ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 228
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 228)
وَٱلْمُطَلَّقَٰتُ يَتَرَبَّصْنَ بِأَنفُسِهِنَّ ثَلَٰثَةَ قُرُوٓءٍۢ ۚ وَلَا يَحِلُّ لَهُنَّ أَن يَكْتُمْنَ مَا خَلَقَ ٱللَّهُ فِىٓ أَرْحَامِهِنَّ إِن كُنَّ يُؤْمِنَّ بِٱللَّهِ وَٱلْيَوْمِ ٱلْءَاخِرِ ۚ وَبُعُولَتُهُنَّ أَحَقُّ بِرَدِّهِنَّ فِى ذَٰلِكَ إِنْ أَرَادُوٓا۟ إِصْلَٰحًۭا ۚ وَلَهُنَّ مِثْلُ ٱلَّذِى عَلَيْهِنَّ بِٱلْمَعْرُوفِ ۚ وَلِلرِّجَالِ عَلَيْهِنَّ دَرَجَةٌۭ ۗ وَٱللَّهُ عَزِيزٌ حَكِيمٌ
ಅರ್ಥ:ವಿವಾಹ ವಿಚ್ಛೇದಿತೆಯರಿಗೆ ಮೂರು ಆರ್ತವದ ವರೆಗೆ ನಿರೀಕ್ಷಣಾ ಅವಧಿಯಾಗಿರುತ್ತದೆ ¹²². ಅವರಿಗೆ ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆಯಿದ್ದಲ್ಲಿ ತಮ್ಮ ಗರ್ಭಾಶಯದಲ್ಲಿರುವ ಅಲ್ಲಾಹನ ಸೃಷ್ಟಿಯನ್ನು ಬಚ್ಚಿಡುವುದು ಸಮ್ಮತವಲ್ಲ. ಸಂಬಂಧ ಸುಧಾರಿಸುವ ಇರಾದೆ ಇದ್ದಲ್ಲಿ ಈ ಕಾಲಾವಧಿಯೊಳಗೆ ಮರಳಿ ಸ್ವೀಕರಿಸುವ ಅರ್ಹತೆ ಪತಿಯಂದಿರಿಗಿದೆ. ಸ್ತ್ರೀಯರಿಗೆ ಭಾಧ್ಯತೆಗ ಳಿರುವಂತೆಯೇ ನ್ಯಾಯೋಚಿತ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಒಂದು ಪದವಿ ಮೇಲಿದೆ. ಅಲ್ಲಾಹನು ಪ್ರತಾಪಿಯು. ಯುಕ್ತಿಯುಕ್ತನು.
ವಿವರಣೆ:
122. ಪ್ರಸ್ಥ ಆಚರಿಸಲಾದ (ಮೈಥುನ ನಡೆದ), ಗರ್ಭವತಿಯಲ್ಲದ ಮತ್ತು ಮಾಸಿಕ ಸ್ರಾವ ಉಂಟಾಗುವ ಸ್ತ್ರೀಯರಾಗಿದ್ದರೆ, ಇವರು ವಿಚ್ಛೇಧನಕ್ಕೊಳಗಾದರೆ ಬೇರೆ ಒಬ್ಬ ಪುರುಷನನ್ನು ವರಿಸಲು ಅನುವದನೀಯವಾಗಬೇಕಾದರೆ ಇಮಾಮ್ ಶಾಫಿಈ ಹಾಗೂ ಮಾಲಿಕ್‍ರವರ ಅಭಿಪ್ರಾಯ ಪ್ರಕಾರ ಮೂರು `ಶುದ್ಧಿಕಾಲ'ವನ್ನೂ ಇಮಾಮ್ ಅಬೂಹನೀಫಾ ಹಾಗೂ ಅಹ್ಮದ್‍ರವರ ಅಭಿಪ್ರಾಯ ಪ್ರಕಾರ ಮೂರು ಮಾಸಿಕ ಸ್ರಾವಗಳನ್ನು ಪೂರೈಸಬೇಕಾಗಿದೆ. ಇದಕ್ಕೆ ಇದ್ದತ್ (ದೀಕ್ಷಾಕಾಲ) ಎಂದು ಹೆಸರು. ಎರಡು ಮಾಸಿಕ ಸ್ರಾವಗಳ ನಡುವಿನ ಅಂತರವನ್ನು `ಶುದ್ಧಿಕಾಲ' ಎಂದೂ ಮುಟ್ಟಾಗುವ ಅವಧಿಯನ್ನು ಋತುಸ್ರಾವ ಕಾಲ ಎಂದೂ ಹೇಳಲಾಗುತ್ತದೆ. ಇಂತಹ ಮೂರು ಕಾಲಗಳನ್ನು ಪೂರೈಸಬೇಕಾಗುತ್ತದೆ. ಇನ್ನು ವಿಚ್ಛೇಧಿತಳು ಗರ್ಭವತಿಯಾಗಿದ್ದರೆ ಹೆರಿಗೆಯಾಗುವವರೆಗೆ ಬೇರೊಬ್ಬನನ್ನು ವರಿಸುವಂತಿಲ್ಲ. ಇನ್ನು ಮಾಸಿಕ ಸ್ರಾವ ತೀರಾ ಇಲ್ಲದ ಹೆಣ್ಣಾಗಿದ್ದರೆ ಅಥವಾ ಅದುಂಟಾಗುವಷ್ಟು ಪ್ರಾಯವಾಗಿರದಿದ್ದರೆ ಅದರ ಅವಧಿ ಮೂರು ತಿಂಗಳು. ಇನ್ನು ಆಕೆ ಮೈಥುನ ನಡೆಯದ ಹೆಣ್ಣಾಗಿದ್ದರೆ, ಇದ್ದತ್ ಪೂರೈಸಬೇಕಾಗಿಲ್ಲ.
Comments
Post a Comment