ನೂರ್ಜಹಾನ್
ನೂರ್ ಜಹಾನ್
"ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್"...
ಪಕ್ಕದ ಅಕ್ಕರೆಪಲ್ಲಿಯಿಂದ ಅಝಾನಿನ ಸುಮಧುರ
ಧ್ವನಿಯು ಮೊಳಗುತ್ತಿತ್ತು......
ಸುಬಹಿ ನಮಾಝ್ ಮುಗಿಸಿದ ನೂರ್ ಜಹಾನ್ ಮುಸಲ್ಲವನ್ನು ಮಡಚಿಟ್ಟು ಅಡುಗೆಮನೆಯನ್ನು ಪ್ರವೇಶಿಸಿದಳು. ಪವಿತ್ರ ರಂಝಾನ್ ಉಪವಾಸದ 30 ದಿನಗಳ ಬಳಿಕದ ಈದುಲ್ ಫಿತ್ರ್ ಪೆರ್ನಾಲ್ ದಿವಸವಾಗಿತ್ತದು..
ಅಡುಗೆ ಮನೆ ಪ್ರವೇಶಿಸಿದ ನೂರ್ ಜಹಾನ್ ಒಲೆಗೆ ಬೆಂಕಿಯನ್ನು ಹಚ್ಚಿ ಒಂದು ಪಾತ್ರೆಯಲ್ಲಿ ಚಹಾಗೆ ನೀರನ್ನಿಟ್ಟಳು. ಮತ್ತೊಂದು ಒಲೆಯಲ್ಲಿ ಬಾಣಲೆಯೊಂದನಿಟ್ಟು ಎಣ್ಣೆಯನ್ನು ಸುರಿದು ಮೊದಲೇ ಒಂದು ಬಟ್ಟಲಿನಲ್ಲಿ ತಯಾರಾಗಿಸಿಟ್ಟಿದ್ದ ಉನ್ನಕಾಯಿಗಳನ್ನು (ಕೇರಳದಲ್ಲಿ ತಯಾರಾಗುವ ವಿಶೇಷ ತಿಂಡಿ) ಒಂದೊಂದಾಗಿ ತೆಗೆದುಕೊಂಡು ಅವುಗಳನ್ನು ಅದಾಗಲೇ ಚೆನ್ನಾಗಿ ಕಾದಿದ್ದ ಎಣ್ಣೆಯಲ್ಲಿ ಹುರಿದಳು.
ಮುನೀರ್ ಎದ್ದು ಸ್ನಾನ ಮಾಡಲು ಹೋಗಿದ್ದರು. ....ಸ್ನಾನದ ನಂತರ, ಸುಬಹಿ ನಮಾಝ್ ಮುಗಿಸಿ, ನಂತರ ತಕ್ಷಣ ಚಹಾವನ್ನು ಕುಡಿಯುವುದು ಅವರ ನಿತ್ಯ ರೂಢಿಯಾಗಿತ್ತು. ಅದರ ಜೊತೆಗೆ ಲಘು ಉಪಹಾರ ಕಡ್ಡಾಯ. ಅವರು ಈದ್ ನಮಾಝ್ ಗಾಗಿ ಅಕ್ಕರೆಪಲ್ಲಿಗೆ ಹೋಗುವ ಅವಸರದಲ್ಲಿದ್ದರು.
ನೂರ್ ಜಹಾನ್ ಆತುರದಿಂದ ಚಹಾ ಮತ್ತು ಸಿಹಿತಿಂಡಿಗಳನ್ನು ತಯಾರಿಸಿ ಟೇಬಲ್ಗೆ ತಂದಿಟ್ಟ
ನಂತರ ನೇರವಾಗಿ ತಾಯಿ ಮಲಗಿರುವ ಕೋಣೆಯ ಕಡೆಗೆ ಹೆಜ್ಜೆಯಿಟ್ಟಳು. ....
ಅಲ್ಲಿ, ತಾಯಿ ನಮಾಝ್ ಮುಗಿಸಿ ಮುಸಲ್ಲಾದಲ್ಲಿ ಕುಳಿತುಕೊಂಡೆ ತಮ್ಮ ಎರಡೂ ಕೈಗಳನ್ನೆತ್ತಿ ದುಆ ಮಾಡುತ್ತಿದ್ದರು. ದುಆದಲ್ಲಿದ್ದ ಆ ತಾಯಿಯ ಆ ಕಣ್ಣುಗಳು ಕಣ್ಣೀರು ತುಂಬಿತ್ತು. ಸೃಷ್ಟಿಕರ್ತನಾದ ಅಲ್ಲಾಹುವೇ, ಮುಂದಿನ ಹಬ್ಬಕ್ಕಾದರೂ ದಯವಿಟ್ಟು ನನ್ನ ಚಿನ್ನದಂತ ಮಗಳ ಮುಖದಲ್ಲಿ ಸಂತೋಷವನ್ನು ಕರುಣಿಸು ಯಾ ಅಲ್ಲಾಹ್, ಅವಳು ಮದುವೆಯಾಗಿ ಗಂಡನ ಜೊತೆಯಲ್ಲಿಯೇ ಪೆರ್ನಾಲ್ ಹಬ್ಬ ಆಚರಿಸಲು ಇಲ್ಲಿಗೆ ಬರುವಂತೆ ಭಾಗ್ಯವನ್ನು ಕರುಣಿಸು."
ಪ್ರಾರ್ಥನೆಯ ಸಮಯದಲ್ಲಿ ತಾಯಿಯ ಕಣ್ಣೀರ ಕಂಡು ನೂರ್ ಜಹಾನ್ ಳಿಗೂ ಸಂಕಟವಾಯಿತು.
"ಪಾಪ ಉಮ್ಮ .... ಎಷ್ಟು ದಿನದಿಂದ ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿದ್ದಾರಷ್ಟೇ ... ಆದರೂ ಸೃಷ್ಟಿಕರ್ತನಾದ ಅಲ್ಲಾಹು ಅವರ ಕರೆಯ ನೋವು ಕೇಳಿಸುತ್ತಿಲ್ಲವಲ್ಲ.. ಅಲ್ಲಾಹುವೇ, ತಾಯಿಯ ಕಣ್ಣೀರನ್ನು ಆದಷ್ಟು ಬೇಗನೆ ನಿಲ್ಲುವಂತೆ ಮಾಡು. ಅವರ ಕಣ್ಣೀರು ನೊಡಲು ನನಗೆ ಸಾಧ್ಯವಾಗುತ್ತಿಲ್ಲ. ಆ ಕಣ್ಣೀರು ನಿಲ್ಲುವಂತೆ ಮಾಡು ಯಾ ಅಲ್ಲಾಹ್"ನೂರ್ ಜಹಾನ್ ಮನದಲ್ಲಿಯೇ ಮೌನವಾಗಿ ಪ್ರಾರ್ಥಿಸಿದಳು..
"ಉಮ್ಮ ... ಟೀ ...." ಎನ್ನುತ್ತಾ ಅವಳು ತನ್ನ ಕೈಯಲ್ಲಿದ್ದ ಟೀ ಗ್ಲಾಸ್ ಮತ್ತು ಉನ್ನಕಾಯದ ಸಣ್ಣ ತಟ್ಟೆಯನ್ನು ಕೋಣೆಯ ಬೇಬಿ ಟೇಬಲ್ ಮೇಲೆ ಇರಿಸಿ ಹೇಳಿದಳು .....
"ಆಹ್ .... ನೂರ್ ಜಹಾನ್" ಅವನು ಎದ್ದನಾ? ತಾಯಿ ಪ್ರಶ್ನಿಸಿದರು....
"ಹೂಂ, ಅವರು ಅದಾಗಲೇ ಸ್ನಾನ ಮುಗಿಸಿ ಸುಬಹಿ ನಮಾಝ್ ಮಾಡುತ್ತಿದ್ದಾರೆ."
"ಹಫ್ಸಾ ಮೋಳೋ ?" ಮತ್ತೆ ಉಮ್ಮಾ ಪ್ರಶ್ನೆ .....
"ಏನು ಹೇಳಲಿ ಉಮ್ಮ, ನಾನು ತುಂಬಾ ಹೊತ್ತಿನಿಂದ ಎಬ್ಬಿಸುತ್ತಲೇ ಇದ್ದರೂ,ಇನ್ನೂ ಕೂಡ ಎದ್ದಿಲ್ಲ.....
ಸ್ವಲ್ಪ ಹೊತ್ತು ಇರಲಿ ... ಸ್ನಾನದ ನೀರನ್ನು ಒಲೆಯಲ್ಲಿ ಕಾಯಿಸಲು ಇಟ್ಟಿದ್ದೇನೆ."
ತಾಯಿ ಹೇಳಿದಳು "ನೀನು ಅವಳನ್ನು ಎಬ್ಬಿಸಬೇಡ. ಇನ್ನೂ ಸ್ವಲ್ಪ ಹೊತ್ತು ಮಲಗಲಿ ಬಿಡು."
"ನೂರ್ಜ ಎಲ್ಲಿದ್ದೀಯಾ ? ಬೇಗ ನನ್ನ ಹೊಸ ಅಂಗಿಯನ್ನು ತಂದುಕೊಡು.. ಪೆರ್ನಾಳ್ ನಮಾಝ್ ಆರಂಭವಾಗುವ ಸಮಯವಾಗುತ್ತಿದೆ." ಮುನೀರ್ ರವರ ಧ್ವನಿ ಕೇಳಿ ಇಸ್ತ್ರಿ ಮಾಡಿಟ್ಟಿದ್ದ ಹೊಸ ಬಟ್ಟೆಗಳೊಂದಿಗೆ ಕೋಣೆಗೆ ಧಾವಿಸಿದಳು ....
"ಚಹಾವನ್ನು ತೆಗೆದಿಟ್ಟಿದ್ದೇನೆ" ತನ್ನ ಗಂಡ ಮುನೀರ್ ಶರ್ಟ್ ನ ಬಟನ್ ಹಾಕುತ್ತಾ ನೂರ್ ಜಹಾನ್ ಹೇಳಿದಳು,
"ಉಹುಂ !! ಇವತ್ತು ಏನು ವಿಶೇಷ ?" ಅವನು ಅವಳನ್ನು ತನ್ನ ಎದೆಗೆ ಅಪ್ಪಿಕೊಂಡು ಕೇಳಿದನು ....
"ಉನ್ನಕ್ಕಾಯ .....ನಿಮ್ಮ ಮೆಚ್ಚಿನ ಉನ್ನಕಾಯ ... "ನಗುತ್ತಾ ಅವಳು ಅವನ ತೋಳುಗಳಿಂದ ಕೈಯ್ಯನ್ನು ಬಿಡಿಸಿಕೊಂಡು ಕೋಣೆಯಿಂದ ಹೊರಗೆ ಓಡಿದಳು ....
(ಅವರು ಕೂಡ ನಗುವಿನೊಂದಿಗೆ ಹಿಂಬಾಲಿಸಿದರು .....)
"ನಿಧಾನ ಮನುಷ್ಯ .....ಏಕೆ ಹೀಗೆ ತಿನ್ನಲು ಏನೂ ಕೂಡ ಇರದ ಹಾಗೆ? ಮೊದಲ ಬಾರಿಗೆ ಉನ್ನಕಾಯವನ್ನು ತಿನ್ನುವ ಹಾಗೆ ...."
ಅನ್ನುತ್ತಾ ನೂರ್ ಜಹಾನ್ ಬಿಸಿಯಾದ ಚಹಾವನ್ನು ಗಾಜಿನ ಗ್ಲಾಸಿನೊಳಗೆ ಸುರಿದು ಅವನ ಮುಂದಿಟ್ಟಳು.
"ಇನ್ನೇನು ಉಪವಾಸವೆಲ್ಲವೂ ಮುಗಿಯಿತಲ್ಲ. ಇನ್ನು ಮನೆಯಲ್ಲಿ ಹೆಚ್ಚು ಕೆಲಸವಿರಲಿಕ್ಕಿಲ್ಲ ತಾನೇ ?" ಎನ್ನುತ್ತಾ ಮುನೀರ್ ತಾನು ತಿನ್ನುತ್ತಿದ್ದ ಉನ್ನಕ್ಕಾಯ ತುಂಡೊಂದನ್ನು ಅವಳ ಬಾಯಿಗೆ ಹಾಕಿ ಅವಳ ಕೆನ್ನೆಯನ್ನು ಮುದ್ದಿಸಿ ಹೇಳಿದನು .....
"ಉಹುಂ, ಬೇಗ ಹೊರಡಿ, ಇನ್ನು ಉಮ್ಮ ಬಂದರೆ ಅಷ್ಟೇ, ಹಬ್ಬದ ದಿನದಂದೇ ಉಮ್ಮನ ಬಾಯಿಂದ ಏನಾದರೂ ಕೇಳಲಿದೆಯೇ? ಅವಳು ಅವನನ್ನು ಪ್ರೀತಿಯಿಂದ ಗದರಿಸಿದಳು ....
ಓಹೋ, ಎಲ್ಲಾ ಸಂಪ್ರದಾಯದೊಂದಿಗೆ, ಮಹರ್ ಕೊಟ್ಟು ಮದುವೆಮಾಡಿಕೊಂಡು ಬಂದಿರುವಾಗ ಉಮ್ಮನಿಗೇನು? ಗಂಡನಾಗಿರುವ ನನ್ನೊಡನೆಯೇ ಇಷ್ಟು ನಾಚಿಕೆಯೇ ? ಮುನೀರ್ ತನ್ನ ಹೆಂಡತಿ ನೂರ್ ಜಹಾನ್ ಳ ಕಿವಿಯನ್ನು ಹಿಡಿದು ಕೇಳಿದನು .....
"ಮಗನೇ, ಇನ್ನೂ ಕೂಡ ಮಸ್ಜಿದ್ ಗೆ ಹೋಗಲಿಲ್ಲವೇ ?" ಎಂದು ತಾಯಿಯ ಧ್ವನಿ ಕೇಳಿದ ಕೂಡಲೇ, ಬೆಕ್ಕಿನ ಮರಿಯಂತೆ ಏನೂ ಶಬ್ದ ಮಾಡದೆ ಮುನೀರ್ ಮೆಲ್ಲನೆ ಮೆಟ್ಟಿಲುಗಳ ಮೇಲೆ ನಡೆದನು. ಗಹಗಹಿಸಿ ಬರುತ್ತಿರುವ ನಗು ತಾಳಲಾರದೆ ಬಾಯಿಗೆ ಕೈಯಿಟ್ಟು ಮುಗುಳ್ನಕ್ಕು ನೂರ್ ಜಹಾನ್ ಅವರನ್ನು ಹಿಂಬಾಲಿಸಿದನು.
ಸಣ್ಣ ಬಿಳಿ ಪಟ್ಟೆಗಳೊಂದಿಗೆ ಕಂಗೊಳಿಸುತ್ತಿದ್ದ ಲುಂಗಿ ಹಾಗೂ ನೀಲಿ ಬಣ್ಣದ ಶರ್ಟ್, ತಲೆಯ ಮೇಲೆ ಬಿಳಿಯ ಟೊಪ್ಪಿಯನ್ನಿಟ್ಟುಕೊಂಡು ಹೊರಟಿದ್ದ ಗಂಡ (ಮುನೀರ್) ಮದುವೆಯಾಗಿ ಹದಿನಾಲ್ಕು ವರ್ಷಗಳು ಕಳೆದಿದ್ದರೂ, ಈಗಲೂ ಇಪ್ಪತ್ತೈದು ವಯಸ್ಸಿನವನಾಗಿ ಕಾಣುತ್ತಿದ್ದು ಒಳ್ಳೆಯ ಸಿನೆಮಾ ನಟನಂತೆ ಕಾಣುತ್ತಿದ್ದಾರಲ್ಲ" ಎಂದು ನೂರ್ ಜಹಾನ್ ಮನಸ್ಸಿನಲ್ಲಿಯೇ ಪ್ರೀತಿಯಿಂದ ಮತ್ತು ಬಾಲಿಶ ಹೆಮ್ಮೆಯಿಂದ ಹೇಳಿದಳು ......
"ನಾನು ಮಸೀದಿಯಿಂದ ಹಿಂದಿರುಗುವಾಗ ಪತ್ತಿರ್ ಹಾಗೂ ಮಾಂಸದ ಪದಾರ್ಥ ರೆಡಿಮಾಡಿಡು ನೂರ್ಜ"
ಉಹುಂ, ಚಿಂತಿಸದಿರಿ ! ನೀವು ಹಿಂತಿರುಗಿ ಬರುವಷ್ಟರಲ್ಲಿ ಎಲ್ಲವೂ ತಯಾರಾಗಿರುತ್ತದೆ. ಬರುವಾಗ ಬಿಸಿಬಿಸಿಯಾಗಿಯೇ ತಿನ್ನಬಹುದು."
ಪತ್ನಿಯ ಪ್ರೀತಿಯ ಮಾತುಗಳನ್ನು ಕೇಳಿ ಮುಗುಳ್ನಕ್ಕ ಮುನೀರ್ ಕೈ ಬೀಸುತ್ತಾ ಮಸ್ಜಿದ್ ಕಡೆಗೆ ಹೆಜ್ಜೆಯಿಟ್ಟನು.
ನೂರ್ ಜಹಾನ್ ಮಸ್ಜಿದ್ ಗೆ ಹೋಗುತ್ತಿದ್ದ ತನ್ನ ಗಂಡನನ್ನು ನೋಡುತ್ತಾ ಮರೆಯಾಗುವವರೆಗೂ ಮನೆಬಾಗಿಲಿನ ಕಂಬದತ್ತ ಒರಗಿಕೊಂಡು ನೋಡುತ್ತಲಿದ್ದಳು.
ಸ್ವಲ್ಪ ಹೊತ್ತಿನಲ್ಲಿಯೇ "ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ......" ಪಕ್ಕದ ಅಕ್ಕರೆಪಲ್ಲಿ ಮಸೀದಿಯಲ್ಲಿ ಈದ್ ನಮಾಝಿನ ಮೊದಲು ಆರಂಭಗೊಂಡ ತಕ್ಬೀರ್ ಧ್ವನಿಯು ಮನಮೋಹಕವಾಗಿ ಕೇಳಿಬರತೊಡಗಿತು.....
ಕಣ್ಣೆದುರಿನಿಂದ ಮುನೀರ್ ಮರೆಯಾದ ನಂತರ ಅಡುಗೆಮನೆಯೊಳಗೆ ಪ್ರವೇಶಿಸಿದ ನೂರ್ ಜಹಾನ್ ಬಿರಿಯಾನಿ ತಯಾರಿಯಲ್ಲಿ ತೊಡಗಿಕೊಂಡಳು. ಉಮ್ಮ ಕೂಡ ಎದ್ದು ಬೆಳಗ್ಗಿನ ಕಾರ್ಯವನ್ನೆಲ್ಲ ಮುಗಿಸಿದರು. ಹಫ್ಸ ಕೂಡ ಎದ್ದು ಅದಾಗಲೇ ಸ್ನಾನ ಮುಗಿಸಿ, ತಿಂಡಿ ಮುಗಿಸಿ ಹಬ್ಬಕ್ಕಾಗಿ ತಂದಿಟ್ಟ ಹೊಸ ಉಡುಪನ್ನು ತೊಟ್ಟುಕೊಂಡಳು.
ಬೇಗನೇ ಅಡುಗೆ ಮುಗಿಸಿ ಟೇಬಲಿನ ಮೇಲೆ ತಂದಿಡುವಷ್ಟರಲ್ಲಿ "ನೂರ್ ಜಹಾನ್ ಎಲ್ಲಿದ್ದೀಯ? ನೋಡು ಯಾರು ಬಂದಿದ್ದಾರೆ ? ಬೇಗನೆ ಊಟ ಬಡಿಸು. ತುಂಬಾ ಹಸಿವಾಗ್ತಿದೆ."ಪೆರ್ನಾಳ್ ನಮಾಝ್ ಮುಗಿಸಿ ಬಂದ ಮುನೀರ್ ಮನೆಯೊಳಗೆ ಪ್ರವೇಶಿಸುತ್ತಲೇ ಪಟಪಟನೆ ಹೇಳತೊಡಗಿದರು.
ಇದೋ ಬಂದೆ ಎನ್ನುತ್ತಾ ನೂರ್ ಜಹಾನ್ ಹಾಲ್ ಗೆ ಪ್ರವೇಶಿಸಿದಳು. "ಕೈತೊಳೆದು ಬನ್ನಿ, ಬಿಸಿಬಿಸಿ ಬಿರಿಯಾನಿ ತಯಾರಾಗಿದೆ."ಸಣ್ಣ ನಗುವಿನೊಂದಿಗೆ ನೂರ್ ಜಹಾನ್ ಸ್ವಾಗತಿಸಿದಳು.
"ಅದ್ಭುತ .....ಒಳ್ಳೆಯ ರುಚಿ ....ಇದು ನೂರ್ ಜಹಾನ್ ಳ ಕೈಚಳಕವೇ ಸರಿ. ಅದು ಸೂಪರ್ .... ಮಾಶಾ ಅಲ್ಲಾಹ್ ..... "ತಲಶೇರಿ ಶೈಲಿಯಲ್ಲಿ, ಮಸಾಲಾ ಫ್ರೈಡ್ ಚಿಕನ್ ದಮ್ ಬಿರಿಯಾನಿಯನ್ನು ಬಾಯಿಗೆ ಹಾಕಿಕೊಳ್ಳುವಾಗ ಶಾಹಿದ್ ಹೇಳಿದನು. ಶಾಹಿದ್ ಮುನೀರ್ ಅವರ ಅಕ್ಕನ ಮಗ. ....ಬಿ ಟೆಕ್ ದ್ವಿತೀಯ ವರ್ಷದ ವಿದ್ಯಾರ್ಥಿ ....
"ಓ ....ಇದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ...".
ಅದು ಒಳ್ಳೆಯದು .....
"ನಿಮಗೆ ಮೊದಲೇ ಬಿರಿಯಾನಿ ತಯಾರಿಸುವುದು ಹೇಗೆ ಎಂದು ತಿಳಿದಿದೆಯೇ? ಗಂಜಿ ತಯಾರಿಸಲು ನನ್ನ ಬಳಿ ಹಣವೂ ಇಲ್ಲ .... "
ನಹೀಜುಮ್ಮ ಕೋಪದಿಂದ ಹೇಳಿದಳು, ಶಾಹಿದ್ ತನ್ನ ಸೊಸೆಯನ್ನು ಅಭಿನಂದಿಸುವುದು ಅವಳಿಗೆ ಇಷ್ಟವಿಲ್ಲವೆಂಬಂತೆ ....
ತಾಯಿಯ ನಡವಳಿಕೆಯಿಂದ ಮುನೀರ್ ಮುಖ ಕೆಂಪಾಯಿತು, ಆದರೆ ಅವನು ಉತ್ತರಿಸಲಿಲ್ಲ. ನಂತರ ಅವನು ನಿಧಾನವಾಗಿ ನೂರ್ ಜಹಾನ್ ಮುಖವನ್ನೊಮ್ಮೆ ನೋಡಿದನು. ಅವಳ ಮುಖದಲ್ಲಿ ಯಾವುದೇ ಅಭಿವ್ಯಕ್ತ ಇಲ್ಲ ..... ಈ ಬಗ್ಗೆ ನನಗೆ ಏನೂ ಗೊತ್ತಿಲ್ಲವೆಂಬಂತೆ ಮುಗುಳ್ನಕ್ಕಳು.
(ಗಂಡನ ಮುಖದಲ್ಲಿರುವ ಕೋಪವನ್ನು ಗಮನಿಸಿ) "ಇನ್ನೂ ಸ್ವಲ್ಪ ತಿನ್ನಿರಿ .."ಎನ್ನುತ್ತಾ ನೂರ್ ಜಹಾನ್ ಬಿರಿಯಾನಿಯನ್ನು ಮುನೀರ್ ತಟ್ಟೆಗೆ ಬಡಿಸಿದಳು.
"ಹಫ್ಸಾ ಬೇಗ ಬಾ, ಬಿರಿಯಾನಿ ತಣ್ಣಗಾಗುವ ಮುಂಚೆನೇ ಊಟ ಮಾಡುವಿಯಂತೆ." ನೂರ್ ಜಹಾನ್ ಪ್ರೀತಿಯಿಂದ ಕರೆದಳು..
"ಉಮ್ ..." ಉತ್ತರವು ಒಂದು ಮೂಲೆಯಲ್ಲಿ ಸೀಮಿತವಾಗಿತ್ತು ...
(ಅವಳು ಹಾಗೆ ...ತುಂಬಾ ಕಡಿಮೆ ಮಾತು ....ಇತ್ತೀಚೆಗೆ ಅದು ಕೂಡ ಅಷ್ಟಕ್ಕಷ್ಟೇ. ಹಫ್ಸಾ , ಮುನೀರ್ ಅವರ ತಂಗಿ .ಅವಳು ತುಂಬಾ ಸುಂದರವಾಗಿದ್ದಾಳೆ. ಅವಳ ಎರಡೂ ಕಾಲುಗಳಿಗೆ ತೊಂದರೆಯಿದ್ದು ನಡೆಯಲು ಕಷ್ಟಕರವಾಗಿದ್ದಿತು. ಅವಳ
ಈ ಬಲಹೀನತೆ ಬಿಟ್ಟರೆ ಅಷ್ಟು ಸುಂದರಿಯಾದ ಹೆಣ್ಣು ಸುತ್ತಮುತ್ತಲಲ್ಲಿ ಯಾರೂ ಇರಲಿಲ್ಲ. ಅವಳು ಉತ್ತಮ ಸಮವಸ್ತ್ರವನ್ನು ಉಟ್ಟರೆ ಎಂತಹ ಅಪ್ಸರೆಯೂ ನಾಚುವಷ್ಟು ಸುಂದರವಾಗಿದ್ದಳು ಹಫ್ಸ )
ಅವಳ ವಯಸ್ಸಿನ ಹುಡುಗಿಯರು ಅದಾಗಲೇ ಮದುವೆಯಾಗಿ ಎರಡು, ಮೂರು ಮಕ್ಕಳನ್ನು ಹಡೆದು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಹಫ್ಸಾಳಿಗೆ ಇಪ್ಪತ್ತಾರು ವರ್ಷಗಳಾಗಿತ್ತು. ಹದಿನೇಳನೇ ವಯಸ್ಸಿರುವಾಗಲೇ ಅವಳ ಸುಂದರವಾದ ಮೈಕಟ್ಟಿನ ಸೌಂದರ್ಯಕ್ಕೆ ಮರುಳಾಗಿ ಬಹಳಷ್ಟು ಸಂಬಂಧಗಳು ಕೂಡಿ ಬಂದಿದ್ದರೂ ಅವಳ ಅಂಗವೈಕಲ್ಯವನ್ನು ಕಂಡು ಹಿಂದೇಟು ಹಾಕುತ್ತಿದ್ದರು.
ಸಾಕಷ್ಟು ಚಿನ್ನ ಮತ್ತು ವರದಕ್ಷಿಣೆಯನ್ನು ನೀಡಿದ್ದರೆ ಯಾವತ್ತೋ ಅವಳ ಮದುವೆಯಾಗುತ್ತಿತ್ತು. ಆದರೆ ಅಷ್ಟು ನೀಡಲು ಆ ಕುಟುಂಬಕ್ಕೆ ಯಾವುದೇ ಆಸ್ತಿಪಾಸ್ತಿಗಳಿಲ್ಲ. ಹತ್ತು ಸೆಂಟ್ಸ್ ಭೂಮಿ ಮತ್ತು ಚೌಕಟ್ಟಾದ ನಾಲ್ಕು ಕೋಣೆಗಳ ಸಣ್ಣ ಮನೆ ಬಿಟ್ಟರೆ ಬೇರೇನಿಲ್ಲ.
ಆ ಬಡಕುಟುಂಬಕ್ಕೆ ಮುನೀರ್ ಒಬ್ಬರೇ ಆಧಾರಸ್ತಂಭವಾಗಿದ್ದರು. ಅಕ್ಕರೆಪಲ್ಲಿಯ ಉಸ್ಮಾನ್ ಹಾಜಿಯವರ ಗಿರಾಣಿ ಅಂಗಡಿಯಲ್ಲಿ ಕೆಲಸಕ್ಕಿರುವ ಮುನೀರ್ ರವರ ಸಣ್ಣ ವರಮಾನದಿಂದಲೇ ಅವರ ಕುಟುಂಬ ಸಾಗುತ್ತಲಿತ್ತು.. ಮುನೀರ್ ರವರ ಅಕ್ಕ ಝುಬೈದಾಳ ಮಗನಾಗಿದ್ದ ಶಾಹಿದ್. ಶಾಹಿದ್ ನ ಪ್ರಸವದ ಸಮಯದಲ್ಲುಂಟಾದ
ಕಾಮಾಲೆರೋಗದಿಂದ ಹೆತ್ತ ಹನ್ನೆರಡನೇ ದಿವಸದಲ್ಲೇ ಅವನ ತಾಯಿ ಝುಬೈದಾ ಇಹಲೋಕ ತ್ಯಜಿಸಿದ್ದರು. ನಂತರ ಶಾಹಿದ್ ಮುನೀರ್ ಮನೆಯಲ್ಲೇ ಇದ್ದು, ಅವನನ್ನು ಪುಟ್ಟ ಮಗುವಿರುವಾಗಲೆ ಪೋಷಿಸಿ ಬೆಳೆಸಿದ್ದು ಮುನೀರ್ ರವರ ತಾಯಿ ನಫೀಸಾದ..
ಶಾಹಿದ್ ನ ತಾಯಿ ಝುಬೈದ ಮರಣದ ನಲ್ವತ್ತೊಂದು ದಿನಗಳ ನಂತರ ಅವನ ತಂದೆ ತನ್ನ ಜೀವನ ರೂಪಿಸಲು ಮತ್ತೊಂದು ಮದುವೆಯಾಗಿದ್ದರು.. ಮದುವೆಯಾದ ಮೊದ ಮೊದಲಿಗೆ ಕೆಲವೊಂದು ಬಾರಿ ಶಾಹಿದ್ ನನ್ನು ನೋಡಲು ಬರುತ್ತಿದ್ದ. ಅವನ ತಂದೆ ಅವನ ಖರ್ಚಿಗಾಗಿ ಅಲ್ಪ ಸ್ವಲ್ಪ ಹಣವನ್ನೂ ನಫೀಸಮ್ಮಳ ಕೈಗೆ ನೀಡುತ್ತಿದ್ದ. ಹೊಸ ಸಂಸಾರ ತಾನೇ.. ! ಶಾಹಿದ್ ಗೆ ಆರು ವರ್ಷ ತುಂಬಿದಾಗ ಮಾವನ (ತಾಯಿಯ ತಮ್ಮ ಮುನೀರ್ ) ಮದುವೆಯಾದದ್ದು ! ಅದರೊಂದಿಗೆ ಸೊಸೆಯಾಗಿ ಬಂದಿದ್ದ ನೂರ್ ಜಹಾನ್ ಶಾಹಿದ್ ನನ್ನು ತನ್ನ ಮಗನಂತೆಯೇ ಪ್ರೀತಿಯಿಂದ ಬಹಳ ಅಕ್ಕರೆಯಿಂದ ನೋಡಿಕೊಳ್ಳತೊಡಗಿದಳು. ಚಿಕ್ಕ ಪ್ರಾಯದಲ್ಲೆ ತಾಯಿಯನ್ನೇ ಕಾಣದ ಶಾಹಿದ್'ಗೆ ನೂರ್ ಜಹಾನ್ ತಾಯಿಗಿಂತ ಮಿಗಿಲಾದಳು. ತಾಯಿಯಂತೆ ಸ್ನಾನ ಮಾಡಿಸುವುದು, ಊಟೋಪಚಾರ, ಮಲಗುವಾಗ ಲಾಲಿ ಹಾಡುತ್ತಾ ಮಲಗಿಸುವುದು ಎಲ್ಲವೂ ನೂರ್ ಜಹಾನ್ ಆಗಿದ್ದಳು. ಅವನ ತುಂಟಾಟದಿಂದಲೇ ಎಲ್ಲವನ್ನೂ ಮರೆಯುತ್ತಿದ್ದ ನೂರ್ ಜಹಾನ್ ಗೆ ತನ್ನ ಸ್ವಂತ ಮಗನಿಗಿಂತಲೂ ಅಚ್ಚುಮೆಚ್ಚಾಗಿದ್ದನು.. ಮದುವೆಯಾಗಿ ಹದಿನಾಲ್ಕು ವರ್ಷ ಕಳೆದರೂ ಮಕ್ಕಳಾಗದ ನೂರ್ ಜಹಾನ್ ಳಿಗೆ ಈಗ ಎಲ್ಲವೂ ಶಾಹಿದ್ ಆಗಿದ್ದನು.. ತಾಯಿ ಇಲ್ಲದ ಶಾಹಿದ್ ಗೆ ಕೂಡ ನೂರ್ ಜಹಾನ್ ಅಮ್ಮನ ಸ್ಥಾನವನ್ನು ತುಂಬಿದ್ದಳು. ಅವರಿಬ್ಬರ ವಾತ್ಸಲ್ಯ ಅಗಾಢವಾಗಿತ್ತು.
ವರ್ಷಗಳು ಕಳೆದವು. ಶಾಹಿದ್ ಈಗ ಹತ್ತನೇ ತರಗತಿಯಲ್ಲಿ ಕಲಿಯುವ ವಿಧ್ಯಾರ್ಥಿ. ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಶಾಹಿದ್ ನ ತಂದೆ ಹಾಗೂ ಚಿಕ್ಕಮ್ಮ (ಮಲತಾಯಿ) ಶಾಹಿದ್'ನ ಕಾಣಲು ಅದೊಂದು ದಿನ ಮನೆಗೆ ಬಂದರು. ಅದೆಷ್ಟೋ ವರ್ಷಗಳಿಂದಲೂ ಕಣ್ಣ ಮುಂದೆ ಕಾಣದ ತಂದೆ ಮನೆಗೆ ಬಂದಾಗ ಕಿಂಚಿತ್ತೂ ನಿರಾಶಾದಾಯಕ ಮನೋಭಾವನೆ ತೋರದ ಶಾಹಿದ್ ಪ್ರೀತಿಯಿಂದ ಬರಮಾಡಿಕೊಂಡು ಸಲುಗೆಯಿಂದಲೇ ಮಾತಾಡಿದನು.
ಬಹಳ ದಿನಗಳ ನಂತರ ಮನೆಗೆ ಆಗಮಿಸಿದ ತನ್ನ ತಂದೆಯ ಉದ್ದೇಶವನ್ನರಿತ ಶಾಹಿದ್ ಒಮ್ಮೆಲೆ ಬೆಚ್ಚಿಬಿದ್ದನು..
ಶಾಹಿದ್'ನ ತಂದೆ ಶಾಹಿದ್'ನನ್ನು ಹತ್ತಿರ ಕರೆದು.. "ನೀನು ಈ ಕೂಡಲೇ ನನ್ನ ಜೊತೆಗೆ ಮನೆಗೆ ಬರುವೆ, ನೀನು ಪಟ್ಟಣದಲ್ಲಿದ್ದುಕೊಂಡು ಮುಂದಿನ ವ್ಯಾಸಂಗ ಮುಂದುವರೆಸುವಿಯಂತೆ !'"
ಅಪ್ಪಾ ! ಏನೂಂತ ಹೇಳುತ್ತಿರುವಿರಿ.? ನಾನು ಯಾವತ್ತು ಎಲ್ಲಿಗೂ ಬರುವುದಿಲ್ಲ. ನೀವೀಗಲೇ ಇಲ್ಲಿಂದ ಹೊರಡಿರಿ. ಸುಮ್ಮನೆ ತಕರಾರು ಮಾಡಬೇಡಿ... ನೀವಿಲ್ಲಿಂದ ಹೊರಟರೆ ಅದು ನಿಮಗೂ ಒಳಿತು..! ಅದುವರೆಗೂ ಸಮಾಧಾನದಿಂದಲೇ ಮಾತನಾಡುತ್ತಿದ್ದ ಶಾಹಿದ್ ಒಮ್ಮೆಲೆ ಕೋಪದಿಂದ ಘರ್ಜಿಸಿದ. ತಂದೆ ಮಗನ ನಡುವೆ ದೊಡ್ಡ ರಾದ್ಧಾಂತವೇ ಅಲ್ಲಿ ನಡೆದಿತ್ತು.. ಮನೆಯೊಳಗಿನ ಗದ್ದಲಕ್ಕೆ ನೆರೆಕರೆಯರೆಲ್ಲರೂ ಒಗ್ಗೂಡಿದರು...
ಏನಾಯಿತು ? ಏಕಿಷ್ಟು ಗದ್ದಲ ? ಎಲ್ಲವೂ ಸರಿಯಿದೆ ತಾನೇ ? ಹಿರಿಯರೊಬ್ಬರು ಪ್ರಶ್ನಿಸಿದರು...
"ನೋಡಿದ್ರಾ.. ನನ್ನ ಮಗನ ದುರಹಂಕಾರವನ್ನು ! ಇಷ್ಟು ಪ್ರೀತಿಯಿಂದ ನಾನು ಅವನನ್ನು ಕರೆದರೆ ಖಡಾಖಂಡಿತವಾಗಿ ನನ್ನ ಜೊತೆ ಬರುದಿಲ್ಲವೆಂದು ನಿರಾಕರಿಸುತ್ತಿದ್ದಾನೆ. ನೀವೆಲ್ಲರೂ ಸೇರಿ ಸ್ವಲ್ಪ ಇವನಿಗೆ ಬುದ್ದಿ ಹೇಳಿ.."ಶಾಹಿದ್ ನ ತಂದೆ ಅಲ್ಲಿಗೆ ಬಂದ ಸುತ್ತಮುತ್ತಲಿನವರಲ್ಲಿ ಬಿನ್ನವಿಸಿದ.
ನಾನು ಈ ಮನೆಯನ್ನು ಬಿಟ್ಟು ಎಲ್ಲಿಗೂ ಹೋಗಲ್ಲ.. ಇಷ್ಟು ವರ್ಷ ನನ್ನ ಅವಶ್ಯಕತೆ ಇಲ್ಲದಿರುವಾಗ ಈಗೇಕೆ ನನ್ನನ್ನು ಒತ್ತಾಯಿಸುತ್ತಿದ್ದೀರಿ..? ನಿಮಗೆ ನನ್ನ ಮೇಲೆ ಯಾವುದೇ ಅಧಿಕಾರವಿಲ್ಲ. ಸುಮ್ಮನೆ ಹಠ ಮಾಡ್ಬೇಡಿ! ನೀವಿನ್ನು ಇಲ್ಲಿಂದ ಹೋಗಬಹುದು. ಮಾತಿಗೆ ಮಾತು ಬೆಳೆದು ಕೊನೆಗೆ ಪಂಚಾಯತ್ ನಲ್ಲಿ ತೀರ್ಮಾನ ಮಾಡಬೇಕಾಗಿ ಬಂತು. ಶಾಹಿದ್'ನ ತಂದೆ ಕೂಡ ಹಿಂದೆ ಸರಿಯಲು ಸಿದ್ಧರಿರಲಿಲ್ಲ ....
ಹಲವು ಬಾರಿ ಚರ್ಚೆ ನಡೆದ ಬಳಿಕ ಕೊನೆಯೆಲ್ಲಿ ಶಾಹಿದ್ ತನ್ನ ತಂದೆಯ ಜೊತೆಯಲ್ಲೇ ಹೋಗಬೇಕೆಂದು ಪಂಚಾಯತ್ ತೀರ್ಪು ನೀಡಿತು.. ಸ್ವಲ್ಪವೂ ಮನಸಿಲ್ಲದ ಶಾಹಿದ್ ಕೊನೆಗೂ ಪಂಚಾಯತ್ ತೀರ್ಮಾನಕ್ಕೆ ತಲೆಬಗ್ಗಿಸಬೇಕಾಯಿತು.
ಚರ್ಚೆ ಮುಂದುವರೆಯುತ್ತಿರುವ ಈ ನಡುವೆ ಹತ್ತನೇ ತರಗತಿಯ ಫಲಿತಾಂಶವೂ ಬಂದಿತ್ತು.. ನಿರೀಕ್ಷೆಯಂತೆ ಶಾಹಿದ್ ಎಲ್ಲದರಲ್ಲೂ ಉತ್ತಮ ಅಂಕೆಯೊಂದಿಗೆ ಅಗ್ರಸ್ಥಾನದಲ್ಲಿದ್ದ...
ಪಟ್ಟಣದಲ್ಲಿ ಮಗನನ್ನು ಚೆನ್ನಾಗಿ ಓದಿಸಿ ದೊಡ್ಡ ಡಾಕ್ಟರ್ ಮಾಡುತ್ತೇನೆಂದು ಅಪ್ಪ ಹೆಮ್ಮೆಯಿಂದ ಹೇಳಿದ...
ಹುಟ್ಟಿದ ದಿನದಿಂದ ಇದುವರೆಗೂ ತಲೆಯನ್ನು ಸವರಿದ, ದಿನಕ್ಕೊಂದು ತಾಸು ಕೂಡ ಜೊತೆಗಿರದೆ, ಒಂದಕ್ಷರವನ್ನೂ ಕಲಿಸದ ತನ್ನ ಅಪ್ಪನ ಮಾತು ಕೇಳುವಾಗ ಶಾಹಿದ್ ನ ಮುಖ ಕೋಪದಿಂದ ಕೊತಕೊತ ಎಂದು ಕುದಿಯುತ್ತಲಿತ್ತು.
"ನಾನು ಒಮ್ಮೆಯೂ ಡಾಕ್ಟರ್ ಆಗಲಾರೆ ! ನಿನ್ನ ಈ ಹಠವಾದಿತನ ನನ್ನಲ್ಲಿ ನಡೆಯಲಿಕ್ಕಿಲ್ಲ.."ಶಾಹಿದ್ ಇನ್ನಷ್ಟು ಆವೇಶದಿಂದ ತನ್ನ ಕೋಪವನ್ನು ತೋರ್ಪಡಿಸಿದ.
ಯಾವುದಕ್ಕೂ ಲೆಕ್ಕಿಸದ ತಂದೆ ಶಾಹಿದ್ ನ ಬಟ್ಟೆಬರೆಗಳನ್ನು ಅವನ ಅವಶ್ಯಕತೆಯಿರುವ ಕೆಲವೊಂದು ಸಾಮಾನುಗಳನ್ನು ಪ್ಯಾಕ್ ಮಾಡಿಕೊಡಲು ನೂರ್ ಜಹಾನ್ ಳಲ್ಲಿ ಹೇಳಿದ.
ನಡೆಯುತ್ತಿದ್ದ ಒಂದೊಂದು ಚಟುವಟಿಕೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನೂರ್ ಜಹಾನ್ ಳಂತೂ ಗರಬಡಿವಳಂತೆ ನಿಂತುಕೊಂಡಿದ್ದಳು.... ಆ ತಾಯಿಯ ಮನಸ್ಸನ್ನು ಅರಿಯುವವರು ಯಾರು ? ತನ್ನ ಕರುಳನ್ನೇ ಯಾರೋ ಕಿತ್ತೊಗೆಯುವಂತೆ ಭಾಸವಾಯಿತು ನೂರ್ ಜಹಾನ್ ಳಿಗೆ ......
ನೂರ್'ಜಹಾನಳ ಮನಸ್ಸಿನಾಳದಲ್ಲಿ ಏನೋ ಒಂದು ತಳಮಳ.. ಇಷ್ಟು ವರುಷ ತನ್ನ ಮಡಿಲಲ್ಲಿ ಬೆಳೆದ ಶಾಹಿದ್ ಮನೆಬಿಟ್ಟು ಹೋಗ್ತಿದ್ದಾನಲ್ಲ.. ಆದರೆ ನೂರ್'ಜಹಾನಳ ಸಂಕಟ ಅಲ್ಲಿದ್ದವರಿಗೆ ಯಾರಿಗೂ ಕಾಣಿಸುತ್ತಿರಲಿಲ್ಲ.. ಮದುವೆಯಾಗಿ ಅಲ್ಲಾಹು ಮಕ್ಕಳ ಭಾಗ್ಯ ಕರುಣಿಸದಿದ್ದರು ಶಾಹಿದ್ ನನ್ನು ತನ್ನ ಮಗನಂತೆ ಆರೈಕೆ ಮಾಡಿ ಬೆಳೆಸಿದ್ದಳು ನೂರ್'ಜಹಾನ್.. ಮದುವೆಯಾಗಿ ಮನೆಗೆ ಬಂದ ದಿನದಿಂದ ಶಾಹಿದ್ ಒಂದು ದಿವಸವೂ ಮನೆಯಿಂದ ಹೊರಗಿರಲಿಲ್ಲ. ಈಗಂತೂ ಪಾಲು ಪಂಚಾಯ್ತಿ ತೀರ್ಮಾನದಂತೆ ಅವನ ತಂದೆಯ ಜೊತೆಗೆ ಹೋಗಲೇಬೇಕಾದ ಅನಿವಾರ್ಯತೆ...! ಕನಸು ಮನಸಿನಲ್ಲಿಯೂ ಶಾಹಿದ್ ತನ್ನಿಂದ ದೂರವಾಗುತ್ತಾನೆಂದು ಅರಿಯದ ನೂರ್ ಜಹಾನ್ ಉಮ್ಮಳಿಸಿ ಬರುತ್ತಿರುವ ದುಃಖವನ್ನು ಅದುಮಿಟ್ಟು ಅವನ ಅಗತ್ಯಕ್ಕಿರುವ ಕೆಲವೊಂದು ಸಾಮಾನುಗಳನ್ನು ಪ್ಯಾಕ್ ಮಾಡಿ ಹಾಲ್ ನಲ್ಲಿ ತಂದಿಟ್ಟಳು.. ಮನೆಯವರೆಲ್ಲರಿಗೂ ಅಚ್ಚುಮೆಚ್ಚಿನ ಹುಡುಗನಾಗಿದ್ದ ಶಾಹಿದ್ ಅದಾಗಲೇ ಅವರಿಂದ ದೂರವಾಗುವ ಸಮಯ ಬಂದೆರಗಿತ್ತು. ಮನೆಯವರೆಲ್ಲ ಕಟ್ಟೆಯೊಡೆದ ದುಃಖದ ಮುಖಗಳನ್ನೆಲ್ಲಾ ತನ್ನ ಕೆಲವು ಹಾಸ್ಯಾಸ್ಪದ ಮಾತುಗಳನ್ನಾಡುತ್ತಾ, ಅವರನ್ನೆಲ್ಲ ಸಮಾಧಾನಪಡಿಸುತ್ತ ಭಾರವಾದ ಹೆಜ್ಜೆಗಳನ್ನಿಡುತ್ತ ತಂದೆ ಮತ್ತು ಚಿಕ್ಕಮ್ಮನ ಜೊತೆ ಪೇಟೆಯೆಡೆಗೆ ಧಾವಿಸಿದನು ಶಾಹಿದ್ !! ಅವರು ಕಣ್ಣೆದುರಿನಿಂದ ಮರೆಯಾಗುವವರೆಗೂ ನೂರ್ ಜಹಾನ್ ಬಾಗಿಲಿನ ಅಂಚಿನಲ್ಲಿ ನಿಂತುಕೊಂಡು ಕಣ್ಣೀರಿಡುತ್ತಲಿದ್ದಳು..
*ಅದೊಂದು ಸುಂದರವಾದ ಪಟ್ಟಣ. ರಸ್ತೆಯ ಇಕ್ಕೆಡೆಗಳಲ್ಲೂ ಅಲಂಕೃತವಾದ ದೀಪಗಳು. ರಸ್ತೆಯ ಇಕ್ಕೆಲಗಳಲ್ಲಿ ಬಾನೆತ್ತರಕ್ಕೆ ಕಾಣುತ್ತಿರುವ ಕಟ್ಟಡಗಳು. ಅಲ್ಲಲ್ಲಿ ಸರಕುಗಳ ಮಾರುಕಟ್ಟೆಗಳು, ಮಾಲ್ ಗಳಿಂದ ತುಂಬಿದ್ದ ಜನನಿಬಿಡ ಸ್ಥಳವಾಗಿತ್ತದು. ಕೆಲವೊಂದು ಮನೆಗಳನ್ನು ದಾಟಿ ಶಾಹಿದ್ ನ ತಂದೆ ತನ್ನ ಮನೆಯೊಳಗೆ ಕರೆದುಕೊಂಡು ಹೋದನು. ಅದಾಗಲೇ ಕತ್ತಲಾದ್ದರಿಂದ ಎಲ್ಲರೂ ಊಟೋಪಚಾರ ಮುಗಿಸಿ ತಮ್ಮ ತಮ್ಮ ಕೋಣೆಯೊಳಗೆ ಹೋಗಿ ಮಲಗಿದರು. ಆದರೆ ಶಾಹಿದ್ ಗೆ ಮಾತ್ರ ರಾತ್ರಿಯಿಡೀ ನಿದ್ದೆ ಹತ್ತಿರಲಿಲ್ಲ. ತಾನಿದ್ದ ಮನೆ, ಅಲ್ಲಿನ ವಾತಾವರಣ, ಪ್ರೀತಿಯನ್ನು ಮಾತ್ರ ಕಂಡಿದ್ದ ನೂರ್ ಜಹಾನ್ ಳ ಮಮತೆ ಎಲ್ಲವೂ ಒಂದರ ಹಿಂದೆ ಒಂದಂತೆ ಶಾಹಿದ್ ನ ಮನದಾಳದಲ್ಲಿ ಒಂದೊಂದಾಗಿ ಮರುಕಳಿಸುತ್ತಿತ್ತು.*
ಹೇಗೂ ಬೆಳಗಾಯಿತು. ಕೋಣೆಯೊಳಗಿಂದ ಹೊರಬಂದ ತಂದೆಯನ್ನು ಕುರಿತು ಶಾಹಿದ್ ನೇರವಾಗಿ.. "ಇಲ್ಲ .. ಇಲ್ಲ...ನಾನು ಎಂದಿಗೂ ಯಾವ ಕಾರಣಕ್ಕು ವೈದ್ಯನಾಗುವುದಿಲ್ಲ .... ಎಲ್ಲವೂ ನಿಮ್ಮ ಆಸೆಯಂತೆ ನಡೆಯುತ್ತದೆಯೆಂದು ಕನಸು ಮನಸಲ್ಲು ಭಾವಿಸಬೇಡಿ !"
ಓ.. !! ಹಾಗಿದ್ದಲ್ಲಿ ನಾನೂ ಕೂಡ ನೋಡುತ್ತೇನೆ! ನಾನು ನಿನ್ನ ಅಪ್ಪ , ನೀನು ಹೇಗೆ ಹೋಗುವುದಿಲ್ಲವೆಂದು ನೊಡುತ್ತೇನೆ. ಹೆಚ್ಚು ಮಾತಾಡದೆ ಕೂಡಲೇ ಸ್ನಾನ ಮಾಡಿ ತಯಾರಾಗು..! ನನಗೆ ಕೋಪ ಬಂದರೆ ನಾನೇನು ಮಾಡ್ತೇನೆ ನೋಡುತ್ತಿರು.... ತಂದೆಯ ಘರ್ಜನೆಯ ಮಾತು ಕೇಳಿ ಶಾಹಿದ್ ಬೆಕ್ಕಿನ ಮರಿಯಂತೆ ಲಗಬಗನೇ ಸ್ನಾನ ಮುಗಿಸಿ ತಯಾರಾಗಿ ನಿಂತನು.
ಶಾಹಿದ್ ನೆನೆಸಿದ್ದೇ ಒಂದು ಆದದ್ದೇ ಇನ್ನೊಂದು..ಉತ್ತಮ ಶಾಲೆಯಲ್ಲಿ ಮೆರಿಟ್ ಪ್ಲಸ್ ಒನ್ನಲ್ಲಿ ಸ್ಥಾನ ಪಡೆದಿದ್ದರೂ, ಅವನನ್ನು ದೂರದಲ್ಲಿರುವ ವಸತಿ ಶಾಲೆಗೆ ಸೇರಿಸಲಾಯಿತು. ಅಲ್ಲಿಗೆ ಶಾಹಿದ್ ತನ್ನನ್ನು ತಾಯಿಯಂತೆ ಪ್ರೀತಿಸುತ್ತಿದ್ದ ನೂರ್ ಜಹಾನ್ ಮತ್ತಿತರ ಆಪ್ತರಿಂದಲೂ ದೂರವಾದನು..
ಮರುದಿನ ಕಾಲೇಜ್ ಜೀವನದ ಮೊದಲ ದಿನ. ನಾನಾ ಭಾಗಗಳಿಂದ ಬಂದಂತಹ ಹಲವಾರು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಹೊಸ ಉತ್ಸಾಹ, ಹುರುಪಿನಿಂದ ಕಾಲೇಜಿಗೆ ಹೋಗುತ್ತಿದ್ದರೆ, ಶಾಹಿದ್ ಮಾತ್ರ ಒಲ್ಲದ ಮನಸ್ಸಿಂದ ಕಾಲೇಜ್ ಕಡೆಗೆ ಹೆಜ್ಜೆ ಹಾಕಿದ..
ಪಟ್ಟಣದಲ್ಲಿದ್ದ ಅತೀ ದೊಡ್ಡ ಪ್ರತಿಷ್ಠಿತ ಕಾಲೇಜಾಗಿತ್ತದು ! ವಾಣಿಜ್ಯ, ಇಂಜಿನಿಯರಿಂಗ್, ಮೆಡಿಕಲ್ ಇನ್ನು ಎಲ್ಲಾ ರೀತಿಯ ಹಾಗೂ ಉತ್ತಮ ಸೌಕರ್ಯಗಳನ್ನೊಳಗೊಂಡ ಆ ಕಾಲೇಜಿನಲ್ಲಿ ಊರಿನ ಎಲ್ಲಾ ಜಾತಿಯ, ಎಲ್ಲಾ ಮೇಲ್ವರ್ಗ, ಕೀಳುದರ್ಜೆಯ ವಿದ್ಯಾರ್ಥಿಗಳು ಜಾತಿ ಮತ ಬೇಧವಿಲ್ಲದೆ ಒಗ್ಗೊಟ್ಟಾಗಿ ಬೆರೆತು ತಮ್ಮ ದಿನನಿತ್ಯದ ವ್ಯಾಸಂಗದಲ್ಲಿ ನಿರತರಾಗಿದ್ದರು..
ಒಂದೆರಡು ದಿನದಲ್ಲಿಯೇ ಮೆಡಿಕಲ್ ಕಾಲೇಜಿಗೆ ದಾಖಲಾಗುವ ಮುನ್ನ ಇರುವಂತಹ ಎಂಟ್ರನ್ಸ್ ಎಕ್ಸಾಮ್ ನ ದಿನಾಂಕ ನಿಗಧಿಯಾಗಿದ್ದರೂ, ಅಪ್ಪನ ಮೇಲಿರುವ ದ್ವೇಷದಿಂದ ಪರೀಕ್ಷೆಗೆ ಹಾಜರಾಗದೆ ಶಾಹಿದ್ ಇಂಜಿನಿಯರಿಂಗ್ ಸೀಟಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡ. ಕಾಲೇಜಿಗೆ ಸೇರಿಸಲು ಮಾತ್ರ ಬಂದಿದ್ದ ಅವನ ತಂದೆ ಮತ್ತೆ ಕಾಲೇಜಿನ ಕಡೆಗೆ ಇಣುಕಿ ಕೂಡ ನೋಡಲೇ ಇಲ್ಲ. ಹೀಗೆ ಶಾಹಿದ್ ಅವನಿಗಿಷ್ಟವಾದ ಇಂಜಿನಿಯರಿಂಗ್ ಕೋರ್ಸನ್ನೇ ಮುಂದುವರೆಸಿದನು..
ಸಮಯ ಸಿಕ್ಕಾಗಲೆಲ್ಲಾ ತನ್ನ ತಂದೆಯ ಮನೆಗೆ ಹೋಗದೆ ನೇರವಾಗಿ ತನ್ನನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ನೂರ್ ಜಹಾನ್ ಮನೆಗೆ ಧಾವಿಸಿ ಬರುತ್ತಿದ್ದ. ಶಾಹಿದ್ ನ ಮುಖ ಕಂಡಾಗಲೆಲ್ಲಾ ಮುನೀರ್ ಹಾಗೂ ನೂರ್ ಜಹಾನ್ ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುನೀರ್ ಗೆ ಅವನು ಅಕ್ಕನ ಮಗನಿಗಿಂತಲೂ ಹೆಚ್ಚು ಆತ್ಮೀಯ ಮಿತ್ರನೂ ಆಗಿದ್ದ. ಅಷ್ಟೊಂದು ಪ್ರೀತಿಬಾಂಧವ್ಯ ಅವರ ನಡುವೆಯಿತ್ತು. ಶಾಹಿದ್ ಆ ಮನೆಯಿಂದ ಹೊರಗೆ ಹೋದಾಗಲಂತೂ ಆ ಮನೆಯವರೆಲ್ಲ ಮೂಕವಿಸ್ಮಿತರಾಗಿದ್ದರು. ಆದರೆ ಶಾಹಿದ್ ನ ಮರು ಆಗಮನದೊಂದಿಗೆ ಆ ಮನೆಯವರ ಹರ್ಷಕ್ಕೆ ಕೊನೆಯಿಲ್ಲದಾಗಿತ್ತು.
ಹಾಗೆ ಪೆರ್ನಾಳ್ ದಿವಸ ಹಾಗೂ ಇನ್ನಿತರ ದಿವಸಗಳಲ್ಲಿ ಶಾಹಿದ್ ಮನೆಗೆ ಬಂದಾಗ, ನೂರ್ ಜಹಾನ್ ಅವನಿಗಿಷ್ಟವಾದ ತಿಂಡಿತಿನಿಸುಗಳನ್ನು ಮಾಡಿಕೊಡುತ್ತಿದ್ದಳು. ಹಗಲಿಡೀ ಮುನೀರ್, ನೂರ್ ಜಹಾನ್, ನಬೀಸಮ್ಮ ಅವನ ಹಾಸ್ಯಭರಿತ ಮಾತುಗಳು, ಕಾಲೇಜಿನ ಕೆಲವೊಂದು ಮೋಜುಗಳನ್ನು ಅವರ ಮುಂದೆ ಬಿಚ್ಚಿಡುವಾಗ ಅವರಿಗೆ ಸಮಯದ ಪರಿಜ್ಞಾನವೇ ಇರುತ್ತಿರಲಿಲ್ಲ. ಶಾಹಿದ್ ನ ಕೆಲವೊಂದು ಮಾತಿಗೆ ಮನೆಯವರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು. ಮೊದ ಮೊದಲಿಗೆ ಅವರ ಜೊತೆ ಸೇರಿಕೊಂಡು ನಗುತ್ತಿದ್ದ ಹಫ್ಸ ಕ್ರಮೇಣ ರೂಮಿನಿಂದ ಹೊರಗೆ ಬರುವುದೇ ವಿರಳವಾಯಿತು. ಒಬ್ಬಂಟಿಗಳಾಗಿಯೇ ಕಿಟಕಿಯ ಹೊರಗೆ ಇಣುಕುತ್ತಾ ಪರಿಸರದ ಆಗುಹೋಗುಗಳನ್ನು ಸವಿಯುತ್ತಿದ್ದಳು. ಇವೆಲ್ಲದರ ನಡುವೆ ಹಫ್ಸಳ ಕಣ್ಣುಗಳು ಮಾತ್ರ ದುಃಖದಲ್ಲಿ ತುಂಬಿ ಬರುತ್ತಿತ್ತು..
ನೂರ್ ಜಹಾನ್ ಆ ಮನೆಗೆ ಸೊಸೆಯಾಗಿ ಬಂದ ಮೇಲೆ ಹಲವು ವರ್ಷಗಳು ಸ್ನೇಹಿತರಂತೆ ಅನ್ಯೋನ್ಯವಾಗಿದ್ದ ಹಫ್ಸ ತನ್ನ ಮದುವೆ ಮುಂದೂಡಲ್ಪಟ್ಟಾಗ ಎಲ್ಲರೊಡನೆಯೂ ಒಡನಾಟ ಕಡಿಮೆಯಾಗಿತ್ತು. ಮಾತು ಮಾತಿಗೂ ಕೋಪ, ಹಠ ಎಲ್ಲವೂ ಮಿತಿಮೀರಿತ್ತು. ಮನೆಯವರು ಎಷ್ಟು ಪ್ರೀತಿಯಿಂದ ಮಾತನಾಡಿದರೂ ಅವಳು ಮಾತ್ರ ಸ್ವಲ್ಪವೂ ಕರುಣೆಯಿಲ್ಲದೆ ಸಿಡಿಮಿಡಿಗೊಳ್ಳುತ್ತಿದ್ದಳು. ಅದರೊಂದಿಗೆ ನೂರ್ ಜಹಾನ್ ಕೂಡ ಅವಳನ್ನು ಅಷ್ಟಕಷ್ಟೇ ಮಾತಾಡುತ್ತಿದ್ದಳು. ಇದರ ನಡುವೆ ಇಬ್ಬರ ನಡುವೆಯಿದ್ದ ಕುಟುಂಬ ಬಂಧವೂ ಮುರಿದುಬಿತ್ತು.
ತನ್ನ ಗಂಡ ಮುನೀರ್ ಅಂಗಡಿಯಿಂದ ಮನೆಗೆ ಬರುವವರೆಗೂ ನೂರ್ ಜಹಾನ್ ಮಾತ್ರ ಏಕಾಂತದಲ್ಲಿಯೇ ಇರಬೇಕಾಗಿತ್ತು. ಯಾರೊಡನೆಯೂ ಸರಿಯಾಗಿ ಮಾತುಕತೆಯಿರಲಿಲ್ಲ. ಅವಳಾಯಿತು, ಅವಳ ಕೆಲಸವಾಯಿತು. ಮುನೀರ್ ಅಂಗಡಿಗೆ ಹೋದಾಗಿನಿಂದ ಮನೆಯ ಕೆಲಸಗಳಲ್ಲಿ ನಿರತಳಾಗುತ್ತಿದ್ದ ನೂರ್ ಜಹಾನ್ ಬೆಳಿಗ್ಗೆಯಿಂದ ಸಂಜೆಯಾಗುವುದೇ ತಿಳಿಯುತ್ತಿರಲಿಲ್ಲ. ಈಗೀಗ ಮನೆಯಲ್ಲಿರುವ ಸಾಕುಪ್ರಾಣಿಗಳು, ಕಿಟಕಿಯ ಹೊರಗಿನ ಮರದಲ್ಲಿ ಕುಳಿತಿರುವ ಪ್ರಾಣಿಪಕ್ಷಿಗಳು ಅಡುಗೆಮನೆಯಲ್ಲಿರುವ ಪಾತ್ರೆಗಳೇ ಅವಳ ಏಕಾಂತತೆಯನ್ನು ದೂರೀಕರಿಸುವ ಸಂಗಾತಿಗಳು.
ನೂರ್ ಜಹಾನಳು ತಾನಾಯಿತು ತನ್ನ ಪಾಡಾಯಿತೆಂದು ತಿಳಿದು ಯಾರ ಗೋಜಿಗು ಹೋಗದೆ ಏಕಾಂತತೆಯ ಜೀವನ ನಡೆಸುತ್ತಿದ್ದರೆ ಅತ್ತೆ ನಬೀಸುಮ್ಮಳಿಗೆ ಮಾತ್ರ ದಿನವಿಡೀ ಬರೀ ವಿಶ್ರಾಂತಿ.. ಊಟ, ನಮಾಝ್, ನಿದ್ರೆ ಬಿಟ್ಟರೆ ಅವರಿಗೂ ಬೇರೇನೂ ಕೆಲಸವಿಲ್ಲ... ನಮಾಝ್ ಗೆ ಸಮಯವಾದಾಗ ಸ್ವಲ್ಪವೂ ತಡಮಾಡದೆ ನಬೀಸುಮ್ಮಳನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದದ್ದು ನೂರ್ ಜಹಾನ್. ಆಗ ಮಾತ್ರವೇ ನಬೀಸುಮ್ಮ ನಿದ್ದೆಯಿಂದ ಎಚ್ಚೆತ್ತು ವುಝುಹ್ ಮಾಡಿ ನಮಾಝ್ ಮಾಡುತ್ತಿದ್ದಳು. ನಮಾಝ್ ಮುಗಿಸಿದ ಕೂಡಲೇ ನೂರ್ ಜಹಾನ್ ಅವರಿಗಾಗಿ ತಿಂಡಿ ತಿನಿಸುಗಳನ್ನು ಅವರ ಕೋಣೆಯೊಳಗೆ ಕೊಂಡು ಹೋಗಿ ಕೊಡಬೇಕಿತ್ತು. ಈಗೀಗ ಹಫ್ಸ ಕೂಡ ಹಾಗೇನೇ ಉದಾಸೀನತೆ.. ಅಡುಗೆ ಮನೆಯಲ್ಲಿ ನೂರ್ ಜಹಾನ್'ಳಿಗೆ ಸಹಾಯ ಮಾಡುವುದು ಬಿಡಿ, ಊಟವನ್ನು ಕೂಡ ಅವಳ ಕೋಣೆಗೆ ತಲುಪಿಸಬೇಕಿತ್ತು..
ಇವೆಲ್ಲದರ ನಡುವೆ ಮುನೀರ್ ಮತ್ತು ನೂರ್ ಜಹಾನ್ ಳ ದಾಂಪತ್ಯ ಜೀವನಕ್ಕೆ ಅದಾಗಲೇ ಹದಿನಾಲ್ಕು ವಸಂತಗಳು ಕಳೆದಿತ್ತು. ಮಕ್ಕಳಿಲ್ಲದ ಕೊರಗು ಇಬ್ಬರಿಗೂ ಕನವರಿಸುತ್ತಿದ್ದರು ಇಬ್ಬರ ಪ್ರೀತಿಯ ಬಾಂಧವ್ಯಕ್ಕೆ ಯಾವುದೇ ಕುಂದುಕೊರತೆಗಳಿರಲಿಲ್ಲ... ಎಲ್ಲಾ ವೈದ್ಯರ ಔಷೋಧಪಚಾರ, ದರ್ಗಾ, ಸ್ವಲಾತ್ ಮಜ್ಲಿಸ್'ಗಳಿಗೆ ನೇರ್ಚೆಗಳನ್ನಿಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಮುನೀರ್ ಗೆ ನೂರ್'ಜಹಾನ್ ಳೆಂದರೆ ಎಲ್ಲಿಲ್ಲದ ಪಂಚಪ್ರಾಣ.
"ತನಗೆ ಮೊಮ್ಮಕ್ಕಳ ಮುಖವನ್ನು ಕೂಡ ನೋಡಲು ಭಾಗ್ಯವಿಲ್ಲವಲ್ಲ" ಎಂದು ಆಗಾಗ ನಬೀಸುಮ್ಮ ಕೂಡ ಚುಚ್ಚು ಮಾತುಗಳನ್ನಾಡುವಾಗ ನೂರ್ ಜಹಾನ್ ಳಿಗೂ ಕಣ್ಣು ತುಂಬಿ ಬರುತ್ತಿತ್ತು. ಮೊದ ಮೊದಲು ನೂರ್ ಜಹಾನ್ ಅವರ ಮಾತಿಗೆ ಕೋಣೆಯ ಮೂಲೆಯೊಂದರಲ್ಲಿ ಕುಳಿತು ಏಕಾಂತದಲ್ಲಿ ಇಲಾಹಿಯಾದ ಅಲ್ಲಾಹುವಿನೊಡನೆ ತನ್ನ ದುಃಖವನ್ನು ಹೇಳುತ್ತಾ ಕಣ್ಣೀರಿಡುತ್ತಿದ್ದಳು. ಮೊದಲಿಗೆ ಅತ್ತೆಯ ಮಾತುಗಳಿಂದ ನೋವುಗಳನ್ನು ಅನುಭವಿಸುತ್ತಿದ್ದ ನೂರ್ ಜಹಾನ್ ಕ್ರಮೇಣವಾಗಿ ಇಂತಹ ಚುಚ್ಚುಮಾತುಗಳು ಅವಳಿಗೂ ಅಭ್ಯಾಸವಾಗಿಬಿಟ್ಟಿತ್ತು. ಈಗೀಗ ಅತ್ತೆಯ ಮಾತುಗಳನ್ನು ಕೇಳುವಾಗ ಮನದೊಳಗೆ ನಗುತ್ತಿದ್ದಳು. ಕೇಳಿಯೂ ಕೇಳದಂತೆ ತನ್ನ ಕೆಲಸದಲ್ಲೇ ಮಗ್ನಳಾಗುತ್ತಿದ್ದಳು ನೂರ್ ಜಹಾನ್. ಬಂಜೆ ಎನ್ನುವ ಮಾತು ಕೇಳಿ ಹಲವು ಬಾರಿ ದಂಪತಿಗಳಿಬ್ಬರೂ ವೈದ್ಯರ ಚಿಕಿತ್ಸೆ ಹೋದಾಗ ಇಬ್ಬರಲ್ಲೂ ಯಾವುದೇ ರೀತಿಯ ಲೋಪಗಳಿಲ್ಲವೆಂಬುದೇ ವರದಿ ಬರುತ್ತಿತ್ತು. ಆದರೂ ಎಲ್ಲರೂ ತನ್ನನ್ನು ಬಂಜೆ ಯಾಕೆನ್ನುತ್ತಾರೆಂದು ಇಂದಿಗೂ ಆವಳ ಚಿಂತನೆ. ಎಲ್ಲಾ ತಿಂಗಳೂ ಕೂಡ ತಾನು ಗರ್ಭ ಧರಿಸುವೆನೆಂಬ ಆಸೆಯನ್ನಿಟ್ಟುಕೊಂಡು ಕೊನೆಗೆ ಯಾವುದೇ ರೀತಿಯ ಫಲಿತಾಂಶವಿಲ್ಲದೆ ಪ್ರತೀ ಬಾರಿಯೂ ಕಣ್ಣೀರಿಡುತ್ತಿದ್ದ ದಿನಗಳೆಷ್ಟೋ? ಪ್ರತೀ ದಿನವೂ ಐದು ವಕ್ತ್ ನಮಾಝ್ ಮಾಡುವಾಗಲೆಲ್ಲಾ ದಂಪತಿಗಳಿಬ್ಬರೂ ಅಲ್ಲಾಹುವಿನಲ್ಲಿ ಸಂತಾನ ಭಾಗ್ಯಕ್ಕಾಗಿ ಬೇಡುತ್ತಿದ್ದರು...
ನೂರ್ ಜಹಾನ್ ಒಂದೊಂದೇ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಳು. ಅಷ್ಟರಲ್ಲಾಗಿತ್ತು ಶಾಹಿದ್ ಮತ್ತು ಮುನೀರ್ ಈದ್ ನಮಾಝ್ ಮುಗಿಸಿ ಮನೆಗೆ ಬಂದದ್ದು. ಇಬ್ಬರೂ ಊಟ ಮುಗಿಸಿ ತಮ್ಮ ತಮ್ಮ ಕೋಣೆಯೊಳಗೆ ಹೋಗಿ ಮಲಗಿಬಿಟ್ಟರು. ಅಡುಗೆ ಮನೆಯಲ್ಲಿದ್ದ ಪಾತ್ರೆಗಳನ್ನೆಲ್ಲ ತೊಳೆದು ಎಲ್ಲಾ ಕೋಣೆಗಳನ್ನು ಗುಡಿಸಿ ಒರೆಸುವಷ್ಟರಲ್ಲಿ ಸುಸ್ತೋ ಸುಸ್ತು ! ಉಫ್ ... ಕೆಲಸ ಮಾಡಿ ಮಾಡಿ ಸೊಂಟನೋವು ಶುರುವಾಯ್ತು... ಇವತ್ತಿಗೆ ಸಾಕು ಎನ್ನುತ್ತಾ ನೂರ್ ಜಹಾನ್ ಬೇಗನೇ ಸ್ನಾನ ಮಾಡಿ ವಿಶ್ರಾಂತಿ ಮಾಡಲು ಕೋಣೆಯೊಳಗೆ ಸೇರಿದಳು. ಮುನೀರ್ ಗಾಢ ನಿದ್ರೆಯಲ್ಲಿದ್ದರು..ಇನ್ನೇನು ಸ್ವಲ್ಪ ಮಲಗುತ್ತೇನೆಂದು ಹಾಸಿಗೆಯ ಮೇಲೆ ಬೀಳುವಷ್ಟರಲ್ಲೇ "ದಡ್ ದಡ್"ಎಂದು ಬಾಗಿಲೇ ಮುರಿದು ಬೀಳುವಂತೆ ಹೊರಗಿನಿಂದ ಯಾರೋ ಜೋರಾಗಿ ಕದ ಬಡಿಯತೊಡಗಿದರು..
ಯಾರದು.. ? ಏನಾಯಿತು.. ?
ಬಾಗಿಲು ಬಡಿಯುವ ಶಬ್ದ ಇನ್ನಷ್ಟು ಜೋರಾಯಿತು... ನೂರ್ ಜಹಾನ್'ಳ ಎದೆಬಡಿತ ಜೋರಾಯಿತು. ಯಾರು ಯಾರೂಂತ ಕೇಳಿದರೂ ಅತ್ತಕಡೆಯಿಂದ ಯಾವುದೇ ಉತ್ತರವಿಲ್ಲದೆ ಕೊನೆಗೆ ಹಾಸಿಗೆಯಿಂದೆದ್ದು ನೂರ್ ಜಹಾನ್ ಬಾಗಿಲನ್ನು ತೆರೆದು ಹೊರಗಡೆ ಕಣ್ಣಾಡಿಸಿದಾಗ ಶಾಹಿದ್ ಮರಳುಗಂಬದಂತೆ ಮೌನಿಯಾಗಿ ನಿಂತಿದ್ದ. ....
ಹೋ ನೀನಾ.. ? ಏನಾಯಿತು.. ? ನಿನ್ನ ಮುಖದಲ್ಲೇಕೆ ಇಂತಹಾ ಆವೇಶ ? ಏನಾಯಿತು.. ಮೋನೆ ?
ಅದು ಅದು.. ಮಾವನನ್ನು ಹುಡುಕುತ್ತಾ ಯಾರೊ ಬಂದಿದ್ದಾರೆ ! ಬೇಗನೆ ಮಾವನನ್ನು ಎಬ್ಬಿಸಿ ! ಮಾವನನ್ನು ಕೇಳಿಕೊಂಡು ಬಂದವರನ್ನು ಕಂಡರೆ ನನಗೆ ಮೈಯೆಲ್ಲಾ ಉರಿಯುಂಟಾಗುತ್ತೆ...
