ರಮಳಾನ್ ಸಂಶಯಗಳಿಗೆ ಉತ್ತರ
ರಮಳಾನ್ : ವಿಶೇಷ ಲೇಖನಗಳು
ಸಂಶಯಗಳಿಗೆ ಉತ್ತರ
1. ರಮಳಾನ್ ಉಪವಾಸ ಕಡ್ಡಾಯವಾದದ್ದು ಹಿಜ್ರ:ದ ಎಷ್ಟನೇ ವರ್ಷದಲ್ಲಿ?
=ಹಿಜ್ರ:2ನೇ ವರ್ಷ ಶಅಬಾನ್ ತಿಂಗಳಲ್ಲಿ ಉಪವಾಸ ಕಡ್ಡಾಯವಾಯಿತು.
2. ಪ್ರವಾದಿ (ಸ)ರು ಎಷ್ಟು ವರ್ಷಗಳ ಕಾಲ ರಮಳಾನ್ ಉಪವಾಸ ಆಚರಿಸಿದ್ದಾರೆ?
=ಒಂಭತ್ತು ವರ್ಷಗಳು.
3. ಪ್ರವಾದಿ(ಸ)ರಿಗೆ ತನ್ನ ಜೀವನದಲ್ಲಿ ಎಷ್ಟು ಸಲ ರಮಳಾನ್ ಮೂವತ್ತು ದಿನಗಳ ಪೂರ್ತಿ ಉಪವಾಸ ಸಿಕ್ಕಿದೆ?
= ಒಮ್ಮೆ ಮಾತ್ರ.
4. ರಮಳಾನಿನ ಉಪವಾಸ ಪ್ರವಾದಿ(ಸ)ರ ಉಮ್ಮತಿಗಳಿಗೆ ಮಾತ್ರ ವಿರುವಂತದ್ದೇ? ಇಲ್ಲವೇ ಗತಕಾಲ ಪ್ರವಾದಿಗಳ ಸಮುದಾಯದವರಿಗೂ ಇತ್ತೇ?
= ಗತಕಾಲ ಪ್ರವಾದಿಗಳ ಸಮುದಾಯದವರಿಗೂ ಉಪವಾಸ ಕಡ್ಡಾಯವಿತ್ತು.ಆದರೆ ರಮಳಾನಿನ ಉಪವಾಸ ಪ್ರವಾದಿ( ಸ)ರ ಉಮ್ಮತಿಗಳಿಗೆ ಮಾತ್ರವಿರುವ ಉಪವಾಸವಾಗಿದೆ.
5. ರಮಳಾನ್ ತಿಂಗಳಲ್ಲಿ ಉಪವಾಸ ಮಾಡದವರು ಮುರ್ತದ್ದ್ (ಧರ್ಮ ಭ್ರಷ್ಟ) ಆಗುತ್ತಾರೆಯೇ?
=ಉಪವಾಸ ಮಾಡದ ಕಾರಣದಿಂದ ಮುರ್ತದ್ದ್ ಆಗುವುದಿಲ್ಲ.
6. ರಮಳಾನ್ ತಿಂಗಳ ಉಪವಾಸ ಕಡ್ಡಾಯವಿಲ್ಲವೆಂದು ಹೇಳಿದರೆ ಅಥವಾ ವಿಶ್ವಾಸವಿರಿಸಿದರೆ ಅವರು ಮುರ್ತದ್ದ್ ಆಗುತ್ತಾರೆಯೇ?
= ಹೌದು. ಅವರು ಮುರ್ತದ್ದ್ ಅಂದರೆ ಇಸ್ಲಾಮಿನಿಂದ ಹೊರಕ್ಕೆ ಆಗುತ್ತಾರೆ.
7. ಓರ್ವ ರಮಳಾನ್ ತಿಂಗಳ ಉಪವಾಸ ನಿರ್ವಹಿಸುತ್ತಿದ್ದು ಆದರೆ ಅದು ಇಸ್ಲಾಮಿನಲ್ಲಿ ಕಡ್ಡಾಯವಾದ ಕರ್ಮ ಎಂಬ ನಂಬಿಕೆ ಇಲ್ಲದಿದ್ದರೆ ಆತನ ಉಪವಾಸದ ವಿಧಿಯೇನು ?
= ಇಜ್ ಮಾಅ (ಇಮಾಮರ ಏಕಾಭಿಪ್ರಾಯ)ಹಾಗೂ ದೀನಿನಲ್ಲಿ ಅನಿವಾರ್ಯವಾಗಿ ತಿಳಿಯಲ್ಪಟ್ಟ ಒಂದು ಕಾರ್ಯವಾಗಿದೆ ರಮಳಾನಿನ ಕಡ್ಡಾಯ ಉಪವಾಸ. ಅದು ಖುರ್ ಆನ್ ಹಾಗೂ ಹದೀಸುಗಳಿಂದ ಸಾದಾರಗೊಂಡದ್ದಾಗಿದೆ.ಅಂತಹ ಒಂದು ನಿಯಮವನ್ನು ಕಡ್ಡಾಯವಿಲ್ಲವೆಂದು ನಂಬಿದರೆ ಆತ ಮುರ್ತದ್ದ್ ಆಗಿಬಿಡುತ್ತಾನೆ.ಈ ನೆಲೆಯಲ್ಲಿ ಆತ ರಮಳಾನ್ ಉಪವಾಸ ಆಚರಿಸುವುದಕ್ಕೆ ಯಾವುದೇ ಅರ್ಥವಿಲ್ಲ.ವಿಶ್ವಾಸವೇ ಸರಿಯಿಲ್ಲದ ಮೇಲೆ ಕರ್ಮಗಳು ಸಿಂಧುವಾಗುವುದಾದರೂ ಹೇಗೆ?ಆದುದರಿಂದ ವಿಶ್ವಾಸ ದೃಡವಾಗಿರಬೇಕು.ಆ ನಂಬಿಕೆಯ ಮೇಲೆ ಕರ್ಮಗಳು ನೆಲೆನಿಲ್ಲಬೇಕು.
8. ರಮಳಾನ್ ಉಪವಾಸ ಕಡ್ಡಾಯವಿಲ್ಲವೆಂದು ವಾದಿಸಿ ಮುರ್ತದ್ದ್ ಆದ ವ್ಯಕ್ತಿ ಇಸ್ಲಾಮಿಗೆ ಮರಳಬೇಕಾದರೆ ತೌಬ: ಸಾಕೇ?
= ಇಲ್ಲ. ಆತ ನಿಷೇಧಿಸಿದ ಕಾರ್ಯದಲ್ಲಿ ಪೂರ್ಣ ವಿಶ್ವಾಸವಿರಿಸಿ ಶಹಾದತ್ ಕಲಿಮ ಹೇಳಿ ಇಸ್ಲಾಮಿಗೆ ಮರಳಬೇಕು.ತೌಬ ಏನಿದ್ದರೂ ನಂತರ.ಇಸ್ಲಾಮಿಗೆ ಮರಳುವುದಕ್ಕಿಂತ ಮುಂಚೆ ತೌಬ ಸಿಂಧುವಾಗದು.
9. ಕಾರಣವಿಲ್ಲದೆ ಉಪೇಕ್ಷಿಸಿದ ರಮಳಾನ್ ಉಪವಾಸಕ್ಕೆ ನಿರ್ವಹಿಸಬೇಕಾದ ತೌಬ:ದ ಕುರಿತು ವಿವರಿಸುವಿರಾ ?
= ಆತ ಉಪವಾಸವನ್ನು ರಮಳಾನ್ ಬಳಿಕ ತ್ವರಿತವಾಗಿ ಖಳಾಅ ಪೊರೈಸಬೇಕು. ನಂತರ ತನ್ನಿಂದ ಉಂಟಾದ ತಪ್ಪಿಗಾಗಿ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಡಬೇಕು.
10. ರಜಬ್ ತಿಂಗಳ 29ರಂದು ಒಬ್ಬನಿಗೆ ಚಂದ್ರ ದರ್ಶನವಾಯಿತು.ಆ ವ್ಯಕ್ತಿ ಆ ವಿಷಯ ಯಾರಿಗೂ ತಿಳಿಸಲಿಲ್ಲ. ಇಲ್ಲವೇ ಫಾಸಿಖ್ ಆದ ಕಾರಣ ಅವನ ಮಾತು ಯಾರೂ ಕಿವಿಗೊಡಲಿಲ್ಲ.ಬೇರೆ ಯಾರಿಗೂ ಚಂದ್ರದರ್ಶನ ಆಗದ ಕಾರಣ ಅವರೆಲ್ಲರೂ ರಜಬ್ 30 ಪೂರ್ತಿ ಮಾಡಿ ಶಅಬಾನ್ ತಿಂಗಳನ್ನು ಲೆಕ್ಕ ಹಾಕಿದರು.ನಂತರ ಶಅಬಾನ್ 29 ಕಳೆದು 30ರ ರಾತ್ರಿ ಎಲ್ಲಿಯೂ ಚಂದ್ರ ದರ್ಶನವಾಗಲಿಲ್ಲ.ಆದ್ದರಿಂದ ಅವರೆಲ್ಲರೂ ಶಅಬಾನ್ 30 ಭರ್ತಿ ಎಂದು ಗಣಿಸಿದರು. ಆ ವೇಳೆ ಆ ವ್ಯಕ್ತಿಗೆ 30 ಪೂರ್ತಿಯಾಗಿ 31ನೇ ರಾತ್ರಿಯಾಗುತ್ತದೆ.ಹಾಗಾದರೆ ಆತ ಮರುದಿನ ರಮಳಾನ್ ಒಂದು ಎಂದು ಪರಿಗಣಿಸಿ ಉಪವಾಸ ನಿರ್ವಹಿಸಬೇಕೇ?ಬೇಡವೇ?
=ಆ ವ್ಯಕ್ತಿ ಆ ದಿನವನ್ನು ಶಅಬಾನ್ ಆಗಿ ಪರಿಗಣಿಸಲು ಆಗದು.ಊರವೆಲ್ಲರೂ ಆ ದಿನವನ್ನು ಶಅಬಾನ್ ಆಗಿ ಪರಿಗಣಿಸಿ ಮರುದಿನ ರಮಳಾನ್ ಉಪವಾಸ ಆರಂಭಿಸಿದರೂ ಆ ವ್ಯಕ್ತಿ ಆ ದಿನದಂದೇ ರಮಳಾನ್ ಉಪವಾಸ ಆರಂಭಿಸುವುದು ಕಡ್ಡಾಯವಾಗುತ್ತದೆ.
11. ರಮಳಾನ್ ಚಂದ್ರದರ್ಶನ ವಾಗಿದೆ ಎಂದು ಖಾಝಿರವರು ಘೋಷಿಸಿದರೆ ಉಪವಾಸ ಕಡ್ಡಾಯವಾಗುತ್ತದೆಯೇ?
=ಹೌದು ಕಡ್ಡಾಯವಾಗುತ್ತದೆ.
12. ರಮಳಾನ್ ಆಗಿದೆಯೆಂದು ಖಾಝಿರವರು ಘೋಷಿಸಬೇಕಾದರೆ ಆರ ಬಳಿಯಲ್ಲಿ ಎಷ್ಟು ಮಂದಿ ಚಂದ್ರ ದರ್ಶನದ ಬಗ್ಗೆ ಸಾಕ್ಷ್ಯ ನುಡಿಯಬೇಕು ?
=ಪ್ರಾಯಪೂರ್ತಿಯಾದ ಬುದ್ಧಿಯಿರುವ ಸ್ವತಂತ್ರನೂ ನೀತಿವಂತನೂ ಆದ ಓರ್ವ ಪುರುಷ ಸಾಕ್ಷ್ಯ ನುಡಿಯಬೇಕು.
