ದಾಂಪತ್ಯ ಜೀವನದಲ್ಲಿ ಸಿಹಿಮಾತು



💞💞💞💞💞💞💞💞💞💞💞💞🌹 ದಾಂಪತ್ಯ ಜೀವನದಲ್ಲಿರಲಿ🌹💞💞💞🌹ಸಿಹಿಮಾತು🌹💞💞💞💞💞💞💞💞💞💞💞💞💞



ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಎಲ್ಲರೂ ಬ್ಯುಝಿಯಾಗಿದ್ದಾರೆ. ಯಾರಿಗೂ ಯಾವುದಕ್ಕೂ ಸಮಯವಿಲ್ಲ. ಪರಸ್ಪರ ಹೃದಯ ಬಿಚ್ಚಿ ಮಾತನಾಡಲು ಸಹ ಪುರುಸೊತ್ತಿಲ್ಲ. ಅವರವರಿಗೆ ಅವರವರ ಕೆಲಸ. ಸ್ವಂತ ಬಿಟ್ಟರೆ ಯಾರಿಗೂ ಇನ್ನೊಂದರಲ್ಲಿ ಆಸಕ್ತಿಯಿಲ್ಲ. ಇನ್ನೊಬ್ಬನ ನೋವು ನಲಿವುಗಳನ್ನು ಆಲಿಸುವ ಕಾಳಜಿಯಿಲ್ಲ. ಇದು ಕುಟುಂಬದ ಮಟ್ಟಿಗೆ ಮಾತ್ರ ಸತ್ಯವಲ್ಲ. ಸ್ನೇಹ , ಸಂಬಂಧದಲ್ಲೂ ಸಹ ಇದೇ ಸ್ಥಿತಿಯಿದೆ. ತಾನು ತನ್ನದು ಎಂದಾದ ಮೇಲೆ ಸ್ನೇಹಿತರು ದೂರವಾಗುತ್ತಾರೆ. ಸಮುದಾಯದೊಳಗಿನ ಸ್ಥಿತಿಯೂ ಇದುವೇ ...ಎಲ್ಲವೂ ಯಾಂತ್ರಿಕವಾಗುತ್ತಿದೆ.
        ಆರೋಗ್ಯಕರವಾದ ಸಂವಹನ ಅಥವಾ ಮಾತುಕತೆ, ಸಂಬಂಧಗಳನ್ನು ಬಲಿಷ್ಠಗೊಳಿಸುತ್ತದೆ. ಕಾವ್ಯಾತ್ಮಕವಾಗಿ ಹೇಳುವುದಾದರೆ, ಸಂಬಂಧ ಎಂಬ ಶರಬತ್ತಿನಲ್ಲಿ ಸಿಹಿ ಇರಬೇಕಾದರೆ ಅಲ್ಲಿ ಆರೋಗ್ಯಕರ ಸಂವಹನ ಎಂಬ ಸಕ್ಕರೆ ಇರಬೇಕು. ಪ್ರೀತಿ ತುಂಬಿದ ಮಾತುಗಳು, ಕಾಳಜಿಯುಳ್ಳ ಮಾತುಕತೆ ಸಂಬಂಧಗಳನ್ನು ಬಲಪಡಿಸುತ್ತದೆ. ಸಹೃದಯತೆಯನ್ನು ಉಳಿಸುತ್ತದೆ. ವಿಶೇಷವಾಗಿ ದಾಂಪತ್ಯ ಬಂಧದಲ್ಲಿ ಆರೋಗ್ಯಕರ ಸಂವಹನಕ್ಕೆ ಬಹಳಷ್ಟು ಮಹತ್ವವಿದೆ. ಆರೋಗ್ಯಕರ ಸಂವಹನದ ಕೊರತೆಯೇ ನಮ್ಮ ನಡುವಿನ ಅನೇಕ ವಿವಾಹ ವಿಚ್ಛೇದನೆಗಳಿಗೆ ಕಾರಣ.