ಯಾರವರು ? (ನೂರ್ ಜಹಾನ್ ಅನುಮಾನದಿಂದಲೇ ಕೇಳಿದಳು) "ಏನೂಂದ್ರೆ.... ಬೇಗ ಎದ್ದೇಳಿ, ನಿಮ್ಮನ್ನ ಕೇಳ್ಕೊಂಡು ಯಾರೋ ಬಂದಿದ್ದಾರೆ. ನನಗೇಕೋ ಭಯವಾಗ್ತಿದೆ.."ಮುನೀರ್ ರವರ ಅಂಗಿಯೊಂದನ್ನು ಕೈಯಲ್ಲಿ ಕೊಡುತ್ತಾ ಹೇಳಿದಳು.
"ಯಾರು ಬಂದಿರೋದು ?"
"ನನಗೆ ಗೊತ್ತಿಲ್ಲ. ಬಹುಶಃ ಶಾಹಿದ್ ಗೆ ಬಂದವರ ಪರಿಚಯವಿದೆಯೇನೋ?"
"ಯಾರೂಂತ ಶಾಹಿದ್ ನೊಡನೆ ಕೇಳಿ ನೋಡು"
"ನೀವೇ ಕೇಳಿ.."
"ಶಾಹಿದ್, ಯಾರು ಬಂದಿರೋದು..?" ಎನ್ನುತ್ತಾ ಮುನೀರ್ ಶಾಹಿದ್ ನ ಕೋಣೆಗೆ ಕಾಲಿಟ್ಟರು.
"ಅವರಾ.....? ಮಸೀದಿಯ ಮುಕ್ರಿಕ ಮತ್ತು ಕೆಲವು ಜನರು ?" (ಶಾಹಿದ್ ಕೋಪದಿಂದಲೇ ಉತ್ತರಿಸಿದ.)
(ಮಸೀದಿಯ ಮುಹಮ್ಮದ್ ಮುಕ್ರಿಕ ಎಲ್ಲಾ ಸಾಮೂಹಿಕ ಕಾರ್ಯಗಳಲ್ಲಿ ಒಂದು ಹೆಜ್ಜೆ ಮುಂದಿದ್ದರು. ಊರಿನಲ್ಲಿ ಯಾರ ಕಷ್ಟಕ್ಕೂ ಸೈ ! ಯಾರ ಸಮಸ್ಯೆಯಾದರೂ ಸರಿ, ಮುಹಮ್ಮದ್ ಮುಕ್ರಿಕ ಇತ್ಯರ್ಥ ಮಾಡುವುದರಲ್ಲಿ ನಿಸ್ಸೀಮ ! ಕೆಲವೊಮ್ಮೆ ಒಳ್ಳೆಯದಾದರೂ, ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಹೋದದ್ದೂ ಇದೆ. ಶಾಹಿದ್ ನನ್ನು ಅವನ ತಂದೆಯ ವಶಕ್ಕೆ ಒಪ್ಪಿಸಿದ್ದೂ ಇದೇ ಮುಕ್ರಿಕ ! ಅದೇ ದ್ವೇಷ ಈಗಲೂ ಅವರ ಮೇಲಿತ್ತು ಶಾಹಿದ್ ಗೆ ! ! ಅವರನ್ನು ಎಲ್ಲಿ ಕೊಂಡರೂ ಕಣ್ಣು ಕೆಂಡದಂತಾಗುತ್ತಿತ್ತು.)
"ಮಾವ, ನೋಡಿ ನೋಡಿ ನಮ್ಮ ಹಾಗೆ ಇನ್ನೊಂದು ಮನೆ ಹಾಳುಮಾಡುವ ಉತ್ಸಾಹದಲ್ಲಿರಬೇಕು ಮುಕ್ರಿಕ !"
ಮುಕ್ರಿಕರ ಜೊತೆ ಯಾರು ಬಂದಿರಬಹುದು.. ಎಂದು ಸಂಶಯಪಡುತ್ತಾ ಮುನೀರ್ ಮನೆಯ ಹಾಲ್ ಗೆ ಪ್ರವೇಶಿಸಿದರು.
"ಅಸ್ಸಲಾಮು ಅಲೈಕುಂ" (ಬಂದವರು)
"ವ ಅಲೈಕುಂ ಸಲಾಂ" ಎನ್ನುತ್ತಾ ಮುನೀರ್ ಬಂದ ಅತಿಥಿಗಳನ್ನು ಸ್ವೀಕರಿಸುತ್ತಾ ಕುಳಿತುಕೊಳ್ಳಲು ಅನುವುಮಾಡಿಕೊಟ್ಟರು...
ಮುಹಮ್ಮದ್ ಮುಕ್ರಿಕರ ಜೊತೆ ಮದುವೆಯ ಬ್ರೋಕರ್ ಕುಂಞ್ಞದ್ದು ಹಾಗೂ ಮುಖಪರಿಚಯವಿರುವ ಕೆಲವು ಜನರು ಜೊತೆಗಿದ್ದರು.. "ಹೆದರಬೇಡಿ ಮುನೀರ್, ನಿಮ್ಮೊಡನೆ ಸ್ವಲ್ಪ ಅತ್ಯಾವಶ್ಯಕ ಮಾತನಾಡಲು ಬಂದಿದ್ದೇವೆ !" ಮುನೀರ್ ರ ಮುಖದಲ್ಲುಂಟಾದ ತಳಮಳವನ್ನು ಮುಕ್ರಿಕ ದೂರೀಕರಿಸಿದರು. ನೇರವಾಗಿ ವಿಷಯಕ್ಕೆ ಬರೋಣ ....
"ವಿಷಯವೇನು ಮುಹಮ್ಮದಾಕ ?" ಸ್ವಲ್ಪ ಕಸಿವಿಸಿಯಿಂದಲೇ ಮುನೀರ್ ಕೇಳಿದರು...
"ಏನಿಲ್ಲ, ನಿಮ್ಮ ತಂಗಿಗೊಂದು ಸಂಬಂಧ ಕೂಡಿಬಂದಿದೆ, ಅದೇ ವಿಷಯ" ಎಂದೊಡನೆ ಮುನೀರ್ ರವರ ಮುಖ ಪ್ರಸನ್ನವಾಯಿತು.
"ಬಾಕಿ ವಿಚಾರ ನಾನು ಹೇಳುತ್ತೇನೆ"ಎನ್ನುತ್ತಾ ಕುಂಞ್ಞದ್ದು ತನ್ನ ಮಾತನ್ನು ಆರಂಭಿಸಿದ...
ನಮ್ಮ ಕುಟುಂಬದ ಬಗ್ಗೆ ಎಲ್ಲವನ್ನೂ ಅರಿತು ಈ ಸಂಬಂಧ ಕೂಡಿ ಬಂದಿರಬಹುದೇ..? ಮುನೀರ್'ರವರ ಮನಸಿನಳಾದಲ್ಲಿ ನೂರಾರು ಪ್ರಶ್ನೆಗಳು ಕಾಡತೊಡಗಿತ್ತು...! ಮೈಯೆಲ್ಲಾ ಕಣ್ಣಾಗಿಸಿ ತದೇಕಚಿತ್ತದಿಂದ ಬ್ರೋಕರ್ ಕುಂಞ್ಞದ್ದುವಿನ ಮಾತು ಆಲಿಸತೊಡಗಿದರು... ಏನು ಮುನೀರಾಕ ಗರಬಡಿದವರಂತೆ ನಿಂತುಬಿಟ್ಟಿದ್ದೀರಿ..? ಸಮಾಧಾನದಿಂದ ಕುಳಿತುಕೊಳ್ಳಬಹುದಲ್ಲವೇ..? ಕುಳಿತ್ಕೋ ಮುನೀರ್ ಕುಳಿತ್ಕೊ..!
ನಿನ್ನ ಮನೆಯಲ್ಲೇ ನಿನಗೆ ಕುಳಿತುಕೊಳ್ಳಲು ಅನುಮತಿ ಬೇಕಿಲ್ಲ ತಾನೇ.. ? ಎಂದು ತಮಾಷೆಯ ಮಾತನಾಡುತ್ತಾ ಮುನೀರನ್ನು ಕುರ್ಚಿಯೊಂದರಲ್ಲಿ ಕುಳ್ಳಿರಿಸಿದರು ಮುಕ್ರಿಕ.. ಮುಹಮ್ಮದಾಕ..... ಅದಿರಲಿ..
ಬಂದ ವಿಷಯವೇನೆಂದು ತಿಳಿಸುವಿರಾ..? ಮುನೀರ್ ಆತುರದಿಂದಲೇ ಕೇಳಿದರು...
"ಬಂದವರ ಪರಿಚಯವಿದೆಯೇ.. ಮುನೀರ್ ?"
ಸರಿಯಾಗಿ ಪರಿಚಯವಿಲ್ಲ.., ಆದರೂ ಸ್ವಲ್ಪ ದೂರದಲ್ಲಿ ನೋಡಿದ ಮುಖ ಪರಿಚಯ ಇದ್ದಂತಿದೆ..."
ಇರಲಿ ಕಳವಳ ಬೇಡ...ಇದೋ ಬಂದವರು ಹುಡುಗನ ಕಡೆಯವರು.. ! ಇದು ಮುಸ್ತಫ.. ಚಿಗುರು ಮೀಸೆ, ಸಜ್ಜಾಗಿಸಿದ ದಾಡಿ ನೋಡಲು ಅತೀ ಸುಂದರವಾಗಿದ್ದ ಯುವಕನನ್ನು ತೋರಿಸುತ್ತಾ ತನ್ನ ಮಾತನ್ನಾರಂಭಿಸಿದ ಬ್ರೋಕರ್ ಕುಂಞ್ಞದ್ದು... ಆದರೆ ಮದುವೆಯಾಗಬೇಕುವ ಹುಡುಗ ಇವನಲ್ಲ. ಇದು ಹುಡುಗನ..
(ಹೋ ! ಏನಿದು ! ನೋಡಿದರೆ ಹಫ್ಸಳ ತಂದೆಯ ವಯಸ್ಸಿನಂತಿದ್ದಾನೆ ಯಾ ಅಲ್ಲಾಹ್ ! ಮುನೀರ್'ನ ಮನಸ್ಸು ಒಂದು ಕ್ಷಣ ತಳಮಳಿಸಿತು..)
"ಸಮಾಧಾನ ಮುನೀರ್ ! ಹುಡುಗ ಇವನಲ್ಲ. ಇದು ಹುಡುಗನ ಅಣ್ಣ. ಮದುವೆ ಹುಡುಗನಿಗೆ ಬರೀ 28, 29 ವರ್ಷ ಪ್ರಾಯ ಅಷ್ಪೇ ಅಲ್ಲವೇ ಮುಸ್ತಫ.. !" ಹುಡುಗನ ಅಣ್ಣನೊಡನೆ ಕುಂಞ್ಞದ್ದು ಪ್ರಶ್ನಿಸಿದ..
"ಬರುವ ತಿಂಗಳಿಗೆ ಅವನಿಗೆ 30 ವರ್ಷ ಪೂರ್ತಿಯಾಗುತ್ತದೆ. ನಾವು ನಾಲ್ಕು ಮಕ್ಕಳಾಗಿದ್ದು ನಾನು ದೊಡ್ಡವನು. ಎರಡನೆಯದು ಶರೀಫ್. ಕುಟುಂಬವಿಡೀ ದುಬೈಯಲ್ಲಿರುವುದು.. ಉಳಿದವರಿಬ್ಬರು ಶಾಜಹಾನ್ ಹಾಗೂ ಸಾಜಿದಾ. ಈಗ ಮದುವೆಯಾಗಬೇಕಿದ್ದವನು ಶಾಜಹಾನ್..!"
"ಅದು ಹಾಗಲ್ಲ ಮುಸ್ತಫಾಕ" ಎನ್ನುತ್ತಾ ಮುನೀರ್ ತಮ್ಮ ತಂಗಿಯ ವಿಚಾರವನ್ನೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಾ ವಿವರಿಸಿದರು..
"ನೀವೇನೂ ಚಿಂತಿಸ್ಬೇಡಿ ! ಕುಂಞ್ಞದ್ದು ಎಲ್ಲವನ್ನೂ ಹೇಳಿದ್ಮೇಲೆ ತಾನೇ ನಾವಿಲ್ಲಿ ಬಂದಿರೋದು.. ?"
"ಆದ್ರೂ ನಾವು ಹುಡುಗಿ ಕಡೆಯವರು ತಾನೇ ? ಸತ್ಯವನ್ನು ಮರೆಮಾಚುವಂತಿಲ್ಲ. ನಮ್ಮ ಹುಡುಗಿಗೂ ಸ್ವಲ್ಪ ಲೋಪಗಳಿವೆ. ಅದು ಬಿಟ್ರೆ ಬೇರೇನಿಲ್ಲ. ಮಾತು ಕೂಡ ಚೆನ್ನಾಗಿಯೇ ಇದೆ. ಆದರೆ ಹತ್ತಾರು ಕಡೆ ಸಂಬಂಧ ಬಂದರೂ ಎಲ್ಲೂ ಕೂಡಿಬರಲಿಲ್ಲ." ಮುನೀರ್ ನಿರಾಶೆಯಿಂದ ತಮ್ಮ ನೋವನ್ನು ತೋರ್ಪಡಿಸಿದರು...ಆದರೂ ನನ್ನ ತಂಗಿಯ ಬಗ್ಗೆ ಸವಿವರವಾಗಿ ಹೇಳುವುದು ನನ್ನ ಕರ್ತವ್ಯ ತಾನೇ ?
"ನಮ್ಮ ಸ್ನೇಹಿತ ಶಾಜಹಾನ್ ಅಪ್ಪಟ ಬಂಗಾರ. ಯಾವುದೇ ದುಶ್ಚಟಗಳಿಲ್ಲ. ನಾವು ಅವನ ಸ್ನೇಹಿತರಾದ ಮಾತ್ರಕ್ಕೆ ಈ ಮಾತು ಹೇಳುತ್ತಿಲ್ಲ. ಬದಲಾಗಿ ಅವನ ಒಳ್ಳೆಯತನ ನಮ್ಮನ್ನು ಹೀಗೆ ಹೇಳಿಸುವಂತೆ ಮಾಡುತ್ತಿದೆ. ಅಲ್ಲಾಹುವಿನ ಭಯಪಟ್ಟು ಜೀವಿಸುವವನೂ, ಐದು ವಕ್ತ್ ನಮಾಝ್, ಉಪವಾಸವೆಲ್ಲವೂ ಚಾಚೂ ತಪ್ಪದೇ ನಿರ್ವಹಿಸುವವನು. ಸ್ವಂತದ್ದೇ ಆದ ಮೂರು ಅಂಗಡಿಗಳಿದ್ದು ಒಂದನ್ನು ತಾನು ಖುದ್ದಾಗಿ ನಡೆಸಿ, ಮತ್ತೆರಡನ್ನು ಬಾಡಿಗೆಗೆ ಕೊಟ್ಟಿದ್ದಾನೆ. ನಿಮ್ಮ ತಂಗಿಗೆ ಸರಿಯಾದ ಜೋಡಿ ! ಆದರೆ ಒಂದು ಮಾತು....."
ಒಂದು ಮಾತು... ಈಗಾಗಲೇ ಅವನಿಗೆ ಒಂದು ಮದುವೆಯಾಗಿದ್ದು, ಅವಳು ನನ್ನ ಸ್ವಂತ ತಂಗಿಯಾಗಿದ್ದಳು.. ದುರದೃಷ್ಟವಶಾತ್, ಮದುವೆಯಾದ ಮರುದಿನವೇ ಮನೆಯಲ್ಲಿದ್ದ ಒಡವೆವಸ್ತ್ರಗಳನ್ನೆಲ್ಲ ದೋಚಿಕೊಂಡು ಎಲ್ಲಿಗೋ ಪರಾರಿಯಾಗಿಬಿಟ್ಟಿದ್ದಾಳೆ.. ನೀವು ಪತ್ರಿಕೆಯಲ್ಲೂ ಈ ಸುದ್ದಿ ಓದಿರಬಹುದು. ಮಾರನೆಯದಿನ ತೋಟವೊಂದರಲ್ಲಿ ಅವಳ ಶವ ಸಿಕ್ಕಿದ್ದೂ, ಅವಳ ದುಶ್ಚಟದಿಂದಲೇ ತನ್ನ ಮರಣಕ್ಕೆ ಅಹುತಿ ನೀಡಿದ್ದು ಎಲ್ಲವೂ ಒಂದು ಕಟುಸತ್ಯವೂ ಸರಿ. ಇದೆಲ್ಲವೂ ನಾಲ್ಕೈದು ತಿಂಗಳ ಹಿಂದೆ ನಡೆದ ಘಟನೆಯಾಗಿದೆ.. ಇದೇ ಆಘಾತದಿಂದ ಇನ್ನು ಮದುವೆಯೇ ಬೇಡವೆಂದಿದ್ದ ನಮ್ಮ ಶಾಜಹಾನ್ ನಾವೆಲ್ಲ ಹೇಗೋ ಅವನನ್ನು ಸಂತೈಸಿ ಮರುಮದುವೆ ಮಾಡಿಕೊಳ್ಳಲು ಒಪ್ಪಿಸಿದ್ದೇವೆ. ಕುಂಞ್ಞದ್ದು ನಿಮ್ಮ ಕುಟುಂಬದ ಬಗ್ಗೆ, ನಿಮ್ಮ ತಂಗಿಯ ಒಳ್ಳೆಯ ಬುದ್ಧಿವಂತಿಕೆಯನ್ನೆಲ್ಲ ಚೆನ್ನಾಗಿ ವಿವರಿಸಿದ ಮೇಲೆಯೇ ನಾವಿಲ್ಲಿಗೆ ಹೆಣ್ಣು ನೋಡಲು ಬಂದಿರೋದು.. ಅವಳ ಕಾಲಿನ ಬಗ್ಗೆ ಹೇಳಿದಾಗಲೂ ಶಾಜಹಾನ್ ಹೇಳಿದ್ದು ಒಂದೇ ಮಾತು ಈ ಹುಡುಗಿ ಇನ್ನು ಓಡುವುದಿಲ್ಲವಲ್ಲ."
ಎಲ್ಲವನ್ನೂ ಆಲಿಸುತ್ತಿದ್ದ ಮುನೀರಾಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಮುಸ್ತಫ ಕೇಳಿದರು "ಏನು ಮುನೀರಾಕ, ಗರಬಡಿದವರಂತಿದ್ದೀರಿ..? ನಿಮಗೇನಾದರೂ ಹೇಳಲಿಕ್ಕಿದ್ದರೆ ನಿಸ್ಸಂಕೋಚವಾಗಿ ಕೇಳಬಹುದು. ನಾವೇನೂ ನಿಮಗೆ ಒತ್ತಾಯ ಮಾಡುವುದಿಲ್ಲ."
"ಹಾಗೇನಿಲ್ಲ ಮುಸ್ತಫ, ನನ್ನ ತಂಗಿಗೆ ಸಿಗುವ ಹುಡುಗ ಒಳ್ಳೆಯವನಾಗಿದ್ದರೆ ಸಾಕು. ನೀವೆಲ್ಲರೂ ಇಷ್ಟೆಲ್ಲಾ ಹೇಳುವಾಗ ಅದರಲ್ಲಿ ಸಂಶಯವೇನಿದೆ? ಆದರೆ.....
"ಆದರೇನು ?" ಮುಕ್ರಿಕ ಮುಹಮ್ಮದ್ ನಡುವೆ ಕೇಳಿದರು.
"ಮತ್ತೇನಿಲ್ಲ, ಮುಹಮ್ಮದಾಕ ! ನಮ್ಮ ಕುಟುಂಬದ ಈಗಿರುವ ಆರ್ಥಿಕ ಸ್ಥಿತಿಗತಿಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ ತಾನೇ ? ಯಾವ ರೀತಿಯಲ್ಲೂ ವರದಕ್ಷಿಣೆ ಕೊಡಲು ನಮ್ಮಿಂದ ಸಾಧ್ಯವಿಲ್ಲ. ಏನಾದರೂ ಕೊಡಬಾರದೆಂಬ ನಿಯ್ಯತ್ ನಮಗಿಲ್ಲ. ನಮ್ಮ ಕೈಯಿಂದ ಸಾಧ್ಯವಾಗುವಷ್ಟಾದರೂ ಕೊಡಬೇಕೆನ್ನುವ ಆಗ್ರಹ ನಮಗೂ ಇದೆ." ಮುನೀರಾಕ ಬರುತ್ತಿರುವ ಕಣ್ಣೀರನ್ನು ಒರೆಸುತ್ತಾ ತನ್ನ ಕಷ್ಟವನ್ನು ಅವರ ಬಳಿ ಹೇಳಿಕೊಂಡರು.
"ಒಹೋ, ಇದುವೇನಾ ನಿಮ್ಮ ಚಿಂತೆ ! ಗಾಬರಿಯಾಗಬೇಡಿ. ನಾವು ನಿಮ್ಮಲ್ಲಿ ಏನಾದರೂ ಕೇಳಿದ್ದೇವಾ ? ಇಲ್ಲ ತಾನೇ ! ಅಲ್ ಹಮ್ದುಲಿಲ್ಲಾಹ್ ! ಅಲ್ಲಾಹು ನಮಗೆ ಬೇಕಾದಷ್ಟು ಸಂಪತ್ತು ಕೊಟ್ಟಿದ್ದಾನೆ. ನೀವೇನು ನಮಗೆ ಕೊಡಬೇಡಿ. ಮದುವೆಯ ಖರ್ಚನ್ನೆಲ್ಲಾ ನಾವೇ ನೋಡಿಕೊಳ್ತೇವೆ. ನಮ್ಮ ಹುಡುಗನನ್ನು ಪ್ರೀತಿಯಿಂದ ಕಾಣುವ ಅತ್ಯುತ್ತಮವಾದ ಬಾಳಸಂಗಾತಿಯಾದರೆ ಸಾಕು.
ನಿಮ್ಮ ಮಾತೆಲ್ಲ ಮುಗಿಯಿತಲ್ಲ, ಇನ್ನೇನು ಎಲ್ಲರೂ ಚಹಾ ಕುಡಿಯಬಹುದಲ್ಲವೇ? ಎನೂಂದ್ರೆ, ಎಲ್ಲರನ್ನೂ ಲಘು ಉಪಹಾರ ಮಾಡಲು ಕರೆಯಿರಿ"ನೂರ್ ಜಹಾನ್ ಟೇಬಲ್ ಮೇಲಿಟ್ಟು ಆಹ್ವಾನಿಸಿದಳು.
"ಚಹಾ ಆಮೇಲೂ ಕುಡಿಯಬಹುದು. ನಮಗೆ ಈಗ ಬೇಕಿದ್ದು ನಿಮ್ಮ ಉತ್ತರ ಮುನೀರಾಕ" ಮುಸ್ತಫ ಕಾತರದಿಂದ ಹೇಳಿದನು.
"ಏನೂಂದ್ರೆ,, ಸ್ವಲ್ಪ ಒಳಗೆ ಬರ್ತೀರಾ?" ನೂರ್ ಜಹಾನ್ ಮತ್ತೊಮ್ಮೆ ಗಂಡನನ್ನು ಒಳಕರೆದಳು..
"ಒಂದ್ನಿಮಿಷ.., ಕ್ಷಮಿಸಿ ಈಗ ಬರ್ತೇನೆ" ಎನ್ನುತ್ತಾ ಮುನೀರ್ ಕೋಣೆಯೊಳಗೆ ಪ್ರವೇಶಿಸಿದರು.
ನೂರ್'ಜಹಾನ್ ತನ್ನ ಗಂಡನನ್ನು ಒಳಕರೆದು.. ಏನಾಯ್ತು ನಿಮಗೆ..? ಅದೃಷ್ಟದ ಬಾಗಿಲು ಬಡಿಯುವಾಗ ನೀವೇಕೆ ಇಷ್ಟು ಕಸಿವಿಸಿಗೊಳ್ಳುತ್ತಿದ್ದೀರಿ..? ಅವರೆಲ್ಲ ಎಷ್ಟೊಂದು ಪ್ರೀತಿಯಿಂದ ಮಾತಾಡ್ತಾ ಇದ್ರೂ ನಿಮ್ಮ ಬಾಯಿಂದ ಉಫ್ ಕೂಡ ಬರ್ತಿಲ್ಲ ಯಾಕೆ..? ಅವರ ಮಾತಲ್ಲಿ ಏನಾದ್ರು ಸಂಶಯವಿದ್ದಂತೆ ನಿಮಗೆ ಅನಿಸುತ್ತಿದೆಯೇ..? ತಲೆಯ ಮೇಲೆ ಬೆಟ್ಟವೇ ಬಿದ್ದಂತೆ ನೀವು ಮಾಡುತ್ತಿರುವುದಾದ್ರೂ ಏಕೆ.. ? ಬಂದವರೆಲ್ಲ ಒಳ್ಳೆಯ ಕುಟುಂಬಂದಂತೆ ಕಾಣಿಸ್ತಾರೆ. ಹಾಗೇನಾದರೂ ನಿಮಗೆ ಅವರ ಮೇಲೆ ಸಂಶಯ ಕಂಡಲ್ಲಿ ನಿಮ್ಮ ರೀತೀಲೇ ಬೇಕಾದ್ರೆ ಅವರ ಬಗ್ಗೆ ಚೆನ್ನಾಗಿ ಅರಿತುಕೊಂಡು ಉತ್ತರ ಕೊಡಬಹುದಲ್ಲವೇ ? ಏನಾದ್ರು ಬೇಗನೆ ಇತ್ಯರ್ಥ ಮಾಡ್ಕೊಳ್ಳಿ. ಮತ್ತೊಮ್ಮೆ ಇಂತಹ ಅವಕಾಶ ಹಾಗೂ ಸಂಬಂಧ ಬರೋದು ನಂಗೇನೋ ಕಷ್ಟ ಅನ್ನಿಸ್ತಿದೆ.... ಒಳಗೆ ಬಂದ ತನ್ನ ಇನಿಯ ಮುನೀರ್'ನೊಂದಿಗೆ ನೂರ್ ಜಹಾನ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿದಳು...
" ನೀವೆಲ್ಲ ಒಳಗೆ ಬನ್ನಿ... ಚಹಾ ತಣ್ಣಗಾಗ್ತಿದೆ. ಚಹಾ ಕುಡಿದ್ಮೇಲೆ ಇದರ ಬಗ್ಗೆ ಮಾತುಕತೆ ನಡೆಸೋಣ"ಎಂದು ಮುನೀರಾಕ ಬಂದ ಅತಿಥಿಗಳನ್ನು ಟೇಬಲ್ ನೆಡೆಗೆ ಕರೆದರು...
"ಪೆರ್ನಾಳ್ ದಿವಸ ತಾನೇ ? ಆಹಾ ! ಒಳ್ಳೆಯ ತಿಂಡಿ ಉಪಹಾರ ಎಲ್ಲವೂ ಇದೆ..." ಮುಹಮ್ಮದಾಕ ಮುಸ್ತಫಾನ ಕೈ ಹಿಡಿದು ಕುಳ್ಳಿರಿಸಿದರು. ಏಕೋ ಸರಿಯಾದ ಮನಸ್ಸಿಲ್ಲದ ಮನಸ್ಸಿಂದ ಚಾ ಕಪ್ಪನ್ನು ಕೈಗೆತ್ತಿಕೊಂಡರು.
"ಈ ಹುಡುಗ ಯಾರು?" ಪಕ್ಕದಲ್ಲೇ ಮೌನಿಯಾಗಿ ನಿಂತಿದ್ದ ಶಾಹಿದ್ ನನ್ನು ಕಂಡು ಮುಸ್ತಫ ಕೇಳಿದನು.
"ಇದು ನನ್ನ ಅಕ್ಕನ ಮಗ ಶಾಹಿದ್. ನಗರದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದಾನೆ. ಇಂದು ಪೆರ್ನಾಳ್ ದಿನವಾದ್ದರಿಂದ ಮನೆಗೆ ಬಂದಿರೋದು. ನಾಳೆ ಸಂಜೆ ಹಿಂತಿರುಗುವನು."
"ಮೋನೆ, ಈಗ ನೀನಿರೋದು ಅಪ್ಪನ ಜೊತೇಲಿ ತಾನೇ ?"
"ಇಲ್ಲ, ನಾನಿರೋದೇ ಈ ಮನೆಯಲ್ಲಿ.."ಮುಹಮ್ಮದಕನ ಪ್ರಶ್ನೆಗೆ ಕೋಪದಿಂದಲೇ ಉತ್ತರಿಸಿ ಶಾಹಿದ್ ಕೋಣೆಯೊಳಗೆ ಹೊರಟುಹೋದ.
"ಈಗಿನ ಯುವಕರೇ ಹೀಗೆ ! ಹಿರಿಯರು, ಕಿರಿಯರೆಂಬ ಗೌರವವಿಲ್ಲ. ಇವರಿಗೆಲ್ಲಾ ಯಾವಾಗ ಬುದ್ದಿ ಬರುತ್ತದೆಯೋ ಅಲ್ಲಾಹನೇ ಬಲ್ಲ" ಶಾಹಿದ್ ನ ಮೊಂಡುಮಾತಿಗೆ ಪ್ರತಿಕ್ರಿಯಿಸಿದರು ಮುಹಮ್ಮದಾಕ... ಇವನ ಅಮ್ಮನ ಬಗ್ಗೆ ನನಗೆ ಚೆನ್ನಾಗಿ ಬಲ್ಲೆ. ತಾಯಿ ಝುಬೈದ ಶಾಂತ ಸ್ವಭಾವದ ಹೆಣ್ಣು. ಶಾಹಿದ್ ನ ಹೆರಿಗೆಯೊಂದಿಗೆ ಅವಳು ಇಹಲೋಕ ತ್ಯಜಿಸಿದಳು. ನಂತರ ಅವನ ತಂದೆ ಬೇರೊಂದು ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಅವರಿಗೆ ಮದುವೆ ಮಾಡಿಸಿದ್ದೇ ನಾನು ಮತ್ತು ಇದೇ ಕುಂಞ್ಞದ್ದು."
ಮುಹಮ್ಮದಾಕರ ಮಾತು ಕೇಳಿ ಮುಸ್ತಫ ಒಮ್ಮೆ ಸ್ತಬ್ದನಾದನು. ಏಕೆಂದರೆ ಅವರು ಹೇಳಿದ ಝುಬೈದ ಆ ಊರಿನಲ್ಲೇ ಸುಂದರಿಯಾಗಿದ್ದವಳು.. ಝುಬೈದಾಳನ್ನು ಮದುವೆಯಾಗಲು ಮುಸ್ತಫ ಕೂಡ ಹಲವಾರು ಪ್ರಯತ್ನ ಮಾಡಿದ್ದ. ಯಾವಾಗಲೂ ತನ್ನ ಅಂಗಡಿಯ ಮುಂದಿಂದಲೇ ಹಾದುಹೋಗುತ್ತಿದ್ದ ಝುಬೈದ ಕೆಲವು ದಿನ ಕಾಣದಾದಾಗ ಅವಳ ಮನೆಯವರೆಗೂ ಹುಡುಕಾಡಿ ಹೋಗಿದ್ದು, ಅವಳು ಅದಾಗಲೇ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದು, ತನ್ನ ಮನದ ಆಸೆಯೆಲ್ಲವೂ ನುಚ್ಚು ನೂರಾದದ್ದು ಎಲ್ಲವೂ ಮುಸ್ತಫಾನ ಮನಸ್ಸಿಗೆ ಒಂದೊಂದಾಗಿ ಬರತೊಡಗಿತು. ಝುಬೈದ ಮರಣ ಹೊಂದಿದಾಗಲಂತೂ ಮುಸ್ತಫನ ಹಲವು ದಿನ ತನ್ನ ಬದುಕಿನಲ್ಲಿ ಕತ್ತಲು ಆವರಿಸಿದಂತಿತ್ತು.
ಪತ್ತಿರ್ ಬಿಸಿಯಾಗಿದೆ. ಮಾಂಸದ ಸಾರೂ ಇದೆ. ಬೇಗನೆ ನಷ್ಟ ಮುಗಿಸಿ ಮಾತಾಡೋಣ, ಮುನೀರಾಕ ಹೇಳುತ್ತಿರುವಾಗ್ಲೇ "ಯಾರು ಬಂದಿರೋದು ಮೋನೆ"ಎನ್ನುತ್ತಾ ನಬೀಸುಮ್ಮ ಅಲ್ಲಿಗೆ ಬಂದರು.
"ಉಮ್ಮ, ನಮ್ಮ ಹಫ್ಸಾಳಿಗೆ ಒಳ್ಳೆಯ ಕುಟುಂಬದ ಸಂಬಂಧ ಕೂಡಿಬಂದಿದೆ.. ಇದೇ ವಿಷಯದ ಬಗ್ಗೆ ಇತ್ಯರ್ಥ ಮಾಡಲು ಬಂದಿರುವರು.." ಮುನೀರ್ ಹೇಳಿದ ಮಾತು ಕೇಳಿ ನಬೀಸುಮ್ಮ ಒಮ್ಮೆಲೆ ಹರ್ಷಪುಳಕಿತರಾದರು. ಅಲ್ ಹಮ್ದುಲಿಲ್ಲಾಹ್ ! ಆಗಲಿ ಒಳ್ಳೆಯದಾಗಲಿ.. ಈ ಕಾರ್ಯ ಪೂರ್ತಿಯಾಗಲು ಅಲ್ಲಾಹು ತೌಫೀಕ್ ನೀಡಲಿ. ಎಲ್ಲದರಲ್ಲೂ ಒಳಿತಾಗಿ ಕೆಡಕ್ಕೆಲ್ಲಾ ದೂರವಾಗಲಿ.. ನಬೀಸುಮ್ಮ ಆಕಾಶದೆಡೆಗೆ ಕೈಯೆತ್ತಿ ಪ್ರಾರ್ಥಿಸಿದರು..
ನೀವು ನನ್ನ ತಾಯಿಯ ಹಾಗೆ...! ನಾನೇನನ್ನೂ ಮುಚ್ಚುಮರೆ ಮಾಡುವುದಿಲ್ಲವೆಂದು ಶಾಜಹಾನ್ ನ ಎಲ್ಲಾ ಮಾಹಿತಿಯನ್ನು ಕೂಲಂಕುಷವಾಗಿ ತಿಳಿಸಿದನು ಮುಸ್ತಫಾ..
"ಖೈರ್, ಏನಿದ್ದರೂ ಒಂದು ಒಳ್ಳೆಯ ತೀರ್ಮಾನವನ್ನು ಮಾಡಿ ಮದುವೆಕಾರ್ಯ ಇತ್ಯರ್ಥ ಮಾಡೋಣ.."ಎಂದ ನಬೀಸುಮ್ಮಳ ಮಾತಿಗೆ ಬಂದವರೆಲ್ಲರೂ ನಿಟ್ಟುಸಿರು ಬಿಟ್ಟರು.
ಇದೆಲ್ಲದರ ನಡುವೆ ನೂರ್ ಜಹಾನ್ ಕೂಡ ಹಫ್ಸಾಳಿಗೆ ಮದುವೆಸಂಬಂಧ ಬಂದಿರುವ ವಿಷಯವನ್ನು ಮುಟ್ಟಿಸಿದ್ದಳು.. ಅದೇಕೋ ಹಫ್ಸಾಳಿಗೆ ಮದುವೆವಿಚಾರ ಕೇಳಿಯೂ ಕೂಡ ಅವಳ ಮುಖಭಾವನೆ ಬದಲಾಗಲಿಲ್ಲ. ಬದಲಾಗಿ ಯಾವುದೋ ಯೋಚನೆಯಲ್ಲೆ ಮಗ್ನಳಾದಳು..
"ಏಕೆ ಹಫ್ಸ ಹೀಗೆ ಮಂಕಾಗಿ ಕುಳಿತಿದ್ದೀಯಾ..? ಏನಾಯಿತು..? ನಿನಗೆ ಮದುವೆಯಾಗಲು ಇಷ್ಟವಿಲ್ಲವೇ..? ನಿನ್ನ ಮನಸ್ಸಿನಲ್ಲಿರುವುದನ್ನು ಮುಚ್ಚುಮರೆಯಿಲ್ಲದೆ ತೆರೆದು ಹೇಳಬಹುದಲ್ಲವೇ..?"
"ನಾನು ಏನೂಂತ ಹೇಳಲಿ ಅತ್ತಿಗೆ ! ಈಗಾಗಲೇ ಅದೆಷ್ಟೋ ಸಂಬಂಧಗಳು ಬಂದು ಹೋಗಿದ್ದುಂಟು..! ಕೆಲವೊಂದು ಸಂಭಂಧಗಳು ಮದುವೆಯವರೆಗೂ ಹೋಗಿ ಆಮೇಲೆ ಮೊಟುಕಾದದ್ದು ನಿಮಗೂ ಗೊತ್ತಿರೋ ವಿಷಯ ತಾನೇ ?"
ಅವಳ ಮಾತು ಕೇಳಿ ನೂರ್ ಜಹಾನ್ ನ ಮನಸ್ಸಿಗೂ ದುಃಖವಾಯಿತು. ಹಫ್ಸಾಳ ಮನಸ್ಸಿನ ವೇದನೆ ನೂರ್ ಜಹಾನ್ ಳಿಗೂ ಗೊತ್ತಿತ್ತು. ಆದರೂ ಅವಳನ್ನು ತೃಪ್ತಿಪಡಿಸಲು, ಸಂತೋಷವಾಗಿರಿಸಲು ನೂರ್ ಜಹಾನ್ ಬಹಳಷ್ಟು ಶ್ರಮಿಸುತ್ತಿದ್ದಳು...
"ಹಫ್ಸಾ ಮೋಳು ಎಲ್ಲಿದ್ದಾಳೆ ? ನಾನೊಮ್ಮೆ ನೋಡ್ತೇನೆ.." ಮುಸ್ತಫ ಹೇಳುವಾಗ ವೀಲ್ ಚೇರ್ ನ ಮೇಲೆ ಕುಳ್ಳಿರಿಸಿ ಹಫ್ಸಳನ್ನು ಬಾಗಿಲಿನಿವರೆಗೂ ಕರೆತಂದಳು ನೂರ್ ಜಹಾನ್ .....
"ಮಾಷಾ ಅಲ್ಲಾಹ್..!"ಹಫ್ಸ ಮೋಳು ನೋಡಲು ಬಹಳ ಸುಂದರಿಯಾಗಿದ್ದು ನಮ್ಮ ಶಾಜಹಾನ್ ನಿಗೆ ಹೇಳಿ ಮಾಡಿಸಿದ ಜೋಡಿಯಾಗಿದ್ದಾಳೆ. "ಪರ್ಫೆಕ್ಟ್ ಮ್ಯಾಚ್" ಮುಸ್ತಫಾನ ಬಾಯಿಂದ ಹೊಗಳಿಕೆಯ ಮಾತು ಹೊರಹೊಮ್ಮಿತು.. "ಮುನೀರಾಕ.. ಇನ್ನೇನು ಹೇಳ್ಬೇಡಿ. ನನ್ನ ಕಡೆಯಿಂದ ಸಂಪೂರ್ಣ ಒಪ್ಪಿಗೆಯಿದ್ದು ನಾಳೆಯೇ ಬಂದು ಹಫ್ಸಿಳನ್ನು ನಮ್ಮ ಮನೆಗೆ ಸೇರಿಸಿಕೊಳ್ಳಲು ತಯಾರಾಗಿದ್ದೇವೆ. ಆದರೆ, ಮದುವೆಕಾರ್ಯವೆಲ್ಲವೂ ಗುರುಹಿರಿಯರ ಮುಂದೆ ಪಾರಂಪರ್ಯವಾಗಿ ನಡೆಯಬೇಕಲ್ಲವೇ?" ಮುಸ್ತಫ ಮುಗುಳ್ನಗುತ್ತಲೇ ಹೇಳಿದನು.
ಮುಸ್ತಫನ ಮಾತು ಕೇಳಿದ್ದೇ ತಡ, ಹಫ್ಸ ಸಂತೋಷದಿಂದ ನಾಚಿ ತಲೆತಗ್ಗಿಸಿದಳು. ಅವಳ ಮುಖದಲ್ಲಾದ ಸಂತೋಷ ಕಂಡು ಮುನೀರ್, ನಬೀಸುಮ್ಮ ಹಾಗೂ ನೂರ್ ಜಹಾನ್ ಳಿಗೂ ಹೃದಯ ತುಂಬಿ ಬಂತು......
"ಇನ್ನೇನು ನಾಳೆಯೇ ಶಾಜಹಾನ್ ಇಲ್ಲಿಗೆ ಬಂದು ನೋಡಿದ್ಮೇಲೆ ಮದುವೆ ದಿವಸವನ್ನು ನಿಗಧಿಪಡಿಸೋಣವಲ್ಲವೇ..?" ಎನ್ನುತ್ತಾ ಬಂದ ಅತಿಥಿಗಳು ಹೊರಟು ಹೋದರು.....
"ಯಾ ಅಲ್ಲಾಹ್, ಇನ್ನು ನಾಳೆ ಹುಡುಗ ಬಂದ್ಮೇಲೆ ನನ್ನ ಮದುವೆಕಾರ್ಯ ನೆರವೇರಬಹುದೇ? ಅಲ್ಲ, ಇದುವರೆಗೂ ಆದಂತೆಯೇ ನನ್ನ ಅವಸ್ಥೆಯನ್ನು ಕಂಡು ಈ ಸಂಬಂಧವೂ ಕೊನೆಯಾಗುವುದೇ..?"ಹಫ್ಸಾಳ ಹೃದಯಬಡಿತ ಜೋರಾಗಿ ಮನದಲ್ಲೇಕೋ ಭಯ ಆವರಿಸತೊಡಗಿತು
ಹಫ್ಸಾಳು ತನಗೆ ಬಂದ ಸಂಬಂಧದ ಬಗ್ಗೆ ನೆನೆಯುತ್ತಿದ್ದಂತೆ ಹೃದಯಬಡಿತ ಜೋರಾಗಿ ಮನದಲ್ಲೇಕೋ ಭಯ ಆವರಿಸತೊಡಗಿತು...
"ಬೇಡ.., ಸ್ವಲ್ಪವೂ ಕನಸಿನ ಗೋಪುರ ಬೇಡ, ಈಗ ಆಸೆಪಟ್ಟು ನಾಳೆ ಶಾಜಹಾನ್ ಬಂದ್ಮೇಲೆ ಅವನೇನಾದರೂ ತಿರಸ್ಕರಿಸಿದರೆ ಮತ್ತೆ ಹಿಂದಿನಂತೆಯೇ ನಾನೂ ದುಃಖದ ಕಣ್ಣೀರನ್ನೇ ಅನುಭವಿಸಬೇಕಾದೀತು ..ಯಾ ಅಲ್ಲಾಹ್ ನೀನೇ ಕಾಪಾಡು.." ಎನ್ನುತ್ತಾ ತನ್ನಲ್ಲಿರುವ ಆಸೆ ಆಕಾಂಕ್ಷೆಗಳನ್ನೆಲ್ಲಾ ಮನದೊಳಗೆ ಹುದುಗಿಟ್ಟಳು ಹಫ್ಸಾ......
ಮದುವೆಯಾಗುವ ಗಂಡು ನೋಡಲು ಬರುತ್ತಾನೆಂದೋ, ಹಫ್ಸಾಳಿಗೆ ನಿಕಾಹ್ ಕೂಡಿಬರಹುದೆಂದೋ ಒಂದು ತರಹದ ಸಂತೋಷದಿಂದ ಶಾಹಿದ್ ಬಿಟ್ಟರೆ ಮತ್ಯಾರಿಗೂ ಆ ದಿನ ರಾತ್ರಿ ನಿದ್ರೆ ಬಂದಿರಲಿಲ್ಲ. ಎಲ್ಲರೂ ಮಲಗಿದ್ದರೂ ನಿದ್ರೆಯಿಲ್ಲದೆ ಹೇಗೂ ಬೆಳಗ್ಗೆಯಾಯಿತು....
ಎಲ್ಲಾ ರೆಡಿ ತಾನೇ.. ? ನಮ್ಮ ಹಫ್ಸಾಳನ್ನು ನೋಡಲು ಗಂಡಿನ ಕಡೆಯವರು ಬರುವ ಸಮಯವಾಗ್ತಿದೆ..." ಎನ್ನುತ್ತಾ ಮುನೀರ್ ಅಡುಗೆಮನೆ ಪ್ರವೇಶಿಸಿದರು.
"ನೀವೇನೂ ಆತುರಪಡ್ಬೇಡಿ. ಎಲ್ಲವೂ ತಯಾರಾಗಿದೆ. ನೀವು ನಿಷ್ಚಿಂತೆಯಿಂದಿರಿ" ನೂರ್ ಜಹಾನ್ ಮರು ಉತ್ತರಿಸಿದಳು.
ಸುಬಹಿ ನಮಾಝ್ ಮುಗಿಸಿ ಹೊರಗೆ ಹೋಗಿದ್ದ ಮುನೀರ್ ಆಗತಾನೇ ಮನೆಗೆ ಬಂದಿದ್ದ. ನೂರ್ ಜಹಾನ್ ಮಾಡಿದ್ದ ಫಿಶ್ ಬಿರಿಯಾನಿ ಮನೆಯೊಳಗೆಲ್ಲಾ ಪರಿಮಳ ಬರುತ್ತಿತ್ತು. ಅಹಾ ! ನೂರ್ ಜಹಾನ್ ನಿನ್ನ ಕೈಯನ್ನೊಮ್ಮೆ ಚುಂಬಿಸುವಂತಿದೆ. ನಾನೀಗಲೇ ಸ್ವಲ್ಪ ಬಿರಿಯಾನಿ ಉಣ್ಣಬೇಕೆನಿಸುತ್ತಿದೆ ಎಂದು ಹೆಂಡತಿಯನ್ನು ಹೊಗಳಿಕೊಂಡೇ ಕೈಯಲ್ಲಿದ್ದ ಸಾಮಾನುಗಳನ್ನೆಲ್ಲಾ ಟೇಬಲ್ ಮೇಲಿಟ್ಟ ಮುನೀರ್..
ಏನಿದೆಲ್ಲಾ ? ಇಷ್ಟೊಂದು ಫಲಾಹಾರಗಳು, ಬೇಕರಿ ತಿಂಡಿಗಳು .. ಯಾಕಿಷ್ಟು ? ಹಣ ಎಲ್ಲಿಂದ ? ನೂರ್ ಜಹಾನ್ ಗಾಬರಿಯಾಗಿ ಕೇಳಿದಳು.
"ಇರಲಿ ಬಿಡು ನೂರ್ಜಾ, ಇವತ್ತು ಬರುವ ಅತಿಥಿಗಳಿಗೆ ತಾನೇ ? ಎಲ್ಲಾ ದಿವಸ ಬರುವುದಿಲ್ಲ ತಾನೇ ..? ಪೆರ್ನಾಳ್ ದಿವಸಕ್ಕೆ ಅಂಗಡಿ ಮಾಲೀಕರು ಕೊಟ್ಟಿದ್ದ ಸ್ವಲ್ಪ ಹಣ, ಮತ್ತೆ ಸ್ವಲ್ಪ ಸಾಲ ಮಾಡಿ ಎಲ್ಲವನ್ನೂ ತಂದಿಟ್ಟಿದ್ದೇನೆ. ಗಂಡಿನ ಕಡೆಯವರು ನಮ್ಮ ಹಾಗಲ್ಲ ತಾನೇ ? ಅವರು ಶ್ರೀಮಂತರು. ಅವರಿಗೆ ಸಮಾನಾದ ಸಾಮರ್ಥ್ಯವಿಲ್ಲದಿದ್ರೂ ನಮ್ಮ ಕೈಲಾದಷ್ಟು ಸತ್ಕಾರ ಮಾಡುವುದು ಒಳಿತಲ್ಲವೇ ನೂರ್ಜ ! ಅವರ ಘನತೆಗೆ ಧಕ್ಕೆಯಾಗಬಾರದಲ್ಲವೇ..?"
"ಇದೋ ಈ ನಕ್ಲೇಸನ್ನು ಅಡವಿಟ್ಟು ಬನ್ನಿ. ಸ್ವಲ್ಪ ಹಣ ಕೈಯಲ್ಲಿರಲಿ ಎನ್ನುತ್ತ ತನ್ನ ಕುತ್ತಿಗೆಯಲ್ಲಿದ್ದ ಬಂಗಾರದ ನಕ್ಲೇಸನ್ನು ಕೊಟ್ಟಳು. ಮುನೀರ್'ನ ಕೈಯ್ಯಲ್ಲಿ ಬಿಡಿಕಾಸೂ ಇಲ್ಲವೆಂದು ನೂರ್ ಜಹಾನ್ ಳಿಗೆ ಅದಾಗಲೇ ಮನದಟ್ಟಾಗಿತ್ತು.
"ಏನಿದು ಮಕ್ಕಳಾಟವೇ ನೂರ್ಜ ? ನಿನ್ನ ಮೇಲಿರುವುದು ನಾನು ನಿನಗೆ ಕೊಟ್ಟ ಈ ಮಹರ್ ಮಾಲೆಯೊಂದು ತಾನೇ ? ಅದನ್ನು ಕೂಡ ನೀನು ಕಳಚಿಬಿಟ್ಟರೆ ನಿನಗೆ ಬೇರೆ ಆಭರಣವೂ ಇಲ್ಲ.."
"ಕ್ಷಮಿಸಿ, ನನಗಿರೋದು ಈ ಮಹರ್ ಮಾಲೆಯೊಂದೇ ! ಅದ್ರೂ ನಿಮ್ಮ ಸಂಕಷ್ಟ ನನ್ನ ಕೈಯಲ್ಲಿ ನೋಡಲಸಾಧ್ಯ !"
" ಹೌದು, ಕಳೆದ ಮಳೆಗಾಲದಲ್ಲಿ ಮನೆಯೊಳಗೆ ಸೋರಿಕೆಯಾದಾಗ ನಿನ್ನ ಕಿವಿಯಲ್ಲಿದ್ದ ಬಂಗಾರ ಕೂಡ ನಾನು ಮಾರಿ ಮನೆಯ ದುರಸ್ತಿಗೆ ಖರ್ಚು ಮಾಡಿದೆ.. ಈಗ ನೀನು ಈ ಮಹರ್ ಮಾಲೆಯನ್ನೂ ಕೊಟ್ಟರೆ ನಿನಗೆ ಬಾಕಿ ಉಳಿಯುವುದಾದರೂ ಏನು ನೂರ್ಜ ? ಸೋಡ್ತಿ ಹಣ ಬಂದಾಗ ಬಂಗಾರ ಮಾಡಿಸಿಕೊಡ್ತೇನೆ ಎಂದು ಫ್ಯಾನ್ಸಿ ಅಂಗಡಿಯಿಂದ ಕಿವಿಗೆ ಹಾಕಿದ ಮೇಲೆ ನಿನ್ನ ಕಿವಿಯಲ್ಲಾಗಿರುವ ಗಾಯ ಈಗಲೂ ಮಾಸಿಲ್ಲ." ಮುನೀರ್ ತನ್ನ ಕಣ್ಣಲ್ಲಿ ಬರುತ್ತಿರುವ ಕಣ್ಣೀರನ್ನು ಒರೆಸುತ್ತಾ ಹೇಳಿದ. ಕ್ಷಮಿಸು ನೂರ್ಜ !"
"ಇರಲಿ ಬಿಡಿ ! ನೀವೇನೂ ದುಃಖಿಸಬೇಡಿ.. ಒಂದೆರಡು ದಿನದಲ್ಲಿ ಎಲ್ಲವೂ ಸರಿಹೋಗುತ್ತೆ" ಎನ್ನುತ್ತಾ ನೂರ್ ಜಹಾನ್ ತನ್ನ ಗಂಡನನ್ನು ಸಮಾಧಾನಪಡಿಸಿದಳು..
"ಏನು ಮಾಡ್ತಿದ್ದೀಯಾ ನೀನು ಕೊಣೆಯೊಳಗೆ? ಮನೆಯೊಳಗೆ ಇಷ್ಟೊಂದು ಕೆಲಸವಿರುವಾಗ ಈ ಹಗಲಲ್ಲೇ ನಿನಗೆ ವಿಶ್ರಾಂತಿ ಬೇಕಾ ?" ನಬೀಸುಮ್ಮ ಆವೇಶದಿಂದಲೇ ತನ್ನ ಕೊಣೆಯೊಳಗಿಂದ ಕಿರುಚಾಡಿದರು.
"ಏನಿಲ್ಲಮ್ಮಾ, ಎಲ್ಲಾ ಕೆಲಸ ಪೂರ್ತಿಯಾಗಿದೆ. ಕೇವಲ ಹಪ್ಪಳ ಮಾತ್ರ ಕಾಯಿಸಿದರಾಯಿತು" ಎನ್ನುತ್ತಾ ನೂರ್ ಜಹಾನ್ ಅಡುಗೆಮನೆಯೊಳಗೆ ಹೆಜ್ಜೆಯಿಟ್ಟಳು.
ನೂರ್ ಜಹಾನ್ ಬಂದ ಅತಿಥಿಗಳಿಗೆಲ್ಲ ರುಚಿಕರವಾದ ಅಡುಗೆಮಾಡಲು ಅಡುಗೆಮನೆಯೊಳಗೆ ಹೆಜ್ಜೆಯಿಟ್ಟಳು..
"ಮೀನು ಬಿರಿಯಾನಿ ಜೊತೆಗೆ ಹಪ್ಪಳವನ್ನು ಕರಿದು ನಾಲಗೆ ಚಪ್ಪರಿಸುವಷ್ಟು ರುಚಿಕರವಾಗುವಂತೆ ತಯಾರಿಸಿಸಬೇಕೆಂದು.." ನೂರ್ ಜಹಾನ್ ತನ್ನ ಮನದಲ್ಲಿಯೇ ನೆನೆದಳು. "ಬರುವ ಅತಿಥಿಗಳೇನು ಸಾಮಾನ್ಯರೇ..? ಆ ಊರಿನಲ್ಲೇ ಒಳ್ಳೆಯ ಶ್ರೀಮಂತ ಒಡೆತನವರು ! ಅಕಸ್ಮಾತ್ ಮಾಡುವ ಅಡುಗೆಯಲ್ಲೇನಾದರೂ ಸ್ವಲ್ಪ ಎಡವಟ್ಟಾದರು ನನ್ನಷ್ಟು ಕೆಟ್ಟವಳು ಇನ್ಯಾರೂ ಇರಲಾರಳು..." ಬೆಳಗ್ಗಿನಿಂದ ನಬೀಸುಮ್ಮ ಹತ್ತು ಬಾರಿಯಾದರೂ ಹೇಳಿರಬೇಕು.
ಕೋಣೆಯೊಳಗಿನಿಂದಲೇ ಗುಣಗುತ್ತಿದ್ದರೂ, ತನ್ನ ಸೊಸೆ ಒಬ್ಬಳೇ ಕೆಲಸ ಮಾಡುತ್ತಿದ್ದಳಲ್ಲ? ನಾನೂ ಕೂಡ ನನ್ನ ಕೈಲಾದಷ್ಟು ಸಹಾಯ ಮಾಡ್ತೇನೆ ಎಂಬ ಚಿಂತೆ ಕೂಡ ನಬೀಸುಮ್ಮಳಿಗೆ ಮನದಲ್ಲಿ ಬರ್ಲಿಲ್ಲ. ಎಷ್ಟು ಕೆಲಸ ಮಾಡಿದರೂ, ಎಷ್ಟೇ ಒಳ್ಳೆ ರುಚಿಕರವಾದ ಆಹಾರ ಮಾಡಿಟ್ಟರೂ ಕೂಡ ನಬೀಸುಮ್ಮಳ ಕಿರಿಕಿರಿಯಂತೂ ತಪ್ಪಿದ್ದಲ್ಲ. ಅದಕ್ಕೆ ಉಪ್ಪು ಸರಿಯಿಲ್ಲ, ಎಣ್ಣೆ ಜಾಸ್ತಿ, ಚಹಾಗೆ ಸಕ್ಕರೆ ಸರಿಯಿರಲ್ಲ.....ಹೀಗೆ ಚುಚ್ಚುಮಾತುಗಳೇ ಜಾಸ್ತಿ. ಮದುವೆಯಾಗಿ 16 ವರ್ಷದ ಹಿಂದೆಯೇ ಮನೆಗೆ ಕಾಲಿರಿಸಿದ ನೂರ್ ಜಹಾನ್' ಳಿಗೆ ಪ್ರತಿದಿನ ಅತ್ತೆಯ ಕಿರಿಕಿರಿ ತಪ್ಪಿದ್ದಲ್ಲ. ನಿಜವಾಗ್ಲೂ ಎಲ್ಲಾ ಅತ್ತೆಯರೂ ಹೀಗೆಯೇ ಇರಬಹುದೇನೋ ? ಎಂಬ ಮಾತುಗಳು ನೂರ್ ಜಹಾನ್ ಳಿಗೆ ಮನದೊಳಗೆ ಬಂದಾಗ ಮುಗುಳ್ನಕ್ಕು ಕೋಣೆಗೆ ಹೋಗಿ ನಕ್ಕಿದ್ದು ಎಲ್ಲವೂ ರೂಢಿಯಾಗಿತ್ತು....
ಅಂದ ಹಾಗೆ ಕೆಲವು ಟಿವಿ ಸೀರಿಯಲ್ ಗಳಲ್ಲೂ ಈ ರೀತಿಯದ್ದೇ ಕಥೆಯಿರುತ್ತದೆ.. ಅದು ಎಲ್ಲರಿಗೂ ಗೊತ್ತಿರೋ ವಿಷಯ ತಾನೇ ? ತೊಂಭತ್ತರ ಶತಮಾನದ ಅತ್ತೆಯರೂ ಕೂಡ ಹೀಗೇನೆ .... ಎನ್ನುತ್ತಾ ನೂರ್ ಜಹಾನ್ ಹಪ್ಪಳ ಕಾಯಿಸುತ್ತಾ ಯೋಚಿಸುತ್ತಿದ್ದಳು.
ಆಹಾ ! ಮುಗಿಯಿತಾ ? ಯಾರ ಬಗ್ಗೆ ಇಷ್ಟು ಚಿಂತಿಸುತ್ತಿದ್ದೀರಾ? ಕೂಗುತ್ತಾ ಶಾಹಿದ್ ಅಡುಗೆಮನೆಯೊಳಗೆ ಕಾಲಿಟ್ಟ....
ಏನಿಲ್ಲ ಮೋನೆ...! ಹಾಗೇನೇ ಈ ಪಾತ್ರೆಯೊಂದಿಗೆ ...! ಏನು ಮಾಡೋದು ಹೇಳು ? ನನ್ನ ಸಂಕಷ್ಟ ಏನಿದ್ದರೂ ಈ ಅಡುಗೆಮನೆಯೊಳಗೆ ತಾನೇ ಸೀಮಿತ .... ಇದೆಲ್ಲವೂ ನನ್ನ ಸ್ನೇಹಿತರಂತೆ .. ಜೊತೆಗೆ ಕಿಟಕಿಯಾಚೆಗಿನ ಆ ಮರದ ಮೇಲಿನ ಕಾಗೆ ಮತ್ತು ಮನೆಯ ಸುತ್ತಲಿನ ಒಂದಷ್ಟು ಸಾಕುಪ್ರಾಣಿಗಳು.... ನೂರ್ ಜಹಾನ್ ಳ ಮಾತು ತಮಾಷೆಯಾಗಿದ್ರೂ ಅದರೊಳಗಿದ್ದ ನೋವು ಅವಳಿಗಷ್ಟೇ ಗೊತ್ತು..
ಯಾಕಿಷ್ಟು ಸಂಕಷ್ಟ.. ? ಏನಿದ್ದರೂ ಮಾವನಿಗೆ ಹೇಳುವುದು ಬಿಟ್ಟು ಈ ಕಾಗೆ, ಬೆಕ್ಕು, ಪಾತ್ರೆ ಅಂತೀರಾ ? ನನ್ನನ್ನೇ ನೋಡಿ ! ಎಲ್ಲವೂ ಇದು ಕೂಡ ಅನಾಥನಂತಿಲ್ಲವೇ..? ಶಾಹಿದ್ ಅಷ್ಟು ಹೇಳಿದ್ದೇ ತಡ, ನೂರ್ ಜಹಾನ್ ನ ಮನಸ್ಸಿನ ಕಟ್ಟೊಡೆಯಿತು. ಸಾಕು ಸಾಕು, ಹೋಗು ಇಲ್ಲಿಂದ ! ಒಂದೊಂದೇ ಮಾತಾಡಿ ಮೂಡ್ ಎಲ್ಲಾ ಆಫ್ ಮಾಡ್ತೀಯಾ..! ನಿನ್ನ ಸೆಂಟಿಮೆಂಟ್ ಮಾತು ಬಿಟ್ಟು ಅದೋ ಅಲ್ಲಿಟ್ಟ ಪಾಯಸವನ್ನೊಮ್ಮೆ ಚೆಕ್ ಮಾಡಿ ನೋಡು ಶಾಹಿದ್ ! ಎನ್ನುತ್ತಾ ನೂರ್ ಜಹಾನ್ ಸಣ್ಣ ಗ್ಲಾಸ್ಸೊಂದರಲ್ಲಿ ಪಾಯಸ ಹಾಕಿ ಶಾಹಿದ್ ನ ಕೈಗಿಟ್ಟಳು. ವಾಹ್ ! ವಾಹ್ ! ಏನಿದು ಪಾಯಸ ? ಉಫ್ ! ಪಾಯಸದ ಪಾತ್ರೆಯನ್ನೇ ಖಾಲಿಬಿಡ್ತೇನೆ ! ಎಷ್ಟೊಂದು ರುಚಿಯಾಗಿದೆ....
ಅವರಿಬ್ಬರ ತಮಾಷೆಯ ಮಾತುಗಳು ಜೋರಾಗುತ್ತಿದ್ದಂತೆಯೇ "ಯಾ ಅಲ್ಲಾಹ್ ! ಇದಕ್ಕೇನೂ ಕಡಿಮೆಯಿಲ್ಲ. ಇವನೂ ಕೂಡ ಇದ್ದಾನಾ ? ಇನ್ನು ಅವನ ಬುದ್ದಿ ಕೂಡ ಕೆಡಿಸ್ತೀಯಾ ನೀನು ?" ಎನ್ನುತ್ತಾ ನಬೀಸುಮ್ಮ ಕೋಪದಿಂದಲೇ ಅಡುಗೆಮನೆಯೊಳಗೆ ಪ್ರವೇಶಿಸಿದರು.
ನಬೀಸುಮ್ಮ ಕೋಪದಿಂದ ಆಡಿದ ಮಾತುಕೇಳಿ ಶಾಹಿದ್.. "ನೀವೇಕೆ ಹೀಗೆ ಆಕಾಶವೇ ಕಳಚಿ ಕೆಳಗೆ ಬಿದ್ದವರಂತೆ ವರ್ತಿಸುತ್ತಿದ್ದೀರಿ..? ಅಲ್ಲ, ನನ್ನ ಆಂಟಿಯ ಜೊತೆಗೆ ತಾನೇ ನಾನು ತಮಾಷೆ ಮಾತನಾಡುತ್ತಿರೋದು.. ? ಅದರಲ್ಲಿ ತಪ್ಪೇನಿದೆ ? ಇಲ್ಲಿ ನಿಂತಿರುವುದು ಆಂಟಿಯಾದರೂ ನನಗಂತೂ ನನ್ನ ಸ್ವಂತ ಅಮ್ಮನಂತೆ... ಹುಟ್ಟಿನಂದಿನಿಂದ ನನ್ನನ್ನು ಸಾಕಿ ಸಲುಹಿ ಆಹಾರ ಉಣ್ಣಿಸಿ, ಜೋಗುಳ ಹಾಡಿ, ಕಥೆಗಳನ್ನು ಹೇಳಿ ಮಲಗಿಸಿದಂತಹ ನನ್ನ ಅಮ್ಮ ಇದು ! ನನ್ನ ಬಾಯಿಂದ ಮೊದಲಕ್ಷರವನ್ನು ಕಲಿಸಿದ್ದೇ ಇದೇ ಅಮ್ಮನಾಗಿದ್ದು.., ಎಂದಿಗೂ ತನ್ನ ಮಕ್ಕಳ ದಾರಿ ತಪ್ಪಿಸುವ ನಿಮ್ಮ ಮಾತು ಒಂದಿಷ್ಟು ಸರಿಯಲ್ಲ. ನೀವು ಇಷ್ಟೊಂದು ಕೀಳು ಭಾವನೆಯವರೆಂದು ನಾನೊಮ್ಮೆಯೂ ಯೋಚಿಸಿಲ್ಲ. ಛೆ !!" ಶಾಹಿದ್ ಗೆ ಏನಾಯಿತೋ ಗೊತ್ತಿಲ್ಲ. ನಬೀಸುಮ್ಮಳ ಚುಚ್ಚುಮಾತಿಗೆ ಕೆಂಡಾಮಂಡಲಾಗಿದ್ದ ಶಾಹಿದ್ ಮಾತಿನ ಮೂಲಕ ಹಿಗ್ಗಾಮುಗ್ಗಾ ತಣ್ಣ ಕೋಪವನ್ನೆಲ್ಲ ಕಕ್ಕಿಬಿಟ್ಟ. ಇದಕ್ಕೆ ಮುಂಚೆ ಶಾಹಿದ್ ಎಂದಿಗೂ ಆ ರೀತಿ ಮರುತ್ತರ ಕೊಟ್ಟಿರಲಿಲ್ಲ...
"ಬೇಡ ಮೋನೆ ಶಾಹಿದ್, ಸುಮ್ಮನಿರು.." ಶಾಹಿದ್' ನ ಮಾತು ಏಕೋ ನೂರ್ ಜಹಾನ್ ಳ ಮನಸ್ಸಿಗೂ ತುಂಬಾ ನಾಟಿತ್ತು.
"ಯಾ ಬದ್ರ್ ಶುಹಾದಕ್ಕಳೆ, ಈ ಸಣ್ಣ ಹುಡುಗನ ಅಹಂಕಾರದ ಮಾತು ಕೇಳುತ್ತಿದ್ದೀರಾ..? ನನಗೆ ಕೂಡ ಇದೇ ಬೇಕಾದದ್ದು. ಇದನ್ನೇ ನಾನು ಕೇಳಬೇಕಿತ್ತು.. ಮಗುವಿರುವಾಗ ನಿನ್ನ ತೊಟ್ಟಿಲನ್ನು ಆಡಿಸಿ, ಮಲಗಿಸಿದ್ದು ಎಲ್ಲವೂ ಮರೆತುಬಿಟ್ಟೆ ತಾನೇ ..? ಯಾ ಅಲ್ಲಾಹ್" ಎನ್ನುತ್ತಾ ತನ್ನೆರಡು ಕೈಗಳಿಂದ ಎದೆ ಬಡಿಯತೊಡಗಿದಳು ನಬೀಸುಮ್ಮ...
ಅಮ್ಮನ ರೋದನೆಯನ್ನು ಕೇಳಿದ ಮುನೀರ್ ಏನಾಯಿತಮ್ಮ..? ಎನ್ನುತ್ತಾ ಮುನೀರ್ ಅಡುಗೆಮನೆಗೆ ಓಡಿಬಂದ..... ಏನೂಂತ ಹೇಳಲಿ ಮಗನೇ....! ಇದೋ ಇವಳು ನನ್ನನ್ನು ಏನೆಲ್ಲಾ ಬೈಯುತ್ತಿದ್ದಾಳೆಂದು ನನಗೆ ! ನನ್ನ ಮಾನ, ಮರ್ಯಾದೆ ಎಲ್ಲಾ ಹೊಯ್ತು. ಈಗೀಗ ನನ್ನ ಮಾತಿಗೆಲ್ಲಾ ಎದುರುತ್ತರ ಕೊಡುತ್ತಿದ್ದಾಳೆ. ಯಾ ರಬ್ಬೆ, ನನ್ನ ಜೀವನದಲ್ಲಿ ಇಂತಹ ದಿನಗಳು ಬರುತ್ತದೆಯೆಂದು ನಾನೆಸಿರಲಿಲ್ಲ. ನಾನು ಏನು ತಪ್ಪು ಮಾಡಿದ್ದೇನೆಂದು ಈ ರೀತಿಯ ಪರೀಕ್ಷೆ !" ನಬೀಸುಮ್ಮಳ ಆಕ್ರಂದನ ಮುಗಿಲಿಗೇರಿತ್ತು. ಎಲ್ಲವನ್ನೂ ನೋಡಿ ಬೆಚ್ಚಿ ಬೆರಗಾಗಿ ನಿಂತಿದ್ದ ನೂರ್ ಜಹಾನ್ ಳ ಮುಖವನ್ನೊಮ್ಮೆ ದಿಟ್ಟಿಸಿದ.. ಮದುವೆಯಾಗಿ ಇಷ್ಟು ವರ್ಷಗಳಾದರೂ ಒಮ್ಮೆ ಕೂಡ ಅವಳ ಮೇಲೆ ಕೈಯೆತ್ತದ ಮುನೀರ್ , ಹಿಂದೆಮುಂದೆ ನೋಡದೆ ಹಿಗ್ಗಾಮುಗ್ಗಾ ಥಳಿಸತೊಡಗಿದ....
ಮಾವ ....! ಶಾಹಿದ್ ಒಮ್ಮೆಲೆ ಘರ್ಜಿಸತೊಡಗಿದ.
ಶಾಹಿದ್'ನ ಕಣ್ಣೆದುರಲ್ಲೆ ಮುನೀರ್ ತನ್ನ ಹೆಂಡತಿ ನೂರ್'ಜಹಾನ್ ಗೆ ಹೊಡೆದದ್ದು ಕಂಡು..
ಮಾವಾ... ಎಂದು ಒಮ್ಮೆಲೆ ಕೋಪದಿಂದ ಘರ್ಜಿಸಿದ.. ನೀವು ಏನೂ ಎತ್ತಂತ ವಿಚಾರಿಸದೆಯೇ ಆಂಟಿಗೆ ಸುಮ್ಮನಿಲ್ಲದೆ ಹೊಡೆದದ್ದೇಕೆ..?
"ದೊಡ್ಡವರನ್ನು ಗೌರವಿಸಬೇಕೆಂದು ಗೊತ್ತಿಲ್ಲವೇ..? ಅದರಲ್ಲೂ ನನ್ನ ಅಮ್ಮನಿಗೆ ಯಾರು ಅವಮಾನಿಸಿದರೂ ನಾನು ಮಾತ್ರ ಸುಮ್ಮನಿರಲ್ಲ , ಗೊತ್ತಾಯಿತಾ ?"ಎಂದು ನೂರ್ ಜಹಾನ್ ಳ ಕಡೆಗೆ ಬೆರಳು ತೋರಿಸಿ ಗದರಿಸಿದ.. ಮುನೀರ್ ತನ್ನ ಅಮ್ಮನನ್ನು ಸಮಾಧಾನಪಡಿಸಿದನು.
ಇಂತಹ ಶುಭದಿನದಲ್ಲಿ ಇದೆಲ್ಲಾ ಬೇಕಿತ್ತಾ..? ದಯವಿಟ್ಟು ಅತಿಥಿಗಳ ಮುಂದೆ ನನ್ನ ಮರ್ಯಾದೆ ತೆಗೆಯಬೇಡಿ. ಅಷ್ಟು ಮಾತು ಹೇಳುವಷ್ಟರಲ್ಲೇ ಮುನೀರ್ ಕಣ್ಣು ಕೆಂಡಾಮಂಡಲವಾಗಿತ್ತು. ಅವನ ಕೋಪ ತಣ್ಣಗಾಗುವ ಲಕ್ಷಣವಿಲ್ಲದಿದ್ದರೂ ತನ್ನ ತಂಗಿಯ ಸಂಬಂಧದ ವಿಚಾರವನ್ನು ನೆನೆದು ತಣ್ಣಗಾದನು. ಇಲ್ಲದಿದ್ದರೂ ಮುನೀರ್ ಗೆ ತನ್ನ ತಂಗಿಯ ಬಾಳು ಒಂದು ಸರಿದಾರಿಗೆ ಬರಲಿಲ್ಲವಲ್ಲ ಎಂಬ ಟೆನ್ಶನ್ ನಡುವೆ ತಾಯಿ ಮತ್ತು ಪತ್ನಿಯ ಜಗಳವನ್ನು ನೋಡಿ ಪಿತ್ತ ನೆತ್ತಿಗೇರಿತ್ತು..
ಸ್ವಲ್ಪ ಸಮಾಧಾನಗೊಂಡಾಗ ತನ್ನ ಪ್ರೀತಿಯ ಹೆಂಡತಿಗೆ ಹೊಡೆದದ್ದನ್ನು ನೆನೆದು ತುಂಬಾ ಬೇಸರಗೊಂಡ. ಕೆನ್ನೆಯ ಮೇಲೆ ಬಿದ್ದ ಹೊಡೆತದಿಂದ ನೂರ್ ಜಹಾನ್ ಳ ಕಣ್ಣುಗಳು ಕೂಡ ತುಂಬಿ ಬಂದಿತ್ತು. ಅವಳ ಕಣ್ಣೀರನ್ನು ಕಂಡ ಶಾಹಿದ್ ಕೂಡ ದುಃಖ ತಡೆದುಕೊಳ್ಳಲಾರದೆ ತನ್ನ ಕೋಣೆಯೊಳಗೆ ಹೊರಟುಹೋದ.. ಕೋಣೆಯೊಳಗೆ ಅಳುತ್ತಾ ಕುಳಿತಿದ್ದ ಶಾಹಿದ್ ನನ್ನ ಕಂಡು.. "ಮೋನೆ, ಎದ್ದೇಳು ನೀನೇಕೋ ಹೆಣ್ಮಕ್ಕಳ ಹಾಗೆ ಅಳುತ್ತಿದ್ದೀಯಾ ? ನೀನು ಇಷ್ಟುದ್ದ ಬೆಳೆದು ನಿಂತ ಯುವಕನಲ್ಲವೇ..? ಗಂಡಸರು ಇಷ್ಟಕ್ಕೆಲ್ಲ ಅಳುವುದುಂಟೆ..?" ಮುನೀರ್ ಶಾಹಿದ್ ನ ಬೆನ್ನು ಸವರುತ್ತಾ ಸಮಾಧಾನಪಡಿಸಲೆತ್ನಿಸಿದ..