13. ಪೆರ್ನಾಳ್ ಚಂದ್ರ ದರ್ಶನ ಸಾಕ್ಷಿಯಾಗಿ ಒಬ್ಬನೇ ಸಾಕೇ?
= ಇಲ್ಲ. ಒಬ್ಬ ಸಾಲದು. ಇಬ್ಬರು ಸಾಕ್ಷಿಗಳು ಬೇಕಾಗುತ್ತದೆ.
14. ಇತರ ತಿಂಗಳುಗಳ ಕುರಿತು ತೀರ್ಮಾನಿಸಬೇಕಾದರೆ ಎಷ್ಟು ಸಾಕ್ಷಿಗಳು ಬೇಕು?
= ರಮಳಾನ್ ಅಲ್ಲದ ಯಾವುದೇ ತಿಂಗಳು ದೃಡಪಡಿಸಬೇಕಾದರೆ ಎರಡು ಸಾಕ್ಷಿಗಳು ಬೇಕು.ಒಂದು ಸಾಕ್ಷಿ ಸಾಕು ಎಂಬುದು ರಮಳಾನ್ ತಿಂಗಳ ದೃಡೀಕರಣಕ್ಕೆ ಮಾತ್ರ ಇರುವ ಪ್ರತ್ಯೇಕತೆಯಾಗಿದೆ.
15. ಸ್ತ್ರೀಯರು ಸಾಕ್ಷಿ ನುಡಿದರೆ ಸಾಲದೇ?
= ಇಲ್ಲ. ಸಾಲದು. ಅವರ ಸಾಕ್ಷಿ ಮೂಲಕ ದೃಢಪಡಿಸುವಂತಿಲ್ಲ.
16. ಪ್ರೌಢಾವಸ್ಥೆಗೆ ತಲುಪಿದ ಬುದ್ದಿಯಿರುವ ಎಲ್ಲಾ ಪುರುಷರ ಸಾಕ್ಷ್ಯ ಸ್ವೀಕರಿಸಲಾಗುವುದೇ?
= ಅವರ ಆದಿಲ್ (ನೀತಿವಂತ)ರಾಗಬೇಕು.ಫಾಸಿಖನ ಸಾಕ್ಷ್ಯ ಸ್ವೀಕರಿಸಲಾಗುವುದಿಲ್ಲ.
17. ಫಾಸಿಖ್ , ಆದಿಲ್ ಅಂದರೆ ಯಾರು?
= ಕಬೀರತ್ (ದೊಡ್ಡ ತಪ್ಪು)ಮಾಡಿದವನು ಹಾಗೂ ಸಣ್ಣ ತಪ್ಪುಗಳನ್ನು ವಾಡಿಕೆ ಮಾಡಿಕೊಂಡಿರುವವನು ಅದರಿಂದ ಮುಕ್ತರಾಗಿ ತೌಬ: ಮಾಡಿರದ ಕಾಲದಲ್ಲೆಲ್ಲಾ ಫಾಸಿಖ್ ಆಗಿರುತ್ತಾನೆ.
ಕಬೀರತ್ ನಿಂದ ಮುಕ್ತವಾದವನು ಹಾಗೂ ಸಣ್ಣ ತಪ್ಪುಗಳನ್ನು ವಾಡಿಕೆ ಮಾಡದಿರುವವನು ಆದಿಲ್ ಆಗಿರುತ್ತಾನೆ.
18. ವೈಜ್ಞಾನಿಕವಾಗಿ ಚಂದ್ರ ದರ್ಶನ ದೃಢಪಡಿಸಬಾರದೇ ? ಆ ದೃಷ್ಟಿಯಲ್ಲಿ ರಮಳಾನ್ ಆಗಮನ ಸಾರಬಾರದೇ ?
= ಇಲ್ಲ.ಈ ವಿಚಾರವನ್ನು ವಿದ್ವಾಂಸರು ವ್ಯಕ್ತವಾಗಿ ತಮ್ಮ ಗ್ರಂಥಗಳಲ್ಲಿ ತಿಳಿಸಿರುತ್ತಾರೆ.
19. ದೂರದರ್ಶನದ ಮೂಲಕ ಕಂಡರೆ ಸ್ವೀಕರಿಸಬಾರದೇ ?
= ಅದು ಕೂಡಾ ಸ್ವೀಕರಿಸಲಾಗುವುದಿಲ್ಲ.ಸೂರ್ಯಾಸ್ತಮಾನದ ನಂತರ ಬರಿಗಣ್ಣಿಗೆ ಕಂಡರೆ ಮಾತ್ರ ಗಣನೆಗೆ ತೆಗೆಯಲಾಗುತ್ತದೆ.
20. ಒಬ್ಬಳು ಮಹಿಳೆಗೆ ಚಂದ್ರ ದರ್ಶನವಾಯಿತು. ಅಲ್ಲಿ ಪುರುಷರಿಗೆ ಯಾರಿಗೂ ಚಂದ್ರ ಕಾಣಲಿಲ್ಲ.ಹಾಗಾದರೆ ಖಾಝಿಯವರ ಬಳಿ ಅದು ಸ್ವೀಕಾರ್ಹವಾಗದಿರುವುದರಿಂದ ರಮಳಾನ್ ಸಾರುವಂತಿಲ್ಲ ತಾನೆ.ಚಂದ್ರದರ್ಶನವಾದ ಆ ಮಹಿಳೆ ಉಪವಾಸ ಆಚರಿಸಬೇಕೇ ?
= ಚಂದ್ರದರ್ಶನ ದೃಢೀಕರಿಸಲು ಸ್ವೀಕಾರ್ಹವಲ್ಲದ ಮಹಿಳೆ, ಗುಲಾಮ, ಫಾಸಿಖ್ ಮೊದಲಾದವರಿಗೆ ಚಂದ್ರ ದರ್ಶನವಾದರೆ ಆ ಆಧಾರದ ಮೇರೆಗೆ ಖಾಝಿರವರು ರಮಳಾನ್ ಎಂದು ದೃಢಪಡಿಸದಿದ್ದರೂ ಚಂದ್ರನನ್ನು ಕಂಡ ಮಹಿಳೆ, ಗುಲಾಮ ಹಾಗೂ ಫಾಸಿಖರಿಗೆ ಉಪವಾಸ ಕಡ್ಡಾಯವಾಗುತ್ತದೆ.ಅದೇ ಪ್ರಕಾರ ಅವರು ಹೇಳಿದ್ದು ಸತ್ಯವೆಂದು ವಿಶ್ವಾಸವಿರುವವರಿಗೂ ಉಪವಾಸ ಕಡ್ಡಾಯವಾಗುತ್ತದೆ.
21.ಉಪವಾಸದ ಫರ್ ಳುಗಳು ಎಷ್ಟು? ಯಾವುದೆಲ್ಲಾ?
= ಉಪವಾಸದ ಫರ್ ಳುಗಳು ಎರಡು.
1.ನಿಯ್ಯತ್
2.ಉಪವಾಸಕ್ಕೆ ಭಂಗವನ್ನುಂಟುಮಾಡುವ ಎಲ್ಲಾ ಕಾರ್ಯಗಳನ್ನು ತ್ಯಜಿಸುವುದು.
22. ನಿಯ್ಯತ್ ಮಾಡಬೇಕಾದ ಸಮಯ ಯಾವಾಗ ?ಹಗಲು ಹೊತ್ತು ನಿಯ್ಯತ್ ಮಾಡಿದರೆ ಸಾಕಾಗುತ್ತದೆಯಾ?
= ನಿಯ್ಯತ್ ದೃಡಪಡಿಸಬೇಕಾದ ಹೊತ್ತು ರಾತ್ರಿ ವೇಳೆಯಾಗಿರುತ್ತದೆ. ಹಗಲು ಹೊತ್ತು ನಿಯ್ಯತ್ ಮಾಡಿದರೆ ಶಾಫೀ ಮದ್ಸ್ ಹಬ್ ಪ್ರಕಾರ ಉಪವಾಸ ಸಿಂಧುವಾಗುವುದಿಲ್ಲ.
23. ರಾತ್ರಿ ವೇಳೆ ನಿಯ್ಯತ್ ಮಾಡಬೇಕು ತಾನೆ.ಅದರ ಸಮಯ ತಿಳಿಸುವಿರಾ ?
= ಮಗ್ರಿಬ್ ನಿಂದ ಸುಬ್ ಹ್ ತನಕ.
24. ಸಹ್ರಿಗೆ (ಅತ್ತಾಳಕ್ಕೆ) ಎದ್ದಾಗ ನಿಯ್ಯತ್ ಮಾಡಿದರೆ ಸಾಕೇ ?
= ನಿಯ್ಯತ್ ಸುಬ್ ಹಿಕ್ಕಿಂತ ಮುಂಚೆ ಆದರೆ ಸಾಕು.ಆದ್ದರಿಂದ ಸಹ್ರಿ ನಡೆಸಿದ ನಂತರ ಸುಬ್ ಹಿಗೆ ಮುಂಚಿತವಾಗಿ ನಿಯ್ಯತ್ ಮಾಡಬಹುದು.
25. ಮಗ್ರಿಬ್ ಆದ ತಕ್ಷಣ ಉಪವಾಸ ತ್ಯಜಿಸುವುದಕ್ಕಿಂತ ಮುಂಚೆ ಮರುದಿನದ ಉಪವಾಸಕ್ಕಾಗಿ ನಿಯ್ಯತ್ ಮಾಡಿದರೆ ಸಿಂಧುವೇ ?
= ಆ ಹೊತ್ತು ನಿಯ್ಯತ್ ಮಾಡಿದರೂ ಸಾಕಾಗುತ್ತದೆ.ಕಾರಣ ಸೂರ್ಯಾಸ್ತಮಾನದಿಂದ ಸುಬ್ ಹ್ ವರೇಗೆ ಯಾವ ಹೊತ್ತಿನಲ್ಲೂ ನಿಯ್ಯತ್ ಮಾಡಬಹುದು.
26.ನಿಯ್ಯತ್ ಮಾಡಿದ ನಂತರ ಸಂಭೋಗದಲ್ಲಿ ಏರ್ಪಟ್ಟರೆ ನಿಯ್ಯತ್ ಬಾತಿಲ್ ಆಗುತ್ತದೆಯೇ ?
= ಇಲ್ಲ. ಸಂಭೋಗ ಮಾಡಿದರೆ ನಿಯ್ಯತ್ ಭಂಗವಾಗುವುದಿಲ್ಲ.
27. ಸುಬ್ ಹಿಗೆ ಸ್ವಲ್ಪ ಮುಂಚೆ ಋತುಸ್ರಾವ(ಹೈಳ್) ನಿಂತು ಸ್ನಾನ ಮಾಡಲು ಸಮಯಾವಕಾಶ ಸಾಕಾಗದಿದ್ದರೆ ಆಗ ಉಪವಾಸದ ನಿಯ್ಯತ್ ಮಾಡಿದರೆ ಆ ಉಪವಾಸ ಸಿಂಧುವಾಗುತ್ತದೆಯೇ?
