುವುದು ಸಹಜವೆ.
ಅಷ್ಟರಲ್ಲಿ ಬಸ್ ಬಂದಿದ್ದು ಕಂಡಿತು. ಬಸ್ ಬಂತೆಂದು ಇಬ್ಬರೂ ಬಸ್ ಹತ್ತಲು ತೆರಳಿದರು. ತಮ್ಮ ನಿಲ್ದಾಣ ಬಂದಂತೆ ಸುರಯ್ಯಾ ರೈಹಾನಳಿಗೆ ಕಣ್ಣು ಸನ್ನೆಯಲ್ಲೇ ಇಳಿಯುತ್ತೇನೆಂದು ತಿಳಿಸಿ ಇಳಿದು ಮನೆಯತ್ತ ನಡೆದಳು. ಇನ್ನು ರೈಹಾನಳನ್ನು ಯಾವಾಗ ನೋಡುವುದೋ ಏನೋ, ಮನಸ್ಸು ಯೋಚಿಸುತ್ತಿತ್ತು.

 " ಬಂದಿಯಾ ಮಗಳೇ, ಹೇಗಿತ್ತು ಪರೀಕ್ಷೆ? " ಎದುರಲ್ಲಿ ಇದ್ದ ಅಜ್ಜಿ ಕೇಳಿದರು.

  ಅಜ್ಜಿ ಕೇಳಿದ್ದನ್ನು ನೋಡಿ ಸುರಯ್ಯಾ ಬಂದಳು ಎಂದು ಅರ್ಥೈಸಿದ ಆಕೆಯ ಅಮ್ಮ ಸಫಿಯ್ಯಾ ಒಳಗಿಂದ ಹೊರಬಂದರು.

" ಹ್ಞಾಂ ಬಂದಿಯಾ... ನಿನ್ನನ್ನೇ ಕಾಯುತ್ತಿದ್ದೆ. ಹೇಗಿತ್ತು ಪರೀಕ್ಷೆ? " ಎಂದು ಕೇಳಿದರು.

"ಅರೇ ಅಮ್ಮಾ ಪರೀಕ್ಷೆ ಸುಲಭವಾಗಿ ಇತ್ತು. ಆದರೆ ನನ್ನನ್ನು ಯಾಕೆ ನೀವು ಕಾಯುತ್ತಿದ್ದದ್ದು? ಏನು ವಿಷಯ?"

" ಏನಿಲ್ಲಾ ನೀನು ಸ್ನಾನ ಮಾಡಿ ಬಾ. ಮತ್ತೆ ಹೇಳ್ತೇನೆ."

 "ಸರಿ ಅಮ್ಮಾ..." ಎಂದು ಒಳನಡೆದಳು ಸುರಯ್ಯಾ.

ಅರೇ ನನ್ನನ್ನು ಕಾಯುವಂತಹದು ಏನಿದೆ? ಬೆಳಿಗ್ಗೆ ಹೋಗುವಾಗ ಏನು ಹೇಳಿರಲಿಲ್ಲ ಯೋಚಿಸುತ್ತಲೇ ಸ್ನಾನದ ಕೊಠಡಿಗೆ ತೆರಳಿದಳು.
         
      *******************

ಅಮ್ಮಾವ್ರೇ... ಅಮ್ಮಾವ್ರೇ.. ಕೆಲಸದವಳ ಧ್ವನಿ ಕೇಳಿ ಓಡಿ ಬಂದಳು ಮುನೀರ.

ಅರೇ ಏನಾಯಿತು? ಯಾಕೆ ಹೀಗೆ ಬೊಬ್ಬೆ ಹಾಕ್ತಿದ್ದೀಯಾ ಎಂದು ಕೇಳಿದಾಗ ಕೆಲಸದವಳು ತನ್ನ ಬಲಭಾಗಕ್ಕೆ ಕೈ ತೋರಿಸಿ ಅಲ್ಲಿ ನೋಡಿ ಎಂದು ಹೇಳಿದಳು.

ಅತ್ತ ನೋಡಿದ ಮುನೀರ ಆಶ್ಚರ್ಯಗೊಂಡು ಯಾ ಅಲ್ಲಾಹ್ ಎಂದು ಆ ಕಡೆ ಓಡುತ್ತಾಳೆ.

  ಸೈದಾ... ಸೈದಾ .. ಬಾ ಇಲ್ಲಿ, ನನ್ನ ಒಬ್ಬಳ ಕೈಯಿಂದ ಆಗುತ್ತಾ ಇಲ್ಲ ಎಂದಾಗ ಕೆಲಸದಾಕೆ ಮೆಲ್ಲನೆ ಆ ಕೋಣೆಯತ್ತ ಇಣುಕಿ ನೋಡಿದಳು. ಆ ಮುಖಭಾವ ಕಂಡೊಡನೆ ಹೆದರಿಕೆ ಆಗಿ ಹೋಗಬೇಕೋ ಬೇಡವೋ ಎಂದು ಆಲೋಚಿಸಿ ಒಂದಡಿ ಮುಂದೆ ಇಟ್ಟಳು. 

 ಮುಂದೆ ಒಂದು ಹೆಜ್ಜೆ ಇಟ್ಟಿದಳಷ್ಟೇ ಆಗಲೇ ಆಕೆಯ ಕಡೆ ತೂರಿ ಬಂತು ಒಂದು ಸ್ಟೀಲ್ ಪಾತ್ರೆ. ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಳು. ಬೇಗಲೇ ಓಡಿ ಹೋಗಿ ಮುನೀರಾಳ ಹಿಂದೆ ಅವಿತು ನಿಂತಳು.

     *******************
   ಸ್ನಾನದ ಕೊಠಡಿಯಿಂದ ಹೊರಬಂದ ಸುರಯ್ಯಾ ತನ್ನ ಬ್ಯಾಗ್ ಓಪನ್ ಮಾಡಿದಳು.

  ಮತ್ತೊಮ್ಮೆ ಅದರತ್ತ ನೋಡುತ್ತಾ ಎಲ್ಲಾ ಬರೆದಿದ್ದೇನೊ ಇಲ್ಲವೋ ಎಂದು ಚೆಕ್ ಮಾಡತೊಡಗಿದಳು. ಎಲ್ಲಾ ಸರಿಯಾಗಿದೆ ಎಂದು ಅನಿಸಿದಾಗ ಅದನ್ನು ಒಳಗಿಟ್ಟು ಅಡುಗೆ ಕೋಣೆಯತ್ತ ನಡೆದಳು.

    " ಅಮ್ಮಾ ಹೊಟ್ಟೆ ಹಸೀತಿದೆ. ಮೊದಲು ಊಟ ಬಡಿಸು. ನಂತರ ಏನು ವಿಷಯ ಎಂದು ಹೇಳುವಿಯಂತೆ. " ಎಂದು ಅಲ್ಲಿದ್ದ ತನ್ನ ಅಮ್ಮನಿಗೆ ಹೇಳಿದರು.

" ಸರಿ ಬಾ, ಊಟ ಮಾಡು" ಎಂದು ತಟ್ಟೆಗೆ ಊಟ ಬಡಿಸಿದರು. ಆಕೆ ಡೈನಿಂಗ್ ಬಳಿ ಬಂದು ಊಟ ಮಾಡಲು
ಪ್ರಾರಂಭಿಸುತ್ತಾಳೆ.


 ಅಷ್ಟರಲ್ಲಿ ಒಳಬಂದ ಆಕೆಯ ತಂಗಿ ಸುಮಯ್ಯಾ ಹೊಸ ಬಟ್ಟೆ ಧರಿಸಿರುವುದು ಆಕೆ ಗಮನಿಸುತ್ತಾಳೆ.

" ಅರೇ ಏನೇ ನೀನು ಮನೆಯೊಳಗೆ ಯಾಕೆ ಇಷ್ಟು ಒಳ್ಳೆಯ ಬಟ್ಟೆ ಧರಿಸಿದ್ದೀಯಾ ?" ತಂಗಿಯತ್ತ ಹುಬ್ಬೇರಿಸಿ ಕೇಳಿದಳು.

" ಅರೇ ನಿನಗಿನ್ನೂ ವಿಷಯ ತಿಳಿದಿಲ್ವಾ? "

" ಏನು ವಿಷಯ? "

" ಏನಿಲ್ಲಾ... ನೀನು ಬಂದ ಮೇಲೆ ಅಜ್ಜಿ ಮನೆಗೆ ಹೋಗೋಣ ಎಂದು ಅಮ್ಮ ಹೇಳಿದಳು. ಹಾಗೆ ನಿನ್ನನ್ನೇ ಕಾಯುತ್ತಿದ್ದೆವು. ಅದಕ್ಕೇ ನಾನು ರೆಡಿಯಾಗಿ ಕುಳಿತದ್ದು."

" ಓಹ್! ಹಾಗಾ ಸಮಾಚಾರ" ಎಂದು ಸುಮ್ಮನಾದಳು.

ಊಟ ಮುಗಿಸಿದ ಸುರಯ್ಯಾ ತಟ್ಟೆ ಹಿಡಿದುಕೊಂಡು ಅಡುಗೆ ಮನೆ ಹೊರಟಳು. " ಅಮ್ಮಾ ನೀನು ಹೇಳಬೇಕು ಅಂದಿರೋ ವಿಷಯ ನನಗೆ ಅದಾಗಲೇ ತಿಳಿದಾಯಿತು. ಅಮ್ಮಾ ನಾನು ಎಲ್ಲಿಗೂ ಬರೋದಿಲ್ಲ. ದಯವಿಟ್ಟು ನನ್ನನ್ನು ಕರೀಬೇಡಿ" ಎಂದು ಹೇಳಿ ಅಲ್ಲಿಂದ ಒಳಬಂದಳು.

ಸುರಯ್ಯಾಳ ಹಿಂದೆಯೇ ಬಂದ ಸಫಿಯ್ಯಾದ " ಅರೇ ಬರೋದಿಲ್ಲ ಅಂದರೆ ಏನು? ಹಾಗೆ ಹೇಳಿದರೆ ಆಗುತ್ತಾ? ನಿನ್ನ ಪರೀಕ್ಷೆ ಮುಗಿಯಲು ಎಂದೇ ಅಲ್ಲವೇ ನಾವು ಕಾದಿದ್ದು.. ಈಗ ನೀನು ಹೀಗೆ ಹೇಳಿದರೆ ಆಗುತ್ತಾ? "

" ಆದ್ರೆ ಅಮ್ಮಾ ನಾನು ಯಾವತ್ತೂ ನಿಮ್ಮಲ್ಲಿ ಅಲ್ಲಿ ಹೋಗೋ ವಿಚಾರ ಹೇಳಿಯೇ ಇಲ್ಲ ಅಲ್ವಾ. ಮತ್ತೆ ನೀವು ಯಾಕೆ ನನ್ನನ್ನು ಕಾಯೋದು ಹೇಳಿ?"

"ಸುರಯ್ಯಾ, ಅದು ನಿನ್ನ ಅಜ್ಜಿ ಮನೆ ಕಣೇ. ಅಜ್ಜ- ಅಜ್ಜಿ ನೋಡಬೇಕು ಎಂದು ಮನಸಾಗಲ್ವ ನಿನಗೆ ಹೇಳು ? "

"ಅಮ್ಮಾ ನೀವು ಹೋಗೋದನ್ನು ನಾನು ತಡೆದಿಲ್ಲ. ಆದರೆ ನಾನು ಬರೋದಿಲ್ಲ ಅಷ್ಟೇ. ಅವರ ಮೇಲೆ ನನಗೆ ಪ್ರೀತಿ ಇದೆ. ಅವರಿಗೋಸ್ಕರ ನಾನು ಯಾವತ್ತೂ ಪ್ರಾರ್ಥಿಸುತ್ತೇನೆ. ಆದರೆ ಅಲ್ಲಿಗೆ ಬರೋದಿಲ್ಲ ಅಮ್ಮಾ ಪ್ಲೀಸ್"

" ಸರಿ ಹಾಗಿದ್ದಲ್ಲಿ. ಒತ್ತಾಯ ಮಾಡೋದಿಲ್ಲ. ನಾವು ಹೋಗಿ ಒಂದೆರಡು ದಿನ ಕುಳಿತು ಬರುತ್ತೇವೆ ಸರೀನಾ? 

 "ಹ್ಞಾಂ ಅಮ್ಮಾ. ಇಲ್ಲಿ ಅಜ್ಜಿ ಇದ್ದಾರಲ್ಲ. ನೀವು ಹೋಗಿ ಬನ್ನಿ . ಇನ್ನು ಅಲ್ಲಿ ಹೋಗಿ ನನ್ನ ಯೋಚನೆ ಮಾಡಿ ಎರಡೇ‌ ದಿನಗಳಲ್ಲಿ ಓಡಿ ಬರಬೇಡಿ. ಅಜ್ಜಿ ನನ್ನನ್ನು ಚೆನ್ನಾಗಿ ನೋಡುತ್ತಾರೆ."

ಮಾತು ಅಲ್ಲಿಗೇ ಮುಕ್ತಾಯಗೊಂಡಿತು. ಅವರು ಹೊರಡಲು ಅನುವಾಗುತ್ತಿದ್ದರು. ಅಷ್ಟರಲ್ಲಿ ಅವಳ ತಂದೆ ಖಾದರಾಕ ಕೂಡ ಬಂದರು.  

  *******************

ತನ್ನ ಹಿಂದೆಯೇ ಬಂದು ನಿಂತಿರುವ ಸೈದಾಳನ್ನು ನೋಡಿ ಏನೂ ಹೇಳದಾದಳು ಮುನೀರಾ..  

   ನಮಗೆ ಇಷ್ಟು ಗಾಬರಿಯಾಗುವಾಗ ಆಕೆಯಾದರೋ ಹೊರಗಿನವಳು. ಆಕೆ ಅದೆಷ್ಟು ಹೆದರಬೇಡ ಎಂದು ಮನಸ್ಸಿನಲ್ಲೇ ಅಂದುಕೊಂಡಳು.

 "ಸೈದಾ ನೀನೊಂದು ಕೆಲಸ ಮಾಡ್ತೀಯಾ ? " ಎಂದು ಕೇಳಿದ ಯಜಮಾನ್ತಿಯನ್ನು ತಿರುಗಿ ನೋಡಿದಳು. 

"ರೂಮಲ್ಲಿ ನನ್ನ ಮೊಬೈಲ್ ಇದೆ. ಒಮ್ಮೆ ಹೋಗಿ ಬೇಗ ಅದನ್ನು ತಾ " 

ಸರಿ ಎಂದು ಹೋಗಬೇಕು ಅನ್ನುವಷ್ಟರಲ್ಲಿ ಆ ಕಡೆಯಿಂದ ಮತ್ತೆ ಬೊಬ್ಬೆ. ಆಕೆಗೂ ಮತ್ತೂ ಹೆದರಿಕೆ ಆಗಿ ಮುನೀರಾಳತ್ತ ನೋಡಿದಳು.

"ಹೇಳಿದಷ್ಟು ಮಾಡು... ಇಲ್ಲದಿದ್ದಲ್ಲಿ ಇಲ್ಲಿ ನಿಲ್ಲು, ನಾನು ಹೋಗಿ ತರುತ್ತೇನೆ" ಎಂದು ಮುನೀರ ಹೇಳಿದಾಗ 

" ಇಲ್ಲಾ ಅಮ್ಮಾವ್ರೇ.. ನೀವು ಇಲ್ಲೇ ನಿಲ್ಲಿ. ನಾನೇ ಹೋಗಿ ತರುತ್ತೇನೆ "ಎಂದು ಕೋಣೆಯತ್ತ ಹೋದಳು.

ಅಯ್ಯೋ ಯಾಕಾದರೂ ಈ ಮನೆ ಕೆಲಸಕ್ಕೆ ಬಂದೆನಾ, ಮೊದಲೇ ತಿಳಿದಿದ್ದರೆ ಬರುತ್ತಿರಲಿಲ್ಲ. ಈಗ ಅಡ್ವಾನ್ಸ್ ತೆಗೆದುಕೊಂಡು ಆಗಿದೆ. ಬಿಡಲೂ ಗೊತ್ತಿಲ್ಲ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಮೊಬೈಲ್ ತೆಗೆದು ಕೊಂಡು ಹೋಗಿ ಕೊಟ್ಟಳು. ಪರಿಸ್ಥಿತಿ ಎಲ್ಲಾ ತಿಳಿಯಾಗಿತ್ತು. ಮನದಲ್ಲಿ ಇದ್ದ ಭಯವೂ ಸೈದಾಳಿಗೆ ಹೋಯಿತು.

ಮುನೀರ ಫೋನ್ ತೆಗೆದುಕೊಂಡು ಯಾರಿಗೋ ಕರೆ ಮಾಡಿ ಮಾತನಾಡುವುದು ಕೇಳಿಸಿತು.

***********************
 ಒಳಬಂದ ಸುರಯ್ಯಾಳ ತಂದೆ
"ಅರೇ ಆಗಲೇ ಕರೆ ಮಾಡಿ ಹೇಳಿದ್ದೆ ಅಲ್ವಾ ರೆಡಿಯಾಗಿ ಇರಿ ಎಂದು. ನೀನಿನ್ನೂ ರೆಡಿಯಾಗಿ ಇಲ್ವಾ? " ಎಂದು ಕೇಳಿದರು.

 " ಇಲ್ಲ ರೀ, ನಾನು ಸುರಯ್ಯಾ ಬರಲಿ ಎಂದು ಕಾಯುತ್ತಿದ್ದೆ. ಆದ್ರೆ ಆಕೆ ತಾನು ಬರೋದಿಲ್ಲ ಎಂದು ಹೇಳಿದಳು." ಸಫಿಯ್ಯಾ ಮರುನುಡಿದರು.

" ಏನು ಸುರಯ್ಯಾ ನೀನು ಹೋಗೋದಿಲ್ವೇ? " ಎಂಬ ಅಪ್ಪನ ಪ್ರಶ್ನೆಗೆ

" ಇಲ್ಲಾ ಅಪ್ಪ " ಎಂದು ನಯವಾಗಿಯೇ ಉತ್ತರಿಸಿದಳು .
"ಸರಿ ನೀವು ಹೊರಡಿ. ನಿಮ್ಮನ್ನು ಅರ್ಧದವರೆಗೆ ಬಿಟ್ಟು ಬರಬೇಕಾದರೆ ತುಂಬಾ ತಡವಾಗುತ್ತಲ್ವಾ " ಎಂದು ಅರ್ಜೆಂಟ್ ಮಾಡಿದಾಗ ಸಫಿಯ್ಯಾದ ಬುರ್ಖಾ ಧರಿಸಿ ಹೊರಬಂದರು.

 ಅಜ್ಜಿ ಹಾಗೂ ಸುರಯ್ಯಾಳ ಜೊತೆ ಬರುತ್ತೇವೆ ಎಂದು ಹೇಳಿ ಮನೆ ಕಡೆ ಜಾಗ್ರತೆ ಎಂದು ಹೇಳಿ ಅವರು ಅಲ್ಲಿಂದ ತೆರಳಿದರು.  

ಅವರು ಮರೆಯಾಗುವ ತನಕ ನೋಡಿದ ಸುರಯ್ಯಾ ಆಮೇಲೆ ಒಳಗೆ ಬಂದಳು.

" ಅಲ್ಲಾ ಸುರಯ್ಯಾ , ನನಗೆ ನೆನಪಿರುವ ಹಾಗೆ ಸಣ್ಣವಳಿರುವಾಗ ನೀನು ಯಾವಾಗ ಅಜ್ಜಿ ಮನೆ ಹೋಗೋದು ಎಂದು ಕಾಯುತ್ತಿದ್ದೆ. ಆದರೆ ಈಗ ಯಾಕೋ ನಿನ್ನಲ್ಲೊಂದು ಬದಲಾವಣೆ ಕಾಣಿಸುತ್ತಾ ಇದೆಯಲ್ವಾ? ಯಾಕೆ ಏನಾಯ್ತು? "

ಅಜ್ಜಿಯ ಪ್ರಶ್ನೆಗೆ ಉತ್ತರಿಸಲಿಲ್ಲ ಸುರಯ್ಯಾ. ಕೆಲಕ್ಷಣ ಮೌನವಹಿಸಿದಳು. ಮನಸ್ಸು ಭಾರಗೊಂಡಿತ್ತು.

" ಇಲ್ಲಾ ಅಜ್ಜಿ, ಮನಸ್ಸು ಒಪ್ಪುತ್ತಿಲ್ಲ . ಚಿಕ್ಕವಳಿರುವಾಗ ಯಾವುದು ನನ್ನ ಮನಸ್ಸಿಗೆ ಹೊಕ್ಕುತ್ತಿರಲಿಲ್ಲ. ಆದ್ರೆ ಈಗ ಯಾವುದೂ ನನ್ನ ಮನಸ್ಸಿನಿಂದ ಹೋಗುತ್ತಿಲ್ಲ ಅಜ್ಜಿ."

    ಮೊಮ್ಮಗಳ ಮಾತು ಕೇಳಿ ಅಜ್ಜಿಗೆ ತಿಳಿಯಿತು. ಆಕೆ ಏನೋ ಅಲ್ಲಿ ಮನಸ್ಸಿಗೆ ನೋವು ಅನುಭವಿಸಿದ್ದಾಳೆ. ಇಲ್ಲದಿದ್ದಲ್ಲಿ ಈ ರೀತಿ ಆಡಲಿಕ್ಕಿಲ್ಲ. ಆದರೂ ಕೆದಕುವುದು ಬೇಡ ಎಂದು ಸುಮ್ಮನಾದರು.

ಸುರಯ್ಯಾಳು ಏನೂ ಹೇಳದೆ ತನ್ನ ಕೋಣೆಗೆ ತಾನು ಸೇರಿದಳು. ಯಾಕೋ ಮನಸು ಅಂದಿನ ಆ ದಿನವನ್ನು ಬೇಡವೆಂದರೂ ಮತ್ತೆ ನೆನಪಿಸಿತು.

ಸುರಯ್ಯಾಳ ಮನಸ್ಸು ಹಿಂದಿನ ದಿನಗಳತ್ತ ಓಡಿತು.

ಅಂದು ರಜೆ ಬರುವುದನ್ನೇ ಕಾಯುತ್ತಿದ್ದಳು ಸುರಯ್ಯಾ. ಅಜ್ಜಿ ಮನೆಗೆ ಹೋಗೋದು ಅಂದರೆ ಎಲ್ಲಿಲ್ಲದ ಖುಷಿ. ಸಣ್ಣವಳಿರುವಾಗ ಅಮ್ಮನ ದೊಡ್ಡಪ್ಪನ ಮಗನ ( ಅಮ್ಮನ ಕಸಿನ್) ಮಗಳು ಸಹಾನ ಜೊತೆ ಸೇರಿ ಅದೆಷ್ಟು ಆಟವಾಡಿದ್ದು ಉಂಟೋ. ಗುಡ್ಡಗಾಡು ಅಲೆದು ನೇರಳೆ ಕೊಯ್ಯುವುದೋ , ಮಾವಿನ ಹಣ್ಣು ಹೆಕ್ಕಿ ತರುವುದೋ , ಮಳೆಗಾಲ ಆರಂಭವಾಯಿತೆಂದರೆ ಕುಂಟಾಲ ಹಣ್ಣು ಕೊಯ್ಯುವುದು ಈ ರೀತಿ ಅವರ ಒಡನಾಟ ಹೆಚ್ಚಿತ್ತು. ಆಕೆಯೂ ಯಾವಾಗ ಸುರಯ್ಯಾ ರಜೆಯಲ್ಲಿ ಬರುತ್ತಾಳೋ ಎಂದೇ ಕಾಯುತ್ತಿದ್ದಳು. ಸುರಯ್ಯಾ ಬಂದಳು ಎಂದರೆ ಸಹಾನಳಿಗೆ ಇನ್ನು ಯಾರು ಬೇಡ ಎಂದು ಊರವರೇ ಹೇಳುತ್ತಿದ್ದರು.

   ಒಂದು ದಿನ ಎಷ್ಟೇ ಹೊತ್ತಾದರೂ ಸಹಾನ ಬಾರದೆ ಇರುವುದನ್ನು ಕಂಡಾಗ ತಾನೇ ಆಕೆಯನ್ನು ಕರೆಯಲು ಎಂದು ಅವರ ಮನೆಯತ್ತ ನಡೆದಳು. ಇನ್ನೇನು ಬಾಗಿಲು ಬಡಿಯಬೇಕು ಎನ್ನುವಷ್ಟರಲ್ಲಿ ಸಹಾನಳ ಅಮ್ಮಾ ಆಕೆಯನ್ನು ಬೈಯ್ಯುತ್ತಿರುವುದು ಕೇಳಿಸಿತು. ಬೇಡವೆಂದರೂ ಆಕೆಯ ಕಿವಿಗಳಿಗೆ ಆ ಮಾತುಗಳು ಕೇಳಿಸಿದವು.

" ಅಲ್ಲಾ ಆ ಹುಡುಗಿಯೊಂದಿಗೆ ಸುತ್ತಾಡಬೇಡ ಎಂದರೆ ನಿನಗೆ ಅರ್ಥ ಆಗೋದಿಲ್ವಾ? ನೀನು ಆಕೆಯ ಮುಖ - ದೇಹ ನೋಡಿದ್ದೀಯಾ ? ಆಕೆಗೆ ದೇಹದ ಭಾಗ ಕಪ್ಪಾಗುವ ಅದ್ಯಾವುದೋ ರೋಗ ಇದೆ. ತಿಳಿದೂ ತಿಳಿದೂ ಆಕೆಯ ಜೊತೆ ಹೋಗುತ್ತೀಯಲ್ಲ ನಿನಗೆ ಹರಡಿದರೆ ಏನು ಮಾಡ್ತೀಯಾ ಹೇಳು?  

ಅವರ ಬೈಗುಳ ಮುಂದುವರಿಯುತ್ತಿತ್ತು. ಕೇಳಲಾಗದ ಸುರಯ್ಯಾ ಅಲ್ಲಿಂದ ಓಡಿ ಬಂದಿದ್ದಳು. ತನಗೆ ಇಷ್ಟವಾದ ನದಿಯ ಕಿನಾರೆಯ ಬಳಿ ಕುಳಿತು ಅದೆಷ್ಟು ಹೊತ್ತು ಅತ್ತಳೋ ಆಕೆಗೇ ಗೊತ್ತು. ನದಿಯ ನೀರಲೊಮ್ಮೆ ತನ್ನ ಪ್ರತಿಬಿಂಬ ನೋಡಿದಳು. ಯಾಕೋ ಅದೂ ತನ್ನನ್ನು ಹೀಯಾಳಿಸುತ್ತಿದೆ ಎಂದು ಆಕೆಗೆ ಅನಿಸಿತು.

***********************
ಆ ಮುಖದತ್ತ ನೋಡಿದ ಸೈದಾಳಿಗೆ ಈಗ ಕನಿಕರವಾಗುತ್ತಿತ್ತು. ಅಯ್ಯೋ ಆಗ ಇಷ್ಟೆಲ್ಲಾ ಅವಾಂತರ ಮಾಡಿದವ ಇವನೇನಾ ಎಂದು ಎನಿಸದೇ ಇರಲಿಲ್ಲ ಆಕೆಗೆ. ಆತ ಏನೂ ನಡೆದೇ ಇಲ್ಲ ಎಂಬಂತೆ ಎಲ್ಲೋ ಒಂದು ಕಡೆ ನೋಡಿಯೇ ಇಟ್ಟಿದ್ದ. . 

  ಫೋನಲ್ಲಿ ಮಾತನಾಡಿದ ಮನೀರಾ ಕರೆ ಕಟ್ ಮಾಡಿ ಅವನ ಬಳಿ ಹೋದಳು. ಮೆಲ್ಲನೆ ಆತನ ತಲೆ ಸವರಿ ಮಗನೇ ಸಾದ್ ಎಂದು ಕರೆದರು.

ಇಲ್ಲಾ ಆತನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದ. 

ಮುನೀರಾಳ ಕಣ್ಣಿನಿಂದ ಇಳಿದ ಕಣ್ಣೀರು ಕಾಣಿಸದೆ ಇರಲಿಲ್ಲ ಸೈದಾಳಿಗೆ. 

ಅರೇ ಏನಾಗಿದೆ ಈ ಹುಡುಗನಿಗೆ ? ನೋಡಲೂ ಇಷ್ಟೊಂದು ಸುಂದರವಾಗಿದ್ದಾನೆ. ಹೊರಗಿನಿಂದ ಏನೂ ಗೊತ್ತಾಗುವುದಿಲ್ಲ. ಆತನಿಗಿರುವ ಸಮಸ್ಯೆಯಾದರೂ ಏನು? ಎಂಬ ಹಲವಾರು ಪ್ರಶ್ನೆಗಳು ಆಕೆಯ ಮನಸ್ಸಿನಲ್ಲಿ ಭುಗಿಲೆದ್ದವು. ಆದರೆ ಕೇಳುವುದಾದರೂ ಯಾರಲ್ಲಿ ಎಂದು ಸುಮ್ಮನಾದಳು.  

ಅಮ್ಮಾವ್ರೇ.. ಮೆಲ್ಲನೆ ಸೈದಾ ಮುನೀರಾಳನ್ನು ಕರೆದಳು.

    ***************
ನೀರಿನಲ್ಲಿ ತನ್ನ ಪ್ರತಿಬಿಂಬ ತನ್ನನ್ನೇ ಅಣಕಿಸಿದಂತಾಯಿತು.
ಹೌದು ಹುಟ್ಟಿದಾಗಲೇ ತನ್ನ ಮುಖದಲ್ಲಿ ಮಚ್ಚೆಯ ರೀತಿಯಲ್ಲಿ ಇತ್ತಂತೆ. ಆದರೆ ತಾನು ಬೆಳೆದಂತೆ ಅದೂ ಬೆಳೆಯತೊಡಗಿತು. ಇಂದು ತನ್ನ ಅರ್ಧ ಮುಖದಲ್ಲಿ ಅದು ವ್ಯಾಪಿಸಿತ್ತು. ಆದರೆ ಅದೂ ಇನ್ನೊಬ್ಬರಿಗೆ ಹರಡುವಂತ ರೋಗವಂತೂ ಅಲ್ಲ. ಇದರಿಂದಾಗಿ ಜನರು ನನ್ನನ್ನು ಇಷ್ಟು ನಿಂದಿಸುವರು ಎಂದು ಆಕೆಗೆ ಅರಿವಿರಲಿಲ್ಲ. ಆದರೆ ಇಂದು ಸಹನಾಳ ಅಮ್ಮ ಆಕೆ ಜೊತೆ ಆಡಬೇಡ ಎನ್ನುವಾಗ ಭೂಮಿಯೇ ಬಾಯಿ ತೆರೆದು ತಿನ್ನಬಾರದೆ ಎನ್ನನು ಅನಿಸಿತು ಆಕೆಗೆ. ನಾನೇನು ಅಷ್ಟು ಕೆಟ್ಟವಳೇ ಎನಿಸದಿರಲಿಲ್ಲ ಆಕೆಗೆ. ಅವತ್ತಿನಿಂದ ಸಹಾನ ತನ್ನನ್ನು ಅವಾಯ್ಡ್ ಮಾಡೋದು ಆಕೆಗೆ ಕಾಣಿಸಿತು. ಎಷ್ಟಾದರೂ ಆಕೆಯ ಸ್ನೇಹ ಮರೆಯಲಾಗಲಿಲ್ಲ. ಆಕೆ ತನ್ನೊಂದಿಗೆ ಸೇರದೆ ಇತರರ ಜೊತೆ ಆಡುವುದು ಮತ್ತಷ್ಟು ದುಃಖಕ್ಕೆ ಒಳಪಡಿಸಿತ್ತು.

"ಸಹಾನ ಯಾಕೆ ನನ್ನನ್ನು ದೂರ ಮಾಡ್ತಿದ್ದೀಯಾ ? ನೀನು ಈ ರೀತಿ ಮಾಡಿದರೆ ನನಗೆ ತುಂಬಾ ಬೇಜಾರಾಗುತ್ತೆ ಕಣೇ " ಎಂದು ಸುರಯ್ಯಾ ಹೇಳಿದಾಗ

" ನೋಡು ನನ್ನ ಹತ್ತಿರ ಬರಬೇಡ, ನಿನ್ನ ಮುಖ ಎಂದಾದರೂ ನೋಡಿದ್ದೀಯಾ ? ಎಷ್ಟು ಅಸಹ್ಯವಾಗಿದೆ ಗೊತ್ತಾ? ನಂಗೊತ್ತು ನಂಗೂ ಅತೇ ರೀತಿ ಆಗಬೇಕು ಅಂತ ಅಲ್ವಾ ನಿನ್ನ ಬಯಕೆ? ನಾನು ದಂತದ ಗೊಂಬೆ ಹಾಗೆ ಇದ್ದೇನೆ ಎಂದು ಅಸೂಯೆ ಅಲ್ವಾ... ಆಕೆಯ ಮಾತು ಕೇಳಿ ಉಳಿದ ಮಕ್ಕಳು ಸುರಯ್ಯಾಳತ್ತ ನೋಡಿ ನಗತೊಡಗಿದರು. ಅಲ್ಲಿ ನಿಲ್ಲಲಾಗದೆ ಸೀದಾ ಮನೆಗೆ ಬಂದಿದ್ದಳು.

" ಅಮ್ಮಾ ಮನೆಗೆ ಹೋಗೋಣ. ಎಷ್ಟು ದಿನ ಇಲ್ಲಿರೋದು ? "ಅಂತ ಆಕೆಯ ಅಮ್ಮನನ್ನು ಒತ್ತಾಯಿಸತೊಡಗಿದಳು. 

ಅವಳ ಅಮ್ಮನಿಗೂ ಆಶ್ಚರ್ಯ ಆಗುತ್ತಿತ್ತು. ಇಲ್ಲದಿದ್ದಲ್ಲಿ ಬಂದರೆ ಹೋಗುವ ಮಾತೇ ಎತ್ತುತ್ತಿರಲಿಲ್ಲ. ಏನಾಗಿದೆ ಈಕೆಗೆ ಎಂದು ಯೋಚಿಸುತ್ತಿದ್ದರು. ಸುರಯ್ಯಾಳ ಒತ್ತಾಯ ತಾಳಲಾರದೆ ಕಡೆಗೆ ಅವಳ ತಂದೆಯನ್ನು ಬರಲು ಹೇಳಿದರು.

 ಹೇಳಿದ ದಿನದಂತೆ ಅವರು ಕರೆದುಕೊಂಡು ಹೋಗಲು ಬಂದಿದ್ದರು. ತನ್ನ ಮಗಳು ಎಂದಿನಂತೆ ಇಲ್ಲ ಏನೋ ಮಂಕಾಗಿದ್ದಾಳೆ ಎಂದು ಗಮನಿಸಿದ ಆಕೆಯ ತಂದೆ ಏನು ವಿಚಾರ ?ಎಂದು ಕೇಳಿದರು.

ತನ್ನ ದುಃಖ ಯಾರಲ್ಲಾದರೂ ಹೇಳಬೇಕು ಎಂದು ಎನಿಸಿದ್ದ ಸುರಯ್ಯಾಳಿಗೆ ಇದು ಸರಿ ಸಮಯ ಎಂದೆನಿಸಿತು. ಆಕೆ ಎಲ್ಲಾ ವಿಚಾರಗಳನ್ನು ತನ್ನ ತಂದೆಯಲ್ಲಿ ಹೇಳಿದಳು. ಕೇಳಿದ ಅವರ ಮುಖವು ರೋಷದಿಂದ ಕುದಿಯತೊಡಗಿತು. ಅವರು ನೇರವಾಗಿ ಸಹನಾಳ ಮನೆಯತ್ತ ನಡೆದರು.

ಅಮ್ಮಾವ್ರೇ.... ಸೈದ ಕರೆದುದನ್ನು ಕೇಳಿ ಮೆಲ್ಲನೆ ತನ್ನ ಕಣ್ಣೀರು ಒರೆಸಿಕೊಂಡಳು ಮುನೀರ.

ಮತ್ತೊಮ್ಮೆ ತನ್ನ ಮಗನತ್ತ ನೋಡಿದಳು. ಅಲ್ಲಿ ಯಾವುದೇ ಭಾವನೆಯೂ ಇಲ್ಲ. ಕೆಳಗೆ ಕುಳಿತಿದ್ದವನು ಅಲ್ಲಿಂದ ಎದ್ದು ಹೋಗಿ ತನ್ನ ಹಾಸಿಗೆಯಲ್ಲಿ ಮಲಗಿದನು. ಅದನ್ನು ಕಂಡ ಮುನೀರಾ ಸೈದಾಳತ್ತ ತಿರುಗಿಬಾ ನಾವು ಹೊರಗೆ ಹೋಗೋಣ ಎಂದಳು.

ಸೈದಾ ಮುನೀರಾಳನ್ನು ಹಿಂಬಾಲಿಸಿದಳು.
 
ಸೋಫಾದಲ್ಲಿ ಬಂದು ಕುಳಿತ ಮುನೀರಾಳತ್ತ ನೋಡಿದಳು ಸೈದಾ. ಯಾಕೋ ತುಂಬಾ ಆಲೋಚನೆ ಮಾಡುತ್ತಿರುವಂತೆ ಕಾಣಿಸಿತು. " ಅಮ್ಮಾ, ಕುಡಿಯಲು ನೀರು ತರಬೇಕೆ ? ಎಂದು ಕೇಳಿದಳು.

 " ಬೇಡ ಸೈದಾ... ನನಗೇನೂ ಬೇಡ. ನಿನಗೆ ಇದನ್ನೆಲ್ಲಾ ನೋಡಿದರೆ ಆಶ್ಚರ್ಯ ಆಗಿರಬೇಕಲ್ವಾ ? ಯಾಕಾದರೂ ಇಲ್ಲಿ ಕೆಲಸಕ್ಕೆ ಬಂದೆ ಎಂದು ಎನಿಸುತ್ತಿದೆಯಾ ? ನಿನ್ನ ಮೊದಲು ಬಂದ ಎರಡು ಕೆಲಸದವರು ಇದೇ ಕಾರಣಕ್ಕೆ ಕೆಲಸ ಬಿಟ್ಟರು. ಏನು ಮಾಡುವುದು ಹೇಳು? ". 

" ಇಲ್ಲಾ ಅಮ್ಮಾವ್ರೇ... ಒಂದು ಕ್ಷಣ ಹಾಗೆ ಎನಿಸಿತು ನಿಜ. ಆದರೆ ನಿಮ್ಮ ಕಣ್ಣೀರು ನೋಡಿ ಯಾಕೋ ಬೇಜಾರಾಯಿತು. ಹೆತ್ತ ಕರುಳಿನ ವೇದನೆ ಏನೆಂದು ನನಗೂ ತಿಳಿದಿದೆ. ಮತ್ತೆ ನಾನು ಆ ರೀತಿ ಯೋಚಿಸುವುದು ತಪ್ಪಲ್ವೇ... ಅಷ್ಟಕ್ಕೂ ಅವನಿಗೆ ಆದದ್ದು ಆದರೂ ಏನು ಅಮ್ಮಾವ್ರೇ ? "

ಸೈದಾಳ ಮುಖದಲ್ಲಿ ತಿಳಿಯುವ ಕುತೂಹಲ ಇತ್ತು.

" ಏನಿಲ್ಲಾ ಸೈದಾ... ಎಲ್ಲಾ ಮಕ್ಕಳಂತೆ ನನ್ನ ಮಗನೂ ಇದ್ದ. ಮುನೀರಾ ಹೇಳಬೇಕು ಎನ್ನುವಷ್ಟರಲ್ಲಿ ಡೋರ್ ಬೆಲ್ ಬಾರಿಸಿತು.

    ಒಂದು ನಿಮಿಷ ಎಂದ ಮುನೀರಾ ಕದ ತೆರೆಯಲು ಹೋದಳು.

********************
ಸುರಯ್ಯಾಳ ತಂದೆ ನೇರವಾಗಿ ಸಹನಾಳ ಮನೆಯತ್ತ ನಡೆದರು. 

" ಅಲ್ಲಾ ಸಾರ ಅವರೇನೊ ಮಕ್ಕಳು, ಬುದ್ಧಿ ಇರೋದಿಲ್ಲ. ನಾವು ದೊಡ್ಡವರು ಅವರ ಕಿವಿಯಲ್ಲಿ ಇಲ್ಲ ಸಲ್ಲದನ್ನು ಬಿತ್ತಬಾರದು ತಾನೆ. ನನ್ನ ಮಗಳಿಗೆ ಅಂತಹುದು ಏನಾಗಿದೆ? ಆ ಮಗುವಿನ ಮನಸ್ಸು ಅದೆಷ್ಟು ನೊಂದಿದೆ ನಿನಗೆ ತಿಳಿದಿದೆಯಾ ? "

" ಅಲ್ಲಾ ಅಣ್ಣಾ.‌...ತಿಳಿದು ನಾನು ಏನು ಮಾಡಬೇಕು ಹೇಳಿ. ನಿಮ್ಮ ಮಗಳ ಭಾಗ್ಯ ಸರಿ ಇಲ್ಲ . ಅದಕ್ಕೆ ನಮ್ಮನ್ನು ದೂರಿದರೆ ಪ್ರಯೋಜನ ಇಲ್ಲ. ನನ್ನ ಮಗಳು ಆಕೆಯೊಂದಿಗೆ ಸೇರುವುದು ನನಗೆ ಇಷ್ಟವಿಲ್ಲ. ನನ್ನ ಮಗಳು ನನ್ನಿಷ್ಟ."
 
" ನನ್ನ ಮಗಳ ಭಾಗ್ಯ ಸರಿ ಇಲ್ಲ ಎಂದೆಲ್ಲಾ ನೀನು ಹೇಳಬೇಡ. ನೋಡು ಒಂದು ದಿನ ನಿನ್ನ ಮಾತುಗಳಿಗೆ ನೀನೇ ಪಶ್ಚಾತ್ತಾಪ ಪಡುತ್ತೀಯಾ. ನೋಡ್ತಾ ಇರು " ಎಂದು ಅಲ್ಲಿಂದ ಸೀದಾ ಬಂದಿದ್ದರು. ಹಾಗೆ ಇವರನ್ನು ಆ ಊರಿನಿಂದ ಕರೆದುಕೊಂಡು ಬಂದಿದ್ದರು.

ಅಂದು ರಾತ್ರಿ ಸಹನಾಳ ತಂದೆಯ ಕರೆ ಸಫಿಯ್ಯಾದರಿಗೆ ಬಂದಿತ್ತು. ಫೋನ್ ಇಡಬೇಕಾದರೆ ಅವರ ಮುಖ ಕಳೆಗುಂದಿತ್ತು. ಏನೂ ಎಂದು ಖಾದರ್ ಅವರನ್ನು ಕೇಳಿದಾಗ ಅಮ್ಮ ಏನೊಂದೂ ಹೇಳಲಿಲ್ಲ. ಆದರೂ ಅಪ್ಪ ಅರ್ಥೈಸಿಕೊಂಡರು. ಅವರು ಅಮ್ಮನಿಗೆ ಬೈದಿರಬಹುದು ಎಂದು. ಮತ್ತೆ ನಾವು ಅವರ ವಿಷಯಕ್ಕೆ ಹೋಗಿರಲಿಲ್ಲ. ಅವರು ನಮ್ಮ ವಿಷಯಕ್ಕೆ ಕೂಡ ಬಂದಿರಲಿಲ್ಲ. ಕೆಲವು ದಿವಸಗಳ ನಂತರ ಅವರು ಪಟ್ಟಣದಲ್ಲಿ ಮನೆ ಮಾಡಿದ್ದಾರೆ. ಅಲ್ಲಿಗೇ ಶಿಫ್ಟ್ ಆಗಿದ್ದಾರೆ ಎಂದು ವಿಷಯ ತಿಳಿದು ಬಂದಿತ್ತು. ನಂತರ ಅಜ್ಜಿ ಮನೆಗೆ ತೆರಳಿದಾಗ ಅವರು ಮನೆಯನ್ನು ಬೇರೆಯವರಿಗೆ ಮಾರಿದ್ದೂ, ಅಲ್ಲಿ ಬೇರೆ ಕುಟುಂಬ ವಾಸವಾಗಿರುವುದು ಕಂಡೆವು. ಮನಸ್ಸು ಯಾಕೋ ಆಕೆಯ ನೆನಪನ್ನೇ ತರಿಸುತ್ತಿತ್ತು. ಆಕೆಗೂ ನನ್ನ ನೆನಪಿರಬಹುದೇ ಎಂಬ ಪ್ರಶ್ನೆಯೂ ಕೂಡ ಮನದಲ್ಲಿ ಉಧ್ಬವವಾಗುತ್ತಿತ್ತು. 

    ಸುರಯ್ಯಾ ಮಲಗಿದ್ದೀಯಾ ತಂದೆಯ ಧ್ವನಿ ಕೇಳಿಸಿತು. ಒಮ್ಮೆಲೆ ಧ್ವನಿ ಕೇಳಿ ಎಚ್ಚೆತ್ತುಕೊಂಡಳು. ಅಪ್ಪನಿಗೆ ತಿಳಿಯಬಾರದು ಎಂದು ಮುಖವನ್ನು ಒರೆಸಿಕೊಂಡಳು.

"ಇಲ್ಲಾ ಅಪ್ಪ "ಎಂದವಳ ಮುಖ ನೋಡಿದಾಗ ಆಕೆ ಅತ್ತಿದ್ದಾಳೆ ಎನ್ನುವುದು ಅವಳ ತಂದೆಯ ಗಮನಕ್ಕೆ ಬಂದಿತು.

" ಏನು ಏನಾಯಿತು? ಯಾಕೆ ಅತ್ತಿದ್ದು ? ಎಂದಾಗ ಹೇಳದೇ ಇರಲಾಗಲಿಲ್ಲ.
 ಏನಿಲ್ಲಪ್ಪ ಹಳೆಯದೆಲ್ಲ ನೆನಪಾಯಿತು ಅಷ್ಟೇ ಎಂದಳು.

"ಅದನ್ನೆಲ್ಲಾ ಮರೆತು ಬಿಡು ಎಂದು ನಾನು ಹೇಳಲಾರೆ ಮಗಳೇ. ಯಾಕೆಂದರೆ ಜೀವನದಲ್ಲಿ ಯಶಸ್ಸುಗಳಿಸಲು ಈ ಎಲ್ಲ ಕಹಿ ನೆನಪುಗಳು ನಮಗೆ ಸ್ಪೂರ್ತಿ ಆಗಿರುತ್ತದೆ. ಮುಂದೆಂದು ನೀನು ದೊಡ್ಡ ಸಾಧಕಿ ಆಗಬೇಕು ಮಗಳೇ. ಆಡುವವರ ಮುಂದೆ ತಲೆ ಎತ್ತಿ ನಿಲ್ಲಬೇಕು . ಏನು ಹೇಳ್ತೀಯಾ?" ಎಂದಾಗ ಹೌದಪ್ಪ ಎಂದು ತನ್ನ ತಂದೆಯನ್ನು ತಬ್ಬಿ ಹಿಡಿದಳು.

"ಅದಲ್ಲ ವಿಷಯ ಮಗಳೇ...ಈ ಘಟನೆ ನಡೆದು ಅದೆಷ್ಟೋ ವರ್ಷಗಳು ಕಳೆದು ಹೋದವು. ನಂತರನೂ ನೀನು ಅಜ್ಜಿ ಮನೆಗೆ ಹೋಗುತ್ತಿದ್ದೆ. ಮತ್ಯಾಕೆ ಇವತ್ತು ಈ ರೀತಿ ಆಡಿದೆ? ಏನಾದರೂ ಕಾರಣ ಇದೆಯಾ? ಏನಾದರೂ ಸಂಭವಿಸಿದೆಯಾ? ಹೇಳು

"ಅದೂ...... "ಎಂದು ಹೇಳಲು ಪ್ರಾರಂಭಿಸಿದಳು.
ತಾನು ಅಲ್ಲಿ ಹೋಗದಿರಲು ಒಂದು ಕಾರಣವಿದೆ ಎಂದಾಗ ಖಾದರ್ ಏನದು ಹೇಳು ಎಂದರು.

"ಅಪ್ಪಾ ಕಳೆದ ಸಲ ಬೇಡ ಬೇಡ ಎಂದರೂ ಅಮ್ಮ ಒತ್ತಾಯದಿಂದ ಅಲ್ಲಿಗೆ ಕರೆದುಕೊಂಡು ಹೋದಳು. ಅಲ್ಲಿ ತಾಹಿರ ಅತ್ತೆಯ ಎರಡು ವರ್ಷದ ಮಗು ಏನೋ ಯಾಕೋ ಅಳುತ್ತಿತ್ತು. ಅವರು ಅಡುಗೆ ಕೋಣೆಯಲ್ಲಿ ಯಾವುದೋ ಕೆಲಸದಲ್ಲಿ ನಿರತರಾಗಿದ್ದರು. ಮಗು ಅಳುತ್ತಿದೆಯಲ್ಲಾ ಸಮಾಧಾನ ಪಡಿಸೋಣ ಎಂದು ಎತ್ತಿದೆ ಅಷ್ಟೇ .. ಒಳಗಿದ್ದ ಅತ್ತೆ ಹೊರಬಂದವರು ನಾನು ಮಗು ಎತ್ತಿದ್ದನ್ನು ನೋಡಿದರು. ಅರೇ ನೀನು ಯಾಕೆ ಮಗುವನ್ನು ಎತ್ತಿದ್ದೀಯಾ ? ಮೊದಲೇ ಅದು ಹೆದರುವುದು ಜಾಸ್ತಿ. ನಿನ್ನನ್ನು ನೋಡಿ ಮತ್ತಷ್ಟು ಹೆದರುತ್ತಿದೆ ಕೊಡು ಇಲ್ಲಿ , ಇನ್ನು ಮುಂದೆ ಮಗು ಅತ್ತರೂ ಪರವಾಗಿಲ್ಲ ದಯವಿಟ್ಟು ನೀನು ಮಾತ್ರ ಎತ್ತಿಕೊಳ್ಳಬೇಡ ಎಂದರು." ಯಾಕೋ ಹೇಳುತ್ತಾ ತನ್ನ ಮಾತು ಒಂದು ಕ್ಷಣ ನಿಲ್ಲಿಸಿದಳು.

ಮತ್ತೆ ಮುಂದುವರಿಸುತ್ತಾ...

   "ಅಪ್ಪಾ.. ಕೆಲವೊಮ್ಮೆ ಅದೆಷ್ಟು ಬೇಜಾರಾಗುತ್ತೆ ಮನಸ್ಸಿಗೆ ಗೊತ್ತಾ. ಸಣ್ಣ ಮಕ್ಕಳು ಹೆದರುವಷ್ಟು ಕೆಟ್ಟದ್ದಾಗಿದ್ದೇನೆಯೇ ನಾನು. ನೀನು ನೋಡಲು ಚಂದವಿಲ್ಲ, ಕುರೂಪಿ ರೀತಿ ಇದ್ದೀಯಾ ... ಎನ್ನುವವರು ಎಂದಾದರೂ ನನಗೂ ಒಂದು ಮನಸ್ಸಿದೆ ಅದನ್ನು ನೋಯಿಸಬಾರದು ಎಂದು ಅರ್ಥಮಾಡಲೇ ಇಲ್ಲ....ಯಾಕೆ ಅರ್ಥ ಮಾಡಿಕೊಳ್ಳುತ್ತಾರೆ ಅಲ್ವಾ? ಯಾವಾಗಲೂ ನಾನು ಅವರಿಗೆ ಒಂದು ತಮಾಷೆಯ ವಸ್ತು ಅಷ್ಟೆ.... ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ ಅಪ್ಪಾ.. ಮನಸ್ಸಿನ ನನ್ನ ವೇದನೆ ನನಗೆ ಮಾತ್ರ ತಿಳಿಯುವುದು... 
ಎಂದು ಹೇಳಿ ದೀರ್ಘ ನಿಟ್ಟುಸಿರು ಬಿಟ್ಟಳು.

ಮಗಳ ವೇದನೆ ತಂದೆಯಾದವನಿಗೆ ತಿಳಿಯದೆ ಇರುತ್ತದೆಯಾ ಮಗಳೇ ಎಂದು ಮನದಲ್ಲೇ ಯೋಚಿಸಿದ ಖಾದರ್ "ಮಗಳೇ, ಒಂದು ಕಾಲ ಖಂಡಿತವಾಗಿಯೂ ಬರಲಿದೆ. ಅಂದು ನಿನ್ನ‌ ನೋಯಿಸಿದವರು, ಅಪಮಾನಿಸಿದವರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಡುವರು.ನೋಡ್ತಾ ಇರು....."

"ಅರೇ ಅಪ್ಪ- ಮಗಳು ಇಬ್ಬರು ಮಾತನಾಡುತ್ತಾ ಇರುವಿರೋ ಅಥವಾ ಊಟಕ್ಕೆ ಬರುವಿರೋ?" ಎಂದು ಅಜ್ಜಿಯ ಧ್ವನಿ ಕೇಳಿದಾಗ ಹ್ಞಾಂ ಇದೋ ಬಂದೆವಮ್ಮ ಎಂದು ಹೇಳಿ ಇಬ್ಬರೂ ಅಡುಗೆ ಮನೆಯತ್ತ ನಡೆದರು. ತನ್ನ ನೋವನ್ನು ಯಾರಲ್ಲಾದರೂ ಹೇಳಬೇಕು ಎಂದಿದ್ದ ಆ ಮುಗ್ಧ ಮನಸ್ಸಿಗೆ ಒಂದು ಚೂರು ನಿರಾಳವಾಗಿತ್ತು.

     **********************

    ಮನೆಯಂಗಳಕ್ಕೆ ರಿಕ್ಷಾ ಬಂದಿದ್ದನ್ನು ನೋಡಿ ಅಸಿಫ್ ಹೊರಗೆ ಹೋದನು. ಸಫಿಯ್ಯಾದ ಹಾಗೂ ಮಕ್ಕಳು ಇಳಿಯುತ್ತಿರುವುದು ಕಾಣಿಸಿತು. ತಾನೇ ರಿಕ್ಷಾದ ಬಳಿ ಹೋಗಿ ಬಾಡಿಗೆ ಎಷ್ಟು ಆಯ್ತು ಎಂದು ಕೇಳಿ ಬಾಡಿಗೆ ನೀಡಿದನು. ಬಾ ಅಕ್ಕ ಒಳ ಹೋಗೋಣ ಎಂದು ಒಳಗೆ ಕರೆದುಕೊಂಡು ಹೋದನು. 

 ಹಾಲ್ ದಿವಾನಲ್ಲಿ ಮಲಗಿದ್ದ ಹಕೀಮಾಕ ಯಾರೋ ಬಂದುದನ್ನು ಕಂಡು ಮೆಲ್ಲನೆ ಎದ್ದು ಯಾರು ?ಎಂದು ಕೇಳಿದರು.

" ನಾನು ಅಬ್ಬಾ, ಸಫಿಯ್ಯಾ"
 ಎಂದು ಅವರ ಕೈ ಹಿಡಿಯುತ್ತಾ ಮಾತನಾಡಿದರು."

 "ಓಹ್ ಸಫಿಯ್ಯಾವ! ವಯಸ್ಸಾಯಿತಲ್ಲ ಹಾಗೆ ಯಾರೂಂತ ಪರಿಚಯ ಸಿಗೋದಿಲ್ಲ. ಅಳಿಯಂದ್ರು ಬರಲಿಲ್ವೇ?"

"ಇಲ್ಲಾ ಅಬ್ಬಾ ಸ್ವಲ್ಪ ಕೆಲಸ ಕಾರ್ಯಗಳು ಇದ್ದವು. ಹಾಗೆ ಅರ್ಧ ತನಕ ಮಾಡಿ ಹೋದರು. ನಾವು ಹೋಗಬೇಕಾದರೆ ಬರುವರು."

ಸರಿಯಮ್ಮ ಎಂದು ಮಕ್ಕಳ ಮುಖವನ್ನೇ ನೋಡಿಟ್ಟರು. ಅರೇ ಮಗೂ ಬರಲಿಲ್ವೇ? ಎಂದು ಕೇಳಲು

ಇಲ್ಲ ಅಬ್ಬಾ... ಅತ್ತೆ ಹಾಗೂ ಇವರು ಇಬ್ಬರೇ ಇರೋದಲ್ಲ . ಹಾಗೇ ಅಲ್ಲೇ ಉಳಿದುಕೊಂಡಳು ಎಂದರು.

ಸರಿ ಎಂದು ಅವರು ಮೆಲ್ಲನೆ ಮಲಗಿದರು.

ಅವರು ಮಲಗಿದ್ದನ್ನು ಕಂಡ ಸಫಿಯ್ಯಾದ ಒಳ ಹೋದರು.

ಅಮ್ಮನನ್ನು ಮಾತನಾಡಿಸುತ್ತಾ ಕುಳಿತಿರುವಷ್ಟರಲ್ಲಿ ಆಸಿಫ್ ಅಲ್ಲಿಗೇ ಬಂದನು. 

" ಅಲ್ಲಾ ಅಕ್ಕಾ.. ಬರೋದೆ ವರ್ಷಕ್ಕೆ ಒಮ್ಮೆ. ಅದರಲ್ಲೂ ಸುರಯ್ಯಾಳನ್ನು ಕರೆದುಕೊಂಡು ಬಂದಿಲ್ಲ ಯಾಕೆ? ನೋಡೋಕೆ ಅಪರೂಪ ಆಗಿಬಿಟ್ಟಿದೆಯಲ್ಲಾ "

" ನಾನು ಅದೆಷ್ಟು ಕರೆದೆ. ಆಕೆ ಒಪ್ಪಲಿಲ್ಲ ಕಣೋ. ನಾನಾದರೋ ಅಪ್ಪ - ಅಮ್ಮನ ನೋಡಬೇಕು ಅನ್ನೋ ಆಸೆಯಲ್ಲಿ ಬರೋದು. ಇಲ್ಲದಿದ್ದಲ್ಲಿ ಆಕೆಯೊಂದಿಗೆ ಅಲ್ಲೇ ಇರುತ್ತಿದ್ದೆ."

   ಆಸಿಫ್ ಮತ್ತೆ ಮಾತು ಮುಂದುವರಿಸಲಿಲ್ಲ. ಆಕೆ ಯಾಕಾಗಿ ಬಂದಿಲ್ಲ ಎಂಬುದು ಅವನಿಗೂ ತಿಳಿದಿತ್ತು. ಆದರೆ ಆತ ನಿಸ್ಸಹಾಯಕನಾಗಿದ್ದ.

    **********************

    ಡೋರ್ ಬೆಲ್ ಬಾರಿಸಿದ್ದುದನ್ನು ಕಂಡ ಮುನೀರಾ ಬಾಗಿಲು ತೆರೆಯಲು ಹೋದಳು. ಪತಿ ಸಮದ್ ಬಂದಿರೋದು ಎಂದು ಅರಿತು ಬಾಗಿಲು ತೆರೆದಳು. 

 " ಮುನೀರಾ, ನೀನು ಕರೆ ಮಾಡಿದಾಗಲೇ ನಾನು ಡಾಕ್ಟರ್ ಕರೆ ಮಾಡಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದೇನೆ. ಬೇಗ ಹೊರಡಬೇಕು, ಹೇಳೋಣ ಹೇಳಿ ನಿನಗೆ ಕರೆ ಮಾಡಿದರೆ ನೀನು ಎತ್ತಲೇ ಇಲ್ಲ " ಸಮದ್ ಪತ್ನಿಯತ್ತ ಕೇಳಿದ.

 ತಾನು ಮೊಬೈಲ್ ಸೈಲೆಂಟ್ ಆಗಿ ಇಟ್ಟಿದ್ದು ಆಗಷ್ಟೇ ನೆನಪಾಯಿತು ಮುನೀರಾಳಿಗೆ " ಓಹ್! ನಾನು ಮೊಬೈಲ್ ಸೈಲೆಂಟ್ ಆಗಿ ಇಟ್ಟಿದ್ದೆ. ಈ ಗಡಿಬಿಡಿಯಲ್ಲಿ ಮರೆತುಹೋಯಿತು. ಯಾಕೋ ಈ ರೀತಿ ಆಗುವಾಗ ತುಂಬಾ ಆತಂಕ ಆಗುತ್ತಲ್ವ ರೀ ಎಲ್ಲನೂ ಬ್ಲಾಂಕ್ ಆಗುತ್ತೆ... ಯಾವುದು ಏನು ಒಂದು ಹೊಳೆಯೋದೆ ಇಲ್ಲ."

ಹೆಂಡತಿಯ ಮಾತು ಕೇಳಿ ಒಳಗೊಳಗೆ ಬೇಸರವಾದರೂ ಸಮದ್ ತೋರ್ಪಡಿಸಲಿಲ್ಲ. "ಪರ್ವಾಗಿಲ್ಲ ಬಿಡು... ನೀನು ಬೇಗನೆ ಹೊರಡು. ನಾನು ಸಾದ್ ಬಳಿ ಮಾತನಾಡಿ ಆತನನ್ನು ಹೊರಡಿಸುತ್ತೇನೆ ಸರಿಯಾ... "ಎಂದು ಹೇಳಿ ಮಗನ ಕೋಣೆಯತ್ತ ನಡೆದರು.

ಅಯ್ಯೋ ಮಗನೇ ಎಂದ ಪತಿಯ ಚೀತ್ಕಾರ ಕೇಳಿ ಮುನೀರ ಮಗನ ಕೋಣೆಯತ್ತ ಓಡಿದಳು.

 ಹೋಗಿ ನೋಡಿದಾಗ ಆಕೆಗೆ ತಲೆ ಸುತ್ತಿದಂತಾಯಿತು. ಸಾದ್ ತನ್ನ ಎರಡೂ ಕೈಗಳನ್ನು ಬ್ಲೇಡ್ನಿಂದ ಪರಚಿಕೊಳ್ಳುತ್ತಿದ್ದನು. ಸಮದ್ ಆ ಬ್ಲೇಡನ್ನು ಮಗನ ಕೈಯಿಂದ ತೆಗೆಯಲು ಪ್ರಯತ್ನಿಸುತ್ತಿದ್ದನು. ತಂದೆ ತೆಗೆಯಲು ಪ್ರಯತ್ನಸಿದಂತೆ ಆತ ಮತ್ತಷ್ಟು ಬಿಗಿ ಹಿಡಿಯುತ್ತಿದ್ದನು. ಮಗನ ಕೈಯಿಂದ ಇಳಿಯುತ್ತಿದ್ದ ರಕ್ತವನ್ನು ನೋಡಲಾಗದ ಮುನೀರಾ ತನ್ನ ಶಾಲ್ ತುದಿಯನ್ನು ಹರಿದು ಅದಕ್ಕೆ ಕಟ್ಟಿದಳು. ಅಷ್ಟರಲ್ಲಿ ಸಮದ್ ಮಗನ ಕೈಯಿಂದ ಬ್ಲೇಡನ್ನು ಕಿತ್ತುಕೊಂಡನು.

"ಮುನೀರಾ ನೀನು ಹೋಗಿ ರೆಡಿಯಾಗು, ಇನ್ನು ತಡ ಮಾಡಿದರೆ ಆಗಲಿಕ್ಕಿಲ್ಲ. ಪರಿಸ್ಥಿತಿ ಕೈ ಮೀರುತ್ತಿದೆ."

ಪತಿಯ ಮಾತು ಕೇಳಿ ಆಕೆ ಹೊರಡಲು ಅನುವಾದಳು.

 " ಎಲ್ಲಿಗೆ ಕರೆದುಕೊಂಡು ಹೋಗುತ್ತೀರಾ ನನ್ನನ್ನು? ನಾ ಎಲ್ಲೂ ಬರೋದಿಲ್ಲ . ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಸಾದ್ ಬೊಬ್ಬಿಡಲು ಪ್ರಾರಂಭಿಸಿದ.

    " ಮಗನೇ ಸಾದ್ ಎಲ್ಲಿಗೂ ಇಲ್ಲ ಕಣೋ, ಇಲ್ಲೇ ಹತ್ತಿರ ನನ್ನ ಗೆಳೆಯ ಒಬ್ಬ ಡಾಕ್ಟರ್ ಇದ್ದಾನೆ. ಆತನ ಬಳಿ ಹೋಗಿ ಮಾತನಾಡಿ ಬರೋಣ. ನೀನು ಮೊದಲಿನಂತೆ ಆಗಬೇಡವೇ? ಎರಡು ವರ್ಷಗಳಿಂದ ಇದೇ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದೀಯಾ... ಹೊರಗಿನ ಪ್ರಪಂಚವನ್ನು ಸ್ವಲ್ಪ ನೋಡೋ.. ನೀನು ಮೊದಲಿನಂತೆ ಆಗಬೇಕು ಮಗನೇ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ಹೇಳೋ... ನೋಡು ಕೈಯನ್ನು ಬೇರೆ ಪರಚಿ ಬಿಟ್ಟಿದ್ದೀಯಾ... ಇದೊಂದು ಸಲ ನಮಗೋಸ್ಕರ ಬಾರೋ, ಇನ್ನೆಂದೂ ಕೇಳೋದಿಲ್ಲ ಎಂದಾಗ ಒಲ್ಲದ ಮನಸ್ಸಿನಿಂದ ಎದ್ದು ನಿಂತನು.

ಎಲ್ಲವನ್ನೂ ನೋಡುತ್ತಿದ್ದ ಸೈದಾಳ ಮನದಲ್ಲಿ ತಳಮಳ. ಅರೇ ಈ ಹುಡುಗ ಇಷ್ಟು ದೊಡ್ಡವನಾಗಿ ಯಾಕೆ ಈ ರೀತಿ ಮಾಡುತ್ತಿದ್ದಾನೆ? ಎರಡು ವರ್ಷಗಳಿಂದ ಹೀಗೆಯೇ ಇದ್ದಾನ? ಏನಾಗಿದೆ ಇವನಿಗೆ ? ಮನದಲ್ಲಿ ನೂರಾರು ಪ್ರಶ್ನೆಗಳು ಬುಗಿಲೆದ್ದವು. ಆದರೆ ಕೇಳುವುದಾದರೂ ಯಾರಲ್ಲಿ ಎಂದು ಸುಮ್ಮನಾದಳು.

ಮೂವರನ್ನು ಹೊತ್ತ ಕಾರು ಆಸ್ಪತ್ರೆಯತ್ತ ಚಲಿಸಿತು. 

************************
    
     ತನ್ನ ಫೋನ್ ರಿಂಗ್ ಆದುದನ್ನು ನೋಡಿ ಮಗ ಶಾಮಿಲ್ ಜೊತೆ ಆ ಫೋನ್ ತಂದು ಕೊಡು ಮಗನೇ ಎಂದರು ಸಫಿಯ್ಯಾ.

ಅಮ್ಮಾ.. ಮಾವನ ಕರೆ, ಇದೋ ರಿಸೀವ್ ಮಾಡಿದ್ದೇನೆ ಮಾತನಾಡು ಎಂದು ಶಮೀಲ್ ಮೊಬೈಲ್ ತಂದು ಕೊಟ್ಟನು. 

  "ಹ್ಞಾಂ ಹೇಳು ಆಸಿಫ್... ಅಬ್ಬಾ ಹೇಗಿದ್ದಾರೆ? ಡಾಕ್ಟರ್ ಏನು ಹೇಳಿದರು ?"

"ಅದೂ ಅಕ್ಕ , ಎರಡು ದಿನ ಅಡ್ಮಿಟ್ ಮಾಡಬೇಕು ಎಂದಿದ್ದಾರೆ. ನೀನು ಇವತ್ತು ಇಲ್ಲಿ ಬಂದು ನಿಂತರೆ ಒಳ್ಳೆಯದಿತ್ತು ಬರ್ತೀಯಾ?"

" ಹ್ಞಾಂ, ನಾನು ಬೇಕಿದ್ದಲ್ಲಿ ಬರುತ್ತೇನೆ. ಆದರೆ ಮಕ್ಕಳು?"

" ಮಕ್ಕಳಿಗೇನು ಅಕ್ಕ ? ಅವರು ಸಣ್ಣವರು ಅಲ್ಲಾ ಅಲ್ವಾ? ತಾಹಿರ ಇದ್ದಾಳಲ್ಲ."

" ಹ್ಞೂಂ ಸರಿ, ನಿನ್ನ ಭಾವನಿಗೆ ವಿಷಯ ತಿಳಿಸಿ ಬಿಡು"

ಎಂದು ಕರೆ‌ ಕಟ್ ಮಾಡುತ್ತಾ, ಅಮ್ಮ ಹಾಗೂ ಮಕ್ಕಳಲ್ಲಿ ವಿಚಾರ ತಿಳಿಸಿದರು. ಹಕೀಮಾಕರಿಗೆ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮಗ ಆಸಿಫ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು. 

ಅಮ್ಮಾ ಅಪ್ಪನಿಗೆ ಕರೆ ಮಾಡು ನಾವು ಮನೆಗೆ ಹೋಗುತ್ತೇವೆ ಎಂದು ಮಕ್ಕಳು ಒತ್ತಾಯ ಮಾಡಿದಾಗ " ಬೇಡ, ಇಲ್ಲಿ ಅಜ್ಜಿ ಹಾಗೂ ಅತ್ತೆ ಇಬ್ಬರೇ ಅಲ್ವಾ ? ಇಲ್ಲೇ ನಿಲ್ಲಿ.. ಎರಡು ದಿನಗಳ ವಿಷಯ ಅಲ್ವಾ ಎಂದಾಗ ಮಕ್ಕಳು ತಮ್ಮ ಒಪ್ಪಿಗೆ ನೀಡಿದರು.

  ಅಷ್ಟರಲ್ಲಿ ರಿಕ್ಷಾ ಬಂದುದನ್ನು ನೋಡಿ ಅದರಲ್ಲಿ ಹತ್ತಿ ಹಾಸ್ಪಿಟಲ್ಗೆ ತೆರಳಿದರು.

 ಹೋಗಬೇಕಾದರೆ ಅರ್ಧ ದಾರಿಯಲ್ಲಿ ಪತಿಗೆ ಕರೆ ಮಾಡಿದರು‌.
       
   ಹ್ಞಾಂ ಸರಿ .. ಸರಿ.. ಜಾಗ್ರತೆ ಮಾಡಿ .. ಎಂದು ಖಾದರ್ ಕರೆ 
ಕಟ್ ಮಾಡಿದರು.

   "ಯಾರ ಫೋನ್ ಖಾದರ್? ಯಾಕೋ ತುಂಬಾ ಸೀರಿಯಸ್ ಆಗಿ ಮಾತನಾಡುತ್ತಾ ಇದ್ದೆ?" 

ಅಮ್ಮನ ಪ್ರಶ್ನೆ ಕೇಳಿದಾಗ " ಅಮ್ಮಾ ಸಫಿಯ್ಯಾಳ ತಂದೆಯನ್ನು ಅಡ್ಮಿಟ್ ಮಾಡಿದ್ದಾರೆ. ಆಕೆ ಇವತ್ತು ಅಲ್ಲೇ ನಿಲ್ತಾಳಂತೆ. ಹಾಗೆ ಕರೆ ಮಾಡಿ ಹೇಳಿದಳು ."

" ಹೌದಾ... ?"

" ಹ್ಞಾಂ.. ನಾಳೆ ಬಿಡುವು ಮಾಡಿಕೊಂಡು ಹೋಗಿ ಬರಬೇಕು."

" ಅಪ್ಪಾ ನಾನು ನಿಮ್ಮ ಜೊತೆ ಬರಲಾ ? "ಮಗಳು ತಾನಾಗಿಯೇ ಕೇಳಿದಾಗ ಖುಷಿಯಾಯಿತು ಖಾದರ್ ಅವರಿಗೆ.

" ಹ್ಞಾಂ ಸರಿ ಮಗಳೇ , ನಾಳೆ ಒಟ್ಟಗೇ ಹೋಗೋಣ " ಎಂದು ತನ್ನ ಸಮ್ಮತಿ ಸೂಚಿಸಿದರು.

    ********************

  ಮಲಗಿದ್ದ ತಂದೆಯ ಮುಖವನ್ನೇ ನೋಡಿಟ್ಟರು ಸಫಿಯ್ಯಾ. ಆಸಿಫ್ ತುಂಬಾ ಓಡಾಡಿದುದರಿಂದ ಅದಾಗಲೇ ನಿದ್ದೆ ಹತ್ತಿತ್ತು. 

  ರಾತ್ರಿ ಸರಿಸುಮಾರು ಒಂದು ಗಂಟೆ ಆಗಿರಬಹುದು. ಸಫಿಯ್ಯಾರಿಗೆ ನಿದ್ದೆ ಹತ್ತಿರಲಿಲ್ಲ. ಅಷ್ಟರಲ್ಲಿ ಯಾರೋ ಮೆಲ್ಲನೆ ಅಳುವ ಶಬ್ದ ಕೇಳಿಸಿತು. ತಂದೆಯತ್ತ ನೋಡಿದರು. ಅಲ್ಲಾ ತಂದೆಯಲ್ಲಾ.. ಆಸಿಫ್ ಕೂಡ ಮಲಗಿದ್ದಾನೆ ಮತ್ತೆ ಯಾರು? ಆಲೋಚಿಸಿದ ಅವರಿಗೆ ಹೊರಗಿನಿಂದ ಕೇಳಿ ಬರುತ್ತಿದೆ ಎಂದು ತಿಳಿಯಿತು.   

ಮೆಲ್ಲನೆ ಬಾಗಿಲು ತೆರೆದು ಹೊರಬಂದಾಗ ಕತ್ತಲೆಯಲ್ಲಿ ಕುಳಿತು ಅಳುತ್ತಿರುವ ಆಕೃತಿ ಒಂದು ಗೋಚರಿಸಿತು.

ಯಾರೋ ಅಳುತ್ತಿದ್ದಾರೆ ಎಂದು ಎನಿಸಿದಾಗ ಸಫಿಯ್ಯಾದ ಹತ್ತಿರ ಹೋದರು.

   ಯಾವುದೋ ಹೆಂಗಸು ಎಂದು ಅವರಿಗೆ ಮನದಟ್ಟಾಯಿತು. ಮೆಲ್ಲನೆ ಹತ್ತಿರ ಹೋಗಿ ಅವರ ಭುಜದ ಮೇಲೆ ಕೈ ಇಟ್ಟರು. ಆಕೆ ಒಮ್ಮೆಲೇ ಕಂಪನಗೊಂಡು ಸಫಿಯ್ಯಾದರತ್ತ ನೋಡಿದಳು.

       "ಅಯ್ಯೋ ಹೆದರಿಬಿಟ್ರಾ... ನಾನು ಪಕ್ಕದ ಕೋಣೆಯಲ್ಲಿ ಇದ್ದೆ. ಯಾರೋ ಅಳುತ್ತಿರುವ ಶಬ್ಧ ಕೇಳಿಸುತ್ತಿತ್ತು. ಯಾರು ಎಂದು ನೋಡಲು ಬಂದೆ" ಎಂದು ಅವರತ್ತ ಹೇಳಿದರು.

     ಅವರು ಏನೂ ಮರುನುಡಿಯದೆ ತನ್ನ ಕಣ್ಣೀರು ಒರೆಸಿಕೊಂಡರು. ಸಫಿಯ್ಯಾದ ಏನೊಂದೂ ಹೇಳದೆ ಆಕೆಯನ್ನು ಆಕೆಯ ಪಾಡಿಗೆ ಬಿಟ್ಟರು. 

ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡ ಆಕೆ " ಅಯ್ಯೋ ನನ್ನಿಂದಾಗಿ ನಿಮ್ಮ ನಿದ್ದೆ ಹಾಳಾಯಿತ ಏನೋ ಅಲ್ವಾ? " ಎಂದು ಕೇಳಿದರು. 

 " ಇಲ್ಲಾ ನನಗಿನ್ನೂ ನಿದ್ದೆ ಹತ್ತಿರಲಿಲ್ಲ. ನೀವು ಬೇಜಾರು ಮಾಡೋದಿಲ್ಲ ಅಂದರೆ ಒಂದು ವಿಷಯ... ಯಾಕಾಗಿ ನೀವು ಅಳುತ್ತಾ ಇದ್ರಿ? ಏನಾಯಿತು ? ಏನಾದರೂ ಹೇಳಬೇಕು ಎಂದು ಇದ್ದಲ್ಲಿ ನನ್ನಲ್ಲಿ ನಿಸ್ಸಂಕೋಚವಾಗಿ ಹೇಳಿ "ಎಂದರು.

" ಇಲ್ಲಾ ಹಾಗೇನಿಲ್ಲ... ಏನೋ ಕೆಲವೊಂದು ಸಿಹಿ ನೆನಪುಗಳು ಮನಸಿಂದ ಹಾದು ಹೋದವು. ಯಾಕೋ ಎನಿಸಿ ಅಳು ಬಂದಿತು. ಏನು ಮಾಡುವುದು ಹೇಳಿ? ಜೀವನ ಒಂದೇ ರೀತಿ ಇರೋದಿಲ್ಲ ಅಲ್ವಾ..? "

ಆಕೆಯ ಮಾತುಗಳೇ ಆಕೆ ದುಃಖದಲ್ಲಿ ಇರುವಳು ಎಂಬ ಕುರುಹನ್ನು ನೀಡುತ್ತಿತ್ತು. ಕತ್ತಲೆಯಲ್ಲಿ ಆಕೆಯ ಮುಖ ಸರಿಯಾಗಿ ಕಾಣುತ್ತಿರಲಿಲ್ಲ ಇಲ್ಲದಿದ್ದಲ್ಲಿ ಆಕೆಯ ಕಣ್ಣುಗಳು ಮತ್ತಷ್ಟು ಸಾಕ್ಷಿ ನೀಡುತ್ತಿದ್ದವೋ ಏನೋ ಅನಿಸದಿರಲಿಲ್ಲ ಸಫಿಯ್ಯಾಳಿಗೆ.

" ತುಂಬಾ ರಾತ್ರಿ ಆಗಿದೆಯಲ್ಲಾ.. ಯಾವುದನ್ನೂ ಎನಿಸಿ ಅಳಬೇಡಿ. ಆಗುವುದೆಲ್ಲಾ ಒಳ್ಳೆಯದಕ್ಕೆ ಆಗುತ್ತದೆ. ಸ್ವಲ್ಪ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ. ಮನಸ್ಸಿನ ಭಾರಗಳು ಇಳಿಯುತ್ತವೆ. " ಎಂದು ಆಕೆಗೆ ಸ್ವಲ್ಪ ಸಮಾಧಾನ ಮಾಡಿದರು.

     ಆಕೆ ಅಲ್ಲಿಂದ ಎದ್ದು ಒಳಹೋದಳು. ಸಫಿಯ್ಯಾದ ತನ್ನ ರೂಮಿನತ್ತ ಬಂದರು. ತಲೆಯಲ್ಲಿ ಒಂದೇ ಆಲೋಚನೆ ತುಂಬಿತ್ತು. ಏನಾಗಿದೆ? ಯಾಕಾಗಿ ಅಳುತ್ತಿದ್ದಳು? ಏನಾದರೂ ಆಗಲಿ ನಾಳೆ ಬೆಳಿಗ್ಗೆ ಕೇಳಬೇಕು ಎಂದು ಆಲೋಚಿಸಿ ಅಲ್ಲಿಗೇ ಮಲಗಿದರು.

    ******************
    "ಅರೇ ಅಮ್ಮಾ ಅದೆಷ್ಟು ಕರೆ ಮಾಡಿದೆವು. ಯಾಕೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದು? "ಧ್ವನಿ ಕೇಳಿ ಬಂದತ್ತ ನೋಡಿದರು ಸಫಿಯ್ಯಾ.. ಮಗಳು ಹಾಗೂ ಪತಿ ಬಾಗಿಲ ಬಳಿ ನಿಂತಿದ್ದರು. "ಅರೇ ನೀವೇನು ಹೇಳದೆ ಇಷ್ಟು ಬೇಗ ಬಂದಿದ್ದೀರಿ? ಒಂದು ಸುದ್ದಿಯೂ ಇಲ್ಲ ಅವರಲ್ಲಿ ಕೇಳಿದರು.

 " ಹೇಗಮ್ಮಾ ಸುದ್ದಿ ಮಾಡೋದು? ನೀನು ಸ್ವಿಚ್ಡ್ ಆಫ್ ಮಾಡಿಟ್ಟರೆ ? "ಎನ್ನುತ್ತಾ ಸುರಯ್ಯಾ ಮಲಗಿದ್ದ ಅಜ್ಜನ ಬಳಿ ತೆರಳಿದಳು. ಅವರ ಯೋಗಕ್ಷೇಮ ವಿಚಾರಿಸಿದಳು. "ಬಂದಿಯಲ್ಲಾ ಮಗೂ, ನಿನ್ನ ನೋಡದೆ ಹಾಗೇ ಕಣ್ಣು ಮುಚ್ಚುತ್ತೇನೊ ಎಂದು ಭಯವಿತ್ತು."

 " ಅರೇ ಅಜ್ಜ, ಯಾಕೆ ಹಾಗೆಲ್ಲ ಮಾತನಾಡುತ್ತಾ ಇದ್ದೀರಾ ? ನಿಮಗೆ ಏನೂ ಆಗಲ್ಲ. ನೀವು ಮಲಗಿಕೊಳ್ಳಿ. ಮಾತನಾಡಿ ಆಯಾಸಗೊಳ್ಳಬೇಡಿ " ಎಂದ ಮೊಮ್ಮಗಳ ಮಾತು ಕೇಳಿ ಅವರು ಮಲಗಿದಲ್ಲೇ ಕಣ್ಣು ಮುಚ್ಚಿಕೊಂಡರು.
ಸುರಯ್ಯಾಳ ಗಮನ ಟೇಬಲ್ನತ್ತ ಹೊರಳಿತು.ಟೇಬಲ್ ಮೇಲೆ ಇದ್ದ ಅಮ್ಮನ ಮೊಬೈಲ್ ತೆಗೆದು ನೋಡಿದಳು. ಅಯ್ಯೋ ಅಮ್ಮಾ... ಚಾರ್ಜ್ ಇಲ್ಲದೆ ಸ್ವಿಚ್ಡ್ ಆಫ್ ಆಗಿದೆ. ಚಾರ್ಜರ್ ಎಲ್ಲಿ ಕೊಡಿ... ನಾನೇ ಚಾರ್ಜ್ ಗೆ ಇಡುತ್ತೇನೆ ಎಂದು ಅಮ್ಮನನ್ನು ಕೇಳಿದಳು.

  "ಅಯ್ಯೋ ಬರುವ ಅರ್ಜೆಂಟಿಗೆ ಚಾರ್ಜರ್ ಯಾರು‌ ಹಿಡ್ಕೊಂಡು ಬರ್ತಾರೆ ಹೇಳು? ನಾನು ಮರೆತು ಬಿಟ್ಟೆ. ಆಸಿಫ್ ಬಂದರೆ ಆಮೇಲೆ ಅವನಲ್ಲಿ ಕೇಳೋಣ."

ಇಲ್ಲಾ ಅಮ್ಮಾ.. ನೀನು ಕರೆ ತೆಗಿಯಲಿಲ್ಲ ಅಂತ ಮಾವನಿಗೆ ಅಪ್ಪ ಮಾಡಿದರು. ನಾನು ಸ್ವಲ್ಪ ಅರ್ಜೆಂಟ್ ಕೆಲಸದ ನಿಮಿತ್ತ ಹೊರ ಹೋಗಿದ್ದೇನೆ ಬರುವಾಗ ತಡ ಆಗಬಹುದು ಎಂದು ಅವರು ಹೇಳಿದ್ದಾರೆ."

" ಓಹ್! ಹೌದಾ, ತಡ ಆಗುವ ವಿಚಾರ ನನಗೆ ತಿಳಿದಿಲ್ಲ. ಇರಲಿ ಬಿಡು ನನಗೆ ಯಾರು ಕರೆ ಮಾಡ್ತಾರೆ?"

ಸಫಿಯ್ಯಾರ ಮಾತು ಕೇಳಿ ಅಪ್ಪ - ಮಗಳು ಇಬ್ಬರೂ ನಕ್ಕರು. 

" ಅಲ್ಲಾ ಸಫಿಯ್ಯಾ.. ಹಾಸ್ಪಿಟಲ್ ಇದ್ದು ಮೊಬೈಲ್ ಯಾಕೆ ಕೇಳಿದರೆ ಆಗುತ್ತಾ? ಏನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡ್ತಿ ಹೇಳು? "

ಗಂಡನ ಮಾತು ಕೇಳಿ ಸಫಿಯ್ಯಾದರಿಗೆ ಹೌದು ಎನಿಸಿತು. 

"ಹೌದು ರೀ, ನೀವು ಹೇಳೋದು ಸರಿ. ನಿಮ್ಮಲಾದ್ರು ಹೇಳಿದಿದ್ರೆ ನೀವು ತರಬಹುದಿತ್ತು. ಈಗೇನು ಮಾಡೋದು? "

" ಅಮ್ಮಾ ಒಂದು ದಾರಿ ಇದೆ. ಇಲ್ಲಿ ಯಾರಾದರೂ ಪರಿಚಯ ಇದ್ರೆ ಅವರಿಂದ ತಗೊಳಬಹುದು. ಯಾರಾದಾದರೂ ಪರಿಚಯ ಆಗಿದೆಯಾ? "

ಮಗಳ ಪ್ರಶ್ನೆ ಕೇಳಿದಾಗ ಸಫಿಯ್ಯಾದರಿಗೆ ತಟ್ಟನೆ ತಾನು ರಾತ್ರಿ ಮಾತನಾಡಿದ ಆ ಹೆಂಗಸಿನ ನೆನಪಾಯಿತು. ಓಹ್! ಬೆಳಿಗ್ಗೆ ಹೋಗಿ ಆಕೆಯನ್ನು ಮಾತಾಡಿಸೋಣ ಎಂದಿದ್ದೆ. ಮರೆತೇ ಹೋಯಿತು.   

 ಅಮ್ಮ ಯಾವುದೋ ಯೋಚನಾ ಲಹರಿಯಲ್ಲಿ ಇರುವುದನ್ನೂ ಗಮನಿಸಿದ ಸುರಯ್ಯಾ ಮೆಲ್ಲನೆ ತಟ್ಟಿ ಅಮ್ಮಾ ಏನಾಯಿತು ಎಂದು ಕೇಳಿದಾಗ ಒಮ್ಮೆಲೇ ವಾಸ್ತವಕ್ಕೆ ಬಂದರು.

    "ಸುರಯ್ಯಾ ನಿನ್ನೆ ರಾತ್ರಿ ಆ ಕಡೆ ರೂಮಿನ ಹೆಂಗಸೊಬ್ಬರ ಪರಿಚಯವಾಗಿತ್ತು. ಅವರಲ್ಲಿ ಕೇಳಿದರೆ ಕೊಡುವರು. ಒಮ್ಮೆ ‌ಬೇಕಿದ್ದಲ್ಲಿ ತೆಗೆದುಕೊಂಡು ಬಾ ಎಂದು ಮಗಳತ್ತ ಕೇಳಿದರು.

 ಸರಿ ಅಮ್ಮಾ ಎಂದು ಹೊರಡುವಾಗ

  ನಿಲ್ಲು ಸುರಯ್ಯಾ... ನಾನು ಹೊರಗೆ ಹೋಗಿ ನಿಮಗೆ ತಿನ್ನಲು ಏನಾದರೂ ತರುತ್ತೇನೆ ಎಂದು ಖಾದರ್ ನುಡಿದರು. ಇಬ್ಬರೂ ಒಟ್ಟಾಗಿ ಹೊರ ನಡೆದರು.

       ಪಕ್ಕದ ರೂಮಿನತ್ತ ಬಂದಾಗ ಅಪ್ಪಾ ನಾನು ಒಳಹೋಗಿ ಚಾರ್ಜರ್ ತರುತ್ತೇನೆ ಎಂದು ಆ ಕೋಣೆಯತ್ತ ನಡೆದಳು.

  ಬೆಡ್ ಅಲ್ಲಿ ಮಲಗಿದ್ದ ಯುವಕನೊಬ್ಬನನ್ನು ಬಿಟ್ಟರೆ ಮತ್ತೆ ಅಲ್ಲಿ ಯಾರೂ ಇರಲಿಲ್ಲ. ಒಳಗೆ ಟಾಯ್ಲೆಟ್ ಅಲ್ಲಿ ನೀರು ಬಿಟ್ಟ ಶಬ್ಧ ಕೇಳಿಸುತ್ತಿತ್ತು. ಓಹ್ ಅಮ್ಮ ಹೇಳಿದ ಹೆಂಗಸು ಅಲ್ಲೇ ಒಳಗೆ ಇರಬೇಕು ಎನಿಸಿಕೊಂಡಳು.

ಬೆಡ್ ಅಲ್ಲಿ ಮಲಗಿದ್ದ ಹುಡುಗ ತನ್ನತ್ತ ನೋಡುವುದನ್ನು ಗಮನಿಸಿದ ಆಕೆ " ಸ್ವಾರಿ ಡಿಸ್ಟರ್ಬ್ ಮಾಡಿದಕ್ಕೆ. ನನಗೊಮ್ಮೆ ಚಾರ್ಜರ್ ಬೇಕಿತ್ತು. ಸ್ವಲ್ಪ ಕೊಡಬಹುದಾ ಎಂದು ಆತನಲ್ಲಿ ಕೇಳಿದಳು.

ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.

ಅರೆ ಇವನೇನು ಈ ರೀತಿ ಮಾಡುತ್ತಿದ್ದಾನೆ.. ಒಂದು ಬಾಯಿ ಬಿಟ್ಟು ಹೇಳಿದರೆ ಆಗಲ್ವಾ ಎಂದು ಮನದಲ್ಲೇ ಯೋಚಿಸುತ್ತಾ ಅಯ್ಯೋ ಬಾಯಿ ಬರೋದಿಲ್ವೋ ಏನೋ ಪಾಪ ಅಂದುಕೊಂಡು ಆತನಲ್ಲಿ ಸಂಜ್ಞೆಯ ಮೂಲಕ ಕೇಳಿದರು. ಇಲ್ಲಾ ಪ್ರತಿಕ್ರಿಯೆ ಬರುತ್ತಿಲ್ಲಾ. ಇನ್ನು ನಾನು ಇಲ್ಲಿ ನಿಲ್ಲುವುದು ಸಿಂಪ್ಲಿ ವೇಸ್ಟ್ ಅಂದುಕೊಂಡು ತಿರುಗಿ ಹೋಗಲು ಯತ್ನಿಸಿದಳಷ್ಟೆ

 "ಇಲ್ಲಿ ಇದೆ ಬನ್ನಿ ತೆಗೆದುಕೊಳ್ಳಿ" ಎಂದ ಧ್ವನಿ ಕೇಳಿ ಆಕೆಗೆ ಆಶ್ಚರ್ಯವಾಯಿತು.ತನ್ನ ಬಾಳು ಇಲ್ಲಿಂದ ತಿರುವು ಪಡೆಯಲಿದೆ ಎಂದು ಅರಿಯದ ಸುರಯ್ಯಾ ಅತ್ತ ಹೋದಳು.