"ನನಗೆ ಮಸ್ಕ ಹೊಡೆಯುವ ಅಗತ್ಯವಿಲ್ಲ. ಅದೋ ಅಡುಗೆಮನೆಯಲ್ಲಿ ಒಂದು ಜೀವ ದುಃಖದ ಮಡುವಿನಲ್ಲಿದೆ. ಹೋಗಿ ಅವರನ್ನು ಸಮಾಧಾನಪಡಿಸಿ. ಅವರು ನಿಮಗೆ ಪತ್ನಿಯಾದರೂ ನನಗೆ ನನ್ನ ಸ್ವಂತ ಅಮ್ಮನಂತೆ.! ಅಲ್ಲಲ್ಲ ಅವರು ನಂಗೆ ಅಮ್ಮನೇ..! ನೀವ್ಹೇಳಿ... ತಾಯಿ ಮಗ ತಮಾಷೆಯ ಮಾತನ್ನಾಡಬಾರದೇ..? ನಗಬಾರದೇ? ನಮ್ಮ ತಮಾಷೆ ಹಾಗೂ ನಗುವಿನ ಮಾತಿಗೆ ನಿಮ್ಮ ಅಮ್ಮ ಇಷ್ಟೆಲ್ಲಾ ರಾದ್ದಾಂತ ಮಾಡುವ ಅಗತ್ಯವಿತ್ತೇ..?" ಕಣ್ಣೀರೊಂದಿಗೆ ಶಾಹಿದ್ ನಡೆದ ಘಟನೆಯನ್ನು ವಿವರಿಸಿದ.
"ಹೋಗಲಿ ಬಿಡು ! ಆದದ್ದು ಆಗಿ ಹೋಯಿತಲ್ಲ. ಏನು ಮಾಡೋದು ? ಹಫ್ಸಳನ್ನು ನೋಡಲು ಬರುತ್ತಿದ್ದಾರಲ್ಲ ಅದೇ ಕಾರ್ಯದ ಕುರಿತು ನಾನು ಟೆನ್ಶನ್ ನಲ್ಲಿರುವಾಗಲೇ ಇದೆಲ್ಲ ನನಗೆ ಮತ್ತಷ್ಟು ಕಿರಿಕಿರಿ ಎನಿಸಿತ್ತು ಶಾಹಿದ್.. ! ಅದೇನೋ ಒಮ್ಮೆಲೆ ಕೋಪ ಬಂದಾಗ ದುಡುಕಿಬಿಟ್ಟೆ. ನನ್ನ ಅಮ್ಮನನ್ನು ತಪಿತಸ್ಥಳೆಂದು ನಾನು ಹೇಗೆ ಹೇಳಲಿ ?"* ಮುನೀರ್ ತನ್ನ ಸಂಕಟವನ್ನು ತೋಡಿಕೊಂಡರು.
"ಬೇಗ ಎದ್ದೇಳು, ಸ್ನಾನ ಮುಗಿಸಿ ಶುಭ್ರ ಬಟ್ಟೆಯೊಂದನ್ನು ಧರಿಸಿಕೋ ! ನನ್ನವರೂಂತ ನೀನೊಬ್ಬ ತಾನೇ ಇರೋದು.. ?" ಅವನ ಕಣ್ಣೀರನ್ನು ಒರೆಸುತ್ತಾ ಮುನೀರ್ ಮಂದಹಾಸ ಬೀರಿದ.
"ಆಯಿತು ! ನನಗೆ ನಿಮ್ಮ ಮೇಲೆ ಕೋಪವಿಲ್ಲ ! ನಾನು ಮರೆತುಬಿಟ್ಟೆ. ಆದರೆ, ಅಮ್ಮ ಅಡುಗೆಮನೆಯಲ್ಲಿ ಕುಳಿತ್ಕೊಂಡು ಅಳುವುದು ಇಲ್ಲಿಯವರೆಗೂ ನಿಮಗೆ ಕೇಳಿಸುತ್ತಿಲ್ಲವೇ? ಮೊದಲು ಹೋಗಿ ಅವರನ್ನು ಸಮಾಧಾನಪಡಿಸಿ" ಎನ್ನುತ್ತಾ ಶಾಹಿದ್ ಬಾತ್'ರೂಮಿಗೆ ಹೊರಟುಹೋದ. ಮುನೀರ್ ತನ್ನ ತಂಗಿಯ ಕೋಣೆಯತ್ತ ಹೆಜ್ಜೆಯಿಟ್ಟ.......
.
ಪೆರ್ನಾಳ್ ಹಬ್ಬದ ದಿನದಂದು ನೂರ್ ಜಹಾನ್ ತುಂಬಾ ಬೆಲೆ ಕೊಟ್ಟು ಖರೀದಿಸಿದ್ದ ಪಿಂಕ್ ಬಣ್ಣದ ಬಟ್ಟೆಯನ್ನು ಧರಿಸಿದ್ದ ಹಫ್ಸಾ ಅಪ್ಸರೆಯಂತೆ ಕಾಣುತ್ತಿದ್ದಳು. ಹಲವು ರೀತಿಯ ವಿನ್ಯಾಸವನ್ನೊಳಗೊಂಡ ಆ ದುಬಾರಿ ವಸ್ತ್ರ ಅಗತ್ಯವಿದೆಯೇ ಎಂದು ಕೇಳಿದ್ದ ಮುನೀರ್.. "ನಿಮಗಿರುವ ಒಬ್ಬಳೇ ತಂಗಿಗೆ ವಸ್ತ್ರ ತೆಗೆಯುವಾಗ ಹಣವನ್ನು ನೋಡುವುದೇ..? ಒಮ್ಮೆ ಸುಮ್ಮನಿರ್ತೀರ ?"ಎಂದು ನೂರ್ ಜಹಾನ್ ಹೇಳಿದ ಮಾತು ನೆನಪಿಗೆ ಬಂತು. ವರ್ಷಕ್ಕಿರುವ ಹಬ್ಬಕ್ಕಾಗಿ ಖರ್ಚು ಮಾಡುವಾಗ ಆ ದಿನದ ಮೌಲ್ಯವನ್ನು ನೋಡಬೇಕೆ ಹೊರತು ಹಣದ ಬಗ್ಗೆ ಚಿಂತಿಸಬಾರದು ತಾನೇ ? ಎಂದು ಹಠ ಹಿಡಿಯುತ್ತಾ ಖರೀದಿಸಿದ ವಸ್ತ್ರವಾಗಿತ್ತದು. ಹಫ್ಸಾಳಿಗೂ ಅದು ಇಷ್ಟವಾಗಿತ್ತಾದರೂ ಮನಸ್ಸು ಸಮಾಧಾನವಿಲ್ಲದೆ ಹಬ್ಬದ ದಿವಸ ಉಪಯೋಗಿಸಿರಲಿಲ್ಲ. ಅಕಸ್ಮಾತ್ ತೊಟ್ಟುಕೊಂಡರೂ ಅಂಗವಿಕಲತೆಯಾಗಿರುವ ನಾನು ಹೋಗುವುದಾದರೂ ಎಲ್ಲಿಗೆ ? ಎಂಬ ಚಿಂತೆಯಲ್ಲೇ ಹಫ್ಸಾ ಹಾಗೇ ತೆಗೆದು ಇಟ್ಟಿದ್ದಳು.
ನೂರ್ ಜಹಾನ್ ಹಫ್ಸಾಳಿಗೆ ಹೊಸ ವಸ್ತ್ರವನ್ನೆಲ್ಲಾ ತೊಡಿಸಿ, ಹೂವನ್ನೆಲ್ಲ ಮುಡಿಸಿ, ಶೃಂಗಾರ ಮಾಡಿದ ಮೇಲೆ ಕನ್ನಡಿಯ ಮುಂದೆ ಕುಳ್ಳಿರಿಸಿದಳು. ಅರೆಕ್ಷಣ ಕನ್ನಡಿಯನ್ನೇ ದೃಷ್ಟಿಸಿದ ಹಫ್ಸಾ ಆಹಾ ! ಸುಂದರಿಯಾಗಿ ಕಾಣುತ್ತಿದ್ದೇನಲ್ಲವೇ ನೂರು ? ಎಂದು ಮುಗುಳ್ನಗೆಯೊಂದಿಗೆ ಕೇಳಿದಳು. ಹಲವು ದಿವಸಗಳ ನಂತರ ಅವಳ ಮುಖದಲ್ಲಾದ ಸಂತೋಷವನ್ನು ಕಂಡು ನೂರ್ ಜಹಾನ್ ಕೂಡ ಹರ್ಷ ಪುಳಕಿತಳಾದಳು. ಅಲ್ ಹಂದುಲಿಲ್ಲಾಹ್ ! ಅಲ್ಲಾಹುವೇ ಅವಳ ಈ ಮುಗುಳ್ನಗು ಜೀವನಪೂರ್ತಿ ಇರುವಂತೆಯೇ ಮಾಡು ಯಾ ಅಲ್ಲಾಹ್ ! ಎಂದು ನೂರ್ ಜಹಾನ್ ಹೃದಯಾಂತರಾಳದಿಂದ ಪ್ರಾರ್ಥಿಸಿದಳು. ಅಷ್ಟು ಹೊತ್ತಿಗಾಗಿತ್ತು ಮುನೀರ್ ಹಫ್ಸಾಳ ರೂಮಿಗೆ ಪ್ರವೇಶಿಸಿದ್ದು.....
ಮುನೀರನ್ನು ಕಂಡಕೂಡಲೇ ಸೆರಗಿನಿಂದ ಮುಖ ಮುಚ್ಚಿಕೊಂಡು ಕೋಣೆಯ ಮೂಲೆಯೊಂದರಲ್ಲಿ ಹೋಗಿ ನಿಂತಳು ನೂರ್ ಜಹಾನ್ ! ಅವಳಿಗೆ ಈಗಲೂ ನನ್ನ ಮೇಲೆ ಕೋಪವಿದೆಯೆಂದು ತಿಳಿಯಲು ಹೆಚ್ಚು ಸಮಯವಾಗಲಿಲ್ಲ ಮುನೀರ್ ಗೆ ..... "ಇವತ್ತಿನ ಶುಭಕಾರ್ಯವೊಂದು ಮುಗಿಯಲಿ, ಅವಳನ್ನು ಸಮಾಧಾನಪಡಿಸಿ ಅವಳಲ್ಲಿ ಕ್ಷಮೆ ಕೇಳಬೇಕು" ಎಂದು ತನ್ನ ಮನಸ್ಸಿನಲ್ಲೇ ಮುನೀರ್ ಹೇಳಿಕೊಂಡ. ತನ್ನ ತಂಗಿಯ ಮುಖದಲ್ಲಿರುವ ಸಂತೋಷವನ್ನು ಕಂಡ ಮುನೀರ್ ಗೆ ಮನಸ್ಸಿನ ಭಾರವೆಲ್ಲಾ ಕಡಿಮೆಯಾದಂತನಿಸಿತು.. ಅಲ್ಲಾಹುವೇ, ನೀನೇ ರಕ್ಷಿಸು. ಬರುವ ಹುಡುಗ ನಿರಾಕರಿಸದಂತೆ ಕಾಪಾಡು ಯಾ ಅಲ್ಲಾಹ್"ಎಂದು ಮುನೀರ್ ಕೂಡ ಮನದಲ್ಲೇ ಪ್ರಾರ್ಥಿಸಿದ. ಅಷ್ಟರಲ್ಲೇ ಮನೆಯ ಅಂಗಳಕ್ಕೆ ಕಾರೊಂದು ಬಂದು ನಿಂತ ಶಬ್ದ ಕೇಳಿ "ಅದೋ, ಅತಿಥಿಗಳು ಬಂದು ಬಿಟ್ಟರು."
ಮನೆಯ ಅಂಗಳದಲ್ಲಿ ಕಾರಿನ ಶಬ್ದ ಕೇಳಿದಾಕ್ಷಣ ಮುನೀರ್ ಮತ್ತು ನೂರ್'ಜಹಾನಳ ಹೃದಯದ ಬಡಿತ ಇನ್ನಷ್ಟು ಹೆಚ್ಚಾಗತೊಡಗಿತು..
ಕೋಣೆಯೊಳಗಿದ್ದ ಹಫ್ಸಾ ಕೂಡ ಬಹಳ ಕುತೂಹಲದಿಂದ "ಬಹುಶಃ ನನ್ನನ್ನು ನೋಡಲು ಬಂದವರೇನೋ..?"ಎನ್ನುತ್ತಾ ಕಿಟಕಿಯಿಂದಾಚೆಗೆ ಕಣ್ಣಾಯಿಸಿದಳು. ಅವಳ ಮುಖದಲ್ಲಿ ಹೊಸ ಉತ್ಸಾಹ..! ಹೊಸ ಹುರುಪು, ಹೊಸತೊಂದು ಅಭಿಲಾಷೆ ಅವಳ ಕಣ್ಣಿನಂಚಿನಲ್ಲಿ ಎದ್ದು ಕಾಣುತ್ತಿತ್ತು...
ಮೂರು ಕಾರುಗಳಲ್ಲಾಗಿತ್ತು ಅತಿಥಿಗಳು ಮುನೀರಾಕನ ಮನೆಯಂಗಳದಲ್ಲಿ ಸರ್ರನೆ ಬಂದು ನಿಂತದ್ದು...
ಮೊದಲನೇ ಕಾರಲ್ಲಿ ಹುಡುಗರ ಸ್ನೇಹಿತರು, ಎರಡನೇ ಕಾರಿನಲ್ಲಿ ಹುಡುಗನ ಅಣ್ಣ ಮುಸ್ತಫ, ಅವನ ಹೆಂಡತಿ ಮತ್ತು ಅವನ ಇಬ್ಬರು ಹೆಣ್ಮಕ್ಕಳು ಬಂದಿದ್ದರು.. ನೀಲಿಪಟ್ಟೆಯ ಸಾರಿಯನ್ನು ಧರಿಸಿದ್ದ ಮುಸ್ತಫನ ಹೆಂಡತಿ ಮೈತುಂಬಾ ಆಭರಣಗಳನ್ನು ತೊಟ್ಟುಕೊಂಡಿದ್ದಳು. ಸೀರೆಗೆ ತಕ್ಕುದಾದ ನೀಲಿ ಶಾಲೊಂದನ್ನು ತಲೆಯ ಮೇಲೆ ಕಟ್ಟಿಕೊಂಡಿದ್ದ ಅವಳ ಸುಂದರ ಮುಖಕ್ಕೆ ಮತ್ತಷ್ಟು ಮೆರಗು ಕೊಟ್ಟಿತ್ತು.. ಮುಸ್ತಫನ ಮಕ್ಕಳು ಅವಳಿಗಳಾಗಿದ್ದು ಸಫಾ ಮತ್ತು ಮರ್ವ ಎಂದು ಹೆಸರಿಟ್ಟಿದ್ದರು.. ಇಬ್ಬರೂ ಕೂಡ puc ಕಲಿಯುತ್ತಿದ್ದು ತಾಯಿಗಿಂತಲೂ ಸುಂದರ ಹೆಣ್ಮಕ್ಕಳು. ಇಬ್ಬರ ಮುಖಚರ್ಯೆ ಹಾಗೂ ಮುಗುಳ್ನಗು ತಂದೆ ಮುಸ್ತಫನ ಹಾಗೆ ಹೋಲುತ್ತಿದ್ದವು. ಯಾರೊಡನೆಯೂ ಹೋಲಿಸಲಾಗದ ಆ ಹೆಣ್ಮಕ್ಕಳು ಕೈಯಿಂದ ಪಾದದವರೆಗೂ ಔರತ್ ಮರೆಮಾಚುವಂತಹ ಸಮವಸ್ತ್ರ ಧರಿಸಿದ್ದು ಕಿವಿಗೆ ಮಾತ್ರ ಸಣ್ಣದೊಂದು ಕಿವಿಯೋಲೆ ತೊಟ್ಟು ಕೊಂಡಿದ್ದರು..
ಮೂರನೇ ಕಾರಿನಲ್ಲಾಗಿತ್ತು ಮದುವೆಯಾಗುವ ಹುಡುಗ ಶಾಜಹಾನ್ ಬಂದಿಳಿದದ್ದು...... ಬಿಳಿ ಶರ್ಟ್ ಮತ್ತು ಬಿಳಿ ಲುಂಗಿಯೊಂದನ್ನು ಧರಿಸಿದ್ದ.. ಶಾಜಹಾನ್ ಹಿಂದಿನ ಸೀಟಿನಲ್ಲಿದ್ದ ತನ್ನ ತಾಯಿಯ ಕೈಯನ್ನಿಡಿದು ಕಾರಿನಿಂದಿಳಿದ. ಕಡು ಕಪ್ಪುಬಣ್ಣದ ಬುರ್ಖಾ, ಕಣ್ಣಿಗೊಂದು ದಪ್ಪದಾದ ಕನ್ನಡಕ, ತೆಳ್ಳಗಿನ ಶರೀರದ ಆ ಮಹಿಳೆ 50 ವರ್ಷದ ಹಿಂದಿನ ವೇಷಭೂಷಣದಲ್ಲಿದ್ದರು. ಅವರ ಮುಖದಲ್ಲಿರುವ ಮಂದಹಾಸದ ನಗು ಅವರೊಂದುದು ಸಾಧಾರಣ ಹಾಗೂ ಪರಂಪರೆಯನ್ನು ಕಾಪಾಡಿಕೊಂಡಿದ್ದ ಮಹಿಳೆಯೆಂದು ಗ್ರಹಿಸಬಹುದಾಗಿತ್ತು. ಕೊನೆಯಲ್ಲಿ ಆ ಕಾರಿನಿಂದ ಇಳಿದದ್ದು ಶಾಜಹಾನ್ ನ ಒಬ್ಬಳೇ ತಂಗಿಯಾದ ಸಾಜಿದ. ಶಾಜಹಾನ್ ಮತ್ತು ಸಾಜಿದ ಕೂಡ ಅವಳಿಗಳೇ...! ಹಾಗೆ ನೋಡಿದರೆ ಅವರ ಕುಟುಂಬದೊಳಗೆ ಹಲವಾರು ಅವಳಿಗಳಿದ್ದರು. ಅದೇ ಪರಂಪರೆ ಮುಂದುವರೆಯುತ್ತಾ ಸಫಾ ಮತ್ತು ಮರ್ವ ಜನಿಸಿದ್ದು..... ಅವಳೊಂದು ಮಾಡೆಲ್ ರೀತಿಯ ಹುಡುಗಿ.. ಮುಖವೆಲ್ಲ ಮೇಕಪ್ ಮಾಡಿಕೊಂಡು, ತುಟಿಗೆ ಲಿಫ್ಟಿಕ್ ಹಾಕಿಕೊಂಡು ಸಂಪೂರ್ಣ ಶೃಂಗರಿಸಿ ಬಂದ ಸಾಜಿದ ಎಲ್ಲರ ಕಣ್ಣು ಸೆಳೆಯುವಷ್ಟು ಸುಂದರಿಯಾಗಿ ಕಾಣುತ್ತಿದ್ದಳು. ವಯಸ್ಸು 31 ಆಗಿದ್ದರೂ, 17 ವರ್ಷದ ಹುಡುಗಿಯಂತಿದ್ದಳು ಸಾಜಿದ...! ಕಾರಿನಿಂದಿಳಿದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ......
ಸಾಜಿದ ಕಾರಿನಿಂದಿಳಿದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ.. ಅವಳ ಮೈಮಾಟವ ಕಂಡು.. ಶಾಹಿದ್..
"ಇದೇನು ಡೊಂಬರಾಟವೇ.. ?" ಶಾಹಿದ್ ಮೆಲ್ಲನೆ ಮುನೀರಾಕನ ಕಿವಿಯಲ್ಲಿ ಪಿಸುಗುಟ್ಟಿದನು. ಹೇಯ್ ಏನೂಂತ ಹೇಳುತ್ತಿದ್ದೀಯ..? ಅವರು ಏನಾದರು ಕೇಳಿದರೆ ಆಪತ್ತು ! ಏನೂ ಮಾತಾಡದೆ ಸುಮ್ಮನಿರು...
ಮುನೀರ್ ಗೆ ಈಗಲೂ ತನ್ನ ತಂಗಿಯದ್ದೇ ಟೆನ್ಶನ್.. ಮುಂದೇನಾಗುವುದೋ? ಯಾ ಅಲ್ಲಾಹ್ ಇವರೆಲ್ಲರೂ ನನ್ನ ತಂಗಿಯನ್ನು ಒಪ್ಪಿಕೊಂಡರೆ ಸಾಕಿತ್ತು ಎಂದು ಮನದಲ್ಲೇ ಮತ್ತೊಮ್ಮೆ ಪ್ರಾರ್ಥಿಸಿದನು.. ಅದು ಸ್ವಾಭಾವಿಕ ತಾನೇ ? ಪ್ರಾಯಕ್ಕೆ ಬಂದ ಹೆಣ್ಮಕ್ಕಳ ತಂದೆಗಿರುವ ಆ ಜವಾಬ್ದಾರಿ ಮುಗಿಯುವವರೆಗೂ ಅವರ ಕಣ್ಣಲ್ಲಿ ಸರಿಯಾಗಿ ನಿದ್ರೆಯಿರುವುದಿಲ್ಲ. ತಮ್ಮ ಮಗಳು ಮದುವೆಯಾಗಿ ಹೋಗುವ ಮನೆ ಹಾಗೂ ಅವಳನ್ನು ಜೀವನಪೂರ್ತಿ ಪ್ರೀತಿಯಿಂದ ನೋಡಿಕೊಳ್ಳುವ ಒಂದು ಒಳ್ಳೆಯ ಹೃದಯವುಳ್ಳ ಗಂಡು ಸಿಗಲೆಂಬುದೇ ಅವರ ಹೆಬ್ಬಯಕೆಯಾಗಿರುತ್ತದೆ. ಇದೊಂದು ಪ್ರಕೃತಿ ನಿಯಮವೇ ಸರಿ. .
ಯಾ ಅಲ್ಲಾಹ್ ! ನಾವು ಎನಿಸಿದಂಥವರಲ್ಲ ಇವರು, ಬಹಳ ದೊಡ್ಡ ಶ್ರೀಮಂತರಿವರು. ಇಂತಹ ಮನೆತನದವರು ಕಾಲಿನ ಸ್ವಾಧೀನತೆಯನ್ನು ಕಳಕೊಂಡ ನನ್ನ ಪ್ರೀತಿಯ ತಂಗಿ ಹಫ್ಸಾಳನ್ನು ಒಪ್ಪಿಕೊಳ್ಳುವರೇ? ನನ್ನ ಆಸೆಯೆಲ್ಲವೂ ನುಚ್ಚುನೂರಾಗಬಹುದೇ? ಒಂದೊಂದು ಕ್ಷಣದಲ್ಲೂ ಮುನೀರ್ ರವರ ಹೃದಯಬಡಿತ ಹೆಚ್ಚುತ್ತಲೇ ಇತ್ತು.
ಬಂದ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಗಂಡಸರನ್ನೆಲ್ಲಾ ಹಾಲ್ ನಲ್ಲಿ ಕುಳ್ಳಿರಿಸಿ, ಹೆಂಗಸರನ್ನೆಲ್ಲಾ ನೂರ್ ಜಹಾನ್ ಮತ್ತೊಂದು ಕೋಣೆಯೊಳಗೆ ಕರೆದುಕೊಂಡು ಹೋದಳು.. ಅಡುಗೆಮನೆಯಿಂದ ಫಲಾಹಾರಗಳನ್ನು ತಂದಿಟ್ಟ ನೂರ್ ಜಹಾನ್ ನಮ್ಮ ಮನೆ ಸಣ್ಣದು, ಕುಳಿತುಕೊಳ್ಳುವ ಸೌಕರ್ಯದಲ್ಲಿ ಹೆಚ್ಚುಕಡಿಮೆಯಾಗಿದ್ದಲ್ಲಿ ಕ್ಷಮಿಸಿಬಿಡಿ ಎನ್ನುತ್ತಾ ಬಂದ ಅತಿಥಿಗಳಿಗೆಲ್ಲ ತಂಪು ಪಾನೀಯ ಕುಡಿಯಲು ಕೊಟ್ಟಳು.
"ಮನೆ ಸಣ್ಣದೋ, ದೊಡ್ಡದೋ ಇದ್ದು ಏನೂ ಪ್ರಯೋಜನವಿಲ್ಲ. ಮನುಷ್ಯರಾದ ನಾವು ಒಳ್ಳೆಯ ಹೃದಯವಂತರಾಗಿರಬೇಕು." ಹುಡುಗನ ತಾಯಿಯ ಆ ಮಾತು ನೂರ್ ಜಹಾನ್ ಳಿಗೂ ಹಿತವೆನಿಸಿತು. ಒಳ್ಳೆಯ ಮನಸ್ಸು! ಇವರು ಒಪ್ಪಿಗೆ ನೀಡಿದ್ದಲ್ಲಿ ನಮ್ಮ ಹಫ್ಸಾಳ ಭಾಗ್ಯವೇ ಸರಿ ಎಂದು ಮನಸ್ಸಿನಲ್ಲೇ ನೆನೆದಳು.
"ಒಂದು ಸಮಯದಲ್ಲಿ ನಮ್ಮ ಮನೆ ಇದಕ್ಕಿಂತಲೂ ಸಣ್ಣದಾಗಿತ್ತು. ಸಾಜಿದಾ ಹುಟ್ಟಿದಾಗಿನಿಂದ ನಮ್ಮ ಯಜಮಾನರ ವ್ಯಾಪಾರದಲ್ಲಿ ಬರ್ಕತ್ ಲಭಿಸಿ ಈಗ ನಾವು ಈ ಸ್ಥಿತಿಯಲ್ಲಿದ್ದೇವೆ. ಅಲ್ ಹಂದುಲಿಲ್ಲಾಹ್ !" (ಆ ತಾಯಿಯ ಮಾತು ಕೇಳಲು ಬಹಳ ಸಂತೋಷವಾಗುತ್ತಿತ್ತು ನೂರ್ ಜಹಾನ್ ಳಿಗೆ. ) "ಬಡವರನ್ನು ಶ್ರೀಮಂತವಾಗಲು ಅದೇ ರೀತಿ ಶ್ರೀಮಂತರು ಬಡವರಾಗುವುದು ಎಲ್ಲವೂ ಅಲ್ಲಾಹು ನಿರ್ಧರಿಸುವುದು ತಾನೇ ?" ಶಾಜಹಾನ್ ನ ತಾಯಿ ಹೇಳುತ್ತಿದ್ದ ಒಂದೊಂದು ಮಾತುಗಳೂ ಎದೆಗೆ ನಾಟುವಂತಿದ್ದವು.
"ತಾಯಿ ಅಂದರೆ ಹೀಗಿರಬೇಕು. ಅದು ಬಿಟ್ಟು ಮದುವೆಯಾಗಿ ಮನೆಗೆ ಬರುವ ಸೊಸೆಗೆ ದಿನವಿಡೀ ಚುಚ್ಚುಮಾತುಗಳನ್ನಾಡುತ್ತಾ, ಎಷ್ಟು ಕೆಲಸ ಮಾಡಿದರೂ ಕರುಣೆಯಿಲ್ಲದೆ ಅತೃಪ್ತಿ ತೋರಿಸುವಂತಹ ಸ್ವಭಾವ ಇರಬಾರದು. ಯಾವುದಕ್ಕೂ ಅದೃಷ್ಟ ಚೆನ್ನಾಗಿರಬೇಕು. ನಮ್ಮ ಹಣೆಬರಹದಲ್ಲಿ ಏನು ಬರೆದಿದೆಯೋ ಅದೇ ನಮ್ಮ ಅದೃಷ್ಟದ ಪರೀಕ್ಷೆಯೆಂದು ಸಹಿಸಬೇಕು" ನೂರ್ ಜಹಾನ್ ಳ ಮನದಾಳದಲ್ಲಿ ನೂರೊಂದು ಆಲೋಚನೆಗಳು ಕಾಡತೊಡಗಿತ್ತು.
ಹೆಂಗಸರೆಲ್ಲ ಒಂದೊಂದೇ ಕಷ್ಟಸುಖಗಳನ್ನು ಮಾತನಾಡುವಲ್ಲಿ ಮಗ್ನರಾದರು. "ಅದೆಲ್ಲ ಸರಿ ಹಾಗಾದರೆ ನಾವು ಹುಡುಗಿಯನ್ನು ನೋಡೋಣವೇ..?" ಸಾಜಿದಾಳ ಉತ್ಸಾಹದ ಮಾತು ಕೇಳಿ ನೂರ್ ಜಹಾನ್ ಕೋಣೆಯಿಂದ ನಿರ್ಗಮಿಸಿದಳು. "ಅಲ್ಲಾಹುವೇ, ಈ ಸಂಬಂಧ ಕೂಡಿಬರಲಿ. ಇಂತಹ ಮನೆತನದವರು ನನ್ನ ಮಗಳಿಗೆ ಸಿಕ್ಕಿದಲ್ಲಿ ನನ್ನ ಭಾಗ್ಯವೇ ! ಅವರು ಬೇಡವೆಂದು ಹೇಳುವ ಸ್ಥಿತಿಗೆ ಬರಬಾರದು. ಅವರು ನನ್ನ ಮಗಳನ್ನು ಒಪ್ಪಿಕೊಳ್ಳುವಂತೆ ಮಾಡು ನಾಥಾ !" ಎನ್ನುತ್ತಾ ಹಲವು ಅಂಬಿಯಾಗಳ ಮೇಲೆ ಹರಕೆ ಮಾಡುತ್ತಾ ನಬೀಸುಮ್ಮ ಮನದಲ್ಲೇ ಪ್ರಾರ್ಥಿಸತೊಡಗಿದಳು...
ಇತ್ತ ನೂರ್ ಜಹಾನ್ ಹಫ್ಸಾಳ ಕೋಣೆಯೊಳಗೆ ಪ್ರವೇಶಿಸಿದಳು....
ನೂರ್ ಜಹಾನ್ ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ ಹಫ್ಸಾಳ ಮುಖದಲ್ಲಿ ಹೆದರಿಕೆಯಿಂದ ಬೆವರಿಳಿಯುತ್ತಿತ್ತು. ವೀಲ್ ಚೇರ್ ನಲ್ಲಿ ಕುಳಿತಿದ್ದ ಹಫ್ಸ ಗಂಟಳೊಳಗಿಂದ...., "ಅ.. ಅತ್ತಿಗೆ, ಅವರು ನನ್ನನ್ನು ಒಪ್ಪಿಕೊಳ್ಳುವರು ತಾನೇ ? ಎಲ್ಲವೂ ಸರಿ, ಹುಡುಗಿ ಅಂಗವಿಕಲೆ, ಅವಳ ಕಾಲು ಬಲಹೀನವಿಲ್ಲ ಎಂದು ಬಿಟ್ಟು ಹೋಗುವರೋ..? ಇದಕ್ಕೆ ಮುಂಚೆಯೂ ಬಂದ ಹತ್ತಾರು ಸಂಬಂಧಗಳೂ ಹೀಗೆ ಮುರಿದು ಬಿದ್ದಂತೆ !
ಹಫ್ಸಾಳ ಕರುಳುಕಿತ್ತು ಬರುವ ಮಾತು ಕೇಳಿ ನೂರ್ ಜಹಾನ್ ಳ ಕಣ್ಣುಗಳಲ್ಲಿ ತನ್ನಿಂತಾನೇ ಕಣ್ಣೀರು ಬರತೊಡಗಿತು.. "ಇದು ನನ್ನ ಕೊನೆಯ ಆಸೆ. ಇದೂ ಕೂಡ ತಪ್ಪಿ ಹೋದಲ್ಲಿ ಮುಂದಿನ ಹುಡುಗನ ಮುಂದೆ ನಿಲ್ಲುವ ಮುಂಚೆ ಈ ಶರೀರ ಮಣ್ಣಾಗಲಿದೆ. ನನ್ನ ಶರೀರ ಭೂಮಿಗೂ ಕೂಡ ಭಾರವಾಗಿರುವಾಗ ಈ ವೀಲ್ ಚೇರ್ ಮೇಲೆ ಇನ್ನೆಷ್ಟು ಜೀವನ ಸಾಗಿಸಲಿ..? ನನಗೂ ಒಂದು ಹೃದಯವಿದೆ ತಾನೇ ? ಈ ಸಣ್ಣ ಹೃದಯ ಎಷ್ಟು ನೋವು ತಡೆದುಕೊಳ್ಳಲು ಸಾಧ್ಯ? ಖಂಡಿತವಾಗಿಯೂ ನನಗೆ ಈ ಜೀವನದ ಮೇಲೆ ಆಸೆಯೇ ಇಲ್ಲ. ಇದು ಕೂಡ ಮುರಿದು ಹೋದಲ್ಲಿ ಖಂಡಿತವಾಗಿಯೂ ನಾನು ಬದುಕಿರಲಾರೆ.!" ಅವಳ ನೋವಿನ ಮಾತುಗಳನ್ನು ಕೇಳುತ್ತಾ ನೂರ್ ಜಹಾನ್ "ಯಾ ಅಲ್ಲಾಹ್, ಕರುಣಿಸು" ಎಂದು ಮನದಲ್ಲೇ ಮತ್ತೊಮ್ಮೆ ಪ್ರಾರ್ಥಿಸಿದಳು..
"ಸುಮ್ಮನಿರು ಹಫ್ಸಾ, ಏನೂಂತ ಹೇಳ್ತಿದ್ದೀಯ..? ಎಲ್ಲವೂ ಸರಿಹೋಗುತ್ತೆ. ನೀನು ನಿಷ್ಚಿಂತೆಯಿಂದಿರು. ಖಂಡಿತವಾಗಿಯೂ ಈ ಸಂಬಂಧ ಕುದುರಲಿದೆ. ಬಂದವರೆಲ್ಲರೂ ಶ್ರೀಮಂತರಾದರೂ ಅದಕ್ಕಿಂತಲೂ ಅತ್ಯುತ್ತಮ ಅವರ ನಿಷ್ಕಳಂಕ ಮನಸ್ಸು ! ನೀನು ಕಣ್ಣೀರು ಒರೆಸಿಕೋ." ನೂರ್ ಜಹಾನ್ ಳ ಆಶ್ವಾಸನೆಯ ಮಾತುಕೇಳಿ ಹಫ್ಸಾಳಿಗೂ ಸ್ವಲ್ಪ ಸಮಾಧಾನವಾಯಿತು. ಅವಳ ಮುಖವನ್ನೆಲ್ಲಾ ಸವರಿ "ಅಲ್ಲಾಹು ಕಾಪಾಡುತ್ತಾನೆ" ಎನ್ನುತ್ತಾ ನೂರ್ ಜಹಾನ್ ಅವಳ ವೀಲ್ ಚೇರ್ ತಳ್ಳಿಕೊಂಡು ಹೆಂಗಸರ ಕಡೆಗೆ ಮುನ್ನಡೆದಳು..
ನಾಚಿಕೆಯಿಂದ ಮುಗುಳ್ನಕ್ಕು ತಮ್ಮೆಡೆಗೆ ಬರುತ್ತಾಳೆಂದು ಕಾತರದಿಂದ ಕಾಯುತ್ತಿದ್ದ ಅತಿಥಿಗಳಿಗೆ, ನೂರ್ ಜಹಾನ್ ಳ ಸಹಾಯದಿಂದ ವೀಲ್ ಚೆಯೆರ್'ನಲ್ಲಿ ಕುಳಿತುಕೊಂಡು ದೂರದಿಂದಲೇ ಅಪ್ಸರೆಯಾಗಿ ಕಾಣುತ್ತಿದ್ದು, ಬರುತ್ತಿದ್ದವಳ ಮುಖದ ಆವರಿಸಿದ್ದ ಭಯವನ್ನು, ಎಂತಹ ಕಲ್ಲುಮನಸ್ಸನ್ನೂ ನೀರಾಗಿಸುವ ಅವಳ ದಯನೀಯ ಸ್ಥಿತಿಯನ್ನು ಕಂಡರೆ ಅವಳು ಅಂಗವಿಕಲತೆಯೆಂದು ಯಾರೂ ಊಹಿಸಲಿಕ್ಕಿಲ್ಲ..
ಅತಿಥಿಗಳನ್ನು ಸಮೀಪಿಸಿದ್ದಂತೆಯೇ "ಅಸ್ಸಲಾಮು ಅಲೈಕುಂ" ಎಂದು ಸಣ್ಣ ಮುಗುಳ್ನಗೆಯೊಂದಿಗೆ ಹಫ್ಸ ಬಂದವರಿಗೆ ಸಲಾಂ ಹೇಳಿದಳು. ಪ್ರೀತಿಯಿಂದ ತಬ್ಬಿಕೊಂಡು ಶಾಜಹಾನ್ ನ ತಾಯಿ ಅವಳ ಎರಡೂ ಕೈಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು "ನನ್ನ ಸಣ್ಣ ಸೊಸೆ ಎಷ್ಟೊಂದು ಸುಂದರ.." ಆ ಒಂದು ಮಾತಿನಲ್ಲಿ ಹಫ್ಸ, ನೂರ್ ಜಹಾನ್, ನಬೀಸುಮ್ಮ ಎಲ್ಲರ ಪ್ರಶ್ನೆಗೂ ಉತ್ತರ ಸಿಕ್ಕಿತ್ತು. ಎಲ್ಲರ ಕಣ್ಣಲ್ಲೂ ಆನಂದಬಾಷ್ಪ ಸುರಿಯತೊಡಗಿತ್ತು. ಅಲ್ ಹಂದುಲಿಲ್ಲಾಹ್ ! ಬರುತ್ತಿರುವ ಆನಂದಭಾಷ್ಪದ ಕಣ್ಣೀರನ್ನು ಒರೆಸುತ್ತಾ ನೂರ್ ಜಹಾನ್ ಮನದಲ್ಲೇ ಧನ್ಯವಾದವನ್ನರ್ಪಿಸಿದಳು...
"ತಾನು ಕಾಣುತ್ತಿರುವುದು ಕನಸಲ್ಲ ತಾನೇ ?" ಹಫ್ಸ ತನ್ನ ಬೆರಳಿನಿಂದ ಮತ್ತೊಂದು ಕೈಗೆ ಮೆಲ್ಲನೆ ಚಿವುಟಿಕೊಂಡಳು...
ಹೊರಗೆ ಎಲ್ಲರೂ ಏನೆಲ್ಲಾ ಮಾತಾಡಿಕೊಂಡಿರುವಾಗಲೂ ಮುನೀರ್ ನ ಕಿವಿ ಮತ್ತು ಕಣ್ಣು ಹೆಂಗಸರ ಕಡೆಯಿಂದ ಸುವಾರ್ತೆಯ ನಿರೀಕ್ಷೆಯಲ್ಲಿದ್ದನು. ಅವನ ಮನಸ್ಸಿನಾಳದಲ್ಲಿ ಒಂದೇ ಪ್ರಶ್ನೆ ಏನಾಗುವುದೋ ? ಅವನ ಕಣ್ಣು ಕಾತರದಿಂದ ಕಾಯುತ್ತಲಿತ್ತು.....
ಹುಡುಗನ ಕಡೆಯವರ ಒಪ್ಪಿಗೆಗಾಗಿ ಮುನೀರ್'ನ ಕಣ್ಣುಗಳು ಕಾತರದಿಂದ ಕಾಯುತ್ತಲಿತ್ತು...
"ಹಾಗಾದರೆ ಶಾಜಹಾನ್ ನನ್ನು ಒಳಗೆ ಬರಲು ಹೇಳುತ್ತೇನೆಂದು ಹೇಳುತ್ತಾ ಸಾಜಿದಾ ವರಾಂಗಣಕ್ಕೆ ಕಾಲಿಟ್ಟಳು."
ತಟ್ಟನೆ ಗಂಡಸರಲ್ಲಿದ್ದಲ್ಲಿಗೆ ಸಾಜಿದಾಳ ಆಗಮನದಿಂದ ಮುನೀರ್ ನ ಹೃದಯಬಡಿತ ಇನ್ನಷ್ಟು ಜೋರಾಗ ತೊಡಗಿತು.. ! ಮುನೀರ್ ನ ಮುಖಭಾವ ಕಂಡು ಸಾಜಿದಾಳಿಗೂ ತನ್ನ ನಗುವನ್ನು ತಡೆಯಲಾಗಲಿಲ್ಲ. ಶಾಜಹಾನ್ ನ ಕೈ ಹಿಡಿಯುತ್ತಾ.. "ಬಾ, ಒಳಗೆ ಹೋಗೋಣ ! ಬಹಳ ಸುಂದರಿಯಾಗಿದ್ದಾಳೆ ನಿನ್ನ ಹುಡುಗಿ. ನಿನಗೆ ಹೇಳಿ ಮಾಡಿಸಿದ ಜೋಡಿ. ಇಷ್ಟು ಸುಂದರವಾದ ಹುಡುಗಿ ಸುತ್ತಮುತ್ತಲೂ ನಾನು ಎಲ್ಲು ಕಂಡಿದ್ದಿಲ್ಲ."ಎನ್ನುತ್ತ ಸಾಜಿದ ಶಹಾಜಾನ್'ನ ಕೈಹಿಡಿಯುತ ಹಫ್ಸಾಳ ಕೋಣೆಯೊಳಗೆ ಕರೆದುಕೊಂಡು ಹೋದಳು.
ಮುನೀರ್ ನ ಮನದಲ್ಲೇಕೋ ಸಣ್ಣ ಆಶ್ವಾಸನೆಯೊಂದು ಮೊಳಗಿತು. ಬಹುಶಃ ಹಫ್ಸ ಅವರಿಗೆ ಇಷ್ಟವಾಗಿರಬಹುದು. ಏಕೆಂದರೆ ಇಷ್ಟರವರೆಗೆ ಬಂದ ಹೆಂಗಸರು ಯಾರೂ ಕೂಡ ಹುಡುಗನನ್ನು ಒಳಗೆ ಕರೆದಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ವಾಪಸು ಹಿಂದಿರುಗಿದ್ದರು. ಬಂದವರೆಲ್ಲರೂ ಅಂಗವಿಕಲತೆಯುಳ್ಳವಳು ನಮ್ಮ ಮನೆಗೆ ಸೊಸೆಯಾಗಿ ಬರುವುದೇ? ಬೇಡವೇ ಬೇಡ ಎಂದು ಹೇಳಿದವರೇ ಹೆಚ್ಚು..! (ಮುನೀರ್ ಗೆ ಹಿಂದಿನ ಕಹಿನೆನಪುಗಳು ಒಂದೊಂದಾಗಿ ಮನಸ್ಸೊಳಗೆ ಕಾಡತೊಡಗಿತ್ತು..) "ಏನೇ ಆಗಿರಲಿ ಅಲ್ಲಾಹುವೇ, ನೀನೇ ಎಲ್ಲವನ್ನೂ ಕಾಪಾಡು.." ಎನ್ನುತ್ತಾ ಪ್ರಾರ್ಥಿಸಿದನು ಮುನೀರ್ ! ಮುನೀರ್ ಮತ್ತು ಶಾಹಿದ್ ಇಬ್ಬರೂ ಕೂಡ ಶಾಜಹಾನ್ ನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದರು...
"ಹೋಗು, ರೂಮಿನೊಳಗೆ ಹೋಗಿ ಹುಡುಗಿನ ನೋಡ್ಕೊಂಡು ಬಾ , ನಾವೆಲ್ಲಾ ನೋಡಿದ್ದಾಯ್ತು."ಸಾಜಿದಾಳ ಮಾತು ಕೇಳುತ್ತಾ ಸ್ವಲ್ಪ ಮುಜುಗರದಿಂದಲೇ ಹಫ್ಸಾಳ ಕೋಣೆಯೊಳಗೆ ಮೆಲ್ಲನೆ ಹೆಜ್ಜೆಯಿಟ್ಟ ಶಾಜಹಾನ್. "ಸುಂದರವಾದ ಮೈಕಟ್ಟು, ಮುಖದ ಗುಳಿಕೆನ್ನೆಯೆಲ್ಲಿ ಬೀರುವ ಮಂದಹಾಸದ ನಗು, ರಬ್ಬೇ ಇವನೇ ನನ್ನ ಮನೆಯ ಅಳಿಯನಾಗಲಿ.." ಆ ಕ್ಷಣದಲ್ಲಾಗಿತ್ತು ನಬೀಸುಮ್ಮಳ ದುಃಅ....
ಇದೋ ಇವನೇ ನನ್ನ ತಮ್ಮ ಹಾಗೂ ನಿನ್ನನ್ನು ಮದುವೆಯಾಗಲಿರುವ ಶಾಜಹಾನ್ ಎನ್ನುತ್ತಾ ಸಾಜಿದ ಹಫ್ಸ ಕುಳಿತಿದ್ದ ವೀಲ್ ಚೇರ್ ನ ಮುಂದೆಯೇ ತಂದು ನಿಲ್ಲಿಸಿದಳು. ನಾಚಿಕೆಯೋ, ಗಾಬರಿಯೋ ಎಂಬ ಅವಸ್ಥೆ ಹಫ್ಸಳದ್ದು ! ಶರೀರವಿಡೀ ಕ್ಷಣ ಕ್ಷಣಕ್ಕು ಕಂಪನ. ಹೃದಯಬಡಿತ ಜೋರಾಗಿ ಮೈಯೆಲ್ಲಾ ಬೆವರಿಳಿಯುತ್ತಾ ಕಿಂಚಿತ್ತೂ ಅಲುಗಾಡದೆ ಎದೆಯ ಮೇಲೆ ಕೈಯಿಟ್ಟು ಮನದಲ್ಲೇ ಪ್ರಾರ್ಥಿಸಿದಳು..
"ಹಫ್ಸ ಹೇಳಿದಂತೆ ಅವಳ ಈ ಸಂಬಂಧ ಮುರಿದರೆ ಜೀವಸಹಿತ ನಾನಿರಲಾರೆ ಎಂದು ಹೇಳಿದ ಆ ಮಾತು ಈಗಲೂ ನನ್ನ ಕಿವಿಯಲ್ಲಿ ಸುಯ್ಯ್ ಗುಟ್ಟುತ್ತಿದೆ. ಅವಳ ನೋವು ನನ್ನಿಂದ ನೋಡಲಾಗದು. ಇಬ್ಬರ ಮನಸ್ಸೂ ಒಂದು ಸೇರುವಂತೆ ಮಾಡು ಯಾ ಅಲ್ಲಾಹ್" ನೂರ್ ಜಹಾನ್ ಮತ್ತೊಮ್ಮೆ ಮನದಾಳದಿಂದ ಹಫ್ಸಳಿಗಾಗಿ ದುಃಅ ಮಾಡಿದಳು. ಇಂತಹ ದುಃಅ ಹಿಂದೆಂದೂ ನೂರ್ ಜಹಾನ್ ಮಾಡಿರಲಿಲ್ಲ. ಅದೊಂದು ಹೇಳತೀರದಷ್ಟು ಸಂದಿಗ್ದ ಪರಿಸ್ಥಿತಿಯಾಗಿತ್ತದು..
ಕೋಣೆಯೊಳಗೆ ಮೌನಮಯ ವಾತಾವರಣ ! ಶಾಜಹಾನ್ ನ ಕಣ್ಣುಗಳು ಹಫ್ಸಳನ್ನೇ ದಿಟ್ಟಿಸಿ ನೋಡುತ್ತಿತ್ತು. ಏನು ಶಾಜಹಾನ್ ಏನೂ ಕೂಡ ಮಾತಾಡ್ತಾ ಇಲ್ಲವಲ್ಲ ? ಹಫ್ಸ ನಿನಗೆ ಇಷ್ಟವಾದಳು ತಾನೇ ? ಮುಸ್ತಫಾನ ಹೆಂಡತಿ ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಶಾಜಹಾನ್ ಮೌನವಾಗಿದ್ದ. ಈಗಲೂ ಅವನ ದೃಷ್ಟಿ ಹಫ್ಸಳ ಮೇಲೆಯೇ ಹುದುಗಿತ್ತು... "ಮೋನೆ...ಶಾಜು... " ಎಂಬ ಅಮ್ಮನ ವಾತ್ಸಲ್ಲದ ಕರೆಗೆ ನಿದ್ರೆಯಿಂದ ಎದ್ದ ಹಾಗೆ ಅಮ್ಮನ ಕಡೆಗೆ ಶಾಜಹಾನ್ ತನ್ನ ಮುಖವನ್ನು ತಿರುಗಿಸಿದ......
"ಮೋನೆ ಶಾಜು..."ಎಂಬ ಅಮ್ಮನ ವಾತ್ಸಲ್ಯ ಭರಿತ ಕರೆಗೆ ನಿದ್ರೆಯಿಂದ ಎದ್ದ ಹಾಗೆ ಅಮ್ಮನ ಕಡೆಗೆ ಶಾಜಹಾನ್ ತನ್ನ ಮುಖವನ್ನು ತಿರುಗಿಸಿ ನೋಡಿದ..
ಮುಖದಲ್ಲೇನೋ ಒಂಥರಾ ವಿಷಾಧ ಮನೋಭಾವನೆ ! ಆ ಕ್ಷಣದಲ್ಲಿ ಮೂರು ಹೃದಯಗಳು ಮಾತ್ರ ಶಾಜಹಾನ್ ನ ಉತ್ತರಕ್ಕಾಗಿ ಚಡಪಡಿಸುತ್ತಿದ್ದವು. ಒಂದು ಕಡೆ ನಬೀಸುಮ್ಮಳ ಝಿಕ್ರ್ ಗಳನ್ನು ಪಠಿಸುತ್ತಿದ್ದರೆ, ನಿಂತಲ್ಲಿಯೇ ನಾನು ಕುಸಿದು ಬೀಳುತ್ತೇನೋ ಎಂಬಂತೆ ಭಾಸವಾಗುತ್ತಿತ್ತು ನೂರ್ ಜಹಾನ್ ಳಿಗೆ... ಮತ್ತೆ ಹಫ್ಸಾಳ ಆತಂಕವಂತೂ ಮೈಕಿವಿಯೆಲ್ಲಾ ಒಟ್ಟಾಗಿಸಿ ಎದುರುತ್ತರದ ನಿರೀಕ್ಷೆಯಲ್ಲಿ ಕಣ್ಣುಗಳನ್ನು ಕೂಡ ಮಿಟುಕಿಸದೆ ತದೇಕಚಿತ್ತದಿಂದ ಬಂದ ಅತಿಥಿಗಳನ್ನೇ ದಿಟ್ಟಿಸುತ್ತಿದ್ದವು....
ಹಫ್ಸ ದೈನ್ಯತೆಯಿಂದ ಶಾಜಹನ್ ನ ಮುಖವನ್ನೊಮ್ಮೆ ನೋಡಿದಳು. ಅವನ ಮುಖವನ್ನು ಕಂಡಾಗಲಂತೂ ಹಫ್ಸಳ ಆತಂಕ ಮತ್ತಷ್ಟು ಹೆಚ್ಚಾಗತೊಡಗಿತು. ಶಾಜಹಾನ್ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಕೂಡ ಇರದೇ, ಮುಖದಲ್ಲೇಕೋ ಒಂದು ವಿಷಾದತೆಯನ್ನು ತೋರ್ಪಡಿಸುವಂತಹ ಹಾವಭಾವ....
"ಶಾಜು....."ಎನ್ನುತ್ತಾ ಅವನ ಭುಜದ ಮೇಲೆ ಕೈಯಿಟ್ಟ ಸಾಜಿದ.. "ನಿನಗೆ ಹುಡುಗಿ ಇಷ್ಟವಾದಳು ತಾನೇ? ಮತ್ತೇಕೆ ಆಕಾಶ ಕಳಚಿಬಿದ್ದಂತೆ ಆಲೋಚಿಸುತ್ತಿದ್ದೀಯ..! ಅವಸರವೇನೂ ಇಲ್ಲ. ಈಗ ನಿನಗೆ ಏನಾದರೂ ಮುಜುಗರವಾಗಿದ್ದಲ್ಲಿ ಆಮೇಲೂ ಯೋಚಿಸಿ ಹೇಳಬಹುದು.. ಯಾವುದಕ್ಕು ಕಸಿವಿಸಿಗೊಳ್ಳಬೇಡ.." ಸಾಜಿದ ಅವನ ಕಿವಿಯಲ್ಲೊಮ್ಮೆ ಮೆಲ್ಲನೆ ಹೇಳಿದಳು. ಆದರೂ ಶಾಜಹಾನ್ ಏನೂ ಮರುತ್ತರ ನೀಡದೆ ನೆಲವನ್ನೇ ನೋಡುತ್ತಾ ನಿಂತಿದ್ದ. ಸೂಜಿ ಬಿದ್ದರೂ ಕೇಳಿಸದಂತಹ ನಿಶ್ಯಬ್ಧ ವಾತಾವರಣ ಆ ಕೋಣೆಯೊಳಗಿತ್ತು.
ಎಲ್ಲರ ನಿರೀಕ್ಷೆ ಹುಸಿಯಾಗಿತ್ತು. ಏನೂ ಪ್ರತಿಕ್ರಯಿಸದ ಶಾಜಹಾನ್ ನೇರವಾಗಿ ಗಂಡಸರಿದ್ದಲ್ಲಿಗೆ ಧಾವಿಸಿದನು. "ಯಾ ರಬ್ಬೇ..."ನಬೀಸುಮ್ಮಳ ತನ್ನ ಬಾಯಿಂದ ಆ ಮಾತು ಹೊರಗೆ ಬಿತ್ತು. "ಯಾ ಅಲ್ಲಾಹ್, ಎಲ್ಲವೂ ನಷ್ಟವಾಯಿತೋ ? ನಮ್ಮ ಆಸೆಗೆ ತಣ್ಣೀರು ಎರಚಿತೋ? ಇಷ್ಟೆಲ್ಲಾ ಸಾಲಮೂಲ ಮಾಡಿಕೊಂಡು ಬಹಳ ನಿರೀಕ್ಷೆಯನ್ನಿಟ್ಟುಕೊಂಡು ಇನ್ನೇನು ಮದುವೆ ಆಗೋದು ಮಾತ್ರ ಬಾಕಿಯಿರೋದು! ಕೊನೆಯ ಹಂತಕ್ಕೆ ತಲುಪಿತಲ್ಲ.." ಎನ್ನುವ ಅಭಿಲಾಷೆಯಿಂದಿದ್ದ ನೂರ್ ಜಹಾನ್ ಮುಖದಲ್ಲೂ ಭಯ ಆವರಿಸಿತು. ಆತಂಕದಿಂದಲೇ ಅವಳು ಹಫ್ಸಳ ಮುಖವನ್ನೊಮ್ಮೆ ನೋಡಿದಳು. ಇನ್ನೇನೂ ಕಣ್ಣೀರ ಕೋಡಿ ಹರಿಯುವುದಷ್ಟೇ ಬಾಕಿ ! ಹಫ್ಸಳ ತುಟಿಗಳು ತೊದಲುತ್ತಿತ್ತು. ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಿತ್ತು ಅವಳ ಪರಿಸ್ಥಿತಿ.. ಇನ್ನೇನು ಬಿಕ್ಕಿ ಬಿಕ್ಕಿ ಅಳುವುದೊಂದೇ ಬಾಕಿ ! ಅಷ್ಟರಲ್ಲಿ ಅವಸರದಿಂದ ಮುನೀರ್ ತಟ್ಟನೆ ಅವರ ಕೋಣೆಯೊಳಗೆ ಪ್ರವೇಶಿಸಿದ... ನೂರ್ ಜಹಾನ್ ಖೇದಕರ ಭಾವನೆಯಿಂದ ಅವನನ್ನೇ ದಿಟ್ಟಿಸಿದಳು....
"ಮುನೀರ್ ಬಂದದ್ದಾದರೂ ಏಕೆ ? ಶಾಜಹಾನ್ ಮದುವೆಗೆ ಒಪ್ಪಿಗೆ ನೀಡಿದ್ದಾನೆಯೇ, ಅಥವಾ ಎಲ್ಲರಂತೆ ಅವನೂ ಕೂಡ ನಿರಾಕರಿಸಿದ್ದಾನೆಯೇ? ಎಲ್ಲರ ಕಣ್ಣು ಮುನೀರ್ ನನ್ನೇ ನೋಡುತ್ತಲಿತ್ತು...."
ಮುನೀರ್ ಒಂದು ಕ್ಷಣ ಮಂದಹಾಸದ ನಗುಬೀರುತ.. ಶಾಜಹಾನ್ ಸಮ್ಮತಿ ನೀಡಿದ್ದಾನೆ" ಹೇಳಿದ್ದೇ ತಡ, ಕೋಣೆಯೊಳಗಿದ್ದವರೆಲ್ಲರಿಗೂ ಎಲ್ಲಿಲ್ಲದ ಸಂತೋಷ.. ಹಫ್ಸಳಂತೂ ತನ್ನ ಲಭಿಸಿದ ಈ ಸೌಭಾಗ್ಯಕ್ಕೆ ಹರ್ಷಪುಳಕಿತಳಾದಳು. ಅಲ್ ಹಮ್ದುಲಿಲ್ಲಾಹ್ ! ಚಡಪಡಿಸುತ್ತಿದ್ದ ಮೂರೂ ಹೃದಯಗಳು ಅಲ್ಲಾಹನನ್ನು ಆ ಕ್ಷಣದಲ್ಲಿ ಸ್ತುತಿಸಿದವು. "ಶಾಜಹಾನ್ ಗೆ ಹಫ್ಸಳೊಂದಿಗೆ ಏಕಾಂತದಲ್ಲೊಮ್ಮೆ ಮಾತನಾಡಬೇಕಂತೆ"ಮುಗುಳ್ನಗುತ್ತಲೇ ಮುನೀರ್ ಹೇಳಿದಾಗಲೇ ಕೋಣೆಯೊಳಗಿದ್ದ ಪ್ರತಿಯೊಬ್ಬರೂ ದೀರ್ಘವಾದ ನಿಟ್ಟುಸಿರು ಬಿಟ್ಟಂತಾಯಿತು.
ಹತ್ತು ವರ್ಷದಲ್ಲಿ ಪಟ್ಪ ಸಂಕಟವೆಲ್ಲವೂ ಒಂದೇ ಮಾತಿನಲ್ಲಿ ನೀಗಿಹೋದ ಹಾಗೆ ಭಾಸವಾಯಿತು ನೂರ್ ಜಹಾನ್ ಳಿಗೆ...! ಹಫ್ಸ ನಾಚಿ ನೀರಾಗಿದ್ದಳು.
"ಹಾಗಾದ್ರೆ ಹಫ್ಸಳನ್ನು ಏಕಾಂತ ರೂಮಿನೊಳಗೆ ಕಳುಹಿಸಿರಿ..."
"ಹೋ, ಅದಕ್ಕೇನಂತೆ ಆ ಕೆಲಸವನ್ನು ನಾವೇ ಮಾಡುತ್ತೇವೆಂದು ಸಫಾ - ಮರ್ವ ಇಬ್ಬರೂ ವೀಲ್ ಚೇರನ್ನು ತಳ್ಳಿಕೊಂಡು ಮತ್ತೊಂದು ಕೋಣೆಯೊಳಗೆ ಕೊಂಡೊಯ್ದರು. ಕೋಣೆಯೊಳಗಿದ್ದ ಶಾಜಹಾನ್ ಹೂ ನಗು.ಬೀರುತ "ಹಫ್ಸ, ಏನು ವಿಶೇಷ ?"
ಹಫ್ಸ ಮರುತ್ತರ ನೀಡಲಿಲ್ಲ. ನಾಚಿಕೆಯಿಂದ ತಲೆತಗ್ಗಿಸಿಕೊಂಡಿದ್ದಳು..
"ಏನು ಮಾಡೋದು ?" ಶಾಜಹಾನ್ ತನ್ನಲ್ಲಿಯೇ ಹೇಳಿಕೊಂಡು ಅತ್ತಿತ್ತ ನೋಡುವಾಗ ಹತ್ತಿರದಲ್ಲಿದ್ದ ಟೇಬಲಿನ ಮೇಲಿದ್ದ ಪುಸ್ತಕವನ್ನು ಕಂಡು ಕೈಗೆತ್ತಿಕೊಂಡನು. ಅವನ ಬದುಕಿನ ದುಃಖಭರಿತ ಘಟನೆಯನ್ನು ಚುರುಕಾಗಿ ಬರೆದು ಹಫ್ಸಳ ಕೈಗಿತ್ತನು.
ಏನಾಯಿತೋ ಗೊತ್ತಿಲ್ಲ. ಪತ್ರವನ್ನು ಓದಿದ ಹಫ್ಸ ನಾಚಿಕೆಯನ್ನು ಬಿಟ್ಟು ಮುಗುಳ್ನಕ್ಕಳು. "ಹೆದರಬೇಡಿ, ನಾನು ಹಾಗೆ ಮಾಡಲ್ಲ. ಯಾರಿಗೂ ಮೋಸ ಮಾಡುವ ಸ್ವಭಾವ ನಮ್ಮ ಕುಟುಂಬದಲ್ಲೇ ಬಂದಿಲ್ಲ. (ಶಾಜಹಾನ್ ನ ಮೊದಲ ವಿವಾಹದ ಬಗ್ಗೆ ಮುನೀರ್ ಮೊದಲೇ ಅವಳಿಗೆ ತಿಳಿಸಿದ್ದನು..) ನಿಮ್ಮ ಈ ಸತ್ಯಕ್ಕೆ ನಾನು ಸೋತುಹೋದೆ. ನಾನು ನಿಮ್ಮೊಡನೆ ವಿವಾಹ ಕೈಗೊಳ್ಳಲು ಸಿದ್ಧಳಾಗಿರುವೆ"
ಶಾಜಹಾನ್ ನ ಆನಂದಕ್ಕೆ ಪಾರವಿರಲಿಲ್ಲ. ಇಬ್ಬರೂ ಕೂಡ ಸ್ನೇಹಿತರಂತೆ ತಮ್ಮ ಮಾತುಗಳನ್ನು ವಿನಿಮಯ ಮಾಡಿಕೊಂಡರು. ಅಷ್ಟರಲ್ಲೇ ಮುಂಬಾಗಿಲನ್ನು ತಳ್ಳಿಕೊಂಡು ಮನೆಯವರೆಲ್ಲರೂ ಆ ಕೋಣೆಗೆ ಪ್ರವೇಶಿಸಿದರು.
ಇಬ್ಬರನ್ನೂ ತಮಾಷೆ ಮಾಡುವುದೇ ಎಲ್ಲರ ಲೆಕ್ಕಾಚಾರವಾಗಿತ್ತು. "ಆಹಾ ! ಏನು ಇಬ್ಬರಿಗೂ ಈಗ ಒಪ್ಪಿಗೆ ತಾನೇ ? ಒಬ್ಬರ ದುಃಖ ಇನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡರೆ ಅದರಷ್ಟು ಸುಖಜೀವನ ಮತ್ತೊಂದಿಲ್ಲ." ತಮ್ಮನ ಮುಖದಲ್ಲಿದ್ದ ಸಂತೋಷವನ್ನು ಕಂಡು ಮುಸ್ತಫ ಹೇಳಿದ ಮಾತಿದು....
" ಗಂಡು, ಹೆಣ್ಣು ಒಪ್ಪಿದ್ಮೇಲೆ ಇನ್ನೇನು, ಮುಂದಿನ ಕಾರ್ಯ ಶೀಘ್ರವಾಗಿ ಮಾಡುವುದೇ ಒಳಿತು ತಾನೇ ?"ಸಾಜಿದಳ ಮಾತಿಗೆ ಶಾಹಿದ್ ಒಳಗೊಳಗೇ ನಸುನಗುತ್ತಾ "ಇವಳೊಂದು ! ಮಕ್ಕಳು ಚಾಕ್ಲೆಟ್ ಕೇಳುವ ಹಾಗೆ ! ಒಂದಿಷ್ಟು ತಾಳ್ಮೆ ಎಂಬುದೇ ಇಲ್ಲ.."
"ಈಗ ಎಲ್ಲರೂ ಊಟ ಮಾಡೋಣವೇ? ಮಾಡಿಟ್ಟ ಅಡುಗೆಯಲ್ಲ ತಣ್ಣಗಾಗುತ್ತಿದೆ." ನೂರ್ ಜಹಾನ್ ಎಲ್ಲರನ್ನೂ ಊಟ ಮಾಡಲು ಆಮಂತ್ರಿಸಿದಳು...
ಎಲ್ಲರೂ ಊಟಕ್ಕಾಗಿ ಲಂಚ್ ಹಾಲ್'ಗೆ ಪ್ರವೇಶಿಸುವಾಗ ಅಲ್ಲೊಂದು ಅಚಾತುರ್ಯ ನಡೆದೇಹೋಯಿತು. ಅದೇನಾಯಿತೋ ಗೊತ್ತಿಲ್ಲ ! ಊಟಕ್ಕೆ ಹೋಗುವ ರಭಸದಲ್ಲಿ ಸಾಜಿದ ಎಲ್ಲರನ್ನೂ ಸ್ವಾಗತಿಸುತ್ತಿದ್ದ ಮುನೀರ್ ನನ್ನು ಒರೆಸಿಕೊಂಡೇ ಮುನ್ನಡೆದಳು.. ಯಾ ಅಲ್ಲಾಹ್ ! ಏನಾಯಿತು ಇವಳಿಗೆ..? ಈ ದೃಶ್ಯವನ್ನು ನನ್ನ ನೂರ್ ಜಹಾನ್ ಕಂಡರೆ.... ಅವಳಂತೂ ತನ್ನ ಪ್ರಾಣವನ್ನೇ ಕಳೆದುಕೊಳ್ಳುವಳು.... ಮೊದಲು ಗಂಡಸರೆಲ್ಲರೂ ಊಟಕ್ಕೆ ಕುಳಿತರು.
"ರೀ ಒಮ್ಮೆ ಒಳಗೆ ಬರುತ್ತೀರಾ....!" ನೂರ್ ಜಹಾನ್ ಳ ಕರೆಗೆ ಓಗೊಟ್ಟ ಮುನೀರ್ ಅಡುಗೆಮನೆಯೊಳಗೆ ಕಾಲಿಟ್ಟನು. ಆ ಕ್ಷಣದಲ್ಲೂ ಸಾಜಿದಾ ಮುನೀರ್ ನನ್ನೇ ದುರುಗುಟ್ಟಿ ನೋಡುತ್ತಿದ್ದಳು.. ( ಉಫ್ ! ಕಾಲವೆಲ್ಲ ಬದಲಾಯ್ತು. ಈಗ ಹೆಣ್ಮಕ್ಕಳಲ್ಲ, ಗಂಡಸರೇ ಹೆಂಗಸರನ್ನು ನೋಡಿ ಭಯ ಪಡುವಂತಾಯಿತಲ್ಲ..) ಮುನೀರ್ ಮನದಲ್ಲೇ ಗುನುಗಿದ. ಅದೆಲ್ಲ ಬದಿಗಿಟ್ಟು ಬಂತಂದಹ ಅತಿಥಿಗಳ ಸೇವೆಯಲ್ಲಿ ಮಗ್ನನಾದ ಮುನೀರ್... ಊಟದ ಬಳಿಕ ಅತಿಥಿಗಳೆಲ್ಲ ಹಿಂದಿರುಗಿದರು..
ಯಾ ಅಲ್ಲಾಹ್ ! ಕೆಲಸ ಮಾಡಿ ಮಾಡಿ ಸುಸ್ತಾಗೋಯ್ತು... ಕಳೆದ ರಾತ್ರಿಯಿಂದ ವಿಶ್ರಾಂತಿ ಎಂಬುದೇ ಇಲ್ಲ. ಇನ್ನು ಪಾತ್ರೆಯೋ ಅಷ್ಟಿಷ್ಟಲ್ಲ. ಜೊತೆಗೆ ನೆರೆಮನೆಯವರಿಂದ ತಂದಿಟ್ಟ ಬಿರಿಯಾನಿಯ ದೊಡ್ಡ ಪಾತ್ರೆ, ಇನ್ನೊಂದು ಮನೆಯಿಂದ ತಂದ ಡಿನ್ನರ್ ಸೆಟ್ ಗಳು ಎಲ್ಲವೂ ಅಡುಗೆಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು..
"ತುಂಬಾ ಜಾಗ್ರತೆಯಿಂದ ಕಿಂಚಿತ್ತೂ ಹಾಳಾಗದಂತೆ ತೊಳೆದುಕೊಡಬೇಕು. ಮುಂದೆಯೂ ಇದರ ಅವಶ್ಯಕತೆ ಬರಬಹುದಲ್ಲವೇ.? ಇದನ್ನು ಇದ್ದ ಹಾಗೆಯೇ ಹಿಂದಿರುಗಿಸಿದರೆ ತಾನೇ ಮತ್ತೊಮ್ಮೆ ನೆರೆಯವರು ಕೊಡುವುದು ? ಎಲ್ಲವೂ ದುಬಾರಿ ಪಾತ್ರೆಗಳು. ಒಡೆದು ಹೋಗದಂತೆ ನೋಡಿಕೋ... ಕೊಡುವಾಗಲೇ ಪಕ್ಕದ ಮನೆಯ ಮೈಮುನಾ "ಜಾಗ್ರತೆಯಿಂದ ಹಿಂದಿರುಗಿಸಬೇಕೆಂದು ಎಚ್ಚರಿಕೆ ಕೊಟ್ಟಿದ್ದಾರೆ.."*ಏನು ಮಾಡೋದು ? ಅವಳ ಮುಖ ಕೂಡ ನೋಡಲು ಇಷ್ಟವಿಲ್ಲದ ನನಗೆ ಅತಿಥಿ ಸತ್ಕಾರ ಮಾಡಲೋಸ್ಕರ ಅವನ ಅವಶ್ಯಕತೆ ಎದುರಾಗಿತ್ತಷ್ಟೆ.. ಎಲ್ಲವೂ ಹಫ್ಸಳಿಗಾಗಿ ಮಾತ್ರ ಸಹಿಸುತ್ತಿದ್ದೇನೆ.." ಟಿವಿಯಲ್ಲಂತೂ ಒಂದು ಬಾರಿಗೆ ಪಾತ್ರೆ ತೊಳೆದಾಗ ಫಳಫಳ ಹೊಳೆಯುವಂತೆ ಇಷ್ಟು ಬಾರಿ ಉಜ್ಜಿ ಉಜ್ಜಿ ತೊಳೆದರೂ ಫಳಫಳ ಹೊಳೆಯುವುದು ಬಿಡಿ, ಅಂಟಿಕೊಂಡ ಮಸಿ ಕೂಡ ಹೋಗುತ್ತಿಲ್ಲ. ಈ ಪ್ರಪಂಚದಲ್ಲಿ ಎಲ್ಲವೂ ಮೋಸದಾಟ ! ನನ್ನ ಪ್ರೀತಿಯ ಪಾತ್ರೆಗಳೇ, ತಿಕ್ಕಿ ತಿಕ್ಕಿ ನನ್ನ ಕೈ ಕೂಡ ನೋವಾಗ್ತಿದೆ. ನಿನ್ನ ಯಜಮಾನಿ ನಿನ್ನನ್ನು ಚೆನ್ನಾಗಿ ತೊಳೆದುಕೊಡಬೇಕೆಂದು ಕೂಡ ಆಜ್ಞೆ ಮಾಡಿದ್ದಾಳೆ. ಸುಮ್ಮನೆ ನನಗೆ ಕೋಪ ಬರಿಸಬೇಡಿ" ಎಂದು ನೂರ್ ಜಹಾನ್ ಪಾತ್ರೆ ತೊಳೆದುಕೊಂಡೇ ಅವಳಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದಳು....
ಆಹಾ ! ಸುಂದರ ಅತೀ ಸುಂದರ ! ಈಗ ನೋಡಿ ಹೇಗೆ ಹೊಳೆಯುತ್ತಿದ್ದೀರಾ? ನಿಮ್ಮ ಯಜಮಾನಿ ಕೂಡ ಇಷ್ಟು ಚೆನ್ನಾಗಿ ನಿಮ್ಮನ್ನು ತೊಳೆದಿರಿಲಿಕ್ಕಿಲ್ಲ. ಕೈಯಲ್ಲಿದ್ದ ಚೊಂಬೊಂದನ್ನು ಹಿಡಿದುಕೊಂಡೇ ಮುಗುಳ್ನಕ್ಕಳು. ಪಾತ್ರೆ ತೊಳೆದಾಯಿತು. ಎಲ್ಲವನ್ನೂ ಕಾಟನ್ ಬಟ್ಟೆಯೊಂದರಲ್ಲಿ ಒರೆಸುತ್ತಾ, "ಮಕ್ಕಳೇ, ನಿಮ್ಮನ್ನು ನಾನು ಮರೆತೆನೆಂದು ಭಾವಿಸಬೇಡಿ. ಇದೋ ಈ ನೆರೆಮನೆಯವರ ಪಾತ್ರೆಗಳನ್ನು ಹಿಂದಿರುಗಿಸಿ, ನಿಮ್ಮನ್ನು ವಿಚಾರಿಸುತ್ತೇನೆಂದು.."
ಅಡುಗೆ ಮನೆಯ ವಾಶ್ ಬೇಸಿನ್'ನಲ್ಲಿ ಬಿದ್ದಿದ್ದ ಹಳೆಯ ಪಾತ್ರೆಗಳತ್ತ ಕಣ್ಣಾಡಿಸಿದಳು ನೂರ್ ಜಹಾನ್..
