ಅಹಂಕಾರ
ಅಹಂಕಾರ
ಮನುಷ್ಯರ ಹೃದಯಗಳಿಗೆ ಹಲವಾರು ರೋಗಗಳು ಭಾದಿಸುತ್ತವೆ. ಅವು ಔಷಧಿಯ ಮೂಲಕ ಗುಣವಾಗುವಂಥದ್ದಲ್ಲ. ಶಸ್ತ್ರಕ್ರಿಯೆ ನಡೆಸಿ ನಿವಾರಿಸುವಂಥದ್ದಲ್ಲ. ಆತ್ಮ ನಿಯಂತ್ರಣವು ಆ ರೋಗಗಳಿಗೆ ಮದ್ದಾಗಿದೆ. ಅವುಗಳ ಪೈಕಿ ಅಹಂಕಾರವೂ ಒಂದಾಗಿದೆ. ಇದು ಓರ್ವ ವಿಶ್ವಾಸಿಯ ಸತ್ಕರ್ಮಗಳನ್ನು ನಾಶ ಪಡಿಸುತ್ತದೆ. ಅವನ ಸ್ವರ್ಗ ಪ್ರವೇಶಕ್ಕೆ ಕಂಟಕವಾಗುತ್ತದೆ. ಅಹಂಕಾರವು ಓರ್ವನಲ್ಲಿ ಮನೆ ಮಾಡಿಕೊಂಡಿದ್ದರೆ ಅವನ ಸುತ್ತಮುತ್ತಲಿರುವವರು ಅವನಿಗೆ ಕುಬ್ಜರಾಗಿ ತೋರುತ್ತಾರೆ. ಅವರ ಮುಂದೆ ತಾನು ದೊಡ್ಡವನು ಎಂಬ ಒಣ ಜಂಬವು ರೂಪುಗೊಳ್ಳುತ್ತದೆ. ಜನರನ್ನು ಕೇವಲವಾಗಿ ನೋಡುವುದು ಅಹಂಕಾರದ ಭಾಗವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,
“ಸತ್ಯವನ್ನು ನಿರಾಕರಿಸುವುದು ಮತ್ತು ಜನರನ್ನು ಕ್ಷುಲ್ಲಕವಾಗಿ ಪರಿ ಗಣಿಸುವುದು ಅಹಂಕಾರವಾಗಿದೆ.”
ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅಹಂಕಾರವು ಅವನ ಪದವಿಯನ್ನು ಪತನಗೊಳಿಸುತ್ತದೆ. ಗತಕಾಲಗಳಲ್ಲಿ ಜೀವಿಸಿದ್ದ ದೊಡ್ಡ ದೊಡ್ಡ ವ್ಯಕ್ತಿತ್ವಗಳು ತಮ್ಮ ಅಹಂಕಾರದಿಂದಾಗಿ ನಾಶ ಹೊಂದಿದ ಹಲವಾರು ಘಟನೆಗಳಿಗೆ ಇತಿಹಾಸವೇ ಸಾಕ್ಷಿ. ಕುರ್‍ಆನ್ ಅಂಥವರ ಕುರಿತು ಹಲವಾರು ಕಡೆಗಳಲ್ಲಿ ವಿವರಿಸಿದೆ. ಕುರ್‍ಆನ್ ಇವುಗಳನ್ನು ವಿವರಿಸಿದ್ದು ಮನುಷ್ಯರು ಪಾಠ ಕಲಿಯಲಿಕ್ಕಾಗಿದೆ. ಆದರೆ ಇಂದು ಜನರು ಕುರ್‍ಆನ್ ಓದುತ್ತಿದ್ದರೂ, ಕಲಿಯುತ್ತಿದ್ದರೂ ಅದರ ಬೋಧನೆಗಳ ಪ್ರಕಾರ ವರ್ತಿಸುತ್ತಿಲ್ಲ. ಕುರ್‍ಆನ್ ವಿವರಿಸಿದ ಘಟನೆಗಳೆಲ್ಲಾ ಇಂದು ಜನರಿಗೆ ರೋಮಾಂಚಕಾರಿ ಕಥೆಗಳಾಗಿ ಬದಲಾಗಿವೆ.
ಇಂದು ಜನರು ಹಲವಾರು ಸತ್ಕರ್ಮಗಳನ್ನು ಮಾಡುತ್ತಾರೆ. ಮಹಾ ದಾನಿಗಳು ಈ ಸಮಾಜದಲ್ಲಿ ಬೇಕಾದಷ್ಟಿದ್ದಾರೆ. ಆದರೆ ಈ ದಾನ-ಧರ್ಮಗಳ ಹೆಸರಿನಲ್ಲಿ ತನ್ನನ್ನು ಎಲ್ಲರೂ ದೊಡ್ಡ ವ್ಯಕ್ತಿ ಎಂದು ಗೌರವಿಸಬೇಕು ಎಂಬ ಚಿಂತೆಯು ಹೃದಯದಲ್ಲಿ ವೊಳಕೆಯೊಡೆದರೆ ಅವನ ಸತ್ಕರ್ಮಗಳು ವ್ಯರ್ಥವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾತ್ರವಲ್ಲ, ಅಂತಹ ಸತ್ಕರ್ಮಗಳನ್ನೆಸಗಿ ಅಹಂಕಾರ ಪಟ್ಟದ್ದಕ್ಕೆ ಶಿಕ್ಷೆ ಯನ್ನೂ ಅನುಭವಿಸುವನು.
ಸಮಾಜದಲ್ಲಿರುವ ಹೆಚ್ಚಿನ ಮಂದಿಯಲ್ಲಿ ಅಲ್ಪವಾದರೂ ಅಹಂಕಾರವಿರುತ್ತದೆ. (ವಿಶೇಷತಃ ನೇತಾರರಲ್ಲೂ ವಿದ್ವಾಂಸರಲ್ಲೂ) ಗತಕಾಲಗಳಲ್ಲಿ ಪ್ರವಾದಿಗಳು ಆಗಮಿಸಿದಾಗ ಜನರು ಅವರನ್ನು ನಿಷೇಧಿಸಲು ಕಾರಣ ಸ್ವಂತದ ಕುರಿತಾದ ದುರಭಿಮಾನವೂ ಅಹಂಕಾರವೂ ಆಗಿದೆ. ಓರ್ವನ ಮನಸ್ಸಿನಲ್ಲಿ ನಾನು ಎಂಬ ಆಲೋಚನೆ ಬಂದರೆ ಅದು ಅಹಂಕಾರದ ಲಕ್ಷಣವಾಗಿದೆ..
============================
ಕೆಎಂ ಜಲೀಲ್ ಕುಂದಾಪುರ
ಕಾರ್ಯನಿರ್ವಾಹಕರು:
ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)
Comments
Post a Comment