ಚಾರ್ಜರ್ ಇಲ್ಲಿದೆ ಬನ್ನಿ ತೆಗೆದುಕೊಳ್ಳಿ ಧ್ವನಿ ಕೇಳಿಬಂದಾಗ ಒಳಗಡಿಯಿಟ್ಟಳು ಸುರಯ್ಯಾ..

     ಸುರಯ್ಯಾ ಒಳಹೋಗುವುದಕ್ಕು ಆ ಹೆಂಗಸು ಟಾಯ್ಲೆಟ್ನಿಂದ ಬರುವುದಕ್ಕೂ ಸರಿ ಹೋಯಿತು.  

ಆಕೆ ಪ್ರಶ್ನಾರ್ಥಕವಾಗಿ ಸುರಯ್ಯಾಳತ್ತ ನೋಡಿದರು. ಆಕೆಯ ನೋಟವನ್ನು ಅರ್ಥೈಸಿದ ಸುರಯ್ಯಾ ತನ್ನ ಬಗ್ಗೆ ಹೇಳಿಕೊಂಡಳು. ನಾನು ಒಮ್ಮೆ ಚಾರ್ಜರ್ ಬೇಕು ಅಂತ ಬಂದೆ. ಇವರು ಇಲ್ಲಿದೆ ಎಂದು ಕರೆದರು. ಹಾಗೆ ಒಳಗೆ ಬರಬೇಕು ಎನ್ನುವಷ್ಟರಲ್ಲಿ ನೀವೇ ಬಂದುಬಿಟ್ರಿ."

ಸುರಯ್ಯಾಳ ಮಾತು ಕೇಳಿದ ಆಕೆ ಒಮ್ಮೆಗೆ ಆಶ್ಚರ್ಯಗೊಂಡಳು. " ಅರೇ ನಿನಗೆಲ್ಲೋ ಅವನು ಮಾತನಾಡಿದ ರೀತಿ ಕೇಳಿಸಿರಬೇಕು. ಆತ ಯಾರಲ್ಲೂ ಮಾತನಾಡುವುದಿಲ್ಲ‌" ನುಡಿದಳು ಆಕೆ.

ಇಲ್ಲಾ ಆಂಟಿ ,ಆತ ಮಾತನಾಡಿದ. ಅಲ್ಲದೆ ನೋಡಿ ಚಾರ್ಜರ್ ಅಲ್ಲಿದೆ ಎಂದೂ ಕೂಡ ತೋರಿಸಿದ್ದಾನೆ. ಇಲ್ಲದಿದ್ದಲ್ಲಿ ನನಗೆ ಹೇಗೆ ಗೊತ್ತಾಗಬೇಕು ಹೇಳಿ."

ಸುರಯ್ಯಾಳ ಮಾತು ಕೇಳಿದ ಆಕೆಯೇ ಒಮ್ಮೆ ಗೊಂದಲಕ್ಕೀಡಾದಳು. ಈ ಹುಡುಗಿ‌ ಸುಳ್ಳು ಯಾಕೆ ಹೇಳುವಳು ? ಒಂದು ವೇಳೆ ಇವನು ನಿಜವಾಗಿಯೂ ಆಕೆಯಲ್ಲಿ ಮಾತನಾಡಿ ಇರಬಹುದಾ? ಒಂದು ವೇಳೆ ಮಾತನಾಡಿದ್ದು ಹೌದು ಎಂದಾದರೆ ಹೇಗೆ ಮಾತನಾಡಿದ? ಆಕೆಯ ತಲೆಯಲ್ಲಿ ನೂರು ಪ್ರಶ್ನೆಗಳು ಸುತ್ತುತ್ತಿದ್ದವು. ಆಕೆ ಮಗನ ಮುಖ ನೋಡಿದಳು. ಆತ ಇದು ಯಾವುದರ ಪರಿವೆಯೇ ಇಲ್ಲದಂತೆ ಮಲಗಿದ್ದ. ಆಕೆ ಚಾರ್ಜರ್ ಅನ್ನು ತೆಗೆದು ಸುರಯ್ಯಾಳ ಕೈಗೆ ಕೊಟ್ಟು ಬಿಟ್ಟರು. 

" ಥ್ಯಾಂಕ್ಸ್ ಆಂಟಿ, ಸ್ವಲ್ಪ ಮತ್ತೆ ತಂದು ಕೊಡುತ್ತೆನೆ "ಎಂದು ಹೊರಬಂದಳು. ಗೊತ್ತಿದ್ದೋ, ಗೊತ್ತಿಲ್ಲದೆಯೋ ಆತನ ಮುಖವನ್ನೊಮ್ಮೆ ನೋಡಿದಳು. ಆತ ಈಕೆಯತ್ತ ತಿರುಗಿ ನೋಡಲೇ ಇಲ್ಲ.

 ರೂಮಿಗೆ ಬಂದವಳೇ ಅಮ್ಮನ ಮೊಬೈಲ್ ಅನ್ನು ಚಾರ್ಜ್ ಗೆ ಇಟ್ಟು, 

" ಅಮ್ಮಾ , ನಿನಗೆ ಅವರ ಪರಿಚಯ ಯಾವಾಗ ಆಯಿತು? ಯಾಕೋ ನನಗೆ ಅವರದ್ದು ಒಂದೂ ತಲೆಗೆ ಹೋಗುತ್ತಿಲ್ಲ" ಎಂದಳು.

  " ಏನು ಸುರಯ್ಯಾ , ಯಾರ ಬಗ್ಗೆ ಮಾತನಾಡ್ತ ಇದ್ದೀಯಾ?"

" ಅದೇ ಅಮ್ಮಾ... ಈಗ ನಾನು ಚಾರ್ಜರ್ ತಂದಿದ್ದೆ ಅಲ್ವಾ.. ಅವರು ಯಾಕೋ ನನಗೆ ಒಗಟಿನ ಹಾಗೆ ತೋಚಿತು."

 " ಹ್ಞಾಂ ಹೌದು, ರಾತ್ರಿ ಆ ಹೆಂಗಸು ಅಳುತ್ತಿದ್ದಳು. ನಾನೇ ಸಮಾಧಾನ ಮಾಡಿ ಒಳಗೆ ಕಳುಹಿಸಿದೆ. ಬೆಳಿಗ್ಗೆ ಹೋಗಿ ಕೇಳಬೇಕು ಎಂದಿದ್ದೆ ಮರೆತು ಹೋಯಿತು ಕೇಳಲು."

  " ಹೌದಾ, ಹಾಗಿದ್ದಲ್ಲಿ ಅವರ ಮಗನನ್ನು ಎನಿಸಿ ಅಳುತ್ತಿದ್ದದು ಕಾಣಬೇಕು. ಏನಾಗಿದೆ ಆತನಿಗೆ ? ನೋಡಿದರೆ ಏನೂ ಗೊತ್ತಾಗೋದಿಲ್ಲ. ಆದರೆ ಆತನ ನಡವಳಿಕೆಯಲ್ಲಿ ಏನೋ ವ್ಯತ್ಯಾಸ ಇದೆ ಅಲ್ವಾ ಅಮ್ಮಾ? "

" ನಾನು ಆಕೆಯನ್ನು ಮಾತ್ರ ನೋಡಿದ್ದು ಕಣೆ. ಅವನನ್ನು ನೋಡಿಲ್ಲಾ. ಅವರವರ ಕಷ್ಟ ಅವರವರಿಗೇ ಗೊತ್ತು ಅಲ್ವಾ ? ಪಾಪ ಏನೋ ತುಂಬಾ ದುಃಖದಲ್ಲಿ ಇರುವರು. ಸಮಯ ಸಿಕ್ಕರೆ ಮತ್ತೆ ಮಾತನಾಡಿಸಿ ನೋಡೋಣ."

" ಅಮ್ಮಾ, ನೀವಾಗಿಯೇ ಏನು ಕೇಳಬೇಡಿ. ಅವರು ಏನಾದರೂ ಹೇಳಿದ್ದಲ್ಲಿ ಕೇಳಿ ಬೇಕಿದ್ದಲ್ಲಿ. ನಾವೇ ಅವರನ್ನು ಕೇಳಿ ಅವರ ದುಃಖ ಇಮ್ಮಡಿಗೊಳಿಸುವುದು ಸರಿ ಅಲ್ಲ ಅಲ್ವಾ ? 

" ಹ್ಞೂಂ ಸರಿ" ಸುರಯ್ಯಾಳ ಮಾತಿಗೆ ಸಫಿಯ್ಯಾ ತನ್ನ ಸಮ್ಮತಿ ಸೂಚಿಸಿದರು.

  ಅಷ್ಟರಲ್ಲಿ ಆಗಲೇ ಹೊರಹೋಗಿದ್ದ ಖಾದರ್ ಕೂಡ ಒಳಗೆ ಬಂದರು.

 ಅವರು ತಂದಂತಹ ತಿಂಡಿಯನ್ನು ತಿನ್ನಲು ಪ್ರಾರಂಭಿಸಿದರಷ್ಟೆ ಆ ಕಡೆಯಿಂದ ಬೊಬ್ಬೆ ರೀತಿಯಲ್ಲಿ ಕೇಳಿ ಬಂತು. ಅದೇ ಕೋಣೆಯಿಂದಲೇ ಶಬ್ಧ ಕೇಳಿಬರುತ್ತಿದೆ ಎಂದು ಸುರಯ್ಯಾಳಿಗೆ ಮನದಟ್ಟಾಯಿತು. ತಿಂಡಿಯ ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದು ಆಕೆಗೆ ಏನಾಯಿತು ಎಂದು ನೋಡಲು ಹೋಗುತ್ತಾಳೆ. ಅರೇ ಇದೇನಾಗಿದೆ ನನಗೆ, ಅವರ ಬೊಬ್ಬೆ ಕೇಳುತ್ತಿದೆ ಎಂದು ನಾನು ಯಾಕೆ ತಿನ್ನುವ ಅನ್ನವನ್ನು ಬಿಟ್ಟು ಬಂದೆ? ಇದಕ್ಕೂ ಮೊದಲು ನಾನು ಅವರನ್ನು ಕಂಡಿಲ್ಲ, ಮಾತನಾಡಿಲ್ಲ... ಆದರೂ ಅವರಿಗೆ ಏನೋ ತೊಂದರೆ ಆಗಿರಬಹುದು ಎಂದು ಎನಿಸಿದಾಗ ಮನಸ್ಸಿಗೆ ಏನೋ ನೋವು... ಯಾಕೆ ಹೀಗೆ ? ಒಂದು ವೇಳೆ ನನ್ನಂತೆಯೇ ಆತನ ಮನಸ್ಸಿನಲ್ಲೂ ಏನಾದರೂ ಹೇಳಿಕೊಳ್ಳಲಾರದ ವೇದನೆ ಇದೆಯೇ? ಯಾರಲ್ಲೂ ಹೇಳಲಾರದೆ ಕೊರಗಿರುವನೇ .... ಯೋಚಿಸುತ್ತಲೇ ಆ ಕೋಣೆಯತ್ತ ಮುಟ್ಟಿದಳು. ಅಲ್ಲಿ ಕಂಡ ದೃಶ್ಯ ನೋಡಿ ಆಕೆ ಆಶ್ಚರ್ಯ ಚಕಿತಳಾದಳು.

ಬೆಡ್ ಅಲ್ಲಿ ಮಲಗಿದ್ದ ಆ ಯುವಕ ಒಳಬಂದಿದ್ದ ನರ್ಸ್ ಜೊತೆ ಜೋರಾಗಿ ಮಾತನಾಡುತ್ತಿದ್ದನಲ್ಲದೆ ಸಿಕ್ಕ ಸಿಕ್ಕ ವಸ್ತುಗಳನ್ನು ಒಟ್ಟಾರೆ ಎಸೆಯುತ್ತಿದ್ದ‌.. ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿ ಆಗಿ ನೆಲದಲ್ಲಿ ಬಿದ್ದಿದ್ದವು. ಅವರೆಲ್ಲ ಆತನನ್ನು ಕಂಟ್ರೋಲ್ ಮಾಡಲು ನೋಡುತ್ತಿದ್ದರು. ಆದರೆ ಆತ ಹಿಡಿತಕ್ಕೆ ಸಿಗುತ್ತಿರಲಿಲ್ಲ.

ಒಳಗೆ ಹೋಗಲೋ‌ ಬೇಡವೋ ಅನ್ನುವ ದ್ವಂದ್ವ ಮನಸ್ಸಿನಲ್ಲಿಯೇ ಆಕೆ ಒಳ ಹೊಕ್ಕಿದಳು. ಅಷ್ಟರಲ್ಲಿ ಆತನ ತಾಯಿ ಸುರಯ್ಯಾಳನ್ನು ನೋಡಿದರು. ಆಕೆಯ ಬಳಿ ಬಂದವರೇ " ನೋಡು ಆಗ ಆತ ನಿನ್ನಲ್ಲಿ ಮಾತನಾಡಿದೆ ಎಂದಿಯಲ್ಲ , ನೀನು ಒಮ್ಮೆ ಆತನಲ್ಲಿ ಸುಮ್ಮನಾಗಲು ಹೇಳು. ನಿನ್ನ ಮಾತನ್ನಾದರೂ ಕೇಳುತ್ತಾನ ನೋಡೋಣ" ಎಂದು ಮನವಿ ಮಾಡಿದರು.ಅವರ ಮನವಿಗೆ ಆಕೆಗೆ ಸ್ಪಂದಿಸದೇ ಇರಲು ಆಗಲಿಲ್ಲ. ಒಂದು ಮಾತೃ ಹೃದಯ ... ಅದರ ನೋವನ್ನು ನಿವಾರಿಸಲು ನನ್ನಿಂದ ಆಗುವುದಾದರೆ ಖಂಡಿತ ಪ್ರಯತ್ನಿಸುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಂಡಳು.

" ಸರಿ ಆಂಟಿ.. ಒಮ್ಮೆ ಹೇಳಿ ನೋಡುತ್ತೇನೆ. ಆದರೆ ಆತನ ಹೆಸರು ನನಗೆ ತಿಳಿದಿಲ್ಲ.. ಆತನನ್ನು ನಾನು ಕರೆಯುವುದಾದರೂ ಹೇಗೆ? " ಕೇಳಿದಳು.

"ಆತನ ಹೆಸರು ಸಾದ್.. " ಆ ತಾಯಿ ಪ್ರತ್ಯುತ್ತರಿಸಿದರು.

ಬೆಡ್ ಬಳಿ ಹೋದ ಸುರಯ್ಯಾ ಆತನೊಂದಿಗೆ ಸಾದ್... ಇಲ್ಲಿ ನೋಡು.. ಯಾಕೆ ಹೀಗೆ ಮಾಡ್ತಾ ಇದ್ದೀಯ ಹೇಳು? ಏನಾಯಿತು? ನನ್ನಲ್ಲಿ ಹೇಳು... ಏನಾದರೂ ತೊಂದರೆ ಆಗುತ್ತಿದೆಯಾ ಎಂದು ಮೆಲ್ಲನೆ ಕೇಳಿದಳು.

  ಧೈರ್ಯದಿಂದ ಏನೋ ಕೇಳುವುದನ್ನು ಕೇಳಿದ್ದಳು. ಆದರೆ ಒಮ್ಮಲೇ ಈಕೆಯತ್ತ ಆತ ನೋಡಿದ ನೋಟಕ್ಕೆ ಹೆದರಿದಳು. ಅಯ್ಯೋ ನನ್ನನ್ನು ಏನು ಮಾಡದಿದ್ದರೆ ಸಾಕು ಎಂದು ಮನಸಿನಲ್ಲೇ ಪ್ರಾರ್ಥಿಸಿದಳು‌ 

 ಆದರೆ ಆತನ ಮುಖಭಾವ ಬದಲಾಗುತ್ತಿರುವುದು ಆಕೆಯ ಗಮನಕ್ಕೆ ಬಂದಿತು. ನರ್ಸ್ ಗಳಿಗೆ ಹೋದ ಜೀವ ಬಂದಂತಾಯಿತು. ಕಿರುಚಾಡುತ್ತಿದ್ದವನು ತನ್ನೆಲ್ಲಾ ರೋಷ ಕರಗಿದಂತಾಗಿ ಒಮ್ಮೆಲೇ ತಣ್ಣಗಾಗಿದ್ದನು. ನರ್ಸ್ ಗಳು ಕೊಟ್ಟ ಮದ್ದನ್ನೂ ಕುಡಿದನಲ್ಲದೆ ಅವರು ಮಾಡಿದ ಪರೀಕ್ಷೆಗಳಿಗೂ ತಕರಾರು ಮಾಡಲಿಲ್ಲ. ಸುರಯ್ಯಾಳಿಗೆ ಈಗ ಸ್ವಲ್ಪ ಧೈರ್ಯ ಬಂದಿತು.
   
   ಇನ್ನೇನು ಆತ ಶಾಂತನಾದ ಅಲ್ವಾ ತಾನು ಅಲ್ಲಿಂದ ತೆರಳುತ್ತೇನೆ ಎಂದು ನಿಂತಳು. ಇದನ್ನು ಗಮನಿಸಿದ ಆತ 

"ಆಯಿಷಾ , ಹೋಗಬೇಡ ನಿಲ್ಲು" ಎಂದನು.

ಆಯಿಷಾ ಯಾರದು? ಯಾಕೆ ನನ್ನನ್ನು ಆಯಿಷಾ ಎಂದು ಕರೆದ? ಸುರಯ್ಯಾಳ ಮನಸ್ಸು ಯೋಚಿಸಲು ಪ್ರಾರಂಭಿಸಿತು.

ಆಯಿಷಾ ಯಾರು? ನನ್ನನ್ನು ಯಾಕೆ ಆಯಿಷಾ ಎಂದು ಕರೆಯುತ್ತಿದ್ದಾನೆ? ಎಂದು ಸುರಯ್ಯಾಳ ಮನ ಯೋಚಿಸುತ್ತಿತ್ತು.

     "ನಾನು ಆಯಿಷಾ .... ... "
ಅಲ್ಲ ಎಂದು ಹೇಳಲು ಹೊರಟಾಗ ಆತನ ತಾಯಿ ದಯವಿಟ್ಟು ಹೇಳಬೇಡ ಎಂದು ಸಂಜ್ಞೆಯ ಮೂಲಕ ತಿಳಿಸಿದರು. ಅರೆ ಒಳ್ಳೆ ಇಕ್ಕಟ್ಟಿನಲ್ಲಿ ಸಿಲುಕಿದೆ ಅಲ್ವಾ? ಇನ್ನೊಬ್ಬರಿಗೆ ಒಳ್ಳೆಯದು ಮಾಡಲು ಹೋಗಿ ನಾನೇ ಸಿಲುಕಿ ಕೊಂಡೆನೆ? ಏನೋ ಮಾಡಲು ಹೋಗಿ ಏನೋ ಆಯಿತಲ್ವಾ... ಮನದಲ್ಲಿ ಹಲವಾರು ಯೋಚನೆಗಳು ಓಡಾಡುತ್ತಿದ್ದವು. ಯಾಕೋ ಅವನ ಅಮ್ಮನನ್ನು ನೋಡಿದಾಗ ಅಲ್ಲಾ ಎಂದು ಹೇಳಲು ಮನಸ್ಸೇ ಬರಲಿಲ್ಲ.

"ಇಲ್ಲಾ ನಾನು ಹೋಗಲ್ಲ... ಇಲ್ಲೆ ಇದ್ದೇನೆ ಸಾದ್..."

ಆಕೆಯ ಮಾತು ಕೇಳಿ ಆತ ಸ್ವಲ್ಪ ಸಮಾಧಾನಗೊಂಡ. ಹಾಗೆ ಮದ್ದಿನ ಪರಿಣಾಮವೋ ಏನೋ ಆತನಿಗೆ ಅಲ್ಲೇ ನಿದ್ದೆ ಹಿಡಿಯಿತು. ಇನ್ನು ತಾನು ಅಲ್ಲಿಂದ ಹೊರಡುತ್ತೇನೆ ಎಂದು ಎನಿಸಿದ ಆಕೆ ಅಲ್ಲಿಂದ ಎದ್ದಳು.

   ಅಷ್ಟರಲ್ಲಿ ಆಕೆಯ ಬಳಿ ಬಂದ ಆತನ ಅಮ್ಮ ಆಕೆಯ ಕೈ ಹಿಡಿದು " ಮಗಳೇ ನೀನು ಯಾರೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ನಿನಗೂ ನಾವು ಯಾರು ಎಂದು ತಿಳಿದಿಲ್ಲ... ಆದರೂ‌ ನಮಗಾಗಿ ಇಷ್ಟೆಲ್ಲಾ ಮಾಡಿದೆ ಅಲ್ವಾ? ನಿನ್ನ ಉಪಕಾರ ಯಾವತ್ತೂ ಮರೆಯುವುದಿಲ್ಲ" ಎಂದರು.

" ಅರೇ ಆಂಟಿ ಏನೋ ನನ್ನ ಕೈಯಲ್ಲಿ ಆದದ್ದು ನಾನು ಮಾಡಿದೆ ಅಷ್ಟೇ... ಅದರಲ್ಲಿ ಏನೂ ವಿಶೇಷ ಇಲ್ಲ ಆಂಟಿ. ನಾನೆಲ್ಲಿ ಹೋದರೂ ಜನರು ನನ್ನನ್ನು ದೂರವೇ ಇಡುತ್ತಿದ್ದರು. ನನ್ನನ್ನು ಕಂಡು ಅಪಹಾಸ್ಯ ಮಾಡಿದವರೇ ಹೆಚ್ಚು. ಆಗೆಲ್ಲ ನನ್ನ ಮನಸ್ಸಿಗೆ ಎಷ್ಟು ನೋವಾಗುತ್ತಿತ್ತು ನನಗೆ ಮಾತ್ರ ಗೊತ್ತು. ಆದರೆ ಸಾದ್ ನನ್ನೊಂದಿಗೆ ಮಾತನಾಡಿದ ಎನ್ನುವಾಗ ನೀವು ಆತ ಯಾರಲ್ಲೂ ಮಾತನಾಡಲ್ಲ ನಿನ್ನಲ್ಲಿ ಹೇಗೆ ಮಾತನಾಡಿದ ಎಂದು ಕೇಳಿದಿರಲ್ಲ ಆಗ ನನಗೆ ನಿಜವಾಗಿಯೂ ನಂಬಲಿಕ್ಕೆ ಆಗಲಿಲ್ಲ. ನನಗೂ ಬೆಲೆ ನೀಡುವ ಒಂದು ಜೀವ ಇದೆಯಾ ಎಂದು" ಹೇಳಿ ಮುಗುಳ್ನಕ್ಕಳು.

 " ನೋಡು ಸುರಯ್ಯಾ.... ಅಂದ , ಚಂದ ಎಲ್ಲಾ ಯಾಕೆ ? ಮನಸ್ಸು ಒಳ್ಳೆಯದಾಗಿರಬೇಕು. ಯಾಕೆಂದರೆ ಅದೇ ನಮ್ಮ ವ್ಯಕ್ತಿತ್ವದ ಕೈಗನ್ನಡಿ ಅಲ್ವಾ? ನಿನ್ನ ಮನಸು ಬಹಳ ವಿಶಾಲವಿದೆ. ಇತರರಿಗೆ ಒಳ್ಳೆಯದನ್ನು ಬಯಸುವ ಮನಸು ಎಲ್ಲರಲ್ಲೂ ಇರಲ್ಲ."

" ಹಾಗೇನಿಲ್ಲ ಆಂಟಿ... ಏನೋ ಕೈಯಲ್ಲಿ ಆದದ್ದು ಮಾಡಿದೆ. ಆದರೆ ಆತ ನನ್ನನ್ನು ಆಯಿಷಾ ಎಂದು ಭಾವಿಸಿದ್ದಾನೆ. ಯಾರು ಈ ಆಯಿಷಾ? "

" ನನಗಂತೂ ಗೊತ್ತಿಲ್ಲಮ್ಮ. ನಾನು ಇವತ್ತೇ ಆತನ ಬಾಯಿಯಲ್ಲಿ ಆ ಹೆಸರು ಕೇಳಿರುವುದು. ನಾನೂ ಅದೇ ಯೋಚಿಸುತ್ತಿದ್ದೆ."

   " ನಿಮಗೇನು ಬೇಜಾರಿಲ್ಲ ಅಂದ್ರೆ ಒಂದು ಮಾತು ಕೇಳಲಾ? "

" ಹ್ಞಾಂ ಯಾಕೆ ನನಗೆ ಬೇಜಾರು ? ವಿಷಯ ಏನು ಸಂಕೋಚವಿಲ್ಲದೆ ಕೇಳು "

" ಅದೂ ನಿಮ್ಮ ಮಗ ಯಾಕೆ ಹೀಗೆಲ್ಲಾ ಮಾಡ್ತಾನೆ? ಮೊದಲೂ ಹೀಗೆ ಮಾಡ್ತಾ ಇದ್ದನಾ? ಅಥವಾ ಈಗೀಗವ ? "

 " ಇಲ್ಲ ಸುರಯ್ಯಾ.... ನಮಗಿರೋದು ಒಬ್ಬನೇ ಮಗ. ಚೆನ್ನಾಗಿಯೇ ಆತನನ್ನು ಬೆಳೆಸಿದ್ದವು. ಓದುವುದರಲ್ಲಿ ಏನೋ ತುಂಬಾ ಹಿಂದೆ ಉಳಿದಿದ್ದ. ಕಲಿತದ್ದು ಯಾವುದೂ ಆತನ ತಲೆಗೆ ಹತ್ತುತ್ತಿರಲಿಲ್ಲ. ಆದರೂ ನಾವೇನು ಆತನಿಗೆ ಒತ್ತಾಯ ಮಾಡುತ್ತಿರಲಿಲ್ಲ ‌ ಅವನ ತಂದೆಯೂ ಹೇಳುತ್ತಿದ್ದದ್ದು ಅಷ್ಟೇ ಏನೆಂದರೆ ಅವನಿಗೆ ಇಷ್ಟ ಬಂದಿದ್ದು ಮಾಡಲಿ ಎಂದು. ಆದರೆ ಆತ ಡಿಗ್ರಿ ಕಾಲೇಜಿಗೆ ಸೇರಿದ ನಂತರ ಬದಲಾಗಿದ್ದ. ಫೈನಲ್ ಇಯರ್ ಡಿಗ್ರಿ ಇರಬೇಕಾದರೆ ಆತನಿಗೆ ಕಲಿಯುವುದರಲ್ಲಿ ತುಂಬಾ ಆಸಕ್ತಿ ಬಂದಿತ್ತು. ಮೊದಲೆಲ್ಲ ಆತನನ್ನು ಎಬ್ಬಿಸಬೇಕಾದರೆ ನನಗೆ ಸಾಕು ಸಾಕಾಗುತ್ತಿತ್ತು. ಆದರೆ ನಂತರ ನಾನು ಎಬ್ಬಿಸುವ ಮೊದಲೇ ಆತ ಎದ್ದು ಬಿಡುತ್ತಿದ್ದ. ವಾರಕ್ಕೆ ಒಂದು ರಜೆಯಂತೂ ಮಾಡುತ್ತಿದ್ದವನು ಕಾಲೇಜು ರಜೆ ಸಿಕ್ಕಿದರೂ ಯಾಕೋ ಮಂಕಾಗಿ ಬಿಡುತ್ತಿದ್ದ. ಫೈನಲ್ ಇಯರ್ ಕೊನೆಯಾಗುತ್ತಾ ಬರುತ್ತಿದ್ದಂತೆ ಆತ ರೂಮೊಳಗೆ ಹೆಚ್ಚಿನ ಸಮಯವನ್ನು ಕಳೆಯಲು ಫ್ರಾರಂಭಿಸಿದ. ಒಮ್ಮೊಮ್ಮೆ ಊಟವನ್ನೂ ಮಾಡುತ್ತಿರಲಿಲ್ಲ. ಮೊದಲೆಲ್ಲ ನಮ್ಮೊಂದಿಗೆ ಬೆರೆತು ಮಾತನಾಡುತ್ತಿದ್ದವನು ಅದೆಷ್ಟು ಬದಲಾಗಿದ್ದ ಎಂದರೆ ಒಂದು ನಿಮಿಷವೂ ನಮ್ಮೊಡನೆ ಮಾತನಾಡುವುದು ಆತನಿಗೆ ಬೇಡವಾಗಿತ್ತು. ಮಾತನಾಡುವುದು ಬಿಟ್ಟು ಕೋಣೆಯಿಂದ ಹೊರಬರುತ್ತಿರಲಿಲ್ಲ, ಊಟ ಇಲ್ಲ, ನಿದ್ದೆ ಇಲ್ಲ... ಯಾವಾಗಲಾದರೊಮ್ಮೆ ಈ ರೀತಿ ಅನಾಹುತ ಮಾಡುತ್ತಿದ್ದ. ಇದ್ದ ಒಬ್ಬ ಮಗ ಈ ರೀತಿ ಮಾಡಿದರೆ ಹೇಗೆ ಎಂದು ನಾವು ಪಟ್ಟ ಆತಂಕ ಅಷ್ಟಿಷ್ಟಲ್ಲ. ಹಲವಾರು ಸಲ ಆತ್ಮಹತ್ಯೆ ಪ್ರಯತ್ನ ಕೂಡ ಮಾಡಿದ್ದ. ದೇವರ ದಯೆಯಿಂದ ಬದುಕಿ ಬಿಟ್ಟ. ನಾವು ಆತನನ್ನು ತೋರಿಸದ ಜಾಗವೇ ಇಲ್ಲ.... ಎಲ್ಲಾ ಕಡೆ ಮದ್ದು ಮಾಡಿಯೂ ಆಯಿತು. ಆದರೆ ಪ್ರಯೋಜನ ಇಲ್ಲ. ತಿನ್ನದೆ ದೇಹದಲ್ಲಿ ಏನೂ ತ್ರಾಣ ಇಲ್ಲದೆ ಇದ್ದುದರಿಂದ ಅಡ್ಮಿಟ್ ಮಾಡಬೇಕು ಎಂದು ಡಾಕ್ಟರ್ ಹೇಳಿದರು. ಆದರೆ ಇಲ್ಲಿ ಈ ರೀತಿ ಮಾಡುತ್ತಿದ್ದಾನೆ ಎಂದರೆ ಏನು ಮಾಡುವುದು? ಹೇಗೆ ಸರಿ ಮಾಡುವುದು ? ಜೀವನ ಪರ್ಯಂತ ಆತನನ್ನು ಹೀಗೆ ನೋಡಬೇಕಾ ಎಂದು ಹೆದರಿಕೆ ಆಗುತ್ತಿದೆ. ಹೇಗಾದರೂ ಮಾಡಿ ಆತ ಮೊದಲಿನಂತಾಗಬೇಕು ... ಅಷ್ಟೇ ನಾನು ಆ ದೇವರಲ್ಲಿ ಕೇಳಿಕೊಳ್ಳುವುದು ಎಂದು ಎಲ್ಲವನ್ನೂ ಹೇಳಿ ಅವರು ದೀರ್ಘವಾಗಿ ನಿಟ್ಟುಸಿರು ಬಿಟ್ಟರು.

  ಅವರ ಮನದಲ್ಲಿ ಅಡಗಿದ ನೋವು ನೋಡಿ ಸುರಯ್ಯಾಳಿಗೆ ಅವರನ್ನು ಹೇಗೆ ಸಂತೈಸಬೇಕು ಎಂದೇ ತಿಳಿಯಲಿಲ್ಲ.  

" ಆಂಟೀ ಎಲ್ಲಾ ಸರಿಯಾಗಬಹುದು, ನೀವೇನೂ ಆಲೋಚಿಸಬೇಡಿ... ನೀವು ರಾತ್ರಿನೂ ನಿದ್ದೆ ಮಾಡಿಲ್ಲ ಅನ್ಸುತ್ತೆ. ಈಗ ಮಲಗಿಕೊಳ್ಳಿ ... ನಾನು ಸ್ವಲ್ಪ ಮತ್ತೆ ಬರುತ್ತೇನೆ" ಎಂದು ಹೇಳಿ ಹೊರಬಂದಳು...

ಅಲ್ಲಿಂದ ಹೊರಬಂದರೂ ಆಕೆಯ ತಲೆಯಲ್ಲಿ ಅವರು ಆಡಿದ ಮಾತೇ ಓಡಾಡುತ್ತಿದ್ದವು. ಆತನ ಈ ಸ್ಥಿತಿಗೆ ನಿರ್ಧಿಷ್ಟ ಕಾರಣ ತಿಳಿದಿಲ್ಲ ಅವರಿಗೆ‌. ಯಾಕೆ ಅವನು ಹೀಗಾಗಿರಬಹುದು? ಅವನು ನನ್ನನ್ನು ನೋಡಿ ಆಯಿಷಾ ಎಂದು ಕರೆದನಲ್ಲವೇ? ಹಾಗಿದ್ದಲ್ಲಿ ಈ ಆಯಿಷಾಳಿಗೂ ಆತನ ಈ ಸ್ಥಿತಿಗೂ ಸಂಬಂಧ ಇರಬಹುದೇ?? 

ಯಾರು ಈ ಆಯಿಷಾ? ಎಲ್ಲಿರುವಳು ಆಕೆ ? ಈ ಸಮಸ್ಯೆಗಳಿಗೆ ಆಕೆಯೇ ಕಾರಣ ಆಗಿರಬಹುದಾ ? ಎಂದೆಲ್ಲಾ ಯೋಚಿಸುತ್ತಾ ಸುರಯ್ಯಾ ತನ್ನ ಅಜ್ಜ ಅಡ್ಮಿಟ್ ಆಗಿದ್ದ ಆ ರೂಮಿನ ಒಳಗೆ ಹೋದಳು

       ತನ್ನ ಮಗಳು ಏನೋ ಯೋಚಿಸುತ್ತಾ ಕುಳಿತಿರುವುದನ್ನು ನೋಡಿದ ಖಾದರ್ 

" ಅರೇ ಮಗಳೇ , ಏನಾಯಿತು? ಯಾಕೋ ತುಂಬಾ ಟೆನ್ಶನ್ ಅಲ್ಲಿ ಇರುವಂತೆ ಕಾಣುತ್ತಿದೆ. ಏನು ವಿಷಯ? ಎಂದು ಕೇಳಿದರು.

   ಸುರಯ್ಯಾ ತಂದೆಯ ಬಳಿ ನಡೆದ ಎಲ್ಲಾ ವಿಷಯವನ್ನು ಹೇಳಿದಳು.

" ಅಲ್ಲಾ ಸುರಯ್ಯಾ.... ನೀನು ಯಾಕೆ ಸುಮ್ಮನೆ ನಿನ್ನನ್ನು ಆಯಾಷಾ ಅಂತ ಹೇಳಲು ಹೋಗಿದ್ದು? ಇನ್ನು ಏನಾದರೂ ಹೆಚ್ಚು ಕಡಿಮೆಯಾದರೆ ಎಲ್ಲಾ ನಿನ್ನ ತಲೆಯ ಮೇಲೆ ಬರಬಹುದು. ಇಲ್ಲದ ಉಸಾಬರಿ ಯಾಕೆ ನಿನಗೆ " ಸಫಿಯ್ಯಾದ ನೇರವಾಗಿಯೇ ಮಗಳನ್ನು ಗದರಿಸಿದರು.

   " ಅಲ್ಲಾ ಸಫಿಯ್ಯಾ , ಏನೂಂತ ಮಾತನಾಡುತ್ತಾ ಇದ್ದೀಯಾ? ಆಕೆ ಏನು ಮಾಡಿದ್ದಾಳೊ ಸರಿಯಾಗಿಯೇ ಮಾಡಿದ್ದಾಳೆ. ಇನ್ನೊಬ್ಬರ ಕಷ್ಟ ನೋಡಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ವರ್ತಿಸಬಾರದು. ಒಂದು ವೇಳೆ ನಮ್ಮ ಕೈಯಲ್ಲಿ ಏನಾದರೂ ಸಹಾಯ ಮಾಡಲು ಸಾಧ್ಯವಾದರೆ ಮಾಡಬೇಕು. ನೀನು ಒಬ್ಬ ತಾಯಿಯಲ್ಲವೇ ಸಫಿಯ ತಾಯಿಯಲ್ಲವೇ... ಆ ತಾಯಿಯ ವೇದನೆ ಏನಾಗಿರಬಹುದು ಎಂದು ನಿನಗಿಂತಲೂ ಚೆನ್ನಾಗಿ ಯಾರಿಗೆ ಅರ್ಥವಾಗಬಹುದು ಹೇಳು? ಖಾದರ್ ತಮ್ಮ ಪತ್ನಿಗೆ ತಿಳಿ ಹೇಳಿದರು.

   ಸಫಿಯ್ಯಾರಿಗೂ ತನ್ನ ಪತಿ ಹೇಳಿದ್ದು ಸರಿ ಎನಿಸಿತು. ತನ್ನ ಯೋಚನೆಗೆ ತಾನೇ ಅಸಹ್ಯ ಪಟ್ಟುಕೊಂಡರು.

  " ಸುರಯ್ಯಾ, ನಾವಿನ್ನು ಹೋಗೋಣ. ಮನೆಯಲ್ಲಿ ಅಮ್ಮ ಒಬ್ಬರೇ ಇದ್ದಾರಲ್ವ. ತಡ ಮಾಡುವುದು ಸರಿಯಲ್ಲ. ಒಂದುವೇಳೆ ತಾತನ ಡಿಸ್ಚಾರ್ಜ್ ಆಗಿಲ್ಲ ಎಂದರೆ ನಾಳೆ ಬರೋಣ ಆಗಬಹುದಾ ? " 

ತಂದೆಯ ಮಾತಿಗೆ ಸುರಯ್ಯಾ ಸರಿ ಹೋಗೋಣ ಎಂದು ಒಪ್ಪಿದಳು. ತಾತನ ಆರೋಗ್ಯವನ್ನು ಮತ್ತೊಮ್ಮೆ ವಿಚಾರಿಸಿ ಅವರಿಗೆ ಜಾಗ್ರತೆ ಹೇಳಿ ಇಬ್ಬರೂ ಅಲ್ಲಿಂದ ಹೊರಬಂದರು.

   ಹೊರಬರುವಾಗ ಒಮ್ಮೆ ಸಾದ್ ಇದ್ದ ಕೋಣೆಯತ್ತ ನೋಡಿದಳು. ಅವರ ಬಳಿ ಹೋಗಿ ಹೇಳಿ ಬರಲಾ ಎಂದು ಒಮ್ಮೆ ಆಲೋಚಿಸಿದಳು. ಮತ್ತೆ ಮನಸ್ಸು ಬದಲಾಯಿಸಿ ಬೇಡ ನಾಳೆ ಬಂದಾಗ ಹೋಗಿ ನೋಡಿದರಾಯಿತು ಎಂದು ತಂದೆಯ ಹಿಂದೆಯೇ ನಡೆದಳು.

     ********************
     ಅಮ್ಮಾ..... ಅಮ್ಮಾ..... ತನ್ನನ್ನು ಸಾದ್ ಕರೆಯುತ್ತಿರುವುದು ಕೇಳಿಸಿತು ಆಕೆಗೆ. ಆತ ಕರೆದುದನ್ನು ಕೇಳಿ ಮುನೀರಾಳಿಗೆ ತನ್ನ ಎರಡು ಕಿವಿಗಳನ್ನು ತನಗೇ ನಂಬಲಾಗಲಿಲ್ಲ. ಅದೆಷ್ಟು ದಿನಗಳ ಬಳಿಕ ಆತನ‌ ಬಾಯಿಯಿಂದ ಈ ಕೂಗನ್ನು ಕೇಳುತ್ತಿದ್ದೇನೆ. ಈ ಒಂದು ಮಾತಿಗಾಗಿ ಅಲ್ಲವೇ ನಾನು ಇಷ್ಟು ಸಮಯ ಕಾದದ್ದು ಎಂದು ಎನಿಸಿ ಆಕೆಯ ಕಣ್ಣಾಲಿಗಳು ತುಂಬಿ ಬಂದವು. ಮಗನ ಬಳಿ ಹೋಗಿ 

   " ಏನು ಸಾದ್, ಏನಾಯಿತು ಹೇಳು ? " ಎಂದು ಕೇಳಿದಳು.

" ಅಮ್ಮಾ... ಆಯಿಷಾ ಎಲ್ಲಿ ? ನನಗೆ ಆಕೆಯನ್ನು ‌ನೋಡಬೇಕು."

" ಅವಳು ಮತ್ತೆ ಬರುತ್ತೇನೆ ಎಂದು ಹೊರಗೆ ಹೋಗಿದ್ದಾಳೆ. ಸ್ವಲ್ಪ ಹೊತ್ತಿನಲ್ಲಿ ಬರಬಹುದು."

 ಮಗನ ಮನಸ್ಸು ಸಮಾಧಾನವಾಗಲಿ ಎಂದು ಅವರು ಸುಳ್ಳು ಹೇಳಿದರು. ಆದರೆ ಅವರ ಮನಸ್ಸಿನಲ್ಲಿ ಸುರಯ್ಯಾ ಯಾಕೆ ಆಮೇಲೆ ಈ ಕಡೆ ಬರಲಿಲ್ಲ ಅನ್ನುವ ಪ್ರಶ್ನೆಯು ಎದ್ದಿತು. ಅತ್ತಕಡೆ ಹೋಗಿ ನಾನು ಕೇಳೋಣ ಎಂದರೆ ಇವನನ್ನ ಒಬ್ಬನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಏನು ಮಾಡಲಿ ಎಂದು ಯೋಚಿಸುತ್ತಾ ಇರಬೇಕಾದರೆ ಬಾಗಿಲ ಬಳಿ ಯಾರೋ ಬಂದಂತಾಯಿತು. ತಲೆ ಎತ್ತಿ ನೋಡಿದರೆ ತನ್ನ ಪತಿ ಸಮದ್ ಅಲ್ಲಿ ನಿಂತಿದ್ದರು. ಲಗುಬಗೆಯಿಂದ ಬಂದವರೇ

   " ಮುನೀರಾ... ಸಾದ್ನನ್ನು ಈಗ ಡಿಸ್ಚಾರ್ಜ್ ಮಾಡುತ್ತಾರೆ. ಅರ್ಜೆಂಟ್ ಆಗಿ ನಾವು ಬೆಂಗಳೂರಿಗೆ ಹೋಗಬೇಕು. ಅಲ್ಲಿ ಒಬ್ಬ ಫೇಮಸ್ ಸೈಕಿಯಾಟ್ರಿಸ್ಟ್ ಇದ್ದಾರೆ ಅವರ ಅಪಾಯಿಂಟ್ಮೆಂಟ್ ಕೂಡ ಪಡೆದುಕೊಂಡಿದ್ದೇನೆ ನಾವು ಈಗಲೇ ಹೊರಡಬೇಕು. ನೀವು ಬೇಗ ರೆಡಿಯಾಗಿ, ನಾನು ಎಲ್ಲಾ ಪ್ರೊಸೀಜರ್ ಮುಗಿಸಿಕೊಂಡು ಬರುತ್ತೇನೆ." ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದನು. 

" ಇಲ್ಲಿ ಕೇಳಿ, ನಿನಗೆ ನಿಮ್ಮಲ್ಲಿ ಅರ್ಜೆಂಟ್ ಆಗಿ ಮಾತನಾಡಲು ಇದೆ. ಒಂದು ಮುಖ್ಯವಾದ ವಿಚಾರ ಹೇಳಲಿಕ್ಕಿದೆ. "

" ಅಯ್ಯೋ ಮುನೀರಾ... ನೀನು ಹೇಳುವುದನ್ನು ಮತ್ತೆ ಹೇಳುವಿಯಂತೆ. ಕಾರಲ್ಲಿ ಹೋಗಬೇಕಾದರೆ ಹೇಳುತ್ತಾ ಹೋಗು. ಈಗ ನಾನು ಹೇಳಿದ್ದನ್ನು ಮಾಡು " ಎಂದು ಸಮದ್ ಹೊರಗೆ ಹೋದರು.

   ಅಯ್ಯೋ ದೇವರೇ ... ಹೇಳುವುದನ್ನು ಕೇಳುವಷ್ಟು ತಾಳ್ಮೆ ಅವರಲ್ಲಿ ಇಲ್ಲ. ಸುರಯ್ಯಾಳ ವಿಚಾರ ಇವರಲ್ಲಿ ಹೇಳಬೇಕಾಗಿತ್ತು. ಯಾರದೋ ಆಯಿಷಾಳ ಹೆಸರನ್ನು ಹೇಳಿದ್ದಾನೆ ಎಂದು ಹೇಳಬೇಕಿತ್ತು. ಆದರೆ ಈಗ‌ ಬೆಂಗಳೂರಿಗೆ ತೆರಳಿದರೆ ಏನು ಮಾಡುವುದು? ಅಲ್ಲದೆ ಸಾದ್ ಬೇರೆ ಆಕೆಯನ್ನು ಕೇಳುತ್ತಿದ್ದಾನೆ. ಅಲ್ಲೇನಾದರೂ ಗಲಾಟೆ ಮಾಡಿದರೆ ಎಂದು ಮುನೀರ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಕುಳಿತರು.  

    ಸ್ವಲ್ಪ ಹೊತ್ತಿನಲ್ಲಿ ಡಿಸ್ಚಾರ್ಜ್ ಹೊಂದಿದ ಅವರು ಅಲ್ಲಿಂದ ಬೆಂಗಳೂರಿಗೆ ತೆರಳಿದರು. ಇದಾವುದರ ಪರಿವೆಯೇ ಇಲ್ಲದ ಸುರಯ್ಯಾ ತಾನು ನಾಳೆ ಆಯಿಷಾ ಯಾರೆಂದು ಕಂಡುಹಿಡಿಯಬೇಕು. ಆತನನ್ನು ಹೇಗಾದರೂ ಮೊದಲಿನಂತೆ ಮಾಡಬೇಕು . ಆ ಅಮ್ಮನ‌ ಮನಸ್ಸಿಗೆ ಸಮಾಧಾನ ಸಿಗುವಂತಾಗಬೇಕು ಎಂದೆಲ್ಲಾ ಆಲೋಚಿಸುತ್ತಾ ತನ್ನದೆ ಯೋಚನೆಯ ಲೋಕದಲ್ಲಿ ತೇಲಿ ಹೋಗಿದ್ದಳು.

ಏನು ಸುರಯ್ಯಾ ಇನ್ನೂ ಅವನದೆ ಯೋಚನೆಯಲ್ಲಿ ಇದ್ದೀಯಾ ? ಯೋಚನೆ ಮಾಡಬಾರದು ಎನ್ನುತ್ತಿಲ್ಲ, ಆದರೆ ಇಷ್ಟೊಂದು ಆಲೋಚನೆ ಯಾಕೆ ಮಾಡ್ತಾ ಇದ್ದೀಯ ? ತಂದೆಯ ಧ್ವನಿ ಕೇಳಿದಾಗ ಒಮ್ಮೆಲೇ ತನ್ನ ಯೋಚನಾ ಲೋಕದಿಂದ ಸುರಯ್ಯಾ ಹೊರಬಂದಳು.

   "ಇಲ್ಲಾ ಅಪ್ಪ....,ಹಾಗೇನಿಲ್ಲ. ಯಾಕೋ ಸಣ್ಣದಾಗಿ ಯೋಚಿಸುತ್ತಾ ಇದ್ದೆ ಅಷ್ಟೆ."

" ಏನು ಯೋಚಿಸುತ್ತಾ ಇದ್ದೆ ಹೇಳು. ನನ್ನ ಕೈಯಿಂದ ಏನಾದರೂ ಸಲಹೆ ನೀಡಲು ಆಗುವುದಿದ್ದರೆ ಖಂಡಿತ ಪ್ರಯತ್ನಿಸುತ್ತೇನೆ ."

" ಅಪ್ಪಾ ಆತ ಆಯಿಷಾ ಅನ್ನೋ ಹೆಸರನ್ನು ಮಾತ್ರ ಹೇಳಿದ್ದಾನೆ ಅಂದರೆ ಯಾಕೋ ನನಗೆ ಆತನ ಈಗಿನ ಸ್ಥಿತಿಗೆ ಆಕೆಯೇ ಕಾರಣ ಎಂದೆನಿಸುತ್ತಿದೆ. ಆದರೆ ಆತನಿಗೆ ಹೇಗೆ ಇಂತಹ ಪರಿಸ್ಥಿತಿ ಬಂದಿರಬಹುದು? ಇರಬಹುದು? ಆಕೆ ಎಲ್ಲಿ ಇರಬಹುದು ಎಂದು ಹೇಗೆ ಕಂಡುಹಿಡಿಯುವುದು? ಯಾರಲ್ಲಿ ಕೇಳಿದರೆ ತಿಳಿಯಬಹುದು? ಒಂದೂ ಗೊತ್ತಾಗುತ್ತಿಲ್ಲ. ಒಂದು ಸಣ್ಣ ಸುಳಿವು ಸಿಕ್ಕಿದರೂ ಸಾಕಿತ್ತು."

   " ಓಹ್! ಅದುವಾ ನಿನ್ನ ಚಿಂತೆ. ಮಗಳೇ‌ ಈ ಒಂದು ವಯಸ್ಸಿನಲ್ಲಿ ಮಕ್ಕಳು ದಾರಿ ತಪ್ಪುವುದು ಸಹಜವಾಗಿದೆ. ಒಂದುವೇಳೆ ಆತ ಆಯಿಷಾ ಅನ್ನೋ ಹುಡುಗಿಯನ್ನು ಪ್ರೀತಿಸುತ್ತಾ ಇದ್ದನೋ ಏನೋ ಅಲ್ವಾ ? "

    " ಹೌದು ಅಪ್ಪಾ.... ನೀವು ಹೇಳುವುದು ಸರಿ. ಕಾಲೇಜಿಗೆ ಹೋಗಲು ಉದಾಸೀನ ತೋರುತ್ತಿದ್ದ ಆತ ಮತ್ತೆ ಮತ್ತೆ ತಾನಾಗಿಯೇ ಬೇಗ ಹೋಗುತ್ತಿದ್ದನಂತೆ. ರಜೆ ಸಿಕ್ಕಿದರೆ ಮಂಕಾಗಿ ಬಿಡುತ್ತಿದ್ದ ಎಂದು ಅವರು ಹೇಳಿದಾಗಲೇ ನಾನು ಆತ ಯಾವುದೋ ಹೆಣ್ಣಿನ ಆಕರ್ಷಣೆಗೆ ಒಳಗಾಗಿದ್ದಾನೆ ಎಂದು ನಾನು ಅಂದಾಜಿಸಿದ್ದೇನೆ. ಆದರೆ ನನ್ನ ಮನದಲ್ಲಿ ಅಡಗಿದ ಪ್ರಶ್ನೆ ಏನೆಂದರೆ ಆತ ಈ ಹಂತಕ್ಕೆ ತಲುಪಲು ಏನು ಕಾರಣ ಇರಬಹುದು ಅಂತ ಮಾತ್ರ "

" ನೋಡು‌ ನೀನು ಯೋಚಿಸುತ್ತಾ ಕುಳಿತರೆ ಅದಕ್ಕೆ ಪರಿಹಾರ ಸಿಗೋದಿಲ್ಲ. ನಾಳೆ ಆಸ್ಪತ್ರೆಗೆ ಹೋದಾಗ ಆತನ ಅಮ್ಮನಲ್ಲಿ ಆತ ಯಾವ ಕಾಲೇಜಿನಲ್ಲಿ ಕಲಿತಿದ್ದು ಎಂದು ಎಲ್ಲಾ ವಿಷಯ ಕೇಳು. ಆಗ ಏನಾದರೂ ಸುಳಿವು ಸಿಗಬಹುದು ಸರೀನಾ ? "


" ಹ್ಞಾಂ ಹೌದು ಅಪ್ಪಾ.... ನೀವು ಹೇಳಿದ್ದು ಸರಿ. ನಾಳೆ ನಾನು ಹಾಗೆ ಮಾಡುತ್ತೇನೆ. "

" ಒಂದು ವೇಳೆ ವಿಷಯ ತಿಳಿದರೆ ನೀನು ಆ ಹುಡುಗಿಯನ್ನು ಪತ್ತೆ ಹಚ್ಚುತ್ತೀಯಾ ? "

 " ಹ್ಞಾಂ ಅಪ್ಪಾ... ಒಂದುವೇಳೆ ನನ್ನ ಕೈಯಲ್ಲಿ ‌ಸಾಧ್ಯವಿದ್ದರೆ ಖಂಡಿತವಾಗಿಯೂ ಆಕೆಯನ್ನು ಪತ್ತೆ ಹಚ್ಚುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತೇನೆ." 


  ಮಗಳ ಧೃಢವಾದ ಮಾತು ಕೇಳಿ ಖಾದರ್ ಒಮ್ಮೆ ಬೆರಗಾದರು. ಬೇಡ ಎಂದು ಹೇಳಲು ಅವರಿಗೆ ಮನಸ್ಸು ಬರಲಿಲ್ಲ. ಪ್ರತಿ ದಿನವೂ ತನ್ನನ್ನು ಯಾರಾದರೂ ಅಪಮಾನಿಸಿದರು ಎಂದು ಕೊರಗುತ್ತಿದ್ದ ತನ್ನ ಮಗಳು ಇಂದು ತನ್ನದೆಲ್ಲವನ್ನೂ ಮರೆತು ಇತರರ ಒಳ್ಳೆಯದು ಬಯಸುತ್ತಿದ್ದಾಳೆ. ಯಾಕೆ ಆಕೆ ಈ ವಿಚಾರದಲ್ಲಿ ಇಷ್ಟೊಂದು ಆಸಕ್ತಿ ತೋರಿಸುತ್ತಿದ್ದಾಳೆ ಎಂದು ನನಗೂ ತಿಳಿದಿಲ್ಲ. ಆದರೆ ಆಕೆಗೆ ಈ ವಿಚಾರದಲ್ಲಿ ಏನೂ ಕೇಡು ಉಂಟಾಗದಿರಲಿ ಎಂದು ಅವರ ಮನಸು ಬಯಸಿತು. 

" ಸರಿ, ಉಳಿದದ್ದನ್ನು ನಾಳೆ ನೋಡೋಣ . ಈಗ ಮಲಗಿಕೋ " ಎಂದವರೇ ಆಕೆಯ ಕೋಣೆಯಿಂದ ಹೊರಬಂದರು.


ತಂದೆ ಹೋದುದನ್ನು ಕಂಡ ಸುರಯ್ಯಾ ಮೆಲ್ಲನೆ ಕಬೋರ್ಡ್ ಬಳಿ ಬಂದು ಒಳಗಿದ್ದ ತನ್ನ ಡೈರಿಯನ್ನು ತೆಗೆದಳು. ಅದರ ಪುಟಗಳನ್ನು ತಿರುಗಿಸಿದವಳೇ ಒಂದೆಡೆ ಸಾದ್ ಎಂದು ಬರೆದು ಕೆಳಗೆ ಒಂದು ಬಾಣದ ಗುರುತು ಹಾಕಿ ಅದರ ಕೆಳಗೆ ಆಯಿಷಾ ಎಂದು ಬರೆದಳು. ಅದರ ಮುಂದೆ ಪ್ರಶ್ನಾರ್ಥಕ ಚಿಹ್ನೆ ಹಾಕಿದಳು. ತನಗೆ ಈಗ ಮೊದಲು ಆಯಿಷಾ ಯಾರೆಂದು ಕಂಡುಹಿಡಿಯಬೇಕು. ಅದಕ್ಕಿರುವ ದಾರಿ ಒಂದೇ. ಆತ ಯಾವ ಕಾಲೇಜಿನಲ್ಲಿ ಕಲಿತಿದ್ದು ಎಂದು ತಿಳಿದುಕೊಳ್ಳಬೇಕು ಎಂದು ಎನಿಸಿ ಆಯಿಷಾ ಎಂದು ಬರೆದುದರ ಅಡಿಯಲ್ಲಿ ಕಾಲೇಜು ಎಂದು ಬರೆದಳು. ನಂತರ ತನ್ನ ಡೈರಿಯನ್ನು ಮುಚ್ಚಿ ಯಥಾ ಸ್ಥಾನದಲ್ಲಿ ಇಟ್ಟಳು. ಹಾಗೇ ಹೋಗಿ ನಿದ್ರೆಗೆ ಶರಣಾದಳು.
      ******************
 
          "ಸುರಯ್ಯಾ ಬೇಗ ಹೊರಡು. ಅಜ್ಜನನ್ನು ಮತ್ತೆ ಡಿಸ್ಚಾರ್ಜ್ ಮಾಡುತ್ತಾರಂತೆ. ಅದರ ಒಳಗೆ ಹೋಗಿ ಬರೋಣ." ತಂದೆ ಹೇಳಿದ ಮಾತಿಗೆ ಸರಿ ಎಂದು ಬೇಗನೇ ಹೊರಡಿದಳು.

        ಅಜ್ಜನನ್ನು ನೋಡಿ ಮಾತನಾಡಿಸಿ ಎಲ್ಲಾ ಆದ ನಂತರ ಸುರಯ್ಯಾ ತನ್ನ ಅಮ್ಮನ ಬಳಿ ಸಾದ್ ಬಗ್ಗೆ ವಿಚಾರಿಸಿದಳು. ತನಗೇನು ತಿಳಿದಿಲ್ಲ, ತಾನು ಆ ಕಡೆ ಹೋಗಿಲ್ಲ ಎಂದು ಸಫಿಯ್ಯಾ ಮರುನುಡಿದರು.

ಸರಿ ನಾನೇ ಅಲ್ಲಿ ಹೋಗಿ ವಿಚಾರಿಸಿ ಬರುತ್ತೇನೆ ಎಂದು ಅಮ್ಮನಲ್ಲಿ ಹೇಳಿದ ಸುರಯ್ಯಾ ಸಾದ್ ಇದ್ದ ಕೋಣೆಯತ್ತ ಹೋದಳು. ಆ ಕೋಣೆಯ ಬಾಗಿಲು ಹಾಕಿತ್ತು. ಮೆಲ್ಲನೆ ಬಾಗಿಲನ್ನು ದೂಡಿದಳು. ಒಳಗೆ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ಬೆಡ್ ಖಾಲಿ ಇದ್ದು ಆ‌ ರೂಮಿನಲ್ಲಿ ಯಾರೂ ಇರಲಿಲ್ಲ. ಆಕೆ ನೇರವಾಗಿ ಕೌಂಟರ್ ಹತ್ತಿರ ಹೋದವಳೇ ಅಲ್ಲಿ ಇದ್ದ ರಿಸೆಪ್ಷನಿಸ್ಟ್ ಬಳಿ ಸಾದ್ ಇದ್ದ ರೂಮಿನ ನಂಬರ್ ಹೇಳಿ ಅವರು ಎಲ್ಲಿ? ಎಂದು ವಿಚಾರಿಸಿದಳು. ಅದಕ್ಕೆ ಪ್ರತಿಯಾಗಿ ಆಕೆ ಅವರು ನಿನ್ನೆನೇ ಡಿಸ್ಚಾರ್ಜ್ ಆಗಿ ಹೋಗಿದ್ದಾರಲ್ಲ ಮ್ಯಾಡಂ ಆಕೆಯನ್ನು ಎಂದು ನಯವಾಗಿಯೇ ಉತ್ತರಿಸಿದಳು.

ಏನು ಡಿಸ್ಚಾರ್ಜ್ ಆಗಿ ಹೋಗಿದ್ದಾರ ? ಅಯ್ಯೋ ದೇವರೇ ಇನ್ನೇನು ಮಾಡುವುದು ಎಂದು ಯೋಚಿಸಿದ ಸುರಯ್ಯ ಅಲ್ಲೇ ಕುಸಿದಳು... 

     ಒಂದು ಕ್ಷಣ ತನ್ನನ್ನು ತಾನು ಸಾವರಿಸಿಕೊಂಡವಳೇ ಆಕೆಯ ಬಳಿ ಹೋಗಿ

  " ಮ್ಯಾಮ್ ಪ್ಲೀಸ್, ನನಗೆ ಅವರ ಕಾಂಟಾಕ್ಟ್ ಡೀಟೈಲ್ಸ್ ಏನಾದರು ಕೊಡ್ತೀರಾ " ಎಂದು ಕೇಳಿದಳು.

    " ಸ್ವಾರಿ ಮ್ಯಾಡಮ್, ನಾವು ಹಾಗೆಲ್ಲ ಡೀಟೈಲ್ಸ್ ಕೊಡೋದಕ್ಕೆ ಆಗೋಲ್ಲ. ಅದು ನಮ್ಮ ರೂಲ್ಸ್ಗೆ ವಿರುಧ್ಧವಾಗಿದೆ. "

   " ಪ್ಲೀಸ್ ಅರ್ಥ ಮಾಡಿಕೊಳ್ಳಿ... ತುಂಬಾ ಅರ್ಜೆಂಟ್ ಇದೆ. ಒಂದ ಮುಖ್ಯ ವಿಚಾರ ಕೇಳೋದಿಕ್ಕೆ ಇತ್ತು. ಅಟ್ಲೀಸ್ಟ್ ಅವರ ನಂಬರ್ ಆದರೂ ಕೊಡ್ತೀರಾ ಪ್ಲೀಸ್ ."

" ಸ್ವಾರಿ ಮ್ಯಾಡಮ್, ನೀವು ಸ್ವಲ್ಪ ಅರ್ಥ ಮಾಡಿಕೊಳ್ಳಿ. ಒಂದು ವೇಳೆ ನಾನು ಹಾಗೆ ಕೊಟ್ಟಿದ್ದೆ ಆದಲ್ಲಿ ನನ್ನ ಕೆಲಸ ನಾನು ಕಳೆದುಕೊಳ್ಳಬೇಕಾಗುತ್ತದೆ." ಆಕೆ ಸ್ವಲ್ಪ ಗಡುಸಾಗಿಯೇ ಹೇಳಿದಳು.

ಇನ್ನು ನಾನು ಆಕೆಯೊಂದಿಗೆ ಮಾತನಾಡಿದರೆ ಖಂಡಿತ ಆಕೆ‌ ನನಗೆ ಬೈಯ್ಯುವಳು ಎಂದು ಅರ್ಥೈಸಿದ ಸುರಯ್ಯಾ ಅಲ್ಲಿಂದ ನೇರವಾಗಿ ತನ್ನ ಕೋಣೆಯತ್ತ ಹೆಜ್ಜೆ ಹಾಕಿದಳು.

   ಛೇ ಏನಾಯಿತು? ನನಗೆ ತಿಳಿಯದೆ ಬಂದಂತಹ ಪರಿಸ್ಥಿತಿ ಒಂದು ಹಾಗೇ ತಿಳಿಯದೆ ಕೈ ಜಾರಿ ಹೋಯಿತು. ಯಾಕೆ ಹೀಗಾಯಿತು ? ಎಲ್ಲದಕ್ಕೂ ಮುಕ್ತಾಯ ಹಾಡಬೇಕು ಎಂದು ಎನಿಸಿದ್ದಾಗ‌ ಪ್ರಾರಂಭದಲ್ಲಿಯೇ ಅದರ ಅಂತ್ಯವಾಯಿತಲ್ಲ. ನನ್ನಲ್ಲಿ ಅವರು ಡಿಸ್ಚಾರ್ಜ್ ಆಗುವ ಮಾತನ್ನು ಏನೂ ಹೇಳಲಿಲ್ಲ. ಇಲ್ಲದಿದ್ದಲ್ಲಿ ಅವರ ಮೊಬೈಲ್ ನಂಬರ್ ಆದರೂ ತೆಗೊಳುತ್ತಿದ್ದೆ ನಾನು. ಈಗ ಅವರು ಎಲ್ಲಿ ಹೋಗಿರಬಹುದು ? ಒಂದು ವೇಳೆ ಆತ ಮತ್ತೆ ಆಯಿಷಾಳ ಬಗ್ಗೆ ಕೇಳಿ ಏನಾದರೂ ಅನಾಹುತ ಮಾಡಿಕೊಂಡರೆ ? ಮನದಲ್ಲಿ ನೂರಾರು ಪ್ರಶ್ನೆಗಳು ಸುತ್ತುತ್ತಿದ್ದವು.

    ಹಾಗೇ ನಡೆದುಕೊಂಡು ಬರುವಾಗ ದೂರದಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ನೋಡಿ ಸುರಯ್ಯಾಳಿಗೆ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್ ನಂತೆ ಆಯಿತು. ಖಂಡಿತವಾಗಿಯೂ ಅವರಿಗೆ ಸಾದ್ ಮತ್ತು ಅವನ ಅಮ್ಮನ ಬಗೆಗಿನ ವಿಷಯ ತಿಳಿದಿರಬಹುದು. ಅವರಲ್ಲಿಯೇ ಕೇಳಿ ನೋಡೋಣ. ಏನಾದರೂ ವಿಷಯ ತಿಳಿಯಬಹುದು ಎಂದು ಅವರತ್ತ ನಡೆದಳು.

      ******************

      ಬೆಂಗಳೂರು ‌ಹೋಗಿ ತಲುಪಿದ ಸಾದ್ ಕುಟುಂಬ ಸಮದ್ ಗೆಳೆಯನೊಬ್ಬನ ಮನೆಯಲ್ಲಿ ತಂಗಿದ್ದರು. ಹೋದಂದು ರಾತ್ರಿ ಅಲ್ಲಿ ವಾಸ್ತವ್ಯ ಹೂಡಿ ಮರುದಿನ ಡಾಕ್ಟರ್ ಬಳಿ ಹೋಗುವುದು ಎಂದು ನಿರ್ಧರಿಸಿದ್ದರು.

   ಪತಿಯ ಬಳಿ ಆತ ಆಯಿಷಾ ಅನ್ನೋ ಹುಡುಗಿಯ ಹೆಸರನ್ನು ಹೇಳಿದ್ದಾನೆ ಎಂದು ಹೇಳಬೇಕು ಎಂದು ಎನಿಸಿದ್ದ ಮುನೀರಾಳಿಗೆ, ಸಮದ್ ಬಳಿ ಹೇಳಲೇ ಸಮಯ ಸಿಕ್ಕಿರಲಿಲ್ಲ. ಪ್ರಯಾಣ ಮಾಡುವಾಗ ಸಾದ್ ಎಚ್ಚರದಿಂದ ಇದ್ದಿದ್ದು ಮಾತನಾಡಲು ಸಾಧ್ಯವಾಗಿರಲಿಲ್ಲ. ಹೇಳುವುದಿದ್ದಲ್ಲಿ ಇದೇ ಸೂಕ್ತ ಸಮಯ . ಈಗಲೇ ಹೇಳಿಬಿಡಬೇಕು ಎಂದು ಎನಿಸಿ ಮುನೀರಾ ಬಾಲ್ಕನಿಯಲ್ಲಿ ನಿಂತಿದ್ದ ಸಮದ್ ಬಳಿ ಹೋದಳು.

    ಹತ್ತಿರ ಬಂದು ನಿಂತಿದ್ದ ಹೆಂಡತಿಯತ್ತ ಏನು ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದ ಸಮದ್.

 " ಅದೂ.... ನಾನು ನಿಮ್ಮಲ್ಲಿ ಒಂದು ವಿಷಯ ಹೇಳಬೇಕು ಎಂದು ಎನಿಸಿದ್ದೆ. ಆದರೆ ಸರಿಯಾದ ಸಮಯ ದೊರಕಲಿಲ್ಲ."

   " ಹ್ಞಾಂ ಹೌದು, ನಿನ್ನೆಯ ಗಡಿಬಿಡಿಯಲ್ಲಿ ಏನೂ ಕೇಳಲು ಆಗಲಿಲ್ಲ. ಈಗ ಹೇಳು ಏನು ವಿಷಯ? "

 ಮುನೀರ ಆಸ್ಪತ್ರೆಯಲ್ಲಿ ‌ನಡೆದುದನ್ನು ಎಲ್ಲಾ ಪತಿಯೊಂದಿಗೆ ಹೇಳಿದಳು. ಆಕೆಯ ಮಾತುಗಳನ್ನು ಆಲಿಸಿದ ಸಮದ್

   " ಅರೇ ಮುನೀರಾ.. ಆತನ ಈ ಸ್ಥಿತಿಗೆ ಆ ಹೆಣ್ಣು ಕಾರಣ ಇರಬಹುದು ಎಂದು ನಿನಗೆ ಅನಿಸಿದೆಯಾ ? ನನಗೆ ಹಾಗೆ ಅನಿಸುತ್ತಿಲ್ಲ. ಒಂದು ಹೆಣ್ಣಿಗಾಗಿ ತನ್ನ ಮನಸ್ಸಿನ ಹಿಡಿತವನ್ನು ನನ್ನ ಮಗ ಎಂದೂ ಕಳೆದುಕೊಳ್ಳಲಾರ. "

  " ಅರ್ಥ ಮಾಡಿಕೊಳ್ಳಿ ರೀ. ಇಲ್ಲದಿದ್ದಲ್ಲಿ ಆತ ಯಾಕೆ ಆ ಹುಡುಗಿ ಹೆಸರು ಹೇಳಿದ. ಅಲ್ಲದೆ ಆಸ್ಪತ್ರೆಯಲ್ಲಿ ಸಿಕ್ಕ ಹುಡುಗಿಯನ್ನು ಈ ಮೊದಲು ನಾನು ಎಲ್ಲಿಯೂ ನೋಡಿಲ್ಲ. ಹಾಗೆಲ್ಲ ಇರುವಾಗ ನನಗೆ ಯಾಕೋ ತುಂಬಾ ‌ಗೊಂದಲಮಯವೆನಿಸುತ್ತಿದೆ‌."

 ಈಗ ಯೋಚಿಸುವ ಸರದಿ ಸಮದ್ ನದ್ದು ಆಗಿತ್ತು. ಆದರೂ ಆತ ಅದನ್ನು ಒಪ್ಪಲು ತಯಾರಿರಲಿಲ್ಲ. 

" ನೋಡು ಮುನೀರಾ, ಈ ಮಾತನ್ನು ನೀನು ಯಾರಲ್ಲೂ ಹೇಳಲು ಹೋಗಬೇಡ. ನನ್ನ ಮಗ ಒಂದು ಹೆಣ್ಣಿಗೋಸ್ಕರ ಈ ರೀತಿ ಹುಚ್ಚನಂತೆ ಆಗಿದ್ದಾನೆ ಎಂದರೆ ಸಮಾಜದಲ್ಲಿ ನನ್ನ ಮರ್ಯಾದೆ ಏನಾಗಬಹುದು ? ಜನರು ನನ್ನತ್ತ ನೋಡಿ ನಗಾಡಲಿಕ್ಕೆ ಇಲ್ಲವೇ ? ನೀನೇ ಒಮ್ಮೆ ಆಲೋಚಿಸಿ ನೋಡು "

    ಮುನೀರ ಏನೂ ಹೇಳದೆ ಸುಮ್ಮನಾದಳು. ಇನ್ನು ತಾನು ಅದೆಷ್ಟು ಹೇಳಿದರೂ ಅದು ಕೋಣದ ಎದುರು ಕಿನ್ನರಿ ಬಾರಿಸಿದಂತೆ ಎಂದು ಅವಳು ಅರಿತುಕೊಂಡಳು. ಮಾಡುವುದು ಏನಿದ್ದರೂ ನಾನೊಬ್ಬಳೇ ಮಾಡಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡಳು.

ಅಷ್ಟರಲ್ಲಿ ಕೆಳಗಡೆ ಸಮದ್.. ಸಮದ್.... ಎಂದು ಕರೆಯುವುದು ಕೇಳಿಸಿತು. ಯಾರು ನನ್ನನ್ನು ಹೀಗೂ ಕರೆಯುತ್ತಿದ್ದಾರೆ ಎಂದು ನೋಡಲು ಸಮದ್ ಕೆಳಗಡೆ ಹೋದನು.

      ಅಲ್ಲಿ‌ ಹೋಗಿ ನೋಡಿದಾಗ ತನ್ನ ಗೆಳೆಯನ ಜೊತೆ ಮತ್ತೊಬ್ಬ ಅಪರಿಚಿತ ವ್ಯಕ್ತಿ ಇದ್ದರು.  

  ಸಮದ್ ಗೆಳೆಯ ಫಾರೂಕ್ ಸಮದಿಗೆ ಅವರ ಪರಿಚಯ ಮಾಡಿಸಿದ.

  " ಸಮದ್ , ಈತ ನನ್ನ ಆತ್ಮೀಯ ಗೆಳೆಯ ಉಸ್ಮಾನ್. ನಿನ್ನ ಮಗನ ವಿಷಯವನ್ನು ಏನೂ ಮುಚ್ಚುಮರೆಯಿಲ್ಲದೆ ಆತನಲ್ಲಿ ನಾನು ಹೇಳಿರುವೆನು. ಆಗ ಈತ‌ ನನಗೆ ಒಂದು ಸಲಹೆ ನೀಡಿದ. ಯಾಕೋ ನನಗೂ ಅದೇ ಸರಿ ಎಂದೆನಿಸಿತು. ಹಾಗೇ ನಿನ್ನಲ್ಲಿ ಕೇಳೋಣ ಎಂದು ಭಾವಿಸಿದೆ."

 " ಏನು ಸಲಹೆ ? "

" ಅದೂ ... ಈ ಊರಿನಲ್ಲಿ ಒಬ್ಬ ಪ್ರಸಿದ್ಧ ಮಂತ್ರವಾದಿ ಇದ್ದಾರೆ. ಅವರ ಬಳಿ ಒಮ್ಮೆ ಹೋದರೆ ಹೇಗೆ ? "

" ಇಲ್ಲಾ ಫಾರೂಕ್, ನಾವು ಡಾಕ್ಟರ್ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದೇವೆ. ಆ ಡಾಕ್ಟರಿಗೆ ತೋರಿಸಲೆಂದೆ ಅಲ್ಲವೇ ಅಷ್ಟು ದೂರದಿಂದ ನಾವು ಇಲ್ಲಿಗೆ ಬಂದಿದ್ದು ."

  " ನಾನು ಹೇಳುವುದನ್ನು ಗಮನವಿಟ್ಟು ಕೇಳು. ನೀನು ಇದೀಗಾಗಲೇ ಎಷ್ಟು ಡಾಕ್ಟರ್ಸಿಗೆ ತೋರಿಸಿದ್ದೀಯಾ ಹೇಳು ? ಏನಾದರೂ ಪ್ರಯೋಜನ ಇದೆಯೇ ಹೇಳು ? ಇವರ ಬಳಿ ಒಮ್ಮೆ ಹೋಗಿ ನೋಡು. ಆಗಿಲ್ಲ ಎಂದಾದಲ್ಲಿ ಮತ್ತೆ ಬೇಡ. "

  ಗೆಳೆಯನ ಮಾತು ಯಾಕೋ ಸಮದಿಗೆ ಸರಿ ಎಂದು ತೋಚಿತು. ಅವನು ಹೇಳಿದ ಹಾಗೆ ಇದೊಂದು ಬಾರಿ ಮಂತ್ರವಾದಿಯ ಬಳಿ ಹೋಗೋಣ. ಒಂದು ವೇಳೆ ಏನು ಪರಿಹಾರ ‌ದೊರಕದೆ ಇದ್ದಲ್ಲಿ ಡಾಕ್ಟರ್ ಬಳಿ ಹೋಗೋಣ ಎಂದು ಆತನ ಮನಸ್ಸು ಯೋಚಿಸಿತು.

 " ನೀನು ಹೇಳಿದ್ದು ಸರಿ ಫಾರೂಕ್. ಒಮ್ಮೆ ಅವರ ಬಳಿ ಹೋಗಿ ಮಾತನಾಡಿ ‌ನೋಡೋಣ. ಯಾವಾಗ ಹೋಗಬೇಕು ಹೇಳು? "

 " ತಡ ಮಾಡುವುದು ಏನೂ ಬೇಡ. ಇವತ್ತು ಸಂಜೆ ನಾವು ಹೋಗೋಣ. ಆಗುವುದಾದರೆ ಹೇಳಿಬಿಡು."

" ಸರಿ, ಸಂಜೆ ಹೋಗೋಣ " ಎಂದು ಸಮದ್ ತನ್ನ ಒಪ್ಪಿಗೆ ಸೂಚಿಸಿ ತನ್ನ ಪತ್ನಿಯ ಬಳಿ ಈ ವಿಚಾರ ಹೇಳಬೇಕೆಂದು ಮೇಲೆ ಬಂದನು.

  ಬಂದವನೇ ಪತ್ನಿಯನ್ನು ಕರೆದು ಅವರು ಹೇಳಿದ ಸಮಾಚಾರವನ್ನು ತಿಳಿಸಿದನಲ್ಲದೆ ತಾನು ಇಂದು ಸಂಜೆ ಅಲ್ಲಿಗೆ ಹೋಗುವುದಾಗಿಯೂ ತಿಳಿಸಿದ. ತನ್ನ ಪತಿಯ ಮಾತುಗಳನ್ನು ಕೇಳಿ ಮುನೀರಾ ಅವಕ್ಕಾದಳು.

    *****************

  ದೂರದಲ್ಲಿ ಬರುತ್ತಿದ್ದ ಆ ವ್ಯಕ್ತಿಯನ್ನು ನೋಡಿ ಸುರಯ್ಯಾಳಿಗೆ ಒಮ್ಮೆಲೇ ಖುಷಿಯಾಯಿತು. ವೇಗದ ನಡುಗೆಯಲ್ಲಿ ಅವರ ಬಳಿ ತಲುಪಿದಳು. ತಲುಪಿದವಳೇ *ಸಿಸ್ಟರ್* ಎಂದು ಅವರನ್ನು ಕರೆದಳು.

   ಸಾದ್ ಅಂದು ಗಲಾಟೆ ಮಾಡುತ್ತಿದ್ದಾಗ ಆ ನರ್ಸ್ ಆತನ ರೂಮಿನಲ್ಲಿ ಇದ್ದದ್ದು ಸುರಯ್ಯಾಳು ಕಂಡಿದ್ದಳು. ಖಂಡಿತವಾಗಿಯೂ ಅವರಿಗೆ ಏನಾದರೂ ತಿಳಿದಿರಬಹುದು ಎಂಬ ಆಶಯದಿಂದ ಅವರ ಬಳಿ ಕೇಳಲು ಬಂದಿದ್ದಳು.

  ನರ್ಸ್ ತನ್ನನ್ನು ಯಾರು ಕರೆಯುವುದು ಎಂದು ನೋಡಿದಳು. ಸುರಯ್ಯಾಳನ್ನು ನೋಡಿದ ತಕ್ಷಣ ಆಕೆಗೆ ಪರಿಚಯ ಸಿಕ್ಕಿತು. ಆಕೆ ನಯವಾಗಿಯೇ 

 " ಏನು ಹೇಳಿ ? ಏನು ಬೇಕಾಗಿತ್ತು ? " ಎಂದು ಕೇಳಿದಳು.

ಸುರಯ್ಯಾ ತಡಮಾಡದೆ ಎಲ್ಲಾ ವಿಷಯ ಕೇಳಿ ಬಿಟ್ಟಳು. ಅದಕ್ಕೆ ಪ್ರತಿಯಾಗಿ ನರ್ಸ್ 

 " ಓಹ್! ಅವರ ಬಗ್ಗೆ ವಿಚಾರಿಸುತ್ತ ಇದ್ದೀರಾ ? ಅವರು ನಿನ್ನೆಯೇ ಡಿಸ್ಚಾರ್ಜ್ ಆಗಿ ಹೋಗಿದ್ದಾರಲ್ಲ"

" ಹ್ಞಾಂ, ಆ ವಿಚಾರ ತಿಳಿಯಿತು. ಆದರೆ ಎಲ್ಲಿ ಹೋದರು ಎಂದು ಏನಾದರೂ ತಿಳಿದಿದೆಯೇ ? "
  " ಹ್ಞಾಂ .... ಇಲ್ಲಿಯ ಡಾಕ್ಟರ್ ಅವರಿಗೆ ಬೆಂಗಳೂರಿಗೆ ಹೋಗಿ ಡಾಕ್ಟರ್ ನಿರಂಜನ್ ಅವರ ಬಳಿ ತೋರಿಸಿ ಎಂದು ಸಲಹೆ ನೀಡಿದ್ದರು. ಅದರಂತೆ ಅವರು ನಿನ್ನೆ ಸಂಜೆ ಇಲ್ಲಿಂದ ತೆರಳಿದ್ದಾರೆ. ಬಹುಷಃ ಅವರು ಇವತ್ತು ಆ ಡಾಕ್ಟರಿಗೆ ತೋರಿಸಿರಬಹುದು."

  " ಥ್ಯಾಂಕ್ಯೂ ಸೋ ಮಚ್ ಸಿಸ್ಟರ್ , ನಿಮ್ಮಿಂದ ಬಹಳ ಉಪಕಾರವಾಯಿತು."

  " ಇಟ್ಸ್ ಓಕೆ, ಅದರಲ್ಲೇನು ವಿಶೇಷ ಇಲ್ಲ. ನನಗೇನು ತಿಳಿದಿತ್ತೋ ಅದೇ ಹೇಳಿದೆ ಅಷ್ಟೇ. ಓಕೆ ಬಾಯ್" ಎಂದು ಹೇಳಿ ಆಕೆ ಮುಂದೆ ನಡೆದಳು.

     ಸುರಯ್ಯಾಳು ತನ್ನ ತಾತ ಇರುವ ಕೋಣೆಯತ್ತ ನಡೆದಳು. ನಿರಾಶ ಭಾವದಿಂದ ಬರುತ್ತಿರುವ ತನ್ನ ಮಗಳನ್ನು ನೋಡಿ ಖಾದರ್ ಏನಾಯಿತು ಎಂದು ವಿಚಾರಿಸಿದರು. ಆಕೆ ನಡೆದುದು ಎಲ್ಲವನ್ನೂ ಅವರಿಗೆ ತಿಳಿಸಿದಳು‌.

" ಇರಲಿ ಮಗಳೇ ನಡೆದದ್ದು ಎಲ್ಲಾ ಕೆಟ್ಟ ಕನಸು ಎಂದು ಮರೆತುಬಿಡು. ಆ‌ ಸೃಷ್ಟಿಕರ್ತನ ದಯೆಯಿಂದ ಆತ ಖಂಡಿತ ಮೊದಲಿನಂತೆ ಆಗುವನು."

   " ಅದೇ ಅಪ್ಪಾ... ನಾನು ಅಷ್ಟೇ ಬಯಸೋದು. ಎಲ್ಲಿದ್ದರೂ ತಾಯಿ ಮತ್ತು ಮಗ ಇಬ್ಬರೂ ಸುಖವಾಗಿರಲಿ ಅಷ್ಟೇ ನಾನು ಆ ದೇವರಲ್ಲಿ ಕೇಳಿಕೊಳ್ಳುವುದು" ಎಂದಳು ಸುರಯ್ಯಾ.

 ನನ್ನ ಬಾಳಿನಲ್ಲಿ ತಿಳಿಯದೇ ಬಂದಂತಹ ಅಧ್ಯಾಯ ಒಂದು ಹಾಗೇ ಮುಕ್ತಾಯಗೊಂಡಿತು ಎಂದು ಸುರಯ್ಯಾಳ ಮನಸ್ಸು ಯೋಚಿಸುತ್ತಲಿತ್ತು.

ಬಾ ಸುರಯ್ಯಾ... ನಾವಿನ್ನು ಮನೆಗೆ ಹೋಗೋಣ. ತಾತನನ್ನು ಈಗ ಡಿಸ್ಚಾರ್ಜ್ ಮಾಡುತ್ತಾರೆ. ಒಂದು ವೇಳೆ ಅಮ್ಮನೊಂದಿಗೆ ಅವರ ಮನೆಗೆ ಹೋಗಬೇಕು ಎಂದಿದ್ದಲ್ಲಿ ನೀನು ಹೋಗಬಹುದು. ಎರಡು - ಮೂರು ದಿನಗಳ ನಂತರ ಹೇಗೂ ಅವರು ಬರುತ್ತಾರಲ್ಲ, ಆಗ ಒಟ್ಟಿಗೆ ಬರಬಹುದು.. "

ಖಾದರ್ ಮಗಳ ಮನಸ್ಸಿನ ಯೋಚನೆಯ ದಿಕ್ಕನ್ನು ಬದಲಾಯಿಸಲು ಹಾಗೆ ಕೇಳಿದರು.

" ಇಲ್ಲಪ್ಪಾ, ನಾನು ನಿಮ್ಮ ಜೊತೆ ಬರುತ್ತೇನೆ.. ಹೇಗಿದ್ರೂ ಅಮ್ಮ ಬರುತ್ತಾರಲ್ವ."

ಮಗಳನ್ನು ಬಲವಂತವಾಗಿ ಕಳುಹಿಸುವುದು ಬೇಡ ಎಂದು ಎನಿಸಿದ ಖಾದರ್ "ಹಾಗಿದ್ದಲ್ಲಿ ಸರಿ ನಾವು ಹೋಗೋಣ , ಸಫಿಯ್ಯಾ‌ ನೀವು ಜಾಗ್ರತೆಯಿಂದ ಮನೆಗೆ ತಲುಪಿ. ತಲುಪಿದ ಕೂಡಲೇ ನನಗೆ ಕರೆ ಮಾಡಿ. ಸರಿ ಮಾವ, ನಾನಿನ್ನು ಬರುತ್ತೇನೆ. ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿರಿ" ಎಂದು ಅಲ್ಲಿಂದ ಹೊರನಡೆದರು.

ದಾರಿಯಲ್ಲಿ ಬರುತ್ತಿರುವಾಗಲೂ ಸುರಯ್ಯಾ ಏನೂ ಮಾತನಾಡದೆ ಸುಮ್ಮನೇ ಚಿಂತಾಮಗ್ನಳಾಗಿರುವುದನ್ನು ಖಾದರ್ ಗಮನಿಸಿದರು. ಇವಳು ಇನ್ನೂ ಆ ಯೋಚನಾ ಲಹರಿಯಿಂದ ಹೊರ ಬರಲಿಲ್ಲ, ಇನ್ನೂ ಅದೇ ಗುಂಗಿನಲ್ಲಿ ಇದ್ದಾಳೆಂದು ಅರ್ಥೈಸಿಕೊಳ್ಳಲು ಅವರಿಗೆ ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಯಾಕಾಗಿ ಈ ರೀತಿ ಅಪರಿಚಿತರ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುತ್ತಿದ್ದಾಳೋ ಆ ದೇವರಿಗೇ ಗೊತ್ತು ಎಂದು ಎನಿಸಿ,

 " ಅರೇ ಸುರಯ್ಯಾ, ಏನಾಗಿದೆ ನಿನಗೆ? ಚಟ್ಪಟ್ ಅಂತ ನನ್ನಲ್ಲಿ ಮಾತನಾಡುತ್ತಿದ್ದವಳು ಇಂದು ಕೇವಲ ಅವರದೇ ಯೋಚನೆಯಲ್ಲಿ ಮುಳುಗಿದ್ದೀಯಲ್ಲ. ಯಾಕೋ ಇದು ಅತಿಯಾಯಿತು ಎಂದು ಎನಿಸಲ್ವಾ?"

" ಅಪ್ಪಾ.., ನನ್ನನ್ನು ಎಲ್ಲರಕ್ಕಿಂತಲೂ ಹೆಚ್ಚಾಗಿ ಅರ್ಥ ಮಾಡಿಕೊಂಡವರು ನೀವು. ನೀವೇ ಈಗ ಹೀಗೆ ಕೇಳಿದರೆ ಹೇಗೆ ಹೇಳಿ. ನಾನೇನು ಬೇಕಂತಲೇ ಯೋಚಿಸುತ್ತಿಲ್ಲ. ನನಗೆ ಗೊತ್ತಿಲ್ಲದ ಹಾಗೆ ನನ್ನ ತಲೆಯೊಳಗೆ ನೂರಾರು ಆಲೋಚನೆಗಳು ಓಡಾಡುತ್ತಿವೆ. ಆ ಯೋಚನೆಗಳು ನನ್ನನ್ನು ಕಾಡುತ್ತಿದೆ."

" ಇಲ್ಲಿ ನೋಡು ಸುರಯ್ಯಾ.. ನೀನು ನಿನ್ನೆ ಕಂಡಂತಹ ಹುಡುಗ ಏನೋ ಪ್ರೀತಿ, ಪ್ರೇಮ ಅಂತ ತನ್ನ ತಲೆಯನ್ನು ಕೆಡಿಸಿಕೊಂಡಿದ್ದಾನೆ. ಈ ಜಗತ್ತಿನಲ್ಲಿ ಆತನೊಬ್ಬನೇ ಆ ರೀತಿ ಇರುವುದಲ್ಲ. ಕೆಲವು ಯುವಕರು ಅಥವಾ ಯುವತಿಯರು ತಮ್ಮ ಹದಿಹರೆಯದಲ್ಲಿ ಈ ಪ್ರೀತಿ ಎಂಬ ಬಲೆಯೊಳಗೆ ಸಿಲುಕಿ ಅದಕ್ಕೋಸ್ಕರ ಪ್ರಾಣವನ್ನೂ ಬಿಡುತ್ತಾರೆ. ಆ ಸಮಯದಲ್ಲಿ ತಮ್ಮನ್ನು ಬೆಳೆಸಿದ ತಂದೆ - ತಾಯಿಯ ಬಗ್ಗೆ ಅವರು ಯೋಚಿಸುವುದಿಲ್ಲ. ತನ್ನ ಲವ್ ಫೇಲ್ಯೂರ್ ಆಯಿತು, ಇನ್ನು ತಾನು ಬದುಕಿ ಏನು ಪ್ರಯೋಜನ ಎನ್ನುವುದು ಮಾತ್ರ ಅವರ ತಲೆಯಲ್ಲಿ ಇರುತ್ತದೆ. ಹಾಗಿರುವಾಗ ಅವರೆಲ್ಲರ ಬಗ್ಗೆ ನಾವು ಚಿಂತಿಸುತ್ತಾ ಕೂತರೆ ಆಗುತ್ತದಾ ಹೇಳು ? "

  ಸುರಯ್ಯಾಳಿಗೂ ತಂದೆಯ ಮಾತಿನಲ್ಲಿ ನಿಜಾಂಶ ಇದೆ ಎಂದು ಎನಿಸಿತು. ಆದರೆ ಈ ವಿಚಾರದಲ್ಲಿ ಆಕೆ ಅದನ್ನು ಒಪ್ಪಲು ತಯಾರಿರಲಿಲ್ಲ.