ನೂರ್ ಜಹಾನ್ ಆ ಮನೆಗೆ ಮದುವೆಯಾಗಿ ಕಾದಿಟ್ಟ ಮರುದಿನವೇ ಅತ್ತೆ ನಬೀಸುಮ್ಮ ಮತ್ತೆ ಆ ಅಡುಗೆಮನೆಯೊಳಗೆ ತಪ್ಪಿಯೂ ನೋಡಿರಲಿಕ್ಕಿಲ್ಲ. ಏನಿದ್ದರೂ ನೂರ್ ಜಹಾನ್ ಳೆ ಈಗ ಅಡುಗೆಮನೆಯ ಒಡತಿಯಾಗಿದ್ದಳು. ಬೆಳಿಗ್ಗಿನ ನಮಾಝ್ ಮುಗಿಸಿ ಅಡುಗೆಮನೆ ಪ್ರವೇಶಿಸುವ ನೂರ್ ಜಹಾನ್ ರಾತ್ರಿ ಹಾಸಿಗೆಗೆ ಮರಳುವವರೆಗೂ ಅಡುಗೆಮನೆಯ ಕೆಲಸವಂತೂ ಮುಗಿದಿರುವುದಿಲ್ಲ.. ಮೊದಮೊದಲಿಗೆ ಹಫ್ಸ ಸ್ವಲ್ಪವಾದರೂ ಅಡುಗೆಕೋಣೆಗೆ ಬರುತ್ತಿದ್ದಳು.. ವೀಲ್ ಚೇರ್ ನಲ್ಲಿದ್ದುಕೊಂಡೇ ಈರುಳ್ಳಿ ತರಕಾರಿಗಳು ಶುದ್ದೀಕರಿಸುವಲ್ಲಿ ಸಹಾಯ ಮಾಡುತ್ತಿದ್ದರೂ, ಕ್ರಮೆಣ ಅದೂ ಕೂಡ ನಿಂತು ಹೋಗಿತ್ತು.. ಅಡುಗೆಮನೆಯಲ್ಲಿದ್ದಾಗ, ಇಬ್ಬರೂ ಕೂಡ ತಮಾಷೆಯ ಮಾತುಗಳನ್ನಾಡುತ್ತ ತಮ್ಮ ಕೆಲಸಕಾರ್ಯಗಳನ್ನು ಜೊತೆಯಾಗಿ ಮಾಡುತ್ತಿದ್ದ ಸಮಯವೊಂದಿತ್ತು. ತಮಾಷೆಯ ಮಾತುಗಳು ಕಿವಿಗೆ ಬಿತ್ತೆಂದರೆ ಸಾಕು, ನಬೀಸುಮ್ಮ ಕೋಣೆಯೊಳಗಿಂದಲೇ "ಇವಳೋ, ಇವಳದೊಂದು ತಮಾಷೆಯೋ ! ಓಹ್ ಎಂದೂ ಮುಗಿಯದ ಕಥೆ. ಮೋಳೆ ಹಫ್ಸ.., ಅಡುಗೆಮನೆಯಲ್ಲೇನು ನಿಂಗೆ ಕೆಲಸ? ಅಡುಗೆಮನೆಯ ಆ ಬಿಸಿಯಿಂದ ನಿನ್ನ ದೇಹದ ಸಿರಿ ನಷ್ಟವಾಗುವುದಲ್ಲವೇ?"
(ಅಡುಗೆಮನೆಯಿಂದ ಹೊರಡುವ ದಟ್ಟವಾದ ಹೊಗೆಯಿಂದ, ಬಿಸಿಯಿಂದ ತನ್ನ ಮಗಳಿನ ಸೌಂದರ್ಯ ಮಾಸಿಹೋಗುವುದೇನೋ ಎಂಬ ಭಯ ನಬೀಸುಮ್ಮಳಿಗೆ ಗೊತ್ತಿದೆ. ನಾನೂ ಕೂಡ ಒಂದು ತಾಯಿಯ ಮಗಳೆಂದು ಅವರಿಗೆ ಅರಿವಿಲ್ಲವೇ? ನಾನು ಈ ಅಡುಗೆಮನೆಯಲ್ಲಿದ್ದು ಕರಿದು ಹೋಗಬಹುದೆಂಬ ಚಿಂತೆ ಅವರಿಗಿಲ್ಲವಲ್ಲ. ಏನಾದರೂ ಆಗಲಿ, ಅವರ ಮಗ ಮದುವೆಯಾಗಿ ಮನೆಗೆ ಕರೆತಂದ ಹೆಣ್ಣಲ್ಲವೇ ನಾನು ! ನೂರ್ ಜಹಾನ್ ಳ ಮನದಾಳದ ಮಾತುಗಳಿವು..)
ನನ್ನ ಗಂಡ, ನಮ್ಮ ಮನೆಗೆ ಬಂದಾಗ ನನ್ನ ಹೆತ್ತವರು ಅವರಿಗೆ ಕೊಡುವ ಗೌರವ ಅದೆಷ್ಟು ವಿಭಿನ್ನವಾಗಿದೆ. ನಮ್ಮ ಮನೆಯವರಿಗೆ ಅವರೆಂದರೆ ಪಂಚಪ್ರಾಣ. ಅವರು ಅಳಿಯನಲ್ಲ, ಸ್ವಂತ ಮಗನೆಂಬ ಭಾವನೆ ನನ್ನ ತವರುಮನೆಯರಿಗೆ... ಅದ್ಹೇಕೆ ಹಾಗೆ ? ಹೆಣ್ಣಿಗೊಂದು ನ್ಯಾಯ, ಗಂಡಿಗೊಂದು ನ್ಯಾಯ. ಹೆಣ್ಣಿಗೆ ಸಿಗದ ಸ್ನೇಹ, ಸೌಕರ್ಯ, ಗೌರವ ಗಂಡಿಗೆ ಮಾತ್ರ ಸೀಮಿತವೇ? ಯಾಕಿಷ್ಟು ತಾರತಮ್ಯ. ಗಂಡಾಗಲೀ, ಹೆಣ್ಣಾಗಲೀ ಎಲ್ಲವೂ ಅಲ್ಲಾಹು ತಾನೇ ಸೃಷ್ಠಿಸಿದ್ದು ? ಗಂಡು ಕೂಡ ಹೆಣ್ಣಿನ ಗರ್ಭಾಶಯದಲ್ಲೇ ತಾನೇ ಸೃಷ್ಟಿಯಾಗುತ್ತಿರುವಾಗ ಇಂತಹ ಭೇದಭಾವ ಎಲ್ಲಿಂದ ಬರುವುದೋ? ಹೆಣ್ಣಿನ ಗರ್ಭಾಶಯದಿಂದ ತಾನೇ ಗಂಡೋ ಹೆಣ್ಣೋ ಸೃಷ್ಟಿಯಾಗುವುದು? ಅಕಸ್ಮಾತ್ ಹೆಣ್ಣೇ ಈ ಲೋಕದಲ್ಲಿ ಇರದಿದ್ದರೆ....?
ಅಡುಗೆಮನೆಯಲ್ಲಿದ್ದುಕೊಂಡೇ ನೂರ್ ಜಹಾನ್ ಮನದಲ್ಲೇ ಹೇಳಿಕೊಳ್ಳುತ್ತಾ "ಏನು ನನ್ನ ಈ ಮತುಗಳು ನಿಮಗೆಲ್ಲ ಬೋರ್ ಹೊಡೆಯುತ್ತಿರಬೇಕಲ್ವೇ?" ತನ್ನ ಮುಂದಿದ್ದ ಹಳೆಯ ಪಾತ್ರೆಗಳತ್ತ ಕೇಳುತ್ತಿದ್ದ ಪ್ರಶ್ನೆಗಳಿವು...ಸುಸ್ತಾಗೋದೆ ! ಉಫ್ ಸ್ವಲ್ಪವಾದರೂ ಮಲಗೋಣ.
ಇದರೆಡೆಗೆ "ಆಗಾಗ ನೀರು ಕೊಡು, ಟೀ ಕೊಡು"ಎನ್ನುತ್ತಾ ಅಡುಗೆಮನೆಯೊಳಗೆ ಬರುತ್ತಿದ್ದ ನನ್ನ ಯಜಮಾನರು ಇವತ್ತೇಕೆ ಒಂದು ಧ್ವನಿ ಕೂಡ ಎತ್ತುತ್ತಿಲ್ಲವಲ್ಲ ?" ಎಂದು ನೂರ್ ಜಹಾನ್ ರೂಮಿನತ್ತ ನಡೆದಳು.....
ಬಹುಶಃ ಅವರಿಗೆ ಬೆಳಗಿನ ಕೋಪ ಇನ್ನೂ ಮಾಸಿರಲಿಕ್ಕಿಲ್ಲ ಅಂತ ಕಾಣಿಸ್ತದೆ. ಹಾ ! ಗೊತ್ತಾಯ್ತು ಖಂಡಿತವಾಗಿಯೂ ಅದಕ್ಕೇನೆ ಅವರು ಇದುವರೆಗೂ ನನ್ನ ಮುಂದೆ ಬರದೇ ಇರಲು ಕಾರಣ. ಏನೇ ಆದರು, ನನ್ನ ಗಂಡ ತಾನೇ ? "ಗಂಡ ಹೆಂಡಿರ ಜಗಳ ಹಾಸಿಗೆಯ ಮೇಲೆ ಮಲಗುವ ತನಕ ಮಾತ್ರ" ಎಂದು ಹಿರಿಯರು ಹೇಳುತ್ತಾರೆ. ಆದ್ರೂ ಮನೆಯಲ್ಲಿ ಎಷ್ಟೋ ಜಗಳವಾದ್ರೂ ಅಡುಗೆಮನೆಯಲ್ಲಿ ಪಾತ್ರೆ ತೊಳೆಯುವಾಗಳಂತೂ ಸಹಾಯಕ್ಕೆ ಬಂದೇ ಬರ್ತಾರೆ. ಇಂದು ಅದೂ ಕೂಡ ಇಲ್ಲ. ಅತ್ತೆ ನಬೀಸುಮ್ಮರಿಗೆ ಅಡುಗೆಮನೆಯೆಂದ್ರೆ ಅಲರ್ಜಿ ಅನ್ನೋ ರೀತಿಯಲ್ಲಿ ನಟಿಸುವುದರಿಂದ ದಂಪತಿಗಳಿಬ್ಬರೂ ತಮಾಷೆಯ ಮಾತನಾಡುತ್ತಾ ಅಡುಗೆಮನೆಯ ಕೆಲಸಗಳನ್ನೆಲ್ಲಾ ಒಟ್ಟಿಗೆ ಮಾಡುತ್ತಿದ್ದ ಸಂದರ್ಭವನ್ನೊಮ್ಮೆ ನೆನೆಸಿಕೊಂಡಾಗ ನೂರ್ ಜಹಾನ್ ಳಿಗೆ ಕಣ್ಣಿನಲ್ಲಿ ಬರುತ್ತಿದ್ದ ಕಣ್ಣೀರನ್ನು ಒರೆಸುತ್ತಾ "ನಾನು ಕೋಣೆಯೊಳಗೆ ಕಾಲಿಟ್ಟ ಮೇಲೆಯೇ ವಿಷಯ ಏನೂಂತ ವಿಚಾರಿಸಬಹುದು.." ಎಂದೆನಿಸಿಕೊಂಡಳು.
ಬೆಳಿಗ್ಗೆ ಗಂಡನ ಹೊಡೆತದಿಂದ ಉಂಟಾಗಿದ್ದ ನೋವು ಈಗಲೂ ಕಡಿಮೆಯಾಗಿರಲಿಲ್ಲ. ಮನೆಗೆ ಹೆಣ್ಣು ನೋಡಲು ಬಂದಾಗ ಮುಖದ ಮೇಲುಂಟಾಗಿದ್ದ ಗಾಯದ ಕಲೆಯನ್ನು ಯಾರೂ ಕಾಣದ ಹಾಗೆ ಸೆರಗಿನಿಂದ ಮುಚ್ಚಿಕೊಂಡಿದ್ದಳು ನೂರ್ ಜಹಾನ್ !
ತನ್ನ ಕೋಣೆಗೆ ಹೋಗುವ ಮುಂಚೆ.. "ಮೋನೆ ಶಾಹಿದ್, ಪಕ್ಕದ ಮನೆಯವರ ಪಾತ್ರೆಗಳನ್ನೆಲ್ಲ ಕೊಟ್ಟು ಬಂದ್ಬಿಡು. ಎಲ್ಲವೂ ತೊಳೆದು ರೆಡಿಯಾಗಿದೆ" ಪ್ರತ್ಯುತ್ತರವಿಲ್ಲ. ಆದರೆ ಅತ್ತೆ ನಬೀಸುಮ್ಮ "ಮೋನೆ, ತೇನೆ ಅಂದ್ಕೊಂಡು ಅವನ ಹಿಂದೆಯೇ ಸುತ್ತಿದರಾಯ್ತೆ..? ಮನೆಯಲ್ಲಿದ್ದ ಬಾಕಿ ಕೆಲಸ ಮಾಡಬಾರದೇ? ಇವಳೋ, ಇವಳದೊಂದು ನಾಟಕವೋ ಅಲ್ಲಾಹನೇ ಬಲ್ಲ" ಮುಖ ಸಿಂಡರಿಸಿಕೊಂಡು ಹೇಳುತ್ತಿದ್ದ ಆ ಚುಚ್ಚುಮಾತುಗಳು ನೂರ್ ಜಹಾನ್ ಳ ದುಃಖವನ್ನು ಇಮ್ಮಡಿಗೊಳಿಸಿತು.
ಬೆಳಗಿನಿಂದ ಕತ್ತೆಯ ಹಾಗೆ ಅಡುಗೆಮನೆಯಲ್ಲೇ ಬಿದ್ದುಕೊಂಡು ಮಾಡಿದ ಕೆಲಸವೆಲ್ಲ ಇವರ ಕಣ್ಣಿಗೆ ಕಾಣಿಸಲಿಲ್ಲವೇ? ಒಂದು ಗ್ಲಾಸ್ ಕೂಡ ಎತ್ತಿಡಲು ಯಾರೂ ಬರಲಿಲ್ಲ. ಹತ್ತಿಪ್ಪತ್ತು ಜನರಿಗೆ ಬೇಕಾದಷ್ಟು ಆಹಾರವನ್ನು ಒಬ್ಬಳೇ ತಯಾರಿಸಿದ್ದಳು. ಅತಿಥಿಗಳೆಲ್ಲರೂ ಹೋದ ನಂತರವೂ ಅಡುಗೆಮನೆಯಲ್ಲಿದ್ದ ಪಾತ್ರೆಗಳನ್ನೆಲ್ಲ ತೊಳೆದು, ನೆಲವನ್ನೆಲ್ಲ ಶುಚಿಗೊಳಿಸಿ ಮುಗಿಯುವಸ್ಟೊತ್ತಿಗೆ ಅರ್ಧ ಜೀವವೇ ಹೋದಂತಾಯ್ತು. ಒಂದು ಗ್ಲಾಸ್ ಚಹಾ ಕೂಡ ನನ್ನ ಗಂಟಲಿನೊಳಗೆ ಇಳಿದಿಲ್ಲ. ಅದಿರಲಿ, ಮಧ್ಯಾಹ್ನ ಊಟ ಕೂಡ ಸರಿಯಾಗಿ ಮಾಡಿಲ್ಲ. ಎಲ್ಲರೂ ಹೊಟ್ಟೆ ಉಬ್ಬುವಷ್ಟು ತಿಂದು ತೇಗಿದ್ದರೂ, ನಂಗೂ ಹಸಿವಾಗಿರಬಹುದು ಎಂದೂ ಊಹಿಸಲೂ ಕೂಡ ಅಂದು ಆ ಮನೆಯಲ್ಲಿ ಯಾರೂ ಇರಲಿಲ್ಲ.
"ಖಾಲಿ ಅಡುಗೆ ಮಾಡಿದರಾಯ್ತೆ? ಸರಿಯಾಗಿ ತಿನ್ನಲೂ ಕೂಡ ಯೋಗ್ಯತೆಯಿರಬೇಕು." ಟಿವಿಯಲ್ಲೊಂದು ಬಂದ ಅಂಕಣ ಅವಳನ್ನು ಮತ್ತಷ್ಟು ಕೆದಕಿತ್ತು. ನನ್ನ ಕರ್ಮವೇ ! ಗುಣುಗುತ್ತಲೇ ಕೊನೆಗೆ ತಾನೇ ಆ ಪಾತ್ರೆಗಳನ್ನೆಲ್ಲಾ ಪಕ್ಕದ ಮನೆಯ ಮೈಮುನಾಳಿಗೆ ತಲುಪಿಸಿದಳು. ಮನೆಗೆ ಹಿಂತಿರುಗಿ ಅಡುಗೆಮನೆಯೊಳಗೆ ಕಾಲಿಡುವಷ್ಟರಲ್ಲಿ....
ಅಯ್ಯೋ ನನ್ನ ಕಾಲು ! ಎಂದು ಕೂಗುತ್ತ ನೋವಿನಿಂದ ಚೀರಾಡಿದಳು.. .. ! ಒಂದೆರಡು ಬಾರಿಯಲ್ಲ, ನಾಲ್ಕು ಬಾರಿ ಪಕ್ಕದ್ಮನೆಗೆ ಹೋಗಬೇಕಾಗಿತ್ತು ತಂದಿದ್ದ ಪಾತ್ರೆಯನ್ನು ಹಿಂತಿರುಗಿಸಲು...! ನೆರೆಯವರ ಪಾತ್ರೆಯನ್ನು ಹೇಗಾದರೂ ಕೊಟ್ಟ ಸಮಾಧಾನವಾಗಿದ್ರೂ ಅಡುಗೆಮನೆಯಿಂದ ಒಂದಿಂಚು ಮುನ್ನಡೆಯಲು ಸಾಧ್ಯವಿಲ್ಲದೇ ಅಲ್ಲೇ ಕುಸಿದು ಬಿದ್ದಳು. ಬೆಳಿಗ್ಗೆ ನಮಾಝ್ ಮುಗಿಸಿ ಅಡುಗೆಮನೆಗೆ ಕಾಲಿಟ್ಟಿದ್ದ ನೂರ್'ಜಹಾನ್ ಒಂದ್ನಿಮಿಷವೂ ವಿಶ್ರಾಂತಿ ತೆಗೆಯದ ಕಾರಣವಾಗಿತ್ತು ಅವಳೀಗ ಅಷ್ಟೊಂದು ನೋವು ಅನುಭವಿಸುತ್ತಿದ್ದದ್ದು...!
ಅಲ್ಲ ಮನೆಯಲ್ಲಿ ಇಷ್ಟೊಂದು ಕೆಲಸವಿರುವಾಗ ಈ ಮಹಾರಾಣಿ ಅಡುಗೆಮನೆಯಲ್ಲಿ ಆರಾಮಾಗಿ ಕುಳಿತುಕೊಂಡಿದ್ದಾಳಲ್ಲ? ಬಾಗಿಲಂಚಿನಲ್ಲಿ ನಿಂತುಕೊಂಡೇ ಮುನೀರ್'ನ ಡೊಂಕು ಮಾತುಗಳು ! ಕಣ್ಣೀರನ್ನು ಒರೆಸುತ್ತಿದ್ದ ತನ್ನ ಹೆಂಡತಿಯ ಮುಖವನ್ನು ನೋಡಿದ ಮುನೀರ್'ನ ಹೃದಯ ಒಂದು ಕ್ಷಣ ಝಲ್ಲೆಂದಿತು..
ತನ್ನ ನೋವನ್ನೆಲ್ಲಾ ಮನದೊಳಗೆ ಅದುಮಿಕೊಂಡು ದಯನೀಯವಾಗಿ ಮೆಲ್ಲನೆ ಎದ್ದೇಳುತ್ತಾ ತನ್ನ ಗಂಡನನ್ನು ನೋಡುತ್ತಾ "ಏನ್ರೀ, ಹೀಗಂತೀರಾ ? ನಿಮ್ಮ ಅಮ್ಮನ ಹಾಗೆ ನೀವೂ...! ಅನ್ನುವಷ್ಟರಲ್ಲಿ ಅವಳ ಕಣ್ಣೀರಧಾರೆ ಹರಿಯತೊಡಗಿತು.
ಮುನೀರ್'ನ ಮನಸ್ಸು ಮಮ್ಮಲ ಮರುಗಿತು. ಪತ್ನಿಯೆಡೆಗೆ ಧಾವಿಸಿ, ಅವಳನ್ನು ತನ್ನ ತೋಳಿನಲ್ಲಿ ಅಪ್ಪಿಕೊಂಡು "ಏನಾಯ್ತು ನೂರು.. ?" ಏನಿಲ್ಲ ಬಿಡಿ ನನ್ನ....! ಅಡುಗೆಮನೆಯ ಬಿಸಿಯ ಬೆವರು, ಪಾತ್ರೆ ತೊಳೆದ ನೀರು ಎಲ್ಲವೂ ಎರಚಿ ನನ್ನ ಬಟ್ಟೆ ಗಲೀಜಾಗಿದೆ. ಇನ್ನೂ ಸ್ನಾನ ಮಾಡಬೇಕಷ್ಟೆ. ಅದೋ ಮಗ್ರಿಬ್ ಬಾಂಗ್ ಆಗುತ್ತಿದೆ. ನಿಮಗೆ ನಮಾಝ್'ಗೂ ಹೋಗಬೇಕಲ್ವೇ..? ಎಂದೇಳುತ್ತಾ ಗಂಡನ ತೋಳಿನಿಂದ ಹಿಂದೆ ಸರಿದಳು.
ತನ್ನ ಗಂಡನ ಆ ಅಪ್ಪುಗೆ ಅವಳ ಆಯಾಸವನ್ನೆಲ್ಲಾ ನೀಗಿಸಿತ್ತು. ಅಲ್ ಹಮ್ದುಲಿಲ್ಲಾಹ್ ! ನನ್ನ ಗಂಡನ ಕೋಪವೆಲ್ಲಾ ಮರೆತುಹೋಯ್ತಲ್ಲ. "ಓಹೋ ! ಅದೆಲ್ಲ ಆಮೇಲೆ ನೋಡೋಣ, ಅಡುಗೆಮನೆಯ ಇನ್ನಷ್ಟು ಕೆಲಸ ಬಾಕಿಯಿದೆ ನೂರು, ಗಮನವಿರಲಿ ! ಮನೆಯೆಲ್ಲಾ ಗುಡಿಸಿ ಒರೆಸಬೇಕು, ಸ್ನಾನ ಮಾಡಿ ಮಗ್ರಿಬ್ ನಮಾಝ್ ಮಾಡ್ಬೇಕು. ಒಂದು ಕೆಲಸ ಮಾಡ್ತೇನೆ. ಅಡುಗೆಮನೆ ಕ್ಲೀನ್ ಮಾಡ್ತಾ ಇದ್ರೆ ತುಂಬಾ ಹೊತ್ತಾಗುತ್ತೆ, ಉಳಿದ ಕೋಣೆ ಮುಗಿಸಿ ಅಡುಗೆಮನೆ ಬೆಳಿಗ್ಗೆ ಮಾಡಿದರಾಯ್ತು" ನೂರ್ ಜಹಾನ್ ತನ್ನ ಮನದಲ್ಲೇ ಲೆಕ್ಕಾಚಾರ ಹಾಕಿಕೊಂಡಳು.
ನೂರು, ಏನು ಯೋಚಿಸ್ತಿದ್ದೀಯ? ಬೇಗನೆ ಸ್ನಾನ ಮಾಡಲು ಹೋಗ್ಬಾರ್ದೆ? ಅಲ್ಲ ನಾನು ಸ್ನಾನ ಮಾಡಿಸಲೇ? ಮುನೀರ್'ನ ಮುಗುಳ್ನಗೆಯ ಮಾತು ಕೇಳಿ "ಓಹೋ, ಇದೊಂದು ಬಾಕಿಯಿತ್ತು. ಸಾಕು ಸಾಕು ನಿಮ್ಮ ಪ್ರೇಮಕಾವ್ಯ. ನೋಡಿದ್ರೆ ನಿಂಜೊತೆ ಮಾತಾಡೋದೇ ತಪ್ಪು. ನನ್ನ ಕೆನ್ನೆಯ ಮೇಲಿನ ನಿಮ್ಮ ಬೆರಳಚ್ಚುಗಳು ಈಗಲೂ ಮಾಸಿಲ್ಲ"*ಎಂದು ತನ್ನ ಮುಖವನ್ನು ಮರೆಮಾಚಿದ್ದ ಬಟ್ಟೆಯನ್ನು ಸರಿಸಿ ತೋರಿಸಿದಳು....
"ಯಾ ಅಲ್ಲಾಹ್, ಕ್ಷಮಿಸಿಬಿಡು ನೂರು ಏನೋ ಕೋಪದಿಂದ ಅಚಾತುರ್ಯ ನಡೆದುಹೋಯ್ತು." ಎನ್ನುತ್ತಾ ತನ್ನೆರಡು ಕೈಯಿಂದ ಅವಳ ಕೆನ್ನೆ ಸವರಿದನು. ಅವಳ ಕಣ್ಣು ಆ ಕ್ಷಣದಲ್ಲೆ ತುಂಬಿ ಬಂತು. ಅವನ ಕೈಗಳನ್ನು ಚುಂಬಿಸುತ್ತಾ "ಪರವಾಗಿಲ್ಲ ಕಣ್ರೀ, ನಾನು ಕೆಲಸ, ಸ್ನಾನ ಮುಗಿಸಿ ಬರ್ತೇನೆ. ಇಲ್ಲಾಂದ್ರೆ ನಿಮ್ಮ ಅಮ್ಮ ಮನೆಯೆಲ್ಲ ಗಲೀಜಾಗಿದೆ ಅಂತ ಕಿರಿಕಿರಿ ಮಾಡ್ತಾರೆ."
ಹೆಂಡತಿಯ ಮಾತು ಕೇಳಿ ಮುಗುಳ್ನಗೆಯೊಂದಿಗೆ ಮುನೀರ್ ಮಗ್ರಿಬ್ ನಮಾಝ್'ಗಾಗಿ ಮಸೀದಿಗೆ ತೆರಳಿದರು..
"ನೂರು ಎಲ್ಲಿದ್ದೀಯ ?" ಮಸೀದಿಯಿಂದ ಹಿಂತಿರುಗಿ ಬಂದ ಮುನೀರ್ ಕೇಳುತ್ತಾ ಮನೆಯೊಳಗೆ ಪ್ರವೇಶಿಸಿದನು.
"ಏನ್ರೀ.., ಈಗೇನಾಯ್ತು? "ಗಾಬರಿಯಿಂದಲೇ ನೂರ್'ಜಹಾನ್ ಓಡೋಡಿ ಬಂದಳು."
"ಏನಿಲ್ಲ, ಆತಂಕಪಡಬೇಡ ನೂರು. ಹುಡುಗನ ಕಡೆಯಿಂದ ಬಂದ ಉಡುಗೊರೆಗಳನ್ನು ನೋಡಬೇಕಲ್ಲವೇ?.."
"ಹೌದು ಕಣ್ರೀ, ನೋಡಿಬಿಡೋಣ. ಮನೆಯ ಕೆಲಸಗಳ ನಡುವೆ ಮರೆತೇ ಹೋಗಿತ್ತು. ಏನೇ ಆಗಿರ್ಲಿ. ನಮ್ಮ ಹಫ್ಸ ಭಾಗ್ಯವಂತಳು. ಹುಡುಗನ ಕಡೆಯಿಂದ ಬಹಳಷ್ಟು ಉಡುಗೊರೆ ಬಂದಿದೆ. ಎಲ್ಲವನ್ನೂ ನಾನು ಕಪಾಟಿನೊಳಗೆ ಇಟ್ಟಿದ್ದೇನೆ. ಬೆಳಿಗ್ಗೆಯಿಂದ ಕಿಂಚಿತ್ತೂ ಸಮಯವಿಲ್ಲದೆ ಏನೂಂತ ಕೂಡ ನೋಡ್ಲಿಲ್ಲ."
ಒಂದು ಕೆಲಸ ಮಾಡು. ಬಂದ ಉಡುಗೊರೆಯನ್ನೆಲ್ಲ ಎತ್ಕೊಂಡು ಹಫ್ಸಳ ಕೋಣೆಗೆ ಹೋಗು. ನಾನೀಗ ಅಂಗಿ ಬದಲಿಸಿ ಬರ್ತೇನೆ ನೂರು"
(ನೂರ್'ಜಹಾನ್ ಅದಾಗಲೇ ಸ್ನಾನ ಮುಗಿಸಿ ಬಂದಿದ್ದರಿಂದ ಅವಳ ಮುಖದಲ್ಲೇನೂ ಆಯಾಸ ಕಾಣಲಿಲ್ಲ. ಉಡುಗೊರೆಗಳೊಂದಿಗೆ ಹಫ್ಸಳ ಕೋಣೆಗೆ ಹೋದಳು)
ಮಂಚದ ಮೇಲೆ ಕುತ್ಕೊಂಡು ಹಫ್ಸ ಕುರ್'ಆನ್ ಓದುವುದರಲ್ಲಿ ತಲ್ಲೀನಳಾಗಿದ್ದಳು. ಅವಳು ಓದುವ ಶೈಲಿ ಕೇಳಿದರೆ ಮನಸ್ಸಿಗೂ ಏನೋ ಒಂದು ಉಲ್ಲಾಸ. ಅಷ್ಟೊಂದು ಮಧುರವಾಗಿತ್ತು ಅವಳು ಓದುವ ಸ್ವರ ! ಏನೂ ಮಾತಾಡದೇ ಅಲ್ಲಿಯೇ ನಿಂತುಬಿಟ್ಟಳು. ಹಫ್ಸಳ ಮುಖದಲ್ಲೊಂದು ಹೊಸ ಚೈತನ್ಯವಿತ್ತು. ..
"ಏನು ಅತ್ತಿಗೆ ಹಾಗೆಯೇ ನಿಂತಿದ್ದೀರಾ?"
"ನಿಲ್ಲಿಸಬೇಡ. ನೀನು ಕುರ್'ಆನ್ ಮುಂದುವರೆಸು."
"ಪರ್ವಾಗಿಲ್ಲ. ಎಲ್ಲವೂ ಸರಿಯಾಗಲೆಂದು ನಾನು ಹರಕೆ ಮಾಡಿದ್ದೆ. ಅಲ್ಲಾಹು ಕೂಡ ನಮ್ಮ ಕೈ ಬಿಟ್ಟಿಲ್ಲ ಅತ್ತಿಗೆ"
"ಖಂಡಿತ ! ಅಲ್ಲಾಹುವಿನ ಬಳಿ ಎಲ್ಲದಕ್ಕೂ ಉತ್ತರವಿದ್ದೇ ಇರುತ್ತದೆ. ಅವನು ನಮ್ಮ ಕೈ ಬಿಡಲಾರ ಹಫ್ಸ" (ನೂರ್'ಜಹಾನ್ ಅವಳ ಕೈ ಹಿಡಿದುಕೊಂಡು ಸಂತೈಸಿದಳು)
"ನಿಜವಾಗ್ಲೂ ನಾನು ಆಸೆಯನ್ನೇ ಬಿಟ್ಟಿದ್ದೆ. ಅಲ್ಲಾಹು ನನ್ನ ಹಣೆಬರಹದಲ್ಲಿ ಹೀಗೇಕೆ ಮಾಡಿಟ್ಟ ಎಂದು ಒಬ್ಬಳೇ ಸಂಕಟಪಟ್ಟದ್ದಕ್ಕೆ ಲೆಕ್ಕವಿಲ್ಲ. ಮನೆಯಂಗಳದಲ್ಲಿ ಸಣ್ಣ ಮಕ್ಕಳು ಆಟವಾಡುವಾಗ ಅಲ್ಲಾಹು ನನಗೂ ಮದುವೆ, ಸಂತಾನಭಾಗ್ಯ ಬರೆದಿಲ್ಲವೇನೋ ಎನಿಸಿತ್ತು. ನಂಗೆ ಈ ಜೀವನದಲ್ಲೇ ಜಿಗುಪ್ಸೆ ಉಂಟಾಗಿ ಆತ್ಮಹತ್ಯೆ ಮಾಡಬೇಕೆಂದು ಅದೆಷ್ಟೋ ಸಲ ಯೋಚಿಸಿದ್ದೆ ಗೊತ್ತಾ ? ನಿಮಗೆ ಗೊತ್ತಿಲ್ಲ ಅತ್ತಿಗೆ ! ಸಣ್ಣ ವಯಸ್ಸಿಂದಲೂ ಅಣ್ಣ ನನ್ನನ್ನು ಖುದ್ದಾಗಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕಾಲವೊಂದಿತ್ತು. ನಾನು 8 ವರ್ಷವಾದಾಗಲೂ ಅಣ್ಣ ನನ್ನನ್ನು ತೋಳಿನಲ್ಲೇ ಎತ್ಕೊಂಡು ಹೋಗುತ್ತಿದ್ದ. ಅಲ್ಲಾಹು ನನಗೇಕೆ ಈ ಶಿಕ್ಷೆ ಕೊಟ್ಟ? ಎಲ್ಲರೂ ಆಟವಾಡುವ ಕಾಲದಲ್ಲಿ ನಾನು ಮನೆಯಲ್ಲೇ ಕುಳಿತು ಕಿಟಕಿಯ ಹೊರಗೆ ಆಡುತ್ತಿದ್ದ ಮಕ್ಕಳನ್ನು ನೋಡಿಕೊಂಡು ಅಳುತ್ತಿದ್ದೆ. ಆಗ ನನ್ನ ಆಶಾ ಟೀಚರ್ ಹೇಳುತ್ತಿದ್ದ ಒಂದು ಮಾತು ಈಗ್ಲೂ ನೆನಪಿನಲ್ಲಿದೆ. "ಹಫ್ಸ ಮೋಳೆ, ದೇವರು ನಿಮ್ಮಂತ ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ" ಅವರ ಆ ಮಾತು ಕೇಳಿ ನಾನು ಸಮಾಧಾನಗೊಳ್ಳುತ್ತಿದ್ದೆ. ಆದರೆ ದೊಡ್ಡವಳಾದಂತೆ ನನ್ನ ಈ ಅಂಗವಿಕಲತೆ ನನಗೆ ಮುಳ್ಳಾಗಿ ಪರಿಣಮಿಸಿತು. ಎಲ್ಲರಿಗೂ ಇರುವಂತೆ ನನಗೂ ಆಸೆ, ಆಕಾಂಕ್ಷೆಗಳು ಇದೆ ತಾನೇ ? ಯೌವ್ವನ, ಮದುವೆ, ಸುಖಸಂಸಾರ, ಮಕ್ಕಳು ಇವೆಲ್ಲವೂ ನಮ್ಮ ಜೀವನದ ಅವಿಭಾಜ್ಯ ಅಂಗವಲ್ಲವೇ? ನನ್ನ ಒಡನಾಡಿ ಸ್ನೇಹಿತರೆಲ್ಲ ವರ್ಷಗಳ ಹಿಂದೆಯೇ ಮದುವೆಯಾಗಿ ಮಕ್ಕಳನ್ನು ಹಡೆದು ಸುಖಜೀವನ ನಡೆಸುತ್ತಿದ್ದಾರೆ. ಎಲ್ಲವನ್ನೂ ಕಂಡು ನಂಗೂ ಅಂತಹ ಜೀವನ ಬೇಕೆಂದು ಆಶಿಸುವುದು ತಪ್ಪೇ? ನನ್ನನ್ನು ಈ ರೂಪದಲ್ಲಿ ಇಷ್ಟಪಟ್ಟು, ನನ್ನನ್ನು ಪ್ರೀತಿಸುವ ಒಂದು ಜೊತೆಗಾರನಿಗಾಗಿ ಅದೆಷ್ಟೋ ದುಃಅ ಮಾಡುತ್ತಿದ್ದೆ. ಅಲ್ಲಾಹು ಕೊನೆಗೂ ನನ್ನ ಪ್ರಾರ್ಥನೆ ಸ್ವೀಕರಿಸಿ ಶಾಜಹಾನ್ ರೂಪದಲ್ಲಿ ಈಡೇರಿಸಿದ. ಆಶಾ ಟೀಚರ್ ಹೇಳಿದ ಆ ಮಾತೂ ನಿಜವಾಯ್ತು. ಎಲ್ಲದಕ್ಕೂ ಅಲ್ಲಾಹು ಮಾತ್ರ ಕಾರಣ ! ಇನ್ನು ಒಮ್ಮೆಯೂ ಅವನ ಈ ಸಹಾಯ ಮರೆಯುವುದಿಲ್ಲ. ಐದು ವಕ್ತ್ ನಮಾಝ್'ನಲ್ಲೂ ಅವನಿಗೆ ಕೃತಜ್ಞತೆ ಹೇಳುವೆನು. ನನ್ನ ಮತ್ತು ಶಾಜುವಿನ ಕುಟುಂಬಜೀವನ ಸುಖಮಯವಾಗಲು ದಿನಂಪ್ರತಿ ದುಃಅ ಮಾಡುವೆನು."
ಅವಳ ಮನದಲ್ಲಿದ್ದ ಅಷ್ಟೊಂದು ನೋವು ಕಂಡು ನೂರ್'ಜಹಾನ್ ಳಿಗೂ ಕಣ್ಣು ತುಂಬಿ ಬಂತು. "ಅಲ್ಲಾಹುವೇ, ಇವಳ ಎಲ್ಲಾ ಆಸೆ ಪೂರೈಸು. ಇನ್ನೊಮ್ಮೆಯೂ ಇವಳ ಕಣ್ಣಲ್ಲಿ ನೀರು ಬರದಂತೆ ನೋಡಿಕೋ ಯಾ ಅಲ್ಲಾಹ್" ನೂರ್'ಜಹಾನ್ ಮನದಲ್ಲೇ ದುಃಅ ಮಾಡಿದಳು.
"ಏನೂ ಯೋಚಿಸ್ಬೇಡ. ಖಂಡಿತವಾಗಿಯೂ ಅಲ್ಲಾಹುವಿನ ಅನುಗ್ರಹ ಹಫ್ಸ ಮೋಳಿಗೆ ಇದ್ದೇ ಇರುತ್ತೆ. ನಿನ್ನ ಕೈ ಒಮ್ಮೆಯೂ ಬಿಡಲ್ಲ." ಅವಳನ್ನು ಆಲಂಗಿಸುತ್ತಾ ನೂರ್'ಜಹಾನ್ ಸಮಾಧಾನಪಡಿಸಿದಳು. ಆ ನಾಲ್ಕು ಕಣ್ಣುಗಳಲ್ಲಿ ಬರುತ್ತಿದ್ದ ಕಣ್ಣೀರು ಆನಂದವೋ, ದುಃಖದ ಕಣ್ಣೀರೋ? ಇಬ್ಬರಿಗೂ ತಿಳಿಯದಾಯ್ತು......
"ಸಾಕು ಸಾಕು, ನಾನೂ ಕೂಡ ಸ್ವಲ್ಪ ಉಡುಗೊರೆ ನೋಡ್ತೇನೆ.."ಎನ್ನುತ್ತಾ ನಬೀಸುಮ್ಮ ಆಗಲೇ ಹಫ್ಸಳ ಕೋಣೆಯೊಳಗೆ ಮುನೀರ್'ನ ಜೊತೆಯಲ್ಲೇ ಒಳಬಂದಳು. ಮಂಚದ ಮೇಲಿದ್ದ ನೂರ್'ಜಹಾನ್ ಎದ್ದು ಗೋಡೆಯೊರಗಿ ನಿಂತಳು. ಮುನೀರ್ ಮತ್ತು ನಬೀಸುಮ್ಮ ಮಂಚದ ಮೇಲೆ ಕುಳಿತರು.
""ಶಾಹಿದ್ ಮೋನೆ ಶಾಹಿದ್" ಕೋಣೆಯ ಕಡೆಗೆ ನೋಡುತ್ತಾ ಮುನೀರ್ ಕರೆನೀಡಿದ....
ಮಂಚದಲ್ಲೇ ಕುಳಿತುಕೊಳ್ಳುವ ಆಗ್ರಹವಿದ್ದರೂ ಅತ್ತೆ ರಂಪಾಟ ಮಾಡಬಹುದೆಂದು ಹಾಗೆಯೇ ನಿಂತುಕೊಂಡಿದ್ದಳು. ನೂರ್ಜ, ಏನು ಅಲ್ಲೇ ನಿಂತುಕೊಂಡಿದ್ದೀಯಲ್ಲ, ಹೋಗಿ ಶಾಹಿದ್'ನನ್ನು ಕರೆಯಬಾರದೇ? ಬಹುಶಃ ನನ್ನ ಕರೆ ಅವನಿಗೆ ಕೇಳಿಸಲಿಲ್ಲವೇನೋ?"
"ಇರಲಿ, ನಾನೇ ಕರ್ಕೊಂಡು ಬರ್ತೇನೆ" ಹೂಂ..ಗುಟ್ಟುತ್ತಾ ನೂರ್'ಜಹಾನ್'ಳನ್ನೇ ದುರುಗುಟ್ಟಿ ನೋಡುತ್ತಾ ನಬೀಸುಮ್ಮ ಹೊರನಡೆದಳು. ನೂರ್'ಜಹಾನ್'ಳ ಹೃದಯಬಡಿತ ಜೋರಾಗಿ ಬಡಿಯತೊಡಗಿತು. ಈ ಉಮ್ಮ ಹೀಗೇಕೆ ಮಾಡುತ್ತಾರೋ ಅಲ್ಲಾಹನೇ ಬಲ್ಲ" ಮುನೀರ್ ಗುಣಗಿದನು. ಇರ್ಲಿ ಬಿಡಿ, ಹಾಗನ್ನಬೇಡಿ ನಿಮ್ಮ ಅಮ್ಮ ತಾನೇ ? ನಿಮ್ಮ ತಂಗಿಯ ಮುಖವನ್ನೊಮ್ಮೆ ನೋಡಿ, ಎಷ್ಟು ಸಂತೋಷವಾಗಿದ್ದಾಳೆ." ನೂರ್'ಜಹಾನ್ ಸಂತೈಸಿದಳು.
ಹಫ್ಸ ಉಡುಗೊರೆ ನೋಡುವುದರಲ್ಲೇ ಮಗ್ನನಾಗಿದ್ದಳು. ಅವಳ ಸಂತೋಷಕ್ಕೆ ಪಾರವಿರಲಿಲ್ಲ. ಅವಳ ಜೀವಿತಕಾಲದಲ್ಲಿ ಇಷ್ಟೊಂದು ಉಡುಗೊರೆ ಕಂಡಿದ್ದಿಲ್ಲ, ಯಾರೂ ಕೊಟ್ಟಿರಲೂ ಇಲ್ಲ. ಶಾಜಹಾನ್ ಕಡೆಯಿಂದ ಉಡುಗೊರೆಯಾಗಿ ತೊಡಿಸಿದ್ದ ಕಲ್ಲು-ಸುತ್ತುವರಿದ ಕಂಕಣದಲ್ಲಿ ಅವಳು ಮುದ್ದಾಡುತ್ತಿದ್ದಳು. ಒಂದೊಂದಾಗಿಯೇ ಉಡುಗೊರೆಗಳ ಪೊಟ್ಟಣವನ್ನು ತೆರೆಯುವುದರಲ್ಲಿ ಮಗ್ನಳಾದಳು. ಅವಳ ಮುಖದ ಪ್ರಸನ್ನತೆಯನ್ನು ಕಂಡು ಮುನೀರ್ ಕೂಡ ಹರ್ಷಪುಳಕಿತನಾದನು.
ನಬೀಸುಮ್ಮ ಕೋಣೆಗೆ ಹೋದಾಗ, ಶಾಹಿದ್ ತನ್ನ ಚೀಲವನ್ನು ತನ್ನ ಎಲ್ಲ ಸಾಮಗ್ರಿಗಳೊಂದಿಗೆ ತುಂಬಿಸುವಲ್ಲಿ ನಿರತನಾಗಿದ್ದನು ....
"ಶಾಹಿದ್ ಮೋನೆ, ಎಲ್ಲಿಗೋ ಹೊರಟಂತೆ ಕಾಣಿಸ್ತಿದೆ. ಇಷ್ಟು ತುರಾತುರಿಯಲ್ಲಿ ಎಲ್ಲಿಗೆ ಹೋಗಲು ಸಿದ್ಧನಾಗ್ತಿದ್ದೀಯ?"
"ಉಮ್ ...ಪಟ್ಟಣಕ್ಕೆ ! ಕಾಲೇಜಿಗೆ ಹೋಗ್ಬೇಕಲ್ಲವೇ ? ಹರೀಶ್ ಮತ್ತು ವಿನು ಕೆಲವೇ ಕ್ಷಣದಲ್ಲಿ ಬರಲಿದ್ದಾರೆ. ಅವರ ಕಾರಿನಲ್ಲಿಯೇ ಹೋಗುವೆ" ಶಾಹಿದ್ ಉತ್ತರಿಸಿದನು.
"ನಾಳೆ ಹೋಗಬಹುದಲ್ಲವೇ? ಈ ರಾತ್ರಿಯಲ್ಲಿಯೇ ಹೋಗುವ ಅವಶ್ಯಕತೆಯಾದರೂ ಏನು ?"
"ಇಲ್ಲ ...ಸಾದ್ಯವಿಲ್ಲ. ಇವತ್ತಿನ ಕ್ಲಾಸು ಕೂಡ ಮಿಸ್ ಮಾಡ್ಕೊಂಡೆ. ನಾನು ಈಗ್ಲೇ ಹೋಗ್ಬೇಕು. ಪರೀಕ್ಷೆ ಕೂಡ ಬರ್ತಾ ಇದೆ. ಇನ್ನು ನಾಳೆಯೂ ಕ್ಲಾಸಿಗೆ ಹೋಗದಿದ್ರೆ ಅಷ್ಟೇನೆ...! ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೂಡ ಸಿಗಲಿಕ್ಕಿಲ್ಲ." ಗಂಭೀರದಲ್ಲೇ ಹೇಳಿದ.
"ಏನು ಶಾಹಿದ್, ನನ್ನೊಡನೆ ಬೇಸರವೇ? ನಿನ್ನ ಮುಖದಲ್ಲೆನೋ ಸಂಕಟ ಕಾಣುತ್ತಿದೆಯಲ್ಲ?"
ನಂಗ್ಯಾಕೆ ಬೇಸರ? ಇಲ್ಲ, ನನಗೆ ಯಾರೊಂದಿಗೂ ಕೋಪವಿಲ್ಲ. ನನಗೆ ನನ್ನವರೆಂದು ಹೇಳಲು ನೀವಲ್ಲದೆ ಈ ಭೂಮಿಯಲ್ಲಿ ಇನ್ಯಾರಿದ್ದಾರೆ? ಮನೆ, ಸಂಸಾರ ಎಂದರೆ ಸಣ್ಣಪುಟ್ಟ ವೈಮನಸ್ಸು ಬಂದೇ ಬರುತ್ತದೆ. ಕೆಲವೊಮ್ಮೆ ಅಂತಹ ಸನ್ನಿವೇಶ ಬರದೇ ಇರಲಿಕ್ಕಿಲ್ಲ. ಹಾಗಂತ ಸ್ವಂತ ಮನೆವರೊಂದಿಗೆ ಕೋಪವಿದ್ದರೆ ಹೇಗೆ ? ನಾವು ಮನುಷ್ಯರಲ್ಲವೇ? ನಮಗೂ ಸಹನೆ, ತಾಳ್ಮೆ ಜೊತೆಗಿರಬೇಕಲ್ಲವೇ? ನೀವೇನೂ ಚಿಂತಿಸಬೇಡಿ. ನನ್ನ ಮನಸ್ಸಲ್ಲಿ ಏನೂ ಇಲ್ಲ" ಎಂದು ನಬೀಸುಮ್ಮಳ ಕೈ ಹಿಡಿದು ಶಾಹಿದ್ ಹೇಳಿದನು.
"ಆಯ್ತು, ಆದರೆ ಈಗ ನಿನ್ನ ಸ್ನೇಹಿತರು ಬಂದಿಲ್ಲ ತಾನೇ ? ಊಟವಾದ್ರೂ ಮಾಡು ಶಾಹಿದ್"
"ಇಲ್ಲ, ಹೋಗುವ ದಾರಿಯಲ್ಲಿಯೇ ಮಾಡ್ಕೊಳ್ತೇನೆ" ಇದೋ ಯಾವ ಕ್ಷಣದಲ್ಲೂ ಅವರು ಬರಬಹುದು. ಎನ್ನುತ್ತಾ ತನ್ನ ಬ್ಯಾಗಿನ ಜಿಪ್ಪನ್ನು ಭದ್ರಗೊಳಿಸಿದ
"ಆಯ್ತು. ನಾನು ಬಂದ ವಿಷಯಾನೇ ಮರೆತುಬಿಟ್ಟೆ. ಹಫ್ಸಳಿಗೆ ಬಂದ ಉಡುಗೊರೆಗಳನ್ನಾದ್ರೂ ನೋಡಬಾರದ ?"
"ಹೋ ..! ಅದು ಬಾಕಿಯಾಯ್ತಲ್ಲ.ಸರಿ ನಬೀಸು ಮೋಳೆ ನಡಿ" ಎಂದು ತಮಾಷೆಯ ಮಾತನಾಡುತ್ತಾ ನಬೀಸುಮ್ಮಳ ಹೆಗಲ ಮೇಲೆ ಕೈಯಿಟ್ಟು ಹಫ್ಸಳ ಕೋಣೆಯೆಡೆಗೆ ಹೆಜ್ಜೆಯಿಟ್ಟನು
"ಇದೋ ನನ್ನ ಸ್ನೇಹಿತರ ಕಾರು ಬರುವ ಹೊತ್ತಾಯ್ತು. ಬೇಗ ಬೇಗನೆ ಉಡುಗೊರೆಗಳ ಪೊಟ್ಟಣಗಳನ್ನು ತೆರೆದು, ನನಗೆ ಕೊಡಬೇಕಾದ್ದೆಲ್ಲ ಕೊಟ್ಟುಬಿಡು.." ಬಾಲ್ಯಸ್ನೇಹಿತರಂತೆ ನಬೀಸುಮ್ಮಳ ಹೆಗಲ ಮೇಲಿಟ್ಟು ಶಾಹಿದ್ ಹೇಳಿದ ಮಾತು ಕೇಳಿ ಹಫ್ಸ, ಮುನೀರ್ ಗೊಳ್ಳನೆ ನಕ್ಕುಬಿಟ್ಟರು.
"ಓಹ್ ಈ ಶಾಹಿದ್'ನದು ಒಂದು ತಮಾಷೆ.." ಮುನೀರ್ ನಗು ತಡೆಯಲಾರದೆ ಹೇಳಿದ.
ಶಾಹಿದ್ ಕೂಡ ಉಡುಗೊರೆಗಳನ್ನು ತೆರೆಯಲು ಸಹಾಯ ಮಾಡತೊಡಗಿದ. ಒಂದೊಂದಾಗಿ ತೆರೆದು ಎಲ್ಲವನ್ನೂ ಮಂಚದ ಮೇಲಿಟ್ಟ. "ಇದೋ ಅರೇಬಿಯನ್ ಪರ್ದಾ, ತುರ್ಕಿಶ್ ಚೂಡಿದಾರ, ಕಾಶ್ಮೀರಿ ಶಾಲ್.."ಎಂದೆನ್ನುತ್ತಾ ತನ್ನ ಮೇಲಿಟ್ಟು ತೋರಿಸತೊಡಗಿದ. ಅವನ ಈ ತುಂಟಾಟಿಕೆ ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ಟರು.
"ಅದೆಲ್ಲ ಸರಿ, ಈ ಹುಡುಗಿಯರ ಉಡುಗೆಗಳ ಬಗ್ಗೆ ಇಷ್ಟೊಂದು ಹೇಳ್ತಿದ್ದೀಯಲ್ಲ, ಇದೆಲ್ಲ ನಿನಗೆ ಹೇಗೆ ಗೊತ್ತಾಯ್ತು?" ಮುನೀರ್ ಆಶ್ಚರ್ಯದಿಂದಲೇ ಕೇಳಿದ.
"ಇದೆಲ್ಲ ಗೊತ್ತಿಲ್ಲವೇ ? ನಾನು ಇಂಜಿನಿಯರಿಂಗ್ ಕಲಿಯುತ್ತಿದ್ದೇನೆಂದು ನೀವೆಲ್ಲ ಮರೆತುಬಿಟ್ರ?"
"ಹೋ..! ಇಂಜಿನಿಯರಿಂಗ್ ಕಾಲೇಜ್'ನಲ್ಲಿ ನೀನು ಇದೇನಾ ಕಲಿಯೋದು?"
"ಮಾಮ, ಹಾಗಲ್ಲ. ಅಲ್ಲಿ ಕಲಿಯಲು ಅದೆಷ್ಟೋ ಹುಡುಗೀರು ಬರ್ತಾರೆ. ನನ್ನ ಸ್ನೇಹಿತರೂ ಬಹಳಷ್ಟಿದ್ದಾರೆ. ಅವರೊಡನೆ ಸ್ನೇಹ ಬೆಳೆಸಿದ ಮೇಲೇನೆ ನಂಗೆ ಇದೆಲ್ಲಾ ಗೊತ್ತಾಗಿದ್ದು...!"
"ಹಾಗೋ, ಇದೇ ಕಲಿತಿದ್ದೀಯಾ ? ಇಂಜಿನಿಯರಿಂಗ್ ಕೂಡ ಕಲಿತಿದ್ದೀಯಾ? ಅಲ್ಲಾಹನೇ ಬಲ್ಲ. ಅಪ್ಪನ ಹಣ ನೀರಿಗೆ ಹಾಕಿದಂತೆ ಕಾಣಿಸ್ತಿದೆ..."
"ಹಾಗೇನಿಲ್ಲ ಮಾಮ, ನಾನು ಒಳ್ಳೆಯ ಹುಡುಗ. ಇನ್ನು ಅಪ್ಪನ ಹಣ ...! ಕೆಲಸ ಸಿಕ್ಕಿದ ಕೂಡ್ಲೇ
ಅಸಲು ಬಡ್ಡಿಸಮೇತ ಹಿಂತಿರುಗಿಸುವೆನು. ಅವರ ಹಣ ನನಗೆ ಬೇಡ." ಅದುವರೆಗೂ ತಮಾಷೆಯ ಮೋಜಿನಲ್ಲಿದ್ದ ಶಾಹಿದ್ ಮುಖ ಕೋಪದಿಂದ ಕೆಂಪರಡಿತು.
ಎಲ್ಲವನ್ನೂ ನೋಡುತ್ತಿದ್ದ ನೂರ್'ಜಹಾನ್ ಏನೂ ಮಾತಾಡದೆ ನಿಂತಿದ್ದಳು. ನಿಜವಾಗ್ಲೂ ತಮಾಷೆಯೆಂದ್ರೆ ನೂರ್'ಜಹಾನ್'ಗೆ ಅಚ್ಚುಮೆಚ್ಚು. ಯಾರಾದ್ರೂ ತಮಾಷೆ ಮಾಡ್ತಿದ್ರೆ ನೂರ್'ಜಹಾನ್'ಳದ್ದು ಎತ್ತಿದ ಕೈ ! ಬೆಳಿಗ್ಗಿನಿಂದಲೂ ಒಬ್ಬಂಟಿಗಳಾಗಿದ್ದ ನೂರ್'ಜಹಾನ್'ಗೆ ಅಷ್ಟೊಂದು ಬೇಜಾರಾಗಿತ್ತು. ಶಾಹಿದ್' ನೂರ್'ಜಹಾನ್'ಳ ಮುಖವನ್ನೊಮ್ಮೆ ದಿಟ್ಟಿಸಿದ. ಅವಳ ಮುಖದಲ್ಲಿದ್ದ ನೋವು, ಶಾಹಿದ್ ಗೆ ಬೆಳಿಗ್ಗಿನ ಮುನೀರ್'ನ ಹೊಡೆತ ನೆನಪಿಗೆ ತಂದುಬಿಡ್ತು. ಅದಕ್ಕಿರಬಹುದೇನೋ ? ಅಲ್ಲ ನಬೀಸುಮ್ಮ ಹೇಳಿದ ಬೆಳಗ್ಗಿನ ಚುಚ್ಚುಮಾತುಗಳು ಈಗಲೂ ಅತ್ತೆಯ ಮನಸ್ಸಿನಲ್ಲಿರಬಹುದೇನೋ? ಅಲ್ಲ ಬೇರೇನಾದ್ರೂ ಅಚಾತುರ್ಯ ನಡೆದಿದೆಯೇ? ಯಾಕೆಂದ್ರೆ ಅತ್ತೆ ಇಷ್ಟೊಂದು ಗಂಭೀರವಾಗಿರುವುದು ನಾನೆಂದೂ ಕಂಡಿಲ್ಲ." ಅಲ್ಲಾಹ್, ನೀನೇ ಕಾಪಾಡು ಎಂದು ಶಾಹಿದ್ ಮನದಲ್ಲಿಯೇ ಪ್ರಾರ್ಥಿಸಿದ.
"ಮಾಮ, ಇನ್ನು ನಾನು ಹೊರಡ್ತೇನೆ, ಯಾವುದೇ ಕ್ಷಣದಲ್ಲೂ ಸ್ನೇಹಿತರು ಬರಬಹುದು. ಒಂದು ಗಂಟೆಯಲ್ಲಿ ನಾನು ಕಾಲೇಜ್ ಕ್ಯಾಂಪಸ್'ಗೆ ಮುಟ್ಟುತ್ತೇನೆ. ನಿದ್ರೆ, ನಾಳಿನ ಕ್ಲಾಸು ಎರಡೂ ಮಿಸ್ ಮಾಡುವಂತಿಲ್ಲ."
"ಹೇ, ನೀನು ಹೋಗ್ತಿದ್ದೀಯ? ಮದುವೆಯ ಉಳಿದ ಕಾರ್ಯಗಳನ್ನೆಲ್ಲ ಹೇಗೆಂದು ಮುಸ್ತಫ ನಾಳೆ ತಿಳಿಸುವರು. ಬಹುಶಃ ಮದುವೇನೂ ಅರ್ಜೆಂಟಾಗಿ ಇರಬಹುದೆನೋ? ನೀನಿದ್ರೆ ನಂಗೂ ಸ್ವಲ್ಪ ಸಮಾಧಾನ ! ಮದುವೆಕಾರ್ಯದಲ್ಲಿ ನಿನ್ನ ಸಹಾಯ ಅತ್ಯಮೂಲ್ಯ. ಅದಿರಲಿ ಬಿಡು. ನೀನು ಚೆನ್ನಾಗಿ ಕಲಿ ಶಾಹಿದ್. ನಿನ್ನ ಎಕ್ಸಾಮ್ ಯಾವಾಗ ?"
"ಇನ್ನೆರಡು ವಾರದಲ್ಲೇ... !" ಮುಗಿದ ಕೂಡಲೇ ಓಡೋಡಿ ಬರ್ತೇನೆ."
ನಿನ್ನ ಪರೀಕ್ಷೆಯ ನಂತರ ಸಿಗುವ ಬಿಡುಸಮಯ ಗೊತ್ತಾದ್ರೆ ಮುಸ್ತಫನಿಗೂ ಮದುವೆದಿನ ನಿಗಧಿ ಮಾಡಲು ಒಳ್ಳೆಯ ಸಮಯ ಕೊಡಬಹುದಿತ್ತು."
"ಪರ್ವಾಗಿಲ್ಲ ಮಾಮ, ಹುಡುಗನ ಕಡೆಯ ಪ್ರತಿಕ್ರಿಯೆ ನೋಡಿ ನನಗೆ ತಿಳಿಸಿ. ಖಂಡಿತವಾಗಿಯೂ ಬರುವೆನು. ನಮ್ಮ ಹಫ್ಸಳ ಮದುವೆ ಮಿಸ್ ಮಾಡಲಾರೆ"
"ಹಫ್ಸ, ಶಾಜು ನಿನಗೆ ಕೊಟ್ಟ ಪರ್ಸನಲ್ ಗಿಫ್ಟ್ ಏನು ?"
"ಇದೋ"ಎಂದು ನಾಚಿಕೆಯಿಂದ ಹಫ್ಸ ಶಾಹಿದ್'ನ ಕೈಗಿಟ್ಟಳು. ಆ ವಸ್ತುವನ್ನು ನೋಡಿ ಶಾಹಿದ್ ಒಮ್ಮೆಲೆ ಗರಬಡಿದವನಂತೆ ನಿಂತುಬಿಟ್ಟ. ..
ಶಾಹಿದ್ ಹಪ್ಸಾಳಲ್ಲಿ ಶಾಜು ನಿನಗೆ ಕೊಟ್ಟ ಪರ್ಸನಲ್ ಗಿಪ್ಟ್ ಏನು ಎಂದು ಕೇಳಿದಾಗ ಹಪ್ಸ ನಾಚಿಕೆಯಿಂದ ಶಾಜು ಕೊಟ್ಟ ಆ ಉಡುಗೊರೆಯನ್ನು ಶಾಹಿದ್'ನ ಕೈಗಿಟ್ಟಳು.. ಶಾಹಿದ್ ಆ ವಸ್ತುವನ್ನು ನೋಡಿ ಒಂದು ಕ್ಷಣ ಆಶ್ಚರ್ಯ ಪಡುತ್ತ ಗರಬಡಿದವರಂತೆ ನಿಂತು ಬಿಟ್ಟ.."
"ಅದೊಂದು ಹೊಸ ಮಾದರಿಯ ಸ್ಮಾರ್ಟ್ ಮೊಬೈಲ್ ಪೋನ್" ಮಾರ್ಕೆಟ್'ಗೆ ಇನ್ನೂ ಕೂಡ ಸರಿಯಾಗಿ ಬಂದಿರಲಿಲ್ಲ. ಇದರ ಬೆಲೆ ನಿಮಗೆ ಗೊತ್ತಿದೆಯೇ..?
ನಾನೊಮ್ಮೆ ನೋಡ್ತೇನೆ"ಎನ್ನುತ್ತಾ ಮುನೀರ್ ಕೈಗೆತ್ತಿಕೊಂಡನು. ಅದನ್ನು ಹಿಂದುಮುಂದು ತಿರುಗಿಸುತ್ತಾ , ನನ್ನ ಕೈಯಲ್ಲೂ ಒಂದು ಇದೆ. ಪುರಾತನ ಕಾಲದ್ದು. ನನ್ನ ದನಿ ಉಸ್ಮಾನ್ ಹಾಜಿ ಹೊಸ ಮೊಬೈಲ್ ಕೊಂಡಾಗ, ಅವರಲ್ಲಿದ್ದ ಈ ಹಳೆಯದ್ದು ನಂಗೆ ಕೊಟ್ಟದ್ದು. ಕಾಣಲು ಭಂಗಿಯಿಲ್ಲದಿದ್ರೂ, ನನ್ನ ಆವಶ್ಯಕತೆಯನ್ನು ಪೂರೈಸಲು ಹೇಳಿ ಮಾಡಿಸಿದಂತಿದೆ."
"ಅಲ್ಲ ಮಾಮ, ಹೊಸ ಮೊಬೈಲಿನಿಂದ ಶಾಜು ಜೊತೆ ಮಾತಾಡಲು ಆಗೋದಿಲ್ಲ ತಾನೇ ? ಹಾಗಾದ್ರೆ....."
(ಅಲ್ಲೊಂದು ಮೂಕಮೌನ ಆವರಿಸಿತು)
"ಇಲ್ಲ, ಇಲ್ಲ ಶಾಜು ಉಪಯೋಗಿಸಿದ ಹಳೆ ಸಿಮ್ ಇದರಲ್ಲಿದೆ. ಇದರೊಳಗೆ ಹಾಕಿ ಕೊಟ್ಟರೆ ಸಾಕು. ಮಾತಾಡಬೇಕೆಂದಿಲ್ಲ. ವಾಟ್ಸ್ ಅಪ್ ಮೆಸೇಜ್ ಕಳುಹಿಸಿದ್ರೂ ಸಾಕು." ಎಂದಿದ್ದಾನೆ ಶಾಜು.. ಹಫ್ಸ ಹೇಳಿದಳು.
"ಹೋ, ಹಾಗೆ ಹೇಳು, ಅತ್ತೆಗೆ ಎಲ್ಲವೂ ಗೊತ್ತಿದೆಯಲ್ವಾ. ನಿಮ್ಮ ಶಾಜು ಕಡಿಮೆಯೇನಿಲ್ಲ."
(ಅವನ ಮಾತು ಕೇಳಿ ಹಫ್ಸ ನಾಚಿ ನೀರಾದಳು)
"ಇಷ್ಟು ಬೇಗನೇ ಇಬ್ಬರಿಗೂ ಪರಿಚಯ ಆಗೋಯ್ತಾ?"
"ಹೇ, ಸ್ವಲ್ಪ ಸುಮ್ಮನಿರ್ತೀಯ ಶಾಹಿ... ದೊಡ್ಡವರ ಹಾಗೆ ಮಾತಾಡ್ಬೇಡ. ಸುಮ್ಮನೆ ನನ್ನ ಕೀಟಲೆ ಮಾಡದೆ ಆ ಸಿಮ್ಮನ್ನು ಮೊಬೈಲ್'ಗೆ ಹಾಕಿ ಕೊಡು."
"ಕೋಪಿಸ್ಬೇಡ ಮದುಮಗಳೇ, ಇದೋ.. ಮೊಬೈಲ್'ಗೆ ಸಿಮ್ ಹಾಕುತ್ತ, ಶಾಜುವಿನ ಮೆಸ್ಸೇಜ್ ಮಿಸ್ ಮಾಡ್ಕೋಬೇಡ" ಎಂದು ತಮಾಷೆಯಿಂದಲೇ ಹಿಂತಿರುಗಿಸಿದ. ಆಯ್ತಲ್ಲ, ಇನ್ನೇನಾದರೂ ಸೇವೆ ಆಗಬೇಕೆ..? ಇಲ್ಲಾಂದ್ರೆ ಮೊಬೈಲ್ ಬದಲಿಸಿಕೊಂಡ್ರೆ ಹೇಗೆ ? ಎಂದು ತನ್ನ ಕಿಸೆಯೊಳಗೆ ಕೈಹಾಕಿದ.
"ಸಾಕು ಸಾಕು. ಸ್ಮಾರ್ಟ್ ಆಗಬೇಡ."
"ಆಯ್ತಮ್ಮಾ, ನನ್ನ ಇಂಜಿನಿಯರಿಂಗ್ ಮುಗಿದು, ಒಳ್ಳೆಯ ಕೆಲಸ ಸಿಕ್ಕಿದ್ರೆ, ನಾನು ಮದುವೆಯಾಗೋ ಹುಡುಗಿಗೆ ಇದಕ್ಕಿಂತಲೂ ಒಳ್ಳೆಯ ಮೊಬೈಲ್ ಕೊಡುವೆ."
"ಇಷ್ಟೊಂದು ಮಾತಾಡಲು ಕಲಿತಿದ್ದೀಯ?" ಅವನ ಕಿವಿಯನ್ನು ಹಿಂಡುತ್ತಾ ನಬೀಸುಮ್ಮ ಕೇಳಿದಳು.
ಇದೋ, ಇದು ನಿನಗಿರಲಿ ಎನ್ನುತ್ತಾ ಮಿಠಾಯಿಯ ಪ್ಯಾಕೊಂದನ್ನು ಮುನೀರ್ ಶಾಹಿದ್'ನ ಕೈಗಿಟ್ಟ.....
"ವಾವ್, ಸೂಪರ್ ಟೇಸ್ಟ್"
"ಅಮ್ಮ, ಇದನ್ನೊಮ್ಮೆ ತಿಂದು ನೋಡು" ಎನ್ನುತ್ತಾ ಮತ್ತೊಂದು ಮಿಠಾಯಿಯನ್ನು ಅಮ್ಮನಿಗೆ ನೀಡಿದ ಮುನೀರ್. ಮತ್ತೊಂದು ಮಿಠಾಯಿಯನ್ನು ಹಫ್ಸಳ ಬಾಯಿಗೆ ಕೊಟ್ಟು, "ಇದಕ್ಕಿಂತಲೂ ಸಿಹಿಯಾಗಿ ನಿನ್ನ ದಾಂಪತ್ಯ ಜೀವನವಿರಲಿ ಮೋಳೆ"ಎನ್ನುತ್ತಾ ಅವಳ ತಲೆ ಸವರಿದ.
"ನೂರು.., ನಿನಗೆ ಏನೂ ಬೇಡವೆ? ಯಾವುದೇ ಚಿಂತೆಯಲ್ಲಿದ್ದಂತೆ ಕಾಣುತ್ತಿದೆಯಲ್ಲ?"
"ಹೇ, ಹಾಗೇನಿಲ್ಲ ಎನ್ನುತ್ತಾ ಮುಗುಳ್ನಗೆಯೊಂದಿಗೆ ಅವಳೂ ಕೂಡ ಮಿಠಾಯಿಯೊಂದನ್ನು ಸವಿದಳು.
ಸರಿ, ಎಲ್ಲವನ್ನೂ ಜೋಪಾನವಾಗಿಡು. ನೆರೆಯವರಿಗೂ, ಸಂಬಂಧಿಕರಿಗೂ ಸ್ವಲ್ಪ ಕೊಡೋಣ. "
"ನಾಳೆನಾ?,ಯಾರಿಗೂ ಈ ಸಿಹಿತಿಂಡಿ ಸಿಗಲಿಕ್ಕಿಲ್ಲ " ನಬೀಸುಮ್ಮ ನೂರ್'ಜಹಾನ್'ಳನ್ನೇ ದಿಟ್ಟಿಸುತ್ತಾ ಗೊಣಗಿದಳು.
(ಯಾರಿಗ್ಬೇಕು ನಿಮ್ಮ ಮಿಠಾಯಿ? ನಿಮಗೆ ಕೊಡಬೇಕಾದಲ್ಲಿ ನೀವೇ ಕೊಟ್ಟುಬನ್ನಿ ಎಂದು ಹೇಳಬೇಕೆನ್ನಿಸಿತು ನೂರ್'ಜಹಾನ್'ಳಿಗೆ ! ಆದರೂ ಎಲ್ಲವನ್ನೂ ತನ್ನೊಳಗೆ ಅದುಮಿಕೊಂಡು ನಿಂತಿದ್ದಳು ನೂರ್'ಜಹಾನ್'. ಏನು ಮಾಡೋದು ? ಸೊಸೆಯಲ್ಲವೇ? ಹೊರಗಿನಿಂದ ಬಂದ ಹೆಣ್ಣಲ್ಲವೇ ? ಎಲ್ಲವನ್ನೂ ಸಹಿಸ್ಬೇಕು. ತಲೆಯ ಮೇಲೆ ಆಕಾಶ ಬಿದ್ರೂ ಅಲುಗಾಡುವಂತಿಲ್ಲ. ಹೊಡೆದರೂ, ನೋಯಿಸಿದರೂ, ಕೊಲ್ಲಲು ಬಂದರೂ ಪ್ರತಿಕ್ರಯಿಸುವಂತಿಲ್ಲ. ಶಾಂತಿ, ಸಹನೆ ಎಲ್ಲವನ್ನೂ ರೂಢಿಗೊಳಿಸಬೇಕು. ಅವಳ ಮನದಾಳದಲ್ಲಿ ಆ ಕ್ಷಣ ತೊದಲುತ್ತಿದ್ದ ಮಾತುಗಳಿವು.)
"ನಾನು ತಯಾರಿದ್ದೇನೆ, ಐದು ನಿಮಿಷದಲ್ಲಿ ಬರ್ತೇನೆ" ತನಗೆ ಬಂದ ಕರೆಗೆ ಉತ್ತರ ನೀಡಿದ ಶಾಹಿದ್ ! ನಾನು ಹೋಗಿ ಬರ್ತೇನೆ ಅಸ್ಸಲಾಮು ಅಲೈಕುಂ"ಎನ್ನುತ್ತಾ ಶಾಹಿದ್ ಅಲ್ಲಿಂದ ಹೊರಟು ಹೋದ....
ಶಾಹಿದ್ ತನ್ನ ಸ್ನೇಹಿತರ ಜೊತೆಗೂಡಿ ಕಾರಿನಲ್ಲಿ ಹೋಗಿ ಕುಳಿತುಕೊಂಡ. ರೊಯ್ಯನೆ ಹೊರಟ ಕಾರು ಕತ್ತಲಿನ ಹಿಂದೆ ಮರೆಯಾಗುವವರಿಗೂ ನೂರ್'ಜಹಾನ್ ಬಾಗಿಲಂಚಿನಲ್ಲಿ ನಿಂತುಕೊಂಡೇ ನೋಡುತ್ತಲಿದ್ದಳು...
"ನೂರೂ, ಎಲ್ಲಿದ್ದೀಯ ಬೇಗನೇ ಊಟ ಬಡಿಸು... ದಿನವಿಡೀ ಕೆಲಸದ ಆಯಾಸದಿಂದ ಮೈ ಕೈ ನೋಯುತ್ತಿದೆ. " ಮುನೀರ್'ನ ಧ್ವನಿ ಕೇಳಿ ಅಡುಗೆಮನೆಯತ್ತ ನಡೆಯುತ್ತಾ ಬೇಗ ಬೇಗ ಊಟ ಮುಗಿಸಿ ಒಮ್ಮೆ ಹಾಸಿಗೆಯ ಮೇಲೆ ಯಾವಾಗ ಬಿದ್ದುಕೊಳ್ಳುತ್ತೇನೋ ಎಂದನಿಸಿತ್ತು. ಲಘುಬಗನೇ ಎಲ್ಲರಿಗೂ ಊಟ ಬಡಿಸಿ, ತಾನೂ ಊಟ ಮಾಡಿ ಅಡುಗೆಮನೆಯೆಲ್ಲಾ ಶುದ್ದಿಕರಿಸಿ ತನ್ನ ಕೋಣೆಯೊಳಗೆ ಕಾಲಿಟ್ಟಳು. ಅದಾಗಲೇ ಮುನೀರ್ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದನು. ತಲೆಯ ಕೂದಲು ಕಟ್ಟಿಕೊಂಡು ನೂರ್'ಜಹಾನ್ ಕೂಡ "ಯಾ ಅಲ್ಲಾಹ್" ಎನ್ನುತ್ತಾ ಪಕ್ಕದಲ್ಲೇ ವಿರಮಿಸಿದಳು...
"ನೂರೂ, ಏನಾಯ್ತು? ನಾನು ಬಂದಾಗಿನಿಂದ ಗಮನಿಸಿದ್ದೇನೆ ನಿನ್ನ ಮುಖದಲ್ಲೆನೋ ಚಿಂತೆಯಿದೆಯಲ್ಲ? ಮುಖದಲ್ಲೊಂದು ಮುಗುಳ್ನಗೆಯೂ ಬೀರಲಿಲ್ಲ. ಇವತ್ತಿನ ದಿವಸ ನನ್ನ ಜೀವಿತಕಾಲದಲ್ಲೇ ಸಂತೋಷಕರವಾದ ದಿನ. ಹಫ್ಸಳ ಮುಖದಲ್ಲೆನೋ ಹೊಸತೊಂದು ಉಲ್ಲಾಸ ! ಅವಳ ಆ ಮುಗುಳ್ನಗೆ ನನ್ನ ನೋವನ್ನೆಲ್ಲಾ ಅರ್ಧದಷ್ಟು ಮರೆತುಬಿಟ್ಟೆ. ಹೆಚ್ಚೇನೂ ಸಮಯವಿಲ್ಲ. ಈ ತಿಂಗಳಾಂತ್ಯದಲ್ಲೇ ಮದುವೆ ಮಾಡಬೇಕೆಂದು ಮುಸ್ತಫ ಹೇಳುತ್ತಿದ್ದಾನೆ. ಅವರ ಕಡೆಯಿಂದ ಯಾವುದೇ ಬೇಡಿಕೆಯಿಲ್ಲದಿದ್ರೂ ನನ್ನ ಒಬ್ಬಳೇ ತಂಗಿಗೆ ನಮ್ಮ ಕೈಲಾದಷ್ಟು ಕೊಡಲೇಬೇಕು. ಕೈಯಲ್ಲಿ ಬಿಡಿಗಾಸೂ ಇಲ್ಲ. ಇವತ್ತಿನ ಸಮಾರಂಭಕ್ಕೆ ಮಾಡಿದ ಸಾಲವೇ ಬೆಟ್ಟದಷ್ಟಿದೆ. ತಲೆ ಚಿಟ್ ಅನ್ನುತ್ತಿದೆ. ಯೋಚಿಸ್ತಾ ಇದ್ರೆ ಭಯವೂ ಆಗುತ್ತಿದೆ. ಮಾಡೋದೇನು ನೀನೇ ಹೇಳು ?"* ಅವಳ ತಲೆ ಸವರುತ್ತಾ ಹೇಳತೊಡಗಿದ.
