ಉಪವಾಸವು ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದಾಗಿದೆ: ಉಪವಾಸವು ಇಸ್ಲಾಮಿನ ಪಂಚಸ್ಥಂಭಗಳಲ್ಲೊಂದಾಗಿದೆ. ನಮ್ಮಂತೆಯೇ ಪೂರ್ವಿಕ ಜನಾಂಗಕ್ಕೂ ಕಡ್ಡಾಯಗೊಳಿಸಲ್ಪಟ್ಟ ಪುರಾತನ ಆರಾಧನೆಗಳಲ್ಲಿ ಇದೂ ಒಂದಾಗಿದೆ. ಪಾಪಗಳಿಂದ ತುಂಬಿದ ದೇಹ ಮತ್ತು ಮನಸನ್ನು ಶುಚಿಗೊಳಿಸಲು ಅಲ್ಲಾಹನು ನೀಡಿದ ಸದವಕಾಶವೇ ಉಪವಾಸ ವ್ರತ. ಪವಿತ್ರ ಖುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: *ಓ ಸತ್ಯ ವಿಶ್ವಾಸಿಗಳೇ.!! ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸ ಕಡ್ಡಾಯಗೊಳಿಸಲಾಗಿದೆ. ಅದರ ಮೂಲಕ ನೀವೂ ಭಯ, ಭಕ್ತಿ ಉಳ್ಳವರಾಗಲಿಕ್ಕಾಗಿ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; ಒಬ್ಬ ವ್ಯಕ್ತಿ ಕೆಟ್ಟ ಮಾತುಗಳನ್ನೂ, ಪಾಪ ಕೃತ್ಯಗಳನ್ನೂ ಉಪೇಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಲಾಹನಿಗೆ ಅಗತ್ಯವಿಲ್ಲ. ಅನ್ನ ಪಾನೀಯಗಳನ್ನು ತೊರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ನಿಯಂತ್ರಣವೇ ಉಪವಾಸದ ನಿಜವಾದ ಗುಟ್ಟು ಎನ್ನುವುದನ್ನು ಈ ಹದೀಸಿನ ಮೂಲಕ ತಿಳಿಯಬಹುದಾಗಿದೆ. ಮನುಷ್ಯನ ಉನ್ನತಿಯನ್ನು ತಡೆಯುವ ಅನೇಕ ವಿಷಯಗಳಿವೆ. ನಡೆ, ನುಡಿ, ಚಿಂತನೆಗಳಲ್ಲಿ ಸಂಭವಿಸುವ ಕೆಡುಕುಗಳು ಅವುಗಳಲ್ಲಿ ಬಹಳ ಮುಖ್ಯವಾದವುಗಳು. ಆದರೆ, ವ್ರತ ಅವುಗಳಿಂದ ಮುಕ್ತಿ ನೀಡಿ, ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ವ್ರತಕಾಲವು ದುಷ್ಟ ಚಿಂತೆ, ದುಷ್ಟ ಕೆಲಸಕಾರ್ಯಗಳಿಂದ ತಡೆದು ನಿಲ್ಲಿಸಿ, ಮನಸು ಹಾಗೂ ಶರೀರವನ್ನು ಸ್ಪಟಿಕ ಶುದ್ಧಗೊಳಿಸಿ, ಸಂಶ...