" ಹೌದಪ್ಪ, ನೀವು ಹೇಳಿದ್ದು ಸರಿ. ಎಲ್ಲರ ಬಗ್ಗೆ ನಾವು ಆಲೋಚಿಸುವುದಕ್ಕೆ ಆಗಲ್ಲ. ಆದರೆ ಇದು ವಿಭಿನ್ನ. ಅವರನ್ನು ನಾನು ಕಂಡಿಲ್ಲ. ಅವರು ಯಾರು ನನ್ನನ್ನು ಕರೆದಿದ್ದೂ ಇಲ್ಲ. ಹಾಗಾಗಿ ಇದರ ಬಗ್ಗೆ ಎಲ್ಲೋ ನಾನು ಯೋಚಿಸಬೇಕಾಗಿಯೇ ಬರುತ್ತದೆ."

   ತನ್ನ ಮಗಳು ಈ ರೀತಿ ಹಟ ಹಿಡಿದದ್ದು ಇದೇ ಮೊದಲು ಎಂದೆನಿಸದೇ ಇರಲಿಲ್ಲ ಖಾದರ್ ಅವರಿಗೆ. 

 " ಸರಿ ಬಿಡು ನಿನ್ನ ಮಾತು ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಅನಿಸಿಕೆಯ ಪ್ರಕಾರ ಇದು ನಿನ್ನ ಬಾಳಿನಲ್ಲಿ ನಡೆದ ಒಂದು ಆಕಸ್ಮಿಕ ಘಟನೆ ಅಷ್ಟೇ. ಅದು ಅಲ್ಲ ಎನ್ನುವುದಾದಲ್ಲಿ, ಒಂದುವೇಳೆ ಅವರು ನಿನಗೆ ಮತ್ತೊಮ್ಮೆ ಎಲ್ಲಾದರೂ ಕಾಣ ಸಿಕ್ಕಿದರೆ ಆಗ ನಾನು ಇದು ಆಕಸ್ಮಿಕ ಘಟನೆ ಅಲ್ಲ ಎಂದು ನಂಬುತ್ತೇನೆ ಎಂದರು.

ಮಗಳ ಮನಸ್ಸು ಈಗಲಾದರೂ ಬದಲಾಗಲಿ ಎಂದು ಅವರ ಆಶಯವಾಗಿತ್ತು. ಮತ್ತೆಂದೂ ಅವರು ಕಾಣಲು ಸಿಗಲಿಕ್ಕಿಲ್ಲ ಎಂದು ಅವರು ಲೆಕ್ಕಾಚಾರ ಹಾಕಿದ್ದರು. ಆದರೆ ಆ ದೇವನ ವಿಧಿ ಲೀಲೆಯನ್ನು ಬಲ್ಲವರಾರು?

     *******************

     ತನ್ನತ್ತಲೇ ನೋಡುತ್ತಿದ್ದ ಪತ್ನಿಯತ್ತ

" ಏನು? ಯಾಕೆ ಹಾಗೆ ತಿನ್ನುವವರ ಹಾಗೆ ನೋಡುತ್ತಾ ಇದ್ದೀಯಾ ? ಎಂದು ಕೇಳಿದ ಸಮದ್.

  " ಅಲ್ಲರೀ, ನೀವಾ ಈ ಮಾತು ಹೇಳುವುದು? ಏನಾಗಿದೆ ನಿಮಗೆ ? ನಮ್ಮ ಮಗನಿಗೆ ಆಗಿರೋದು ಮನಸ್ಸಿನ ಸಮಸ್ಯೆ. ಅದಕ್ಕೆ ಯಾಕೆ ಮಂತ್ರವಾದಿ ಬಳಿ ಹೋಗೋದು? "

" ನೋಡು ಮುನೀರಾ... ನಿನಗೆ ನನ್ನಷ್ಟು ಪ್ರಪಂಚ ಜ್ಞಾನ ಇಲ್ಲ. ಯಾರಲ್ಲಿ ಯಾವಾಗ ಹೋಗಬೇಕು ಎಲ್ಲಾ ನನಗೆ ತಿಳಿದಿದೆ. ಅದು ನನಗೆ ಯಾರೂ ಹೇಳಬೇಕಾಗಿಲ್ಲ."

" ಯಾಕೆ ರೀ ಇಷ್ಟು ಹಟ ಹಿಡೀತಾ ಇದ್ದೀರಾ? ಡಾ. ನಿರಂಜನ್ ಬಳಿ ಹೋಗಿ ತೋರಿಸೋದಿಕ್ಕೆ ಅಲ್ವಾ ನಾವು ಇಷ್ಟು ದೂರ ಬಂದಿರೋದು? ಈಗ ನೀವು ಹೀಗೆ ಬದಲಾದರೆ ಹೇಗೆ ? ಅದೂ ಅಲ್ಲದೆ ಇದಕ್ಕೂ ಮಂತ್ರವಾದಿಗೂ ಏನು ಸಂಬಂಧ? ದಯವಿಟ್ಟು ನನ್ನ ಮಾತು ಕೇಳಿ. ಆ ಆಯಿಷಾ ಅನ್ನೋ ಹುಡುಗಿಯನ್ನು... "

ಹೇಳಲು ಹೊರಟವಳನ್ನು ಅರ್ಧದಲ್ಲೇ ತಡೆದ ಸಮದ್.

 " ನೋಡು ಮುನೀರಾ, ಇಲ್ಲಸಲ್ಲದ ಊಹೆಗಳನ್ನೆಲ್ಲ ನನ್ನ ಮುಂದೆ ಹೇಳಬೇಡ. ಅದನ್ನೆಲ್ಲಾ ಕೇಳುವಷ್ಟು ಸಮಯ ನನ್ನಲ್ಲಿ ಇಲ್ಲ. ನಾನು ನಿನ್ನಲ್ಲಿ ಈ ಮೊದಲೇ ಹೇಳಿದ್ದೇನೆ , ನನ್ನಲ್ಲಿ ಹೇಳಿದೆ ಎಂದು ಇತರರ ಬಳಿ ಆ ಹುಡುಗಿಯ ಹೆಸರು ಹೇಳಬೇಡ. ನನಗೆ ಗೊತ್ತು ನನ್ನ ಏಳಿಗೆ ಸಹಿಸದ ಯಾರೋ ನನ್ನ ಮಗನಿಗೆ ಏನೋ ಮಾಡಿದ್ದಾರೆಂದು. ಅವರು ಯಾರೇ ಆಗಲಿ, ಕಂಡು ಹಿಡಿದೇ ಹಿಡಿಯುತ್ತೇನೆ."

" ಏನ್ರೀ ಕಂಡುಹಿಡಿಯೋದು ? ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವೇ. ಯಾವುದೋ ಸಮಸ್ಯೆಗೆ ಯಾವುದೋ ಪರಿಹಾರ ಹೇಗೆ ರೀ ಸಾಧ್ಯ?"

"ನೋಡು ಮುನೀರಾ,ನಿನ್ನ ಉಪದೇಶ ಕೇಳಲು ನಾನು ಇಲ್ಲಿ ನಿಂತಿಲ್ಲ. ನಿನ್ನ ಅಪ್ಪಣೆ ಕೇಳಲು ಬಂದಿರುವುದೂ ಅಲ್ಲ. ನಾನು ಹೋಗುತ್ತೇನೆ ಎಂದು ಹೇಳಲು‌ ಬಂದಿರುವೆ. ನನಗೆ ಯಾರ ಒಪ್ಪಿಗೆಯೂ ಬೇಕಾಗಿಲ್ಲ" ಎಂದವನೇ ಬಾಗಿಲನ್ನು ದಡಾರ್ ಎಂದು ಹಾಕಿ ಹೊರಗೆ ಹೋದನು.

     ಆತ ಹೋದತ್ತಲೇ ಒಂದು ಕ್ಷಣ ನೋಡಿಟ್ಟಳು ಮುನೀರ. ನಿಟ್ಟುಸಿರು ಬಿಟ್ಟವಳೇ ಒಂದು ಕ್ಷಣ ತನ್ನ ಮಗನತ್ತ ನೋಡಿದಳು. ಅವರ ನಡುವೆ ಅಷ್ಟೆಲ್ಲಾ ರಾದ್ಧಾಂತವಾದರೂ ಆತ ಅದು ಯಾವುದರ ಪರಿವೆಯೇ ಇಲ್ಲದೆ ಹಾಗೆ ಮಲಗಿ ಮೇಲೆ ನೋಡುತ್ತಿದ್ದ. ಯಾಕೋ ಮುನೀರಾಳಿಗೆ ಮೊದಲ ಬಾರಿ ತನ್ನವರು ಯಾರೂ ಇಲ್ಲ ಎಂದೆನಿಸಿತು. ನೊಂದ ಮನಸ್ಸಿನಲ್ಲಿಯೇ ಎರಡು ಕೈಗಳನ್ನು ಎತ್ತಿ ಆಕೆ ಆ ಕರುಣಾಮಯನಲ್ಲಿ ಪ್ರಾರ್ಥಿಸಿದಳು. 

" ಯಾ ನಾದನೇ, ಯಾವ ದಾರಿಯಲ್ಲಿ ನನ್ನ ಗಂಡ ಸಾಗುತ್ತಿದ್ದಾರೋ ಅದು ಸರಿಯಿಲ್ಲ. ನೀನೇ ಅವರಿಗೆ ಸದ್ಭುದ್ಧಿ ನೀಡಿ ನೇರವಾದ ದಾರಿಯನ್ನು ತೋರಿಸು.

ಮುನೀರಾ ಅದೆಷ್ಟು ಹೇಳಿದರೂ ಕೇಳದ ಸಮದ್ ಬಾಗಿಲನ್ನು ದಢಾರ್ ಎಂದು ಹಾಕಿ ಹೊರಗೆ ಹೋದನು.

         ಹೋದವನೇ ತನ್ನ ಮೊಬೈಲ್ ತೆಗೆದು ಫಾರೂಖಿಗೆ ಕರೆ ಮಾಡಿದನು. ಅತ್ತ ಕಡೆ ಧ್ವನಿ ಕೇಳಿಬಂದಾಗ

   " ಹೆಲೋ ಫಾರೂಕ್ ನೀನು ಎಲ್ಲಿದ್ದೀಯಾ ? ನೀನು ಎಲ್ಲಿದ್ದೀಯ ಎಂದು ಹೇಳಿದರೆ ನಾನು ಅಲ್ಲಿಗೇ ಬರುತ್ತೇನೆ. ನಾವು ಈಗಲೇ ಆ ಮಂತ್ರವಾದಿ ಬಳಿ ಹೋಗೋಣ."

   ಫಾರೂಕಿಗೆ ಆಶ್ಚರ್ಯವಾಯಿತು. ಅರೆ ಸಂಜೆ ಹೋಗೋಣ ಎಂದವನು ಯಾಕೆ ಇಷ್ಟು ತರಾತುರಿಯಲ್ಲಿ ಇದ್ದಾನೆ? ಏನಾಯಿತು ಈತನಿಗೆ ಎಂದು ಅನಿಸಿದರೂ ಫೋನಿನಲ್ಲಿ ಕೇಳುವುದು ಸರಿಯಲ್ಲ ಎಂದು ತಿಳಿದು

   " ಸರಿ, ನಾನು ಉಸ್ಮಾನಿಗೆ ಕರೆ ಮಾಡಿ ಹೇಳುತ್ತೇನೆ. ನೀನು ಕಾರು ತೆಗೆದುಕೊಂಡು ಹಳೆಬಸ್ ಸ್ಟ್ಯಾಂಡ್ ಬಳಿ ಬಂದುಬಿಡು. ನಾವು ಅಲ್ಲಿ ನಿನಗೆ ಸಿಗುತ್ತೇವೆ. ಆಮೇಲೆ ಅಲ್ಲಿಂದ ಒಟ್ಟಿಗೆ ಹೋಗೋಣ ಸರಿಯಾ? ಎಂದು ಹೇಳಿ ಆತ ಕರೆ ಕಟ್ ಮಾಡಿದ.  

    ಆತ ಹೇಳಿದಂತೆ ಸಮದ್ ತನ್ನ ಕಾರನ್ನು ಬಸ್ ಸ್ಟ್ಯಾಂಡ್ ಬಳಿ ಚಲಾಯಿಸಿದ.

   ಹೇಳಿದ ಹಾಗೆ ಅವರಿಬ್ಬರೂ ಅಲ್ಲೇ‌ ನಿಂತಿದ್ದರು. ಈತನನ್ನು ಕಂಡೊಡನೆ ಕಾರ್ ಡೋರ್ ತೆಗೆದು ಒಳಗೆ ಕುಳಿತರು.

   " ಏನಾಯಿತು ಸಮದ್? ಯಾಕೆ ಅಷ್ಟು ಅರ್ಜೆಂಟ್ ಆಗಿ ಹೋಗೋಣ ಎಂದಿದ್ದು? " ಫಾರೂಕ್ ನೇರವಾಗಿ ಕೇಳಿಯೇ ಬಿಟ್ಟನು.

" ಇಲ್ಲ ಫಾರೂಕ್ ಹಾಗೇನಿಲ್ಲ. ಯಾಕೋ ಬೇಗ ತೋರಿಸಿ ಏನು ಅಂತ ಕೇಳಿದರೆ ಒಳ್ಳೆಯದು ಅಲ್ವಾ ಹಾಗೆ. " ಎಂದು ಸಮದ್ ಚುಟುಕಾಗಿ ಉತ್ತರ ನೀಡಿದನು. ತನ್ನ ಹಾಗೂ ತನ್ನ ಪತ್ನಿಯ ನಡುವೆ ನಡೆದ ಮನಸ್ತಾಪದ ಬಗ್ಗೆ ಹೇಳುವುದಕ್ಕೆ ಆತನಿಗೆ ಇಷ್ಟವಿರಲಿಲ್ಲ.  

ಆದರೆ ಸಮದ್ ಮುಖವನ್ನು ಸರಿಯಾಗಿ ಗಮನಿಸಿದ ಫಾರೂಕಿಗೆ ಆತ ಯಾವುದೋ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಂತೆಯೂ ಅದರ ಬಗ್ಗೆ ಯೋಚಿಸುವಂತೆಯೂ ಕಂಡು ಬಂದಿತು. ಎಲ್ಲೋ ಆತ ತನ್ನ ಮಗನ ಬಗೆಗೆ ಈ ರೀತಿ ಯೋಚಿಸುತ್ತಾ ಇದ್ದಾನೋ ಏನೋ ಎಂದು

  " ನೋಡು ಸಮದ್, ನಿನ್ನ ಮಗನ ಬಗ್ಗೆ ಏನೂ ಆಲೋಚಿಸಬೇಡ. ಈ ಮಂತ್ರವಾದಿ ಎಂತೆಂತಹ ಹುಚ್ಚರ ಹುಚ್ಚನ್ನೂ ಬಿಡಿಸಿದ್ದಾನೆ. ನಿನ್ನ ಮಗ ಸಂಪೂರ್ಣ ಗುಣಮುಖ ಆಗಲಿಲ್ಲ ಎಂದರೆ ನಾನು ನನ್ನ ಹೆಸರು ಬದಲಾಯಿಸುತ್ತೇನೆ. ಬೇಕಿದ್ದಲ್ಲಿ ನೋಡುತ್ತಾ ಇರು."

    ಆತನ ಭರವಸೆಯ ಮಾತು ಕೇಳಿ ಸಮದ್ ಮನಸ್ಸಿನಲ್ಲಿ ಭರವಸೆಯು ಮೂಡಿತು. ಒಮ್ಮೆ ಸಾದ್ ಗುಣಮುಖನಾದರೆ ಅಷ್ಟು ಸಾಕು. ಆಮೇಲೆ ಮುನೀರಾಳು ತನ್ನ ತಪ್ಪನ್ನು ತಾನಾಗಿಯೇ ಒಪ್ಪುವಳು ಎಂದು ಯೋಚಿಸುತ್ತಿದ್ದನು.

  ಕಾರು ಮಂತ್ರವಾದಿಯ ಮನೆಯ ಗೇಟಿನೊಳಗೆ ಹೊಕ್ಕಿತು.

ಅಲ್ಲೇ ಇದ್ದ ಕೆಲಸದ ಆಳೊಬ್ಬ ಇವರ ಕಾರಿನ ಬಳಿ ಬಂದನು. ಬಂದವನೇ

" ಏನು ? ಏನು ಬೇಕಾಗಿತ್ತು ?" ಎಂದು ಕೇಳಿದನು. 

 " ಮಂತ್ರವಾದಿಯನ್ನು ಒಮ್ಮೆ ನೋಡಬೇಕಾಗಿತ್ತು. " ಫಾರೂಕ್ ಆತನೊಂದಿಗೆ ಹೇಳಿದನು.

ಅವರಿಲ್ಲ ಸಾಬ್ ಅವರು ನಿನ್ನೆಯ ಪ್ಲೈಟಿನಲ್ಲಿ ಕೆಲಸದ ನಿಮಿತ್ತ ಮಲೇಷಿಯಾಕ್ಕೆ ತೆರಳಿದ್ದಾರೆ ಎಂದು ಆ ಆಳು ಹೇಳಿದ್ದನ್ನು ಕೇಳಿ ಹೋದ ಮೂವರಿಗೂ ದಿಕ್ಕು ತೋಚದಂತಾಯಿತು.

   " ಹೌದಾ ಹಾಗಿದ್ದಲ್ಲಿ ಯಾವಾಗ ಬರುವರು ? " 
" ಹೇಳೋಕ್ಕಾಗೋದಿಲ್ಲ, ಎರಡು ತಿಂಗಳಂತೂ ಕಳಿಯಬಹುದು."

   ಆತನ ಮಾತು ಕೇಳಿ ಫಾರೂಕ್ ಸಮದಿನತ್ತ ತಿರುಗಿ ಏನು ಮಾಡುವುದು? ಎಂದು ಕೇಳಿದ.

" ಇನ್ನೇನು ಮಾಡುವುದಕ್ಕೆ ಆಗುತ್ತದೆ ? ಇನ್ನು ಎರಡು ತಿಂಗಳು ಕಾಯಬೇಕು ಅಷ್ಟೆ. ಎರಡು ವರ್ಷಗಳಿಂದ ನಾನು ಇದಕ್ಕಾಗಿ ಪರಿಹಾರ ಕಂಡುಕೊಳ್ಳಲು ಎಲ್ಲೆಲ್ಲಾ ಅಲೆದಾಡಿದ್ದೇನೋ ನನಗೇ ಗೊತ್ತು. ಹಾಗಾಗಿ ಇನ್ನುಎರಡು ತಿಂಗಳು ಕಾಯುವುದು ನನಗೇನೂ ದೊಡ್ಡ ವಿಷಯವಲ್ಲ."

" ಸರಿ ಹಾಗಿದ್ದಲ್ಲಿ, ಇನ್ನು ನಾವು ಇಲ್ಲಿ ನಿಂತು ಏನು ಪ್ರಯೋಜನ? ಇಷ್ಟು ದೂರ ಬಂದು ಕೂಡ ಬಂದ ದಾರಿಗೆ ಸುಂಕವಿಲ್ಲದಂತಾಯಿತು."

" ಪರ್ವಾಗಿಲ್ಲ ಫಾರೂಕ್. ಎರಡು ತಿಂಗಳ ಮಾತು ಅಲ್ವಾ? ಒಂದು ಕೆಲಸ ಮಾಡೋಣ. ಈ ಕೆಲಸದವನ ಫೋನ್ ನಂಬರ್ ತೆಗೆದುಕೊಳ್ಳೋಣ. ಆಮೇಲೆ ಕರೆ ಮಾಡಿ ಬಂದರಾಯಿತು."

ಸಮದ್ ಮಾತಿಗೆ ಒಪ್ಪಿಗೆ ನೀಡಿ ಅವರು ಅಲ್ಲಿಂದ ಹೊರಡಿದರು.

  ನೇರವಾಗಿ ತಾವು ಉಳಿದುಕೊಂಡಿದ್ದ ಗೆಳೆಯನ ಆ ಮನೆಗೆ ಬಂದ ಸಮದ್ ಮುನೀರಾಳತ್ತ ನೋಡಿ

  " ಬೇಗ ಹೊರಡಿ, ಮನೆಗೆ ಹೋಗೋಣ... ತಡವಾದರೆ ಮತ್ತೆ ಕಷ್ಟವಾಗುತ್ತದೆ" ಎಂದ. ಅದಲ್ಲದೆ ಅಪ್ಪಿ ತಪ್ಪಿಯೂ ಹೆಚ್ಚಿನದನ್ನು ಏನೂ ಹೇಳಲಿಲ್ಲ.ಮುನೀರಾಳಿಗೆ ಆಶ್ಚರ್ಯವಾಯಿತು. ಅರೇ ಏನೋ ಮಂತ್ರ - ತಂತ್ರ ಅಂತ ಹೊರಟು ಹೋದವರು ಈಗ ಒಮ್ಮೆಲೇ ಬಂದು ಮನೆಗೆ ಹೋಗೋಣ ಎಂದು ಏಕೆ ಹೇಳುತ್ತಿದ್ದಾರೆ? ಅಲ್ಲಿ ಏನಾಯಿತು ? ಎಂಬೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸಿದರೂ ಅದನ್ನು ಸಮದಿನೊಂದಿಗೆ ಕೇಳಲು ಆಕೆಯ ಮನಸ್ಸು ಒಪ್ಪಲಿಲ್ಲ.

   ಸಮದ್ ಹೋಗಿ ತನ್ನ ಮಗ ಮಲಗಿದ್ದ ಬೆಡ್ ಮೇಲೆ ಕುಳಿತುಕೊಂಡು ಅವನತ್ತ ನೋಡಿ

 " ಮಗನೇ ನೀನು ಏನೂ ಯೋಚಿಸಬೇಡ. ನನಗೆ ಖಾಲಿ ಎರಡು ತಿಂಗಳ ಸಮಯಾವಕಾಶ ನೀಡು . ಆಮೇಲೆ ಎಲ್ಲಾ ಸರಿಯಾಗುತ್ತದೆ. ಮತ್ತೆ ನೋಡು ನಿನ್ನನು ಯಾರು ಈ ದುಸ್ಥಿತಿಗೆ ತಂದಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಈಗ ನಾವು ಮನೆಗೆ ಹೋಗೋಣ. ಎರಡು ತಿಂಗಳ ನಂತರ ಇಲ್ಲಿ ಬರೋಣ."

ಸಮದ್ ಮಾತುಗಳು ಮುನೀರಾಳ ಕಿವಿಗೂ ಬಿತ್ತು. ಓಹ್ ಎರಡು ತಿಂಗಳ ಸಮಯಾವಕಾಶ ಮಗನಲ್ಲಿ ಕೇಳುತ್ತಿದ್ದಾರೆ ಎಂದರೆ ಅದರೊಳಗಾಗಿ ಏನೋ ಮಾಡುತ್ತಾರೇನೋ... ಏನೇ ಮಾಡುವುದಿದ್ದರೂ ಅದನ್ನು ಕಂಡುಹಿಡಿಯಬೇಕು. ಎರಡು ತಿಂಗಳು ಎಂದು ಯಾಕಾಗಿ ಹೇಳಿರಬಹುದು ? ಒಂದು ವೇಳೆ ಆ ಮಂತ್ರವಾದಿ ಏನಾದರೂ ಸಮಯ ನಿಗದಿ ಮಾಡಿರುವನೇ? ಎಂದೆಲ್ಲಾ ಆಕೆಯ ಮನಸ್ಸು ಯೋಚಿಸುತ್ತಿತ್ತು.

"ನಡಿ ಇನ್ನು ಹೊರಡೋಣ" ಎಂದ ಸಮದ್ ಮಾತು ಆಕೆಯ ಯೋಚನೆಗಳಿಗೆ ಕಡಿವಾಣ ಹಾಕಿತು. ಮಗನನ್ನು ಕರೆದುಕೊಂಡು ಆಕೆ ಪತಿಯನ್ನು ಹಿಂಬಾಲಿಸಿದಳು.

      ********************

   ದಿನಗಳು ಉರುಳುತ್ತಿತ್ತು.

       ಅಂದು ಪಿ.ಯು.ಸಿ ಫಲಿತಾಂಶ ಪ್ರಕಟವಾಗಿತ್ತು. ನಿರೀಕ್ಷಿಸಿದಂತೆ ಸುರಯ್ಯಾ ಡಿಸ್ಟಿಂಕ್ಷನ್ ಪಡೆದಿದ್ದಳು. ಊರಿಡೀ ಅದೇ ಮಾತು ಹಬ್ಬಿತ್ತು. ಖಾದರ್ ಅವರ ಮಗಳು ಸೈನ್ಸ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ತೆಗೆದಿದ್ದಾಳೆ ಎಂದು.  

   ಮಗಳ ಫಲಿತಾಂಶ ಅರಿತ ಖಾದರ್ ಖುಷಿಯಿಂದ ಸ್ವೀಟ್ಸ್ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಅಷ್ಟರಲ್ಲಿ ಖಾದರ್... ಖಾದರ್... ಎಂದು ಕರೆಯುವುದು ಕೇಳಿಸಿತು.

ಯಾರೆಂದು ನೋಡಿದರೆ ತಮ್ಮದೇ ನೆರೆಕರೆಯ ನಿವಾಸಿಗಳಾಗಿದ್ದರು.

   " ಅರೇ ಖಾದರಾಕ, ಮಗಳ ರಿಸಲ್ಟ್ ಬಂತಂತೆ ಅಲ್ವಾ... ಬಹಳ ಒಳ್ಳೆಯ ಮಾರ್ಕ್ಸ್ ಅಂತೆ ಅಲ್ವಾ? ಊರಿಡೀ ಅದೇ ಮಾತು ಹಬ್ಬಿದೆ. "

    " ಹೌದು, ದೇವರ ದಯೆಯಿಂದ ಎಲ್ಲವೂ ಒಳ್ಳೆಯದಾಗಿದೆ. ಅವಳಿಗೆ ಕಲಿಸಿದ ಅಧ್ಯಾಪಕರ ಮತ್ತು ನಮ್ಮ ನಿರೀಕ್ಷೆ ಆಕೆ ಹುಸಿ ಮಾಡಲಿಲ್ಲ." ಖಾದರ್ ಮಾತಿನಲ್ಲಿ ಅವರ ಮಗಳ ಬಗೆಗಿನ ಅವರ ಹೆಮ್ಮೆ ವ್ಯಕ್ತವಾಗುತ್ತಿತ್ತು.

  " ಮುಂದೆ ಏನು ಮಾಡ್ತೀರಾ ಖಾದರಾಕ? ಏನು ಕಲಿಸಬೇಕು ಅಂತ ಇದ್ದೀರಾ?" ಅವರು ಮರು ಪ್ರಶ್ನೆ ಹಾಕಿದರು.

" ಅವಳಿಗೆ ಸಣ್ಣದರಿಂದಲೂ ಟೀಚರ್ ಆಗಬೇಕು ಅಂತ ಆಸೆ ಇತ್ತು.ಮತ್ತೆ‌ ಈಗ ಯಾವ ಗುರಿ ಹೊಂದಿದ್ದಾಳೋ ನನಗೆ ಗೊತ್ತಿಲ್ಲ. ಆದರೆ ಏನಾದರೂ ಆಕೆ ಏನು ಕಲಿಯಲು ಇಚ್ಛಿಸುತ್ತಾಳೋ ಅದೇ ಕಲಿಯಲಿ.."

" ಏನು ನಿಮ್ಮ ಮಗಳು ಟೀಚರ್ ಆಗುವುದಾ ?"ಎಂದು ಕೇಳಿ ಅವರು ಕಿಸಕ್ಕನೆ ನಕ್ಕರು 

  ಯಾತಕ್ಕಾಗಿ ಅವರು‌ ನಗಾಡುತ್ತಿದ್ದಾರೆ ಎಂದು ತಿಳಿಯದ ಖಾದರ್ ಅವರ ಮುಖದತ್ತ ಪ್ರಶ್ನಾರ್ಥಕವಾಗಿ 

ತನ್ನ ಮಗಳು ಟೀಚರ್ ಆಗುವ ಗುರಿ ಹೊಂದಿದ್ದಾಳೆ ಎನ್ನುವುದನ್ನು ಕೇಳಿ ಕಿಸಕ್ಕನೆ ನಕ್ಕ ಅವರ ಬಗ್ಗೆ ಖಾದರಿಗೆ ಅಚ್ಚರಿ ಎನಿಸಿತು.

" ಏನು? ಏನಾಯಿತು ? ಯಾಕೆ ನೀವು ನನ್ನನ್ನು ನೋಡಿ ನಗಾಡುತ್ತಾ ಇದ್ದೀರಾ ? "

ಖಾದರ್ ಕುತೂಹಲ ತಡೆಯಲಾಗದೇ ಅವರ ಬಳಿ ಕೇಳಿಯೇ‌ ಬಿಟ್ಟರು.

 " ಅಲ್ಲ ಖಾದರ್ , ನಿನ್ನ ಮಗಳು ಟೀಚರ್ ಆದರೆ ಮಕ್ಕಳನ್ನು ಬೆತ್ತ ಹಿಡಿದು ಹೆದರಿಸಬೇಕು ಎಂದು ಇಲ್ಲವಲ್ಲ. ಆಕೆಯ ಮುಖ ನೋಡಿದರೆ ಮಕ್ಕಳು ತನ್ನಿಂತಾನೇ ಹೆದರುವರು."

ಅವರ ಮಾತುಗಳನ್ನು ಕೇಳಿ ಖಾದರ್ ಅವರಿಗೆ ಸಿಟ್ಟು ತಡೆಯಲಾಗಲಿಲ್ಲ. ಕೋಪದಲ್ಲಿಯೇ ಅವರು

   " ನಾಲಿಗೆ ಬಿಗಿ ಹಿಡಿದು ಮಾತನಾಡಿ ನೀವು. ನಾಲಿಗೆಯಲ್ಲಿ ಎಲುಬಿಲ್ಲ ಎಂದು ಸಿಕ್ಕ ಹಾಗೆ ಮಾತನಾಡಬೇಡಿ. ಯಾವ ದೇವರು‌ ನಿಮ್ಮನ್ನು ಸೃಷ್ಟಿಸಿದ್ದಾನೋ ಅದೇ ದೇವರು ನನ್ನ ಮಗಳನ್ನೂ ಸೃಷ್ಟಿಸಿದ್ದಾನೆ. ಆತನ ಸೃಷ್ಟಿಯ ಲೋಪವನ್ನು ಹೇಳಲು ನಾವು ಯಾರು ? ನಿಮ್ಮಿಂದ ಅಂತಹ ಸೃಷ್ಟಿಯನ್ನು ಸೃಷ್ಟಿಸಲು ಸಾಧ್ಯವೇ? ಇಲ್ಲವಲ್ಲ .. ಹಾಗೆಂದ ಮೇಲೆ ಇತರರ ಕೊರತೆ ಹೇಳಬಾರದು. ಆ ದೇವರು ಆಕೆಗೆ ಅಪಾರ ಬುದ್ಧಿಶಕ್ತಿ ನೀಡಿದ್ದಾನೆ. ಅದಕ್ಕೆ ನನ್ನ ಸರ್ವಸ್ತುತಿ. ಇನ್ನಾದರೂ ಬದಲಾಗಿ ನೀವು. ನನ್ನ ಮಗಳು ಎಂದಲ್ಲ, ಯಾವುದೇ ಹೆಣ್ಣಿನ ಕುಂದು ಕೊರತೆಗಳನ್ನು ಹೇಳಬೇಡಿ. "

     ಖಾದರ್ ಮಾತು ಕೇಳಿ ಅವರಿಗೆ ನಾಚಿಕೆ ಆಯಿತು. ತಲೆ ತಗ್ಗಿಸಿಕೊಂಡು ಹಾಗೇ ನಿಂತುಬಿಟ್ಟರು. ಅವರನ್ನು ಹಾಗೆ ನೋಡಿದ ಖಾದರಿಗೆ ಬೇಸರವಾಯಿತು.

  " ನನ್ನನ್ನು ಕ್ಷಮಿಸಿ, ಎಲ್ಲೋ ಕೋಪದಲ್ಲಿ ಒಂದೆರಡು ಮಾತು ಜಾಸ್ತಿಯೇ ಹೇಳಿದೆ ಎಂದು ಎನಿಸುತ್ತಿದೆ. ದಯವಿಟ್ಟು ಕ್ಷಮೆ ಇರಲಿ" ಎಂದು ಹೇಳಿದರು.

" ಇಲ್ಲ ಖಾದರ್, ನಿಜವಾಗಿಯೂ ಕ್ಷಮೆ ಕೇಳಬೇಕಾದವರು ನಾವು. ಯಾರದೋ ಕುಂದು ಕೊರತೆಗಳ ಮಾತುಗಳನ್ನಾಡುವುದು ನಮಗೆ ತಮಾಷೆಯಂತಾಗಿದೆ. ಅದರಿಂದ ಇತರರ ಮನಸ್ಸಿಗೆ ನೋವಾಗುವುದು ಎಂದು ನಾವು ಭಾವಿಸಿರುವುದಿಲ್ಲ. ಆದರೆ ಇಂದು ನಿಜವಾಗಿಯೂ ನಿಮ್ಮ ಮಾತು ನಮ್ಮ ಕಣ್ಣು ತೆರೆಸಿದಂತಿದೆ. ನಿಜವಾಗಿಯೂ ನಾವು ಮಾಡುವುದು ಎಷ್ಟು ದೊಡ್ಡ ಪಾಪವೆಂದು ಇವತ್ತು ಅರಿವಾಯಿತು. ದಯವಿಟ್ಟು ನಮ್ಮನ್ನು ಕ್ಷಮಿಸಿ . ಎಂದು ಆ ಇಬ್ಬರು ಖಾದರ್ ಬಳಿ ಹೇಳಿದರು.

 " ಇರಲಿ ಬಿಡಿ ಪರ್ವಾಗಿಲ್ಲ, ಮುಂದೆ ಇಂತಹ ತಪ್ಪನ್ನು ಮಾಡಬೇಡಿ" ಎಂದು ಬುದ್ಧಿವಾದ ಹೇಳಿದ ಖಾದರ್ ಮುಂದೆ ಸಾಗಿದರು.

   ದೂರದಲ್ಲೇ ತನ್ನ ತಂದೆ ಬರುತ್ತಿರುವುದನ್ನು ಗಮನಿಸಿದ ಶಾಮಿಲ್ 

  " ಓಹ್ ! ಅಕ್ಕಾ, ಅಪ್ಪಾ ಏನೋ‌ ಸ್ವೀಟ್ಸ್ ತಂದ ಹಾಗಿದೆ. ಒಂದಾ ನಿನ್ನ ರಿಸಲ್ಟ್ ವಿಷಯ ಅವರಿಗೆ ತಿಳಿದಿರಬೇಕು " ಎಂದನು.

ಅಷ್ಟರಲ್ಲಿ ಖಾದರ್ ಮನೆಯಂಗಳಕ್ಕೆ ತಲುಪಿದರು.

ತಕ್ಷಣ ತನ್ನ ತಂದೆಯ ಕೈಯಿಂದ ಸ್ವೀಟ್ಸ್ ಕಟ್ಟನ್ನು ಶಾಮಿಲ್ ತೆಗೆದುಕೊಂಡನು. 

  " ನೋಡು ಶಾಮಿಲ್, ಖಾಲಿ ತಿನ್ನುವುದನ್ನು ಮಾತ್ರ ಕಲಿಯುವುದಲ್ಲ. ಅಕ್ಕನ ಹಾಗೆ ಒಳ್ಳೆಯ ಅಂಕ ಕೂಡ ಪಡೆಯಬೇಕು. " ಖಾದರ್ ಮಗನಲ್ಲಿ ಹೇಳಿದರು.

   " ಅಪ್ಪಾ ಅದೆಲ್ಲ ಮತ್ತೆ ನೋಡೋಣ. ಈಗ ಏನಿದ್ದರೂ ತಿನ್ನಬೇಕು ಅಷ್ಟೇ " ಎಂದನು.

   ಅಪ್ಪ - ಮಗನ ವಿಷಯ ನೋಡಿ ಸುರಯ್ಯಾ ಹಾಗೂ ಸುಮಯ್ಯಾಳಿಗೆ ನಗು ಬರುತ್ತಿತ್ತು.

" ನಿನ್ನ ಅಮ್ಮ ಇವನನ್ನು ಮುದ್ದು ಮಾಡಿ ಹಾಳು ಮಾಡಿದ್ದಾರೆ " ಎಂದು ಅವರು ಪತ್ನಿಯನ್ನು ಛೇಡಿಸಿದರು.

 " ಹೌದು ರೀ, ಮಗಳು ಒಳ್ಳೆಯ ಅಂಕ ಪಡೆದರೆ ಅದು ನಿಮ್ಮ ಮಗಳು, ಮಗ ತುಂಟತನ ತೋರಿಸಿದರೆ ಅದು ನನ್ನ ಮಗ ಅಲ್ವಾ ? ಎಂದು ಸಫಿಯ್ಯಾ ತಮಾಷೆಯಾಗಿ ಪತಿಯ ಬಳಿ ಕೇಳಿದರು. 

        " ಹ್ಹೆ..ಹ್ಹೆ.. ಮತ್ತೆ ಅಲ್ವಾ? ಅದೆಲ್ಲಾ ಇರಲಿ ಅಲ್ಲಿ. ಮಗಳೇ ನೀನು ಟೀಚಿಂಗ್ ಫೀಲ್ಡ್ ಗೆ ಹೋಗಬೇಕು ಎಂದಿದ್ದೆ ಅಲ್ವಾ? ಏನು ಮಾಡ್ತೀಯಾ ? ಡಿಗ್ರಿ ಮಾಡಿ ಮತ್ತೆ ಬಿ.ಎಡ್ ಮಾಡ್ತೀಯಾ ಹೇಗೆ ? ನೀನು ಈಗ ಹೋಗುವ ಕಾಲೇಜಿನಲ್ಲಿ ಬಿಎಸ್ಸಿ ಇದೆಯಲ್ವಾ ?" ಎಂದು ಖಾದರ್ ನೇರವಾಗಿ ವಿಷಯಕ್ಕೆ ಬಂದರು.

   " ಇಲ್ಲಾ ಅಪ್ಪಾ... ನಾನು ಟೀಚಿಂಗ್ ‌ಫೀಲ್ಡ್ಗೆ ಹೋಗಲ್ಲ." ಎಂದು ತನ್ನ ನಿರ್ಧಾರವನ್ನು ಸುರಯ್ಯಾ ತಂದೆಯಲ್ಲಿ ತಿಳಿಸಿದಳು.

  ಮಗಳ ಮಾತು ಕೇಳಿ ಖಾದರಿಗೆ ತನ್ನ ಕಿವಿಗಳನ್ನು ತನಗೇ ನಂಬಲಾಗಲಿಲ್ಲ.

   " ಏನು ? ಯಾಕೆ ಹಾಗೆ ಹೇಳ್ತಾ ಇದ್ದೀಯಾ? ನೀನೇ ಅಲ್ವಾ ಚಿಕ್ಕಂದಿನಿಂದಲೂ ಟೀಚರ್ ಆಗಬೇಕು ಎಂದು ಹೇಳುತ್ತಾ ಇದ್ದಿದ್ದು . ಈಗ ಏನಾಯಿತು?"

ಖಾದರ್ ಅವರಿಗೆ ಆತಂಕವಾಯಿತು. ಅರೇ ಹೊರಗೆ ಜನರು ಏನಾದರೂ ಹೇಳಿದರೋ ಹೇಗೆ ? ಇಲ್ಲದಿದ್ದಲ್ಲಿ ಯಾಕೆ ತನ್ನ ನಿರ್ಧಾರ ಬದಲಾಯಿಸಿದ್ದಾಳೆ? ಎಂದು ಯೋಚಿಸುತ್ತಿದ್ದರು.

   " ನನ್ನ ನಿರ್ಧಾರ ಬದಲಾಗಲು ಕಾರಣ ನೀವು ಅಪ್ಪಾ." ಎಂದು ಸುರಯ್ಯಾ ಹೇಳಿದ್ದನ್ನು ಕೇಳಿ "

ಏನು ? ನಿನ್ನ ನಿರ್ಧಾರ ಬದಲಾಗಲು ಕಾರಣ ನಾನಾ ? ಹೇಗೆ ಅದು ? ಖಾದರ್ ಮಗಳಲ್ಲಿ ಪ್ರಶ್ನಿಸಿದರು.

    ಹ್ಞಾಂ.. ಅಪ್ಪ ನೀವು ಅಂದೊಂದು ಮಾತು ಹೇಳಿದ್ದೀರಿ. ಅದು ನಿಮಗೆ ನೆನಪಿಲ್ಲದೆ ಇರಬಹುದು. ಆದರೆ ನನ್ನ ತಲೆಯೊಳಗೆ ಇಂದಿಗೂ ಓಡಾಡುತ್ತಿದೆ."

"ಏನು ಸುರಯ್ಯಾ ? ನೀನು ಏನು ಹೇಳುತ್ತಾ ಇದ್ದೀಯಾ ? ಅಂತಹ ಮಾತು ನಾನು ಏನು ಹೇಳಿದ್ದೇನೆ? "

ತಂದೆಯ ಮುಖದಲ್ಲಿ ಆತಂಕದ ಗೆರೆಗಳು ಮೂಡಿರುವುದನ್ನು ಗಮನಿಸಿದ ಸುರಯ್ಯಾ

   " ಅಯ್ಯೋ ಅಪ್ಪಾ! ನೀವು ಆ ರೀತಿ ಯೋಚಿಸುವಂತಹದ್ದು ಏನೂ ಇಲ್ಲ. ಹಲವು ದಿನಗಳ ಹಿಂದೆ ನೀವು ನನ್ನಲ್ಲೊಂದು ಮಾತು ಹೇಳಿದ್ದೀರಿ. ನಿಮಗದು ಮರೆತಿರಬಹುದು. ಆದರೆ ನನಗಿನ್ನೂ ನೆನಪಿದೆ."

  " ಯಾವ ಮಾತು ನಾನು ಹೇಳಿದ್ದೆ ಸುರಯ್ಯಾ ? "

     " ಹಲವಾರು ಮಂದಿ ಪ್ರೀತಿ, ಪ್ರೇಮ ಎಂದು ಅದರ ಹಿಂದೆ ಹೋಗಿ ಅವರ ಜೀವನವನ್ನು ನಾಶ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ನಿನಗೆ ಸರಿ ಮಾಡಲು ಸಾಧ್ಯವೇ ಎಂದು ಕೇಳಿದ್ದು ನಿಮಗೆ ನೆನಪಿದೆಯಾ ?"

   " ಹ್ಞಾಂ ಹೌದು, ಹೇಳಿದ್ದು ನೆನಪಿದೆ. ಆದರೆ ಅದಕ್ಕೂ ಮತ್ತು ಇದಕ್ಕೂ ಏನು ಸಂಬಂಧ ?"

    " ನೀವು ಹೇಳಿದ ಮೇಲೆ ನಾನು ತುಂಬಾ ಯೋಚಿಸಿದೆ ಅಪ್ಪಾ. ಈ ಲೋಕದಲ್ಲಿ ಟೆನ್ಶನ್ ಮಾಡಿ ಡಿಪ್ರೆಶನಿಗೆ ಒಳಪಡುವವರು ತುಂಬಾ ಜನರು ಇದ್ದಾರೆ. ಅವರನ್ನೆಲ್ಲಾ ನನಗೆ ಸರಿ ಮಾಡಲಾಗದು ನಿಜ. ಆದರೆ ಕೆಲವರನ್ನಾದರೂ ಸರಿ ಮಾಡಬಹುದಲ್ವಾ? "

   " ಏನು ಸುರಯ್ಯಾ? ನನಗೆ ನಿಜವಾಗಿಯೂ ನಿನ್ನ ಮಾತು ಒಂದೂ ಅರ್ಥವಾಗುತ್ತಿಲ್ಲ. ನೀನು ಹೇಗೆ ಅವರನ್ನು ಸರಿ ಮಾಡೋಕೆ ಸಾಧ್ಯ ? "

    " ಅದೂ ಅಪ್ಪ, ನಾನು ಒಬ್ಬ ಸೈಕಿಯಾಟ್ರಿಸ್ಟ್ ಆಗಬೇಕು. ಅದೇ ನನ್ನ ಮುಂದಿನ ಗುರಿ. ಒತ್ತಡ, ಆತಂಕಗಳಿಂದ ತನ್ನ ಮನಸ್ಸಿನ ಸಮತೋಲನ ಕಳೆದುಕೊಳ್ಳುವ ಜನರ ಆತಂಕವನ್ನು ದೂರ ಮಾಡುವ ಓರ್ವ ಕೌನ್ಸಿಲರ್ ಆಗಬೇಕು." 

   ಸುರಯ್ಯಾಳ ಧೃಢ ನಿರ್ಧಾರದ ಮಾತು ಕೇಳಿ ಖಾದರಿಗೆ ಅಚ್ಚರಿಯಾಯಿತು. ತಾನು ಆಕೆ ಎಲ್ಲವನ್ನೂ ಮರೆತಿದ್ದಾಳೆ ಅಂದು ಕೊಂಡರೆ ಆಕೆ ಇನ್ನೂ ಅದೇ ಗುಂಗಿನಲ್ಲಿ ಇದ್ದಾಳೆ ಅಲ್ವಾ ಎಂದು ಅವರ ಮನ ಯೋಚಿಸದೇ ಇರಲಿಲ್ಲ.

" ಆದರೆ ಮಗಳೇ,‌ ನೀನು ಈ ಮೊದಲು ಕಲಿತ ಕಾಲೇಜಿನಲ್ಲಿ ಆ ವಿಷಯದ ಆಯ್ಕೆ ಇದೆಯೇ? "

" ಇಲ್ಲಾ ಅಪ್ಪಾ ಅಲ್ಲಿ ಆ ಸಬ್ಜೆಕ್ಟ್ ಇಲ್ಲ."

" ಮತ್ತೆ ನೀನು ಹೇಗೆ ಕಲೀತೀಯಾ ಹೇಳು?"

" ಅದೂ ಅಪ್ಪ, ನಾನು ಪಟ್ಟಣದ ಕಾಲೇಜಿನಲ್ಲಿ ಓದಬೇಕು ಎಂದುಕೊಂಡಿರುವೆ."

" ಎನು ಹೇಳ್ತಾ ಇದ್ದೀಯಾ ಸುರಯ್ಯಾ ನೀನು? ಪಟ್ಟಣಕ್ಕೆ ಇಲ್ಲಿಂದ ಬರೋಬ್ಬರಿ 75 ಕಿ.ಮೀ ಇದೆ. ಅಲ್ಲಿ ಹೋಗಿ ಬರುವುದು ಅಸಾಧ್ಯದ ಮಾತು."

   " ಇಲ್ಲ ಅಪ್ಪ, ಹೋಗಿ ಬರೋದು ಏನೂ ಇಲ್ಲ. ಅಲ್ಲೇ ಸರಕಾರಿ ವಿದ್ಯಾರ್ಥಿನಿ ನಿಲಯ ಇವೆ. ಅಲ್ಲೇ ಹೋಗಿ ಅಡ್ಮಿಷನ್ ಪಡೆದುಕೊಂಡರಾಯಿತು. ಅಲ್ಲಿಂದಲೇ ಹೋಗಿ ಬರಬಹುದು."

  " ಏನು ಸುರಯ್ಯಾ ನೀನು ಹಾಸ್ಟೆಲ್ ಸೇರುವ ನಿರ್ಧಾರ ಮಾಡಿದ್ದೀಯಾ ? "ಎಂದು ಖಾದರ್ ತಮ್ಮ ಪತ್ನಿಯ ಮುಖ ನೋಡಿದರು.

       ****************

      ಅದೆಷ್ಟೋ ದಿನಗಳು ಉರುಳಿ ಹೋದವು. ಬೆಂಗಳೂರಿನಿಂದ ಬಂದ ನಂತರ ಸಮದ್ ಹಾಗೂ ಮುನೀರಾಳ ನಡುವೆ ಹೆಚ್ಚಿನ ಮಾತುಕತೆ ಇರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಸಮದ್ ಮಾತನಾಡುತ್ತಿದ್ದನು. ಸಮದ್ ಯಾವ ಮಂತ್ರವಾದಿ ಬಳಿ ಹೋಗಲು ಯತ್ನಿಸಿದ್ದ? ಮತ್ತೆ ಯಾಕೆ ಎರಡು ತಿಂಗಳ ಸಮಯ ಪಡೆದುಕೊಂಡಿದ್ದಾನೆ ಎಂದು ತಿಳಿಯುವುದರಲ್ಲಿ ಮುನೀರಾ ವಿಫಲಳಾಗಿದ್ದಳು. ಆದರೂ ಸಮಯಕ್ಕಾಗಿ ಆಕೆ ಕಾಯುತ್ತಿದ್ದಳು.

    ಆ ದಿನ ಪತಿಯು ಆಫೀಸಿಗೆ ಹೊರಟ ಮೇಲೆ ರೂಮನೊಮ್ಮೆ ಕ್ಲೀನ್ ಮಾಡೋಣವೆಂದು ರೂಮಿಗೆ ತೆರಳಿದಳು. ಕ್ಲೀನ್ ಮಾಡುತ್ತಿರಬೇಕಾದರೆ ತನ್ನ ಪತಿಯು ಪರ್ಸ್ ಬಿಟ್ಟು ಹೋಗಿರುವುದು ಆಕೆಯ ಗಮನಕ್ಕೆ ಬರುತ್ತದೆ. 

ಅಯ್ಯೋ ಪರ್ಸ್ ಬಿಟ್ಟು ಹೋಗಿದ್ದಾರಲ್ಲ, ಎಷ್ಟೊಂದು ಕಷ್ಟವಾಗುವುದೋ ಅವರಿಗೆ ಎಂದು ಎನಿಸಿ ಅದನ್ನು ತೆಗೆದಿಡುವ ಎಂದು ಎನಿಸಿ ಅದನ್ನು ಕೈಗೆತ್ತಿಕೊಂಡಳು. ಅಷ್ಟರಲ್ಲಿ ಆ ಪರ್ಸ್ ಒಳಗಡೆ ಮಡಚಿ ಇಟ್ಟಿರುವ ಚೀಟಿಯೊಂದು ಆಕೆಯ ಗಮನಕ್ಕೆ ಬಂದಿತು. ಇದೇನಿದು ಚೀಟಿ ಈ ರೀತಿ ಮಡಚಿ ಇಟ್ಟಿದ್ದಾರಲ್ಲ ಎಂದು ತೆರೆದು ನೋಡಲು ಯತ್ನಿಸಿದಳು.

ಅಷ್ಟರಲ್ಲಿ ಕಾರ್ ಹಾರ್ನ್ ಆಕೆಗೆ ಕೇಳಿಸಿತು. ಆಫೀಸಿಗೆ ಹೋದ ತನ್ನ ಪತಿ ಹಿಂದಿರುಗಿ ಬಂದಿದ್ದಾರೆ ಎಂದು ಆಕೆಗೆ ಮನದಟ್ಟಾಯಿತು. ಅವರು ಈ ಕೋಣೆಯೊಳಗೆ ಬರುವ ಮೊದಲು ಈ ಚೀಟಿಯಲ್ಲಿ ಏನಿದೆ ಎಂಬುದನ್ನ ನಾನು ನೋಡಬೇಕು ಎಂದು ಚೀಟಿ ತೆರೆದಳು

ಅದರಲ್ಲಿ ಫೋನ್ ನಂಬರ್ ಬರೆದಿತ್ತು. ಯಾರದು ಆಗಿರಬಹುದು ಇದು ? ಎಲ್ಲಾದರೂ ಆ ಮಂತ್ರವಾದಿಗೆ ಸಂಬಂಧಿಸಿದ್ದೇ ಎಂದು ಆಕೆಯ ಮನದಲ್ಲಿ ಸಂಶಯ ಮೂಡಿತು. ಏನು ಮಾಡುವುದು ಹೇಗೆ ಇದರ ಪರಿಶೋಧನೆ ಮಾಡುವುದು ಎಂದೆಲ್ಲಾ ಎನಿಸಬೇಕಾದರೆ ಕಾಲ ಹೆಜ್ಜೆಯ ಸಪ್ಪಳ ಕೇಳಿಸಿತು. ಚೀಟಿಯಲ್ಲಿ ಇದ್ದ ನಂಬರನ್ನು ಮತ್ತೊಂದು ಚೀಟಿಯಲ್ಲಿ ಬರೆದು ಕಪಾಟಿನ ಅಡಿಗೆ ಎಸೆದುಬಿಟ್ಟಳು. ನಂತರ ಆ ಪರ್ಸಿನೊಳಗೆ ಇದ್ದ ಚೀಟಿಯನ್ನು ಹಾಗೆಯೇ ಇಟ್ಟು ಯಥಾಸ್ಥಿತಿಯಲ್ಲಿ ಇಟ್ಟುಬಿಟ್ಟು, ಇಡಿಸೂಡಿ ತೆಗೆದುಕೊಂಡು ಕಸ ಗುಡಿಸುವಂತೆ ಮಾಡಿದಳು. ಅಷ್ಟರಲ್ಲಿ ಆಗಲೇ ಸಮದ್ ಬಾಗಿಲ ಬಳಿ ಬಂದು ತಲುಪಿದನು. ತನ್ನ ಪತ್ನಿ ಆಫೀಸ್ ರೂಮಿನೊಳಗೆ ಇರುವುದನ್ನು ನೋಡಿ ಅಚ್ಚರಿಯಾಯಿತು.

   " ಏನು ? ನೀನೇನು ಮಾಡುತ್ತಾ ಇದ್ದೀಯಾ ಇಲ್ಲಿ? " ಹೆಂಡತಿಯಲ್ಲಿ ನೇರವಾಗಿ ಪ್ರಶ್ನಿಸಿದನು.

" ಏನಿಲ್ಲರೀ , ಸ್ವಲ್ಪ ಗುಡಿಸಿ ಕ್ಲೀನ್ ಮಾಡೋಣ ಅಂತ ಹೇಳಿ ಬಂದೆ. "

" ಹ್ಞೂಂ, ನಾನು ನನ್ನ ಪರ್ಸ್ ಮರೆತುಹೋಗಿದ್ದೆ. ಹಾಗೆ ತೆಗೆದುಕೊಂಡು ಹೋಗೋಣವೆಂದು ಬಂದೆ." 

" ಹ್ಞಾಂ ಅದೇ ನಿಮ್ಮ ಪರ್ಸ್ ಟೇಬಲ್ ಮೇಲೆ ಇದ್ದದ್ದು ನಾನು ನೋಡಿದೆ."

 " ಮತ್ಯಾಕೆ ನಂಗೆ ನೀನು ಕರೆ ಮಾಡಿ ತಿಳಿಸಲಿಲ್ಲ? "

" ಹೇಳೋಣವೆಂದು ಇದ್ದೆ. ಆದರೆ ಅಷ್ಟರಲ್ಲಿ ನಿಮ್ಮ ಕಾರಿನ ಹಾರ್ನ್ ಕೇಳಿಸಿತು."

   ಆಕೆಯ ಮಾತುಗಳನ್ನು ಕೇಳಿದ ನಂತರ ಸಮದ್ ಒಮ್ಮೆ ಕೂಲಂಕಷವಾಗಿ ಆ ರೂಮನ್ನು ನೋಡಿದನು.

" ನನಗ್ಯಾಕೋ ಏನೋ ಎಡವಟ್ಟು ಆಗಿದೆ ಎಂದು ಎನಿಸುತ್ತಿದೆ. ಯಾಕೆ?" ಎಂದು ಪತ್ನಿಯತ್ತ ಸಂಶಯಾಸ್ಪದವಾಗಿ ನೋಡಿದನು.

" ಅಲ್ಲರೀ, ನೀವು ಯಾಕೆ ಏನೋ ಸಂಶಯದ ದೃಷ್ಟಿಯಿಂದ ನೋಡುತ್ತಾ ಇದ್ದೀರಾ? ಒಂದುವೇಳೆ ಈ ರೂಮಿನೊಳಗೆ ಬರಬಾರದು ಎಂದಾದರೆ ಹೇಳಿಬಿಡಿ. ನಾನು ಬರೋದಿಲ್ಲ."

   " ಹಾಗೇನಿಲ್ಲ ಇದು ನಿನ್ನದೆ ಮನೆ. ನಿನಗೇನು ಬೇಕೋ ಆ ಸ್ವಾತಂತ್ರ್ಯ ಎಲ್ಲವೂ ನಿನಗಿದೆ. ನನಗ್ಯಾಕೋ ಗೋಜಲಮಯ ಎನಿಸಿತು. ಹಾಗಾಗಿ ಕೇಳಿದೆ ಅಷ್ಟೇ."

   ಮುನೀರಾಳ ದೃಷ್ಟಿ ಈಗ ಟೇಬಲ್ನತ್ತ ಸಾಗಿತು. ಅಲ್ಲಿ ಆಕೆ ಹರಿದು ಇಟ್ಟ ಅರ್ಧ ಪೇಪರ್ ಹಾಗೆಯೇ ಇತ್ತು. ಅಯ್ಯೋ ಸಮದ್ ಈಗ ಅದನ್ನು ನೋಡಿದರೆ ಅಷ್ಟೇ ನನ್ನ ಗತಿ. ಖಂಡಿತವಾಗಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಅದನ್ನು ಕಂಡರೆ ಖಂಡಿತವಾಗಿಯೂ ನನ್ನ ಬಾಯಿ ಬಿಡಿಸುತ್ತಾರೆ. ಮತ್ತೆ ಎಂದೂ ಅವರು ತಪ್ಪಿಯೂ ಕೂಡ ಅಂತಹ ತಪ್ಪನ್ನು ಪುನಾರವರ್ತಿಸಲಿಕಿಲ್ಲ. ಮತ್ತೆ ನನಗೆ ಇದರ ಬಗ್ಗೆ ಯಾವುದೇ ಸುಳಿವು ಸಿಗಲಿಕ್ಕಿಲ್ಲ.ಯಾ ದೇವನೇ ನೀನೇ ನನ್ನನ್ನು ಕಾಪಾಡಬೇಕು. ಒಂದು ವೇಳೆ ನಾನು ಸಿಕ್ಕಿ ಬಿದ್ದರೆ ನನ್ನ ಮಗನ ಜೀವನ ಹಾಳಾಗುವುದು. ಅದನ್ನು ನಾನೆಂದಿಗೂ ಸಹಿಸಲಾರೆ ಎಂದು ಮನದಲ್ಲೇ ಪ್ರಾರ್ಥಿಸತೊಡಗಿದಳು.

   ಅಷ್ಟರಲ್ಲಾಗಲೇ ಸಮದ್ ದೃಷ್ಟಿ ಟೇಬಲ್ ಬಳಿ ಹೊರಳಿತು. ಆತ ಅದರ ಬಳಿ ನಡೆಯತೊಡಗಿದ. ಮುನೀರಾಳ ಹೃದಯವು ಜೋರಾಗಿ ಡಬ್ ಡಬ್ ಅಂತ ಬಾರಿಸತೊಡಗಿತು. ಇನ್ನೇನು ಆತ ಮುಟ್ಟಬೇಕು ಎನ್ನುವಷ್ಟರಲ್ಲಿ ಆತನ ಮೊಬೈಲ್ ರಿಂಗಣಿಸಿತು. ಮೊಬೈಲ್ ತೆಗೆದವನೇ

  " ಹ್ಞಾಂ , ಈಗಲೇ ಬಂದೆ." ಎಂದು ಕರೆ ಕಟ್ ಮಾಡಿದನು.

ನಂತರ ಮುನೀರಾಳತ್ತ ತಿರುಗಿ "ನನಗೆ ಅರ್ಜೆಂಟ್ ಆಗಿ ಹೋಗಬೇಕು. ಒಂದು ಮೀಟಿಂಗ್ ಇದೆ" ಎಂದು ಹೇಳಿ ಪರ್ಸ್ ಹಾಗೂ ಮೊಬೈಲ್ ಕಿಸೆಯಲ್ಲಿ ಇಟ್ಟು ಅಲ್ಲಿಂದ ಹೊರನಡೆದನು.
೭ ೮
ಸಮದ್ ಹೋದದ್ದನ್ನು ದೃಢಪಡಿಸಿದ ಮುನೀರಾ ಬದುಕಿದೆ ಬಡಜೀವವೇ ಎಂದುಕೊಂಡು ಕಪಾಟಿನ ಅಡಿಯಲ್ಲಿ ಇಟ್ಟಿದ್ದ ಚೀಟಿಯನ್ನು ತೆರೆದಳು. ಆ ನಂಬರ್ ನೋಡಿದವಳೇ ಅದೇ ಸಂಖ್ಯೆಗೆ ಡಯಲ್ ಮಾಡಿದಳು.

    ಅತ್ತ ಕಡೆ ಗಂಡಸರ ಧ್ವನಿ ಕೇಳಿಸಿತು. 

 " ಹಲೋ, ಇದು ಯಾರು ? " ಮುನೀರಾ ಕೇಳಿದಳು.

   " ಅಲ್ಲ, ನೀವೇ ಕರೆ ಮಾಡಿ ನನ್ನಲ್ಲಿ ನೀವು ಯಾರು ಎಂದು ಕೇಳಿದರೆ ಹೇಗೆ ? ಆತ ಪ್ರಶ್ನಿಸಿದ.

 " ಅಯ್ಯೋ ಕ್ಷಮಿಸಿ, ನಿಮ್ಮ ನಂಬರ್ ನನ್ನಲ್ಲಿ ಇದ್ದು ಈಗ ಯಾರು ಎಂದು ತಿಳಿಯುತ್ತಿಲ್ಲ. ಹಾಗಾಗಿ ಕೇಳಿದೆ "

 " ಓಹ್! ಹಾಗಾ, ಹಾಗಿದ್ದಲ್ಲಿ ನೀವು ಮಂತ್ರವಾದಿ ಬಳಿಗೆ ಬಂದವರು ಕಾಣಬೇಕು. ಅವರನ್ನು ಕೇಳಿಯೆ ನನಗೆ ತುಂಬಾ ಕರೆ ಬರುತ್ತಿದೆ. ಅವರು ಊರಲ್ಲಿ ಇಲ್ಲ. ಬರಲು ಇನ್ನೆರಡು ತಿಂಗಳು ಬೇಕಾಗಬಹುದು ಎಂದು ಹೇಳಿ ಹೇಳಿ ನನಗೆ ಸಾಕಾಗಿಹೋಯಿತು."

ತನಗೆ ಬೇಕಿದ್ದದ್ದು ಸಿಕ್ಕಿತು ಎಂದುಕೊಂಡ ಮುನೀರಾ " ಹ್ಞಾಂ... ಸರಿ ಸರಿ " ಎಂದು ಕರೆ ಕಟ್ ಮಾಡಿದಳು.

     ಓಹ್ ಈಗ ನನಗೆ ತಿಳಿಯಿತು. ಸಮದ್ ಯಾಕೆ ಅದರ ವಿಷಯದಲ್ಲಿ ಎರಡು ತಿಂಗಳು ಸಮಯ ಕೇಳಿದ್ದು ಎಂದು. ಏನಾದರೂ ಆ ಮಂತ್ರವಾದಿ ಎರಡು ತಿಂಗಳು ಇಲ್ಲ. ಅದರೊಳಗೆ ಆ ಹುಡುಗಿಯನ್ನು ಪತ್ತೆ ಹಚ್ಚಬೇಕು ಎಂದು ಯೋಚಿಸಿದಳು.

  ಕೊನೆಗೆ ಏನೋ ಧೃಡ ನಿರ್ಧಾರ ತೆಗೆದುಕೊಂಡವಳಂತೆ ಮಗದೊಮ್ಮೆ ತನ್ನ ಮೊಬೈಲ್ ಎತ್ತಿ ಸಾದಿನ ಡಾಕ್ಟರಿಗೆ ಕರೆ ಮಾಡಿ ಅದೇನೋ ವಿಷಯವನ್ನು ಸಮಾಲೋಚಿಸುತ್ತಾಳೆ.  

ಎಲ್ಲಾ ಮಾತನಾಡಿ ಮುಗಿದ ನಂತರ ಡಾಕ್ಟರ್ " ಸರಿ ನೋಡೋಣ , ಇನ್ನೆರಡು ದಿವಸಗಳಲ್ಲಿ ನಾನು ತಿಳಿಸುತ್ತೇನೆ." ಎಂದು ಕರೆ ಕಟ್ ಮಾಡಿದರು.

ತನ್ನ ಮಗಳು ಹಾಸ್ಟೆಲ್ ‌ಹೋಗುವ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಖಾದರಿಗೆ ಆಶ್ಚರ್ಯವಾಯಿತು.

   " ಏನು ಹೇಳುತ್ತಾ ಇದ್ದೀಯಾ ಸುರಯ್ಯಾ ನೀನು ? "

  " ಹೌದಪ್ಪ... ನಾನೋರ್ವ ಸೈಕೋಲೊಜಿಸ್ಟ್ ಆಗಬೇಕು ಎಂಬ ಬಯಕೆ ನನಗೆ ಇದೆ.ನನ್ನ ಕನಸು ನನಸಾಗಬೇಕು ಎಂದಾದಲ್ಲಿ ನೀವು ಒಪ್ಪಬೇಕು ಅಪ್ಪಾ ಪ್ಲೀಸ್ " 

      " ನಿನ್ನ ಕನಸು ನನಸಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ನೀನು ಅಷ್ಟು ದೂರ ಹೋದರೆ ಮನಸ್ಸಿಗೆ ಯಾಕೋ ಬೇಜಾರು. ಹಾಗಾಗಿ..."

 ಅಷ್ಟು ಹೇಳಿ ಖಾದರ್ ತನ್ನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದರು.

   " ಅಯ್ಯೋ ಅಪ್ಪಾ... ನಾನೇನು ಗಲ್ಫಿಗೆ ಹೋಗುತ್ತೇನೆ ಎಂದು ಹೇಳಿದೆನೇ? ಇಲ್ಲವಲ್ಲ. ಇಲ್ಲೇ ದೂರದ ಸಿಟಿಯಲ್ಲಿ ಅಷ್ಟೇ. ತಿಂಗಳಿಗೊಮ್ಮೆ ನಾನೇ ಬರುತ್ತೇನೆ. ಅಲ್ಲದಿದ್ದಲ್ಲಿ ನನ್ನ ನೆನಪಾದರೆ ನೀವೇ ನನ್ನ ನೋಡಲು ಬರಬೇಕು ಸರೀನಾ ?"

  ತುಂಬಾ ಹೊತ್ತು ಯೋಚಿಸಿದ ನಂತರ ಖಾದರ್ 

  " ಏನೋ ಮಗಳೇ ನಿನ್ನಿಷ್ಟ. ಇದುವರೆಗೆ ನಿನ್ನ ಯಾವುದೇ ಕೆಲಸಗಳಿಗೆ ನಾನು ತಣ್ಣೀರು ಎರಚಿಲ್ಲ. ಈಗ ಎರಚುವುದು ಇಲ್ಲ. ಸರಿ ಅದಕ್ಕೆ ಈಗ ಏನೆಲ್ಲಾ ಮಾಡಬೇಕು ಹೇಳು. ಅದನ್ನು ಮಾಡಿದರೆ ಆಯಿತು."

       " ಹಾಗೇನೂ ಮಾಡಲಿಕಿಲ್ಲ. ಒಂದು ಅಪ್ಲಿಕೇಶನ್ ಹಾಕಲಿಕ್ಕೆ ನಾವು ಅಲ್ಲಿ ಮೊದಲು ಹೋಗಬೇಕು.ನಿಮಗೆ ಯಾವಾಗ ಬಿಡುವಿದೆಯೋ ಆವಾಗ ಹೋಗೋಣ ಅಪ್ಪಾ."

" ಹಾಗಿದ್ದಲ್ಲಿ ಸರಿ ಮಗಳೇ.., ಒಂದೆರಡು ದಿವಸ ಬಿಟ್ಟು ಅಲ್ಲಿ ಹೋದರಾಗದೆ?"

   ತಂದೆಯ ಪ್ರಶ್ನೆಗೆ ಸುರಯ್ಯಾ "ಹ್ಞಾಂ .." ಎಂದು ಪ್ರತಿಕ್ರಿಯಿಸಿದಳು.

    ರಾತ್ರಿ ಸಫಿಯ್ಯಾತನ್ನ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಬರುವಾಗ ತನ್ನ ಪತಿಯು ಏನೋ ಚಿಂತಿಸುತ್ತಾ ಕುಳಿತಿರುವುದು ಕಾಣಿಸಿತು. ಅವರು ತನ್ನ ಮಗಳ ಬಗ್ಗೆಯೇ ಯೋಚಿಸುತ್ತಾ ಇದ್ದಾರೆ ಎಂದು ಸಫಿಯ್ಯ ಗ್ರಹಿಸಿದರು.

    " ಏನ್ರೀ, ಮಗಳ ಬಗ್ಗೆ ಯೋಚಿಸುತ್ತಾ ಇದ್ದೀರಾ ? "

" ಹ್ಞಾಂ ಸಫಿಯ್ಯಾ ಅದೇ ಯೋಚಿಸುತ್ತಿದ್ದೆ. ಜೀವನದಲ್ಲಿ ಆಕೆ ಯಾಕೆ ಆಕೆ ಅಷ್ಟೊಂದು ದೊಡ್ಡ ನಿರ್ಣಯ ತೆಗೆದುಕೊಂಡಳು? ಅವಳಿಲ್ಲದೆ ಈ ಮನೆಯಲ್ಲಿ ಇರೋದಾದರೂ ಹೇಗೆ ? ಅದೇ ತುಂಬಾ ಮನಸ್ಸಿಗೂ ಬೇಜಾರು."

   " ಅಲ್ಲರೀ ಅದಕ್ಕಾಗಿ ಇಷ್ಟೊಂದು ಆಲೋಚನೆ ಮಾಡುತ್ತಾ ಇದ್ದೀರಾ? ಆಕೆ ಹೆಣ್ಣು ಮಗಳು. ಇಂದಲ್ಲದಿದ್ದರೆ ನಾಳೆಯಾದರೂ ಮದುವೆಯಾಗಿ ಹೋಗಲೇ ಬೇಕಲ್ವೇ ಹೇಳಿ? " ಎಂಬ ಸಫಿಯ್ಯಾದರ ಮಾತಿಗೆ ಖಾದರ್ ಹೌದು ಎಂದು ತಲೆದೂಗಿದರು.

" ಅಲ್ಲರೀ ನನಗೆ ಒಂದು ಸಂದೇಹ ಇದೆ. ಏನಂದರೆ ಸಹನಾರವರು ಈಗ ಅಲ್ಲೇ ಅಲ್ವಾ ಮನೆ ಮಾಡಿರೋದು ? ಎಲ್ಲಾದರು ಅವರು ಸುರಯ್ಯಾಳಿಗೆ ಸಿಕ್ಕಿಬಿಟ್ಟರೆ ಅಂತ ಭಯವಾಗುತ್ತಾ ಇದೆ. ಒಂದು ವೇಳೆ ಆ ರೀತಿ ಆದರೆ ಆಕೆ ಹಳೆಯದನ್ನೆಲ್ಲ ಮತ್ತೆ ಜ್ಞಾಪಿಸಿಕೊಳ್ಳುತ್ತಾಳೆ."

 " ಇಲ್ಲ ಸಫಿಯ್ಯಾ, ಸಿಟಿ ಅಂದರೆ ನಮ್ಮ ಹಳ್ಳಿ ಹಾಗೆ ಹತ್ತಿಪತ್ತೋ ಮನೆಗಳು ಅಲ್ಲಾ ಇರೋದು. ಅಷ್ಟೊಂದು ದೊಡ್ಡ ಸಿಟಿಯಲ್ಲಿ ಅವರು ಸುರಯ್ಯಾಳಿಗೆ ಸಿಗಲಾರರು. ಅಲ್ಲದೇ ಸುರಯ್ಯಾಳಿಗೂ ಅವರು ಅದೇ ಸಿಟಿಯಲ್ಲಿ ಇದ್ದಾರೆ ಎಂದು ತಿಳಿದಿಲ್ಲವಲ್ಲ. ಹಾಗಾಗಿ ನೀನೇನು ಯೋಚಿಸಬೇಡ. ಕೆಲಸ ಮಾಡಿ ಸುಸ್ತಾಗಿದ್ದೀಯಲ್ವಾ? ಮಲಗಿಕೋ ಎಂದು ಪತ್ನಿಗೆ ಹೇಳಿ ಖಾದರ್ ತಾವೂ ಕೂಡ ಮಲಗಿದರು.

************************

      ತನ್ನ ಮೊಬೈಲ್ ಒಂದೇ ಸಮನೆ ರಿಂಗಣಿಸುತ್ತಿದುದು ನೋಡಿದ ಮುನೀರಾ ಕರೆ ರಿಸೀವ್ ಮಾಡಲೆಂದು ಬಂದಳು.

   ಅರೇ ಡಾಕ್ಟರ್ ಕಾಲ್ ಮಾಡುತ್ತಾ ಇದ್ದಾರಲ್ಲ, ಏನೋ ಅರ್ಜೆಂಟ್ ಇದೆ ಅಥವಾ ಏನೋ ಮಾಹಿತಿ ಸಿಕ್ಕಿರಬೇಕು ಎಂದುಕೊಂಡು ಕರೆ ರಿಸೀವ್ ಮಾಡಿದಳು.

   " ಹಲೋ ಮುನೀರಾ ಅವರೆ ನೀವು ಹೇಳಿದ ಡೀಟೈಲ್ಸ್ ಕಲೆಕ್ಟ್ ಮಾಡಿದೆ. ಅವರ ಅಡ್ರೆಸ್ ಸಿಕ್ಕಿತು. ಅದನ್ನು ನಾನು ನಿಮಗೆ ವಾಟ್ಸಾಪ್ ಮೂಲಕ ಕಳುಹಿಸುತ್ತೇನೆ. ನೀವು ಅದನ್ನು ನೋಡಿ. ಆಮೇಲೆ ಅವರನ್ನು ನೀವು ಹೇಗಾದರೂ ಮಾಡಿ ಪತ್ತೆಹಚ್ಚಿ." ಎಂದು ಕರೆ ಕಟ್ ಮಾಡಿದರು.

ಮುನೀರಾ ವಾಟ್ಸಾಪ್ ಮೂಲಕ ಬಂದ ಆ ಅಡ್ರೆಸ್ ನೋಡಿ ಆಘಾತಕ್ಕೊಳಗಾದಳು.. 
   
   ಅರೇ, ಇದು ಯಾವ ಊರು? ನಾನು ಇದುವರೆಗೆ ಕೇಳಿಯೇ ಇಲ್ಲ. ಇದು ಎಲ್ಲಿ ಬರುತ್ತದೆ ಎಂದು ಕೂಡ ನನಗೆ ತಿಳಿದಿಲ್ಲ. ವಿಚಾರಿಸೋದಾದರೂ ಯಾರಲ್ಲಿ? ಓಹ್ ದೇವರೇ ನೀನೇ ನನಗೊಂದು ದಾರಿ ತೋರಿಸಬೇಕು ಎಂದು ಮನದಲ್ಲೇ ಬೇಡಿದಳು.

   ಅಷ್ಟರಲ್ಲಿ ಡೋರ್ ಬೆಲ್ ಬಾರಿಸಿತು. ಅರೇ ಈ ಹೊತ್ತಿನಲ್ಲಿ ಯಾರು ಬಂದಿರಬಹುದು ಎಂದು ಇಣುಕಿ ನೋಡಿದಳು.

    ನೋಡಬೇಕಾದರೆ ಮನೆ ಕೆಲಸದವಳಾದ ಸೈದಾ ಬಂದಿದ್ದಳು. ಮುನೀರಾ ಕದ ತೆರೆದಳು.

   " ಅರೇ ಏನು ಸೈದಾ ? ಎಷ್ಟು ದಿನಗಳಾಯಿತು ನೀನು ಬಾರದೆ ? ಏನು ವಿಷಯ? " ಎಂದು ಒಮ್ಮೆಲೇ ವಿಚಾರಿಸಿದಳು.

    " ಇಲ್ಲಾ ಅಮ್ಮಾವ್ರೇ ಅಮ್ಮನ ಮೈಗೆ ಒಂದು ಚೂರು ಉಷಾರಿರಲಿಲ್ಲ. ಹಾಗಾಗಿ ಬರಲಾಗಲಿಲ್ಲ. ಯಜಮಾನ್ರಲ್ಲಿ ನಾನು ತಿಳಿಸಿದ್ದೇನೆ. ಅವರು ಹೇಳಲಿಲ್ಲವೇ ನಿಮಗೆ? "

  ಅರೇ ಈಕೆ ಸಮದಿಗೆ ತಿಳಿಸಿದ್ದಾಳೆ. ಆದರೂ ಸಮದ್ ತನ್ನ ಬಳಿ ಹೇಳಲಿಲ್ಲ ಎಂದು ಮುನೀರಾ ಯೋಚಿಸುತ್ತಿದ್ದಳು.

  " ಏನಾಯ್ತು ಅಮ್ಮಾವ್ರೇ ? ಏನೋ ಯೋಚನೆಯಲ್ಲಿ ಮುಳುಗಿ ಹೋಗಿದ್ದೀರಿ? " ಎಂಬ ಸೈದಾಳ ಪ್ರಶ್ನೆಯು ಮುನೀರಾಳನ್ನು ವಾಸ್ತವ ಲೋಕಕ್ಕೆ ತಂದಿತು. ಯಾರಲ್ಲಾದರೂ ತನ್ನ ಮನಸ್ಸಿನ ದುಖ, ದುಮ್ಮಾನ ಹೇಳಬೇಕು ಎಂದಿದ್ದ ಮುನೀರಾಳಿಗೆ ಸೈದಾಳಲ್ಲಿ ಎಲ್ಲಾ ತೆರೆದು ಹೇಳೋಣ ಎಂದೆನಿಸಿತು.

    ಮುನೀರಾ ಸೈದಾಳಲ್ಲಿ ಎಲ್ಲಾ ಹೇಳಲು ಪ್ರಾರಂಭಿಸಿದಳು. ತನ್ನ ಮಗನ ಜೀವನದಲ್ಲಿ ನಡೆದ ಒಂದು ಬದಲಾವಣೆ, ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಾರ್ಜರ್ ಕೇಳಲು ಬಂದಂತಹ ಹುಡುಗಿಯನ್ನು ಆತ ಆಯಿಷಾ ಎಂದು ಕರೆದಿದ್ದು, ಅಲ್ಲಿಂದ ಬೆಂಗಳೂರಿಗೆ ಹೋದದ್ದು, ತನ್ನ ಗೆಳೆಯರ ಮಾತು ಕೇಳಿ ತನ್ನ ಪತಿಯು ಮಂತ್ರವಾದಿ ಬಳಿ ಹೋಗಲು ಪ್ರಯತ್ನಿಸುತ್ತಿರುವುದು, ಆತ ಎರಡು ತಿಂಗಳು ಊರಲ್ಲಿ ಇಲ್ಲದೇ ಇರುವುದರಿಂದ ಅದರೊಳಗಾಗಿ ತಾನು ನನ್ನ ಮಗನನ್ನು ಮೊದಲ ಸ್ಥಿತಿಗೆ ಬರುವ ಹಾಗೆ ಪ್ರಯತ್ನಿಸುತ್ತಿರುವುದು ಎಲ್ಲಾ ವಿವರಿಸಿದಳು. ಇದೆಲ್ಲಾ ಕೇಳಿದ ಸೈದಾಳಿಗೆ ಆಶ್ಚರ್ಯವಾಯಿತು.

   " ಅರೇ ಅಮ್ಮಾವ್ರೇ, ಈಗ ನೀವು ಏನು ಮಾಡಬೇಕು ಎಂದು ಇದ್ದೀರಿ ಹೇಳಿ ? " ಆಕೆ ಮುನೀರಾಳಲ್ಲಿ ಕೇಳಿದರು.

  " ನಾನೀಗ ಆಸ್ಪತ್ರೆಯಲ್ಲಿ ಸಿಕ್ಕಿದ ಹುಡುಗಿಯನ್ನು ಪತ್ತೆ ಹಚ್ಚಬೇಕು ಎಂದು ಇದ್ದೇನೆ. ಹಾಗಾಗಿ ಆಕೆಯ ಅಡ್ರೆಸ್ ಕೇಳಿದ್ದೆ. ಅದು ದೊರಕಿದೆ. ಆದರೆ ಅದು ಎಲ್ಲಿ ಎಂದು ನನಗೆ ತಿಳಿದಿಲ್ಲ. ಹಾಗೇ ಯೋಚಿಸುತ್ತಿರಬೇಕಾದರೆ ನೀನು ಬಂದೆ"

   " ಅಮ್ಮಾವ್ರೇ, ಅದಕ್ಕಿಂತ ಆತನ ಕಾಲೇಜಿಗೆ ಹೋಗಿ ಆಯಿಷಾ ಯಾರು ಎಂದು ನೋಡಬಹುದಲ್ವಾ ? "

  " ಅರೇ ಸೈದಾ ಆಕೆಯನ್ನು ನಾನು ಹುಡುಕುವುದಾದರೂ ಹೇಗೆ ? ಆತ ಕಲಿತಿದ್ದು ಬಾಯ್ಸ್ ಕಾಲೇಜಿನಲ್ಲಿ. ಅಲ್ಲಿ ಯಾವುದೇ ಹುಡುಗಿಯರು ಇರಲಿಲ್ಲ. ಇಲ್ಲದಿದ್ದಲ್ಲಿ ನಾನು ಇಷ್ಟರಲ್ಲಿ ಯಾರು ಎಂದು ಪತ್ತೆಹಚ್ಚುತ್ತಿದ್ದೆ. ಆದರೆಈಗಈ ಹುಡುಗಿ ಎಲ್ಲಿ ಅಂತ ನಾನು ಹುಡುಕಲಿ ಹೇಳು ? ಅದೆಷ್ಟು ಆಯಿಷಾ ಇಲ್ಲ ಈ ಊರಿನಲ್ಲಿ. ಅದಕ್ಕಾಗಿ ಈಗ ಆತ ಯಾವ ಹುಡುಗಿಯನ್ನು ಆಯಿಷಾ ಎಂದು ಎನಿಸಿದ್ದಾನೋ ಆಕೆಯನ್ನು ಹುಡುಕುವುದು ಒಳ್ಳೆಯದು ಅಲ್ವಾ ಹೇಳು? "

" ಅದು ಹೌದು ಅಮ್ಮಾವ್ರೇ... ಈಗ ಈ ಅಡ್ರೆಸ್ ಎಲ್ಲಿ ಬರುತ್ತೆ? "

  " ಅದೇ ನನಗೂ ಗೊತ್ತಿಲ್ಲ. ನಾನು ಆ ಊರಿನ ಹೆಸರು ಕೇಳಿಯೇ ಇಲ್ಲ. ನಿನಗೆಲ್ಲಾದರು ತಿಳಿದಿದೆಯೇ ನೋಡು" ಎಂದು ಮುನೀರಾ ಆ ಅಡ್ರೆಸನ್ನು ಸೈದಾಳಿಗೆ ತೋರಿಸಿದಳು.

 " ಅರೇ ಅಮ್ಮಾವ್ರೇ ಈ ಅಡ್ರೆಸ್ ನನಗೆ ಗೊತ್ತು. ನನ್ನ ಅಣ್ಣನಿಗೆ ಈ ಊರಿನ ಗೆಳೆಯನೊಬ್ಬ ಇದ್ದಾನೆ. "

     "ಹೌದಾ ಹಾಗಿದ್ದಲ್ಲಿ ಈಗಲೇ ನೀನು ನಿನ್ನ ಅಣ್ಣನಿಗೆ ಕರೆ ಮಾಡಿ ಆತನ ಗೆಳೆಯನಲ್ಲಿ ಕೇಳಲು ಹೇಳು ಪ್ಲೀಸ್. " ಮುನೀರಾ ತುಸು ಉತ್ಸಾಹದಿಂದಲೇ ಹೇಳಿದಳು.

   ಸರಿ ಎನ್ನುತ್ತಾ ಸೈದಾ ತನ್ನ ಅಣ್ಣನಿಗೆ ಕರೆ ಮಾಡಿ ವಿಚಾರ ತಿಳಿಸಿದಳು. ಆತ ಈಗಲೇ ತನ್ನ ಗೆಳೆಯನಲ್ಲಿ ಕೇಳಿ ಹೇಳುತ್ತೇನೆ ಎಂದು ಕರೆ ಕಟ್ ಮಾಡಿದನು.

    *****************

     ಸುರಯ್ಯಾ ಬೇಗ ಹೊರಡು, ತಡವಾದಲ್ಲಿ ಬಸ್ ಮಿಸ್ ಆಗಬಹುದು ಎಂದು ಖಾದರ್ ಮಗಳಿಗೆ ಹೇಳಿದರು.

  ಸರಿ ಎಂದು ಸುರಯ್ಯಾ ಹೊರಡಿ ತಾಯಿ ಹಾಗೂ ಅಜ್ಜಿ ಬಳಿ ಹೇಳಿ ಅಪ್ಲಿಕೇಶನ್ ಹಾಕಲು ಎಂದು ತಂದೆಯೊಂದಿಗೆ ನಡೆದಳು.

   ತುಂಬಾ ದೂರದ ಪ್ರಯಾಣ ಆದ್ದರಿಂದ ಯಾಕೋ ಬಸ್ಸಿನಲ್ಲಿ ನಿದ್ದೆ ಹತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ತಂದೆ ಭುಜ ತಟ್ಟಿ "ಅರೇ ಸುರಯ್ಯಾ ಏಳು. ಇನ್ನೇನು ಸಿಟಿಗೆ ತಲುಪಲು ಸ್ವಲ್ಪ ಸಮಯವಿದೆ ಅಷ್ಟೇ" ಎಂದಾಗಲೇ ಆಕೆಗೆ ಎಚ್ಚರವಾದದ್ದು. ಸರಿಯಾಗಿ ಕುಳಿತುಕೊಂಡವಳೇ ಕಿಟಕಿ ಹೊರಗಡೆ ತದೇಕಚಿತ್ತದಿಂದ ನೋಡ ತೊಡಗಿದಳು. ಇನ್ನು ನನ್ನ ಮುಂದಿನ ಬಾಳ ಪಯಣ ಈ ಪಟ್ಟಣದಲ್ಲಿ ಇರುವ ಜನಜಂಗುಳಿ ಮಧ್ಯೆ ಅಲ್ಲವೇ. ಹೊಸ ಜನರು, ಹೊಸ ಬಾಳು ಎಂದೆಲ್ಲಾ ಯೋಚಿಸುತ್ತಿದ್ದಳು.

   ಅಷ್ಟರಲ್ಲಿ ಅವರ ಬಸ್ ಟ್ರಾಫಿಕ್ ಸಿಗ್ನಲ್ ಇದ್ದ ಕಾರಣ ನಿಂತಿತ್ತು. ಹೊರಗಡೆ ನೋಡುತ್ತಿದ್ದ ಸುರಯ್ಯಾಳ ದೃಷ್ಟಿ ಪಕ್ಕದಲ್ಲೇ ಇದ್ದ ಕಾರಿನತ್ತ ಹೊರಳಿತು.. ಕಾರಿನ ಬದಿಯಲ್ಲಿ ಕುಳಿತಿದ್ದ ಹೆಂಗಸನ್ನು ನೋಡಿದವಳಿಗೇ ತಾನು ಈ ಹೆಂಗಸನ್ನು ಎಲ್ಲೋ ನೋಡಿದ ಹಾಗೆ ಆಗುತ್ತಿದೆಯಲ್ಲ ಎಂದು ಎನಿಸಿದಳು. ಯಾರು ಇವರು ಇವರನ್ನು ಎಲ್ಲಿ ನೋಡಿದ್ದೇನೆ ನಾನು ಎಂದು ಯೋಚಿಸತೊಡಗಿದಳು.

ಅರೇ ಈ ಹೆಂಗಸನ್ನು ನಾನು ಎಲ್ಲಿ ನೋಡಿರೋದು? ಒಂದೂ ತಲೆಗೆ ಹೋಗುತ್ತಿಲ್ಲ ಅಲ್ಲವಾ?.. ಸುರಯ್ಯಾ ಆಲೋಚಿಸುತ್ತಲೇ ಇದ್ದಳು. ಅಷ್ಟರಲ್ಲಿ ತನ್ನನ್ನು ಯಾರೋ ನೋಡಿದಂತಾಗಿ ಆ ಕಾರಿನಲ್ಲಿದ್ದ ಹೆಂಗಸು ಬಸ್ಸಿನತ್ತ ನೋಡಿದಳು. ಆಕೆ ತನ್ನತ್ತಲೇ ನೋಡುತ್ತಿರುವ ಸುರಯ್ಯಾಳನ್ನು ಕಂಡಳು.. ಆಕೆ ತನ್ನತ್ತ ನೋಡಿದಾಗ ಸುರಯ್ಯಾಳಿಗೆ ಅವರ ಪರಿಚಯ ಸಿಕ್ಕಿತು. ಸುರಯ್ಯಾ ಆಗಲೇ ತಂದೆಯನ್ನು ತಟ್ಟಿ ತಟ್ಟಿ "ಅಪ್ಪಾ... ಅಲ್ಲಿ ನೋಡಿ ಸಾರಾ ಆಂಟಿ... ಆ ಕಾರಿನಲ್ಲಿ ಇದ್ದಾರೆ " ಎಂದು ತಂದೆಗೆ ತೋರಿಸುವಷ್ಟರಲ್ಲಿ ಸಿಗ್ನಲ್ ತೆರೆದು ಗಾಡಿಗಳೆಲ್ಲಾ ಚಲಿಸಲು ಪ್ರಾರಂಭಿಸಿದವು.

  ಖಾದರ್ ನೋಡುವಷ್ಟರಲ್ಲಿ ಆ ಕಾರ್ ಪಾಸ್ ಆಗಿ ಆಗಿತ್ತು. " ಅರೇ ಸುರಯ್ಯಾ.. ಯಾರು ಯಾರನ್ನೋ ಸಾರ ಎಂದು ಹೇಳುತ್ತಾ ಇದ್ದೀಯಲ್ಲ. ಎಲ್ಲೋ ನಿನಗೆ ಕಂಡ ಹಾಗೆ ಆಗಿದ್ದಿರಬಹುದು. " ಎಂದರು.

