ನಗ್ನ ಪಾದದ ಮಹಾತ್ಮ
ನಗ್ನ ಪಾದದ ಮಹಾತ್ಮ
ಯವ್ವನ ಕಾಲ, ಒಂದು ದಿನ ಬಿಶ್‌ರ್ ಎಂಬ ಯುವಕ ನಡೆದುಕೊಂಡು ಹೋಗುತ್ತಿದ್ದಾಗ ಕೆಸರಿನಲ್ಲಿ ಬಿದ್ದಿದ್ದ ಕಾಗದವೊಂದು ಕಂಡು ಬಂತು. ಅದರಲ್ಲಿ ಅಲ್ಲಾಹು ಎಂದು ಬರದಿದ್ದುದು ಕಣ್ಣಿಗೆ ಬಿತ್ತು. ಅಲ್ಲಾಹನ ಹೆಸರಿರುವ ಕಾಗದ ಕೆಸರಿನಲ್ಲಿ ಬಿದ್ದಿರುವುದು ಕಂಡು ಬಿಶ್‌ರ್‌ರಿಗೆ ಬಹಳ ದುಃಖವಾಯಿತು. ಕೂಡಲೇ ಗೌರವಭಾವದಿಂದ ಅದನ್ನು ಎತ್ತಿ ಕೊಂಡರು. ನೀರಿನಿಂದ ತೊಳೆದು ಶುಚಿಗೊಳಿಸಿದರು. ತಮ್ಮ ಕೈಯಲ್ಲಿದ್ದ ಸ್ವಲ್ಪ ಹಣದಿಂದ ಸುಗಂಧ ದ್ರವ್ಯ ಕೊಂಡು ಕೊಂಡು ಆ ಕಾಗದಕ್ಕೆ ಹಚ್ಚಿದರು. ಅದನ್ನು ಎತ್ತರದ ಜಾಗದಲ್ಲಿ ಜಾಗರೂಕತೆಯಿಂದ ಇಟ್ಟರು. ಅಂದು ರಾತ್ರಿ ಅವರಿಗೊಂದು ಕನಸು. "ಓ ಬಿಶ್‌ರ್!! ಅಲ್ಲಾಹನ ನಾಮವನ್ನು ನೀನು ಗೌರವಿಸಿದೆಯಲ್ಲ? ನಿನ್ನ ನಾಮವನ್ನು ಅಲ್ಲಾಹು ಉನ್ನತಿ ಗೇರಿಸಲಿರುವನು!!"ಆ ಕನಸು ಪೊಳ್ಳಾಗಲಿಲ್ಲ. ಅಲ್ಲಾಹು ಗೌರವಿಸಿದ್ದನ್ನು ಗೌರವಿಸಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅವರನ್ನು ಉನ್ನತಿಗೇರಿಸಿದನು. ಅದಕ್ಕೆ ನಿಮಿತ್ತವಾದ ಘಟನೆ ಹೀಗಿದೆ;
ಅದೊಂದು ದಿನ ಎಂದಿನಂತೆ ಮನೆ ಮಂದಿಯೊಂದಿಗೆ ತಿಂದುಂಡು ಹರಟೆ ಹೊಡೆಯುತ್ತಾ, ನಗು, ಕೇಕೆ ಹಾಕುತ್ತ ಇರುವಾಗ ಯಾರೋ ಒಬ್ಬರು ಬಂದು ಬಾಗಿಲು ತಟ್ಟಿದರು, ಮನೆ ಕೆಲಸದ ಹುಡುಗಿ ಬಂದು ಬಾಗಿಲು ತೆರೆದಾಗ ಬಂದ ವ್ಯಕ್ತಿ ಕೇಳಿದರು; "ಈ ಮನೆಯ ಒಡೆಯ ಸ್ವತಂತ್ರನೋ, ಅಲ್ಲ, ದಾಸನೋ?"
"ಯಾಕೆ ಹಾಗೆ ಕೇಳುತ್ತೀರಿ? ಒಡಯ ಸ್ವತಂತ್ರನಾಗಿರದೆ ಮತ್ತೆ ದಾಸನಾಗಿರುವುದುಂಟೆ?"
"ಸರಿ, ನನಗದು ಗೊತ್ತಾಯಿತು. ಸ್ವತಂತ್ರ ವ್ಯಕ್ತಿಗಲ್ಲದೆ ಹೀಗೆಲ್ಲ ನಕ್ಕು ನಲಿಯಲು ಸಾಧ್ಯವಿಲ್ಲ" ಎನ್ನುತ್ತಾ ಆ ವ್ಯಕ್ತಿ ಹೊರಟು ಹೋದರು.