"ಅಲ್ಲ ಕಣ್ರೀ, ನಾನು ಏನೂಂತ ಹೇಳೋದು? ನನ್ನ ತಲೆಯಲ್ಲಿ ಯಾವುದೇ ಮಾರ್ಗ ಕಾಣ್ತಿಲ್ಲ."
"ನಾನೊಂದು ಹೇಳ್ತೀನಿ. ಆದ್ರೆ ನಾನು ಮತ್ತು ನೀನಲ್ಲದೆ ಮೂರನೇ ವ್ಯಕ್ತಿಗೆ ಗೊತ್ತಾಗ್ಬಾರ್ದು."
"ಖಂಡಿತ ಇಲ್ಲ"
"ನಮ್ಮ ಮನೆಯಲ್ಲಿ ಈಗ ಹತ್ತು ಸೆಂಟ್ಸ್ ಜಾಗವಿದೆಯಲ್ಲ, ಅದರ ಅರ್ಧಭಾಗ ಯಾರಿಗಾದ್ರೂ ಮಾರಿಬಿಡ್ತೇನೆ. ಬಂದ ಹಣದಿಂದ ಹಫ್ಸಳ ಮದುವೆಯ ಖರ್ಚಿಗೆ ಸಾಕಾಗಬಹುದು."
"ಇಷ್ಟೊಂದು ಅರ್ಜಂಟ್ಟಲ್ಲಿ ಖರೀದಿಸುವವರು ಸಿಗ್ತಾರಾ? ಒಂದಷ್ಟು ದಿನ ಮಾತ್ರ ಬಾಕಿಯಿರುವಾಗ ಇದೆಲ್ಲ ಆಗೋ ವಿಷಯಾನ?"
"ಅದೂ ಸರೀನೇ, ನಂಗೂ ಅದೇ ಅನುಮಾನ ! ಇದೆಲ್ಲ ನಾವು ಯೋಚಿಸಿದಷ್ಟು ಸುಲಭವೇ? ಇಲ್ಲಾಂದ್ರೆ ಮನೆಯ ಆಸ್ತಿಪತ್ರವನ್ನೆಲ್ಲಾ ಗಿರವಿಯಿಟ್ಟರೆ, ಬ್ಯಾಂಕ್ ಸಾಲ ಕೊಡುತ್ತಾರೆಂದು ನನ್ನ ಸ್ನೇಹಿತನೊಬ್ಬ ಹೇಳ್ತಿದ್ದಾನೆ. ಆದ್ರೆ, ಮನೆಪತ್ರ ಕೊಡಲು ಅಮ್ಮ ಒಪ್ಪಿಗೆ ನೀಡ್ತಾರೋ ? ಅದಕ್ಕೂ ನನ್ನ ಅಮ್ಮ ನಿನ್ನನ್ನೇ ದೂರುತ್ತಾರೇನೋ ? ದಯವಿಟ್ಟು ಏನಾದ್ರೂ ಹೇಳಿದ್ರೆ ಸಂಕಟಪಡಬೇಡ. ನಿನ್ನ ಆ ನೋವಿನ ಮುಖ ನಂಗಂತೂ ನೋಡಲಸಾದ್ಯ."
"ಪರ್ವಾಗಿಲ್ಲ ! ಅಮ್ಮ ತಾನೇ ? ಏನು ಹೇಳಿದ್ರೂ ನಾನು ಕಿವಿಗೊಡಲ್ಲ. ನಿಮ್ಮ ಪ್ರೀತಿಯೊಂದಿದ್ರೆ ಅಷ್ಟೇ ಸಾಕು ನಂಗೆ." ಎನ್ನುತ್ತ ಮುನೀರಕಾನ ಎದೆಯ ಮೇಲೆ ತಲೆಯಿಟ್ಟಳು.
ಅವಳ ಕೂದಲುಗಳೆಡೆಯಲ್ಲಿ ಬೆರಳಾಡಿಸುತ್ತಾ, ನೆತ್ತಿಗೊಂದು ಮುತ್ತಿಟ್ಟ... "ಯಾ ಅಲ್ಲಾಹ್ ! ನಾನು ಮರೆತೇಬಿಟ್ಟೆ." ಹಾಸಿಗೆಯಿಂದೆದ್ದ ಮುನೀರ್ ತನ್ನ ಪ್ಯಾಂಟಿನ ಕಿಸೆಯೊಳಗಿದ್ದ ಮಿಠಾಯಿಯ ಪ್ಯಾಕೊಂದನ್ನು ತೆಗೆಯುತ್ತಾ ನೂರ್'ಜಹಾನ್'ಳ ಮುಂದಿಟ್ಟನು.
"ಆಹಾ, ಇದೆಲ್ಲಿಂದ?"
"ಅದು ಅಮ್ಮನಿಗೆ ಗೊತ್ತಾಗದ ಹಾಗೆ ನಿನಗೋಸ್ಕರ ತೆಗೆದಿಟ್ಟಿದ್ದೆ. ಇನ್ನೂ ಇದೆಯೆನ್ನುತ್ತಾ ಶರ್ಟಿನ ಕಿಸೆಯಿಂದ ಬಾದಾಮಿಯ ಮಿಠಾಯಿಯೊಂದನ್ನು ಕೂಡ ನೂರ್'ಜಹಾನ್'ಳ ಕೈಗಿತ್ತನು.
"ಏನ್ರೀ ಇದೆಲ್ಲ ? ಮಕ್ಕಳ ಹಾಗೆ ಅಲ್ಲೊಂದು, ಇಲ್ಲೊಂದು..." ನೂರ್'ಜಹಾನ್'ಗೆ ನಗು ತಡೆಯಲಾಗಲಿಲ್ಲ. ಕಳ್ಳ.... ಅವರಿಬ್ಬರ ಮುಖದಲ್ಲೊಂದು ಪ್ರಣಯಕಾವ್ಯ ಮೂಡಿತ್ತು. ಇನ್ನು ಮಲಗೋಣ. ತುಂಬಾ ಹೊತ್ತಾಯ್ತಲ್ಲಾ.? ಹೂಂ ಎನ್ನುತ್ತಾ ಇಬ್ಬರೂ ಮಲಗಿದರು.....
ಸ್ವಲ್ಪ ಹೊತ್ತು ಕಳೆಯಿತಷ್ಟೆ ! "ಟ್ರಿಣ್ ಟ್ರಿಣ್" ಮುನೀರ್'ನ ಮೊಬೈಲ್ ಶಬ್ದಕ್ಕೆ ನೂರ್'ಜಹಾನ್ ಎಚ್ಚೆತ್ತಳು. ಫೋನ್ ಎತ್ತುತ್ತಾ "ರೀ, ಸ್ವಲ್ಪ ಏಳ್ತೀರಾ ? ಯಾರೋ ಫೋನ್ ಮಾಡ್ತಿದ್ದಾರೆ? ಮೆಲ್ಲನೆ ಗಂಡನನ್ನು ಎಬ್ಬಿಸಿದಳು.
"ಏನೇ ? ಈ ನಡುರಾತ್ರೀಲಿ.. ?"
"ಯಾರೋ, ಫೋನ್ ಮಾಡ್ತಿದ್ದಾರೆ."
"ಯಾರೂಂತ ನೋಡಬಾರದ ?"
"ಹೆಸರೇನೂ ಬರ್ತಿಲ್ಲ. ಹೊಸತೊಂದು ನಂಬರ್ ಕಣ್ರೀ...."
"ಸರಿ"ಎನ್ನುತ್ತಾ ಮುನೀರ್ ಕರೆಯನ್ನು ರಿಸೀವ್ ಮಾಡಿದ. ಇದುವರೆಗೂ ಕೇಳಿರದ ಹೆಣ್ಣು ಧ್ವನಿಯ ಉತ್ತರಕ್ಕೆ ಮುನೀರ್ ಬೆಚ್ಚಿಬಿದ್ದ...... ಮೈಯೆಲ್ಲಾ ಬೆವರತೊಡಗಿತು...
"ಮುನೀರ್ ಇದುವರೆಗೂ ಕೇಳಿರದ ಒಬ್ಬಳು ಹೆಣ್ಣಿನ ಧ್ವನಿಕೇಳಿ ಒಂದು ಕ್ಷಣ ಬೆಚ್ಚಿಬಿದ್ದ.. ಮೈಯೆಲ್ಲಾ ಹೆದರಿಕೆಯಿಂದ ಬೆವರಿಳಿಯತೊಡಗಿತು.."
"ಆ ಕಡೆಯಿಂದ ಹಲೋ ...ಹಲೋ .. ಎಂದು ಮತ್ತಷ್ಟು ಸಲ ಧ್ವನಿ ಬರುತ್ತಲೇ ಇತ್ತು....."
ಕೊನೆಗೂ ಧೈರ್ಯ ಮಾಡಿಕೊಂಡ ಮುನೀರ್ ಕೊನೆಗೂ ಪ್ರತಿಕ್ರಿಯಿಸಿದ......ಹ ... ಹ ಹಲೋ ....
"ಯಾಕಿಷ್ಟು ಗಾಬರಿಯಾಗ್ತಿದೀರಾ ? ಮುನೀರ್ ತಾನೇ ಮಾತಾಡ್ತಾ ಇರೋದು ?"
"ಹ.. ಹೌದು, ಯಾರಿದು? ಗೊತ್ತಾಗಿಲ್ಲ (ಮುನೀರ್ ಮತ್ತಷ್ಟು ಗಾಬರಿಗೊಂಡ..)
"ದಯವಿಟ್ಟು ಫೋನ್ ಕಟ್ ಮಾಡ್ಬೇಡಿ.. ನಾನು ಸಾಜಿದ ! ಶಾಜಹಾನ್ ನ ತಂಗಿ..."
ಅಷ್ಟು ಹೇಳಿದ್ದೇ ತಡ, ಮುನೀರ್'ಗೆ ಏನೋ ಗಂಟಲೊಳಗೆ ಸಿಕ್ಕಿದಂತಾಯಿತು. ಏಕೆಂದರೆ ಮನೆಗೆ ಬಂದಾಗಲೇ ಅವಳು ಮಾಡಿದ ತುಂಟತನದ ನೆನಪು ಮುನೀರ್'ಗೆ ಈಗಲೂ ಮಾಸಿರಲಿಲ್ಲ.
"ಕಟ್ ಮಾಡಿದ್ರೆ ನಾನು ಮತ್ತೆ ಮತ್ತೆ ಕರೆಮಾಡುವೆ "ಜೋರಾಗಿ ನಗುತ್ತಲೇ ಸಾಜಿದ ಮಾತಿಗಿಳಿದಳು.. ಒಂದೆರಡು ನಿಮಿಷ ಬಿಟ್ಟು ಮತ್ತೆ ಕಾಲ್ ಮಾಡ್ತೇನೆ ಅನ್ನುತ್ತಾ ಡಿಸ್ಕನೆಕ್ಟ್ ಮಾಡಿದಳು...
ಮುನೀರ್'ಗೆ ನಡುಕ ಶುರುವಾಯಿತು. ಮುಖದ ಮೇಲೆ ಬೆವರ ಹನಿ ಕಂಡಿದ್ದೇ ತಡ, ನೂರ್'ಜಹಾನ್ "ಏನಾಯ್ತು ? ಯಾಕಿಷ್ಟು ಗಾಬರಿಯಾಗಿದ್ದೀರಿ..? ಯಾರದು ಫೋನ್'ನಲ್ಲಿ ? ಮುಸ್ತಫಾನ ? ಎಲ್ಲವೂ ಕ್ಷೇಮ ತಾನೇ ?"ಗಂಡನ ಕೈ ಹಿಡಿದು ಪ್ರಶ್ನೆಗಳ ಸುರಿಮಳೆಗೈದಳು.
"ಹೇಯ್, ಹಾಗೇನಿಲ್ಲ. ವ್ಯಾಪಾರದ ಬಗ್ಗೆ ! ನೀನು ಮಲಗು" ಎನ್ನುತ್ತಾ ರೂಮಿನ ಲೈಟ್ ಆಫ್ ಮಾಡಿ ಮುನೀರ್ ಕೋಣೆಯಿಂದ ಹೊರಬಂದ. ತನ್ನ ಪ್ರೀತಿಯ ಹೆಂಡತಿಗೆ ಮೊದಲ ಬಾರಿ ಸುಳ್ಳು ಹೇಳಿ ಮನಸ್ಸೇಕೋ ಕಸಿವಿಸಿಯಾದ್ರೂ, ಆ ಸನ್ನಿವೇಶ ಅವನನ್ನು ಇಕ್ಕೆಡೆಗೆ ಸಿಲುಕಿಸಿತ್ತು.... ದಿನವಿಡೀ ಆಯಾಸಗೊಂಡಿದ್ದ ನೂರ್'ಜಹಾನ್ ಕೂಡ ಗಾಢನಿದ್ದೆಗೆ ಜಾರಿದಳು...
"ಅಲ್ಲ, ಈ ನಡುರಾತ್ರೀಲಿ ನನ್ನೊಡನೆ ಮಾತಾಡುವಂತ ವಿಷಯವಾದ್ರೂ ಏನು ? ಯಾ ಅಲ್ಲಾಹ್ ! ನೀನೇ ಕಾಪಾಡು. ಇಷ್ಟೊಂದು ತಡರಾತ್ರಿ ಫೋನ್ ಮಾಡಿದ ಉದ್ದೇಶವಾದ್ರೂ ಏನು ? ಎಂದು ಚಿಂತಿಸುವಷ್ಟರಲ್ಲೇ ಮತ್ತೆ ಫೋನ್ ಮೊಳಗಿತು.. ಟ್ರಿಣ್ ಟ್ರಿಣ್ .....! ನಡುಗುತ್ತಿದ್ದ ಕೈಯಲ್ಲೇ ಮೊಬೈಲ್ ಮುನೀರ್ ಕಿವಿಗಿಟ್ಟುಕೊಂಡ... ಹಲೋ .... ನಡುಕದಿಂದ ಮುನೀರ್'ನ ಧ್ವನಿ ಕೂಡ ಸರಿಯಾಗಿ ಹೊರಬರುತ್ತಿರಲಿಲ್ಲ... ಏನು ವಿಷಯ ? ಅದೂ ಕೂಡ ಈ ನಡುರಾತ್ರೀಲಿ ? ಸ್ವಲ್ಪ ಆವೇಶದಿಂದಲೇ ಕೇಳಿದ ಮುನೀರ್ !
"ಹೋ ! ಯಾಕಿಷ್ಟು ಆವೇಶಗೊಳ್ಳುತ್ತೀರಾ..?ಕೂಲ್ ಡೌನ್ ! ನೀವಿಷ್ಟು ಜೋರಾಗಿ ಮಾತಾಡಿದ್ರೆ ನನ್ನ ಗ್ಲಾಮರ್ ಎಲ್ಲಾ ಕಡಿಮೆಯಾಗ್ಬೋದಲ್ಲವೇ?"
"ಹಾಗೆಲ್ಲ ಮಾತಾಡ್ಬೇಡಿ ! ನೀವೊಬ್ಬ ಹೆಣ್ಣುಂತ ನಾನು ಗೌರವಿಸುತ್ತೇನೆ. ನಿಮ್ಮ ಮೇಲಿರುವ ರೆಸ್ಪೆಕ್ಟ್ ಇಲ್ಲದಂತೆ ಮಾಡೋ ಅವಕಾಶ ಕೊಡಬೇಡಿ" ಕೊಪದಿಂದಲೇ ಉತ್ತರಿಸಿದ ಮುನೀರ್ !
"ಹಾಗೇನಿಲ್ಲ. ಮಲಗಿದ್ರೂ ನಿದ್ದೆ ಬರ್ತಿಲ್ಲ. ಅದಕ್ಕೋಸ್ಕರ ಈಗ ನಿಮಗೆ ಕಾಲ್ ಮಾಡಿದ್ದು ಏನೂಂತ ಗೊತ್ತಿಲ್ಲ. ಮನಸ್ಸಿಗೇನೋ...." ಅನ್ನುವಷ್ಟರಲ್ಲಿ ಮುನೀರ್ ಫೋನ್ ಡಿಸ್ಕನೆಕ್ಟ್ ಮಾಡ್ಬಿಟ್ಟ.
"ಛೆ ! ಈಗೂ ಉಂಟೆ ? ಹೆಣ್ಣಲ್ಲವೇ ? ಅವಳೋ, ಅವಳ ಅಲಂಕಾರವೋ ? ಬೆಳಗ್ಗೇನೇ ನನಗೆ ಅವಳೊಂದು ಚಾಪ್ಟರ್ ಎಂದು ಗೊತ್ತಾಗಿತ್ತು. ನನ್ನ ಮನಸ್ಸೇ ಕದಡಿಹೋಯಿತು ! ಯಾರಿಗಾದ್ರೂ ಗೊತ್ತಾದ್ರೆ ಏನು ಗತಿ? ಹಾಲ್'ನ ಸುತ್ತಲೂ ಕಣ್ಣಾಡಿಸಿದ... ಇಲ್ಲ ಯಾರೂ ಇಲ್ಲ ಅಲ್ ಹಮ್ದುಲಿಲ್ಲಾಹ್ ! ತನ್ನ ಕೋಣೆಯತ್ತ ನೋಡಿದಾಗ.....
..... ತಟ್ಟನೆ ತನ್ನ ಪ್ರಿಯ ಪತ್ನಿ ನೂರ್'ಜಹಾನ್'ಳ ನೆನಪಾಯಿತು. ಪಾಪ ! ಅವಳಿಗೇನಾದರೂ ಗೊತ್ತಾದ್ರೆ? ಅವಳಂತೂ ಸಹಿಸಲೂ ಅಸಾಧ್ಯ...
ಒಂದೊಂದಾಗಿ ಚಿಂತಿಸುತ್ತಲೇ ಇರುವಾಗ ಮತ್ತೊಮ್ಮೆ ಮೊಬೈಲ್ ಕರೆ ಬರತೊಡಗಿತು. ಮುನೀರ್ ಕಣ್ಣೆತ್ತಿಯೂ ಮೊಬೈಲ್ ಕಡೆ ನೋಡಲಿಲ್ಲ. ನಿರಂತರವಾಗಿ ಮೊಬೈಲ್ ಕರೆ ಬರುತ್ತಲೇ, ತಡೆಯಲಾರದೆ ಮೊಬೈಲ್ ಎತ್ತಿ ನೋಡಿದಾಗ ಬೇರೊಂದು ನಂಬರಿನ ಕರೆಯಾಗಿತ್ತದು. ಭಯದಿಂದಲೇ ಫೋನ್ ರಿಸೀವ್ ಮಾಡಿದಾಗ ಮತ್ತೊಂದು ಹೆಣ್ಣಿನ ಧ್ವನಿ...
"ಯಾರು?" ಮುನೀರ್ ಪ್ರಶ್ನೆ !
"ಏನಣ್ಣ ಹೀಗಂತೀಯ? ನಾನು ಹಫ್ಸ ! ನನ್ನ ಧ್ವನಿ ಮರೆತುಹೋಯ್ತೆ..?"
"ಹೋ ನೀನಾ ? ಏನು ಮೋಳೆ ? ದುಗುಡದಿಂದಲೇ ಕೇಳಿದನು.
"ಶಾಜು ಮೆಸೇಜ್ ಮಾಡಿದ್ದಾಳೆ. ನಿಮ್ಮ ಮೊಬೈಲ್'ಗೆ ಹಲವು ಬಾರಿ ಕರೆಮಾಡಿದರೂ ನೀವು ಫೋನ್ ರಿಸೀವ್ ಮಾಡಿಲ್ಲವಂತೆ..!"
"ಹೌದಾ? ನಾನು ನಿದ್ದೆಯಲ್ಲಿದ್ದೆ ! ಫೋನ್ ಸೈಲೆಂಟಾಗಿತ್ತು. ಪರ್ವಾಗಿಲ್ಲ ನಾನೇ ಕಾಲ್ ಮಾಡ್ತೇನೆ ! ಎಂದು ಮೊಬೈಲನ್ನು ಪರೀಕ್ಷಿಸುವಾಗ ಅಚ್ಚರಿ ಕಾದಿತ್ತು. ಸಾಜಿದಾಳ ನಂಬರ್ ಅಲ್ಲದೆ ಬೇರೆ ಯಾವುದೇ ಮಿಸ್' ಕಾಲ್ ಕಾಣ್ತಿಲ್ಲ . ತಟ್ಟನೆ ಮತ್ತೊಮ್ಮೆ ಕಾಲ್ ! ಹೇಗೂ ರಿಸೀವ್ ಮಾಡಿದ ಮುನೀರ್'ಗೆ ಕೇಳಿಸಿದ್ದು ಮಾತ್ರ ಸಾಜಿದಾಳ ಶಬ್ದ. ಪ್ಲೀಸ್ ಮುನೀರ್, ಐದು ನಿಮಿಷ ನನ್ನ ಮಾತು ಕೇಳಿ... ಅಯ್ತು ಏನೂಂತ ಹೇಳ್ಬಿಡು. ಮುನೀರ್ ಒಲ್ಲದ ಮನಸ್ಸಿಂದಲೇ ಉತ್ತರಿಸಿದ.
"ನೋಡಿ, ಮುನೀರ್ ಎಷ್ಟು ಸುಂದರವಾದ ರಾತ್ರಿ.. ತುಂತುರು ಮಳೆಯೂ ಬರುತ್ತಿದೆ. ಅಲ್ಲಿಯೂ ಬರುತ್ತಿದೆಯೇ?"
"ಇದನ್ನು ಕೇಳಲಿಕ್ಕೋಸ್ಕರವೇ ಕಾಲ್ ಮಾಡಿದ್ದ? ಹೂಂ ! ಇಲ್ಲಿಯೂ ಮಳೆ ಬರುತ್ತಿದೆ"
" ಶಾಜಹಾನ್ ಮತ್ತು ಹಫ್ಸ ರೋಮ್ಯಾನ್ಸ್ ಮಾತನಾಡುತ್ತಿದ್ದಾರೆ. ನವಜೋಡಿಯಲ್ಲವೇ? ಶಾಜು ರಾತ್ರಿಯಿಡೀ ಬಾಲ್ಕನಿಯಲ್ಲೇ ಕುಳಿತ್ಕೊಂಡು ಹಫ್ಸಳೊಂದಿಗೆ ಮಾತಾಡ್ತಾ ಇದ್ದಾನೆ. ಅವರನ್ನು ಕಂಡು ನಂಗೂ ಪ್ರೀತಿಸಬೇಕೆನಿಸುತ್ತಿದೆ."
"ಇಲ್ಲ, ಮುನೀರ್ ಏನೂ ಉತ್ತರಿಸಲಿಲ್ಲ."
"ಏನಾಯ್ತು ಮುನೀರ್ ? ಏನೂ ಪ್ರತಿಕ್ರಿಯಿಸುತ್ತಿಲ್ಲ."
"ಅದು ಬಿಟ್ಟು ಬೇರೆನಾದ್ರೂ ಇದ್ರೆ ಬೇಗ ಹೇಳು. ನನಗೆ ಆಯಾಸವಾಗಿದೆ. ನಿದ್ದೆಯೂ ಬರುತ್ತಿದೆ. ಫಜ್ರ್ ನಮಾಝ್'ಗೆ ಎದ್ದು ಅಂಗಡಿಗೂ ಹೋಗಬೇಕು." ಮುನೀರ್ ಮಾತಿನಲ್ಲಿ ತೀಕ್ಷಣೆಯಿತ್ತು.
ಆ ಕ್ಷಣದಲ್ಲಿ ಬಂದ ಅವಳ ಮಾತಿಗೆ ಮುನೀರ್ ಮೊಬೈಲ್ ಫೋನ್ ಡಿಸ್ಕನೆಕ್ಟ್ ಮಾಡಿದ.. ಅವಳು ಹೇಳಿದ ಮಾತೊಂದು ಮುನೀರ್'ಗೆ ಸಿಡಿಲು ಬಡಿದಂತಾಗಿತ್ತು....
ಮುನೀರ್'ಗೆ ತನ್ನ ಹೆಂಡತಿ ನೂರ್'ಜಹಾನಳೆ ಜೀವನಾಡಿಯಾಗಿದ್ದಳು.. ಅವಳ ಮದುವೆಯಾದ ಕ್ಷಣದಿಂದ ಬೇರೆಂದೂ ಹೆಣ್ಣಿನ ಬಗ್ಗೆ ಇದುವರೆಗೂ ಕನಸು ಮನಸಲ್ಲು ಚಿಂತಿಸಲಿಲ್ಲ..
ಒಂದು ಹೆಣ್ಣು ಮದುವೆಯಾಗಿ ಗಂಡಿನ ಮನೆಗೆ ಹೋಗುವಾಗ ಹಲವಾರು ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತದೆ. ತವರುಮನೆಯಲ್ಲಿ ಸಿಗದ ಕೆಲವೊಂದು ಅವಶ್ಯಕತೆಯನ್ನು ತನ್ನ ಗಂಡನ ಮನೆಯಲ್ಲಿ ಸಿಗಬಹುದೇನೋ ಎಂಬ ಮಹತ್ವಾಕಾಂಕ್ಷೆಯನಿಟ್ಟುಕೊಂಡಿರುವ ಅದೆಷ್ಟೋ ಹೆಣ್ಮಕ್ಕಳನ್ನು ನಾನು ಕಂಡಿದ್ದೇನೆ. ಆದರೆ ನನ್ನ ನೂರು ಮದುವೆಯಾಗಿ ಈ ಮನೆಗೆ ಕಾಲಿಟ್ಟ ಕ್ಷಣದಿಂದ ಅದ್ಯಾವುದೇ ಬೇಡಿಕೆಯಿಲ್ಲದೆ, ಯಾರ ಮಾತಿಗೂ ಮರುತ್ತರ ನೀಡದೆ ತನ್ನಷ್ಟಕ್ಕೆ ಮನೆಕೆಲಸ ಮಾಡಿಕೊಂಡಿರುವಳು. ಮನದಲ್ಲಿ ಯಾವುದೇ ತಾತ್ಸಾರ ಮನೋಭಾವವಿಲ್ಲದೆ ಹಫ್ಸಾಳ ಅರೈಕೆ ಮಾಡುವುದು, ಶಾಹಿದ್'ನನ್ನ ತನ್ನ ಹೆತ್ತ ತಾಯಿಗಿಂತಲೂ ಹೆಚ್ಚು ನೋಡಿಕೊಳ್ಳುವ ಆ ಮಮತೆ ಯಾರು ತಾನೇ ಮಾಡಿಯಾರು? ನೂರ್'ಜಹಾನ್'ಳ ಅ ತಾಳ್ಮೆಯ ತ್ಯಾಗವನ್ನು ನೆನೆಸಿದಾಗ ಮುನೀರ್'ನ ಕಣ್ಣುಗಳು ನೆನೆಯಿತು.
ಶಾಹಿದ್'ಗಂತೂ ಅವಳು ತಾಯಿಗಿಂತ ಹೆಚ್ಚು. ಸಣ್ಣ ವಯಸ್ಸಿನಲ್ಲಿ ಶಾಲೆಯಿಂದ ಮನೆಗೆ ಬರುವಾಗ ಸ್ವಲ್ಪ ತಡವಾದರೂ ಮನೆಯ ಬಾಗಿಲಂಚಿನಲ್ಲೇ ನಿಂತು ಶಾಹಿದ್'ನ ಬರುವಿಕೆಯನ್ನೇ ಕಾಯುತ್ತಿದ್ದಳು. ಕೆಲವೊಮ್ಮೆ ಹುಡುಕಿಕೊಂಡು ಶಾಲೆಯ ದಾರಿಯ ಇಕ್ಕೆಲಗಳಲ್ಲೂ ಹುಡುಕಾಡಿ ಹೋಗುವುದನ್ನು ಎಷ್ಟೋ ಬಾರಿ ಕಂಡಿದ್ದೇನೆ. ಅಕಸ್ಮಾತ್ ಶಾಹಿದ್'ಗೆ ಜ್ವರ ಬಂದರಂತೂ ಅಕಾಶವೇ ಕಳಚಿ ಅವಳ ತಲೆಯ ಮೇಲೆ ಬಿದ್ದಂತಾಗುತ್ತಿತ್ತು ನೂರ್'ಜಹಾನ್'ಳಿಗೆ..! ಒದ್ದೆ ಬಟ್ಟೆಯನ್ನು ಅವನ ಹಣೆಯ ಮೇಲಿಟ್ಟು ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಾಯುತ್ತಿದ್ದಳು.
ಯೌವ್ವನಕ್ಕೆ ಕಾಲಿಟ್ಟ ಮೇಲೆ ಶಾಹಿದ್'ನ ತಂದೆ ಪಟ್ಟಣದಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಸಿದಾಗಲಂತೂ ನಿದ್ದೆಗೆಟ್ಟ ಅದೆಷ್ಟೋ ರಾತ್ರಿಗಳಿವೆ. "ಯಾ ಅಲ್ಲಾಹ್ ! ನನ್ನ ಮಗು ಏನು ಮಾಡುತ್ತಿದೆಯೋ ಏನೋ ? ಸರಿಯಾಗಿ ಊಟ ಮಾಡಿದ್ದಾನೋ ಇಲ್ಲವೋ ?" ಎಂದೆನಿಸುತ್ತಾ ಕಣ್ಣೀರ ಕೋಡಿಯನ್ನೇ ಹರಿಸಿದ ದಿನಗಳೆಷ್ಟೋ? ಕಡು ಬಡತನದ ಮನೆಯಿಂದ ಬಂದಿರುವ ನೂರ್'ಜಹಾನ್ ಕಷ್ಟಕಾರ್ಪಣ್ಯಗಳ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಂಡು ಜೀವನ ಕಳೆದವಳು.. ! ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದೇಗೆಂದು ಕರಗತ ಮಾಡಿಕೊಂಡಿರುವವಳು.
ವರ್ಷಕ್ಕೆ ಬರುವ ಎರಡು ಪ್ರಮುಖ ಈದ್ ಹಬ್ಬಗಳಲ್ಲಿ ಮನೆಯವರೆಲ್ಲರೂ ಖರೀದಿಸಿದ ಬಟ್ಟೆಗಳಿಗಿಂತಲೂ ತೀರ ಕಡಿಮೆ ಕ್ರಯದ ಬಟ್ಟೆಗಳಲ್ಲೇ ಸಂತುಷ್ಟಪಡುತ್ತಿದ್ದಳು. ನೆರೆಕರೆಯವರ ಮದುವೆ ಸಮಾರಂಭಗಳಲ್ಲಿ ಹೋಗುವುದೇ ಬಹಳ ವಿರಳ. ಪೇಟೆ ಸುತ್ತಾಡುವುದು,, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಮನೆಗೆ ಬಂದ ಗಂಡನಿಗೆ ಅದು ಬೇಕು , ಇದು ಬೇಕಂತ ಗೋಳಿಡುವುದು ಯಾವುದೂ ನೂರ್'ಜಹಾನ್'ಳ ಜಾಯಮಾನವಲ್ಲ.
ಇಷ್ಟೆಲ್ಲಾ ಗುಣವುಳ್ಳ ನೂರ್'ಜಹಾನ್ ಮದುವೆಯಾಗಿ 14 ವರ್ಷವಾದರೂ ಅವಳಿಗೆ ಸಂತಾನಭಾಗ್ಯ ಇಲ್ಲದಿರುವುದಕ್ಕೆ ಮುಖ್ಯ ಕಾರಣವೇ ಬೇರೆ ......
"ನೂರ್'ಜಹಾನ್ ಒಳ್ಳೆಯ ಗುಣನಡತೆಯುಳ್ಳ ಹೆಣ್ಣಾದರೂ ಮದುವೆಯಾಗಿ ಹದಿನಾಲ್ಕು ವರುಷ ಕಳೆದು ಅವಳಿಗೆ ಸಂತಾನಭಾಗ್ಯ ಇಲ್ಲದಿರುದಕ್ಕೆ ಮುಖ್ಯ ಕಾರಣವೇ ಬೇರೆ...
ಮದುವೆಯಾಗಿ ಇಷ್ಟು ವರ್ಷಗಳು ಎಲ್ಲರೂ ಅವಳನ್ನು "ಬಂಜೆ" ಎಂದು ಹೀಯಾಳಿಸಿ ಕರೆಯುತ್ತಿದ್ದರು.. ಆದರೆ ಅವಳು ನಿಜವಾಗಿಯೂ ಮಗುವನ್ನು ಹೆರಲು ಸಾಧ್ಯವಿರಲಿಲ್ಲವೇ..? ಇಲ್ಲ, ಅವಳಿಗೆ ಆ ಭಾಗ್ಯ ಅಲ್ಲಾಹು ಕೊಟ್ಟಿದ್ದ. ದೋಷವಿದ್ದದ್ದು ಮುನೀರ್'ನಲ್ಲಾಗಿತ್ತು. ಔಷಧಿ ತೆಗೆದುಕೊಂಡು
ಸರಿಪಡಿಸಬಹುದೆಂದು ವೈದ್ಯರು ಹೇಳಿದ್ದರು. ಆಗ ನೂರ್'ಜಹಾನ್ "ಏನೂಂದ್ರೆ, ನೀವು ನನಗೊಂದು ಮಾತು ಕೊಡಬೇಕು. ನಿಮ್ಮಲ್ಲಿ ಸಮಸ್ಯೆಯಿರುವುದು, ಡಾಕ್ಟರ್ ಔಷಧಿ ತೆಗೆಯಲು ಹೇಳಿದ್ದು ಯಾರಿಗೂ ಹೇಳ್ಬೇಡಿ. ನನಗೆ ಬಂಜೆ ಎನ್ನುವ ಪಟ್ಟ ಕಟ್ಟಿದ್ರೂ ಪರ್ವಾಗಿಲ್ಲ. ನಿಮ್ಮಲ್ಲಿ ಸಮಸ್ಯೆಯಿದೆಯೆಂದು ದಯವಿಟ್ಟು ಯಾರಿಗೂ ಗೊತ್ತಾಗಬಾರದು..." ಆ ಮಾತು ನೆನೆದಾಗ ಮುನೀರ್'ಗೆ ಕಣ್ಣಿಂದ ಕಣ್ಣೀರು ಬಂದದ್ದು ತಿಳಿಯಲೇ ಇಲ್ಲ.
ಹೊರಗೆ ಮಳೆ ರಭಸವಾಗಿ ಬೀಸುತ್ತಿತ್ತು. ಮಿಂಚಿನ ಬೆಳಕಿಗೆ ನೂರ್'ಜಹಾನ್'ಳ ಮುಖ ಸ್ಪಷ್ಟವಾಗಿ ಗೋಚರಿಸಿತು. ತಂಗಾಳಿಯು ಬೀಸುತ್ತಿದ್ದರೂ ಮುನೀರ್'ನ ಮನದಲ್ಲಿ ಮಾತ್ರ ಈಗ ಸುಂಟರಗಾಳಿಯೇ ಅಪ್ಪಳಿಸಿದಂತಿತ್ತು. ಸಾಜಿದಳ ಮಾತು ನೆನೆಸಿದಾಗಲಂತೂ ಮೈಯಲ್ಲಿ ನಡುಕವುಂಟಾಗತೊಡಗಿತು. ನಿದ್ದೆಯಂತೂ ಕೆಟ್ಟುಹೋಯಿತು ! ಏನು ಮಾಡೋದು ? ಹೇಗೂ ತಿರುಗಿ ಮುರುಗಿ ನಿದ್ದೆಗೆ ಜಾರಿದ.
ಡಬ್ ಡಬ್ ! ಬಾಗಿಲು ಕಿತ್ತುಹೋಗುವಂತೆ ಬಡಿದ ಶಬ್ದಕ್ಕೆ ನೂರ್'ಜಹಾನ್' ನಿದ್ದೆಯಿಂದೆದ್ದಳು. ಇದೋ ಬಂದೆಯೆನ್ನುತ್ತಾ ತಲೆಕೂದಲು ಕಟ್ಟಿಕೊಂಡು ಕದ ತೆರೆದಳು. "ಅಲ್ಲ, ಏನೂಂತ ನಿದ್ದೆ ಮಾಡೋದು ? ಮನೆಯವರಿಗೆ ಚಾ ತಿಂಡಿ ಕೊಡಬೇಕೆಂದು ಪರಿಜ್ಞಾನವಿಲ್ಲವೇ?" ನಬೀಸುಮ್ಮ ಬಾಯಿಂದ ಕಿಡಿಕಾರುವ ಮಾತುಗಳಿವು.... "ಆಹಾ, ಸೂಪರ್ ! ಒಳ್ಳೆಯ ದಿನವಿದು ನನಗೆ" ಎಂದು ಮನದಲ್ಲೇ ನೆನೆದು ಅಡುಗೆಮನೆಯತ್ತ ನಡೆದಳು.
"ಬೆಳಿಗ್ಗೆ ಬೇಗನೆ ಎದ್ದೇಳಬೇಕು, ಸುಬಹಿ ನಮಾಝ್ ಮಾಡಬೇಕು ಎಂಬುದೇ ಮರೆತುಹೋಯ್ತೆ ಮುನೀರೇ ?"
"ಇಲ್ಲಮ್ಮ, ಏನೋ ತಲೆನೋವು ! ಇನ್ನೂ ಸ್ವಲ್ಪ ನಿದ್ದೆ ಮಾಡ್ತೀನಿ."
"ಮಗನೇ, ಏನಾಯ್ತು ? ಜ್ವರ ಇದೆಯೇ ?" ಎನ್ನುತ್ತಾ ಅವನ ನೆತ್ತಿ ಮತ್ತು ಎದೆಯ ಮೇಲೆ ಕೈಯಿಟ್ಟು ಕೇಳಿದಳು ನಬೀಸುಮ್ಮ.
"ಹಾಗೇನಿಲ್ಲಮ್ಮಾ... ಯಾ ಅಲ್ಲಾಹ್ !" ಮರೆತೇಬಿಟ್ಟೆ ನೋಡು ಎನ್ನುತ್ತಾ ತಲೆಯ ಮೇಲೆ ಕೈಯಿಟ್ಟುಕೊಂಡ. "ಇವತ್ತು ಅಂಗಡಿಗೆ ಬೇಗ ಹೋಗಬೇಕಿತ್ತು. ದನಿ ಉಸ್ಮಾನ್ ಹಾಜಿ ಕುಟುಂಬಸಮೇತ ಹೊರಗಡೆ ಹೋಗಿದ್ದಾರೆ. ನಾನೇ ಹೋಗಿ ಅಂಗಡಿಬಾಗಿಲು ತೆರೆಯಬೇಕಷ್ಟೆ." ಎನ್ನುತ್ತಾ ಲಗುಬಗನೇ ಎದ್ದು ಟವೆಲ್ ತೆಗೆದುಕೊಂಡು ಬಾತ್ರೂಮ್'ಗೆ ಹೋದ...
ಐದೇ ನಿಮಿಷ ! ಸ್ನಾನ ಮುಗಿಸಿ ಅಂಗಿಯನ್ನು ತೊಟ್ಟ ಮುನೀರ್, "ನೂರೂ, ಬೇಗ ಚಹಾ ತಾ, ಲೇಟ್ ಆಯ್ತು
"ಇದೋ" ಬಿಸಿ ಬಿಸಿ ಚಾ ಟೇಬಲ್ ಮೇಲಿಟ್ಟಳು ನೂರ್'ಜಹಾನ್ ! ಸ್ವಲ್ಪ ತಡೀರಿ ಚಾ ಬಿಸಿಯಾಗಿದೆ. ಸಾಸರ್ ತರ್ತೇನೆ ! ತಣಿಸಿ ಕುಡಿಯಿರಿ ಅಡುಗೆಮನೆಯತ್ತ ಆತುರದಿಂದ ಹೋಗಿ ಸಾಸರ್ ಮತ್ತು ಉಪಹಾರ ತಂದಳು. ತಿಂಡಿ ಮುಗಿಸಿ ಮುನೀರ್ ಪೇಟೆಗೆ ಹೋದ್ಮೇಲೆ, ಕಸಬರಕೆಯೊಂದನ್ನು ಕೈಗೆತ್ತಿಕೊಂಡು ಅಂಗಳವನ್ನು ಗುಡಿಸಲು ಮುಂದಾದಳು. ರಾತ್ರಿಯಿಡೀ ಮಳೆಯಾದ್ದರಿಂದ ಹೆಚ್ಚು ಧೂಳು ಇರಲಿಲ್ಲ. ಆದರೆ, ಅಂಗಳವಿಡೀ ಮರದ ಎಲೆಗಳು, ಒಂದಷ್ಟು ಕಸಗಳು. ಉಫ್ ! ಅಂಗಳ ಶುದ್ದಿ ಮಾಡುವಷ್ಟರಲ್ಲಿ ಸುಸ್ತೋ ಸುಸ್ತು !
ಅಡುಗೆಮನೆಯಲ್ಲಿ ಮತ್ತಷ್ಟು ಪಾತ್ರೆಗಳನ್ನು ತೊಳೆಯುವಷ್ಟರಲ್ಲೇ "ನೂರ್ಜ, ಅಡುಗೆಮನೇಲೇ ಇರ್ತೀಯ, ಅಲ್ಲ ನೆಲ ಒರೆಸಬೇಡವೇ? ನೋಡು ಎಷ್ಟೊಂದು ಕೊಳಕಾಗಿದೆ. ಶಾಜಹಾನ್'ನ ಅಣ್ಣ ಮುಸ್ತಫ, ಬ್ರೋಕರ್ ಕುಂಞದು ಬರೋ ಹೊತ್ತಾಯ್ತು ! ಬಹುಶಃ ಮದುವೆ ವಿಚಾರ ಆಗಿರ್ಬೇಕು. ಹಗಲುಕನಸು ಕಾಣಬೇಡ. ಬೇಗ ಬೇಗ ಕ್ಲೀನ್ ಮಾಡಿ, ಏನಾದ್ರೂ ಒಳ್ಳೆಯ ತಿಂಡಿ ರೆಡಿ ಮಾಡು !"
"ಯಾ ಅಲ್ಲಾಹ್ ! ಅಡುಗೆಮನೆ ಕೆಲ್ಸಾನೇ ಮುಗಿದಿಲ್ಲ.ಇನ್ನು ಇದು ಬೇರೇನಾ ? ಅದೇ ನಾನು ಯೋಚಿಸ್ತಿದ್ದೆ. ಅಡುಗೆಮನೆ ಕೆಲಸ ಆದ್ಮೇಲೆ ಅತ್ತೆ ಇನ್ನೇನು ಹೇಳ್ತಾರೇನೋ? ಬಟ್ಟೆ ಒಗೆದಾಯಿತು. ತಿಂಡಿ ಮುಗೀತು ! ಇನ್ನೇನು ಮಾಡೋದಂತ ಟೆನ್ಶನ್'ನಲ್ಲಿದ್ದೆ. ಈಗ ತೃಪ್ತಿ ಆಯ್ತಪ್ಪ ......"
ಎಲ್ಲವೂ ರೆಡಿ ! ಅಷ್ಟರಲ್ಲೇ ಮುಸ್ತಫ ಮತ್ತು ಬ್ರೋಕರ್ ಕುಂಞದು ಮನೆಗೆ ಬಂದರು. ಮುನೀರ್ ಕೂಡ ಮನೆಯಲ್ಲಿಲ್ಲ. ಇದ್ದದ್ದು ಮೂರು ಹೆಂಗಸರು ಮಾತ್ರ. "ಹಫ್ಸ ಮೋಳೆ, ಬೇಗ ಅಣ್ಣನಿಗೆ ಫೋನ್ ಮಾಡು ! ಮುಸ್ತಫ, ಬ್ರೋಕರ್ ಇಬ್ಬರೂ ಬಂದಿದ್ದಾರೆ. ಬೇಗ ಬರಹೇಳು....." ನೂರ್'ಜಹಾನ್ ಓಡಿಹೋಗಿ ಹಫ್ಸಳಲ್ಲಿ ಹೇಳಿದಳು...
"ಹಪ್ಸಾ ಮೋಳೆ.. ಬೇಗ ಅಣ್ಣನಿಗೆ ಪೋನ್ ಮಾಡು.. ಮುಸ್ತಫ ಮತ್ತು ಬ್ರೋಕರ್ ಬಂದಿದ್ದಾರೆ.. ಅಣ್ಣನಲ್ಲಿ ಬೇಗ ಬರಹೇಳು.. ನೂರ್ ಜಹಾನ್ ಓಡಿಹೋಗಿ ಹಪ್ಸಾಳಲ್ಲಿ ಹೇಳಿದಳು...
"ಗೊತ್ತಾಯ್ತು ಅತ್ತಿಗೆ.., ಅಣ್ಣ ಮತ್ತು ಬ್ರೋಕರ್ ಮನೆಗೆ ಬರುತ್ತಾರೆಂದು ಶಾಜಹಾನ್ ನಿನ್ನೆನೇ ಪೋನ್ ಮಾಡಿ ತಿಳಿಸಿದ್ದರು. ನಾನು ಅಣ್ಣಂಗೆ ಫೋನ್ ಮಾಡಿದಾಗ ಬ್ಯುಸಿ ಅಂತಿದ್ದಾನೆ. ಅಣ್ಣನ ದನಿ ಇಲ್ವಂತೆ ! ಎಲ್ಲವನ್ನೂ ಒಬ್ಬನೇ ನೋಡ್ಕೋಬೇಕು. ನೀವೇ ಸುಧಾರಿಕೊಳ್ಳಿ ! ನಾನಂತೂ ಇಲ್ಲಿಂದ ಅಲುಗಾಡಲೂ ಸಾಧ್ಯವಿಲ್ಲ ಎಂದು ಖಂಡಿತವಾಗಿ ಹೇಳಿದ್ದಾನೆ ಅತ್ತಿಗೆ "
ಹೊ ! ಇದೊಳ್ಳೇ ಕೆಲಸವಾಯ್ತಲ್ಲ.. ಮದುವೆವಿಚಾರ ಮಾತಾಡೋಕ್ಕೆ ಗಂಡಸರೇ ಇಲ್ಲದಿದ್ರೆ ಹೇಗೆ ? ಅಲ್ಲ ತಂಗಿ ಮದುವೆ, ಎಲ್ಲವನ್ನೂ ನಾನೇ ನೋಡ್ಕೋಬೇಕಂತ ಗೊತ್ತಿಲ್ವೆ? ಬಂದವರು ಏನೆಲ್ಲಾ ಎಣಿಸ್ತಾರೇನೋ ? ಅವರೊಡನೆ ಮಾತಾಡಲು ಯಾರಾದ್ರೂ ಗಂಡಸರು ಇದ್ರೆ ಒಳ್ಳೇದು !
"ಏಕೆ ಗಡಿಬಿಡಿ ಮಾಡ್ತಿಯಾ ನೂರ್ಜ ? ಮುನೀರ್ ಬರದಿದ್ರೆ ಏನಂತೆ..? ನೀನು ಹೋಗಿ ಬಟ್ಟೆ ಒಗೆದುಹಾಕು. ಬಂದವರಲ್ಲಿ ನಾನೇ ಮಾತುಕತೆ ನಡೆಸ್ತೀನಿ." ನಬೀಸುಮ್ಮ ದರ್ಪದಿಂದಲೇ ಗುಣುಗಿದಳು.
"ಬನ್ನಿ, ಬನ್ನಿ ಮುಸ್ತಫ ! ಒಳಗೆ ಕುತ್ಕೊಂಡು ಮಾತಾಡೋಣ" ಅನ್ನುತ್ತಾ ನಬೀಸುಮ್ಮ ಇಬ್ಬರನ್ನೂ ತನ್ನ ಕೋಣೆಯೊಳಗೆ ಕುಳ್ಳಿರಿಸಿದಳು. ಅದೊಂದು ಸುದೀರ್ಘ ಮಾತುಕತೆಯೇ ನಡೆಯಿತು. ಬಂದವರ ಚರ್ಚಾವಿಷಯವೇನೂಂತ ನೂರ್"ಜಹಾನ್'ಳಿಗೆ ಒಂದಿಷ್ಟೂ ಗೊತ್ತಾಗಲಿಲ್ಲ. ಬಟ್ಟೆ ಒಗೆದು ಒಣಗಿಸಲು ಹಾಕಿದ ನೂರ್'ಜಹಾನ್ ಅತ್ತೆಯ ಕೋಣೆಯೊಳಗೆ ಪ್ರವೇಶಿಸಿದಳು. ಅದೇನೋ ಗೊತ್ತಿಲ್ಲ, ನೂರ್'ಜಹಾನ್'ಳನ್ನು ಕಂಡಿದ್ದೇ ತಡ, ನಬೀಸುಮ್ಮ, ಮುಸ್ತಫ ಬ್ರೋಕರ್ ಎಲ್ಲರೂ ಸ್ತಬ್ದರಾದರು. ಹಿಂದಿನ ದಿನವಿದ್ದ ಆ ಮುಗುಳ್ನಗೆ ಮುಸ್ತಫನ ಮುಖದಲ್ಲಿರದೆ ಗಂಭೀರ ಮನೋಭಾವನೆ ಕಂಡ ನೂರ್'ಜಹಾನ್' ಒಮ್ಮೆಲೇ ಗಾಬರಿಗೊಂಡಳು....
ಯಾ ಅಲ್ಲಾಹ್ ! ಏನಾಯಿತೋ ಏನೋ ?" ಮನದಲ್ಲಿ ನೆನೆಯುವಾಗಲೇ ಮುಸ್ತಫ ಮತ್ತು ಬ್ರೋಕರ್ ಹೊರಡಲನುವಾದರು. "ಅಮ್ಮ, ನಾವು ಏನು ಬೇಕೋ ಎಲ್ಲವನ್ನೂ ಕೂಲಂಕುಷವಾಗಿ ಹೇಳಿದ್ದೇವೆ. ಏನಿದ್ದರೂ ತೀರ್ಮಾನ ನಿಮ್ಮ ಕೈಯಲ್ಲಿದೆ. ನೀವು ಮತ್ತು ಮುನೀರ್ ಚೆನ್ನಾಗಿ ಆಲೋಚಿಸಿ ಒಂದು ಒಳ್ಳೆಯ ತೀರ್ಮಾನ ಕೈಗೊಂಡು ನಮಗೆ ತಿಳಿಸಿ. ನಿಮ್ಮ ಕರೆಗಾಗಿ ನಾವು ಕಾಯುತ್ತಿರುತ್ತೇವೆ." ಎನ್ನುತ್ತಾ ನಬೀಸುಮ್ಮಳಿಗೆ ಸಲಾಂ ಹೇಳಿ ಮುಸ್ತಫ ಮತ್ತು ಬ್ರೋಕರ್ ಮನೆಯಿಂದ ಹೊರಟುಬಿಟ್ಟರು.
ನೂರ್'ಜಹಾನ್'ಳ ಹೃದಯಬಡಿತ ಜೋರಾಗತೊಡಗಿತು. "ಯಾ ಅಲ್ಲಾಹ್, ಮುಸ್ತಫ ನನ್ನಲ್ಲಿ ಸ್ವಲ್ಪವೂ ಮಾತಾಡದೇ ಹೋದರಲ್ಲ? ಅವರು ಮಾಡಿದ ಚರ್ಚೆಯಾದರೂ ಏನು? ಅವರ ನಡವಳಿಕೆಯಲ್ಲೇನೋ ಒಂದು ಬದಲಾವಣೆಯಿತ್ತಲ್ಲ?" ಅತ್ತೆ ನಬೀಸುಮ್ಮಳ ಹತ್ತಿರ ಕೇಳಲು ನೂರ್'ಜಹಾನ್'ಳಿಗೆ ಧೈರ್ಯ ಬರಲಿಲ್ಲ. ಮತ್ತೊಮ್ಮೆ ಅವರ ರೌದ್ರಾವತಾರ ನೀಡಬೇಕಾಗುತ್ತೆ. ಒಂದಂತೂ ಗ್ಯಾರಂಟಿ ! ಏನೋ ಒಂದು ಟೆನ್ಶನ್ ವಿಷಯ ಇದ್ದೇ ಇದೆ. ಏನೇ ಇರಲಿ, ಸಮಯ ಮಧ್ಯಾಹ್ನ ಆಗುತ್ತಿದೆ. ಹೇಗೂ ಇವರು ಊಟಕ್ಕೆ ಬರೋ ಹೊತ್ತಾಯ್ತಲ್ಲಾ ! ಬಂದಾಗ ಕೇಳಿದರಾಯ್ತು. ಯಾಕೆ ಸುಮ್ಮನೆ ಅತ್ತೆಯ ಬಾಯಿಂದ ಕೇಳೋದು" ಅನ್ನುತ್ತಾ ಅಡುಗೆಕೋಣೆಗೆ ಹೋದಳು.
ಅನ್ನ ರೆಡಿ ಆಗಿತ್ತು. ಬೇಳೆ ಸಾರು ಮಾಡಲು ಪಾತ್ರೆಯೊಂದನಿಟ್ಟು ಪುನಃ ಯೋಚನಾಮಗ್ನಳಾದಳು. "ಅಲ್ಲ, ಅವರು ಯಾಕಾಗಿ ಬಂದದ್ದು? ಹಫ್ಸಳಿಗೆ ಏನಾದರೂ ಗೊತ್ತಿರಬಹುದೇ?" ಬೇಡ ನೂರೂ ಬೇಡ, ಕಂಟ್ರೋಲ್ ಎನ್ನುವ ತನ್ನ ಆತ್ಮಸಾಕ್ಷಿಯ ನುಡಿಗೆ ಶಾಂತಳಾದಳು.
ಮಸೀದಿಯ ಮಿನಾರ್'ಗಳಲ್ಲಿ ಲುಹರ್ ಬಾಂಗ್ ಶಬ್ದ ಕೇಳಿ ನೂರ್'ಜಹಾನ್ ಬೇಗನೇ ವುಝುಹ್ ಮಾಡಿ ನಮಾಝ್ ಮಾಡಿ ಬಾಗಿಲಂಚಿನಲ್ಲಿ ನಿಂತುಕೊಂಡು ಮುನೀರ್'ನ ಬರುವಿಕೆಗಾಗಿ ಕಾಯುತ್ತಿದ್ದಳು.....
ಗಂಟೆ ಮೂರಾಯಿತು.. ಮುನೀರ್ ಇದುವರೆಗೂ ಊಟಕ್ಕೆ ಬಂದಿರಲಿಲ್ಲ. "ಏನಾಯಿತು ಇವರಿಗೆ? ಯಾವತ್ತೂ ಊಟದ ಸಮಯಕ್ಕೆ ಸರಿಯಾಗಿ ಬರುವವರು ಇದುವರೆಗೂ ಕಾಣುತ್ತಿಲ್ಲವಲ್ಲ..." ನೂರ್'ಜಹಾನ್'ಳಿಗೆ ಭಯ ಆವರಿಸಿತು. ಹಫ್ಸ ಮೋಳೆ, ಒಮ್ಮೆ ಅಣ್ಣನಿಗೆ ಫೋನ್ ಮಾಡ್ತೀಯ..? ಗಂಟೆ ಮೂರಾದರೂ ಇದುವರೆಗೂ ಊಟಕ್ಕೆ ಬಂದಿಲ್ಲ ನೋಡು. ನನಗೇನೋ ಭಯವಾಗ್ತಿದೆ.
"ಗಾಬರಿಪಡಬೇಡಿ ಅತ್ತಿಗೆ... ಬಹುಶಃ ಅಂಗಡಿಯಲ್ಲಿ ಕೆಲಸವಿರಬಹುದೇನೋ? ಆದ್ರೂ ಈಗಲೇ ಮಾಡ್ತೇನೆ ಅತ್ತಿಗೆ. ನಿಷ್ಚಿಂತೆಯಿಂದಿರಿ" ಎನ್ನುತ್ತಾ ಮುನೀರ್'ಗೆ ಕರೆ ಮಾಡಿದಳು. ಉಹುಂ ! ನಾಲ್ಕೈದು ಬಾರಿ ಕರೆ ಮಾಡಿದರೂ ಮುನೀರ್ ಫೋನ್ ಕರೆ ಸ್ವೀಕರಿಸಲಿಲ್ಲ. ಯಾ ಅಲ್ಲಾಹ್ ನಿನ್ನ ಅಣ್ಣನಿಗೆ ಏನಾಯಿತು? ಎನ್ನುತ್ತಾ ನೂರ್'ಜಹಾನ್ ತನ್ನ ಎದೆಯ ಮೇಲೆ ಕೈಯಿಡುವಷ್ಟರಲ್ಲಿ ಮೊಬೈಲ್ ಕರೆಗಂಟೆಯು ಮೊಳಗಿತು. ಅತ್ತೆ, ಅಣ್ಣನ ಫೋನ್.."
"ಊಟ ಮಾಡಲು ಇದುವರೆಗೂ ಯಾಕೆ ಬಂದಿಲ್ಲಾಂತ ಕೇಳು ಹಫ್ಸ" ಗಾಬರಿಯಿಂದಲೇ ಹೇಳಿದಳು.
"ಯಾಕಣ್ಣ, ಇನ್ನೂ ಊಟಕ್ಕೆ ಬರ್ಲಿಲ್ಲ. ಅತ್ತೆ ತುಂಬಾ ಟೆನ್ಶನ್'ನಲ್ಲಿದ್ದಾರೆ." ಮುನೀರ್ ಏನೋ ತಡವರಿಸಿದ. ಆ ಮಾತು ಸ್ಪಷ್ಟವಾಗಿರದೆ ಡಿಸ್ಕನೆಕ್ಟ್ ಕೂಡ ಆಗೋಯ್ತು.
"ಹಫ್ಸ, ಏನಂತೆ ?"
"ಅಣ್ಣ ತುಂಬಾ ಬ್ಯುಸಿಯಂತೆ, ನೀವು ಊಟ ಮಾಡಲು ಹೇಳಿದ್ದಷ್ಟೇ ಕೇಳಿಸಿದ್ದು. ಮತ್ಯಾವುದೂ ಸ್ಪಷ್ಟವಿರಲಿಲ್ಲ. ಅಣ್ಣ ಹೊಟೇಲ್'ನಲ್ಲಿ ಊಟ ಮಾಡ್ತಾರಂತೆ"
"ಅಲ್ ಹಮ್ದುಲಿಲ್ಲಾಹ್ ! ಕ್ಷೇಮದಲ್ಲಿದ್ದಾರಲ್ಲವೇ !ಅಷ್ಟು ಸಾಕು ಎನ್ನುತ್ತಾ ಕೈತೊಳೆದು ಊಟಕ್ಕೆ ಕುಳಿತಳು. ಆದರೆ ಮನಸ್ಸಿಗೇನೋ ಕಿಂಚಿತ್ತೂ ಸಮಾಧಾನವಿಲ್ಲ. ಮಧ್ಯಾಹ್ನದ ಹೊತ್ತು ಯಾವಾಗಲೂ ಜೊತೆಯಾಗೇ ಊಟ ಮಾಡುತ್ತಿದ್ದ ನೂರ್'ಜಹಾನ್'ಳಿಗೆ ಊಟ ಸರಿಯಾಗಿ ಸೇರಲಿಲ್ಲ. ಅರ್ಧಕ್ಕೆ ನಿಲ್ಲಿಸಿ ಕೈತೊಳೆದು ಕೋಣೆಯೊಳಗೆ ಹೋಗಿ ಮಲಗಿದಳು.
ಮಗ್ರಿಬ್, ಇಶಾ ಎರಡೂ ನಮಾಝ್ ಮುಗಿದಿದ್ದರೂ ಮುನೀರ್ ಇದುವರೆಗೂ ಮನೆಗೆ ಬಂದಿರಲಿಲ್ಲ. ಹಫ್ಸ ಮತ್ತು ನಬೀಸುಮ್ಮ ಮಾತ್ರ ಊಟ ಮುಗಿಸಿ ತಮ್ಮ ತಮ್ಮ ಕೋಣೆಗೆ ಹೋಗಿದ್ದರು. ನೂರ್'ಜಹಾನ್ ಳಿಗೆ ಮನದಲ್ಲೇನೋ ಹಲವು ಕೆಟ್ಟಾಲೋಚನೆಗಳು ಬರತೊಡಗಿದ್ದವು. ಮದುವೆಯಾಗಿ 14 ವರ್ಷದಲ್ಲಿ ಇಂತಹ ಅನುಭವವಾದದ್ದು ಇದೇ ಮೊದಲ ಬಾರಿ ! ಯಾರಿಗಾದರೂ ಚಿಂತೆಯೇ ಅಲ್ವೇ ! ಕಾದೂ ಕಾದೂ ಕಣ್ಣು ಮಂಪರು ಆಗುವಷ್ಟರಲ್ಲಿ ಮುನೀರ್ ಬಂದು ಮುಂಬಾಗಿಲು ಬಡಿಯತೊಡಗಿದನು... "ನೂರೂ ನೂರೂ"
ಸಮಯ ಮಧ್ಯರಾತ್ರಿಯಾಗಿತ್ತು ! "ಇದೋ ಬಂದೆ" ಎನ್ನುತ್ತ ಕದ ತೆರೆದಳು. ಹೊರಗಡೆ ಕಾರ್ಗತ್ತಲು ! ಬೀದಿಯ ಒಂದು ದೀಪವೂ ಉರಿಯುತ್ತಿರಲಿಲ್ಲ. ಆ ಕತ್ತಲಿನಲ್ಲಿ ಕೈಯಲ್ಲೊಂದು ಟಾರ್ಚ್ ಹಿಡಿದುಕೊಂಡೇ ಮನೆಯೊಳಗೇ ಬಂದಿದ್ದನು.
"ಏನ್ರೀ, ಇಷ್ಟು ಹೊತ್ತು ? ಕಾದು ಕಾದು ಎಲ್ಲರೂ ಮಲಗಿಬಿಟ್ರು. ಏನೂಂತ ಕೇಳಬಹುದೇ? ನನಗಂತೂ ಪ್ರಾಣ ಹೋಗುವಷ್ಟು ಭಯವಾಗಿತ್ತು ಗೊತ್ತಾ ? ಊಟಕ್ಕೂ ಬರಲಿಲ್ಲ. ಈಗ ನೋಡಿದ್ರೆ ಮಧ್ಯರಾತ್ರಿ ಬೇರೇ ! ಎಲ್ಲವೂ ಕ್ಷೇಮ ತಾನೇ ?"
ಅದೇಕೋ ಏನೋ ಮುನೀರ್ ಮರುಮಾತಾಡದೆಯೇ, ನೇರವಾಗಿ ತನ್ನ ತಾಯಿ ನಬೀಸುಮ್ಮಳ ಕೋಣೆಯ ಕಡೆಗೆ ಹೆಜ್ಜೆಯಿಟ್ಟನು......
ಎಂತಹ ಅವಸ್ಥೆಯಿದು..? ಮುನೀರ್'ನ ದಿಟ್ಟಿಸಿ ನೋಡುತ ಗರಬಡಿದಂತೆ ನಿಂತುಬಿಟ್ಟಳು ನೂರ್'ಜಹಾನ್ ! "ಅಂಗಡಿಯಿಂದ ಮನೆಗೆ ಬಂದೊಡನೆ ನೇರ ಬಚ್ಚಲುಮನೆಗೆ ಹೋಗಿ ನೂರ್ ಜಹಾನ್ ಕಾಯಿಸಿಟ್ಟಂತಹ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿ ನಂತರವೇ ಕೋಣೆಗೆ ಬರುವ ರೂಢಿ ! ಆದರೆ ಇವತ್ತು ಸ್ನಾನವೂ ಇಲ್ಲ, ಮಾತುಕತೆಯೂ ಇಲ್ಲ." ನೂರ್'ಜಹಾನ್'ಳಿಗೆ ಆತಂಕವುಂಟಾಯಿತು. ನನ್ನಲ್ಲಿ ಕೂಡ ಒಂದೇ ಒಂದು ಮಾತು ಮಾತಾಡದೇ ಅವರ ಅಮ್ಮನ ಕೋಣೆಗೆ ಹೋಗೋದಂದ್ರೆ? ಖಂಡಿತವಾಗಿಯೂ ಇದೊಂದು ಗಂಭೀರವಾದ ವಿಚಾರವೇ ಇರಬೇಕು. ಇಲ್ಲ, ಇನ್ನು ನನ್ನಿಂದ ಸಹಿಸಲಸಾಧ್ಯ! ಮದುವೆ ವಿಚಾರ ಮನೆಯಲ್ಲಿ ನಡೀತಿರುವಾಗ ನನ್ನಲ್ಲೇ ಮುಚ್ಚಿಡುವ ರಹಸ್ಯ ಅಂತದ್ದೇನಿದೆ..? ಏನೇ ಆಗಿರಲಿ ವಿಷಯ ಏನೂಂತ ನನಗೆ ಗೊತ್ತಾಗಲೇಬೇಕು." ನೂರ್ ಜಹಾನ್ ನೇರವಾಗಿ ಅತ್ತೆಯ ಕೋಣೆಯ ಹತ್ತಿರಕ್ಕೆ ಮುಟ್ಟಿದಳು.
ಕೋಣೆಯೊಳಗೆ ಮುನೀರ್ ಮತ್ತು ನಬೀಸುಮ್ಮ ಯಾವುದೋ ವಿಚಾರದಲ್ಲಿ ಚರ್ಚೆಯಲ್ಲಿದ್ದು, ಮುನೀರ್ ಕೋಪದಿಂದಲೇ "ಇದು ಸಾಧ್ಯವೇ ಇಲ್ಲ" ಅನ್ನೋ ಮಾತು ರೂಮಿನಿಂದ ಹೊರಗೆ ಕೇಳಿಸಿತು.
"ಯಾಕಾಗಲ್ಲ.., ನನ್ನ ಮಾತನ್ನು ನೀನು ಇಲ್ಲ ಅಂತೀಯಾ ? ಅಷ್ಟೊಂದು ಪೊಗರೇ ?"
"ಇಲ್ಲಾಂದ್ರೆ ಇಲ್ಲ ಅಷ್ಟೆ, ಸುಮ್ಮನೆ ಹಠ ಮಾಡೋ ಅವಶ್ಯಕತೆಯಿಲ್ಲ"
"ಏನು, ಏನು ವಿಷಯ ?" ಅನ್ನುತ್ತಾ ಭಯದಿಂದಲೇ ನೂರ್'ಜಹಾನ್ ಕೂಡ ಅತ್ತೆಯ ಕೋಣೆಗೆ ಬಂದಳು.
"ಮುಚ್ಕೊಂಡು ಇಲ್ಲಿಂದ ಹೋಗ್ತೀಯ? ಇದು ಅಮ್ಮ ಮತ್ತು ಮಗನ ವಿಚಾರ ! ಕಳ್ಳಿಯ ಹಾಗೆ ರೂಮಿನೊಳಗೆ ಬಂದು ನಮ್ಮನ್ನೇ ಪ್ರಶ್ನಿಸಲು ನೀನ್ಯಾರು? ನಮ್ಮ ನಡುವೆ ಸಾವಿರ ಮಾತುಗಳಿರುತ್ತವೆ. ಎಲ್ಲವನ್ನೂ ನಿನ್ನ ಮುಂದೆಯೇ ಮಾತಾಡ್ಬೇಕೇ ? ನೀನೇನು ಮಹಾರಾಣಿಯೇ?" ನಬೀಸುಮ್ಮಳ ಕೆಂಡ ಕಾರುವಂತಹ ಮಾತು ಕೇಳಿ ನೊಂದ ನೂರ್'ಜಹಾನ್ ಕಣ್ಣೀರಿಡುತ್ತಾ ತನ್ನ ಕೋಣೆಗೆ ಹಿಂದಿರುಗಿದಳು...
ನಬೀಸುಮ್ಮ ಮತ್ತು ಮುನೀರ್ ಚರ್ಚೆ ಮುಗಿದದ್ದೇ ಮುನೀರ್ ತನ್ನ ಕೋಣೆಗೆ ಬರುವಷ್ಟರಲ್ಲಿ ನಡುರಾತ್ರಿಯಾಗಿತ್ತು. ಮುಖದ ಮೇಲೆಲ್ಲ ಬೆವರು, ಜೊತೆಗೆ ಆಯಾಸ ಬೇರೆ. ಮುಖದಲ್ಲೆನೋ ವಿಷಾದ ಮನೋಭಾವ ! ಬಂದದ್ದೇ ಹಾಸಿಗೆಯ ಮೇಲೆ ಅಂಗಾತ ಬಿದ್ದುಕೊಂಡ ಮುನೀರ್ ಸಣ್ಣ ಮಕ್ಕಳ ಹಾಗೆ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ....
"ಯಾ ಅಲ್ಲಾಹ್, ರೀ ನಿಮಗೇನಾಯಿತು?"ನೂರ್'ಜಹಾನ್'ಳ ಎದೆಯ ಕಟ್ಟೆಯೊಡೆಯಿತು. ಜೀವಿತಃಕಾಲದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ಗಂಡಸರು ಅಳುವುದೆಂದರೆ.....? ರೀ, ರೀ ಏನಾಯ್ತೂಂತ ನನ್ನಲ್ಲಿ ಹೇಳಿ ಪ್ಲೀಸ್ ..! ನನ್ನ ಮನ ನೋಯುತ್ತಿದೆ. ಯಾಕಾಗಿ ನೀವು ಅಳೋದು? ನನ್ನಲ್ಲೊಮ್ಮೆ ಹೇಳಬಾರದೇ? ಏನಿದ್ದರೂ ನಾವಿಬ್ಬರೂ ಜೊತೆಗೂಡಿ ನಿವಾರಿಸಬಹುದು ತಾನೇ ? ನಿಮ್ಮ ಈ ಅಳು ಕಂಡು ನನಗೇಕೋ ತುಂಬಾ ಭಯವಾಗ್ತಿದೆ. ಅವನನ್ನು ಅಲುಗಾಡಿಸಿಕೊಂಡು ಹೇಳಿದ ನೂರ್'ಜಹಾನ್ ಕೂಡ ಜೋರಾಗಿ ಅಳತೊಡಗಿದಳು.
ನೂರ್ ಜಹಾನ್'ಳ ಎದೆಯ ಮೇಲೆ ತಲೆಯಿಟ್ಟ ಮುನೀರ್ "ಇಲ್ಲ ನೂರೂ ನನಗೆ ಇದು ಸಹಿಸಲಾಗುತ್ತಿಲ್ಲ ! ಅಲ್ಲಾಹು ನನ್ನನ್ನೇಕೆ ಹೀಗೆ ಪರೀಕ್ಷೆ ಮಾಡುತ್ತಿರೋದು?"
"ಯಾ ಅಲ್ಲಾಹ್ ? ಏನಾಯಿತೇನೋ ? ಏನೋ ದೊಡ್ಡ ಅನಾಹುತವೇ ಆಗಿರ್ಬೇಕು. ನೂರ್ ಜಹಾನ್'ಳಿಗೂ ದುಗುಡ ಆರಂಭವಾಯಿತು. ಮದುವೆಯಾಗಿ ಎಷ್ಟೋ ವರ್ಷಗಳು ಕಳೆದು, ಹಲವು ಸಂಕಷ್ಟಗಳು ಬಂದಿದ್ದರೂ ದಿಟ್ಟವಾಗಿಯೇ ಎದುರಿಸಿದ್ದ ತನ್ನ ಗಂಡ ಈ ರೀತಿ ಅಳೋದೆಂದ್ರೆ?" ಅವಳ ಕಣ್ಣೂ ನೆನೆಯಿತು....
ಹೋ, ಇವನದ್ದೊಂದು ಮೊಸಳೆ ಕಣ್ಣೀರು ! ಹೆಂಡತಿಯ ಸೆರಗಿನಲ್ಲೇ ಇರಬೇಕೆ? ಸ್ವಂತ ತಂಗಿಗಿಂತಲೂ ಹೊರಗಿಂದ ಬಂದ ಇವಳೇ ಬೇಕಾ?"*ರೌದ್ರಾವತಾರ ತಾಳಿದ್ದ ನಬೀಸುಮ್ಮ ಕೋಣೆಯ ಹೊರಗಿಂದಲೇ ಬೊಬ್ಬೆ ಹಾಕುತ್ತಿದ್ದಳು...
ನಬೀಸುಮ್ಮಳ ಆರ್ಭಟಕ್ಕೆ ನೂರ್'ಜಹಾನ್ ಕೂಡ ಒಮ್ಮೆಲೆ ಬೆಚ್ಚಿಬಿದ್ದಳು. "ನೋಡು ಮುನೀರ್ ನಾನೊಂದು ಮಾತು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಿನ್ನ ಹಠದಿಂದ ಈ ಮದುವೆ ನಿಂತುಹೋದಲ್ಲಿ ಇಲ್ಲಿ ನಡೆಯೋದೇ ಬೇರೆ. ನನ್ನ ಮತ್ತು ಹಫ್ಸಾಳ ಜೀವಸಹಿತ ನೋಡಲಾರೆ. ಮೊದಲಿಗೆ ಹಫ್ಸಳಿಗೆ ವಿಷ ಕೊಟ್ಟು ಆಮೇಲೆ ನಾನೂ ಸಾಯುತ್ತೇನೆ." ನಬೀಸುಮ್ಮಳ ಕೋಪ ತಾರಕಕ್ಕೇರಿತು.