           ಅಧುನಿಕ ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಗೆ ಒಟ್ಟಿಗೆ ಸಮಯ ಕಳೆಯಲು ಬಹಳ ಕಡಿಮೆ ಸಮಯವಷ್ಟೇ ಸಿಗುತ್ತದೆ. ಕೆಲಸ ಇನ್ನಿತರ ಸಂಗತಿಗಳಿಗಾಗಿ ಪತಿ ಬೆಳಿಗ್ಗೆ ಎದ್ದು ಹೊರಗೆ ಹೋದರೆ ಮರಳುವಾಗ ರಾತ್ರಿಯಾಗುತ್ತದೆ. ಆದ್ಧರಿಂದ ಅವರ ನಡುವೆ ಸಂವಹನಕ್ಕೆ ಸಮಯವಿರುವುದಿಲ್ಲ. ಇನ್ನು ಗಂಡಹೆಂಡತಿ ಇಬ್ಬರೂ ದುಡಿಯುವವರಾದರೆ ಸಿಗುವ ಸಮಯ ಇನ್ನೂ ಕೂಡ ಕಡಿಮೆಯಾಗುತ್ತದೆ. ಮನಸು ಬಿಚ್ಚಿ ಮಾತನಾಡಲಾಗದ, ಬಹಳ ಮುಖ್ಯವಾದ ವಿಷಯಗಳನ್ನು ಸಹ ಪರಸ್ಪರ ಚರ್ಚಿಸಲಾಗದ ಅನೇಕ ದಂಪತಿಗಳು ನಮ್ಮ ಸುತ್ತಮುತ್ತಲಲ್ಲೇ ಇದ್ದಾರೆ . ಅದರಲ್ಲೂ ಗಂಡಹೆಂಡತಿಯರಿಬ್ಬರಲ್ಲಿ ಒಬ್ಬರು ಅಥವಾ ಇಬ್ಬರೂ ಕೆಲಸದ ಕಾರಣದಿಂದ ದೂರದ ದೇಶ ಅಥವಾ ರಾಜ್ಯದಲ್ಲಿರುವುದಂತೂ ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವವರ ಜೀವನದಲ್ಲಿ ದಾಂಪತ್ಯ ಜೀವನ ಎಂಬುದಕ್ಕೆ ಅವಕಾಶವೇ ಇರುವುದಿಲ್ಲ. ಪತ್ನಿಗೆ ಒಂದು ಉದ್ಯೋಗ, ಇನ್ನೊಂದು ಕಡೆ ಸಂಸಾರ. ಪತಿಗೂ ಒಂದು ಕಡೆ ಉದ್ಯೋಗ. ಇಂತಹ ಸಂದರ್ಭದಲ್ಲಿ ದಾಂಪತ್ಯ ಜೀವನವನ್ನು ಸರಿಯಾಗಿ ಮುನ್ನಡೆಸುವುದು ಕಷ್ಟವಾಗುತ್ತದೆ. ಇಬ್ಬರಿಗೂ ಪರಸ್ಪರ ಒಂದು ಸೇರಲು, ಪ್ರೀತಿಯ ಮಾತುಗಳನ್ನು ಹಂಚಿಕೊಳ್ಳಲು ಸಮಯವೆಲ್ಲಿದೆ? ಒಂದೇ ಕಡೆ ಉದ್ಯೋಗವಾದರೆ ಓಕೆ. ಆದರೆ, ಇಬ್ಬರೂ ಬೇರೆ ಬೇರೆ ಕಡೆ ಉದ್ಯೋಗ ಮಾಡುವವರಾದರೆ ಆ ದಾಂಪತ್ಯ ಜೀವನ ವಿಫಲವಾಗುವುದೇ ಹೆಚ್ಚು. ಅಂದರೆ, ಎಲ್ಲಿ ಗಂಡ ಹೆಂಡತಿಗೆ ಪರಸ್ಪರ ಪ್ರೀತಿ ಹಂಚಿಕೊಳ್ಳಲು ಸಮಯವಿರುವುದಿಲ್ಲವೋ?ಎಲ್ಲಿ ದಂಪತಿಗಳಿಗೆ ಮನಸಿನ ಮಾತುಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶವಿರುವುದಿಲ್ಲವೋ? ಅಲ್ಲಿ ದಾಂಪತ್ಯ ಎಂಬ ಸುಂದರವಾದ ಆಶಯ ಅರ್ಥಕಳೆದುಕೊಂಡು ವಿಫಲವಾಗುತ್ತದೆ.
