ಪ್ರವಾದಿ ಪ್ರಪಂಚ
✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ
▪️ ಪ್ರಖ್ಯಾತ ಸ್ವಹಾಬಿ ಹಝ್ರತ್ ಅಬ್ದುಲ್ಲಾಹಿ ಬಿನ್ ಬುಸ್‌ರ್ (ರಅ) ರವರು ಹೇಳುತ್ತಾರೆ, "ಒಮ್ಮೆ ನಮ್ಮ ಮನೆಗೆ ಪ್ರವಾದಿ ಮುಹಮ್ಮದ್ ﷺ ರು ಅತಿಥಿಯಾಗಿ ಬಂದರು. ತಂದೆಯವರು ಅವರಿಗೆ ಕುಳಿತುಕೊಳ್ಳಲು ಮನೆಯಲ್ಲಿದ್ದ ಒಂದು ಮಖಮಲ್ (Velvet) ಬಟ್ಟೆಯನ್ನು ನೆಲದಲ್ಲಿ ಹಾಸಿದರು. ಪ್ರವಾದಿವರ್ಯರು ಅದರಲ್ಲಿ ಕುಳಿತರು. ತಂದೆಯವರು ಮನೆಯೊಳಗೆ ಬಂದು ತಾಯಿಯಲ್ಲಿ ಕೇಳಿದರು. ಪ್ರವಾದಿವರ್ಯರು ಮನೆಗೆ ಬಂದಿದ್ದಾರೆ. ಅವರಿಗೆ ತಿನ್ನಲು ಕೊಡಲು ಮನೆಯಲ್ಲಿ ಏನಾದರೂ ಇದೆಯೇ.?ತಾಯಿಯವರು ಹೇಳಿದರು. ಹೌದು ಇದೆ. ಒಳ್ಳೆಯ ಖರ್ಜೂರ ಹೈಸ್ (حيس) ಇದೆ. ( ಹೈಸ್ ಎಂದರೆ, ಖರ್ಜೂರದ ಬೀಜ ಬೇರ್ಪಡಿಸಿ ಅದಕ್ಕೆ ಗೋಧಿ ಹಿಟ್ಟು ಮತ್ತು ತುಪ್ಪ ಮಿಶ್ರಣ ಮಾಡಿ ಜಾಮಿನ ರೂಪದಲ್ಲಿ ಮಾಡುವ ಒಂದು ತರ ಖಾದ್ಯ) ನಂತರ ಅದನ್ನು ಅವರ ಸನ್ನಿಧಿಯಲ್ಲಿ ಇಡಲಾಯಿತು. ಪ್ರವಾದಿಯವರೊಂದಿಗೆ ತಂದೆಯವರು ಕೂಡ ತಿನ್ನಲು ಕುಳಿತರು. ಇಬ್ಬರೂ ಒಟ್ಟಾಗಿ ತಿಂದರು. ಬಳಿಕ ಪ್ರವಾದಿ ಮುಹಮ್ಮದ್ ﷺ ರು ಮನೆಯವರಿಗೆ ಬೇಕಾಗಿ ದುಆ ಮಾಡಿದರು."
▪️ ಅಬ್ದುಲ್ಲಾಹಿ ಬಿನ್ ಬುಸ್‌ರ್ (ರ) ರವರು ಮುಂದುವರಿಸುತ್ತಾ ಹೇಳುತ್ತಾರೆ. "ಆ ವೇಳೆ ನಾನು ಪುಟ್ಟ ಬಾಲಕನಾಗಿದ್ದೆ. ಮನೆಯಲ್ಲಿ ಆಚೆ ಈಚೆ ಓಡಿ ಆಟವಾಡುತ್ತಿದ್ದ ನನ್ನನ್ನು ಪ್ರವಾದಿಯವರು ಕರೆದು ತನ್ನ ಹತ್ತಿರ ಕುಳ್ಳಿರಿಸಿಕೊಂಡು ನನ್ನ ತಲೆಯ ಮೇಲೆ ಅವರ ಪವಿತ್ರ ಹಸ್ತದಿಂದ ಸವರಿ ನನಗೆ ಬೇಕಾಗಿ ದುಆ ಮಾಡಿದರು. ಬಳಿಕ ಹೇಳಿದರು. ಈ ಬಾಲಕ ನೂರು ವರ್ಷ ಬದುಕುವನು."
▪️ ಗಮನಾರ್ಹ ಸಂಗತಿಯೆಂದರೆ, ಸುಬ್‌ಹಾನಲ್ಲಾಹ್..! ಈ ಸ್ವಹಾಬಿಯು ಪ್ರವಾದಿ ಮುಹಮ್ಮದ್ ﷺ ರು ಹೇಳಿದಂತೆ ಚಾಚೂ ತಪ್ಪದೆ ನೂರು ವರ್ಷ ಬದುಕಿದ್ದರು.
✍🏻ಸಂಗ್ರಹ: ಇಮಾಮ್ ಹಾಕಿಮ್ ರವರ ಅಲ್ ಮುಸ್ತದ್‌ರಕ್ ಎಂಬ ಗ್ರಂಥದಿಂದ.
Comments
Post a Comment