"ಏನು ? ಮದುವೆ ನಿಂತುಹೋದಲ್ಲಿ ಮುನೀರ್ ಕಾರಣವೇ ? ಅತ್ತೆ ನೀವು ಹೇಳೋದೇನು..? ನಂಗಂತೂ ಅರ್ಥವಾಗ್ತಿಲ್ಲ. ಹಫ್ಸಳ ಮದುವೆ ನಡೆಯೋದಿಲ್ವೇ? ಏನಾಯ್ತು ?" ನೂರ್'ಜಹಾನ್ ರೂಮಿನಿಂದ ಹೊರಬಂದು ಅತ್ತೆಯ ಕೈ ಹಿಡಿದು ವಿಚಾರಿಸಿದಳು.
"ಖಂಡಿತವಾಗಿಯೂ ನಡೆಯುತ್ತೆ. ಆದರೆ ನನ್ನ ಶರೀರ ಈ ಮಣ್ಣಿನೊಳಗೆ ಹೋಗಬೇಕಷ್ಟೆ. ಆಗಲೇ ಎಲ್ಲಾ ಸರಿಹೊಗೋದು !" ನೂರ್'ಜಹಾನ್'ಳ ಕೈ ತಳ್ಳುತ್ತಾ ಗುಡುಗಿದಳು ನಬೀಸುಮ್ಮ... ಆ ತಳ್ಳುವಿಕೆಯಲ್ಲಿ ನೂರ್'ಜಹಾನ್ ತಲೆ ಡೈನಿಂಗ್ ಟೇಬಲ್'ಗೆ ತಾಗಿತು.
"ಏನಿದೆಲ್ಲ..? ತುಂಬಾ ಹೊತ್ತಿನಿಂದಲೂ ನೋಡುತ್ತಿದ್ದೇನೆ. ಅತ್ತಿಗೆಗೆ ಏನಾಯಿತು ? ಅಮ್ಮ ನೀವೇಕೆ ಹೀಗೆ ಬೊಬ್ಬೆ ಹಾಕುತ್ತಿದ್ದೀರಾ?"ವೀಲ್ ಚೇರ್ ತಳ್ಳಿಕೊಂಡು ಹಫ್ಸ ಕೂಡ ಡೈನಿಂಗ್ ಹಾಲ್ ಗೆ ಬಂದಳು.
ಅಷ್ಟರಲ್ಲಿ ಮುನೀರ್ ಕೂಡ ಹೊರಬಂದು "ಹಫ್ಸ, ನೀನು ಹೇಳು ನಾನೇನು ಮಾಡೋದು ?"ಅವಳ ಕೈ ಹಿಡಿದು ಹೇಳುವಾಗ ಆ ಕಣ್ಣು ನೆನೆದಿತ್ತು. ಅವಳಂತೂ ನಿಬ್ಬೆರಗಾದಳು. "ಅಣ್ಣ, ವಿಷಯ ಏನೂಂತ ಹೇಳಬಹುದೇ..? ನನ್ನ ಮದುವೆ ನಡೆಯದಿದ್ದರೆ ನನ್ನ ಈ ಜೀವ ಕೊನೆಯಾಗಬಹುದೆಂದು ನಿನಗೂ ಗೊತ್ತಿದೆ. ಹಾಗೇನಾದರೂ..... "
"ಹಾಗೇನಿಲ್ಲ ! ಎಲ್ಲವೂ ಅಲ್ಲಾಹನ ವಿಧಿಯಲ್ಲವೇ?" ಅವಳ ತಲೆ ಸವರಿದ.
"ನನಗೊಂದೂ ಅರ್ಥವಾಗ್ತಿಲ್ಲ ಅಣ್ಣ ! ಮದುವೆ ನಡಿಯೋದಿಲ್ವೇ ಹೀಗೆ ತಮಾಷೆ ಮಾಡಬೇಡಿ. ಈಗಲೂ ಶಾಜಹಾನ್ ನನ್ನೊಂದಿಗೆ ಚೆನ್ನಾಗಿಯೇ ಮಾತಾಡ್ತಾ ಇದ್ರು ! ನಿಮ್ಮ ಈ ಗಲಾಟೆಗೆ ನಾನು ಅವರ ಫೋನ್ ಕೂಡ ಡಿಸ್ಕನೆಕ್ಟ್ ಮಾಡಿದ್ದು. ಅವರೆಲ್ಲರೂ ಮದುವೆ ತಯಾರಿಯಲ್ಲಿದ್ದಾರೆ. ಇಷ್ಟೆಲ್ಲಾ ಆಗುವಾಗ ನೀವೆಲ್ಲ ಯಾವ ವಿಷಯದಲ್ಲಿ ಜಗಳ ಮಾಡುತ್ತಿದ್ದೀರಾ?"
ಹಫ್ಸಳ ಭರವಸೆಯ ಮಾತು ಕೇಳಿ ನೂರ್'ಜಹಾನ್'ಳಿಗೂ ತೃಪ್ತಿಯಾಯಿತು. "ಆದರೂ ಎಲ್ಲವೂ ಅಸ್ಪಷ್ಟ ! ಮದುವೆ ವಿಚಾರದಲ್ಲಿ ಯಾರಾದ್ರೂ ಫಿತ್ನ ಮಾಡಿದ್ದಾರೋ? ಮುನೀರ್ ಯಾಕಿಷ್ಟು ಚಿಂತೆಯಲ್ಲಿದ್ದಾರೆ?" ನೂರ್'ಜಹಾನ್ ಆಲೋಚನೆಯಲ್ಲೆ ಮಗ್ನಳಾದಳು.
"ಹಫ್ಸ, ಶಾಜಹಾನ್ ಅಣ್ಣ ಮತ್ತು ಬ್ರೋಕರ್ ಬಂದದ್ದು ನಿನಗೂ ಗೊತ್ತಿದೆ ತಾನೇ ? ಅವರು ಬಂದ ವಿಚಾರವೇ ಬೇರೆ ! ನಿನ್ನ ಮದುವೆ ನಡೆಯಬೇಕಿದ್ದರೆ ಈ ಮನೆಯಲ್ಲಿ ಇನ್ನೊಂದು ಮದುವೆಯಾಗಬೇಕಂತೆ.. !" ನಬೀಸುಮ್ಮಳ ಮಾತಿಗೆ ನೂರ್'ಜಹಾನ್ ಬಿಚ್ಚಿ ಬಿದ್ದಳು.. ಇನ್ನೊಂದು ಮದುವೆಯೇ ?
"ಹೌದು ! ಇನ್ನೊಂದು ಮದುವೆ.. !"
ನೂರ್'ಜಹಾನ್ ಅತ್ತೆಯ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು....
"ನಿನಗೆ ಇನ್ನೂ ಕೂಡ ಅರ್ಥವಾಗಲಿಲ್ಲವೇ..? ಆಗಿದ್ದಲ್ಲಿ ಸರಿಯಾಗಿ ಕೇಳು." ನಬೀಸುಮ್ಮಳು ಮುಗುಳ್ನಗುತ್ತ ಹೇಳುವ ಮಾತಿಗೆ ನೂರ್'ಜಹಾನ್ ಮತ್ತಷ್ಟು ಗಾಬರಿಗೊಂಡಳು.
"ಶಾಜಹಾನ್ ನಮ್ಮ ಹಫ್ಸಾಳನ್ನು ಮದುವೆಯಾಗಬೇಕಿದ್ದರೆ ಇದೋ ಇಲ್ಲಿ ನಿಂತಿರುವ ನನ್ನ ಮಗ ಅವಳ ತಂಗಿ ಸಾಜಿದಾಳನ್ನು ಮದುವೆಯಾಗಬೇಕು..."ನಬೀಸುಮ್ಮಳ ಮಾತಿಗೆ ನೂರ್'ಜಹಾನ್'ಳ ಮುಖ ಕಪ್ಪಡರಿತು. ತನ್ನ ತಲೆಯೇ ಸುತ್ತುವಂತಾಯಿತು. ಶ್ವಾಸ ತೆಗೆಯಲಾಗದೆ ಗಂಟಲು ಒಣಗಿತು. ಆಘಾತಕ್ಕೆ ನಿಂತಲ್ಲಿಯೇ ಕುಸಿದುಬಿದ್ದಳು ನೂರ್'ಜಹಾನ್ !
ಹಫ್ಸಾಳ ಮುಖದಲ್ಲೂ ಸಂಕಟದ ಕಾರ್ಮೋಡ ಕವಿಯಿತು. "ಅಣ್ಣ , ಇದೆಲ್ಲಾ ನಿಜಾನಾ.. ?" ಅವಿಶ್ವಾಸದಿಂದಲೇ ಕೇಳಿದಳು ಹಫ್ಸ...
ಮುನೀರ್'ನ ಬಾಯಿಂದ ಮಾತೇ ಹೊರಡಲಿಲ್ಲ. ಹಫ್ಸ ಮತ್ತೊಮ್ಮೆ "ಅಣ್ಣಾ....." ಎಂದು ಅವನ ಮೈ ಕುಲುಕಿದಾಗ 'ಹೌದೆಂದು' ತಲೆಯಾಡಿಸಿದನು.
"ಇದರ ಬಗ್ಗೆ ಶಾಜು ನನ್ನಲ್ಲಿ ಇದರ ಬಗ್ಗೆ ಒಂದು ಮಾತು ಕೂಡ ಹೇಳಲಿಲ್ಲವೇಕೆ..? ಹತ್ತು ನಿಮಿಷದ ಹಿಂದಷ್ಟೇ ನಾವು ಮಾತಾಡ್ತಾ ಇದ್ದೆವು. ಹಾಗಿದ್ದಲ್ಲಿ ನಾವು ಮಾಡೋದೇನು ? ನಾನಂತೂ ಶಾಜುವಿಗೆ ನನ್ನ ಮನಸ್ಸನ್ನೆ ಕೊಟ್ಟುಬಿಟ್ಟೆ. ಅವರನ್ನು ಮರೆಯಲಂತೂ ಸಾಧ್ಯವಿಲ್ಲದ ಮಾತು. ಯಾ ಅಲ್ಲಾಹ್ ! ಹಫ್ಸಳ ಮಾತಲ್ಲಿ ಮತ್ತಷ್ಟು ನೋವಿತ್ತು.
ಮಗನೇ, ಇನ್ನೆಲ್ಲವೂ ನಿನ್ನ ಕೈಯಲ್ಲಿದೆ... ಅಂಗವಿಕಲೆಯಾದ ನಿನ್ನ ಈ ತಂಗಿಗೆ ಇನ್ನೊಂದು ಸಂಬಂಧ ಬರುವ ಗ್ಯಾರಂಟಿ ನಿನಗಿದೆಯೇ..? ಎಷ್ಟೋ ವರ್ಷಗಳಿಂದ ಕೂಡಿಬರದ ಈ ಕಂಕಣಭಾಗ್ಯ ಇನ್ನೊಮ್ಮೆ ಕೂಡಿಬರಬಹುದೆಂದು ನನಗನಿಸುತ್ತಿಲ್ಲ. ಅಲ್ಲಾಹನೇ ಬಲ್ಲ ! ನಿನ್ನ ವಿಧಿ ಈ ರೀತಿಯಾಗಿರಬೇಕು. ಬಹುಶಃ ಮುಂಬರುವ ಒಳ್ಳೆಯ ದಿನಗಳ ಬಗ್ಗೆ ಕುರುಹು ಕಾಣಿಸುತ್ತಿದೆ. ಈ ಬಂಜೆಯಿಂದಂತೂ ಮೊಮ್ಮಕ್ಕಳ ಸೌಭಾಗ್ಯ ನನಗೆ ಸಿಗಲಿಲ್ಲ. ಕನಿಷ್ಠಪಕ್ಷ ಸಾಜಿದಾಳನ್ನು ಮದುವೆಯಾಗಿ ನನಗೊಂದು ಮೊಮ್ಮಗನ ಮುಖವನ್ನು ನೋಡಿದರೆ ಸಾಕು. ನನಗೂ ಮೊಮ್ಮಕ್ಕಳ ಜೊತೆ ಜೀವಿಸುವ ಅವಕಾಶವಿಲ್ಲವೇ..? ಅವರ ಈ ಬೇಡಿಕೆಗೆ ನೀನು ಒಪ್ಪಲೇಬೇಕು. ಮತ್ಯಾವುದೇ ದಾರಿಯಿಲ್ಲ ! ಒಪ್ಪಿಕೋ ಮಗ" ನೂರ್'ಜಹಾನ್'ಳ ಮುಖವನ್ನೇ ದುರುಗುಟ್ಟಿ ನೋಡುತ್ತಾ ನಬೀಸುಮ್ಮ ಮುನೀರ್'ನ ತಲೆಯ ಮೇಲೆ ಕೈಯಾಡಿಸಿದಳು.
ನೂರ್'ಜಹಾನ್'ಳಿಗಂತೂ ಅಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು. "ಬಂಜೆ, ಬಂಜೆ" ಅನ್ನೋ ಆ ಮಾತು ಬಂಡೆಕಲ್ಲಿನಂತೆ ಅವಳ ಕಿವಿಗೆ ಅಪ್ಪಳಿಸುತ್ತಿತ್ತು. ತಲೆ ಸುತ್ತುವಂತಾಗಿ, ಹೃದಯಬಡಿತ ಜೋರಾಗತೊಡಗಿತು. ಮೈಕೈಯೆಲ್ಲಾ ನಡುಕ ! ನಾನು ಬಂಜೆನಾ ? ಮಗುವನ್ನು ಹೆರಲು ನನಗೆ ಸಾಧ್ಯವಿಲ್ಲವೇ?" ಜೋರಾಗಿ ಮನಬಿಚ್ಚಿ ಅತ್ತುಬಿಡಲು ತೋರಿದರೂ, ಅಸಹಾಯಕತೆಯಿಂದ ತನ್ನ ಗಂಡನ ಮುಖವನ್ನೇ ದಿಟ್ಟಿಸಿ ನೋಡ ತೊಡಗಿದಳು...
"ನೂರ್'ಜಹಾನಳನ್ನು ಮಾತುಮಾತಿಗೂ ಎಲ್ಲರೂ ಬಂಜೆ ಬಂಜೆ ಎಂದು ಮನ ನೋಯುವಂತೆ ಕೊಂಕು ಮಾತಾಡಿದರು ನೂರ್'ಜಹಾನ್ ಸತ್ಯಸಂಗತಿಯೇನೆಂದು ಇದುವರೆಗೂ ಯಾರಲ್ಲೂ ಹೇಳದೆ ನೋವನ್ನೆಲ್ಲ ತನ್ನೊಳಗೆ ಅದುಮಿಟ್ಟು ಅಸಾಯಕತೆಯಿಂದ ತನ್ನ ಗಂಡನ ಮುಖವನ್ನೇ ದಿಟ್ಟಿಸಿ ನೋಡತೊಡಗಿದಳು.."
ನೂರ್'ಜಹಾನ್'ಳ ಪ್ರತೀಕ್ಷೆ ಹುಸಿಯಾಯಿತು. ಮುನೀರ್ ಒಂದು ಶಬ್ದವೂ ಮಾತಾಡದೆ ತಲೆತಗ್ಗಿಸಿದ... "ಇಲ್ಲ, ನಾನು ಬಂಜೆಯಲ್ಲ. ನನ್ನ ಗಂಡನನ್ನು ಇನ್ನೊಬ್ಬಳಿಗೆ ನಾನು ಬಿಟ್ಟುಕೊಡಲಾರೆ. ನನ್ನ ಗಂಡ ನನಗೆ ಮಾತ್ರ ! ನನ್ನ ಯಜಮಾನರ ಇನ್ನೊಂದು ಮದುವೆಗೆ ನಾನು ಬಿಟ್ಟುಕೊಡೊವ ಮಾತೇ ಇಲ್ಲ." ತನ್ನ ಹಕ್ಕಿಗಾಗಿ ಪಣತೊಟ್ಟ ನೂರ್'ಜಹಾನ್ ಡಿಟ್ಟವಾಗಿಯೇ ಗೂಗರೆಯುತ್ತ ಮರುತ್ತರ ನೀಡುತ್ತಲೇ ಜ್ಞಾನತಪ್ಪಿದಳು...
"ನೂರೂ, ನೂರೂ" ಎನ್ನುತ್ತಾ ಮುನೀರ್ ಕರೆದರೂ ಅವಳಿಗೆ ಜ್ಞಾನ ಬರಲಿಲ್ಲ.. ಅವಳು ಸಂಪೂರ್ಣವಾಗಿಯೂ ಪ್ರಜ್ಞಾಹೀನಳಾಗಿದ್ದಳು. ಅವಳನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿದ ಮುನೀರ್ ತಣ್ಣೀರನ್ನು ಮುಖಕ್ಕೆ ಚಿಮುಕಿಸಿದರೂ ಅವಳು ಅಲುಗಾಡಲಿಲ್ಲ. ಮುನೀರ್ ಭಯದಿಂದ ನಡುಗತೊಡಗಿದ. "ಅಮ್ಮ, ಅಮ್ಮ ನೋಡು ನೂರು ಅಲುಗಾಡುತ್ತಿಲ್ಲ. ನೀರು ಮುಖದ ಮೇಲೆ ಚಿಮುಕಿಸಿದರೂ ಕಿಂಚಿತ್ತೂ ಪ್ರತಿಕ್ರಿಯಿಸುತ್ತಿಲ್ಲ."
"ಮುನೀರ್, ಸ್ವಲ್ಪ ತೆಪ್ಪಗಿರ್ತೀಯಾ? ಅವಳು ನಾಟಕ ಮಾಡುತ್ತಿದ್ದಾಳೆ. ಅವಳ ನಾಟಕಕ್ಕೆ ನೀನು ಬಗ್ಗಬೇಡ. ಅವಳಷ್ಟಕ್ಕೆ ಬಿಟ್ಟುಬಿಡು. ನಿನ್ನ ತಂಗಿಯ ಮುಖವನ್ನೊಮ್ಮೆ ನೋಡು ! ನಿನ್ನ ಒಡನಾಟದಲ್ಲಿ ಬೆಳೆದ ತಂಗಿಯ ಬಗ್ಗೆ ಚಿಂತಿಸು. ನೀವಿಬ್ಬರೂ ಒಂದೇ ಕರುಳಬಳ್ಳಿಗಳು. ಯಾ ಅಲ್ಲಾಹ್ ! ಇವಳೋ ನಡೆಯಲೂ ಆಗದ ಅಂಗವಿಕಲೆ. ಇವಳಿಗೂ ಒಂದು ಹೃದಯವಿದೆ. ಈ ವೀಲ್ ಚೇರ್ ತಳ್ಳಿಕೊಂಡು ಜೀವನಪೂರ್ತಿ ಹೀಗೆ ಕೊರಗಬೇಕೇ..? ಇವಳನ್ನು ನೋಡಿ ಏನೂ ಅನಿಸದಿದ್ದರೂ ಹಫ್ಸಾಳನ್ನು ನೋಡಿದಾಗೆಲ್ಲ ನನ್ನ ಕರುಳು ನೋಯುತ್ತಿದೆ. ಮದುವೆ ನಿಗಧಿಯಾದಾಗ ಅವಳ ಮುಖದಲ್ಲಾದ ಉಲ್ಲಾಸವನ್ನು ನಾನು ಕಂಡಿದ್ದೇನೆ. ಒಂದೈದು ನಿಮಿಷದಲ್ಲೇ ಅವಳ ಮುಖದಲ್ಲುಂಟಾದ ಬದಲಾವಣೆ ನೀನು ಕಂಡಿದ್ದೀಯ? ಈ ನಿನ್ನ ತಂಗಿಯ ಬಾಳನ್ನು ಹಸನುಗೊಳಿಸಬೇಕೆಂದು ನಿನಗನಿಸುತ್ತಿಲ್ಲವೆ..? ನೀನೆಷ್ಟು ಸ್ವಾರ್ಥಿ? ನೀನು ಸುಖಸಂಪತ್ತಿನಲ್ಲಿ ತೇಲಾಡುವಾಗ ನಿನ್ನ ತಂಗಿಯ ಬಾಳು ಮುಳ್ಳಾಗಬೇಕೇ ? ನನ್ನ ಮಾತು ನಿನಗೆ ಕಬ್ಬಿಣದ ಕಡಲೆಯಾಗಬಹುದು. ನೀನೊಮ್ಮೆ ಯೋಚಿಸು! ಮದುವೆಯಾಗಿ 14 ವರ್ಷ ಕಳೆದರೂ ಒಂದು ಮಗುವನ್ನು ಹೆರಲು ಸಾಧ್ಯವಿಲ್ಲದ ನೂರ್'ಜಹಾನ್ ಮುಂದೆಯಾದರೂ ಮಗುವಿಗೊಂದು ಜನ್ಮ ನೀಡುವಳೆಂದು ನಿನಗನಿಸುತ್ತಿದೆಯೇ..? ಈ ಮುದಿವಯಸ್ಸಿನಲ್ಲಿ ನನಗೂ ಮೊಮ್ಮಕ್ಕಳ ಮುಖ ನೋಡಬೇಕೆನಿಸುವುದು ತಪ್ಪೇ ?"* ಅನ್ನುವಷ್ಟರಲ್ಲಿ ನಬೀಸುಮ್ಮಳ ಕಣ್ಣು ತುಂಬಿತು.
"ಅವಳ ಕಣ್ಣೀರಿಗೆ ನಾನು ಕಾರಣವಾದೆನಲ್ಲ" ಎಂದು ನೆನೆದು ಮುನೀರ್'ನ ಹೃದಯ ಕರಗಿಹೋಯಿತು.
ಒಂದೆಡೆ "ನನ್ನ ಕನಸೆಲ್ಲ ನುಚ್ಚು ನೂರಾಯಿತೇ?" ಎಂದೆನಿಸುತ್ತ ಇದ್ದ ಹಫ್ಸ, ಇನ್ನೊಂದೆಡೆ ಮದುವೆಯಾಗಿ 14 ವರ್ಷ ಬಾಳಸಂಗಾತಿಯಾಗಿ ಎಲ್ಲಾ ಸುಖದುಃಖದಲ್ಲೂ ಭಾಗಿಯಾಗಿರುವ ನೂರ್'ಜಹಾನ್, ಮತ್ತೊಂದೆಡೆ ಒಂಬತ್ತು ತಿಂಗಳು ಹೊತ್ತು, ಹೆತ್ತ ತಾಯಿಯ ಸಂಕಟ ! ಏನು ಮಾಡೋದೆಂದು ಮುನೀರ್'ಗೆ ದಿಕ್ಕೇ ತೋಚಲಿಲ್ಲ. ತಂಗಿಯ ಬಾಳು ಹಸನಾಗಬೇಕು. ಅಮ್ಮನ ಮನಸೂ ನೋಯಿಸಬಾರದು. ಎಲ್ಲವೂ ಅಲ್ಲಾಹನ ಪರೀಕ್ಷೆ. ಒಂದಷ್ಟು ಹೊತ್ತು ಮೌನ ವಾತಾವರಣ....
ನಬೀಸುಮ್ಮ ಮೌನ ಮುರಿದಳು. "ಮುನೀರ್, ಇಷ್ಟೆಲ್ಲಾ ಹೇಳಿದ್ರೂ ಇನ್ನೂ ಏನು ಯೋಚಿಸ್ತಿದ್ದೀಯ ? ನನ್ನ ಮತ್ತು ನಿನ್ನ ತಂಗಿಯ ಜೀವ ನಿನ್ನ ಕೈಯಲ್ಲಿದೆ... "
ನಬೀಸುಮ್ಮ ವೇದನೆಯಿಂದ ತನ್ನ ಮಗನ ಮುಂದೆ.. "ಮುನೀರ್ ಇಷ್ಟೆಲ್ಲಾ ಬಿಡಿಸಿ ಹೇಳಿದ್ರೂ ಇನ್ನು ಏನು ಯೋಚಿಸುತ್ತಿದ್ದಿಯಾ..! ನೋಡು ನನ್ನ ಮತ್ತು ನಿನ್ನ ತಂಗಿಯ ಜೀವ ನಿನ್ನ ಕೈಯಲ್ಲಿದೆ.. ಹಫ್ಸಾ ಮುಂದೆ ಎಲ್ಲರಂತೆ ನಗುನಗುತ್ತಾ ಜೀವನ ಸಾಗಿಸಬೇಕೆಂದರೆ ನೀನು ಮನಸ್ಸು ಬದಲಾಯಿಸಲೇ ಬೇಕು.."
"ಏನಮ್ಮ ಹೀಗಂತೀಯ..? ನನ್ನ ನೂರು, ಪಾಪದ ಹೆಣ್ಣಲ್ಲವೇ.. ? ಅವಳ ಮೇಲೆ ನಿನಗೆ ಒಂದಿಷ್ಟೂ ಕನಿಕರ ಕಾಣಿಸಬಹುದಲ್ಲವೇ..? ನನ್ನ 14 ವರ್ಷದ ಕೌಟುಂಬಿಕ ಜೀವನದಲ್ಲಿ ಒಂದು ಬಾರಿಯೂ ನನ್ನ ಮನಸ್ಸನ್ನ ನೋಯಿಸದ, ನಿನ್ನ ಮಾತಿಗೆ ಎದುರುತ್ತರವನ್ನೂ ಕೂಡ ನೀಡದ ನೂರ್'ಜಹಾನ್'ಳ ವಿಶ್ವಾಸಕ್ಕೆ ಕುಂದುಂಟು ಮಾಡಿ ಇನ್ನೊಂದು ಮದುವೆಯಾಗುವಷ್ಟು ದುಷ್ಟನೇ ನಾನು ?" ಮುನೀರ್'ನ ಮಾತು ಕೇಳಿ, ನಬೀಸುಮ್ಮ ಮತ್ತಷ್ಟು ಕಿಡಿಕಾರಿದಳು.
"ನೂರ್'ಜಹಾನ್'ಳನ್ನು ಬಿಟ್ಟುಬಿಡು ಅಂತ ಹೇಳಿದ್ನ..?"
ಮುನೀರ್'ಗೆ ಒಂದೂ ಅರ್ಥವಾಗಲಿಲ್ಲ...
"ನನ್ನ ಮಾತು ಸರಿಯಾಗಿ ಕೇಳು. ನೂರ್'ಜಹಾನ್'ಳ ಒಳ್ಳೆಯ ಗುಣನಡತೆಯ ಬಗ್ಗೆ ನನಗೆ ಸಂಶಯವಿಲ್ಲ. ಅವಳು ಒಳ್ಳೆಯವಳೇ ! ಅವಳು ಬಂಜೆ ಹೆಣ್ಣು ಅನ್ನೋದನ್ನು ಬಿಟ್ರೆ ಬೇರೆ ಅವಳಲ್ಲಿ ಯಾವುದೇ ದೋಷಗಳಿಲ್ಲ. ನನ್ನ ಹಫ್ಸ ಒಮ್ಮೆ ಮದುವೆಯಾಗಿ ಈ ಮನೆಯ ಹೊಸ್ತಿಲನ್ನು ದಾಟಿದರೆ ಸಾಕು. ಆಮೇಲೆ ನನಗೆ ಏನೂ ಬೇಡ..."
"ಇಲ್ಲಮ್ಮ ಅವಳು ಬಂಜೆಯಲ್ಲ ! ತೊಂದರೆಯಿರುವುದೆಲ್ಲಾ ನನ್ನೊಳಗೆ... ನಾನು ಔಷಧಿ ಸೇವಿಸುತ್ತಿದ್ದೇನೆ." ಎಂದು ಹೇಳಬೇಕೆನಿಸಿತು ಮುನೀರ್'ಗೆ ! ಆದರೂ ಒಂದು ಶಬ್ದ ಕೂಡ ಅವನ ಬಾಯಿಂದ ಹೊರಡಲಿಲ್ಲ. (ಕೆಲವು ಗಂಡಸರ ಸ್ವಭಾವ ಇದೇ ರೀತಿಯದ್ದಾಗಿರುತ್ತದೆ. ತಮ್ಮಲ್ಲಿ ಎಷ್ಟೇ ಕೊರತೆಗಳಿದ್ದರೂ ಅಷ್ಟು ಸುಲಭವಾಗಿ ಬಿಟ್ಟುಕೊಡಲಾರರು. ಅದು ಬೆಟ್ಟದಷ್ಟಿದ್ದರೂ ಸರೀನೆ ....)
"ಅಮ್ಮ, ಆ ಸಾಜಿದ ಕೂಡ ಗಂಡನನ್ನ ಬಿಟ್ಟವಳಲ್ಲವೇ..? " ಮುನೀರ್ ತನ್ನ ಮೌನ ಮುರಿದ.
"ನೋಡು ಮುನೀರ್ ಏನಿದ್ದರೂ ಆಗಲಿ. ಈ ನೂರ್'ಜಹಾನ್'ಗಿಂತಲೂ ಅದೆಷ್ಟೋ ಸುಂದರಿ ಆ ಸಾಜಿದ. ನಿನಗೆ ಹೇಳಿ ಮಾಡಿಸಿದ ಜೋಡಿ ! ಅವಳು ಬೇರೆ ಮದುವೆಯಾಗಿದ್ರೂ ಅವನ ಜೊತೆ ಸಂಸಾರ ನಡೆಸಿದ್ದು ಕೆಲವು ದಿನಗಳು ಮಾತ್ರ. ಅವನೊಬ್ಬ ದುಷ್ಟನಾಗಿದ್ದು, ಸೋಮಾರಿ ಕೂಡ ಆಗಿದ್ದ. ಹಗಲಿಡೀ ಗಂಟಲುಪೂರ್ತಿ ಶರಾಬು ಕುಡಿದು ಬೀದಿಬೀದಿಯಲ್ಲಿ ಹೊರಳಾಡುತ್ತಿದ್ದ ದಿನಗಳಿಲ್ಲ. ಸಾಜಿದ ಮದುವೆಯಾಗಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ ಜಗಳದಿಂದ ಅವಳ ಗಂಡನ ಹೊಡೆತಕ್ಕೆ ಹೊಟ್ಟೆಯಲ್ಲಿದ್ದ ಮಗು ಕೂಡ ತೀರಿಹೋದ ಬೇಸರದಲ್ಲೇ ತವರುಮನೆಗೆ ಹಿಂತಿರುಗಿದ್ದು. ಎಷ್ಟೋ ಶ್ರೀಮಂತ ಹುಡುಗರು ಅವಳ ಸೌಂದರ್ಯಕ್ಕೆ ಮಾರುಹೋಗಿ ಮದುವೆಯಾಗಲೋಸ್ಕರ ಬಂದು ಹಿಂತಿರುಗಿದ್ದೂ ಇದೆ. ಎಲ್ಲದಕ್ಕೂ ನಿರಾಕರಿಸಿದ್ದವಳು, ಮೊನ್ನೆ ಇಲ್ಲಿಗೆ ಬಂದಾಗ ನಿನ್ನನ್ನು ಕಂಡು ಮನಸೋತಿದ್ದಾಳೆ. ನಿನ್ನ ದಾಂಪತ್ಯ ಜೀವನದಲ್ಲಿ ಮಕ್ಕಳ ಸೌಭಾಗ್ಯವಿಲ್ಲದ ವಿಷಯವನ್ನರಿತು ಅವಳಿಗೂ ದುಃಖವಾದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವಳು ನಿನ್ನನ್ನೇ ಮದುವೆಯಾಗಬೇಕೆಂದು ಹಠವಿಡಿದು ಕೂತಿದ್ದಾಳಂತೆ. ಬೆಳಿಗ್ಗೆ ಮುಸ್ತಫ ಮತ್ತು ಬ್ರೋಕರ್ ಇದನ್ನೇ ಹೇಳಲು ಬಂದದ್ದು. ಇದು ಅಲ್ಲಾಹನ ವಿಧಿಯೆಂದು ನೆನೆಸಿಕೋ ಮಗನೇ..! ನಿನ್ನ ಒಂದು ಒಳ್ಳೆಯ ನಿರ್ಧಾರದಿಂದ ಎರಡು ಜೀವ ಹಸನುಗೊಳಿಸು ! ಒಂದು ಹಫ್ಸ, ಇನ್ನೊಂದು ಸಾಜಿದ !"
"ಹಾಗಾದ್ರೆ ನನ್ನ ನೂರ್ಜ?" ಮುನೀರ್ ಪ್ರಶ್ನಿಸಿದ.. ....
ನೆಬೀಸುಮ್ಮಳು ಮಗ ಮುನೀರ್'ನಲ್ಲಿ ಮರುಮದುವೆಯಾಗಲು ಹಠಹಿಡಿದು ಒತ್ತಾಯಿಸಿದಳು..."ನೋಡು ಮುನೀರ್ ಮುನೀರ್ ನಿನ್ನ ಒಂದು ಒಳ್ಳೆಯ ನಿರ್ಧಾರದಿಂದ ಎರಡು ಜೀವ ಹಸುನುಗೋಳಿಸು.. ಒಂದು ನಿನ್ನ ತಂಗಿ.ಹಪ್ಸಾ , ಇನ್ನೊಂದು ಸಾಜಿದ.."
"ಅಮ್ಮ ಹಾಗಾದ್ರೆ ನನ್ನ ನೂರ್ಜ..? ಮುನೀರ್ ಪ್ರಶ್ನಿಸಿದ.."
"ಅವಳಿಗೀಗ ಚಿಕ್ಕಾಸಿಗೂ ಬೆಲೆಯಿಲ್ಲವೇ. ?"
ಛೆ ! ಇವನದ್ದೊಂದು ನೂರು ! ಅಲ್ಲ ನಾನು ಇಷ್ಟೆಲ್ಲಾ ಹೇಳಿದ್ರೂ ಒಂದೇ ರಾಗ, ಒಂದೇ ತಾಳ..!ನೂರೂ ನೂರೂ ... ನಂಗೊಂದು ಸಂಶಯ. ಮಾಟಮಂತ್ರ ಮಾಡಿ ನಿನ್ನನ್ನು ವಶೀಕರಣ ಮಾಡಿದ್ದಾಳೇನೋ ನೂರ್ಜ..? ಇಷ್ಟೊಂದು ಬಡ್ಕೊಂಡ್ರೂ ಒಂದಿಷ್ಟೂ ನಿನ್ನ ತಲೆಗೆ ಹೋಗೋದಿಲ್ವಲ್ಲ..? ಆಯ್ತಪ್ಪ ! ಇನ್ನೂ ನಿನಗೆ ಬುದ್ದಿವಾದ ಹೇಳೋದಿಕ್ಕೆ ನನ್ನಿಂದ ಸಾಧ್ಯವಾಗದ ಮಾತು. ನಿನಗೆ ಹೇಗನಿಸುತ್ತದೋ ಹಾಗೇ ಮಾಡು." ವೀಲ್ಚೇರ್'ನಲ್ಲೆ ಕುಳಿತುಕೊಂಡು ಇದೆಲ್ಲವನ್ನೂ ಸ್ತಬ್ದಳಾಗಿ ನೋಡುತ್ತಿದ್ದ ಹಫ್ಸಳನ್ನು ಕೂಡ ತನ್ನೊಡನೆ ಕೋಪದಿಂದಲೇ ಅಲ್ಲಿಂದ ಹೋಗಿಬಿಟ್ಟಳು ನಬೀಸುಮ್ಮ.....
"ನೂರೂ, ನೂರೂ ದಯವಿಟ್ಟು ಒಮ್ಮೆ ಕಣ್ಣು ತೆರೆ" ಎನ್ನುತ್ತಾ ನೂರ್'ಜಹಾನಳ ದೇಹವನ್ನೂಮ್ಮೆ ಕುಲುಕಿಸಿದನು ಮುನೀರ್.. ಇಲ್ಲ ಸ್ವಲ್ಪವೂ ಪ್ರತಿಕ್ರಿಯಿಸಲಿಲ್ಲ. ಮುನೀರ್'ಗಂತೂ ಮೈಯೆಲ್ಲಾ ಬೆವರತೊಡಗಿತು... "ಯಾ ಅಲ್ಲಾಹ್ ! ನೀನೇ ಕಾಪಾಡು" ಎನ್ನುತ್ತಾ ಮತ್ತೊಮ್ಮೆ ಅವಳ ಮುಖದ ಮೇಲೆ ನೀರನ್ನು ಚಿಮಿಕಿಸಿದ... "ಎದ್ದೇಳು ನೂರು, ನನಗೆ ಭಯವಾಗ್ತಿದೆ." ನಿರಂತರವಾಗಿ ಅವಳನ್ನ ಎಚ್ಚರಿಸುತ್ತಲೇ ಇದ್ದ...
ಸ್ವಲ್ಪ ಹೊತ್ತಲ್ಲೇ ಎಚ್ಚರಗೊಂಡ ನೂರ್'ಜಹಾನ್ ಬಿಕ್ಕಳಿಸುತ್ತಾ "ರೀ, ನನ್ನ ದಯವಿಟ್ಟು ಬಿಟ್ಟುಬಿಡಬೇಡಿ. ಯಾರಿಗೂ ತೊಂದರೆ ಕೊಡದೆ ನಾನು ಮನೆಯ ಯಾವುದಾದರೂ ಮೂಲೆಯಲ್ಲಿ ಬಿದ್ದುಕೊಳ್ಳುವೆ..."
"ಛೇ.... ಏನೂಂತ ಹೇಳ್ತಿದ್ದೀಯಾ ನೂರೂ ? ನಾನು ಕಟುಕನೆಂದು ಅನಿಸುತ್ತಿದೆಯೇ ? ಯಾರು ಏನೇ ಹೇಳಲಿ, ನಿನ್ನನ್ನು ಬಿಡುವ ಮಾತೇ ಇಲ್ಲ. ನನ್ನ ನೂರೇ, ನೀನು ಕಿಂಚಿತ್ತೂ ಭಯಪಡುವ ಅಗತ್ಯವಿಲ್ಲ. ಈ ನಿನ್ನ ಗಂಡ ನಿನ್ನ ಕೈ ಬಿಡುವ ಬಗ್ಗೆ ಕನಸಲೂ ಯೋಚಿಸಲಿಕ್ಕಿಲ್ಲ. ನೀನು ನನ್ನ ಜೀವ ಕಣೇ...."
"ನೀವೇನೇ ಹೇಳಿದ್ರೂ ನಂಗಂತೂ ಭಯದಿಂದ ಹೃದಯಬಡಿತ ಜೋರಾಗಿ ಬಡಿಯುತ್ತಿದೆ. ನಿಮ್ಮ ಅಮ್ಮ ಹೇಳಿದ ಮಾತು ನೆನೆಸುವಾಗ ಈಗಲೂ ನನ್ನ ತಲೆ ನೋಯುತ್ತಿದೆ. ನಿಮ್ಮನ್ನಗಲಿ ಬದುಕುವ ಶಕ್ತಿ ನನಗಿಲ್ಲ. ಅಲ್ಲಾಹು ಮತ್ತು ನಿಮ್ಮ ಆಸರೆ ಬಿಟ್ಟರೆ ನನಗೆ ಈ ಲೋಕದಲ್ಲಿ ಯಾರಿದ್ದಾರೆ?"
"ನೂರೂ, ಏನೆಲ್ಲ ಯೋಚಿಸಬೇಡ. ನಿನ್ನ ತಲೆಗೆ ಟೈಗರ್'ಬಾಂಬ್ ಹಚ್ತೇನೆ. ಸ್ವಲ್ಪ ಹೊತ್ತು ಮಲಗಿದರೆ ತಲೆನೋವು ಕಡಿಮೆಯಾಗಬಹುದೆಂದು" ಅವಳ ಹಣೆಗೆ ಹಚ್ಚತೊಡಗುವಷ್ಟರಲ್ಲಿ ನೂರ್'ಜಹಾನ್ ಮತ್ತೊಮ್ಮೆ ಪ್ರಜ್ಞೆತಪ್ಪಿದಳು. ಅವಳನ್ನ ಹಾಸಿಗೆಯ ಮೇಲೆ ಮಲಗಿಸಿ ತಂಗಾಳಿ ಬರಲೆಂದು ಕಿಟಕಿಯ ಬಾಗಿಲನ್ನು ತೆರೆದಿಟ್ಟ....
ಕಿಟಕಿಯ ಹೊರಗೆ ಕಗ್ಗತ್ತಲು ಕವಿದಿತ್ತು. ಬೆಳಗಿನಿಂದ ಆ ಮನೆಯಲ್ಲಾದ ಒಂದೊಂದೇ ಘಟನೆಯನ್ನು ನೆನೆದಾಗ "ಹೊರಗಿನ ಕತ್ತಲೆಗಿಂತಲೂ ನನ್ನ ಬದುಕೇ ಕಗ್ಗತ್ತಲಲ್ಲಿ ಮುಳುಗಿಹೋಗುತ್ತಿದೆಯೇ ಎಂದನಿಸಿತು ಮುನೀರ್'ಗೆ... ಒಂದೆಡೆ ಹೆತ್ತ ತಾಯಿ ಹಾಗೂ ಒಡನಾಟದ ತಂಗಿ, ತನ್ನ ಸುಖದುಃಖದಲ್ಲಿ ಭಾಗಿಯಾಗಿರುವ ಹೆಂಡತಿ, ಮತ್ತೊಂದೆಡೆ ತನ್ನ ಜೀವನದಲ್ಲಿ ಬಿರುಗಾಳಿಯೆಬ್ಬಿಸುತ್ತಿರುವ ಸಾಜಿದ ! ಅಲ್ಲ ಅಮ್ಮ ಯಾಕಿಷ್ಟು ಬದಲಾದರೋ ? ಅದೂ ಎರಡು ದಿನದ ಹಿಂದಷ್ಟೇ ಕಂಡ ಆ ಸಾಜಿದ ! ಅವಳ ಬಗ್ಗೆ ಯಾಕಿಷ್ಟು ಕಾಳಜಿ ? ಕಳೆದ ಹದಿನಾಲ್ಕು ವರ್ಷದಿಂದಲೂ ಅವರ ಬಟ್ಟೆಗಳನ್ನು ಒಗೆಯುತ್ತಾ, ಸಮಯಕ್ಕೆ ಸರಿಯಾಗಿ ತಿಂಡಿ, ಅಡುಗೆ ತಯಾರಿ ಮಾಡಿಟ್ಟು, ಹಗಲೂ ರಾತ್ರಿಯೆನ್ನದೆ ಅಮ್ಮನಿಗೂ, ಹಫ್ಸಳಿಗೂ ಆರೈಕೆ ಮಾಡುತ್ತಿದ್ದ ನೂರ್'ಜಹಾನ್'ಳನ್ನು ಮರೆತು ನಿನ್ನೆಯಷ್ಟೇ ಕಂಡ ಆ ಸಾಜಿದ ಅಮ್ಮನಿಗೆ ಹತ್ತಿರವಾದಳೇ..? ತನ್ನ ಬದುಕನ್ನೇ ಈ ಮನೆಯವರಿಗಾಗಿ ಮುಡಿಪಾಗಿಟ್ಟ ನೂರ್'ಜಹಾನ್ ಈಗ ಯಾರಿಗೂ ಬೇಡವಾಯಿತೇ ? ಒಂದೊಂದೇ ಯೋಚಿಸುವಾಗ ಮುನೀರ್'ನ ಕಣ್ಣೀರನ್ನು ಅರ್ಥೈಸುವುದಾದರೂ ಯಾರು?
ತಟ್ಟನೇ ಅವನಿಗೊಂದು ಉಪಾಯ ತೋಚಿತು. ಯಸ್, ಹಾಗೊಂದು ಪ್ರಯತ್ನ ಮಾಡಲೇಬೇಕು....
ಹೌದು ಅದೇ ಸರಿಯೆನಿಸುತ್ತಿದೆ.. ಒಮ್ಮೆ ಸಾಜಿದಾಳೊಂದಿಗೆ ಸಮಾಧಾನದಿಂದ ಮಾತಾಡಿ ನೋಡಿದರೆ.. ಹೇಗೆ..? ... ಒಂದು ಕೊನೆಯ ಪ್ರಯತ್ನ.. ಪ್ರಯತ್ನ ನನ್ನದು ರಕ್ಷೆ ಅಲ್ಲಾಹುವಿನದ್ದು.. ಫೋನ್ ಕರೆಯಲ್ಲಿ ಒಪ್ಪಿಗೆ ನೀಡದಿದ್ದಲ್ಲಿ ಅವಳ ಕಾಲು ಹಿಡಿದಾದರೂ ಸರೀನೆ... "ನೋಡು ಸಾಜಿದ, ನಾನು ನನ್ನ ಹೆಂಡತಿ ನೂರ್'ಜಹಾನ್'ಳನ್ನು ಬಿಟ್ಟರೆ ಮತ್ತೊಂದು ಹೆಣ್ಣನ್ನು ಇದುವರೆಗೆ ಆಸ್ವದಿಸಲಿಲ್ಲ. ನೀನು ಹಟ ಹಿಡಿದು ಮದುವೆಯಾದಲ್ಲಿ ಮೂರು ಜೀವವು ಬಲಿಯಾಗುವುದೇ ವಿನಃ ಬೇರೆ ಯಾವುದೇ ಸುಖ ಅನುಭವಿಸಲಾಗುವುದಿಲ್ಲವೆಂದು ಹೇಳಿದರೆ ಹೇಗೆ ?" ಇಷ್ಟು ಹೇಳಿದರೆ ಬಹುಶಃ ಸಾಜಿದ ಮನಸ್ಸು ಪರಿವರ್ತನೆಯಾದಲ್ಲಿ ಅಲ್ ಹಮ್ದುಲಿಲ್ಲಾಹ್ ! ಆದದ್ದಾಗಲೀ ಎಂದು ಸಾಜಿದಾಳಿಗೆ ಫೋನ್ ಮಾಡಿದ....
"ಟ್ರಿಂ ಟ್ರಿಂ" ಫೋನ್ ರಿಂಗ್ ಕೇಳುತ್ತಲೇ ಹಾಸಿಗೆಯಿಂದೆದ್ದ ಸಾಜಿದ, ಮುನೀರ್'ನ ಕರೆ ಕಂಡು ಅವಳ ಮನಸ್ಸಲ್ಲಾದ ಸಂತೋಷ ಹೇಳತೀರದು.. ! "ಹಲೋ ನನ್ನ ಸರದಾರ.. ! ಇಷ್ಟು ಬೇಗ ನೀವು ನನಗೆ ಕರೆ ಮಾಡುತ್ತೀರೆಂದು ನನಗನಿಸಿರಲಿಲ್ಲ. ನಿಮ್ಮ ಒಂದು ಕರೆಗಾಗಿ ರಾತ್ರಿಯಿಡೀ ಕಾದಿದ್ದೇನೆ. ಮನೆಯಲ್ಲೆಲ್ಲಾ ನಿಮ್ಮದೇ ಚರ್ಚೆ. ಶಾಜಹಾನ್'ಗಿಂತಲೂ ನಾನೇ ಹೆಚ್ಚು ಉತ್ಸುಕಳಾಗಿರುವೆ... ಮದುವೆಯೊಂದು ನಡೆಯಲಿ, ನಿಮ್ಮ ಜೀವನದ ಸುಖ ಸಂತೋಷವನ್ನೆಲ್ಲ ನಿಮ್ಮ ಕಾಲಡಿಯಲ್ಲಿ ಸಮರ್ಪಿಸುವೆನು."
"ಉಫ್" ಮುನೀರ್ ನಿಟ್ಟುಸಿರು ಬಿಟ್ಟ. "ಸಾಜಿದ, ಒಮ್ಮೆ ನನ್ನ ಮಾತನ್ನು ಸರಿಯಾಗಿ ಕೇಳುತ್ತೀಯಾ..? ಜೀವನವೆಂಬುದು ಮಕ್ಕಳಾಟವಲ್ಲ. ನೀನು ನನ್ನ ಜೀವನದೊಂದಿಗೆ ಮಕ್ಕಳಂತೆ ಆಟವಾಡುತ್ತಿದ್ದೀಯ... ದಯವಿಟ್ಟು ನನ್ನ ಮತ್ತು ನೂರ್'ಜಹಾನ್'ಳನ್ನು ನಮ್ಮ ಪಾಡಿಗೆ ಬಿಟ್ಟುಬಿಡು. ನಿನಗೆ ನನಗಿಂತಲೂ ಉತ್ತಮವಾದ ಹುಡುಗ ಸಿಗಬಹುದು. ನಿನ್ನ ಈ ಹಟದಿಂದ ನನ್ನ ತಂಗಿಯ ಬಾಳಲ್ಲಿ ಹುಳಿ ಹಿಂಡಬೇಡ. ಅಲ್ಲಾಹನನ್ನು ಭಯಪಡು. ಹೀಗೆ ನೀನು ಮುಂದುವರೆದಲ್ಲಿ ನಿನಗೆ ಅಲ್ಲಾಹುವಿನ ಕ್ಷಮೆಯೂ ಸಿಗದು. ಇಷ್ಟೆಲ್ಲಾ ಹೇಳಿದರೂ ನಿನಗೆ ಮದುವೆಯಾಗಲೇಬೇಕೆಂದಿದ್ದರೆ ನಾನೇ ಖುದ್ದಾಗಿ ಒಳ್ಳೆಯ ಹುಡುಗನನ್ನು ನಿನಗೆ ತೋರಿಸುವೆ. ಬೇಕಿದ್ದರೆ ನಿನ್ನ ಕಾಲು ಹಿಡಿಯುವೆ. ದಯವಿಟ್ಟು ನಿನ್ನ ತೀರ್ಮಾನ ಬದಲಿಸು."
"ನೀವು ಹೇಳುತ್ತಿರೋದೇನು..? ನಿಮ್ಮನ್ನಲ್ಲದೆ ಇನ್ನೊಬ್ಬನನ್ನು ನಾನು ಕನಸಲ್ಲೂ ಕಾಣಲಾರೆ. ಮುನೀರ್ ನನಗೆ ಬೇಕಂದ್ರೆ ಬೇಕು ಅಷ್ಟೆ. ನೀವೆಷ್ಟೇ ಗೋಗರೆದರೂ ನಮ್ಮಿಬ್ಬರ ಮದುವೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ... ನಮ್ಮಿಬ್ಬರ ಮದುವೆಗೆ ನೀವು ಒಪ್ಪಿಗೆ ನೀಡಿದರೆ ಮಾತ್ರ ಶಾಜಹಾನ್ ಮತ್ತು ಹಫ್ಸಳ ಮದುವೆ ಮುಂದುವರಿಯುವುದು... ನಾನು ನಿಮಗೆ ನನ್ನ ಮನಸ್ಸೆಲ್ಲ ಕೊಟ್ಟುಬಿಟ್ಟೆ. ಇನ್ನು ನನ್ನ ತೀರ್ಮಾನ ಬದಲಿಸುವ ಮಾತೇ ಇಲ್ಲ..."
ಕೋಪದಿಂದಲೇ ಫೋನನ್ನು ಡಿಸ್ಕನೆಕ್ಟ್ ಮಾಡುತ್ತಾ "ಮೇಲೆ ನೋಡಿ ಉಗುಳಿದಂತಾಯಿತಲ್ಲ, ಸಾಜಿದಾಳಿಗೆ ಕರೆ ಮಾಡಿದ್ದೇ ತಪ್ಪಾಯಿತಲ್ಲ" ಮುನೀರ್'ನ ಟೆನ್ಶನ್ ಮತ್ತಷ್ಟು ಹೆಚ್ಚಾಯಿತು.
ಅಷ್ಟರಲ್ಲೆ "ಯಾ ಅಲ್ಲಾಹ್, ಯಾ ಅಲ್ಲಾಹ್ ! ಏನು ಮಾಡ್ಕೊಂಡೆ ನೀನು.. ಮೋನೆ ಮೋನೆ ಮುನೀರ್ ಓಡಿ ಬಾ ಏನಾಯ್ತು ನೋಡು" ಅಮ್ಮನ ನೋವಿನ ಕಿರುಚಾಟಕ್ಕೆ ಮುನೀರ್ ಸ್ತಂಭೀಭೂತನಾಗಿಬಿಟ್ಟ.....
ಯಾರೂ ಕೂಡ ನೆನೆಯದ ಆ ಅನಾಹುತ ಅಲ್ಲಿ ನಡೆದಿತ್ತು.....
"ಅಮ್ಮನ ನೋವಿನ ಕಿರುಚಾಟಕ್ಕೆ ಮುನೀರ್ ಸ್ತಂಭೀಭೂತನಾಗಿಬಿಟ್ಟ..
"ಯಾರು ಕೂಡ ನಿರೀಕ್ಷಿಸಿದ ಅನಾಹುತವೊಂದು ಅಲ್ಲಿ ನಡೆದೇ ಹೋಯಿತು...
"ಯಾ ಅಲ್ಲಾಹ್ ! ಏನಾಯಿತು.?" ಎನ್ನುತ್ತಾ ಓಡೋಡಿ ಅಮ್ಮನಿದ್ದಲ್ಲಿಗೆ ಧಾವಿಸಿದ ಮುನೀರ್ ಒಮ್ಮೆಲೆ ಗಾಭರಿಯಾಗಿಬಿಟ್ಟಿದ್ದ.. ನೋಡುವುದೇನು... ಹಫ್ಸಾಳ ಕೈಯಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ಹಫ್ಸ ಬ್ಲೇಡಿನಿಂದ ಬಲಗೈಯ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಯ ಪ್ರಯತ್ನ... ತಲೆಯ ಮೇಲೆ ಕೈಯಿಟ್ಟುಕೊಂಡು ನಬೀಸುಮ್ಮ ಗಂಟಲು ಬಿಚ್ಚಿ ಬೊಬ್ಬಿಡುತ್ತಿದ್ದಾರೆ...
ಮುನೀರ್.. "ಯಾಕೆ ಹಫ್ಸ ಇಷ್ಟೊಂದು ದುಗುಡ...? ನಾವೆಲ್ಲ ನಿನಗಿಲ್ಲವೇ?"
"ಅಣ್ಣ, ಒಂದೆಜ್ಜೆಯೂ ಮುಂದಿಡಬೇಡ. ನನ್ನಿಂದಾಗಿ ನೀವು ಜಗಳವಾಡುವುದೂ ಬೇಡ. ಕುಟುಂಬ ಬಿರುಕುಗೊಳ್ಳುವುದೂ ಬೇಡ. ಇಷ್ಟೆಲ್ಲಾ ಆಗುತ್ತಿರೋದು ನನ್ನಿಂದಲೇ ತಾನೇ ? ನಾನೇ ಜೀವಂತವಾಗಿರದಿದ್ದರೆ ಯಾರಿಗೂ ಕಷ್ಟವಾಗೋಲ್ಲ. ನೀವೆಲ್ಲರೂ ನಿಶ್ಚಿತೆಯಿಂದ ಜೀವಿಸಿರಿ" ಅನ್ನುವಷ್ಟರಲ್ಲಿ ಹಫ್ಸ ಪ್ರಜ್ಞೆ ತಪ್ಪಿದಳು.
"ಮುನೀರ್, ಇವಳನ್ನ ರಕ್ಷಿಸು ಮಗನೇ...! ಇವಳು ನಿನ್ನ ಒಡಹುಟ್ಟಿದ ತಂಗಿಯೆಂಬ ಅನುಕಂಪವೂ ಇಲ್ಲವೆ? ಕೂಡಲೆ ಇವಳನ್ನು ಆಸ್ಪತ್ರೆಗೆ ಸೇರಿಸದಿದ್ದರೆ ಸತ್ತುಹೋಗಬಹುದು ಕಣೋ.... ಪ್ಲೀಸ್ ಪ್ಲೀಸ್ ನನ್ನ ಮಗಳನ್ನು ರಕ್ಷಿಸು.." ನಬೀಸುಮ್ಮ ಅಂಗಲಾಚಿದಳು.
(ಸ್ವಲ್ಪ ಹೊತ್ತಲ್ಲೇ ಹಫ್ಸಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು......)
ಹಫ್ಸ icu ನಲ್ಲಿದ್ದಳು... ಹೊರಗಡೆ ಬೆಂಚಿನಲ್ಲಿ ನಬೀಸುಮ್ಮಳ ರಂಪಾಟ ಭುಗಿಲೆದ್ದಿತ್ತು. "ಮಗನೇ ಈ ಮುದಿವಯಸ್ಸಿನಲ್ಲಿ ಇದೆಲ್ಲ ನನಗೆ ನೋಡಬೇಕಿತ್ತಾ..? ನಿನ್ನ ಮನಸ್ಸೇಕೆ ಕಲ್ಲುಬಂಡೆಯಂತಾಗಿದೆ.. ? ಕುಟುಂಬ, ಅಮ್ಮ, ಒಡಹುಟ್ಟಿದವರು ಯಾರೂ ಕೂಡ ನಿನಗೆ ಬೇಡವಾಯಿತೇ..? ಇಂತಹದ್ದೊಂದು ದಿನ ನೋಡಬಹುದೆಂದು ನಾನು ಕನಸಲ್ಲೂ ಯೋಚಿಸಿದ್ದಿಲ್ಲ. ನೋಡು ನಿನ್ನ ಹಟದಿಂದ ನಿನ್ನ ತಂಗಿಯ ಬಾಳು ಹೇಗೆ ನಶಿಸಿಹೋಗುತ್ತಿದೆ..? ಒಳಗೆ ಏನಾಯಿತೆನೋ? ಡಾಕ್ಟರ್ ಇನ್ನೂ ಕೂಡ ಹೊರಬಂದಿಲ್ಲ."
ಮುನೀರ್'ಗೆ ಅಮ್ಮ ಹೇಳಿದ ಯಾವ ಮಾತನ್ನೂ ಕೂಡ ಕಿವಿಗೊಟ್ಟಿರಲಿಲ್ಲ. ಅವನ ಅಂಗಿಯೆಲ್ಲಾ ರಕ್ತಮಯವಾಗಿತ್ತು. ಹಫ್ಸಳನ್ನು ಹೇಗೆ ಆಸ್ಪತ್ರೆಗೆ ಮುಟ್ಟಿಸಿದ್ದೆಂದು ಅವನಿಗೇ ತಿಳಿದಿರಲಿಲ್ಲ. ಒಟ್ಟಾರೆ ಅವನಂತೂ ಸಿಡಿಲು ಬಡಿದವನಂತೆ ಕುರ್ಚಿಯಲ್ಲೇ ಕುಳಿತುಕೊಂಡು icu ನ ಕಡೆಯೇ ಡಾಕ್ಟರ್'ನ ಬರುವಿಕೆಯನ್ನೇ ಎದುರು ನೋಡುತ್ತಿದ್ದನು. ಆಪರೇಷನ್ ಥೀಯೇಟರ್'ನ ಹೊರಗಿನ ಕೆಂಪು ದೀಪ ಬಹಳ ಹೊತ್ತಿನಿಂದಲೂ ಉರಿಯುತ್ತಲೇ ಇತ್ತು.
ಮುನೀರ್ ನ ಮೌನ ಕಂಡು ನಬೀಸುಮ್ಮಳಿಗೂ ಏನೋ ಕಳವಳ ! "ಮುನೀರ್, ಮುನೀರ್" ಎನ್ನುತ್ತಾ ಜೋರಾಗಿ ಅವನನ್ನು ಅಲುಗಾಡಿಸಿದ್ದೇ ತಡ, ತಟ್ಟನೆ ಎಚ್ಚೆತ್ತುಗೊಂಡು "ಅಮ್ಮ, ಒಂದ್ನಿಮಿಷ.. ! ಒಳಗೆ ಏನಾಯಿತೆಂದು ಒಮ್ಮೆ ವಿಚಾರಿಸ್ತೇನೆ. ನೀನು ಸ್ವಲ್ಪ ಸಮಾಧಾನದಿಂದಿರು."
ಯಾ ಅಲ್ಲಾಹ್ ! ನನ್ನ ಮಗಳನ್ನು ರಕ್ಷಿಸು. "ಮಗನೇ, ನನ್ನ ಹಫ್ಸಳಿಗೆ ಏನಾದರೂ ಹೆಚ್ಚುಕಡಿಮೆಯಾದಲ್ಲಿ ನಾನೂ ಕೂಡ ಜೀವಸಹಿತ ಇರಲಾರೆ."
ಮುನೀರ್ ಭಾರವಾದ ಹೆಜ್ಜೆಗಳನ್ನಿಡುತ್ತಾ icu ನ ಕಡೆಗೆ ಇಣುಕಿ ನೋಡಿದ.... ಸ್ವಲ್ಪ ಹೊತ್ತಲ್ಲೇ, ಕೆಂಪು ದೀಪ ನಂದಿ, ಡಾಕ್ಟರ್ ಹೊರಬಂದರು. "ಇಲ್ಲಿ ಹಫ್ಸಳ ಕಡೆಯವರು ಯಾರಿದ್ದಾರೆ ?"
"ನಾನು, ನಾನು..! ಹಫ್ಸಳ ಅಣ್ಣ .....! ಎಲ್ಲವೂ ಕ್ಷೇಮ ತಾನೇ ? ನಮ್ಮ ಹಫ್ಸ ಹೇಗಿದ್ದಾಳೆ ?"
"ಅದು...ಅದು.....ಏನೂಂದ್ರೆ....."
ಡಾಕ್ಟರ್ ಅಪರೇಶನ್ ರೂಮಿನಿಂದ ಹೊರಬಂದು.. ಇಲ್ಲಿ ಹಪ್ಸಾ ಪೇಸೆಂಟ್ ಕಡೆಯವರು ಯಾರಿದ್ದೀರಾ..!
"ನಾನು.. ನಾನು ಹಪ್ಸಾಳ ಅಣ್ಣ.. ಡಾಕ್ಟರ್ ಎಲ್ಲವೂ ಕ್ಷೇಮ ತಾನೇ..? ನಮ್ಮ ಹಪ್ಸ ಇವಾಗ ಹೇಗಿದ್ದಾಳೆ..?
ಅದು... ಅದು.. ಏನೂಂದ್ರೆ ......ಡಾಕ್ಟರ್ ಕನವರಿಸುತ್ತಿದ್ದನ್ನು ಕಂಡು ನಬೀಸುಮ್ಮಳೂ ಭಯಪಡುತ್ತ ಡಾಕ್ಟರ್ ಸನಿಹಕ್ಕೆ ಬಂದು "ಡಾಕ್ಟರ್ ಏನಾಯ್ತು ನನ್ನ ಮಗಳಿಗೆ ?"
"ತುಂಬಾ ಕ್ರಿಟಿಕಲ್ ಸ್ಟೇಜ್ ! ಬಹಳಷ್ಟು ರಕ್ತಸ್ರಾವದಿಂದ ಬಲಹೀನಳಾಗಿದ್ದಾಳೆ. ಈಗಲೂ ಪ್ರಜ್ಞೆಯಲ್ಲಿದ್ದಾಳೆ. ನೀವು ಅಲ್ಲಾಹುವಿನಲ್ಲಿ ಪ್ರಾರ್ಥಿಸಿರಿ ಅಷ್ಟೆ...."
"ಯಾ ರಬ್ಬೇ ! ಇದೇನು ಗಂಡಾಂತರ..? ನನ್ನ ಮಗಳ ಬಾಳು ಹೀಗಾಯ್ತಲ್ಲ?" ನಬೀಸುಮ್ಮಳ ಆಕ್ರಂದನ ಮುಗಿಲು ಮುಟ್ಟಿತು...
"ಅಮ್ಮ, ಸಂಕಟಪಡಬೇಡ. ಹಫ್ಸ ಶೀಘ್ರ ಗುಣಮುಖಳಾಗುವಳು. ಅಲ್ಲಾಹುವಿನ ರಕ್ಷೆ ಖಂಡಿತವಾಗಿಯೂ ಅವಳಿಗೆ ಸಿಗಲಿದೆ. ಸುಮ್ಮನೆ ಹೀಗೆಲ್ಲಾ ರಂಪಾಟ ಮಾಡದೆ, ಒಂದು ಕಡೆ ಕುಳಿತ್ಕೊಂಡು ದುಃಅ ಮಾಡು. ನಮ್ಮ ಹಫ್ಸಳ ಮರುಜೀವಕ್ಕಾಗಿ ಅಲ್ಲಾಹುವಿನಲ್ಲಿ ಬೇಡಿಕೋ...." ಅನ್ನುವಷ್ಟರಲ್ಲಿ ಮುನೀರ್'ನ ಕಣ್ಣೀರಿನ ಹನಿಗಳು ಬೀಳತೊಡಗಿತು...
"ಏನಿದೆಲ್ಲಾ ? ಏನಾಯ್ತು ಮುನೀರ್ ?" ಹಿಂದಿನಿಂದ ಅವನ ತೋಳನ್ನು ಹಿಡಿಯುತ್ತಾ ಮುಸ್ತಫ ...
"ಇದೆಲ್ಲಾ ಹೇಗಾಯ್ತು..? ನನಗೂ ಭಯವಾಗ್ತಿದೆ !" ಇನ್ನೊಂದು ಧ್ವನಿ ಶಾಜಹಾನ್'ನದ್ದು....
"ಮುಸ್ತಫ, ಏನೂಂತ ಹೇಳೋದು ? ನನ್ನ ಮಗಳು ಹಫ್ಸ ಅದೋ ICU ನೊಳಗೆ ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ಒಮ್ಮೆ ಅವಳು ಈ ಅಪಾಯದಿಂದ ತಪ್ಪಿದರೆ ಸಾಕಿತ್ತು. ಯಾ ಅಲ್ಲಾಹ್ !" ಅವನ ಬಿಕ್ಕಳಿಕೆಯನ್ನು ಕಂಡು ಶಾಜಹಾನ್ ಮನ ಕೂಡ ಮಮ್ಮಲ ಮರುಗಿತು. ಓಡಿ ಹೋಗಿ ICU ನೊಳಗೆ ಇಣುಕಿ ನೋಡಿದರೂ ಏನೂ ಕಾಣಿಸುತ್ತಿಲ್ಲ. ಮುಸ್ತಫನ ಸನಿಹಕ್ಕೆ ಬಂದ ಶಾಜಹಾನ್ ICU ನ ಕಡೆ ಕೈ ತೋರಿಸುತ್ತಾ ತೊದಲುತ್ತಾ, ಏನೋ ಮಾತಾಡುತ್ತಿದ್ದ. ಅವನ ಕೈ ಸನ್ನೆಯಿಂದಲೇ ಅವನ ನೋವು ಅರಿತುಕೊಂಡ ಮುಸ್ತಫ, ಖಂಡಿತವಾಗಿಯೂ "ನಾವು ಡಾಕ್ಟರ್'ನ್ನು ಕಂಡು ಮಾತಾಡೋಣ" ಎಂದು ಸಮಾಧಾನಿಸಲೆತ್ನಿಸಿದ...
ಮೂವರೂ (ಮುಸ್ತಫ, ಮುನೀರ್,ಶಾಜಹಾನ್) ಡಾಕ್ಟರ್'ನ ಕ್ಯಾಬಿನ್ ಕಡೆಗೆ ಹೊರಟರು....
"ಡಾಕ್ಟರ್, ಹಫ್ಸಳ ಕಂಡೀಷನ್ ಹೇಗಿದೆ?"
"ಸ್ವಲ್ಪ ಕ್ರಿಟಿಕಲ್ ಕೇಸ್, ಧಾರಾಳ ರಕ್ತ ಹೋದ್ದರಿಂದ ಸ್ವಲ್ಪ ಮಟ್ಟಿಗೆ ಅಪಾಯ ಸ್ಥಿತಿಯಲ್ಲಿದ್ದಾಳೆ. ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಇದೊಂದು ಪೊಲೀಸ್ ಕೇಸ್ ! ನಾನು ಪೊಲೀಸರಿಗೆ ಕಂಪ್ಲೇಂಟ್ ಮಾಡಬೇಕೆಂದಿದ್ದೆ. ಆದರೆ ಮುಸ್ತಫ ಕಾಲ್ ಮಾಡಿದ್ದರಿಂದ ನಾನು ಅಲ್ಲಿಗೇ ಅದುಮಿಬಿಟ್ಟೆ. ಮುಸ್ತಫ ನನ್ನ ಬಂಧುವಲ್ಲವೇ..?"
"ಥ್ಯಾಂಕ್ಸ್, ಈ ವಿಷಯ ಅಮ್ಮನಿಗೆ ಗೊತ್ತಾಗೋದು ಬೇಡ ಡಾಕ್ಟರ್ !" ಮುಸ್ತಫ ಬಿನ್ನವಿಸಿಕೊಂಡ. ಹಫ್ಸ ಮತ್ತು ಶಾಜಹಾನ್ ಮೊಬೈಲಿನಲ್ಲಿ ಮಾಡಿದ ಸಂಭಾಷಣೆಯನ್ನು ಕಂಡು ನಾನು ಮುನೀರ್'ಗೆ ಫೋನ್ ಮಾಡಿದ್ದೆ. ಅವರ ಸಂಭಾಷಣೆಯಲ್ಲಿ ಏನೋ ಅನಾಹುತವಾಗಲಿಯೆಂದು ಮನವರಿಕೆಯಾಗಿತ್ತು. ಅಷ್ಟರಲ್ಲೇ ಈ ಘಟನೆಯ ಬಗ್ಗೆ ವಿವರಿಸಿದಾಗ ನಾನು ಹಫ್ಸಳನ್ನು ಇದೇ ಆಸ್ಪತ್ರೆಗೆ ಕರೆತರಲು ಮುನೀರೊಡೊನೆ ಹೇಳಿದ್ದೆ. ಅಲ್ ಹಮ್ದುಲಿಲ್ಲಾಹ್ ! ಮುನೀರ್ ಇಲ್ಲಿಗೇ ಕರೆತಂದದ್ದು ಒಳ್ಳೆಯದಾಯಿತು. ಇಲ್ಲಾಂದ್ರೆ ಪೊಲೀಸ್ ಸ್ಟೇಷನ್, ಕೋರ್ಟ್ ಕಚೇರಿ ಮೆಟ್ಟಿಲೇರಬೇಕಾದ ಪರಿಸ್ಥಿತಿ !
"ಥ್ಯಾಂಕ್ಸ್ ಮುಸ್ತಫ, ನಿಮ್ಮ ಈ ಉಪಕಾರ ಎಂದಿಗೂ ಮರೆಯೋದಿಲ್ಲ. ಡಾಕ್ಟರ್ ಗೆ ಕರೆ ಮಾಡಿದ್ದು, ಬೇಕಾದ ರಕ್ತವನ್ನು ಅರೆಂಜ್ ಮಾಡಿ ಅವಳ ಬದುಕಿನ ಸಾಧ್ಯತೆಯನ್ನು ಹೆಚ್ಚಳಗೊಳಿಸಿದ್ದು" ಅವನ ಕೈಹಿಡಿದು ಮುನೀರ್...
"ಮುನೀರ್, ಯಾಕಿಷ್ಟು ಫಾರ್ಮಾಲಿಟಿ ? ನಾವು ಸಂಬಂಧಿಗಳಾಗುವವರು..! ನಾವಿಬ್ಬರೂ ಒಂದೇ ಕುಟುಂಬದವರಲ್ಲವೇ? ನೀನು ಮನೆಗೆ ಹೋಗಿ ಸ್ನಾನ ಮಾಡಿ ಈ ರಕ್ತಮಯವಾದ ಅಂಗಿಯನ್ನು ಬದಲಿಸಿಕೊಂಡು ಬಾ, ನಾವಿಲ್ಲಿದ್ದೇವೆ"
"ಬೇಡ ಮುಸ್ತಫ, ನಮ್ಮ ಹಫ್ಸ ಹೀಗೆ ಕ್ರಿಟಿಕಲ್ ಕಂಡಿಷನ್'ನಲ್ಲಿರುವಾಗ ನಾನು ಮನೆಗೆ ಹೋಗುವುದೇ ?"
"ನೀವು ಹೋಗಿ ಬನ್ನಿ, ನಾನು ಇಲ್ಲಿ ನಾನಿರುತ್ತೇನೆ." ಅವನ ಕೈ ಹಿಡಿದು ಶಾಜಹಾನ್ ಕೂಡ ಸಮಾಧಾನಿಸಿದ.
"ಅಲ್ ಹಮ್ದುಲಿಲ್ಲಾಹ್ ! ಎಷ್ಟೊಂದು ಸ್ನೇಹ, ಎಷ್ಟೊಂದು ಪ್ರೀತಿ !" ತನ್ನ ಮನದಲ್ಲೇ ಹೇಳಿಕೊಂಡ...
(ಇಷ್ಟೆಲ್ಲಾ ಅವಾಂತರವಾದದ್ದು ನೂರ್'ಜಹಾನ್'ಗಂತೂ ತಿಳಿದೇ ಇರಲಿಲ್ಲ.)
"ಯಾ ಅಲ್ಲಾಹ್ ! ನನ್ನ ನೂರೂ ಏನು ಮಾಡುತ್ತಿದ್ದಾಳೇನೋ ? ಮನೆಯಲ್ಲಿ ಇರೋದು ಅವಳೊಬ್ಬಳೇ.. ಅವಳು ಈಗಲೂ ನಿದ್ರೆಯಲ್ಲಿದ್ದಾಳೋ ಅಥವಾ......"
ಮುನೀರ್'ಗೆ ಮನೆಯಲ್ಲಿ ಒಬ್ಬಳೆ ಇದ್ದ ಅವನ ಹೆಂಡತಿ ನೂರ್'ಜಹಾನ್'ಳದ್ದೆ ಚಿಂತೆಯಾಗಿ ಬಿಟ್ಟಿತು.. "ಯಾ ಅಲ್ಲಾಹ್..! ನನ್ನ ನೂರೂ ಏನು ಮಾಡುತ್ತಿದ್ದಾಳೇನೋ..? ಮನೆಯೆಲ್ಲಿ ಇರೋದು ಅವಳೊಬ್ಬಳೇ... ಅವಳು ಈಗಲೂ ನಿದ್ರೆಯಲ್ಲಿದ್ದಾಳೋ ಅಥವಾ..."