         ವಿವಾಹದ ಆರಂಭದಲ್ಲಿ ಗಂಡಹೆಂಡತಿಯ ನಡುವಿನ ಸಂವಹನ ತೀವ್ರವಾಗಿರುತ್ತದೆ. ಪ್ರೀತಿಯೂ ಹೆಚ್ಚಿರುತ್ತದೆ. ಆದರೆ, ಕ್ರಮೇಣ ಮಾತು ಮೌನದ ಹಾದಿ ಹಿಡಿಯುತ್ತದೆ. ಹಿಂದಿನ ತೀವ್ರತೆ ಕಡಿಮೆಯಾಗುತ್ತದೆ. ಆರಂಭದ ಅಪರಿಚತತೆ ಹುಟ್ಟಿಸುವ ರೋಮಾಂಚನ ಇಬ್ಬರೂ ಪರಿಚಿತರಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆಗ ತನ್ನಿಂತಾನೇ ಮಾತುಗಳೂ ಕಡಿಮೆಯಾಗುತ್ತದೆ. ಇಂತಹ ಸಂದರ್ಭವನ್ನು ಎಚ್ಚರಿಕೆಯಿಂದ ಎದುರಿಸಬೇಕು. ಮಾತುಗಳು ಎಂದಿನ ಪ್ರೀತಿ ಕಳೆದುಕೊಳ್ಳದಂತೆ, ಸಂಗಾತಿಯ ಜೊತೆಗೆ ಸಂಯಮದಿಂದ, ಮಮತೆಯಿಂದ ಬೆರೆಯುವುದಕ್ಕೆ ದಿನವೊಂದಕ್ಕೆ ಇಂತಿಷ್ಟು ಸಮಯವನ್ನು ಮೀಸಲಿಡಬೇಕು.

ರಾತ್ರಿ ಸಂಗಾತಿ ಮಲಗುವ ಸಮಯಕ್ಕೆ ಮನೆಗೆ ಬಂದು ಬೆಳಿಗ್ಗೆ ಆಕೆಗಿನ್ನೂ ಎಚ್ಚರಿಕೆ ಆಗುವ ಮೊದಲೇ ಎದ್ದು ಕೆಲಸಕ್ಕೆ ಹೋಗುವವರೂ ನಮ್ಮಲ್ಲಿ ಧಾರಾಳ ಮಂದಿಯಿದ್ದಾರೆ. ಕ್ರಮೇಣ ಮಾತುಗಳು ಅಡ್ಡ ಹಾದಿ ಹಿಡಿಯುತ್ತದೆ. ಸಿಟ್ಟು ಅನಿಯಂತ್ರಿತವಾಗಿ ಹೊರಬರಲು ಆರಂಭಿಸುತ್ತದೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಒಂದು ಸಮಸ್ಯೆಯಾಗಲು ಆರಂಭಿಸುತ್ತಾರೆ. ತಾನು ಅಂದುಕೊಂಡಂತಲ್ಲ ಗಂಡ/ಹೆಂಡತಿ ಎಂದು ಇಬ್ಬರಿಗೂ ಅನಿಸಲು ಶುರುವಾಗುತ್ತದೆ. ಆರಂಭದಲ್ಲಿ ಅಷ್ಟು ಒಳ್ಳೆಯವನಾಗಿದ್ದ , ಸಿಹಿಮಾತುಗಳನ್ನು ಆಡುತ್ತಿದ್ದ ಗಂಡ ಈಗೀಗ ಬದಲಾಗಿದ್ದಾನೆ ಎಂದು ಅನಿಸುತ್ತದೆ. ಹೆಂಡತಿಯ ಬಗ್ಗೆ ಗಂಡನಿಗೂ ಇದೇ ತರದ ಭಾವನೆಗಳು ಮೊಳೆಯಲು ಆರಂಭವಾಗುತ್ತದೆ. ಇದು ದಾಂಪತ್ಯ ಜೀವನವನ್ನು ನಾಶ ಮಾಡಿಬಿಡುವುದರಲ್ಲಿ ಸಂಶಯವಿಲ್ಲ.

      ಆರಂಭದಲ್ಲಿ ಇದ್ದ ಪ್ರೀತಿ ಕ್ರಮೇಣ ಇಲ್ಲವಾಗುವುದು ಏಕೆ?