  "ಇಲ್ಲಪ್ಪ ನನಗೆ ಅವರ ಪರಿಚಯ ಸಿಗುವುದಿಲ್ಲವೇ ಹೇಳಿ?ನಾನು ಸರಿಯಾಗೇ ನೋಡಿದ್ದೇನೆ."

    " ಹ್ಞೂಂ, ಇರಲಿ ಬಿಡು. ಅವರು ನಮ್ಮ ಬಾಳಿನಲ್ಲಿ ಮುಗಿದು ಹೋದಂತಹ ಒಂದು ಅಧ್ಯಾಯವಾಗಿದ್ದಾರೆ. ನಾವು ಇಳಿಯುವ ಸ್ಟಾಪ್ ಹತ್ತಿರ ಬಂತು. ನೀನು ಬಾ... "ಎಂದು ಮಗಳನ್ನು ಖಾದರ್ ಕರೆದರು.

   ಬಾಯಿ ಮಾತಿನಲ್ಲಿ ಏನೋ ಅವರು ಆ ರೀತಿ ಹೇಳಿದ್ದಾರಾದರೂ ಮನದಲ್ಲಿ ಅವರಿಗೆ ಆತಂಕ ಶುರುವಾಗಿತ್ತು. ಅಯ್ಯೋ ದೇವರೇ ಮತ್ತೆಂದಿಗೂ ನನ್ನ ಮಗಳ ಬದುಕಿನಲ್ಲಿ ಅವರ ಪ್ರವೇಶವಾಗದಿರಲಿ. ಒಮ್ಮೆ ಆಕೆ ಅವರಿಂದ ಅನುಭವಿಸಿದ ಅವಮಾನಗಳೇ ಸಾಕು ಎಂದು ಮನದಲ್ಲಿಯೇ ಪ್ರಾರ್ಥಿಸಿದರು.

ಖಾದರ್ ಯೋಚನೆ ಆ ರೀತಿ ಆದರೆ ಸುರಯ್ಯಾಳ ಯೋಚನೆಯೇ ಬೇರೆಯಾಗಿತ್ತು. ನಾನು ನೋಡಿದ್ದು ಸಾರಾ ಆಂಟಿಯೇ ಎಂದು ನನಗೆ ಖಾತರಿ ಇದೆ. ಅವರ ಜೊತೆ ಸಹನಾ ಇದ್ದಳೋ ಏನೋ. ಆಕೆಯನ್ನೊಮ್ಮೆ ನೋಡಲು ಮನಸ್ಸು ಹಂಬಲಿಸುತ್ತಿದೆ‌.ಅದೆಷ್ಟು ದಿನಗಳಾದವು ಆಕೆಯನ್ನು ಕಾಣದೆ. ಚಿಕ್ಕವಳಿರುವಾಗ ತಿಳುವಳಿಕೆ ಇಲ್ಲದೆ ಆಕೆಯ ಅಮ್ಮನ ಮಾತನ್ನು ಕೇಳಿದಳು ಎಂದು ದೊಡ್ಡವಳಾದ ಮೇಲೆ ಅದೆಲ್ಲಾ ತಪ್ಪು ಎಂದು ಆಕೆಗೆ ಮನದಟ್ಟಾಗಿರಬಹುದು.. ನನಗೆ ಆಕೆಯ ಮೇಲೆ ಎಷ್ಟು ಪ್ರೀತಿ ಇದೆಯೇ ಆಕೆಗೂ ಅಷ್ಟೇ ಪ್ರೀತಿ ಇರಬಹುದು. ಹಾಗಿತ್ತಲ್ಲವೇ ನಮ್ಮ ಸ್ನೇಹ. ಆಕೆ ಅದನ್ನು ಮರೆಯುವುದಾದರೂ ಹೇಗೆ?. ಹೀಗೆಯೇ ಆಕೆಯ ಮನಸ್ಸು ಯೋಚಿಸುತ್ತಿತ್ತು. ಅಷ್ಟರಲ್ಲಿ ಬಸ್ ಒಮ್ಮೆಲೇ ಬ್ರೇಕ್ ಹಾಕಿ ನಿಂತಿತು. ಅಷ್ಟರಲ್ಲಿ ಆಕೆ ತನ್ನ ಯೋಚನೆಗಳಿಗೂ ಬ್ರೇಕ್ ಹಾಕಿ ಬಸ್ಸಿನಿಂದ ಇಳಿದಳು.

        ಇತ್ತ ಕಾರಿನಲ್ಲಿ ಇದ್ದ ಸಾರ ಸುರಯ್ಯಾಳನ್ನು ನೋಡಿದ್ದಳು. ಆಕೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಮಗಳನ್ನು ಕರೆದು

" ಸಹಾನ, ನೀನು ನೋಡಿದೆಯಾ ಆ ಹುಡುಗಿಯನ್ನು. ಆಕೆ ಸಿಗ್ನಲಿನಲ್ಲಿ ನಿಂತಿದ್ದ ಬಸ್ಸಿನಲ್ಲಿ ಇದ್ದಳು. ಆಕೆಗೆ ನನ್ನ ಪರಿಚಯ ಸಿಕ್ಕಿರಬಹುದು. ನನ್ನನ್ನೇ ನೋಡುತ್ತಲಿದ್ದಳು. ಯಾರೋ ನನ್ನನ್ನು ನೋಡುತ್ತಿದ್ದಾರೆ ಎಂದು ಎನಿಸಿ ನಾನು ಹಿಂದಿರುಗಿ ನೋಡಿದೆ"ಎಂದು ಹೇಳಿದಳು.

    " ಯಾರು ಮಮ್ಮಿ ? ಯಾವ ಹುಡುಗಿ?" ಸಹಾನ ಒಂದೂ ಅರ್ಥವಾಗದಂತೆ ಕೇಳಿದಳು.

  " ಅದೇ ಹುಡುಗಿ ,ನಿನ್ನ ತಂದೆಯ ಊರಿನಲ್ಲಿ ನಾವು ಇರಬೇಕಾದರೆ ಅಲ್ಲೊಬ್ಬಳು ನಿನ್ನ ಜೊತೆ ಆಡಲು ನಿನ್ನ ಗೆಳತಿ ಬರುತ್ತಿದ್ದಳಲ್ಲಾ ಅವಳು. ನೋಡಲು ತುಂಬಾ ಕುರೂಪಿಯಾಗಿದ್ದಳು. ಆಕೆಯೊಂದಿಗೆ ಆಟವಾಡಬೇಡ ಎಂದು ನಾನು ನಿನಗೆ ಬುದ್ಧಿ ಹೇಳಿದ್ದೆ. ನೆನಪಿದೆಯಾ?"

  " ನೀನು ಯಾರ ಬಗ್ಗೆ ಹೇಳುತ್ತಿದ್ದಿ ಎಂದು ನನಗೆ ಗೊತ್ತೂ ಇಲ್ಲ, ಗೊತ್ತಾಗೋದೂ ಬೇಡ. ಯಾವುದೋ ತಿಳಿಯದ ಕಾಲದಲ್ಲಿ ಯಾರ ಜೊತೆಯೋ ಒಟ್ಟಿಗೆ ಆಡಿದ್ದೆ ಎಂದು ಈಗ ಆಕೆಯನ್ನು ನನ್ನ ಗೆಳತಿ ಎನ್ನಬೇಡ. ನನ್ನ ಗೆಳತಿಯಾಗಬೇಕಾದರೆ ಅವರಿಗೆ ಒಂದು ಸ್ಟ್ಯಾಂಡರ್ಡ್ ,ಸ್ಟೇಟಸ್ ಇರಬೇಕು. ಅದು ಬಿಟ್ಟು ದಾರಿಯಲ್ಲಿ ಹೋಗುವ ಬಿಕ್ಷುಕರನ್ನು ನನ್ನ ಫ್ರೆಂಡ್ ಎಂದು ಇನ್ನು ಯಾವತ್ತೂ ಹೇಳಬೇಡ. ಸಹಾನ ಸಿಟ್ಟಿನಲ್ಲಿಯೇ ನುಡಿದಳು.

ಮಗಳ ಮಾತು ಕೇಳಿ ಸಾರಳ ಮುಖದಲ್ಲಿ ನಗು ಮೂಡಿತು. ಈಕೆ ನನ್ನದೇ ಮಗಳು ಎಂದು ಆಕೆ ಯೋಚಿಸಿದಳು. ಇನ್ನು ನನಗೇಕೆ ಚಿಂತೆ ಎಂದು ಆಕೆ ಸುಮ್ಮನಾದಳು.

   **********************

    ಸೈದಾಳ ಫೋನ್ ರಿಂಗಣಿಸುತ್ತಿತ್ತು. ಬೇಗನೇ ರಿಸೀವ್ ಮಾಡಿ ವಿಷಯ ಕೇಳು ಎಂದು ಮುನೀರಾ ಆತುರ ತೋರಿದಳು.

  ಸೈದಾ ಅದರಂತೆ ಕರೆ ರಿಸೀವ್ ಮಾಡಿದಳು.

   " ಹ್ಞಾಂ ಸೈದಾ, ವಿಷಯ ತಿಳಿದುಕೊಂಡೆ. ಆದರೆ ಆ ಹುಡುಗಿಯ ಊರು ಅದಲ್ಲವಂತೆ. ಅದು ಆಕೆಯ ಅಜ್ಜಿ ಮನೆ. ಆಕೆ ತನ್ನ ತಂದೆಯ ಊರಿನಲ್ಲಿ ಇದ್ದಾಳೆ. ಅಲ್ಲಿಯ ಅಡ್ರೆಸ್ ತೆಗೆದುಕೊಳ್ಳಿ. " ಎಂದು ಸೈದಾಳ ಅಣ್ಣ ಒಂದೇ ಉಸಿರಿಗೆ ನುಡಿದನು.

  ಫೋನ್ ಲೌಡ್ ಸ್ಪೀಕರ್ ಅಲ್ಲಿ ಇದ್ದ ಕಾರಣ ಮುನೀರಾಳಿಗೆ ಎಲ್ಲಾ ಕೇಳಿಸುತ್ತಿತ್ತು. ಆಕೆಯ ಮುಖದಲ್ಲಿ ಮೂಡಿದ್ದ ನಿರಾಶ ಭಾವದ ಛಾಯೆಯನ್ನು ಸೈದಾ ಗಮನಿಸಿದಳು. ಮತ್ತೊಂದು ಅಡ್ರೆಸ್ ಹುಡುಕುವುದು ಹೇಗೆ ಎಂಬುದೇ ಅವರ ಚಿಂತೆಗೆ ಕಾರಣ ಎಂದು ಆಕೆ ಅರ್ಥೈಸಿಕೊಂಡಳು.

  ಅಷ್ಟರಲ್ಲಿ ಸೈದಾಳ ಅಣ್ಣ ಮಾತು ಮುಂದುವರಿಸಿದವನೇ 

  " ಹ್ಞಾಂ ಸೈದಾ ಆತನಲ್ಲಿ ನಾನು ಅವರ ಮನೆಯ ನಂಬರ್ ತೆಗೆದುಕೊಂಡಿದ್ದೇನೆ. ಬೇಗ ಹೇಳ್ತೇನೆ ಸೇವ್ ಮಾಡಿಕೊಳ್ಳು" ಎಂದನು.

   ಆತನ ಮಾತು ಕೇಳಿದ್ದೇ ತಡ ಮುನೀರಾ ತಕ್ಷಣ ತನ್ನ ಮೊಬೈಲ್ ತಂದು ಆತ ಹೇಳಿದ ನಂಬರ್ ಡಯಲ್ ಮಾಡಿದಳು.

ಫೋನ್ ರಿಂಗಣಿಸಿತು. ಅತ್ತ ಕಡೆ ಹೆಂಗಸರ ಧ್ವನಿಯೊಂದು ಕೇಳಿಸಿತು.

   " ಹಲೋ ಸುರಯ್ಯಾ ಇಲ್ಲವಾ? " ಮುನೀರಾ ನೇರವಾಗಿಯೇ ಕೇಳಿದಳು.

  " ಇಲ್ಲ. ಆಕೆ ತಂದೆಯೊಂದಿಗೆ ಅಪ್ಲಿಕೇಶನ್ ತರಲು ಎಂದು ಪಟ್ಟಣಕ್ಕೆ ಹೋಗಿದ್ದಾಳೆ. ಇದು ಯಾರು ? "

  ಎಂಬ ಸಫಿಯ್ಯಾದರ ಪ್ರಶ್ನೆಗೆ ಮುನೀರಾಳಿಗೆ ನಿಜ ಹೇಳಬೇಕೋ ಬೇಡವೋ ಗೊತ್ತಾಗಲಿಲ್ಲ. ಆದರೂ ಸುಳ್ಳು ಹೇಳಲು ಮನಸ್ಸು ಬಾರದೆ ನಿಜವನ್ನೇ ಹೇಳಿದಳು.

     ಸಫಿಯ್ಯಾದರಿಗೆ ಇಕ್ಕಟ್ಟಿನಲ್ಲಿ ಸಿಲುಕಿದ ಹಾಗೆ ಆಯಿತು ‌ 

    ಮುನೀರಾ ಮಾತು ಮುಂದುವರಿಸಿದವಳೇ " ನನಗೆ ನಿಮ್ಮ ಮಗಳಿಂದ ಒಂದು ಸಹಾಯವಾಗಬೇಕಿತ್ತು. ದಯವಿಟ್ಟು ಆಕೆ ಬಂದರೆ ಕರೆ ಮಾಡಲು ಹೇಳುವಿರಾ ? ನನ್ನ ಮಗನ ಬದುಕು ಸರಿ ಮಾಡಲು ಆಕೆಗೆ ಸಾಧ್ಯವಿದೆ. ದಯವಿಟ್ಟು ಇಲ್ಲ ಎನ್ನಬೇಡಿ " ಎನ್ನುವಷ್ಟರಲ್ಲಿ ಮುನೀರಾಳ ಧ್ವನಿ ಗದ್ಗದಿತವಾಯಿತು.

   ಯಾಕೋ ಸಫಿಯ್ಯಾದರ ಮನಸ್ಸಿಗೆ ಅತೀವ ದುಃಖವೆನಿಸಿ 

   " ಸರಿ, ಆಕೆ ಬಂದರೆ ನಾನು ಕರೆ ಮಾಡಲು ತಿಳಿಸುತ್ತೇನೆ" ಎಂದು ಕರೆ ಕಟ್ ಮಾಡಿದರು.

  ಮುನೀರಾಳ ಮನಸ್ಸಿಗೆ ಈಗ ಸ್ವಲ್ಪ ಸಮಾಧಾನವಾಯಿತು. ತನ್ನ ಎದುರಿಗಿದ್ದ ಒಂದು ದಾರಿ 
ಸುಗಮವಾಯಿತು ಎಂದುಕೊಂಡು ನಿಟ್ಟುಸಿರು ಬಿಟ್ಟಳು. ಸೈದಾಳ ಕೈ ಹಿಡಿದು " ನಿನ್ನ ಉಪಕಾರವನ್ನು ಯಾವತ್ತೂ ಮರೆಯಲಾರೆ " ಎಂದಳು.

  ಅದಕ್ಕೆ ಪ್ರತಿಯಾಗಿ ಸೈದಾ " ಅರೇ ಬಿಡಿ ಅಮ್ಮಾವ್ರೇ, ಇದರಲ್ಲೇನಿದೆ ಮಹಾ? ಇದಕ್ಕಿಂತಲೂ ಹೆಚ್ಚಿನದು ನೀವು ನನಗಾಗಿ ಮಾಡಿಲ್ಲವೇ ಹೇಳಿ. ಆದರೆ ನನಗೊಂದು ಸಂದೇಹವಿದೆ. ನೀವು ಮಾಡಬೇಕು ಎಂದುಕೊಂಡ ಕಾರ್ಯವಾದರೂ ಏನು ? ಎಂದು ತನ್ನ ಸಂದೇಹವನ್ನು ಕೇಳಿದಳು.

   ಸೈದಾಳ ಮುಖದತ್ತಲೇ ನೋಡಿದ ಮುನೀರಾ ಒಂದು ಕ್ಷಣ ಸುಮ್ಮನಾದಳು. ನಂತರ ಮಾತು ಮುಂದುವರಿಸಿದವಳೇ

" ನನ್ನ ಮಗನೊಂದಿಗೆ ಆ ಹುಡುಗಿಯ ಮದುವೆ ಮಾಡಬೇಕು ಎಂದಿದ್ದೇನೆ " ಎಂದು ಹೇಳಿದಳು.

ಈಗ ಬೆಚ್ಚಿ ಬೀಳುವ ಸರದಿ ಸೈದಾಳದಾಗಿತ್ತು.

      *********************

  ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿನಿಂದ ಇಳಿದು ಆಟೋ ಹಿಡಿದು ಕಾಲೇಜಿನ ಆವರಣ ತಲುಪಿದ್ದರು ಖಾದರ್ ಹಾಗೂ ಸುರಯ್ಯಾ. ಆ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್ ನೋಡಿಯೇ ಸುರಯ್ಯಾಳಿಗೆ ಹೃದಯ ಢವಗುಟ್ಟತೊಡಗಿತು. ಮಗಳು ಇನ್ನೂ ಅಲ್ಲೇ ನಿಂತಿರುವುದು ನೋಡಿ ಖಾದರ್

 " ಏನು, ಇನ್ನೂ ಅಲ್ಲೇ ನಿಂತಿದ್ದೀಯಾ ? ಬಾ ಹೋಗೋಣ " ಎಂದರು.

  " ಇಲ್ಲಾ ಅಪ್ಪಾ .. ಯಾಕೋ ಮೊದಲ ಬಾರಿ ಭಯವಾಗುತ್ತಿದೆ. ಎಲ್ಲರನ್ನೂ ನೋಡಬೇಕಾದರೆ ಶ್ರೀಮಂತರಂತೆ ಕಾಣುತ್ತಿದೆ. ನಮ್ಮ ಹಳ್ಳಿಯ ವಾತಾವರಣ ಬೇರೆಯೇ, ಇಲ್ಲಿ ಬೇರೆಯದ್ದೇ."

" ಓಹ್! ಅದಕ್ಕಾಗಿ ಹೆದರುತ್ತಾ ಇದ್ದೀಯಾ? ವಿದ್ಯೆಯ ಮುಂದೆ ಬಡವ - ಶ್ರೀಮಂತ ಅನ್ನೋ ಭೇದವಿಲ್ಲ. ಏನೂ ಹೆದರಬೇಡ ಮುಂದೆ ಹೋಗೋಣ " ಎಂದು ಮುಂದೆ ಸಾಗಿದರು.

ಸುರಯ್ಯಾ ಅವರನ್ನು ಹಿಂಬಾಲಿಸಿದಳು.

    ಅಪ್ಲಿಕೇಶನ್ ಪಡೆದು ಅದನ್ನು ಭರ್ತಿ ಮಾಡಿ ಅವರ ಕೈಯಲ್ಲಿ ನೀಡಿದಳು. ಅಲ್ಲಿಂದ ಹೊರಬರಬೇಕಾದರೆ ದೂರದಲ್ಲಿ ಬರುತ್ತಿರುವ ಮಹಿಳೆಯನ್ನು ನೋಡಿ ಆಕೆಗೆ ಖುಷಿಯಾಯಿತು. ತಂದೆಯನ್ನು ಕರೆದವಳೇ

  " ಅಪ್ಪಾ, ಆಗ ನಾನು ಹೇಳಿದಾಗ ನೀವು ನಂಬಲಿಲ್ಲ ಅಲ್ಲವೇ. ಈಗ ನೋಡಿ ಅದೋ ನಮ್ಮ ಕಣ್ಣೆದುರಿಗೇ ಇದ್ದಾರೆ. ಈಗಲಾದರೂ ನಂಬುತ್ತೀರಾ? ಅದೋ ಅಲ್ಲಿ ನೋಡಿ ಎಂದು ಮಗಳು ಬೆರಳು ತೋರಿಸಿದತ್ತ ನೋಡಿದರು ಖಾದರ್.

  ಸಾರಾ ಹಾಗೂ ಆಕೆಯೊಂದಿಗೆ ಬೆಳೆದು ನಿಂತಿದ್ದ ಮತ್ತೊಂದು ಹುಡುಗಿ ಇದ್ದಳು. ಅದು ಆಕೆಯ ಮಗಳೇ ಆಗಿರಬೇಕು ಎಂದು ಅವರು ಗ್ರಹಿಸಿದರು.

   ಸುರಯ್ಯಾ ಅವರೊಂದಿಗೆ ಮಾತನಾಡಬೇಕು ಎಂದು ಒಂದು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಖಾದರ್ ಆಕೆಯನ್ನು ತಡೆದರು. 

  " ಬೇಡ ಮಗಳೇ, ಸುಮ್ಮನೆ ಅವರ ರಗಳೆ ಯಾಕೆ ನಮಗೆ ಹೇಳು ? ನಮ್ಮ ಕೆಲಸ ಆಯಿತು. ನಾವು ನಮ್ಮ ಪಾಡಿಗೆ ಹೋಗುವುದು ಒಳ್ಳೆಯದು ಅಲ್ಲವೇ? ಎಂದು ಮಗಳಿಗೆ ತಿಳಿ ಹೇಳಿದರು.

  ಆದರೆ ಸುರಯ್ಯಾಳಿಗೆ ಅವರೊಂದಿಗೆ ಮಾತನಾಡದೆ ಮುಂದೆ ಹೋಗಲು ಮನಸ್ಸಿರಲಿಲ್ಲ. ಆಕೆ ಏನಾಗಲ್ಲಪ್ಪ, ಒಮ್ಮೆ ಹೋಗಿ ಮಾತನಾಡಿಸಿ ಬರುತ್ತೇನೆ ಎಂದು ಅವರ ಬಳಿ ನಡೆದಳು.


  " ಸಾರಾ ಆಂಟಿ, ನಾನು ಸುರಯ್ಯಾ. ನನ್ನ ಗುರುತು ಸಿಕ್ಕಿತೇ ? ಇದು ಯಾರು ಸಹಾನನ? ಮಾಷಾ ಅಲ್ಲಾಹ್! ನೋಡಲು ಚೆನ್ನಾಗಿದ್ದಾಳೆ. ಸಹಾನ ನಾನು ನಿನ್ನ ಬಾಲ್ಯದ ಗೆಳತಿ ಸುರಯ್ಯಾ . ನೆನಪಿದೆಯಾ ನಿನಗೆ ? " ಎಂದು ಒಂದೇ ಉಸಿರಿಗೆ ಕೇಳಿದಳು.

  ಸಾರ ಏನೂ ಹೇಳದೆ ಸಹಾನಳ ಮುಖ ನೋಡಿದರು. ಅವರ ಮುಖ ಭಾವವನ್ನು ಅರ್ಥೈಸಿದ ಸಹಾನ

   " ನೋಡು ಇದು ಕಾಲೇಜು ಕ್ಯಾಂಪಸ್. ಇಲ್ಲಿ ತಮಾಷೆ ಮಾಡುವುದು ನನಗೆ ಇಷ್ಟವಿಲ್ಲ. ಮರ್ಯಾದಿಯಿಂದ ಜಾಗ ಖಾಲಿ ಮಾಡು." ಎಂದು ಮೆಲ್ಲನೆ ಗುಣುಗಿದಳು.

   " ಇಲ್ಲಾ ಸಹಾನ , ನಾನು ನಿನ್ನ ಮರ್ಯಾದೆ ಹೇಗೆ ಹರಾಜು ಮಾಡುತ್ತೇನೆ ಹೇಳು ? ಎಷ್ಟೋ ವರ್ಷಗಳ ನಂತರ ಸಿಕ್ಕೀದಿಯಲ್ಲ. ಮಾತನಾಡಿಸೋಣ ಎಂಬ ಮನಸಾಯಿತು ಎಂದು ಸುರಯ್ಯಾ ನುಡಿದಳು.

" ನೋಡು ನೀನು ಯಾರು? ಏನು ? ಎಂಬುದು ನನಗೆ ತಿಳಿದಿಲ್ಲ. ನೀನು ನನ್ನನ್ನು ಮಾತನಾಡಿಸಲು ಪ್ರಯತ್ನಿಸಬೇಡ. ನಿನ್ನಂತಹ ಕುರೂಪಿಯೊಂದಿಗೆ ಮಾತನಾಡಿದರೆ ನನಗೆ ನಾಚಿಕೆ ಕೇಡು. ಹೊರಡು ಇಲ್ಲಿಂದ " ಸಿಟ್ಟಿನಲ್ಲಿಯೇ ನುಡಿದಳು ಸಹಾನ.

    *"ಅಲ್ಲಾ ಸಹಾನ, ಒಂದು ನಿಮಿಷ..ನನ್ನ ಮಾತು ಕೇಳು" ಎಂದು ಸುರಯ್ಯಾ ಸಹಾನಳ ಕೈ ಹಿಡಿದಿದ್ದಳಷ್ಟೆ. ಸಹಾನಳು ತನ್ನ ಕೈಯನ್ನು ಹಿಡಿದ ಕೈಯನ್ನು ಬಿಡಿಸಿ ಸುರಯ್ಯಾಳ ಕೆನ್ನೆಗೆ ಒಂದು ಏಟು ನೀಡಿದಳು. ಆ ಪೆಟ್ಟಿನ ನೋವನ್ನು ತಾಳಲಾರದೆ ಸುರಯ್ಯಾಳು ಅಮ್ಮಾ.. ಎಂದು ಚೀರಿದಳು.

  ಚಟಾರ್... ಅನ್ನೋ ಶಬ್ದ ಕೇಳಿ ಅಲ್ಲಿದ್ದವರೆಲ್ಲ ಶಬ್ಧ ಕೇಳಿದತ್ತ ತಿರುಗಿ ನೋಡಿದರು. ಅವರಿಗೆಲ್ಲ ಅದು ತಮಾಷೆಯಾಗಿ ಕಾಣುತ್ತಿತ್ತು. ಅವರು ತಮ್ಮ -ತಮ್ಮಲ್ಲೇ ಮಾತನಾಡಿಕೊಂಡು ಮುಸಿ ಮುಸಿ ನಗುತ್ತಿದ್ದರು. ಎಲ್ಲರ ನೋಟವು ತನ್ನತ್ತಲೇ ಇರುವುದನ್ನು ಕಂಡ ಸುರಯ್ಯಾಳಿಗೆ ಹೇಸಿಗೆ ಎನಿಸತೊಡಗಿತು. 

  "ಇನ್ನು ಮುಂದೆ ನನ್ನ ವಿಷಯಕ್ಕೆ ಬಂದರೆ ಜಾಗ್ರತೆ . ನನಗೆ ತಿಳಿದಿದೆ, ಸಣ್ಣದರಿಂದಲೂ ನನ್ನ ಸೌಂದರ್ಯವನ್ನು ನೋಡಿ ನಿನಗೆ ಹೊಟ್ಟೆ ಕಿಚ್ಚಾಗುತ್ತಿತ್ತು. ನಿನಗೆ ದೇವರು ನನ್ನಂತಹ ಸೌಂದರ್ಯವನ್ನು ನೀಡಲಿಲ್ಲ ಎಂಬ ಮತ್ಸರದಲ್ಲಿ ನಿನ್ನ ರೋಗವನ್ನು ನನಗೂ ಬರಿಸಲು ನೋಡುತ್ತಿದ್ದೀಯಾ. ಇನ್ನೇನಾದರೂ ನನ್ನ ವಿಷಯಕ್ಕೆ ಬಂದರೆ ಇದಕ್ಕಿಂತಲೂ ಹೆಚ್ಚಿನದನ್ನೇ ನೀಡುತ್ತೇನೆ ನೋಡ್ತಾ ಇರು" ಎಂದು ಆದೇಶ ನೀಡಿ ಸಹಾನ ಮುಂದೆ ನಡೆದಳು. ಅಲ್ಲಿದ್ದವರೆಲ್ಲಾ ತಪ್ಪು ಸುರಯ್ಯಾಳದೆ ಎಂಬಂತೆ ಆಕೆಯನ್ನು ಕೆಂಗಣ್ಣಿನಿಂದ ನೋಡುತ್ತಿದ್ದರು. ಸುರಯ್ಯಾ ಏನೊಂದೂ ಮಾತನಾಡದೆ ತನ್ನ ಕಣ್ಣೀರನ್ನು ಒರೆಸಿಕೊಂಡು ತಂದೆಯ ಬಳಿ ಬಂದು ನಿಂತಳು. ಅವರ ಮುಖವನ್ನು ನೋಡುವ ಧೈರ್ಯ ಕೂಡ ಅವಳಿಗೆ ಇರಲಿಲ್ಲ. ಅವರ ಮುಖವು ಕೋಪದಿಂದ ಕುದಿಯುತ್ತಿತ್ತು. ಮಗಳ ಕೈ ಹಿಡಿದವರೇ ನಡಿ ಹೋಗೋಣ ಎಂದು ಮುಂದೆ ನಡೆದರು.

  ಬಸ್ಸಿನಲ್ಲಿ ಬರಬೇಕಾದರೂ ತಂದೆ - ಮಗಳ ನಡುವೆ ಯಾವುದೇ ಮಾತುಕತೆ ಇರಲಿಲ್ಲ.

  ಮನೆಗೆ ತಲುಪಿದ ಗಂಡ ಹಾಗೂ ಮಗಳ ಮುಖ ನೋಡಿ ಸಫಿಯ್ಯಾದರಿಗೆ ಏನೋ ಅನುಮಾನ ಹುಟ್ಟಿತು. ಅರೇ ಏನಾಯಿತು ಇವರಿಬ್ಬರಿಗೆ, ಹೋಗುವಾಗ ಒಳ್ಳೆಯ ಲವಲವಿಕೆಯಿಂದ ಇದ್ದರು. ಈಗ ನೋಡಿದರೆ ಸುರಯ್ಯಾಳ ಮುಖ ಬಾಡಿ ಬತ್ತಿ ಹೋದಂತಾಗಿದೆ. ತನ್ನ ಪತಿಯ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿದೆ. ಏನಾಗಿರಬಹುದು ? ಹೋದ ಕೆಲಸವು ಆಗಲಿಲ್ಲವೇ ಹೇಗೆ ? ಏನಾದರೂ ಅಡಚಣೆಗಳು ಉಂಟಾದವೇ? ಎಂಬೆಲ್ಲಾ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಉದ್ಭವಿಸಿದವು. ಸುರಯ್ಯಾಳಲ್ಲಿ ಕೇಳೋಣವೆಂದು ಬಾಯಿ ತೆರೆಯುವಷ್ಟರಲ್ಲಿ ಆಕೆ ನೇರವಾಗಿ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು. ಸಫಿಯ್ಯಾದ ಆಶ್ಚರ್ಯದಿಂದ ಪತಿಯತ್ತ ನೋಡಿದರು. ಅವರ ನೋಟವನ್ನು ಅರ್ಥೈಸಿದ ಖಾದರ್

   " ಆಕೆ ಇನ್ನು ಪಟ್ಟಣದ ಕಾಲೇಜಿನಲ್ಲಿ ಓದುವುದಿಲ್ಲ. ಆಕೆ ತನ್ನ ಕನಸನ್ನು ಮರೆತು ಬಿಡಲಿ. ಇಲ್ಲೇ ಊರಿನ ಕಾಲೇಜಿಗೆ ಸೇರಿಕೊಳ್ಳಲಿ" ಎಂದರು.

ಪತಿಯ ಮಾತು ಸಫಿಯ್ಯಾದರನ್ನು ಆತಂಕಕ್ಕೆ ಒಳಪಡಿಸಿತು. ಅವರು ತನ್ನ ಪತಿಯಲ್ಲಿ

  " ಏನ್ರೀ, ಸ್ವಲ್ಪ ಬಿಡಿಸಿ ಹೇಳಿ. ಏನಾಯಿತು ? ಹೋಗುವಾಗ ಎಲ್ಲ ಸರಿ ಇತ್ತಲ್ಲ. ಅಂತಹದ್ದು ಅಲ್ಲಿ ಏನಾಯಿತು ?" ಎಂದು ಕೇಳಿದರು.

   ಖಾದರ್ ಪತ್ನಿಯಲ್ಲಿ ನಡೆದಂತಹ ಎಲ್ಲಾ ವಿಷಯ ವಿವರಿಸಿ ಹೇಳಿದರು. ಎಲ್ಲಾ ಹೇಳಿ ಮುಗಿಸಿದ ಮೇಲೆ

  " ಈಗ ಹೇಳು, ಇಷ್ಟು ವರ್ಷ ಹೆತ್ತು ಹೊತ್ತು ಸಾಕಿದ ನಾವೇ ಆಕೆಯ ಮೈ ಮುಟ್ಟಿಲ್ಲ. ನಾನು ಬೇಡ ಬೇಡವೆಂದರೂ ನನ್ನ ಮಾತು ಕೇಳದೆ ಅವರಲ್ಲಿ ಮಾತನಾಡಲು ಹೋಗಿ ಅವರ ಬಾಯಿಂದ ಇಲ್ಲಸಲ್ಲದ ಮಾತುಗಳನ್ನು ಕೇಳುವುದಲ್ಲದೇ ಪೆಟ್ಟು ಕೂಡ ತಿಂದು ಬಂದಿದ್ದಾಳೆ. ಆಕೆಗೆ ಎಷ್ಟು ನೋವಾಗಿದೆಯೇ ಅದಕ್ಕಿಂತ ದುಪ್ಪಟ್ಟು ನನಗೆ ನೋವಾಗಿದೆ. ಇಷ್ಟಕ್ಕೂ ನಾನು ಆಕೆಯನ್ನು ಇಷ್ಟು ಮುದ್ದಿನಿಂದ ಸಾಕಿದ್ದು ಇದಕ್ಕೆಯೇ ಹೇಳು ? ಇನ್ನು ಆ ಹುಡುಗಿ ಓದುವ ಕಾಲೇಜಿನಲ್ಲಿ ನನ್ನ ಮಗಳು ಓದುವುದು ಬೇಡ. ಇದು ನನ್ನ ಧೃಢ ನಿರ್ಧಾರ. ಇನ್ನು ಯಾರ ಮಾತನ್ನೂ ನಾನು ಕೇಳುವುದಿಲ್ಲ" ಎಂದು ಹೇಳಿ ತನ್ನ ಕೋಣೆಯತ್ತ ನಡೆದರು.

ತಂದೆಯ ಮಾತುಗಳು ಎಲ್ಲವೂ ಒಳಗಿದ್ದ ಸುರಯ್ಯಾಳಿಗೆ ಕೇಳಿಸುತ್ತಿತ್ತು. ತನ್ನೆಲ್ಲಾ ಕನಸುಗಳು ನೀರಿನಲ್ಲೇ ಕೊಚ್ಚಿ ಹೋಯಿತು ಎಂದು ಎನಿಸಿ ಆಕೆಗೆ ಮತ್ತಷ್ಟು ಅಳು ಒತ್ತರಿಸಿ ಬರುತ್ತಿತ್ತು.

     ******************

    ಮುನೀರಾಳು ತನ್ನ ಮಗನೊಂದಿಗೆ ಆ ಹುಡುಗಿಯ ಮದುವೆ ಮಾಡಿಸಬೇಕು ಎಂದು ಹೇಳಿದ ಮಾತು ಸೈದಾಳನ್ನು ಆಘಾತಕ್ಕೆ ಒಳಪಡಿಸಿತು.

   " ಏನು ಅಮ್ಮಾವ್ರೇ, ನೀವು ಏನು ಹೇಳುತ್ತಾ ಇದ್ದೀರಾ ? ಆಕೆ ನಿಮ್ಮ ಮಗನನ್ನು ಮದುವೆಯಾಗಲು ಒಪ್ಪುವಳೆಂದು ನಿಮಗೆ ಅನಿಸುತ್ತಿದೆಯೇ?" ಎಂದು ಸೈದಾ ಪ್ರಶ್ನಿಸಿದಳು.

  "ಹ್ಞಾಂ ಅನಿಸುತ್ತಿದೆ. ಹಾಗೆ ಅನಿಸಲು ಕಾರಣವೂ ಇದೆ. ಆಕೆಯ ಮುಖದಲ್ಲಿ ಅದೇನೋ ಮಚ್ಚೆ ರೀತಿಯಲ್ಲಿ ಇದ್ದು ನೋಡಲು ಸ್ವಲ್ಪ ವಿಭಿನ್ನವಾಗಿದೆ. ಹಾಗಾಗಿ ಆಕೆಗೆ ಮದುವೆ ಸಂಬಂಧಗಳು ಬರಲು ಕಷ್ಟವಿದೆ. ನನ್ನ ಮಗನಿಗೇನು ಕಡಿಮೆ ಇದೆ ಹೇಳು? ಆತನಾದರೋ ಆಗರ್ಭ ಶ್ರೀಮಂತ, ನೋಡಲು ಸುಂದರವಾಗಿದ್ದಾನೆ. ಅದಕ್ಕಿಂತ ಮಿಗಿಲಾಗಿ ಇನ್ನೇನು ಬೇಕು? ಈಗ ಎಲ್ಲೋ ಆತ ತನ್ನ ಮನಸ್ಸಿನ ಸ್ಥಿಮಿತ ಕಳೆದುಕೊಂಡರೂ ಮುಂದೆ ಅದು ಸರಿ ಆಗಬಹುದು ಎಂದು ನನಗೆ ನಂಬಿಕೆ ಇದೆ " ಎಂದು ಮುನೀರಾ ಹೇಳಿದಳು.

    " ಅದು ಸರಿ ಅಮ್ಮಾವ್ರೇ, ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನಿಮ್ಮ ಮಗನೊಂದಿಗೆ ಆ ಹುಡುಗಿಯ ಮದುವೆ ಆಯಿತು ಎಂದು ಇಟ್ಟುಕೊಳ್ಳಿ, ಆಮೇಲೆ ಆತ ಮುಂಚಿನಂತೆ ಆದರೆ ಆತ ಮತ್ತೆ ನಿಜವಾದ ಆಯಿಷಾಳ ಬಳಿ ಹೋದರೆ ಏನು ಮಾಡೋದು ಹೇಳಿ? ಒಂದು ವೇಳೆ ಆಕೆಯೂ ನಿಮ್ಮ ಮಗನಿಗಾಗಿ ಪರಿತಪಿಸುತ್ತಿದ್ದರೆ ? "

ಎಂದು ಸೈದಾ ತನ್ನ ಸಂದೇಹವನ್ನು ಮುನೀರಾಳಲ್ಲಿ ಕೇಳಿದಳು.

    " ಇಲ್ಲಾ ಸೈದಾ, ನಾನು ಅದು ಯಾವುದರ ಬಗ್ಗೆ ಯೋಚಿಸಿಯೇ ಇಲ್ಲ. ನನಗೆ ನನ್ನ ಮಗ ಗುಣಮುಖನಾಗಬೇಕು ಅಷ್ಟೇ. ಈ ವಿಚಾರದಲ್ಲಿ ನೀನು ನನ್ನನ್ನು ಸ್ವಾರ್ಥಿ ಎಂದರೂ ಪರವಾಗಿಲ್ಲ. ಇದು ಒಂದು ಮಾತೃ ಹೃದಯದ ಸ್ವಾರ್ಥ. ನಾನು ನನ್ನ ಮಗನ ವಿಚಾರ ಮತ್ತು ಆತ ಗುಣಮುಖವಾಗುವುದನ್ನು ಮಾತ್ರ ಯೋಚಿಸಿದ್ದೇನೆಯೇ  ಹೊರತು ಇತರರ ಬಗ್ಗೆ ಯೋಚಿಸಿಲ್ಲ. ಆದರೆ ಆ ಹುಡುಗಿಯನ್ನು ನಾನೆಂದಿಗೂ ಕೈ ಬಿಡುವುದಿಲ್ಲ. ಒಂದು ವೇಳೆ ನನ್ನ ಮಗ ಆಕೆಯನ್ನು ತಿರಸ್ಕರಿಸಿದರೆ ನಾನೇ ಆಕೆಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇನೆ. ಇನ್ನು ಆ ಆಯಿಷಾಳ ವಿಷಯ ಹೇಳಬೇಕೆಂದರೆ ಆಕೆ ಸತ್ತಿದ್ದಾಳೆ ಎಂದೇ ನಾನು ಭಾವಿಸುತ್ತೇನೆ. ಒಂದುವೇಳೆ ಆಕೆ ಜೀವಂತ ಇದ್ದಿದ್ದಲ್ಲಿ ನನ್ನ ಮಗನನ್ನು ಹುಡುಕಿಕೊಂಡು ಯಾವಾಗಲಾದರೂ ಬರುತ್ತಿದ್ದಳು." ಎಂದು ಮುನೀರಾ ಸೈದಾಳ ಸಂದೇಹಗಳಿಗೆ ತೆರೆ ಎಳೆದಳು.

  " ಹ್ಞಾಂ ಸೈದಾ, ಆ ಹುಡುಗಿ ಈಗ ಮನೆಯಲ್ಲಿ ಇಲ್ಲವೆಂದು ಅವರಮ್ಮ ಹೇಳಿದ್ದರಲ್ಲ, ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆಮಾಡಬೇಕು. ಆಕೆಯಲ್ಲಿ ಮಾತನಾಡಲು ಬಹಳವಿದೆ." ಎಂದು ಮುನೀರಾ ತನ್ನ ಮಗನ ಕೋಣೆಯತ್ತ ನಡೆದಳು.

 ಸೈದಾಳಿಗೆ ಸುರಯ್ಯಾಳನ್ನು ಎನಿಸಿದಾಗ ಯಾಕೋ ಅಯ್ಯೋ ಪಾಪ ಎಂದೆನಿಸಿತು. ಪಾಪ ಏನೊಂದೂ ಅರಿಯದ ಹುಡುಗಿ ಈತನನ್ನು ಮದುವೆಯಾಗಲು ಒಪ್ಪಿದರೆ , ನಾಳೆ ಈತ ಅರ್ಧದಲ್ಲೇ ಕೈ ಬಿಡಲಿಕ್ಕಿಲ್ಲವೇ? ಆಕೆ ಮತ್ತೆ ಹೋಗುವುದಾದರೂ ಎಲ್ಲಿ?  ಅಮ್ಮಾವ್ರು ಹೇಳಿದ ಹಾಗೆ ಅಷ್ಟೊಂದು ಸುಲಭದಲ್ಲಿ ಆಕೆಗೆ ಮತ್ತೊಂದು ಮದುವೆ ಆಗಲು ಸಾಧ್ಯವೇ ? ಅಯ್ಯೋ ದೇವರೇ ಆ ಹುಡುಗಿಯನ್ನು ಇವರ ಕಣ್ಣಿಗೆ ಕಾಣಿಸಬೇಡ.  ಆಕೆಯ ಬಾಳು ಸುಖಮಯವಾಗಿರಲಿ ಎಂದು ಸೈದಾ ಮನದಲ್ಲಿಯೇ ಪ್ರಾರ್ಥಿಸಿದಳು.

ಅರೆ ಹೇಗೂ ನನ್ನಲ್ಲಿ ನಂಬರ್ ಇದೆಯಲ್ಲ ನಾನೇ ಕರೆಮಾಡಿ ಅವರಿಗೆ ನಿಜ ವಿಚಾರ ತಿಳಿಸಿದರೆ ಹೇಗೆ? ಸುಮ್ಮನೆ ಆಕೆಯ ಬಾಳು ನನ್ನ ಕಣ್ಣೆದುರು ಹಾಳಾಗುವುದು ನನಗೆ ನೋಡಲು ಆಗಲಿಕ್ಕಿಲ್ಲ ಎಂದು ಯೋಚಿಸಿದವಳೇ  ಮೊಬೈಲ್ ತೆಗೆದು ಸುರಯ್ಯಾಳ ಅಮ್ಮನ ನಂಬರ್ ಡಯಲ್ ಮಾಡತೊಡಗಿದಳು.

      ಒಳಗೆ ಹೋದ ಮುನೀರಾ ಏನೋ ನೆನಪಾದವಳಂತಾಗಿ ಹೊರಬಂದಾಗ ಸೈದಾ ಫೋನ್ ಕಿವಿಯಲ್ಲಿಟ್ಟು ಯಾರಿಗೋ ಕರೆ ಮಾಡುತ್ತಿರುವುದಾಗಿ ಆಕೆಗೆ ಕಾಣಿಸಿತು. ಈಕೆ ಏನಾದರೂ ಸಮದಿಗೆ ಕರೆ ಮಾಡಿ ಎಲ್ಲಾ ವಿಚಾರ ತಿಳಿಸುತ್ತಿದ್ದಾಳೋ ಹೇಗೆ ಎಂಬ ಸಂಶಯವು ಮುನೀರಾಳಲ್ಲಿ ಮೂಡಿ , ಯಾರು ಎಂದು ನೋಡೋಣವೆಂದು ಮೆಲ್ಲನೆ ಹಿಂಬದಿಯಿಂದ ಬಂದಳು.

      ********************

    ಅಪ್ಪ - ಮಗಳ ವಿಚಾರದಲ್ಲಿ ಸಫಿಯ್ಯಾದ ನಡುವೆ ತಲೆ ತೂರಿಸಲು ಹೋಗಲಿಲ್ಲ. ಅವರಿಬ್ಬರೂ ಮತ್ತೆ ಸರಿಯಾಗುತ್ತಾರೆ ಎಂದು ಅವರಿಗೆ ತಿಳಿದಿತ್ತು. 

   ಅದೇ ರೀತಿಯಾಗಿ ತನ್ನ ಕೋಪವೆಲ್ಲಾ ತಣ್ಣಗಾದ ಮೇಲೆ ಖಾದರ್ ರೂಮಿನಿಂದ ಹೊರಗಡೆ ಬಂದರು.  ಬಂದವರೇ ತಮ್ಮ ಪತ್ನಿಯಲ್ಲಿ

  " ಸುರಯ್ಯಾ ನಿನ್ನೊಂದಿಗೆ ಏನಾದರೂ ಮಾತನಾಡಿದಳೇ?"
 ಎಂದು ಕೇಳಿದರು.

  " ಇಲ್ಲರೀ,ಆಕೆ ಏನೊಂದು ಮಾತನಾಡುವುದು ಬಿಡಿ... ಕೋಣೆಯಿಂದ ಹೊರಗಡೆಯೇ ಬರಲಿಲ್ಲ. " 

   " ಹೌದಾ! ಇನ್ನೂ ಅವರ ಬಗ್ಗೆ ಯೋಚಿಸುತ್ತಾ ಇದ್ದಾಳೇನೋ? ಸರಿ, ನಾನೇ ಹೋಗಿ ಮಾತನಾಡಿ ಕರೆದುಕೊಂಡು ಬರುತ್ತೇನೆ" ಎಂದು ಖಾದರ್ ಮಗಳ ಕೋಣೆಯತ್ತ ನಡೆದರು. ಸಫಿಯ್ಯಾದರು ಅವರನ್ನು ಹಿಂಬಾಲಿಸಿದರು.

   ಯಾರೋ ಬಂದಂತಾದಾಗ ಸುರಯ್ಯಾ ತಲೆ ಎತ್ತಿ ನೋಡಿದಳು. ಅಲ್ಲಿ ತನ್ನ ತಂದೆ ನಿಂತಿದ್ದರು. ಖಾದರ್ ಆಕೆಯನ್ನು ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಸಫಿಯ್ಯಾದರ ಮೊಬೈಲ್ ರಿಂಗಣಿಸಿತು.

ಮಗಳು ಸುಮಯ್ಯಾ " ಅಮ್ಮಾ ನಿನಗೆ ಒಂದೇ ಸಮನೆ ಕರೆ ಬರುತ್ತಿದೆ. ಯಾವುದೋ ಸೇವ್ ಮಾಡದ ನಂಬರ್, ಯಾರು ಎಂದು ನೋಡು" ಎಂದು ಮೊಬೈಲ್ ತಂದು ಕೊಟ್ಟಳು.

ಸಫಿಯ್ಯಾದರಿಗೆ ಒಮ್ಮೆಲೇ ಬೆಳಿಗ್ಗೆ ಬಂದ ಕರೆಯ ನೆನಪಾಯಿತು. ಅವರೇ ಆಗಿರಬಹುದು ಎಂದು ಅವರು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದರು. ಮೊದಲೇ ತನ್ನ ಮಗಳು ಸಮಸ್ಯೆಗಳಲ್ಲಿ ಸಿಲುಕಿದ್ದಾಳೆ. ಇನ್ನು ಇವರ ರಗಳೆಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಕರೆ ಕಟ್ ಮಾಡಿ, ಮೊಬೈಲ್ ಸ್ವಿಚ್ಡ್ ಆಫ್ ಮಾಡಿದರು. 

ಖಾದರ್ ಪತ್ನಿಯೆಡೆಗೆ ತಿರುಗಿ
" ಯಾರದು ಅದು ಕರೆ?" ಎಂದು ಕೇಳಿದರು.

 ನಿಜ ವಿಚಾರವನ್ನು ಪತಿಯಲ್ಲಿ ಹೇಳಲು ಇಚ್ಛಿಸದ ಸಫಿಯ್ಯಾ

  " ಇಲ್ಲರೀ ಬೆಳಿಗ್ಗೆಯಿಂದ ಯಾರದೋ ರಾಂಗ್ ನಂಬರಿನಿಂದ ಕಾಲ್ ಬರ್ತಾ ಇತ್ತು. ಕಿರಿ ಕಿರಿ ಬೇಡವೆಂದು ಮೊಬೈಲ್ ಸ್ವಿಚ್ ಆಫ್ ಮಾಡಿದೆ. ಮತ್ತೆ ಆನ್ ಮಾಡಿದರಾಯಿತು. ನನಗೇನು ಅಂತಹ ಅರ್ಜೆಂಟ್ ಇಲ್ಲವಲ್ಲ." ಎಂದು ಹೇಳಿದರು.

  ಹ್ಞಾಂ ಒಳ್ಳೆಯದಾಯಿತು ಬಿಡು ಎಂದ ಖಾದರ್ ಮಗಳತ್ತ ತಿರುಗಿ ನೋಡಿದರು. ಆಕೆಯ ಕೂದಲು ಕೆದರಿತ್ತು. ಕಣ್ಣುಗಳೆರಡೂ ಆಳಕ್ಕೆ ಇಳಿದಿದ್ದವು. ಮುಖವು ಬಾಡಿ ಹೋಗಿತ್ತು.

ಮಗಳ ಅವಸ್ಥೆಯನ್ನು ನೋಡಿ ಖಾದರಿಗೆ ಕರುಳು ಚುರ್ರ್ ಎನಿಸಿತು.

  " ಸುರಯ್ಯಾ ಆದದ್ದೆಲ್ಲ ಆಗಿ ಹೋಯಿತು. ಅವರು ಏನು ತಪ್ಪು ಮಾಡಿದ್ದಾರೊ ಅವರನ್ನು ದೇವರು ಶಿಕ್ಷಿಸುತ್ತಾರೆ. ನೀನು ಅದನ್ನೇ ತಲೆಯಲ್ಲಿ ಇಟ್ಟುಕೊಂಡು ಕೊರಗಬೇಡ " ಎಂದು ಮಗಳಿಗೆ ಸಮಾಧಾನ ಮಾಡಿದರು.

   " ಇಲ್ಲಪ್ಪ, ನನಗೆ ಅವಳ ಮೇಲೆ ಏನೂ ಬೇಜಾರಿಲ್ಲ. ಅವಳ ಸ್ಥಾನದಲ್ಲಿ ಅವಳು ಸರಿಯಾಗಿಯೇ ಇದ್ದಾಳೆ. ಅವಳನ್ನು ಮುಟ್ಟುವ ಯೋಗ್ಯತೆ ನನಗಿಲ್ಲ. ಅವಳನ್ನು ಮುಟ್ಟಲು ಹೋದದ್ದು ನನ್ನ ತಪ್ಪು. "

" ಅಯ್ಯೋ ಸುರಯ್ಯಾ!! ನಿನಗೆ ಏಕೆ ಇಂತಹ ಒಳ್ಳೆಯ ಮನಸ್ಸು. ಆಕೆ ಅದೆಷ್ಟೋ ನಿನ್ನನ್ನು ದ್ವೇಷಿಸಿದರೂ ನೀನು ಆಕೆಯ ಪರ ವಹಿಸಿ ಮಾತನಾಡುತ್ತಾ ಇದ್ದೀಯಲ್ಲ.ಇರಲಿ ಬಿಡು, ನಿನ್ನ ಒಳ್ಳೆಯ ಮನಸ್ಸಿಗೆ ಆ ಸೃಷ್ಟಿಕರ್ತ ನಿನಗೆ ಒಳ್ಳೆಯದು ಮಾಡುತ್ತಾನೆ. ಆದರೆ ನಿನ್ನ ಮನಸ್ಸಿನಲ್ಲಿ ಆಕೆಯ ಬಗೆಗೆ ಏನೂ ಬೇಜಾರಿಲ್ಲ ಎಂದ ಮೇಲೆ ನೀನು ಅತ್ತಿದ್ದಾದರು ಯಾತಕೆ?"

   " ನೀವು ಅಮ್ಮನಲ್ಲಿ ಹೇಳಿದ ಮಾತು ಕೇಳಿಸಿಕೊಂಡೆನಪ್ಪ. ತುಂಬಾ ಆಸೆಯಿಂದಲೇ ಪಟ್ಟಣದ ಕಾಲೇಜು ಸೇರಬೇಕು ಎಂದು ಬಯಸಿದ್ದೆ. ಆದರೆ ಇನ್ನು ನನ್ನ ಕನಸನ್ನು ಮರೀಬೇಕು ಅನ್ನುವಾಗ ಯಾಕೋ ದುಃಖ ತಡೆಯಲಾಗಲಿಲ್ಲ" ಎಂದು ಹೇಳುತ್ತಾ ಸುರಯ್ಯಾ ಬಿಕ್ಕಿ - ಬಿಕ್ಕಿ ಅಳತೊಡಗಿದಳು.

   " ಓಹ್! ಅದಕ್ಕೋಸ್ಕರ ಅಳುತ್ತಾ ಇದ್ದೀಯಾ? ಏನೋ ಕೋಪದಲ್ಲಿ ಒಂದೆರಡು ಮಾತು ಆಡಿದೆ ಅಷ್ಟೇ. ನೋಡು ಸುರಯ್ಯಾ ಆ ಹುಡುಗಿ ಓದುವ ಕಾಲೇಜಿನಲ್ಲಿ ನೀನು ಸೇರಿದರೆ, ನೀನಂತು ಖಂಡಿತವಾಗಿಯೂ ಆಕೆಯನ್ನು ಮಾತನಾಡಿಸಲು ಪ್ರಯತ್ನಿಸುತ್ತಿ ಎಂದು ನನಗೆ ತಿಳಿದಿದೆ. ಆದರೆ ಆಕೆ ಅಹಂಕಾರವನ್ನು ಮೈ ಗೂಡಿಸಿಕೊಂಡಿರುವ ಹೆಣ್ಣು. ಎಲ್ಲಿ ಮತ್ತೆ, ಮತ್ತೆ ನಿನ್ನನ್ನು ಹಿಂಸಿಸುತ್ತಾಳೋ ಅನ್ನುವ ಭಯದಿಂದ ಹೇಳಿದೆ ಅಷ್ಟೇ."

  " ಇಲ್ಲ ಅಪ್ಪಾ, ಅವಳು ಅಲ್ಲಿರುವಳು ಎಂದು ಅರಿತು ನಾನು ಆ ಕಾಲೇಜನ್ನು ಆಯ್ಕೆ ಮಾಡಿದಲ್ಲ. ಸೈಕೋಲಜಿ ಕಲಿಯಬೇಕು ಎಂಬ ಹಂಬಲದಲ್ಲಿ ಆಗಿತ್ತು ನಾನು ಅಲ್ಲಿ ಹೋದದ್ದು. ಆದರೆ ಎಂದೋ ಕಂಡ ಗೆಳತಿ ಹಲವು ವರ್ಷಗಳ ನಂತರ ಕಾಣ ಸಿಕ್ಕಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಹಾಗಾಗಿ ನಾನು ಮಾತನಾಡಿಸಿದೆ. ಆದರೆ ಆಕೆ ಇಷ್ಟು ಬದಲಾಗಿದ್ದಾಳೆ ಎಂದು ನಾನು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ."

  " ಅದೆಲ್ಲಾ ಮರೆತುಬಿಡು , ನೀನು ಆ ಕಾಲೇಜಿಗೆ ಹೋಗಬೇಕು. ಅಲ್ಲೇ ನೀನು ಕಲಿಯಬೇಕು. ಅದಲ್ಲದಿದ್ದಲ್ಲಿ ಆಕೆಯನ್ನು ಹೆದರಿ ನೀನು ಸುಮ್ಮನೆ ನಿಂತಂತಾಗುತ್ತದೆ. ಆದರೆ ಒಂದು ಮಾತು, ಒಂದು ವೇಳೆ ಆಕೆ ನಿನ್ನ ಮುಂದೆ ಕಾಣಲು ಸಿಕ್ಕಿದರೂ ನೀನು ಮಾತನಾಡಬಾರದು. ಇದು ಮಾತ್ರ ನನ್ನ ಆಜ್ಞೆ "ಎಂದು ಖಾದರ್ ತುಸು ಜೋರಾಗಿಯೇ ಹೇಳಿದರು.

" ಆಯ್ತು, ನಾನು ಆಕೆಯನ್ನು ಕಂಡರೂ ಅವಳಾಗಿಯೇ ನನ್ನಲ್ಲಿ ಮಾತನಾಡುವವರೆಗೆ  ನಾನು ಮಾತನಾಡುವುದಿಲ್ಲ." ಎಂದು ಸುರಯ್ಯಾ ತಂದೆಯಲ್ಲಿ ಹೇಳಿದಳು.

      *******************

  ಕರೆ ಕಟ್ ಆಯಿತು ಎಂದು ಸೈದಾ ಮತ್ತೊಮ್ಮೆ ಕರೆ ಮಾಡಲು ಪ್ರಯತ್ನಿಸಿದಳು. ಆದರೆ ಅವರ ಮೊಬೈಲ್ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು. ಅರೇ ಅವರಿಗೆ ಮುಖ್ಯ ವಿಷಯವನ್ನು  ಹೇಳೋಣ ಎಂದರೆ ಯಾಕೆ ಇವರು ಕರೆ ಕಟ್ ಮಾಡಿದ್ದಾರೆ ಎಂದು ಆಲೋಚಿಸುತ್ತಾ ಇರುವವಳಿಗೆ ಮುನೀರಾ ಹಿಂದಿನಿಂದ ಬಂದಿದ್ದು ತಿಳಿಯಲೇ ಇಲ್ಲ.

  " ಯಾರಿಗೆ ಕರೆ ಮಾಡುತ್ತಾ ಇದ್ದೀಯಾ ಸೈದಾ ? " ಮುನೀರಾಳ ಧ್ವನಿ ಕೇಳಿಬಂದಾಗ ಒಮ್ಮೆಲೇ ಬೆಚ್ಚಿಬಿದ್ದು ಹಿಂದಿರುಗಿ ನೋಡಿದಳು ಸೈದಾ.

  " ಹೇಳು ಯಾರಿಗೆ ಕರೆ ಮಾಡುತ್ತಾ ಇದ್ದದ್ದು ನೀನು ? ನೀನು ಎಲ್ಲಾ ವಿಷಯವನ್ನು ಸಮದ್ ಬಳಿ ಹೇಳುತ್ತಾ ಇದ್ದೀಯಾ ಹೇಗೆ ? ಕೊಡು ಇಲ್ಲಿ ಮೊಬೈಲ್ "ಎಂದು ಮುನೀರಾ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದಳು.

    ಮೊಬೈಲನ್ನು ಮುನೀರಾಳ ಕೈಗೆ ಕೊಡಲು ಹಿಂಜರಿದ ಸೈದಾ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಮುನೀರಾ ತನ್ನೆಲ್ಲಾ ಬಲ ಪ್ರಯೋಗಿಸಿ ಅದನ್ನು ತೆಗೆಯಲು ಯತ್ನಿಸುವಾಗ ಅವರಿಬ್ಬರ ಜಟಾಮುಟಿಯಲ್ಲಿ ಮೊಬೈಲ್ ಕೆಳಗೆ ಬಿತ್ತು.. 

ಕೆಳಗೆ ಬಿದ್ದ ಮೊಬೈಲನ್ನು ಮುನೀರಾ ತೆಗೆದುಕೊಂಡಳು. ತಾನು ಸಿಕ್ಕಿ ಬಿದ್ದೆ ಎಂದು ತಿಳಿದು ಸೈದಾಳ ಕೈ ಕಾಲುಗಳು ನಡುಗಲು ಫ್ರಾರಂಭಿಸಿದವು.

      ಮುನೀರಾ ಮೊಬೈಲ್ ತೆಗೆದು ನೋಡಿದಾಗ ಅದು ಸ್ವಿಚ್ಡ್ ಆಫ್ ಆಗಿತ್ತು. ಆಕೆ ಅದೆಷ್ಟು ಆನ್ ಮಾಡಲು ಪ್ರಯತ್ನಿಸಿದರೂ ಮೊಬೈಲ್ ಆನ್ ಆಗಲಿಲ್ಲ. ಮೊಬೈಲಿನ ಡಿಸ್ಪ್ಲೇ ಹೋಗಿದೆ ಎಂದು ಆಕೆಗೆ ಅರಿವಾಯಿತು.

   " ಮೊಬೈಲ್ ಕೆಳಗೆ ಬಿದ್ದು ಡಿಸ್ಪ್ಲೇ ಹೋಗಿದೆ ಸೈದಾ. ನೀನು ನಿಜ ಹೇಳು, ಸಮದಿಗೆ ತಾನೇ ನೀನು ಕರೆ ಮಾಡುತ್ತಾ ಇದ್ದದ್ದು. ಯಾಕೆ ಎರಡು ಮುಖದ ಜನರ ರೀತಿ ಮಾಡಿದೆ? ನಿನ್ನ ಮೇಲಿನ ನಂಬಿಕೆಯಿಂದ ಅಲ್ಲವೇ ನಾನು ಎಲ್ಲಾ ವಿಚಾರಗಳನ್ನು ಹೇಳಿರುವುದು? "ಎಂದು ಬೇಸರದಿಂದಲೇ ಸೈದಾಳ ಬಳಿ ಮುನೀರಾ ಕೇಳಿದಳು.

     " ಇಲ್ಲ ಅಮ್ಮಾವ್ರೇ, ನಿಮ್ಮ ಪತಿಯ ಬಳಿ ಹೇಳುವಷ್ಟು ಕಟುಕಳು ನಾನಲ್ಲ. ನಾನು ಆ ಹುಡುಗಿಯ ಅಮ್ಮನಿಗೆ ಕರೆ ಮಾಡುತ್ತಿದ್ದೆ. ಆದರೆ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇಲ್ಲದಿದ್ದಲ್ಲಿ ಹೇಗಾದರೂ ಆಕೆಯ ಬಳಿ ಎಲ್ಲಾ ವಿಚಾರಗಳನ್ನು ಹೇಳಿ ಹೇಗಾದರೂ ರಕ್ಷೆ ಹೊಂದು ಎನ್ನುತ್ತಿದ್ದೆ."

    " ಯಾಕೆ ಹೀಗೆ ಮಾಡಿದೆ ಹೇಳು? ನಿನಗೆ ಒಂದು ಚೂರಾದರೂ ನನ್ನ ಮಗನ ಮೇಲೆ ಕನಿಕರ ಇಲ್ಲವೇ ? ಅವನ ಬಾಳು ಸರಿಯಾಗಿರಬೇಕು ಎಂಬ ಮನಸ್ಸಿಲ್ಲವೇ ಹೇಳು ? "

" ನಿಮ್ಮ ಮಗ ಸರಿಯಾಗಬೇಕು ಎಂಬ ಮನಸ್ಸು ನನಗೂ ಇದೆ. ಆದರೆ ಅದಕ್ಕಾಗಿ ಆ ಹೆಣ್ಣಿನ ಬಾಳನ್ನು ಹಾಳು ಮಾಡಲು ನನಗೆ ಮನಸ್ಸಿಲ್ಲ. ನೀವು ಏನಂದ್ರಿ ? ನಾಳೆ ನನ್ನ ಮಗ ಬೇಡ ಎಂದರೆ ಆಕೆಗೆ ನೀವೇ ನಿಂತು ಬೇರೆ ಮದುವೆ ಮಾಡಿಸುತ್ತೇನೆ ಎಂದು ಅಲ್ಲವೇ ? ಅಂದರೆ ನಿಮಗೆ ನಿಮ್ಮ ಕೆಲಸ ಮುಗಿಯುವತನಕ ಮಾತ್ರ ಆಕೆ ಬೇಕು ಎಂದು ಅಲ್ಲವೇ? ನಿಮ್ಮಂತಹ ಶ್ರೀಮಂತರಿಗೆ ಮದುವೆ ಎಂದರೆ ಆಟ ಇರಬಹುದು. ಆದರೆ ನಮಗೆ ಹಾಗಲ್ಲ.ಅದು ಸ್ವಲ್ಪ ಅರ್ಥಮಾಡಿಕೊಳ್ಳಿ. ಪ್ರತಿ ಹೆಣ್ಣು ತನ್ನ ಗಂಡ ತನ್ನನ್ನು ಜೀವನ ಪರ್ಯಂತ ನೋಡುತ್ತಾನೆ ಅನ್ನೋ ಧೈರ್ಯದಿಂದ ಮದುವೆಯಾಗುತ್ತಾಳೆ. ಆದರೆ ಇಲ್ಲಿ? ಆಕೆ ಯಾವುದಕ್ಕಾಗಿ ನಿಮ್ಮ ಮಗನನ್ನು ಮದುವೆಯಾಗಬೇಕು ಹೇಳಿ? ನಿಮ್ಮ ಮಗ ಸರಿ ಇಲ್ಲದಿದ್ದಾಗಲೂ ಆಕೆಗೆ ಸುಖ ಸಿಗಲಿಕ್ಕಿಲ್ಲ, ನಂತರವೂ ಸಿಗಲಿಕ್ಕಿಲ್ಲ ಅಲ್ಲವೇ? ಹಾಗಾಗಿ ಬೇಡ ಅಮ್ಮಾವ್ರೇ. ಎಲ್ಲಾದರೂ ಚೆನ್ನಾಗಿರಲಿ ಆಕೆ."ಎಂದು ಸೈದಾ ಮುನೀರಾಳಲ್ಲಿ ಮನವಿ ಮಾಡಿದಳು.

   ಸೈದಾಳ ಮುಖ ನೋಡಿ ಮುನೀರಾ ನಕ್ಕಳು. " ಅಲ್ಲಾ ಸೈದಾ ಇನ್ನು ಹೇಗೆ ಅವಳನ್ನು ನೀನು ಇದರಿಂದ ಪಾರು ಮಾಡುತ್ತೀಯಾ ಹೇಳು? ಈಗ ನಿನ್ನ ಮೊಬೈಲ್ ಹಾಳಾಯಿತ್ತಲ್ವ? ಅದರಲ್ಲಿ ಅಲ್ವಾ ಆಕೆಯ ನಂಬರ್ ಇದ್ದದ್ದು?" ಎಂದು ಹೇಳಿದಳು.

  " ಅಮ್ಮಾವ್ರೇ ಅದನ್ನು ಯೋಚಿಸಬೇಕಾದದ್ದು ನಾನಲ್ಲ ನೀವು. ಇನ್ನು ನೀವು ಹೇಗೆ ಆಕೆಯನ್ನು ಕಂಡುಹಿಡಿಯುತ್ತೀರಾ? ಆಕೆಯ ಅಮ್ಮ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾರೆ. ಇನ್ನು ಅವರ ಅಡ್ರೆಸಿಗೆ ಹೋಗಿ ಹುಡುಕೋಣ ಎಂದರೆ ಅದು ನನ್ನ ಮೊಬೈಲಿನಲ್ಲಿ ಇತ್ತು. ನನ್ನ ಅಣ್ಣನ ನಂಬರ್ ಕೂಡ ಅದರಲ್ಲೇ ಇತ್ತು. ಇನ್ನು ಹೇಗೆ ನೀವು ಕಂಡುಹಿಡಿಯುತ್ತೀರಾ ಆಕೆಯನ್ನು? ಎಂದು ಸೈದಾ ಕೇಳಿದಾಗ

  " ಅಯ್ಯೋ ದೇವರೇ ಇನ್ನೇನು ಮಾಡುವುದು ನಾನು ? ನನಗಿನ್ನು ಯಾವುದೇ ದಾರಿ ಇಲ್ಲವಾ ಹೇಗೆ? ಏನೂ ಮಾಡಲಿ ನಾನು ಎಂದು ಯೋಚಿಸುತ್ತಾ ಚಿಂತಾಕ್ರಾಂತಳಾದಳು. ತನ್ನ ಈ ಅವಸ್ಥೆಗೆ ಕಾರಣಕರ್ತಳಾದ ಸೈದಾಳ ಮೇಲೆ ಆಕೆಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಆದರೂ ಎಲ್ಲಾದರೂ ಆಕೆ ಸಮದ್ ಬಳಿ ಹೇಳಿದರೆ ಅನ್ನೋ ಹೆದರಿಕೆಯಿಂದ ಏನೂ ಮಾಡಲಾಗದೆ ಸುಮ್ಮನಾಗಿದ್ದಳು.

     ********************
   ದಿನಗಳು ಉರುಳುತ್ತಿದ್ದವು.

    ಸುರಯ್ಯಾಳ ಕಾಲೇಜು ಫ್ರಾರಂಭ ಆಗುವ ದಿನವೂ ಬಂದೇ ಬಿಟ್ಟಿತ್ತು. ನೀನು ಈಗ ನೇರವಾಗಿ ಕಾಲೇಜಿಗೆ ಹೋಗು, ಸಂಜೆಗೆ ನಿನ್ನ ಲಗೇಜ್ ಎಲ್ಲಾ ತೆಗೆದುಕೊಂಡು ನಾನು ಬರುತ್ತೇನೆ. ಆಮೇಲೆ ಹಾಸ್ಟೆಲ್ ಹೋಗೋಣ ಎಂದು ಖಾದರ್ ಹೇಳಿದರು. ಅದಕ್ಕೆ ಸರಿ ಎಂದು ಒಪ್ಪಿ ಸುರಯ್ಯಾಳು ಕಾಲೇಜಿಗೆ ತೆರಳಿದ್ದಳು.  

      ತನ್ನ ಕ್ಲಾಸ್ ರೂಂ ಎಲ್ಲಿ ಬರುತ್ತದೆ ಎಂದು ಹುಡುಕಿಕೊಂಡು ಬರುತ್ತಿದ್ದಳು. ಹಾಗೇ ಹುಡುಕಿಕೊಂಡು ಹೋಗುತ್ತಿರಬೇಕಾದರೆ ತರಗತಿಯೊಳಗಿದ್ದ ಹುಡುಗಿಯೊಬ್ಬಳು ಆಕೆಯನ್ನು ಕಾಣುತ್ತಾಳೆ. ಅಷ್ಟರಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ತನ್ನ ಗೆಳತಿಯನ್ನು ಕರೆದು

    " ಏ ಸಹಾನ! ನೀನು ಮೊನ್ನೆ ಕೆನ್ನೆಗೆ ಹೊಡೆದಿದ್ದು ಅದೇ ಹುಡುಗಿಗೆ ಅಲ್ವಾ? ನೋಡು ಅಲ್ಲಿ ಅದೋ" ಎಂದು ಕೈ ತೋರಿಸಿದಳು.

   ಆಕೆ ಕೈ ತೋರಿಸಿದತ್ತ ಸಹಾನ ನೋಡಿದಳು. 

 " ಅರೇ, ನನ್ನಿಂದ ಪೆಟ್ಟು ತಿಂದ ಮೇಲೂ ಈಕೆ ಈ ಕಾಲೇಜಿಗೆ ಬಂದಿದ್ದಾಳೆ ಅಲ್ವಾ? ಈಕೆಯ ಧೈರ್ಯ ಮೆಚ್ಚಬೇಕಾದುದೇ. ಆದರೆ ಇವಳು ಈ ಕಾಲೇಜಿನಲ್ಲಿ ಕಲಿಯಕೂಡದು. ಇವಳನ್ನು ಇಲ್ಲಿಂದ ಒದ್ದು ಹೊರಹಾಕಬೇಕು" ಎಂದು ಹೇಳಿ ಸಹಾನ ತನ್ನ ಗೆಳತಿಯರ ಮುಖದತ್ತ ನೋಡಿದಳು. 

ಸುರಯ್ಯಾಳನ್ನು ಹೇಗಾದರೂ ಮಾಡಿ ಈ ಕಾಲೇಜಿನಿಂದ ಒದ್ದು ಹೊರಗೆ ಹಾಕಬೇಕು ಎಂದು ಸಹಾನ ತನ್ನ ಗೆಳತಿಯರ ಮುಖ ನೋಡುತ್ತಾಳೆ.

   ಅಲ್ಲ, ಈ ಹುಡುಗಿಯ ಮೇಲೆ ಯಾಕೆ ಸಹಾನಾಳಿಗೆ ಇಷ್ಟೊಂದು ಕೋಪ? ಅಂತಹದ್ದು ಏನಾಗಿದೆ ಇವರ ಮಧ್ಯೆ ಎನ್ನುವ ಕುತೂಹಲ ತಡೆಯಲಾಗದೇ ಸಹಾನಳ ಗೆಳತಿ ತಾಹಿರ ಕೇಳಿಯೇ ಬಿಟ್ಟಳು.

  " ಅಲ್ಲಾ ಸಹಾನ, ಯಾಕೆ ನೀನು ಆಕೆಯನ್ನು ಅಷ್ಟೊಂದು ದ್ವೇಷಿಸುತ್ತಾ ಇದ್ದೀಯಾ ? ಏನಾಗಿದೆ ಅಂತಹದ್ದು? "

   " ಆಗುವಂತಹದ್ದು ಏನೂ ಇಲ್ಲ. ಮನಸ್ಸಮಾಧಾನ ಇಲ್ಲದ ಪಿಶಾಚಿ ಎನ್ನುತ್ತಾರಲ್ಲ ಅದು ಇಂತಹವರನ್ನು ನೋಡಿಯೇ ಹೇಳುವುದು. ಆಕೆಯ ಮುಖ ನೀವು ಸರಿಯಾಗಿ ಗಮನಿಸಿಲ್ಲವೇ? ಆಕೆಗೆ ಅದು ಯಾವುದೋ ಒಂದು ಕಾಯಿಲೆ ಇದೆ. ಆಕೆ ನಮ್ಮೊಡನೆ ಬೆರೆತರೆ ಅದು ನಮಗೂ ಬರಬಹುದು. ಹಾಗಾಗಿ ಜನ ಆಕೆಯನ್ನು ಹತ್ತಿರ ಮಾಡಿಕೊಳ್ಳುವುದಿಲ್ಲ. ಮತ್ತೆ ನಿಮಗೆ ಬೇಕಿದ್ದಲ್ಲಿ ನೀವು ಮಾತನಾಡಿ. ನನಗಂತೂ ಆ ರೋಗ ಬರಬಾರದು. ನಾನಂತೂ ಆಕೆಯನ್ನು ಇಲ್ಲಿರಲು ಬಿಡುವುದಿಲ್ಲ. ಮತ್ತೇನಿದ್ದರೂ ನಿಮ್ಮಿಷ್ಟ."

ಸಹಾನಳ ಮಾತು ಕೇಳಿ ಅವರು ತಮ್ಮ - ತಮ್ಮ ಮುಖವನ್ನು ನೋಡಿಕೊಂಡರು. ತಮ್ಮಲ್ಲೇ ಮಾತನಾಡಿಕೊಂಡು ಸಹಾನಳಲ್ಲೂ ಅದರ ವಿಚಾರ ಹೇಳಿದರು. ಅವರೆಲ್ಲರೂ ಸೇರಿ ಆಕೆಯನ್ನು ಅಲ್ಲಿಂದ ಒದ್ದೋಡಿಸಲು ಒಂದು ಪ್ಲಾನ್ ಮಾಡಿದರು.

   ಇದಾವುದರ ಪರಿವೆಯೇ ಇಲ್ಲದ ಸುರಯ್ಯಾ ತನ್ನ ತರಗತಿ ಯಾವುದು ಎಂದು ತಿಳಿಯದೆ
ಆಚಿಂದೀಚೆ ಅಲೆದಾಡುತ್ತಿದ್ದಳು. ಯಾರಲ್ಲೂ ಕೇಳಲು ಆಕೆಗೆ ಸರಿ ಎನಿಸುತ್ತಿರಲಿಲ್ಲ. ಯಾಕೋ ಸುತ್ತ -ಮುತ್ತಲೂ ಇರುವವರನ್ನು ನೋಡಿ ಭಯವಾಗುತ್ತಿತ್ತು. ದೂರದಲ್ಲಿ ಬರುತ್ತಿರುವ ಹುಡುಗಿಯನ್ನು ನೋಡಿ ಸುರಯ್ಯಾಳಿಗೆ ಆಕೆಯೊಂದಿಗೆ ಕೇಳುವ ಎಂದು ಮನಸ್ಸಾಯಿತು. ಹಾಗೆಯೇ ಆಕೆಯ ಬಳಿ ತೆರಳಿ ಕೇಳಿದಳು. ಅದಕ್ಕೆ ಪ್ರತಿಯಾಗಿ ಆಕೆ

    " ಓಹ್ ! ನೀನು ಸೈಕಾಲಜಿ ತೆಗೊಂಡಿದ್ದ?. ನಾನೂ ಕೂಡ ಅದೇ ಆಯ್ಕೆ ಮಾಡಿದ್ದೇನೆ. ಹಾಗಿದ್ದಲ್ಲಿ ನಾವಿಬ್ಬರೂ ಒಂದೇ ಕ್ಲಾಸ್ ಎಂದಂಗಾಯಿತು. ಸರಿ ಬಾ., ನನಗೆ ತಿಳಿದಿದೆ ಎಲ್ಲಿ ಎಂದು. ಅಂದ ಹಾಗೆ ನಿನ್ನ ಹೆಸರೇನು ? ಎಂದು ಕೇಳಿದಳು.

     "ಸುರಯ್ಯಾ..., ನಿನ್ನ ಹೆಸರೇನು? " ಎಂದು ಸುರಯ್ಯಾ ಆಕೆಗೆ ಮರು ಪ್ರಶ್ನೆ ಹಾಕಿದಳು. 

   " ನನ್ನ ಹೆಸರು ರಾಫಿಯ.. ಹ್ಞಾಂ ಇಲ್ಲಿ ನೋಡು ಇದೇ ನಮ್ಮ ಕ್ಲಾಸ್ ರೂಮ್" ಎಂದು ತೋರಿಸಿದಳು.

 ಸುರಯ್ಯಾ ಅತ್ತ ತಿರುಗಿ ನೋಡಿದಳು. ಮೊದಲೇ ಬಂದಿದ್ದಂತಹ ವಿದ್ಯಾರ್ಥಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತಿದ್ದರು. ಸುರಯ್ಯಾಳು ಮೆಲ್ಲನೆ ತರಗತಿಯೊಳಗೆ ಕಾಲಿಡುತ್ತಾಳೆ. ತಾನು ಯಾವ ಸ್ಥಳದಲ್ಲಿ ಕುಳಿತುಕೊಳ್ಳುವುದು ಎಂದು ಸುತ್ತಲೂ ನೋಡುತ್ತಾಳೆ. ಕಡೆಯ ಬೆಂಚಿನಲ್ಲಿ ಮಾತ್ರ ಜಾಗ ಇರುವುದರಿಂದ ಅಲ್ಲೇ ಕುಳಿತುಕೊಳ್ಳೋಣ ಎಂದು ನಿರ್ಧರಿಸಿ ಒಂದು ಹೆಜ್ಜೆ ಮುಂದೆ ಇಡಬೇಕಾದರೆ ಏನೋ ಎಡವಿದಂತಾಗಿ ಮಾರುದ್ದ ಹೋಗಿ ಬೀಳುತ್ತಾಳೆ. ಬಿದ್ದ ಏಟಿಗೆ ಆಕೆಗೆ ಸೊಂಟ ನೋವಾಗಲು ಪ್ರಾರಂಭಿಸುತ್ತದೆ. ಅಷ್ಟರಲ್ಲಿ ಇದೀ ತರಗತಿಯ ವಿದ್ಯಾರ್ಥಿಗಳೆಲ್ಲಾ ಈಕೆಯತ್ತ ನೋಡಿ ಕೇಕೆ ಹಾಕಿ ನಗಾಡಲು ಫ್ರಾರಂಭಿಸುತ್ತಾರೆ. ಎಲ್ಲರೂ ತನ್ನನ್ನು ಅವಮಾನಿಸುವುದನ್ನು ನೋಡಿ ಸುರಯ್ಯಾಳಿಗೆ ಅಳು ಬರುತ್ತದೆ. ಅಷ್ಟರಲ್ಲಿ ಅವರ ಮಧ್ಯದಿಂದ ಸಹಾನ ಬರುತ್ತಾಳೆ. ಸುರಯ್ಯಾಳಿಗೆ ಆಕೆಯನ್ನು ನೋಡಿ ಆಶ್ಚರ್ಯವಾಗುತ್ತದೆ. ಅರೇ ಈಕೆ ಇದೇ ಕ್ಲಾಸಿನಲ್ಲಿ ಇದ್ದಾಳ? ಎಂದು ಯೋಚಿಸುತ್ತಾಳೆ.

 " ಏನು ಹಾಗೆ ನೋಡ್ತಾ ಇದ್ದೀಯಾ ? ನಿನಗೆ ಸಿಗಬೇಕಾದ ಮರ್ಯಾದೆ ಸರಿಯಾಗಿ ಸಿಕ್ಕಿದೆ. ನೀನು ಏನು ಎನಿಸಿದ್ದೀಯಾ? ನೀನೆ ಎಡವಿ ಬಿದ್ದದ್ದು ಎಂದಾ? ಹಾಗೆ ಎನಿಸಿದ್ದಲ್ಲಿ ಅದು ನಿನ್ನ ಭ್ರಮೆ. ನಿನ್ನನ್ನು ಎಡವಿ ಬೀಳುವಂತೆ ಮಾಡಿದ್ದು ನಾವೇ. ನೋಡು ನೀನು ಬರುವಾಗ ಈ ತಾಹಿರ ನೀನು ಬೀಳಲಿ ಎಂದು ಅಡ್ಡ ಕಾಲಿಟ್ಟದ್ದು. ಇಂದು ಈಕೆ, ನಾಳೆ ಇನ್ಯಾರೋ... ಅಲ್ಲಾ ಆ ರೀತಿ ನನ್ನ ಕೈಯಲ್ಲಿ ಪೆಟ್ಟು ತಿಂದ ಮೇಲೂ ನೀನು ಇಲ್ಲಿ ಕಲಿಯಲು ಬಂದಿದ್ದೀಯಲ್ಲ? ನಿನಗೆ ಸ್ವಲ್ಪವೂ ನಾಚಿಕೆ , ಮಾನ ಅನ್ನೋದು ಇಲ್ವಾ? ಅಲ್ಲಾ ನಿನ್ನ ಅಪ್ಪ ಅವನು ಎಂತವನು? ಯಾವ ಅಪ್ಪಂದಿರಾದರೂ ಮತ್ತೆ ಇಲ್ಲಿಗೆ ಕಳುಹಿಸುತ್ತಿರಲಿಲ್ಲವೇನೋ. ಸರಿಯಾಗಿ ನಿನ್ನ ಸುತ್ತ- ಮುತ್ತಲೂ ಒಮ್ಮೆ ನೋಡು. ಇಲ್ಲಿ ಎಲ್ಲರೂ ನಿನ್ನ ವಿರುದ್ಧ ನಿಂತಿರುವವರೇ ಹೊರತು ಯಾರೂ ನಿನ್ನ ಬೆಂಬಲಕ್ಕೆ ಇಲ್ಲ. ನಿನ್ನನ್ನು ಇಲ್ಲಿಂದ ಓಡಿಸದೆ ನಾವು ಯಾರೂ ಸುಮ್ಮನಿರೋದಿಲ್ಲ. ನೀನಾಗಿಯೇ ಹೋದೆಯೋ ಅದು ನಿನಗೆ ಒಳ್ಳೆಯದು. ಅದು ಇಲ್ಲದಿದ್ದಲ್ಲಿ ನೀನು ನೋಡ್ತಾ ಇರು ಎಂತಹ ಶಿಕ್ಷೆಗಳು ನಿನಗಾಗಿ ಕಾದಿದೆ ಎಂದು.ಇದು ಬರೇ ಆರಂಭ ಅಷ್ಟೇ. ಹಾಗಾಗಿ ಮೊದಲೇ ಹೇಳುತ್ತೇನೆ ಹೊರಡು ಇಲ್ಲಿಂದ" ಗಡುಸಾಗಿಯೇ ಆಜ್ಞೆ ನೀಡಿದಳು ಸಹಾನ. 

 ಅಷ್ಟರಲ್ಲಿ ತರಗತಿಗೆ ಲೆಕ್ಚರರ್ ಬರುವುದನ್ನು ಗಮನಿಸಿದ ಅವರೆಲ್ಲಾ ತಮ್ಮ ಸ್ಥಾನದಲ್ಲಿ ಹೋಗಿ ಕುಳಿತರು. ಸುರಯ್ಯಾಳು ತಾನೂ ಕೂಡ ಎದ್ದೇಳಲು ಪ್ರಯತ್ನಿಸಿದಳು. 

ಸುರಯ್ಯಾ ತಾನು ಬಿದ್ದಲ್ಲಿಂದ ಎದ್ದೇಳಲು ಪ್ರಯತ್ನಿಸಿದರೂ ಕೂಡ ಆಕೆಯಿಂದ ಎದ್ದೇಳಲು ಸಾಧ್ಯವಾಗಲಿಲ್ಲ. ಅಲ್ಲಿ ತಮ್ಮ ಹಸ್ತವನ್ನು ಚಾಚಿ ಸಹಾಯವನ್ನು ಮಾಡುವವರು ಯಾರೂ ಇರಲಿಲ್ಲ. ಎಲ್ಲವನ್ನೂ ನೋಡುತ್ತಿದ್ದ ರಾಫಿಯಾಳಿಗೆ ಸುರಯ್ಯಾಳ ಪರಿಸ್ಥಿತಿ ನೋಡಿ ಕನಿಕರ ಉಂಟಾಯಿತು. ಆಕೆ ಸುರಯ್ಯಾಳ ಬಳಿ ನಡೆದು ತನ್ನ ಕೈ ನೀಡಿ ಆಕೆಯನ್ನು ಎತ್ತಿದಳು. ಅಷ್ಟರಲ್ಲಾಗಲೇ ಲೆಕ್ಚರರ್ ತರಗತಿ ಪ್ರವೇಶ ಮಾಡಿದ್ದರು. ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ತಮ್ಮ ತಮ್ಮ ಪರಿಚಯ ಮಾಡುವಂತೆ ಹೇಳಿಕೊಂಡರು.

     ಸ್ವಲ್ಪ ಫ್ರೀ ಟೈಂ ಸಿಕ್ಕಿದಾಗ ರಾಫಿಯ ಹಾಗೂ ಸುರಯ್ಯಾ ಹೊರನಡೆದರು. 

   "ಅಲ್ಲಾ ಅವರು ಅಷ್ಟೆಲ್ಲಾ ಕಷ್ಟ ನಿನಗೆ ಕೊಡುತ್ತಾ ಇದ್ದಾರೆ. ನೀನು ಎಲ್ಲಾ ಸಹಿಸಿ ಸುಮ್ಮನಿರೋದು ಯಾಕೆ? ಬಾ ಪ್ರಿನ್ಸಿಪಾಲ್ ಬಳಿ ಹೇಳೋಣ. ನಾನು ನೋಡಿದ್ದೇನೆ ಎಂದು ಸಾಕ್ಷಿ ಹೇಳುತ್ತೇನೆ "ಎಂದು ರಾಫಿಯ ಸುರಯ್ಯಾಳಲ್ಲಿ ಹೇಳಿದಳು.

    " ಇಲ್ಲಾ ರಾಫಿಯ, ಅವಳ ಸುದ್ದಿಗೆ ನಾನು ಹೋಗುವುದಿಲ್ಲ ಎಂದು ತಂದೆಯ ಬಳಿ ನಾನು ಹೇಳಿದ್ದೇನೆ. ಇನ್ನು ಸುಮ್ಮನೆ ರಗಳೆ ನಾನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಆಕೆ ನನಗೆ ಏನೂ ಉಪಟಳ ನೀಡಿದರೂ ನಾನು ಸಹಿಸಿಕೊಳ್ಳುತ್ತೇನೆ. ಆದರೆ ಕಾಲೇಜು ಬಿಟ್ಟು ಹೋಗುವುದಿಲ್ಲ. ಹಲವಾರು ಆಸೆ, ಆಕಾಂಕ್ಷೆ ಇಟ್ಟುಕೊಂಡು ನಾನು ಇಲ್ಲಿ ಬಂದಿರೋದು. ಅದೆಲ್ಲಾ ಒಡೆದು ನುಚ್ಚು ನೂರಾಗಲು ನಾನು ಬಿಡುವುದಿಲ್ಲ. ನೋಡ್ತಾ ಇರು ರಾಫಿಯ ಕೊನೆಗೊಂದು ದಿನವಾದರೂ ನನ್ನ ಸಹನೆಯೇ ಗೆಲ್ಲುವುದು ನೋಡ್ತಾ ಇರು" ಎಂದು ಸುರಯ್ಯಾ ರಾಫಿಯಾಳಿಗೆ ಉತ್ತರಿಸಿದಳು.

   ರಾಫಿಯ ಮತ್ತೇನೂ ಹೇಳಲು ಹೋಗಲಿಲ್ಲ. ಅವರು ಸುರಯ್ಯಾಳಿಗೆ ಮತ್ತಷ್ಟು ಕಿರುಕುಳ ನೀಡದಿರಲಿ ಎಂದು ಮನಸ್ಸಿನಲ್ಲೇ ಬೇಡಿಕೊಂಡಳು.

    ಅಂದು ಸಹಾನ ಮತ್ತು ಆಕೆಯ ಬಳಗದವರು ಸುರಯ್ಯಾಳನ್ನು ಮತ್ತಷ್ಟು ಪೀಡಿಸಲು ನೋಡಿದರಾದರೂ ಅದಕ್ಕೆ ಸೂಕ್ತ ಸಮಯಾವಕಾಶ ದೊರೆಯಲಿಲ್ಲ. ಸ್ವಲ್ಪ ಬಿಡುವಿನ ವೇಳೆ ದೊರೆತರೂ ರಾಫಿಯ ಆಕೆಯನ್ನು ಕರೆದುಕೊಂಡು ಹೊರಗೆ ಹೋಗುತ್ತಿದ್ದಳು. ಹಾಗಾಗಿ ಅವರು ಮಾಡಿದ ಯೋಜನೆಗಳೆಲ್ಲವೂ ತಲೆಕೆಳಗಾಗುತ್ತಿದ್ದವು.

