ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 138
ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 138
صِبْغَةَ ٱللَّهِ ۖ وَمَنْ أَحْسَنُ مِنَ ٱللَّهِ صِبْغَةًۭ ۖ وَنَحْنُ لَهُۥ عَٰبِدُونَ
ಅರ್ಥ:⤵️
▪️ಅಲ್ಲಾಹನ ಧರ್ಮದ ನಿಜ ಬಣ್ಣವನ್ನು ನಮಗವನು ನೀಡಿರುತ್ತಾನೆ. ಅಲ್ಲಾಹನಿಗಿಂತ ಶ್ರೇಷ್ಟ ವರ್ಣದಾತರು ಯಾರಿದ್ದಾರೆ? ⁷¹ ನಾವು ಆತನಿಗೆ ಮಾತ್ರ ಆರಾಧಿಸುವೆವು (ಎಂದು ಹೇಳಿರಿ).
ವಿವರಣೆ:⤵️
71.136ನೇ ಆಯತ್‍ನಲ್ಲಿರುವ “ನಾವು ವಿಶ್ವಾಸವಿಟ್ಟಿರುವೆವು” ಎಂಬ ಮಾತಿಗೆ ಪುಷ್ಟೀಕರಣವಿದು. ಅಲ್ಲಾಹನು ನಮ್ಮನ್ನು ಅವನ ಸತ್ಯಧರ್ಮವಾದ ಇಸ್ಲಾಮ್ ಎಂಬ ಬಣ್ಣದಲ್ಲಿ ಮುಳುಗಿಸಿರುತ್ತಾನೆ ಎಂದರ್ಥ. ಇಲ್ಲಿ ಅಲ್ಲಾಹನ ಬಣ್ಣ ಎಂಬುದು ಅಲಂಕಾರಿಕ ಪದ. ವಸ್ತ್ರದಲ್ಲಿ ಬಣ್ಣವು ಎದ್ದುಕಾಣುವಂತೆ ಮುಸ್ಲಿಮನಲ್ಲಿ ಅಲ್ಲಾಹನ ಪರಿಶುದ್ಧ, ತಾಜಾ ಧರ್ಮವಾದ ಇಸ್ಲಾಮ್ ಎದ್ದುಕಾಣುತ್ತಿರುವುದು ಇಲ್ಲಿನ ಉಪಮೆಯ ಸಮಾನ ಧರ್ಮ. ಕ್ರೈಸ್ತರು ಮಕ್ಕಳನ್ನು ಹಳದಿ ಜಲದಲ್ಲಿ ಮುಳುಗಿಸುವ ‘ಮಾಮೊದಿ’ (ಜ್ಞಾನಸ್ನಾನ) ಎಂಬ ರೂಢಿಯೊಂದಿದೆ. ಹಾಗೆ ಮುಳುಗಿಸಿದರೆ ಆ ಮಗು ನಿಜವಾದ ಕ್ರೈಸ್ತನಾಯಿತು ಎಂದು ನಂಬಿಕೆ. ಆದ್ದರಿಂದ ಅಲ್ಲಾಹನ ಇಸ್ಲಾಮ್ ಎಂಬ ಬಣ್ಣ ಅದಕ್ಕಿಂತ ಶ್ರೇಷ್ಠ ಎಂಬ ಆಶಯಕ್ಕಾಗಿ ಇಲ್ಲಿ ಅಲ್ಲಾಹನು ಬಣ್ಣದ ಉಪಮೆ ಮಾಡಿರುತ್ತಾನೆ. ಪವಿತ್ರವೂ ಶುದ್ಧವೂ ಆದ ಪ್ರಕೃತಿಯಲ್ಲಿ ಅಲ್ಲಾಹನು ಮನುಷ್ಯನನ್ನು ಸೃಷ್ಟಿಸಿರುವನು. ಉತ್ತಮಿಕೆಯನ್ನು ಇಷ್ಟಪಡುವ, ಕೃತಿಮತೆ ಇಲ್ಲದ ಶುದ್ಧ ಪ್ರಕೃತಿ ಅದು. ಇದೇ ಇಸ್ಲಾಮ್ ಪ್ರಕೃತಿ. ಶೈಶವದ ಹಂತದಿಂದಲೇ ಇದನ್ನು ಕಲುಷಿತಗೊಳಿಸುವ ಪರಿಸರಗಳಿಂದ ಮನುಷ್ಯನು ದೂರ ನಿಲ್ಲಬೇಕು ಹಾಗೂ ನಿಲ್ಲಿಸಬೇಕು. ಅಂದಮೇಲೆ ಮನಸಾ ವಾಚಾ ಕರ್ಮಣ ಅವರು ಉತ್ತಮಿಕೆಯನ್ನು ಅನುಸರಿಸಬಲ್ಲರು ಮತ್ತು ಕೆಡುಕನ್ನು ಅನಿಷ್ಟಪಡಬಲ್ಲರು. ಈ ಪ್ರಕೃತಿ ಗುಣವು ಅವನ ಎಲ್ಲ ಕಾರ್ಯಗಳಲ್ಲಿ ಒಂದು ಬಣ್ಣದಂತೆ ಪ್ರಕಟಗೊಳ್ಳುವುದರಿಂದ ಅದನ್ನು ಕಲುಷಿತಗೊಳಿಸದೆ ಕಳಂಕಗೊಳಿಸದೆ ಯಥಾಸ್ಥಿತಿಯನ್ನು ಕಾಪಾಡಬೇಕಾಗಿದೆ. (ತಲ್ಖೀಸುಲ್ ಬಯಾನ್ 11)
ಸಂ: ✒️ಅಬೂರಿಫಾನ ಕುಂದಾಪುರ
Comments
Post a Comment