ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 223
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 223)
نِسَآؤُكُمْ حَرْثٌۭ لَّكُمْ فَأْتُوا۟ حَرْثَكُمْ أَنَّىٰ شِئْتُمْ ۖ وَقَدِّمُوا۟ لِأَنفُسِكُمْ ۚ وَٱتَّقُوا۟ ٱللَّهَ وَٱعْلَمُوٓا۟ أَنَّكُم مُّلَٰقُوهُ ۗ وَبَشِّرِ ٱلْمُؤْمِنِينَ
ಅರ್ಥ: ನಿಮ್ಮ ಮಹಿಳೆಯರು ನಿಮ್ಮ ಹೊಲ. ನಿಮ್ಮ ಹೊಲಕ್ಕೆ ನಿಮ್ಮಿಚ್ಛೆಯಂತೆ ಹೋಗಿ. ಸ್ವಹಿತಕ್ಕಾಗಿ ಧಾರ್ಮಿಕ ಪೂರ್ವವಿಧಿಗಳನ್ನು ಪಾಲಿಸಿರಿ. ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿರಿ ¹¹⁹. ಆತನನ್ನು ನೀವು ಭೇಟಿಯಾಗಲಿದ್ದೀರೆಂಬುದು ತಿಳಿದಿರಲಿ. (ಓ ಪ್ರವಾದಿಯವರೇ) ಸತ್ಯವಿಶ್ವಾಸಿಗಳಿಗೆ ಸುವಾರ್ತೆ ಕೊಡಿರಿ.
ವಿವರಣೆ:
119. ಅರ್ಥಾತ್ ದೈಹಿಕ ತೃಷೆಯ ಭರದಲ್ಲಿ ಧಾರ್ಮಿಕತೆಯನ್ನು ಮರೆಯಬಾರದು ಎಂಬ ಸೂಚನೆ. ನಿಮ್ಮ ಸ್ತ್ರೀಯರು ನಿಮಗೆ ಹೊಲದಂತೆ, ನಿಮ್ಮ ಹೊಲಕ್ಕೆ ನೀವು ಇಷ್ಟಬಂದಂತೆ ಪ್ರವೇಶಿಸಿರಿ ಎಂಬ ಮುಕ್ತ ಅವಕಾಶ ದೊರೆತ ಆವೇಶದಲ್ಲಿ ಧರ್ಮಶ್ರದ್ಧೆ ಬಿಟ್ಟು ಹೋಗಬಾರದು. ಆದ್ದರಿಂದ ಮೈಥುನಾರಂಭದಲ್ಲಿ ಬಿಸ್ಮಿಲ್ಲಾಹ್ ಹೇಳುವುದು ಹಾಗೂ `ಅಲ್ಲಾಹುಮ್ಮ ಜನ್ನಿಬ್‍ನ ಶೈತಾನ, ವಜನ್ನಿಬಿಶೈತಾನ ಮಾ ರಝಖ್‍ತನಾ (ಈ ದುಆ ಹೇಳಿದರೆ ಜನಿಸುವ ಮಗುವಿಗೆ ಶೈತಾನನ ಬಾಧೆಯಿಂದ ರಕ್ಷೆ ಇದೆ ಎಂದು ಹದೀಸ್‍ನಲ್ಲಿದೆ) ಮುಂತಾದ ದುಆಗಳನ್ನು ಮಾಡಬೇಕು ಎಂದರ್ಥ. ಅಲ್ಲಾಹನ ಭಯವಿರಲಿ ಎಂಬ ಎಚ್ಚರಿಕೆಯ ತಾತ್ಪರ್ಯವೇನೆಂದರೆ ಗುದಮೈಥುನ, ಹಿಂಸಾರತಿ, ಮುಂತಾದ ನಿಷಿದ್ಧ ಮಾರ್ಗಗಳನ್ನು ಅವಲಂಬಿಸಬೇಡಿರಿ ಎಂದರ್ಥ. ಇತರರು ಅಶ್ರದ್ಧರಾಗುವ ಸಂದರ್ಭದಲ್ಲಿ ದೇವಸ್ಮರಣೆಯಲ್ಲಿರುವುದಕ್ಕೆ ಖುರ್‍ಆನ್ ವಿಶೇಷ ಮಹತ್ವ ನೀಡಿದ ವಿಚಾರ. ಆದ್ದರಿಂದ ಅಶ್ರದ್ಧತೆಗೆ ಸಾಧ್ಯತೆಯಿರುವ ಕಾಮಾತುರತೆಯ ಸಂದರ್ಭದಲ್ಲೂ ದೇವಸ್ಮರಣೆಯು ಪೂರ್ಣ ತಖ್ವಾದ ದ್ಯೋತಕವಾಗುತ್ತದೆ. ಈ ಸಂದರ್ಭದಲ್ಲಿ ಈ ಆದೇಶ ನೀಡಿರುವುದರ ಮರ್ಮವಿದು.
Comments
Post a Comment