     ಆ ದಿನ ಸಂಜೆ ಕಾಲೇಜು ಬಿಡುತ್ತಿದ್ದಂತೆಯೇ ಸುರಯ್ಯಾ ರಾಫಿಯಾಳೊಂದಿಗೆ ಹೊರ ನಡೆದಳು. ಗೇಟಿನ ಬಳಿಯಲ್ಲಿ ಖಾದರ್ ಆಕೆಯನ್ನೇ ಕಾಯುತ್ತಾ ನಿಂತಿರುವುದು ಕಾಣಿಸಿತು. ತಂದೆಯನ್ನು ಕಂಡಿದ್ದೇ ತಡ ಸುರಯ್ಯಾ ಓಡಿ ಹೋಗಿ ಅವರನ್ನು ಅಪ್ಪಿ ಹಿಡಿದು ಮನಸಾರೆ ಅತ್ತಳು.

  " ಅರೇ , ಮನೆಯಿಂದ ಬಂದು ಒಂದು ದಿನವೂ ಕೂಡ ಆಗಿಲ್ಲ. ಈಗಲೇ ನನ್ನನ್ನು ಇಷ್ಟೊಂದು ಮಿಸ್ ಮಾಡುತ್ತಾ ಇದ್ದೀಯಾ ? ಹಾಗಿದ್ದಲ್ಲಿ ಇನ್ನುಳಿದ ದಿವಸ ಹೇಗೆ ಇರ್ತೀಯಾ ? " 

ಸುರಯ್ಯಾಳ ಅಳುವಿಗೆ ಏನೋ ಕಾರಣವಿದೆ ಎಂದು ತಿಳಿಯದ ಖಾದರ್ ಆಕೆ ತಮ್ಮನ್ನು ಅಗಲಿ ಬಂದ ದುಃಖದಲ್ಲಿ ಅಳುತ್ತಿದ್ದಾಳೆ ಎಂದೆನಿಸಿ ಹಾಗೆ ಕೇಳಿದರು.

ತಂದೆಯ ಮಾತು ಕೇಳಿ ಸುರಯ್ಯಾ ತನ್ನ ಕಣ್ಣುಗಳನ್ನು ಒರೆಸಿಕೊಂಡಳು. ನಿಜ ವಿಷಯ ತಿಳಿದರೆ ನನ್ನ ತಂದೆ ಖಂಡಿತವಾಗಿಯೂ ನನ್ನನ್ನು ಇಲ್ಲಿ ಕಲಿಯಲು ಬಿಡುವುದಿಲ್ಲ ಎಂದು ಅರಿತು ಆಕೆ ಹೇಳದೆಯೇ ಮುಚ್ಚಿಟ್ಟಳು. 

  "ನಡಿ, ನಿನ್ನ ಲಗೇಜ್ ಎಲ್ಲಾ ತಂದಿದ್ದೇನೆ. ಹಾಸ್ಟೆಲಿಗೆ ಹೋಗೋಣ " ಎಂದು ಮಗಳನ್ನು ಕರೆದುಕೊಂಡು ಹಾಸ್ಟೆಲಿನತ್ತ ನಡೆದರು.

    ಇತ್ತ ಕ್ಲಾಸ್ ಬಿಟ್ಟರೂ ಕೂಡ ತರಗತಿಯೊಳಗೆಯೇ ಇದ್ದರು ಸಹಾನ ಹಾಗೂ ಬಳಗದವರು. ಸುರಯ್ಯಾಳಿಗೆ ಮತ್ತೆ ಕಿರುಕುಳ ನೀಡಲು ಅವಕಾಶ ಸಿಗಲಿಲ್ಲ ಎಂದು ಸಹಾನ ಸಿಟ್ಟಿನಿಂದ ಕೊತ ಕೊತನೇ ಕುದಿಯುತ್ತಿದ್ದಳು..  

   " ಏಯ್ ಸಹಾನ! ಯಾಕೆ ಸುಮ್ಮನೆ ಹೀಗೆ ಆಲೋಚಿಸುತ್ತಾ ಇದ್ದೀಯಾ? ಇಂದಿನ ದಿನ ಹೇಗೂ ಕಳೆದು ಹೋಯಿತು. ಇನ್ನು ಏನಿದ್ದರೂ ನಾಳೆಯ ವಿಷಯ ತಾನೇ ? ಏನಾದರೂ ಮಾಡೋಣ " ಎಂದು ಮುಸ್ತಾಕ್ ಸಲಹೆ ನೀಡಿದನು.

 " ನಾಳೆ ಏನು ಮಾಡೋದು ಹೇಳು ? ಆಕೆಗೆ ನೋವಾಗದಿದ್ದಲ್ಲಿ ನನಗೆ ಸಮಾಧಾನ ಆಗುವುದಿಲ್ಲ. ಹೇಳು ಏನು ಮಾಡುವುದು ಎಂದು ?" ಸಹಾನ ಆತನೊಂದಿಗೆ ಕೇಳಿದಳು.

  "ನೀನು ಒಪ್ಪುವುದಾದರೆ ಒಂದು ಐಡಿಯಾ ಇದೆ. ಆದರೆ ಆಕೆ ಯಾರಲ್ಲಾದರೂ ಹೋಗಿ ಹೇಳಿದರೆ ನಮ್ಮನ್ನು ಡಿಬಾರ್ ಮಾಡಬಹುದು."

   " ಹಾಗೇನೂ ನೀನು ಹೆದರಬೇಡ. ಆಕೆ ಯಾರಲ್ಲಿಯೂ ಹೇಳಲಿಕ್ಕೆ ಇಲ್ಲ. ನೀನು ವಿಷಯ ಹೇಳು? "

   "ಅದೂ ಆಕೆ ಕ್ಲಾಸ್ ರೂಮಿಗೆ ಬರುವಾಗಲೇ ನಾವು ಆಕೆಯ ಮುಖಕ್ಕೆ ಮೆಣಸಿನ ಹುಡಿ ಹಾಕಿದ ನೀರನ್ನು ಸ್ಪ್ರೇ ಮಾಡಬೇಕು.ಹಾಗೆ ಮಾಡಿದರೆ ಹೇಗೆ? ಎಂದು ಸಹಾನಳಲ್ಲಿ ಮುಸ್ತಾಕ್ ಕೇಳಿದನು. 

ಸುರಯ್ಯಾ ಕ್ಲಾಸ್ ರೂಮಿಗೆ ಬರುವಾಗಲೇ ನಾವು ಆಕೆಯ ಮುಖಕ್ಕೆ ಮೆಣಸಿನ ಪುಡಿ ಕಲಸಿದ ನೀರನ್ನು ರಟ್ಟಿಸಬೇಕು. ಮುಸ್ತಾಕ್ ತನ್ನ ಐಡಿಯಾ ಹೇಳಿದನು.

ಈ ಐಡಿಯಾ ಕೇಳಿದ ಸಹಾನಳ ಖುಷಿಗೆ ಪಾರವೇ ಇರಲಿಲ್ಲ. "ಸರಿ ಹೇಗೆ? ಯಾವ ರೀತಿ ಮಾಡುವುದು? ಎಂದು ವಿವರಿಸು" ಎಂದು ಮುಸ್ತಾಕಿನಲ್ಲಿ ಹೇಳಿದಳು.

     ಆಕೆಯ ಪಕ್ಕದಲ್ಲಿ ಕುಳಿತಿದ್ದ ತಾಹಿರ ತನ್ನ ಕೈ ಗಡಿಯಾರವನ್ನು ನೋಡಿದಳು. ಅರೇ ಸಮಯ ಮೀರುತ್ತಿದೆ. ನಾನು ನಿನ್ನೆ ಹಾಸ್ಟೆಲ್ ಸೇರಿಕೊಂಡಿದ್ದೇನೆ. ತಡವಾದರೆ ಅಲ್ಲಿ ಬೈಯುತ್ತಾರೆ ಖಂಡಿತ. ಹಾಗಾಗಿ ನಾನು ಹೋಗುತ್ತೇನೆ. ಏನಾದರೂ ವಿಷಯ ಇದ್ದಲ್ಲಿ ನನಗೆ ತಿಳಿಸಿಬಿಡಿ" ಎನ್ನುತ್ತಾ ಹೊರ ನಡೆದಳು.

   ಆಕೆ ಹೋದಮೇಲೆ ಮುಸ್ತಾಕ್ ವಿಷಯವನ್ನು  ವಿವರಿಸತೊಡಗಿದನು. ಏನು ಮಾಡಬೇಕು, ಹೇಗೆ ಮಾಡುವುದು ಎಂದು ಎಲ್ಲಾ ಯೋಜನೆಗಳನ್ನು ತಿಳಿಸಿದನು.

      ಎಲ್ಲಾ ಯೋಜನೆಗಳನ್ನು ಸರಿಯಾಗಿ ರೂಪಿಸಿದ ನಂತರ ಅವರು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

   ಇತ್ತ ಹಾಸ್ಟೆಲ್ ತಲುಪಿದ ತಾಹಿರ ತನ್ನ ರೂಮಿನತ್ತ ಹೋಗಬೇಕಾದರೆ ಸಹಜವಾಗಿಯೇ ಆಫೀಸ್ ರೂಮಿನತ್ತ ನೋಡಿದಳು. ಅಲ್ಲಿ ನಿಂತಿದ್ದ ಸುರಯ್ಯಾ ಹಾಗೂ ಆಕೆಯ ತಂದೆಯನ್ನು ನೋಡಿ ತಾಹಿರಾಳಿಗೆ ಆಶ್ಚರ್ಯವಾಯಿತು.

  ಅರೇ ಇವಳೇಕೆ ಇಲ್ಲಿ ಬಂದಿದ್ದಾಳೆ ? ಒಂದುವೇಳೆ ಇಲ್ಲಿ ಸೇರ್ಪಡೆಗೊಳ್ಳಲು ಬಂದಿದ್ದಾಳೋ ಹೇಗೆ? ಯಾವುದಕ್ಕೂ ಮೊದಲು ಸಹಾನಳಲ್ಲಿ ವಿಚಾರ ತಿಳಿಸೋಣ ಎಂದು ಎನಿಸಿ ನೇರವಾಗಿ ತನ್ನ ರೂಮಿಗೆ ಹೋಗಿ ಮೊಬೈಲ್ ತೆಗೆದು ಸಹಾನಳ ನಂಬರಿಗೆ ಕರೆ ಮಾಡಿದಳು.

     ತನ್ನ ಮೊಬೈಲ್ ರಿಂಗಣಿಸುವುದು ನೋಡಿ ಸಹಾನ ಮೊಬೈಲ್ ಕೈಗೆತ್ತಿಕೊಂಡಳು. ಅರೇ ತಾಹಿರಳ ಕರೆ. ಬೇಗ ಹೋಗಿದ್ದಾಳಲ್ಲ, ಹಾಗೆ ಮತ್ತೇನು ಮಾತನಾಡಿ ಕೊಂಡಿದ್ದೀರಿ ಎಂದು ಕೇಳಲು ಕರೆ ಮಾಡಿದ್ದಾಗಿರಬಹುದು ಎಂದು ಯೋಚಿಸಿಕೊಂಡೇ ಕರೆ ರಿಸೀವ್ ಮಾಡಿದಳು. 

    " ಹ್ಞಾಂ ಹೇಳು ತಾಹಿರ "

   " ಸಹಾನ ನಾನು ಹೇಳುವುದನ್ನು ಕೇಳಿಸಿಕೊಳ್ಳು. ಆ ಸುರಯ್ಯಾ ಇದ್ದಾಳಲ್ಲ ಆಕೆ ನನ್ನ ಹಾಸ್ಟೆಲಿಗೂ ಬಂದು ವಕ್ಕರಿಸಿಕೊಂಡಿದ್ದಾಳೆ. ನನಗೆ  ಬರುತ್ತಿರೋ ಸಿಟ್ಟಿನಲ್ಲಿ ಏನು ಮಾಡಬೇಕೆಂದು ತಿಳಿಯುತ್ತಿಲ್ಲ."

   " ಹ್ಞಾಂ ಮತ್ತೆ ನಾನು ಹೇಳಿದ್ದು ಸುಳ್ಳು ಎಂದು ಕೊಂಡೆಯಾ ? ಆಕೆ ಯಾರನ್ನು ಬಿಡುವುದಿಲ್ಲ. ಈಗ ನೀನು ಏನು ಮಾಡಬೇಕು ಎಂದು ಇದ್ದೀಯಾ ಹೇಳು ? "
 " ಅದೇ ನನಗೂ ತಿಳಿಯುತ್ತಿಲ್ಲ. ಅದಕ್ಕೆ ಏನು ಮಾಡಬೇಕು ಎಂದು ಕೇಳಲೇ ನಿನಗೆ ಕರೆ ಮಾಡಿರೋದು . ಏನು ಮಾಡಬೇಕು ಹೇಳು ? "

 ಸ್ವಲ್ಪ ಹೊತ್ತು ಆಲೋಚಿಸಿದ ಸಹಾನ

     " ಒಂದು ಕೆಲಸ ಮಾಡು , ಈಗ ಬರೇ ಆಕೆಯ ಅಡ್ಮಿಷನ್ ಆಗ್ತಾ ಇರೋದಲ್ವ? ಆಕೆ ಯಾವುದಾದರೂ ಒಂದು ರೂಮಿನೊಳಗೆ ಹೋಗುವ ಮೊದಲಾಗಿ ನೀನು ಪ್ರತಿಯೊಂದು ರೂಮಿಗೆ ಹೋಗಿ ಆಕೆಗೆ ಇಂತಿಂತಹ ಕಾಯಿಲೆ ಇದೆ. ಯಾರೂ ಆಕೆಯನ್ನು ಹತ್ತಿರ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ ಬಾ. ಆಮೇಲೆ ನೋಡೋಣ ಹೇಗೆ ಆಕೆ ಅಲ್ಲಿ ಇರುತ್ತಾಳೆ ಎಂದು ? "ಎಂಬ ಸಲಹೆ ನೀಡಿದಳು.

 ಅದರಂತೆ ತಾಹಿರ ಆಗಲೇ ಎಲ್ಲ ರೂಮಿಗೂ ಹೋಗಿ ಈ ವಿಷಯ ತಿಳಿಸಿದಳು.

      ಅಡ್ಮಿಷನ್ ಕೆಲಸವೆಲ್ಲಾ ಮುಗಿದ ಮೇಲೆ ಖಾದರ್ ಹೊರಡಲು ಅನುವಾದರು.

 "ಜಾಗ್ರತೆ ಸುರಯ್ಯಾ, ನಾನಿನ್ನು ಹೋಗಿ ಬರುತ್ತೇನೆ. ಕರೆ ಮಾಡುತ್ತಾ ಇರು. ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ತಿನ್ನು. ಅನಾವಶ್ಯಕವಾಗಿ ಯಾವುದೇ ವಿಷಯಕ್ಕೆ ಹೋಗಬೇಡ" ಎಂಬ ಬುದ್ಧಿಮಾತು ಹೇಳಿ ಅವರು ಅಲ್ಲಿಂದ ಹೊರಡಲು ಅನುವಾದರು.

   ಅಪ್ಪ ಅಲ್ಲಿಂದ ಹೊರಡುತ್ತಾರೆ ಎನ್ನುವಾಗ ಸುರಯ್ಯಾಳಿಗೆ ಮತ್ತಷ್ಟು ದುಃಖ ಉಮ್ಮಳಿಸಿ ಬಂತು. ಅವರನ್ನೆಲ್ಲಾ ಯಾಕೋ ತುಂಬಾ ಮಿಸ್ ಮಾಡುತ್ತೇನೆ ಎಂದು ಎನಿಸಿತಲ್ಲದೆ ಸಹಾನ ಕೊಡುವ ಕಿರುಕುಳ ಹಾಗೂ ಮಾಡುವ ಅವಮಾನ ಎನಿಸಿ ಮತ್ತಷ್ಟು ಖೇದಕರ ಎನಿಸಿತು.ಆದರೂ ಆಕೆಯ ಗುರಿಯೊಂದೆ ಆಕೆಯನ್ನು ಅಲ್ಲೇ ನಿಲ್ಲಿಸುವಂತೆ ಮಾಡಿತು.

    ಆಕೆಯನ್ನು ಅಲ್ಲೇ ಬಿಟ್ಟು ಖಾದರ್ ಹಿಂದಿರುಗಿದರು. ಕಣ್ಣಿನಿಂದ ಮರೆಯಾಗುವವರೆಗೂ ಆಕೆ ತನ್ನ ತಂದೆಯನ್ನೇ ನೋಡಿದಳು. ಆದರೂ ಖಾದರ್ ಹಿಂದಿರುಗಿ ನೋಡಲಿಲ್ಲ. ಒಂದುವೇಳೆ ನೋಡಿದ್ದರೂ ಸುರಯ್ಯಾಳಿಗೆ ಅವರ ಕಣ್ಣಿನಲ್ಲಿ ಜಾರಿದ ಕಂಬನಿ ಕಾಣಿಸುತ್ತಿತ್ತೇನೋ....

   ಅಪ್ಪ ಕಣ್ಣಿನಿಂದ ಮರೆಯಾಗುವವರೆಗೂ ನೋಡಿದ ಸುರಯ್ಯ ತನಗೆ ಮೊದಲೇ ನಿಗದಿ ಪಡಿಸಿದ ಕೋಣೆಯತ್ತ ನಡೆದಳು.  ತಾಹಿರಾಳ ಮಾತನ್ನು ನಿಜವೆಂದೇ ನಂಬಿದ್ದ ಅವರು ಸುರಯ್ಯಾ ತಮ್ಮ ಕೋಣೆಗೆ ಬರುವುದನ್ನು ಇಷ್ಟಪಡಲಿಲ್ಲ.

   ಆಕೆಯನ್ನು ಬೈದು ಹೇಗಾದರೂ ಹೊರಹಾಕಬೇಕು ಎಂದು ಕಾಯುತ್ತಿದ್ದರು. ಆದರೆ ಸುರಯ್ಯಾಳ ಹಿಂದಿನಿಂದ ವಾರ್ಡನ್ ಕೂಡ ಬರುತ್ತಿರುವೂದನ್ನು ನೋಡಿದ ಅವರು ಸುಮ್ಮನಾದರು.

  " ಆಕೇ ಇಲ್ಲೇ ಇರಲಿ. ನಾವ್ಯಾರೂ ಆಕೆಯನ್ನು ಮಾತನಾಡಿಸದಿದ್ದರೆ ಆಯಿತು. ಆಕೆ ಆಕೆಯ ಪಾಡಿಗೆ ಇದ್ದು ಬಿಡಲಿ. ಇಲ್ಲದಿದ್ದಲ್ಲಿ ಆಕೆ ವಾರ್ಡನ್ ಬಳಿ ಹೇಳಿದರೆ ನಮಗೇ ಕಷ್ಟ " ಎಂದು ರೂಮಿನ ಲೀಡರ್ ಹೇಳಿದಾಗ ಅವರು ಒಪ್ಪಿದರು.

   ರೂಮಿನೊಳಗೆ ಬಂದ ಸುರಯ್ಯಾ ಅವರನ್ನು ಮಾತನಾಡಿಸಲು ಪ್ರಯತ್ನಿಸಿದಳು. ಆದರೆ ಅವರ್ಯಾರೂ ಆಕೆಯೊಂದಿಗೆ ಮಾತನಾಡುವ ಗೊಡವೆಗೆ ಹೋಗಲಿಲ್ಲ. ಮನೆಯವರ ನೆನಪು ಕಾಡುತ್ತಿದುದು ಅಲ್ಲದೆ ಇಲ್ಲಿ ಯಾರೂ ತನ್ನನ್ನು ಮಾತನಾಡಿಸದೇ ಇರುವುದು ಆಕೆಯನ್ನು ಭಾವುಕಳನ್ನಾಗಿಸಿತು.

  ಆ ದಿನ ಹೇಗೋ ಕಳೆದುಹೋಯಿತು. ಮರುದಿನ ಎದ್ದವಳೇ ಫಜರ್ ನಮಾಝ್ ಮಾಡಿ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ಕಾಲೇಜಿನತ್ತ ತೆರಳಿದಳು.

*ಅವಳು ಬರುವುದನ್ನೇ ಕಾಯುತ್ತಿದ್ದ ಸಹಾನ ಹಾಗೂ ಗೆಳತಿಯರು ಮೆಣಸಿನ ನೀರನ್ನು ಕೈಯಲ್ಲಿ ಹಿಡಿದು ಸಿದ್ಧರಾಗಿ ನಿಂತಿದ್ದರು.

ಅರೆ ಅಲ್ಲಿ ನೋಡಿ, ಸುರಯ್ಯಾ ಬರುತ್ತಿದ್ದಾಳೆ. ಆಕೆ ಒಳಹೊಗ್ಗುವಾಗ ನಾನು ಇದನ್ನು ಆಕೆಯ ಮೇಲೆ ಸ್ಪ್ರೇ ಮಾಡುತ್ತೇನೆ. ಆಮೇಲೆ ಅವಳು ನೋವಿನಿಂದ ಚಡಪಡಿಸುವುದು ನೋಡಿದಾಗ ನೀವೆಲ್ಲ ಕೇಕೆ ಹಾಕಿ ನಕ್ಕರಾಯಿತು. ಯಾರೂ ಕೂಡ ಒಂದು ತೊಟ್ಟು ನೀರು ಕೂಡ ಕೊಡಬಾರದು. ನಿಮ್ಮಲ್ಲಿ ನೀರು ಇದ್ದರೆ ಅದನ್ನು ಅಡಗಿಸಿಬಿಡಿ.  ಆಕೆಗೆ ಚೆನ್ನಾಗಿ ಅದು ಉರಿಯಬೇಕು. ಆಮೇಲೆ ಆಕೆ ಅದೆಲ್ಲಿ ಹೋಗುತ್ತಾಳೋ ನಾನೂ ನೋಡುತ್ತೇನೆ.ಮತ್ತೆ ಆಕೆ ಈ ಕಾಲೇಜಿನತ್ತ ಸುಳಿಯಲಿಕ್ಕಿಲ್ಲ ಎಂದು ಮುಸ್ತಾಕ್ ಹೇಳಿದನು.

   ಮುಸ್ತಾಕ್ ಮಾತು ಕೇಳಿ ಅಲ್ಲಿದ್ದವರೆಲ್ಲ ಖುಷಿಯಿಂದ ತೇಲಾಡಿದರು. "ಗೆಳೆಯ ಎಂದರೆ ನಿನ್ನ ರೀತಿ ಇರಬೇಕು" ಎಂದು ಸಹಾನ ಆತನನ್ನು ಹೊಗಳಿದಳು.

    ಅಷ್ಟರಲ್ಲಿ ಕಾಲ ಸಪ್ಪಳ ಕೇಳಿಸಿತು. ಮುಸ್ತಾಕ್ ಬಾಗಿಲ ಎಡೆಯಲ್ಲಿ ನಿಂತಿದ್ದನು. ಸಪ್ಪಳ ಹತ್ತಿರವಾದಂತೆ ಮುಸ್ತಾಕ್ ಒಮ್ಮೆಲೇ ಹೋಗಿ ತನ್ನ ಕೈಯಲ್ಲಿ ಇದ್ದ ಮೆಣಸಿನ ನೀರನ್ನು ಸ್ಪ್ರೇ  ಮಾಡಿದನು. ಅಯ್ಯೋ.... ಅಮ್ಮಾ...  ಉರಿ..... ಉರಿ... ಎನ್ನೋ ಚೀತ್ಕಾರ ಕೇಳಿ ಬಂದಿತು. ಆಕೆಯ ಬೊಬ್ಬೆ ಕೇಳಿಯೂ ಯಾರೊಬ್ಬರೂ ಕೇಕೆ ಹಾಕ್ಕದನ್ನು ನೋಡಿ ಮುಸ್ತಾಕ್ ಆಶ್ಚರ್ಯಗೊಂಡನು.

  ಆತ ಬಾಗಿಲ ಎಡೆಯಿಂದ ಹೊರಬಂದು ನೋಡಿದವನೇ ಆಘಾತಗೊಂಡನು.

ಸುರಯ್ಯಾಳ ಬದಲಿಗೆ ಆತ ಸ್ಪ್ರೇ ಮಾಡಿದ್ದು ತಾಹಿರಾಳ ಮೇಲಾಗಿತ್ತು.

    ಆಕೆ ಉರಿ ತಡೆಯಲಾಗದೆ ವಿಲ ವಿಲ ಎಂದು ಒದ್ದಾಡುತ್ತಿದ್ದಳು‌. ಸುರಯ್ಯಾ ಬರುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮತ್ತೆ ತಾಹಿರ ಯಾವಾಗ ಒಳಗೆ ಬಂದಿದ್ದು ಎಂದು ಯೋಚಿಸುತ್ತಲೇ ಮುಸ್ತಾಕ್ ಸಹಾನಳತ್ತ ನೋಡಿದನು.

   ಆಕೆ ಏನೂ ಆಗದವರಂತೆ ನಿಂತುಕೊಂಡಿದ್ದಳು. 

 " ಅರೇ ಸಹಾನ ಏನಾದರೂ ಆಕೆಗೆ ಸಹಾಯ ಮಾಡೇ, ಆಕೆ ವಿಲವಿಲ ಒದ್ದಾಡುತ್ತಿದ್ದಾಳೆ. ನೋಡಲಾಗುವುದಿಲ್ಲ" " ಎಂದು ಮುಸ್ತಾಕ್ ಸಹಾನಳಲ್ಲಿ ಹೇಳಿದನು.

   "  ನಾನು ಏನೂ ಮಾಡುವುದಿಲ್ಲ. ಆಕೆಯನ್ನು ಆ ಹೊತ್ತಿಗೆ ಒಳಬರಲು ಹೇಳಿದವರಾದರೂ ಯಾರು? ನನ್ನ ಎಲ್ಲಾ ಪ್ಲಾನ್ ಈಕೆಯಿಂದ ಹಾಳಾಯಿತು ಎಂದು ಹೇಳುತ್ತಾ ತಾಹಿರಳತ್ತ ಸಿಟ್ಟಿನಿಂದ ನೋಡುತ್ತಲೇ ಹೊರನಡೆದಳು.

    ಆಕೆ ಹೊರಹೋಗುವುದಕ್ಕೂ , ಸುರಯ್ಯಾ ಒಳಬರುವುದಕ್ಕೂ ಸರಿ ಹೋಯಿತು.  ಸುರಯ್ಯಾಳಿಗೆ ಚಡಪಡಿಸುತ್ತಾ ಇದ್ದ ತಾಹಿರಾಳನ್ನು ನೋಡಲಾಗಲಿಲ್ಲ. ಆಕೆ ತಕ್ಷಣವೇ ಓಡಿ ಹೋಗಿ ನೀರು ತಂದು ತಾಹಿರಾಳ ಮುಖವನ್ನು ತೊಳೆದಳು. ಆಕೆಗೆ ಬೇಕಾದಂತಹ ಆರೈಕೆಯನ್ನು ಮಾಡತೊಡಗಿದಳು. ಇದನ್ನೆಲ್ಲಾ ನೋಡುತ್ತಿದ್ದ ಮುಸ್ತಾಕಿಗೆ ಆಶ್ಚರ್ಯವಾಗತೊಡಗಿತು. ಅರೇ ನಿನ್ನೆ ಆಕೆ ಸುರಯ್ಯಾಳನ್ನು ಕೆಳಗೆ ಬೀಳುವಂತೆ ಮಾಡಿದಳಾದರೂ  ಸುರಯ್ಯಾ ಅದನ್ನು ಯಾವುದನ್ನೂ ತಲೆಯಲ್ಲಿ ಇಡದೇ ಆಕೆಯ ಆರೈಕೆ ಮಾಡುತ್ತಿದ್ದಾಳಲ್ಲ. ಯಾವ ಹೆಣ್ಣಿಗಾಗಿ ತಾಹಿರ ಅದನ್ನು ಮಾಡಿದ್ದಳೋ ಆಕೆ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ನಡೆದಿದ್ದಾಳಲ್ಲ. ಹಾಗಿದ್ದಲ್ಲಿ ಇಲ್ಲಿ ಒಳ್ಳೆಯವಳು ಯಾರು ? ಕೆಟ್ಟವಳು ಯಾರು? ಆತನ ಮನಸ್ಸು ಇನ್ನೂ ಯೋಚಿಸುತ್ತಲೇ ಇತ್ತು.

   "ಏನು ಯೋಚಿಸುತ್ತಾ ಇದ್ದೀಯಾ ಮುಸ್ತಾಕ್? ಸುರಯ್ಯಾ ಹೇಗೆ ರಕ್ಷೆ ಹೊಂದಿದಳು ಎಂದೋ? ನೀವು ನಿನ್ನೆ ತರಗತಿಯಿಂದ ತಡವಾಗಿ ಬರುವಾಗಲೇ ನನಗೆ ಸಂಶಯವಾಗಿತ್ತು. ಹಾಗಾಗಿ ನಾನೇ ಆಕೆ ಒಳಬರುವವಳನ್ನು ಅಲ್ಲೇ ತಡೆದು ನಿಲ್ಲಿಸಿದೆ. ಆದರೆ ನೀವು ಯೋಜನೆ ಮಾಡುವಾಗ ಅರ್ಧದಲ್ಲೇ ಹೋದ ತಾಹಿರ ಇದನ್ನು ಮರೆತು ಒಳಗೆ ಬಂದು ಬಿಟ್ಟಳು. ಆದರೆ ನೀನು ಒಮ್ಮೆ ಸುರಯ್ಯಾಳನ್ನು ನೋಡು. ಈಗಲೂ ಆಕೆ ನಿನಗೆ ಕೆಟ್ಟವಳು ಎಂದೆನಿಸುತ್ತದೆಯಾ? ರಾಫಿಯ ಮುಸ್ತಾಕಿನಲ್ಲಿ ಕೇಳಿದಳು.

ಮುಸ್ತಾಕ್ ಏನೊಂದೂ ಮಾತನಾಡದೆ ಸುರಯ್ಯಾಳನ್ನೆ ಗಮನಿಸತೊಡಗಿದ.  ಆತನಿಗೆ ತಿಳಿಯದಂತೆ ಆತನ ಮುಖದಲ್ಲೊಂದು ಕಿರುನಗೆ ಮೂಡಿತು. ತನಗೆ ಅನ್ಯಾಯ ಮಾಡಿದವರನ್ನು ಆಕೆ ಈ ರೀತಿ ಪ್ರೀತಿಸುವುದಾದರೆ ತನ್ನನ್ನು ಪ್ರೀತಿಸುವವರನ್ನು ಅದೆಷ್ಟು ಪ್ರೀತಿಸುವಳು. ಇಂತಹವಳೇ ನನ್ನ ಬಾಳಸಂಗಾತಿ ಆಗಿ ಬರಬೇಕು. ಯಾಕೋ ಆತನಿಗೆ ತಿಳಿಯದಂತೆ ಅವನ ಹೃದಯವು ಡಬ್...ಡಬ್... ಡಬ್... ಡಬ್... ಎಂದು ಬಾರಿಸತೊಡಗಿತು.

    ಆತ ಸುರಯ್ಯಾಳತ್ತ ನೋಡಿಟ್ಟಿರುವುದನ್ನೇ ಕಂಡ ರಾಫಿಯ
" ಏನು ಆಕೆಯನ್ನು ಆ ರೀತಿ ನೋಡುತ್ತಾ ಇದ್ದೀಯಾ ? ಇನ್ನು ನಾಳೆ ಆಕೆಗೆ ಏನು ಅನ್ಯಾಯ ಮಾಡಬೇಕು ಎಂದು ಯೋಚಿಸುತ್ತಾ ಇದ್ದೀಯಾ ? ಅಲ್ಲ ಆಕೆ ಯಾರು ಎಂಬ ಪರಿಚಯ ಇಲ್ಲದಿದ್ದರೂ ನೀವು ಸಹಾನಳ ಮಾತು ಕೇಳಿ ಆಕೆಯನ್ನು ದ್ವೇಷಿಸಲು ಫ್ರಾರಂಭಿಸಿದ್ದು ಮಾತ್ರವಲ್ಲದೆ , ಯಾವ ನೀಚ ಮಟ್ಟಕ್ಕೆ ಇಳಿದು ಹೋದಿರಿ? ಏನಾಯಿತು? ನಿನ್ನೆ ಯಾರ ಮಾತನ್ನು ಕೇಳಿ ತಾಹಿರ ಸುರಯ್ಯಾಳಿಗೆ ಉಪಟಳ ಮಾಡಿದ್ದಾಳೋ, ಆಕೆ ಇಂದು ಒಂದು ಕ್ಷಣವಾದರೂ ತಾಹಿರಾಳಿಗೆ ಏನಾಯಿತು ಎಂದು ತಿರುಗಿ ನೋಡಿದ್ದಾಳ ? ನಾಳೆ ನಿಮ್ಮೆಲ್ಲರ ಅವಸ್ಥೆಯೂ ಇಷ್ಟೇನೆ. ಹಾಗಾಗಿ ನಿಮ್ಮ ಮನಸ್ಸನ್ನು ಇಂದೇ ಬದಲಾಯಿಸಿ. ಇಂದು ತಾಹಿರ ಆಕೆಯನ್ನ ತನ್ನ ಆರೈಕೆ ಮಾಡಲು ಬಿಡುತ್ತಿದ್ದಾಳೆ . ಯಾಕೆ ಈಗ ಅವಳ ರೋಗ ಏನೂ ಇವಳಿಗೆ ಅಂಟಿಕೊಳ್ಳುವುದಿಲ್ಲವಾ ? " ರಾಫಿಯ ಸಿಟ್ಟಿನಲ್ಲಿಯೇ ನುಡಿದಳು.

" ಬೇಡ ರಾಫಿಯ, ಬಿಟ್ಟು ಬಿಡು. ನನ್ನ ಮೇಲೆ ಎಸೆದಿದ್ದರೂ ಪರವಾಗಿರ್ತಿರಲಿಲ್ಲ. ಆದರೆ ಈಗ ಆಕೆ ನೋವು ತಿನ್ನುವುದು ನೋಡಲು ಆಗುತ್ತಿಲ್ಲ. " ಸುರಯ್ಯಾ ರಾಫಿಯಾಳಲ್ಲಿ ಹೇಳಿದಳು.

   ರಾಫಿಯಾಳ ಕೋಪ ಯಾಕೋ ತಣಿದಂತೆ ಇರಲಿಲ್ಲ. ಆಕೆ ಮತ್ತೆ ಮುಸ್ತಾಕ್ ಕಡೆ ತಿರುಗಿದವಳೇ 

"ನೀನಲ್ವಾ ಇದೆಲ್ಲದರ ನಾಯಕ. ನಿನ್ನದೇ ಪ್ಲಾನ್ ತಾನೇ ಇದು? ಇನ್ನು ನಾಳೆ ಏನಾದರೂ ಮಾಡಬೇಕು ಎಂದು ಯೋಜನೆ ಹಾಕಿದ್ದೀಯೋ ಹೇಗೆ ? ಎಂದು ಹುಬ್ಬೇರಿಸಿ ಕೇಳಿದಳು.

  "ಹ್ಞಾಂ ನಾಳೆ ಮಾಡಬೇಕು ಎಂದಿದ್ದೇನೆ. ಆದರೆ ಅನ್ಯಾಯವನ್ನಲ್ಲ. ಮುಂದೊಂದು ದಿನ ಆಕೆಯನ್ನು ನನ್ನ ಬಾಳ ಸಂಗಾತಿಯಾಗಿ ಮಾಡುವ ಯೋಜನೆ ಮಾಡಲಿದ್ದೇನೆ" ಎಂದು ಮುಸ್ತಾಕ್ ಮೆಲ್ಲನೆ ರಾಫಿಯಾಳಿಗೆ ಮಾತ್ರ ಕೇಳಿಸುವಂತೆ ಹೇಳಿದನು.

ಆತ ಏನೋ ತಮಾಷೆಯಾಗಿ ಹೇಳುತ್ತಿದ್ದಾನೆ ಎಂದೆನಿಸಿ ರಾಫಿಯಾಳಿಗೆ ಆತನ ಮೇಲಿನ ಸಿಟ್ಟು ಮತ್ತಷ್ಟು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. 

  ಆಕೆ ಸುರಯ್ಯಾಳ ಕೈ ಎಳೆದುಕೊಂಡಿ ಹೋಗಿ ಅವರ ಬೆಂಚಿನಲ್ಲಿಯೇ ಕುಳ್ಳಿರಿಸಿದಳು.

ಮುಸ್ತಾಕ್ ಕೂಡ ತನ್ನ ಸ್ಥಾನದಲ್ಲಿಯೆ ಕುಳಿತನು. ಯಾಕೋ ಆತನಿಂದ ಇಂದು ಪಠ್ಯದೆಡೆಗೆ ಗಮನವನ್ನು ನೀಡಲು ಆಗಲೇ ಇಲ್ಲ. ತಾನು ಮಾಡಿದ ಕೆಲಸಕ್ಕೆ ಆತನಿಗೆ ತನ್ನ ಮೇಲೆಯೇ ಹೇಸಿಗೆ ಎನಿಸುತ್ತಿತ್ತು. ಪಿ.ಯು.ಸಿ ಕಲಿಯುವಾಗದಿಂದಲೂ ಆತನಿಗೆ ಸಹಾನಳ ಪರಿಚಯವಿತ್ತು. ಆದರೆ ಇಂದು ಯಾಕೋ ತಾನು ಎಂತಹವಳ ಗೆಳೆತನ ಮಾಡಿದ್ದೆ ಎಂದು ಸಿಟ್ಟು ಕೂಡ ಬರುತ್ತಿತ್ತು. ಕಲಿತು ಎಲ್ಲಾ ಆದಮೇಲೆ ಜೀವನದಲ್ಲಿ ಮೊದಲು ಸೆಟಲ್ ಆಗಿ ನಂತರ ಸುರಯ್ಯಾಳ ತಂದೆಯೊಂದಿಗೆ ಮದುವೆಯ ಮಾತುಕತೆ ನಡೆಸಬೇಕು. ಇಲ್ಲದಿದ್ದಲ್ಲಿ ಅದರೊಳಗೆ ಆಕೆ ಬೇರೆಯಾರನ್ನಾದರು ಮದುವೆಯಾದರೆ ? ಇಲ್ಲ ಹಾಗಾಗ ಕೂಡದು. ಆಕೆ ಎಂದಿದ್ದರೂ ನನ್ನವಳೇ. ಬೇರೆಯವರೊಂದಿಗೆ ಮದುವೆಯಾಗಲು ನಾನು ಬಿಡಲಾರೆ. ಸುರಯ್ಯಾಳಲ್ಲಿ ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಅನ್ನೋ ವಿಚಾರ ಹೇಳಲಾ? ಹೇಳಿದರೆ ಆಕೆ ಮತ್ತೆ ನನ್ನನ್ನು ನೋಡದಿದ್ದಲ್ಲಿ? ಅಯ್ಯೋ ಬೇಡ...! ಯಾವುದಕ್ಕೂ ಸಮಯ ಸಂದರ್ಭ ಬಂದು ಒದಗಲಿ. ಆಮೇಲೆ ಮೆಲ್ಲನೆ ಹೇಳಿದರಾಯಿತು ಎಂದು ಯೋಚಿಸುತ್ತಾ ಇದ್ದವನಿಗೆ ತನ್ನ ಮುಖದ ಮೇಲೆ ಏನೋ ಬಿದ್ದಂತಾಗಿ ಒಮ್ಮೆಲೇ ವಾಸ್ತವ ಲೋಕಕ್ಕೆ ಬಂದನು. 

ತನ್ನ ಮುಖದ ಮೇಲೆ ಬಿದ್ದದ್ದಾದರೂ ಏನು ಎಂದು ನೋಡುತ್ತಿದ್ದವನಿಗೆ ಡೆಸ್ಕ್ ಮೇಲೆ ಬಿದ್ದಿದ್ದ ಚಾಕ್ ಪೀಸ್ ಕಂಡಿತು. 

  ಅರೇ ಇದನ್ನು ಯಾರು ನನ್ನ ಮೇಲೆ ಬಿಸಾಡಿದ್ದು? ಎಂದು ಸುತ್ತಲೂ ನೋಡಿದನು. ಎದುರಿಗೆ ನೋಡಬೇಕಾದರೆ ಲೆಕ್ಚರರ್ ತನ್ನತ್ತಲೇ ಕೋಪದಿಂದ ನೋಡುವುದು ಕಾಣಿಸಿತು. 

   " ಏನು? ಯಾವ ಲೋಕದಲ್ಲಿ ಇದ್ದೆ? ನಾನು ಈಗ ಮಾಡಿದಂತಹ ಲೆಸನ್ ಬಗ್ಗೆ ಏನಾದರೂ ತಿಳಿದಿದೆಯಾ ? ಇಲ್ಲಿ ಎದುರು ಬಂದು ಚೂರು ವಿವರಿಸಿ ಹೇಳು"ಎಂದು ಅವರು ಸಿಟ್ಟಿನಲ್ಲಿಯೇ ಹೇಳಿದರು.

   ಕೇಳಿದರೆ ಅಲ್ವಾ ಎದುರು ಬಂದು ಹೇಳುವುದು ಎಂದು ಮನಸ್ಸಿನಲ್ಲೇ ಗೊಣಗುತ್ತ ಮುಂದೆ ಹೋದನು. ಹೋದವನು ಹಾಗೇ ಸುಮ್ಮನೆ ನಿಂತುಕೊಂಡನು. 

 ಆತ ಸುಮ್ಮನೆ ನಿಂತದ್ದನ್ನು ನೋಡಿ ಅವರ ಕೋಪ ಮತ್ತಷ್ಟು ಹೆಚ್ಚಾಯಿತು.  

 "ಕನಸು ಕಾಣೋದಿದ್ರೆ ಯಾಕೆ ಕಾಲೇಜಿಗೆ ಬರುತ್ತೀರಾ? ಮನೆಯಲ್ಲಿ ಮಲಗಿಕೊಂಡೇ ಕಾಣಬೇಕು. ಇವತ್ತು ನಾನು ವಿವರಿಸಿದ ಥಿಯರಿಯನ್ನು ನಾಳೆ 10 ಸಾರಿ ಬರೆದು ತರಬೇಕು. ಮತ್ತೆಂದೂ ತರಗತಿಯಲ್ಲಿ ನಿದ್ರೆ ಮಾಡುವಾಗ ಅದರ ನೆನಪಾಗಬೇಕು." ಎಂದು ಹೇಳಿದರು.

    ಮುಸ್ತಾಕ್ ಸರಿ ಎಂದು ತಲೆಯಾಡಿಸಿದನು.

ಸಂಜೆ ಕಾಲೇಜು ಬಿಟ್ಟ ಮೇಲೂ ಕೂಡ ಮುಸ್ತಾಕಿಗೆ ಥಿಯರಿ ಯಾವುದು ಎಂದು ತಿಳಿಯಲೇ ಇಲ್ಲ. ಆತ ಯಾರೊಂದಿಗೆ ಕೇಳುವುದು ಎಂದು ಆಲೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದು ಸುರಯ್ಯಾಳ ಬಳಿ ಹೋದನು.

   "ಸುರಯ್ಯಾ, ಪ್ಲೀಸ್ ನನಗೆ ಅವರು ಏನು ಬರೆಯಲು ಹೇಳಿದ್ದಾರೆ ಎಂದು ತಿಳಿದಿಲ್ಲ. ನೀನು ಸ್ವಲ್ಪ ಸಹಾಯ ಮಾಡುತ್ತೀಯಾ ?" ಎಂದು ಸುರಯ್ಯಾಳಲ್ಲಿ ಕೇಳಿದನು.

" ಸರಿ, ಆದರೆ ನನ್ನಲ್ಲಿ ಪುಸ್ತಕ ಇಲ್ಲ. ಒಂದು ಕೆಲಸ ಮಾಡೋಣ. ಈಗ ನಾವು ಲೈಬ್ರರಿ ಹೋಗೋಣ. ಅಲ್ಲಿ ಯಾವುದನ್ನು ಬರೆಯಬೇಕು ಅಂತ ನಾನು ತೋರಿಸಿ ಕೊಡುತ್ತೇನೆ. ಆಮೇಲೆ ನೀನು ಅದನ್ನೇ ಬರೆದರಾಯಿತು" ಎಂದು ಸುರಯ್ಯಾ ಹೇಳಿದಾಗ ಮುಸ್ತಾಕ್ ಒಪ್ಪಿದನು.

ಅದರಂತೆ ಅವರಿಬ್ಬರೂ ಲೈಬ್ರರಿಯತ್ತ ನಡೆದರು. ನಡೆದುಕೊಂಡು ಹೋಗಬೇಕಾದರೆ ಹಿಂಬದಿಯಿಂದ ಬರುತ್ತಿದ್ದ ಸುರಯ್ಯಾಳನ್ನು ಮುಸ್ತಾಕ್ ಮತ್ತೊಮ್ಮೆ ಕರೆದನು.

 ಏನು ಎಂಬಂತೆ ಸುರಯ್ಯಾ ಆತನ ಮುಖ ನೋಡಿದಳು.

  " ನನಗೆ ನಿನ್ನಲ್ಲಿ ಒಂದು ವಿಷಯ ಹೇಳಲಿಕ್ಕಿದೆ"ಎಂದು ತನ್ನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದನು.

     " ಹ್ಞಾಂ, ಹೇಳು ಏನು ವಿಷಯ? " ಎಂದು ಸುರಯ್ಯಾ ಕೇಳಿದಳು.

     ಅದೂ... ಎಂದು ಹೇಳಲು ಹೊರಟಾಗ ಸುರಯ್ಯಾ... ಸುರಯ್ಯಾ... ಎಂದು ಯಾರೋ ಕರೆಯುವುದು ಕೇಳಿಸಿತು.

    ಯಾರು ಎಂದು ಹಿಂದಿರುಗಿ ನೋಡಿದಾಗ ರಾಫಿಯ ಏದುಸಿರು ಬಿಡುತ್ತಾ ಬರುತ್ತಿದ್ದಳು.

  " ಸುರಯ್ಯಾ ನಿನ್ನನ್ನು ಎಲ್ಲೆಲ್ಲೋ ಹುಡುಕಿದೆ. ಆದರೆ ನೀನು ಇಲ್ಲಿದ್ದೀಯಾ? ಈತ ಏಕೆ ಇಲ್ಲಿ ನಿಂತಿದ್ದಾನೆ?  ಎಂದು ಮುಸ್ತಾಕಿನತ್ತ ನೋಡಿ ಕೇಳಿದಳು.

  " ಅದೂ ಆತನಿಗೆ ಪನಿಶ್ಮೆಂಟ್ ಸಿಕ್ಕಿದೆಯಲ್ಲ. ಅದು ಬರೆಯುವುದು ಯಾವುದು ಎಂದು ಆತನಿಗೆ ತಿಳಿದಿಲ್ಲ. ಹಾಗೆ ಆತ ನನ್ನಲ್ಲಿ ಕೇಳಿದ.  ಅದಕ್ಕಾಗಿ ಲೈಬ್ರರಿ ಕಡೆ ಹೋಗುತ್ತಿದ್ದೇವೆ."

  " ಹೌದಾ... ನಾನೂ ಕೂಡ ಬರುತ್ತೇನೆ. ಒಟ್ಟಿಗೆ ಹೋಗೋಣ" ಎಂದು ರಾಫಿಯಾ ಹೇಳಿದಳು.

    ಸರಿ ಎನ್ನುತ್ತಾ ಮೂವರೂ ಕೂಡ ಲೈಬ್ರರಿ ಕಡೆ ಹೆಜ್ಜೆ ಹಾಕಿದರು.

  "ನೀವಿಬ್ಬರೂ ಇಲ್ಲಿ ಕುಳಿತಿರಿ. ನಾನು ಪುಸ್ತಕ ತೆಗೆದುಕೊಂಡು ಬರುತ್ತೇನೆ" ಎಂದು ಸುರಯ್ಯಾ ಪುಸ್ತಕ ತೆಗೆದುಕೊಂಡು ಬರಲು ಹೋದಳು.

  ಆಕೆ ಅತ್ತ ಹೋದುದನ್ನು ಕಂಡ ರಾಫಿಯಾ ಮುಸ್ತಾಕ್ ಬಳಿ

  " ಯಾಕೆ ಆಕೆಯನ್ನು ಕರೆದುಕೊಂಡು ಇಲ್ಲಿ ಬರಲು ಹೊರಟಿದ್ದು? ಇನ್ನು ಏನು ಮಾಡಬೇಕು ಎಂದಿರುವೆ? ನಿನಗೆ ಒಂದು ಚೂರಾದರೂ ಮನುಷ್ಯತ್ವ ಇಲ್ವಾ ?  ಯಾಕೆ ಈ   ರೀತಿಯ ದ್ವೇಷ ನಿನಗೆ ಆಕೆಯ ಮೇಲೆ ? ಎಂದು ಕೇಳಿದಳು.

   " ನೋಡು ರಾಫಿಯ, ನಾನು ಆಕೆಯಲ್ಲಿ ಸ್ವಲ್ಪ ಪ್ರೈವೇಟ್ ಆಗಿ ಮಾತನಾಡೋಣ ಎಂದು ಕೊಂಡು ಬಂದೆ. ನೀನು ಯಾಕೆ ನಮ್ಮಿಬ್ಬರ ನಡುವೆ ಬರ್ತೀಯಾ ಹೇಳು ? "

   " ಬರದೆ ಇನ್ನೇನು ಮಾಡಲಿ ಹೇಳು ?  ನಿನ್ನಿಂದ ಆಕೆಯ ಬಾಳು ಹಾಳಾಗಲು ನಾನು ಬಿಡುವುದಿಲ್ಲ."

  " ನಾನೇನು ಆಕೆಯ ಬಾಳು ಹಾಳು ಮಾಡುವುದಿಲ್ಲ. ನಾನು ಆಕೆಯನ್ನು ಇಷ್ಟಪಟ್ಟಿದ್ದೇನೆ. ಮುಂದೊಂದು ದಿನ ಆಕೆಯನ್ನು ಮದುವೆಯಾಗ ಬೇಕು ಎಂದು ಕೂಡ ಇದ್ದೇನೆ. ಇದು ನಿಜ."

 " ನನಗೆ ಬರುತ್ತಿರೋ ಕೋಪದಲ್ಲಿ ನಿನ್ನನ್ನು ಏನು ಮಾಡಬೇಕು ಎಂದು ಗೊತ್ತಾಗ್ತಾ ಇಲ್ಲ. ಈ ರೀತಿಯ ಡೈಲಾಗ್ಸ್ ಹಲವು ಸಿನೇಮಾ, ಸೀರಿಯಲಿನಲ್ಲಿ ಕೇಳಿದ್ದೇನೆ. ನಿನ್ನ ಕೈಯಿಂದ ಆಕೆಗೆ ಚಿತ್ರ ಹಿಂಸೆ ಕೊಡಲು ಆಗಲ್ಲ ಅಂತ ಈಗ ಪ್ರೀತಿಯ ನಾಟಕವಾಡಿ  ಆಕೆಯನ್ನು ಬಲೆಗೆ ಬೀಳಿಸಿ ನಂತರ ಆಕೆಗೆ ಮೋಸ ಮಾಡಿ ಆಕೆಯ ಬಾಳನ್ನು ಹಾಳು ಮಾಡುವ ಯೋಜನೆ ತಾನೇ? ನಿನ್ನಂತಹವರನ್ನು ಎಷ್ಟು ಕಂಡಿಲ್ಲ ಹೇಳು? "

" ನೀನು ಏನು ಯೋಚಿಸುತ್ತಿಯೋ ಬಿಡುತ್ತಿಯೋ ಅದು ನಿನ್ನಿಷ್ಟ. ಆದರೆ ನಾನಂತೂ ಆಕೆಯನ್ನು ಇಷ್ಟ ಪಟ್ಟಿದ್ದು ನಿಜ. ನಾನು ಆಕೆಯನ್ನು ಮದುವೆಯಾಗಿ ಮೊದಲು ನಿನ್ನ ಮನೆಗೇ ಕರೆದುಕೊಂಡು ಬರುತ್ತೇನೆ. ಆಗ ನೋಡೋಣ ನಿನ್ನ ಈ ಸಿನಿಮಾ ಕಲ್ಪನೆ ಎಲ್ಲಾ ಎಲ್ಲಿ ಹೋಗುತ್ತದೆ ಎಂದು."

    " ನಾನು ಆಕೆಯ ಜೊತೆ ಇರುವವರೆಗೂ ನಿನಗೆ ಆಕೆಯ ಬಾಳಿನಲ್ಲಿ ಆಟವಾಡಲು ಬಿಡಲಾರೆ. ನೋಡ್ತಾ ಇರು..." ರಾಫಿಯ ಹೇಳಿ ಮುಗಿಸುವುದರೊಳಗೆ 

  " ಏನು ನೋಡುವುದು ? " ಎಂದು ಸುರಯ್ಯಾ ಕೇಳಿದ ಧ್ವನಿ ಕೇಳಿಸಿತು. ಇಬ್ಬರೂ ಹಿಂದೆ ತಿರುಗಿ ನೋಡಿದರು. ತಮ್ಮಿಬ್ಬರ ಮಾತು ಆಕೆ ಕೇಳಿಸಿಕೊಂಡಿರಬಹುದೇನೋ ಎಂದು ಮುಸ್ತಾಕಿಗೆ ಹೆದರಿಕೆ ಆಯಿತು. 

" ಏನಿಲ್ಲ, ಬರೆಯುವುದು ಯಾವುದು ನೋಡು ಎಂದು  ರಾಫಿಯ ಹೇಳಿದಳು " ಎಂದು ಮುಸ್ತಾಕ್ ತನ್ನ ಮಾತನ್ನು ಅಲ್ಲಿಗೇ ತಿರುಗಿಸಿದನು.

 " ಓಹ್! ಹಾಗಾ.. ನೋಡು ನೀನು ಬರಿಯಬೇಕಾದದ್ದು ಇಲ್ಲಿದೆ. ಇದನ್ನು 10 ಸಾರಿ ಬರೆಯಬೇಕು. ನಿನ್ನ ಕೈಯಲ್ಲಿ ಸಾಧ್ಯವಿದೆಯಾ ? ನಾನೇನಾದರೂ ಬರೆದು ಕೊಡಬೇಕಾ ? ಎಂದು ಸುರಯ್ಯಾ ಕೇಳಿದಾಗ

   " ಬೇಡ... ಇನ್ನು ಅದು ತಿಳಿದರೆ ಅವರು ಮತ್ತೆ  ಹತ್ತು ಸಲ ಬರೆಯಲು ಕೊಟ್ಟರೆ? ಬೇಡ ಹೇಗಾದರೂ ನಾನೇ ಬರೆದು ತರುತ್ತೇನೆ. ಸರಿ ನಾನು ಇನ್ನು ಹೊರಡುತ್ತೇನೆ " ಎಂದು ಹೊರಡಲು ಅನುವಾದನು.

    ಅಷ್ಟರಲ್ಲಿ ಸುರಯ್ಯಾಳಿಗೆ ಆತ ಒಂದು ವಿಷಯ ಹೇಳಲಿಕ್ಕಿದೆ ಎಂದು ಹೇಳಿದ್ದು ನೆನಪಾಯಿತು. ಅದನ್ನು ಆತನಿಗೆ ಜ್ಞಾಪಿಸಿದವಳೇ ಏನು ವಿಷಯ? ಎಂದು ಕೇಳಿದಳು.

  ಮುಸ್ತಾಕಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಯಿತು. ನಿಜ ಹೇಳಿದರೆ ಪೆಟ್ಟಂತೂ ಖಂಡಿತ ಎಂದು ಎನಿಸಿ

   " ಇಲ್ಲಾ... ನಿನ್ನೆ ನಾನು ಮಾಡಿದ ತಪ್ಪಿಗೆ ಕ್ಷಮೆ ಕೇಳೋಣ ಎಂದುಕೊಂಡೆ. ಅದನ್ನೇ ನಾನು ಹೇಳಲು ಇಚ್ಚಿಸಿದ್ದು." ಎಂದನು.

 ಅವರ ಮಾತುಗಳನ್ನು ಆಲಿಸುತ್ತಿದ್ದ ರಾಫಿಯ ತಕ್ಷಣವೇ " ಯಾಕೆ ಸುಳ್ಳು ಹೇಳುತ್ತಾ ಇದ್ದೀಯಾ ಮುಸ್ತಾಕ್? ನನ್ನಲ್ಲಿ ನಿಜ ಹೇಳಿದ ಹಾಗೆ ಅವಳಲ್ಲೂ ನಿಜ ಹೇಳು.ಯಾಕೆ ಭಯ ಆಗುತ್ತಾ ಇದೆಯಾ ?  ನಿನ್ನ ಮೋಸವೆಲ್ಲ ಅವಳಿಗೆ ತಿಳಿಯಬಹುದು ಎಂದು? "

ಸುರಯ್ಯಾಳಿಗೆ ಆಕೆಯ ಮಾತು ಒಂದೂ ಅರ್ಥವಾಗಲಿಲ್ಲ. ಆಕೆ ರಾಫಿಯಾಳೊಂದಿಗೆ " ಏನು ಹೇಳ್ತಾ ಇದ್ದೀಯಾ? ಏನು ಸುಳ್ಳು? ಏನು ಮೋಸ? ಒಂದು ಚೂರು ಬಿಡಿಸಿ ಹೇಳು. ನನಗೊಂದು ಅರ್ಥವಾಗುತ್ತಿಲ್ಲ ಎಂದು ಹೇಳಿದಳು.

  " ಏನಿಲ್ಲ ಸುರಯ್ಯಾ... ಇದೋ ಇಲ್ಲಿ ನಿಂತಿದ್ದಾನಲ್ಲ ಈ ಮಹಾತ್ಮ. ಈತ ನಿನ್ನನ್ನು ಪ್ರೀತಿಸುತ್ತಿದ್ದಾನಂತೆ. ಆತ ನಿನ್ನನ್ನು ಯಾವುದೋ ಮೋಸದ ಜಾಲದಲ್ಲಿ ಸಿಲುಕಿಸಿ ನಿನ್ನ ಬಾಳನ್ನು ಹಾಳು ಮಾಡುವ ಯೋಜನೆಯಲ್ಲಿದ್ದಾನೆ."

ಸುರಯ್ಯಾಳಿಗೆ ಆ ಮಾತು ಕೇಳಿ ಒಮ್ಮೆಲೇ ಆಘಾತವಾದಂತಾಯಿತು.

ಆಕೆ ಮುಸ್ತಾಕಿನತ್ತ ತಿರುಗಿ ನೋಡಿ

  " ಹೌದಾ ? ಆಕೆ ಹೇಳುತ್ತಿರುವುದು ಎಲ್ಲಾ ನಿಜಾನ? " ಎಂದು ಕೇಳಿದಳು.

  " ಇಲ್ಲ ಸುರಯ್ಯಾ... ಆಕೆ ಹೇಳುತ್ತಿರುವುದು ಸುಳ್ಳು. ನಿನ್ನ ಬಾಳನ್ನು ಹಾಳು ಮಾಡುವ ಯಾವ ಉದ್ದೇಶವೂ ಕೂಡ ನನಗಿಲ್ಲ. ಆದರೆ ನನಗೆ ತಿಳಿಯದಂತೆ ನಾನು ನಿನ್ನನ್ನು ಪ್ರೀತಿಸುತ್ತಿರುವುದು ನಿಜ." ಮುಸ್ತಾಕ್ ಲೈಬ್ರರಿ ಅನ್ನುವುದು ಮರೆತು ಜೋರಾಗಿಯೇ ಹೇಳಿದನು.

  ಅಷ್ಟರಲ್ಲಿ ಲೈಬ್ರೆರಿಯನ್ ಸೈಲೆನ್ಸ್ ಎಂದು ಜೋರಾಗಿ ಹೇಳಿದರು. ಇನ್ನು ತನ್ನ ಮಾನ ಇಲ್ಲಿ ಕಳೆಯುವುದು ಬೇಡ ಎಂದು ಸುರಯ್ಯಾ ಅಲ್ಲಿಂದ ಎದ್ದು ಸೀದಾ ಹೊರಗೆ ಹೋದಳು.

ಮುಸ್ತಾಕ್ ಆಕೆಯ ಹಿಂದಿನಿಂದ ಓಡಿದವನೇ... ಸುರಯ್ಯಾ... ಒಂದು ನಿಮಿಷ ನನ್ನ ಮಾತು ಕೇಳು ಎಂದು ಹೇಳಿದನು.

    " ಹೇಳಬೇಕಾದದ್ದು , ಕೇಳಬೇಕಾದದ್ದು ಏನೂ ಉಳಿದಿಲ್ಲ ಮುಸ್ತಾಕ್. ನಾನು ಮಾಡಿದ ತಪ್ಪಾದರೂ ಏನು? ಯಾಕೆ ಈ ರೀತಿ ಎಲ್ಲಾ ನಾಟಕ ಮಾಡುತ್ತಾ ಇದ್ದೀಯಾ? ನೀವು ಏನೂ ಅನ್ಯಾಯ ಮಾಡಿದರೂ ನಾನು ಸಹಿಸಿಕೊಳ್ಳುತ್ತೇನೆ. ಆದರೆ ದಯವಿಟ್ಟು ಕಾಲೇಜಿನಿಂದ ಹೋಗುವ ಹಾಗೆ ಮಾಡಬೇಡಿ. ನೀವ್ಯಾರು ನನ್ನಲ್ಲಿ ಮಾತನಾಡದಿದ್ಧರೂ ಪರ್ವಾಗಿಲ್ಲ , ಆದರೆ ನನ್ನನ್ನ ಒಂದು ಮೂಲೆಯಲ್ಲಿ ಇರಲು ಅವಕಾಶ ಕೊಡಿ." ಇಷ್ಟು ಹೇಳಬೇಕಾದರೆ ಸುರಯ್ಯಾಳಿಗೆ ತನ್ನ ಅಳು ನಿಯಂತ್ರಿಸಲಾಗಲಿಲ್ಲ. ಆಕೆಯ ಕಣ್ಣಿನಿಂದ ಕಣ್ಣೀರ ಹನಿಗಳು ಜಾರಲು ಪ್ರಾರಂಭಿಸಿದವು.

  ಮುಸ್ತಾಕಿಗೆ ಅದನ್ನ ನೋಡಲು ಆಗಲಿಲ್ಲ.

  " ಸುರಯ್ಯಾ, ನೀನು ಅಳಬೇಡ ಪ್ಲೀಸ್. ನಿನ್ನೆಯ ದಿನ ಹಾಗೂ ಇವತ್ತು ಸಹಾನಳ ಮಾತು ಕೇಳಿ ನಾನು ನಿನಗೆ ಉಪಟಳ ಕೊಟ್ಟಿದ್ದು ನಿಜ. ಆದರೆ ಇದು ಹಾಗಲ್ಲ. ನನಗೆ ತಿಳಿಯದಂತೆ ನಿನ್ನ ಬಗ್ಗೆ ನನ್ನ ಮನಸ್ಸಿನಲ್ಲೊಂದು ಭಾವನೆ ಹುಟ್ಟಿದೆ. ಅದು ಹೇಗೆ, ಏನು ಎಂದು ನನಗೂ ತಿಳಿದಿಲ್ಲ. ಒಂದಂತೂ ಸತ್ಯ ನಾನು ನಿನ್ನನ್ನು ಇಷ್ಟಪಟ್ಟಿದ್ದೇನೆ. "

  " ಏನು ಇಷ್ಟ ಮುಸ್ತಾಕ್? ನೀನು ನನ್ನನ್ನು ನೋಡಿದ್ದು ಕೇವಲ ಒಂದು ದಿನದ ಹಿಂದೆ. ಅದರ ಹೊರತು ನಿನಗೇನಾದರೂ ಗೊತ್ತಾ? ನಾನು ತುಂಬಾ ಆಸೆಯಿಂದ ಬಂದಿದ್ದೇನೆ. ನನಗಿನ್ನು ಕಲಿಯಬೇಕು ಮುಸ್ತಾಕ್. ನನ್ನ ತಂದೆಗೆ ಇಂತಹ ವಿಚಾರ ತೀಳಿದರೆ ಅವರು ಮತ್ತೆ ನನ್ನನ್ನು ಇಲ್ಲಿ ಕಳುಹಿಸಲಿಕ್ಕಿಲ್ಲ. ಹಾಗಾಗಿ ದಯವಿಟ್ಟು ನನ್ನನು ನನ್ನ ಪಾಡಿಗೆ ಬಿಟ್ಟು ಬಿಡು. " ಎಂದು ಸುರಯ್ಯಾ ವಿನಂತಿ ಮಾಡಿದಳು.

  "ಆಯ್ತು ಸುರಯ್ಯಾ... ನಿನ್ನ ಬಾಳು ನನ್ನಿಂದ ಹಾಳಾಗಲು ನಾನು ಬಿಡಲಾರೆ. ಆದರೆ ನನ್ನಲ್ಲಿ ನಿನ್ನ ಬಗೆಗಿರುವ ಪ್ರೀತಿ ಅದನ್ನೂ ಸಾಯಿಸಲಾರೆ. ಒಂದು ದಿನ ನಿನ್ನ ತಂದೆಯ ಬಳಿ ನಿನ್ನನ್ನು ಕೇಳುತ್ತೆನೆ. ಆಗಲಾದರೂ ನೀನು ಒಪ್ಪುವೆ ಎನ್ನುವ ನಂಬಿಕೆ ನನಗಿದೆ. ಅದುವರೆಗೂ ನಾನು ನಿನ್ನ ಮುಂದೆ ಈ ವಿಷಯದ ಬಗ್ಗೆ ಯಾವುದೇ ಮಾತುಗಳನ್ನು ಆಡುವುದಿಲ್ಲ. ಅಲ್ಲಿವರೆಗೂ ತಾಳ್ಮೆಯಿಂದ ಕಾಯುತ್ತೇನೆ. ಆಗಲಾದರೂ ನಾನು ಮೋಸಗಾರ ಅಲ್ಲ ಎಂದು ನಿನಗೆ ಮನವರಿಕೆ ಆಗಬಹುದು."

ಸುರಯ್ಯಾ ಅದಕ್ಕೆ ಏನೊಂದೂ ಪ್ರತಿಯಾಗಿ ಮಾತನಾಡದೆ ಅಲ್ಲಿಂದ ನಡೆದಳು.

 ಅದುವರೆಗೂ ಒಂದೂ ಮಾತನಾಡದೆ ಎಲ್ಲಾ ಕೇಳಿಸಿಕೊಳ್ಳುತ್ತಿದ್ದ ರಾಫಿಯ ಮುಸ್ತಾಕ್ ಬಳಿ ಬಂದು

" ಇದೆಲ್ಲಾ ನಿನಗೆ ಬೇಕಿತ್ತಾ? " ಎಂದು ವ್ಯಂಗ್ಯ ನಗೆ ಬೀರಿ ಕೇಳಿದಳು.

" ಹೋಗೇ... ಎಲ್ಲಾ ನಿನ್ನಿಂದಲೇ ಆದದ್ದು. ನೀನು ಯಾಕೆ ಹಾಗೆಲ್ಲ ಆಕೆಯ ಬಳಿ ಹೋಗಿ ಹೇಳಿದ್ದು? ನನಗೆ ಬರುತ್ತಿರೋ ಕೋಪಕ್ಕೆ ನಿನ್ನನ್ನು ಸಾಯಿಸಬೇಕು ಎನಿಸುತ್ತಾ ಇದೆ" ಎಂದು ಮುಸ್ತಾಕ್ ಸಿಟ್ಟಿನಲ್ಲಿಯೇ ಹೇಳಿದನು.

  " ಓಹೋ! ಅಲ್ವಾ ಮತ್ತೆ. ಯಾಕೋ ಸಾಹೇಬ್ರು ಅವಳ ಮುಂದೆ ಇಲಿ ಥರ ಇರ್ತಿರಾ? ನನ್ನ ಮುಂದೆ ಹುಲಿ ಥರ ಮಾಡ್ತೀರಾ..? ಏನು? ಕರೀಬೇಕಾ ಆಕೆಯನ್ನು ?"

 ರಾಫಿಯಾ ಮಾತು ಕೇಳಿ ಮುಸ್ತಾಕಿಗೆ ಕೋಪ ಮತ್ತಷ್ಟು ಹೆಚ್ಚಾಯಿತು. ಏನೊಂದೂ ಮಾತನಾಡದೆ ತನ್ನ ಪಾಡಿಗೆ ಅಲ್ಲಿಂದ ಹೊರಟುಹೋದನು. ರಾಫಿಯ ಸುರಯ್ಯಾಳನ್ನು ಹಿಂಬಾಲಿಸಿದಳು. 

 ಸುರಯ್ಯ ಹಾಗೂ ರಾಫಿಯ ಬಸ್ ಸ್ಟ್ಯಾಂಡ್ ಬಂದು ನೋಡಬೇಕಾದರೆ ತಾಹಿರ ಅಲ್ಲೇ ಕುಳಿತಿದ್ದಳು. ಸುರಯ್ಯಾಳನ್ನು ಕಂಡವಳೇ ಎದ್ದು ಬಂದಳು.

" ಕ್ಷಮಿಸು ಸುರಯ್ಯಾ, ಏನೋ ತಿಳಿಯದೆ ಯಾರೋ ಹೇಳಿದ ಮಾತು ಕೇಳಿ ತಪ್ಪು ಮಾಡಿಬಿಟ್ಟೆ. ಇವತ್ತು ನಾವಿಬ್ಬರೂ ಒಟ್ಟಿಗೆ ಹಾಸ್ಟೆಲಿಗೆ ಹೋಗೋಣವೇ? ಎಂದು ಕೇಳಿದಾಗ ಸುರಯ್ಯಾ ಖುಷಿಯಿಂದ ಒಪ್ಪಿದಳು.

ಹಾಗೇ ಅವರಿಬ್ಬರೂ ರಾಫಿಯಾಳಿಗೆ ವಿದಾಯ ಹೇಳಿ ಬಸ್ ಹತ್ತಿದರು.

ಇತ್ತ ಮುಸ್ತಾಕ್ ನಡೆದುಕೊಂಡು ಬರುತ್ತಿರುವಾಗ ಯಾರೋ ತನ್ನ ದಾರಿಗೆ ಅಡ್ಡವಾಗಿ ನಿಂತಿರುವಂತೆ ಕಂಡಿತು.

ಯಾರೆಂದು ತಲೆ ಎತ್ತಿ ನೋಡುವಾಗ ಸಹಾನ ಕೈ ಕಟ್ಟಿ ನಿಂತಿದ್ದು ಮುಸ್ತಾಕ್ನನ್ನು ಕೋಪದಿಂದ ನೋಡುತ್ತಿದ್ದಳು.

    ಏನು ಎಂಬಂತೆ ಮುಸ್ತಾಕ್ ಆಕೆಯಲ್ಲಿ ಹುಬ್ಬೇರಿಸಿ ಕೇಳಿದನು. ಆಕೆ ತನಗೆ ನಿನ್ನಲ್ಲಿ ಸ್ವಲ್ಪ ಮಾತನಾಡಲಿಕ್ಕಿದೆ ಎಂದಳು.

" ಏನು ವಿಷಯ ಹೇಳು? "

" ಏನಿಲ್ಲ ಮುಸ್ತಾಕ್, ನೀನು ಅದೆಷ್ಟು ಚೆನ್ನಾಗಿ ನಾಟಕ ಆಡ್ತೀಯಾ ? ಒಂದು ಚೂರು ಕೂಡ ಆಕೆಗೆ ಸಂಶಯ ಬಂದಿರಲಿಕ್ಕಿಲ್ಲ " ಎಂದು ಹೇಳಿ ಜೋರಾಗಿ ನಗಾಡಲು ಪ್ರಾರಂಭಿಸಿದಳು.

  " ಏನು ಹೇಳ್ತಾ ಇದ್ದೀಯಾ ಸಹಾನ? ಯಾವುದು ನಾಟಕ ? ಏನು ನಾಟಕ ? "

" ನೀನು ಸುರಯ್ಯಾಳೊಂದಿಗೆ ಲೈಬ್ರರಿ ಕಡೆ ನಡೆಯುವಾಗ ನಾನು ನಿನಗೆ ಸಂಶಯ ಬಾರದಂತೆ ನಿನ್ನನ್ನು ಹಿಂಬಾಲಿಸಿದೆ. ನಿಮ್ಮ ನಡುವೆ ಆದ ಮಾತುಕತೆ ಎಲ್ಲಾ ಕೇಳಿಸಿಕೊಂಡೆ. ನಿಜವಾಗಿಯೂ ನಿನಗೆ ಇಷ್ಟು ಚೆನ್ನಾಗಿ ನಾಟಕ ಆಡಲು ಬರುತ್ತೆ ಎಂದು ನನಗೆ ಇವತ್ತೇ ತಿಳಿದದ್ದು."

  " ನಿನಗೆ ಅದು ನಾಟಕ ಎಂದು ಎನಿಸುತ್ತಾ ಇದೆಯಾ ? ಆದರೆ ಅದು ನಾಟಕ ಅಲ್ಲ. ನಾನು ಆಕೆಯನ್ನು ನಿಜವಾಗಿಯೂ ಇಷ್ಟಪಟ್ಟಿದ್ದೇನೆ. ಮುಂದೊಂದು ದಿನ ಆಕೆಯನ್ನು ಮದುವೆ ಕೂಡ ಆಗಬೇಕು ಎಂದುಕೊಂಡಿದ್ದೇನೆ. ಒಂದುವೇಳೆ ಇನ್ನು ನೀನು ಅವಳಿಗೆ ಏನಾದರೂ ಉಪಟಳ ಕೊಡುವ ಯೋಜನೆ ಹಾಕಿದರೆ ನೋಡು.."

  " ಅಲ್ಲಾ ಮುಸ್ತಾಕ್ ನಿನಗೇನು ತಲೆಗಿಲೆ ಕೆಟ್ಟಿದೆಯಾ ? ಹೋಗಿ ಹೋಗಿ ಆ ಕುರೂಪಿಯನ್ನು ಇಷ್ಟಪಟ್ಟಿದ್ದೀಯಾ.. ಯಾವುದಾದರೂ ತಲೆ ಸರಿಯಿಲ್ಲದ ಹುಚ್ಚ ಆಕೆಯನ್ನು ಮದುವೆಯಾಗಬೇಕು ಹೊರತು ಸರಿ ಇದ್ದವರು ಆಗಲಿಕ್ಕಿಲ್ಲ."

ಸಹಾನಳ ಮಾತು ಕೇಳಿ ಮುಸ್ತಾಕ್ ಪಿತ್ತ ನೆತ್ತಿಗೇರಿತು.

   " ಆಕೆಯನ್ನು ಅಲ್ಲಾ ಕಣೇ, ನಿನ್ನನ್ನು ಯಾವುದಾದರೂ ಹುಚ್ಚ ಮದುವೆಯಾಗಬೇಕು ಅಷ್ಟೇ. ಯಾಕೆಂದರೆ ಸರಿ ಇದ್ದವನಿಗೆ ನಿನ್ನನ್ನು ನೋಡಿಕೊಳ್ಳಲು ಕಷ್ಟವಿದೆ. ಕೇವಲ ಅಂದ ಚಂದವಿದ್ದರೆ ಸಾಲದು. ಅದಕ್ಕೆ ಬೇಕಾದಂತಹ ಗುಣ ಇರಬೇಕು. *ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ?*" ಎಂದು ಹೇಳುತ್ತಲೇ ಅಲ್ಲಿಂದ ಸೀದಾ ಬಂದನು.

  ಓಹ್ ಮುಸ್ತಾಕ್ ಗ್ರೇಟ್ ಕಣೋ ನೀನು. ನಿನ್ನೆಯವರೆಗೆ ನನ್ನ ಮಾತು ನಿನಗೆ ವೇದ ವಾಕ್ಯದಂತಿತ್ತು. ಇಂದು ನಾನು ನಿನಗೆ ಕತ್ತೆ ಸಮಾನವಾದೆ ಅಲ್ವಾ ? ನೋಡ್ತಾ ಇರು... ನಾನು ಏನು ಮಾಡುತ್ತೇನೆ ಎಂದು. ನಿಮ್ಮಿಬ್ಬರ ಮಧ್ಯೆ ದ್ವೇಷದ ಕಿಡಿ ಹೊತ್ತಿಸದಿದ್ದಲ್ಲಿ ನಾನು ಸಹಾನಳೇ ಅಲ್ಲಾ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ತನ್ನ ಮನೆಯತ್ತ ನಡೆದಳು.

   ಇತ್ತ ತಾಹಿರ ಹಾಗೂ ಸುರಯ್ಯಾ ಒಟ್ಟಿಗೆ ಹಾಸ್ಟೆಲಿಗೆ ಬಂದುದನ್ನು ಕಂಡ ವಿದ್ಯಾರ್ಥಿಗಳು ಆಶ್ಚರ್ಯ ಚಕಿತರಾದರು.

  " ಅರೇ ನಿನ್ನೆ ನೀನೇ ಅಲ್ವಾ ಹೇಳಿದ್ದು? ಆಕೆಯೊಂದಿಗೆ ಮಾತನಾಡಬೇಡಿ ಹಾಗೆ ಹೀಗೆ ಎಂದು . ಈಗ ನೋಡಿದರೆ ನೀನೇ ಒಟ್ಟಿಗೆ ಬರುತ್ತಾ ಇದ್ದೀಯಲ್ಲ. ಏನು ವಿಷಯ? " ವಿದ್ಯಾರ್ಥಿನಿಯೊಬ್ಬಳು ಕೇಳಿಯೇ ಬಿಟ್ಟಳು. 

  " ಇಲ್ಲಾ... ನಿನ್ನೆ ಆಕೆಯ ಮೇಲಿನ ದ್ವೇಷದಿಂದ ನಿಮ್ಮೆಲ್ಲರಲ್ಲೂ ನಾನು ಸುಳ್ಳು ಹೇಳಿದೆ. ಈಗ ನನಗೇ ಸತ್ಯದ ಅರಿವಾಗಿದೆ. ನಾನು ಮಾಡಿದ್ದು ತಪ್ಪು ಎಂದು ತಿಳಿದಿದೆ‌. ಯಾರದೋ ಮಾತು ಕೇಳಿ ಆಕೆಯನ್ನು ಮಾನಸಿಕ ಹಿಂಸೆ ನೀಡಿ ಈ ಊರಿನಿಂದ ಓಡಿಸೋಣ ಎಂದುಕೊಂಡೆ. ಆದರೆ ಅದು ನನಗೇ ಉಲ್ಟಾ ಹೊಡೆಯಿತು. ಆದರೆ ನನ್ನ ರೀತಿಯಲ್ಲಿ ಮಾಡದೆ ಆಕೆ ಏನೊಂದೂ ತಲೆಯಲ್ಲಿ ಇಡದೆ ನನ್ನ ಆರೈಕೆ ಮಾಡಿದಳು. "

ಆ ಮಾತು ಕೇಳಿ ಅವರಿಗೆಲ್ಲ ಬೇಸರವಾಯಿತು.

  " ತಪ್ಪಾಯಿತು ಸುರಯ್ಯಾ... ನೀನು ನಿನ್ನ ಮನೆಯವರನ್ನು ಅಗಲಿ ಬಂದ ಮೊದಲ ದಿನ ಎಂದು ತಿಳಿದರೂ ನಾವೆಲ್ಲ ನಿನ್ನಲ್ಲಿ ಮಾತನಾಡದೆ ಮತ್ತಷ್ಟು ಬೇಸರಕ್ಕೆ ಒಳಪಡಿಸಿದೆವು. ದಯವಿಟ್ಟು ನಮ್ಮೆಲ್ಲರನ್ನೂ ಕ್ಷಮಿಸು" ಎಂದರು.

" ಅಯ್ಯೋ ಇಷ್ಟಕ್ಕೆಲ್ಲ ಕ್ಷಮೆ ಯಾಕೆ? ನಾನು ಅದನ್ನು ಯಾವುದನ್ನೂ ತಲೆಯಲ್ಲಿ ಇಡಲಿಲ್ಲ. ಇನ್ನು ಮುಂದಾದರೂ ಒಂದೇ ತಾಯಿಯ ಮಕ್ಕಳಂತೆ ಇರೋಣ" ಎಂದು ಕೊಂಡು ಖುಷಿಯಿಂದಲೇ ಅವರೆಲ್ಲ ಒಳನಡೆದರು.

  ಸುರಯ್ಯಾಳಿಗೂ ಆ ದಿನ ತುಂಬಾ ಖುಷಿಯಿಂದ ಸಾಗಿತು. ಮನೆಯವರಿಗೆ ಕರೆ ಮಾಡಿ ತನ್ನ ಬಗ್ಗೆ ಏನೂ ಯೋಚಿಸಬೇಡಿ. ನಾನು ಇಲ್ಲಿ ನೆಮ್ಮದಿಯಿಂದಿರುವೆ ಎಂದಳು. ಮನೆಯವರಿಗೂ ಇದ್ದ ಆತಂಕ ದೂರವಾಯಿತು. ಎಲ್ಲರೂ ಸರಿಯಾದರು ಇನ್ನು ಸಹಾನಳ ಮನಸ್ಸು ಸರಿಯಾದರೆ ಸಾಕು. ಆದಷ್ಟು ಬೇಗ ಆಕೆಯ ಮನಸ್ಸೂ ಬದಲಾಯಿಸು ದೇವನೇ ಎಂದು ಆಕೆ ಮನದಲ್ಲಿಯೇ ಪ್ರಾರ್ಥಿಸಿದಳು.

     ಆದರೆ ಸಹಾನಳು ತಾನು ಹೇಗೆ ಮುಸ್ತಾಕ್ ಹಾಗೂ ಸುರಯ್ಯಾಳ ನಡುವೆ ದ್ವೇಷದ ಕಿಡಿ ಹಚ್ಚುವುದು ಎಂದು ಆಲೋಚಿಸುತ್ತಲೇ ಇದ್ದಳು. ಕೊನೆಗೂ ಒಂದು ಐಡಿಯಾ ಸಿಕ್ಕಿದಾಗ ಹ್ಞಾಂ.. ಇದನ್ನೇ ಮಾಡುವುದು ಸರಿ ಎನ್ನುತ್ತಾ ತನ್ನಷ್ಟಕ್ಕೇ ನಗಾಡಿದಳು.

    ಇದು ಯಾವುದರ ಪರಿವೆಯೇ ಇಲ್ಲದೆ ಸುರಯ್ಯಾ ಮರುದಿನ ತಾಹಿರಾಳೊಂದಿಗೆ ಕಾಲೇಜಿಗೆ ಬಂದಳು. ಆಕೆ ಬರುತ್ತಿರುವುದನ್ನು ಸಹಾನ ಗಮನಿಸಿದವಳೇ ಮುಸ್ತಾಕ್ ಬಳಿ ಹೋದಳು.

   ಮುಸ್ತಾಕ್ ಏನು? ಎಂದು ಕೇಳಿದನು.

"ನಿನ್ನೆ ನನ್ನಿಂದ ತಪ್ಪಾಯಿತು ಅಂತ ನನಗೆ ತಿಳಿದಿದೆ. ಅದರ ವಿಚಾರವಾಗಿ ನಾನು ತುಂಬಾ ಯೋಚಿಸಿದೆ. ಈಗ ನನಗೆ ನಿನ್ನಲ್ಲಿ ಅದರ ಬಗ್ಗೆ ಮಾತನಾಡಲು ಇದೆ. ಸ್ವಲ್ಪ ಹೊರಗೆ ಬರುತ್ತೀಯಾ" ಕೇಳಿದಳು. 

   ಆಕೆಯ ನಾಟಕ ತಿಳಿಯದ ಮುಸ್ತಾಕ್ ನಿಜವೆಂದೇ ಎನಿಸಿ ಹೊರಗೆ ಹೋದನು. ಒಂದು ಕಡೆ ನಿಂತ ಸಹಾನ ಆತನೊಂದಿಗೆ ಮಾತಿಗೆ ಇಳಿದಳು. ಮಾತಿನ ಗೊಡವೆಯಲ್ಲಿ ಇದ್ದ ಆತ ಹಿಂದಿನಿಂದ ಸುರಯ್ಯಾ ಬಂದುದನ್ನು ಗಮನಿಸಲೇ ಇಲ್ಲ. ಆದರೆ ಆಕೆ ಹತ್ತಿರ ಬಂದುದನ್ನು ನೋಡಿದ ಸಹಾನ

"ಅಲ್ಲಾ ಮುಸ್ತಾಕ್ ಅದು ಹೇಗೆ ನೀನು ನಾಟಕ ಆಡಿದೆ?. ನನ್ನ ಮಾತಿಗೆ ಇಷ್ಟು ಬೆಲೆ ನೀಡುತ್ತಿ ಅಂತ ಗೊತ್ತಿರಲಿಲ್ಲ. ಪಾಪ ಆಕೆ ನಿಜ ಅಂದು ಕೊಂಡಳು. ಆದಷ್ಟು ಬೇಗ ಆಕೆಯನ್ನು ನಿನ್ನ ಬಲೆಯಲ್ಲಿ ಬೀಳಿಸಿ ಆಮೇಲೆ ದೂರ ಮಾಡಿ ನೋಡು. ಆಕೆ ನಿನ್ನ ಪ್ರೀತಿಯಲ್ಲಿ ಹುಚ್ಚಿಯಾಗಬೇಕು. ನನಗೂ ನೋಡಬೇಕು ಅದನ್ನು."

ಸಹಾನ ಮುಸ್ತಾಕಿನೊಂದಿಗೆ ಹೇಳಿದ ಮಾತು ಕೇಳಿ ಸುರಯ್ಯಾ ಗರಬಡಿದವಳಂತಾದಳು.

ನೀನು ಏನು ಹೇಳುತ್ತಾ ಇದ್ದೀಯಾ ಎಂದು ಮುಸ್ತಾಕ್ ಕೇಳಲು ಬಾಯಿ ತೆರೆಯುವಷ್ಟರಲ್ಲಿ ಹಿಂದಿನಿಂದ ಸುರಯ್ಯಾಳ ಜೊತೆ ಇದ್ದ ರಾಫಿಯ

   " ಹೇಳಲಿಲ್ವಾ ಸುರಯ್ಯಾ ನಾನು ? ಈತ ಬಲು ದೊಡ್ಡ ಚಾಲಾಕಿ ಎಂದು . ನೋಡು ಈಗ. ನನಗೆ ಮೊದಲೇ ಸಂಶಯ ಇತ್ತು ಇವರು ಈ ರೀತಿ ಏನಾದರೂ ಮಾಡುತ್ತಾರೆ ಎಂದು. " ಎಂದು ಹೇಳಿದಳು.

ರಾಫಿಯಾಳ ಮಾತು ಕೇಳಿ ಬಂದಾಗ ಮುಸ್ತಾಕ್ ಆಶ್ಚರ್ಯ ಚಕಿತನಾಗಿ ಹಿಂದೆ ನೋಡಿದನು. ಅಲ್ಲಿ ನಿಂತಿದ್ದ ಸುರಯ್ಯಾಳನ್ನು ನೋಡಿ ಆತನಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಇದೆಲ್ಲವೂ ಸಹಾನಳು ಬೇಕೆಂದಲೇ ಮಾಡಿದ್ದು ಎಂದು ಆತನಿಗೆ ತಿಳಿಯಿತು.

" ಅಯ್ಯೋ ಸ್ವಾರಿ ಮುಸ್ತಾಕ್, ನಾನು ಅವರು ಬಂದಿದ್ದು ನಾನು ನೋಡಲೇ ಇಲ್ಲ. ಇಲ್ಲದಿದ್ದಲ್ಲಿ ಹೇಳುತ್ತಲೇ ಇರಲಿಲ್ಲ. ಈಗೇನು ಮಾಡುವುದು ? ನಾವು ಸಿಕ್ಕಿ ಬಿದ್ದ ಹಾಗೆ ಆಯ್ತಲ್ಲ " ಎಂದು ಸಹಾನ ಬೇಕಂತಲೇ ಹೇಳಿದಳು.

" ಅಯ್ಯೋ ಸುರಯ್ಯಾ.... ನಂಬಬೇಡ ಇದು.. ಈಕೆ ಬೇಕೂಂತಲೇ ಸುಳ್ಳು ಹೇಳುತ್ತಿದ್ದಾಳೆ. ನಿಜವಾಗಿಯೂ ನಾನು ಈಕೆಯ ಮಾತನ್ನು ಕೇಳಲಿಲ್ಲ. ನಾನು ಏನು ಹೇಳಿರುವೆ ನಿಜ ಹೇಳಿರುವೆ. ನನ್ನನ್ನು ನಂಬು ಸುರಯ್ಯಾ. ಈಕೆ ಬೇಕಂತಲೇ ನಮ್ಮ ನಡುವೆ ದ್ವೇಷದ ಕಿಡಿ ಹಚ್ಚುತ್ತಿದ್ದಾಳೆ ಎಂದು ಗೋಗರೆದನು.

" ಯಾಕೆ ಮುಸ್ತಾಕ್ ಈಗ ನನ್ನನ್ನು ಒಬ್ಬಳನ್ನೇ ಅಪರಾಧಿಯನ್ನಾಗಿ ಮಾಡುತ್ತಾ ಇದ್ದೀಯಾ ? ಪ್ಲಾನ್ ನಾವಿಬ್ಬರೂ ಸೇರಿ ಮಾಡಿದ್ದು ತಾನೇ ? ಸುರಯ್ಯಾ ನನ್ನನ್ನು ಕ್ಷಮಿಸು, ನನ್ನಿಂದ ತಪ್ಪಾಯಿತು. ನಿನಗೆ ನನ್ನ ಬಗ್ಗೆ ತಿಳಿದಿಲ್ಲವೇ? ನಾನೆಂದಾದರೂ ಸುಳ್ಳು ಹೇಳುತ್ತೇನಾ? ನೋಡು ಮಾಡುವುದನ್ನೆಲ್ಲಾ ಒಟ್ಟಿಗೆ ಮಾಡಿ ಈಗ ಕೇವಲ ನನ್ನನ್ನು ತಪ್ಪಿತಸ್ಥಳನ್ನಾಗಿ ಮಾಡುತ್ತಿದ್ದಾನೆ. ಈತನನ್ನು ನೀನು ಒಂದು ನಿಮಿಷವೂ ನಂಬಬೇಡ "ಎಂದು ಹೇಳಿ ಮೊಸಳೆ ಕಣ್ಣೀರನ್ನು ಹಾಕಿದಳು.