= ಸಿಂಧುವಾಗುತ್ತದೆ.ಉಪವಾಸ ಸಿಂಧುವಾಗಲು ಕಡ್ಡಾಯ ಸ್ನಾನ ಮಾಡಬೇಕೆಂದಿಲ್ಲ. ಸ್ನಾನ ಮಾಡುವುದಕ್ಕಿಂತ ಮುಂಚೆಯೇ ನಿಯ್ಯತ್ ಮಾಡಿ ಉಪವಾಸ ಆರಂಭಿಸಬಹುದು.ನಮಾಝ್ ಕರ್ಮ ನಿರ್ವಹಿಸಲು ಕಡ್ಡಾಯ ಸ್ನಾನ ಮಾಡಿರಲೇ ಬೇಕು.ಆದರೂ ಸುಬ್ ಹಿಕ್ಕಿಂತ ಮುಂಚೆ ಕಡ್ಡಾಯ ಸ್ನಾನ ಮಾಡುವುದು ಸುನ್ನತ್.
28. ಸಮಯವಿದ್ದೂ ಸ್ನಾನ ಮಾಡದಿದ್ದರೆ ಮೇಲಿನ ವಿಧಿ ಅನ್ವಯಿಸುತ್ತದೆಯೇ ?
= ಹೌದು. ಇದೇ ವಿಧಿ ಅವರಿಗೂ ಅನ್ವಯಿಸುತ್ತದೆ.
29. ಸಂಭೋಗ ನಡೆಸಿ ಸುಬ್ ಹಿಕ್ಕಿಂತ ಮುಂಚೆ ಸ್ನಾನ ಮಾಡದಿದ್ದರೆ ಅವನ ಉಪವಾಸ ಸಿಂಧುವೇ ?
= ಸಿಂಧುವಾಗುತ್ತದೆ. ಮೇಲೆ ತಿಳಿಸಿದಂತೆ ಉಪವಾಸ ಸಿಂಧುವಾಗಲು ಕಡ್ಡಾಯ ಸ್ನಾನ ಮಾಡಿರಲೇ ಬೇಕೆಂದಿಲ್ಲ.
30. ಬ್ರೆಷ್ ಮಾಡುವಾಗ ಹಲ್ಲಿನ ಸಂಧಿನಿಂದ ರಕ್ತ ಹೊರಬಂದರೆ ವ್ರತ ಕೆಡುತ್ತದೆಯೇ ?
= ಇಲ್ಲ. ರಕ್ತ ಹೊರಬಂದ ಮಾತ್ರಕ್ಕೆ ವ್ರತ ಕೆಡುವುದಿಲ್ಲ.ಆದರೆ ರಕ್ತ ಬೆರೆತ ಉಗುಳನ್ನು ನುಂಗಿದರೆ ವ್ರತ ಕೆಡುತ್ತದೆ.
31. ಜೊಲ್ಲುರಸ(ಉಗುಳು ನೀರು) ನುಂಗುವುದರಿಂದ ಉಪವಾಸಕ್ಕೆ ಭಂಗವಾಗುತ್ತದೆಯೇ ?
= ಇತರ ಯಾವುದೇ ವಸ್ತು ಬೆರೆಯದ ಉಗುಳು ನೀರು ನುಂಗುವುದರಿಂದ ಉಪವಾಸಕ್ಕೆ ಕೇಡು ಸಂಭವಿಸದು.ಆದರೆ ಕಫ ನುಂಗಿದರೆ ಉಪವಾಸ ಕೆಡುತ್ತದೆ.
32. ಕೆಲವರು ಜೊಲ್ಲುರಸವನ್ನು ಉಗುಳುತ್ತಾ ಇರುತ್ತಾರೆ.ಉಪವಾಸವಿರುವಾಗ ಅದು ಕಡ್ಡಾಯವೇ ?
= ಜೊಲ್ಲುರಸ ನುಂಗಿದರೆ ಉಪವಾಸ ಕೆಡುತ್ತದೆಯೆಂಬುದು ಕೆಲವರ ತಪ್ಪು ಭಾವನೆಯಾಗಿದೆ.ಜೊಲ್ಲುರಸ ನುಂಗಿದರೆ ಉಪವಾಸ ಕೆಡುವುದಿಲ್ಲ.ಆದ್ದರಿಂದ ಉಗುಳು ನೀರನ್ನು ಉಗುಳುತ್ತಾ ಇರಬೇಕಾದ ಅಗತ್ಯವಿಲ್ಲ. ಮಾತ್ರವಲ್ಲ,ಯಾವಾಗಲೂ ಬಾಯಿಯ ನೀರನ್ನು ಉಗುಳುತ್ತಾ ಇದ್ದರೆ ಬಾಯಿ ಒಣಗಿ ಆಯಾಸ ಅಧಿಕವಾಗಲು ಕಾರಣವಾಗುತ್ತದೆ. ಅದರಿಂದ ಉಪವಾಸ ಕಷ್ಟ ವಾಗಲೂಬಹುದು.ಶರೀರಕ್ಕೆ ಇತರ ಹಾನಿ ಉಂಟಾಗಬಹುದು. ಆದ್ದರಿಂದ ಇತರ ಯಾವುದೇ ವಸ್ತು ಬೆರೆತಿರದ ಜೊಲ್ಲುರಸವನ್ನು ಉಗುಳುತ್ತಾ ಇರಬೇಕಾಗಿಲ್ಲ.
33. ಉಪವಾಸ ವೇಳೆ ಅನಿರೀಕ್ಷಿತವಾಗಿ ನೊಣ,ಸೊಳ್ಳೆ ಮೊದಲಾದ ಪ್ರಾಣಿಗಳು ಒಳ ಪ್ರವೇಶಿಸಿದರೆ ವ್ರತ ಕೆಡುತ್ತದೆಯೇ ?
= ನೊಣ, ಸೊಳ್ಳೆ ಮುಂತಾದ ಪ್ರಾಣಿಗಳು ಅನಿರೀಕ್ಷಿತವಾಗಿ ಒಳ ಹೊಕ್ಕರೆ ಉಪವಾಸಕ್ಕೆ ಕೇಡು ಉಂಟಾಗುವುದಿಲ್ಲ.ಆದರೆ ಅದರಿಂದ ಕಿರಿಕಿರಿ ಆಗುತ್ತಿದ್ದರೆ ಅದನ್ನು ವಾಂತಿ ಮಾಡುವುದರ ಮೂಲಕ ಇಲ್ಲವೇ ಇನ್ಯಾವುದಾದರೂ ಮಾರ್ಗದ ಮೂಲಕ ಹೊರ ತೆಗೆಯಬಹುದು.ಆಗ ವ್ರತ ಕೆಡುತ್ತದೆ. ನಂತರ ಖಳಾಅ ಪೊರೈಸಬೇಕು.
34. ನಾನು ಉಪವಾಸ ತ್ಯಜಿಸುತ್ತೇನೆ ಎಂದು ಒಬ್ಬ ಹಗಲು ಹೊತ್ತು ಮನಸ್ಸಿನಲ್ಲಿ ಭಾವಿಸಿದರೆ ಉಪವಾಸ ಭಂಗವಾಗುತ್ತದೆಯಾ ?
= ಇಲ್ಲ.
35. ಉಪವಾಸದ ವೇಳೆ ಮರೆತು ತಿಂದರೆ ಇಲ್ಲವೇ ಕುಡಿದರೆ ಉಪವಾಸ ಭಂಗವಾಗುತ್ತದೆಯಾ ?
= ಇಲ್ಲ.
36. ಇಂಜೆಕ್ಷನ್ ಕೊಡುವುದರಿಂದ ,ಗ್ಲೂಕೋಸ್ ಕೊಡುವುದರಿಂದ ಉಪವಾಸಕ್ಕೆ ಧಕ್ಕೆಯಾಗುತ್ತದೆಯೇ ?
=ಇಲ್ಲ. ಕಾರಣ ನೈಸರ್ಗಿಕ ( ತೆರೆದ)ದ್ವಾರದ ಮೂಲಕ ಜಡ ವಸ್ತು ಒಳ ಪ್ರವೇಶಿಸುವುದರಿಂದ ಮಾತ್ರ ಉಪವಾಸಕ್ಕೆ ಭಂಗವುಂಟಾಗುತ್ತದೆ.ಇಂಜೆಕ್ಷನ್ ಹಾಗೂ ಗ್ಲೂಕೋಸ್ ಸಾಮಾನ್ಯವಾಗಿ ಕೊಡುವುದು ತೆರೆದ ದ್ವಾರದ ಮೂಲಕ ಅಲ್ಲ ತಾನೆ.
37. ವಾಂತಿ ಮಾಡಿದರೆ ಉಪವಾಸ ಕೆಡುತ್ತದೆಯೇ ?
= ಅನಿರೀಕ್ಷಿತವಾಗಿ ವಾಂತಿ ಆಗಿಬಿಟ್ಟರೆ ವ್ರತಕ್ಕೆ ಭಂಗವಿಲ್ಲ.ಅದೇ ವೇಳೆ ಗಂಟಲಿಗೆ ಕೈ ಹಾಕಿ ಬೇಕಂತಲೇ ವಾಂತಿ ಮಾಡಿದರೆ ಉಪವಾಸ ಕೆಡುತ್ತದೆ.
ಅನಿರೀಕ್ಷಿತವಾಗಿ ವಾಂತಿ ಆಗಿಬಿಟ್ಟರೆ ತನ್ನ ಬಾಯಿಯನ್ನು ಸ್ವಚ್ಛವಾಗಿ ತೊಳೆಯುವುದು ಅತ್ಯಗತ್ಯ.ಕಾರಣ ವಾಂತಿಯಾಗಿ ಬಾಕಿಯುಳಿದ ಕೆಲವು ಅಂಶಗಳು ಬಾಯಿಯ ಒಳಗಡೆಯಿದ್ದು ಅದು ಗಂಟಲಿನ ಮೂಲಕ ಒಳಹೊಕ್ಕರೆ ಉಪವಾಸ ಭಂಗವಾಗುತ್ತದೆ.
38. ಅಡುಗೆ ಮಾಡುವಾಗ ಅದರ ರುಚಿಯನ್ನು ತಿಳಿಯಲು ಕೆಲವು ಮಹಿಳೆಯರು ಬಾಯಿಯಲ್ಲಿಟ್ಟು ರುಚಿ ನೋಡುವುದಿದೆ. ಅದು ಸರಿಯೇ ?
= ಕೇವಲ ಬಾಯಿಯಲ್ಲಿಟ್ಟು ಆಹಾರ ರುಚಿ ನೋಡುವುದರಿಂದ ಉಪವಾಸಕ್ಕೆ ಭಂಗವಾಗುವುದಿಲ್ಲ.ಆದರೆ ಆ ವೇಳೆ ಆಹಾರದ ಅಲ್ಪ ಅಂಶ ಕೂಡಾ ಒಳ ಪ್ರವೇಶಿಸಿದರೆ ಉಪವಾಸಕ್ಕೆ ಧಕ್ಕೆಯಾಗುತ್ತದೆ.
39. ರಸ್ತೆಯಲ್ಲಿ ನಡೆಯುತ್ತಿರುವಾಗ ವಾಹನಗಳ ಓಡಾಟ ಕಾರಣವಾಗಿ ಧೂಳೆದ್ದು ಆ ಧೂಳು ಅನಿರೀಕ್ಷಿತವಾಗಿ ಕೆಲವೊಮ್ಮೆ ಒಳಕ್ಕೆ ಹೋಗುವುದಿದೆ.ಇದರಿಂದ ಉಪವಾಸಕ್ಕೆ ಭಂಗವಾಗುತ್ತದೆಯಾ ?
= ಇಲ್ಲ.
40. ಉಪವಾಸದ ನೆನಪು ಇಲ್ಲದೆ ಒಬ್ಬ ಹೊಟ್ಟೆ ತುಂಬಾ ತಿಂದರೆ ಅವನ ಉಪವಾಸ ಭಂಗವಾಗುತ್ತದೆಯಾ ?