-------------------------------------------------------
        ಈ ಪ್ರಶ್ನೆ ಅನೇಕ ದಂಪತಿಗಳು ಕೇಳಿಕೊಳ್ಳುತ್ತಾರೆ. ಸರಿಯಾದ  ಸಂವಹನ ಇಲ್ಲದಿರುವುದೇ ಇದಕ್ಕೆ ಕಾರಣ. ಆರಂಭದಲ್ಲಿ ಗಂಡ ಅಥವಾ ಹೆಂಡತಿ ಇತರ ಎಲ್ಲಾ ಕೆಲಸಕ್ಕಿಂತ ಪ್ರೀತಿಯ ಮಾತುಗಳಿಗೆ ಮಾತ್ರ ಮೀಸಲಿಡುತ್ತಾರೆ. ಅಂತಹ ಆಕರ್ಷಣೆ ಆರಂಭದಲ್ಲಿ ಮಾತ್ರ ಇರುತ್ತದೆ. ಕ್ರಮೇಣ ಬದುಕಿನೊಳಗೆ ಇಳಿದ ಮೇಲೆ ದಾಂಪತ್ಯ ಜೀವನದ ಜೊತೆಗೆ ಇತರ ಕೆಲಸಗಳೂ ಮುಖ್ಯವಾಗುತ್ತದೆ. ಗಂಡ ಹೊರಗಡೆ ಹೋಗಿ ಕೆಲಸ ಮಾಡಬೇಕಾಗುತ್ತದೆ. ಹೆಂಡತಿಗೆ ಅಡುಗೆ ಮನೆಯಲ್ಲಿ ಕೆಲಸವಿರುತ್ತದೆ. ಮಕ್ಕಳಾದ ಮೇಲಂತೂ ಹೆಂಡತಿಯ ಅರ್ಧದಷ್ಟು ಗಮನ ಮಕ್ಕಳ ಮೇಲೆಯೇ ಇರುತ್ತದೆ. ಆ ಸಂದರ್ಭದಲ್ಲಿ ಅದು ಅನಿವಾರ್ಯವೂ ಹೌದು.  ಇದನ್ನು ದಂಪತಿಗಳು ಅರ್ಥ ಮಾಡಿಕೊಳ್ಳಬೇಕು. ಮಾತ್ರವಲ್ಲದೆ, ಮನಸ್ಸಿನಲ್ಲಿರುವ ಸಂಶಯ, ಕಿರಿಕಿರಿ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಬೇಕು. ಗಂಡ ಹೆಂಡತಿಯಿಂದ, ಹೆಂಡತಿ ಗಂಡನಿಂದ ಪ್ರೀತಿಯನ್ನು ಕೇಳಿ ಪಡೆಯಬೇಕು. ಇಲ್ಲದಿದ್ದರೆ ಪ್ರೀತಿ ಕ್ರಮೇಣ ಕಡಿಮೆಯಾಗುತ್ತಾ ಎರಡು ಮೂರು ವರ್ಷವಾಗುವಷ್ಟರಲ್ಲಿ ಸಂಪೂರ್ಣ ಇಲ್ಲವಾಗುತ್ತದೆ. ಗಂಡನಿಗೆ ಹೆಂಡತಿಯ ಬಳಿ, ಹೆಂಡತಿಗೆ ಗಂಡನ ಬಳಿ ಮಾತನಾಡಲು ಏನೂ ಇರುವುದಿಲ್ಲ. ಮಾತನಾಡಬೇಕೆಂದು ಅನಿಸುವುದೂ ಇಲ್ಲ. ಆ ದಾಂಪತ್ಯದಲ್ಲಿ ಪ್ರೀತಿಗೆ ಸ್ಥಳವಿರುವುದಿಲ್ಲ. ಆ ಸ್ಥಿತಿಯನ್ನೊಮ್ಮೆ ಊಹಿಸಿನೋಡಿ. ಪ್ರೀತಿ ಇಲ್ಲದವರು ಒಟ್ಟಿಗೆ ಇದ್ದು ಬದುಕುವಾಗ ಆಗುವ ಅನಾಹುತವನ್ನೊಮ್ಮೆ ಊಹಿಸಿ. ಇಬ್ಬರೂ ಪರಸ್ಪರರಿಗೆ ಕಿರಿಕಿರಿಯಾಗುತ್ತಾರೆ. ಬದುಕು ಕೂಡ ನರಕದಂತಾಗುತ್ತದೆ.

