ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 210
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 210)
هَلْ يَنظُرُونَ إِلَّآ أَن يَأْتِيَهُمُ ٱللَّهُ فِى ظُلَلٍۢ مِّنَ ٱلْغَمَامِ وَٱلْمَلَٰٓئِكَةُ وَقُضِىَ ٱلْأَمْرُ ۚ وَإِلَى ٱللَّهِ تُرْجَعُ ٱلْأُمُورُ
ಅರ್ಥ:ಅಲ್ಲಾಹನ ಶಿಕ್ಷೆಯು ದಟ್ಟ ಕರಿಮೋಡಗಳ ನಡುವೆ ಮಲಾಇಕತ್‍ಗಳೊಂದಿಗೆ ಎರಗಿ ತೀರ್ಪು ಜಾರಿಯಾಗುವುದನ್ನು ಅವರು ನಿರೀಕ್ಷಿಸುತ್ತಿರುವರೇನು? ಸರ್ವ ಸಂಗತಿಗಳ ನಿರ್ಗಮನವು ಅಲ್ಲಾಹನ ಕಡೆಗೇ ¹¹³.
ವಿವರಣೆ:
113.ಶ್ಲೋಕದ ನೇರ ಅರ್ಥದಲ್ಲಿ ಅಲ್ಲಾಹನು ಬರುವುದು ಎಂದಿದೆ. ಆದರೆ ಸರ್ವಾಂತರ್ಯಾಮಿಯೂ ಸ್ಥಳ, ಕಾಲಗಳಿಗತೀತನೂ ಆದ ಅಲ್ಲಾಹನ ಕುರಿತು ಬರುವಿಕೆ, ಹೋಗುವಿಕೆ ಎಂಬ ಕಲ್ಪನೆಯೇ ಅಸಂಬದ್ಧ. ಇಮಾಮ್ ರಾಝಿ ವ್ಯಾಖ್ಯಾನಿಸಿದ ಪ್ರಕಾರ ಅಲ್ಲಾಹು ಅವರ ಬಳಿಗೆ ಬರುವುದೆಂದರೆ ಅವನ ಆದೇಶ ಹಾಗೂ ಅವನ ದಂಡನೆ ಬರುವುದು ಎಂದರ್ಥ. ‘ನಾಡಿನೊಂದಿಗೆ ಕೇಳು’ (2:80) ಎಂಬಲ್ಲಿ ನಾಡಿನ ಜನರೊಂದಿಗೆ ಕೇಳು ಎಂದರ್ಥ ತಾನೇ? ಹಾಗೆಯೇ ಇಲ್ಲಿ ಸಮಾಸದ ಪೂರ್ವ ಪದವನ್ನು ಕೈಬಿಡಲಾಗಿದೆ. ‘ಅಮ್ರುಲ್ಲಾಹ್’ ಎಂಬ ಸಮಾಸ ಪದದಿಂದ ‘ಅಮ್ರ್ರ್’ ಎಂಬುದನ್ನು ಕೈಬಿಡಲಾಗಿದೆ. ಇದು ಸಾಮಾನ್ಯವಾಗಿ ಪ್ರಚಾರದಲ್ಲಿರುವ ಒಂದು ಸಾಹಿತ್ಯಿಕ ಶೈಲಿ. ರಾಜನು ಹೊಡೆದನು, ಗಲ್ಲಿಗೇರಿಸಿದನು, ನೀಡಿದನು ಮುಂತಾದ ಪ್ರಯೋಗಗಳಲ್ಲಿ ರಾಜ ಅಪ್ಪಣೆ ಮಾಡಿದನು ಎಂಬ ಉದ್ದೇಶವಿರುವುದು ಸ್ಪಷ್ಟ.
Comments
Post a Comment