= ಹೊಟ್ಟೆ ತುಂಬಾ ತಿಂದರೂ ಇಲ್ಲವೇ ಸ್ವಲ್ಪ ತಿಂದರೂ ಮರೆತು ಎಂದಾದರೆ ಉಪವಾಸ ಭಂಗವಾಗುವುದಿಲ್ಲ.
41.ರಮಳಾನಿನ ಪ್ರಥಮ ರಾತ್ರಿ ಈ ರಮಳಾನಿನ ಎಲ್ಲಾ ಫರ್ಳ್ ಉಪವಾಸ ನಾನು ನಿರ್ವಹಿಸುತ್ತೇನೆ ಎಂದು ನಿಯ್ಯತ್ ಮಾಡಿದರೆ ಮತ್ತೆ ದಿನಾಲೂ ನಿಯ್ಯತ್ ಮಾಡಬೇಕಾಗಿಲ್ಲವೇ ? ಅದು ಸಾಕಾಗುತ್ತದೆಯಾ?
= ಶಾಫೀ ಮದ್ಸ್ ಹಬ್ ಪ್ರಕಾರ ಪ್ರತಿಯೊಂದು ರಾತ್ರಿಯೂ ನಿಯ್ಯತ್ ಮಾಡುವುದು ಕಡ್ಡಾಯ. ರಾತ್ರಿ ನಿಯ್ಯತ್ ಮಾಡದಿದ್ದರೆ ಉಪವಾಸ ಸಿಂಧುವಾಗದು.
ಜತೆಗೆ ರಮಳಾನಿನ ಪ್ರಥಮ ರಾತ್ರಿ ಈ ರಮಳಾನ್ ತಿಂಗಳು ಪೂರ್ಣವಾಗಿ ಫರ್ಳ್ ಉಪವಾಸ ನಾನು ನಿರ್ವಹಿಸುತ್ತೇನೆ ಎಂದು ನಿಯ್ಯತ್ ಮಾಡುವುದು ಶಾಫೀ ಮದ್ಸ್ ಹಬಿನಲ್ಲಿ ಸುನ್ನತ್ತಿದೆ. ಇದು ಯಾವುದಾದರೂ ಒಂದು ದಿನ ರಾತ್ರಿ ನಿಯ್ಯತ್ ಮಾಡಲು ಮರೆತರೆ ಇಮಾಂ ಮಾಲಿಕ್ (ರ)ರವರ ಮದ್ಸ್ ಹಬ್ ಪ್ರಕಾರ ನಮಗೆ ಉಪವಾಸ ಲಭಿಸಲಿಕ್ಕೋಸ್ಕರವಾಗಿದೆ.ಆ ದಿನದ ರಮಳಾನ್ ಉಪವಾಸ ನಮಗೆ ಇದರಿಂದ ಲಭಿಸುತ್ತದೆ.ಅಂದಿನ ದಿನದ ಉಪವಾಸ ಮಾಲಿಕೀ ಮದ್ಸ್ ಹಬ್ ಪ್ರಕಾರ ಎಂದು ನಾವು ಅವರನ್ನು ತಖ್ಲೀದ್ ಮಾಡ ಬೇಕು.
42.ಮಾಲಿಕೀ ಮದ್ಸ್ ಹಬ್ ತಖ್ಲೀದ್ ಮಾಡಿದರೆ ನಮ್ಮ ಉಪವಾಸ ಆ ಮದ್ಸ್ ಹಬ್ ಪ್ರಕಾರ ಆಗಬೇಕಲ್ಲವೇ ? ವಿವರಿಸುವಿರಾ ?
= ಹೌದು. ಆ ಮದ್ಸ್ ಹಬಿನಲ್ಲಿರುವ ವ್ಯತ್ಯಾಸಗಳ ಬಗ್ಗೆ ತಿಳಿದಿರಬೇಕು.ನಮ್ಮ ಮದ್ಸ್ ಹಬಿನಲ್ಲಿ ಉಪವಾಸಕ್ಕೆ ಭಂಗವನ್ನುಂಟು ಮಾಡದ ಮೂರು ಕಾರ್ಯಗಳ ಬಗ್ಗೆ ನಾವು ತಿಳಿದಿರಬೇಕು. ಕಾರಣ ಆ ಮೂರು ಕಾರ್ಯಗಳು ಉಂಟಾದರೆ ಮಾಲಿಕೀ ಮದ್ಸ್ ಹಬ್ ಪ್ರಕಾರ ಉಪವಾಸಕ್ಕೆ ಧಕ್ಕೆಯುಂಟಾಗುತ್ತದೆ.
43.ಆ ಮೂರು ಕಾರ್ಯಗಳು ಯಾವುದೆಲ್ಲಾ ಎಂದು ತಿಳಿಸುವಿರಾ ?
= ಮದ್ಸ್ ಯ್ ಹೊರಬರುವುದು.
ಕಣ್ಣಿಗೆ ಸುರುಮ ಹಚ್ಚುವುದು.
ಮರೆತು ಆಹಾರ ಸೇವಿಸುವುದು.
44.ಉಪವಾಸವಿರುವಾಗ ಸುರುಮ ಹಚ್ಚಬಹುದೇ ?
= ಉಪವಾಸಗಾರ ಸುರುಮ ಹಚ್ಚುವುದರಿಂದ ಉಪವಾಸ ಭಂಗವಾಗುವುದಿಲ್ಲ.ಆದರೂ ಹಗಲು ಹೊತ್ತು ಕಾಡಿಗೆ ಹಚ್ಚದಿರುವುದು ಉತ್ತಮ.
45.ಉಪವಾಸವಿರುವಾಗ ಸ್ವಪ್ನ ಸ್ಖಲನ ಉಂಟಾದರೆ ವ್ರತ ಕೆಡುತ್ತದೆಯೇ ?
= ಇಲ್ಲ.
46.ಹಸ್ತ ಮೈಥುನ ಮೂಲಕ ವೀರ್ಯ ಹೊರಬಂದರೆ ಉಪವಾಸ ಭಂಗವಾಗುತ್ತದೆಯೇ ?
= ಭಂಗವಾಗುತ್ತದೆ.
47.ಉಪವಾಸಗಾರರು ಮಕ್ಕಳಿಗೆ ಆಹಾರವನ್ನು ಅಗಿದು ಕೊಡಬಹುದೇ ? ಇದರಿಂದ ಉಪವಾಸಕ್ಕೆ ಭಂಗವಾಗುತ್ತದೆಯಾ ?
= ಮಕ್ಕಳಿಗೆ ಆಹಾರ ಅಗಿದು ಕೊಡುವಾಗ ಅದರಲ್ಲಿ ಸ್ವಲ್ಪವಾದರೂ ಒಳಹೊಕ್ಕರೆ ಉಪವಾಸ ಭಂಗವಾಗುತ್ತದೆ.ಸ್ವಲ್ಪವೂ ಒಳಕ್ಕೆ ಹೋಗದಂತೆ ಜಾಗ್ರತೆ ವಹಿಸಿದರೆ ಅದರಿಂದೇನೂ ಉಪವಾಸಕ್ಕೆ ಭಂಗವಿಲ್ಲ.ಅತ್ಯಗತ್ಯವೆಂದಾದರೆ ಹೀಗೆ ಅಗಿದು ಕೊಡುವುದು ಕರಾ ಅತ್ ಕೂಡಾ ಇಲ್ಲ.
48.ಮೂಲವ್ಯಾಧಿ ಇರುವವರು ಹೊರಗಡೆ ಬಂದ ಮೂಲವನ್ನು ಕೈಬೆರಳಿನಿಂದ ಒಳದೂಡಿದರೆ ಉಪವಾಸ ಭಂಗವಾಗುತ್ತದೆಯೇ ?
= ಗುದದ್ವಾರದ ಹೊರಗಡೆ ಬಂದ ಮೂಲವನ್ನು ಕೈ ಬೆರಳನ್ನು ಒಳಕ್ಕೆ ಹಾಕದೆ ಒಳದೂಡಲು ಅಸಾಧ್ಯವೆಂದಾದರೆ ಕೈ ಬೆರಳಿನ ತುದಿ ಒಳಕ್ಕೆ ಪ್ರವೇಶಿಸಿದರೆ ಉಪವಾಸ ಭಂಗವಾಗದು.
49.ಮಲಮೂತ್ರ ವಿಸರ್ಜನೆ ನಡೆಸಿ ಸ್ವಚ್ಛಗೊಳಿಸುವ ವೇಳೆ ಕೈ ಬೆರಳ ತುದಿ ಮೂತ್ರ ಇಲ್ಲವೇ ಗುದದ್ವಾರದ ಒಳಗಡೆ ಪ್ರವೇಶಿಸಿದರೆ ಉಪವಾಸದ ಅವಸ್ಥೆಯೇನು ?
= ಉಪವಾಸ ಭಂಗವಾಗುತ್ತದೆ. ಆ ವೇಳೆ ಕೈ ಬೆರಳ ತುದಿ ದ್ವಾರದ ಒಳಕ್ಕೆ ಪ್ರವೇಶಿಸದಂತೆ ಜಾಗ್ರತೆ ಪಾಲಿಸತ್ತಕ್ಕದ್ದು.
50.ಜುಂಅ: ಸ್ನಾನ ಮಾಡುವಾಗ ಅನಿರೀಕ್ಷಿತವಾಗಿ ಕಿವಿ, ಮೂಗು ಮೂಲಕ ನೀರು ಒಳಹೊಕ್ಕರೆ ಆತನ ಉಪವಾಸ ಭಂಗವಾಗುವುದಿಲ್ಲವೇ ?
= ಇಲ್ಲ. ಆದರೆ ನೀರಿನಲ್ಲಿ ಮುಳುಗಿ ಸ್ನಾನ ನಿರ್ವಹಿಸುವಾಗ ನೀರು ಒಳಹೊಕ್ಕರೆ ಉಪವಾಸ ಭಂಗವಾಗುತ್ತದೆ.
51. ಹೈಳ್ , ನಿಫಾಸ್,ಜನಾಬತ್ ಮೊದಲಾದ ಕಡ್ಡಾಯ ಸ್ನಾನ ಮಾಡುವ ವೇಳೆ ನೀರು ಒಳಹೊಕ್ಕರೆ ಉಪವಾಸ ಭಂಗವಾಗುತ್ತದೆಯೇ ?
= ಕಡ್ಡಾಯ ಸ್ನಾನ ಮಾಡುವಾಗ ಅನಿರೀಕ್ಷಿತವಾಗಿ ನೀರು ಒಳಹೊಕ್ಕರೆ ಉಪವಾಸ ಕೆಡುವುದಿಲ್ಲ.ಆದರೆ ನೀರಿನಲ್ಲಿ ಮುಳುಗಿ ಸ್ನಾನ ಮಾಡುವಾಗ ನೀರು ಒಳಹೊಕ್ಕರೆ ಉಪವಾಸ ಕೆಡುತ್ತದೆ.
52. ಬಿಸಿಲಿನ ತಾಪವನ್ನು ಹೋಗಲಾಡಿಸಲು ಇಲ್ಲವೇ ದೈನಂದಿನ ನಿರ್ವಹಿಸುವ ಸ್ನಾನದ ವೇಳೆ ನೀರು ಒಳಹೊಕ್ಕರೆ ಉಪವಾಸದ ಸ್ಥಿತಿಯೇನು ?