ಇವರ ನಡುವಿನ ಮಾತು ಕೇಳಿ ಒಳಗಿದ್ದ ಬಿಶ್‌ರ್ ಹೊರಗೆ ಬಂದು ವಿಷಯವೇನೆಂದು ವಿಚಾರಿಸಿದಾಗ ಕೆಲಸದಾಕೆ ಎಲ್ಲ ಹೇಳಿದಳು. ಸ್ವತಂತ್ರನಿಗಲ್ಲದೆ ಹೀಗೆಲ್ಲ ನಕ್ಕು ನಲಿಯಲು ಸಾಧ್ಯವಿಲ್ಲ ಎಂಬ ಆ ವ್ಯಕ್ತಿಯ ಮಾತು ಬಿಶ್‌ರ್‌ರನ್ನು ಬಲವಾಗಿ ಚುಚ್ಚಿತು. ಅದು ಅವರ ಹೃದಯವನ್ನು ತಟ್ಟಲು, ಹೃದಯದ ಕದ ತೆರೆಯಲು ಕೀಲಿಕ್ಕೆಯಾಯಿತು. ಬರಿಗಾಲಲ್ಲಿದ್ದ ಬಿಶ್‌ರ್ ಚಪ್ಪಲಿ ಧರಿಸುವುದಕ್ಕೂ ನಿಲ್ಲದೆ ಆ ವ್ಯಕ್ತಿಯನ್ನು ಹಿಂಬಾಲಿಸಿದರು. ಬರಿಗಾಲಲ್ಲೇ ಓಡಿ ಓಡಿ ಆ ವ್ಯಕ್ತಿಯನ್ನು ತಲುಪಿದರು. ಆ ವ್ಯಕ್ತಿಯ ಮುಂದೆ ವಿನೀತನಾಗಿ ನಿಂತು ಹೇಳಿದರು; ಕ್ಷಮಿಸಬೇಕು. ನಾನು ಸ್ವತಂತ್ರನಲ್ಲ, ದಾಸನು. ಅಲ್ಲಾಹನ ದಾಸ, ನಾನು ಅಲ್ಲಾಹನ ದಾಸ.. ಹೀಗನ್ನುತ್ತಾ ಅಳತೊಡಗಿದ ಬಿಶ್‌ರ್ ಅಂದಿನಿಂದಲೇ ತಮ್ಮ ಸುಖ ಭೋಗಗಳನ್ನು ತ್ಯಜಿಸಿದರು. ಇಲ್ಮ್ ಮತ್ತು ಆರಾಧನೆಯಲ್ಲಿ ಬದುಕನ್ನು ವ್ಯಯಿಸಿದರು. ತಮಗೆ ಜ್ಞಾನೋದಯವಾದ ಆ ಸಮಯದಲ್ಲಿ ತಾನು ಇದ್ದುದು ಬರಿಗಾಲಲ್ಲಿ. ಹಾಗಾಗಿ ಬದುಕಿನ ಕೊನೆಯವರೆಗೂ ಹಾಗೇ ಇರುವೆ ಎಂದು ನಿಶ್ಚಯಿಸಿದ ಬಿಶ್‌ರ್ ಅಂದಿನಿಂದ ಎಂದೂ ಚಪ್ಪಲಿ ಧರಿಸಲಿಲ್ಲ. ಹಾಗಾಗಿ ಅವರ ಹೆಸರಿನೊಂದಿಗೆ ಅಲ್ ಹಾಫೀ (ನಗ್ನಪಾದದವರು) ಎಂಬ ಹೆಸರು ಅಂಟಿಕೊಂಡಿತು, ಬಿಶ್‌ರುನಿಲ್ ಹಾಫೀ ರಳಿಯಲ್ಲಾಹು ಅನ್‌ಹು ಎಂದೇ ವಿಶ್ವ ಪ್ರಸಿದ್ಧರಾದ ಮಹಾತ್ಮರು. 1200 ವರ್ಷಗಳ ಹಿಂದೆ ಮರಣ ಹೊಂದಿದ ಆ ಮಹಾತ್ಮರು ಆಧ್ಯಾತ್ಮಿಕ ಜಗತ್ತಿನಲ್ಲಿ ಇಂದಿಗೂ ಮಿನುಗುತಾರಯಾಗಿ ಮಿಂಚುತ್ತಿದ್ದಾರೆ.
ಕೆಎಂ ಜಲೀಲ್ ಕುಂದಾಪುರ
Copyright©
NOOR-UL-FALAH ORGANIZATION®
Comments
Post a Comment