ನೂರ್'ಜಹಾನ್ ನಿದ್ದೆಯಲ್ಲಿದ್ದರೆ ಒಳ್ಳೆಯದಿತ್ತು. ಆಸ್ಪತ್ರೆಗೆ ಬರುವ ಗಡಿಬಿಡಿಯಲ್ಲಿ ಅವಳನ್ನು ಎಚ್ಚರಿಸಲು ಮರೆತೇ ಬಿಟ್ಟಿದ್ದೆ.. ಏನಿದ್ದರೂ ಕೂಡಲೇ ಹೋಗಿ ಅವಳನ್ನೂ ಕೂಡ ಕರೆದುಕೊಂಡು ಬರೋದೇ ಲೇಸು. ಪಾಪ ! ಒಂಟಿ ಹೆಣ್ಣು ಮನೆಯಲ್ಲಿರೋದು ಅಪಾಯವೇ ಸರಿ. ಅವಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ತನ್ನದೇ ಕೋಣೆಯಲ್ಲಿ ಅವಳೊಬ್ಬಳೇ ಮಲಗೋದೆಂದರೆ ಅವಳಿಗಂತೂ ತುಂಬಾ ಭಯ. ರಾತ್ರಿ ಸಮಯ ಸ್ನಾನಕ್ಕೆ ಅವಳು ಹೋಗಬೇಕಿದ್ದರೆ ಕೂಡ ನಾನು ಹೊರಗೆ ಕಾವಲು ಕಾಯಬೇಕು. ಅಷ್ಟೊಂದು ಭಯವಿರುವ ನೂರ್'ಜಹಾನ್'ಳನ್ನು ಹೀಗೆ ಮನೆಯಲ್ಲೇ ಬಿಟ್ಟರೆ..... ಉಫ್ ! ನಾನೀಗಲೇ ಮನೆಗೆ ಹೋಗಿ ಅವಳನ್ನು ಕರೆತರುವೆ ಎಂದೆನಿಸಿ "ಉಮ್ಮ, ನಾನು ಮನೆಗೆ ಹೋಗಿ ಸ್ನಾನ ಮಾಡಿ ಈ ಅಂಗಿಯನ್ನೊಮ್ಮೆ ಬದಲಿಸಿ ಬರ್ತೇನೆ. ಈಗ ಇಂಚು ನೊಳಗೆ ಹೋಗಬೇಕೆಂದರೆ ಈ ರಕ್ತದ ಅಂಗಿಯಲ್ಲಿ ಹೋಗೋದು ಸರಿಯಲ್ಲ."
"ಮಗನೇ, ಇಂತಹ ಪರಿಸ್ಥಿತಿಯಲ್ಲಿ ನೀನು ಮನೆಗೆ ಹೋಗಿ ಇಲ್ಲಿ ಹಫ್ಸಳಿಗೆ ಏನಾದರೂ ಅವಶ್ಯಕತೆ ಬಂದಲ್ಲಿ ....?"
"ಏನಮ್ಮ ಹೀಗನ್ನುತ್ತೀರಿ? ನಾವಿಲ್ಲವೇ..? ಅಲ್ಲ, ನಾವೇನೂ ಬೇರೆಯವರೇ..? ಮುನೀರ್ ಮನೆಗೆ ಹೋಗಿ ಫ್ರೆಶ್ ಆಗಿ ಬರಲಿ. ಹೇಗಿದ್ದರೂ ಮನೆ ಹತ್ತಿರವಿದೆಯಲ್ಲ..?" ಮುಸ್ತಫನ ಸಾಂತ್ವನದ ಮಾತುಗಳನ್ನು ಕೇಳಿ ನಬೀಸುಮ್ಮ, "ಆಯ್ತು ಬೇಗನೆ ಮರಳಿ ಬಾ ಮುನೀರ್" ಎಂದು ಕಳುಹಿಸಿದಳು.
ಮುನೀರ್ ಆಸ್ಪತ್ರೆಯ ಗೇಟಿನಲ್ಲಿದ್ದ ಆಟೋರಿಕ್ಷವನ್ನಿಡಿದು ತನ್ನ ಮನೆಯ ಕಡೆಗೆ ಹೊರಟನು. ಅವಸರವಾಗಿ ಮನೆಯ ಬಾಗಿಲ ತೆರೆದು ಪ್ರವೇಶಿಸಿದ್ದೇ ಆತಂಕ ! ಆಸ್ಪತ್ರೆಗೆ ಹೋಗುವ ಅವಸರದಲ್ಲಿ ಮನೆಬಾಗಿಲು ಕೂಡ ಸರಿಯಾಗಿ ಹಾಕಿರಲಿಲ್ಲ. ಕಳ್ಳರೇನಾದರೂ ಲೂಟಿ ಮಾಡಿದ್ದಾರೇನೋ..? ನೇರವಾಗಿ ತನ್ನ ಕೋಣೆಯ ಕದ ತೆರೆದ. ಅವನ ಕಣ್ಣುಗಳು ನೂರ್'ಜಹಾನ್'ಳನ್ನು ಹುಡುಕಾಡಿತು. "ಅಲ್ ಹಮ್ದುಲಿಲ್ಲಾಹ್ ! ಎಲ್ಲವೂ ಸರಿಯಿದೆ." (ನೂರ್'ಜಹಾನ್ ಆಗಲೂ ಗಾಢನಿದ್ದೆಯಲ್ಲಿದ್ದಳು)
"ಬೇಗನೆ ಸ್ನಾನ ಮಾಡಿ ಈ ಅಂಗಿಯನ್ನೊಮ್ಮೆ ಬದಲಿಸಬೇಕು. ಬೆಳಗ್ಗಿನಿಂದಲೂ ಅವಳ ಮನಸ್ಸು ಸರಿಯಿಲ್ಲ. ಇನ್ನು ಈ ಸ್ಥಿತಿಯನ್ನು ಕಂಡರೆ ಮತ್ತಷ್ಟು ಗಾಬರಿಯಾದರೆ..?" ಬೆಕ್ಕಿನಂತೆ ಯಾವುದೇ ಶಬ್ದ ಮಾಡದೆ ಬಚ್ಚಲುಮನೆಗೆ ಹೋದ. ಸ್ನಾನ ಮುಗಿಸಿ ಬೇರೊಂದು ಅಂಗಿಯನ್ನು ತೊಟ್ಟು "ನೂರೂ, ನೂರೂ ಎದ್ದೇಳು"
"ಏನಾಯ್ತು ? ಈ ನಡುರಾತ್ರೀಲಿ ? ಸರಿಯಾಗಿ ನಿದ್ದೆ ಮಾಡಲೂ ಬಿಡಲ್ಲ ಈ ಮನುಷ್ಯ..?"
"ನೀನು ಕೂಡಲೇ ಎದ್ದು ನಿನ್ನ ಬಟ್ಟೆ ಬದಲಿಸಿಕೋ..."
"ಏನ್ರೀ, ಈ ರಾತ್ರೀಲಿ ಹೋಗೋದೆಲ್ಲಿಗೆ..?" ನೂರ್'ಜಹಾನ್ ಗಾಬರಿಯಿಂದಲೇ ಕೇಳಿದಳು.
"ಗಾಬರಿಯಾಗಬೇಡ. ನಮ್ಮ ಹಫ್ಸಳಿಗೆ ಸ್ವಲ್ಪ ಹುಷಾರಿಲ್ಲದೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ. ನಾವು ಕೂಡಲೇ ಹೋಗಬೇಕು."
"ನೀವೇನು ಹೇಳ್ತಿರೋದು? ಹಫ್ಸಳಿಗೆ ಹುಷಾರಿಲ್ಲವೇ..? ಏನಾಯ್ತು ಅವಳಿಗೆ..?"
"ಅಂತಾದ್ದೇನೂ ಆಗಿಲ್ಲ. ಸ್ವಲ್ಪ ಹೊಟ್ಟೆ ನೋವು. ಬಾಕಿ ವಿಷಯ ಆಮೇಲೆ ಮಾತಾಡೋಣ. ಈಗ ಆಸ್ಪತ್ರೆಯಲ್ಲಿ ಅಮ್ಮ ಮಾತ್ರ ಇರೋದು. ತಡಮಾಡದೆ ಬೇಗ ಹೊರಡು. ಆಸ್ಪತ್ರೆಯಲ್ಲಿ ಕುಳಿತುಕೊಳ್ಳಬೇಕಿದ್ದರಿಂದ ಅವಶ್ಯಕತೆಯುಳ್ಳದ್ದನ್ನು ಕೂಡ ಪ್ಯಾಕ್ ಮಾಡಲು ಮರೆಯಬೇಡ."
"ಸರಿ,ಸರಿ"...
ನೂರ್'ಜಹಾನ್ ಬಟ್ಟೆ ಬದಲಿಸಿ, ಹಫ್ಸಳ ಕೋಣೆಯೊಳಗೆ ಹೋಗಿ ಅವಳ ಬಟ್ಟೆಬರೆಗಳನ್ನೂ ತೆಗೆದುಕೊಂಡು ತಯಾರಾದಳು. ಮನೆಗೆ ಬೀಗ ಹಾಕಿ ಗೇಟಿನ ಹೊರಬಂದು ಆಟೋ ರಿಕ್ಷಾವನ್ನೇರಿದರು. ದಾರಿಯಲ್ಲಿ ಮುನೀರ್, ನೂರ್'ಜಹಾನ್ ಕೈಯನ್ನಿಡಿದನು. ಅವನ ಕೈ ತಣ್ಣಗಿದ್ದನ್ನು ಕಂಡ ನೂರ್'ಜಹಾನ್ "ಏನ್ರೀ, ನಿಮ್ಮ ಕೈ ಇಷ್ಟೊಂದು ತಣ್ಣಗಿದೆ? ನೀವು ನನ್ನಲ್ಲಿ ಏನೋ ಮುಚ್ಚಿಡುತ್ತಿದ್ದೀರಾ..? "
ನೂರೂ, ನಾನು ಹೇಳೋದನ್ನ ಸ್ವಲ್ಪ ಗಮನವಿಟ್ಟು ಕೇಳು."ಅಷ್ಟರಲ್ಲಿ ಆಟೋ ಆಸ್ಪತ್ರೆಯ ಎದುರು ಬಂದು ನಿಂತಿತ್ತು...
"ಈ ಆಸ್ಪತ್ರೆಯೇ..? ನೀವು ಎರಡು ವರ್ಷದ ಹಿಂದೆಯೂ ಈ ರೀತಿ ನಡುರಾತ್ರಿಯಲ್ಲೇ "ಏನಿಲ್ಲ, ಏನಿಲ್ಲ" ಅಂತ ಹೇಳಿ ಕೊನೆಗೆ ಬಂದು ನೋಡಿದಾಗ ಅಪ್ಪ ಸೀರಿಯಸ್ ಕಂಡೀಷನ್'ನಲ್ಲಿದ್ದರು. ಮತ್ತೆ ಆಸ್ಪತ್ರೆಯಿಂದ ಮರಳಿದ್ದು ಅಪ್ಪನ ಪಾರ್ಥಿವ ಶರೀರದೊಂದಿಗೆ....... ಸತ್ಯವನ್ನೇ ಹೇಳಿ, ಏನನ್ನೂ ಮುಚ್ಚುಮರೆ ಮಾಡಬೇಡಿ... ಹಫ್ಸಳಿಗೆ ಏನಾಗಿದೆ?"
"ಏನೂಂತ ಹೇಳೋದು. ಹಫ್ಸ ಆತುರಪಟ್ಟು ಕೈಯ ನರವನ್ನು ಅವಳೇ ಬ್ಲೇಡಿನಿಂದ ಕೊಯ್ದು ಅತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ರಕ್ತಸ್ರಾವವಾಗಿ ಈಗ ICU ನಲ್ಲಿದ್ದಾಳೆ..." ಮುನೀರ್'ನ ಸ್ವರದಲ್ಲಿ ಆತಂಕ ಎದ್ದು ಕಾಣುತ್ತಿತ್ತು...
"ಯಾ ಅಲ್ಲಾಹ್ !" ಎನ್ನುತ್ತಾ ನೂರ್'ಜಹಾನ್ ಮುನೀರ್'ನನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದಳು. ಏನ್ರೀ ಇದೆಲ್ಲಾ......
"ಇದು ಆಸ್ಪತ್ರೆ.... ನೀನು ಕಿರುಚಾಡಬೇಡ. ಹಫ್ಸ ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ... ಅಳುವುದನ್ನು ಬಿಟ್ಟು ಅವಳಿಗಾಗಿ ದುಃಅ ಮಾಡು..."
ಇಬ್ಬರೂ ICUನ ಮುಂಭಾಗಕ್ಕೆ ತಲುಪಿದರು....
"ನೀನ್ಯಾಕೆ ಇಲ್ಲಿಗೆ ಬಂದೆ..? ಇಷ್ಟು ಅನಾಹುತ ಮಾಡಿದ್ದೂ ಅಲ್ಲದೆ ಈಗ ಅವಳನ್ನು ಕೊಲ್ಲಲು ಆಸ್ಪತ್ರೆಯವರೆಗೂ ಬಂದಿದ್ದೀಯಾ..? ಕೂಡಲೇ, ಇಲ್ಲಿಂದ ಹೊರಟು ಹೋಗದಿದ್ದರೆ ಪರಿಣಾಮ ನೆಟ್ಟಗಿರಲ್ಲ." ಮೈಯಲ್ಲಿ ಭೂತ ಬಂದಂತೆ ನಬೀಸುಮ್ಮ ಕೋಪದಿಂದ ಗುಡುಗಿದಳು.
"ಅಮ್ಮ, ನಿಲ್ಲಿಸು ! ಇದು ಮನೆಯಲ್ಲ, ಆಸ್ಪತ್ರೆ ! ಇಲ್ಲಿ ಎಲ್ಲರೂ ನೋಡುವಂತೆ ಅಸಹ್ಯಗೊಳಿಸಬೇಡಿ..."*ಮುನೀರ್ ಹೇಳುತ್ತಲೇ ನಬೀಸುಮ್ಮ ಒಂದು ಕ್ಷಣ ಸುಮ್ಮನಾದಳು. ಇದೆಲ್ಲವನ್ನೂ ನೋಡುತ್ತಲಿದ್ದ ಮುಸ್ತಫ ಮತ್ತು ಶಾಜಹಾನ್ ಕೂಡ ನಿಬ್ಬೆರಗಾದರು...
ಅಷ್ಟರಲ್ಲಿ ನರ್ಸ್ ಬಂದು.. "ಹಫ್ಸಳಿಗೆ ಪ್ರಜ್ಞೆ ಮರಳಿದೆ. ನಿಮ್ಮಲ್ಲಿ ಯಾರಾದರೂ ಒಬ್ಬರು ಬಂದು ನೋಡಬಹುದು."
"ನಾನು ಹೋಗ್ತೇನೆ" ನಬೀಸುಮ್ಮ ಹೇಳುವಷ್ಟರಲ್ಲಿ "ಬೇಡಮ್ಮ, ನಾನೇ ಹೋಗಿ ಬರುತ್ತೇನೆ. ನೀನು icuನೊಳಗೆ ಹೋಗಿ ಬೊಬ್ಬೆಯಿಟ್ಟರೆ ಉಳಿದವರಿಗೂ ತೊಂದರೆಯಲ್ಲವೇ..?" ಹೇಳುತ್ತಾ ಮುನೀರ್ ICUನೊಳಗೆ ಹೋಗಿ "ಮೋಳೆ ಹಫ್ಸ,"ಎನ್ನುತ್ತಾ ಅವಳ ತಲೆ ಸವರಿದ.
"ಹಮ್ಮ್, ಹಾ" ಮೆಲ್ಲನೆ ಒಂದು ನರಳಾಟ...
"ಮೋಳೆ ಹಫ್ಸ, ಇದೆಲ್ಲಾ ಸರೀನಾ? ಇಷ್ಟೊಂದು ಅವಸರಪಟ್ಟರೆ....."
"ಅಣ್ಣ, ನಾನು ಬದುಕಿಬಿಟ್ಟೆ ಅಲ್ಲವೇ ? ಛೆ ! ಬದುಕಬಾರದಿತ್ತು" ಅವಳ ಆ ಸಣ್ಣ ಸ್ವರದಲ್ಲೇ ಬಲಹೀನತೆ ವ್ಯಕ್ತವಾಗಿತ್ತು.
"ಏನೂ ಮಾತಾಡಬೇಡ, ಎಲ್ಲವೂ ಸರಿಹೋಗುತ್ತೆ . ಖಂಡಿತವಾಗಿಯೂ ಅಲ್ಲಾಹು ಇದಕ್ಕೊಂದು ಸೂಕ್ತ ಪರಿಹಾರ ತೋರಿಸಬಹುದು."
"ಅದೂ ಸರೀನೆ...ಆದರೆ ನಾ ಕಂಡ ಕನಸೆಲ್ಲವೂ ಮುರಿದು ಹೋಯ್ತಲ್ಲ? ಮದುವೆ, ಶಾಜು...." ಕಣ್ಣೇರೊಂದಿಗೆ ಹಫ್ಸ ಮರುಗಿದಳು.
"ಯಾರು ಹೇಳಿದ್ದು? ನೋಡು, ಹೊರಗೆ ನಿನಗಾಗಿ ಮಿಡಿಯುತ್ತಿರುವ ಹೃದಯವೊಂದು ಕಾಯುತ್ತಿದೆ. ಅವನು ನಿನ್ನ ಕೈ ಬಿಡುವನೆಂದು ಕನಸಿನಲ್ಲೂ ಯೋಚಿಸಬೇಡ."
ಸಣ್ಣನೊಂದು ಮುಗುಳ್ನಗೆ ಹಫ್ಸಳ ಮುಖದಲ್ಲಿ ಕಂಡು ಮುನೀರ್ ಕೂಡ ಸಮಾಧಾನಗೊಂಡನು. "ನೀನು, ವಿಶ್ರಾಂತಿ ಮಾಡು. ನಾನು ಶಾಜುವನ್ನು ಕಳುಹಿಸುತ್ತೇನೆ." ನರ್ಸ್ ಜೊತೆ ಅನುಮತಿ ಪಡೆದು ICU ನಿಂದ ಹೊರನಡೆದ. ತನಗೂ ಒಳಹೋಗುವ ಅವಕಾಶಕ್ಕಾಗಿ ಶಾಜಹಾನ್ ICU ನ
ಬಾಗಿಲಲ್ಲೇ ನಿಂತುಕೊಂಡಿದ್ದ.
"ಶಾಜು ನೀನು ಒಳಗಡೆ ಹೋಗಿ ಹಫ್ಸಳನ್ನು ನೋಡಬಹುದು. ಹಫ್ಸ ನಿನಗಾಗಿ ಕಾಯುತ್ತಿದ್ದಾಳೆ..." ಮುನೀರ್'ನ ಮಾತು ಮುಗಿಯುವುದರೊಳಗೆ ಶಾಜಹಾನ್ ICU ನ ಒಳಗೆ ಹೋಗಿಬಿಟ್ಟ. ಮೈಯಿಡೀ ಯಂತ್ರಗಳೊಂದಿಗೆ ಆವರಿಸಲ್ಪಟ್ಟ ಹಫ್ಸಳನ್ನು ಕಂಡು ಶಾಜಹಾನ್ ಒಮ್ಮೆಲೆ ದಿಗ್ಬ್ರಾಂತನಾಗಿಬಿಟ್ಟ.....
ICUನ ಒಳಗೆ ಕಾಲಿಟ್ಟ ಶಾಜಹಾನ್'ಗೆ ಹಫ್ಸಾಳ ಇಡೀ ಶರೀರಕ್ಕೆ ಯಂತ್ರಗಳಿಂದ ಆವರಿಸಲ್ಪಟ್ಟಿದ್ದನ್ನು ಕಂಡು ಒಮ್ಮೆಲೆ ದಿಗ್ಭ್ರಾಂತನಾಗಿಬಿಟ್ಟ.."
ಹಫ್ಸಳ ಬಾಯಲ್ಲಿ ಪೈಪೊಂದು ಅಳವಡಿಸಲಾಗಿತ್ತು.. ಶಾಜಹಾನ್ ಕಣ್ಣಲ್ಲಿ ತನ್ನಿಂತಾನೇ ಕಣ್ಣೀರು ಹರಿಯತೊಡಗಿತು.....
"ಹಫ್ಸ, ನನ್ನನ್ನು ಬಿಟ್ಟು ಹೋಗಲು ಬಿಡಲಾರೆ. ಬೇರೆಯವರಿಗೆ ಬಿಟ್ಟು ಕೊಡಲು ಕನಸಲ್ಲೂ ಯೋಚಿಸಲಾರೆ. ನನ್ನ ಜೀವನದಲ್ಲಿ ಸುಖ ಸಂಪತ್ತನ್ನು ನೀಡುವವಳು. ನೀನೇನೂ ಚಿಂತಿಸಬೇಡ. ಎಷ್ಟೇ ಕಷ್ಟ ಬಂದರೂ ನಿನ್ನ ಕೈಬಿಡಲಾರೆ. ಆಸ್ಪತ್ರೆಯಿಂದ ಹೊರಗೆ ಬಂದೊಡನೆ ನಮ್ಮ ಮದುವೆ ನಡೆಯಲಿದೆ. ಅದರ ಬಗ್ಗೆ ಮಾತ್ರ ಚಿಂತನೆಯಿರಲಿ..."ಶಾಜಹಾನ್ ಮತ್ತಷ್ಟು ಧೈರ್ಯ ತುಂಬುವ ಮಾತನ್ನಾಡಿ ಹಫ್ಸಳನ್ನು ಸಮಾಧಾನಿಸಿದ. ನರ್ಸ್'ನ ಕೈಯಿಂದ ಕಾಗದವೊಂದನ್ನು ಪಡೆದು ಏನೋ ಬರೆದು ಹಫ್ಸಳ ಕೈಗಿತ್ತು ಹೊರಗಡೆ ಹೋದನು. ಅದನ್ನು ಓದುವಷ್ಟು ಶಕ್ತಿ ಆ ಸಮಯದಲ್ಲಿ ಅವಳಲ್ಲಿರಲಿಲ್ಲ....
ಅವಳ ಶಕ್ತಿಹೀನತೆ ಕಂಡು ನರ್ಸ್ "ನಾನು ಓದಿ ಕೊಡಲೇ ?"
"ಹೂಂ...."
ಶಾಜಹಾನ್ ಬರೆದದ್ದನ್ನು ಕೇಳಿದ ಹಫ್ಸಳ ಕಣ್ಣು ನೆನೆಯಿತು. ಅವರಿಬ್ಬರ ಪ್ರೇಮ ಕಂಡು ನರ್ಸ್'ನ ಮನವೂ ಕರಗಿತು. "ಓಹೋ ! ಎಂತಹ ಪ್ರೀತಿ. ನೀನು ಭಾಗ್ಯವಂತೆ ಹಫ್ಸ. ಖಂಡಿತವಾಗಿಯೂ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವದಂತೂ ಗ್ಯಾರಂಟಿ. ಈ ಕಾಲದಲ್ಲಿ ಇಂತಹ ಮನಸ್ಸುಳ್ಳ ಹುಡುಗ ಸಿಗೋದು ಬಹಳ ವಿರಳ. ನಿಮ್ಮ ಮುಂಬರುವ ಸಂತೋಷಕರವಾದ ಜೀವನದ ಬಗ್ಗೆ ಯೋಚಿಸಬೇಕೇ ವಿನಃ ಮರಣದ ಬಗ್ಗೆಯಲ್ಲ. ಇನ್ನೊಮ್ಮೆಯೂ ಇಂತಹ ಪ್ರಯತ್ನ ಮಾಡಬೇಡ. ನೀನು ಆ ಸುಖದಾಂಪತ್ಯವನ್ನು ಅನುಭವಿಸಬೇಕು. ಶಾಜಹಾನ್ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾನೆಂಬ ಭರವಸೆ ನನಗಿದೆ."
ಆ ಮಾತು ಕೇಳಿ ಹಫ್ಸಳ ಮುಖದಲ್ಲೊಂದು ನಾಚಿಕೆಯ ಮುಗುಳ್ನಗು....
"ಸಮಾಧಾನವಾಯಿತು.... ನೀನಿನ್ನು ನಿದ್ದೆ ಮಾಡು. ಬೆಳಗ್ಗೆ ನಿನ್ನ ಈ ಕ್ಷೀಣತೆ ಕಡಿಮೆಯಾಗಬಹುದು."
ಹಫ್ಸ ಮೆಲ್ಲನೆ ನಿದ್ದೆಗೆ ಜಾರಿದಳು.....
ಆಸ್ಪತ್ರೆಯ ವರಾಂಗಣ... ಗಂಡಸರೆಲ್ಲಾ ಚಹಾ ಕುಡಿಯಲು ಕ್ಯಾಂಟೀನ್ ಕಡೆ ಹೋಗಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ನಬೀಸುಮ್ಮ.. "ನೂರ್'ಜಹಾನ್ ! ಇಷ್ಟಾದರೂ ನಿನ್ನ ಮನಸ್ಸು ಇನ್ನೂ ಕರಗಲಿಲ್ಲವೇ..? ನನ್ನ ಪ್ರೀತಿಯ ಒಬ್ಬಳೇ ಮಗಳಿಗೆ ಯಾಕಿಷ್ಟು ಪರೀಕ್ಷೆ ? ನಿನಗೆ ಅವಳ ಮೇಲೆ ಕಿಂಚಿತ್ತೂ ಕರುಣೆಯಿಲ್ಲವೇ..? ನಿನ್ನ ಹಠದಿಂದ ಅವಳು ಅತ್ಮಹತ್ಯೆ ಮಾಡುವಷ್ಟರ ಮಟ್ಟಿಗೆ ನೊಂದಿದ್ದಾಳೆ. ಅವಳು ಈಗ ICU ನಲ್ಲಿರುವುದಕ್ಕೆ ಕಾರಣ ನೀನೇ. ಅವಳ ಬಾಳನ್ನು ನಶಿಸಿ ನಿನ್ನ ಬಾಳು ಹಸನುಗೊಳಿಸಬೇಕೇ..? ಅಲ್ಲ, ನಿನ್ನ ಹಠವನ್ನು ಬಿಟ್ಟು ನನ್ನ ಮಗಳ ಜೀವನ ಮುಂದೆ ಸಾಗಲು ಅನುವು ಮಾಡಿಕೊಡುತ್ತೀಯೋ..? ಎಲ್ಲವೂ ನಿನ್ನ ಕೈಯಲ್ಲಿದೆ. ನೀನು ಸಮ್ಮತಿಸಿದರೆ ಮಾತ್ರ ಮುನೀರ್ ಒಪ್ಪಿಗೆ ನೀಡುವನು. ನಿನ್ನ ಒಂದು ಒಳ್ಳೆಯ ತೀರ್ಮಾನದಿಂದ ಎರಡು ಜೀವಗಳು ಉಳಿಯಬಹುದು. ಸಾಜಿದಾಳನ್ನು ಮದುವೆಯಾಗಲು ನೀನು ಮುನೀರನ್ನು ಒಪ್ಪಿಸಲೇಬೇಕು."
"ಇಲ್ಲ, ದಯವಿಟ್ಟು ನನ್ನನ್ನು ಸಂಕಟಕ್ಕೀಡುಮಾಡಬೇಡಿ. ನನಗೂ ಒಂದು ಹೃದಯವಿದೆ. ನನ್ನ ಗಂಡ ಬಿಟ್ಟರೆ ನನ್ನವರೂಂತ ಬೇರೆ ಯಾರಿದ್ದಾರೆ ? ನಿಮ್ಮ ಮಗಳಂತೆ ನಾನೂ ಒಬ್ಬಳು ಹೆಣ್ಣಲ್ಲವೇ ? ನಾನು ಮುನೀರನ್ನು ಬಿಟ್ಟು ಎಲ್ಲಿಗೆ ಹೋಗಲಿ ? ನನ್ನ ತಂಗಿಯರ ಮದುವೆಗಾಗಿ ಹೆತ್ತವರು ಇದ್ದ ಮನೆಯನ್ನೂ ಮಾರಿ ಅವರೂ ಕೂಡ ಅಲ್ಲಾಹನ ಕಡೆಗೆ ಮರಳಿದ್ದಾರೆ. ನೀವಲ್ಲದೆ ನನಗೆ ಇನ್ಯಾರೂ ಇಲ್ಲ. ನನ್ನ ತಲೆ ಸವರುವ ತಂದೆಯೂ ಇಲ್ಲ. ಮಡಿಲಲ್ಲಿ ತಲೆಯಿಟ್ಟು ಅಳಬೇಕೆಂದರೆ ಅಮ್ಮನೂ ಇಲ್ಲ. ಅನಾಥಳಾದ ನನ್ನ ಮನಸ್ಸನ್ನು ನೋಯಿಸಬೇಡಿ. ಹೆಚ್ಚೆಂದರೆ, ನಾನೂ ಕೂಡ ಮರಣ ಹೊಂದುವುದಲ್ಲದೆ ಬೇರೆ ದಾರಿಯಿಲ್ಲ" ಎನ್ನುತ್ತಾ ನಬೀಸುಮ್ಮಳ ಕಾಲಿಗೆ ಬಿದ್ದಳು ನೂರ್'ಜಹಾನ್ !
ನೂರ್ ಜಹಾನ್ ಎಷ್ಟು ಗೋಗರೆದರೂ ಅವಳ ಮನಸ್ಥಿತಿಯನ್ನು ಕೇಳುವ ಯಾವುದೇ ಲಕ್ಷಣವಿರಲಿಲ್ಲ ನಬೀಸುಮ್ಮಳಿಗೆ. ನೂರ್'ಜಹಾನ್'ಳ ಕಣ್ಣೀರನ್ನು ಕೂಡ ನೋಡದೆ ಮುಖವನ್ನು ಸಿಂಡರಿಸಿಕೊಂಡು...
ನೋಡು ನಿನ್ನ ಈ ನಾಟಕವೆಲ್ಲ ನನ್ನ ಮುಂದೆ ನಡೆಯದು. ಮರ್ಯಾದೆಯಿಂದ ನಾನು ಕೇಳಿದ್ರೆ ನಿನಗೊಳಿತು. ಮದುವೆಗೆ ಒಪ್ಪಿಗೆಯಿಟ್ಟರೆ ನಿನ್ನ ಜೀವಮಾನವಿಡೀ ನನ್ನ ಮಗನ ಹೆಂಡತಿಯಾಗಿ ನಮ್ಮ ಮನೆಯಲ್ಲಿರಬಹುದು. ಇಲ್ಲಾಂದ್ರೆ ಎಲ್ಲಾದ್ರೂ ಹೋಗಿ ಸತ್ತುಬಿಡು. ನಿನಗಿರೋದು ಒಂದೇ ದಾರಿ "ಮುನೀರನ್ನು ಸಾಜಿದಾಳೊಂದಿಗೆ ಮದುವೆಯಾಗಲು ಒಪ್ಪಿಸುವುದು" ಮೊದಲು ಈ ಕಾರ್ಯ ನಡೆಯಲಿ... ನಾನು ನಡೆಸಿಯೇ ಸಿದ್ದ. ಇವತ್ತೇ ನಿನ್ನ ತೀರ್ಮಾನವಾಗಬೇಕು. ಇಲ್ಲವಾದಲ್ಲಿ ನಾಳೆಯ ದಿವಸ ಈ ಭೂಮಿಯಲ್ಲಿ ಒಂದಾ ನಾನಿರಬೇಕು, ಇಲ್ಲಾಂದ್ರೆ ನೀನಿರಬೇಕು. ಚಾಗೆ ಹೋದ ಗಂಡಸರು ಬರೋ ಹೊತ್ತಾಯಿತು. ನಿನ್ನ ಈ ನಾಟಕವನ್ನೆಲ್ಲಾ ಇಲ್ಲೇ ಕೊನೆಗೊಳಿಸಬೇಕು. ತಪ್ಪಿಹೋದಲ್ಲಿ ಪರಿಣಾಮ ನೆಟ್ಟಗಿರದು ಎಂದು ಗದರಿಸುತ್ತಾ ನಬೀಸುಮ್ಮ ICU ನ ಕಡೆಗೆ ನಡೆದಳು...
"ಉಫ್ ಸಾಕಪ್ಪ ಸಾಕು. ಯಾ ಅಲ್ಲಾಹ್ ನನ್ನ ಕಷ್ಟ ಯಾವಾಗ ಮುಗಿಯೋದು..? ನನ್ನ ಕಣ್ಣೀರು ನಿನಗೆ ಕಾಣಿಸುತ್ತಿಲ್ಲವೇ..? ನೀನೇ ಕಾಪಾಡು ಯಾ ಅಲ್ಲಾಹ್" ಆಸ್ಪತ್ರೆಯ ವರಾಂಡದ ಬೆಂಚಿನ ಮೇಲೆ ಕುಳಿತು ನೂರ್'ಜಹಾನ್ ಕೈಯೆತ್ತಿಕೊಂಡು ಪ್ರಾರ್ಥಿಸಿದಳು. ಎಲ್ಲರ ಕಣ್ಣು ಕುರುಡಾಯಿತೇ..? ಹಫ್ಸಳ ಮದುವೆಯ ಸಂಭ್ರಮದಲ್ಲಿ ಈ ಬಡಪಾಯಿ ಯಾರಿಗೂ ಬೇಡವಾಯಿತೇ.. ? ಹಫ್ಸಳ ಅವಸ್ಥೆಗೆ ಅನಾಹುತಕ್ಕೆ ನಾನು ಕಾರಣಳೇ? ಇಲ್ಲ, ಯಾರಿಗೂ ಬೇಡವೆಂದರೆ ನಾನು ಜೀವದಲ್ಲಿದ್ದೇನು ಏನು ಪ್ರಯೋಜನ..? ಈ ಭೂಮಿಗೆ ಭಾರವಾಗಲು ನನಗೂ ಇಷ್ಟವಿಲ್ಲ. ಏನೋ ಒಂದು ಕಡೆಯ ತೀರ್ಮಾನ ಕೈಗೊಂಡು ಬೆಂಚಿನಿಂದ ಕೆಳಗಿಳಿದು ಮುನ್ನಡೆದಳು.
"ನಿಲ್ಲಲ್ಲಿ.., ನೀನೆಲ್ಲಿಗೆ ಹೋಗುತ್ತಿದ್ದೀಯ ನೂರೂ?" ಆಸ್ಪತ್ರೆಯ ಮೆಟ್ಟಿಗಳನ್ನಿಳಿದು ಹೊಗುತ್ತಿದ್ದವಳನ್ನು ನಿಲ್ಲಿಸಿ ಕೇಳಿದ ಮುನೀರ್ !
"ನಾನಿಲ್ಲಿ ನಿಲ್ಲುವುದಿಲ್ಲ. ನನ್ನಿಂದ ಎಲ್ಲರಿಗೂ ತೊಂದರೆ ತಾನೇ ?"
"ನಿನಗೇನಾದರೂ ಹುಚ್ಚು ಹಿಡಿದಿದೆಯಾ?" ಮುನೀರ್ ಹೇಳುವಾಗ ಶಾಜಹಾನ್ ಮತ್ತು ಮುಸ್ತಫ ಕೂಡ ಜೊತೆಯಲ್ಲೇ ಇದ್ದರು. "ಸರಿ, ನಿನಗೆ ಎಲ್ಲಿಗೆ ಹೋಗಬೇಕೆಂದು ಹೇಳಿದರೆ ಸಾಕು. ನಾನೇ ಬಿಟ್ಟು ಬರುತ್ತೇನೆ. ನಿನ್ನ ಗಂಡನಾಗಿ ಇಷ್ಟೂ ಕೂಡ ಮಾಡದಿದ್ದರೆ..?"
ನೂರ್'ಜಹಾನ್ ಮರುತ್ತರ ನೀಡದಿದ್ದರೂ ನೋವು ಅವಳ ಕಣ್ಣಲ್ಲಿ ಎದ್ದು ಕಾಣುತ್ತಿತ್ತು...
"ಬಾ ನನ್ನ ಜೊತೆ" ಎಂದು ಅವಳ ಕೈ ಹಿಡಿದುಕೊಂಡು ಆಸ್ಪತ್ರೆಯ ವರಾಂಡದ ಒಂದು ಮೂಲೆಗೆ ಕರೆದುಕೊಂಡು ಹೋಗಿ "ಆಸ್ಪತ್ರೆಯಲ್ಲಿ ಹೆಚ್ಚು ಜನರಿಲ್ಲದ್ದು ನಮ್ಮ ಭಾಗ್ಯ. ಅಲ್ಲ, ಹಫ್ಸ ಇಷ್ಟು ಸೀರಿಯಸ್ ಕಂಡೀಷನ್'ನಲ್ಲಿರುವಾಗ ಏನಿದೆಲ್ಲ ನಿನ್ನ ಅವತಾರ..? ಇದು ನಮ್ಮ ಮನೆಯಲ್ಲ, ಆಸ್ಪತ್ರೆ ಅನ್ನೋದೇ ಮರೆತುಹೋಯ್ತಾ..? ಜನರು ಕಂಡರೆ ಏನೆಲ್ಲಾ ಅಂದ್ಕೊಂತ್ತಾರೇನೋ? ಅದೆಲ್ಲ ಬಿಡು, ಸಂಬಂಧಿಕರಾಗುವ ಶಾಜಹಾನ್ ಮತ್ತು ಮುಸ್ತಫ ಕೂಡ ಇಲ್ಲೇ ಇರುವಾಗ ನಿನ್ನ ಬಗ್ಗೆ ಅವರೇನು ಯೋಚಿಸಲ್ಲ..? ಎಷ್ಟು ಒಳ್ಳೆಯ ಮನಸುಳ್ಳವರು ! ಅವರಿಲ್ಲದಿದ್ದರೆ ನಮ್ಮ ಹಫ್ಸ ಈಗ ನಮ್ಮ ನಡುವೆಯೇ ಇರುತ್ತಿರಲಿಲ್ಲ." ಮುನೀರ್'ನ ಮಾತಿನಲ್ಲಾದ ಬದಲಾವಣೆ ಕಂಡು ನೂರ್'ಜಹಾನ್ ಬಿಚ್ಚಿಬಿದ್ದಳು.
ತನ್ನ ಮಾತನ್ನು ಮುಂದುವರೆಸುತ್ತಾ.. "ನನ್ನ ಬುದ್ದಿಗೆ ನಾನೇ ಚಪ್ಪಲಿ ತೆಗೊಂಡು ಹೊಡ್ಕೊಬೇಕಷ್ಟೆ. ಮನೆಯಲ್ಲಿ ನೀನು ಒಬ್ಬಂಟಿಯಾಗಿರುವೆಯಲ್ಲ ಎಂದೆನಿಸಿ ಓಡೋಡಿ ಬಂದು ನಿನ್ನನ್ನ ಕರಕೊಂಡು ಬಂದದ್ದೇ ತಪ್ಪಾಯ್ತು. ಬಂದದ್ದಕ್ಕೆ ಕನಿಷ್ಟಪಕ್ಷ ಬೆಳಗಾದರೂ ಆಗಲಿ. ಆಮೇಲೆ ನಿನಗೆ ಎಲ್ಲಿಗೆ ಬೇಕೋ ಅಲ್ಲಿಗೇ ಮುಟ್ಟಿಸುತ್ತೇನೆ. ಅಷ್ಟರವರೆಗೆ ದಯವಿಟ್ಟು ತಾಳ್ಮೆಯಿಂದಿರು... ಮತ್ತೊಬ್ಬರು ಬೆರಳು ತೋರಿಸುವ ಕೆಲಸ ಮಾಡಬೇಡ. ನಮ್ಮನ್ನು ನಾಚಿಕೆಗೆಡಿಸುವ ಯಾವುದೇ ನಾಟಕವಾಡದೇ ಒಂದೆಡೆ ತೆಪ್ಪಗಿರು." ಮುನೀರ್ ಕೋಪದಿಂದಲೇ ಎಗರಾಡಿದ....
ಒಂದೂ ಮಾತಾಡದೆ ನೂರ್'ಜಹಾನ್ ಒಂದೆಡೆ ಕುಳಿತುಕೊಂಡಳು. ಇದುವರೆಗೂ ಇಂತಹ ರೌದ್ರ ರೂಪ ಕಂಡಿರದ ಮುನೀರ್'ನ ಮಾತಲ್ಲದ ಬದಲಾವಣೆಯನ್ನು ನೆನೆದು ಮತ್ತಷ್ಟು ದುಃಖಿತಳಾದ ನೂರ್'ಜಹಾನ್ "ನಾನು ನಾಚಿಕೆಗೆಡುವಂತಹ ಕೆಲಸ ಮಾಡಿದ್ದೇನಾ..? ಇದುವರೆಗೂ ನನ್ನ ಗಂಡ ತಲೆತಗ್ಗಿಸುವ ಯಾವುದೇ ಕಾರ್ಯ ಮಾಡದ ನನಗೆ ಯಾಕಾಗಿ ಈ ರೀತಿ ಎಗರಾಡಿದ್ದು..? ಅವರಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಯಿತೇ..? ಅಕಸ್ಮಾತ್ ಹಾಗೇನಿದ್ದರೆ ನನ್ನ ಗತಿಯೇನು? ಯಾ ಅಲ್ಲಾಹ್ !" ಅವಳ ಮನಸ್ಸಿನ ನೋವು ಇಮ್ಮಡಿಸಿತು. ಜೋರಾಗಿ ಅಳಬೇಕೆಂದಿಸಿದರೂ ಆಸ್ಪತ್ರೆಯೆಂಬ ಅರಿವಿದ್ದ ನೂರ್'ಜಹಾನ್ ಶಾಲಿನ ತುದಿಯನ್ನು ಬಾಯೊಳಗೆ ಹಾಕಿ ದುಃಖವನ್ನು ಅದುಮಿಕೊಂಡಳು. ಅದು ಎಷ್ಟು ಹೊತ್ತು ಹಾಗೆಯೇ ಕುಳಿತುಕೊಂಡಿದ್ದಳೆಂದು ಅವಳಿಗೇ ಅರಿವಿಲ್ಲದೇ "ನೂರ್'ಜಹಾನ್" ಎಂದು ಯಾರೋ ಪುರುಷಧ್ವನಿ ಕೇಳಿ ಎಚ್ಚೆತ್ತಳು...ತಲೆಯೆತ್ತಿ ನೋಡಿದರೆ ಮುಸ್ತಫ....!
"ಹಾಗೆ ಕುಳಿತುಕೋ ಪರವಾಗಿಲ್ಲ." (ನೂರ್'ಜಹಾನ್'ಳ ಅಳುವಿನ ಮುಖ ಕಂಡು ಮುಸ್ತಫನಿಗೂ ಪಾಪವೆನಿಸಿತು..) "ನಿನ್ನ ದುಃಖವೇನೂಂತ ನಾನು ಅರಿಯಬಲ್ಲೆ. ನಾನಿಲ್ಲಿ ಕುಳಿತುಕೊಳ್ಳಬಹುದಲ್ಲವೇ?"
"ಖಂಡಿತವಾಗಿಯೂ" ( ಬೆಂಚಿನ ಇನ್ನೊಂದು ಮೂಲೆಯಲ್ಲಿ ಮುಸ್ತಫ ಕುಳಿತ) "ಮುನೀರಾಕ ಎಲ್ಲಿದ್ದಾರೆ?" (ನೂರ್'ಜಹಾನ್ ವರಾಂಡದ ಕಡೆ ಕಣ್ಣಾಯಿಸಿದಳು..)
"ಅವನು ಒಂದು ಮೂಲೆಯಲ್ಲಿ ಬೆಂಚಿನ ಮೇಲೆ ಮಲಗಿದ್ದು, ಮಡಿಲಲ್ಲಿ ತಲೆಯಿಟ್ಟು ನಬೀಸುಮ್ಮ ಕೂಡ ಮಲಗಿದ್ದಾರೆ. ನೀನು ಹೆದರಬೇಡ" (ಭಯಪಡುತ್ತಿದ್ದ ನೂರ್'ಜಹಾನ್ ಳನ್ನ ಸಮಾಧಾನಿಸಿದ..) "ಬಹಳ ಹೊತ್ತಿನಿಂದ ಅಳುತ್ತಿರುವಂತೆ ಕಾಣುತ್ತಿದೆಯಲ್ಲ? ನಿನಗೆ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ನಿನ್ನ ಬಾಳಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದೇನೆಂದು ಭಾವಿಸಬಹುದು. ಸಾಜಿದಾಳ ಹಠಕ್ಕೆ ಇಂತಹದ್ದೊಂದು ತೀರ್ಮಾನವೇ ಹೊರತು, ಅವಳ ಈ ವರ್ತನೆ ನಂಗಂತೂ ಇಷ್ಟವಾಗಿಲ್ಲ. ಮನೆಯವರಿಗಂತೂ ಇನ್ನಷ್ಟು ತಲೆನೋವಾಗಿದೆ. ಅಮ್ಮನಂತೂ ಸಾಜಿದಾಳೊಂದಿಗೆ ಮಾತನ್ನೇ ನಿಲ್ಲಿಸಿದ್ದಾರೆ. ಅವಳ ಈ ಹಠದಿಂದ ನಾವೂ ಕೂಡ ಸಂಕಟದಲ್ಲಿದ್ದೇವೆ. ಏನು ಮಾಡೋದು ? ಒಬ್ಬಳೇ ತಂಗಿಯಂತ ಬಾಲ್ಯದಿಂದಲೂ ಅವಳು ಕೇಳಿದ್ದನ್ನೆಲ್ಲಾ ಕೊಟ್ಟು ಈಗ ಅವಳ ಈಡೇರಿಕೆ ಪೂರೈಸಬೇಕಾದ ಪರಿಸ್ಥಿತಿ. ಅವಳ ಇಚ್ಛೆಯಂತೆ ನಮ್ಮದೇ ಕುಟುಂಬದ ಹುಡುಗನೊಬ್ಬನಿಗೆ ಮದುವೆಮಾಡಿಕೊಟ್ಟು, ಅದನ್ನು ಕೂಡ ನಿಭಾಯಿಸದೆ ತವರುಮನೆಗೆ ಹಿಂತಿರುಗಿದ್ದಾಳೆ. ನಮಗಂತೂ ಎರಡು ದೋಣಿಯ ನಡುವೆ ಕಾಲಿಟ್ಟಂತಾಗಿದೆ."
ಮುಸ್ತಫಾನ ಒಂದೊಂದು ಮಾತೂ ಕಿವಿಗೊಟ್ಟು ಕೇಳುತ್ತಿದ್ದಳು ನೂರ್'ಜಹಾನ್.
"ಇನ್ನೊಂದು ವಿಷಯ ! ಕೆಲವು ಸಮಯದ ಹಿಂದೆ ಸುಮಾರು ನಾಲ್ಕು ವರ್ಷಗಳ ಕಾಲ ಅವಳು ಮೆಂಟಲ್ ಹಾಸ್ಪಿಟಲ್'ನಲ್ಲಿದ್ದಳು. ಹಗಲು ರಾತ್ರಿ ಏನೆಂಬುದೇ ಅರಿಯದೆ, ಹೆತ್ತ ತಾಯಿಯನ್ನು ಕೂಡ ಗುರುತಿಸಲಾಗದಷ್ಟಿತ್ತು ಅವಳ ಹುಚ್ಚು. ಆ ಕತ್ತಲು ಕೋಣೆಯಲ್ಲಿ ಅವಳು ನಾಲ್ಕೂವರೆ ವರ್ಷ ಕಳೆಯಬೇಕಾಯಿತು." ಮುಸ್ತಫಾಕನ ಮುಖದಲ್ಲಾದ ಆ ಸಂಕಟ ಎದ್ದು ಕಾಣುತ್ತಿತ್ತು....
ನಮ್ಮ ಜೀವನದ ಕರಾಳ ಸತ್ಯವಾಗಿತ್ತದು ನೂರ್'ಜಹಾನ್ ! ನಾವು ಏನೆಲ್ಲಾ ಹರಕೆ ಮಾಡಿ, ಐದು ವಕ್ತ್ ನಮಾಝ್'ನಲ್ಲೂ ಅವಳಿಗಾಗಿಯೇ ದುಃಅ ಮಾಡುತ್ತಾ ಹೇಗೋ ಆಸ್ಪತ್ರೆಯಿಂದ ಮನೆಗೆ ಬರುವ ಹೊತ್ತಿಗೆ ಸಮಯವೆಲ್ಲಾ ಅವಳಿಗಾಗಿ ವ್ಯರ್ಥವಾಗಿತ್ತು. ಇದೆಲ್ಲ ನಡೆದು ಎರಡು ವರ್ಷವಾಗಿದೆ. ಇನ್ನೊಮ್ಮೆ ಅವಳಿಗೆ ಯಾವುದಾದರೂ ಆಘಾತವಾದಲ್ಲಿ ಅವಳು ಮತ್ತೊಮ್ಮೆ ಹುಚ್ಚಿಯಾಗಿ ಜೀವಮಾನವಿಡೀ ಆಸ್ಪತ್ರೆಯಲ್ಲೇ ಇರಬೇಕಾದೀತೆಂದು ಡಾಕ್ಟರ್ ಕೂಡ ಎಚ್ಚರಿಸಿದ್ದಾರೆ. ಮುಸ್ತಫಾನ ಪ್ರತಿಯೊಂದು ಮಾತನ್ನೂ ಸಣ್ಣ ಮಕ್ಕಳು ಕತೆ ಕೇಳುವಂತೆ ತದೇಕಚಿತ್ತದಿಂದ ಆಲಿಸುತ್ತಿದ್ದಳು ನೂರ್'ಜಹಾನ್..!
ನಂತರ ಮದುವೆಯಾಗಿ ನಾಲ್ಕು ತಿಂಗಳಲ್ಲೇ ಗರ್ಭಿಣಿಯಾದಾಗ ನಮಗೆಲ್ಲ ಆದ ಸಂತೋಷಕ್ಕೆ ಪಾರವಿರಲಿಲ್ಲ. ಆದರೆ ಅವಳನ್ನು ಮದುವೆಯಾದ ಹುಡುಗನಿಗೆ ಮಾತ್ರ ಕಿಂಚಿತ್ತೂ ಹರ್ಷಗೊಳ್ಳಲಿಲ್ಲ. ವಿಷಯ ಏನೂಂತ ಕೇಳಿದಾಗ "ಅವನಿಗೆ ಮಕ್ಕಳು ಇಷ್ಟವಿರಲಿಲ್ಲ" ಎಂದು ಹೇಳಿ ಮಾತನ್ನು ತಿವುಚಿಬಿಟ್ಟ. ಸಾಜಿದಾ ಗರ್ಭಿಣಿಯಾಗಿದ್ದಾಗಲೇ ಮಗುವನ್ನು ನಶಿಸಲು ಹಲವು ಪ್ರಯತ್ನಗಳನ್ನೂ ಮಾಡಿ ಕ್ರೂರ ಹಿಂಸೆ ಕೊಡುತ್ತಿದ್ದ. ಎಲ್ಲವನ್ನೂ ಸಹಿಸಿಕೊಂಡಿದ್ದ ನಮ್ಮ ಪ್ರೀತಿಯ ತಂಗಿ ಸಾಜಿದಳನ್ನು ಗರ್ಭಿಣಿಯಾಗು ಏಳು ತಿಂಗಳಲ್ಲೇ ತವರುಮನೆಗೆ ಬಂದಿದ್ದಳು.
ಮನೆಗೆ ಬಂದಿದ್ದರೂ ಅವಳ ಮನಸ್ಸು ಮಾತ್ರ ಸರಿಯಿರಲಿಲ್ಲ. ಸರಿಯಾದ ಸಮಯಕ್ಕೆ ಊಟವನ್ನು ಮಾಡದೆ, ಹೊಟ್ಟೆಗೆ ಏನೂ ತಿನ್ನದೇ, ನಿದ್ದೆಯೂ ಮಾಡದೆ ಅರೆಹುಚ್ಚಿಯಂತಿದ್ದಳು. ಮನೆಗೆ ನೋಡಲು ಬರುತ್ತಿದ್ದ ಅವಳ ಗಂಡನ ಜೊತೆಯಲ್ಲೂ ಸರಿಯಾಗಿ ಮಾತಾಡುತ್ತಿರಲಿಲ್ಲ.
ಒಂದು ದಿವಸ ನಮ್ಮ ಹತ್ತಿರದ ಸಂಬಂಧಿಕರೊಬ್ಬರ ಮದುವೆಕಾರ್ಯಕ್ಕೆ ನಾವೆಲ್ಲರೂ ಹೋಗಬೇಕಿತ್ತು. ಮನೆಯಲ್ಲಿ ಸಾಜಿದಾಳನ್ನು ಒಬ್ಬಂಟಿಗಳಾಗಬಾರದೆಂದು ಅಮ್ಮನನ್ನು ಅವಳ ಆರೈಕೆಗಾಗಿ ಬಿಟ್ಟು ನಾವೆಲ್ಲ ಮದುವೆಗೆ ಹೋಗಿದ್ದೆವು. ಆ ದಿವಸ ಅವಳ ಗಂಡ ಅವಳನ್ನು ನೋಡಲೆಂದು ಬಂದ. ಅಮ್ಮ ಅವನನ್ನು ಸಂತೋಷದಿಂದಲೇ ಸ್ವಾಗತಿಸಿದರು. ತನ್ನ ಹೆಂಡತಿಯನ್ನು ಹೊರಗೆ ಎಲ್ಲಿಯಾದರೂ ಸುತ್ತಾಡಿಸಿ ಬರಬೇಕೆಂಬ ಬಯಕೆಯನ್ನು ಮುಂದಿಟ್ಟಾಗ, ಅಮ್ಮ ಅದಕ್ಕೊಪ್ಪಲಿಲ್ಲ. ಏಕೆಂದರೆ, ಆಗ ಸಾಜಿದ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು ಯಾವುದೇ ಸಮಯದಲ್ಲೂ ಹೆರಿಗೆ ನೋವು ಬರಬಹುದೆಂದು ಅಮ್ಮನಿಗೂ ಗೊತ್ತಿತ್ತು. ನೀನು ಹೇಳು ಅದರಲ್ಲಿ ತಪ್ಪೇನಿದೆ ? ಸಾಜಿದ ಮತ್ತು ಅವಳ ಮಗುವಿನ ಒಳಿತಿಗಾಗಿಯೇ ತಾನೇ ಅಮ್ಮ ನಿರಾಕರಿಸಲು ಕಾರಣ !
ಕೋಪದಲ್ಲಿ ಅವಳ ಗಂಡ ಅವಳನ್ನ ಹೆತ್ತ ತಾಯಿಯ ಮುಂದೆಯೇ ಹೊಡೆದು ಬಡಿದು ತಳ್ಳಿಬಿಟ್ಟ. ಅವಳ ಹೊಟ್ಟೆಯಲ್ಲಿರುವುದು ತನ್ನ ಮಗುವೆಂಬ ಪರಿಭ್ರಮೆಯೇ ಅವನಿಗಿರಲಿಲ್ಲ. ತನ್ನ ಮಗಳನ್ನು ಉಳಿಸಲು ಪ್ರಯತ್ನಿಸಿದ ಅಮ್ಮನನ್ನೂ ಕೂಡ ತಳ್ಳಿದಾಗ ಅವರ ತಲೆಗೆ ಏಟಾಗಿ ಅವರೂ ಕೂಡ ಪ್ರಜ್ಞೆ ತಪ್ಪಿ ಬಿದ್ದರು. ನಾವು ಮದುವೆಗೆ ಹೋಗಿ ಬರುವಷ್ಟರಲ್ಲಿ ಇಂತಹದೊಂದು ಅನಾಹುತವಾಗಬಹುದೆಂದು ಒಮ್ಮೆಯೂ ಯೋಚಿಸಿರಲಿಲ್ಲ.
ನಾವು ತಡರಾತ್ರಿ ಹಿಂತಿರುಗುದಾಗ ಒಂದೆಡೆ ಸಾಜಿದ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದರೆ, ಇನ್ನೊಂಡೆದೆ ತಲೆಗೆ ಏಟಾಗಿದ್ದ ಅಮ್ಮ ಕೂಡ ಪ್ರಜ್ಞೆ ತಪ್ಪಿ ಬಿದ್ದಿದ್ದರು....
ಮೊದಲಿಗೆ ಅವರನ್ನು ಕಂಡಾಗ ಯಾವುದೋ ಕಳ್ಳರು ಬಂದು ಮನೆಯನ್ನೆಲ್ಲಾ ದೋಚಿ, ತಡೆಯಲು ಬಂದಿದ್ದ ಸಾಜಿದ ಮತ್ತು ಅಮ್ಮನನ್ನು ಈ ರೀತಿ ನೀಚ ಕೃತ್ಯಕ್ಕೆ ಗುರಿಯಾಗಿಸಿದ್ದರೇನೋ ಎಂಬ ನಮ್ಮ ಅನಿಸಿಕೆ ಹುಸಿಯಾಗಿತ್ತು. ಏಕೆಂದರೆ ಅಮ್ಮನಿಗೆ ಪ್ರಜ್ಞೆ ಬಂದಾಗಲೇ ತಿಳಿದದ್ದು ಮನೆಯ ಅಳಿಯನೇ ಇಷ್ಟೆಲ್ಲಾ ಅವಾಂತರವಾಗಲು ಕಾರಣಕರ್ತ ಎಂದು..
ಸಾಜಿದಾಳನ್ನು ಶೀಘ್ರವೇ ಹತ್ತಿರದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಡಾಕ್ಟರ್ ಕಷ್ಟಪಟ್ಟು ಹೆರಿಗೆ ಮಾಡಿಸಿದ್ದರೂ ಅವಳ ಹೊಟ್ಟೆಯಲ್ಲಿದ್ದ ಅವಳಿ ಮಕ್ಕಳ ಜೀವಪಕ್ಷಿ ಆಗಲೆ ಹಾರಿಹೋಗಿತ್ತು. ಡಾಕ್ಟರ್ ಹೇಳಿದ ಪ್ರಕಾರ ಒಂದಲ್ಲ ಎರಡಲ್ಲ ಲೆಕ್ಕವಿಲ್ಲದಷ್ಟು ಹೊಟ್ಟೆಯ ಮೇಲಿನ ಹೊಡೆತಕ್ಕೆ ಮಕ್ಕಳಿಬ್ಬರು ಬಲಿಯಾಗಿದ್ದರು. ಆ ಸುಂದರ ಮಕ್ಕಳಿಬ್ಬರನ್ನು ಕಬರ್ ಸ್ಥಾನಕ್ಕೆ ಕರಕೊಂಡು ಹೋಗಿ ನಾನೂ ಮತ್ತು ಶಾಜು ದಫನ್ ಮಾಡಿದ್ದು ನೆನೆಯುವಾಗ ಈಗಲೂ ಕರುಳು ಕಿತ್ತಂತೆ ಭಾಸವಾಗುತ್ತದೆ. ಅಷ್ಟು ಹೇಳುವಷ್ಟರಲ್ಲಿ ಮುಸ್ತಫನ ಕಣ್ಣೀರ ಹನಿಗಳು ಉದುರತೊಡಗಿತು.
ನೂರ್'ಜಹಾನ್ ! ಈ ಘಟನೆ ನಡೆದು ಸಾಜಿದ ಪ್ರಜ್ಞೆ ಬರುವಷ್ಟರಲ್ಲಿ ಅವಳು ಅರೆ ಹುಚ್ಚಿಯಾಗಿದ್ದಳು. ಮಕ್ಕಳೆಂದರೆ ಪಂಚಪ್ರಾಣ ಅವಳಿಗೆ... ತನ್ನ ಹೊಟ್ಟೆಯಲ್ಲಿರುವುದು ಅವಳಿ ಮಕ್ಕಳೆಂದು ತಿಳಿದಾಗಲಂತೂ ತನ್ನ ಹೆರಿಗೆ ದಿನಗಾಗಿಯೇ ಹಗಲೂ ರಾತ್ರಿಯೆನ್ನದೆ ಕಾಯುತ್ತಿದ್ದ ಸಾಜಿದಾಳಿಗೆ ಮಕ್ಕಳ ಅಗಲುವಿಕೆಯು ಪ್ರಾಣವನ್ನೇ ಹಿಂಡುತ್ತಿತ್ತು. ಮುಸ್ತಫನ ಕಣ್ಣಲ್ಲಿದ್ದ ಆ ನೋವನ್ನರಿತ ನೂರ್'ಜಹಾನ್ ಅವನ ಮೇಲೆ ಅನುಕಂಪ ಮೂಡಿತು.
ಸಾಜಿದಾಳ ಮೇಲೆ ಇನ್ನಿಲ್ಲದಷ್ಟು ದ್ವೇಷ ಕಾರುತ್ತಿದ್ದ ನೂರ್'ಜಹಾನ್'ಳಿಗೆ ಸಾಜಿದಾಳ ಜೀವನದಲ್ಲಾದ ಘಟನೆಯನ್ನರಿತು "ಯಾ ಅಲ್ಲಾಹ್, ಕ್ಷಮಿಸು ! ಪಾಪ ಸಾಜಿದ ! ಎಷ್ಟೊಂದು ದುಃಖಕರ ಜೀವನ.. ! ಗಂಡನ ಮನೆಯ ಆ ನೋವು, ಹುಟ್ಟಿದ ಮಕ್ಕಳ ಮುಖವನ್ನೂ ಕೂಡ ನೋಡಲಾಗದ ಪರಿಸ್ಥಿತಿ."
ಇಷ್ಟೆಲ್ಲಾ ನೋವು ಅನುಭವಿಸಿದ್ದ ಸಾಜಿದಾ ಮೊದಲ ಬಾರಿ ಮನೆಗೆ ಬಂದಾಗ ಅವಳ ವೇಷಭೂಷಣ ಕಂಡು ಅವಳೊಬ್ಬಳು ದುರಂಹಕಾರಿ ಹುಡುಗಿಯೆಂದು ಭಾವಿಸಿದ್ದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಮಾತು ಸರೀನೆ. ಬೆಟ್ಟದಷ್ಟು ದುಃಖವನ್ನೇ ತನ್ನ ಜೀವನದಲ್ಲಿ ಕಂಡ ಸಾಜಿದಾಳನ್ನು ನೆನೆಯುವಾಗ ಅವಳ ಮೇಲಿದ್ದ ದ್ವೇಷವೆಲ್ಲ ನೀರಾಗಿ ಹೋಯಿತು ನೂರ್'ಜಹಾನ್'ಳಿಗೆ.
"ಸಾಜಿದಾಳನ್ನು ನೆನೆಯುವಾಗ ಅವಳ ಮನಸ್ಸಿನಾಳದಲ್ಲಿ ಅಯ್ಯೊ ಅನಿಸುತ್ತಿದೆ. ಆದರೆ, ಅವಳು ಕೇಳುತ್ತಿರುವುದಾದರೂ ಏನು ? ನನ್ನ ಸರ್ವಸ್ವವೂ ಆದ ನನ್ನ ಗಂಡ ಮುನೀರ್ ! ಅವರನ್ನು ಬಿಟ್ಟು ಕೊಡುವುದಾದರೂ ಹೇಗೆ ? ನನ್ನ ಬಿಡಿ, ಈ ಪ್ರಪಂಚದಲ್ಲೇ ತನ್ನ ಗಂಡನನ್ನು ಮತ್ತೊಬ್ಬರಿಗೆ ಬಿಟ್ಟು ಕೊಡುವ ಹೆಣ್ಣು ಯಾರಾದರೂ ಇದ್ದಾರೆಯೇ? ಅದೂ ಬಿಡಿ, ಯಾವುದಾದರೂ ಗಂಡು ತನ್ನ ಹೆಂಡತಿಯನ್ನು ಬೇರೊಬ್ಬ ವಕ್ರದೃಷ್ಟಿಯಿಂದ ನೋಡುತ್ತಿರುವುದನ್ನು ಸಹಿಸಿಯಾನೇ..? ಸ್ನೇಹ ಮತ್ತು ಸಂಬಂಧದ ಲೆಕ್ಕ ನೋಡಿದರೆ, ಈ ವಿಷಯದಲ್ಲಿ ಗಂಡು ಮತ್ತು ಹೆಣ್ಣಿನಷ್ಟು ಸ್ವಾರ್ಥ ಮನೋಭಾವನೆಯಿರುವ ಮತ್ತೊಂದು ಜೀವಿ ಈ ಭೂಮಿಯಲ್ಲಿಲ್ಲ. ಗಂಡ ಎಷ್ಟೇ ಕ್ರೂರಿಯಾದರೂ ಇನ್ನೊಬ್ಬನಿಗೆ ಬಿಟ್ಟುಕೊಡುವುದು ಯಾವ ಹೆಣ್ಣು ಕೂಡ ಸಹಿಸಲಾರಳು." ಹೀಗೆ ನೂರ್'ಜಹಾನ್ ಒಂದೊಂದಾಗಿ ಯೋಚಿಸುತ್ತಿರುವಾಗಲೇ, ಮುಸ್ತಫ ತನ್ನ ಮಾತನ್ನು ಮುಂದುವರಿಸಿದ.....
ನೂರ್'ಜಹಾನ್ ! ನನಗೆ ಚೆನ್ನಾಗಿ ಗೊತ್ತು... ಯಾವ ಹೆಣ್ಣು ಕೂಡ ತನ್ನ ಗಂಡನನ್ನು ಇನ್ನೊಂದು ಹೆಣ್ಣಿಗೆ ಬಿಟ್ಟುಕೊಡುವುದನ್ನು ಸಹಿಸಲಾರಳು. ಅದು ಯಾರಾದರೂ ಸರಿಯೇ.. ತಂದೆ ತಾಯಿಯ ಬಂಧವನ್ನು ಬಿಟ್ಟರೆ ನಂತರ ಗಂಡ ಹೆಂಡಿರ ಅನುಬಂಧ ಹೇಳತೀರದಷ್ಟು ಹಿರಿದು. ಆದರೆ, ಪರಿಸ್ಥಿತಿಯು ನಮ್ಮನ್ನು ಕಟ್ಟಿಹಾಕಿದೆ. ಬದುಕೆಂಬ ಜಟಕಾಬಂಡಿಯಲ್ಲಿ ನಾವೆಲ್ಲರೂ ಸವಾರರೇ.... ದ್ವಂದ್ವಸ್ಥಿತಿಯಲ್ಲಿರುವ ನಮ್ಮ ಸಾಜಿದಾಳ ಮದುವೆ ಮುನೀರೊಂದಿಗೆ...... ತನ್ನ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿ ಅವಳ ಮುಖವನ್ನೊಮ್ಮೆ ನೋಡಿದ ಮುಸ್ತಫ.
"ಯಾ ಅಲ್ಲಾಹ್ ! ನಾನು ಏನೂಂತ ಉತ್ತರಿಸೋದು..? ಒಂದು ಕಡೆ ಹಫ್ಸಿ, ಇನ್ನೊಂಡೆದೆ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ನನ್ನ ಗಂಡ, ತನ್ನ ತಂಗಿ ಸಾಜಿದಾ ಇನ್ನೊಮ್ಮೆ ಹುಚ್ಚಿಯಾಗಬಾರದೆಂಬ ಬಯಕೆಯಿಂದ ಪರಿತಪಿಸುತ್ತಿರುವ ಅವಳ ಅಣ್ಣ ಮುಸ್ತಫ....!" ನೂರ್'ಜಹಾನ್ ಚಿಂತಿಸುವಸ್ಟರಲ್ಲೇ..... ನಾನು ಕೂಡ ಸಂಕಷ್ಟದಲ್ಲಿದ್ದೇನೆ.. ಅವಳು ತನಗೆ ಬಂದ ಸಂಬಂಧಗಳನ್ನೆಲ್ಲಾ ನಿರ್ಲಕ್ಷಿಸಿ ಮುನೀರನ್ನು ನೋಡಿದ ತಕ್ಷಣ ತನ್ನ ಜೀವನಕ್ಕೆ ಮತ್ತೊಂದು ಅವಕಾಶ ಕೊಡಬೇಕೆಂಬ ಸಾಜಿದಾಳ ಆಸೆ ಮತ್ತೊಮ್ಮೆ ಚಿಗುರಿತು. ಹಫ್ಸಳನ್ನು ನೋಡಲು ಬಂದಾಗ ಅವಳ ಮನದಲ್ಲಾದ ಪರಿವರ್ತನೆಯನ್ನು ಕಂಡು ನಾವೇ ಸಂಕಷ್ಟಕ್ಕೆ ಸಿಲುಕಿದ್ದೆವು.
ಆ ದಿನ ನಿಶ್ಚಯ ಮುಗಿದು ಮನೆಗೆ ಹಿಂತಿರುಗಿದ ಕೂಡಲೇ "ಅಣ್ಣ, ನಿಮ್ಮೆಲ್ಲರ ಒತ್ತಾಯಕ್ಕೆ ನಾನು ಮಣಿದು ಮದುವೆಯಾಗೋ ಆಲೋಚನೆ ಮಾಡಿದ್ದೇನೆ. ಆದರೆ ನನ್ನದೊಂದು ಶರತ್ತಿದೆ..."
"ಏನಮ್ಮ, ಅದು ಹೇಳು. ನಿನ್ನೆ ಈಡೇರಿಕೆಯನ್ನೆಲ್ಲ ಪೂರೈಸುತ್ತೇವೆ."
"ಬಾಯಿಂದ ಮಾತ್ರ ಹೇಳಿದರೆ ಸಾಲದು. ನನಗೆ ನೀವು ಬಾಷೆ ಕೊಡಬೇಕು."
"ಆಗಲಿ"
"ನಾನು ನನ್ನ ಜೀವನದಲ್ಲಿ ಇನ್ನೊಂದು ಮದುವೆಯಾಗೋದು ಅಂತ ಬಯಸಿದರೆ ಅದು ಹಫ್ಸಳ ಅಣ್ಣ ಮುನೀರ್ ಮಾತ್ರ"
"ಸಾಜಿದ, ನೀನು ಹೇಳುತ್ತಿರೋದೆನು.. ? ಮುನೀರ್ ಮದುವೆಯಾಗಿ ಅವಳಿಗೊಬ್ಬಳು ಹೆಂಡತಿಯಿದ್ದಾಳೆ. ಅವನಿಗಿಂತ ಸುಂದರವಾದ ಹುಡುಗನನ್ನು ನಿನಗೆ ತೋರಿಸುತ್ತೇವೆ."
"ಅಣ್ಣ, ನಿಮಗೆ ನನ್ನ ಮೇಲೆ ಕಿಂಚಿತ್ತೂ ಪ್ರೀತಿಯಿದ್ದರೆ ಮುನೀರ್ ಜೊತೆ ಮದುವೆ ಮಾಡಿಕೊಡಿ. ಇಲ್ಲವಾದಲ್ಲಿ ನಾನು ಸಾಯುವವರೆಗೆ ಇನ್ನೊಂದು ಮದುವೆಯಾಗಲಾರೆ."
ಅವಳ ಮಾತಿನಲ್ಲಿದ್ದ ಗಂಭೀರತೆಯನ್ನು ಕಂಡು ನಾವೆಲ್ಲಾ ಹೆದರಿಬಿಟ್ಟೆವು. ಆಗಲ್ಲ, ಎಂದು ಹಠ ಹಿಡಿದರೆ ಇನ್ನವಳು ಅತ್ಮಹತ್ಯೆ ಮಾಡಬಹುದೇ ಎಂಬ ಆತಂಕ ನಮ್ಮಲ್ಲಿ ಆವರಿಸಿತ್ತು. ಅದಲ್ಲದೆ ಅವಳಿಗೆ ಶಾಜುವಿನ ಮೇಲೂ ಅಪಾರ ನಂಬಿಕೆ. ಅವಳ ಯಾವುದೇ ಬಯಕೆಯನ್ನು ಈಡೇರಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದ ಶಾಜಹಾನ್'ನ್ನು ನೋಡಿ "ಶಾಜು, ನನಗೆ ಮುನೀರ್ ಜೊತೆ ಮದುವೆ ಮಾಡಿಕೊಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆನೆಂದು" ಶಪಥ ಮಾಡಿದಳು.
ಮತ್ತೇನು ಮಾಡೋದು ? ಅದಕ್ಕೋಸ್ಕರ ಬೆಳಗ್ಗೆನೇ ನಾನು ಮತ್ತು ಬ್ರೋಕರ್ ಮುನೀರ್ ನ ಅಂಗಡಿಯ ಕಡೆಗೆ ಹೋದೆವು.
"ಸಾಜಿದಾಳು ಏನು ಮಾಡುತ್ತಾಳೆಂದು ಹೆದರಿ ಬೇರೆ ವಿಧಿಯಿಲ್ಲದೆ ಬೆಳಗ್ಗೆನೇ ನಾನು ಮತ್ತು ಬ್ರೋಕರ್ ಸಾಜಿದಾಳಿಗೋಸ್ಕರ ಮುನೀರ್'ನ ಅಂಗಡಿಯ ಕಡೆಗೆ ಹೋದೆವು..."
ಮನೆಯಲ್ಲಾದ ಘಟನೆಯನ್ನು ಚಾಚುತಪ್ಪದೆ ಮುನೀರ್'ಗೂ ಅರ್ಥವಾಗುವಂತೆ ತಿಳಿಸಿದೆವು. "ಮುನೀರ್ ಒಳ್ಳೆಯ ಮನುಷ್ಯ. ಅವನೊಡನೆ ಮಾತಾನಾಡುವಾಗಲೇ ನಿನ್ನ ಮತ್ತು ಮುನೀರ್'ನ ಗಾಢವಾದ ಪ್ರೀತಿಯ ಬಗ್ಗೆ ಚೆನ್ನಾಗಿ ಅರಿತುಕೊಂಡೆವು. ಸಾಜಿದಾಳ ಪ್ರಸ್ತಾಪ ಕೂಡಲೇ ನಿರಾಕರಿಸಿದ ಮುನೀರ್ ಇದುವರೆಗೂ ಸಮ್ಮತ ನೀಡಲಿಲ್ಲ. ಇದರಲ್ಲೇ ನಿಮ್ಮಿಬ್ಬರ ಪ್ರೀತಿ ಎಂದಿಗೂ ಮುರಿಯದ ಪ್ರೀತಿಯೆಂದು ನಮ್ಮ ಗಮನಕ್ಕೆ ಬಂದಿದೆ. ಈ ಅಸಹಾಯಕ ಅಣ್ಣನ ಪ್ರೀತಿಯ ತಂಗಿಯ ಬಾಳು ಹಸನಾಗಿಸುವುದು, ಕರಾಳವಾಗಿಸುವುದೂ ನೂರ್'ಜಹಾನ್'ಳ ಕೈಯಲ್ಲಿದೆ. ದೊಡ್ಡ ಮನಸ್ಸು ಮಾಡಿ ದಯವಿಟ್ಟು ಮುನೀರನ್ನು ಈ ಮದುವೆಗೆ ಒಪ್ಪಿಸಬೇಕು. ನಿನ್ನ ಕಾಲು ಬೇಕಾದರೆ ಹಿಡಿಯುತ್ತೇನೆ. ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ತಂಗಿಯ ಸ್ವಾರ್ಥಿಯಾದ ಅಣ್ಣ ನಾನು. ನೀನಲ್ಲದೆ ಬೇರೆ ಯಾರಿಂದಲೂ ಈ ಸಮಸ್ಯೆಗೆ ಪರಿಹಾರ ಬಗೆಹರಿಸಲು ಸಾಧ್ಯವಿಲ್ಲ."