= ಉಪವಾಸ ಕೆಡುತ್ತದೆ. ಆದುದರಿಂದ ಸ್ನಾನ ಮಾಡುವಾಗ ತುಂಬಾ ಜಾಗ್ರತೆ ಪಾಲಿಸಲೇಬೇಕು.
53.ರಮಳಾನಿನಲ್ಲಿ ಹೈಳ್ ಹಾಗೂ ನಿಫಾಸ್ ಇರುವ ವೇಳೆ ದ್ಸಿಕ್ರ್ ಹೇಳಬಹುದೇ ?
= ರಮಳಾನಿನಲ್ಲೂ ಅಲ್ಲದ ವೇಳೆಯಲ್ಲೂ ಹೈಳ್ ನಿಫಾಸ್ ಇರುವಾಗ ದ್ಸಿಕ್ರ್ ಹೇಳುವುದರಲ್ಲಿ ತೊಂದರೆಯಿಲ್ಲ.
54.ಸುಳ್ಳು ಹೇಳಿದರೆ ಉಪವಾಸ ಭಂಗವಾಗುತ್ತದೆಯೇ?
= ಉಪವಾಸ ಭಂಗವಾಗುವುದಿಲ್ಲ.ಕಡ್ಡಾಯ ನಿರ್ವಹಿಸಿದಂತೆಯೂ ಆಗುತ್ತದೆ ಆದರೆ ಸುಳ್ಳು,ಪರದೂಷಣೆ ,ಚಾಡಿ ಮೊದಲಾದವುಗಳಿಂದ ಉಪವಾಸದ ಪ್ರತಿಫಲ ನಷ್ಟವಾಗುತ್ತದೆ.
55. ಮುಳುಗಿ ಸ್ನಾನ ಮಾಡಿದರೆ ನೀರು ಒಳಹೋಗುವುದಿಲ್ಲ ಎಂಬ ದೃಢತೆ ಇದ್ದರೆ ಉಪವಾಸಗಾರ ಮುಳುಗಿ ಸ್ನಾನ ಮಾಡುವುದರ ವಿಧಿಯೇನು ?
= ಕರಾಅತ್.
56.ಉಪವಾಸಗಾರ ಸುಗಂಧ ದ್ರವ್ಯವನ್ನು ಹರಾಂ ಆಗುತ್ತದೆಯಾ ?
=ಹರಾಂ ಅಲ್ಲ. ಕರಾಅತ್.
57.ವ್ರತಸ್ಥರು ಹಲ್ಲುಜ್ಜುವುದರ ವಿಧಿಯೇನು ?
= ವ್ರತಸ್ಥರು ಳುಹ್ರಿನ ಮುಂಚೆ ಹಲ್ಲುಜ್ಜುವುದು ಸಾಮಾನ್ಯದಂತೆ ಸುನ್ನತ್ ಆಗಿದೆ.ಮಧ್ಯಾಹ್ನದ ನಂತರ ಕರಾಅತ್. ಆದರೆ ಮಧ್ಯಾಹ್ನವೋ ನಂತರವೋ ನಿದ್ರಿಸಿದ್ದರಿಂದಾಗಿ ಬಾಯಿಯಿಂದ ಅಸಹ್ಯವಾದ ದುರ್ಗಂಧ ಹೊರಹೊಮ್ಮುತ್ತಿದ್ದರೆ ಹಲ್ಲುಜ್ಜಬಹುದು.
58. ಉಪವಾಸಗಾರ ಆಹಾರದ ರುಚಿ ನೋಡುವುದರ ವಿಧಿ ಏನು ?
= ಕರಾಅತ್.
59.ಫರ್ಳ್ ಉಪವಾಸದಲ್ಲಿ ಆರಂಭಿಸಿದ ನಂತರ ಸೂಕ್ತ ಕಾರಣವಿಲ್ಲದೆ ಅದನ್ನು ಮುರಿಯಬಹುದೇ ?
= ಮುರಿಯಬಾರದು. ಮುರಿಯುವುದು ಹರಾಂ.ಅದು ಖಳಾಅ ಪೂರೈಸುತ್ತಿರುವ ಫರ್ಳ್ ವ್ರತವಾದರೂ ಸರಿ.
60.ಸುನ್ನತ್ ಉಪವಾಸವನ್ನು ಸೂಕ್ತ ಕಾರಣವಿಲ್ಲದೆ ಅರ್ಧದಲ್ಲಿ ಮುರಿಯುವುದು ಹರಾಂ ಆಗುತ್ತದೆಯೇ ?
= ಹರಾಂ ಆಗುವುದಿಲ್ಲ.
61. ನಮಾಝ್ ನಿರ್ವಹಿಸದವನ ಉಪವಾಸ ಸಿಂಧುವಾಗುತ್ತದೆಯೇ? ಅದಕ್ಕೆ ಪ್ರತಿಫಲ ಇದೆಯೇ ?*
= ನಮಾಝ್ ನಿರ್ವಹಿಸದ ಕಾರಣ ದಿಂದ ಆ ವ್ಯಕ್ತಿ ಇಸ್ಲಾಮಿನಿಂದ ಹೊರಹೋಗುವುದಿಲ್ಲ.ಆದುದರಿಂದ ಅವನ ಉಪವಾಸ ಸಿಂಧುವಾಗುತ್ತದೆ. ಪ್ರತಿಫಲವೂ ಲಭಿಸುತ್ತದೆ.
62.ಗರ್ಭಿಣಿ ಮಹಿಳೆ ಹಾಗೂ ಮೊಲೆ ಹಾಲುಣಿಸುವ ಮಹಿಳೆ ಉಪವಾಸ ಮಾಡದಿರಬಹುದೇ ?
= ಗರ್ಭಿಣಿ ಹಾಗೂ ಮೊಲೆ ಹಾಲುಣಿಸುವ ಮಹಿಳೆಯರು ತನ್ನ ಸ್ವಶರೀರಕ್ಕೆ ಇಲ್ಲವೇ ಮಗುವಿಗೆ ತೊಂದರೆಯಾಗುತ್ತದೆಯೆಂದು ತಿಳಿದರೆ ಉಪವಾಸ ಉಪೇಕ್ಷಿಸಬಹುದು.
63.ಅವರು ಆ ಉಪವಾಸವನ್ನು ಖಳಾಅ ಪೂರೈಸಬೇಕೇ ?
= ಖಳಾಅ ಪೂರೈಸಬೇಕು.
64.ಅವರು ಉಪವಾಸ ತ್ಯಜಿಸಿದ ಕಾರಣಕ್ಕೆ ಏನಾದರೂ ಪರಿಹಾರ ನೀಡಲಿಕ್ಕಿದೆಯೇ ?
= ಗರ್ಭಿಣಿ ಹಾಗೂ ಮೊಲೆ ಹಾಲುಣಿಸುವ ಮಹಿಳೆಯರು ಉಪವಾಸ ಮಾಡುವುದರಿಂದ ತನ್ನ ಶರೀರಕ್ಕೆ ತೊಂದರೆಯಾಗುತ್ತದೆ ಇಲ್ಲವೇ ತನ್ನ ಶರೀರಕ್ಕೂ ಮಗುವಿಗೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಉಪವಾಸ ತೊರೆದಿದ್ದರೆ ಆ ಉಪವಾಸವನ್ನು ಖಳಾಅ ಸಂದಾಯಿಸಿದರೆ ಸಾಕು. ಪರಿಹಾರವಾಗಿ ಏನೂ ಕೊಡಬೇಕಾಗಿಲ್ಲ.
ಅದೇ ವೇಳೆ ಮಗುವಿಗೆ ಮಾತ್ರ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಉಪವಾಸ ವರ್ಜಿಸಿದ್ದರೆ ಖಳಾಹ್ ನಿರ್ವಹಿಸುವುದರ ಜತೆಗೆ ಪ್ರತಿಯೊಂದು ಉಪವಾಸಕ್ಕೂ ಒಂದು ಮುದ್ದ್(650 ಗ್ರಾಂ)ಆಹಾರ ಧಾನ್ಯ ಪರಿಹಾರವಾಗಿ ದಾನ ನೀಡಬೇಕು.
65. ಇಸ್ಲಾಮಿನ ಪ್ರಥಮ ಘಟ್ಟದಲ್ಲಿ ಇಶಾಅ ನಮಾಝಿನ ನಂತರ ಅನ್ನಪಾನೀಯ ಹಾಗೂ ಲೈಂಗಿಕ ಸಂಪರ್ಕ ನಿಷಿದ್ಧವಾಗಿತ್ತೆಂದು ಹೇಳುವುದನ್ನು ಕೇಳಿದ್ದೇನೆ. ಅದು ಸರಿಯೇ ?
= ಹೌದು ಸರಿ.ಆದರೆ ಆ ನಿಯಮವನ್ನು ಪಾಲಿಸಲು ತುಂಬಾ ಜನರಿಗೆ ಕಷ್ಟವಾಗುತ್ತಿತ್ತು.ನಂತರ ಅಲ್ಲಾಹು ಈ ನಿಯಮವನ್ನು ಸಡಿಲಗೊಳಿಸಿ ಅಲ್ ಬಖರ: ಸೂರ:ದ 187 ನೇ ಸೂಕ್ತವನ್ನು ಅವತೀರ್ಣಗೊಳಿಸಿದನು. ಆ ಬಳಿಕ ಸೂರ್ಯಾಸ್ತದ ನಂತರ ಪ್ರಭಾತದವರೇಗೆ ಅನ್ನ ಪಾನೀಯ ಸೇವನೆ ಹಾಗೂ ಲೈಂಗಿಕ ಸಂಪರ್ಕಕ್ಕೆ ಅನುಮತಿ ನೀಡಲಾಯಿತು.
66. ಉಪವಾಸಗಾರ ಪತ್ನಿಯನ್ನು ಚುಂಬಿಸಿದರೆ ವ್ರತ ಕೆಡುತ್ತದೆಯೇ ?
= ಕೇವಲ ಚುಂಬಿಸುವುದರಿಂದ ವ್ರತ ಕೆಡುವುದಿಲ್ಲ.ಅದೇ ವೇಳೆ ಮರೆಯಿಲ್ಲದೆ ಚುಂಬಿಸಿ ಸ್ಖಲನ ಉಂಟಾದರೆ ವ್ರತ ಕೆಡುತ್ತದೆ.
67.ಗಂಡ - ಹೆಂಡತಿ ಮೈಮೇಲೆ ಬಟ್ಟೆಯ ಮರೆಯಿದ್ದು ಕೊಂಡು ಆಲಿಂಗನ ನಡೆಸಿದರೆ ವ್ರತ ಕೆಡುತ್ತದೆಯೇ ?
= ಇಲ್ಲ.
68. ಸ್ಖಲನ ಸಂಭವಿಸದ ರೀತಿಯಲ್ಲಿ ನಗ್ನರಾಗಿ ಗಂಡು-ಹೆಣ್ಣು ಆಲಿಂಗನ ನಡೆಸುವುದರ ವಿಧಿಯೇನು ?ಅದರಿಂದ ವ್ರತ ಕೆಡುತ್ತದೆಯೇ ?
=ಹೀಗೆ ನಡೆಸುವ ಆಲಿಂಗನ ಹರಾಂ ಆಗಿರುತ್ತದೆ. ಅದರಿಂದ ವ್ರತಕ್ಕೆ ಭಂಗ ಉಂಟಾಗುವುದಿಲ್ಲ.ಆದರೆ ಸ್ಖಲನ ಉಂಟಾದರೆ ವ್ರತ ಕೆಡುತ್ತದೆ.