   ಆಕೆಯ ಕಣ್ಣೀರು ನೋಡುವಾಗ ಸುರಯ್ಯಾಳಿಗೆ ಅಯ್ಯೋ ಪಾಪ ಎಂದೆನಿಸಿತು ಸಿಟ್ಟಿನಿಂದಲೇ ಮುಸ್ತಾಕ್ ಬಳಿ ಬಂದ ಸುರಯ್ಯಾ " "ಇದುವರೆಗೂ ನಾನು ಎಲ್ಲವನ್ನೂ ಸಹಿಸಿದೆ. ಇನ್ನು ಮುಂದೆ ಹಾಗಲ್ಲ. ನನ್ನ ವಿಷಯಕ್ಕೆ ಬಂದೆಯೋ ನಿಜವಾಗಿಯೂ ನಿನ್ನನ್ನು ಈ ಕಾಲೇಜಿನಿಂದ ಡಿಬಾರ್ ಮಾಡಿಸುತ್ತೇನೆ. ಮುಂದೆಂದೂ ನನಗೆ ನಿನ್ನ ಮುಖ ತೋರಿಸಬೇಡ.ಇನ್ನು ಆಕೆಯ ಹೆಸರನ್ನು ಎಲ್ಲದಕ್ಕೂ ಬಳಸಬೇಡ" ಎಂದು ಹೇಳಿದಳು.

" ಇಲ್ಲಾ ಸುರಯ್ಯಾ... ನನ್ನನ್ನು ನಂಬು. ಇದು ಆಕೆಯ ನಾಟಕ. ನೀನು ಇದಕ್ಕೆ ಬಲಿಪಶು ಆಗಬೇಡ. ನೀನು ನನ್ನನ್ನು ಪ್ರೀತಿಸದಿದ್ದರೂ ಪರ್ವಾಗಿಲ್ಲ. ದಯವಿಟ್ಟು ದ್ವೇಷಿಸಬೇಡ."

" ಅಯ್ಯೋ ಎಷ್ಟು ಸುಳ್ಳು ಹೇಳ್ತೀಯಾ ನೀನು? ನಿನಗೇನು ನಾನು ಈ ಕಾಲೇಜಿನಲ್ಲಿ ಕಲಿಯಬಾರದು ಎಂದು ತಾನೇ ? ಸರಿ ಬರೋದಿಲ್ಲ ನಾನು‌. ನಾನು ಹೋದರೆ ನಿನಗೆ ನೆಮ್ಮದಿ ತಾನೇ? ಸರಿ ಈಗಲೇ ಹೋಗಿ ಟಿ.ಸಿ.ಗೆ ಅಪ್ಲೈ ಮಾಡಿ ಬರುತ್ತೇನೆ."

" ಬೇಡ ಸುರಯ್ಯಾ... ಹಾಗೆ ಮಾಡಬೇಡ. ಇನ್ನೆಂದಿಗೂ ನಿನ್ನ ವಿಷಯಕ್ಕೆ ಬರಲಾರೆ. ನೀನು ನಿನ್ನ ಕನಸನ್ನು ನನಸಾಗಿ ಮಾಡಿಯೇ ಇಲ್ಲಿಂದ ಹೋಗಬೇಕು. ಅದುವರೆಗೂ ನಾನು ನಿನ್ನ ಮುಖವನ್ನೂ ನೋಡುವುದಿಲ್ಲ. ಆದರೆ ಈ ಮನೆಹಾಳಿಯ ನಿಜಾಂಶ ಒಂದಲ್ಲ ಒಂದು ದಿನ ನಿನಗೆ ತಿಳಿದೇ ತಿಳಿಯುತ್ತದೆ. ಆಗ ನೀನು ಪಶ್ಚಾತ್ತಾಪ ಪಡುತ್ತೀಯಾ. "

   ಆತನ ಮಾತಿಗೆ ಸುರಯ್ಯಾ ಏನೊಂದೂ ಹೇಳದೆ ಸೀದಾ ತನ್ನ ಕ್ಲಾಸ್ ರೂಮಿಗೆ ನಡೆದಳು. ಆಕೆ ಹೋದುದನ್ನು ದೃಢಪಡಿಸಿದ ಸಹಾನ

  " ಏನಂದೆ ನೀನು ? ನಾನು ಸರಿಯಿಲ್ಲ ಎಂದಲ್ವಾ? ಈಗ ನೋಡು ಏನಾಯಿತು? ಅದೆಷ್ಟು ಸುಲಭದಲ್ಲಿ ನಿನ್ನನ್ನು ಆಕೆ ದ್ವೇಷಿಸುವಂತೆ ಮಾಡಿದೆ? ಅದಕ್ಕೆ ಹೇಳುವುದು ನನ್ನ ತಂಟೆಗೆ ಬರುವುದಕ್ಕಿಂತ ಮುಂಚೆ ನೂರು ಸಾರಿ ಆಲೋಚನೆ ಮಾಡಬೇಕು ಎಂದು." ಎಂದು ಮುಸ್ತಾಕಿಗೆ ಉಪದೇಶ ನೀಡಿದಳು.

" ನೀನು ಹೆಣ್ಣಲ್ಲ ಕಣೇ , ರಾಕ್ಷಸಿ ನೀನು. ನೀನು ಆಕೆಯ ಮನದಲ್ಲಿ ನನ್ನ ಬಗೆಗಿನ ದ್ವೇಷ ಬಿತ್ತಿದೆ ಅನ್ನುವುದರ ಬಗ್ಗೆ ನನಗೇನೂ ಬೇಸರವಿಲ್ಲ. ಯಾಕೆಂದರೆ ಸುಳ್ಳು ಎಂದಿಗೂ ಶಾಶ್ವತವಲ್ಲ. ಒಂದಲ್ಲ ಒಂದು ದಿನ ನಿಜಾಂಶ ಹೊರಗೆ ಬಂದೇ ಬರುತ್ತೆ. ಆದರೆ ನೀನು ಇಷ್ಟೆಲ್ಲಾ ಆಕೆಗೆ ಅನ್ಯಾಯ ಮಾಡಿದರೂ ಆಕೆ ನಿನ್ನ ಕಣ್ಣೀರು ಬೇಸರ ಪಟ್ಟುಕೊಂಡಳಲ್ಲಾ ಅದು ನನಗೆ ಖೇದಕರವೆನಿಸಿತು. ಹೋಗಿ ಹೋಗಿ ನಿನ್ನನ್ನು ನಂಬುತ್ತಾಳಲ್ಲ. ಒಳ್ಳೆಯದಾಗಲ್ಲ ಕಣೇ ನಿನಗೆ ಎಂದಿಗೂ... ಯಾವತ್ತಿಗೂ... ನೋಡುತ್ತಾ ಇರು" ಎಂದವನೇ ಮುಸ್ತಾಕ್ ತನ್ನ ಹಾದಿಯಲ್ಲಿ ತಾನು ನಡೆದನು.

     ಕಾಲವು ಚಕ್ರದಂತೆ ಉರುಳುತ್ತಲೇ ಇತ್ತು.

   ಮುಸ್ತಾಕ್ ಆನಂತರ ಸುರಯ್ಯಾಳಲ್ಲಿ ಮಾತನಾಡಲು ಹೋಗಲಿಲ್ಲ. ಆತನ ಪಾಡಿಗೆ ಇದ್ದು ಬಿಟ್ಟಿದ್ದನು. ಕ್ಲಾಸಿನ ವಿದ್ಯಾರ್ಥಿಗಳೆಲ್ಲಾ ಸುರಯ್ಯಾಳನ್ನು ಮೆಚ್ಚಿಕೊಂಡಿದ್ದರಿಂದ ಸಹಾನಳಿಗೆ ಯಾರ ಬೆಂಬಲವೂ ಸಿಗುತ್ತಿರಲಿಲ್ಲ. ಆದರೂ ಮುಸ್ತಾಕ್ ಹಾಗೂ ಸುರಯ್ಯಾ ನನ್ನಿಂದಾಗಿ ಮಾತನಾಡುವುದನ್ನೇ ಬಿಟ್ಟಿದ್ದಾರೆ ಅನ್ನೋದೆ ಆಕೆಗೊಂದು ದೊಡ್ಡ ವಿಷಯವಾಗಿತ್ತು. ಒಳಗಿನಿಂದ ಸುರಯ್ಯಾಳ ಮೇಲೆ ಕೋಪವಿದ್ದರೂ ಹೊರಗಿನಿಂದ ಒಳ್ಳೆಯವರಂತೆ ನಟಿಸುತ್ತಿದ್ದಳು.

   ಅದೊಂದು ಆದಿತ್ಯವಾರ. ಕಾಲೇಜಿಗೆ ರಜಾ ದಿನವಾದ ಕಾರಣ ಸುರಯ್ಯಾ ಹಾಸ್ಟೆಲಿನಲ್ಲಿಯೇ ಇದ್ದಳು. ಆಕೆಯ ಬಳಿ ಬಂದ ತಾಹಿರ 

   " ಸುರಯ್ಯಾ... ನನಗೆ ಕೆಲವೊಂದು ಅಗತ್ಯ ವಸ್ತುಗಳನ್ನು ಖರೀದಿಸಲು ಇತ್ತು. ಹಾಗಾಗಿ ಒಮ್ಮೆ ಸೂಪರ್ ಮಾರ್ಕೆಟ್ ಹೋಗಿ ಬರೋಣವೇ ? ಬರುತ್ತೀಯಾ ನನ್ನ ಜೊತೆ" ಎಂದು ಕೇಳಿದಳು.

ಹ್ಞಾಂ ಅದಕ್ಕೇನಂತೆ ಎಂದು ಸುರಯ್ಯಾ ಅವಳ ಜೊತೆ ನಗರದ ಪ್ರಸಿದ್ಧ ಮಾಲ್ ಒಂದರ ಸೂಪರ್ ಮಾರ್ಕೆಟಿಗೆ ಹೋದಳು.

ತಾಹಿರ ಅಲ್ಲಿ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ಕೆ ಮಾಡುತ್ತಾ ಇದ್ದಳು. ಸುತ್ತಮುತ್ತಲೂ ಒಮ್ಮೆ ನೋಡಿದ ಸುರಯ್ಯಾಳ ದೃಷ್ಟಿ ಒಂದು ಕಡೆ ನೆಟ್ಟಿತು. ಆಕೆ ಮತ್ತೆ ಮತ್ತೆ ನೋಡಿದಳು. ಹೌದು ಅದು ಅವರೇ ಎಂದು ಮನಸ್ಸಿನಲ್ಲೇ ಯೋಚಿಸಿದವಳೇ ಅವಳಿಗೆ ಅರಿವಿಲ್ಲದಂತೆಯೇ 

   ಮುನೀರಾಂಟಿ........ ಎಂದು ಉದ್ಘಾರವೆತ್ತಿದಳು.

ಮುನೀರಾಳನ್ನು ನೋಡಿದ ಸುರಯ್ಯಾಳ ಖುಷಿಗೆ ಪಾರವೇ ಇರಲಿಲ್ಲ. ತನ್ನ ಬದುಕಿನಲ್ಲಿ ಅವರನ್ನು ಮತ್ತೆ ನೋಡುವೆನು ಎಂದು ಆಕೆ ಭಾವಿಸಿರಲಿಲ್ಲ. ಅವರ ಬಳಿ ಹೋಗಿ ಮಾತನಾಡಿಸಬೇಕು ಎಂದುಕೊಂಡಳು. ತಾಹಿರ ಮತ್ತೆ ನನ್ನನ್ನು ಹುಡುಕಾಡುವುದು ಬೇಡ ಎಂದುಕೊಂಡು ಆಕೆಯಲ್ಲಿ ಹೇಳಿಯೇ ಹೋಗೋಣ ಎಂದೆನಿಸಿ ಕೊಂಡಳು.

" ತಾಹಿರ ನನಗೆ ಪರಿಚಯದವರೊಬ್ಬರು ಇಲ್ಲಿದ್ದಾರೆ.ನಾನು ಅವರೊಂದಿಗೆ ಮಾತನಾಡಿ ಬರುತ್ತೇನೆ ಸರಿಯಾ" ಎಂದು ಹೇಳಿದಳು.

 " ಹ್ಞಾಂ ಸರಿ" ಎಂದು ತಾಹಿರ ತನ್ನ ಸಮ್ಮತಿ ಸೂಚಿಸಿದಳು.

 ತಿರುಗಿ ಹೋಗಿ ಮುನೀರಾಳಲ್ಲಿ ಮಾತನಾಡ ಎಂದುಕೊಂಡರೆ ಆಕೆ ಅಲ್ಲಿ ಇರಲಿಲ್ಲ. ಸುರಯ್ಯಾ ಸುತ್ತ ಮುತ್ತಲೆಲ್ಲಾ ನೋಡಿದಳು. ಆಗ ಆಕೆ ಕೆಳಗೆ ಹೋಗುವುದು ಕಾಣಿಸಿತು. ಸುರಯ್ಯಾ ಅವರ ಹೆಸರನ್ನು ಕರೆಯುತ್ತಲೇ ಅವರ ಬಳಿ ಓಡಿ ಹೋದಳು.

ತನ್ನನ್ನು ಯಾರೋ ಕರೆದಂತಾಗಿ ಮುನೀರಾ ಹಿಂದಿರುಗಿ ನೋಡಿದರು. ತಕ್ಷಣ ಅವರಿಗೆ ಸುರಯ್ಯಾ ಓಡಿಕೊಂಡು ಬರುವುದು ಕಾಣಿಸಿತು.

    ಸುರಯ್ಯಾಳನ್ನು ನೋಡಿದ ಅವರ ಆನಂದಕ್ಕೆ ಮಿತಿಯೇ ಇರಲಿಲ್ಲ. ಓಡಿ ಹೋಗಿ ಆಕೆಯನ್ನು ಆಲಿಂಗಿಸಿದರು.

" ಅರೇ ಸುರಯ್ಯಾ... ನೀನು ನನಗೆ ಮತ್ತೊಮ್ಮೆ ಸಿಗುತ್ತೀಯಾ ಎಂದು ನಾನು ಎನಿಸಿರಲೇ ಇಲ್ಲ. ನಿನ್ನ ಹುಡುಕಲು ನಾನು ಮಾಡಿದ ಪ್ರಯತ್ನಗಳು ಅದೆಷ್ಟೋ ಇದೆ ಆದರೆ ಎಲ್ಲವೂ ವಿಫಲವಾದವು. ನಿಜವಾಗಿಯೂ ನೀನು ಹೀಗೆ ಸಿಗಬಹುದು ಎಂದು ನನಗೂ ಎನಿಸಿರಲಿಲ್ಲ."

" ಹೌದು ಆಂಟೀ... ನಾನು ಕೂಡ ಅಷ್ಟೇ.. ಆಸ್ಪತ್ರೆಗೆ ಹೋಗಿ ನಿಮ್ಮ ಬಗೆಗೆ ವಿಚಾರಿಸಿದೆ. ಆದರೆ ಯಾವುದೇ ಸರಿಯಾದ ಮಾಹಿತಿ ನನಗೆ ಸಿಕ್ಕಿರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ತಿಳಿಸಿದರು. ಸಾದ್ ಈಗ ಹೇಗಿದ್ದಾನೆ ? ಹುಷಾರಾಗಿ ಇರಬಹುದಲ್ವಾ? "

ಸುರಯ್ಯಾ ಮಾತು ಕೇಳಿ ಒಮ್ಮೆಲೇ ಮುನೀರಾ ಅವರ ಮುಖ ಸಪ್ಪಗಾಯಿತು. 

" ಇಲ್ಲಾ ಸುರಯ್ಯಾ... ಅವನು ಇನ್ನೂ ಹಾಗೇ ಇದ್ದಾನೆ.ಯಾವುದೇ ಟ್ರೀಟ್ಮೆಂಟ್ ಆತನಿಗೆ ಫಲ ನೀಡುತ್ತಿಲ್ಲ" ಎಂದು ಬೆಂಗಳೂರಿಗೆ ಹೋಗಿ ಬಂದ ನಂತರದ ವಿಷಯ ವಿವರಿಸಿದಳು.

ಆದರೆ ಸೈದಾ ಹಾಗೂ ತನ್ನ ನಡುವೆ ನಡೆದ ಮಾತುಕತೆ ಬಗ್ಗೆ ಹೇಳಲಿಲ್ಲ.

" ಹಾಗಿದ್ದಲ್ಲಿ ಆಯಿಷಾ ಯಾರು ಎಂದು ತಿಳಿಯಲಿಲ್ಲವೇ... ? ಆಕೆ ಒಮ್ಮೆಯೂ ಈತನನ್ನು ಹುಡುಕಿಕೊಂಡು ಬರಲಿಲ್ಲವೇ ?"

" ಇಲ್ಲ, ಆಕೆ ಯಾರು ಹೇಗೆ ಎಂದು ನಾನು ಹುಡುಕಲಿ ಹೇಳು ? ಆಕೆ ಬರುವುದಿದ್ದರೆ ಇಷ್ಟು ದಿನಗಳಲ್ಲಿ ಬರುತ್ತಿರಲಿಲ್ವಾ ಹೇಳು? ನನ್ನ ಮಗನ ಜೀವನ ಹಾಳು ಮಾಡಿ ಆಕೆ ಎಲ್ಲೋ ನೆಮ್ಮಂದಿಯಿದ್ದಾಳೆ ಕಾಣಬೇಕು."

 "ಮತ್ತೆ ಆ ಮಂತ್ರವಾದಿ ಎಂದು ಏನೋ ಹೇಳಿದರಲ್ಲ?"

" ಹ್ಞಾಂ, ಅವರು ಯಾವುದೋ ಕೆಲಸದ ನಿಮಿತ್ತ ಮಲೇಷಿಯಾಕ್ಕೆ ಹೋಗಿದ್ದರು. ಅವರು ಬರಲು ಎರಡು ತಿಂಗಳು ಸಮಯವಿತ್ತು. ಅದರೊಳಗಾಗಿ ನಿನ್ನನ್ನು ಹುಡುಕಬೇಕು ಎಂದು ನಾನು ನಿರ್ಧರಿಸಿದ್ದೆ. ಆದರೆ ನನ್ನಿಂದ ಆಗಲಿಲ್ಲ."

" ಮುಂದೇನಾಯಿತು? "

"ಅವರು ಕರೆದುಕೊಂಡು ಹೋಗಿದ್ದರು. ಆದರೆ ಅದು ಯಾವುದೇ ಫಲ ನೀಡಲಿಲ್ಲ.ಇನ್ನು ಮಾಡುವುದು ಏತಕೆ ಎಂದು ಸುಮ್ಮನಾದರು. ಅಲ್ಲದಿದ್ದರೂ ಕೂಡ ಪ್ರೀತಿ ಪ್ರೇಮ ಎಂದು ತಲೆಕೆಡಿಸಿಕೊಂಡವನನ್ನು ಮಂತ್ರವಾದಿ ಬಳಿ ಕರೆದುಕೊಂಡು ಹೋಗಿ ಮಾಡುವುದಾದರೂ ಏನು ? ಈಗ ಅವರೂ ಕೂಡ ತುಂಬಾ ತಲೆ ಬಿಸಿಯಲ್ಲಿ ಇದ್ದಾರೆ. ಯಾರಿಗಾದರೂ ಆಗೋದಿಲ್ವೇ ಹೇಳು? ಬೆಳೆದು ನಿಂತ ಮಗ ಈ ರೀತಿ ಮಾಡುತ್ತಾ ಇದ್ದಾನೆ ಎಂದರೆ? ಅದೂ ಕೂಡ ಇಷ್ಟೆಲ್ಲಾ ಚಿಕಿತ್ಸೆ ಮಾಡಿ ಫಲಕಾರಿಯಾಗದೆ ಇರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ಒಳಪಡಿಸುತ್ತದೆ. ಏನು ಮಾಡುವುದು ಹೇಳು? ಎಲ್ಲವನ್ನೂ ಸಹಿಸಿಕೊಳ್ಳಬೇಕೇ ಹೊರತು ಮತ್ಯಾವ ದಾರಿ ಕೂಡ ಇಲ್ಲ."

ಸುರಯ್ಯಾಳಿಗೆ ಅವರ ಮಾತು ಕೇಳಿ ಬೇಸರವಾಯಿತು. ಅಷ್ಟರಲ್ಲಿ ಮುನೀರಾಳ ಮೊಬೈಲ್ ರಿಂಗಣಿಸಿತು.

ಸ್ವಲ್ಪ ಹೊತ್ತು ಮಾತನಾಡಿದವಳೇ ನಂತರ ಕರೆ ಕಟ್ ಮಾಡಿ ಸುರಯ್ಯಾಳತ್ತ ನೋಡಿ

 " ಸಮದ್ ಕರೆ ಮಾಡಿರೋದು. ಅವರನ್ನು ಸಾದ್ ಬಳಿ ನಿಲ್ಲಿಸಿ ಸ್ವಲ್ಪ ಅಗತ್ಯ ಸಾಮಗ್ರಿಗಳನ್ನು ಖರೀದಿಸಲೆಂದು ಬಂದಿದ್ದೆ. ಈಗ ನೋಡಿದರೆ ಅವರಿಗೆ ಏನೋ ತುಂಬಾ ಅರ್ಜೆಂಟ್ ಆದ ಕೆಲಸ ಇದೆಯಂತೆ. ಹಾಗಾಗಿ ನನ್ನ ಬರ ಹೇಳಿದರು."

" ಹೌದಾ ಆಂಟಿ... ಹಾಗಿದ್ದಲ್ಲಿ ಸರಿ. ನೀವು ಹೊರಡಿ ನಾವು ಇನ್ನೊಮ್ಮೆ ಸಿಗೋಣ "ಎಂದಳು ಸುರಯ್ಯಾ.

   "ಒಂದು ಮಾತು ಬೇಜಾರು ಮಾಡಿಲ್ಲ ಎಂದರೆ. ಕೇಳಬಹುದಾ?"

" ಅಯ್ಯೋ ಬೇಜಾರು ಯಾಕೆ? ನೀವು ಕೇಳಿ ಆಂಟಿ.. ನನಗೇನೂ ಬೇಜಾರಿಲ್ಲ.." ಎಂದು ಮುಗುಳ್ನಗುತ್ತಲೇ ಸುರಯ್ಯಾ ಹೇಳಿದಳು.

  ಅದೂ..... ಅದೂ... ಏನೆಂದರೆ ...ಮುನೀರಾ ತಡವರಿಸಿದಳು.

ನನಗೊಂದು ವಿಷಯ ನಿನ್ನ ಬಳಿ ಹೇಳಲಿಕ್ಕೆ ಇದೆ
ಎಂದು ಮುನೀರಾ ಸುರಯ್ಯಾಳಲ್ಲಿ ಹೇಳಿದರು.

    " ಏನು ವಿಷಯ ಆಂಟಿ? ನಿಸ್ಸಂಕೋಚವಾಗಿ ಹೇಳಿ ಪರವಾಗಿಲ್ಲ " ಸುರಯ್ಯಾ ಮರುನುಡಿದಳು.

 " ಅದೂ... ನೀನು ನನ್ನ ಜೊತೆ ಒಮ್ಮೆ ನನ್ನ ಮನೆಗೆ ಬರುತ್ತೀಯಾ? ನನ್ನ ಮನೆ ತುಂಬಾ ದೂರವೇನಿಲ್ಲ. ಇಲ್ಲೇ 5 ನಿಮಿಷದ ದಾರಿ. ನಿನ್ನಿಂದ ನನಗೊಂದು ಉಪಕಾರವಾಗಬೇಕಾಗಿತ್ತು. ಹಾಗಾಗಿ ನೀನು ಬರಲೇ ಬೇಕು ಪ್ಲೀಸ್."

 " ಅದೂ.... "ಸುರಯ್ಯಾಳಿಗೆ ತಾನು ಸಂಧಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ ಎಂದೆನಿಸಿತು.

 ಸುರಯ್ಯಾ ಯೋಚಿಸುತ್ತಾ ಇರುವುದನ್ನು ನೋಡಿದ ಮುನೀರಾ

" ನೋಡು ಸುರಯ್ಯಾ... ನೀನು ಏನು ಯೋಚಿಸುತ್ತಾ ಇದ್ದೀಯಾ ಎಂದು ನನಗೆ ತಿಳಿದಿದೆ.  ನಾನು ಯಾಕೆ ಕರೆಯುತ್ತಾ ಇದ್ದೇನೆ ಎಂದರೆ  ನಾನು ಸಮದ್ ಬಳಿ ಅದೆಷ್ಟೋ ಸಾರಿ ಆ ಹುಡುಗಿಯ ವಿಚಾರ ಹೇಳಿದೆ. ಆದರೆ ಸಮದ್ ಅದನ್ನು ಒಪ್ಪಲು ತಯಾರಿಲ್ಲ. ಒಂದು ಹೆಣ್ಣಿನಿಂದಾಗಿ ತನ್ನ ಮಗ ಈ ರೀತಿ ಆಗಲಿಕ್ಕಿಲ್ಲ ಎನ್ನುವುದೇ ಅವರ ವಾದ. ಈಗ ನೀನು ನನ್ನ ಜೊತೆ ಬಂದರೆ ಖಂಡಿತಾ ಆತ ನಿನ್ನನ್ನು ಆಯಿಷಾ ಎಂದು ಕರೆಯುತ್ತಾನೆ.  ಆಗ ಸಮದ್ ಒಪ್ಪಲೇಬೇಕು. "

"ಆದರೆ ಆಂಟಿ... ಅವತ್ತು ಆತ ನನ್ನನ್ನು ಆಕಸ್ಮಿಕವಾಗಿ ಕರೆದನೆಂದು ಈಗಲೂ ಕರೆಯುವನೆಂದು ನಿಮಗೆ ಅನಿಸುತ್ತಿದೆಯೇ ? "

 " ಹ್ಞಾಂ... ನನಗೆ ಅನಿಸುತ್ತದೆ. ಹಾಗಾಗಿ ಈ ಅಮ್ಮನ ಮನಸ್ಸಮಾಧಾನಕ್ಕಾಗಿ ನೀನು ಬರಬೇಕು ನನ್ನ ಜೊತೆ."

ಅವರು ಹಾಗೆ ಹೇಳಿದಾಗ ಸುರಯ್ಯಾಳಿಗೆ ಮತ್ತೇನು ಹೇಳಬೇಕು ಎಂದು ತೋಚಲೇ ಇಲ್ಲ.  "ಸರಿ , ನಾನು ನನ್ನ ಗೆಳತಿಯ ಜೊತೆ ಬಂದಿದ್ದು. ಆಕೆಯೊಂದಿಗೆ ಹೇಳಿ ಬರುತ್ತೇನೆ" ಎಂದು ತಾಹಿರಾಳ ಬಳಿ ಹೇಳಲು ಹೋದಳು.

ತಾಹಿರಾಳ ಜೊತೆ ಹೇಳಿ ಸುರಯ್ಯಾ ಮುನೀರಾಳೊಂದಿಗೆ ಅವರ ಮನೆಗೆ ನಡೆದಳು.

  ಪತ್ನಿಯೊಂದಿಗೆ ಮನೆಗೆ ಬಂದ ಅಪರಿಚಿತ ಹುಡುಗಿಯನ್ನು ಕಂಡು ಸಮದಿಗೆ ಅಚ್ಚರಿಯಾಯಿತು.

  " ಯಾರು ಇದು ? " ಎಂದು ತನ್ನ ಪತ್ನಿಯತ್ತ ಕೇಳಿದನು.

 "ಇದೂ ಅಂದು ಹಾಸ್ಪಿಟಲ್ ಅಲ್ಲಿ ಸಿಕ್ಕಿದ ಅದೇ ಹುಡುಗಿ. ಈಕೆಯನ್ನು ಕಂಡೇ ನಮ್ಮ ಮಗ ಆಯಿಷಾ ಎಂದು ಕರೆದಿದ್ದು. ಆದರೆ ನೀವು ಅದನ್ನು ಯಾವುದು  ನಂಬಲಿಲ್ಲ ಅಲ್ಲವೇ? ದೇವರ ದಯೆಯಿಂದ ಈಕೆ ನನಗೆ ಇಂದು ಸೂಪರ್ ಮಾರ್ಕೆಟಿನಲ್ಲಿ ಸಿಕ್ಕಿದಳು. ಹಾಗೆ ನಾನು ಇಲ್ಲಿ ಕರೆದುಕೊಂಡು ಬಂದೆ. ಈಗ ಸಾದ್ ಈಕೆಯನ್ನು ಆಯಿಷಾ ಎಂದು ಕರೆದರೆ ನೀವು ಒಪ್ಪಲೇಬೇಕು. "

ಸಮದ್ ಏನೊಂದೂ ಮಾತನಾಡದೆ ಸುಮ್ಮನಾದನು.

 ಮುನೀರಾ ಆಕೆಯನ್ನು ಕರೆದುಕೊಂಡು ಸೀದಾ  ಸಾದ್ ಕೋಣೆಗೆ ಹೋದಳು.

  ಸಾದ್ ತನ್ನ ಕೋಣೆಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ತಕ್ಷಣ ಮುನೀರಾ ಸಾದ್... ಎಂದು ಕರೆದಳು. ಆತ ಹಿಂದಿರುಗಿ ನೋಡಲಿಲ್ಲ.  ಸಾದ್... ಇಲ್ಲಿ ನೋಡು ಆಯಿಷಾ ಬಂದಿದ್ದಾಳೆ ಎಂದು ಮತ್ತೊಮ್ಮೆ ಹೇಳಿದರು..

ಆಗಲೇ ಸಾದ್ ಹಿಂದಿರುಗಿ ನೋಡಿದನು‌ ಅಲ್ಲಿ ನಿಂತಿದ್ದ ಸುರಯ್ಯಾಳನ್ನು ನೋಡಿ ಆತನ ಮುಖದಲ್ಲಿ ನಗೆಯೊಂದು ತಾನಾಗಿಯೇ ಮೂಡಿತು. ಆಕೆಯ ಬಳಿ ಬಂದವನೇ

 "  ಆಯಿಷಾ ಎಲ್ಲಿದ್ದೆ ನೀನು ? ಒಂದು ಚೂರಾದರೂ ನಿನಗೆ ನನ್ನ ನೆನಪಾಗಲಿಲ್ಲವೇ ? ಯಾಕೆ ಈ ರೀತಿ ನನಗೆ ದ್ರೋಹ ಮಾಡಿದೆ ಹೇಳು ? ಏನು ನಾನು ನಿನ್ನನ್ನು ಪ್ರೀತಿಸಿದ್ದು ಅದುವಾ ನಾನು ಮಾಡಿದ ತಪ್ಪು? ನಿನಗೆ ಹೀಗೆ ಮಾಡುವುದಕ್ಕಿಂತ ನನ್ನ ಸಾಯಿಸಬಹುದಿತ್ತಲ್ವಾ ?  ಎಂದು ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನೇ ಸುರಿಸಿದನು.

   "ಆಯ್ತು ಸಾದ್... ಕಂಟ್ರೋಲ್ ಮಾಡಿಕೊಳ್ಳು. ಈಗೇನು ಆಯಿಷಾ ಬಂದಳಲ್ಲಾ ಆಕೆ ಇನ್ನು ಎಲ್ಲೂ ಹೋಗಲ್ಲ .. ಇಲ್ಲೇ ಇರುತ್ತಾಳೆ . " ಮುನೀರಾ ಸಾದ್ ಮನಸ್ಸು ಸಮಾಧಾನವಾಗಲಿ ಎಂದು ಹೇಳಿದಳು.

ಆದರೆ ಆಕೆಯ ಮಾತು ಕೇಳಿ ಸುರಯ್ಯಾಳಿಗೆ ಗಾಬರಿಯಾಯಿತು. ಅಯ್ಯೋ ಮತ್ತೇನಾದರೂ ಸಮಸ್ಯೆ ತಲೆ ಮೇಲೆ ಎಳೆದುಕೊಂಡೆನೇ ಎಂದು ಯೋಚಿಸಿದಳು.

 "ಸರಿ ಸಾದ್... ನೀನು ಇಲ್ಲೇ ಕುಳಿತಿರು. ನಾನು ಆಯಿಷಾಳಿಗೆ ನಮ್ಮ ಮನೆ ಎಲ್ಲಾ ತೋರಿಸಿಕೊಂಡು ಬರುತ್ತೇನೆ" ಎಂದಾಗ ಸಾದ್ ಸರಿ ಎಂದು ತನ್ನ ತಲೆ ಅಲ್ಲಾಡಿಸಿದನು.

ಮುನೀರಾ ಹಿಂತಿರುಗಿ ನೋಡಿದಾಗ ಸಮದ್ ಅಲ್ಲೇ ನಿಂತಿರುವುದು ಕಾಣಿಸಿತು. ತಮ್ಮ ಮಾತುಕತೆ ಎಲ್ಲಾ ಆತ ಕೇಳಿಸಿದ್ದಾನೆ ಎಂದು ಆಕೆಗೆ ಅರಿವಾಯಿತು.

" ನನಗೆ ನಿನ್ನಲ್ಲಿ ಮಾತನಾಡಲು ಇದೆ . ಸ್ವಲ್ಪ ಬಾ..." ಎಂದು ತನ್ನ ಪತ್ನಿಯನ್ನು ಕರೆದನು.

 " ನೀವು ಹೋಗಿ ನಾನು ಬರುತ್ತೇನೆ. ಈಕೆಗೆ ಕುಡಿಯಲು ಏನೂ ಕೊಟ್ಟಿಲ್ಲ. ಸೈದಾಳಲ್ಲಿ ಏನಾದರೂ ಮಾಡಿ ಕೊಡಲು ಹೇಳುತ್ತೇನೆ "ಎಂದು ಅಡುಗೆ ಕೋಣೆಯತ್ತ ನಡೆದರು.

ಸೈದಾ ತನ್ನದೇ ಕೆಲಸದಲ್ಲಿ ನಿರತಳಾಗಿದ್ದಳು.

 " ಅರೇ ಸೈದಾ ಇಲ್ಲಿ ನೋಡು ಯಾರು ಬಂದಿದ್ದಾರೆ "ಎಂದು ಮುನೀರಾ ಹೇಳಿದಾಗ ಸೈದಾ ತಲೆಯೆತ್ತಿ ನೋಡಿದಳು."

ಅಪರಿಚಿತ ಹುಡುಗಿ ಆದುದರಿಂದ ಆಕೆಗೆ ಯಾರು ಎಂದು ತಿಳಿಯಲಿಲ್ಲ. ಆಕೆಯ ಮುಖಭಾವ ಗಮನಿಸಿದ ಮುನೀರಾ " ಇದು ಸುರಯ್ಯಾ... ನಾನು ಅಂದು ನಿನ್ನ ಬಳಿ ಹೇಳಲಿಲ್ಲವೇ ... ?  ಈಕೆಯನ್ನು ಹುಡುಕಲು ನೀನು ನನಗೆ ಅದೆಷ್ಟು ಸಹಾಯ ಮಾಡಿದ್ದಿ ಅಲ್ಲವೇ.. ಇಂದು ನೋಡು, ಆಕೆ ತಾನಾಗಿಯೇ ಸಿಕ್ಕಿದ್ದಾಳೆ" ಎಂದು ವ್ಯಂಗ್ಯ ನಗೆ ಬೀರಿದಳು.

  ಸೈದಾಳು ಕನಿಕರದಿಂದಲೇ ಸುರಯ್ಯಾಳನ್ನು ನೋಡಿದಳು. ಅಯ್ಯೋ ಈ ಹುಡುಗಿ ಯಾಕೆ ಇವರ ಕೈಗೆ ಸಿಕ್ಕಿ ಬಿದ್ದಳು ? ಇನ್ನು ಇವರು ಈಕೆಯನ್ನು ಬಿಡುವುದಿಲ್ಲ... ಅಯ್ಯೋ ಪಾಪ...! ಎಂದು ತನ್ನ ಮನಸ್ಸಿನಲ್ಲೇ ಯೋಚಿಸಿದಳು.

ಅಷ್ಟರಲ್ಲಿ ಸಮದ್ ಜೋರಾಗಿ ಮುನೀರಾ... ಮುನೀರಾ ... ಎಂದು ಕರೆಯುವುದು ಕೇಳಿಸಿತು.

ಆತನ ಕರೆಗೆ ಪ್ರತಿಕ್ರಿಯೆ ನೀಡಿದ ಮುನೀರಾ ಸುರಯ್ಯಾಳಲ್ಲಿ ಹಾಲ್ ಅಲ್ಲಿ ಕುಳಿತುಕೊಳ್ಳಲು ಹೇಳಿದಳು. ಮತ್ತು ಸೈದಾಳಲ್ಲಿ ಆಕೆಗೆ ಏನಾದರೂ ಜ್ಯೂಸ್ ಮಾಡಿ ಕೊಡು ಎಂದು ಹೇಳಿ ಸಮದ್ ಜೊತೆ ಮಾತನಾಡಲು ಹೋದಳು‌.

  ಮುನೀರಾ ಹೇಳಿದಂತೆ ಸುರಯ್ಯಾ ಹಾಲ್ ಅಲ್ಲಿ ಕುಳಿತುಕೊಂಡಳು. 

ಅಷ್ಟರಲ್ಲಿ ಸೈದಾ ಜ್ಯೂಸ್ ತಯಾರಿಸಿ ಕೊಂಡು ಅಲ್ಲಿಗೆ ಬಂದಳು. ಸೈದಾ ತಾನಾಗಿಯೇ ಸುರಯ್ಯಾಳನ್ನು ಮಾತಿಗೆ ಎಳೆದಳು. 

 " ನಾನು ಹೇಳುವುದನ್ನು ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡ. ನೀನು ಇಲ್ಲಿಗೆ ಬಂದಿದ್ದು ತಪ್ಪಾಯಿತು. ನೀನು ಯಾಕಾಗಿ ಇಲ್ಲಿಗೆ ಬಂದೆ. ಇವರು ಇನ್ನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ."  

" ಏನು ಹೇಳ್ತಾ ಇದ್ದೀರಾ ನೀವು? ನನಗೊಂದು ಅರ್ಥವಾಗುತ್ತಿಲ್ಲ."

" ಇವರ ಮಗ ಒಂದು ರೀತಿಯಲ್ಲಿ ಹುಚ್ಚನಾಗಿದ್ದಾನೆ. ಆತನ ಜೊತೆ...." ಎಂದು ಸೈದಾ ಹೇಳುವಷ್ಟರಲ್ಲಿ,

   ಹೇಳು ಸೈದಾ ಹೇಳು. ನಿನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿಬಿಡು. ಆದರೆ ಸುರಯ್ಯಾ ನೀನು ಈಕೆಯ ಮಾತು ಕೇಳಬೇಡ. ಇವರ ತಲೆಯಲ್ಲಿ ನನ್ನ ಮಗ ಸರಿಯಾಗಬಾರದು ಎಂದು ಇದೆ. ಅದಕ್ಕೆ ಹೀಗೆ ಎಲ್ಲಾ ನಿನ್ನ ತಲೆಯಲ್ಲಿ ಇಲ್ಲ ಸಲ್ಲದನ್ನು ಬಿತ್ತುತ್ತಾ ಇದ್ದಾಳೆ. ಯಾಕೆಂದರೆ ನಾಳೆ ನಮ್ಮ ಆಸ್ತಿಯನ್ನೆಲ್ಲಾ ಲಪಟಾಯಿಸ ಬಹುದಲ್ವಾ ಅದಕ್ಕೆ." ಎಂದು ಮುನೀರಾ ಅರ್ಧದಲ್ಲೇ ಹೇಳಿದಳು.

ಸುರಯ್ಯಾಳು ಕೂಡ ಅವರ ಮಾತನ್ನು ನಂಬಿದಂತೆ ಕಂಡಿತು. ಆಕೆ ನಂಬಿದ್ದನ್ನು ನೋಡಿ ಮುನೀರಾಳಿಗೆ ಒಳಗೊಳಗೆ ಖುಷಿಯಾಯಿತು.

 ಮಾತು ಮುಂದುವರಿಸಿದ ಮುನೀರಾ

" ಸುರಯ್ಯಾ... ಸಮದಿಗೆ ನಿನ್ನ ಬಳಿ ಮಾತನಾಡಲು ಇದೆಯಂತೆ. ಸ್ವಲ್ಪ ಬರುತ್ತೀಯಾ ? " ಎಂದು ಸುರಯ್ಯಾಳನ್ನು ಕರೆದುಕೊಂಡು ಹೋದಳು.

ತನ್ನ ಕೈಯಲ್ಲಿ ಕೊನೆಗೂ ಈ ಹುಡುಗಿಯನ್ನು ಬಚಾವ್ ಮಾಡಲು ಆಗಲಿಲ್ಲವಲ್ಲ ಅನ್ನುವ ಖೇದದೊಂದಿಗೆಯೇ ಸೈದಾ ಅಡಿಗೆ ಮನೆ ಹೊಕ್ಕಿದಳು.

    *********************
    ತರಗತಿಯೊಳಗೆ ಇದ್ದರೂ ಕೂಡ ಮುಸ್ತಾಕ್ ಗಮನವೆಲ್ಲಾ ಆ ಬೆಂಚ್ ಮೇಲೆಯೇ ಇತ್ತು. ಅರೇ ಎಂದಿಗೂ ರಜೆ ಮಾಡದ ಈ ಹುಡುಗಿ ಏಕೆ ಇಂದು ರಜೆ ಮಾಡಿದ್ದಾಳೆ? ಏನಾಗಿರಬಹುದು ? ಕೇಳುವುದಾದರೂ ಯಾರಲ್ಲಿ? ಆತನ ಮನವು ಯೋಚಿಸುತ್ತಲೇ ಇತ್ತು.

ಆಕೆಗೆ ಕಷ್ಟಕರವಾಗದಿರಲಿ ಎಂದು ಆತ ಆಕೆಯಲ್ಲಿ ಮಾತನಾಡುವುದನ್ನು ಬಿಟ್ಟರೂ ಆಕೆಯ ಬಗೆಗಿದ್ದ ಕಾಳಜಿ ,ಪ್ರೀತಿ ಹೋಗಿರಲಿಲ್ಲ. ಆಕೆ ತನ್ನಲ್ಲಿ ಮಾತನಾಡದಿದ್ದರೂ ಪರ್ವಾಗಿಲ್ಲ, ತಾನೊಮ್ಮೆ ಆಕೆಯನ್ನು ಕಂಡರೆ ಸಾಕು ಎಂದು ಆತನ ಮನಸ್ಸು ಹಂಬಲಿಸುತ್ತಿತ್ತು. ಆದರೆ ಇಂದು ಆಕೆ ಬಂದಿಲ್ಲ ಎನ್ನುವಾಗ ಏನೋ ಒಂದು ಬೇಜಾರು ಮನಸ್ಸಿಗೆ.

    ಒಂದು ದಿನ ಕಳೆಯಿತು.... ಎರಡು ದಿನಗಳು ಕಳೆದವು... ನೋಡುತ್ತಿದ್ದಂತೆಯೇ ಆರು ದಿನಗಳು ಕಳೆದು ಹೋದವು. ಆದರೆ ಸುರಯ್ಯಾಳ ಪತ್ತೆಯೇ ಇರಲಿಲ್ಲ.

  ಒಂದು ಕಡೆ ನಿಂತು ಮಂಕಾಗಿ ಯೋಚಿಸುತ್ತಾ ಇದ್ದ ಮುಸ್ತಾಕ್ ಬಳಿ ಸಹಾನ ಬಂದಳು. 

   " ಏನು ಭಗ್ನ ಪ್ರೇಮಿ... ನಿನ್ನ ಅನಾರ್ಕಲಿ ಇಲ್ಲವೆಂದು ತುಂಬಾ ದುಃಖ ಕಾಣಬೇಕು ಅಲ್ಲವಾ ? ಎಂದು ಒಮ್ಮೆ ಗಹಗಹಿಸಿ ನಗಾಡಳು ಪ್ರಾರಂಭಿಸಿದಳು.

ಮುಸ್ತಾಕ್ ತಿರುಗಿ ಏನೂ ಮಾತನಾಡಲಿಲ್ಲ.

ಆತ ಏನೂ ಮಾತನಾಡದೆ ಇರುವುದು ಸಹಾನಳಿಗೆ ಸಹಿಸಲು ಆಗಲಿಲ್ಲ. ಮತ್ತಷ್ಟು ಆತನಿಗೆ ಕಿರಿಕಿರಿ ಮಾಡಬೇಕು ಎಂದು ಎನಿಸಿದವಳೇ

   " ಆಕೆ ಇನ್ನು ಎಂದಿಗೂ ಬರುವುದಿಲ್ಲ. ಆಕೆಯನ್ನು ನಾನು ಇಲ್ಲಿಂದ ಕೊನೆಗೂ ಓಡಿಸಿದೆ ನೋಡು. " ಎಂದಳು.

   ಆಕೆಯ ಮಾತು ಕೇಳಿ ಮುಸ್ತಾಕ್ ದಿಗ್ಭ್ರಮೆಗೊಂಡನು.

ಕೋಪದಿಂದಲೇ ಆತ

" ಲೇ ನಿನಗೇನಾಗಿದೆ? ನಿನ್ನ ಯಾವುದೇ ವಿಷಯಕ್ಕೆ ನಾನು ಬರುತ್ತಿಲ್ಲ. ಆದರೆ ನೀನಾಗಿಯೇ ಏತಕೆ ಕಾಲು ಎಳೆದುಕೊಂಡು ಬರುತ್ತೀಯಾ ? ನಿನ್ನನ್ನು ಹೆದರಿ ಓಡುವಷ್ಟು ಪುಕ್ಕಲು ಅಲ್ಲ ಕಣೇ ನನ್ನ ಹೆಣ್ಣು. ನೀನು ಬರೇ ಹೆಸರಿಗೆ ಮಾತ್ರ ಸಹಾನ ಹೊರತು ಸಹನೆಯ ಒಂದು ಅಂಶವೂ ನಿನ್ನಲ್ಲಿ ಇಲ್ಲ. ಆದರೆ ಸುರಯ್ಯಾಳು ಹಾಗಲ್ಲ. ನೀನೇನು ಮಾಡಿದರೂ ಆಕೆ ಅದನ್ನು ಸಹಿಸುವಳು ಎಂದು ನನಗೆ ದೃಢವಾಗಿ ತಿಳಿದಿದೆ. ಮಾಡುವುದನ್ನೆಲ್ಲಾ ನಿನಗೆ ಮಾಡಿ ಆಗಿದೆಯಲ್ಲ. ಒಂದು ದಿನ ನೀನು ಎಲ್ಲದಕ್ಕಾಗಿಯೂ ಪರಿತಪಿಸುತ್ತಿ . ನೋಡುತ್ತಾ ಇರು ಎಂದವನೇ ಅಲ್ಲಿಂದ ಹಿಂದಿರುಗಿದನು.

ಹಿಂದಿರುಗಿ ನೋಡಬೇಕಾದರೆ ರಾಫಿಯ ಅಲ್ಲೇ ನಿಂತಿದ್ದಳು. ಆಕೆ ಮುಸ್ತಾಕಿನತ್ತ ನೋಡಿ " ಬಾ ನನ್ನ ಜೊತೆ " ಎಂದಳು.

ಮುಸ್ತಾಕ್ ಏನೊಂದೂ ಮಾತನಾಡದೆ ಆಕೆಯನ್ನು ಹಿಂಬಾಲಿಸಿದನು. ಆಕೆ ನೇರವಾಗಿ ಆತನನ್ನು ತಾಹಿರಾಳ ಬಳಿ ಕರೆದೊಯ್ದಳು. 

 "ಏನು ? ಯಾಕೆ ಇಲ್ಲಿ ಕರೆದುಕೊಂಡು ಬಂದೆ ಎಂದು ಹೇಳಬಹುದಾ?"
ಮುಸ್ತಾಕ್ ಆಕೆಯೊಂದಿಗೆ ಪ್ರಶ್ನಿಸಿದನು.

  " ಏನಿಲ್ಲಾ ಮುಸ್ತಾಕ್... ಸಹಾನಳ ಜೊತೆ ಸೇರಿ ನೀನು ನಾಟಕ ಆಡುತ್ತಾ ಇದ್ದೀಯಾ ಅಂತ ನಾನು ಅಂದುಕೊಂಡಿದ್ದೆ. ಆದರೆ ಸುರಯ್ಯಾ ಇಲ್ಲದ ಈ ದಿನಗಳಲ್ಲಿ ನಿನ್ನ ಚಡಪಡಿಕೆ ಕಂಡು ನೀನು ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತಾ ಇದ್ದೀಯಾ ಎಂದು ನನಗೆ ತಿಳಿಯಿತು. ಈಗಂತೂ ಸಹಾನಳೊಂದಿಗೆ ಆಕೆಗಾಗಿ ನೀನು ಮಾಡಿದ ಜಗಳ ನೋಡಿ ಮತ್ತಷ್ಟು ದೃಡವಾಯಿತು.

 " ಈಗ ದೃಢವಾಗಿ ಏನು ಪ್ರಯೋಜನ ರಾಫಿಯ? ನಡೆಯುವುದೆಲ್ಲ ನಡೆದು ಹೋಗಿದೆ. ಆಕೆಯ ತಲೆಯಲ್ಲಿ ನಾನೊಬ್ಬ ಮೋಸಗಾರ ಎಂದೇ ಇದೆ. ಅದೆಂದಿಗೂ ಬದಲಾಗದು."

 " ಇಲ್ಲಾ... ಮುಸ್ತಾಕ್. ನನ್ನಿಂದ ಏನು ತಪ್ಪು ಆಗಿದೆಯೋ ನಾನೇ ಅದನ್ನು ಸರಿಪಡಿಸುತ್ತೇನೆ.ನಿನಗೆ ಖಂಡಿತವಾಗಿಯೂ ನಿನ್ನ ಪ್ರೀತಿಯು ಒಲಿಯುತ್ತದೆ."

" ಇಲ್ಲ ರಾಫಿಯ, ಆಕೆ ನನ್ನನ್ನು ಪ್ರೀತಿಸಬೇಕು ಎಂದು ನಾನು ಹೇಳುವುದಿಲ್ಲ. ಆದರೆ ದ್ವೇಷಿಸಬಾರದು. ಮುಂದೊಂದು ದಿನ ಆಕೆ ನನ್ನ ಬಾಳ ಸಂಗಾತಿಯಾಗುವವಳಲ್ಲವೇ ? ಅದೆಲ್ಲಾ ಇರಲಿ, ಆಕೆ ಈಗ ಎಲ್ಲಿದ್ದಾಳೆ ? ಯಾಕೆ ಬರುತ್ತಿಲ್ಲ ? ಏನಾಗಿದೆ ? ಏನಾದರೂ ತಿಳಿದಿದೆಯಾ ? "

   "ಅದನ್ನೇ ಮಾತನಾಡಲುಎಂದು ನಿನ್ನನ್ನು ಇಲ್ಲಿ ಕರೆದದ್ದು. "

  " ಅಂದರೆ? "

" ಅಂದರೆ ಒಂದು ವಾರದ ಹಿಂದೆ ತಾಹಿರ ಅಗತ್ಯ ಸಾಮಗ್ರಿಗಳನ್ನು ಖರೀದಿಸಲೆಂದು ಸುರಯ್ಯಾಳನ್ನು ಕರೆದುಕೊಂಡು ಮಾಲ್ ಹೋಗಿದ್ದರು. ಅಲ್ಲಿ ಯಾವುದೋ ಒಂದು ಹೆಂಗಸನ್ನು ನೋಡಿ ಸುರಯ್ಯಾ, ನನಗೆ ಅವರ ಪರಿಚಯ ಇದೆ. ಅವರಲ್ಲಿ ಮಾತನಾಡಿ ಬರುತ್ತೇನೆ ಎಂದಳಂತೆ. ಹಾಗೆ ಮಾತನಾಡಿ ಬಂದ ನಂತರ ನಾನು ಅವರ ಮನೆಗೆ ಹೋಗುತ್ತೇನೆ ಎಂದು ಕೂಡ ಹೇಳಿದ್ದಳಂತೆ. ಹಾಗೆಯೇ ಅವಳು ಅವರ ಜೊತೆ ಹೋದುದನ್ನು ನೋಡಿದ ನಂತರ ತಾಹಿರ ಹಾಸ್ಟೆಲ್ ಹೋಗಿದ್ದಾಳೆ. ಸಂಜೆವರೆಗೂ ಸುರಯ್ಯಾಳ ಯಾವುದೇ ವಿಷಯವಿರಲಿಲ್ಲವಂತೆ. ಸಂಜೆ ಐದು ಗಂಟೆಗೆ ಬಂದವಳೇ ತನ್ನ ಅಲ್ಪ - ಸ್ವಲ್ಪ ಡ್ರೆಸ್ ಪ್ಯಾಕ್ ಮಾಡಿದಳಂತೆ. ತಾಹಿರ ಏನು ವಿಷಯ ಎಂದು ಕೇಳಿದಾಗ .. ಅರ್ಜೆಂಟ್ ವಿಷಯವೊಂದಿದೆ. ಹಾಗಾಗಿ ಮನೆಗೆ ಹೋಗುತ್ತಿದ್ದೇನೆ. ಸ್ವಲ್ಪ ದಿನಗಳಲ್ಲಿ ಬರುತ್ತೇನೆ ಎಂದಳಂತೆ. ಹಾಗೆ ಹೋದವಳ ಸುದ್ದಿ ಇದುವರೆಗೂ ಇಲ್ಲ."

   ರಾಫಿಯಾ ಹೇಳಿದ ಮಾತು ಕೇಳಿ ಮುಸ್ತಾಕಿಗೆ ಆಶ್ಚರ್ಯವಾಯಿತು.

   " ಹೌದಾ !!! ಆಕೆಗೆ ಸಿಕ್ಕಿದ ಹೆಂಗಸು ಯಾರು? ಸುರಯ್ಯಾ ಅವರ ಮನೆಗೆ ಹೋದ ನಂತರ ಏನಾಯಿತು ? ಅಲ್ಲಿಂದ ಬಂದ ಆಕೆ ಏಕೆ ತನ್ನ ಮನೆಗೆ ತೆರಳಿದಳು ? ಒಂದೂ ತಿಳಿಯುತ್ತಿಲ್ಲವಲ್ಲ ಎಂದು ಮುಸ್ತಾಕ್ ಅವರಿಬ್ಬರಲ್ಲೂ ಕೇಳಿದನು."

  " ಅದೇ ಒಂದು ಕೂಡ ತಿಳಿಯುತ್ತಿಲ್ಲ. ಆಕೆಯ ನಂಬರಿಗೆ ಕರೆ ಮಾಡಿದರೆ ಸ್ವಿಚ್ಡ್ ಆಫ್ ಬರುತ್ತಿದೆ. ಹಾಗೆ ನಿನ್ನಲ್ಲಿ ಹೇಳೋಣ ಎಂದು ತಾಹಿರ ಹೇಳಿದ್ದಳು. ಆದರೆ ನಾನೇ ಬೇಡ ಎಂದು ಹೇಳಿದ್ದೆ. ಆದರೆ ಯಾಕೋ ಇವತ್ತು ಹೇಳೋಣ ಎಂದೆನಿಸಿತು."

" ಈಗ ಮಾಡುವುದಾದರೂ ಹೇಗೆ? ಏನು ಮಾಡುವುದು? " ಎಂದು ಮುಸ್ತಾಕ್ ಯೋಚಿಸುತ್ತಿದ್ದನು.

  ಅಷ್ಟರಲ್ಲಿ ಮುಸ್ತಾಕ್ ಗೆಳೆಯ ಶಾಕಿರ್ ಅಲ್ಲಿಗೆ ಬಂದನು. ಬಂದವನೇ

" ಮುಸ್ತಾಕ್ ವಿಷಯ ಗೊತ್ತಾ? ಸುರಯ್ಯಾ ಕಾಲೇಜಿಗೆ ಬಂದಿದ್ದಾಳೆ. ಆಕೆ ಕಾರಿನಲ್ಲಿ ಬಂದಿದ್ದು ಆಕೆಯ ಜೊತೆ ಒಬ್ಬ ಗಂಡಸು ಹಾಗೂ ಒಬ್ಬ ಯುವಕ ಇದ್ದಾನೆ."

ಆತನ ಮಾತು ಕೇಳಿ ಮುಸ್ತಾಕಿಗೆ ಆಶ್ಚರ್ಯವಾಯಿತು.

 " ಏನು ಗಂಡಸು ಮತ್ತೆ ಯುವಕನಾ? ಯಾರ ಜೊತೆ ಬಂದಿದ್ದಾಳೆ ಆಕೆ ? ಏನಾಗಿದೆ ಅವಳಿಗೆ ? " ಎಂದು ಕೇಳಿ ಮುಸ್ತಾಕ್ ರಾಫಿಯಾಳತ್ತ ನೋಡಿದನು.

     " ಅದು ಆಕೆ ಊರಿನಿಂದ ಬಂದಿದ್ದು ಅಲ್ವಾ ? ಹಾಗೆ ತಂದೆ ಮತ್ತು ತಮ್ಮನ ಜೊತೆ ಬಂದಿರಬಹುದು. ತುಂಬಾ ದಿವಸಗಳು ಆಯ್ತಲ್ಲಾ. ನಾನು ಹೋಗಿ ಆಕೆಯನ್ನು ಮಾತನಾಡಿಸಿ ಕೊಂಡು ಬರುತ್ತೇನೆ. ಹಾಗೆ ನಿನ್ನ ವಿಚಾರವನ್ನು ಆಕೆಯಲ್ಲಿ ಹೇಳುತ್ತೇನೆ" ಎಂದು ರಾಫಿಯ ಎದ್ದು ಹೊರಡಲು ಅನುವಾದಳು.

ಆಕೆಯ ಮಾತು ಕೇಳಿ ಮುಸ್ತಾಕ್ ಮುಗುಳ್ನಕ್ಕು ಸರಿ ಎಂದು ತಲೆಯಾಡಿಸಿದನು.

     ನಿಲ್ಲು ರಾಫಿಯ ನಿನ್ನ ಜೊತೆ ನಾನೂ ಕೂಡ ಬರುತ್ತೇನೆ ಎಂದು ತಾಹಿರ ಆಕೆಯನ್ನ ಹಿಂಬಾಲಿಸಿದಳು.

  ಮುಸ್ತಾಕ್ ನೀನು ಬರುವುದಿಲ್ಲವೇ ? ನಿನ್ನ ಭಾವಿ ಮಾವ ಹಾಗೂ ಭಾಮೈದನನ್ನು ನೋಡುವುದಿಲ್ಲವೇ? ಎಂದು ರಾಫಿಯ ತಮಾಷೆ ಮಾಡಿದಳು.

" ಇಲ್ಲ ರಾಫಿಯ, ನಾನು ದೂರದಿಂದಲೇ ನೋಡುತ್ತೇನೆ. ಈಗ ವಾತಾವರಣ ತಿಳಿಯಾಗಿ ಇಲ್ಲವಲ್ಲ. ಎಲ್ಲಾ ತಿಳಿಯಾದ ಮೇಲೆ ಮಾತನಾಡುತ್ತೇನೆ. " ಎಂದು ಮುಸ್ತಾಕ್ ಪ್ರತಿ ನುಡಿದನು.

 ಸರಿ ಎಂದು ಹೇಳುತ್ತಾ ಅವರು ಸುರಯ್ಯಾಳ ಬಳಿ ತೆರಳಿದರು.

ಸುರಯ್ಯಾ ಕಾರ್ ಬಳಿ ನಿಂತಿದ್ದಳು. ಆಕೆಯ ಬಳಿ ನಿಂತಿದ್ದ ಯುವಕನು ಆಕೆಯನ್ನು ಒಮ್ಮೆ ಆಲಿಂಗಿಸಿ ಮತ್ತೆ ಕಾರಿನಲ್ಲಿ ಹೋಗಿ ಕುಳಿತನು. 

ಎದುರಿನಲ್ಲಿ ಇದ್ದ ಗಂಡಸನ್ನು ನೋಡಿದ ತಾಹಿರ
 " ರಾಫಿಯಾ , ಅದು ಸುರಯ್ಯಾಳ ತಂದೆ ಅಲ್ಲ. ಅವರನ್ನು ನಾನು ನೋಡಿದ್ದೇನೆ. ಇದು ಯಾರಾಗಿರಬಹುದು ? " ಎಂದು ಕೇಳಿದಳು.

  ಆಕೆಯ ಮಾತು ಕೇಳಿ ರಾಫಿಯಾಳಿಗೆ ಅಚ್ಚರಿ ಆಯಿತು. ಮುಸ್ತಾಕ್ ಕೂಡ ದೂರದಿಂದ ಇದೆಲ್ಲವನ್ನೂ ಗಮನಿಸುತ್ತಿದ್ದನು. ಅಷ್ಟರಲ್ಲಿ ಕಾರ್ ಅಲ್ಲಿಂದ ಹೊರಟಿತು. ಅಲ್ಲಿಂದಲೇ ತನ್ನ ಗೆಳತಿಯರತ್ತ ನೋಡಿದ ಸುರಯ್ಯಾ ಕೈ ಬೀಸಿದಳು. ತಾನು ನಿಂತಲ್ಲಿಂದ ನೇರವಾಗಿ ತನ್ನ ಗೆಳತಿಯರು ಇದ್ದತ್ತ ಬಂದಳು.

   " ಏನೇ ಸುರಯ್ಯಾ ? ಒಂದು ವಾರದಿಂದ ಸುದ್ದಿಯೇ ಇಲ್ಲ. ಎಲ್ಲಿದ್ದೆ ನೀನು ? ಅದು ಯಾರು ನಿನ್ನ ಜೊತೆ ಬಂದಿದ್ದು ? " ರಾಫಿಯ ಒಂದೇ ಸಮನೆ ಕೇಳಿದಳು.

   " ಅದೂ ನನ್ನ ಗಂಡ ಮತ್ತು ಅವರ ತಂದೆ " ಎಂದು ಸುರಯ್ಯಾ ಉತ್ತರ ನೀಡಿದಳು.

 ಆಕೆಯ ಮಾತು ಕೇಳಿ ಅವರಿಬ್ಬರೂ ಅಚ್ಚರಿಯಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.

 " ಏನು ಹೇಳುತ್ತಾ ಇದ್ದೀಯಾ ಸುರಯ್ಯಾ ನೀನು ? ನಿನ್ನ ಮದುವೆ ಯಾವಾಗ ನಡೆಯಿತು ? ನಮಗೆ ಏನೂ ವಿಷಯವೇ ತಿಳಿಸಿಲ್ಲ ನೀನು? ಸುಳ್ಳು ಹೇಳುತ್ತಾ ಇದ್ದೀಯಾ ಹೇಗೆ ? ನಮಗೆ ನಂಬೋದಿಕ್ಕೆ ಆಗುತ್ತಾ ಇಲ್ಲ. ಸುಳ್ಳು ತಾನೆ ಇದು? ಹೇಳು ಸುರಯ್ಯಾ? "

ಎಂದು ರಾಫಿಯ ಹೇಳಿದಾಗ ಸುರಯ್ಯಾ ಮದರಂಗಿಯಿಂದ ಚಿತ್ತಾರ ಮೂಡಿಸಿದ್ದ ತನ್ನ ಕೈಗಳನ್ನು ತೋರಿಸಿದಳು.

ಅದನ್ನು ನೋಡಿದ ರಾಫಿಯ ಹಾಗೂ ತಾಹಿರಾಳಿಗೆ ಮತ್ತಷ್ಟು ಗೊಂದಲವಾಯಿತು.

ಅವರ ಮುಖಭಾವವನ್ನು ನೋಡಿದ ಸುರಯ್ಯಾಳಿಗೆ ಅವರು ಏನು ಯೋಚಿಸುತ್ತಾ ಇದ್ದಾರೆ ಎಂದು ಅರ್ಥವಾಯಿತು.

" ಹೌದು ಕಣ್ರೇ, ನನ್ನ ಮದುವೆ ಸಾದ್ ಎಂಬ ಹುಡುಗನ ಜೊತೆ ಮೂರು ದಿವಸದ ಹಿಂದೆ ನಡೆಯಿತು. ಅದೇ ತಾಹಿರ, ಅಂದು ಸೂಪರ್ ಮಾರ್ಕೆಟ್ ಅಲ್ಲಿ ಸಿಕ್ಕಿದ್ದರಲ್ಲಾ ಆ ಮಹಿಳೆಯ ಮಗನ ಜೊತೆ. ತುಂಬಾ ತರಾತುರಿಯಲ್ಲಿ ನಡೆದ ಕಾರಣ ನಿಮ್ಮನ್ನು ಯಾರನ್ನೂ ಕರೆಯಲಾಗಲಿಲ್ಲ. ಅಲ್ಲದೆ ತುಂಬಾ ಸರಳವಾಗಿ ಮಾತ್ರ ಮಾಡಿರೋದು."

 " ಅದೇ ಸುರಯ್ಯಾ ನಮಗೂ ಆಶ್ಚರ್ಯ ಆಗುತ್ತಾ ಇರುವುದು. ಅಷ್ಟೊಂದು ತರಾತುರಿಯಲ್ಲಿ ಮದುವೆಯಾಗುವುದು ಏನಿತ್ತು? "

" ಅದರ ಹಿಂದೆ ದೊಡ್ಡ ಕಥೆಯೇ ಇದೆ. ಸಮಯ ಸಿಕ್ಕಿದಾಗ ನಿಮ್ಮಲ್ಲಿ ಹೇಳುತ್ತೇನೆ. ಈಗ ನಾವು ಕ್ಲಾಸಿಗೆ ಹೋಗೋಣ " ಎಂದು ಅವರನ್ನು ಒಟ್ಟಿಗೆ ಕರೆದುಕೊಂಡು ಮುಂದೆ ನಡೆದಳು.

 ಅವರು ತುಂಬಾ ಹೊತ್ತು ಮಾತನಾಡುತ್ತಾ ಇದ್ದುದನ್ನು ನೋಡಿದ ಮುಸ್ತಾಕ್ ಇವರು ತನ್ನದೇ ವಿಚಾರ ಮಾತನಾಡುತ್ತಿದ್ದಾರೆ ಸುರಯ್ಯಾಳ ಬಳಿ ಎಂದುಕೊಂಡನು. ತಾನೇ ಇನ್ನು ಧೈರ್ಯ ಮಾಡಿ ಸುರಯ್ಯಾಳಲ್ಲಿ ಮಾತನಾಡಬೇಕು ಎಂದು ಎನಿಸಿ ಹಿಂದಿನಿಂದ ಹೋಗಿ ಸುರಯ್ಯಾ....... ಎಂದು ಕರೆದನು.

ತನ್ನನ್ನು ಯಾರು ಕರೆದಿದ್ದು ಎಂದು ನೋಡಲು ಸುರಯ್ಯಾ ಹಿಂದಿರುಗಿದಳು.

  "ಸುರಯ್ಯಾ.. ನಿನಗೆ ನನ್ನ ವಿಚಾರ ರಾಫಿಯ ಹೇಳಿದಳು ತಾನೇ? ಈಗಲಾದರೂ ನಿನಗೆ ನಂಬಿಕೆ ಬಂತಾ ? ನಾನೆಂದೂ ನಿನಗೆ ಮೋಸ ಮಾಡಬೇಕು ಎಂದು ಬಯಸಿದವನಲ್ಲ‌. ಬೇಡ ಬೇಡವೆಂದರೂ ಈ ಮನಸ್ಸು ಕೇಳುತ್ತಿಲ್ಲ.... ಎನ್ನುತ್ತಿದ್ದವನ ಮಾತನ್ನು ಅರ್ಧದಲ್ಲೇ ತುಂಡರಿಸಿದಳು ರಾಫಿಯ.

" ಮುಸ್ತಾಕ್ ಸುರಯ್ಯಾಳಿಗೆ ಮದುವೆಯಾಗಿದೆಯಂತೆ. ತುಂಬಾ ಅರ್ಜೆಂಟ್ ಅಲ್ಲಿ ಆದ ಕಾರಣ ಯಾರನ್ನೂ ಕರೆಯಲಾಗಲಿಲ್ಲವಂತೆ."

   ರಾಫಿಯಾಳ ಮಾತು ಕೇಳಿದ ಮುಸ್ತಾಕಿಗೆ ಆಘಾತವಾದಂತಾಯಿತು. ಆತನಿಗೆ ಒಮ್ಮೆಲೇ ಆ ಶಾಕ್ನಿಂದ ಹೊರ ಬರಲು ಆಗಲೇ ಇಲ್ಲ. ಆತ ತಾನು ಕೇಳಿದ್ದು ನಿಜ ಆಗಿರಲಿಕ್ಕಿಲ್ಲ ಎಂದು ಮತ್ತೊಮ್ಮೆ ಸುರಯ್ಯಾಳತ್ತ ನೋಡಿದವನೇ

  " ಹೌದಾ ಸುರಯ್ಯಾ ? ಈಕೆ ಹೇಳುತ್ತಿರೋದು ನಿಜಾನ ? ನಿನಗೆ ಮದುವೆ ಆಗಿದೆಯಾ? ಇದು ಸುಳ್ಳು ತಾನೆ? ಈಕೆ ನನ್ನನ್ನು ಆಟವಾಡಿಸಲು ಈ ಸುಳ್ಳನ್ನು ಹೇಳುತ್ತಿದ್ದಾಳೆ ಅಲ್ವಾ?"ಎಂದು ಕೇಳಿದನು.

  " ಇಲ್ಲಾ ಮುಸ್ತಾಕ್. ರಾಫಿಯ ಹೇಳುತ್ತಿರುವುದು ಎಲ್ಲಾ ನಿಜ. ನನಗೆ ಮದುವೆಯಾಗಿದೆ. ಮುಸ್ತಾಕ್ ನೀನು ಮೋಸಗಾರ ಎಂದು ನಾನು ಭಾವಿಸುವುದಿಲ್ಲ. ನೀನು ಒಳ್ಳೆಯ ಹುಡುಗನೇ. ಪರಿಸ್ಥಿತಿ ನಿನ್ನನ್ನು ಆ ರೀತಿ ಮಾಡಿಸಿತು. ಅದನ್ನು ನಾನು ಮರೆತಿದ್ದೇನೆ. ಇದನ್ನೆಲ್ಲ ಬಿಟ್ಟು ಕಲಿಕೆಯತ್ತ ಗಮನ ಹರಿಸು. ಮುಂದೊಂದು ದಿನ ಒಳ್ಳೆಯ ಹುಡುಗಿ ನಿನ್ನ ಬಾಳಸಂಗಾತಿ ಆಗುವಳು.ಎಂದು ಹೇಳಿ ಸುರಯ್ಯಾ ಮುಂದೆ ನಡೆದಳು.

  ಆಕೆಯ ಮಾತು ಕೇಳಿದ ಮುಸ್ತಾಕಿಗೆ ಒಂದು ಗಳಿಗೆ ಅದೇನು ಆಯಿತು ಎಂದು ಗೊತ್ತಿಲ್ಲ. ನೇರವಾಗಿ ವಾಶ್ ರೂಮಿಗೆ ಹೋಗಿ ತನ್ನ ಮನಸ್ಸಿನ ದುಃಖವೆಲ್ಲಾ ಹೋಗುವ ತನಕ ಕೂಗಿದನು. ಯಾಕೋ ಮನಸ್ಸು ತುಂಬಾ ಭಾರ ಎಂದೆನಿಸುತ್ತಿತ್ತು.

   "ಅರೇ ಏನಾಗಿದೆ ನನಗೆ ? ಯಾಕೆ ಈ ರೀತಿ ಆಗುತ್ತಿದೆ. ನನಗೆ ಮೊದಲೆಂದೂ ಆ ಭಾವನೆ ಎಂದಿಗೂ ಬಂದಿರಲಿಲ್ಲ. ಕೆಲವು ಹುಡುಗಿಯರನ್ನು ನಾನು ಸುಮ್ಮನೆ ಚೇಡಿಸಿದ್ದೆ. ಎಂತಹವರೂ ನನ್ನ ಅಂದಕ್ಕೆ ಮರುಳಾಗುತ್ತಾರೆ ಎಂದು ಸಿಕ್ಕ ಸಿಕ್ಕ ಹುಡುಗಿಯರನ್ನೆಲ್ಲಾ ನನ್ನ ಬಲೆಗೆ ಬೀಳುವಂತೆ ಮಾಡಿದ್ದೆ. ಆಗ ನಾನು ಅವರಿಗೆ ಕೈ ಕೊಟ್ಟಾಗ ಅವರಿಗೂ ಇಂತಹ ನೋವು ಆಗಿರಬಹುದಲ್ಲವೇ. ನಾನೆಂದೂ ಅದರ ಬಗ್ಗೆ ತಲೆಕೆಡಿಸಿಕೊಂಡವನೇ ಅಲ್ಲ. ಇಂದು ನನಗೇ ಆಗುವಾಗ ನನಗೆ ಅದರ ಬೆಲೆ ತಿಳಿಯುತ್ತಿದೆ. ಹೇಗೆ ಮರೆಯಲಿ ನಾನು ಅವಳನ್ನು? ಅವಳನ್ನು ನನ್ನ ಬಾಳ ಸಂಗಾತಿಯಾಗಿ ಮಾಡಿ ಜೀವನ ಪೂರ್ತಿ ಆಕೆಯನ್ನು ಚೆನ್ನಾಗಿ ನೋಡಬೇಕು ಎಂದು ಕನಸು ಕಂಡವನಲ್ಲವೇ ನಾನು. ಆದರೆ ನನ್ನ ಕನಸೆಲ್ಲವೂ ಕಮರಿ ಹೋಗಲಿಲ್ಲವೇ ? ಯಾಕೆ ದೇವರೇ ನನಗಿಂತಹ ಶಿಕ್ಷೆ ನೀಡಿದೆ. ಇತರರ ಬಾಳಿನ ಬೆಲೆ ತಿಳಿಯದೆ ಅವರೊಂದಿಗೆ ಚೆಲ್ಲಾಟವಾಡಿದಕ್ಕಾಗಿಯಾ ? ಎಂದೆಲ್ಲಾ ಆತನ ಮನಸ್ಸು ಯೋಚಿಸುತ್ತಲೇ ಇತ್ತು." ಕೂಗಿ ಕೂಗಿ ತನ್ನ ಮನಸ್ಸಿನ ಭಾರವೆಲ್ಲ ಕಡಿಮೆ ಆಗಿದೆ ಎಂದ ಮೇಲೆ ಅಲ್ಲಿಂದ ಎದ್ದು ತನ್ನ ಕ್ಲಾಸ್ ರೂಮಿಗೆ ಬಂದು ಕುಳಿತನು.

ಸುರಯ್ಯಾಳಿಗೆ ಮದುವೆ ಆಗಿದೆ ಅನ್ನೋ ವಿಚಾರ ಇಡೀ ತರಗತಿಯೊಳಗೆ ಕಾಲ್ಗಿಚ್ಚಿನಂತೆ ಹರಡಿತು. ವಿಷಯ ಸಹಾನಳ ಕಿವಿಗೂ ಬಿದ್ದಿತು.

ಏನು ಈ ಕುರೂಪಿಗೆ ಇಷ್ಟು ಬೇಗ ಮದುವೆ ಆಯಿತಾ? ಯಾವ ತಲೆಕೆಟ್ಟವನು ಆಕೆಯನ್ನು ಮದುವೆಯಾದದ್ದು? ಅವನಿಗೆ ಯಾವ ಹೆಣ್ಣು ಬೇರೆ ಸಿಗಲೇ ಇಲ್ವಾ ? ಅದೂ ಅಲ್ಲದೇ ಕಾರಿನಲ್ಲಿ ಬಂದಿದ್ದು ಎನ್ನುತ್ತಾರೆ. ಹಾಗಿದ್ದರೆ ಶ್ರೀಮಂತನಾಗಿರಬಹುದಾ? ಏನಾದರೂ ಇರಲಿ ಸಂಜೆ ಅವಳನ್ನು ಕರೆದುಕೊಂಡು ಹೋಗಲು ಬಂದರೂ ಬರಬಹುದು. ಆಗ ನಾನು ನೋಡಿಯೆ ಸಿದ್ಧ ಎಂದು ಸಹಾನಳು ತನ್ನಷ್ಟಕ್ಕೇ ಯೋಚಿಸುತ್ತಾ ಇದ್ದಳು.

ಆಕೆಗೆ ಅಂದಿನ ದಿನ ದೂಡುವುದು ಕಷ್ಟಕರವಾಯಿತು. ಸಂಜೆಯಾಗುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದಳು.

     ಆ ದಿನದ ಕ್ಲಾಸ್ ಬಿಟ್ಟ ಮೇಲೆ ಸುರಯ್ಯಾ ತನ್ನ ಗೆಳತಿಯರಿಗೆ ಹೇಳಿ ಹೊರಗೆ ಹೋಗಲು ಅನುವಾದಳು.

 " ಹೇಯ್ ಸುರಯ್ಯಾ, ನಿನ್ನ ಗಂಡನನ್ನು ನಮಗೆ ಪರಿಚಯ ಮಾಡಿಸುವುದಿಲ್ಲವೇ " ಎಂದು ರಾಫಿಯ ಕೇಳಿದಳು.

   " ಇಲ್ಲ ರಾಫಿಯ. ಸಮಯ ಸಂದರ್ಭ ಬಂದಾಗ ನಾನೇ ಪರಿಚಯ ಮಾಡಿಸಿ ಕೊಡುತ್ತೇನೆ. ಅದುವರೆಗೂ ದಯವಿಟ್ಟು ಕೇಳಬೇಡಿ"ಎಂದು ಸುರಯ್ಯಾ ಹೇಳಿದಾಗ ರಾಫಿಯ ಆಗಬಹುದು ಎಂದು ತಲೆ ಅಲ್ಲಾಡಿಸಿದಳು.

ಆದರೂ ತಾಹಿರ ಹಾಗೂ ರಾಫಿಯಾಳಿಗೆ ಇದೆಲ್ಲವೂ ಒಂದು ಒಗಟಿನಂತೆ ಇದೆಯಲ್ಲಾ ಎಂದು ಎನಿಸುತ್ತಿತ್ತು.

   ಸಹಾನ ಸುರಯ್ಯಾ ಹೋದತ್ತಲೆ ಮೆಲ್ಲನೆ ದೂರದಿಂದ ಇಣುಕಿ ನೋಡುತಲಿದ್ದಳು. ಅಷ್ಟರಲ್ಲಿ ಕಾರೊಂದು ಆಕೆಯ ಬಳಿ ಬಂದು ನಿಂತಿತು. ಅದರಿಂದ ಹೊರಗಿಳಿದ ವ್ಯಕ್ತಿಯನ್ನು ನೋಡಿ ಸಹಾನಳಿಗೆ ಆಶ್ಚರ್ಯವಾಯಿತು. ಅವಳಿಗೆ ಅರಿವಿಲ್ಲದಂತೆಯೇ ಆಕೆಯ ಬಾಯಿಯಿಂದ "ಸಾದ್......." ಎಂಬ ಪದವು ಹೊರಗೆ ಬಿತ್ತು.

ಅಂದರೆ ಸಾದ್ ಸುರಯ್ಯಾಳ ಗಂಡನಾ? ಇದು ಹೇಗೆ ಸಾಧ್ಯ? ಆತ ಹೇಗೆ ಸುರಯ್ಯಾಳನ್ನು ವರಿಸಿದ? ನಾನು ಆತನನ್ನು ಸಂಪೂರ್ಣವಾಗಿ ಹುಚ್ಚನಂತೆ ಆಗುವ ಹಾಗೆ ಮಾಡಿರಲಿಲ್ಲವೇ? ಹಾಗಿದ್ದಲ್ಲಿ ಈಗ ಈತ ಸರಿಯಾದನೇ? ಇಂಪಾಸಿಬಲ್!! ಆತನ ಮನಸ್ಸಿನಲ್ಲಿ ನೆಲೆಯೂರಿದ ಆಯಿಷಾಳನ್ನು ಮರೆಯಲು ಆತನಿಂದ ಸಾಧ್ಯವಿಲ್ಲ. ಇನ್ನು ಹೇಗೆ ಸುರಯ್ಯಾಳನ್ನು ಮದುವೆಯಾದ? ಕಂಡುಹಿಡಿಯಲೇಬೇಕು. ಅದಕ್ಕಿಂತಲೂ ಮೊದಲು ಈ ವಿಚಾರವನ್ನು ಅಣ್ಣನ ಬಳಿ ಹೇಳಬೇಕು ಎಂದು ತನ್ನ ಮೊಬೈಲ್ ಎತ್ತಿ ಯಾವುದೋ ನಂಬರ್ ಡಯಲ್‌ ಮಾಡಿದಳು.

   ಆ ಕಡೆಯಿಂದ ಹಲೋ ಅನ್ನೋ ಶಬ್ದ ಕೇಳಿ ಬಂದಾಗ 

  " ಹ್ಞಾಂ ಅಣ್ಣಾ! ಆ ಹುಚ್ಚ ಸಾದ್ ಮದುವೆ ಮಾಡಿಕೊಂಡಿದ್ದಾನೆ. ಆತ ಸರಿಯಾದನೋ ಏನೋ ಎಂದೆನಿಸುತ್ತಿದೆ." ಎಂದಳು.

   "ವಾಟ್? ಏನು ಹೇಳ್ತಾ ಇದ್ದೀಯಾ ಸಹಾನ ನೀನು ? ನೀನು ಅಲ್ವಾ ಹೇಳಿದ್ದು ಆತ ಸಂಪೂರ್ಣ ಹುಚ್ಚನಾಗಿದ್ದಾನೆ ಎಂದು? ಇನ್ನು ಆತ ಮಲಗಿದಲ್ಲಿಂದ ಮೇಲೆ ಏಳುವ ಪ್ರಶ್ನೆಯೇ ಇಲ್ಲವೆಂದು? ಮತ್ತೆ ಇದು ಹೇಗೆ ಸಾಧ್ಯ? ಜೀವನದಲ್ಲಿ ಮೊದಲ ಬಾರಿ ನಿನಗೊಂದು ಕೆಲಸ ಕೊಟ್ಟಿದ್ದು. ಅದಕ್ಕೆ ಬೇಕಾದ ಹಣವನ್ನು ನಾನು ಕೊಡಲಿಲ್ಲವೇ? ಆದರೆ ನೀನು ಅದನ್ನು ಸರಿಯಾಗಿ ನಿಭಾಯಿಸಲಿಲ್ಲವಿಲ್ಲ. ಹೋಗಿ ಹೋಗಿ ನಿನ್ನನ್ನು ನಂಬಿದ್ದೇನಲ್ಲ?.. ಎಂದು ಸಿಟ್ಟಿನಿಂದ ಹೇಳುತ್ತಲೇ ಆ ಕಡೆ ಕರೆ ಕಟ್ ಆಯಿತು.

ತನ್ನ ಅಣ್ಣ ಸಿಟ್ಟಿನಿಂದ ಕರೆ ಕಟ್ ಮಾಡಿದುದನ್ನು ನೋಡಿ ಸಹಾನ ಮತ್ತೆ ಕರೆ ಮಾಡಿದಳು.

ಆತನ ಕೋಪ ಇನ್ನೂ ತಣ್ಣಗಾಗಿರಲಿಲ್ಲ. ಕೋಪದಿಂದಲೇ ಏನು ಮತ್ತೆ ಕರೆ ಮಾಡಿದ್ದು ? ಎಂದು ಕೇಳಿದನು.

  "ನೀನು ನನ್ನಲ್ಲಿ ಯಾಕೆ ಕೋಪ ಮಾಡುತ್ತಾ ಇದ್ದೀಯಾ? ನಾನು ಮಾಡುವುದನ್ನು ನಾನು ಮಾಡಿದ್ದೇನೆ. ನಿನಗೆ ತಿಳಿದೇ ಇದೆ. ಆ ಸಾದ್ ತಂದೆ ಸಮದ್ ಅಲ್ಲಿ ಇಲ್ಲಿ ಮಗನಿಗೋಸ್ಕರ ಅಲೆದಾಡುವುದನ್ನು ನೀನು ನೋಡಿದ್ದಿ ಅಲ್ವಾ? ಆತ ಸಂಪೂರ್ಣ ಮಾನಸಿಕ ಖಿನ್ನತೆಗೆ ಒಳಗಾದ ಮೇಲೆ ತಾನೇ ನಾನು ಆತನ ಸಂಪರ್ಕ ಬಿಟ್ಟಿದ್ದು. ಆದರೆ ಈಗ ಆತ ಮದುವೆ ಆದದ್ದು ಆದರೂ ಏತಕೆ ಎನ್ನುವುದೇ ಪ್ರಶ್ನೆ! ಅದೂ ಕೂಡ ಆತನ ಪತ್ನಿ ಯಾರು ಗೊತ್ತಾ? ಆ ಸುರಯ್ಯಾ ಇದ್ದಾಳಲ್ಲ ಅವಳು. ಯಾಕೆ ಸಾದ್ ಅವಳನ್ನು ಮದುವೆಯಾದ? ಅವರಿಗೆ ಎಲ್ಲಿ ಅವಳ ಪರಿಚಯವಾಯಿತು? ಅವಳನ್ನು ಮದುವೆಯಾಗಲು ಸಾದ್ ಒಪ್ಪಿದಾದರೂ ಹೇಗೆ? ಇದೇ ನನಗೊಂದು ಸಂಶಯ."ಎಂದು ಸಹಾನ ಹೇಳಿದಳು

ಅರೇ ಅದಕ್ಕೆ ಯಾಕೆ ನೀನು ಇಷ್ಟು ಯೋಚಿಸುತ್ತಾ ಇದ್ದೀಯಾ? ಆ ಹುಚ್ಚನಿಗೆ ಮತ್ತೆ ಯಾರು ಹೆಣ್ಣು ಕೊಡುತ್ತಾರೆ? ಸುರಯ್ಯಾಳಾದರೋ ಯಾವುದೋ ರೋಗ ಇರುವವಳು. ಆಕೆಯನ್ನು ಯಾವ ಹುಡುಗನೂ ಮದುವೆಯಾಗಲು ಒಪ್ಪುವುದಿಲ್ಲ ಎಂದು ಅವಳ ತಂದೆ- ತಾಯಿಗೆ ತಿಳಿದಿದೆ. ಅದಕ್ಕೋಸ್ಕರ ಅವನಿಗೆ ಮದುವೆ ಮಾಡಿದ್ದಾರೆ. ಆದರೂ ಯಾವುದಕ್ಕೂ ನಾನು ಆತನ ಮೇಲೆ ಮತ್ತೊಂದು ಕಣ್ಣು ಇಟ್ಟಿರುತ್ತೇನೆ. ಮತ್ತೊಂದು ವಿಷಯ ಸರಿಯಾಗಿ ಕೇಳಿಸಿಕೊಳ್ಳು, ನೀನು ಆ ಸಾದ್ ಕಣ್ಣ ಮುಂದೆ ಬೀಳಬೇಡ. ನಿನ್ನ ಬಂಡವಾಳ ಸಂಪೂರ್ಣ ಬಯಲಾಗಬಹುದು. ಹಾಗಾಗಿ ಜಾಗ್ರತೆ ವಹಿಸಿಕೊಳ್ಳು ಎಂದು ಕರೆ ಕಟ್ ಮಾಡಿದನು

ಆತನ ಕರೆ ಕಟ್ ಆದ ಬಳಿಕ ಸಹಾನ ತುಂಬಾ ಹೊತ್ತು ಏನೋ ಯೋಚಿಸಿದಳು.

  ಸುರಯ್ಯಾ, ನೀನು ಮದುವೆಯಾಗಿರುವುದು ಯಾರನ್ನು ಎಂದು ತಿಳಿದಿದೆಯಾ ನಿನಗೆ? ನನ್ನ ನೆನಪಿನಲ್ಲಿ ಕಾಲ ಕಳೆಯುತ್ತಿರುವ ಒಬ್ಬ ವ್ಯಕ್ತಿಯೊಂದಿಗೆ. ಒಂದು ವೇಳೆ ನಾನು ಆತನ ಮುಂದೆ ಮತ್ತೊಮ್ಮೆ ಕಾಣಿಸಿಕೊಂಡೆ ಎಂದಿಟ್ಟು ಕೊಳ್ಳು . ನಿನ್ನ ಪರಿಸ್ಥಿತಿ ಏನಾಗಬಹುದು ಎಂದು ನೀನು ಯೋಚಿಸಿದ್ದೀಯಾ ? ಆತ ಖಂಡಿತವಾಗಿಯೂ ನಿನಗೆ ಡೈವೋರ್ಸ್ ನೀಡುತ್ತಾನೆ. ಯಾಕೆಂದರೆ ಆತ ಪ್ರೀತಿಸುತ್ತಿರುವುದು ಈ ಆಯಿಷಾಳನ್ನು ಹೊರತು ನಿನ್ನನ್ನು ಅಲ್ಲ. ಆಗ ನಿನ್ನ ಬದುಕು ಹಾಳಾಗುವುದನ್ನು ನಾನು ಕಣ್ಣಾರೆ ಕಾಣಬೇಕು. ನೀನೇ ನನ್ನನ್ನು ಅವನಿಂದ ದೂರ ಮಾಡಿದ್ದು ಎಂದು ಕಣ್ಣೀರು ಇಟ್ಟು ಸಾದ್ ಜೊತೆ ಹೇಳಬೇಕು. ಆಗ ಆತ ನಿನ್ನ ಜುಟ್ಟನ್ನು ಎಳೆದು ತನ್ನ ಮನೆಯಿಂದ ಹೊರಗೆ ಹಾಕಿಲ್ಲದಿದ್ದಲ್ಲಿ ನನ್ನ ಹೆಸರನ್ನು ಬದಲಾಯಿಸುತ್ತೇನೆ ಎಂದು ಎನಿಸುವಾಗಲೇ ಆಕೆಯ ಮುಖದಲ್ಲಿ ವ್ಯಂಗ್ಯ ನಗುವೊಂದು ಮೂಡಿತು.

ಆದರೆ ಇಷ್ಟು ಬೇಗ ನಾನು ಮಾಡುವುದಿಲ್ಲ. ಹಂತ ಹಂತವಾಗಿ ಮಾಡಬೇಕು ಎಂದು ಆಲೋಚಿಸುತ್ತಾ ತನ್ನ ಮನೆಯತ್ತ ನಡೆದಳು.