ಮುಸ್ತಫಾ ಆಡಿದ ಮಾತುಕೇಳಿ ಅಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು ನೂರ್'ಜಹಾನ್'ಳಿಗೆ...! ಅವಳ ಗಂಟಲು ಆರತೊಡಗಿತು. ಅವಳಿಗೆ ಕುಡಿಯಲು ನೀರು ಕೊಟ್ಟ ಮುಸ್ತಫಾ "ನೀನು ಗಾಬರಿಯಾಗಬೇಡ. ನಿನ್ನನ್ನು ಬಿಟ್ಟು ಸಾಜಿದಾಳನ್ನು ಮದುವೆಯಾಗಬೇಕೆಂಬ ಅಪೇಕ್ಷೆ ನಮಗಿಲ್ಲ. ಮೊದಲ ಹೆಂಡತಿ ಮನೆಯಲ್ಲಿರುವಾಗಲೇ, ಅವಳ ಒಪ್ಪಿಗೆಯ ಮೇರೆಗೆ ಎರಡನೆಯ ಮದುವೆಯಾಗಬಹುದೆಂಬ ನಿಯಮ ಇಸ್ಲಾಮಿನಲ್ಲಿದೆ ತಾನೇ ? ಸಾಜಿದ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾಳೆ. ಮದುವೆಯಾದ ಮೇಲೂ ನಿನಗಿರುವ ಸ್ಥಾನಮಾನ ಹಾಗೆಯೇ ಇರಲೆಂಬ ಅಭಿಪ್ರಾಯ ಸಾಜಿದಾಳಿಗೂ ಇದೆ. ಮುನೀರ್'ನ್ನು ಅಷ್ಟು ಇಷ್ಟಪಟ್ಟಿರುವ ಸಾಜಿದ ನಿಮ್ಮಿಬ್ಬರ ಪ್ರೀತಿಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳುತ್ತೇನೆಂಬ ಭರವಸೆ ಕೂಡ ನೀಡಿದ್ದಾಳೆ. ಸ್ವಲ್ಪ ಹೊತ್ತಿನ ಮುಂಚೆ ಸಾಜಿದ ಕರೆ ಮಾಡಿದ್ದಳು. ಅವಳಿಗೆ ನಿನ್ನೊಡನೆ ಮಾತನಾಡಬೇಕೆಂಬ ಹಂಬಲ ವ್ಯಕ್ತಪಡಿಸಿದಾಗ ನಾನೇ ಅದಕ್ಕೆ ಸಮ್ಮತಿಸಲಿಲ್ಲ. ಈ ಸಂದರ್ಭದಲ್ಲಿ ಅದು ಸರಿಯಲ್ಲವೆಂದೆನಿಸಿತು.
"ಅದಕ್ಕೋಸ್ಕರ ನಾನೇ ನೇರವಾಗಿ ಈ ನಡುರಾತ್ರಿ ಮುಖಾಮುಖಿಯಾಗಿ ಇಷ್ಟೊಂದು ವಿನಂತಿಸಿಕೊಳ್ಳುತ್ತಿರೋದು. ಇದೋ ಸಮಯ 2 ಆಗುತ್ತಲಿದೆ. ಮನೆಗೂ ಹೋಗಬೇಕು. ಹೋಗುವ ಮೊದಲು ನಿನ್ನ ತೀರ್ಮಾನ ಸಿಕ್ಕಿದರೆ ಒಳ್ಳೆಯದಿತ್ತು. ನಿನ್ನ ಮೌನತೆಯನ್ನು ಮುರಿಯಬೇಕು. ಮದುವೆಗೆ ನಿನ್ನ ಪೂರ್ಣ ಸಹಕಾರವಿದೆಯೆಂದು ವಿಶ್ವಾಸವಿಟ್ಟಿದ್ದೇನೆ" ಎಂದು ಹೇಳುತ್ತಾ ಕಣ್ಣಲ್ಲಿ ಬರುತ್ತಿದ್ದ ಕಣ್ಣೀರನ್ನು ಒರೆಸುತ್ತಾ ಮುಸ್ತಫ ಅಲ್ಲಿಂದ ವಿರಮಿಸಿದನು. ದೂರದಲ್ಲಿ ನಿಂತಿದ್ದ ಶಾಜಹಾನ್'ನನ್ನ ಕರಕೊಂಡು ಆಸ್ಪತ್ರೆಯ ಮೆಟ್ಟಿಗಳನ್ನಿಳಿದು ಮುಸ್ತಫ ಹೊರಟುಹೋದನು.
ಇಲ್ಲಿ ನಡೆಯುತ್ತಿರುವುದು, ಕನಸೋ ನನಸೋ ಎಂದರಿಯದಂತೆ ನೂರ್'ಜಹಾನ್ ಗರಬಡಿದವಳಂತೆ ಕುಸಿದು ಬಿದ್ದಳು.
"ಇಲ್ಲಿ ನಡೆಯುತ್ತಿರುವುದು ಕನಸೋ ನನಸೋ ಎಂದರಿಯದಂತೆ ನೂರ್'ಜಹಾನ್ ಗರಬಡಿದವರಂತೆ ಅಲ್ಲೆ ಕುಸಿದುಬಿದ್ದಳು.."
ನನ್ನ ಜೀವನದ ಅರ್ಧಭಾಗವಾದ ಮುನೀರನ್ನು ಸಾಜಿದಾಳಿಗೆ ಬಿಟ್ಟುಕೊಡೊವುದರ ಬಗ್ಗೆ ಯೋಚಿಸುವಾಗಲೇ ಮೈ ಜುಮ್ಮೆನಿಸುತ್ತಿತ್ತು....
"ನೂರೂ, ಬಾ ! ಮನೆಗೆ ಹೋಗಿ ಹಫ್ಸಾಳಿಗೆ ಸ್ವಲ್ಪ ಅಡುಗೆ ತಯಾರಿಸಿಕೊಂಡು ಬರೋಣ.." ಮುನೀರ್ ಹೇಳುವಾಗಲೇ ನೂರ್ ಜಹಾನ್ ಆಘಾತದಿಂದ ಎಚ್ಚರಗೊಂಡದ್ದು..... ಅತ್ತೂ ಅತ್ತೂ ಅವಳ ಸ್ಥಿತಿ ಶೋಚನೀಯವಾಗಿತ್ತು.
ಇಬ್ಬರೂ ಆಸ್ಪತ್ರೆಯ ಗೇಟಿನಲ್ಲಿದ್ದ ರಿಕ್ಷಾವನ್ನೇರಿ ಮನೆಯ ಕಡೆ ಹೊರಟರು. ರಸ್ತೆಯ ಇಕ್ಕೆಲಗಳಲ್ಲಿದ್ದ ಮರದ ಮೇಲಿನ ಪಕ್ಷಿಗಳ ನಿನಾದವು ಬೆಳಗಿನ ಜಾವ ಆಗುತ್ತಿದ್ದ ಲಕ್ಷಣಗಳನ್ನು ಹೇಳುತ್ತಿದ್ದವು... ತಂಪಾದ ಗಾಳಿ ಮುಖಕ್ಕೆ ಬಡಿದಾಗ ಆಯಾಸವೆಲ್ಲವೂ ಒಂದಷ್ಟರ ಮಟ್ಟಿಗೆ ಕಡಿಮೆಯಾಯಿತೋ ಎಂದೆನಿಸಿದರೂ ಬಾಳಲ್ಲಿ ಮುಂಬರಲಿರುವ ಬಿರುಗಾಳಿಯ ಬಗ್ಗೆ ಯೋಚಿಸುವಷ್ಟರಲ್ಲೇ ರಿಕ್ಷಾ ಮನೆಯ ಗೇಟಿನ ಮುಂಭಾಗಕ್ಕೆ ಬಂದು ನಿಂತಿತ್ತು....
ಭಾರವಾದ ಹೆಜ್ಜೆಗಳನ್ನಿಡುತ್ತಾ ಮನೆಗೆ ಪ್ರವೇಶಿಸಿದ ನೂರ್'ಜಹಾನ್ ಹಾಲ್'ನಲ್ಲಿದ್ದ ಸೋಫಾದ ಮೇಲೆ ಆಸೀನಳಾದಳು....
"ನೂರೂ, ಸಮಯವಿಲ್ಲ. ಬೇಗ ಗಂಜಿ ತಯಾರಿಸು. ನಾನು ಸ್ನಾನ ಮಾಡಿ ಬರುವೆ.." ಎನ್ನುತ್ತಾ ಮುನೀರ್ ಬಚ್ಚಲುಮನೆಗೆ ಹೋದ..
ಸ್ವಲ್ಪ ಹೊತ್ತು ಕಳೆಯಿತು. "ಗಂಜಿ ತಯಾರಾಯಿತ ನೂರೂ?" ಮುನೀರ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆಯಿಲ್ಲ. "ನೂರೂ, ನೂರೂ" ಎಷ್ಟೇ ಕರೆದರೂ ಮರುತ್ತರವಿಲ್ಲ. ಛೆ ! ಎಲ್ಲಿ ಹೋದಳಿವಳು..? ಕೋಪದಿಂದ ಅಡುಗೆಮನೆ ಪ್ರವೇಶಿಸಿ ನೋಡಿದರೆ ನೂರ್'ಜಹಾನ್ ಒಲೆ ಮೇಲೆ ಪಾತ್ರೆಯೊಂದನಿಟ್ಟು ಚಮಚದಿಂದ ಕೈಯಾಡಿಸುತ್ತಿದ್ದಳು. ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಿದರೆ ಒಲೆ ಹಚ್ಚದೆ ಪಾತ್ರೆಯಲ್ಲಿ ನೀರೂ ಹಾಕದೆ ಖಾಲಿ ಸೌಟು ಮಾತ್ರ ಪಾತ್ರೆಯೊಳಗಿತ್ತು. ಮುನೀರ್'ನ ಕೋಪ ನೆತ್ತಿಗೇರಿತು. "ನಿನಗೆ ತಲೆ ಕೆಟ್ಟಿದೆಯೇ..? ಇದೊಳ್ಳೆ ಅವಸ್ಥೆಯಾಯಿತಲ್ಲ. ನಾಟಕ ಮಾಡುತ್ತಿದ್ದೀಯ? ನಾನು ಹೇಳಿದ್ದೇನು..? ನೀನು ಮಾಡುತ್ತಿರೋದೇನು?" ಹೂಂ ! ನೂರ್'ಜಹಾನ್ ಏನೂ ಮಾತಾಡಲಿಲ್ಲ.
"ನೂರೂ, ನೂರೂ" ಅವಳನ್ನಿಡಿದು ಜೋರಾಗಿ ಕುಲುಕಿದನು.
"ಹಾ ! ಹಾ ! ಏನಾಯ್ತು ?"
"ನಿನಗೆ ಹುಚ್ಚು ಹಿಡಿದಿದೆಯಾ..? ತುಂಬಾ ಹೊತ್ತಿನಿಂದ ನಿನ್ನ ಈ ನಾಟಕ ನೋಡುತ್ತಿದ್ದೇನೆ... ಗಂಜಿ ಮಾಡಲು ಮನಸಿಲ್ಲದಿದ್ದರೆ ಹೊರಗಡೆ ಹೋಗು. ನಾನೇ ಮಾಡುತ್ತೇನೆ. ನೀನು ಬಚ್ಚಲುಮನೆಗೆ ಹೋಗಿ ಸ್ನಾನ ಮಾಡಿ ಬಾ. ಯಾರಿಗೊತ್ತು, ಸ್ವಲ್ಪ ನೀರು ತಲೆಗೆ ಬಿದ್ದರೆ ನಿನ್ನ ತಲೆ ಸರಿಯಾಗಬಹುದು...."
"ಏನ್ರೀ ಹೇಳ್ತಿರೋದು ? ನನಗೆ ತಲೆ ಸರಿಯಿಲ್ಲವೇ?" ಅವಳ ಧ್ವನಿ ಕೇಳಿ ಮುನೀರ್ ಬಿಚ್ಚಿಬಿದ್ದ.
"ಮತ್ತಿನ್ನೇನು? ಆಸ್ಪತ್ರೆಯಿಂದಲೂ ನಿನ್ನ ನಾಟಕ ಮುಗಿದಿಲ್ಲ. ಪ್ರೀತಿಯ ಒಂದು ಮಾತೂ ನಿನ್ನ ಬಾಯಿಂದ ಹೊರಡಿಲ್ಲ"
"ರೀ, ಒಂದು ಮಾತು ಹೇಳುತ್ತೇನೆ. ನನ್ನ ಮೇಲೆ ಪ್ರೀತಿಯಿದ್ದರೆ ನಡೆಸಿಕೊಡುತ್ತೀರಾ?" ಅವನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದಳು...
"ಏನಾಯಿತು? ಮದುವೆಯಾದ ಇಷ್ಟು ವರ್ಷಗಳಲ್ಲಿ ನಿನ್ನ ಯಾವುದಾದರೂ ಬಯಕೆಯನ್ನು ಬಾಕಿ ಮಾಡಿದ್ದೇನೆಯೇ..? ಯಾಕೆ ಹೀಗೆಲ್ಲ ಕೇಳುತ್ತಿದ್ದೀಯ ನಂಗಂತ್ತೂ ಅರ್ಥವಾಗ್ತಿಲ್ಲ. ನಾನು ಮಾಡಿಕೊಡಲು ಸಾಧ್ಯವಾಗದ ಒಂದೂ ಆಗ್ರಹಗಳನ್ನೂ ನೀನು ಕೇಳಿದ್ದಿಲ್ಲ. ಅಲ್ಲ, ನೀನ್ಯಾಕೆ ಹೀಗೆಲ್ಲ ಮಾತಾಡಿ ನಮ್ಮಲ್ಲಿರುವ ಪ್ರೀತಿ ವಿಶ್ವಾಸದ ಮೇಲೆ ಸಂಶಯ ಪಡುತ್ತಿದ್ದೀಯ?"
"ವಿಷಯ ಅದಲ್ಲ, ಇದೊಂದು ಸೀರಿಯಸ್ ವಿಷಯ. ನಾನು ಹೇಳೂದನ್ನ ನೀವು ಹೇಗೆ ಸ್ವೀಕರಿಸುತ್ತೀರೆಂದು ನಿಮಗೆ ಬಿಟ್ಟದ್ದು." ನೂರ್'ಜಹಾನ್'ಳ ಮಾತಲ್ಲಿರುವ ಗಾಂಭೀರ್ಯತೆ ಮುನೀರ್'ಗೂ ತಿಳಿಯಲು ಹೆಚ್ಚು ಸಮಯವಾಗಲಿಲ್ಲ. ತನ್ನ ಮಾತನ್ನು ಮುಂದುವರಿಸುತ್ತಾ "ನಿಮಗೊಂದು ಸುಖಜೀವನ ಆರಂಭಿಸಬೇಕೆಂದು ಅನಿಸುತ್ತಿಲ್ಲವೇ?"
"ನೂರೂ, ನೀನು ಹೇಳುತ್ತಿರೋದೇನು? ನನಗೊಂದೂ ಅರ್ಥವಾಗ್ತಿಲ್ಲ. ನನಗೇನಾಗಿದೆ? ನಮ್ಮ ಸುಖದಾಂಪತ್ಯದಲ್ಲಿ ನನಗೇನು ಕಡಿಮೆಯಾಗಿಲ್ಲ. ಒಂದು ಕೆಲಸ ಮಾಡು. ಬೇಗ ಸ್ನಾನ ಮಾಡಿ ಬಾ. ಆಮೇಲೆ ಶಾಂತಿಯಾಗಿ ಕುಳಿತು ಮಾತಾಡೋಣ. ನಿದ್ದೆಗೆಟ್ಟಿದ್ದರಿಂದ ನಿನ್ನ ಬಾಯಲ್ಲಿ ಏನೆಲ್ಲಾ ಬರುತ್ತಿದೆ. ನಾನು ಗಂಜಿ ಕೆಳಗಿಳಿಸಿ, ಚಾ ಮಾಡಿ ಕೊಡುವೆ. ಸ್ನಾನ ಮುಗಿಸಿ ಚಾ ಕುಡಿದರೆ ಎಲ್ಲವೂ ಸರಿಹೋಗುತ್ತೆ..."
"ರೀ..ನಾನು ಹೇಳೋದನ್ನ ಸ್ವಲ್ಪ ಕೇಳಿ....."
"ನನ್ನ ಮಾತನ್ನು ಮುಗಿಸದೇ ಸ್ನಾನಕ್ಕೆ ಹೋಗಲಾರೆ. ಚಾ ತಿಂಡಿ ಆಮೇಲೆ ನೋಡೋಣ." ನೂರ್'ಜಹಾನ್'ಳ ಮಾತಿನಲ್ಲಾದ ಬದಲಾವಣೆ ಕಂಡು ಮುನೀರ್ ತಬ್ಬಿಬ್ಬಾದ.....
"ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ. ನೀವು ಸಾಜಿದಾಳನ್ನು ಮದುವೆಯಾಗಬೇಕು ಅಷ್ಟೆ. ಇದು ನನ್ನ ಆಗ್ರಹವಾಗಿದ್ದು, ಅದನ್ನು ಪೂರ್ಣಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ. ನನ್ನ ಮಾತನ್ನು ನೆರವೇರಿಸಿಕೊಡಲೇಬೇಕು" ಎಂದು ಒಂದೇ ಮಾತಿನಲ್ಲಿ ಮುಗಿಸಿ ನೇರವಾಗಿ ಸ್ನಾನಕ್ಕೆ ಹೋಗಿಬಿಟ್ಟಳು.
ಅವಳ ಮಾತನ್ನೇ ಕೇಳುತ್ತಿದ್ದ ಮುನೀರ್'ಗಂತೂ ಒಂದು ಕ್ಷಣ ಉಸಿರು ಕಟ್ಟಿದಂತಾಯಿತು. ಇವಳಿಗೇನಾಯಿತು? ನನ್ನೊಂದಿಗೆ ಹೀಗೆಲ್ಲಾ ಮಾತಾಡಲು ಅವಳಿಗೆಲ್ಲಿಂದ ಇಷ್ಟು ಧೈರ್ಯ ? ಮುನೀರ್'ನ ಹೃದಯಬಡಿತ ಜೋರಾಗಿ ಬಡಿಯತೊಡಗಿತು.
ಅತ್ತ ನೂರ್'ಜಹಾನ್ ಅವಸರದಲ್ಲಿ ಟವೆಲ್ ಬಟ್ಟೆ ಏನನ್ನೂ ಕೊಂಡುಹೋಗಿರಲಿಲ್ಲ. ಬಚ್ಚಲುಮನೆಯ ಬಾಗಿಲು ಮುಚ್ಚಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ತನ್ನ ಅಂತರಾತ್ಮದ ದುಃಖವನ್ನು ತೋರ್ಪಡಿಸುವುದಾದರೂ ಹೇಗೆ ? ಮನಸಲ್ಲಿ ಅಪಾರ ನೋವನ್ನು ಅದುಮಿಟ್ಟು ಅವಳ ಗಂಡನೊಂದಿಗೆ ಬೇರೊಂದು ಹೆಣ್ಣಿನ ಜೊತೆ ಮದುವೆಯಾಗಲು ಒತ್ತಾಯಿಸಿದ್ದಳು. ತನ್ನ ಬಾಳು ಹಾಳಾದರೂ ಪರವಾಗಿಲ್ಲ, ನನ್ನ ಗಂಡ ಸುಖವಾಗಿರಬೇಕು. ಅವರ ತಾಯಿಯ ಅಭಿಲಾಶೆ ಪೂರ್ತಿಯಾಗಬೇಕೆಂಬ ಉದ್ದೇಶದಿಂದ ಮನಸ್ಸನ್ನು ಕಲ್ಲುಮಾಡಿ ನೂರ್'ಜಹಾನ್ ಹೇಳಿದ್ದಳು. "ಯಾ ಅಲ್ಲಾಹ್ ! ಎಲ್ಲವನ್ನೂ ಸಹಿಸುವ ಶಕ್ತಿ ನನಗೆ ಕೊಡು ಯಾ ಅಲ್ಲಾಹ್ ! ತನ್ನ ಗಂಡನ ಮುಂದೆ ದುರ್ಬಲಳಾಗದಂತೆ ಕಾಪಾಡು." ಮನದಲ್ಲೇ ಪ್ರಾರ್ಥಿಸಿದಳು....
ಬಹಳ ಹೊತ್ತು ನೂರ್'ಜಹಾನ್ ಹೊರಗೆ ಬಾರದ್ದನ್ನು ಕಂಡು ಗಾಬರಿಹೊಂದ ಮುನೀರ್ ನೂರೂ ಬಚ್ಚಲುಮನೆಗೆ ಹೋಗಿ ಬಹಳ ಹೊತ್ತಾಯಿತಲ್ಲ, ನೀರು ಸುರಿಯುವ ಶಬ್ದವೂ ಕೇಳುತ್ತಿಲ್ಲ. ಏನಾದರೂ ಮಾಡಿಕೊಂಡಳೇ ? ಉಫ್ , ನೋಡೇ ಬಿಡ್ತೇನೆ... ಎಂದು ಎದ್ದು ಬಚ್ಚಲುಮನೆಯ ಹೊರಗೆ ನಿಂತು "ನೂರೂ, ನೂರೂ.." ಎಂದು ಕೂಗಿದನು.
"ರೀ, ಅವಸರದಲ್ಲಿ ನಾನು ಟವೆಲ್ ಮತ್ತು ಬಟ್ಟೆಯನ್ನು ತೆಗೆಯೋದು ಮರೆತೇಬಿಟ್ಟೆ. ಅದೋ ಕಪಾಟಿನಲ್ಲಿರುವ ನೀಲಿಬಣ್ಣದ ನೈಟಿ ಮತ್ತು ಟವೆಲ್ ತರ್ತೀರಾ?"
"ಆಯ್ತು" ಅವಳ ಬಟ್ಟೆ ಮತ್ತು ಟವೆಲ್ ಬಾಗಿಲಿನ ಮೇಲ್ಬದಿಯಲ್ಲಿಟ್ಟು ಮುನೀರ್ ಅಡುಗೆಕೋಣೆಗೆ ಹೋದನು. ಅವನ ಮನಸೆಲ್ಲಾ ಕದಡಿಹೋಗಿತ್ತು. ನೂರ್'ಜಹಾನ್ ಹೇಳಿದ ಮಾತು "ಸಾಜಿದಾಳನ್ನು ಮದುವೆಯಾಗಿ, ಸಾಜಿದಾಳನ್ನು ಮದುವೆಯಾಗಿ" ಅನ್ನೋ ಮಾತು ಕಿವಿಗಪ್ಪಳಿಸುವಂತೆ ಕೇಳಿಸುತ್ತಿತ್ತು. ಅವನಿಗೆ ಹುಚ್ಚು ಹಿಡಿದಂತಾಗಿತ್ತು. ಈ ಟೆನ್ಶನ್'ನಲ್ಲಿ ಒಲೆಯಲ್ಲಿಟ್ಟಿದ್ದ ಗಂಜಿಯನ್ನು ಮರೆತೇಹೋಗಿದ್ದ.
"ಏನ್ರೀ, ಅಡುಗೆಮನೆಯಲ್ಲಿ ಕರಿದ ವಾಸನೆ.. ?" ನೂರ್'ಜಹಾನ್ ಹೇಳಿದಾಗಲೇ ಮುನೀರ್ ವಾಸ್ತವಕ್ಕೆ ಬಂದದ್ದು.
"ಯಾ ಅಲ್ಲಾಹ್ ! ಗಂಜಿ ಹಾಳಾಗಿ ಹೋಯ್ತೆ?" ಮುನೀರ್ ಓಡಿ ಹೋಗಿ ನೋಡಿದಾಗ ಗಂಜಿ ಕರಿದುಹೋಗಿತ್ತು. ಬೇಗನೆ ಸ್ವಲ್ಪ ನೀರು ಹಾಕಿ ಕೆಳಗಿಳಿಸಿ "ಏನಾದರೂ ಆಗಲಿ, ಇವಳ ಹುಚ್ಚು ಬಿಡಿಸುತ್ತೇನೆಂದು" ನಿರ್ಧರಿಸಿ ಹಾಲ್'ನಲ್ಲಿ ನೂರ್'ಜಹಾನ್'ಳ ಬರುವಿಕೆಗಾಗಿ ಕಾದು ಕುಳಿತ.
"ರೀ , ಗಂಜಿ ತಯಾರಾಯ್ತ? ಹೋಗೋಣವೆ..?" ತಲೆಯೊರೆಸುತ್ತಾ ನೂರ್'ಜಹಾನ್ ಮುನೀರ್'ನ ಸನಿಹಕ್ಕೆ ಬಂದಳು.
"ಅಲ್ಲ ನೂರೂ, ಪ್ರತೀದಿನ ತಪ್ಪದೇ ನಾನು ಔಷಧಿ ಸೇವಿಸುತ್ತಿರುವುದು ನಿನಗೂ ಚೆನ್ನಾಗಿ ಗೊತ್ತಿದೆ ತಾನೇ ? ಅಲ್ಲಾಹು ಖಂಡಿತವಾಗಿಯೂ ನಮಗೊಂದು ಮಗು ಕರುಣಿಸುತ್ತಾನೆ. ಈ ಅವಸ್ಥೆಯಲ್ಲಿ ನನ್ನನ್ನು ಬಿಟ್ಟುಹೋಗಲು ನಿನಗೆ ಮನಸ್ಸಾಗುತ್ತಿದೆಯೇ..? ನಿನ್ನ ಹಟಕ್ಕೆ ನನ್ನನ್ನ ಬಿಟ್ಟು ಎಲ್ಲಿಗಾದರೂ ಹೋಗಬೇಕೆಂದೆನಿಸಿದರೆ ನೀನು ಹೋಗಬಹುದು. ಆದರೆ ಸಾಜಿದಾಳನ್ನು ಮದುವೆಯಾಗಲು ಮಾತ್ರ ಒತ್ತಾಯಿಸಬೇಡ. ಅವಳನ್ನ ನೆನೆದರೆ ಸಾಕು, ಮೈಯೆಲ್ಲಾ ಉರಿಯುತ್ತೆ. ಇನ್ನೊಬ್ಬರ ಬಾಳಲ್ಲಿ ಆಟವಾಡುತ್ತಿರುವ ಆ ದುಷ್ಟ ಹೆಣ್ಣಿನ ಬಗ್ಗೆ ಚಿಂತಿಸಲೂ ಸಾಧ್ಯವಿಲ್ಲ." ಅಷ್ಟು ಹೇಳುವಷ್ಟರಲ್ಲಿ ಕೋಪದಿಂದ ಮುನೀರ್'ನ ಕಣ್ಣು ಕೆಂಪಾಗಿತ್ತು.
"ಯಾ ಅಲ್ಲಾಹ್, ಇವರು ಇಷ್ಟೊಂದು ಕೋಪಗೊಂಡಿದ್ದಾರೆ. ನನ್ನ ಧೈರ್ಯವೆಲ್ಲ ಹುದುಗಿಹೋಯಿತೆ ?" ಮನದಲ್ಲೇ ಯೋಚಿಸಿದಳು.
"ನೂರೂ..,ಕಲ್ಲುಬಂಡೆಯಂತೆ ಯಾಕೆ ನಿಂತಿದ್ದೀಯಾ? ನಾನು ಹೇಳಿದ್ದು ಕೇಳಲಿಲ್ಲವೇ?"
"ರೀ ಹಾಗನ್ನಬೇಡಿ. ಸಾಜಿದ ನೀವು ಯೊಚಿಸಿದಷ್ಟು ಕೆಟ್ಟವಳಲ್ಲ. ಸುಮ್ಮನೆ ಅವಳನ್ನ ದುಷ್ಟಳೆನ್ನಬೇಡಿ. ಅವಳು ಒಳ್ಳೆಯ ಹುಡುಗಿ. ಅವಳ ವಿಧಿಯಷ್ಟೇ. ಅವಳ ಬಾಳಲ್ಲಿ ಬಂದ ಕಷ್ಟಗಳನ್ನು ಧೈರ್ಯವಾಗಿ ಸಹಿಸಿಕೊಂಡ ಹೆಣ್ಣವಳು. ನಿಮಗಂತೂ ಹೇಳಿ ಮಾಡಿಸಿದ ಹುಡುಗಿ." ನೂರ್'ಜಹಾನ್'ಳ ಸ್ವರ ಕ್ಷೀಣವಾಯಿತು.
"ನಿನಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಯ್ತೆ..? ಕಳೆದ ಹದಿನಾರು ವರ್ಷಗಳಿಂದ ಕಷ್ಟಸುಖಗಳನ್ನು ಒಂದೇ ಸಮನಾಗಿ ಹಂಚಿಕೊಂಡು, ಯಾವುದೇ ತೊಡಕಿಲ್ಲದ ನಮ್ಮ ಜೀವನದಲ್ಲಿ ಹೊರಗಿನ ಒಂದು ಹೆಣ್ಣಿಗಾಗಿ ನನ್ನೊಡನೆ ಜಗಳವಾಡುತ್ತಿದ್ದೀಯ..? ನನ್ನ ನೂರುವಿಗೆ ಏನಾಯಿತೋ ಅಲ್ಲಾಹನೇ ಬಲ್ಲ. ನೀನು ಮೈಯಲ್ಲಿ ಎಚ್ಚರವಿದ್ದೇ ಹೇಳುತ್ತಿದ್ದೀಯ ಅಥವಾ ಹುಚ್ಚು ಹಿಡಿಯಿತೇ?"
'ಛೇ, ಏನ್ರೀ ಗಂಜಿಯೆಲ್ಲಾ ಕರಿದು ಹೋದ ಹಾಗೆ ವಾಸನೆ ಬರುತ್ತಿದೆಯಲ್ಲ? ಹಗಲುಕನಸು ಕಾಣುತ್ತಿದ್ದೀರಾ?" ಎಂದು ಗುಣಗುತ್ತಲೇ ನೂರ್'ಜಹಾನ್ ಅಡುಗೆಮನೆಗೆ ಹೋದಳು. ಮುನೀರ್' ಕೂಡ ಹಿಂಬಾಲಿಸಿದ.....ನೋಡಿದರೆ, ನೀರೆಲ್ಲ ಬತ್ತಿಹೋಗಿ ಗಂಜಿಯೆಲ್ಲ ಕರಿದುಹೋಗಿತ್ತು. ಅದನ್ನು ಕೆಳಗಿಳಿಸಿ, ಗಂಜಿ ಮಾಡಲು ಬೇರೊಂದು ಪಾತ್ರೆಯನ್ನು ಒಲೆಯಲಿಟ್ಟಳು. ಛೆ ! ಈ ಗಂಡಸರು ಒಂದು ಕೆಲಸ ಸಣ್ಣ ಕೆಲಸ ಮಾಡಲೂ ಸಾಧ್ಯವಿಲ್ಲ. ಅಡುಗೆಮನೆ ಕೆಲಸವೇನಿದ್ದರೂ ಅದು ಹೆಂಗಸರಿಗೇ ಮೀಸಲು. ಗಂಡನ ಮುಖವನ್ನೇ ನೋಡುತ್ತಾ ಏನೂ ಕೂಡ ಆಗಿಲ್ಲವೆಂಬಂತೆ ನಟಿಸಿದಳು.
"ನೂರೂ, ಮಾತನ್ನು ತಿರುಗಿಸಬೇಡ. ಸ್ನಾನಕ್ಕೆ ಹೋಗುವ ಮುಂಚೆ ಹೇಳಿದ್ದೇನು.. ? ಏನೂ ಗೊತ್ತಿಲ್ಲದ ಹಾಗೆ ನಟಿಸಬೇಡ. ಎರಡನೇ ಮದುವೆಯಾಗಲು ಹೇಳಿದ್ದನ್ನು ಮರೆಮಾಚುತ್ತಿರುವುದು ನನಗೆ ನೆನಪಿದೆ. ನಿನ್ನ ಗಂಡನೊಡನೆಯೇ ಇನ್ನೊಂದು ಮದುವೆಯಾಗಲು ಹೇಳುವಷ್ಟು ಧೈರ್ಯ ನಿನಗೆಲ್ಲಿಂದ ಬಂತು? ನಿನಗೊಂದು ಮಗು ಕೊಡಲು ಸಾಧ್ಯವಿಲ್ಲವೆಂದರಿತು ನನ್ನನ್ನು ದೂರ ಮಾಡುವುದು ಎಷ್ಟು ಸರಿ? ಮಗುವಿಲ್ಲದ ಒಂದೇ ಕಾರಣದಿಂದ ನೀನು ನನ್ನನ್ನು ಬಿಟ್ಟುಬಿಡಲು ತೀರ್ಮಾನಿಸಿದ್ದೀಯಾ? ಅಮ್ಮ ನಿನ್ನನ್ನು ಬಲವಂತ ಮಾಡಿದ್ರಾ..? ಅಲ್ಲ ಹಫ್ಸಾಳನ್ನು ಆ ಸ್ಥಿತಿಯಲ್ಲಿ ಕಂಡು ಈ ರೀತಿ ನನ್ನನ್ನು ಹಿಂಸಿಸುತ್ತಿದ್ದೀಯ?" ಅವಳ ಕೈಯ ಎರಡೂ ರೆಟ್ಟೆಗಳನ್ನಿಡಿದು ಮುನೀರ್ ಗರ್ಜಿಸಿದ...
"ನನ್ನ ಕೈ ಬಿಡಿ. ನೊಯುತ್ತಿದೆ. ಗಂಜಿಯನ್ನು ಇಳಿಸಬೇಕು. ಟಿಫಿನ್'ಗೆ ಹಾಕಿ ಹಫ್ಸಳಿಗೆ ಕೊಟ್ಟುಬನ್ನಿ. ಹಸಿವಿನಿಂದ ಅವಳು ಕ್ಷೀಣಿಸುತ್ತಿದ್ದಾಳೆ. ಬೇಗನೆ ಅವಳು ವಾಸಿಯಾದರೆ ಸಾಕಿತ್ತು. ಮದುವೆ ದಿನ ಕೂಡ ಹತ್ತಿರವಾಗ್ತಿದೆ. ಅವಳನ್ನು ಮೊದಲಿನಂತೆಯೇ ಮಾಡಬೇಕು." ನೂರ್'ಜಹಾನ್ ಮುನೀರನ್ನು ದಿಟ್ಟಿಸುತ್ತಲೇ ಉತ್ತರಿಸಿದಳು.
"ಛೆ!! ನಿನ್ನ ತಲೆ ಕೆಟ್ಟಿದೆಯಷ್ಟೆ" ಎಂದು ಕೋಪದಿಂದಲೇ ಗಂಜಿಯ ಟಿಫಿನ್ ತೆಗೆದುಕೊಂಡು ತಿರುಗಿಯೂ ನೋಡದೆ ಮೆಟ್ಟಿಲಿಳಿದು ಹೋಗಿ ಕಣ್ಮರೆಯಾಗುವವರೆಗೂ ಗಂಡನನ್ನೇ ನೋಡುತ್ತಾ ನಂತರ ಮುಂಬಾಗಿಲ ಬಾಗಿಲನ್ನು ಮುಚ್ಚಿಕೊಂಡಳು ನೂರ್'ಜಹಾನ್ !
ಕದವನ್ನು ಮುಚ್ಚಿದ್ದೇ ತಡ, ಓಡಿ ಹೋಗಿ ತನ್ನ ಕೋಣೆಯೊಳಗೆ ಸೇರಿದ ನೂರ್'ಜಹಾನ್ ಅದುವರೆಗೂ ಅದುಮಿಟ್ಟಿದ್ದ ದುಃಖದ ಕಡಲೊಡೆಯಿತು.. ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರ ಧಾರೆಯೇ ಹರಿಯಿತು.
ನನ್ನ ಮುನೀರ್ ನನ್ನ ತಪ್ಪನ್ನು ಕಾಣದೆ ಕ್ಷಮಿಸಿದರೆ ಸಾಕಿತ್ತು. ನನ್ನ ಗಂಡನನ್ನು ಇನ್ನೊಬ್ಬಳಿಗೆ ಬಿಟ್ಟುಕೊಡುವ ನೋವಿನ ದುಃಖವನ್ನು ಯಾರ ಜೊತೆ ಹಂಚಿಕೊಳ್ಳಲಿ..? ನನ್ನ ಗಂಡನನ್ನ ದೂರ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಕೇವಲ ಪರಿಸ್ಥಿತಿಯ ಸಂದಿಗ್ದಕ್ಕೆ ಸಿಲುಕಿ ನನ್ನ ಗಂಡನೊಂದಿಗೆ ಈ ರೀತಿ ವರ್ತಿಸಬೇಕಾಯಿತೆಂದು ನಿನಗೂ ಗೊತ್ತು ತಾನೇ ? ಇಷ್ಟೊಂದು ಪ್ರೀತಿಸುವ ನಾನು ಇನ್ನೊಂದು ಮದುವೆಯಾಗಲು ಗಂಡನಿಗೆ ಹೇಳುವಾಗ ಅದರಲ್ಲಾದ ನೋವು ನನಗೇ ಗೊತ್ತು.
ಗಂಡ ಎಷ್ಟೇ ಕ್ರೂರಿಯಾದರೂ ಯಾವ ಹೆಣ್ಣು ಕೂಡ ಇನ್ನೊಬ್ಬಳಿಗೆ ಬಿಟ್ಟುಕೊಡಲಾರಳು. ತನ್ನೆದುರೇ ಇನ್ನೊಂದು ಹೆಣ್ಣಿನ ಕಡೆ ನೋಡುವುದನ್ನು ಕೂಡ ಸಹಿಸದ ಹೆಣ್ಣು ತನ್ನ ಸವತಿಯಾಗಿ ಬರುವ ಹೆಣ್ಣಿನ ಬಗ್ಗೆ ಕನಸಿನಲ್ಲೂ ಯೋಚಿಸಲಾರಳು. ಕೇವಲ ಆಸ್ತಿಗಾಗಿ ತನ್ನ ಗಂಡ ಮತ್ತು ಕುಟುಂಬವನ್ನೇ ಕೊಳ್ಳುವ ಹೆಣ್ಣು, ಬೇರೊಂದು ಹೆಣ್ಣಿನ ಸಹವಾಸ ಮಾಡಿ ಕೊನೆಗೆ ತನ್ನ ಹೆಂಡತಿಯನ್ನೇ ಕೊಲ್ಲಿಸುವ ಗಂಡ, ಪ್ರಿಯಕರನಿಗಾಗಿ ತನ್ನ ಹೆತ್ತವರನ್ನೇ ಕೊಲ್ಲುವ ಕೆಲವರು ಹೀಗೆ ಹಲವಾರು ಘಟನೆಗಳನ್ನು ನಾನು ಕಂಡಿದ್ದೇನೆ. ಇದೆಲ್ಲವೂ ಒಂದೆಡೆಯಾದರೆ, ಊಟಕ್ಕೆ ವಿಷ ಹಾಕಿಯೋ, ಆಳವಾದ ಬಾವಿಗೆ ತಳ್ಳಿಯೋ ಅಥವಾ ಮೈಗೆ ಬೆಂಕಿ ಹಾಕಿ ನನ್ನನ್ನೂ ಕೂಡ ಕೊಲ್ಲುವುದಿಲ್ಲವೆಂದು ಯಾವ ಗ್ಯಾರಂಟಿ..?
ಈಗಿನ ಪರಿಸ್ಥಿತಿಯಂತೂ ಹೇಳತೀರದು. ಪ್ರತೀದಿನ ಅದೆಷ್ಟೋ ಸಾವು - ನೋವುಗಳ ವಿವರ ಮಾಧ್ಯಮಗಳಲ್ಲಿ ಪದೇ ಪದೇ ಬರುತ್ತಿದೆ. ಮೊದ ಮೊದಲು ಗಂಭೀರವಾಗಿ ಪರಿಗಣನೆ ಮಾಡಿದರೂ ಕ್ರಮೇಣವಾಗಿ ಎಲ್ಲರೂ ಮರೆತುಬಿಡುವರು. ಈಗ ನನ್ನ ಪರಿಸ್ಥಿತಿ ವಿಭಿನ್ನವಾಗಿದ್ದು ನನ್ನ ಗಂಡ ಬೇರೊಂದು ಮದುವೆಯಾದರೂ ಎಲ್ಲಿಗೂ ಹೋಗದೆ ನನ್ನ ಗಂಡನನ್ನು ಪ್ರತೀದಿನ ನನ್ನ ಕಣ್ಣ ಮುಂದೆಯೇ ಇರುತ್ತಾರಲ್ಲವೇ? ತನ್ನವರೆಂದು ಹೇಳಿಕೊಳ್ಳಲು ಇಬ್ಬರು ತಂಗಿಯರಿದ್ದರೂ ಅವರ ಬಾಳು ಕೂಡ ಹೇಳುವಷ್ಟೇನು ಸುಖಕರವಾಗಿಲ್ಲ. ಅವರಿಬ್ಬರರಿಗೂ ಸ್ವಂತವಾದ ಮನೆಯೂ ಇಲ್ಲ. ತಿರುಗಳೂ ಮುರುಗಲೂ ಸ್ಥಳವಿಲ್ಲದ ಸಣ್ಣ ಬಾಡಿಗೆಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ ಜೀವನವೇ ತೂಗುಯ್ಯಾಲೆಯಲ್ಲಿದೆ. ಇನ್ನು ನಾನು ಅವರೊಡನೆ ಯಾವ ಮುಖ ಹೊತ್ತು ಹೋಗಲಿ ?
ತಾಳ್ಮೆ ವಹಿಸಿ ಇದೇ ಮನೆಯಲ್ಲಿ ಒಂದು ಮೂಲೆಯಲ್ಲಾದರೂ ಕುಳಿತುಕೊಳ್ಳಬಹುದಲ್ಲವೇ ? ಹೊರಗಿನ ಲೋಕವೂ ಸರಿಯಾಗಿಲ್ಲ. ಹೆಣ್ಣೆಂದರೆ ಸಾಕು ರಾಕ್ಷಸರಂತೆ ಮೇಲೆ ಬಿದ್ದು ಬಾಳನ್ನೇ ನಶಿಸಿಬಿಡುತ್ತಾರೆ. ಹಸಿಮಾಂಸ ತಿನ್ನುವವರಿಗೇನೂ ಕಡಿಮೆಯಿಲ್ಲ. ಮದುವೆಯಾಗಿ ಹದಿನಾರು ವರ್ಷವಾದರೂ ನನ್ನ ಗಂಡನನ್ನು ಸಂಪೂರ್ಣವಾಗಿ ಪ್ರೀತಿಸಿ ಮುಗಿದಿಲ್ಲ. ಅವರನ್ನು ಇನ್ನೂ ಕೂಡ ಪ್ರೀತಿಸಬೇಕೆಂಬ ಹಂಬಲವಿದೆ. ನಮ್ಮ ಪ್ರೀತಿಯ ಕಡಲಿನಲ್ಲಿ ಮಗುವೊಂದು ಬಂದರೆ ನನ್ನ ಜೀವನ ಸಾರ್ಥಕವಾಗಬಹುದು. ನನ್ನ ಬಾಳಿಗೊಂದು ಮಗು ಬೇಕೇ ಬೇಕು ಅಂತ ಹಟವಿಡಿದು ತಾನೇ ದೋಷವಿರುವ ನನ್ನ ಗಂಡನ ಚಿಕಿತ್ಸೆ ಮಾಡುತ್ತಿರೋದು? ಒಂದಲ್ಲ ಒಂದು ದಿನ ಅಲ್ಲಾಹು ನಮ್ಮಲ್ಲಿ ಕರುಣೆ ತೋರಿ ನಮಗೊಂದು ಸಂತಾನಭಾಗ್ಯ ಖಂಡಿತವಾಗಿಯೂ ಕೊಡಬಹುದು.
ಮುಸ್ತಫ ಹೇಳಿದ ಹಾಗೆ ಮದುವೆಯಾಗಿ ಎರಡು ಹೆಂಡತಿಯರೂ ಒಂದೇ ಮನೆಯಲ್ಲಿರುವುದು ತಪ್ಪೇನಿಲ್ಲ. ಪುರಾತನ ಕಾಲದಲ್ಲಿ ಒಂದಕ್ಕಿಂತಲೂ ಹೆಚ್ಚು ಮದುವೆಯಾಗಿ ಒಂದೇ ಮನೆಯಲ್ಲಿ ದಾಂಪತ್ಯ ಜೀವನ ಕಳೆದವರು ಅದೆಷ್ಟೋ ಮಂದಿಯಿದ್ದಾರೆ. ಹಾಗಿರುವಾಗ ನನ್ನ ನಿರ್ಧಾರದಲ್ಲಿ ತಪ್ಪೇನಿದೆ ? ನನ್ನ ದೊಡ್ಡಪ್ಪನಿಗೂ ಇಬ್ಬರು ಹೆಂಡತಿಯರಿದ್ದು ಈಗಲೂ ಸುಖಜೀವನ ನಡೆಸುತ್ತಿದ್ದಾರಲ್ಲವೇ? ಇಬ್ಬರೂ ಹೆಂಡತಿಯರಲ್ಲೂ ಒಂದೇ ರೀತಿಯ ಪ್ರೀತಿಯನ್ನು ತೋರಿಸುತ್ತಿರುವಾಗ ನಮ್ಮ ಪ್ರೀತಿಯಲ್ಲೂ ತಾರತಮ್ಯವಿಲ್ಲದೆ ನಿರ್ವಹಿಸುತ್ತಾರೆಂದು ನನ್ನ ಗಂಡನ ಮೇಲೆ ನನಗೆ ಭರವಸೆಯಿದೆ. ಸಾಜಿದಾಳೊಂದಿಗೇ ಮದುವೆಯಾದರೂ ಅವರಿಗೆ ನನ್ನ ಮೇಲಿರುವ ಪ್ರೀತಿ ಕಿಂಚಿತ್ತೂ ಕಡಿಮೆಯಾಗದು. ನನ್ನ ಗಂಡನ ಬಗ್ಗೆ ನನಗಿಂತಲೂ ಚೆನ್ನಾಗಿ ಬಲ್ಲವರಾರು?
ಜೀವನದಲ್ಲಿ ಸಂಕಷ್ಟಗಳನ್ನೇ ಸಹಿಸಿದ ಸಾಜಿದ ಕೂಡ ನನ್ನ ಹಾಗೆಯೇ ಒಂದು ಹೆಣ್ಣಲ್ಲವೇ ? ಜೀವನದಲ್ಲಿ ಇನ್ನೊಂದು ಮದುವೆಯೇ ಬೇಡವೆಂದು ನಿರ್ಧರಿಸಿದ್ದ ಅವಳನ್ನು ಒತ್ತಾಯಪೂರ್ವಕವಾಗಿ ಮದುವೆಯಾಗಲೇಬೇಕೆಂದು ಹಠವಿಡಿದ ಅವರ ಮನೆಯವರ ಬಗ್ಗೆಯೂ ನನಗೆ ಅನುಕಂಪವಿದೆ. ಅವರ ಒಳ್ಳೆತನ ಅಂಗವಿಕಲೆಯಾದ ನಮ್ಮ ಹಫ್ಸಳನ್ನು ಸೊಸೆಯಾಗಿ ಸ್ವೀಕರಿಸುವಾಗಲೇ ಎದ್ದು ಕಾಣುತ್ತಿತ್ತು. ನಿನ್ನೆ ಅಸ್ಪತ್ರೆಯಲ್ಲಿ ಅವರು ತೋರಿಸಿದ ಒಡನಾಟಿಯೇ ಮತ್ತೊಂದು ಸಾಕ್ಷಿ. ಇಷ್ಟೆಲ್ಲಾ ತ್ಯಾಗ ಮಾಡುತ್ತಿರುವ ಮನುಷ್ಯರು ನನ್ನ ಮುಂದಿರುವಾಗ ನನ್ನ ಈ ನಿರ್ಧಾರದಿಂದ ಎಷ್ಟೋ ಜನರ ಜೀವನದಲ್ಲಿ ವ್ಯತ್ಯಾಸ ಬರಬಹುದು. ಎಲ್ಲರ ಜೀವನದಲ್ಲೂ ನಗುಮುಖವೊಂದನ್ನು ನಾನು ಕಾಣಬಹುದು. ಏನಾದರೂ ಸರಿಯೆ, ನನ್ನ ಗಂಡನನ್ನು ಸಾಜಿದಾಳೊಂದಿಗೆ ಮದುವೆ ಮಾಡಿಸುವವರೆಗೂ ನಾನು ಬಿಡುವುದಿಲ್ಲವೆಂದು ನಿರ್ಧರಿಸಿದ ನೂರ್'ಜಹಾನ್'ಳ ಕಣ್ಣುಗಳಲ್ಲಿ ಬರುತ್ತಿದ್ದ ಕಣ್ಣೀರಿಗೆ ಮಾತ್ರ ಆ ಕೋಣೆಯಲ್ಲಿದ್ದ ಒಂದೊಂದು ವಸ್ತುವೂ ಸಾಕ್ಷಿಯಾಗಿತ್ತು. ಬೆಳಗಿಂದಲೂ ಒಂದು ತೊಟ್ಟು ನೀರು ಕೂಡ ಕುಡಿದಿರಲಿಲ್ಲ.
"ನನ್ನ ಬಗ್ಗೆಯೂ, ಅಥವಾ ಮುನೀರ್ ಬಗ್ಗೆಯೋ ನಿಮಗೆ ಕಿಂಚಿತ್ತೂ ಯೋಚನೆಯಿಲ್ಲ. ನಮ್ಮನ್ನು ಜೀವಿಸಲು ಬಿಡಿ. ಜೀವನವನ್ನು ಒಂದೇ ದೋಣಿಯಲ್ಲಿ ಕೊಂಡೊಯ್ಯುವುದನ್ನು ಬಿಟ್ಟು ಈ ರೀತಿಯೆಲ್ಲಾ ವಿಚಿತ್ರವಾಗಿಸುವುದು ಎಷ್ಟು ಸರಿ? ಸರಿಯಾದ ನಿರ್ಧಾರಕ್ಕೆ ಎರಡು ಹೆಣ್ಣಿನ ಬಾಳು ಸರಿಯಾಗುವಾಗ ದಯವಿಟ್ಟು ನೀವು ಮುನೀರನ್ನು ಈ ಮದುವೆಗೆ ಒಪ್ಪಿಸಲೇಬೇಕು. ಈ ಮದುವೆಯಾಗದಿದ್ದರೆ ಖಂಡಿತವಾಗಿಯೂ ನಾನು ಬದುಕಿರಲಾರೆ. ಶಾಜಹಾನ್ ಜೊತೆ ಜೀವಿಸಲು ಸಾಧ್ಯವಿಲ್ಲದ ಈ ಜೀವ ಯಾರಿಗಾಗಿ? ಮರಣದಲ್ಲೇ ನನ್ನ ಜೀವನ ಅಂತ್ಯವಾಗಲಿ" ಹಿಂದಿನ ರಾತ್ರಿ ICU ನಲ್ಲಿದ್ದ ಸ್ಥಿತಿಯಲ್ಲೂ ಹಫ್ಸಾ ಹೇಳಿದ ಮಾತುಗಳು ಈಗಲೂ ನೂರ್'ಜಹಾನ್'ಳ ಕಿವಿಯಲ್ಲಿ ಬಂಡೆಕಲ್ಲಿನಂತೆ ಅಪ್ಪಳಿಸುತ್ತಿತ್ತು.
"ನೋಡು ಹಫ್ಸ, ನಾನೆಂದಿಗೂ ಸ್ವಾರ್ಥಿಯಲ್ಲ. ಮದುವೆಯಾಗಿ ಇಷ್ಟು ವರ್ಷದಲ್ಲೂ ನಿಮ್ಮ ಅಳಿಲುಸೇವೆ ಮಾಡುತ್ತಲೇ ಜೀವನ ಸಾಗಿಸಿದ ನನಗೆ ನನಗಿಂತಲೂ ಹೆಚ್ಚು ನಿಮ್ಮೆಲ್ಲರ ಸಂತೋಷವನ್ನು ಕಂಡು ಜೀವಿಸುವವಳು. ನಾನು ಯಾರಿಗೂ ಭಾರವಾಗಲು ನನಗೇ ಇಷ್ಟವಿಲ್ಲ. ನಿನ್ನ ಅಣ್ಣನನ್ನು ಇನ್ನೊಂದು ಮದುವೆಯಾಗಲು ಒಪ್ಪಿಸುವುದು ನನ್ನ ಜವಾಬ್ದಾರಿ." ಎಂದು ಉತ್ತರ ಕೊಟ್ಟಿದ್ದನ್ನು ನೆನೆದು ಕರುಳು ಕಿತ್ತು ಹೋಗುವಂತೆ ಭಾಸವಾಗುತ್ತಿತ್ತು. ಎಲ್ಲವೂ ಅಲ್ಲಾಹನ ಇಚ್ಛೆಯಂತಾಗಲಿ ಎಂದು ಕಣ್ಣೀರನ್ನು ಒರೆಸುತ್ತಾ ಸ್ವಲ್ಪ ವಿಶ್ರಾಂತಿ ತೆಗೆಯುವಷ್ಟರಲ್ಲಿ "ಟಿನ್, ಟಿನ್" ಎಂದು ಕಾಲಿಂಗ್ ಬೆಲ್ ಯಾರೋ ಬಡಿದ ಶಬ್ದ ಕೇಳಿಸಿತು. ಈ ನಡುರಾತ್ರೀಲಿ ಯಾರಿರಬಹುದು? ಅವರು ಇಷ್ಟು ಬೇಗ ಬಂದಿರಲಿಕ್ಕಿಲ್ಲ. ಈಗ ತಾನೇ ಆಸ್ಪತ್ರೆಗೆ ಹೋಗಿರೋದು..? ಮತ್ಯಾರು?
ನೋಡೋಣವೆಂದು ಹಾಸಿಗೆಯಿಂದೆದ್ದು, ಮುಂಬಾಗಿಲಿನ ಮುಂದೆ ಬರುವಷ್ಟರಲ್ಲಿ ಬಾಗಿಲು ಬಡಿಯುವ ಶಬ್ದ ಜೋರಾಗಿ ಕೇಳಿಸತೊಡಗಿತು. "ಆಂಟಿ, ಆಂಟಿ ಬೇಗ ಬಾಗಿಲು ತೆಗೀರಿ" ಹೊರಗಿಂದ ಶಾಹಿದ್ ಕೂಗನ್ನು ಕೇಳಿ ಬಾಗಿಲನ್ನು ತೆರೆದಳು.
"ಏನಾಯ್ತು ಆಂಟಿ, ಎಷ್ಟು ಹೊತ್ತಿನಿಂದ ಕಾಲಿಂಗ್ ಬೆಲ್ ಮಾಡುತ್ತಿದ್ದೆ..? ನಿಮಗೆ ಹುಶಾರಿಲ್ಲವೇ..? ಮುಖವೆಲ್ಲ ಬಾಡಿಹೋಗಿದೆ." ಮನೆಯೊಳಗೆ ಕಾಲಿಡುತ್ತಲೇ ಶಾಹಿದ್ ವಿಚಾರಿಸಿದ.
"ಏನಿಲ್ಲ, ಸ್ವಲ್ಪ ಆಯಾಸದಿಂದ ನಿದ್ದೆಗೆ ಜಾರಿದ್ದೆ." ಅವನ ಮುಖವನ್ನು ಕೂಡ ಸರಿಯಾಗಿ ನೋಡದೆ ನುಡಿದಳು.
"ಆಂಟಿ, ನನ್ನೊಂದಿಗೆ ಯಾಕೆ ಸುಳ್ಳು ಹೇಳುತ್ತಿದ್ದೀರಿ? ನೀವು ಅತ್ತು ಅತ್ತು ಮುಗಿಯದ ಕಣ್ಣೀರು ಈಗಲೂ ನಿಮ್ಮ ಮುಖದಲ್ಲಿ ಎದ್ದು ಕಾಣುತ್ತಿದೆ. ಅತ್ತೆ ಏನಾದರೂ ಹೇಳಿದರೆ? ಮದುವೆಯಾಗುವ ಮದುಮಗಳೆಲ್ಲಿ..? ಎನ್ನುತ್ತಾ ತನ್ನಲ್ಲಿದ್ದ ಬ್ಯಾಗನ್ನು ಟೇಬಲ್ ಮೇಲಿಟ್ಟು ಹಫ್ಸಳ ಕೋಣೆಯತ್ತ ಹೋದ. ಅರೆ, ಹಫ್ಸ ಎಲ್ಲಿ? ಅವಳ ರೂಮು ಬದಲಾಯಿತೇ..? ಅವಳೂ ಇಲ್ಲ, ವೀಲ್ ಚೇರ್ ಕೂಡ ಕಾಣಿಸುತ್ತಿಲ್ಲ. ರಾತ್ರಿಯಿಂದಲೂ ಅವಳ ಮೊಬೈಲ್ ಕೂಡ ಬಂದ್ ಆಗಿದೆ. ಎಷ್ಟು ಸಾರಿ ಕರೆಗೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮುನೀರ್ ಅಂಕಲ್'ಗೆ ಮಾಡಿದಾಗಲೂ ಕರೆಯನ್ನು ಸ್ವೀಕರಿಸಲಿಲ್ಲ."
"ಅದು ಅದು..ಏನಿಲ್ಲ ಶಾಹಿದ್ ! ಹಫ್ಸ ಆಸ್ಪತ್ರೆಯಲ್ಲಿದ್ದಾಳೆ."
"ಯಾ ಅಲ್ಲಾಹ್ ! ಆಸ್ಪತ್ರೆಯಲ್ಲಿ? ಹಫ್ಸಳಿಗೇನಾಯಿತು?"
"ಏನಿಲ್ಲ ಶಾಹಿದ್ ನಮ್ಮ ಹಫ್ಸ..." ಅನ್ನುವಷ್ಟರಲ್ಲಿ ಅವಳ ಕಣ್ಣೀರು ಹರಿಯತೊಡಗಿತು.
"ಏನಾಯ್ತು ಆಂಟಿ..? ಹೇಳಿ ನನಗೆ ಭಯವಾಗ್ತಿದೆ."
"ಈಗ ICU ನಲ್ಲಿದ್ದಾಳೆ." ಅದು ಏನೆಂದ್ರೆ ಅನ್ನುತ್ತಾ ನಡೆದ ಘಟನೆಯನ್ನೆಲ್ಲಾ ಚುಟುಕಾಗಿ ವಿವರಿಸಿದಳು.
"ಹೋ! ನಾನು ಹೋದ ಮೇಲೆ ಇಷ್ಟೆಲ್ಲ ನಡೆಯಿತೇ? ನೀವೇನೂ ಯೋಚಿಸ್ಬೇಡಿ. ನಾನು ಬಂದಿದ್ದೇನಲ್ಲ, ಎಲ್ಲವನ್ನೂ ಸರಿ ಮಾಡ್ತೇನೆ. ನಾನು ಮಾವನ ಜೊತೆ ಚರ್ಚಿಸುತ್ತೇನೆ. ಆ ಸಾಜಿದ ಈ ಮನೆಗೆ ಬಂದಿದ್ದಾಗಲೇ ಅವಳೊಂದು ಅಹಂಕಾರಿ ಹೆಣ್ಣೆಂದು ಭಾವಿಸಿದ್ದೆ. ಅಂದು ಮಾವನನ್ನು ದುರುಗುಟ್ಟಿ ನೋಡುವಾಗಲೇ ಈ ಮನೆಯೊಳಗೆ ಬಿರುಗಾಳಿಯೊಂದು ಬರಲಿದೆಯೆಂದು ಲೆಕ್ಕಾಚಾರ ಹಾಕಿದ್ದೆ." (ಶಾಹಿದ್'ನ ಮಾತಿನಲ್ಲೇ ಸಾಜಿದಾಳ ಮೇಲಿದ್ದ ಕೋಪ ಎದ್ದು ಕಾಣುತ್ತಿತ್ತು) "ಅವಸರದಲ್ಲಿ ಮುಖ್ಯವಾದ ನನ್ನೆರಡು ಪುಸ್ತಕ ಮತ್ತು ಪೆನ್ ಡ್ರೈವ್ ಮರೆತುಹೋಗಿದ್ದೆ. ಪರೀಕ್ಷೆ ಹತ್ತಿರವಾಗ್ತಿದೆ. ಅದಕ್ಕೋಸ್ಕರವೇ ಇಷ್ಟೊಂದು ದೂರ ಅದೂ ಈ ನಡುರಾತ್ರೀಲಿ ಬರಬೇಕಾಯ್ತು. ಇಷ್ಟೆಲ್ಲಾ ರಾದ್ದಾಂತವಾದರೂ ನನಗೊಂದು ವಿಷಯ ಕೂಡ ಅರಿಯದೆ ಹೋಯ್ತಲ್ಲ. ಈಗ ನಾನು ನೇರವಾಗಿ ಆಸ್ಪತ್ರೆಗೆ ಹೋಗಿ, ಎಲ್ಲದಕ್ಕೂ ಸೂಕ್ತ ಪರಿಹಾರವೊಂದನ್ನು ಮಾಡಲು ಯತ್ನಿಸುವೆ."
"ಬೇಡ ಶಾಹಿದ್, ಈ ವಿಷಯದಲ್ಲಿ ನೀನು ಕೈ ಹಾಕಬೇಡ. ಯಾರೊಂದಿಗೂ ಏನೂ ಮಾತಾಡಬೇಡ. ಇದೆಲ್ಲವೂ ಅಲ್ಲಾಹನ ಪರೀಕ್ಷೆ. ಎಲ್ಲವೂ ಅಲ್ಲಾಹನ ವಿಧಿಯಂತೆ ನಡೆಯೋದು. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗದು."
"ಅಲ್ಲ ಆಂಟಿ, ಇದೆಂತ ನ್ಯಾಯ? ಯಾವುದೋ ಒಂದು ಹೆಣ್ಣು ಬಂದು ಮನೆಗೆ ಬೆಂಕಿ ಇಡುವ ಕೆಲಸ ಮಾಡುವಾಗ ನೀವೆಲ್ಲಾ ಸಮ್ಮತ ಸೂಚಿಸುವುದೇ..? ನನಗೇನೂ ಇದೆಲ್ಲ ಸರಿ ಕಾಣಲ್ಲ. ಖಂಡಿತವಾಗಿಯೂ ನಾನು ನಿಮಗೆ ಅನ್ಯಾಯವಾಗಲು ಬಿಡೋದಿಲ್ಲ. ನಿಮ್ಮ ಕಣ್ಣೀರನ್ನು ಸಹಿಸಲಾರೆ."
"ದುಡುಕಬೇಡ ಶಾಹಿದ್ !"
"ನೀವು ಹೇಳಿ ಆಂಟಿ, ನಿಮಗೆ ಈ ಮದುವೆ ಒಪ್ಪಿಗೆಯೇ..? ನನ್ನೊಡನೆ ಕಿಂಚಿತ್ತೂ ಸುಳ್ಳು ಹೇಳದೆ ಆತ್ಮಸಾಕ್ಷಿಯಾಗಿ ಹೇಳಿ.."
"ಇದೆಲ್ಲಾ ನಿನಗೆ ಗೊತ್ತಾಗಲ್ಲ. ಕುಟುಂಬವೆಂದರೇನು. ? ಅದನ್ನು ಹೇಗೆ ನಡೆಸಿಕೊಂಡು ಹೊಗಬೇಕು? ಇದೆಲ್ಲಾ ಚೆನ್ನಾಗಿ ಅರಿಯಬಲ್ಲವರೇ ಇದರ ಕಷ್ಟ ನಷ್ಟ ಅನುಭವಿಸಲು ಸಾಧ್ಯ. ನಿನ್ನ ವಯಸ್ಸಿನಲ್ಲಿ ಇದೆಲ್ಲವೂ ಇನ್ನು ಕಲಿಯಬೇಕಷ್ಟೆ. ಒಂದು ಕುಟುಂಬ ಸಮತೋಲನದಲ್ಲಿರಬೇಕಾದರೆ ತ್ಯಾಗ ಮತ್ತು ಸಹನೆ ಎರಡೂ ಅತ್ಯಗತ್ಯ. ಯಾವಾಗ ನಮ್ಮ ತ್ಯಾಗ ಮತ್ತು ಸಹನೆಯಿಂದ ಇನ್ನೊಬ್ಬರಿಗೆ ಉಪಕಾರವಾಗುವಂತಹ ಕೆಲಸ ಮಾಡುತ್ತೇವೋ ಆಗಲೇ ನಮ್ಮ ಜೀವನ ಸಾರ್ಥಕವಾಗುವುದು. ಈ ಸಂದರ್ಭದಲ್ಲಿ ನನ್ನ ಅಥವಾ ನಿನ್ನ ಮಾವನ (ಮುನೀರ್ ) ಒಪ್ಪಂದಕ್ಕಿಂತ ಎರಡು ಕುಟುಂಬದ ಅವಶ್ಯಕತೆ ಪೂರೈಸುವುದು ಪ್ರಮುಖವಾಗಿದೆ. ನಿನ್ನ ಮಾವನನ್ನು ಈ ಮದುವೆಗೆ ಒಪ್ಪಿಸಿ ಎರಡೂ ಕುಟುಂಬದ ಹಾದಿಯನ್ನು ಸುಗಮಗೊಳಿಸುವುದೇ ಉತ್ತಮ. ಮದುವೆಯಾಗಿ ಹದಿನಾರು ವರ್ಷವಾದರೂ ಈ ಮನೆಗಾಗಿ ನನ್ನಿಂದೇನೂ ಒಳ್ಳೆಯ ಕಾರ್ಯವೊಂದನ್ನು ಮಾಡಲಿಲ್ಲ.. ಅಲ್ಲಾಹು ಒದಗಿಸಿದ ಇಂತಹ ಅವಕಾಶವೊಂದನ್ನು ಬಿಡಲು ಮನಸ್ಸೂ ಕೇಳುತ್ತಿಲ್ಲ."
"ಆಂಟಿ, ಯಾಕಿಷ್ಟು ಕಠೋರವಾಗುತ್ತಿದ್ದೀರಿ..? ನಿಮ್ಮ ಬಾಯಲ್ಲಿ ಬರುವ ಮಾತಿಗೂ ನಿಮ್ಮ ಮನದಲ್ಲಿರುವ ಆತಂಕಕ್ಕೂ ಆಕಾಶ ಭೂಮಿಯಷ್ಟು ವ್ಯತ್ಯಾಸ ಕಾಣಿಸುತ್ತಿದೆ. ನನ್ನೊಂದಿಗೆ ನೀವು ಸುಳ್ಳು ಹೇಳುತ್ತಿದ್ದೀರಿ. ನಾನು ಇನ್ನೊಂದು ತಾಯಿಯ ಮಗನಾದರೂ ನಿಮಗೆ ನಾನು ನಿಮ್ಮ ಮಗನಂತೆಯೇ ತಾನೇ.? ನೀವು ನನಗೆ ಜನ್ಮ ನೀಡಿಲ್ಲವಾದರೂ, ನೀವು ನನಗೆ ಅಮ್ಮನೇ ಅಲ್ಲವೇ ?" (ಶಾಹಿದ್'ನ ಕಣ್ಣಲ್ಲಿ ಕಣ್ಣೀರು ಬರತೊಡಗಿತು..) ನೋಡಿ ಆಂಟಿ, ಇನ್ನೊಬ್ಬರ ಜೀವನವನ್ನು ಬೆಳಕಾಗಿ ಮಾಡಲು ನಿಮ್ಮ ಜೀವನವನ್ನು ಕತ್ತಲಾಗಿ ಮಾಡುವುದು ಮೂರ್ಖತನ. ಆ ಸಾಜಿದಾ ನೀವು ನೆನೆಸಿದಷ್ಟು ಒಳ್ಳೆಯವಳಲ್ಲ. ಅಕಸ್ಮಾತ್ ಮಾವ ಸಾಜಿದಾಳನ್ನು ಮದುವೆಯಾಗಿದ್ದೇ ಆದಲ್ಲಿ ನಂತರ ನಿಮ್ಮನ್ನು ಮಾವ ಈಗ ಪ್ರೀತಿಸುವಷ್ಟೇ ಮುಂದೆಯೂ ಪ್ರೀತಿಸಬಹುದೆಂದು ಗ್ಯಾರಂಟಿ ಇದೆಯೇ ? ಸಾಜಿದ ಅವಕಾಶ ನೀಡುವಳೇ ? ಖಂಡಿತ ಇಲ್ಲ. ನಿಮ್ಮ ಪ್ರೀತಿಯನ್ನು ಅವಳು ಕಸಿದುಕೊಳ್ಳುವಳು. ಆಮೇಲೆ ನಿಮ್ಮ ದಾಂಪತ್ಯಜೀವನ ಏನಾಗಬಹುದೆಂದು ನೀವು ಚಿಂತಿಸಿದ್ದೀರಾ. ? ಕಸದಂತೆ ತೊಟ್ಟಿಗೆ ಹಾಕಬಹುದು. ಆಗ ನೋಡುವಿರಂತೆ ಈ ಆದರ್ಶ, ಕುಟುಂಬ ಎಲ್ಲಾ... ನಿಮ್ಮದೊಂದು ತ್ಯಾಗ ಮತ್ತು ಸಹನೆ....ಉಫ್"
"ಅರೆ ವಾಹ್ ! ನಮ್ಮ ಶಾಹಿ ಇಷ್ಟೊಂದು ದೊಡ್ಡ ದೊಡ್ಡ ಮಾತುಗಳನ್ನಾಡಲು ಕಲಿತಿದ್ದಾನಲ್ಲ..?"
"ಆಂಟಿ, ನೀವು ಮಾತನ್ನು ತಿರುಗಿಸಬೇಡಿ. ನಾನು ಇಷ್ಟೆಲ್ಲಾ ಹೇಳಿದ್ರೂ ನಿಮಗೆ ಸ್ವಲ್ಪವೂ ನಾಟುತ್ತಿಲ್ಲ. ನೀವು ಮಾಡುತ್ತಿರುವುದು ತ್ಯಾಗವಾದರೂ ಈಗಿನ ನಶ್ವರ ಲೋಕದಲ್ಲಿ ಸ್ವಾರ್ಥಜೀವನವೇ ಹೆಚ್ಚು ಕಾಣಬಹುದು. ನಾವೆಷ್ಟೇ ಒಳ್ಳೆಯವರಾದರೂ ಸಮಾಜ ಕೆಟ್ಟುಹೋಗಿದೆ. ಒಬ್ಬನ ಕುರ್ಚಿಯನ್ನು ಇನ್ನೊಬ್ಬ ಎಳೆದು ಬೀಳಿಸುವಂತಹ ಕಾಲವಿದು. ನಾವು ಮುಂದಕ್ಕೆ ಹೋಗುವ ಅವಸರದಲ್ಲಿ ಹಿಂದಿನ ಜನರನ್ನು ಬಿಟ್ಟುಹೋದರೆ..?"
(ಶಾಹಿದ್ ಹೇಳುತ್ತಿದ್ದ ಒಂದೊಂದು ಮಾತಿನಲ್ಲೂ ಅರ್ಥವಿತ್ತು. ಆದರೆ ಹಫ್ಸ ಮತ್ತು ಶಾಜಹಾನ್'ನ ಜೀವನ, ಸಾಜಿದಾಳ ಅಸಹಾಯಕತೆ, ಮುಸ್ತಫಾರ ಸಂಕಷ್ಟ, ಅಮ್ಮನ ಈ ಚುಚ್ಚುಮಾತುಗಳು ಎಲ್ಲವೂ ತನ್ನ ಕಣ್ಣೆದುರೇ ಕಾಣುತ್ತಿದ್ದವು.)
"ಇಲ್ಲ ಶಾಹಿದ್, ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ. ಸಾಜಿದಾಳ ಮದುವೆ ನಿನ್ನ ಮಾವನೊಂದಿಗೂ, ಹಫ್ಸಳ ಮದುವೆ ಶಾಜಹಾನ್'ನೊಂದಿಗೂ ನಡೆಯಲೇಬೇಕು. ಅವರಿಂದ ಈ ಮನೆಯಲ್ಲಿ ಮಕ್ಕಳ ಶಬ್ದ ಕೇಳಿಯಾದರೂ ನನ್ನ ಬಾಳು ಸಂತಸವಾಗಲಿ. ಬಂಜೆ ಬಂಜೆ ಅಂತ ಕೇಳಿ ಕೇಳಿ ಸುಸ್ತಾಯ್ತು. ಇನ್ನೂ ಕೂಡ ನನಗೆ ಆ ಮಾತನ್ನ ಕೇಳಲಸಾಧ್ಯ. ಸಾಕು ಶಾಹಿದ್, ಇನ್ನೇನೂ ಹೇಳಬೇಡ. ದೊಡ್ಡವರೊಂದಿಗೆ ಮರ್ಯಾದೆ, ಗೌರವ ಎಲ್ಲವನ್ನೂ ಶಿಸ್ತಾಗಿ ಪಾಲಿಸಬೇಕು. ಏನೆಲ್ಲಾ ಮಾತಾಡಿ ಅವರ ಶಾಪಕ್ಕೆ ಬಲಿಯಾಗಬೇಡ. ಸಹನೆಯಿದ್ದರೆ ನಾವು ಇಹಪರದಲ್ಲಿ ಯಶಸ್ವಿಯಾಗಬಹುದು." ನೂರ್'ಜಹಾನ್'ಗೆ ಅರಿವಿಲ್ಲದಂತೆಯೇ ಕಣ್ಣೀರು ಬಂತು. ಅವಳ ದುಃಖವನ್ನಿರಿತ ಶಾಹಿದ್ ಏನೂ ಮಾತಾಡದೆ "ಸರಿ, ನಾನು ಆಸ್ಪತ್ರೆಗೆ ಹೋಗಿ ಬರುತ್ತೇನೆ... ಹಫ್ಸ ಹೇಗಿದ್ದಾಳೋ ಏನೋ?.."
ಮೂಲ ಲೇಖಕರು:
ಜೆ. ಮುಹಮ್ಮದ್ ಫಾರೂಕ್ ಪಾಣೆಮಂಗಳೂರು
ಕಾರ್ಯನಿರ್ವಾಹಕರು:
(ಇಸ್ಲಾಮಿಕ್ ಚರಿತ್ರೆ ಸಮೂಹ ಗ್ರೂಪ್)
Copyright©
NOOR-UL-FALAH ORGANIZATION(R)
Next
ReplyDeleteBh
ReplyDeleteNext update plzz...
ReplyDeleteNext
ReplyDeleteNext next next next 😡😡😡😡🤬🤬😡😡😡😑😡😡🥵🥵😡😑🥵🥵😑
ReplyDeleteNext 🤯 🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵🥵😠😡😠🥵🥵
ReplyDeleteNext update plzzz
ReplyDelete