69.ಹಗಲಿನ ಮಧ್ಯೆ ಋತುಸ್ರಾವ ಇಲ್ಲವೇ ಹೆರಿಗೆ ಸ್ರಾವ ನಿಂತರೆ ಆಕೆ ಉಪವಾಸದವರಂತೆ ಇರುವುದು ಕಡ್ಡಾಯವೇ ?
= ಕಡ್ಡಾಯವಿಲ್ಲ.ಆದರೂ ಸ್ರಾವ ನಿಂತ ಮೇಲೆ ಇಮ್ ಸಾಕ್ ಸುನ್ನತ್ತಾಗಿದೆ.
70. ಇಮ್ ಸಾಕ್ ಎಂದರೇನು ?
= ಉಪವಾಸದವರಂತೆ ಇರುವುದು ಅಂದರೆ ಉಪವಾಸಕ್ಕೆ ಭಂಗವನ್ನುಂಟು ಮಾಡುವ ಕಾರ್ಯಗಳನ್ನು ತ್ಯಜಿಸುವುದು.
71. ಸುಗಂಧ ದ್ರವ್ಯ ಹಚ್ಚುವುದು ಹಾಗೂ ಮಧ್ಯಾಹ್ನ ನಂತರ ಹಲ್ಲುಜ್ಜುವುದು ಉಪವಾಸಗಾರನಿಗೆ ಕರಾಹತ್ ತಾನೆ.ಈ ಕರಾಹತ್ ಇಮ್ ಸಾಕ್ ನಡೆಸುವವನಿಗೂ ಬಾಧಕವೇ?
= ಇಮ್ ಸಾಕ್ ನಡೆಸುವವನು ಉಪವಾಸಕ್ಕೆ ಭಂಗವನ್ನುಂಟು ಮಾಡುವ ಕಾರ್ಯ ನಡೆಸುವುದು ಹರಾಂ ಆಗಿರುವಂತೆಯೇ ಸುಗಂಧ ಹಚ್ಚುವುದು ಹಾಗೂ ಮಧ್ಯಾಹ್ನ ನಂತರ ಹಲ್ಲುಜುವುದು ಮೊದಲಾದ ಕರಾಹತ್ ಕೂಡಾ ಅವನಿಗೆ ಕರಾಹತ್ ಆಗಿದೆ.
72. ಕೆಲವೊಮ್ಮೆ ಉಪವಾಸ ಗಾರನಿಗೆ ಕಫ್ಫಾರತ್ ಕಡ್ಡಾಯವಾಗುತ್ತದೆಯಂತೆ. ಆ ಕಫ್ಫಾರತನ್ನು ವಿವರಿಸುವಿರಾ ?
=ಮುಸ್ಲಿಮನಾದ ನ್ಯೂನತೆಗಳಿಲ್ಲದ ಗುಲಾಮನನ್ನುದಾಸ್ಯ ಮುಕ್ತ ಗೊಳಿಸುವುದು. ಸಾಧ್ಯವಾಗದಿದ್ದರೆ ಎರಡು ತಿಂಗಳುಗಳ ಕಾಲ ನಿರಂತರವಾಗಿ ಎಡೆಬಿಡದೆ ಉಪವಾಸ ಆಚರಿಸುವುದು. ಅದೂ ಸಾಧ್ಯವಾಗದಿದ್ದರೆ ಝಕಾತ್ ಸ್ವೀಕರಿಸಲು ಅರ್ಹರಾದ 60 ಮಂದಿಗೆ 650 ಗ್ರಾಮಿನಂತೆ ಆಹಾರ ನೀಡುವುದಾಗಿದೆ.ಇದರಲ್ಲಿ ಮೊದಲನೆಯದ್ದು ಈಗ ಗುಲಾಮಗಿರಿ ಇಲ್ಲದ್ದರಿಂದ ಅಸಾಧ್ಯ.
73.ಈ ಕಫ್ಫಾರತ್ ಯಾರಿಗೆ ಕಡ್ಡಾಯ?
= ರಮಳಾನಿನ ಹಗಲು ಹೊತ್ತು ಸಂಭೋಗದ ಮೂಲಕ ವ್ರತ ಭಂಗಗೊಳಿಸಿದವನಿಗೆ
ಕಡ್ಡಾಯ.
74.ಅದನ್ನು ಸವಿಸ್ತಾರವಾಗಿ ತಿಳಿಸುವಿರಾ ?
= ರಮಳಾನಿನ ಹಗಲು ಹೊತ್ತು ಸಂಭೋಗ ನಡೆಸುವುದು ಮಹಾತಪ್ಪು. ಆ ತಪ್ಪು ಒಬ್ಬನಿಂದ ಬಂದು ಬಿಟ್ಟರೆ ಅವನಿಂದ ಅದಕ್ಕೆ ಪ್ರಾಯಶ್ಚಿತ ಕಡ್ಡಾಯವಾಗುತ್ತದೆ.ಆ ಪ್ರಾಯಶ್ಚಿತ ಎರಡು ತಿಂಗಳುಗಳ ಕಾಲ ನಿರಂತರ ಉಪವಾಸ ಆಚರಿಸಬೇಕು.ಎರಡು ತಿಂಗಳುಗಳ ಮಧ್ಯೆ ಒಂದು ದಿನ ಕೂಡಾ ಉಪವಾಸ ಮಾಡಲು ಆಗದಿದ್ದರೆ ಆ ತನಕ ಮಾಡಿದ ಉಪವಾಸ ಕಫ್ಫಾರತ್ತಾಗಿ ಪರಿಗಣಿಸಲಾಗುವುದಿಲ್ಲ.ಪುನ: ಎರಡು ತಿಂಗಳುಗಳ ಕಾಲದ ಉಪವಾಸವನ್ನು ಆರಂಭಿಸಬೇಕು.ಉಪವಾಸ ನಿರ್ವಹಿಸಲು ಸಾಧ್ಯವಾಗದಿದ್ದರೆ ಪ್ರತಿಯೋರ್ವರಿಗೆ 650 ಗ್ರಾಮಿನಂತೆ 60 ಮಂದಿಗೆ ಆಹಾರ ನೀಡಬೇಕು.
75. 650 ಗ್ರಾಂ ಅಕ್ಕಿ ಎಂಬುದು ಅಂದಾಜು ಲೆಕ್ಕವೇ? ಅಥವಾ ಕರೆಕ್ಟ್ ಲೆಕ್ಕವೇ?
= ಶರಇಯ್ಯಾದ ಲೆಕ್ಕ ಒಂದು ಮುದ್ದ್ ಅಕ್ಕಿ ಎಂದಾಗಿದೆ.ಒಂದು ಮುದ್ದ್ ಅಂದರೆ ದೊಡ್ಡದೋ ಚಿಕ್ಕದೋ ಅಲ್ಲದ ಸಾಮಾನ್ಯ ಗಾತ್ರದಲ್ಲಿರುವ ಒಬ್ಬನ ಎರಡು ಕೈಗಳನ್ನು ಒಟ್ಟು ಸೇರಿಸಿ (ಒಂದು ಬೊಗಸೆ)ಅದರಲ್ಲಿ ತುಂಬಾ ಅಕ್ಕಿಯನ್ನು ತೆಗೆದರೆ ಅದರಲ್ಲಿ ಎಷ್ಟಿರುತ್ತದೆಯೋ ಅದಾಗಿದೆ.ಸಾಮಾನ್ಯವಾಗಿ ನಮ್ಮಊರಲ್ಲಿರುವ ಯಾವುದೇ ಅಕ್ಕಿಯ ಒಂದು ಬೊಗಸೆ ತೆಗೆದರೆ 650 ಗ್ರಾಮಿಗಿಂತ ಹೆಚ್ಚಾಗುವುದಿಲ್ಲ ಎಂಬುದು ಅನುಭವದಿಂದ ತಿಳಿದ ಕಾರಣದಿಂದಾಗಿ ಈ ಲೆಕ್ಕ ಹೇಳಲಾಗುತ್ತದೆ.
ಇನ್ನು ಯಾವುದಾದರೂ ಭಾರ ಕಮ್ಮಿ ಇರುವ ಅಕ್ಕಿಯಾದರೆ 650 ಗ್ರಾಮಿಗಿಂತ ಕಮ್ಮಿಯಾಗಬಹುದು.ಭಾರ ಹೆಚ್ಚು ಇರುವ ಅಕ್ಕಿಯಾದರೆ 650 ಗ್ರಾಮಿಗಿಂತ ಹೆಚ್ಚೂ ಆಗಬಹುದು. ಹಾಗದಲ್ಲಿ ಹೆಚ್ಚು ಅಕ್ಕಿ ಕೊಡುವುದು ಕಡ್ಡಾಯವಾಗುತ್ತದೆ.
ಅಕ್ಕಿ ಆಹಾರವಾಗಿ ಉಪಯೋಗಿಸುವಲ್ಲಿ ಮಾತ್ರ 650 ಗ್ರಾಂ ಎಂಬ ಈ ಲೆಕ್ಕ.ಅಕ್ಕಿ ಅಲ್ಲದ ಗೋಧಿ ,ಜೋಳ ಮೊದಲಾದ ಆಹಾರ ಧಾನ್ಯ ಗಳನ್ನು ಉಪಯೋಗಿಸುವಲ್ಲಿ ಈ 650 ಗ್ರಾಂ ಎಂಬ ಲೆಕ್ಕ ಸಮಂಜಸವಾಗದು.
76.ಸಂಭೋಗದಿಂದ ಉಪವಾಸ ಭಂಗವಾದರೆ ಸ್ತ್ರೀಯರಿಗೆ ಕಪ್ಫಾರತ್ ಇಲ್ಲವೆಂದು ಹೇಳಲಾಗುತ್ತದೆ ಸರಿಯೇ?
=ಸರಿ. ಪುರುಷರಿಗೆ ಮಾತ್ರ ಕಫ್ಫಾರತ್ ಕಡ್ಡಾಯ.ಸ್ತ್ರೀಯರಿಗಿಲ್ಲ.
77.ಹಸ್ತಮೈಥುನ ನಡೆಸಿ ವೀರ್ಯ ಸ್ಖಲನವಾದರೆ ಕಫ್ಫಾರತ್ ಕೊಡಬೇಕೇ?
= ಈ ಕಫ್ಫಾರತ್ ಸಂಭೋಗ ನಡೆಸಿದರೆ ಮಾತ್ರ ಕಡ್ಡಾಯವಾಗುವ ದಂಡವಾಗಿದೆ.ಅದುದರಿಂದ ಹಸ್ತ ಮೈಥುನ ನಡೆಸಿ ವೀರ್ಯ ಹೊರಬಂದರೆ ಕಫ್ಫಾರತ್ ಇಲ್ಲ.
78.ಸಂಭೋಗ ಮಾತ್ರ ನಡೆಸಿದ್ದು ವೀರ್ಯ ಹೊರಬರದಿದ್ದರೆ ಕಫ್ಫಾರತ್ ಕಡ್ಡಾಯವಾಗುತ್ತದೆಯೇ
= ವೀರ್ಯ ಹೊರಬಾರದಿದ್ದರೂ ಕಫ್ಫಾರತ್ ಕಡ್ಡಾಯವೇ ಆಗಿದೆ.
79.ಉಪವಾಸವೆಂಬ ನೆನಪಿಲ್ಲದೆ ಒಬ್ಬ ತನ್ನ ಪತ್ನಿ ಜತೆ ಮಿಲನದಲ್ಲೇರ್ಪಟ್ಟ ಕಾರಣದಿಂದ ಕಫ್ಫಾರತ್ ನೀಡುವುದು ಕಡ್ಡಾಯವೇ?