    *******************
    ಕಾರ್ ಸಾದ್ ಮನೆಯಂಗಳ ತಲುಪಿತು. ಕಾರಿನಿಂದ ಇಳಿದ ಸುರಯ್ಯಾ ಹಾಗೂ ಸಾದ್ ನನ್ನು ಮುನೀರಾ ಒಳಗೆ ಬರಮಾಡಿಕೊಂಡರು.

  "ಸುರಯ್ಯಾ ಹೇಗಿತ್ತು ಕಾಲೇಜಿನಲ್ಲಿ ಇಂದಿನ ದಿನ ? ಎಲ್ಲರೂ ಏನಾದರೂ ಕೇಳಿದ್ರ ? ಏನು ಹೇಳಿದೆ ? "ಮುನೀರಾ ಸುರಯ್ಯಾಳಲ್ಲಿ ಕೇಳಿದರು.

" ಇಲ್ಲಾ ಆಂಟಿ, ಮದುವೆಯಾದ ವಿಷಯ ಎಲ್ಲರಲ್ಲೂ ಹೇಳಿದ್ದೇನೆ. ಆದರೆ ಸಾದ್ ಬಗ್ಗೆ ಏನೂ ಹೇಳಿಲ್ಲ. ಗೆಳತಿಯರು ನೋಡಬೇಕು ಅಂತ ಹಟ ಮಾಡಿದರು. ಆದರೆ ಇನ್ನೊಂದು ಸಾರಿ ನಾನೇ ಪರಿಚಯ ಮಾಡಿಸಿ ಕೊಡುತ್ತೇನೆ ಎಂದು ಹೇಳಿದೆ."

" ಹಾಗೆ ಹೇಳಿದ್ದು ಒಳ್ಳೆಯದಾಯಿತು ಬಿಡು. ನಿನ್ನ ಜೊತೆ ಇದ್ದರೆ ಆತ ಇನ್ನು ಕೆಲವು ದಿನಗಳಲ್ಲಿ ಸರಿಯಾಗಬಹುದು ಎನ್ನುವ ನಂಬಿಕೆ ನನಗಿದೆ. ಮತ್ತೆ ಸಮದ್ ಹೇಳಿದ ಮಾತು ನಿನಗೆ ನೆನಪಿದೆಯಲ್ವಾ?"

" ಹ್ಞಾಂ ನೆನಪಿದೆ ಆಂಟಿ. ಕೆಲವೇ ದಿನಗಳಲ್ಲಿ ನಾನು ಅದನ್ನು ನೆರವೇರಿಸಿ ಕೊಡುತ್ತೇನೆ ."

" ಸರಿ ಸುಸ್ತಾಗಿ ಬಂದಿದ್ದೀಯಲ್ಲ. ಹೋಗಿ ರೆಸ್ಟ್ ಮಾಡು " ಎಂದು ಮುನೀರಾ ಹೇಳಿದಾಗ ಸುರಯ್ಯಾ ತನ್ನ ಕೋಣೆಗೆ ಹೋದಳು. ಸ್ನಾನ ಎಲ್ಲಾ ಮಾಡಿ ಫ್ರೆಶ್ ಆಗಿ ಬರಬೇಕಾದರೆ ಸಾದ್ ಅಲ್ಲಿ ಕುಳಿತಿದ್ದನು.

     ಒಮ್ಮೆ ಆತನ ಮುಖ ನೋಡಿದಾಗ ಸುರಯ್ಯಾಳಿಗೆ ಬೇಸರವಾಯಿತು. ಹೋಗಿ ಆತನ ಪಕ್ಕದಲ್ಲಿ ತಾನು ಕುಳಿತುಕೊಂಡಳು. ತನ್ನ ಪತಿಯ ಮುಖವನ್ನೊಮ್ಮೆ ನೋಡಿಟ್ಟಳು. ಹೌದು, ಆ ಮುಖದಲ್ಲಿ ಪ್ರೀತಿಯು ಧಾರಾಕಾರವಾಗಿ ಸುರಿಯುತ್ತಿರುವುದಾಗಿ ಆಕೆಗೆ ಕಂಡಿತು. ಆದರೆ ಅದು ತನಗಾಗಿ ಅಲ್ಲ ... ಆಯಿಷಾಳಿಗಾಗಿ ಎಂದು ಎನಿಸುವಾಗ ಯಾಕೋ ಆಕೆಯ ಮನಸ್ಸು ನೊಂದಿತು.

   ಇಲ್ಲ ನನ್ನ ಪತಿ ಎಂದೆಂದಿಗೂ ನನ್ನವರೇ. ಅವರನ್ನು ನಾನು ಎಂದಿಗೂ, ಯಾರಿಗೂ ಬಿಟ್ಟು ಕೊಡಲಾರೆ. ಅವರು ಶಾಶ್ವತವಾಗಿ ನನ್ನವರೇ ಎಂದುಕೊಂಡು ಸಾದ್ ಅನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಳು.

    ಸುರಯ್ಯಾಳಿಗೆ ಕುಡಿಯಲು ಜ್ಯೂಸ್ ತೆಗೆದುಕೊಂಡು ಬಂದ ಮುನೀರಾ ಅದನ್ನು ನೋಡಿದರು. ಅವರ ಮುಖದಲ್ಲಿ ಮಂದಹಾಸ ಮೂಡಿತು. ಯಾ ದೇವನೇ , ಇವರನ್ನು ಹೀಗೆಯೇ ಚೆನ್ನಾಗಿಟ್ಟಿರು ಎಂದು ಮನದಲ್ಲಿಯೇ ಪ್ರಾರ್ಥಿಸಿದರು.

ಆದರೆ ದೇಹವಿಡೀ ವಿಷವನ್ನೇ ತುಂಬಿಕೊಂಡಿರುವ ಒಂದು ಹೆಣ್ಣು ಇವರನ್ನು ಬೇರೆ ಮಾಡಬೇಕು ಎಂದು ಪಣತೊಟ್ಟಿರುವುದು ಅವರಿಗೆ ತಿಳಿದಿರಲಿಲ್ಲ.

ತನ್ನ ಮಗ ಹಾಗೂ ಸುರಯ್ಯಾ ಒಟ್ಟಿಗೆ ಇರುವುದನ್ನು ನೋಡಿದ ಮುನೀರಾಳಿಗೆ ಖುಷಿಯಾಯಿತು

 ಅವರು ಮೆಲ್ಲನೆ ಕೆಮ್ಮಿ ತಾವು ಕೋಣೆಯೊಳಗೆ ಇರುವುದರ ಸಂಕೇತ ತೋರಿಸಿದರು.

   ಸುರಯ್ಯಾ ಒಮ್ಮೆಲೇ ತಡಬಡಿಸಿ ಎದ್ದು ನಿಂತಳು.

" ಅರೇ ಆಂಟಿ ನೀವು ಯಾಕೆ ತರೋದಿಕ್ಕೆ ಹೋದಿರಿ? ನಾನೆ ಬರುತ್ತಿದ್ದೆ ಅಲ್ವಾ?"ಎಂದು ಅವರ ಕೈಯಲ್ಲಿ ಇದ್ದ ಜ್ಯೂಸ್ ತೆಗೆದುಕೊಂಡಳು.

" ಅರೆ ನನಗೆ ಅದರಲ್ಲೇನು ಕಷ್ಟವಿಲ್ಲ ಸುರಯ್ಯಾ... ನನ್ನ ಮಗನಿಗಾಗಿ ಇಷ್ಟೆಲ್ಲಾ ಮಾಡುವ ನಿನ್ನನ್ನು ನೋಡುವುದು ನನ್ನ ಕರ್ತವ್ಯ ಅಲ್ಲವೇ ಹೇಳು? "

 " ಆಂಟಿ ಇನ್ನೇನು ಮಾಡುತ್ತಿದ್ದೇನೋ ಅದು ನಾನು ನಿಮ್ಮ ಮಗನಿಗಾಗಿ ಅಲ್ಲ ನನ್ನ ಪತಿಗಾಗಿ ಮಾಡುತ್ತೇನೆ. ಅವರು ಆದಷ್ಟು ಬೇಗ ಮೊದಲಿನಂತೆ ಆಗುತ್ತಾರೆ , ನೋಡಿ ಬೇಕಾದಲ್ಲಿ"

 " ಅಷ್ಟು ಆದರೆ ಸಾಕು ಸುರಯ್ಯಾ... ಅದುವೇ ನಮ್ಮ ಆಸೆ ಕೂಡ."

   " ಅದೂ ಆಂಟಿ ನಾನು ಸಾದ್ ಜೊತೆ ವಾಕಿಂಗ್ ಹೋಗಬೇಕು ಎಂದು ಇದ್ದೇನೆ. ಹೋಗಲಾ? " ಎಂದು ಸುರಯ್ಯಾ ಅವರಲ್ಲಿ ಅನುಮತಿ ಕೇಳಿದಾಗ ಅವರು ಒಪ್ಪಿದರು.

ತಕ್ಷಣ ಸುರಯ್ಯಾ ರೆಡಿಯಾಗಿ ಸಾದ್ ಜೊತೆ ಹೊರಗೆ ಬಂದಳು.  ನಡೆಯುತ್ತಾ ಬರಬೇಕಾದರೂ ಸಾದ್ ಏನೂ ಮಾತನಾಡುತ್ತಲೇ ಇರಲಿಲ್ಲ. ಸುರಯ್ಯಾ ಆತನನ್ನು ಹತ್ತಿರದ ಪಾರ್ಕಿಗೆ ಕರೆದೊಯ್ದು ಅಲ್ಲೇ ಇದ್ದ ಬೆಂಚೊಂದರಲ್ಲಿ ಕುಳಿತುಕೊಳ್ಳುವಂತೆ ಹೇಳಿ ತಾನೂ ಕುಳಿತುಕೊಂಡಳು. 
 ಸಾದ್ ಏನೂ ಮಾತನಾಡದೆ ಇರುವುದನ್ನು ಗಮನಿಸಿದ ಸುರಯ್ಯಾ ತಾನಾಗಿಯೇ ಮಾತು ಪ್ರಾರಂಭಿಸಿದಳು.

  " ಸಾದ್ ಯಾಕೆ ಏನೂ ಮಾತನಾಡುತ್ತಿಲ್ಲ ನೀವು ? ನನ್ನನ್ನು ಕಂಡಂತಹ ಆ ದಿನ ಅದೆಷ್ಟು ಮಾತನಾಡಿದ್ದೀರಿ ನೀವು. ಆದರೆ ಈಗ ಮತ್ತೆ ಮಾತು ಕಡಿಮೆ ಮಾಡಿದ್ದೀರಿ . ಯಾಕೆ ಏನಾಯಿತು? "

 " ಏನಿಲ್ಲಾ.... ಯಾಕೋ ನನಗೆ ಎಲ್ಲೋ ಗೊಂದಲಮಯ ಎಂದೇ ಎನಿಸುತ್ತಿದೆ. ನಾನಿನ್ನು ಸರಿಯಾಗಿ ಯಾವುದರಿಂದಲೂ ಹೊರಗೆ ಬರಲು ಅಷ್ಟು ಬೇಗ ಸಾಧ್ಯವಾಗುತ್ತಿಲ್ಲ."

" ಯಾಕೆ ಸಾಧ್ಯವಾಗುತ್ತಿಲ್ಲ ಹೇಳಿ ? ನೋಡಿ ನೀವು ನನ್ನ ಜೊತೆ ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡಿ. ಮತ್ತ ಮಾತು ಮುಂದುವರಿಸೋಣ. ನಿಮಗೂ ಹೇಗೆ ಅನಿಸುತ್ತದೆ ನೋಡೋಣ, ಎಂದಳು ಸುರಯ್ಯಾ.

 " ಸರಿ ಯಾವುದರ ಬಗ್ಗೆ ಮಾತನಾಡಬೇಕು ಹೇಳು? "

   ಹೀಗೆ ಪತಿ - ಪತ್ನಿಯರ ಮಾತುಕತೆ ಸಾಗುತ್ತಿತ್ತು. ಸಾದ್ ಎಲ್ಲವ ಮರೆತು ಆಕೆಯೊಂದಿಗೆ ಮಾತನಾಡುವುದರಲ್ಲಿಯೇ ನಿರತನಾಗಿದ್ದನು. ತನ್ನ ಪತಿಯು ತನ್ನೊಂದಿಗೆ ಇಷ್ಟು ಮಾತನಾಡುವುದು ಕಂಡ ಸುರಯ್ಯಾಳಿಗೂ ಖುಷಿಯಾಗಿತ್ತು. ಆದರೆ ಈ ಖುಷಿ ಶಾಶ್ವತವೇ ಎಂಬ ಅನುಮಾನ ಆಕೆಯ ಮನದಲ್ಲಿಯೂ ಮೂಡಿತ್ತು.

ಅರೇ ನಾನು ಈ ಮುಗ್ಧ ಮನಸ್ಸಿಗೆ ನೋವು ಮಾಡುತ್ತಿದ್ದೇನಾ ಹೇಗೆ? ಇವರು ಆ ಹುಡುಗಿಯನ್ನು ಅಷ್ಟೊಂದು ಹಚ್ಚಿಕೊಂಡು ಇದ್ದರು ಎಂದರೆ ಆಕೆಯೂ ಇವರನ್ನು ಅಷ್ಟೇ ಇಷ್ಟಪಡುತ್ತಾ ಇದ್ದಳೇನೋ? ಆಕೆಯನ್ನೊಮ್ಮೆ ನಾನು ನೋಡಬೇಕು. ಎಂತಹ ಪರಿಸ್ಥಿತಿಯಲ್ಲಿ ಅವಳು ಇವರಿಂದ ದೂರ ಆಗಿದ್ದು ಎಂದು ನನಗೆ ತಿಳಿಯಬೇಕು. ಇವರು ಸರಿಯಾಗುವ ಹೊತ್ತಿಗೆ ಆ ಹುಡುಗಿಯನ್ನು ಇವರ ಮುಂದೆ ತಂದು ನಿಲ್ಲಿಸಬೇಕು.ಸಾದ್ ಸರಿಯಾದಾಗ ತಾನು ಆಯಿಷಾ ಅಲ್ಲ ಎಂದು ತಿಳಿದಿದ್ದೇ ಆದಲ್ಲಿ ನಾನು ಒಬ್ಬ ಮೋಸಗಾರ್ತಿ ಎಂದು ಆಗುವುದಿಲ್ಲವೇ ! ಆಗ ಖಂಡಿತವಾಗಿಯೂ ನನ್ನ ಪತಿ ನನ್ನನ್ನು ಕ್ಷಮಿಸಲಿಕ್ಕಿಲ್ಲ. ಮೊದಲಿಗೆ ಸಾದ್ ಜೊತೆ ಕಲಿತ ಫ್ರೆಂಡ್ಸ್ ಬಳಿ ಏನಾದರೂ ಮಾಹಿತಿ ಸಿಗುತ್ತಾ ನೋಡಬೇಕು ಎಂದೆಲ್ಲಾ ಆಕೆಯ ಮನಸ್ಸು ಯೋಚಿಸುತ್ತಿತ್ತು. ಸೂರ್ಯಾಸ್ತಮಾನಕ್ಕೆ ಸಮಯ ಹತ್ತಿರವಾದಂತೆ ಅವರು ಅಲ್ಲಿಂದ ಮನೆಗೆ ತೆರಳಿದರು.

    *******************
   ಹೇಯ್ ದೇವದಾಸ್.... ಇಲ್ಲಿ ನೋಡು ಎಂದು ಧ್ವನಿ ಕೇಳಿದಾಗ ಮುಸ್ತಾಕ್ ಒಮ್ಮೆಲೇ ಹಿಂದಿರುಗಿ ನೋಡಿದನು.

 ಅಲ್ಲಿ ನಿಂತಿದ್ದ ಸಹಾನಳನ್ನು ನೋಡಿದಾಗ ಆಕೆಯನ್ನು ತಿಂದು ತೇಗಬೇಕು ಎನ್ನುವಷ್ಟು ಕೋಪ ಬಂತು ಆತನಿಗೆ.

  " ನೀನು ನಿಜವಾಗಿಯೂ ಹೆಣ್ಣು ಅಲ್ಲ ಎಂದಾದಲ್ಲಿ ಕಾಲಿನ ಚಪ್ಪಲ್ ತೆಗೆದು ಹೊಡೆಯುತ್ತಿದ್ದೆ ನಾನು. ಹೆಣ್ಣು ಆದುದರಿಂದ ನೀನು ನನ್ನ ಕೈಯಲ್ಲಿ ಉಳಿದುಕೊಂಡೆ."ಎಂದು ಸಿಟ್ಟಿನಿಂದಲೇ ಹೇಳಿದನು ಆತ.

"ಅರೇ ನನ್ನಲ್ಲಿ ಯಾಕೆ ಸಿಟ್ಟು ತೋರಿಸುತ್ತಾ ಇದ್ದೀಯಾ ಹೇಳು? ಅವತ್ತು ನೀನು ನನ್ನಲ್ಲಿ ಏನಂದೆ? ಯಾವನಾದರೂ ಹುಚ್ಚ ನಿನ್ನನ್ನು ಮದುವೆ ಆಗಬೇಕು ಎಂದೆಯಲ್ಲಾ!! ನೋಡು ಈಗ ಹುಚ್ಚ ಸಿಕ್ಕಿರೋದಾದರೂ ಯಾರಿಗೆ? ನಿನ್ನ ಸುರಯ್ಯಾ ಮದುವೆಯಾಗಿರೋದು ಒಬ್ಬ ಹುಚ್ಚನನ್ನೆ. ಬೇಕಿದ್ದಲ್ಲಿ ಆಕೆಯೊಂದಿಗೆ ಕೇಳು." ಎಂದು ಸಹಾನ ಹೇಳಿದಳು.

ಸಹಾನಳ ಮಾತು ಕೇಳಿದಾಗ ಮುಸ್ತಾಕಿಗೆ ಅದನ್ನ ನಂಬಬೇಕೋ ಬಿಡಬೇಕೋ ಎಂದು ತಿಳಿಯಲಿಲ್ಲ.

 ಆತ ಏನೊಂದೂ ಹೇಳದೆ ಅಲ್ಲಿಂದ ನಡೆದನು.
 ಆತನ ತಲೆಯಲ್ಲಿ ಸಹಾನ ಹೇಳಿದ ಮಾತುಗಳೇ ರಿಂಗಣಿಸುತ್ತಿದ್ದವು.

ನಿಜ ಆಗಿರಬಹುದೇ ? ಸುರಯ್ಯಾ ಯಾಕಾದರೂ ಒಬ್ಬ ಹುಚ್ಚನನ್ನು ಮದುವೆ ಆಗಿರಬಹುದು? ಸಹಾನಳ ಮಾತು ನಿಜವೇ ಅಲ್ಲ ಎಂದು ಎನಿಸಿದರೂ ಈ ಮದುವೆಯ ಹಿಂದೆ ಏನೋ ಒಂದು ಅಡಗಿ ಕುಳಿತಿದೆ. ಇಲ್ಲದಿದ್ದಲ್ಲಿ ಆಕೆಗೆ ಒಂದು ವಾರದಲ್ಲಿ ಮದುವೆ ಹೇಗೆ ಆಗಿರಬಹುದು? ಅದೂ ಕೂಡ ಮದುವೆಯ ಯಾವ ವಿಚಾರವೂ ಕೂಡ ಇರಲಿಲ್ಲ. ಒಂದು ಮದುವೆ ಎಂದಮೇಲೆ ಕನಿಷ್ಠ ಕೆಲವು ದಿವಸಗಳಾದರೂ ಬೇಕು. ಇದು ಇಷ್ಟೊಂದು ತರಾತುರಿಯಲ್ಲಿ ಆಯಿತು ಎಂದರೆ ಅದರ ಹಿಂದೆ ಬಲವಂತವಾದ ಕಾರಣ ಇರಬಹುದು. ಯಾವುದಕ್ಕೂ ಈ ವಿಷಯವನ್ನು ಅರಿಯಬೇಕು" ಎಂದು ಯೋಚಿಸಿದವನೇ ಸುರಯ್ಯಾ ಬರುವುದನ್ನೇ ಕಾಯತೊಡಗಿದನು.

 ಸುರಯ್ಯಾಳ ಕಾರ್ ಕಾಲೇಜು ಆವರಣದ ಒಳಗೆ ಬಂದು ನಿಂತಿತು. ಇಂದು ಸಾದ್ ಕಾರಿನಿಂದ ಕೆಳಗೆ ಇಳಿಯಲಿಲ್ಲ. ಬದಲಾಗಿ ಸುರಯ್ಯಾ ಕಾರಿನಿಂದ ಇಳಿದವಳೇ ಕಾರಿನೊಳಗೆ ಇಣುಕಿ ತುಂಬಾ ಹೊತ್ತು ಏನೋ ಮಾತನಾಡುತ್ತಿರುವುದು ಕಾಣಿಸಿತು. ನಂತರ ಕಾರು ಅಲ್ಲಿಂದ ಹೊರಟು ಹೋಯಿತು. 

ಮುಸ್ತಾಕ್ ಇದೆಲ್ಲವನ್ನೂ ಗಮನಿಸುತ್ತಿದ್ದನು.

ಅಷ್ಟರಲ್ಲಿ ಮುಸ್ತಾಕ್ ವೇಗದ ನಡಿಗೆಯೊಂದಿಗೆ ಆಕೆಯ ಬಳಿ ಧಾವಿಸಿ ಆಕೆಗೆ ಅಡ್ಡಲಾಗಿ ನಿಂತನು. ತನ್ನ ದಾರಿಗೆ ಅಡ್ಡವಾಗಿ ನಿಂತಿರುವ ಮುಸ್ತಾಕ್ ಅನ್ನು ನೋಡಿ ಸುರಯ್ಯಾ

  " ಅಡ್ಡದಿಂದ ಏಳು, ದಾರಿ ಬಿಡು ನನಗೆ" ಎಂದಳು.

" ದಾರಿ ಬಿಡುತ್ತೇನೆ ಸುರಯ್ಯಾ.. ಆದರೆ ನನಗೆ ನಿನ್ನಲ್ಲಿ ಮಾತನಾಡಲಿಕ್ಕಿದೆ."

" ಆದರೆ ನನಗೆ ನಿನ್ನಲ್ಲಿ ಮಾತನಾಡಲು ಸಮಯವಿಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ದಾರಿ ಬಿಡ್ತೀಯೋ ಅಥವಾ ತಳ್ಳಿ ಹೋಗಲೋ?"

 " ಇದೇ ಪ್ರಶ್ನೆ ನಾನು ನಿನ್ ಬಳಿ ಕೇಳುತ್ತೇನೆ. ನೀನು ನನ್ನ ಜೊತೆ ಮಾತನಾಡಲು ಬರುತ್ತೀಯೋ ಅಥವಾ ನಾನು ಎಳೆದುಕೊಂಡು ಹೋಗಲಾ?"

" ಏನು ಮಾತನಾಡುತ್ತಾ ಇದ್ದೀಯಾ ಮುಸ್ತಾಕ್ ? ಒಂದು ಮದುವೆಯಾದ ಹುಡುಗಿಯ ಬಳಿ ಹೀಗಾ ಮಾತನಾಡುವುದು ? ಹೇಗೆ ಮಾತನಾಡಬೇಕು ಅನ್ನೋ ಪರಿಜ್ಞಾನ ಇಲ್ಲ ನಿನಗೆ?"

" ತಿಳಿದುಕೊಂಡೆ ಹೇಳುತ್ತಿದ್ದೇನೆ ಸುರಯ್ಯಾ.. ಒಳ್ಳೆಯದರಲ್ಲಿ ಹೇಳಿದೆ. ನೀನು ಕೇಳಲೇ ಇಲ್ಲ. ಒಂದು ವೇಳೆ ನಿನಗೆ ನನ್ನಲ್ಲಿ ಒಬ್ಬಳಿಗೆ ಬಂದು ಮಾತನಾಡಲು ಸರಿಯಾಗುವುದಿಲ್ಲ ಎಂದಾದರೆ ನಿನ್ನ ಗೆಳತಿಯರನ್ನು ಕರೆದುಕೊಂಡು ಬಾ... ದಯವಿಟ್ಟು ಇದು ನನ್ನ ವಿನಂತಿ ಎಂದು ತಿಳಿದುಕೊಳ್ಳು" ಎಂದು ಅಲ್ಲಿಂದ ಹೋದನು.

ಸುರಯ್ಯಾ ತುಂಬಾ ಹೊತ್ತು ಆಲೋಚನೆ ಮಾಡಿದಳು. ಕೊನೆಗೂ ಮನಸು ಬದಲಾಯಿಸಿದವಳೇ ಆತನೊಂದಿಗೆ ಮಾತನಾಡಲು ರಾಫಿಯ ಹಾಗೂ ತಾಹಿರಾಳೊಂದಿಗೆ ಹೊರಟಳು.

ಕಾಲೇಜಿನ ಎದುರಿಗಿದ್ದ ಗಾರ್ಡನ್ ಬಳಿ ಮುಸ್ತಾಕ್ ಅವರಿಗಾಗಿ ಕಾಯುತ್ತಾ ನಿಂತಿದ್ದನು.

" ಹೇಳು ಬೇಗನೇ, ಏನು ಮಾತನಾಡಲಿಕ್ಕೆ ಇತ್ತು ನಿನಗೆ? " ಸುರಯ್ಯಾ ಕೇಳಿದಳು.

" ನನಗೆ ನಿನ್ನ ಮದುವೆಯ ವಿಚಾರವಾಗಿ ಮಾತನಾಡಲಿಕ್ಕೆ ಇತ್ತು.ಅಲ್ಲಾ ಸುರಯ್ಯಾ ಒಂದು ಮದುವೆ ಎಂದರೆ ಎಷ್ಟೋ ಕಾರ್ಯಗಳು ಇರುತ್ತವೆ. ಅಂದರೆ ಸಂಬಂಧ ಕೂಡಿ ಬರಬೇಕು, ನಿಶ್ಚಿತಾರ್ಥ ಆಗಬೇಕು, ಎಲ್ಲಾ ಬಂಧು - ಬಳಗದವರನ್ನು ಕರಿಯಬೇಕು. ಆದರೆ ನಿನ್ನ ಮದುವೆ ಹೇಗೆ ಒಂದು ವಾರದಲ್ಲಿ ಆಯಿತು ಹೇಳು? ನನಗೆ ಯಾಕೋ ನಿನ್ನ ಮದುವೆಯ ಹಿಂದೆ ಏನೋ ರಹಸ್ಯ ಇದ್ದ ಹಾಗೇ ಆಗುತ್ತಿದೆಯಲ್ಲ? ಹೇಳು ಏನದು? "

" ಏನು ರಹಸ್ಯ ಮುಸ್ತಾಕ್? ಸಂಬಂಧಗಳನ್ನು ಆ ದೇವನು ಅಲ್ಲೇ ನಿಶ್ಚಯಿಸಿರುತ್ತಾನೆ. ಅದಕ್ಕಿಂತಲೂ ಮಿಗಿಲಾಗಿ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ನನ್ನ ತಲೆಯಲ್ಲಿ ಒಂದು ವಾರದೊಳಗೆ ಮದುವೆ ಆಗಬೇಕು ಎಂದು ಬರೆದು ಇಟ್ಟಿದ್ದರೆ ಯಾರು ತಪ್ಪಿಸೋಕೆ ಆಗುತ್ತೆ ಹೇಳು ?

  ಮಾತು ತಪ್ಪಿಸಬೇಡ ಸುರಯ್ಯಾ. ಈಗ ನನ್ನನ್ನೇ ನೋಡು... ನಿನ್ನನ್ನು ಬೆಟ್ಟದಷ್ಟು ಇಷ್ಟಪಡುತ್ತಿದ್ದೆ. ನಿನ್ನನ್ನೇ ಮದುವೆಯಾಗಬೇಕು ಎಂದು ಭಾವಿಸಿದ್ದೆ ಕೂಡ . ಆದರೇನಾಯಿತು? ಮದುವೆಯಾಗಲು ಸಾಧ್ಯವಾಯಿತೇ? ಯಾವುದಕ್ಕೂ ಸಮಯ - ಸಂದರ್ಭ ಕೂಡಿಬರದೆ ಏನೂ ಮಾಡೋದಿಕ್ಕೆ ಆಗಲ್ಲ. ಆದರೆ ನಿನ್ನ ಮದುವೆ ಒಂದು ವಾರದಲ್ಲಿ ಆಯಿತು ಎಂದರೆ ಅದಕ್ಕೆ ಕಾರಣ ನನಗೆ ತಿಳಿದಿದೆ. ಏಕೆಂದರೆ ನೀನು ಮದುವೆಯಾಗಿರುವುದು ಒಬ್ಬ ಹುಚ್ಚನನ್ನು....

 ಮುಸ್ತಾಕ್ ಮಾತು ಇನ್ನೂ ನಿಲ್ಲಿಸಿರಲಿಲ್ಲ.
  
 ಬಾಯಿ ಮುಚ್ಚು ಮುಸ್ತಾಕ್.... ನಾಲಿಗೆ ಇದೆ ಎಂದು ಏನೆಲ್ಲಾ ಮಾತನಾಡಬೇಡ. ನನ್ನನ್ನು ಏನು ಬೇಕಾದರೂ ಹೇಳು, ಆದರೆ ನನ್ನ ಪತಿಯ ಬಗ್ಗೆ ಒಂದು ಮಾತು ಆಡಿದರೆ ನಾನು ಸಹಿಸೋದಿಲ್ಲ. ನೀನು ಒಬ್ಬ ಸೈಕೋಲಜಿ ಸ್ಟೂಡೆಂಟ್ ತಾನೇ? ಹುಚ್ಚನಿಗೂ, ಖಿನ್ನತೆಗೆ ಇರುವ ವ್ಯತ್ಯಾಸ ನಿನಗೆ ತಿಳಿದಿಲ್ಲವೇ? ನನ್ನ ಗಂಡ ಖಿನ್ನತೆಗೆ ಒಳಗಾಗಿ ತಾನು ಯಾರು ತಾನಿರುವ ಲೋಕ ಯಾವುದೂ ಒಂದೂ ತಿಳಿಯದಂತೆ ಇದ್ದವರ ಹಾಗಿದ್ದುದು ನಿಜ. ಅವರ ಬದುಕಿನಲ್ಲಿ ಉಂಟಾದ ಪ್ರೀತಿಯೊಂದು ಅವರನ್ನು ಆ ಸ್ಥಿತಿಗೆ ಕೊಂಡೊಯ್ದಿದೆ. ಆದರೆ ಅವರ ಪರಿಸ್ಥಿತಿ ಏನೂ ಎಂದು ತಿಳಿಯದೆ ನೀನು ಅವರನ್ನು ಹುಚ್ಚ ಎಂದೆಯಲ್ಲಾ ಮುಸ್ತಾಕ್" ಎಂದು ಸುರಯ್ಯಾ ಹೇಳಿದಾಗ ಈಗ ಆಶ್ಚರ್ಯ ಪಡುವ ಸರದಿ ಅವರು ಮೂವರದ್ದಾಗಿತ್ತು.

" ಏನು ಹೇಳುತ್ತಾ ಇದ್ದೀಯಾ ಸುರಯ್ಯಾ ? ಸ್ವಲ್ಪ ಬಿಡಿಸಿ ಹೇಳು ? ಯಾಕೆ ನೀನು ಅವರನ್ನು ಮದುವೆಯಾದೆ ? ಏನು ವಿಷಯ? ನಮಗೆ ಒಂದೂ ಅರ್ಥವಾಗುತ್ತಿಲ್ಲ" ಎಂದು ರಾಫಿಯ ಹೇಳಿದಾಗ

 "ಹೇಳುತ್ತೇನೆ ಕೇಳಿ" ಎಂದು ಸುರಯ್ಯಾ ಹೇಳಲು ಪ್ರಾರಂಭಿಸಿದಳು.

     ತನ್ನ ಅಜ್ಜ ಹಾಸ್ಪಿಟಲ್ ಅಲ್ಲಿ ಅಡ್ಮಿಟ್ ಆಗಿದ್ದು, ಅದರ ಈಚೆ ಕೋಣೆಯಲ್ಲಿ ಸಾದ್ ಇದ್ದದ್ದು ಹಾಗೂ ತಾನು ಆಕಸ್ಮಿಕವಾಗಿ ಆ ಕೋಣೆಯೊಳಗೆ ಹೊಕ್ಕಿದ್ದು... ಅದುವರೆಗೂ ಯಾರೊಂದಿಗೆ ಮಾತನಾಡದ ಸಾದ್ ತನ್ನ ಬಳಿ ಮಾತನಾಡಿದ್ದು ನೋಡಿ ಅವರ ಅಮ್ಮನಿಗೆ ಆಶ್ಚರ್ಯವಾದದ್ದು.... ಆದರೆ ತಾನು ಮರುದಿನ ಅಲ್ಲಿ ಹೋದಾಗ ಅವರು ಡಿಸ್ಚಾರ್ಜ್ ಆಗಿ ಹೋದದ್ದು... ನಂತರ ತಾನು ಅವರನ್ನು ಹುಡುಕಾಡಿದ್ದು ಎಲ್ಲವನ್ನೂ ಹೇಳಿದಳು.

      ಆದರೆ ಅನಿರೀಕ್ಷಿತವಾಗಿ ಅವರು ತನಗೆ ಸೂಪರ್ ಮಾರ್ಕೆಟಿನಲ್ಲಿ ಸಿಗುತ್ತಾರೆ ಎಂದು ನಾನು ಎನಿಸಿರಲಿಲ್ಲ. ಅಲ್ಲಿಂದ ಅವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಸಾದ್ ತಂದೆಗೂ ಅವರು ಯಾವುದೇ ಹುಡುಗಿಯಿಂದ ಆಗಿ ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ ಅನ್ನುವ ವಿಚಾರ ದೃಢವಾಯಿತು. ಅವರು ನನ್ನನ್ನು ಕರೆದು ಹೇಗಾದರೂ ಮಾಡಿ ಆತನ ಬಾಳನ್ನು ಸರಿಪಡಿಸು .... ದಯವಿಟ್ಟು ನೀನು ಆತನನ್ನು ಮದುವೆ ಆಗಬೇಕು ಎಂದು ವಿನಂತಿ ಮಾಡಿದರು. ನನಗೇನೂ ಹೇಳಬೇಕು ಎಂದೇ ತೋಚಿರಲಿಲ್ಲ. ಬದುಕಿನಲ್ಲಿ ನನಗಾಗಿ ಮಿಡಿದ ಜೀವವೆಂದರೆ ಅದು ಸಾದ್ ಅವರದಾಗಿತ್ತು. ಆ ಕಣ್ಣುಗಳಲ್ಲಿ ನಾನು ನನ್ನ ಬಗೆಗಿನ ಅಪಾರ ಪ್ರೀತಿಯನ್ನು ಕಂಡಿದ್ದೆ. ಯಾಕೋ ನನಗೂ ತಿಳಿಯದಂತೆ ನನ್ನ ಹೃದಯವು ಅವರಿಗಾಗಿ ಮಿಡಿಯಲು ಫ್ರಾರಂಭವಾಗಿತ್ತು. ಅದೂ ಅಲ್ಲದೆ ಮುಸ್ತಾಕ್ ಈ ರೀತಿ ಎಲ್ಲಾ ಮೋಸದಿಂದಲೇ ಮಾಡುತ್ತಿದ್ದಾನೆ ಎಂದು ಎನಿಸಿದ ನಾನು ಅದೆಲ್ಲಾ ಕೊನೆಗಾಣಿಸಲು ಮದುವೆ ಆಗುವುದೇ ಸರಿ ಎಂದು ನಿರ್ಧರಿಸಿದೆ. ಅದರಂತೆ ತಾನು ಆತನನ್ನು ಮದುವೆಯಾಗುವುದಾಗಿ ಸಮದ್ ಅವರಿಗೆ ಮಾತು ಕೊಟ್ಟೆ. ಅದರಂತೆ ಅಂದು ಸಂಜೆ ನಾವೆಲ್ಲ ಒಟ್ಟಾಗಿ ಹೋಗಿ ನನ್ನ ಮನೆಯಲ್ಲಿ ಈ ವಿಚಾರ ತಿಳಿಸಿದೆವು. ನನ್ನ ತಂದೆ ತಾಯಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ಸಾದ್ ಪರಿಸ್ಥಿತಿ , ಆತ ನನ್ನನ್ನು ಅವಲಂಬಿಸಿರುವ ರೀತಿ, ನಾಳೊಂದು ದಿನ ಆತ ಸರಿಯಾದರೆ ಆತ ನಿಮ್ಮ ಮಗಳನ್ನು ಸರಿಯಾಗಿ ನೋಡುವನು ಅನ್ನೋ ಸಮದ್ ಭರವಸೆಯ ಮಾತುಗಳು ಕೊನೆಗೂ ಅವರ ಮನಸು ಬದಲಾಯಿಸುವಲ್ಲಿ ಯಶಸ್ವಿ ಆಯಿತು. ಕೊನೆಗೂ ಅವರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆದರೆ ಮದುವೆ ಈಗ ಅದ್ಧೂರಿಯಾಗಿ ಮಾಡುವುದು ಬೇಡ ಎಂಬುವುದೇ ಅವರೆಲ್ಲರ ವಿಚಾರವಾಗಿತ್ತು.. ಹಾಗಾಗಿ ನಮ್ಮ ನಿಕಾಹ್ ಮಾತ್ರ ನಡೆದು ನಾವಿಬ್ಬರೂ ಪತಿ - ಪತ್ನಿಯರಾದೆವು. ಆದರೆ....

ಎಂದು ಹೇಳಿ ಸುರಯ್ಯಾ ತನ್ನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದಳು.

  ಆದರೆ ಏನು ಎಂಬಂತೆ ಪ್ರಶ್ನಾರ್ಥಕವಾಗಿ ಅವರು ಸುರಯ್ಯಾಳ ಮುಖ ನೋಡಿದರು.

"ಆದರೆ ಅವರ‌ ಮನಸ್ಸಿನಲ್ಲಿ ಪ್ರೀತಿ ಇರುವುದು ನನ್ನ ಬಗೆಗೆ ಅಲ್ಲ. ಬದಲಾಗಿ ಆಯಿಷಾಳ ಬಗೆಗೆ. ಯಾಕೋ ಯಾರದೋ ಪ್ರೀತಿಯನ್ನು ನನ್ನದು ಎಂದು ಹೇಳಲು ನನಗೆ ಮನಸು ಬರುತ್ತಿಲ್ಲ. ಆದರೆ ನನಗೆ ಹಾಗಲ್ಲ, ನಾನು ಅವರನ್ನು ಪ್ರೀತಿಸುತ್ತಾ ಇದ್ದೇನೆ.ಅವರೇ ನನ್ನ ಸರ್ವಸ್ವ ಕೂಡ. ನಾಳೆಯೊಂದು ದಿನ ಆಕೆ ಮತ್ತೆ ಅವರ ಬದುಕಿನಲ್ಲಿ ಬಂದರೆ? ಅದುವೇ ನನ್ನ ಮುಂದೆ ಇರುವ ದೊಡ್ಡ ಪ್ರಶ್ನೆಯಾಗಿದೆ.

  "ಇಲ್ಲ ಸುರಯ್ಯಾ... ನೀನು ಅದರ ಬಗ್ಗೆ ತಲೆಬಿಸಿ ಮಾಡಬೇಡ. ಆಕೆ ಬರುವುದಿದ್ದರೆ ಇಷ್ಟರಲ್ಲಿ ಬರುತ್ತಿದ್ದಳು. ಆದರೆ ಇನ್ನು ಬರಲಿಕ್ಕಿಲ್ಲ" ಎಂದು ರಾಫಿಯ ಹೇಳಿದಳು.

  " ನಮ್ಮೆಲ್ಲರ ಯೋಚನೆ ಅದುವೇ... ಆದರೆ ಸಾದ್ ಅವರಾಗಿಯೇ ಆಕೆಯನ್ನು ಹುಡುಕಿಕೊಂಡು ಹೋದರೆ? ಅಲ್ಲದೆ ಪ್ರೀತಿ ಹೆಸರಿನಲ್ಲಿ ನಾನು ಮೋಸ ಮಾಡುತ್ತಿದ್ದೇನೆ ಎಂದು ಎನಿಸಿದರೆ ? ಅದೆಲ್ಲಾ ಯೋಚಿಸುವಾಗ ಭಯವಾಗುತ್ತಿದೆ. ಅಲ್ಲದೆ ಯಾರದೋ ಹೆಸರಿನಲ್ಲಿ ಅವರ ಪ್ರೀತಿ ಪಡೆಯಲು ನನ್ನ ಮನಸು ಇಂದು ಒಪ್ಪುತ್ತಿಲ್ಲ. ಬದಲಾಗಿ ಅವರು ಈ ಸುರಯ್ಯಾಳನ್ನೆ ಪ್ರೀತಿಸಬೇಕು ಎಂದು ನನ್ನ ಮನಸು ಹಂಬಲಿಸುತ್ತಿದೆ. ಆದರೆ ಅದು ನಡೆಯುವುದೇ? "

"ಸುರಯ್ಯಾ, ನೀನು ಇದನ್ನೆಲ್ಲಾ ಮೊದಲೇ ವಿಚಾರ ಮಾಡಬೇಕಿತ್ತು."

" ಅದು ನಾನು ಸ್ವಾರ್ಥಿ ಆದಂತೆ ಆಗುವುದಿಲ್ಲವಾ ಹೇಳು ? ಹಾಗಾಗಿ ನಾನು ಏನೂ ಯೋಚನೆ ಮಾಡಲಿಲ್ಲ."

" ನಿನಗೊಂದು ಕೆಲಸ ಮಾಡಬಹುದಲ್ವಾ? ಆಯಿಷಾ ಯಾರು ಎಂದು ಪತ್ತೆ ಹಚ್ಚಿ , ಆಕೆಯೊಂದಿಗೆ ನಿಜ ವೃತ್ತಾಂತ ಎಲ್ಲಾ ಹೇಳು. ಹಾಗಿದ್ದಲ್ಲಿ ಆಕೆ ಮತ್ತೆ ಸಾದ್ ಎದುರು ಬರಲಿಕ್ಕಿಲ್ಲ"

 " ನಾನು ಅದೂ ಕೂಡ ಪ್ರಯತ್ನಿಸುತ್ತಾ ಇದ್ದೇನೆ. ಮುನೀರಾ ಆಂಟಿ ಬಳಿ ಕೇಳಿ ಸಾದ್ ಕ್ಲೋಸ್ ಫ್ರೆಂಡ್ಸ್ ಗೆ ಎಲ್ಲಾ ಕರೆ ಮಾಡಿ ಕೇಳಿದ್ದೇನೆ. ಅವರಿಗೆ ಆತ ಆಯಿಷಾ ಅನ್ನೋ ಹುಡುಗಿಯನ್ನು ಪ್ರೀತಿಸುವ ವಿಚಾರ ಗೊತ್ತಿತ್ತಂತೆ. ಆದರೆ ಅವರು ಯಾರೂ ಕೂಡ ಆಕೆಯನ್ನು ನೋಡಿಲ್ಲ ಎಂದೇ ಹೇಳಿದರು."

  " ಹಾಗಿದ್ದಲ್ಲಿ ಈಗ ನೀನು ಏನು ಮಾಡಬೇಕು ಎಂದು ಇದ್ದೀಯಾ? "

" ಈಗ ಸದ್ಯಕ್ಕೆ ಸಾದ್ ಅವರನ್ನು ಯಥಾ ಸ್ಥಿತಿಗೆ ತರಬೇಕು. ಅವರ ಮನಸು ಬದಲಾಯಿಸಬೇಕು. ಅವರನ್ನು ತುಂಬಾ ಚಟುವಟಿಕೆಯಲ್ಲಿ ನಿರತರಾಗುವಂತೆ ನೋಡಬೇಕು. ಅವರ ತಂದೆ ಜೊತೆ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಮಾಡಬೇಕು. ಹಾಗಾಗಿ ಇವತ್ತು ಬರಬೇಕಾದರೆ ತಂದೆಯ ಜೊತೆ ಆಫೀಸ್ ಹೋಗಿ ಎಂದು ಹೇಳಿದ್ದೇನೆ. ಆಯ್ತು ಎಂದು ಹೇಳಿದ್ದಾರೆ. ನೋಡಬೇಕು ಏನು ಆಗುತ್ತದೆ" ಎಂದು ಹೇಳಿ ಸುರಯ್ಯಾ ತನ್ನ ಮಾತನ್ನು ಅಲ್ಲಿಗೇ ನಿಲ್ಲಿಸಿದಳು.

ಅವರ ಮಾತುಕತೆ ಹೀಗೆ ಸಾಗುತ್ತಿದ್ದರೆ ಮುಸ್ತಾಕ್ ಎಲ್ಲವನ್ನೂ ಆಲಿಸುತ್ತಿದ್ದನು. 

 " ಯಾರನ್ನೋ ಪ್ರೀತಿಸುವವನ ಮೇಲೆ ಇವಳಿಗೆ ಕನಿಕರ. ಅವಳನ್ನು ಪ್ರೀತಿಸುವವನ ಬಗ್ಗೆ ಯಾವುದೇ ಭಾವನೆಯೇ ಇಲ್ಲ. ಎಂದಿಗೂ ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಮದುವೆ ಆಗಬೇಕೆ ಹೊರತು ನಾವು ಯಾರನ್ನು ಪ್ರೀತಿಸುತ್ತೇವೆ ಅವರನ್ನು ಆಗಬಾರದು. ಆಗ ಬದುಕು ಸುಂದರವಾಗಿ ಇರುತ್ತದೆ .. ಎಂದು ಮುಸ್ತಾಕ್ ಮೆಲ್ಲನೆ ಗುಣುಗಿದನು.

ಆತನ ಮಾತನ್ನು ಕೇಳಿಸಿದ ಸುರಯ್ಯಾ ಕೇಳಿಸದವಳಂತೆ ಮಾಡಿ ಅಲ್ಲಿಂದ ಎದ್ದು ತರಗತಿಯತ್ತ ನಡೆದಳು.

ಆ ನಾಲ್ವರೂ ಅಲ್ಲದೆ ಈ ವಿಚಾರಗಳನ್ನು ಕದ್ದು ಮುಚ್ಚಿ ಕೇಳಿದ ವ್ಯಕ್ತಿ ಮತ್ತೊಬ್ಬರು ಅಲ್ಲಿ ಇದ್ದಾರೆ ಎಂದು ಅವರು ಭಾವಿಸಿಯೇ ಇರಲಿಲ್ಲ. ಅವರು ಆಡಿದ ಪ್ರತಿಯೊಂದು ಮಾತುಗಳನ್ನು ಸಹಾನ ಕೇಳಿಸಿಕೊಂಡಿದ್ದಳು.

" ಓಹ್! ಹೀಗಾ ಸಮಾಚಾರ... ನಿನಗೆ ಸಾದ್ ಎಲ್ಲಿ ಪರಿಚಯವಾದ ಎಂದು ಯೋಚಿಸಿ ನನ್ನ ತಲೆ ಹಾಳಾಗಿತ್ತು. ಆಯಿಷಾ ನಿನ್ನ ಗಂಡನನ್ನು ಎಲ್ಲಿ ಕಸಿದು ಕೊಳ್ಳವಳೋ ಎನ್ನುವ ಭಯ ಎಷ್ಟು ನಿನಗೆ ಇದೆಯಲ್ವಾ? ಹ.ಹಹಹ...ಹ...... ನಿನ್ನನ್ನು ಈ ಕಾಲೇಜಿನಿಂದ ಹೊರಗೆ ಹಾಕದಿದ್ದರೇನಾಯಿತು ? ನಿನ್ನ ಗಂಡನ ಬದುಕಿನಿಂದ ನಿನ್ನನ್ನು ಶಾಶ್ವತವಾಗಿ ದೂರ ಮಾಡುತ್ತೇನೆ. ಸ್ವಾರಿ ಅಣ್ಣಾ... ನಿನ್ನ ದ್ವೇಷ ನಿನ್ನದೇ... ಆದರೆ ನಾನೀಗ ಆಡಲು ಹೊರಟಿರೋದು ನನ್ನದೇ ಆಟ.. ಇಲಿಯೊಂದು ತಾನಾಗಿಯೇ ಹುಲಿಯ ಬಾಯಿಗೆ ಬಿದ್ದಿದೆ. ಇನ್ನು ಅದನ್ನು ಬಿಡುವ ಪ್ರಶ್ನೆಯೇ ಇಲ್ಲ.. ಎಂದು ತನ್ನ ತಂತ್ರವನ್ನು ಹೆಣೆಯತೊಡಗಿದಳು.

     ದಿನಗಳು ಉರುಳುತ್ತಿದ್ದವು. ಸುರಯ್ಯಾಳ ನಿರಂತರ ಪ್ರಯತ್ನದಿಂದ ಸಾದ್ ತನ್ನನ್ನು ತಾನು ಸುಧಾರಿಸಿಕೊಂಡಿದ್ದನು. ತನ್ನ ತಂದೆಯ ಜೊತೆ ಅವರ ಕೆಲಸ ಕಾರ್ಯಗಳನ್ನು ನೋಡುತ್ತಿದ್ದನು ... ಉಳಿದ ಸಮಯದಲ್ಲಿ ಸುರಯ್ಯಾ ಆತನೊಂದಿಗೆ ವಾಕಿಂಗ್ ಹೋಗುವುದೋ, ಸುತ್ತಾಡುವುದೋ ಮನೆಯಲ್ಲೇ ಏನಾದರೂ ಕುಳಿತು ಕಾಲಹರಣ ಮಾಡುವುದೋ ಮಾಡುತ್ತಿದ್ದಳು. ಆತನು ಈಗ ಕತ್ತಲ ಕೋಣೆಯಿಂದ ಹೊರಗೆ ಬಂದಿದ್ದನು. ಸಂಪೂರ್ಣವಾಗಿ ಬದಲಾಗುತ್ತಾ ಬರುತ್ತಿದ್ದನು.

   ಅದೊಂದು ದಿನ..ಗಂಡ ಹೆಂಡತಿ ಮನೆಯ ಬಾಲ್ಕನಿಯಲ್ಲಿ ಕುಳಿತು ಮಾತನಾಡುತ್ತಾ ಇದ್ದರು. ಆಗಲೇ ಸಾದ್ ಮೊಬೈಲ್ ರಿಂಗಣಿಸತೊಡಗಿತು. ಮೊಬೈಲ್ ಚಾರ್ಜಿಗೆ ಇಟ್ಟಿದ್ದರಿಂದ ಸುರಯ್ಯಾ ತಾನು ಅದನ್ನು ತರುತ್ತೇನೆ ಎಂದು ಎದ್ದು ಮೊಬೈಲ್ ತರಲು ಹೋದಳು. ಮೊಬೈಲ್ ಸ್ಕ್ರೀನ್ ನೋಡಿದವಳಿಗೆ ಆಶ್ಚರ್ಯವಾಯಿತು. ಯಾವುದೋ ಪ್ರೈವೇಟ್ ನಂಬರ್, ಯಾರದ್ದು ಆಗಿರಬಹುದು ಎಂದು ಯೋಚಿಸುತ್ತಲೇ ಸಾದ್ ಕೈಗೆ ಮೊಬೈಲ್ ನೀಡಿದಳು...

 ಹಲೋ... ಎಂದು ಹೇಳಿದ್ದೇ ತಡ ಆ ಕಡೆಯ ಧ್ವನಿ ಕೇಳಿ ಸಾದ್ ಸ್ತಬ್ಧನಾದನು. ನಂತರ ತನ್ನನ್ನು ತಾನು ಸಾವರಿಸಿಕೊಂಡವನೇ, 

ಆಯಿಷಾ....... ಎಂದು ಕರೆದನು.

 ತನ್ನನ್ನು ತನ್ನ ಪತಿ ಕರೆಯುತ್ತಿದ್ದಾರೆಯೇ ಎಂದು ತಿರುಗಿ ನೋಡಿದ ಸುರಯ್ಯಾಳಿಗೆ ಆಘಾತವಾಯಿತು.

"ಆಯಿಷಾ ಎಲ್ಲಿದ್ದೀಯಾ ನೀನು ? ನಿನಗಾಗಿ, ನಿನ್ನ ಮಾತಿಗಾಗಿ ನನ್ನ ಹೃದಯವು ಅದೆಷ್ಟು ಮಿಡಿಯುತ್ತಿತ್ತು ತಿಳಿದಿದೆಯಾ? ಯಾಕೆ ಈ ರೀತಿ ಮಾಡಿದೆ ? ಎಂದು ಸಾದ್ ಕೇಳುತ್ತಾ ಇದ್ದರೆ ಆ ಕಡೆಯಿಂದ ಆಕೆ ಅದೇನು ಹೇಳಿದಳೋ ಗೊತ್ತಿಲ್ಲ. ಸಾದ್ ತನ್ನ ಮೊಬೈಲನ್ನು ಲೌಡ್ ಸ್ಪೀಕರ್ ಅಲ್ಲಿ ಇಟ್ಟನು.

ಆಕೆ ಮಾತನಾಡುವುದು ಸುರಯ್ಯಾಳಿಗೆ ಈಗ ಕೇಳಿಸುತ್ತಿತ್ತು.

" ಸುಳ್ಳು ಹೇಳುತ್ತಾ ಇದ್ದೀಯಾ ಸಾದ್ ನೀನು . ಒಂದು ವೇಳೆ ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆಗಿದ್ದಲ್ಲಿ ನೀನು ಯಾಕೆ ಬೇರೆ ಮದುವೆ ಆದೆ ಹೇಳು? ನಿನ್ನ ಮದುವೆಯಾದ ಹೆಣ್ಣು ಅಲ್ಲಿಯೇ ಇರುವಳಲ್ಲ? ಕೇಳು ಆಕೆಯಲ್ಲಿ ಯಾಕೆ ನಮ್ಮಿಬ್ಬರನ್ನು ದೂರ ಮಾಡಿದ್ದು ಎಂದು? ಸಾದ್ ನನಗೆ ಎಲ್ಲಾ ವಿಚಾರವೂ ತಿಳಿದಿದೆ. ನೀನು ನನ್ನನ್ನು ಇದುವರೆಗೂ ನೋಡಿಲ್ಲ ಎಂದು ಆಕೆಗೆ ತಿಳಿದಿದೆ. ಹಾಗಾಗಿ ಆಕೆ ಖುದ್ದಾಗಿ ತಾನೇ ಆಯಿಷಾ ಎಂದು ಹೇಳಿಕೊಂಡು ಬಂದಿದ್ದಾಳೆ. ನೀನೊಬ್ಬ ಮುಗ್ಧ... ಅದನ್ನೆಲ್ಲಾ ನಂಬಿ ಬಿಟ್ಟೆ . ನಾನು ನಿನಗೆ ನಾಳೆ ಬೆಳಿಗ್ಗೆ ಸಿಗುತ್ತೇನೆ. ಎಲ್ಲಾ ವಿಚಾರವೂ ಅಲ್ಲೇ ಹೇಳುತ್ತೇನೆ. ನಿನ್ನೊಟ್ಟಿಗೆ ನಿನ್ನ ಪತ್ನಿ ಎಂದು ಹೇಳಿಕೊಂಡು ಇದ್ದಾಳಲ್ಲ ಅವಳನ್ನೂ ಕರೆದುಕೊಂಡು ಬಾ..... ಎಲ್ಲಾ ವಿಚಾರವೂ ಇತ್ಯರ್ಥ ಆಗಲಿ" ಎನ್ನುತ್ತಾ ಆಕೆ ಕರೆ ಕಟ್ ಮಾಡಿದಳು.

ಕರೆ ಕಟ್ ಆದ ನಂತರ ಸಾದ್ ಸುರಯ್ಯಾಳ ಮುಖ ನೋಡಿದನು.

" ಯಾರು ನೀನು ಹೇಳು ? ಯಾಕೆ ನನ್ನ ಬದುಕಿನಲ್ಲಿ ಚೆಲ್ಲಾಟ ಆಡೋದಿಕ್ಕೆ ಬಂದೆ? ನಿನ್ನ ಧ್ವನಿ ನನ್ನ ಆಯಿಷಾಳಂತೆ ಇದೆ ಎಂದು ನಾನು ನೀನೇ ಆಯಿಷಾ ಎಂದು ಭಾವಿಸಿದೆನಲ್ಲಾ... ನಿನಗಾದರೂ ನಿಜ ಹೇಳಬಹುದಿತ್ತು ನೀನು ಆಯಿಷಾ ಅಲ್ಲವೆಂದು? ಯಾಕಾಗಿ ಸುಳ್ಳು ಹೇಳಿದೆ ? ನನ್ನ ಭಾವನೆಗಳು ಎಲ್ಲವೂ ನಿನಗೆ ತಮಾಷೆ ಎಂದು ಎನಿಸಿರಬಹುದಲ್ಲವೇ ? ಮನಸ್ಸಾದರೂ ಹೇಗೆ ಬಂತು ನಿನಗೆ ನನ್ನ ಪ್ರೀತಿ ಜೊತೆ ಆಟವಾಡಲು ? ಎಂದು ಸಿಟ್ಟಿನಲ್ಲಿಯೇ ಸುರಯ್ಯಾಳ ಬಳಿ ಕೇಳಿದನು.

" ಸಾದ್..... ನನ್ನ ಮಾತು ಕೇಳಿ ಪ್ಲೀಸ್... ನಾನು ಯಾರಿಗೂ ಮೋಸ ಮಾಡಲು ಬಯಸಿಲ್ಲ? ಯಾಕಾಗಿ ಹಾಗೆಲ್ಲ ಹೇಳುತ್ತಾ ನನ್ನ ಮನಸ್ಸಿಗೆ ನೋವು ನೀಡುತ್ತಾ ಇದ್ದೀರಾ ? " ಸುರಯ್ಯಾ ತಡೆಯಲಾರದ ದುಃಖದಿಂದಲೇ ಕೇಳಿದಳು.

 " ಏನು? ಏನಂದೆ ನೀನು ? ನಾನು ನಿನ್ನ ಮನಸಿಗೆ ದುಃಖ ನೀಡುತ್ತಾ ಇದ್ದೆನಾ? ದುಃಖಕ್ಕಿಂತಲೂ ಹೆಚ್ಚಿನದ್ದು ಆಗಬೇಕು ನಿನಗೆ. ನಿನ್ನನ್ನು ಕೊಂದು ತಿಂದರೂ ನನ್ನ ಮನಸ್ಸಿಗೆ ನೆಮ್ಮದಿ ಸಿಗಲಾರದು. ಯಾಕೆಂದರೆ ನೀನು ನನ್ನ ಪ್ರೀತಿಯನ್ನು ಕೊಂದಂತಹ ಮೋಸಗಾರ್ತಿ ಎಂದು ಹೇಳಿ ಸಾದ್ ಧಡಧಡನೇ ಕೆಳಗಿಳಿದು ಹೋದನು.

  ಹೋದವನೇ ಜೋರಾಗಿ ತನ್ನ ಅಮ್ಮನನ್ನು ಕರೆಯುವುದು ಕೋಣೆಯೊಳಗಿದ್ದ ಸುರಯ್ಯಾಳಿಗೆ ಕೇಳಿಸುತ್ತಿತ್ತು. ತನ್ನ ನೋವು ತಾಳಲಾರದೆ ಆಕೆ ಕಣ್ಣೀರು ಸುರಿಸುತ್ತಿದ್ದಳು.

ಎಂದಾದರೂ ಒಂದು ದಿನ ಈ ರೀತಿ ಆಗಬಹುದು ಎಂದು ಆಕೆ ಭಾವಿಸಿದ್ದಳು. ಆದರೆ ಅದು ಇಷ್ಟು ಬೇಗನೆ ಬರಬಹುದು ಎಂದು ಆಕೆ ಎನಿಸಿರಲಿಲ್ಲ. ಅದೂ ಕೂಡ ಆಯಿಷಾ ಈ ರೀತಿ ಹೇಳುವಳು ಎಂದು ತಾನು ಎನಿಸಿರಲಿಲ್ಲ ಎಂದೆಲ್ಲಾ ಯೋಚಿಸುತ್ತಾ ಇದ್ದಳು.

ಅಷ್ಟರಲ್ಲಿ ಕಾಲ ಸಪ್ಪಳ ಕೇಳಿಸಿದಂತಾಗಿ ತಲೆ ಎತ್ತಿ ನೋಡಿದಳು. ತನ್ನ ರೌದ್ರಾವತಾರದಲ್ಲೇ ಸಾದ್ ಅಲ್ಲೇ ನಿಂತಿದ್ದನು. ಆಕೆಯ ಬಳಿ ಬಂದವನೇ ಆಕೆಯ ಕೈಯನ್ನು ಹಿಡಿದುಕೊಂಡು ಎಳೆದು ಕೊಂಡೇ ಹೋದನು.

" ಅಯ್ಯೋ ಬಿಡಿ ಸಾದ್... ನನಗೆ ನೋವಾಗುತ್ತಿದೆ ....." ಸುರಯ್ಯಾ ಚೀರುತ್ತಲೇ ಹೇಳಿದಳು.

" ಓಹ್ ! ನೋವಾಗುತ್ತಿದೆಯಾ ನಿನಗೆ.... ನೋವಾಗಬೇಕು ನಿನಗೆ. ಇನ್ನೊಬ್ಬರ ಮನಸ್ಸಿನ ಜೊತೆ ಆಡುವ ನಿನಗೆ ‌ನೋವಾಗಬೇಕಾದುದೇ..." ಎಂದು ಹೇಳಿದವನೇ ಮತ್ತಷ್ಟು ಜೋರಾಗಿ ಕೈಯನ್ನು ಒತ್ತಿ ಹಿಡಿದನು. 

ಸ್ಟೆಪ್ ಕೆಳಗಿಳಿಯಬೇಕಾದರೆ ಎಡವಿದ ಸುರಯ್ಯಾ ... ಸಾದ್ನನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಳು. ಒಂದು ಕ್ಷಣ ಆತ ಸುರಯ್ಯಾಳನ್ನೇ ನೋಡಿಟ್ಟನು. ಸುರಯ್ಯಾಳು ಕೂಡ ಆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಳು. ತಕ್ಷಣ ಸಾವರಿಸಿದವನೆ ಸಾದ್... ಆಕೆಯನ್ನು ದೂರ ತಳ್ಳಿದನು. ಆತನ ಈ ವರ್ತನೆಯಿಂದ ಸುರಯ್ಯಾಳು ಅದೆಷ್ಟು ನೊಂದುಕೊಂಡಳೋ ಆ ದೇವನೇ ಬಲ್ಲವನಾಗಿದ್ದನು.

ಸುರಯ್ಯಾಳನ್ನು ಎಳೆದುಕೊಂಡು ಹೋದ ಆತ ಮುನೀರಾಳ ಮುಂದೆ ನಿಲ್ಲಿಸಿದನು.

 " ಅಮ್ಮಾ ಯಾರು ಇವಳು ಎಂದು ತಿಳಿದಿದೆಯಾ ನಿನಗೆ? ಇವಳಲ್ಲ ಆಯಿಷಾ. ಇವಳೆಲ್ಲಾ ನಮ್ಮ ಕಣ್ಣಿಗೆ ಮಣ್ಣೆರುಚಿದ್ದಾಳೆ.ಹೆಣ್ಣೆಂಬ ಮಾಯಾಂಗನೆ ಈಕೆ. "ಎಂದು ಸುರಯ್ಯಾಳ ಬಗ್ಗೆ ಮುನೀರಾಳಲ್ಲಿ ದೂರ ತೊಡಗಿದನು.

" ಇಲ್ಲಾಸಾದ್... ಅದೂ ನಾವೇ... "ಎಂದು ಹೇಳ ಹೊರಟ ಮುನೀರಾಳ ಮಾತನ್ನು ಅರ್ಧಕ್ಕೆ ತಡೆದ ಸಾದ್

 " ಬೇಡಮ್ಮ...ಯಾರೂ ಈಕೆಯ ಪಕ್ಷ ವಹಿಸಿ ಮಾತನಾಡುವುದೇ ಬೇಡ. ನಾಳೆ ಬೆಳಿಗ್ಗೆಯವರೆಗೆ ಈಕೆ ಇಲ್ಲಿರಲಿ. ಯಾಕೆಂದರೆ ಆಯಿಷಾ ನಾಳೆ ನನಗೆ ಸಿಗಲಿದ್ದಾಳೆ. ಮೊದಲ ಬಾರಿಗೆ ಆಕೆಯನ್ನು ನಾನು ನೋಡಲಿದ್ದೇನೆ. ಇನ್ನು ಬರೀ ಧ್ವನಿ ಕೇಳಿ ಯಾರು ಯಾರನ್ನೋ ಆಯಿಷಾ ಎಂದು ಹೇಳುವ ಪ್ರಮೇಯ ಬರಬಾರದು ಅಲ್ವಾ. ಮತ್ತೆ ಆಕೆ ಇವಳನ್ನು ಕೂಡ ಜೊತೆಯಲ್ಲಿಯೇ ಕರೆದುಕೊಂಡು ಬಾ ಎಂದಿದ್ದಾಳೆ. ಹಾಗಾಗಿ ಇವತ್ತೊಂದು ರಾತ್ರಿ ಇವಳು ಇಲ್ಲಿರಲಿ. ನಾಳ ಈಕೆ ಇಲ್ಲಿರಬಾರದು ಎಂದು ಹೇಳಿದವನೇ ಸೀದಾ ತನ್ನ ಕೋಣೆಯತ್ತ ತೆರಳಿದನು.

ಮುನೀರಾ ಅದೆಷ್ಟು ಸಾದ್... ಸಾದ್ ಎಂದು ಕರೆದರೂ ಆತ ಹಿಂದಿರುಗಿ ನೋಡಲೇ ಇಲ್ಲ. ತನ್ನ ತುಂಬಿದ ಕಣ್ಣುಗಳಿಂದಲೇ ಸುರಯ್ಯಾ ಮುನೀರಾಳತ್ತ ನೋಡಿದಳು.

" ಸುರಯ್ಯಾ... ಯಾಕೆ ನೀನು ಈ ರೀತಿ ಅಳುಬುರುಕಿ ಥರ ಮಾಡ್ತಿದ್ದೀಯಾ? ನೀನು ಆ ರೀತಿ ಹೆದರಿದರೆ ಆತ ನಿನ್ನನ್ನು ಮತ್ತಷ್ಟು ಹೆದರಿಸುತ್ತಾನೆ." ಮುನೀರಾ ಸುರಯ್ಯಾಳಿಗೆ ತಿಳಿ ಹೇಳಿದಳು.

" ಅಳದೆ ಮತ್ತೇನು ಮಾಡಲಿ ಹೇಳಿ ಆಂಟಿ? ಕೈ ಹಿಡಿದ ಗಂಡ ಈ ರೀತಿ ಮಾತನಾಡುವಾಗ ಯಾವ ಹೆಂಡತಿಗೆ ತಾನೇ ದುಃಖ ಆಗೋದಿಲ್ಲ ಹೇಳಿ? "

" ಸರಿ, ನೀನು ಹೇಳೋದು ನೂರಕ್ಕೆ ನೂರು ಸತ್ಯ. ನೋಡು ಈಗ ನೀನು ಆಕೆಯ ಕೈ ಹಿಡಿದ ಹೆಂಡತಿ ತಾನೇ? ಅಂದಮೇಲೆ ನೀನು ಇದಕ್ಕೆ ಯಾವುದಕ್ಕೂ ಹೆದರಬಾರದು. ಇಂದಿನವರೆಗೂ ಸತ್ತಿದ್ದೀಯಾ, ಇಲ್ಲವಾ ಎಂದು ಕೇಳಲು ಬಂದಿರದ ಆ ಹುಡುಗಿ ಈಗ ಒಮ್ಮೆಲೇ ಬಂದಿದ್ದಾಳೆ ಅಂದರೆ ಏನು ಅರ್ಥ ? ಅವಳಿಗೋಸ್ಕರ ನಿನ್ನನ್ನು ಬಿಡುತ್ತಾನ? ಅದು ಹೇಗೆ ನಾವೂ ನೋಡುತ್ತೇವೆ. ನೀನೇನು ಹೆದರಬೇಡ.ಸಮದ್ ಹಾಗೂ ನಾನು ನಿನ್ನ ಜೊತೆ ಇದ್ದೇವೆ. ಆ ಹುಡುಗಿಯನ್ನು ಮದುವೆಯಾಗುವುದಿದ್ದರೆ ಎಲ್ಲಿಗೆ ಬೇಕಿದ್ದಲ್ಲಿ ಕರೆದುಕೊಂಡು ಹೋಗಲಿ. ನಮ್ಮ ಮನೆಗೆ ಕಾಲಿಡಲು ನಾನು ಬಿಡಲಾರೆ. ನಮ್ಮ ಸೊಸೆ ಎಂದಿದ್ದರೂ ನೀನೆ." 

ಅವರ ಮಾತು ಕೇಳುವಾಗ ಸುರಯ್ಯಾಳ ಕಣ್ಣಾಲಿಗಳು ತುಂಬಿ ಬಂದವು.

" ಏನು ಮಾಡಬೇಕು ಅಂತ ಹೇಳ್ತಾ ಇದ್ದೀರಾ ಆಂಟಿ? " ಆಕೆ ಮುನೀರಾಳೊಂದಿಗೆ ಕೇಳಿದಳು.

  ಮುನೀರಾ ಆಕೆಯ ಕಿವಿಯಲ್ಲಿ ಏನು ಮಾಡಬೇಕು ಎಂದು ಪಿಸುಗುಟ್ಟಿದಳು. ಸುರಯ್ಯಾಳಿಗೂ ಅದು ಸರಿ ಎಂದೆನಿಸಿತು.

     ಆಕೆ ತನ್ನ ಕೋಣೆಯತ್ತ ನಡೆದಳು. ಬಾಗಿಲನ್ನು ಮೆಲ್ಲನೆ ತೆರೆದು ನೋಡಿದಾಗ ಸಾದ್ ಬಾಲ್ಕನಿಯಲ್ಲಿ ನಿಂತು ಏನೋ ಆಲೋಚಿಸುತ್ತಿರುವುದು ಆಕೆಗೆ ಕಂಡಿತು.

ಬಾಗಿಲು ತೆರೆದ ಶಬ್ಧ ಕೇಳಿದಾಗ ಸಾದ್ ತಿರುಗಿ ನೋಡಿದನು. ಅಲ್ಲಿ ನಿಂತಿದ್ದ ಸುರಯ್ಯಾಳನ್ನು ನೋಡಿ ಆತನಿಗೆ ಕೋಪ ಹೆಚ್ಚಾಯಿತು. ಸಿಟ್ಟಿನಲ್ಲಿಯೇ ಆಕೆಯ ಬಳಿ ಬಂದ ಆತ 

  " ನಿನಗೆ ಹೇಳಿದರೆ ಅರ್ಥ ಆಗೋದಿಲ್ವ ಹೇಗೆ ? ಹೋಗು ಇಲ್ಲಿಂದ " ಎಂದು ಆಜ್ಞೆ ನೀಡಿದನು.

ಆತನ ಮಾತು ಕೇಳಿಯೂ ಕೇಳಿಸದವಳಂತೆ ಸುರಯ್ಯಾ ಬಂದು ತನ್ನ ಬೆಡ್ ಮೇಲೆ ಕುಳಿತಳು.

  " ನೋಡು ಕಿವಿ ಕೇಳಿಸುವುದಿಲ್ಲವೋ ಹೇಗೆ ನಿನಗೆ? ಹೋಗು ಹೊರಗೆ ಅಂತ ನಾನು ಹೇಳಿದ್ದು." ಎಂದು ಸಾದ್ ತುಸು ಜೋರಾಗಿಯೇ ಹೇಳಿದನು.

 " ನಾನು ಯಾಕೆ ಹೊರಗೆ ಹೋಗಬೇಕು? ನಾನು ಎಲ್ಲಿಯೂ ಹೋಗಲಾರೆ. ನಿಮಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನನಗಿದೆ. ಹಾಗಾಗಿ ನಾನು ಇಲ್ಲೇ ಮಲಗುತ್ತೇನೆ" ಎಂದವಳೇ ಸುರಯ್ಯಾ ಮುಸುಕು ಹಾಕಿ ಮಲಗಿದಳು.

  ಆಕೆಯ ಮುಸುಕು ಎಳೆದವನೇ ಸಾದ್.. 
" ನೋಡು ನೀನು ಇಲ್ಲಿ ಮಲಗಿದರೆ ನಿಜವಾಗಿಯೂ ನಾನು ನಿನ್ನ ಮೈ ಮುಟ್ಟುತ್ತೇನೆ. ಆಮೇಲೆ ನೀನು ಕಿರುಚಾಡಿದರೂ ನಿನ್ನನ್ನು ರಕ್ಷಿಸುವವರು ಯಾರೂ ಇಲ್ಲ" ಎಂದು ಹೇಳಿದನು.

" ಪರ್ವಾಗಿಲ್ಲ ನನ್ನ ಮೈ ಮುಟ್ಟಿ.. ನೀವೇನು ಅನ್ಯ ಪುರುಷ ಅಲ್ಲ. ನೀವು ನನ್ನ ಮೈ ಮುಟ್ಟಿದರೆ ನಾನು ಯಾಕೆ ತಲೆಬಿಸಿ ಮಾಡಬೇಕು? ನಾನು ಯಾಕೆ ಕಿರುಚಬೇಕು? ನೀವು ನನ್ನ ಗಂಡ ಅಲ್ವಾ.. ನಿಮಗೆ ಅದರ ಸಂಪೂರ್ಣ ಅಧಿಕಾರ ಇದೆ."

" ನೋಡು ಹುಚ್ಚು ಹುಚ್ಚಾಗಿ ಮಾತನಾಡಬೇಡ. ನೀನು ಮೋಸ ಮಾಡಿ ನನ್ನನ್ನು ಮದುವೆಯಾಗಿದ್ದಿ ಎಂದರೆ ಅದು ನನ್ನ ಪ್ರಕಾರ ಮದುವೆ ಅಲ್ಲ. ಇನ್ನು ಗಂಡ ಹೆಂಡತಿ ಎಂದು ಹೇಳಲು ನಮ್ಮ ನಡುವೆ ಯಾವುದೇ ದೈಹಿಕ ಸಂಬಂಧವಿಲ್ಲ. ಹಾಗಾಗಿ ಗೊತ್ತಾಯಿತಲ್ಲ ? ನಾನು ತೊಲಗು ಅಂದರೆ ನೀನು ತೊಲಗಲೇ ಬೇಕು. ಸಾದ್ ನಿಷ್ಠೂರವಾಗಿಯೇ ನುಡಿದನು.

"ದೈಹಿಕ ಸಂಬಂಧ ಇಲ್ಲದಿದ್ದಲ್ಲಿ ಏನಾಯಿತು ? ಮಾನಸಿಕವಾಗಿಯೂ ನಾವಿಬ್ಬರೂ ಒಂದಾಗಿದ್ದೆವು. ಒಂದು ಕರೆ ಬರುವತನಕ ನಾನೇ ನಿಮ್ಮ ಸರ್ವಸ್ವ ಆಗಿದ್ದೆ. ಅಷ್ಟು ಬೇಗ ಅದನ್ನು ಮರೆತುಬಿಟ್ರಾ... ನಾನು ಕೂಡ ನೋಡುತ್ತೇನೆ , ಹೇಗೆ ನನ್ನ ಪತಿಯನ್ನು ಆಕೆ ನನ್ನಿಂದ ದೂರ ಮಾಡುತ್ತಾಳೆ ಎಂದು ?" 

ಹೊರಗಿನಿಂದ ಸುರಯ್ಯಾ ಮುನೀರಾ ಹೇಳಿದಂತೆ ಮಾತನಾಡುತ್ತಿದ್ದರೂ ಒಳಗಿನಿಂದ ಯಾಕೋ ಆತನನ್ನು ನೋಡಿ ಅಯ್ಯೋ ಪಾಪ ಎಂದು ಎನಿಸುತ್ತಿತ್ತು ಆಕೆಗೆ.

 ಈಕೆ ಏನು ಮಾತನಾಡಿದರೂ ಹೊರಗೆ ಹೋಗುವುದಿಲ್ಲ ಎಂದು ಖಾತರಿ ಪಡಿಸಿದ ಸಾದ್ ತಾನೇ ಹೊರಗೆ ಹೋಗಿ ಮಲಗಲು ನಿಶ್ಚಯಿಸಿದನು.

ಇಲ್ಲ ನಾನು ಹೊರಗೆ ಹೋಗಿ ಮಲಗಿದರೆ ಈಕೆಯೆದುರು ನಾನು ಸೋತಂತೆ. ಮತ್ತೆ ಆಕೆ ಈ ಮನೆಯಿಂದ ಹೊರಗೆ ಹೋಗುವ ತನಕ ನಾನು ಹೊರಗೆಯೇ ಮಲಗಬೇಕಾಗುತ್ತದೆ ಎಂದು ಯೋಚಿಸಿದವನೇ ಅಲ್ಲೇ ಮಂಚದಲ್ಲಿ ಮಲಗಿದನು. ಆತ ಅಲ್ಲೇ ಮಲಗಿರುವುದನ್ನು ನೋಡಿದ ಸುರಯ್ಯಾಳಿಗೆ ನಗು ಬಂತು.

     ಬೆಳಗಿನ ಜಾವ ಎದ್ದು ನಮಾಝ್ ಮಾಡಿ ತನ್ನ ಎಲ್ಲಾ ಕೆಲಸಗಳನ್ನು ಮಾಡಿ ತಿಂಡಿಯೆಲ್ಲಾ ತಿಂದು ಕಾಲೇಜಿಗೆ ಹೋಗಲು ರೆಡಿ ಆದಳು ಸುರಯ್ಯಾ.

    ಇಂದು ತನ್ನನ್ನು ಕರೆದುಕೊಂಡು ಸಾದ್ ಹೋಗಬಹುದೇ ಎಂಬ ಪ್ರಶ್ನೆ ಆಕೆಯ ಮನದಲ್ಲಿ ಮೂಡಿತ್ತು. ಸಮದ್ ಅಂಕಲ್ ಬಳಿ ಎಲ್ಲಾ ವಿಚಾರಗಳನ್ನು ಹೇಳಿದ್ದಾರ ಎಂಬುವುದನ್ನು ತಿಳಿಯುವ ಕುತೂಹಲ ತಡೆಯಲಾಗದೇ ಆಕೆ ಮುನೀರಾಳ ಬಳಿ ಕೇಳಲೆಂದು ಹೋದಳು.

"ಹ್ಞಾಂ ತಿಳಿಸಿದ್ದೇನೆ. ಅವರು ಕೂಡ ನನ್ನ ಮಾತಿನಂತೆ ಹೇಳಿದ್ದಾರೆ. ಹಾಗಾಗಿ ನೀನೇನು ಹೆದರಬೇಡ. ಆಕೆಯನ್ನು ಮದುವೆ ಆಗುವುದಾದರೆ ಆತ ಇಲ್ಲಿಂದ ಹೊರಡಲಿ ಎಂದು ಸಮದ್ ಕೂಡ ಹೇಳಿದ್ದಾರೆ. ಅವರಿಗೂ ಗೊತ್ತು ಸಾದ್ ಅಂತಹ ಪ್ರಯಾಸಕ್ಕೆ ಕೈ ಹಾಕುವುದಿಲ್ಲ ಎಂದು. ಹಾಗಾಗಿ ನೀನು ಭಯಪಡುವ ಅವಶ್ಯಕತೆ ಇಲ್ಲ" ಎಂದು ಮುನೀರಾ ಹೇಳಿದ ಮಾತು ಕೇಳಿ ಸುರಯ್ಯಾಳಿಗೆ ನೆಮ್ಮದಿ ಆಯಿತು.

ಅಷ್ಟರಲ್ಲಿ ಸಾದ್... ಅಮ್ಮಾ ಅಮ್ಮಾ... ಎಂದು ಕರೆಯುತ್ತಾ ಬರುವುದು ಕೇಳಿಸಿತು.

 ಏನು ಎಂದು ಮುನೀರಾ ಆತನಲ್ಲಿ ಕೇಳಿದಳು.

" ಏನಿಲ್ಲ... ಈಕೆ ನನ್ನ ಜೊತೆ ಬರಲಿ . ಸ್ವಲ್ಪ ಕೆಲಸವಿದೆ" ಎಂದು ಸಾದ್ ಹೇಳಿದಾಗ ಅವರಿಬ್ಬರಿಗೂ ವಿಷಯ ಏನು ಎಂದು ತಿಳಿಯಿತು. 

 " ಹೋಗು ಸುರಯ್ಯಾ... ಇದುವರೆಗೂ ಜೀವಂತ ಇಲ್ಲದೆ ಈಗ ಎದ್ದು ಬಂದಿರುವ ಹೆಣ್ಣು ಯಾರು ಎಂದು ನೋಡಿಕೊಂಡು ಬಾ "ಎಂದು ಮುನೀರಾ ಸುರಯ್ಯಾಳ ಕಿವಿಯಲ್ಲಿ ಗುಣುಗಿದರು.

ಅದರಂತೆಯೇ ಸುರಯ್ಯಾ ಕಾರಿನ ಎದುರು ಡೋರ್ ತೆಗೆದು ಮುಂದೆ ಕುಳಿತುಕೊಳ್ಳಲು ಹೊರಟಳಷ್ಟೆ.

  ಹಿಂದೆ ಕುಳಿತುಕೊಳ್ಳು.. ಅದು ಇನ್ನು ನಿನ್ನ ಸ್ಥಳ ಅಲ್ಲ" ಎಂದು ಸಾದ್ ಒಂದು ಚೂರು ಖಡಕ್ಕಾಗಿ ಹೇಳಿದನು.

  " ಬೇಡ, ನಾನು ಆಟೋದಲ್ಲಿ ಕಾಲೇಜಿಗೆ ಹೋಗುತ್ತೇನೆ . ನನಗೇನು ಆಕೆಯನ್ನು ನೋಡಬೇಕು ಎಂದಿಲ್ಲ" ಎಂದು ಹಿಂದಿರುಗಿ ಹೋಗಲು ನೋಡಿದಳಷ್ಟೆ.

ಅಯ್ಯೋ ಆಯಿಷಾ ಇವಳನ್ನು ಕರೆದುಕೊಂಡು ಬರಲು ಹೇಳಿದ್ದಳು. ಇನ್ನು ಈಕೆ ಬರದಿದ್ದರೆ ಆಕೆ ಕೋಪ ಮಾಡಿಕೊಳ್ಳುವಳು ಎಂದು ಎನಿಸಿದವನೇ

" ಬೇಡ ಬಾ.. ಮುಂದುಗಡೆನೇ ಕುಳಿತುಕೊಳ್ಳು" ಎಂದು ಹೇಳಿದನು. ಆತನ ಪರಿಸ್ಥಿತಿ ನೋಡಿ ಸುರಯ್ಯಾಳಿಗೆ ನಗು ಬಂದಿತು. ಆದರೂ ಅದನ್ನು ತೋರ್ಪಡಿಸದೆ ಬಂದು ಎದುರಲ್ಲಿ ಕುಳಿತುಕೊಂಡಳು. ಅವರನ್ನು ಹೊತ್ತ ಕಾರು ಮುಂದೆ ಸಾಗಿತು.



ಕಾರು ಮುಂದೆ ಸಾಗುತಲಿತ್ತು. ಆದರೆ ಪತಿ - ಪತ್ನಿಯ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಕಾರು ತನ್ನ ಕಾಲೇಜಿನ ಅಂಗಳದಲ್ಲಿ ನಿಂತಿದ್ದನ್ನು ನೋಡಿ ಸುರಯ್ಯಾ ಆಶ್ಚರ್ಯಪಟ್ಟಳು.

ಅರೇ ಆಕೆಯನ್ನು ತೋರಿಸಲು ಕರೆದುಕೊಂಡು ಹೋಗುತ್ತೇನೆ ಎಂದು ಇಲ್ಲೇ ಕಾರು ನಿಲ್ಲಿಸಿದ್ದಾರಲ್ಲ. ಆಕೆಯನ್ನು ಭೇಟಿಯಾಗಲು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ ಆಗಿರಬೇಕು ಎಂದು ಮನದಲ್ಲೇ ಯೋಚಿಸುತ್ತಾ ಸುರಯ್ಯಾ ಕಾರಿನಿಂದ ಕೆಳಗೆ ಇಳಿಯಲು ಅನುವಾದಳು.

" ಎಲ್ಲಿ ಕೆಳಗೆ ಇಳೀತಾ ಇದ್ದೀಯಾ ? ಆಕೆ ಇನ್ನೂ ಬಂದಿಲ್ಲ. ಆಕೆಯೊಂದಿಗೆ ಮಾತನಾಡಿ ಎಲ್ಲಾ ಆದಮೇಲೆ ಹೋಗು " ಎಂದು ಸಾದ್ ಹೇಳಿದನು.

 ಏನು ಆಕೆ ಇಲ್ಲಿ ಸಿಗುತ್ತೇನೆ ಎಂದಿದ್ದಾಳ? ಯಾಕೆ ನನ್ನ ಕಾಲೇಜು ಬಳಿ ಸಿಗಲು ಹೇಳಿದ್ದು? ಇನ್ನು ಇಡೀ ಕಾಲೇಜಿಗೆ ತಿಳಿದರೆ ನಾನು ಏನು ಮಾಡುವುದು?  ಎಂದು ಯೋಚಿಸುತ್ತಲೇ ಸುರಯ್ಯಾ ಆಕೆಗಾಗಿ ಕಾಯತೊಡಗಿದಳು.

ಅಷ್ಟರಲ್ಲಿ ಸಾದ್ ಮೊಬೈಲ್ ರಿಂಗಣಿಸತೊಡಗಿತು. ರಿಸೀವ್ ಮಾಡಿದ ಆತ ತಾನು ಇದ್ದ ನಿಖರವಾದ ಜಾಗವನ್ನು ಹೇಳಿದನು. ಆಕೆ ಅದೇನು ಹೇಳಿದಳೋ ಗೊತ್ತಿಲ್ಲ ಕೆಳಗಿಳಿದ ಸಾದ್ ಸುರಯ್ಯಾಳನ್ನು ಕೆಳಗೆ ಇಳಿಯುವಂತೆ  ಹೇಳಿದನು. ಆತ ಹೇಳಿದಂತೆ ಸುರಯ್ಯಾ ಕೆಳಗಿಳಿದಳು. ಇಬ್ಬರೂ ಮುಂದೆ ನಡೆಯುತ್ತಿದ್ದರು. ಅಷ್ಟರಲ್ಲಿ ಸಾದ್... ನಾನು ಇಲ್ಲಿದ್ದೇನೆ ಎಂದು ಹೇಳುವ ಹೆಣ್ಣಿನ ಧ್ವನಿ ಕೇಳಿಸಿತು. ಸಾದ್ ಜೊತೆ ಸುರಯ್ಯಾಳು ಆ ಕಡೆ ನೋಡಿದಳು. ಅಲ್ಲಿ ನಿಂತಿದ್ದ ಹುಡುಗಿಯನ್ನು ನೋಡಿ ಸುರಯ್ಯಾಳಿಗೆ ಒಮ್ಮೆಲೇ ನಿಂತ ನೆಲ ಕುಸಿದಂತಾಯಿತು.

ಅಂದರೆ ಸಾದ್ ಪ್ರೀತಿಸುತ್ತಿದ್ದ ಹುಡುಗಿ ಸಹಾನಳ? ಆಕೆಗೆ ಆಶ್ಚರ್ಯವಾಯಿತು.

ಸಹಾನ ಓಡಿ ಬಂದವಳೇ ಸಾದನ್ನು ತಬ್ಬಿ ಹಿಡಿದಳು. ಸುರಯ್ಯಾಳಿಗೆ ಯಾಕೋ ಅದು ಸರಿ ಕಾಣಲಿಲ್ಲ. ಅರೇ ಪ್ರೀತಿ ಇರಲಿ ಪ್ರೇಮವೇ ಇರಲಿ... ಆದರೆ ಆತನೀಗ ಇವಳಿಗೆ ಅನ್ಯ ಪುರುಷನಲ್ಲವೇ? 

ಅವಳ ಯೋಚನೆಗೆ ಕಡಿವಾಣ ಬೀಳುವಂತೆ  ಸಹಾನಳು ಮಾತು ಆರಂಭಿಸಿದಳು.

" ಯಾಕೆ ಸಾದ್ ಈ ರೀತಿ ನನಗೆ ಮೋಸ ಮಾಡಿದೆ. ಈ ಎರಡು ವರ್ಷಗಳಿಂದ ನಿನಗಾಗಿ ಎಷ್ಟು ಪರದಾಡುತ್ತಿಲ್ಲ ನಾನು? ಕಂಡು ಹುಡುಕಬೇಕು ಎಂದರೆ ನಿನ್ನನ್ನು ನೋಡಿಯೇ ಇಲ್ವ. ಆದರೆ ನೀನು ಯಾರು ಎಂದು ತಿಳಿಯುವಷ್ಟರಲ್ಲಿ  ಬೇರೆ ಮದುವೆಯಾಗಿದ್ದಿ ಎಂದು ತಿಳಿಯಿತು. ಯಾಕೆ ಈ ರೀತಿ ಮಾಡಿದೆ ಸಾದ್? ನನ್ನ ಪ್ರೀತಿಯಲ್ಲಿ ಏನು ಕಮ್ಮಿಯಿತ್ತು ನಿನಗೆ? 

 ಅಷ್ಟರಲ್ಲಿ ಸುರಯ್ಯಾ ನಡುವೆ ಬಾಯಿ ಹಾಕಿದವಳೇ

" ನಿನ್ನ ಹೆಸರು ಸಹಾನ ಅಲ್ವಾ? ಮತ್ಯಾಕೆ ಸಾದ್ ಬಳಿ ಸುಳ್ಳು ಹೇಳಿದೆ? ನೀನು ಇದೇ ಊರಿನಲ್ಲಿ ಇದ್ದೀಯಾ ತಾನೇ? ಹಾಗಿದ್ದರೂ ನೀನು ಯಾಕೆ ಒಮ್ಮೆಯೂ ಅವರನ್ನು ನೋಡಲಿಕ್ಕೆ ಬರಲಿಲ್ಲ ಹೇಳು? ಈಗ ಅವರು ಆರೋಗ್ಯವಂತರಾದ ಮೇಲೆ ನಿನಗೆ ನೆನಪಾಯಿತಾ ? ಸಾದ್ ಈಕೆಯನ್ನು ನಂಬಬೇಡ. ಈಕೆ ನಿನ್ನ ಆಯಿಷಾ ಆಗಿರೋದಿಕ್ಕೆ ಸಾಧ್ಯ ಇಲ್ಲ."

