ದಿನದ ಬೋಧನೆ 6
ದ್ಸಿಕ್ರ್'ನ ಕುರಿತು ಇನ್ನೂ ಹಲವಾರು ಹದೀಸ್'ಗಳನ್ನು ಗಮನಿಸೋಣ.
ಒಬ್ಬ ದಾಸನು ನನ್ನ ಸ್ಮರಣೆಯಿಂದ ತನ್ನ ತುಟಿಗಳನ್ನು ಚಲಿಸುತ್ತಲಿದ್ದರೆ ನಾನು ಅವನ ಜೊತೆಯಲ್ಲಿರುವೆನು. (ಇಬ್ನು ಮಾಜ, ಹಾಕಿಮ್)
ಕರ್ಮಗಳಲ್ಲಿ ಯಾವುದು ಶ್ರೇಷ್ಠವೆಂದು ಅಲ್ಲಾಹನ ರಸೂಲರೊಂದಿಗೆ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಕೇಳಿದಾಗ ಅವರು ಹೇಳಿದರು: ನಿನ್ನ ನಾಲಿಗೆ ಅಲ್ಲಾಹನ ದ್ಸಿಕ್ರ್'ನಿಂದ ಪಸೆಯಾಗಿದ್ದ ಸ್ಥಿತಿಯಲ್ಲಿ ಮರಣ ಹೊಂದುವುದಾಗಿದೆ.
ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಹಾಬಿಗಳೊಂದಿಗೆ ಕೇಳಿದರು: ಸತ್ಕರ್ಮದಲ್ಲಿ ಬೆಳ್ಳಿ ಬಂಗಾರದ ದಾನಕ್ಕಿಂತಲೂ ಶ್ರೇಷ್ಠವಾದ ಒಂದು ಕರ್ಮವನ್ನು ನಾನು ನಿಮಗೆ ತಿಳಿಸಿಕೊಡಲೇ? ಸ್ವಹಾಬಿಗಳು ಏಕಕಂಠದಲ್ಲಿ ಆಗಲಿ ಎಂದಾಗ ಅವರು ಹೀಗೆಂದರು: ಅದು ಅಲ್ಲಾಹನ ಸ್ಮರಣೆ(ದ್ಸಿಕ್ರ್)ಯಾಗಿದೆ.
ಅಲ್ಲಾಹನ ಸಂಪ್ರೀತಿಯನ್ನು ಅರಸಿಕೊಂಡು ದ್ಸಿಕ್ರ್ ಹೇಳಲು ಒಗ್ಗೂಡುವ ತಂಡದೊಂದಿಗೆ ಆಕಾಶಲೋಕದ ಒಂದು ಮಲಕ್ ಹೀಗೆನ್ನುವರು: ನಿಮ್ಮ ಪಾಪಗಳೆಲ್ಲ ಕ್ಷಮಿಸಲ್ಪಟ್ಟ ನೆಲೆಯಲ್ಲಿ ಚದುರಿಹೋಗಿರಿ. ನಿಮ್ಮ ಕೆಡುಕುಗಳು ಒಳಿತುಗಳಾಗಿ ಮಾರ್ಪಟ್ಟಿದೆ (ತಿರ್ಮುದಿ)
ಅಲ್ಲಾಹನ ದ್ಸಾತ್, ಸ್ವಿಫಾತ್ ಮುಂತಾದವುಗಳ ಕುರಿತು ಚಿಂತಿಸುವುದು ಹೃದಯದ ದ್ಸಿಕ್ರ್ ಆಗಿದೆ. ಅಲ್ಲಾಹನ ಸ್ತುತಿ, ಪ್ರಶಂಸೆ ಮೊದಲಾದವುಗಳ ಹೆಸರಲ್ಲಿ ಗುರುತಿಸಲ್ಪಡುವ ವಾಕ್ಯಗಳು ನಾಲಗೆಯ ದ್ಸಿಕ್ರ್ ಆಗಿದೆ. ಬಾಹ್ಯ ಅವಯವಗಳನ್ನು ಸತ್ಕರ್ಮಕ್ಕಾಗಿ ಬಳಸಿಕೊಳ್ಳಬೇಕು. ಇದು ಶರೀರದ ದ್ಸಿಕ್ರ್ ಆಗಿದೆ.
ಅಲ್ಲಾಹನ ಸಂಪ್ರೀತ ದಾಸರಾದ ಔಲಿಯಾಗಳು ಮತ್ತು ಸ್ವಾಲಿಹ್'ಗಳು ದ್ಸಿಕ್ರ್'ನ ಮೂಲಕವೇ ಉನ್ನತ ಪದವಿಗೇರಿದರು. ದ್ಸಿಕ್ರ್'ಗಳು ಆತ್ಮದ ಆಹಾರವಾಗಿರುವುದರಿಂದ ಅದು ಆಧ್ಯಾತ್ಮಿಕತೆಗೆ ಅತ್ಯಂತ ಅನಿವಾರ್ಯವಾಗಿದೆ. ದ್ಸಿಕ್ರ್'ಗಳಲ್ಲಿ ನಾಲಿಗೆ ಮತ್ತು ಹೃದಯ ಜಂಟಿಯಾಗಿ ನಿರ್ವಹಿಸುವ ದ್ಸಿಕ್ರ್ ಅತ್ಯಂತ ಶ್ರೇಷ್ಠವಾಗಿದೆ. ಎಲ್ಲಿಯೋ ಮನಸ್ಸಿಟ್ಟು ನಾಲಗೆಯಿಂದ ಮಾತ್ರ ನಿರ್ವಹಿಸುವ ದ್ಸಿಕ್ರ್'ಗೆ ಕಡಿಮೆ ಪುಣ್ಯವಿದ್ದರೂ ದ್ಸಿಕ್ರ್'ನ್ನು ತೀರಾ ತೊರೆಯುವುದಕ್ಕಿಂತ ಉತ್ತಮವಾಗಿದೆ.
•••••••••••••••••••••••••••••••••••••••
ಹೇಳಿರಿ, ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಸ್ವಲಾತ್
ಸ್ವಲ್ಲಲ್ಲಾಹು ಅಲಾ ಸಯ್ಯಿದಿನಾ ಮುಹಮ್ಮದ್
Comments
Post a Comment