= ಕಫ್ಫಾರತ್ ಕಡ್ಡಾಯವಿಲ್ಲ.ಮಾತ್ರವಲ್ಲ,ಅವನ ಉಪವಾಸ ಕೂಡಾ ಸಿಂಧುವಾಗುತ್ತದೆ.ಆದರೆ ಒಂದು ವಿಷಯ ಇಲ್ಲಿ ಗಮನಿಸತ್ತಕ್ಕದ್ದು.ಮಿಲನದಲ್ಲಿದ್ದಾಗ ನೆನಪಾದರೆ ತಕ್ಷಣವೇ ಅದರಿಂದ ವಿರಮಿಸಲೇಬೇಕು.ಇಲ್ಲದೆ ಹೋದಲ್ಲಿ ಕಫ್ಫಾರತ್ ಕಡ್ಡಾಯವಾಗುತ್ತದೆ.
80.ರಮಳಾನ್ ತಿಂಗಳು ಅಲ್ಲದ ವೇಳೆ ಉಪವಾಸ ನಿರ್ವಹಿಸುವಾಗ ಸಂಭೋಗದಲ್ಲೇರ್ಪಟ್ಟರೆ ಕಫ್ಫಾರತ್ ಕೊಡಬೇಕೇ?
= ಇಲ್ಲ.ರಮಳಾನ್ ತಿಂಗಳಿಗೆ ಇರುವ ಅಪಾರವಾದ ಪವಿತ್ರತೆ ಹಾಗೂ ಗೌರವ ಪರಿಗಣಿಸಿ ರಮಳಾನ್ ತಿಂಗಳಲ್ಲಿ ಈ ಕ್ರಿಯೆ ಉಂಟಾದರೆ ಮಾತ್ರ ಕಫ್ಫಾರತ್ ಕಡ್ಡಾಯವಾಗುತ್ತದೆ.ಇಷ್ಟೊಂದು ಅಪಾರವಾದ ಪವಿತ್ರತೆ ಇತರ ತಿಂಗಳುಗಳಿಗೆ ಇರದ ಕಾರಣದಿಂದ ಆಗ ಸಂಭೋಗದಲ್ಲೇರ್ಪಟ್ಟರೆ ಉಪವಾಸ ಭಂಗವಾಗುತ್ತದೆಯೇ ವಿನ: ಕಫ್ಫಾರತ್ ಕಡ್ಡಾಯವಾಗುವುದಿಲ್ಲ.ಅದು ಕಡ್ಡಾಯ ಉಪವಾಸವಾದರೂ ಸರಿ.
81.ಸಂಭೋಗ ಮೂಲಕ ಉಪವಾಸ ಭಂಗವಾದರೆ ಆ ದಿನದ ಉಪವಾಸವನ್ನು ಸ್ತೀ ಖಳಾಅ ಪೂರೈಸಬೇಕೇ ?
= ಆ ದಿನದ ಉಪವಾಸ ಖಳಾಅ ಪೂರೈಸುವುದು ಅವಳಿಗೆ ಕಡ್ಡಾಯ.
82.ಸಂಭೋಗ ನಡೆಸದೆ ಕೇವಲ ಆಲಿಂಗನ, ಚುಂಬನ ಕಾರಣವಾಗಿ ಸ್ಖಲನ ಉಂಟಾದರೆ ಅದಕ್ಕೂ ಸಂಭೋಗ ನಡೆಸಿದವರು ಕೊಡಬೇಕಾದ ಕಫ್ಫಾರತ್ ಕಡ್ಡಾಯವೇ?
= ಇಲ್ಲ. ಕಫ್ಫಾರತ್ ಕಡ್ಡಾಯವಿಲ್ಲ. ಸಂಭೋಗ ನಡೆಸಿದರೆ ಮಾತ್ರ ಕಫ್ಫಾರತ್ ಕಡ್ಡಾಯ.
83.ರಾತ್ರಿ ನಿಯ್ಯತ್ ಮಾಡದ ವ್ಯಕ್ತಿ ಇಮ್ ಸಾಕ್ ನಡೆಸಬೇಕೆಂದಲ್ಲವೇ ನಿಯಮ.ಹಾಗೆ ಇಮ್ ಸಾಕಿನಲ್ಲಿರುವ ವ್ಯಕ್ತಿ ಸಂಭೋಗ ನಡೆಸಿದರೆ ಕಫ್ಫಾರತ್ ಕೊಡಬೇಕೇ ?
= ಇಮ್ ಸಾಕ್ ಎಂಬುದು ನೈಜ ಉಪವಾಸವಲ್ಲ. ಉಪವಾಸಗಾರರಂತೆ ಇರಬೇಕೆಂದು ಮಾತ್ರ.ಆತ ಉಪವಾಸಕ್ಕೆ ಭಂಗವನ್ನುಂಟುಮಾಡುವ ಯಾವುದೇ ಕಾರ್ಯವೆಸಗಬಾರದು.ಅದು ಹರಾಂ ಆಗಿದೆ.ಅದೇ ರೀತಿ ಅವನಿಂದ ಉಂಟಾಗುವ ಸಂಭೋಗ ಹರಾಮ್ ಆಗಿದೆ. ಶಿಕ್ಷಾರ್ಹ ಅಪರಾಧವೂ ಆಗಿದೆ.ಆದರೆ ಕಫ್ಫಾರತ್ ನೀಡಬೇಕಾಗಿಲ್ಲ.
84.ರಮಳಾನಿನಲ್ಲಿ ಖಳಾಅ ಆದ ಉಪವಾಸ ರಮಳಾನ್ ನಂತರದ ದಿನಗಳಲ್ಲಿ ಖಳಾಅ ಪೂರೈಸಿದರೆ ರಮಳಾನಿನಲ್ಲಿ ನಿರ್ವಹಿಸಿದಷ್ಟೇ ಪುಣ್ಯ ಲಭಿಸುತ್ತದೆಯೇ ?
= ಇಲ್ಲ. ರಮಳಾನಿನ ಒಂದು ದಿನಕ್ಕೆ ಸಮಾನವಾದ ಮತ್ತೊಂದು ದಿವಸ ಇಲ್ಲವೇ ಇಲ್ಲ. ಅದು ನಷ್ಟವಾದರೆ ದೊಡ್ಡ ನಷ್ಟವೇ ಸರಿ.
85.ರಮಳಾನ್ ತಿಂಗಳಲ್ಲಿ 29 ದಿವಸಗಳ ಉಪವಾಸ ಮಾತ್ರ ಸಿಕ್ಕಿದರೆ ಅದಕ್ಕೆ 30 ದಿವಸಗಳ ಪೂರ್ಣ ಪ್ರತಿಫಲ ಲಭಿಸುತ್ತದೆಯೇ ?
= ರಮಳಾನ್ ತಿಂಗಳ ಪೂರ್ಣ ಪ್ರತಿಫಲ ಲಭ್ಯ ಎಂಬ ವಿಷಯದಲ್ಲಿ 29 ಇಲ್ಲವೇ 30 ಯಾವುದೂ ಸಿಕ್ಕರೂ ಸಮಾನವೇ ಆಗಿರುತ್ತದೆ.ಅಂದರೆ 29 ದಿವಸಗಳ ಉಪವಾಸ ಸಿಕ್ಕರೂ ರಮಳಾನ್ ಒಂದು ತಿಂಗಳ ಉಪವಾಸದ ಪೂರ್ಣ ಪ್ರತಿಫಲ ಅದಕ್ಕೆ ಲಭಿಸುತ್ತದೆ. ಅದೇ ವೇಳೆ 30 ನೇ ದಿನದಂದು ನಿರ್ವಹಿಸುವ ಕರ್ಮಗಳಿಗೆ ಪ್ರತ್ಯೇಕ ಪ್ರತಿಫಲ ಲಭ್ಯ. ಅಂದಿನ ದಿನದ ಉಪವಾಸ, ಸಹರಿ,ಇಫ್ತಾರ್ ಸಹಿತ ಎಲ್ಲಾ ಕರ್ಮಗಳಿಗೂ ಪ್ರತ್ಯೇಕ ಪ್ರತಿಫಲ ಲಭಿಸುತ್ತದೆ. ಈ ದೃಷ್ಟಿಯಿಂದ 30 ದಿವಸಗಳ ರಮಳಾನ್ ಸಿಕ್ಕರೆ ಅದರ ಪ್ರತಿಫಲ ಹೆಚ್ಚೆನಿಸುತ್ತದೆ.
86.ಕಳೆದ ರಮಳಾನ್ ತಿಂಗಳ ಉಪವಾಸ ಖಳಾಅ ಆದರೆ ಅದನ್ನು ಈ ರಮಳಾನ್ ಗಿಂತ ಮುಂಚೆ ಖಳಾಅ ಪೂರೈಸುವುದು ಕಡ್ಡಾಯವೇ ?
= ಸಮರ್ಪಕ ಕಾರಣವಿಲ್ಲದಿದ್ದರೆ ಕಡ್ಡಾಯವಾಗುತ್ತದೆ.ಆಗ ಈ ರಮಳಾನ್ ತನಕ ಖಳಾಅ ಪೂರೈಸದೆ ಇರುವುದು ಹರಾಂ ಆಗಿದೆ.ಶರಅ ನಿರ್ದೇಶಿಸಿದ ಕಾರಣವಿದ್ದಲ್ಲಿ ಖಳಾಅ ಪೂರೈಸದೆ ಇದ್ದಲ್ಲಿ ಅಭ್ಯಂತರವಿಲ್ಲ.
87. ಈ ರಮಳಾನ್ ತನಕ ಖಳಾಅ ಪೂರೈಸದಿದ್ದರೆ ಅದಕ್ಕೆ ಪ್ರತ್ಯೇಕವಾಗಿ ಏನಾದರೂ ಪರಿಹಾರ ನೀಡಲಿಕ್ಕಿದೆಯೇ ?
= ಒಂದು ವರ್ಷದ ರಮಳಾನ್ ಉಪವಾಸ ಖಳಾಅ ಆದರೆ ಅದನ್ನು ನಂತರದ ರಮಳಾನಿನ ಮುಂಚಿತವಾಗಿ ಖಳಾಅ ತೀರಿಸಲೇಬೇಕು. ನಂತರದ ರಮಳಾನ್ ತನಕ ಖಳಾಅ ಪೂರೈಸಲು ಸಾಧ್ಯವಾಗಿದ್ದೂ,ಖಳಾಅ ಪೂರೈಸದಿದ್ದರೆ ಆ ಉಪವಾಸವನ್ನು ಖಳಾಅ ಪೂರೈಸುವುದರ ಜತೆಗೆ ಒಂದೊಂದು ಉಪವಾಸಕ್ಕೆ ಒಂದೊಂದು ಮುದ್ದ್ ಆಹಾರ ಧಾನ್ಯ ನೀಡಬೇಕು.
88. ಎಷ್ಟು ವರ್ಷಗಳ ನಂತರ ಖಳಾಅ ಪೂರೈಸುವುದಾದರೂ ಒಂದು ಮುದ್ದಿನಂತೆ ಆಹಾರ ಕೊಟ್ಟರೆ ಸಾಕಲ್ಲವೇ ?
= ಇಲ್ಲ. ಸಾಕಾಗುವುದಿಲ್ಲ.ಖಳಾಅ ಪೂರೈಸುವುದನ್ನು ತಡ ಮಾಡುತ್ತಾ ಹೋದ ಪ್ರತಿಯೊಂದು ವರ್ಷಕ್ಕೂ ಒಂದೊಂದು ಮುದ್ದ್ ನೀಡಬೇಕಾಗುತ್ತದೆ.