  " ಹ್ಞಾಂ ಸರಿ, ನಾನು ಆಯಿಷಾ ಅಲ್ಲ. ನೀನೇ ಆಯಿಷಾ ಎಂದು ಇಟ್ಟುಕೊಳ್ಳು. ಹಾಗಿದ್ದಲ್ಲಿ ನೀನು ಸಾದ್ ಜೊತೆ ಮಾತನಾಡಿದಂತಹ ಯಾವುದಾದರೂ ವಿಷಯ ಹೇಳು ನೋಡುವ? ಎಂದು ಸಹಾನ ಸುರಯ್ಯಾಳಿಗೆ ಸವಾಲು ಹಾಕಿದಳು.

"ನಾನು ಆಯಿಷಾ ಅಲ್ಲ ಎಂದು ನಾನು ಒಪ್ಪಿದ್ದೇನೆ. ಆದರೆ ನೀನು ಕೂಡ ಆಯಿಷಾ ಅಲ್ಲ. ಸಾದ್ ನೀವು ನನ್ನನ್ನು ನಂಬಿ. ಈಕೆಗೆ ನನ್ನ ಮೇಲೆ ಏನೋ ಒಂದು ಅಪರಿಮಿತವಾದ ದ್ವೇಷ.  ಅದಕ್ಕಾಗಿ ಈ ವಿಷಯದಲ್ಲೂ ತಲೆ ಹಾಕಿದ್ದಾಳೆ. ಯಾರಿಂದಲೋ ನಮ್ಮ ವಿಷಯ ಅರಿತುಕೊಂಡಿದ್ದಾಳೆ. " ಎಂದು ಸುರಯ್ಯಾ ಸಾದ್ ಬಳಿ ಪರಿ ಪರಿಯಾಗಿ ಬೇಡಿಕೊಂಡಳು.

 ಆಕೆಯ ಸ್ಥಿತಿ ನೋಡಿ ಸಹಾನ ನಗುತ್ತಿದ್ದಳು. ಸಾದ್ ಕಡೆ ತಿರುಗಿದವಳೇ ಆತನ ಕಣ್ಣಿನಲ್ಲೇ ಕಣ್ಣಿಟ್ಟು ಹಿಂದಿನ ದಿವಸದಲ್ಲಿ ಅವರಿಬ್ಬರ ನಡುವೆ ಆದಂತಹ ಮಾತುಕತೆ ಬಗ್ಗೆ ತಿಳಿಸಿದಳು. ಅದನ್ನು ಕೇಳಿದ ಸಾದ್ ಆಶ್ಚರ್ಯಗೊಂಡನು.

ಈಕೆಯೇ ತನ್ನ ಆಯಿಷಾ ಎಂದು ಆತನಿಗೆ ದೃಢವಾಯಿತು. ಆತನ ಕಣ್ಣಿನಿಂದ ಆನಂದ ಭಾಷ್ಪವು ಕೆಳಗಿಳಿಯಿತು. ಅದನ್ನು ನೋಡಿದ ಸಹಾನ

" ನೋಡು ಸಾದ್, ತಿಳಿಯದೆ ನಾನು ಈಕೆಗೆ ಮೊದಲು ಏನೋ ಅನ್ಯಾಯ ಮಾಡಿದ್ದೆ. ಅದನ್ನೇ ಮನಸ್ಸಿನಲ್ಲಿ ಇಟ್ಟ ಈಕೆ ಬೇಕೆಂದು ಸೇಡು ತೀರಿಸಲೇ ಹೀಗೆ ಮಾಡಿದ್ದಾಳೆ. ನನ್ನನ್ನು ನಿನ್ನಿಂದ ಬೇರೆ ಮಾಡಲು ಎಂದೇ ನಾಟಕ ಆಡಿದ್ದಾಳೆ. ಇಲ್ಲದಿದ್ದಲ್ಲಿ ಆಯಿಷಾ ... ಆಯಿಷಾ ... ಎಂದು ನೀನು ಆಕೆಯನ್ನು ಕರೆಯುತ್ತಿದ್ದರೂ ಆಕೆ ನಾನು ಆಯಿಷಾ ಅಲ್ಲ ಎಂದು ಯಾಕೆ ಹೇಳಲಿಲ್ಲಾ.  ಬಹು ದೊಡ್ಡ ಚಾಲಾಕಿ ಈಕೆ. ಈಕೆಯಿಂದಾಗಿ ನಾನು ಅದೆಷ್ಟು ಕಷ್ಟಪಟ್ಟೆ.   ಇಷ್ಟು ದಿನ ನಾನು ಎಲ್ಲಾ ಸಹಿಸಿದೆ. ಇನ್ನು ಸಹಿಸುವುದಿಲ್ಲ "ಎಂದು ಹೇಳಿದಳು.

ಆಕೆಯ ಮಾತು ಕೇಳಿ ಪ್ರತಿಕ್ರಿಯಿಸಿದ ಸುರಯ್ಯಾ

" ಇಲ್ಲ ನಾನಲ್ಲ ಚಾಲಾಕಿ.... ಈಕೆ ಚಾಲಾಕಿ.. ಎಲ್ಲಾ ಸುಳ್ಳನ್ನೇ ಹೇಳುತ್ತಿದ್ದಾಳೆ." ಎಂದು ಹೇಳುವಷ್ಟರಲ್ಲಿ ಸಾದ್ ಆಕೆಯ ಮಾತು ಕೇಳಲಾಗದೆ ಆಕೆಯ ಕೆನ್ನೆಗೆ ಹೊಡೆಯಲು ಎಂದು ತನ್ನ ಕೈ ಎತ್ತಿದನು.ಅಷ್ಟರಲ್ಲಿ ಯಾರೋ ಆತನ ಕೈ ಗಟ್ಟಿಯಾಗಿ ಹಿಡಿದಂತಾಯಿತು.

 ಯಾರೋ ಅಪರಿಚಿತ ಹುಡುಗ.  ಆತನಿಂದ ಸಾದ್ ತನ್ನ ಕೈ ಬಿಡಿಸಿಕೊಳ್ಳಲು ಹರಸಾಹಸ ಪಟ್ಟನು. ಆದರೆ ಆ ವ್ಯಕ್ತಿ ತನ್ನ ಹಿಡಿತವನ್ನು ಗಟ್ಟಿಗೊಳಿಸಿದನು.

 ಆಗಲೇ ಆತನತ್ತ ನೋಡಿದ ಸುರಯ್ಯಾ

 " ಮುಸ್ತಾಕ್, ನೀನು ಅವರ ಕೈ ಹಿಡಿಯಬೇಡ. ಬಿಟ್ಟು ಬಿಡು. ಇದು ಗಂಡ ಹೆಂಡತಿಯ ವಿಷಯ. ನೀನು ಯಾಕೆ ಮಧ್ಯೆ ಬರುತ್ತೀಯಾ " ಎಂದು ಕೇಳಿದಳು.

ಅಷ್ಟರಲ್ಲಿ ಮುಸ್ತಾಕ್ ತನ್ನ ಹಿಡಿತವನ್ನು ಸಡಿಲಗೊಳಿಸಿದನು.

  " ಅರೇ ಯಾಕೆ ನಾಟಕ ಮಾಡುತ್ತೀಯಾ ಸುರಯ್ಯಾ.... ನಿನ್ನ ಗಂಡನ ಬಳಿ ಹೇಳು ಆತ ನನ್ನ ಪ್ರಿಯತಮ ಎಂದು. ನೋಡು ಸಾದ್... ನಿನ್ನನ್ನು ಮದುವೆಯಾಗಿ ಈತನ ಜೊತೆ ಇಲ್ಲಿ ಚಕ್ಕಂದವಾಡುತ್ತಾಳೆ ಈಕೆ. ನಿನ್ನ ಆಸ್ತಿ ಎಲ್ಲ ಲಪಟಾಯಿಸಲು ಇವರಿಬ್ಬರೂ ಸೇರಿ ಆಡಿದ ನಾಟಕ ಇದು.  ಪಾಪ ನೀನಾದರೋ ಏನೂ ಅರಿಯದೆ ಇವರ ಬಲೆಗೆ ಬಿದ್ದೆ. ಅಷ್ಟರಲ್ಲಿ ನನಗೆ ವಿಷಯ ತಿಳಿದಿದ್ದರಲ್ಲಿ ಆಯಿತು. ಇಲ್ಲಾ ಅಂದ್ರೆ ಅಷ್ಟೇ..." ಎಂದು ಸಹಾನ ಇಲ್ಲಸಲ್ಲದ ಸುಳ್ಳುಗಳ ಸರಮಾಲೆಯನ್ನೇ ಹೇಳಿದಳು.

" ಯಾಕೆ ಸಹಾನ ಇಲ್ಲದನ್ನೆಲ್ಲಾ ಹೇಳುತ್ತಾ ಇದ್ದೀಯಾ. ನಾನೆಂದೂ ಕೂಡ ನನ್ನ ಪತಿಯ ಒಳ್ಳೆಯದನ್ನೇ ಬಯಸಿದ್ದೇನೆ ಹೊರತು ಎಂದಿಗೂ ಕೂಡ ಅವರಿಗೆ ಕೆಡುಕು ಬಯಸಿಲ್ಲ. ನಿನಗೆ ನನ್ನ ಮದುವೆ ಆಗುವ ಮುಂಚೆಯೇ ಅವರ ಬಳಿ ಹೋಗಬಹುದಿತ್ತು ಅಲ್ವಾ ? ನಿನಗೆ ಸಾದ್ ಮೇಲೆ ಎಷ್ಟು ಪ್ರೀತಿ ಇದೆಯೋ ನನಗೆ ತಿಳಿದಿಲ್ಲ. ಆದರೆ ಈಗ ನಿನ್ನ ತಲೆಯಲ್ಲಿ ನನ್ನನ್ನು ಹಾಗೂ ನನ್ನ ಪತಿಯನ್ನು ಬೇರ್ಪಡಿಸಬೇಕು ಎಂದಿದೆ. ಅದಕ್ಕಾಗಿ ಅಲ್ಲವೇ ನೀನು ಇದೆಲ್ಲಾ ಮಾಡುವುದು?" ಸುರಯ್ಯಾ ವಿನಮ್ರಳಾಗಿಯೇ ನುಡಿದಳು.

ಸಾಕು ಮುಚ್ಚು ಬಾಯಿ... ಇನ್ನೊಂದು ಮಾತು ನನ್ನ ಹುಡುಗಿಯ ಬಗ್ಗೆ ಹೇಳಬೇಡ. ಆಕೆ ನಿನ್ನ ಬಂಡವಾಳ ಬಯಲು ಮಾಡುತ್ತಿದ್ದಾಳೆ ಎಂದು ನೀನು ಆಕೆಯ ಮೇಲೆ ಇಲ್ಲಸಲ್ಲದನ್ನು ಹೇಳಬೇಡ.  ನಿನ್ನ ಬುದ್ಧಿ ಎಲ್ಲಾ ನನಗೆ ತಿಳಿದಿದ್ದು ಒಳ್ಳೆಯದಾಯಿತು. ಆದಷ್ಟು ಬೇಗ ನಿನಗೆ ಡೈವೋರ್ಸ್ ಕೊಟ್ಟು ಬಿಡುತ್ತೇನೆ. ಆಮೇಲೆ ನಿನ್ನ ಮುಖ ನಾನೆಂದೂ ನೋಡಲಾರೆ" ಎಂದು ಸಾದ್ ತನ್ನ ತೀರ್ಮಾನವನ್ನು ಹೇಳಿದನು.

" ಅರೇ ಯಾರಿಗಾಗಿ ನಿನ್ನ ಪತ್ನಿಗೆ ಡೈವೋರ್ಸ್ ಕೊಡಬೇಕು ಎಂದು ಇದ್ದೀಯಾ ? ಈ ಮಾಯಾಂಗನೆಗಾಗಿ.. ಈ ಕಾಲೇಜಿನಲ್ಲಿ ಈಕೆಯ ಬಗ್ಗೆ ವಿಚಾರಿಸು. ಯಾವೊಬ್ಬನಾದರೂ ಒಳ್ಳೆಯದು ಹೇಳಲಿ ನೋಡೋಣ. ಇನ್ನು ನಾನು ಸುರಯ್ಯಾಳನ್ನು ಪ್ರೀತಿಸಿದ್ದು ನಿಜ. ಆದರೆ ಆಕೆಯೆಂದೂ ನನ್ನನ್ನು ಆ ಭಾವದಿಂದ ಕಂಡೇ ಇಲ್ಲ. ಯಾರದೋ ಮಾತು ಕೇಳುವ ಮುನ್ನ ನೂರು ಬಾರಿ ಯೋಚಿಸು. ನೀನು ಸರಿ ಇಲ್ಲ ಎಂದು ತಿಳಿದಿದ್ದರೂ ನಿನಗಾಗಿ ಆಕೆಯ ಜೀವನವನ್ನು ತ್ಯಾಗ ಮಾಡಿದ್ದಾಳೆ. ಅಂತಹವಳ ಮೇಲೆ ಇಲ್ಲಸಲ್ಲದನ್ನು ಹೇಳಬೇಡ "ಎಂದು  ಮುಸ್ತಾಕ್ ಹೇಳಿದನು.

ಅದೆಲ್ಲವನ್ನೂ ಕೇಳಿಸಿದ ಸಾದ್ ಕೇಳದವನಂತೆ

"ಆಯಿಷಾ ನನಗೆ ಸ್ವಲ್ಪ ಕೆಲಸವಿದೆ. ನಾನು ಸಂಜೆ ಸಿಗುತ್ತೇನೆ." ಎಂದು ಹೇಳಿ ತನ್ನ ಕಾರಿನತ್ತ ನಡೆದನು.

ಆತ ಹೋದುದನ್ನು ದೃಢಪಡಿಸಿದ ನಂತರ ಸಹಾನ ಸುರಯ್ಯಾಳತ್ತ ನೋಡಿ ವ್ಯಂಗ್ಯ ನಗೆ ಬೀರಿದಳು.

" ಹೇಗಿದೆ ಸುರಯ್ಯಾ... ನಿನ್ನ ಪತಿರಾಯ ನನ್ನ ಮುಷ್ಠಿಯಲ್ಲಿ. ಇನ್ನು ನೀನು ಏನೆಂದರೂ ಸಾದಿನ ಬಾಳಿನಿಂದ ಹೊರಗೆ. ಅದಕ್ಕೆ ಹೇಳುವುದು ನನ್ನಿಂದ ದೂರ ಇರಬೇಕು ಎಂದು. ನನ್ನ ಜೊತೆ ನಿನ್ನ ಆಟ ನಡೆಯಲ್ಲ" ಎಂದು ಹೇಳಿದಳು.

" ಪರ್ವಾಗಿಲ್ಲ ಸಹಾನ... ಎಲ್ಲವನ್ನೂ ನೋಡುವನು ಒಬ್ಬ ಮೇಲಿದ್ದಾನೆ.ಆತ ಒಂದಲ್ಲ ಒಂದು ದಿನ ಸತ್ಯಕ್ಕೆ ಜಯವನ್ನು ಕೊಡಿಸುತ್ತಾನೆ.  ನೋಡ್ತಾ ಇರು.." ಎಂದ ಸುರಯ್ಯಾ ತನ್ನ ದಾರಿಯಲ್ಲಿ ತಾನು ನಡೆದಳು.

" ನೀನು ಈ ಜನ್ಮದಲ್ಲಿ ಸರಿಯಾಗಲ್ಲ ಕಣೇ... ಅಯ್ಯೋ ಎಂದು ನಿನಗೆ ಬುದ್ಧಿ ಬರುವುದಾ?   ಎಂದು ಮುಸ್ತಾಕ್ ಸಹಾನಳ ಬಳಿ ಹೇಳಿದನು.

ಆಕೆ ಅದಕ್ಕೆ ಏನೊಂದೂ ಪ್ರತಿಕ್ರಿಯೆ ನೀಡದೆ ತನ್ನ ಪಾಡಿಗೆ ಹೋದಳು.

ಸಂಜೆಯಾಗುತ್ತಿದ್ದಂತೆ ಸಾದ್ ಕಾರು ಕಾಲೇಜು ಬಳಿ ಬಂತು. ಸಹಾನ ತಕ್ಷಣ ಹೋದವಳೇ ಕಾರು ಹತ್ತಿ ಕುಳಿತಳು. ಕಾಲೇಜಿನ ಕೆಲವೊಬ್ಬರು  ಸುರಯ್ಯಾಳ ಮುಖವನ್ನೇ ನೋಡಿ ಇಡುತ್ತಿದ್ದರು. ಏನೊಂದೂ ಪ್ರತಿಕ್ರಿಯೆ ನೀಡದ ಸುರಯ್ಯಾ ಆಟೋದಲ್ಲಿ ತನ್ನ ಮನೆಯತ್ತ ತೆರಳಿದಳು.

ಸಾದ್ ಕಾರು ಮನೆಯ ಅಂಗಳದಲ್ಲಿ ಇರಲಿಲ್ಲ. ಹಾಗಾಗಿ ಎಲ್ಲೋ ಸುತ್ತಾಡಲು ಹೋಗಿರಬೇಕು ಎಂದುಕೊಂಡವಳೇ ತಾನು ಒಳಗೆ ಹೋದಳು. ಹೋದವಳೇ ಮುನೀರಾಳ ಬಳಿ ಎಲ್ಲಾ ವಿಚಾರಗಳನ್ನು ಹೇಳಿದಳು. ಸಹಾನಳನ್ನು ನಾನು ಚಿಕ್ಕವಳಿದ್ದಾಗದಿಂದಲೂ ಪರಿಚಯ ಹೊಂದಿದ್ದು ಖಂಡಿತವಾಗಿಯೂ ಇದರಲ್ಲೇನೋ ಆಕೆಯ ಮೋಸವಿದೆ.ಆದರೆ ಸಾದ್ ಯಾವುದನ್ನೂ ಕೇಳಲು ಸಿದ್ಧನಿಲ್ಲ ಎಂದು ಹೇಳಿದಳು.

  ಇದನ್ನೆಲ್ಲಾ ಕೇಳಿದ ಮುನೀರಾ ನೀನೇನು ಹೆದರಬೇಡ.. ನಾನು ಸಮದ್ ಬಳಿ ಹೇಳಿ ಆತನಿಗೆ ಬುದ್ಧಿ ಹೇಳಲು ಹೇಳುತ್ತೇನೆ ಎಂದರು.

ಅಂದು  ರಾತ್ರಿ  ಸಮದ್ ತನ್ನ ಮಗನನ್ನು ಕರೆದು  ಬೇಕಾದಷ್ಟು ಬುದ್ಧಿ ಹೇಳಿದನಲ್ಲದೆ ಆಕೆಯ ಸಹವಾಸ ಬಿಟ್ಟು ಬಿಡು ಎಂದನು. ಆದರೆ ಸಾದ್ ಅವರ ಮಾತು ಒಪ್ಪಲೇ ಇಲ್ಲ. ತಾನು ಆಕೆಯನ್ನು ಮರೆತರೆ ಮತ್ತೆ ಮುಂದಿನಂತೆ ಆಗುತ್ತೇನೆ ಎಂದು ಹೇಳಿದನು. ಅದಲ್ಲದೆ ಸುರಯ್ಯಾಳ ಬುದ್ಧಿ ಸರಿ ಇಲ್ಲ. ಆಕೆಗೆ ತಾನು ಆದಷ್ಟು ಬೇಗ ಡೈವೋರ್ಸ್ ನೀಡುವುದಾಗಿಯೂ ಎಂದು ತನ್ನ ನಿರ್ಧಾರವನ್ನು ತಿಳಿಸಿದನು.

ಅವರ ಮಾತುಕತೆಗಳನ್ನು ಎಲ್ಲಾ ಆಲಿಸಿದ ಸುರಯ್ಯಾ ಏನೊಂದೂ ಹೇಳಲಿಲ್ಲ. ಆ ದೇವರು ಹೇಗೆ ನನ್ನ ತಲೆಯಲ್ಲಿ ಬರೆದಿದ್ದಾನೆಯೋ ಹಾಗೆಯೇ ನಡೆಯಲಿ ಎಂದು ಸುಮ್ಮನಾದಳು.

   ಸಾದ್ ಹಾಗೂ ಸಹಾನಳ ಸುತ್ತಾಟ , ಮಾತುಕತೆ ಹೀಗೇ ಸಾಗುತ್ತಿತ್ತು. ಸಹಾನಳು ಬೇಕೆಂದೇ ಸುರಯ್ಯಾಳ ಎದುರಿನಲ್ಲಿ ಸ್ವಲ್ಪ ಹೆಚ್ಚಾಗಿಯೇ ಮಾಡುತ್ತಿದ್ದಳು. ಅದೊಂದು ದಿನ ಇಬ್ಬರೂ ಕಾರಿನಲ್ಲಿ ಕುಳಿತು ಒಟ್ಟಾಗಿ ಹೋಗುತ್ತಿದ್ಧರು. ಸುರಯ್ಯಾಳು ಒಂದು ಆಟೋವನ್ನು ಹಿಡಿದು ಮನೆಗೆ ತೆರಳುತ್ತಿದ್ದಳು. ಆಕೆಯ ರಿಕ್ಷಾ ತಮ್ಮ ಹಿಂದೆ ಇರುವುದನ್ನು ಗಮನಿಸಿದ ಸಹಾನ ಈಕೆ ಬೇಕಾಗಿಯೇ ನಮ್ಮನ್ನು ಫಾಲೋ ಮಾಡಿಕೊಂಡು ಬರುತ್ತಿದ್ದಾಳೆ ಎಂದೆನಿಸಿದಳು. ಈಕೆಗೆ ಇನ್ನೂ ಬೇಸರ ಮಾಡಿಸಬೇಕು ಎಂದು ಎನಿಸಿ ಒಂದು ಐಸ್ ಕ್ರೀಂ ಪಾರ್ಲರ್ ಎದುರು ಕಾರು ನಿಲ್ಲಿಸಲು ಹೇಳಿದಳು. ಅಂತೆಯೇ ಸಾದ್ ಕಾರನ್ನು ನಿಲ್ಲಿಸಿದನು. ರಿಕ್ಷಾದಲ್ಲಿ ಇದ್ದ ಸುರಯ್ಯಾ ಇದನ್ನು ನೋಡುತ್ತಾ ಇದ್ದಳಾದರೂ ಆಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.. ಇವರಿಬ್ಬರೂ ಮದುವೆಯಾದರೆಯೇ ಒಳಿತು. ಮದುವೆ ಆಗದೆ ಹೀಗೆಲ್ಲಾ ಗಂಡ - ಹೆಂಡತಿಯರ ರೀತಿಯಲ್ಲಿ ಸುತ್ತುವುದಕ್ಕಿಂತ ನಾನೇ ಇವರ ಬಾಳಿನಿಂದ ದೂರ ಸರಿಯುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಲಿ ಎಂದುಅವಳ ಮನ ಯೋಚಿಸುತ್ತಿತ್ತು.

ಇತ್ತ ಸಹಾನ ಕಾರಿನಲ್ಲಿ ಕುಳಿತವಳೇ ತನಗೆ ಐಸ್ ಕ್ರೀಮ್ ಬೇಕು ಎಂದಳು. ಹಾಗಾಗಿ ಇಬ್ಬರೂ ಪಾರ್ಲರ್ ಒಳಗೆ ನಡೆದರು.

 ಐಸ್ ಕ್ರೀಂ ಎಲ್ಲಾ ತಿಂದು ಮುಗಿಸಿದ ನಂತರ ಸಹಾನ ತನಗೆ ವಾಶ್ ರೂಮಿಗೆ ಹೋಗಲಿದೆ ಎಂದು ಹೇಳಿ ವಾಶ್ ರೂಮಿನತ್ತ ನಡೆದಳು. ಸಾದ್ ಕುಳಿತಲ್ಲೇ ಆಕೆಗಾಗಿ ಕಾಯತೊಡಗಿದನು.

ಅಷ್ಟರಲ್ಲಿ ಸಹಾನಳ ಮೊಬೈಲ್ ರಿಂಗಣಿಸತೊಡಗಿತು. ಆಕೆ ಫೋನನ್ನು ಟೇಬಲಿನಲ್ಲಿಯೆ ಇಟ್ಟು ಹೋಗಿದ್ದಳು. ಅದು ಪದೇ ಪದೇ ರಿಂಗಾಗುವುದನ್ನು ನೋಡಿದ ಸಾದ್ ಕೊನೆಗೆ ರಿಸೀವ್ ಮಾಡಲು ಎಂದು ಎತ್ತಿಕೊಂಡನು. ಮೊಬೈಲ್ ಸ್ಕ್ರೀನ್ ಮೇಲೆ ಮೈ ಬ್ರದರ್ ಅಂತ ಹೆಸರು ತೋರಿಸುತ್ತಿತ್ತು.

ತೆಗೀಬೇಕೋ ಬೇಡವೋ ಎಂಬ ದ್ವಂದ್ವ ಮನಸ್ಸಿನಲ್ಲೇ ಕೊನೆಗೂ ಸಾದ್ ಕರೆ ರಿಸೀವ್ ಮಾಡಿ ಮೊಬೈಲ್ ತನ್ನ ಕಿವಿಯಲ್ಲಿ ಇಟ್ಟುಕೊಂಡನು.

ಆತ ಹಲೋ ಮಾಡುವುದಕ್ಕಿಂತ ಮುಂಚೆಯೇ ಆ ಕಡೆಯಿಂದ ಧ್ವನಿ ಕೇಳಿಸಿತು

" ಸಹಾನ ನಾನು ಕೇಳುತ್ತಿರುವುದು ಸತ್ಯನಾ? ಆ ಹುಚ್ಚ ಸರಿಯಾದನಂತೆ ಹೌದಾ? ಆ ಸುರಯ್ಯಾ ಹೇಗೆ ಆತನನ್ನು ಸರಿ ಮಾಡಿದಳು? ಆತ ಹುಚ್ಚನಂತಾಗಲು ನಾವು ಪಟ್ಟ ಶ್ರಮ ಎಲ್ಲಾ ವ್ಯರ್ಥವಾಗಿ ಹೋಯಿತು. ಈಗ ನೀನು ಮತ್ತೊಮ್ಮೆ ಆತನನ್ನು ಮೊದಲಿನಂತೆ ಮಾಡಬೇಕು. ನೀನು ಇನ್ನು ಆತನ ಜೊತೆ ಸುತ್ತಾಡುತ್ತಾ ಇದ್ದೀಯಾ ಅಂತ ತಿಳಿದು ಬಂತು. ನಿಜವಾಗಿಯೂ ನೀನು ಆತನನ್ನು ಪ್ರೀತಿಸುತ್ತಾ ಇದ್ದೀಯಾ ? ಹಾಗೆ ಮಾಡಲು ಹೋಗಬೇಡ. ಆ ಸಮದ್ ಅದನ್ನು ಎನಿಸಿ, ಎನಿಸಿ ಹುಚ್ಚನಾಗಬೇಕು...." ಆತ ಮಾತು ಮುಂದುವರಿಸುತ್ತಲೇ ಇದ್ದ.

ಅಷ್ಟರಲ್ಲಿ ಸಹಾನ ಬರುವುದು ಕಂಡ ಸಾದ್ ಫೋನ್ ಕಟ್ ಮಾಡಿ ಸ್ವಿಚ್ಡ್ ಆಫ್ ಮಾಡಿ ಇಟ್ಟನು.

ಏನೊಂದೂ ಅರಿಯದವರಂತೆ ಆಕೆಯೊಂದಿಗೆ ಹೋಗೋಣವೇ ಎಂದು ಕೇಳಿದನು.

ಆಕೆ ತನ್ನ ತಲೆಯನ್ನು ಅಲ್ಲಾಡಿಸಿ ಸರಿ ಎಂದು ಸೂಚಿಸಿದಳು.

ಅರ್ಧ ದಾರಿಗೆ ಮುಟ್ಟುವಾಗ ಸಹಾನ ತಾನು ಇಳಿಯುತ್ತೇನೆ ಎಂದಳು. ಇಲ್ಲ ಇಂದು ನನಗೆ ನಿನ್ನ ಮನೆಯ ಬಳಿ ಬಿಡುವ ಮನಸ್ಸಾಗಿದೆ. ಹಾಗಾಗಿ  ನಾನು ಅಲ್ಲಿಯೇ ಬಿಡುತ್ತೇನೆ ಎಂದು ಸಾದ್ ಹೇಳಿದನು. ಸಹಾನ ಎಷ್ಟೇ ಬೇಡವೆಂದರೂ ಆತ ಕೇಳಲೇ ಇಲ್ಲ.  ಕೊನೆಗೂ ಆತನ  ಒತ್ತಾಯಕ್ಕೆ ಮಣಿದ ಸಹಾನ ತನ್ನ ಮನೆಯತ್ತ ಹೋಗಲು ಒಪ್ಪಿದಳು.  ತನ್ನ ಮನೆ ಹತ್ತಿರ ಬಂದಾಗ ಸಹಾನ ಇಳಿದಳು. ಆಕೆ ಒಳಗೆ ಹೋಗುವವರೆಗೂ ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ನಂತರ ಅಲ್ಲಿಂದ ಹೊರಟನು.

   ತಕ್ಷಣ ತನ್ನ ಗೆಳೆಯನಿಗೆ ಕರೆ ಮಾಡಿದವನೇ ಸಹಾನಳ ಅಡ್ರೆಸ್ ಹೇಳಿ ತನಗೆ ಈಗಲೇ ಡೀಟೈಲ್ಸ್ ಬೇಕು ಎಂದನು.

   ಕೆಲವೊಂದು ನಿಮಿಷಗಳ ನಂತರ ಗೆಳೆಯನು ಮತ್ತೆ ಕರೆ ಮಾಡಿದನು.

 ಹಲೋ ಸಾದ್, ಹ್ಞಾಂ ಆ ಅಡ್ರೆಸ್ ಯಾರದು ಎಂದು ತಿಳಿಯಿತು.  ಆತ ಇಲ್ಲಿ ನಿಮ್ಮ ಆಫೀಸಿನಲ್ಲಿ ವರ್ಕ್ ಮಾಡುತ್ತಾ ಇದ್ದ . ಶಫೀಕ್ ಅಂತ ಆತನ ಹೆಸರು. ಇಲ್ಲಿ ಏನೋ ತುಂಬಾ ಮಾಹಿತಿಯನ್ನು ಸಂಗ್ರಹಿಸಿ ಬೇರೆ ಕಡೆ ಕಳುಹಿಸುತ್ತಾ ಇದ್ದ ಅಂತ ಹೇಳಿ ನಿನ್ನ ತಂದೆಗೆ ವಿಷಯ ತಿಳಿಯಿತು. ಹಾಗೆ ಗೊತ್ತಾದಾಗ ಎಲ್ಲರ ಎದುರೇ ನಿನ್ನ ತಂದೆ ಆತನ ಮರ್ಯಾದೆ ತೆಗೆದಿದ್ದು ಅಲ್ಲದೆ ಆತನನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಹಾಗಾಗಿ ಆತ ತನ್ನ ಸೇಡನ್ನು ತೀರಿಸಿಕೊಳ್ಳಲು ಸಮಯವನ್ನು ಕಾಯುತ್ತಾ ಇದ್ದ. ಯಾಕೆ ಸಾದ್ ಈಗ ಅವನ ವಿಷಯ? " ಎಂದು ಗೆಳೆಯ ಸಾದ್ ಬಳಿ ಕೇಳಿದನು.

"ಇಲ್ಲ ಕಣೋ ಸ್ವಲ್ಪ ಬೇಕಾಗಿತ್ತು ಹಾಗೇ ಕರೆ ಮಾಡಿದೆ. ಸರಿ ಬೈ "ಎಂದು ಕರೆ ಕಟ್ ಮಾಡಿದರು.

ಅಯ್ಯೋ ಈ ರೀತಿ ಎಲ್ಲಾ ಮೋಸದ ಜಾಲ ಎಳೆದಿದ್ದಾರಲ್ಲ. ನನಗೊಂದೂ ತಿಳಿಯಲಿಲ್ಲ. ನನ್ನ ಸುರಯ್ಯಾ ಅದೆಷ್ಟು ಹೇಳಿದರೂ ನಾನು ಆಕೆಯನ್ನೇ ಸಂಶಯ ಪಟ್ಟೆ. ಈ ಹೆಣ್ಣಿನ ಮಾತು ಕೇಳಿ  ಆಕೆಗೆ ಅದೆಷ್ಟು ನೋವನ್ನು ನೀಡಿದೆ. ತನ್ನ ಗಂಡ ಪರ ಸ್ತ್ರೀಯೊಂದಿಗೆ ಸುತ್ತುವಾಗ ಆಕೆಗೆ ಅದೆಷ್ಟು ನೋವಾಗಿರಬಹುದು. ಆದರೂ ಆಕೆ ಎಲ್ಲವನ್ನೂ ಸಹಿಸಿದಳು.  ಯಾರಿಗಾಗಿ ಪಾಪ? ನನಗೋಸ್ಕರ ಆಕೆಯ ಬಾಳನ್ನು  ತ್ಯಾಗ ಮಾಡಿದ್ದಾಳೆ ಎಂದು ಆ ಮುಸ್ತಾಕ್ ಹೇಳಿದ. ಆದರೂ ನಾನು ನಂಬಲಿಲ್ಲ. ಛೇ ನಾನು ಒಬ್ಬ ಮನುಷ್ಯನಾ? ಸಹಾನ ನಿನ್ನನು ನಾಳೆ  ನೋಡ್ಕೋತೀನಿ... ಅದಕ್ಕಿಂತಲೂ ಮೊದಲು ಹೋಗಿ ನನ್ನ ಸುರಯ್ಯಾಳ ಬಳಿ ಕ್ಷಮೆ ಕೇಳಬೇಕು ಎಂದು ಎನಿಸಿದವನೇ ಭರದಿಂದ ಕಾರನ್ನು ತನ್ನ ಮನೆಯತ್ತ ಓಡಿಸಿದನು.

       ಮನೆಗೆ ಮುಟ್ಟಿದ ಕೂಡಲೇ ಕಾರಿನಿಂದ ಇಳಿದು ಸುರಯ್ಯಾ..... ಸುರಯ್ಯಾ... ಎಂದು ಕೂಗಿಕೊಂಡೇ ಮನೆಯ ಒಳಗೆ ನಡೆದನು.

ತನ್ನ ಮಗ ಆ ರೀತಿಯಾಗಿ ಸುರಯ್ಯಾಳನ್ನು ಕರೆಯುವುದನ್ನು ಕೇಳಿಸಿದ  ಮುನೀರಾ ಹೊರಗೆ ಬಂದು

" ಏನಾಯಿತು ? ಯಾಕೆ ಈ ರೀತಿ ಬೊಬ್ಬೆ ಇಡುತ್ತಾ ಇದ್ದೀಯಾ" ಎಂದು ಕೇಳಿದರು.

  " ಅಮ್ಮಾ .. ನನಗೆ ಸುರಯ್ಯಾಳಲ್ಲಿ ಮಾತನಾಡಲಿಕ್ಕೆ ಇದೆ. ಎಲ್ಲಿ ಅವಳು ? "

"ಅವಳು ಇಲ್ಲಿ ಇಲ್ಲ ಕಣೋ....   ಯಾಕೋ ಮನೆಗೆ   ಬಂದವಳೇ ತುಂಬಾ  ಬೇಸರದಿಂದ ಇದ್ದಳು. ಏನಾಯಿತು ಎಂದು ಕೇಳಿದರೆ ಹೇಳಲೇ ಇಲ್ಲ.. ಹಾಗೇ ತನ್ನ ಕೆಲವೊಂದು ಡ್ರೆಸ್ ತೆಗೆದುಕೊಂಡು ಮನೆಗೆ ಹೋಗಲು ಸಿದ್ಧಳಾದಳು.  ನಾನು ಅದೆಷ್ಟು ತಡೆದರೂ ಆಕೆ ಕೇಳಲೇ ಇಲ್ಲ. ನಿಮ್ಮ ಮಗನಿಗೆ ಇನ್ನು ನನ್ನ ಅಗತ್ಯವಿಲ್ಲ.  ಅವರಿಗೆ ಬೇಕಾದುದು ಅವರಿಗೆ ಸಿಕ್ಕಿದೆ. ಇನ್ನು ನಾನು ಇಲ್ಲಿ ನಿಂತರೆ ಅವರಿಗೆ ತಡೆ ಗೋಡೆಯಾದಂತೆ.  ಹಾಗಾಗಿ ಇನ್ನು ನಾನು ಇಲ್ಲಿ ನಿಲ್ಲುವುದಿಲ್ಲ. ಅವರು ಡೈವೋರ್ಸ್ ಪೇಪರ್ ಕಳುಹಿಸಿದರೆ ಬೇಕಿದ್ದಲ್ಲಿ ಕಾನೂನು ಪ್ರಕಾರ ಸಹಿ ಹಾಕಿ ಕೊಡುತ್ತೇನೆ ಹೊರತು ನನಗೆ ಎಂದೆಂದಿಗೂ ಅವರೇ ನನ್ನ ಪತಿ" ಎಂದು ಹೇಳಿ  ಹೋಗಿದ್ದಾಳೆ.

 " ಆಕೆ ಹೋಗಿದ್ದಾದರೂ ಎಲ್ಲಿಗೆ ಅಮ್ಮಾ... ನನಗೆ ಆಕೆ ಬೇಕು.  ಎಲ್ಲಿ ಹೋಗಿರಬಹುದು ಹೇಳು? ಈಗಲೇ ಕರೆದುಕೊಂಡು ಬರುತ್ತೇನೆ."

 " ಯಾಕೆ ಸಾದ್? ಮತ್ತೆ ನಿಮ್ಮ ಕೈಯಲ್ಲಿ ಆಗುವಷ್ಟು ಕಿರುಕುಳ ನೀಡುವುದಕ್ಕಾ ? "

 " ಅಲ್ಲಾ... ಅಮ್ಮಾ...   ನನಗೆ ಆಕೆ ಬೇಕು. ಆಕೆಯ ಬೆಲೆ ಏನು ಎಂದು ನಾನು ಈಗ ತಿಳಿದಿರುವೆ?  ನಾನು ಆಕೆಯನ್ನು ಇಲ್ಲಿಗೆ ಕರೆದುಕೊಂಡು ಬರುವೆ. ಹೇಳಿ ಬೇಗ? "

ಮಗನ ಮಾತು ಕೇಳಿ ಮುನೀರಾಳಿಗೆ ಖುಷಿಯಾಯಿತು. ಆಕೆ ತನ್ನ ತವರಿಗೆ ಹೋಗಿದ್ದಾಳೆ. ಬೇಗ ಹೋಗಿ ಕರೆದುಕೊಂಡು ಬಾ ಎಂದು ಮಗನಲ್ಲಿ ಹೇಳಿದರು.

ಅದರಂತೆ ಸಾದ್ ಬೇಗನೇ ಸುರಯ್ಯಾಳ ಮನೆಯತ್ತ ತನ್ನ ಕಾರನ್ನು ಚಲಾಯಿಸಿದನು. ಅವರ ಮನೆಗೆ ಮುಟ್ಟಿ ನೋಡಿದಾಗ ಸುರಯ್ಯಾಳ ತಂದೆ ಮನೆಯ ಹೊರಗಡೆಯೇ ಇದ್ದರು. ಅವರು ಅಳಿಯನನ್ನು ಕಂಡೊಡನೆ ಖುಷಿಯಿಂದ ಅವನ ಬಳಿ ಹೋಗಿ ಕುಶಲೋಪರಿ ಮಾತನಾಡಿ ಒಳಗೆ ಕರೆದುಕೊಂಡು ಹೋದರು. ತನ್ನ ಪತ್ನಿಯಲ್ಲಿ ಅಳಿಯ ಬಂದ ವಿಷಯವನ್ನೂ ಹೇಳಿದರು. ಸಫಿಯ್ಯಾದ ತಾನು ಏನಾದರು ಕುಡಿಯಲು ಮಾಡಿ ತರುತ್ತೇನೆ ಎಂದರು.  ಸರಿ ಎಂದ ಖಾದರ್ ಹೊರಗೆ ಬಂದು ಸಾದ್ ಜೊತೆ ಮಾತನಾಡುತ್ತಾ ಇದ್ದರು. ಮಾತಿನ ನಡುವೆಯಲ್ಲಿ 

 ಏನು ಅಳಿಯಂದ್ರೇ ಒಬ್ಬರೇ ಬಂದಿದ್ದೀರಿ? ಸುರಯ್ಯಾ ಬರಲಿಲ್ಲವೇ ಒಟ್ಟಿಗೆ? "ಎಂದು ಕೇಳಿದರು.

 ಅವರ ಮಾತು ಕೇಳಿ ಸಾದ್ ಆಶ್ಚರ್ಯಗೊಂಡನು. ಅಂದರೆ ಸುರಯ್ಯಾ ಇನ್ನೂ ಇಲ್ಲಿಗೆ ಬರಲಿಲ್ಲವೇ ಎಂದು ಯೋಚಿಸಿದನು.

ಇತ್ತ ತನ್ನ ಮೊಬೈಲ್ ಸ್ವಿಚ್ ಆಫ್ ಆದುದನ್ನು ನೋಡಿದ ಸಹಾನ ಮೊಬೈಲ್ ಆನ್ ಮಾಡಿದಳು. ಸ್ಕ್ರೀನ್ ಮೇಲೆ ಮೈ ಬ್ರದರ್ ನಂಬರ್ ಮಿಸ್ಡ್ ಕಾಲ್ ತೋರಿಸುತ್ತಾ ಇದ್ದವು. ಯಾಕೆ ಇಷ್ಟೊಂದು ಕರೆ ಮಾಡಿದ್ದಾನೆ ಎಂದು ಕೇಳೋಣವೆಂದು ಆ ನಂಬರಿಗೆ ಡಯಲ್ ಮಾಡಿದಳು.

      ಅತ್ತ ಕಡೆಯಿಂದ ಆತ ರಿಸೀವ್ ಮಾಡಿದೊಡನೆ " ಏನು ಅಷ್ಟೊಂದು ಕರೆ ಮಾಡಿದ್ದೀಯಾ ? ಏನು ವಿಷಯ ?" ಎಂದು ಕೇಳಿದಳು.

   " ಅರೇ ನಾನು ಆಗಲೇ ವಿಷಯ ಹೇಳಿದೆನಲ್ಲಾ. ನೀನು ಯಾಕೆ ಏನೊಂದೂ ಹೇಳದೆ ಫೋನ್ ಕಟ್ ಮಾಡಿದೆ ? ನಾನು ಮತ್ತೆ ಪ್ರಯತ್ನಿಸಿದೆ. ಆದರೆ ನಿನ್ನ ಮೊಬೈಲ್ ಸ್ವಿಚ್ ಆಫ್ ಬರುತ್ತಾ ಇತ್ತು. "

" ಏನು ಹೇಳುತ್ತಾ ಇದ್ದೀಯಾ ಅಣ್ಣಾ ನೀನು? ಮೊಬೈಲ್ ಸ್ವಿಚ್ ಆಫ್ ಆಗಿತ್ತೇನೋ ನಿಜ. ಆದರೆ ನಾನು ನಿನ್ನ ಕರೆ ರಿಸೀವ್ ಮಾಡಿಲ್ಲ. ನಾನು ಈಗಷ್ಟೇ ಮೊಬೈಲ್ ತೆಗೆದಿದ್ದು? ಕಾಲ್ ರಿಸೀವ್ ಮಾಡಿದಾಗ ನೀನು ಏನೆಂದು ಮಾತನಾಡಿದ್ದೀಯಾ? "

"ಅಂದರೆ ನೀನು ಕರೆ ರಿಸೀವ್ ಮಾಡದಿದ್ದರೆ ಮತ್ಯಾರು ಮಾಡಿದ್ದು? ನಿನ್ನ ಜೊತೆ ಯಾರು ನಿನ್ನ ಗೆಳತಿಯರು ಇದ್ದರು? ನಾನು ಆ ಸಾದ್ ಬಗ್ಗೆ ಮಾತನಾಡಿದ್ದೆ" ಎಂದು  ಆತ ತಾನು ಏನು ಮಾತನಾಡಿದ್ದೇನೆ ಎಂಬುದನ್ನು ಹೇಳಿದನು.

   "ಅಯ್ಯೋ..... ನಾನು ಸತ್ತೆ. ಯಾಕೆ ಈ ರೀತಿ ಮಾಡಿದೆ ನೀನು. ನಿಲ್ಲು ಒಂದು ನಿಮಿಷ ನಾನು ನಿನಗೆ ಕರೆ ಮಾಡುತ್ತೇನೆ" ಎಂದು ಸಹಾನ ಆತನ ಕರೆ ಕಟ್ ಮಾಡಿದಳು.

 ಅಯ್ಯೋ.. ನನ್ನ ಜೊತೆ ಇದ್ದಿದ್ದು ಸಾದ್ ಅಲ್ವಾ? ನಾನು ವಾಶ್ ರೂಮಿಗೆ ಹೋಗಬೇಕಾದರೆ ಮೊಬೈಲ್ ಹೊರಗೆ ಟೇಬಲ್ ಬಳಿ ಇಟ್ಟು ಹೋಗಿದ್ದೆ. ಆತನೇನಾದರೂ ರಿಸೀವ್ ಮಾಡಿದನಾ ಹೇಗೆ ? ಒಂದು ವೇಳೆ ಆತ ಎಲ್ಲಾ ಕೇಳಿಸಿಕೊಂಡರೆ ನಮ್ಮ ಬಂಡವಾಳ ಬಯಲಾದಂತೆ. ಓಹ್ ಈಗ ನಾನು ಏನು ಮಾಡಲಿ ? ಒಂದು ಕೆಲಸ ಮಾಡುತ್ತೇನೆ. ನೇರವಾಗಿ ಸಾದಿಗೆ ಕರೆ ಮಾಡುತ್ತೇನೆ. ಆತನ ಮಾತಿನಲಿ ನನಗೆ ತಿಳಿಯಬಹುದು ಎಂದು ಯೋಚಿಸುತ್ತಾ ಸಹಾನ ಆತನ ನಂಬರಿಗೆ ಕರೆ ಮಾಡಿದಳು.

ಇತ್ತ ಸುರಯ್ಯಾ ಈಗ ಬರುತ್ತಾಳೆ... ಈಗ ಬರುತ್ತಾಳೆ ಎಂದು ಕಾಯುತ್ತಾ ಕುಳಿತಿದ್ದ ಸಾದ್ ತನ್ನ ಮೊಬೈಲ್ ರಿಂಗಣಿಸಿದಾಗ ತೆಗೆದು ನೋಡಿದನು. ಸಹಾನಳ ನಂಬರ್ ಕಂಡಾಗ ಆಕೆಯನ್ನು ತಿಂದು ಬಿಸಾಕುವಷ್ಟು ಕೋಪ ಬಂದಿತು ಆತನಿಗೆ. ಆದರೂ ಯಾವುದನ್ನೂ ತೋರಿಸಕೂಡದು, ಆಕೆಗೆ ಬುದ್ಧಿ ಕಲಿಸಬೇಕು ಎಂದು ಕೊಂಡವನೇ ಫೋನ್ ರಿಸೀವ್ ಮಾಡಿ ಏನು ಎಂದು ಕೇಳಿದನು.

"ಏನಿಲ್ಲಾ ಸಾದ್, ನೆನಪಾಯಿತು ಹಾಗೇ ಕರೆ ಮಾಡಿದೆ "ಎಂದಳು.

  " ಹೌದಾ.. ಒಂದು ಚೂರು ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ನಂತರ ಕರೆ ಮಾಡುತ್ತೇನೆ" ಎಂದು ಸಹಜವಾಗಿಯೇ ಹೇಳಿದನು.

ಆತನ ಮಾತು ಕೇಳಿ ಸಹಾನಳಿಗೆ ಖುಷಿಯಾಯಿತು. ಅಬ್ಬಾ ಈತನಿಗೆ ಏನೂ ಗೊತ್ತಾಗಲಿಲ್ಲ ಅಲ್ವಾ... ಒಂದು ವೇಳೆ ಮೊಬೈಲ್ ನನ್ನ ಕೈಯಲ್ಲಿ ರಿಸೀವ್ ಆಗಿತ್ತೋ ಏನೋ ಎಂದುಕೊಂಡಳು. ಏಕೋ ಏನೋ ಸಾದ್ ಬಗ್ಗೆ ಯೋಚಿಸುವಾಗ ಅವಳಿಗೆ ಅರಿವಿಲ್ಲದಂತೆಯೇ ಅವಳ ಮುಖದಲ್ಲಿ ನಗುವೊಂದು ಮೂಡಿತು. ಅರೇ ನನ್ನನ್ನು ಅದೆಷ್ಟು ಪ್ರೀತಿಸುತ್ತಾನೆ. ನಾನು ಎಂದರೆ ಆತನ ಸರ್ವಸ್ವ. ಹಾಗಿದ್ದ ಮೇಲೆ ನಾನು ಯಾಕೆ ಸಾದ್ ಜೊತೆ ಮದುವೆಯಾಗಬಾರದು ಎಂದು ತನ್ನಷ್ಟಕ್ಕೇ ಆಕೆ ಯೋಚಿಸುತ್ತಿದ್ದಳು.

   ಕುಡಿಯಲು ಜ್ಯೂಸ್ ಹಾಗೂ ತಿಂಡಿ ಅಳಿಯನ ಎದುರು ತಂದಿತ್ತ ಸಫಿಯ್ಯಾ ಮಗಳ ಬಗ್ಗೆ ವಿಚಾರಿಸಿದರು.

"ಅಲ್ಲಾ ಅಳಿಯಂದ್ರೇ... ಆಕೆಯನ್ನು ಕರೆದುಕೊಂಡು ಬರಬಹುದಿತ್ತಲ್ವಾ ? ಯಾಕೆ ಸುರಯ್ಯಾ ಬರಲಿಲ್ಲ? "

ಅವರ ಮಾತಿಗೆ ಏನು ಪ್ರತಿಕ್ರಿಯೆ ನೀಡುವುದು ಎಂದೇ ಸಾದಿಗೆ ತೋಚಲಿಲ್ಲ. 

 " ಅದೂ ಆಕೆಗೆ ಕಾಲೇಜು ಇತ್ತಲ್ವ? ಹಾಗೆ ಲೇಟಾಗಬಹುದು ಎಂದು ಎನಿಸಿದೆ. ಮತ್ತೆ ನನಗೆ ಇಲ್ಲೇ ಪಕ್ಕದ ಊರಿನಲ್ಲಿ ಸ್ವಲ್ಪ ಕೆಲಸವಿತ್ತು. ಹಾಗೇ ಬಂದಿದ್ದೆ. ಇನ್ನೊಂದು ಸಲ ಒಟ್ಟಿಗೆ ಬರುತ್ತೇವೆ ಸರಿಯಾ? " ಎಂದು ಸಾದ್ ಅವರ ಮನಸ್ಸಿಗೆ ಸಮಾಧಾನ ಆಗಲಿ ಎಂದು ಸುಳ್ಳು ಹೇಳಿದನು.

   ನಂತರ ತಾನು ಅಲ್ಲಿಂದ ಹೊರಡಿದನು. ದಾರಿಯಲ್ಲಿ ಬರಬೇಕಾದರೆ ಅಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದನು. ಅವರಿಗೂ ಆಘಾತವಾಯಿತು. ಮನೆಗೆ ಹೋಗಿಲ್ಲ ಎಂದರೆ ಈ ಹುಡುಗಿ ಎಲ್ಲಿ ಹೋಗಿರಬಹುದು ಎಂದು ಆಲೋಚಿಸಿದರು.

  ತಕ್ಷಣ ನೆನಪಾದವರಂತೆ " ಹ್ಞಾಂ ಸಾದ್... ನಿನ್ನ ಮದುವೆ ಆಗುವ ಸಮಯದಲ್ಲಿ ಆಕೆ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದಳು. ಎಲ್ಲಿಯಾದರೂ ಅಲ್ಲಿಗೇ ಹೋಗಿರಬಹುದಾ? ಅಲ್ಲಿ ಹೋಗಿ ಒಮ್ಮೆ ವಿಚಾರಿಸು" ಎಂದರು.

ಅವರ ಮಾತಿಗೆ ಸರಿ ಎಂದ ಸಾದ್ ಹಾಸ್ಟೆಲ್ ಕಡೆ ತನ್ನ ಕಾರನ್ನು ಚಲಾಯಿಸಿದನು.

    ಹಾಸ್ಟೆಲ್ ಬಳಿ ತಲುಪಿದಾಗಲೇ ಕತ್ತಲೆ ಕವಿದಿತ್ತು. ವಾಚ್ ಮ್ಯಾನ್ ಒಳ ಹೋಗಲು ಬಿಡಲೇ ಇಲ್ಲ. ತನ್ನ ಪರಿಸ್ಥಿತಿ ಎಲ್ಲಾ ಆತನ ಬಳಿ ಹೇಳುತ್ತಲಿದ್ದನು. ಅಷ್ಟರಲ್ಲಿ ಯಾವುದೋ ಕೆಲಸದ ನಿಮಿತ್ತ ರೂಮಿನಿಂದ ಹೊರ ಬಂದ ತಾಹಿರ ಸಾದ್ನನ್ನು ನೋಡಿದಳು.ಯಾಕೆ ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಬಂದಿದ್ದಾನೆ ಎಂದು ವಿಚಾರಿಸಲು ಅತ್ತ ನಡೆದಳು.

ತಾಹಿರ ಬಂದುದನ್ನು ನೋಡಿದ ಸಾದ್ ಆಕೆಯ ಬಳಿ ಸುರಯ್ಯಾ ಎಲ್ಲಿ ಎಂದು ವಿಚಾರಿಸಿದನು.

 " ಏನು ಹೇಳುತ್ತಾ ಇದ್ದೀರಾ ? ಸುರಯ್ಯಾ ನಿಮ್ಮ ಮನೆಯಲ್ಲಿ ಇಲ್ಲವಾ ? ನಾನು ಆಕೆಯನ್ನು ಸಂಜೆ ಕಾಲೇಜಿನಲ್ಲಿ ನೋಡಿದ್ದು. ಆಮೇಲೆ ಕಂಡಿಲ್ಲ " ಎಂದು ಹೇಳಿದಳು.

ಆಕೆಯ ಮಾತು ಕೇಳಿ ಸಾದಿನ ಆತಂಕ ಹೆಚ್ಚಾಯಿತು.

ಅರೇ ಮನೆಯಲ್ಲೂ ಇಲ್ಲ..ತನ್ನ ಮನೆಗೂ ಹೋಗಿಲ್ಲ... ಹಾಸ್ಟೆಲಿಗೆ ಹೋಗಿಲ್ಲ ಎಲ್ಲಿದ್ದಾಳೆ ಈ ಹುಡುಗಿ ? ಎಂದು ಸಾದ್ ಯೋಚಿಸುತ್ತಲಿದ್ದನು.
  
  ನಾನು ಬಸ್ ಸ್ಟ್ಯಾಂಡ್ ಅಲ್ಲಿ ಎಲ್ಲಾ ಹುಡುಕುತ್ತೇನೆ ಎಂದು ಸಾದ್ ತೆರಳಲು ಎಂದು ಅನುವಾದನು.


ತಾಹಿರಾಳಿಗೆ ಆತನ ಪರಿಸ್ಥಿತಿ ನೋಡಿ ಯಾಕೋ ಬೇಸರವಾಗುತ್ತಿತ್ತು. ನಿನ್ನೆಯವರೆಗೂ ಸಹಾನಳ ಹಿಂದೆ ಮುಂದೆ ತಿರುಗುತ್ತಾ ಇದ್ದ. ಈಗ ಸುರಯ್ಯಾಳನ್ನು ಈ ರೀತಿ ಹುಡುಕುತ್ತಿದ್ದಾನೆ. ಏನಾಗಿರಬಹುದು? ಸುರಯ್ಯಾ ಎಲ್ಲಿ ಹೋಗಿರಬಹುದು ಎಂದು ಆಕೆಯ ಮನಸ್ಸು ಕೂಡ ಯೋಚಿಸುತ್ತಿತ್ತು. ತಕ್ಷಣ ತಲೆಗೇ ಎನೋ ಹೊಳೆದವಳಂತೆ

  " ಮುಸ್ತಾಕ್ ಜೊತೆ ಕೇಳೋಣ. ಆತನಿಗೆ ಏನಾದರೂ ತಿಳಿದಿರಬಹುದು ಎಂದಳು."

ಆಕೆಯ ಮಾತು ಕೇಳಿ ಸಾದ್ ಮುಖ ಸಪ್ಪೆಯಾಯಿತು.

" ಹಾಗಿದ್ದಲ್ಲಿ ಸಹಾನ ಹೇಳಿದ್ದು ನಿಜವೇ? ಎಲ್ಲಾ ಹುಡುಗಿಯರು ಒಂದೇ ರೀತಿಯ? ಮುಸ್ತಾಕ್ ಹಾಗೂ ಸುರಯ್ಯಾಳ ನಡುವೆ ಪ್ರೀತಿ ಇತ್ತಾ? ಎಂದು ತಾಹಿರಾಳ ಜೊತೆ ಕೇಳಿದನು.

" ಅರೇ ನೀವು ಏನೂಂತ ಮಾತನಾಡುತ್ತಾ ಇದ್ದೀರಾ ಸಾದ್? "ಎಂದು ಕೇಳಿ ತಾಹಿರ ಕಾಲೇಜಿನಲ್ಲಿ ನಡೆದ ಪ್ರತಿ ಘಟನೆಯನ್ನು ಸಾದ್ ಬಳಿ ವಿವರಿಸಿ ಹೇಳಿದಳು.

" ಅರೇ ತನ್ನ ಸುರಯ್ಯಾಳಿಗೆ ಇಷ್ಟೆಲ್ಲಾ ಕಷ್ಟವನ್ನು ಆ ಹುಡುಗಿಯು ನೀಡಿದ್ದಾಳ? ಆದರೂ ಆಕೆ ಎಲ್ಲವನ್ನೂ ಸಹಿಸಿದಳು. ಇಂದಿಗೂ ಎಲ್ಲರ ಮನವನ್ನು ತನ್ನ ಸಹನೆಯಿಂದ ಗೆದ್ದಳು. ನಿಜವಾಗಿಯೂ ನಾನು ಭಾಗ್ಯವಂತ. ಅಂತಹ ಹೆಣ್ಣು ನನ್ನ ಪತ್ನಿಯಾಗಿ ಸಿಗುವುದಕ್ಕೆ. ಸರಿ ಕೊನೆಯ ಪ್ರಯತ್ನ ಎಂಬಂತೆ ಮುಸ್ತಾಕಿಗೆ ಕರೆ ಮಾಡು ಎಂದನು.

ಆಕೆ ಕರೆ ಮಾಡಬೇಕು ಎನ್ನುವಷ್ಟರಲ್ಲಿ ಸಾದ್ ಮೊಬೈಲ್ ರಿಂಗಣಿಸತೊಡಗಿತು.

ಆತನ ಅಮ್ಮ ಕರೆ ಮಾಡಿದ್ದರು.

" ಹ್ಞಾಂ .... ಸುರಯ್ಯಾ ಬಂದಿದ್ದಾಳೆ ಕಣೋ...."

  ಅಮ್ಮನ ಮಾತು ಕೇಳಿ ಸಾದ್ ಸಂತಸಕ್ಕೆ ಪಾರವೇ ಇರಲಿಲ್ಲ. ತಕ್ಷಣ ತಾಹಿರಾಳಿಗೆ ವಿಷಯ ತಿಳಿಸಿ ಅಲ್ಲಿಂದ ಹೊರಟನು.

ಎಷ್ಟು ವೇಗವಾಗಿ ಮನೆಗೆ ಬಂದು ತಲುಪಿದನೋ ಆತನಿಗೆ ತಿಳಿದಿರಲಿಲ್ಲ. ಮನೆಯೊಳಗೆ ಬಂದಾಗ ಅಲ್ಲಿದ್ಧ ಸುರಯ್ಯಾಳನ್ನು ನೋಡಿ ಓಡಿ ಹೋಗಿ ಆಕೆಯನ್ನು ತಬ್ಬಿ ಹಿಡಿದನು.

 "ಏನಾಯ್ತು ಸುರಯ್ಯಾ..... ಎಲ್ಲಿದ್ದೆ ನೀನು ? ನೀನು ಇರದ ಈ ಮೂರು ಗಂಟೆ ನನಗೆ ಮೂವತ್ತು ವರ್ಷಗಳಂತಾಯಿತು. ನಿನ್ನನ್ನು ನಾನು ಇಷ್ಟೊಂದು ಹಚ್ಚಿಕೊಂಡು ಇದ್ದೇನೆ ಎಂದು ಇಂದೇ ನನಗೆ ತಿಳಿದಿದ್ದು. ಇನ್ನು ಯಾವತ್ತೂ ನನ್ನ ಬಿಟ್ಟು ಹೋಗುವ ವಿಚಾರ ಮಾಡಬೇಡ. ನಿನ್ನ ಬಿಟ್ಟು ಬದುಕುವ ಶಕ್ತಿ ನನ್ನಲ್ಲಿ ಇಲ್ಲ ಸುರಯ್ಯಾ.... " ಎಂದು ಇನ್ನಷ್ಟು ಬಿಗಿಯಾಗಿ ಆಕೆಯನ್ನು ತಬ್ಬಿ ಹಿಡಿದನು.

ಸುರಯ್ಯಾಳಿಗೆ ಇದು ಕನಸೋ ನನಸೋ ಒಂದೂ ತಿಳಿಯಲಿಲ್ಲ.ಆಕೆಗೆ ತನ್ನ ಎಷ್ಟೋ ದಿನಗಳ ಕನಸು ಇಂದು ನಿಜವಾದಂತೆ ಕಂಡಿತು. ಆ ತೋಳುಗಳಲ್ಲಿ ಬಂಧಿಯಾಗಲು ಆಕೆ ಎಂದೋ ಕಾಯುತ್ತಾ ಇದ್ದಳು. ಇಂದು ಆ ತೋಳುಗಳು ತಾನಾಗಿಯೇ ತನ್ನನ್ನು ಬಳಸಿ ನಿಂತಾಗ ಹೇಗಾಗಿರಬಹುದು ಆಕೆಯ ಮನಸಿಗೆ.

ಸುರಯ್ಯಾ ಏನೂ ಮಾತನಾಡದೆ ಇರುವುದನ್ನು ಗಮನಿಸಿದ ಸಾದ್

 " ನೀನು ಎಲ್ಲಿ ಹೋಗಿದ್ದೆ ಸುರಯ್ಯಾ... ಅದೂ ಕೂಡ ಹೇಳದೆ ಕೇಳದೆ. ಏನಾಗಿತ್ತು ನಿನಗೆ ಅಂತಹದ್ದು " ಎಂದುಕೇಳಿದನು. 

"ಆಕೆಯನ್ನು ಕೇಳಬೇಡ... ನನ್ನನ್ನು ಕೇಳು" ಎಂದು ಧ್ವನಿ ಕೇಳಿ ಬಂದಾಗ ಅತ್ತ ತಿರುಗಿ ನೋಡಿದನು ಸಾದ್. ಅಲ್ಲಿ ತನ್ನ ತಂದೆ ಸಮದ್ ನಿಂತಿದ್ದನು.

    ಸುರಯ್ಯಾಳು ಮನೆಗೆ ತೆರಳಿರುವುದಾಗಿ ಮುನೀರಾ ನನ್ನಲ್ಲಿ ಹೇಳಿದಳು. ನಾನು ಆಗಲೇ ನೇರವಾಗಿ ಬಸ್ ಸ್ಟ್ಯಾಂಡ್ ಹೋದವನೇ ಆಕೆಯ ಮನಸ್ಸು ಒಲಿಸಿ ನೇರವಾಗಿಯೇ ನನ್ನ ಆಫೀಸಿಗೆ ಕರೆದುಕೊಂಡು ಹೋದೆ. ನಿನಗೆ ಚೂರು ಗೊತ್ತಾಗಲಿ ಎಂದೇ ನಾನು ಮುಚ್ಚಿಟ್ಟೆ. ನಾನು ಹೇಳಲೂ ಕೂಡ ಇಲ್ಲ. ಈಗ ನಿನಗೆ ಬುದ್ಧಿ ಬಂದಿತಲ್ವಾ ? ಯಾಕೆ ಈಗ ನಿನಗೆ ಗೊತ್ತಾಯಿತು ? ಆ ಹುಡುಗಿ ಈಗ ಎಲ್ಲಿ ಹೋದಳು ? 

ತಂದೆಯ ಮಾತು ಕೇಳಿ ಸಾದ್ ಒಮ್ಮೆಲೇ ದುಃಖಿತನಾದನು.

" ಸೋತು ಹೋದೆನು ಅಪ್ಪಾ... ನಾನು . ನನ್ನವರನೆಲ್ಲಾ ಯಾರಿಗಾಗಿ ನಾನು ದೂರ ಮಾಡಿದೆನೆಯೋ ಆಕೆ ಎಂದಿಗೂ ನನ್ನ ಪ್ರೀತಿಸುತ್ತಾ ಇರಲಿಲ್ಲ. ಬದಲಾಗಿ ಆಕೆ ನನ್ನನ್ನು ದ್ವೇಷಿಸುತ್ತಾ ಇದ್ದಳು. ನನ್ನ ಜೀವನವನ್ನು ಸರ್ವ ನಾಶ ಮಾಡಬೇಕು ಎಂದು ಇದ್ದಳು. ಒಟ್ಟಿನಲ್ಲಿ ಆಕೆ ನನ್ನ ಬದುಕನ್ನು ನರಕ ಮಾಡಬೇಕು ಎಂದು ಎನಿಸಿದ್ದ ನರಹಂತಕಿ..." ಎಂದು ಹೇಳುತ್ತಾ ಸಾದ್ ಬಿಕ್ಕಿ ಬಿಕ್ಕಿ ಅಳತೊಡಗಿದನು.

ಆತ ಅಳುವುದನ್ನು ನೋಡಲಾಗದ ಸುರಯ್ಯ ಆತನನ್ನು ಸಂತೈಸಿದಳು.

 " ಏನು ಹೇಳುತ್ತಾ ಇದ್ದೀರಾ ನೀವು ? ಆಕೆ ಏನು ಮಾಡಿದಳು ? ನಿಮಗೆ ಹೇಗೆ ತಿಳಿಯಿತು ? ಎಂದು ಸಾದ್ ಬಳಿ ಆಕೆ ಪ್ರಶ್ನಿಸಿದಳು.

ಆಕೆಯ ಪ್ರಶ್ನೆಗೆ ಸಾದ್ ತನಗೆ ಏನಾಯಿತು... ತಾನು ಆಕೆಯ ಫೋನಿನಲ್ಲಿ ಆಲಿಸಿದ್ದು, ಅಲ್ಲಿಂದ ಆಕೆಯ ಮನೆಯವರೆಗೆ ಹೋಗಿದ್ದು, ನೋಡುವಾಗ ಆತ ನನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂಗಿಯಾಗಿದ್ದು.. ತನ್ನ ಸ್ವಾರ್ಥಕ್ಕಾಗಿ ಆ ರೀತಿ ಮಾಡಿದ್ದು ಎಲ್ಲವನ್ನೂ ಹೇಳಿದನು.

ಅದನ್ನು ಕೇಳಿದಾಗ ಅವರೆಲ್ಲಾ ಒಂದು ಕ್ಷಣ ಬೆಚ್ಚಿಬಿದ್ದರು. ಅವರಿಗೆ ಈ ರೀತಿ ತಮ್ಮ ಮಗನ ಬಾಳಿನಲ್ಲಿ ನಡೆಯುತ್ತಿದೆ ಎನ್ನುವುದರ ಕಲ್ಪನೆ ಕೂಡ ಇರಲಿಲ್ಲ. ಅಯ್ಯೋ ಈ ರೀತಿಯ ಮನುಷ್ಯರೂ ಕೂಡ ಈ ಭೂಮಿಯಲ್ಲಿ ಇದ್ದಾರ ಎಂದು ಎನಿಸದೇ ಇರಲಿಲ್ಲ ಅವರಿಗೆ.

" ಈಗ ನಿಮಗೆ ಎಲ್ಲಾ ತಿಳಿಯಿತು ಎಂದು ಆಕೆಗೆ ಗೊತ್ತಿದೆಯಾ? ಎಂದು ಸುರಯ್ಯಾ ಕೇಳಿದಳು.

 " ಇಲ್ಲಾ ಗೊತ್ತಿಲ್ಲ. ಇಷ್ಟು ಬೇಗ ಗೊತ್ತುಪಡಿಸಿದರೆ ಹೇಗೆ. ನಾಳೆ ನಿನ್ನನ್ನು ಕಾಲೇಜಿನಲ್ಲಿ ಬಿಡಲು ಹೋಗುತ್ತೇನಲ್ಲ, ಆಗ ಆಕೆಯ ನಾಟಕ ಒಮ್ಮೆ ನೋಡಿ ಆಮೇಲೆ ಹೇಳುತ್ತೇನೆ ಆಗಬಹುದಲ್ಲವೇ ಎಂದು ಸಾದ್ ಹೇಳಿದನು.

 ಅರೇ ಬೇಡ ಸಾದ್. ಒಬ್ಬರು ಹಾಗೆ ಮಾಡಿದರು ಎಂದು ನಾವು ಯಾಕೆ ಹಾಗೆ ಮಾಡುವುದು ಹೇಳಿ ? ಆಕೆ ಆಕೆಯ ಪಾಡಿಗೆ ಇರಲಿ . ನೀವು ಸರಿಯಾದಿರಿ ಅಲ್ಲಾ ನನಗೆ ಅದೇ ಸಾಕು ಎಂದು ಸುರಯ್ಯಾ ಹೇಳಿದಾಗ

" ಇಲ್ಲಾ ಸುರಯ್ಯಾ... ನಾನೇನು ಆಕೆಯ ಮೇಲೆ ದ್ವೇಷ ಸಾಧಿಸುವುದಿಲ್ಲ. ಬದಲಾಗಿ ಆಕೆಗೆ ಒಂದೆರಡು ಮಾತು ತಿಳುವಳಿಕೆ ಹೇಳುತ್ತೇನೆ. ನನ್ನ ಬಾಳಿನಲ್ಲಿ ಆಡಿದಳು ಎಂದು ಇನ್ನು ಯಾರ ಬಾಳಿನಲ್ಲಿ ಆಡಬಾರದು ಎಂದು ಸಾದ್ ಹೇಳಿದಾಗ ಸುರಯ್ಯಾ ಸುಮ್ಮನಾದಳು.

   ಪತಿಯೊಂದಿಗೆ ತನ್ನ ಕೋಣೆಗೆ ನಡೆದಳು. ಯಾಕೋ ಪತಿಯ ಮನಸು ಸರಿ ಇಲ್ಲದೆ ಇರುವುದು ಕಂಡು ಅವರನ್ನು ಸಮಾಧಾನಿಸಿ ಅಲ್ಲೇ ಹಾಗೇ ಮಲಗಲು ಬಿಟ್ಟಳು.

ಮರುದಿನ ಸಹಾ ತನ್ನ ಮನಸ್ಸಿನ ಭಾವನೆಗಳನ್ನು ಸಾದ್ ಬಳಿ ಹೇಳಬೇಕು ಎಂದು ಎನಿಸಿ ಆತನನ್ನು ಕಾಲೇಜು ಬಳಿ ಕಾಯತೊಡಗಿದಳು.

ಆತ ಬಂದಿದ್ದೇ ತಡ ಓಡಿ ಹೋಗಿ ಆತನ ಬಳಿ ನಿಂತವಳೇ

" ಅರೇ ಸಾದ್, ಯಾಕೆ ಇಷ್ಟು ತಡ ಆಯಿತು ಬರಬೇಕಾದರೆ ? ನಾನು ಆಗದಿಂದ ನಿನಗಾಗಿ ಕಾಯುತ್ತಾ ಇದ್ದೆ. ನನಗೆ ನಿನ್ನ ಬಳಿ ಮುಖ್ಯ ವಿಚಾರವನ್ನು ಹೇಳಲಿದೆ. ಅದೇನೆಂದರೆ ನೀನು ಈ ಸುರಯ್ಯಾಳಿಗೆ ಡೈವೋರ್ಸ್ ನೀಡು. ನಾವಿಬ್ಬರೂ ಆದಷ್ಟು ಬೇಗ ಹಿರಿಯರ ಸಮ್ಮತಿ ಪಡೆದು ಮದುವೆಯಾಗೋಣ . ಯಾಕೋ ಮನೆಗೆ ಹೋದರೂ ನಿನ್ನದೇ ನೆನಪು. ಹಾಗಾಗಿ ನಿನ್ನನ್ನು ಬಿಟ್ಟು ಇನ್ನು ನಾನು ಬದುಕಲಾರೆ ಎಂದೆನಿಸುತ್ತದೆ. ನಿನಗೂ ಹಾಗೆ ಅನಿಸೋದಿಲ್ವಾ ಸಾದ್ ಎಂದು ಕೇಳಿ ಆತನ ಕೈ ಹಿಡಿದಳು.

  ಆಕೆ ತನ್ನ ಕೈ ಹಿಡಿದುದನ್ನು ನೋಡಿ ಸಾದ್ ತನ್ನ ಕೈ ಕೊಡವಿಕೊಂಡನು.

ಆಗಲೇ ಆಕೆ ಆಶ್ಚರ್ಯದಿಂದ ಸಾದಿನ ಮುಖದತ್ತ ನೋಡಿದಳು. ಆಕೆಯ ಮುಖಭಾವವನ್ನು ಅರ್ಥೈಸಿದ ಸಾದ್

 ನಿನ್ನೊಂದಿಗೆ ಆಟ ಆಡಬೇಕು ಎಂದು ನಿರ್ಧರಿಸಿದ್ದೆ ನಾನು ಸಹಾನ. ಆದರೆ ಸುರಯ್ಯಾ ಹಾಗೆ ಮಾಡಬೇಡಿ ಎಂದು ನನ್ನಲ್ಲಿ ಕೇಳಿಕೊಂಡಳು. ಹಾಗಾಗಿ ನಾನು ನಿನ್ನನು ಬಿಡುತ್ತಿದ್ದೇನೆ. ಇಲ್ಲದಿದ್ದಲ್ಲಿ ನೀನು ಯಾವ ರೀತಿಯಲ್ಲಿ ನನ್ನ ಬದುಕಿನಲ್ಲಿ ಚೆಲ್ಲಾಟ ಆಡಿದೆಯೋ ನಾನೂ ಅದೇ ರೀತಿಯಲ್ಲಿ ಆಡಬೇಕು ಎಂದುಕೊಂಡಿದ್ದೆ. ನಿನ್ನೆ ನಿನ್ನ ಅಣ್ಣ ಫೋನಿನಲ್ಲಿ ಮಾತನಾಡಿದ್ದು ನಾನು ಕೇಳಿಸಿಕೊಂಡಿದ್ದೆ. ಆಮೇಲೆ ನಾನು ಅದರ ಬಗ್ಗೆ ಎಲ್ಲಾ ವಿಚಾರಿಸಿದೆ. ನನಗೆ ಎಲ್ಲಾ ತಿಳಿಯಿತು. ನೀವು ಅಣ್ಣ - ತಂಗಿ ಸೇರಿ ನನ್ನ ಬದುಕನ್ನು ಹಾಳು ಮಾಡಬೇಕು ಎಂದು ಇದ್ದಿದ್ದು ಎಲ್ಲಾ ನಾನು ತಿಳಿದುಕೊಂಡೆ. ನನಗಿನ್ನೂ ನಿನ್ನಲ್ಲಿ ಏನೂ ಮಾತನಾಡಲು ಉಳಿದಿಲ್ಲ. ನಿನ್ನ ಮರ್ಯಾದೆ ಎಲ್ಲರ ಎದುರು ಹರಾಜು ಮಾಡಬೇಕು ಎಂದಿದ್ದೆ. ಆದರೆ ನೀನು ಅಷ್ಟೆಲ್ಲಾ ಅನ್ಯಾಯ ಮಾಡಿದರೂ ಅದನ್ನು ಸಹಿಸಿದ ನನ್ನ ಸುರಯ್ಯಾ ನಿನಗೆ ನಾನು ಯಾವುದೇ ನೋವು ನೀಡುವುದನ್ನು ಬಯಸಲಿಲ್ಲ. ಇನ್ನಾದರೂ ಆಕೆಯನ್ನು ನೋಡಿ ಕಲಿ ಸಹಾನ. ಆಕೆ ಮನಸು ಮಾಡಿದರೆ ನಿನ್ನ ಬದುಕಿನಲ್ಲಿ ನನ್ನಿಂದ ಎಷ್ಟು ಆಟ ಆಡಿಸಲು ಆಗುತ್ತೋ ಅಷ್ಟು ಆಡಿಸುತ್ತಾ ಇದ್ದಳೇನೋ.....

 " ಇಲ್ಲಾ ಸಾದ್ , ಅದೆಲ್ಲಾ ಕಳೆದು ಹೋದ ಘಟನೆ. ಅದು ನಿಜ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದು ಹಾಗಲ್ಲ. ನಿಜವಾಗಿಯೂ ನನಗೆ ನಿನ್ನ ಮೇಲೆ ಪ್ರೀತಿ ಮೂಡಿದೆ ಸಾದ್. ನೀನಿಲ್ಲ ಅಂದರೆ ನಾನು ಹುಚ್ಚಿಯಾಗುತ್ತೇನೆ."

ಬೇಡ ಸಹಾನ, ನೀನು ಆ ರೀತಿಯ ಮಾತು ಎಲ್ಲಾ ಆಡಬೇಡ. ನಿನ್ನ ಪ್ರೀತಿ ಎಂಬ ಮೋಸದ ಬಲೆಗೆ ಬಿದ್ದು ನಾನು ಹುಚ್ಚನಾಗಿದ್ದು ಸಾಕು. ನನ್ನಂತೆ ಇನ್ನಾರ ಬದುಕು ಆಗದಿರಲಿ. ನನ್ನ ಬದುಕನ್ನು ಸರಿ ಮಾಡಲಾದರೋ ಸುರಯ್ಯಾ ಬಂದಳು. ಆದರೆ ಎಲ್ಲರ ಮನಸ್ಸು ಒಂದೇ ರೀತಿ ಇರೋದಿಲ್ಲ ಅಲ್ಲವಾ. ನಿನಗೋಸ್ಕರ ತನ್ನ ಪತಿಯನ್ನು ತ್ಯಾಗ ಮಾಡಲು ಆಕೆ ಸಿದ್ದಳಿದ್ದಳು. ಆದರೆ ನೀನು ನಾಟಕ ಮಾಡಿ ನನ್ನ ಬದುಕನ್ನು ಹಾಳು ಮಾಡಿದ್ದಿ ಎಂಬುದನ್ನು ಆಕೆಯಿಂದ ಸಹಿಸಲಾಗಲಿಲ್ಲ. ಅಲ್ಲಾ ಸಹಾನ ಒಂದು ಮಾತು ನಾನು ಕೇಳುತ್ತೇನೆ. ಬಾಲ್ಯದಲ್ಲಿ ಅಷ್ಟೊಂದು ಆಕೆಯನ್ನು ಪ್ರೀತಿಸುತ್ತಿದ್ದ ನೀನು ಇಂದು ಆಕೆಯನ್ನು ದ್ವೇಷಿಸಲು ಕಾರಣ ಏನು ? ಆಕೆ ಏನು ಮಾಡಿದ್ದಾಳೆ ನಿನಗೆ? ಅಲ್ಲದೆ ಆಕೆಯ ಮುಗ್ಧ ಮನಸ್ಸು ಒಮ್ಮೆ ನೋಡು. ನೀನಾದರೋ ಆಕೆಯ ಮೇಲಿನ ದ್ವೇಷದಿಂದ ಆಕೆಯನ್ನು ಹಾಗೂ ನನ್ನನ್ನು ದೂರ ಮಾಡಲು ಯತ್ನಿಸಿದೆ. ಆದರೆ ಆಕೆ ನಿನಗಾಗಿ ನನ್ನನ್ನು ಬಿಡಲು ತಯಾರಾಗಿದ್ದಳು. ಆ ಪ್ರೀತಿಯನ್ನೊಮ್ಮೆ ಅರ್ಥ ಮಾಡಿಕೊಳ್ಳು ಸಹಾನ. ಆಕೆಯಂತಹ ಗೆಳತಿ ಯಾರಾದರೂ ನಿನ್ನ ಬಾಳಿನಲ್ಲಿ ಇದ್ದಾರ? ಇನ್ನು ನಿನ್ನ ಮನಸು ಬದಲಾಗಿಲ್ಲ ಎಂದರೆ ಅದು ಮನಸು ಅಲ್ಲ ಕಲ್ಲು ಎಂದರ್ಥ. ಮತ್ತೆ ನಾನು ಏನೂ ಹೇಳಲು ಬರುವುದಿಲ್ಲ. ನಿನ್ನ ಬದುಕು ನಿನ್ನ ಇಷ್ಟ."

ಸಾದ್ ಮಾತು ಕೇಳಿದಾಗ ಸಹಾನಳಿಗೆ ತಾನು ಮಾಡಿದ ತಪ್ಪುಗಳೆಲ್ಲವೂ ಕಣ್ಣ ಮುಂದೆ ಬಂದವು. ಅದರೊಟ್ಟಿಗೆ ಬಾಲ್ಯದಲ್ಲಿ ತಾವು ಕಳೆದ ಸುಂದರ ರಸನಿಮಿಷಗಳು ನೆನಪಾದವು. ಇಲ್ಲದಿದ್ದರೂ ನಾನು ಆಕೆಗೆ ಯಾಕಾಗಿ ಇಷ್ಟು ಅನ್ಯಾಯ ಮಾಡುತ್ತಿದ್ದೇನೆ? ಆಕೆ ನನಗೆ ಏನು ಮಾಡಿದ್ದಾಳೆ ? ಯೋಚಿಸುವಾಗಲೇ ಆಕೆಗೆ ದುಃಖ ತಡೆಯಲಾಗಲಿಲ್ಲ. ತಕ್ಷಣ ಹೋಗಿ ಸುರಯ್ಯಾಳ ಬಳಿ ಕ್ಷಮೆ ಕೇಳಿದಳು.

ತಪ್ಪಾಯಿತು ಸುರಯ್ಯಾ.... ಈ ಲೋಕದಲ್ಲಿ ನನ್ನಷ್ಟು ಪಾಪಿ ಯಾರೂ ಇರಲಿಕ್ಕೆ ಇಲ್ಲ. ಏನೇನೋ ಆಟ ಆಡಿದೆ ನಿನ್ನ ಬದುಕಿನಲ್ಲಿ. ಆದರೆ ನೀನು ಎಂದಿಗೂ ನನ್ನ ಹಿತವನ್ನೇ ಬಯಸಿದೆ. ಇಂದು ನನ್ನ ಪ್ರೀತಿಯು ನನ್ನಿಂದ ದೂರ ಆಗುವಾಗ ನನಗೆ ಎಲ್ಲದರ ಮೌಲ್ಯ ಅರಿಯುತ್ತಿದೆ. ಹಣ - ಅಂತಸ್ತಿನಿಂದ ಹಾಗೂ ಸೌಂದರ್ಯದ ಮೂಲಕ ಏನೂ ಮಾಡುತ್ತೇನೆ ಎಂಬ ಗರ್ವ ನನ್ನಲ್ಲಿ ಇತ್ತು. ಇಲ್ಲಾ ಆಗಲ್ಲ ಸುರಯ್ಯಾ... ಅದರೊಟ್ಟಿಗೆ ಒಳ್ಳೆಯ ಮನಸ್ಸು ಬೇಕು ಎಂಬುದು ನನಗೆ ತಿಳಿಯಿತು. ನಿನ್ನ ಕ್ಷಮೆಗೆ ನಾನು ಅರ್ಹಳಲ್ಲ. ಆದರೂ ಕೂಡ ನಿನ್ನಲ್ಲಿ ಕ್ಷಮೆ ಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು" ಎಂದು ತನ್ನ ಎರಡು ಕೈಗಳನ್ನು ಹಿಡಿದುಕೊಂಡು ಬೇಡಿದಳು.

ಆಕೆಯನ್ನು ನೋಡುವಾಗ ಸುರಯ್ಯಾಳಿಗೆ ಅಯ್ಯೋ ಪಾಪ ಎಂದೆನಿಸಿತು. " ಅರೇ ಅದಕ್ಕೆ ಯಾಕೆ ಕ್ಷಮೆ ಕೇಳುತ್ತಾ ಇದ್ದೀಯಾ ? ನಾನು ಅದನ್ನು ಯಾವುದನ್ನೂ ತಲೆಯಲ್ಲಿ ಇಡಲೇ ಇಲ್ಲ "ಎಂದು ಹೇಳುತ್ತಾ ಸುರಯ್ಯಾ ಆಕೆಯನ್ನು ಆಲಿಂಗಿಸಿದಳು.

    ಅಷ್ಟರಲ್ಲಿ ಅಲ್ಲಿಗೆ ಬಂದು ತಲುಪಿದ ಸುರಯ್ಯಾಳ ಗೆಳತಿಯರಿಗೂ ವಿಷಯ ತಿಳಿಯಿತು. ಸಹಾನಳು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡುವುತ್ತಿರುವುದು ನೋಡಿ ಅವರಿಗೆ ಖುಷಿಯಾಯಿತು. ಈಗಲಾದರೂ ಆಕೆ ಬದಲಾದಳು ಅಲ್ವಾ ? ಅಷ್ಟೇ ಸಾಕು ಎಂದು ಮನದಲ್ಲಿಯೇ ಅಂದುಕೊಂಡರು. ಸುರಯ್ಯಾಳ ಬದುಕಿನ ಕಷ್ಟಗಳೆಲ್ಲ ಮುಗಿದಿದ್ದು ನೋಡಿ ಮುಸ್ತಾಕಿಗೂ ನೆಮ್ಮದಿ ಎನಿಸಿತು. ತನಗೆ ಆಕೆ ಸಿಗಲಿಲ್ಲ ಅನ್ನುವ ದುಃಖ ಮನದಲ್ಲಿ ಇದ್ದರೂ ಎಲ್ಲಿದ್ದರೂ ಆಕೆಯ ಬಾಳು ಹಸನಾಗಿರಲಿ ಎಂದು ಆತ ಮನಸ್ಸಿನಲ್ಲೇ ಪ್ರಾರ್ಥಿಸಿದನು.

ಕಾಲೇಜಿನಲ್ಲಿ ಎಲ್ಲವೂ ಇತ್ಯರ್ಥಗೊಂಡ ಮೇಲೆ ಪತಿ - ಪತ್ನಿ ಮನೆಗೆ ತೆರಳಿದರು. ಇಂದು ಸುರಯ್ಯಾಳ ಮನಸ್ಸಿಗೆ ಶಾಂತಿ ದೊರಕಿತ್ತು. ತನಗೆ ಪತಿಯ ಪ್ರೀತಿಯೂ ದೊರಕಿತಲ್ಲದೆ ಬಾಲ್ಯದ ಗೆಳತಿಯು ಸರಿಯಾದಳು. ಇನ್ನು ಯಾವುದೇ ದುಮ್ಮಾನಗಳು ಮನಸ್ಸಿನಲ್ಲಿ ಇರಲಾರದು ಎಂದು ಯೋಚಿಸಿದವಳಿಗೇ ತನ್ನ ಪತಿಯು ತನ್ನನ್ನು ಬರಸೆಳೆದಾಗಲೇ ವಾಸ್ತವ ಲೋಕಕ್ಕೆ ಬಂದಿದ್ದು. ಆತನ ತೋಳುಗಳಲ್ಲಿ ಬಂಧಿಯಾದ ಆಕೆ ಅಲ್ಲೇ ನಾಚಿ ನೀರಾಗಿ ಹೋದಳು. ಪತಿ - ಪತ್ನಿಯ ಮಿಲನಕ್ಕೆ ಪ್ರಕೃತಿಯೇ ಸಾಕ್ಷಿ ಆಯಿತು.

  ದಿನಗಳು ಉರುಳಿದಂತೆ ಸುರಯ್ಯಾಳು ಕಲಿತು ಡಿಗ್ರಿಯನ್ನೂ ಪಡೆದುಕೊಂಡಳು. ತಾನು ಇಚ್ಛಿಸಿದ ವೃತ್ತಿಯನ್ನೇ ಮಾಡತೊಡಗಿದಳು. ಆಕೆಯ ಎಲ್ಲಾ ಕಾರ್ಯಗಳಿಗೆ ಪತಿಯು ಬೆನ್ನೆಲುಬು ಆಗಿ ನಿಂತಿದ್ದನು. ಆಕೆಯೂ ಅಷ್ಟೇ ತನ್ನ ಪತಿಯ ಪ್ರತಿ ಕಾರ್ಯದಲ್ಲೂ ಆತನಿಗೆ ಸಹಾಯ ಮಾಡುತ್ತಿದ್ದಳು. ತಂದೆಯ ದಾರಿಯಲ್ಲಿ ನಡೆದ ಆತ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದನು. ಅಂದು ಸುರಯ್ಯಾಳನ್ನು ದೂರ ತಳ್ಳಿದವರು ಇಂದು ಅದಕ್ಕೆ ಪ್ರಾಯಶ್ಚಿತ್ತ ಪಟ್ಟು ಏನಾದರೂ ಒಂದು ಸಹಾಯ ಕೇಳಲು ಎಂದು ಆಕೆಯ ಬಳಿಯೇ ಬರುತ್ತಿದ್ದರು. ಆದರೆ ಅದನ್ನು ಯಾವುದನ್ನೂ ಮನಸ್ಸಿನಲ್ಲಿ ಇಡದ ಆಕೆ ಅವರ ಮನವಿಗೆ ಸ್ಪಂದಿಸುತ್ತಿದ್ದಳು. ತನ್ನ ಕೈಯಲ್ಲಿ ಆಗುವ ಸಹಾಯ ಇತರರಿಗೆ ಮಾಡುತ್ತಿದ್ದಳು. ಹೀಗೆ ಖುಷಿಯಿಂದ ಅವರ ಜೀವನ ಸಾಗುತ್ತಿತ್ತು.


     ಮುಗಿಯಿತು

  ***********************

   ಇದುವರೆಗೂ ನನ್ನ ಕಾದಂಬರಿಯನ್ನು ಓದಿ ನನಗೆ ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತಿದ್ದಂತಹ ಪ್ರತಿ ಓರ್ವ ಓದುಗರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳು. ನಿಮ್ಮ ಕುತೂಹಲ, ಪ್ರೀತಿ, ಪ್ರತಿಕ್ರಿಯೆಗಳು ನನಗೆ ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತಿದ್ದವು. ದಯವಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನನಗೆ ತಿಳಿಸಿ. ಶೀಘ್ರದಲ್ಲೇ ಮತ್ತೊಂದು ಕಾದಂಬರಿಯ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ ಇಂಶಾ ಅಲ್ಲಾಹ್....

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್