ಪ್ರೀತಿಗೂ ಇದೆ ಚಾರ್ಜರ್
          ಹಾಗೆ ನೋಡಿದರೆ, ಪ್ರೀತಿ ಎಂಬುದು ಮೊಬೈಲ್ ತರ ಎಂದಿಟ್ಟುಕೊಳ್ಳಿ ಮೊಬೈಲ್ ಸರಿಯಾಗಿ ಕೆಲಸ ಮಾಡಬೇಕಾದರೆ ಪವರ್ ಬೇಕು. ಬ್ಯಾಟರಿ ಲೋ ಎಂಬ ಸೂಚನೆ ಸಿಕ್ಕ ತಕ್ಷಣ ಮೊಬೈಲ್ ಚಾರ್ಜ್ ಮಾಡುತ್ತೇವೆ. ಹಾಗೆಯೇ, ಪ್ರೀತಿ ಸಹ. ಅದನ್ನು ಕಾಲ ಕಾಲಕ್ಕೆ ಚಾರ್ಜ್ ಮಾಡುತ್ತಿರಬೇಕು. ಅದಕ್ಕಿರುವ ಏಕೈಕ ದಾರಿ, ಪ್ರೀತಿ ತುಂಬಿದ ಮಾತು. ಸರಿಯಾದ ಸಂವಹನ, ದಂಪತಿಗಳ ನಡುವೆ ಸರಿಯಾದ ಸಂವಹನ ನಡೆಯದಿದ್ದರೆ ಆ ದಾಂಪತ್ಯಕ್ಕೆ ಹೆಚ್ಚು ಆಯುಷ್ಯವಿರುವುದಿಲ್ಲ. ಅದು ಸೋಲಿನ ಕಡೆಗೆ ಚಲಿಸುತ್ತಿರುವ ದಾಪತ್ಯ ಎಂದು ಖಚಿತವಾಗಿ ಹೇಳಬಹುದು. ಮನಸು ಬಿಚ್ಚಿ ಮಾತನಾಡಿದಷ್ಟೂ ದಾಂಪತ್ಯ ಸಿಹಿಯಾಗಿರುತ್ತದೆ. ರಹಸ್ಯಗಳು ಹೆಚ್ಚಾದಷ್ಟೂ ಕಹಿಯಾಗುತ್ತಾ ಹೋಗುತ್ತದೆ. ಅನುಮಾನಗಳು ಹೆಚ್ಚುತ್ತದೆ. ಮನಸಿನೊಳಗೆ ಸಂಘರ್ಷಗಳು ಶುರುವಾಗುತ್ತದೆ. ಕ್ರಮೇಣ ಅದು ಹೊರಬಂದು ಮನೆಯೊಳಗಿನ ವಾತಾವರಣವನ್ನೇ ಕೆಡಿಸುತ್ತದೆ.

ಸಂವಹನ ಎಂದರೆ, ಹೇಳುವುದಷ್ಟೇ ಅಲ್ಲ, ಆಲಿಸುವುದು ಕೂಡಾ ಹೌದು.
            ದಂಪತಿಗಳು ತಮ್ಮ ವಿಚಾರ ಹಾಗೂ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಕನಸುಗಳನ್ನು ಹೇಳಿಕೊಳ್ಳಬೇಕು. ಸಂಗಾತಿಯ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳಬೇಕು. ಮಾತು ಹೇಗೆ ಮುಖ್ಯವೋ ಸಂಗಾತಿಯ ಮಾತುಗಳನ್ನು ಕೇಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಬಾರಿಯೇ ಕೇಳಿಸಿಕೊಳ್ಳುವುದು ಮಾತ್ರವಲ್ಲ : "ನಾನು ನಿನ್ನ ಮಾತನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೇನೆ" ಎಂಬುದನ್ನು ಸಾಕ್ಷಿ ಸಮೇತ ತೋರಿಸಿಕೊಡಬೇಕು. ಉದಾಹರಣೆಗೆ , ಸಂಗಾತಿಯ ಮಾತುಗಳನ್ನು ಸಂಕ್ಷಿಪ್ತವಾಗಿ ಹೇಳಿ ಇಷ್ಟನ್ನು ನೀನು ಹೇಳಿದೆ. ಈಗ ನಾನು ಹೇಳುತ್ತೇನೆ ಎನ್ನುವುದು ಅಥವಾ ಸಂಗಾತಿ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕುತೂಹಲಕರ ಪ್ರಶ್ನೆಗಳನ್ನು ಕೇಳುವುದು. ದುಃಖದ ವಿಷ್ಯವಾದರೆ ಸಮಾಧಾನ ಹೇಳುವುದು. ಖುಷಿಯ ವಿಷಯವಾದರೆ ಖುಷಿಯ ಉದ್ಗಾರ ವ್ಯಕ್ತಪಡಿಸುವುದು, ತನಗೂ ಖುಷಿಯಾಯಿತೆಂಬುದನ್ನು ತೋರಿಸಿಕೊಡುವುದು ಇತ್ಯಾದಿಗಳನ್ನು ಮಾಡಬೇಕು.

