ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 216
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 216)
كُتِبَ عَلَيْكُمُ ٱلْقِتَالُ وَهُوَ كُرْهٌۭ لَّكُمْ ۖ وَعَسَىٰٓ أَن تَكْرَهُوا۟ شَيْـًۭٔا وَهُوَ خَيْرٌۭ لَّكُمْ ۖ وَعَسَىٰٓ أَن تُحِبُّوا۟ شَيْـًۭٔا وَهُوَ شَرٌّۭ لَّكُمْ ۗ وَٱللَّهُ يَعْلَمُ وَأَنتُمْ لَا تَعْلَمُونَ
ಅರ್ಥ: ಧರ್ಮಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ ನಿಮಗದನ್ನು ಶಾಸನಗೊಳಿಸಲಾಗಿದೆ. ಏನಾದರೊಂದು ನಿಮಗೆ ಅಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಗುಣಕರವಾಗಿರಬಹುದು. ಯಾವುದಾದರೊಂದು ನಿಮಗೆ ಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಕೇಡಾಗಿರ ಬಹುದು. ಅಲ್ಲಾಹನು ಬಲ್ಲವನು. ನೀವಲ್ಲ ಬಲ್ಲವರು ¹¹⁵.
ವಿವರಣೆ:
115. ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರೊಂದಿಗೆ ವಿಶ್ವಾಸವಿರಿಸಿದ ಅನುಚರರನ್ನು ಅತ್ಯಂತ ಕಠಿಣವಾಗಿ ಪೀಡನೆಗೊಳಪಡಿಸಿದಾಗ ಅವರು ಗತ್ಯಂತರವಿಲ್ಲದೆ ಮನೆಮಾರು ತೊರೆದು ಮದೀನಾದಲ್ಲಿ ಅಭಯ ಪಡೆದರು. ಅಲ್ಲಿಯೂ ಅವರನ್ನು ನಿಶ್ಚಿಂತೆಯಿಂದ ಬದುಕಲು ಶತ್ರುಗಳು ಬಿಡದಾದಾಗ ಅವರೊಂದಿಗೆ ಹೋರಾಡುವಂತೆ ಅಲ್ಲಾಹನು ವಿಶ್ವಾಸಿಗಳಿಗೆ ಕರೆಕೊಟ್ಟನು. ಯುದ್ಧವು ಅಪಾರ ಕಷ್ಟನಷ್ಟಗಳಿಗೂ ಸಾವು ನೋವುಗಳಿಗೂ ಕಾರಣವಾಗುವುದರಿಂದ ಅದರಲ್ಲಿ ಜಿಗುಪ್ಸೆ ಹುಟ್ಟುವುದು ಸಹಜವಷ್ಟೆ. ಆದರೆ ಮನುಷ್ಯರ ಬದುಕಿನ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕಾರ್ಯಗಳನ್ನು ಗ್ರಹಿಸಲು ಅವರು ಅಶಕ್ತರು. ಪ್ರಥಮ ನೋಟಕ್ಕೆ ಜಿಗುಪ್ಸೆ ಮೂಡುವ ಕೆಲವು ವಿಷಯಗಳು ವಾಸ್ತವಿಕವಾಗಿ ಅವರಿಗೆ ಗುಣವನ್ನು ತರಬಲ್ಲವು. ಹಾಗೆಯೇ ಪ್ರಥಮ ನೋಟದಲ್ಲಿ ಒಳಿತೆಂದು ಕಂಡುಬರುವ ಕೆಲವು ವಿಷಯಗಳು ವಾಸ್ತವಿಕವಾಗಿ ಅವರಿಗೆ ದೋಷವನ್ನು ತರಬಲ್ಲವು. ಅದರ ನೈಜತೆಯನ್ನು ಸರ್ವಜ್ಞನಾದ ಅಲ್ಲಾಹನೇ ಬಲ್ಲನು. ಮನುಷ್ಯರಿಗೆ ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ ಯುದ್ಧವು ತಾತ್ಕಾಲಿಕವಾಗಿ ಅರೋಚಕವಾಗಿ ತೋರುತ್ತಿದ್ದರೂ ಆ ಮೂಲಕ ಇಹ ಪರದಲ್ಲಿ ಮಹತ್ತರ ಪುಣ್ಯವನ್ನು ಸಂಪಾದಿಸಬಹುದು. ಈ ಮಾತಿನಿಂದ ಮುಸ್ಲಿಮರು ಯುದ್ಧವನ್ನು ಸ್ವಯಂ ಇಷ್ಟಪಟ್ಟಿರಲಿಲ್ಲ ಪರಂತು, ಅನಿವಾರ್ಯವಾದ ಹಂತದಲ್ಲಿ ಬೇರೆ ದಾರಿ ಇಲ್ಲದೆ ಯುದ್ಧಕ್ಕೆ ಅಣಿಯಾದರು ಎನ್ನುವುದು ಸ್ಪಷ್ಟವಾಗುತ್ತದೆ.
Comments
Post a Comment