89.ಅದನ್ನು ಒಂದು ಉದಾಹರಣೆ ಸಹಿತ ವಿವರಿಸುವಿರಾ ?
= ಒಬ್ಬನಿಗೆ ಒಂದು ವರ್ಷದಲ್ಲಿ 5 ಉಪವಾಸ ಖಳಾಅ ಆಗಿದೆ ಎಂದು ಇಟ್ಟುಕೊಳ್ಳೋಣ.ಆತ ಅದನ್ನು ಅದೇ ವರ್ಷ ಖಳಾಅ ಪೂರೈಸುವುದಾದರೆ 5 ಉಪವಾಸ ನಿರ್ವಹಿಸಿದರೆ ಸಾಕು.ಅದನ್ನು ನಂತರದ ರಮಳಾನಿನ ಬಳಿಕ ಪೂರೈಸುವುದಾದರೆ 5 ಉಪವಾಸಗಳನ್ನು ಖಳಾಅ ಪೂರೈಸುವುದರ ಜತೆಗೆ ಒಂದೊಂದು ಉಪವಾಸಕ್ಕೆ ಒಂದೊಂದು ಮುದ್ದ್ ಅಕ್ಕಿಯಂತೆ 5 ಮುದ್ದ್ ಅಕ್ಕಿ ನೀಡಬೇಕಾಗುತ್ತದೆ. ಅದೇ ವೇಳೆ ನಾಲ್ಕು ರಮಳಾನ್ ಗಳ ನಂತರ ಖಳಾಅ ಪೂರೈಸುವುದಾದರೆ 20 ಮುದ್ದ್ ಅಕ್ಕಿ ನೀಡಬೇಕಾಗುತ್ತದೆ.ಒಂದು ಮುದ್ದ್ 650 ಗ್ರಾಮ್ ಅಕ್ಕಿ ಎಂಬ ಲೆಕ್ಕದಲ್ಲಿ 13 ಕೆಜಿ ಅಕ್ಕಿ ಕೊಡಬೇಕು.
90.ಮೇಲೆ ಹೇಳಲಾದ ಈ ಫಿದ್ ಯ ಅಕ್ಕಿಯನ್ನು ಯಾರಿಗೆ ಕೊಡಬೇಕು ?
= ಫಕೀರ್ ಹಾಗೂ ಮಿಸ್ಕೀನ್ ಗಳಿಗೆ ನೀಡಬೇಕು.
91.ಝಕಾತ್ ಪಡೆಯಲು ಅರ್ಹರಾದ ಇತರರಿಗೆ ಕೊಟ್ಟರೆ ಸಾಲದೇ ?
= ಇಲ್ಲ. ಸಾಲದು. ಫಕೀರ್ ಹಾಗೂ ಮಿಸ್ಕೀನ್ ಗಳಿಗೆ ಮಾತ್ರ ಕೊಡಬೇಕು.
92. ಉಪವಾಸಗಾರ ಪ್ರಯಾಣ ಹೋಗುವುದಾದರೆ ಉಪವಾಸದಿಂದ ಅವನಿಗೆ ವಿನಾಯಿತಿಯಿದೆಯೆಂದು ಹೇಳುವುದನ್ನು ಕೇಳಿದ್ದೇನೆ.ಆ ಪ್ರಯಾಣದ ದೂರ ಎಷ್ಟಿರಬೇಕು? ಸವಿಸ್ತಾರವಾಗಿ ವಿವರಿಸುವಿರಾ ?
= 132 ಕಿ.ಮೀ. ದೂರವಿರುವ ಅನುವದನೀಯ ಯಾತ್ರೆ ಕೈಗೊಳ್ಳುವವರಿಗೆ ಉಪವಾಸದಿಂದ ವಿನಾಯಿತಿ ಇದೆ.ಅದಕ್ಕಿಂತ ಕಡಿಮೆ ದೂರದ ಪ್ರಯಾಣದ ಯಾತ್ರಿಕರು ಉಪವಾಸ ತ್ಯಜಿಸಬಾರದು.ವ್ರತದಿಂದ ವಿನಾಯಿತಿ ಇರುವ ಯಾತ್ರಿಕರಿಗೆ ತಮ್ಮ ಪ್ರಯಾಣದಲ್ಲಿ ಉಪವಾಸ ಅನುಷ್ಠಿಸುವುದು ಕಷ್ಟವಾದಲ್ಲಿ ಉಪವಾಸ ತ್ಯಜಿಸುವುದು ಉತ್ತಮ. ಅದೇ ವೇಳೆ ಉಪವಾಸಗೈದು ಯಾತ್ರೆ ಕೈಗೊಳ್ಳುವುದರಿಂದ ಆತನಿಗೆ ಏನೂ ತೊಂದರೆಯಾಗುವುದಿಲ್ಲ ಎಂದಾದರೆ ಉಪವಾಸ ನಿರ್ವಹಿಸುವುದು ಉತ್ತಮ.
93. 132 ಕಿ.ಮೀ.ಎಂಬುದು ಯಾತ್ರೆ ಹೊರಟು ಮನೆಗೆ ಹಿಂತಿರುಗಿ ಬರುವ ಮಧ್ಯೆ ಇರುವ ದೂರವಾ?
= ಅಲ್ಲ. ಹೋಗಿ ಬರುವ ದೂರ 132 ಕಿ.ಮೀ.ಇದ್ದರೆ ಸಾಲದು.ಹೋಗಲಿಕ್ಕಿರುವ ದೂರವೇ 132 ಕಿ.ಮೀ.ಇರಬೇಕು.
94. ಯಾತ್ರಿಕರು ತಮ್ಮ ಪ್ರಯಾಣದಲ್ಲಿ ಉಪೇಕ್ಷಿಸಿದ ರಮಳಾನ್ ಉಪವಾಸವನ್ನು ಖಳಾಅ ಪೂರೈಸಬೇಕೆ ?
= ಖಳಾಅ ಪೂರೈಸುವುದು ಕಡ್ಡಾಯ.
95.ಬೆಳಿಗ್ಗೆ ಉಪವಾಸ ಆರಂಭಿಸಿ ನಂತರ ಯಾತ್ರೆ ಕೈಗೊಂಡರೆ ಅವರಿಗೆ ಉಪವಾಸ ತೊರೆಯುವ ವಿನಾಯಿತಿ ಇದೆಯೇ ?
= ಇಲ್ಲ. ಅವರು ಉಪವಾಸ ಪೂರ್ಣಗೊಳಿಸುವುದು ಕಡ್ಡಾಯ.
96.ರೋಗಿಗಳು ಉಪವಾಸ ತೊರೆಯಬಹುದೇ ?
= ರೋಗಿಯಾದ ವ್ಯಕ್ತಿ ಉಪವಾಸ ನಿರ್ವಹಿಸಿದರೆ ರೋಗ ಇನ್ನಷ್ಟು ಉಲ್ಬಣಗೊಳ್ಳಬಹುದೆಂದೋ,ಅಂಗವಿಕಲತೆ ಸಂಭವಿಸಬಹುದೆಂದೋ, ರೋಗ ಶಮನದ ಕಾಲ ದೀರ್ಘವಾಗಬಹುದೆಂದೋ ಭಯವಿದ್ದಲ್ಲಿ ಅಥವಾ ನುರಿತ ವೈದ್ಯರೊಬ್ಬರು ಹೇಳಿದರೆ ಅವರಿಗೆ ಉಪವಾಸ ತೊರೆಯಬಹುದು.
97.ರೋಗ ಕಾರಣವಾಗಿ ಉಪೇಕ್ಷಿಸಿದ ಉಪವಾಸವನ್ನು ಗುಣಮುಖವಾದ ನಂತರ ಖಳಾಅ ಪೂರೈಸಬೇಕೆ ?
= ಖಳಾಅ ಪೂರೈಸುವುದು ಕಡ್ಡಾಯ.
98.ಗುಣಮುಖವಾಗದ ರೋಗಕ್ಕೆ ಓರ್ವ ತುತ್ತಾಗಿದ್ದು,ಆತನಿಗೆ ಉಪವಾಸ ಮಾಡಲು ಆಗುವುದಿಲ್ಲ. ಆತನಿಗಿರುವ ಪರಿಹಾರ ಮಾರ್ಗವೇನು ?
= ಆತನಿಗೆ ಉಪವಾಸ ಕಡ್ಡಾಯವಿಲ್ಲ. ಆತ ಪರಿಹಾರವಾಗಿ ರಮಳಾನಿನ ಪ್ರತಿಯೊಂದು ದಿವಸಕ್ಕೂ ಒಂದು ಬೊಗಸೆ ಆಹಾರ (650 ಗ್ರಾಂ ಅಕ್ಕಿ) ಬಡವರಿಗೆ ದಾನ ಮಾಡಬೇಕು.
99. ಗುಣಮುಖವಾಗದ ರೋಗವೆಂದು ಭಾವಿಸಿ ಉಪವಾಸ ನಿರ್ವಹಿಸದೆ ಪರಿಹಾರವಾಗಿ ಅಕ್ಕಿಯನ್ನು ಕೊಟ್ಟ ನಂತರ ಆತನ ರೋಗ ಶಮನವಾದರೆ ಆತ ಉಪವಾಸ ಖಳಾಅ ಪೂರೈಸಬೇಕೆ ?
= ಗುಣವಾಗಬಹುದೆಂಬ ನಿರೀಕ್ಷೆಯಿಲ್ಲದ ರೋಗ ಬಾಧಿಸಿದ ವ್ಯಕ್ತಿ ಉಪವಾಸಕ್ಕೆ ಬದಲಾಗಿ ಪ್ರತಿನಿತ್ಯ ಆಹಾರ ಧಾನ್ಯ ಕೊಟ್ಟ. ನಂತರ ಅವನ ಆರೋಗ್ಯ ಸುಧಾರಿಸಿದರೆ ಆತ ಉಪವಾಸ ಖಳಾಅ ಪೂರೈಸಬೇಕಾಗಿಲ್ಲ.ಆಹಾರ ಧಾನ್ಯ ಕೊಟ್ಟದ್ದು ಸಾಕಾಗುತ್ತದೆ. ಅದೇ ವೇಳೆ ಆಹಾರ ಧಾನ್ಯ ಪರಿಹಾರವಾಗಿ ಕೊಡುವುದಕ್ಕಿಂತ ಮುಂಚೆ ಆರೋಗ್ಯವಂತನಾದರೆ ಉಪವಾಸ ಖಳಾಅ ಪೂರೈಸಲೇಬೇಕು.
100. ಕೆಲವು ಮಂದಿ ರೋಗ ಬಂದರೆ ಕೇವಲ ಆಹಾರ ಧಾನ್ಯ ಮಾತ್ರ ಕೊಡುತ್ತಾರೆ.ನಂತರ ಖಳಾಅ ನಿರ್ವಹಿಸುವುದಿಲ್ಲ. ಅದು ಸರಿಯೇ ?
= ಅಲ್ಲ. ಸರಿಯಲ್ಲ.ಶಮನವಾಗಬಹುದೆಂಬ ನಿರೀಕ್ಷೆ ಇಲ್ಲದ ರೋಗವಾದರೆ ಮಾತ್ರ ಅದಕ್ಕೆ ಪರಿಹಾರವಾಗಿ ಆಹಾರ ಧಾನ್ಯ ಕೊಡುವುದು. ಶಮನವಾಗುವಂತಹ ರೋಗ ಬಂದರೆ ನಂತರ ಆ ಉಪವಾದವನ್ನು ಖಳಾಅ ಪೂರೈಸಲೇಬೇಕು.
Comments
Post a Comment