ಇತರರೊಂದಿಗೆ ದೂರು ಹೇಳಬಾರದು
-------------------------------------------------
ದಾಂಪತ್ಯ ಜೀವನದ ಸಣ್ಣಪುಟ್ಟ ಸಮಸ್ಯೆಗಳನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲೇಬಾರದು. ಸಮಸ್ಯೆಗಳೇನೇ ಇದ್ದರೂ ಅದನ್ನು ಗಂಡಹೆಂಡತಿ ಕೂತು ಮಾತನಾಡಿ ಬಗೆಹರಿಸಬೇಕು. ಗಂಭೀರ ಸಮಸ್ಯೆಗಳಾಗಿದ್ದರೆ ಕುಟುಂಬದ ಹಿರಿಯರ ಸಹಾಯ ಕೇಳಬೇಕೇ ವಿನಃ ಊರಿಡೀ ಡಂಗುರ ಸಾರಬಾರದು. ಗಂಡ ಹೆಂಡತಿಯ ನಡುವೆ ಸರಿಯಾದ ಸಂವಹನ ಇದ್ದರೆ ಎಂತಹ ಸಮಸ್ಯೆಯೂ ಪರಿಹಾರವಾಗುತ್ತದೆ. ಗಂಡ ಹೆಂಡತಿಯ ಬಳಿ, ಹೆಂಡತಿ ಗಂಡನ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಅದೊಂದು ದೂರು ಎಂಬಂತೆ ಹೇಳಬಾರದು. "ಮನುಷ್ಯ ಅಂದ ಮೇಲೆ ಅದೆಲ್ಲಾ ಸಹಜ. ಆದರೆ, ತಿದ್ದಿಕೊಳ್ಳಬೇಕಷ್ಟೆ" ಎಂದು ಮೃದುವಾಗಿ ಹೇಳಬೇಕು.
      ಸುಖಕರ ದಾಂಪತ್ಯ ಜೀವನಕ್ಕೆ ಪ್ರೀತಿ ತುಂಬಿದ ಮಾತುಗಳು ಎಷ್ಟು ಅಗತ್ಯ ಎಂಬುದನ್ನು ದಂಪತಿಗಳು ಅರ್ಥಮಾಡಿಕೊಳ್ಳಬೇಕು. ಸಿಹಿ ಮಾತುಗಳೇ ಎಷ್ಟೋ ಸಂದರ್ಭದಲ್ಲಿ ಗಂಡಹೆಂಡತಿಯ ಬಂಧವನ್ನು ಸುದೃಢಗೊಳಿಸುತ್ತದೆ. ಗಂಡ ಹೆಂಡತಿಯ ನಡುವಿನ ಮನಸ್ತಾಪಗಳನ್ನು ಅಳಿಸಿ ಹಾಕಿ, ಹೊಸ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಅದಕ್ಕೋಸ್ಕರವೇ ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲಿ ಸಿಹಿಮಾತು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ನಮ್ಮ ಜೀವನದಲ್ಲಿ ಅಡಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.


ಸಂಗ್ರಹ : ✍🏻 ಜೆ . ಮುಹಮ್ಮದ್ ಫಾರೂಕ್ ಪಾಣೆಮಂಗಳೂರು(ಸದಸ್ಯರು, ಕೆ.ಸಿ.ಎಫ್ ರಿಯಾದ್)

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್